ನಿಸರ್ಗದತ್ತವಾಗಿ ಸಿಗುವ ವಸ್ತುಗಳನ್ನು ಬೇರೆ ವಸ್ತುಗಳಾಗಿ ಪರಿವರ್ತಿಸುವ ಘಟಕಗಳನ್ನು ಕೈಗಾರಿಕೆ ಎನ್ನಬಹುದು. ಉದಾಹರಣೆ ಹೇಳುವುವಾದರೆ ನಿಸರ್ಗದತ್ತವಾಗಿ ಸಿಗುವ ಹತ್ತಿಯನ್ನು ಬಟ್ಟೆಯಾಗಿ ಪರಿವರ್ತಿಸುವ ಘಟಕಗಳು ಹತ್ತಿ ಬಟ್ಟೆ ಕೈಗಾರಿಕೆ ಎನಿಸಿಕೊಳ್ಳುತ್ತದೆ.

ಆಧುನಿಕ ಯುಗದಲ್ಲಿ ಕೈಗಾರಿಕೆಯ ಅರ್ಥ ವಿಶಾಲವಾಗುತ್ತಾ ಸಾಗಿದೆ. ನಿಸರ್ಗದತ್ತವಾದ ಕೆಲವು ವಸ್ತುಗಳನ್ನು ವ್ಯವಸ್ಥಿತವಾಗಿ ಉತ್ಪಾದಿಸಲಾಗುತ್ತಿದೆ. ಉದಾಹರಣೆಗೆ ಹತ್ತಿಯನ್ನು ಕಾಡುಗಳಲ್ಲಿ ಹುಡುಕಿ ಆಯ್ದು ತರುವ ಬದಲು ವ್ಯವಸ್ಥಿತ ಕೃಷಿ ಮೂಲದಿಂದ ಪಡೆಯುತ್ತೇವೆ. ಅದೇ ರೀತಿ ನಿಸರ್ಗದತ್ತವಾದ ವಸ್ತು ಸಿದ್ಧವಸ್ತುವಾಗಿ ರೂಪಾಂತರಗೊಳ್ಳುವಲ್ಲಿ ಹಲವಾರು ಮಜಲುಗಳನ್ನು ದಾಟುತ್ತದೆ. ಉದಾಹರಣೆಗೆ ನಿಸರ್ಗದತ್ತವಾದ ಕಬ್ಬಿಣವು ಬೋಲ್ಟ್ ಆಗಿ ರೂಪಾಂತರ ಹೊಂದುವುದು ಒಂದು ಘಟಕದಲ್ಲಾದರೆ ಅದೇ ಬೋಲ್ಟ್ ಇತರ ನಾನಾ ಅಂಶಗಳನ್ನು ಜೊತೆಗೂಡಿಸಿಕೊಂಡು ವಾಹನವನ್ನು ನಿರ್ಮಿಸಿಕೊಡುವುದರಲ್ಲೂ ಪಾತ್ರವಹಿಸುತ್ತದೆ. ಅಂದರೆ ನಿಸರ್ಗದತ್ತವಾದ ವಸ್ತುವೊಂದು ನಾನಾ ರೀತಿಯಲ್ಲಿ ರೂಪಾಂತರ ಹೊಂದುತ್ತಾ ಹೋಗುತ್ತದೆ. ಅದನ್ನು ರೂಪಾಂತರಗೊಳಿಸಲು ಹಲವಾರು ಘಟಕಗಳಿರುತ್ತವೆ. ಅವೆಲ್ಲ ಕೈಗಾರಿಕಾ ಘಟಕಗಳೇ ಆಗಿವೆ.

ಸ್ವರೂಪಾತ್ಮಕವಾಗಿ ಕೈಗಾರಿಕೆಗಳ ಬಹುಮುಖ್ಯ ಸಂಗತಿಯೆಂದರೆ ಅವು ಹೊಸತನಕ್ಕೆ ಚಾಲನೆ ಕೊಡುತ್ತವೆ ಬದಲಾವಣೆಯನ್ನು ತರುತ್ತವೆ. ಯಾಕೆಂದರೆ ಕೈಗಾರಿಕೀಕರಣ ಉದ್ಭವವಾದದ್ದು ಮನುಷ್ಯನ ಶೋಧಕ ದೃಷ್ಟಿಯಿಂದ. ಹಾಗೆಂದರೆ ಕೃಷಿ ಕೂಡ ಶೋಧಕ ದೃಷ್ಟಿಯಿಂದಲೇ ಆವಿರ್ಭವಿಸಿದ್ದು. ಆದರೆ ಕೃಷಿಯ ಉಗಮಕ್ಕೆ ಕಾರಣವಾದ ಶೋಧಕ ದೃಷ್ಟಿ ವಿಶಾಲ ವ್ಯಾಪ್ತಿಯಲ್ಲಿ ಹೊಸತನವನ್ನು ತಂದಿದ್ದು ಆ ಹೊಸತನ ಒಂದು ಹಂತದಲ್ಲಿ ಸ್ಥಿರತೆಯನ್ನು ಕಂಡಿದೆ. ಅಂಥಲ್ಲಿ ಆಧುನಿಕ ಜಗತ್ತು ಕಂಡ ಕೈಗಾರಿಕಾ ಕ್ರಾಂತಿಯು ಹೊಸತನಕ್ಕೆ ತೀವ್ರತರವಾದ ಚಾಲನೆ ಕೊಟ್ಟಿದೆ. ಈ ಬದಲಾವಣೆಯಿಂದ ಒಳಿತೂ ಆಗಬಹುದು. ಕೆಡುಕೂ ಆಗಬಹುದು. ಆದರೆ ಕೈಗಾರಿಕೀಕರಣವು ಬದಲಾವಣೆಗೆ ಚಾಲನೆ ಕೊಡುತ್ತದೆ ಎಂಬುದು ಮುಖ್ಯ ಸಂಗತಿ.

ಎರಡನೆಯದಾಗಿ, ಕೈಗಾರಿಕೀರಣವು ಆರ್ಥಿಕ ಅಭಿವೃದ್ದಿಗೆ ಹೆಚ್ಚು ಆದ್ಯತೆ ಕೊಡುತ್ತದೆ. ಪ್ರಾಯಶಃ ಕೈಗಾರಿಕೋತ್ಪನ್ನಗಳ ಮುಖ್ಯ ಉದ್ದೇಶ ವ್ಯವಹಾರವೇ ಆಗಿರುವುದರಿಂದ ಸ್ವಭಾವ ಸಹಜವಾಗಿ ಕೈಗಾರಿಕೆಗಳು ಆರ್ಥಿಕ ಅಭಿವೃದ್ದಿಗೆ ಹೆಚ್ಚು ಆದ್ಯತೆ ಕೊಡುತ್ತವೆ. ಆದ್ದರಿಂದಲೇ ಆಧುನಿಕ ಜಗತ್ತಿನಲ್ಲಿ ದೇಶದ ಸಮಗ್ರ ಪ್ರಗತಿಯಲ್ಲಿ ಆರ್ಥಿಕತೆ ಪ್ರಧಾನ ಸೂತ್ರವಾಗಿರು ವುದರಿಂದ ಕೈಗಾರಿಕೀಕರಣವು ಮುಖ್ಯವಾಗುತ್ತದೆ.

ಮೂರನೆಯದಾಗಿ ಏಕರೂಪತೆಯು ಕೈಗಾರಿಕೀಕರಣದ ಸ್ವಭಾವವಾಗಿದೆ. ಅದಕ್ಕಿಂತ ಭಿನ್ನವಾಗಿ ಕೃಷಿಯು ಬಹುರೂಪತೆಗೆ ನಿದರ್ಶನವಾಗುತ್ತದೆ. ಯಾಕೆಂದರೆ ಕೃಷಿಯ ಮೇಲೆ ಭೌಗೋಳಿಕ ಅಂಶಗಳ ದಟ್ಟ ಪ್ರಭಾವವಿದ್ದು ಭೌಗೋಳಿಕ ಭಿನ್ನತೆಯೊಂದಿಗೆ ಕೃಷಿ ಕೂಡ  ಭಿನ್ನ ಸ್ವರೂಪ ಧರಿಸುತ್ತದೆ. ಆದರೆ ಕೈಗಾರಿಕೆಗಳು ಬಹುಮಟ್ಟಿಗೆ ನಿಸರ್ಗದ ಮೇಲೆ ಮನುಷ್ಯ ಸಾಧಿಸಿದ ಪ್ರಭುತ್ವದ ಉತ್ಪನ್ನವಾಗಿದ್ದು ಅದರ ಮೇಲೆ ಭೌಗೋಳಿಕ ಪ್ರಭಾವ (ಕೃಷಿಗೆ ಹೋಲಿಸಿದರೆ) ಕ್ಷೀಣವಾಗಿದೆ. ಕೈಗಾರಿಕೆ ಕೇಂದ್ರೀಕೃತವಾಗುವ ಸ್ಥಳದ ಲೋಪದೋಷ ಗಳನ್ನು ಭರಿಸಿಕೊಳ್ಳಲು ಸಾಧ್ಯವಿರುವುದರಿಂದ ಬಹುಮಟ್ಟಿಗೆ ಅದರಲ್ಲಿ ಏಕರೂಪತೆ ಇದೆ. ಇವೆಲ್ಲದರಿಂದಾಗಿ ಕೈಗಾರಿಕೆಯು ಕೈಗಾರಿಕಾ ಸಂಸ್ಕೃತಿಯೊಂದನ್ನು ಕಟ್ಟಿಕೊಡಲು ಸಮರ್ಥ ವಾಗಿದೆ.

ಭಾರತದ ಅರ್ಥ ವ್ಯವಸ್ಥೆಯಲ್ಲಿ ಕೈಗಾರಿಕೆಗಳ ಪ್ರಾಮುಖ್ಯತೆ

ಆಧುನಿಕ ಜಗತ್ತು ಕೈಗಾರಿಕಾ ಪ್ರಧಾನವಾಗಿದ್ದು ವ್ಯಾಪಾರೋದ್ಯಮಕ್ಕೆ ನಿರ್ಣಾಯಕ ಕೊಡುಗೆ ಕೊಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಅದರ ಪ್ರಾಮುಖ್ಯತೆ ತೆರೆದುಕೊಳ್ಳುತ್ತದೆ. ಅದನ್ನು ಈ ಕೆಳಗಿನಂತೆ ಹೇಳಬಹುದು.

೧. ಭಾರತದ ಅರ್ಥ ವ್ಯವಸ್ಥೆ ಕೃಷಿ ಪ್ರಧಾನವಾದದ್ದು. ಹಾಗಿರುವಾಗ ಆಧುನಿಕ ಜಗತ್ತಿ ನೊಂದಿಗೆ ವ್ಯವಹರಿಸಬೇಕಿದ್ದರೆ ಕೈಗಾರಿಕೆಗಳು ಭಾರತಕ್ಕೆ ಮೂಲಭೂತ ಅವಶ್ಯಕತೆ ಗಳಾಗಿ ಬಿಟ್ಟಿವೆ.

೨. ಕೃಷಿಗೆ ಹೋಲಿಸಿದರೆ ಕೈಗಾರಿಕೋತ್ಪನ್ನಗಳು ಹೆಚ್ಚು ಲಾಭ ತರಬಲ್ಲವು. ಅದರಿಂದ ರಾಷ್ಟ್ರೀಯ ಆದಾಯ, ತಲ ಆದಾಯ ಹೆಚ್ಚಾಗುತ್ತದೆ.

೩. ಕೈಗಾರಿಕೋತ್ಪನ್ನಗಳು ಕೃಷಿಗೆ ಪೂರಕ ಸರಕುಗಳನ್ನು ಒದಗಿಸುತ್ತವೆ. ಅದರಿಂದಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿಯು ವೈeನಿಕ ಕೃಷಿಯಾಗಿ ಪರಿವರ್ತನೆ ಹೊಂದಲು ಅವಕಾಶವಿದೆ.

೪. ಕೈಗಾರಿಕಾ ಸಂಸ್ಕೃತಿ ಎಂಬುದು ಆಧುನಿಕ ವಿeನದಿಂದ ಪ್ರಭಾವಿತವಾಗಿದ್ದು ವೈeನಿಕ ಮನೋಭಾವ, ಶೋಧಕ ದೃಷ್ಟಿ, ಐಹಿಕ ಆದ್ಯತೆಯ ಮನೋಧರ್ಮ ಹರಡಲು ನೆರವಾಗುತ್ತದೆ.

೫. ಆಧುನಿಕ ವ್ಯವಸ್ಥೆಯಲ್ಲಿ ಕೈಗಾರಿಕೋತ್ಪನ್ನಗಳು ಅನಿವಾರ್ಯವಾಗಿರುವುದರಿಂದ ದೇಶವು ಕೈಗಾರಿಕೀಕರಣಗೊಂಡಾಗ ಸ್ವಾವಲಂಬಿ ಅರ್ಥ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿದೆ.

೬. ಕೈಗಾರಿಕೆಗಳು ಅಭಿವೃದ್ದಿಯಾದಾಗ ಕಚ್ಚಾ ವಸ್ತು-ಸಿದ್ಧವಸ್ತುಗಳ ಸಾಗಾಣಿಕೆ ನಡೆಯಲೇ ಬೇಕಾಗುತ್ತದೆ. ಅದರಿಂದ ಸಾರಿಗೆ-ಸಂಪರ್ಕದ ಅಭಿವೃದ್ದಿಯೂ ಆಗುತ್ತದೆ. ಆಗ ಮಾರುಕಟ್ಟೆಗೆ ಸರಕುಗಳ ಪೂರೈಕೆ ಹೆಚ್ಚಿ ಮಾರುಕಟ್ಟೆ ವಿಸ್ತರಣೆಯಾಗುತ್ತದೆ. ಅರ್ಥಾತ್ ಆರ್ಥಿಕ ಚಟುವಟಿಕೆಗಳು ಬಿರುಸುಗೊಳ್ಳಲು ಕೈಗಾರಿಕೆಗಳು ನೆರವಾಗುತ್ತವೆ.

೭. ಕೈಗಾರಿಕೆಗಳ ಅಭಿವೃದ್ದಿಯಾದಾಗ ಸಹಜವಾಗಿ ನಗರೀಕರಣ ಪ್ರಕ್ರಿಯೆ ತೀವ್ರವಾಗುತ್ತದೆ. ಅದರಿಂದ ಶೈಕ್ಷಣಿಕ ಪ್ರಗತಿ, ವೈದ್ಯಕೀಯ ಸೌಲಭ್ಯದ ವಿಸ್ತರಣೆ, ಜನಸಂಖ್ಯಾ ನಿಯಂತ್ರಣ ಆಗುತ್ತದೆಂದು ನಿರೀಕ್ಷಿಸಲಾಗಿದೆ.

೮. ಕೈಗಾರಿಕಾ ಬೆಳವಣಿಗೆಯು ಪ್ರಾಥಮಿಕ ರಂಗವಾದ ಕೃಷಿಗೂ, ತೃತೀಯರಂಗವಾದ ವ್ಯಾಪಾರ, ಹಣಕಾಸು ವ್ಯವಹಾರ, ಸೇವೆಗಳಿಗೂ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಕೈಗಾರಿಕಾ ಬೆಳವಣಿಗೆ ಇತರ ರಂಗಗಳ ಸಂತುಲಿತ ಬೆಳವಣಿಗೆಯನ್ನು ಸಾಧಿಸಬಲ್ಲುದು.

೯. ಭಾರತದಲ್ಲಿ ವಿಪುಲವಾದ ನೈಸರ್ಗಿಕ ಸಂಪನ್ಮೂಲವಿದ್ದು ಕೈಗಾರಿಕೀಕರಣದಿಂದ ಅದರ ಸದ್ಭಳಕೆಯಾಗುತ್ತದೆ.

೧೦. ಕೈಗಾರಿಕೋತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಿದಾಗ ಸರಕಾರ ತೆರಿಗೆ ಹಾಕುತ್ತದೆ. ಕೈಗಾರಿಕೋದ್ಯಮಿಯು ಆದಾಯ ತೆರಿಗೆ ಕೊಡಬಲ್ಲವನಾದಾಗ ಸರಕಾರದ ಆದಾಯದ ಬಾಬ್ತು ಹೆಚ್ಚುತ್ತದೆ. ಎಕ್ಸೈಜ್ ಸುಂಕ, ಕಸ್ಟಂಸ್ ಸುಂಕ, ಕಾರ್ಪೊರೇಟ್ ತೆರಿಗೆ ಮುಂತಾದವುಗಳಿಂದ ಸಂಗ್ರಹವಾದ ಈ ಹಣವನ್ನು ಸರಕಾರವು ದುರ್ಬಲರ ಮೇಲೆ ಮರು ಹೂಡಿಕೆ ಮಾಡಿದಾಗ ದೇಶದ ಒಟ್ಟು ಆರ್ಥಿಕಾಭಿವೃದ್ದಿ ಸಾಧ್ಯವಿದೆ.

೧೧. ಕೈಗಾರಿಕೆಗಳು ಆದಾಯದ ರೂಪದಲ್ಲಿಯೂ, ಸಲಕರಣೆಗಳ ರೂಪದಲ್ಲಿಯೂ ದೇಶಧ ರಕ್ಷಣೆಯನ್ನು ಮಾಡಬಲ್ಲವು.

ಪರಾಮರ್ಶೆ

ಕೈಗಾರಿಕೀಕರಣದಿಂದ ದೇಶದ ಒಟ್ಟು ಪ್ರಗತಿ ಸಾಧ್ಯವಿದೆಯಾದರೂ ಇಲ್ಲಿನ ಸಾಮಾಜಿಕ ವ್ಯವಸ್ಥೆ ಕೈಗಾರಿಕೀಕರಣಕ್ಕೆ ಪರಿಪೂರ್ಣವಾಗಿ ಸಿದ್ಧಗೊಂಡಿಲ್ಲದೆ ಇರುವುದರಿಂದ ಕೆಲವೊಂದು ತೊಡಕುಗಳು ಉದ್ಭವವಾಗಲು ಸಾಧ್ಯವಿದೆ. ಕೈಗಾರಿಕೆಗಳು ಬಯಸುವ ಕೌಶಲ ಇಲ್ಲದೆ ಇರುವ ಕಾರ್ಮಿಕರಿಗೆ ಅದು ಉದ್ಯೋಗ ಒದಗಿಸುವ ಭರವಸೆ ಇಲ್ಲ. ಕೈಗಾರಿಕೀಕರಣದ ಪ್ರಯೋಜನಗಳು ಸಮಗ್ರ ಜನತೆಯ ಮೇಲೆ ಸಮಾನ ರೀತಿಯಲ್ಲಿ ಪರಿಣಾಮ ಬೀರದೆ ಇರುವ ಸಾಧ್ಯತೆ ಹೆಚ್ಚು. ಶಿಕ್ಷಿತ ವರ್ಗ ಅದರ ಪ್ರಯೋಜನವನ್ನು ಬಹುಬೇಗ ಪಡೆಯಬಲ್ಲುದು. ಆಗ ಕೈಗಾರಿಕೆಗಳಿಂದಾಗಿ ಆಗುವ ಅಭಿವೃದ್ದಿ ಅಸಮತೋಲನವನ್ನು ಸೃಷ್ಟಿಸುತ್ತದೆ. ಭಾರತದ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯಲ್ಲಿ ಕೃಷಿಯು ಜೀವನ ವಿಧಾನವೇ ಹೊರತು ಉದ್ಯಮವಲ್ಲ. ಅಂಥಲ್ಲಿ ಆರ್ಥಿಕತೆಯನ್ನೇ ಪ್ರಧಾನವಾಗಿ ಆಧರಿಸಿರುವ ಕೈಗಾರಿಕೀಕರಣವು ಮುಖಾಮುಖಿಯಾದಾಗ ಕೃಷಿ ರಂಗದ ಸಹೃದಯತೆಯನ್ನು ಅದು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ಬಡ ರೈತರು ಮಧ್ಯವರ್ತಿಗಳಿಂದ ಅನುಭವಿಸುತ್ತಿರುವ ಶೋಷಣೆಯೇ ಸಾಕ್ಷಿ. ದೇಶದ ಸಮಗ್ರ ಅಭಿವೃದ್ದಿಯಲ್ಲಿ ಆರ್ಥಿಕತೆ ಪ್ರಧಾನವಾದ ಒಂದು ಅಂಗವೇ ಹೊರತು ಅದೇ ಅಂತಿಮವಲ್ಲ ಎಂಬ ದೃಷ್ಟಿಯಲ್ಲಿ ನೋಡಿದಾಗ ಅದು ಕಟ್ಟಿ ಕೊಡಬಲ್ಲ ಕೈಗಾರಿಕಾ ಸಂಸ್ಕೃತಿಯು ಎಷ್ಟರಮಟ್ಟಿಗೆ ಮಾನವೀಯತೆ, ಜೀವಪರತೆ, ಸೃಜನಶೀಲ ಮನೋಧರ್ಮ, ಸುಸಂಸ್ಕೃತ ಜೀವನ ವಿಧಾನ ವನ್ನು ರೂಪಿಸಬಲ್ಲದು ಎಂಬುದೂ ಪ್ರಶ್ನಾರ್ಹ ಸಂಗತಿಯಾಗುತ್ತದೆ. ಕೈಗಾರೀಕರಣವು ಹೊಂದಿರುವ ಏಕರೂಪತೆಯು ಈ ದೇಶದ ಬಹುರೂಪಿ ಸಂಸ್ಕೃತಿಯನ್ನು ತೊಡೆದು ಹಾಕುವುದಕ್ಕೂ ಸಾಧ್ಯವಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಬಹುಶಃ ಕೈಗಾರಿಕೀಕರಣವು ತಂದಿರುವ ಆಧುನಿಕತೆಯು ಈ ದೇಶದ ಜಡ್ಡು ಕಟ್ಟಿದ ಸಂಪ್ರದಾಯಶೀಲತೆಯೊಂದಿಗೆ ಮುಖಾಮುಖಿಯಾದಾಗ ಸಂಭವಿಸುವ ಪರಿಣಾಮವನ್ನು ವೈದ್ಯಕೀಯ ರಂಗಕ್ಕೆ ಪರಿಚಿತ ವಾಗಿರುವ ಸ್ಕ್ಯಾನಿಂಗ್‌ನಂತಹ ತಂತ್ರಜ್ಞಾನದ ದುರುಪಯೋಗವಾಗಿ ಸ್ತ್ರೀ ಭ್ರೂಣಹತ್ಯೆ ನಡೆಯುತ್ತಿರುವಲ್ಲಿ ಗಮನಿಸಬಹುದು. ಮೂಲತಃ ಸಂಪ್ರದಾಯಶೀಲರೇ ಆಗಿದ್ದು ಆಧುನಿಕತೆಯನ್ನು ಸ್ವೀಕರಿಸುವ ಎಡಬಿಡಂಗಿ ಮನೋಭಾವದಿಂದ ಉದ್ಭವಿಸುವ ಸಮಸ್ಯೆ ಇದೆ. ಅಂದರೆ ಕೈಗಾರಿಕೀಕರಣವು ಒಂದು ಮನೋಧರ್ಮವಾಗಿ ಬಾರದೆ ಆರ್ಥಿಕ ಅಗತ್ಯ ಮಾತ್ರವೇ ಆಗಿ ಬಂದಾಗ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದಲೇ ಸಂಪ್ರದಾಯಶೀಲತೆಯ ದಟ್ಟ ಪ್ರಭಾವವಿರುವ ಭಾರತದಲ್ಲಿ ಕೈಗಾರಿಕೀಕರಣವನ್ನು ಬಹಳಷ್ಟು ಜಾಗರೂಕತೆಯಿಂದ ಅನುಸರಿಸಬೇಕಾದ ಅಗತ್ಯವಿದೆ. ಅದರ ಮೂಲ ಮನೋಧರ್ಮ ಸಮಗ್ರ ಜನಸಮುದಾಯವನ್ನು ಮೇಲೆತ್ತುವಂತೆ ನೋಡಿಕೊಳ್ಳಬೇಕಾಗಿದೆ. ಆಗ ಕೈಗಾರಿಕೀಕರಣವು ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕ ಪ್ರಗತಿಯನ್ನೂ ತರಬಲ್ಲುದು. ಅವು ಒಂದಕ್ಕೊಂದು ಪೂರಕವಾಗದೆ ಹೋದರೆ ಪ್ರಗತಿ ಎನ್ನುವುದು ಅರ್ಥ ಕಳೆದುಕೊಂಡು ಬಿಡುತ್ತದೆ. ಆದಾಗ್ಯೂ ಆಧುನಿಕ ವ್ಯವಸ್ಥೆಯಲ್ಲಿ ಕೈಗಾರೀಕರಣವಿಲ್ಲದೆ ಪ್ರಗತಿ ಅಸಾಧ್ಯ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ವಿಶ್ವಾಸಾರ್ಹ ಪ್ರಯತ್ನ ಮಾಡ ಬೇಕಾಗುತ್ತದೆ.

ಭಾರತದಲ್ಲಿ ಕೈಗಾರಿಕೀಕರಣಕ್ಕೆ ಇರುವ ಸಮಸ್ಯೆಗಳು

ಭಾರತವು ವಿಶಾಲವಾದ ದೇಶ. ವಿಪುಲವಾದ ನೈಸರ್ಗಿಕ ಸಂಪನ್ಮೂಲ ಜನಸಂಖ್ಯೆಯನ್ನು ಹೊಂದಿದೆ. ಒಂದು ದೃಷ್ಟಿಯಲ್ಲಿ ಸಂಪದ್ಭರಿತ ಕೈಗಾರಿಕಾ ರಾಷ್ಟ್ರವೊಂದರ ನಿರ್ಮಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳೂ ಇಲ್ಲಿವೆ. ಆದರೂ ಕೈಗಾರಿಕೀಕರಣಕ್ಕೆ ಇಲ್ಲಿ ಹಲವಾರು ಸಮಸ್ಯೆಗಳಿವೆ.

೧. ಭಾರತವು ಪರಿಪೂರ್ಣವಾದ ಬಂಡವಾಳಶಾಹಿ ರಾಷ್ಟ್ರವೂ ಅಲ್ಲ. ಪರಿಪೂರ್ಣವಾದ ಸಮಾಜವಾದಿ ರಾಷ್ಟ್ರವೂ ಅಲ್ಲ. ಬದಲಾಗಿ ಅರೆ-ಸಮಾಜವಾದಿ ರಾಷ್ಟ್ರವಾಗಿದೆ. ಯಾವುದೇ ಒಂದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೈಗಾರಿಕಾರಂಗದ ಬೆಳವಣಿಗೆಯು ಪ್ರಧಾನಶಕ್ತಿಯಾಗಿರುವುದು ಅಲ್ಲಿನ ಜನರ ಉದ್ಯಮ ಸಾಹಸದ ಮನೋಭಾವ. ಆದರೆ ಭಾರತದ ಬಹುತೇಕ ಜನರಲ್ಲಿ ಉದ್ಯಮಶೀಲತೆಯ ಅಭಾವ ಮತ್ತು ಅದಕ್ಕೆ ಬೇಕಾದ ಆರ್ಥಿಕ ಶಕ್ತಿಯ ಕೊರತೆ ಇದೆ. ಇಂಥಲ್ಲಿ ೧೯೯೧ರಲ್ಲಿ ಅಳವಡಿಸಿಕೊಂಡ ಜಾಗತೀಕರಣ ನೀತಿಯು ರಾಷ್ಟ್ರವನ್ನು ಬಂಡವಾಳಶಾಹಿ ವ್ಯವಸ್ಥೆಯೆಡೆಗೆ ಮುನ್ನಡೆಸುತ್ತಿದೆಯಾದರೂ ಜನರ ಮನೋಧರ್ಮ ಅದಕ್ಕೆ ಪೂರಕವಾಗಿ ಹೊಂದಿಕೊಳ್ಳದೆ ಇರುವುದರಿಂದ ಕೈಗಾರಿಕೀಕರಣ ಕಷ್ಟವಾಗಿ ಬಿಟ್ಟಿದೆ.

ಸಮಾಜವಾದಿ ವ್ಯವಸ್ಥೆಯಲ್ಲಿ ಸರಕಾರವೇ ಆರ್ಥಿಕ ರಂಗವನ್ನು ನಿಯಂತ್ರಿಸುತ್ತದೆ. ಆದರೆ ಇಲ್ಲಿನ ಅರೆ-ಸಮಾಜವಾದಿ ವ್ಯವಸ್ಥೆಯಲ್ಲಿ ಸ್ವಹಿತಾಸಕ್ತಿಯು ಅತಿಯಾಗಿ ಒಳ ಪ್ರವೇಶಿಸುತ್ತಿದೆ. ಒಂದು ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚು ಇರುವಾಗ, ಹಣ ಎನ್ನುವುದೇ ಗಣ್ಯತೆಯ ಮಾನದಂಡವಾಗಿರುವಾಗ ಹಣ ಮಾಡುವ ನಾನಾ ದಾರಿಗಳನ್ನು ಕಂಡುಕೊಳ್ಳುವುದು ಮನುಷ್ಯ ಸಹಜ ಸ್ವಭಾವ. ಹಿಂಬಾಗಿಲಿನಿಂದ ಪ್ರವೇಶಿಸುವ ಈ ಸ್ವಹಿತಾಸಕ್ತಿ ಸರಕಾರಿ ಘಟಕಗಳಲ್ಲಿ ಲಂಚ – ಭ್ರಷ್ಟಾಚಾರವನ್ನು ತೀವ್ರಗೊಳಿಸಿ ಸರಕಾರಿ ರಂಗವನ್ನು ದುರ್ಬಲ ಗೊಳಿಸುತ್ತಿದೆ. ಅದರಿಂದ ಸರಕಾರದ ಆರ್ಥಿಕ ಶಕ್ತಿಯ ಕುಸಿತವಾಗಿ ಕೈಗಾರಿಕೀಕರಣವನ್ನು ವ್ಯಾಪಾಕಗೊಳಿಸಲು ಸಂಪತ್ತಿನ ಕೊರತೆಯನ್ನು ಸರಕಾರ ಎದುರಿಸಬೇಕಾಗುತ್ತದೆ. ಇನ್ನೊಂದೆಡೆಯಿಂದ ಖಾಸಗಿ ಘಟಕಗಳಿಂದ ಸರಕಾರದ ಉದ್ದಿಮೆಗಳು ತೀವ್ರತರವಾದ ಪೈಪೋಟಿಯನ್ನು ಎದುರಿಸಬೇಕಿದ್ದು ಸರಕಾರಿ ಉದ್ದಿಮೆಯ ಆರ್ಥಿಕ ಶಕ್ತಿಯ ಹನನಕ್ಕೆ ಕಾರಣವಾಗುತ್ತದೆ. ಅದರಿಂದ ವರ್ಗ ಹಿತಾಸಕ್ತಿ ಬೆಳೆದು ಅಸಂತುಲಿತ ಕೈಗಾರಿಕೀಕರಣ ಸಾಧ್ಯವಾಗುತ್ತಿದೆಯೇ ಹೊರತು ಸಮತೂಕದಲ್ಲಿ ಕೈಗಾರಿಕಾ ಬೆಳವಣಿಗೆ ಸಾಧ್ಯವಾಗುತ್ತಿಲ್ಲ.

೩. ಕೈಗಾರಿಕೀಕರಣ ಸಾಧ್ಯವಾಗಬೇಕಾದರೆ ಅದಕ್ಕೆ ಸಿದ್ಧವಾದ ಜನಸಮುದಾಯವೊಂದು ಇರಬೇಕಾಗುತ್ತದೆ. ದುರದೃಷ್ಟವಶಾತ್ ನಮ್ಮಲ್ಲಿ ಏರುತ್ತಿರುವ ಜನಸಂಖ್ಯೆ ದುರ್ಬಲ ವರ್ಗದಿಂದ ಬರುತ್ತಿದೆ. ಆ ವರ್ಗವನ್ನು ಕೈಗಾರಿಕೀಕರಣಕ್ಕೆ ಸಿದ್ಧಗೊಳಿಸುವಷ್ಟರಲ್ಲಿ ಇನ್ನಷ್ಟು ಮಂದಿ ಜನಿಸುತ್ತಾರೆ. ಹೀಗಾಗಿ ಕೈಗಾರಿಕೀಕರಣವನ್ನು ವ್ಯಾಪಕಗೊಳಿಸಲು ಸೂಕ್ತವೆನಿಸುವ ವಾತಾವರಣ ತ್ರಾಸದಾಯಕವಾಗಿದೆ.

ಕೈಗಾರಿಕೆಯ ಇಡೀ ಪ್ರಕ್ರಿಯೆಲ್ಲಿ ಭಾಗವಹಿಸುವ ಜನ ಸಮುದಾಯಕ್ಕೆ ಅಗತ್ಯ ತಾಂತ್ರಿಕ ಪರಿಣತಿ, ವಿದ್ಯಾಭ್ಯಾಸ ಮಾನಸಿಕ ಸಿದ್ಧತೆ ಅತ್ಯಗತ್ಯವಾಗಿದೆ. ಇದೆಲ್ಲವನ್ನು ಸಮಾಜದ ಜನವರ್ಗಕ್ಕೆ ಒದಗಿಸಿಕೊಡುವ ಕಾರ್ಯ ವ್ಯವಸ್ಥಿತವಾಗಿ ಆಗಬೇಕಿದೆ. ಸ್ವಾತಂತ್ರ್ಯಾನಂತರದ ೫೦ ವರ್ಷಗಳಲ್ಲಿಯೂ ನಮಗೆ ಇದನ್ನು ಮಾಡಲಿಕ್ಕೆ ಆಗಿಲ್ಲ ಎನ್ನುವುದು ಬಹಳ ಬೇಸರದ ವಿಷಯ.

ಇದೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ಬಹುಪಾಲು ಕೈಗಾರಿಕೆಗಳು ವಿದೇಶಿ ತಂತ್ರಜ್ಞಾನ ಮತ್ತು ವಿದೇಶಿ ಮಾದರಿಯ ಮೆಲೆ ಅವಲಂಬಿತವಾಗಿದೆ. ಈ ಕಾರಣದಿಂದ ನಮ್ಮ ಶಿಕ್ಷಣ ಕ್ರಮ, ತಾಂತ್ರಿಕ ಪರಿಣತಿ ಎಲ್ಲವೂ ಅಂತಾರಾಷ್ಟ್ರೀಯ ಉದ್ಯಮ ವಲಯಕ್ಕೆ ಅನುಗುಣವಾಗಿದ್ದು ಇಡೀ ಸಮಸ್ಯೆಯ ತಾಯಿಬೇರು ನಮ್ಮ ದೇಶದ ಹೊರಗಿದೆ. ಈ ಕಾರಣದಿಂದಾಗಿ ನಾವು ಕೈಗಾರಿಕೀಕರಣವನ್ನು ದೇಶದ ಅಭಿವೃದ್ದಿಯ ದೃಷ್ಟಿಯಿಂದ ದುಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೇನೇ ವಿಶಾಲವೂ ವೈವಿಧ್ಯಮಯವೂ ಆದ ನಮ್ಮ ದೇಶದಲ್ಲಿ ದೂರದೃಷ್ಟಿಯಿಂದ ಕೂಡಿದ ಸಾಮುದಾಯಿಕ ಹಿತಕೇಂದ್ರಿತ ಚಿಂತನೆಗಳು ನೆಹರೂ ನಂತರದ ದಿನಗಳಲ್ಲಿ ಮರೆಯಾಗಿದೆ ಎಂದೇ ಹೇಳಬಹುದು. ಈ ಕಾರಣದಿಂದ ನಮ್ಮ ಕೈಗಾರಿಕಾ ಅಭಿವೃದ್ದಿಯ ಸಮಸ್ಯೆ ಇನ್ನಷ್ಟು ಗೋಜಲಾಗಿ ಹೋಗಿದೆ. ಒಟ್ಟಾರೆಯಾಗಿ ಕೈಗಾರಿಕಾ ಅಭಿವೃದ್ದಿ ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿರುವ ಅವಕಾಶ, ಅಪಾಯಗಳನ್ನು ಗಮನಿಸಿ ರೂಪುಗೊಳ್ಳಬೇಕಿದೆ.