ಉತ್ಪಾದನಾ ವ್ಯವಸ್ಥೆಯಲ್ಲಿನ ಬೆಳವಣಿಗೆ, ವಾಣಿಜ್ಯ ಜಗತ್ತಿನ ಚಟುವಟಿಕೆಗಳ ವಿಕಸನಕ್ಕೆ ದಾರಿ ಮಾಡಿಕೊಟ್ಟಿತೆನ್ನುವ ಬಗೆಗೆ ಈ ಹಿಂದಿನ ಪುಟಗಳಲ್ಲಿ ಸವಿವರವಾಗಿ ತಿಳಿಸಲಾಗಿದೆಯಷ್ಟೇ. ಆದರೆ ವಾಣಿಜ್ಯ ಚಟುವಟಿಕೆಗಳು ಬಿಡಿ, ಬಿಡಿಯಾದ ಅವ್ಯವಸ್ಥಿತ, ಅನಿಯಂತ್ರಿತವಾದ ರೀತಿಯಲ್ಲಿರಲಿಲ್ಲ. ಬದಲಿಗೆ, ಅವೆಲ್ಲವೂ ಒಂದು ವ್ಯವಸ್ಥಿತ ರೀತಿಯಲ್ಲಿ, ಇಡೀ ಸಾಮಾಜಿಕ ಆರ್ಥಿಕ ವ್ಯವಸ್ಥೆ ವಿಕಸನ ಹೊಂದಿದ ರೀತಿಯಲ್ಲಿಯೇ ಮುಂದುವರಿದುಕೊಂಡು ಬಂದಿತು. ಆದ್ದರಿಂದ ವಾಣಿಜ್ಯ ಜಗತ್ತಿನ ಸಂಸ್ಥೆಗಳ ಸ್ವರೂಪಕ್ಕೂ ಒಟ್ಟು ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೂ ನೇರವಾದ ಸಂಬಂಧವಿರುವುದನ್ನು ಮನಗಾಣ ಬಹುದಾಗಿದೆ. ವಾಣಿಜ್ಯ ಸಂಸ್ಥೆಗಳಲ್ಲಿ ನಾವು ಪ್ರಾರಂಭದ ದಿನದಿಂದ ಹಿಡಿದು ಇಂದಿನವರೆಗೆ ನಿರ್ದಿಷ್ಟವಾಗಿ ನಾಲ್ಕು ರೀತಿಯ ಸ್ವರೂಪಗಳನ್ನು ಗುರುತಿಸಬಹುದಾಗಿದೆ.

೧. ಮಾಲಕತ್ವ ಆಧಾರಿತ ಸಂಸ್ಥೆಗಳು

೨. ಪಾಲುದಾರಿಕೆಯಾಧಾರಿತ ಸಂಸ್ಥೆಗಳು

೩. ಪಾಲು ಬಂಡವಾಳವಾಧಾರಿತ ಸಂಸ್ಥೆಗಳು ಯಾ ಕಂಪನಿ ಮಾದರಿಯ ಸಂಸ್ಥೆಗಳು

೪. ಅಂತರ್‌ದೇಶೀಯ ಸಂಸ್ಥೆಗಳು ಅಥವಾ ಬಹುರಾಷ್ಟ್ರೀಯ (ಸಂಸ್ಥೆಗಳು) ಕಂಪನಿಗಳು.

. ಮಾಲಕತ್ವ ಆಧಾರಿತ ಸಂಸ್ಥೆಗಳು

ಮಾಲಕತ್ವ ಆಧಾರಿತ ಸಂಸ್ಥೆ ಒಂದು ಸರಳ ಮಾದರಿಯ ವಾಣಿಜ್ಯ ಸಂಸ್ಥೆ. ಇದು ಒಬ್ಬ ಮಾಲಿಕನಿಂದ ನಡೆಸಲ್ಪಡುತ್ತದೆ. ಆಸಕ್ತ, ಉದ್ಯಮಶೀಲ ವ್ಯಕ್ತಿ ವ್ಯಾಪಾರ ವಹಿವಾಟಿನ ಅವಕಾಶಗಳನ್ನು ಮನಗಂಡು, ಇಂತಹ ಒಂದು ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುತ್ತಾನೆ. ಇದರ ಸಂಪೂರ್ಣ ವ್ಯವಹಾರ ಚಟುವಟಿಕೆಗಳು ಅದರ ಮಾಲಕನ ಬೇಕು ಬೇಡಗಳನ್ನು ಆಧರಿಸಿರುತ್ತದೆ. ಅಲ್ಲಿ ಯಾವುದೇ ನೀತಿ, ನಿಯಮಗಳು, ನಿಖರವಾಗಿ ಪೂರ್ವ ನಿರ್ಧರಿತವಾಗಿರುವುದಿಲ್ಲ. ಲಾಭದ, ಯಾ ಬೆಳವಣಿಗೆಯ ಗುರಿ ಸಾಧಿಸಲು ಮಾಲಕನು ತನ್ನದೇ ಆದ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ವ್ಯವಸ್ಥೆಗೊಳಿಸುತ್ತಾನೆ. ವಾಣಿಜ್ಯ ಜಗತ್ತಿನ ಆರಂಭದ ದಿನಗಳಲ್ಲಿ ಇಂತಹ ವ್ಯವಸ್ಥೆಗಳು ಹುಟ್ಟಿಕೊಂಡವು. ಇಂದಿನ ದಿನಗಳಳ್ಲಿ ಕೂಡಾ ನಾವು ಇಂತಹ ವಾಣಿಜ್ಯ ಸಂಸ್ಥೆಗಳನ್ನು ಕಾಣಬಹುದು. ಉದಾಹರಣೆಗೆ ಹೊಟೇಲ್, ಟೈಲರಿಂಗ್, ಕಿರಾಣಿ ಅಂಗಡಿ, ಟೆಲಿಫೋನ್ ಬೂತ್, ಲೇಖನ ಸಾಮಗ್ರಿಗಳ ಅಂಗಡಿ….. ಇತ್ಯಾದಿ ಚಿಲ್ಲರೆ ವ್ಯಾಪಾರಗಳನ್ನು ಈ ಮಾದರಿಯಲ್ಲಿ ವ್ಯವಸ್ಥೆ ಮಾಡಿರುವುದನ್ನು ನಾವು ಇಂದಿನ ವಾಣಿಜ್ಯ ಜಗತ್ತಿನಲ್ಲಿಯೂ ಕಾಣಬಹುದು. ಇಂತಹ ವ್ಯವಸ್ಥೆಗೆ ಸಣ್ಣ ಪ್ರಮಾಣದ ಬಂಡವಾಳ, ವೈಯಕ್ತಿಕ ಮೇಲುಸ್ತುವಾರಿ ಸಾಕು, ಮಾತ್ರವಲ್ಲ, ಇಂತಹ ವ್ಯಾಪಾರ ಯಶಸ್ಸಿಯಾಗದಿದ್ದರೂ ನಷ್ಟದ ಸಂಭಾವ್ಯತೆ ಮತ್ತು ನಷ್ಟ ಸಂಬಂಧೀ ಸಮಸ್ಯೆ ಗಹನವಾಗೇನು ಇರುವುದಿಲ್ಲ. ಇಂತಹ ವಾಣಿಜ್ಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅನುಕೂಲತೆ ಮತ್ತು ಅನಾನುಕೂಲತೆಗಳು ಈ ಕೆಳಗಿನಂತಿವೆ.

ಅನುಕೂಲತೆಗಳು

೧. ಇಂತಹ ಸಂಸ್ಥೆಗಳನ್ನು ಪ್ರಾರಂಭಿಸುವುದು ಮತ್ತು ಮುಂದುವರೆಸಿಕೊಂಡು ಹೋಗುವುದು ಸುಲಭ. ಒಬ್ಬ ವ್ಯಕ್ತಿ, ನಿಯಮಿತ ಬಂಡವಾಳವನ್ನುಪಯೋಗಿಸಿ ಒಂದು ನಿರ್ದಿಷ್ಟ ಮಟ್ಟದ ಪ್ರಯತ್ನ ಯಾ ಶ್ರಮ ವಿನಿಯೋಗಿಸಿದರೆ ಸಾಕಾಗುತ್ತದೆ. ಹಾಗಾಗಿ ತಳಹಂತದಲ್ಲಿ ನಿಯಮಿತ ಉದ್ಯಮಶೀಲ ಮನೋಭಾವವಿರುವ ವ್ಯಕ್ತಿಗಳನ್ನು ಇಂತಹ ವ್ಯವಸ್ಥೆ ಇಂದಿಗೂ ಆಕರ್ಷಿಸುತ್ತಿದೆ.

೨. ಇಂತಹ ಸಂಸ್ಥೆಗಳ ಎಲ್ಲಾ ಆಗುಹೋಗುಗಳಿಗೆ ಮಾಲಿಕನೇ (ಮಾಲಕಿ) ಜವಾಬ್ದಾರನಾಗಿರುವ ಕಾರಣ, ಅದರ ಯಶಸ್ಸಿನ ಬಗ್ಗೆ, ಅದು ಜನರಿಂದ ಸ್ವೀಕೃತವಾಗುವ ಬಗ್ಗೆ, ಜನರ ಮನವನ್ನು ಗೆಲ್ಲುವಂತೆ ಮಾಡಲು (ಮಾಲಿಕ) ಅವನು/ಅವಳು, ವೈಯಕ್ತಿಕ ಆಸಕ್ತಿ ವಹಿಸುತ್ತಾನೆ/ಳೆ.

೩. ಓರ್ವ ವ್ಯಕ್ತಿಯಲ್ಲೇ ಮೂಲಕತ್ವವಿರುವುದರಿಂದ ವ್ಯಾಪಾರದ ಯಶಸ್ಸಿನ ಬಗೆಗಿನ ಗುಟ್ಟನ್ನು ಕಾಪಾಡಿಕೊಂಡು ಬರುವುದು ಸುಲಭ.

೪. ಇಂತಹ ವ್ಯಾಪಾರಿ ಸಂಸ್ಥೆಗಳಲ್ಲಿ ಯಾವುದೇ ನಿರ್ಧಾರವನ್ನು ತಕ್ಷಣವೇ ತೆಗೆದುಕೊಳ್ಳಲು ಸಾಧ್ಯವಾಗಿರುತ್ತದೆ. ಯಾರೊಂದಿಗೂ ಚರ್ಚೆ ಮಾಡಲೇ ಬೇಕಾದ ಅನಿವಾರ್ಯತೆಯಿಲ್ಲ, ಯಾಕೆಂದರೆ ಓರ್ವ ವ್ಯಕ್ತಿಯಲ್ಲಿಯೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿರುತ್ತದೆ.

೫. ಇಂತಹ ವ್ಯಾಪಾರೀ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಹೆಚ್ಚು ನಮನೀಯತೆ ಇದೆ (Flexibility).

ಅನಾನುಕೂಲತೆಗಳು

ಯಾವುದೇ ಒಂದು ವ್ಯವಸ್ಥೆ ನ್ಯೂನತೆಯಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ. ಏಕವ್ಯಕ್ತಿ ಮಾಲಕತ್ವದ ಉದ್ಯಮಗಳೂ ಇಂತಹ ನ್ಯೂನತೆ ಯಾ ಅನಾನುಕೂಲತೆಗಳಿಂದ ಬಳಲುತ್ತವೆ. ಸ್ಥೂಲವಾಗಿ ಇಂತಹ ನ್ಯೂನತೆಗಳನ್ನು ಈ ಕೆಳಗಿನಂತೆ ವಿವರಿಸಬಹುದು.

೧. ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಉದ್ಯಮವೊಂದು ಕಾರ್ಯ ನಿರ್ವಹಿಸಲು ಅಪರಿಮಿತ ಬಂಡವಾಳ ಅನಿವಾರ್ಯವಾಗಿರುತ್ತದೆ. ಇಂತಹ ಬಂಡವಾಳವನ್ನು ಒಬ್ಬ ವ್ಯಕ್ತಿ ಸರಿದೂಗಿಸುವುದು ಕಷ್ಟದ ಕೆಲಸವೂ ಗಂಡಾಂತರಕಾರಿಯೂ ಆಗಿರುತ್ತದೆ. ಹಾಗಾಗಿ ಏಕವ್ಯಕ್ತಿ ಮಾಲಕತ್ವದ ಉದ್ಯಮಗಳು ಒಂದು ನಿರ್ದಿಷ್ಟ ಮಿತಿಯಲ್ಲಿ ನಿರ್ದಿಷ್ಟ ಬಂಡವಾಳ ಸರಿ ಹೊಂದಿಸಿ ಕಾರ್ಯ ನಿರ್ವಹಿಸಬಹುದೇ ಹೊರತು ಅಗಾಧ ಪ್ರಮಾಣದ ಬಂಡವಾಳ ಬಯಸುವ ಉದ್ಯಮ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಅಸಾಧ್ಯ.

೨. ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಕೇವಲ ಬಂಡವಾಳದ ಪ್ರಮಾಣದಲ್ಲಿ ಮಾತ್ರ ನಾವು ವಿಕಸನವನ್ನು ಗುರುತಿಸುವುದರೊಂದಿಗೇನೇ, ಅದರ ಕಾರ್ಯನಿರ್ವಹಣೆ ಯಲ್ಲೂ ಕ್ಲಿಷ್ಟತೆಯನ್ನು ಕಾಣಬಹುದು. ಉದ್ಯಮ ವ್ಯವಸ್ಥೆಯಲ್ಲಿ ವಿಕಸನವಾದಂತೆಯೇ. ಹೆಚ್ಚಿನ ಪ್ರಮಾಣದ ಶ್ರಮ ವಿಭಜನೆಯ ಅಗತ್ಯವೂ ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಒಬ್ಬನೇ ವ್ಯಕ್ತಿ ಒಂದು ಉದ್ಯಮ ಬಯಸುವ ಪರಿಣಿತ ಸೇವೆಯನ್ನು ಯಾ ಕಾರ್ಯ ನಿರ್ವಹಣೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಯಾವಾಗ ಇಂತಹ ಪರಿಣಿತ ಸೇವೆಯ, ಯಾ ಕಾರ್ಯನಿರ್ವಹಣೆಯ ಪೂರೈಕೆ ಸಾಧ್ಯವಿಲ್ಲವೋ ಆಗ ಉದ್ಯಮದ ಕಾರ್ಯಕ್ಷಮತೆ, ಬೆಳವಣಿಗೆ ಕುಂಠಿತವಾಗುತ್ತದೆ.

೩. ಏಕವ್ಯಕ್ತಿ ಮಾಲಕತ್ವದ ಉದ್ಯಮದಲ್ಲಿ ಅನಿಯಮಿತ ಯಾ ಅಪರಿಮಿತ ಕಂಟಕವಿರುತ್ತದೆ. ಹಾಗಾಗಿ ಉದ್ಯಮ ಒಂದು ವೇಳೆ ನಷ್ಟಕ್ಕೆ ಒಳಗಾದರೆ ಅದರ ಮಾಲಿಕ/ಮಾಲಕಿ ತನ್ನ ಖಾಸಗೀ ಸ್ವತ್ತುಗಳನ್ನು ಮಾರಿಯಾದರೂ ಉದ್ಯಮ ನಷ್ಟ ಭರಿಸಬೇಕಾದ ಸಂದರ್ಭ ಬರುತ್ತದೆ. ಅರ್ಥಾತ್ ಉದ್ಯಮ ಮತ್ತು ಮಾಲಕನ ಸ್ವಾಮ್ಯತ್ವವಿರುವ ಆಸ್ತಿಗಳು ಬೇರೆ ಬೇರೆಯಾಗಿ ಉಳಿಯದೆ, ನಷ್ಟ ಪರಿಹಾರದ ಪ್ರಶ್ನೆ ಬಂದಾಗ ಮಾಲಿಕನ/ಮಾಲಕಿಯ ಖಾಸಗೀ ಒಡೆತನದ ಎಲ್ಲ ಸ್ವತ್ತುಗಳ ಮೇಲೆ, ಸಾಲಗಾರರ ಹಕ್ಕು ಸ್ಥಾಪನೆಯಾಗುತ್ತದೆ. ಇಂತಹ ಗಂಭೀರ ಗಂಡಾಂತರ ವ್ಯಕ್ತಿಯ ಉದ್ಯಮಶೀಲ ಮನೋಭಾವನೆಯ ಉತ್ಕರ್ಷಕ್ಕೆ ಅಡ್ಡಿ ಯುಂಟು ಮಾಡುತ್ತದೆ.

ಇಂತಹ ಇತಿಮಿತಿಗಳು, ಪಾಲುದಾರಿಕೆ/ಸಂಸ್ಥೆಗಳ ಉದಯಕ್ಕೆ ಮುನ್ನುಡಿ ಬರೆದೆವೆಂದು ಹೇಳಬಹುದು. ಯಾವುದೇ ಒಂದು ವ್ಯವಸ್ಥೆ ಬೆಳೆಯುತ್ತಾ ಸಾಗಿದಂತೆ, ತನ್ನ ಅಗತ್ಯಕ್ಕೆ ಅನಿವಾರ್ಯವಾಗಿರುವ ಕೆಲವೊಂದು ಸಂಸ್ಥೆಗಳನ್ನು ಹುಟ್ಟು ಹಾಕುತ್ತದೆ ಎಂದು ಹೇಳ ಬಹುದು. ಅಂತೆಯೇ ಅಭಿವೃದ್ದಿಶೀಲ ಉದ್ಯಮ ಜಗತ್ತು ತನ್ನ ಪುರೋಭಿವೃದ್ದಿಗೆ ಪಾಲುದಾರಿಕಾ ಸಂಸ್ಥೆಗಳನ್ನು ಹುಟ್ಟು ಹಾಕಿತು.

ಪಾಲು ಬಂಡವಾಳ ಉದ್ಯಮ ಯಾ ಪಾಲುದಾರಿಕಾ ಸಂಸ್ಥೆಗಳು

ಯಾವ ಉದ್ಯಮವನ್ನು ಒಬ್ಬ ವ್ಯಕ್ತಿಗೆ ನಡೆಸಿಕೊಂಡು ಹೋಗುವುದು ದುಸ್ತರ ವಾಗುವುದೋ ಅಂತಹ ಒಂದು ಉದ್ಯಮವನ್ನು ಕೆಲವೊಂದು ವ್ಯಕ್ತಿಗಳು ಒಟ್ಟು ಸೇರಿಸಿ ನಡೆಸಿಕೊಂಡು ಹೋಗುವುದು ಸಾಧ್ಯ. ಇಂತಹ ಒಂದು ಸಾಧ್ಯತೆಯೇ ಪಾಲುದಾರಿಕಾ ಸಂಸ್ಥೆಯಾಗಿದೆ. ಒಂದು ನಿರ್ದಿಷ್ಟ ಪೂರ್ವ ನಿರ್ಧರಿತ ಉದ್ದೇಶಕ್ಕಾಗಿ ಒಂದಕ್ಕಿಂತ ಹೆಚ್ಚು ಮಂದಿ ಒಟ್ಟು ಸೇರಿ, ಸಂಘಟಿತರಾಗಿ ಉದ್ದೇಶದ ಈಡೇರಿಕೆಗೆ ದುಡಿಯುವುದನ್ನೇ, ಪಾಲುದಾರಿಕೆ ಎಂದು ಕರೆಯಬಹುದು. ಹೀಗೆ ಒಂದುಗೂಡುವ ಮಂದಿ ತಾವು ಎಷ್ಟು ಬಂಡವಾಳ ತೊಡಗಿಸಬೇಕು, ದೊರಕುವ ಲಾಭದಲ್ಲಿ ತಮ್ಮ ಪಾಲು ಎಷ್ಟು, ಪ್ರತಿಯೊಬ್ಬರ ಕರ್ತವ್ಯ ಮತ್ತು ಹಕ್ಕುಗಳೇನು? ಪ್ರತಿಯೊಬ್ಬರ ಜವಾಬ್ದಾರಿಯೇನು? ಮುಂತಾದ ವಿಷಯ ಗಳನ್ನು ಮೊದಲೇ ನಿರ್ಧರಿಸಿ ಒಂದು ತೀರ್ಮಾನಕ್ಕೆ ಬರುತ್ತಾರೆ ಮತ್ತು ಅಂತಹ ವಿಷಯಗಳ ಕುರಿತು ಒಂದು ಲಿಖಿತ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾರೆ. ಈ ಲಿಖಿತ ಒಡಂಬಡಿಕೆಯ ಅನುಷ್ಠಾನ ಭಾರತೀಯ ಪಾಲುದಾರಿಕಾ (ಒಡಂಬಡಿಕೆ) ಒಪ್ಪಂದ ೧೯೩೨ ಅನ್ವಯ ಕಾರ್ಯನುಷ್ಠಾನಗೊಳ್ಳುತ್ತದೆ. ಪಾಲುದಾರಿಕಾ ಒಪ್ಪಂದದ ಕೆಲವು ಸಾಮಾನ್ಯ ನಿಯಮಗಳು ಈ ಕೆಳಗಿನಂತಿವೆ.

೧. ಪಾಲುದಾರಿಕಾ ಒಪ್ಪಂದವು ಸಮಾನ ಆಸಕ್ತರಾದ ವ್ಯಕ್ತಿಗಳ ನಡುವೆ ಏರ್ಪಟ್ಟ ಒಡಂಬಡಿಕೆಯ ಆಧಾರದಲ್ಲಿ ರೂಪುಗೊಂಡಿರುತ್ತದೆ. ಈ ಒಪ್ಪಂದವು ಮಖಿಕವಾಗಿರ ಬಹುದು ಯಾ ಲಿಖಿತ ರೂಪದಲ್ಲಿರಬಹುದು. ಇಲ್ಲಿ ಬಹಳ ಮುಖ್ಯವಾಗಿರುವುದು, ಸಮಾನ ಆಸಕ್ತ ವ್ಯಕ್ತಿಗಳು ಚರ್ಚಿಸಿದ ನಂತರ ತಮ್ಮನ್ನು ಹಿಡಿದಿಡಬೇಕಾದ ಸಮಾನ ಆಸಕ್ತಿಯ ವಿಷಯದ ಕುರಿತಂತೆ ತಳೆಯುವ ಒಂದು ತಾರ್ಕಿಕ ನಿಲುವು.

೨. ಪಾಲುದಾರರ ನಡುವಿರುವ ಒಪ್ಪಂದದ ಪ್ರಮುಖ ಉದ್ದೇಶ, ಒಂದು ಉದ್ಯಮನ್ನು ನಡೆಸಿ ಅದರಿಂದ ಲಾಭವನ್ನು ಗಳಿಸುವುದು ಮತ್ತು ಅಂತಹ ಲಾಭವನ್ನು ತಮ್ಮಲ್ಲಿ ಒಂದು ಪೂರ್ವ ನಿರ್ಧರಿತ ರೀತಿಯಲ್ಲಿ ಹಂಚಿಕೊಳ್ಳುವುದೇ ಆಗಿದೆ. ಪಾಲುದಾರರ ಸಂಖ್ಯೆಯನ್ನು ಶಾಸನಾತ್ಮಕ ವಿಧಿ ಮಿತಿಗೊಳಿಸುತ್ತದೆ. ಅದರನ್ವಯ ಪಾಲುದಾರರ ಕನಿಷ್ಠ ಸಂಖ್ಯೆ೨ ಮತ್ತು ಗರಿಷ್ಠ ಸಂಖ್ಯೆಯನ್ನು ೧೦ಕ್ಕೆ ಮಿತಿಗೊಳಿಸಲಾಗುತ್ತದೆ.

೩. ಪಾಲುದಾರಿಕೆ ಉದ್ಯಮವನ್ನು ಎಲ್ಲರೂ ಸೇರಿ ನಿರ್ವಹಿಸಬಹುದು ಯಾ ಎಲ್ಲರ ಪರವಾಗಿ ಯಾರಾದರೂ ಒಬ್ಬ ನಿರ್ವಹಿಸಬಹುದಾಗಿದೆ. ಒಬ್ಬನು ಅಂತಹ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸುವಾಗಲೂ ಅಂತಹ ವ್ಯಕ್ತಿ ಎಲ್ಲ ಪಾಲುದಾರರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಾನೆಯೇ ಹೊರತು ವೈಯಕ್ತಿಕ ನೆಲೆಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ಪಾಲುದಾರಿಕಾ ಸಂಸ್ಥೆಯ ಪರವಾಗಿ ಕಾರ್ಯ ನಿರ್ವಹಿಸುವಾಗ, ಅಂತಹ ಪಾಲುದಾರ ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲ ಪಾಲುದಾರರೂ ಬದ್ಧರಾಗಿರುತ್ತಾರೆ.

ಪಾಲುದಾರಿಕಾ ಸಂಸ್ಥೆಯೊಂದರಲ್ಲಿ ಲಾಭದ ಹಂಚಿಕೆಯ ಅಗತ್ಯವಾಗಿದೆ. ಆದರೆ ನಷ್ಟದ ಹಂಚಿಕೆ ಮಾತ್ರ ಅನಿವಾರ್ಯವಲ್ಲ. ಕೆಲವೊಂದು ಸಲ ಲಾಭದಲ್ಲಿ ಪಾಲು ಇರಬಹುದು ಆದರೆ ಪಾಲುದಾರರು (ಲಾಭದ ಪಾಲುದಾರರು) ಪಾಲುದಾರಿಕಾ ಸಂಸ್ಥೆಯ ಸದಸ್ಯರಾಗಲೇ ಬೇಕೆಂದೇನೂ ಇಲ್ಲ. ಉದಾಹರಣೆಗೆ ಸಂಸ್ಥೆಯಲ್ಲಿನ ಮ್ಯಾನೇಜರ್ ಅಥವಾ ನಿರ್ವಹಣಾಧಿಕಾರಿಗೆ ಲಾಭದಲ್ಲಿ ಪಾಲು ನೀಡಬಹುದು ಅಥವಾ ಮರಣ ಹೊಂದಿದ ಸದಸ್ಯನ ಉತ್ತರಾಧಿಕಾರಿಗಳಿಗೆ ಅವನ ಪಾಲಿಗೆ ಬರಬಹುದಾದ ಲಾಭದ ಅಂಶವನ್ನು ಪಾವತಿಸಬಹುದು. ಈ ಎಲ್ಲಾ ಸಂದರ್ಭಗಳಲ್ಲಿ ಲಾಭ ಪಡೆಯುವ ಅರ್ಹತೆ, ಯಾ ಹಕ್ಕು ಅವರಿಗಿರುತ್ತದೆ, ಅಂದ ಮಾತ್ರಕ್ಕೆ ಅಂತಹ ವ್ಯಕ್ತಿಗಳು ಪಾಲುದಾರಿಕಾ ಸಂಸ್ಥೆಯ ಸದಸ್ಯರೆಂದು ತಿಳಿಯಬಾರದು. ಪಾಲುದಾರಿಕಾ ಸಂಸ್ಥೆಯ ಸದಸ್ಯತ್ವದ ಸತ್ವ ಪರೀಕ್ಷೆಗೆ ಮುಖ್ಯ ಆಧಾರ  ಪತಿನಿಧಿತ್ವವೆಂದು ತಿಳಿಯಬೇಕು. ಅಂದರೆ ಯಾವಾಗ ಪಾಲುದಾರಿಕೆಯ ಸದಸ್ಯ ಸಂಸ್ಥೆಯ ಉದ್ದೇಶಕ್ಕೆ ಸಂಬಂಧಿಸಿದಂತೆ ಇತರ ಎಲ್ಲರನ್ನೂ ಪ್ರತಿನಿಧಿಸುವ ಅರ್ಹತೆ ಹೊಂದಿದ್ದಾನೋ ಆಗ ಅಂತಹ ವ್ಯಕ್ತಿ ಪ್ರತಿನಿಧಿ ಮತ್ತು ಪಾಲುದಾರನೆಂದು ಪರಿಗಣಿತನಾಗುತ್ತಾನೆ.

ಪಾಲುದಾರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳನ್ನು ವ್ಯಕ್ತಿಗತವಾಗಿ ಪಾಲುದಾರರೆಂದೂ ಮತ್ತು ಅವರೆಲ್ಲರನ್ನೂ ಒಟ್ಟಾಗಿ ಸಂಸ್ಥೆಯೊಂದೂ (ಪಾಲುದಾರಿಕಾ ಸಂಸ್ಥೆ) ಕರೆಯ ಲಾಗುತ್ತದೆ. ಆದರೆ ಪಾಲುದಾರಿಕಾ ಸಂಸ್ಥೆಗೆ ಪಾಲುದಾರರಿಗಿಂತ ಬೇರೆಯದೇ ಆದ, ಸ್ವಾತಂತ್ರ ಅಸ್ತಿತ್ವವಿರುವುದಿಲ್ಲ. ಹಾಗಾಗಿ ಪಾಲುದಾರಿಕಾ ಸಂಸ್ಥೆಯೆಂದು ಕಾನೂನು ರೀತ್ಯಾ ಸ್ವಂತ ಅಸ್ತಿತ್ವ ಹೊಂದಿಲ್ಲ. ಈ ಕಾರಣದಿಂದಾಗಿ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾದ ಸಂದರ್ಭದಲ್ಲಿ ತನ್ನ ಸದಸ್ಯರ ಯಾ ಪಾಲುದಾರರ ಮೂಲಕ ಪ್ರತಿನಿಧಿಸಲ್ಪಡುತ್ತದೆ.

ಪಾಲುದಾರಿಕಾ ಸಂಸ್ಥೆಯ ರಚನೆ ಮತ್ತು ಕಾರ್ಯ ನಿರ್ವಹಣೆ

ಪಾಲುದಾರಿಕಾ ಸಂಸ್ಥೆಯು ಎರಡು ಯಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳ ನಡುವೆ ಏರ್ಪಡುವ ಒಡಂಬಡಿಕೆಯ ಪರಿಣಾಮವಾಗಿ ಅಸ್ತಿತ್ವಕ್ಕೆ ಬರುತ್ತದೆ. ಮೂಲಭೂತವಾಗಿ ಪಾಲುದಾರಿಕಾ ಸಂಸ್ಥೆಯ ಅಸ್ತಿತ್ವವು ಒಂದು ಒಪ್ಪಂದವಾಗಿರುವ ಕಾರಣ, ಭಾರತೀಯ ಒಪ್ಪಂದ ಕಾಯಿದೆಯನ್ವಯ ಇದರ ರಚನೆ ಮತ್ತು ಕಾರ್ಯ ನಿರ್ವಹಣೆ, ವ್ಯಾಪ್ತಿ, ಇತಿಮಿತಿಗಳು ಪಾಲುದಾರಿಕಾ ಸಂಸ್ಥೆಯ ಆಗುಹೋಗುಗಳನ್ನು ನಿರ್ಧರಿಸುತ್ತದೆ. ಪಾಲುದಾರಿಕಾ ಸಂಸ್ಥೆಯನ್ನು ಕೆಲವು ನಿಯಮಿತಿ ಉದ್ದೇಶಗಳಿಗೆ ಮತ್ತು ನಿಯಮಿತ ಅವಧಿಗೆ ಅಸ್ತಿತ್ವಕ್ಕೆ ತರಬಹುದಾಗಿದೆ. ಅಂತಹ ಎಲ್ಲ ಸಂದರ್ಭಗಳಲ್ಲಿ ನಿಯಮಿತ ಅವಧಿ ಮತ್ತು ಉದ್ದೇಶ ಈಡೇರಿದ ತಕ್ಷಣ ಪಾಲುದಾರಿಕಾ ಸಂಸ್ಥೆ ವಿಸರ್ಜಿಸಲ್ಪಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಪಾಲುದಾರರ ಅಪೇಕ್ಷೆಯಾಧಾರದಲ್ಲಿ ಸಂಸ್ಥೆಯ ಅಸ್ತಿತ್ವವಿರುತ್ತದೆ. ಅಂತಹ ಸಂದರ್ಭಗಳಲ್ಲಿ ಯಾರಾದರೂ ಒಬ್ಬ ಪಾಲುದಾರ ಸಂಸ್ಥೆಯಲ್ಲಿ ಅಪನಂಬಿಕೆ ವ್ಯಕ್ತಪಡಿಸಿದರೆ, ಯಾ ಇನ್ನಿತರ ಕಾರಣಗಳಿಂದಾಗಿ ಪಾಲುದಾರಿಕೆಯನ್ನು ವಿಸರ್ಜಿಸಲಿಚ್ಛಿಸಿದರೆ ಪಾಲುದಾರಿಕಾ ಸಂಸ್ಥೆಯನ್ನು ವಿಸರ್ಜಿಸಿ ಬಿಡಬಹುದಾಗಿದೆ. ಇಂತಹ ಪಾಲುದಾರಿಕಾ ವ್ಯವಸ್ಥೆಯನ್ನು ಅಪೇಕ್ಷೆಯಾಧಾರಿತ ಪಾಲುದಾರಿಕಾ ಸಂಸ್ಥೆಯೆಂದು ಕರೆಯಲಾಗುತ್ತದೆ.

ಪಾಲುದಾರಿಕಾ ಒಡಂಬಡಿಕೆ ಅಥವಾ ಪಾರ್ಟ್ನರ್ಶಿಪ್ ಡೀಡ್

ಒಂದು ನಿಶ್ಚಿತ ಉದ್ದೇಶದ ಈಡೇರಿಕೆಗಾಗಿ ಪರಸ್ಪರ ತಿಳುವಳಿಕೆಯಿಂದ (ಉದ್ದೇಶದ ಈಡೇರಿಕೆಗಾಗಿ) ಕಾರ್ಯ ನಿರ್ವಹಿಸಿ, ಅದರಿಂದ ಉಂಟಾಗುವ ಲಾಭವನ್ನು ಹಂಚಿಕೊಳ್ಳುವ ಕುರಿತು ಸ್ವ-ಇಚ್ಛೆಯಿಂದ ತೆಗೆದುಕೊಂಡ ಪೂರ್ವನಿರ್ಧರಿತ ತೀರ್ಮಾನವನ್ನು ಒಡಂಬಡಿಕೆಯೆಂದು ಕರೆಯಬಹುದು. ಇಂತಹ ತೀರ್ಮಾನವನ್ನು ಯಾ ಒಡಂಬಡಿಕೆಯನ್ನು ಲಿಖಿತ ರೂಪಕ್ಕೆ ಇಳಿಸುವುದರಿಂದ ಭವಿಷ್ಯತ್ತಿನ ಯಾವುದೇ ಗೊಂದಲ, ಅಪಕಲ್ಪನೆ, ತಪ್ಪು ತಿಳುವಳಿಕೆಗಳನ್ನು ನಿವಾರಿಸಬಹುದಾಗಿದೆ. ಒಡಂಬಡಿಕೆಯನ್ನು ಕಾನೂನು ರೀತ್ಯಾ ಅನುಷ್ಠಾನಕ್ಕೆ ತರುವಂತಾಗಿದ್ದಲ್ಲಿ ಅದನ್ನು ಒಪ್ಪಂದವೆಂದು ಕರೆಯಲಾಗುತ್ತದೆ. ಹಾಗಾಗಿ ಎಲ್ಲಾ ಒಪ್ಪಂದಗಳು ಒಡಂಬಡಿಕೆಗಳು ಆಗಿರುತ್ತವೆ. ಆದರೆ ಎಲ್ಲಾ ಒಡಂಬಡಿಕೆಗಳು ಒಪ್ಪಂದಗಳಾಗಬೇಕಿಲ್ಲ. ಪಾಲುದಾರಿಕೆಯ ಕುರಿತಾದ ಒಡಂಬಡಿಕೆಗೆ ಆಂಗ್ಲ ಭಾಷೆಯಲ್ಲಿ ಪಾರ್ಟ್ನರ್‌ಶಿಪ್ ಡೀಡ್ ಎಂದು ಕರೆಯುತ್ತಾರೆ. ಇದರ ಗುಣಲಕ್ಷಣಗಳು ಈ ಕೆಳಗಿನಂತಿವೆ.

೧. ಪಾಲುದಾರಿಕಾ ಸಂಸ್ಥೆಯ ಹೆಸರು ಮತ್ತು ಪಾಲುದಾರಿಕೆಯ ಅವಧಿ.

೨. ಪಾಲುದಾರಿಕಾ ಸಂಸ್ಥೆ ವ್ಯಾಪಾರ ವಹಿವಾಟು ಪ್ರಾರಂಭಿಸಲು ಉದ್ದೇಶಿಸಿರುವ ದಿನಾಂಕ.

೩. ಪಾಲುದಾರಿಕಾ ಸಂಸ್ಥೆಗೆ ಪ್ರತಿಯೊಬ್ಬ ಪಾಲುದಾರನು ಹೂಡಲು ಉದ್ದೇಶಿಸಿರುವ ಬಂಡವಾಳ.

೪. ಪಾಲುದಾರಿಕಾ ಸಂಸ್ಥೆಯಿಂದ ಬರುವ ಲಾಭ ನಷ್ಟಗಳನ್ನು ಹಂಚಿಕೊಳ್ಳುವ ಪ್ರಮಾಣದ ಬಗೆಗಿನ ವಿವರಗಳು.

೫. ಸಂಸ್ಥೆಯಿಂದ ಸ್ವಂತ ಉಪಯೋಗಕ್ಕೆ ಹಣ ವಿನಿಯೋಗಕ್ಕೆ ಇರುವ ಮಾರ್ಗದರ್ಶಿ ಸೂತ್ರಗಳು.

೬. ಬಂಡವಾಳದ ಮೇಲೆ ಬಡ್ಡಿ ನೀಡಲಾಗುವುದೇ, ಇದ್ದಲ್ಲಿ ಬಡ್ಡಿಯ ದರ ಇತ್ಯಾದಿ ವಿವರಗಳು.

೭. ಯಾವುದೇ ಪಾಲುದಾರರಿಗೆ ಸಂಸ್ಥೆಯ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡದ್ದಕ್ಕೆ ಸಂಭಾವನೆ ನೀಡಲಾಗುವ ಕುರಿತ ವಿವರಗಳು.

೮. ಸಂಸ್ಥೆಯ ಲೆಕ್ಕ ಪತ್ರಗಳನ್ನು ಇಟ್ಟುಕೊಳ್ಳುವ ರೀತಿ, ಅನುಸರಿಸಬೇಕಾದ ನಿಯಮ ಮುಂತಾದ ವಿವರಗಳು. ಲೆಕ್ಕ ಪತ್ರಗಳ ತಪಾಸಣೆಯನ್ನು ಯಾವಾಗ, ಯಾರಿಂದ ಮತ್ತುಹೇಗೆ ನಡೆಸಬೇಕು, ಲೆಕ್ಕ ಪರಿಶೋಧಕರಿಗೆ ನೀಡಬೇಕಾದ ಸಂಭಾವನೆಯ ವಿವರಗಳು.

೯. ಪಾಲುದಾರರು ನಿರ್ಗಮಿಸುವ, ಯಾ ಹೊಸ ಪಾಲುದಾರರನ್ನು ಹೇಗೆ, ಯಾವಾಗ ಮತ್ತು ಯಾವ ಷರತ್ತುಗಳಿಗೊಳಪಡಿಸಿ ಸೇರಿಸಬೇಕು ಮುಂತಾದ ವಿವರಗಳು.

೧೦. ಪಾಲುದಾರರ ಕರ್ತವ್ಯ, ಹಕ್ಕು ಮತ್ತು ಜವಾಬ್ದಾರಿಗೆ ಸಂಬಂಧಿಸಿದ ವಿವರಗಳು. ಪಾಲುದಾರರು ದಿವಾಳಿಯಾದರೆ ಉಳಿದ ಪಾಲುದಾರರ ಮೇಲೆ ಅದರಿಂದ ಉಂಟಾಗುವ ಪರಿಣಾಮ, ಪಾಲುದಾರರು ನಿರ್ವಹಿಸಬೇಕಾದ ಜವಾಬ್ದಾರಿಯ ಬಗೆಗಿನ ವಿವರಗಳು.

ಪಾಲುದಾರಿಕಾ ಸಂಸ್ಥೆಗಳು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ವಾಣಿಜ್ಯ ವ್ಯವಸ್ಥೆಯ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಲಿವೆ. ಸಾಮಾನ್ಯವಾಗಿ ನಿಯಮಿತ ಬಂಡವಾಳ, ನಿರ್ದಿಷ್ಟ ಆಡಳಿತ ನಿರ್ವಹಣಾ ಸಾಮರ್ಥ್ಯ ಬಯಸುವ ಉದ್ಯಮಗಳನ್ನು ಪಾಲುದಾರಿಕಾ ಸಂಸ್ಥೆಗಳು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿವೆ. ಸಾಮುದಾಯಿಕ ಜೀವನ ಕ್ರಮವಿರುವ ಭಾರತದಂತಹ ದೇಶದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಇಂತಹ ಪಾಲುದಾರಿಕಾ ಸಂಸ್ಥೆಗಳು ಪ್ರಮುಖ ವಾಣಿಜ್ಯ ಸಂಸ್ಥೆಯಾಗಿ ಮುಂದುವರಿಯುತ್ತಿದೆ. ಏಕವ್ಯಕ್ತಿ ಮಾಲಕತ್ವದ ಉದ್ದಿಮೆಗಳಿಗಿರುವಂತಹುದೇ ಪ್ರಯೋಜನ ಮತ್ತು ಮಿತಿಗಳು ವಿಸ್ತೃತ ರೂಪದಲ್ಲಿ ಪಾಲುದಾರಿಕಾ ಸಂಸ್ಥೆಗಳಿಗೂ ಅನ್ವಯಿಸುತ್ತವೆ ಎಂದು ಹೇಳಬಹುದು. ಮಿಕ್ಕುಳಿದಂತೆ ಪಾಲುದಾರರ ಕರ್ತವ್ಯ, ಬಾಧ್ಯತೆಗಳು, ಹಕ್ಕುಗಳ ಬಗ್ಗೆ ತಿಳಿಯಬಹುದು.  ಆದರೆ ಅಂತಹ ಎಲ್ಲ ವಿಷಯಗಳೂ ಪಾಲುದಾರರ ನಡುವಿನ ಸಂಬಂಧ ಹಾಗೂ ಅವರ ಅವಶ್ಯಕತೆಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತವೆ.

ಕಂಪನಿಗಳು (ಸಹ ಬಂಡವಾಳ ಸಂಸ್ಥೆಗಳು)

ಈ ಹಿಂದೆಯೇ ವಿವರಿಸಿದಂತೆ ಆರ್ಥಿಕ ವ್ಯವಸ್ಥೆಯು ಬೆಳೆಯುತ್ತಾ ಹೋದಂತೆ, ಉತ್ಪಾದನಾ ಪ್ರಮಾಣವೂ ವಿಕಸನ ಹೊಂದುತ್ತದೆ. ಇದು ಅಭಿವೃದ್ದಿಯ ದ್ಯೋತಕ ಕೂಡಾ ಆಗಿದೆ. ಒಂದು ವ್ಯವಸ್ಥೆ ಬೆಳೆಯುತ್ತಾ ಹೋದಂತೆ ಅದಕ್ಕೆ ಬೇಕಾಗುವ ಬಂಡವಾಳ, ಮಾನವ ಸಂಪನ್ಮೂಲ, ವಿತರಣಾ ವ್ಯವಸ್ಥೆ, ನಿರ್ವಹಣಾ ವ್ಯವಸ್ಥೆ ಕೂಡಾ ಅಧಿಕ ಪ್ರಮಾಣ ಮತ್ತು ಉತ್ತಮ ಗುಣಮಟ್ಟದ್ದಾಗಿರಬೇಕಾಗುತ್ತದೆ. ಒಂದು ನಿಯಮಿತ ಪ್ರಮಾಣದ ಉದ್ಯಮವನ್ನು ಪಾಲು ಬಂಡವಾಳ ಹೊಂದಿಸುವ ಮೂಲಕ ಪಾಲುದಾರಿಕಾ ಉದ್ಯಮ ನಡೆಸಿಕೊಂಡು ಹೋಗಬಹುದು. ಆದರೆ ಒಂದು ಬೃಹತ್ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆ, ಯಾ ಮೋಟಾರು ವಾಹನ ಕಾರ್ಖಾನೆಯನ್ನು ಪಾಲು ಬಂಡವಾಳದ ಮೂಲಕ ನಿರ್ವಹಿಸಲು ಸಾಧ್ಯವಿಲ್ಲ. ಸ್ಥಳೀಯ, ಪ್ರಾಂತೀಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಉದ್ದಿಮೆಗೂ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಉದ್ದಿಮೆಯ ನಡುವೆ ತುಂಬಾ ವ್ಯತ್ಯಾಸವಿರುತ್ತದೆ. ಅಂದರೆ ವಿಸ್ತೃತ ಭೌಗೋಳಿಕ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ಒಂದು ಉದ್ದಿಮೆಯ ಅವಶ್ಯಕತೆಗಳು ಬೃಹತ್ ಪ್ರಮಾಣದಲ್ಲಿದ್ದು ಇದನ್ನು ಪೂರೈಸುವ ಒಂದು ವ್ಯವಸ್ಥೆಯನ್ನು ಕಂಪೆನಿಗಳೆಂದು ಗುರುತಿಸಲಾಗಿದೆ. ಕಂಪನಿಗಳು, ಸ್ವರೂಪ, ಗಾತ್ರ, ಕಾರ್ಯ ನಿರ್ವಹಣೆ, ಉತ್ಪಾದನೆ, ಈ ಎಲ್ಲಾ ವಿಧಾನಗಳಲ್ಲಿ ಈ ಹಿಂದೆ ವಿವರಿಸಿದ ಏಕವ್ಯಕ್ತಿ, ಮಾಲಕತ್ವದ ಉದ್ದಿಮೆಗಳಿಗಿಂತ ಮತ್ತು ಪಾಲುದಾರಿಕಾ ಉದ್ದಿಮೆ ಗಳಿಗಿಂತ ತೀರಾ ಭಿನ್ನವಾಗಿವೆ. ಕಂಪನಿಗೆ ಕಾನೂನಿನ್ವಯ ಸ್ವಂತ ಅಸ್ತಿತ್ವವಿದ್ದು, ಅದು ನ್ಯಾಯಾಲಯದಲ್ಲಿ ತನ್ನನ್ನು ತಾನೇ ಪ್ರತಿನಿಧಿಸುವ ಹಕ್ಕು ಮತ್ತು ಅರ್ಹತೆಯನ್ನು ಹೊಂದಿ ರುತ್ತದೆ. ಹೀಗಾಗಿ ಕಂಪನಿಯು ಬೇರೆ ಯಾರ ಮೇಲಾದರೂ ತನ್ನದೇ ಹೆಸರಿನಲ್ಲಿ ದಾವೆ ಹೂಡಬಹುದು ಮತ್ತು ಬೇರೆ ಯಾರಾದರೂ ಕಂಪನಿಯ ಮೇಲೆ ದಾವೆ ಹೂಡ ಬಹುದಾಗಿದೆ. ಕಂಪನಿಯು ನಿರಂತರವಾಗಿ ಅಸ್ತಿತ್ವದಲ್ಲಿದ್ದು, ಇದರ ಮಾಲಕರು ಮತ್ತು ಆಡಳಿತ ನಡೆಸುವ ಮಂದಿ ಬೇರೆ ಬೇರೆಯಾಗಿರುತ್ತಾರೆ. ಒಂದು ಕಂಪನಿ ಅಸ್ತಿತ್ವಕ್ಕೆ ಬರುವಲ್ಲಿಂದ ಅದು ವಿಸರ್ಜನೆಯಾಗುವಲ್ಲಿವರೆಗಿನ ವಿಧಿ ವಿಧಾನಗಳ ಬಗ್ಗೆ ಸ್ಥೂಲವಾಗಿ ವಿವರಿಸುವುದು ಅವಶ್ಯಕ ಎನಿಸುತ್ತದೆ.

ಯಾವುದೇ ಒಂದು ಲಾಭದಾಯಕ ವಾಣಿಜ್ಯ ಉದ್ದೇಶವನ್ನು ಮನಗಂಡ ಕೆಲವೊಂದು ಉದ್ಯಮಶೀಲ ವ್ಯಕ್ತಿಗಳು ಒಟ್ಟಾಗಿ, ಇಂತಹ ಉದ್ದೇಶವನ್ನು ಕಾರ್ಯರೂಪಕ್ಕೆ ಇಳಿಸಲು ಮನಸ್ಸು ಮಾಡಿದರೆ ಅದು ಒಂದು ಕಂಪನಿಯ ಜನ್ಮ ತಾಳುವಿಕೆಯ ಮೊದಲ ಹೆಜ್ಜೆ ಯಾಗುತ್ತದೆ. ಇಂತಹ ಉದ್ಯಮಶೀಲ ವ್ಯಕ್ತಿಗಳನ್ನು ಪ್ರವರ್ತಕರು ಅಥವಾ ಪ್ರಮೋಟರ್ಸ್‌ ಎಂದು ಕರೆಯಬಹುದು. ವಾಣಿಜ್ಯ ಉದ್ದಿಮೆಯನ್ನು ಅಸ್ತಿತ್ವಕ್ಕೆ ತರುವ  ಮೂಲಕ, ತಮ್ಮ ಪೂರ್ವನಿರ್ಧರಿತ ಉದ್ದೇಶಕ್ಕೆ ಬೇಕಾಗುವ ಬಂಡವಾಳ, ಕಾರ್ಯವಿಧಾನ, ಕಾರ್ಯಕ್ಷೇತ್ರ, ತಾಂತ್ರಿಕತೆ, ಇಡೀ ಯೋಜನೆಗೆ ಸಂಬಂಧಿಸಿ ಅವಕಾಶ, ಅಪಾಯ, ಶಕ್ತಿ, ದೌರ್ಬಲ್ಯ ಇತ್ಯಾದಿಗಳ ಬಗ್ಗೆ ಎಳೆಎಳೆಯಾಗಿ ಚರ್ಚಿಸಿದ ನಂತರ, ಇದರ ಅನುಷ್ಠಾನವನ್ನು ಕಾನೂನು ರೀತಿಯಲ್ಲಿ ಅಥವಾ ಶಾಸನಾತ್ಮಕ ಕ್ರಮದಲ್ಲಿ ಮಾಡಬೇಕಾಗುತ್ತದೆ. ಕಂಪನಿಯನ್ನು ಭಾರತೀಯ ಕಂಪನಿ ಕಾಯಿದೆ ೧೯೫೬ (ಆಗಿಂದಾಗ್ಗೆ ತಿದ್ದುಪಡಿ ಮಾಡಿದಂತೆ)ರ ಅನ್ವಯ ನೊಂದಾಯಿಸಬೇಕು ಮತ್ತು ಕಂಪನಿಯ ಎಲ್ಲ ಕಾರ್ಯಚಟುವಟಿಕೆಗಳು ಈ ಶಾಸನಕ್ಕೆ ಅನುಗುಣವಾಗಿ ನಡೆಯಬೇಕು.

ಕಂಪನಿಯ ನೊಂದಾವಣಿಗೆ ಮೊದಲು ಕೆಲವೊಂದು ಅವಶ್ಯಕ ಕಾರ್ಯಗಳಿರುತ್ತವೆ. ಅವುಗಳೆಂದರೆ ಸಂಸ್ಥೆಯ ಮುಖ್ಯ ಸಂವಿಧಾನವೆಂದು ಪರಿಗಣಿತವಾಗುವ ಮೆಮರಾಂಡಮ್ ಆಫ್ ಅಸೋಸಿಯೇಷನ್, ಕಂಪನಿಯ ಆಂತರಿಕ ಆಡಳಿತವನ್ನು ನಡೆಸಲು ಸಹಕಾರಿಯಾಗುವ ಮಾರ್ಗದರ್ಶಿ ಸೂತ್ರವಾದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್, ಸಾರ್ವಜನಿಕರಿಂದ ಬಂಡವಾಳ ಆಹ್ವಾನಿಸುವ ಕುರಿತ ಆಹ್ವಾನ (ಪ್ರಾಸ್ಪೆಕ್ಟಸ್), ಕಂಪನಿಯ ನಿರ್ದೇಶಕರ ಗುರುತಿಸುವಿಕೆ ಮತ್ತು ನೇಮಕಾತಿ, ಕಂಪನಿಗೆ ಅಗತ್ಯವಾಗಿರುವ ಆಸ್ತಿ ಯಾ ಇತರ ಸ್ವತ್ತುಗಳ ಖರೀದಿ,….. ಇತ್ಯಾದಿ. ಇದೆಲ್ಲವನ್ನು ಪ್ರವರ್ತಕರು ಸಿದ್ಧಪಡಿಸಿದ ನಂತರ ಕಂಪನಿಯನ್ನು ನೊಂದಾಯಿಸಲಾಗುತ್ತದೆ. ಕಂಪನಿಯ ನೋಂದಾಣಾಧಿಕಾರಿಯವರು ೧೯೫೬ನೇ ಇಸವಿಯ ಕಂಪನಿ ಕಾಯಿದೆಯನ್ವಯ ಕಂಪನಿಯನ್ನು ನೊಂದಾಯಿಸಿಕೊಂಡ ಮೇಲೆ ಕಂಪನಿ ಅಸ್ತಿತ್ವಕ್ಕೆ ಬರುವಾಗ ಈ ಮೊದಲು ಹೇಳಿದ ಕೆಲವು ಮೂಲ ದಾಖಲೆಗಳನ್ನು ಸಲ್ಲಿಸಿ ಅದರಲ್ಲಿರುವ ವಿವರಗಳಂತೆ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕಿರುತ್ತದೆ. ಒಂದು ಕಂಪನಿ ಅಸ್ತಿತ್ವಕ್ಕೆ ಬಂದ ತಕ್ಷಣ ವ್ಯಾಪಾರ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅದಕ್ಕೆ ಆಸ್ತಿ, ಯಂತ್ರಗಳು, ಮಾನವ ಸಂಪನ್ಮೂಲ, ಉತ್ಪಾದನಾ ವ್ಯವಸ್ಥೆ, ಮೂಲ ಬಂಡವಾಳ, ಕಾರ್ಯನಿರ್ವಾಹಕ ಬಂಡವಾಳ ಇತ್ಯಾದಿ ಅಗತ್ಯಗಳಿಗೆ ಬೇಕಾದಷ್ಟು ಹಣದ ಅವಶ್ಯಕತೆಯಿರುತ್ತದೆ. ಇಂತಹ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತಿದೆ. ಒಂದು ಕಂಪನಿಗೆ ಅವಶ್ಯಕವಿರುವ ಬಂಡವಾಳ ಪ್ರಮಾಣ, ಅದನ್ನು ಸಮ ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗವನ್ನು ಪಾಲು (ಅಥವಾ ಆಂಗ್ಲ ಭಾಷೆಯಲ್ಲಿ ಶೇರ್ಸ್) ಬಂಡವಾಳವೆಂದು ಕರೆಯಲಾಗುತ್ತದೆ. ಉದಾಹರಣೆಗೆ ಒಂದು ಕಂಪೆನಿಗೆ ೧ ಕೋಟಿ ರೂಪಾಯಿ ಬಂಡವಾಳದ ಅಗತ್ಯವಿದ್ದರೆ ಅದನ್ನು ೧೦೦ ರೂಪಾಯಿ ಮುಖಬೆಲೆಯ ೧ ಲಕ್ಷ ಪಾಲುಗಳಾಗಿ ವಿಂಗಡಿಸಬಹುದು. ಹೀಗೆ ಮಾಡುವುದರಿಂದ ಹಣ ತೊಡಗಿಸುವವರಿಗೆ ಸುಲಭವಾಗುತ್ತದೆ. ೧೦೦ ರೂಪಾಯಿ ಹೊಂದಿರುವ ವ್ಯಕ್ತಿಯೂ ಕಂಪನಿಯೊಂದರ ಶೇರನ್ನು ಖರೀದಿಸುವ ಮೂಲಕ ಅದರ ಅಂಶಿಕ ಮಾಲಕತ್ವವನ್ನು ಪಡೆಯಬಹುದು. ಕಂಪೆನಿಗೂ ಅಗತ್ಯವಿರುವ ಅಪಾರ ಪ್ರಮಾಣದ ಬಂಡವಾಳವನ್ನು ಸಾರ್ವಜನಿಕರಿಂದ ಸುಲಭವಾಗಿ ಸಂಗ್ರಹಿಸಬಹುದಾಗಿದೆ. ಕಂಪನಿಯ ಮೂಲ ಸಂವಿಧಾನಿಕ ದಾಖಲೆಯಾಗಿರುವ ಮೆಮರಾಂಡಮ್ ಆಫ್ ಎಸೋಸಿಯೇಶನ್‌ನಲ್ಲಿ ಶೇರುಗಳ ಗರಿಷ್ಟ ಮೊತ್ತ, ಅದರಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಶೇರುಗಳ ಪ್ರಮಾಣ, ಸಾರ್ವಜನಿಕರಿಂದ ಸ್ವೀಕೃತವಾದ ಶೇರುಗಳ ಪ್ರಮಾಣ, ಸಾರ್ವಜನಿಕರು ಶೇರು ಸ್ವೀಕರಿಸಿದ ಬಗ್ಗೆ ಸಂದಾಯ ಮಾಡಿದ ಹಣ ಇತ್ಯಾದಿ ವಿವರಗಳನ್ನು ತಿಳಿಸಬೇಕು ಮತ್ತು ನೀಡಿರುವ ವಿವರದಂತೆಯೇ ಕಾರ್ಯ ನಿರ್ವಹಿಸ ಬೇಕಾಗುತ್ತದೆ.

ಒಂದು ಕಂಪನಿ ನೋಂದಾವಣೆಯಾದ ನಂತರ ಮಾಡಬೇಕಿರುವ ಕೆಲಸ ಬಂಡವಾಳ ಸಂಗ್ರಹಿಸುವುದು. ಅವಶ್ಯಕವಿರುವ ಬಂಡವಾಳದ ಪ್ರಮಾಣ, ಬಂಡವಾಳವನ್ನು ಹೇಗೆ ಉಪಯೋಗಿಸಲಾಗುತ್ತದೆ. ಅದರಿಂದ ನಿರೀಕ್ಷಿತ ಫಲಗಳೇನು, ಆಡಳಿತ ಮಂಡಳಿಯಲ್ಲಿರುವ ನಿರ್ದೇಶಕರು ಅವರ ಅರ್ಹತೆಗಳು ಏನು, ನಿರೀಕ್ಷಿತ ಆದಾಯವೆಷ್ಟು, ಪ್ರಾಯೋಜಿತ ಉದ್ದಿಮೆಯಲ್ಲಿ ಸಂಭಾವ್ಯ ಗಂಡಾಂತರಗಳೇನಾದರೂ ಇವೆಯೇ ಇತ್ಯಾದಿ ವಿವರಗಳನ್ನೆಲ್ಲ ನಮೂದಿಸಿ ಬಂಡವಾಳ ತೊಡಗಿಸಲು ಆಸಕ್ತರಿರುವ ಸಾರ್ವಜನಿಕರಿಗೆ ಒಂದು ಆಹ್ವಾನವನ್ನು ನೀಡಲಾಗುತ್ತದೆ. ಈ ಆಹ್ವಾನ ಹೇಗಿರಬೇಕು ಎಂಬುದರ ಬಗ್ಗೆ ಕಂಪನಿ ಕಾಯಿದೆಗಳಲ್ಲಿ ಸ್ಪಷ್ಟ ನಿರ್ದೇಶನಗಳಿದ್ದು ಅದರಂತೆಯೇ ಈ ಆಹ್ವಾನವನ್ನು ಸಿದ್ಧಗೊಳಿಸಿ, ಅದರ ಪ್ರತಿಯೊಂದನ್ನು ಕಂಪನಿ ನೊಂದಾಣಾಧಿಕಾರಿಯವರಿಗೆ ಸಲ್ಲಿಸಬೇಕು, ನೊಂದಾಣಾಧಿಕಾರಿ ಯವರಿಂದ ಹಸಿರು ನಿಶಾನೆ ಸಿಕ್ಕಿದ ನಂತರ ಆಹ್ವಾನವನ್ನು ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ನೀಡುವ ಆಹ್ವಾನ ಕನಿಷ್ಟ ಮೂರು ದಿನಗಳವರೆಗೆ ತೆರೆದಿದ್ದು ಗರಿಷ್ಠ ಹತ್ತು ದಿನಗಳವರೆಗೂ ಇದನ್ನು ವಿಸ್ತರಿಸಬಹುದಾಗಿದೆ. ಆದರೆ ಯಾವುದೇ ಸಂದರ್ಭದಲ್ಲಿ ೧೦ ದಿನಗಳಿಗಿಂತ ಹೆಚ್ಚಿನ ಅವಧಿಗೆ ಬಂಡವಾಳ ಸ್ವೀಕೃತಿಯ ಆಹ್ವಾನವನ್ನು ತೆರೆದಿಡುವ ಹಾಗಿಲ್ಲ. ಬಂಡವಾಳ ಸಂಗ್ರಹಣೆಯ ಜವಾಬ್ದಾರಿ ಯನ್ನು ನಿರ್ವಹಿಸಲು ಹಣಕಾಸು ಸಂಸ್ಥೆಯನ್ನು, ಯಾ ಬ್ಯಾಂಕೊಂದನ್ನು ನೇಮಕ ಮಾಡ ಬಹುದಾಗಿದೆ. ಅಂತಹ ಸಂದರ್ಭದಲ್ಲಿ ಬ್ಯಾಂಕು ಬಂಡವಾಳ ಬಯಸಿ ಸಾರ್ವಜನಿಕರು ಸಲ್ಲಿಸುವ ಅರ್ಜಿ, ಅರ್ಜಿ ಶುಲ್ಕವನ್ನು ಸಂಗ್ರಹಿಸಿ, ಆಹ್ವಾನ ಮುಚ್ಚು ನಡೆಯ ನಂತರ ತಕ್ಷಣದಲ್ಲಿ ಬಂದಿರುವ ಅರ್ಜಿಗಳ ವಿವರಗಳನ್ನೆಲ್ಲಾ ಕಂಪನಿಗೆ ನೀಡುತ್ತದೆ. ಈಗ ಅವಶ್ಯ ವಿರುವಷ್ಟು ಅರ್ಜಿಗಳು ಬಂದಿದ್ದಲ್ಲಿ, ಅರ್ಜಿ ಸಲ್ಲಿಸಿದವರಿಗೆ ಬಂಡವಾಳ ಪತ್ರ ನೀಡಲಾಗುತ್ತದೆ. ಒಂದೊಮ್ಮೆ ಅಗತ್ಯಕ್ಕಿಂತ ಹೆಚ್ಚು ಬಂಡವಾಳ ಅರ್ಜಿಗಳು ಬಂದಿದ್ದಲ್ಲಿ ಯಾವುದಾದರೊಂದು ಮಾನದಂಡವನ್ನು ಅನುಸರಿಸಿ ಪಾಲು ಬಂಡವಾಳವನ್ನು  ಅರ್ಜಿದಾರರೆಲ್ಲರಿಗೂ ಹಂಚಿಕೊಟ್ಟ ವಿತರಣೆಯ ಕಾರ್ಯವನ್ನು ಮುಗಿಸಲಾಗುವುದು. ಪಾಲು ಬಂಡವಾಳ (ಶೇರ್ ಕ್ಯಾಪಿಟಲ್)ವನ್ನು ಮುಖಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ, ಕಡಿಮೆಗೆ ಯಾ ಮುಖಬೆಲೆಗೆ ಹೂಡಿಕೆದಾರರಿಗೆ ನೀಡುವ ಪದ್ಧತಿಯೂ ಜಾರಿಯಲ್ಲಿದೆ. ಉದ್ದಿಮೆಯ ಸುನಾಮ, ಭವಿಷ್ಯತ್ತಿನಲ್ಲಿನ ಅವಕಾಶಗಳು ಇನ್ನಿತರ ಅಂಶಗಳು ಪಾಲು ಬಂಡವಾಳದ ಮೇಲಿನ ಹೆಚ್ಚುವರಿ ಪಾವತಿ ಯಾ ಪ್ರೀಮಿಯಂನ್ನು ನಿರ್ಧರಿಸುತ್ತವೆ.

ಪಾಲು ಬಂಡವಾಳವನ್ನು ವಿತರಿಸುವ ವೇಳೆ ನೆನಪಿಡಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಸಾರ್ವಜನಿಕರಿಂದ ಬಂಡವಾಳ ಹೂಡಿಕೆಗೆ ಸೂಕ್ತವಾದ ಪ್ರತಿಕ್ರಿಯೆ ಬರದೇ ಹೋಗಿ, ಶಾಸನಾತ್ಮಕವಾಗಿ ನಿಗದಿಪಡಿಸಿದ ಕನಿಷ್ಟ ಬಂಡವಾಳಧ ಮಟ್ಟಕ್ಕಿಂತಲೂ, ಸಾರ್ವಜನಿಕರಿಂದ ಬಂದ ಬಂಡವಾಳ ಕೋರಿಕೆಯ ಅರ್ಜಿ ಕಡಿಮೆಯಾದಲ್ಲಿ, ಕಂಪನಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಕಾರ್ಯ ಪ್ರಾರಂಭಿಸಲು ಆಗುವುದಿಲ್ಲ. ಒಂದು ವೇಳೆ ಶಾಸನಾತ್ಮಕವಾಗಿ ನಿಗದಿಪಡಿಸಿದ ಬಂಡವಾಳಕ್ಕಿಂತ ಕಡಿಮೆ ಬಂಡವಾಳ ಸಂಗ್ರಹವಾದರೆ ಅಂತಹ ಸಂದರ್ಭದಲ್ಲಿ ಕಂಪನಿ ತಾನು ಸಂಗ್ರಹಿಸಿದ ಬಂಡವಾಳವನ್ನು ಸಾರ್ವಜನಿಕರಿಗೆ ಹಿಂದುರಿಗಿಸಿಬಿಡಬೇಕು. ಇಂತಹ ಗಂಡಾಂತರದಿಂದ ಪಾರಾಗಲು ಸಾಮಾನ್ಯವಾಗಿ ಕಂಪನಿಯೊಂದು ಬಂಡವಾಳ ಅಹ್ವಾನ ನೀಡುವ ಸಮಯ, ಕನಿಷ್ಠ ಮಟ್ಟದ ಪ್ರತಿಕ್ರಿಯೆ ಮುಟ್ಟುವಲ್ಲಿ ಖಾತರಿ ನೀಡುವ ಬಗ್ಗೆ ಕೆಲವೊಂದು ಪ್ರತಿನಿಧಿಗಳೊಂದಿಗೆ ಒಪ್ಪಂದ ಮಾಡಿ ಕೊಳ್ಳುತ್ತದೆ. ಹೀಗಾಗಿ ಒಂದು ವೇಳೆ ಸಾರ್ವಜನಿಕರಿಂದ ಬಂದ (ಪ್ರತಿಕ್ರಿಯೆ) ಹೂಡಿಕೆಯ ಅರ್ಜಿ ನಿರೀಕ್ಷಿತ ಗುರಿ ತಲುಪದಿದ್ದರೆ, ಆಗ ಅಂತಹ ಕೊರತೆಯನ್ನು ಖಾತರಿದಾರರು ತುಂಬಿಕೊಟ್ಟು, ಕಂಪನಿಯು ವ್ಯಾಪಾರ ವಹಿವಾಟು ಮುಂದುವರಿಸುವಂತೆ ಸಹಕರಿಸುತ್ತಾರೆ. ಇಂತಹ ಸೇವೆಯನ್ನು ನೀಡುವ ಸಂಸ್ಥೆಗೆ ಕಂಪನಿ ಕಮಿಷನ್ ಪಾವತಿ ಮಾಡಬೇಕಾಗುತ್ತದೆ.

ನೊಂದಾಯಿತ ಕಂಪನಿಯೊಂದು ಸಾರ್ವಜನಿಕರಿಂದ ಪಾಲು ಬಂಡವಾಳ ಆಹ್ವಾನಿಸಿ ಕನಿಷ್ಠ ಮಟ್ಟ ತಲುಪಿಯಾದ ಮೇಲೆ, ಅಗತ್ಯ ಯಂತ್ರೋಪಕರಣ, ಆಸ್ತಿ, ಮಾನವ ಸಂಪನ್ಮೂಲ ವ್ಯವಸ್ಥೆಗೊಳಿಸಿ, ವ್ಯಾಪಾರ ಆರಂಭದ ಪ್ರಮಾಣ ಪತ್ರ ಪಡೆಯಲು ಕ್ರಮಕೈಗೊಳ್ಳುತ್ತದೆ. ವ್ಯಾಪಾರ ಆರಂಭದ ಪ್ರಮಾಣ ಪತ್ರ ಪಡೆಯುವಾಗ ನಿರ್ದಿಷ್ಟ ನಮೂನೆಯಲ್ಲಿ, ನಿರ್ದಿಷ್ಟ ಶುಲ್ಕದೊಂದಿಗೆ ಕಂಪನಿ ನೊಂದಣಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಬೇಕು. ಎಲ್ಲ ದಾಖಲೆಗಳ ಪರಿಶೀಲನೆಯಾದ ನಂತರ ಅಂತಹ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಪ್ರಮಾಣ ಪತ್ರ ದೊರೆತ ತಕ್ಷಣ ಕಂಪನಿ ತನ್ನ ಉತ್ಪಾದನಾ ಕಾರ್ಯವನ್ನು  ಪ್ರಾರಂಭಿಸಬಹುದಾಗಿದೆ.

ಕಂಪನಿಯು ತನ್ನ ಬಂಡವಾಳ ಸಂಚಯನ ಕಾರ್ಯದಲ್ಲಿ ಯಾರಿಂದ ಬಂಡವಾಳ ಸಂಗ್ರಹಿಸಿದೆಯೋ ಅಂತಹ ವ್ಯಕ್ತಿಗಳಿಗೆ ಬಂಡವಾಳ ಪತ್ರವನ್ನು ವಿತರಿಸುತ್ತದೆ. ಬಂಡವಾಳ ಪತ್ರದಲ್ಲಿ ನೀಡಲಾದ ಪಾಲು ಬಂಡವಾಳದ ಮೊತ್ತ, ಶೇರುಗಳ ಸಂಖ್ಯೆ, ಶೇರು ಪತ್ರ ಯಾ ಬಂಡವಾಳ ಪತ್ರದ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ ಕಂಪನಿಯ ಸೀಲು ಯಾ ಮೊಹರನ್ನು ಹಾಕಿ, (ನಿರ್ದೇಶಕರ ಸಹಿಯೊಂದಿಗೆ) ನೀಡಲಾಗುತ್ತದೆ. ಇಂತಹ ಶೇರು ಪತ್ರಗಳನ್ನು ಯಾ ಬಂಡವಾಳ ಪತ್ರಗಳನ್ನು ಶೇರು ಮಾರುಕಟ್ಟೆಯಲ್ಲಿ ಕಂಪನಿಯು ಯಾದೀಕರಿಸುತ್ತದೆ. ಹೀಗೆ ಯಾದೀಕರಿಸಿದ ಬಂಡವಾಳ ಪತ್ರಗಳನ್ನು ಶೇರು ಪೇಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ಈ ಮೊದಲು ಶೇರು ಪತ್ರಗಳನ್ನು ಲಿಖಿತ ದಾಖಲೆಗಳ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಈಗ ಇವುಗಳಲ್ಲಿ ಬದಲಾವಣೆಯಾಗಿದೆ. ಶೇರು ಪತ್ರಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾಗುತ್ತದೆ. ಅಂದರೆ ಶೇರುದಾರರು ದಿಮ್ಯಾಟ್ ಖಾತೆ ಹೊಂದುವುದು ಅಗತ್ಯವಾಗಿದೆ. ಶೇರು ಪತ್ರಗಳನ್ನು ರಾಷ್ಟ್ರೀಯ ಭದ್ರತಾ ಪತ್ರ ಠೇವಣಿ ಕೊಠಡಿ ನಿಯಮಿತ ಇವರಲ್ಲಿ ಇರಿಸಲು ನೀಡಲಾಗುತ್ತದೆ. ಪ್ರತಿಯೊಬ್ಬ ಶೇರುದಾರನೂ ತನ್ನ ಹೆಸರಲ್ಲಿ ಎಲೆಕ್ಟ್ರಾನಿಕ್ ಖಾತೆಯನ್ನು ತೆರೆಯಬೇಕಾಗುತ್ತದೆ. ರಾಷ್ಟ್ರೀಯ ಭದ್ರತಾಪತ್ರ ಠೇವಣಿ ಕೊಠಡಿ ನಿಯಮಿತ ಪ್ರತಿಯೊಬ್ಬ ಶೇರುದಾರನ ಶೇರನ್ನು ಅವನ ಖಾತೆಗೆ ಜಮೆ ಮಾಡುತ್ತದೆ. ಅವನು ಮಾರಿದಾಗ ಅವನ ಖಾತೆಯಿಂದ ಶೇರನ್ನು ಖರೀದಿಸಿದ ವ್ಯಕ್ತಿಯ ಖಾತೆಗೆ ಜಮೆ ಮಾಡಲಾಗುತ್ತದೆ. ಹೀಗಾಗಿ ಈ ಮೊದಲು ಅಸ್ತಿತ್ವದಲ್ಲಿದ್ದಂತೆ ಲಿಖಿತ ದಾಖಲೆಯಾಗಿ ಶೇರು ಪತ್ರ ಸಾಮಾನ್ಯ ಖರೀದಿ, ಮಾರಾಟದ ಸಂದರ್ಭಗಳಲ್ಲಿ ಬಳಕೆಯಲ್ಲಿರುವುದಿಲ್ಲ.

ಕಂಪನಿಗಳಲ್ಲಿರುವ (ವಿಧಗಳು) ಪ್ರಭೇದಗಳು

ಕಂಪನಿಗಳಲ್ಲಿ ಸಾರ್ವಜನಿಕ ಕಂಪನಿಗಳು ಮತ್ತು ಖಾಸಗಿ ಕಂಪನಿಗಳು ಎಂದು ಎರಡು ಪ್ರಮುಖ ಪ್ರಭೇದಗಳಿವೆ. ಅವುಗಳೆಂದರೆ ಖಾಸಗಿ ನಿಯಮಿತ ಕಂಪನಿಗಳು ಮತ್ತು ಸಾರ್ವಜನಿಕ ನಿಯಮಿತ ಕಂಪನಿಗಳು.

ಕಂಪನಿ ಕಾಯಿದೆ ೧೯೫೬ರ ೩ನೇ ವಿಧಿಯು ಖಾಸಗಿ ಕಂಪನಿಯ ಬಗೆಗಿನ ವ್ಯಾಖ್ಯಾನವನ್ನು ಮಾಡಿದೆ. ಇದರನ್ವಯ ಖಾಸಗಿ ನಿಯಮಿತ ಕಂಪನಿಯಲ್ಲಿ, ೧. ಶೇರು ಯಾ ಪಾಲು ಬಂಡವಾಳಗಳ ವರ್ಗಾವಣೆ ಯಾ ಶೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ. ೨. ಬಂಡವಾಳದಾರರ ಒಟ್ಟು ಸಂಖ್ಯೆಯನ್ನು ೫೦ಕ್ಕೆ ಮಿತಿಗೊಳಿಸಲಾಗಿರುತ್ತದೆ. ಹೀಗೆ ಬಂಡವಾಳದಾರರ ಸಂಖ್ಯೆಯನ್ನು ಪರಿಗಣಿಸುವಾಗ ಕಂಪನಿಯ ನೌಕರರು ಬಂಡವಾಳ ದಾರಾಗಿದ್ದರೆ ಅಂತಹವರನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ೩. ಸಾರ್ವಜನಿಕರಿಂದ ಬಂಡವಾಳ ಆಹ್ವಾನಿಸಲಾಗುವುದಿಲ್ಲ. ಸಾಮಾನ್ಯವಾಗಿ ಖಾಸಗಿ ನಿಯಮಿತ ಕಂಪನಿಯನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಒಟ್ಟಾಗಿ ಪ್ರಾರಂಭಿಸಬಹುದಾಗಿದೆ. ಖಾಸಗಿ ನಿಯಮಿತ ಕಂಪನಿಯ ಹೆಸರು ಯಾವಾಗಲೂ ಖಾಸಗೀ ನಿಯಮಿತ ಎನ್ನುವ ಶಬ್ದಗಳೊಂದಿಗೆ ಕೊನೆಯದಾಗಬೇಕು. ಉದಾಹರಣೆಗೆ ಬಾಬಯ್ಯ ಮತ್ತು ಮಕ್ಕಳು ಖಾಸಗಿ ನಿಯಮಿತ.

ಯಾವುದೇ ಕಂಪನಿಯು ಖಾಸಗಿ ಕಂಪನಿಯಾಗಿಲ್ಲದಿದ್ದಲ್ಲಿ ಅದು ಸಾರ್ವಜನಿಕ ನಿಯಮಿತ ಕಂಪನಿಯಾಗಿರಬೇಕು. ಕಂಪನಿಯ ಒಂದು ಮುಖ್ಯ ಲಕ್ಷಣವೆಂದರೆ ಇದರ (ಮೂಲಕ ಅಂದರೆ ಪಾಲು ಬಂಡವಾಳ) ಹೂಡಿಕೆದಾರರ ಜವಾಬ್ದಾರಿ ಅಥವಾ ಹೊಣೆಗಾರಿಕೆ ಅವರು ತೊಡಗಿಸಿರುವ ಬಂಡವಾಳಕ್ಕೆ ಮಿತಿಗೊಂಡಿರುತ್ತದೆ. ಅಂದರೆ ಒಂದು ವೇಳೆ ಕಂಪನಿಯು ನಷ್ಟವನ್ನನುಭವಿಸಿ ವಿಸರ್ಜನೆಗೊಂಡರೆ ಅಂತಹ ಸಂದರ್ಭದಲ್ಲಿ ಪಾಲು ಬಂಡವಾಳ ಹೂಡಿರುವ ವ್ಯಕ್ತಿ ತನ್ನ ಪಾಲು ಬಂಡವಾಳಕ್ಕಿಂತ ಅಧಿಕ ಮೊತ್ತದ ನಷ್ಟವನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಹೀಗಾಗಿ ಗರಿಷ್ಟ ನಷ್ಟವೆಂದರೆ ಪಾಲು ಬಂಡವಾಳದಾರರ ಬಂಡವಾಳ ನಷ್ಟವಾಗಬಹುದೇ ಹೊರತು ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ತುಂಬಿ ಕೊಡಬೇಕಾಗಿಲ್ಲ. ಹಾಗಾಗಿ ನಿಯಮಿತ ಕಂಪನಿಯಲ್ಲಿ ಹಣ ತೊಡಗಿಸುವವರಿಗೆ ಯಾ ಬಂಡವಾಳ ಹೂಡಿಕೆದಾರರಿಗೆ ಅಪರಿಮಿತ ಹೊಣೆಗಾರಿಕೆ ಯಾ ಬಾಧ್ಯತೆಗಳು ಇರುವುದಿಲ್ಲ. ಪ್ರಸ್ತುತ ವಾಣಿಜ್ಯ ವ್ಯವಸ್ಥೆಯಲ್ಲಿ ಬೃಹತ್ ಗಾತ್ರದ ಬಂಡವಾಳ ಹೊಂದಿರುವ ಸಾರ್ವಜನಿಕ ನಿಯಮಿತ ಕಂಪೆನಿಗಳು ಕಾರ್ಯನಿರ್ವಹಿಸುವುದನ್ನು ಗಮನಿಸಬಹುದು. ಆರ್ಥಿಕ ವ್ಯವಸ್ಥೆಯು ವಿಕಸನವಾದಂತೆ ಕೆಲವೊಂದು ಉದ್ಯಮಗಳಲ್ಲಿ ಸಂಗ್ರಹವಾಗಿರುವ ಅಗಾಧ ಪ್ರಮಾಣದ ಬಂಡವಾಳ ಸಂಚಯವಾಗಿ ಹೂಡಿಕೆಯ ಅವಶ್ಯಕತೆಯನ್ನು ಅರಸಿಕೊಂಡು ದೇಶದ ಗಡಿಗಳನ್ನು ಮೀರಿ ಹರಿದಾಡಲು ಪ್ರಾರಂಭಿಸಿರುವುದು ಜಾಗತೀಕರಣ, ಉದಾರೀಕರಣದಂತಹ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿದೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕಂಪೆನಿಗಳ ಕಾರ್ಯ ನಿರ್ವಹಣೆಯನ್ನು ಸರಕಾರಗಳು ನಿಯಂತ್ರಿಸುತ್ತವೆ ಎನ್ನುವುದು ತಾರ್ಕಿಕವಾಗಿ ಸತ್ಯ. ಆದರೆ ಅಗಾಧ ಪ್ರಮಾಣದ ಹಣಕಾಸಿನ ವ್ಯವಹಾರ ನಡೆಸುವ ಉದ್ಯಮಮಯ ಸರಕಾರದ ಮೇಲೆ, ಸರಕಾರವನ್ನು ನಿಯಂತ್ರಿಸುವ ಜನಪ್ರತಿನಿಧಿಗಳ ಮೇಲೆ ನಿಯಂತ್ರಣ ಹೊಂದಿರುತ್ತದೆ. ಅವರಿಗೆ ಬೇಕಾದ ಹಣಕಾಸು, ಇತರ ವಿಷಯಾಸಕ್ತಿಯನ್ನು ಪರೋಕ್ಷವಾಗಿ ನಿರ್ಧರಿಸುತ್ತದೆ. ಹಾಗಾಗಿ ಆಧುನಿಕ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಉದ್ಯಮ ಜಗತ್ತು ಮೂಡಿ ಬಂದಿವೆ. ಹಿಂದೆ ದೇಶದ, ಗಡಿ, ಕಾನೂನುಗಳು ಬೇರೆ ಬೇರೆಯಾಗಿದ್ದ ಕಾರಣ ಬಂಡವಾಳ ಒಂದು ದೇಶದೊಳಗಷ್ಟೇ ಚಲನಶೀಲವಾಗಿತ್ತು. ಆದರೆ ಬಂಡವಾಳ ಸಂಚಯನ ಅಧಿಕಗೊಂಡು ಬಲ ಪಡೆದು ಕೊಂಡಿರುವ ಕಾರಣ ಅದು ದೇಶ, ದೇಶಗಳ ನಡುವಿರುವ ವಿಭಿನ್ನತೆಗಳನ್ನು ಮುರಿದು ಮುಂದುವರಿಯುವ ಗುಣವನ್ನು ಅರ್ಜಿಸಿಕೊಂಡಿದೆ. ಈ ಕಾರಣದಿಂದಾಗಿ ನಾವು ಇಂದು ಜಾಗತಿಕ ಮಾರುಕಟ್ಟೆಯ ಯುಗವನ್ನು ಪ್ರವೇಶ ಮಾಡಿದ್ದೇವೆ. ಇಲ್ಲಿ ಎಲ್ಲ ದೇಶಗಳಿಗೂ ಒಂದೇ ಕಾನೂನು, ಒಂದೇ ನಿಯಮ, ಎನ್ನುವ ಬಗ್ಗೆ ನಾವು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ಇಲ್ಲಿ ಮುಖ್ಯವಾದ ವಿಷಯ ಈ ಒಮ್ಮತ ಎಲ್ಲರ ಸಮ್ಮತಿಯ ಮೂಲಕ ಅಥವಾ ಒಂದು ಪ್ರಜಾತಾಂತ್ರಿಕ ರೀತಿಯಲ್ಲಿ ರೂಪುಗೊಳ್ಳುವುದಿಲ್ಲ. ಬದಲಾಗಿ ಒಂದೇ ನಿಯಮವನ್ನು ಆರ್ಥಿಕವಾಗಿ ಬಲಿಷ್ಠರು, ಬಲಾಢ್ಯರು ನಿರ್ಧರಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿರುವ ವಿಷಯವಾಗಿದೆ.

ಬಹುರಾಷ್ಟ್ರೀಯ ಕಂಪನಿಗಳು

ಬಹುರಾಷ್ಟ್ರೀಯ ಕಂಪನಿಯೆಂದರೆ ಪ್ರಪಂಚದ ಒಂದು ದೇಶದಲ್ಲಿ ಆರಂಭವಾಗಿ, ಇನ್ನಿತರ ದೇಶಗಳಿಗೆ ವ್ಯವಹಾರ ವಿಸ್ತರಿಸಿರುವ ಕಂಪನಿಗಳು. ಉದಾಹರಣೆಗೆ ಸೋನಿ ಜಪಾನ್ ದೇಶದಲ್ಲಿ ಕಾರ್ಯಾರಂಭ ಮಾಡಿ; ತದನಂತರ ಪ್ರಪಂಚದ ಇತರೆಡೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದರಂತೆಯೇ ಜಪಾನಿನ ಇತರ ಕಂಪನಿಗಳಾದ ಟೊಯೋಟ, ಸುಜುಕಿ, ಮಿತ್ಸುಬಿಷಿ, ಕೂಡಾ ಇವತ್ತು ವಿಶ್ವದಾದ್ಯಂತ ವ್ಯಾಪಾರ ವಹಿವಾಟು ನಡೆಸುತ್ತಿದೆ. ಅಮೇರಿಕಾ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಭಾರತ, ಮುಂತಾದ ದೇಶಗಳಲ್ಲಿ ಆರಂಭವಾಗಿದ್ದ ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳಾಗಿ ಬೆಳೆದಿವೆ.

ಇಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ವಿಶ್ವ ವಾಣಿಜ್ಯ ವ್ಯವಸ್ಥೆಯ ಮೇಲೆ ತುಂಬಾ ಪ್ರಭಾವವನ್ನು ಬೀರುತ್ತಿವೆ. ಇಂತಹ ಪ್ರಭಾವವನ್ನು ನಾವು ಎರಡು ರೀತಿಯಲ್ಲಿ ಗಮನಿಸಬಹುದು. ಮೊದಲನೆಯದಾಗಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಾರ್ಯವ್ಯಾಪ್ತಿ ಯನ್ನು ಇತರ ದೇಶಗಳಲ್ಲಿ ನೇರವಾಗಿ ವಿಸ್ತರಿಸಿಕೊಂಡು ಹೋಗುವುದು. ಇಂತಹ ಸಂದರ್ಭ ದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹೆಸರಲ್ಲಿ ಸ್ಥಾಪಿತ ಸುನಾಮವನ್ನು ಉಪಯೋಗಿಸಿ ಕೊಂಡು ವ್ಯಾಪಾರ ವಹಿವಾಟು ವೃದ್ದಿಸಿಕೊಳ್ಳುತ್ತದೆ. ಉದಾಹರಣೆಗೆ ಅಮೇರಿಕಾದ ಮೆಕ್‌ಡೊನಾಲ್ಡ್ ಕಂಪನಿ ಅಥವಾ ಜನರಲ್ ಮೋಟಾರ್ಸ್ ಭಾರತದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವುದು. ಇಂತಹ ಸಂದರ್ಭಗಳಲ್ಲಿ ನಾವು ಬಹುರಾಷ್ಟ್ರೀಯ ಕಂಪನಿಯ ಕಾರ್ಯಚಟುವಟಿಕೆಯನ್ನು ಪ್ರತ್ಯಕ್ಷವಾಗಿ ಕಾಣಬಹುದು ಅಥವಾ ತಿಳಿಯಬಹುದು. ಎರಡನೆಯದಾಗಿ, ಬಹುರಾಷ್ಟ್ರೀಯ ಕಂಪನಿ ಈಗಾಗಲೇ ಅಸ್ತಿತ್ವದಲ್ಲಿರುವ ದೇಶೀಯ ಕಂಪನಿಗಳಲ್ಲಿ ಬಂಡವಾಳ ತೊಡಗಿಸುವ ಮೂಲಕ ಅವುಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು. ಇಂತಹ ಸಂದರ್ಭಗಳಲ್ಲಿ ನಮಗೆ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ನೇರವಾಗಿ ಅನುಭವಕ್ಕೆ ಬರುವುದಿಲ್ಲ. ಉದಾಹರಣೆಗೆ ಮೆಕ್‌ಡೊನಾಲ್ಡ್ ಅಥವಾ ಜನರಲ್ ಮೋಟಾರ್ಸ್, ಭಾರತದಲ್ಲಿ ಉತ್ಪಾದನಾ ವ್ಯವಸ್ಥೆ ಪ್ರಾರಂಭಿಸುವ ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕಂಪನಿಗಳ ಶೇರುಗಳನ್ನು ಶೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ಖರೀದಿ ಮಾಡುವ ಮೂಲಕ ಕಂಪನಿಯ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸಬಹುದು. ಉದಾರೀಕರಣದ ನಂತರದ ದಿನಗಳಲ್ಲಿ ವಾಣಿಜ್ಯ ಜಗತ್ತಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಗಾಢವಾಗಿ ಬೆಳೆಯುತ್ತಿದೆ.