ಕೈಗಾರಿಕೆಗಳು ಸಾಕಷ್ಟು ಅಭಿವೃದ್ದಿಯಾಗದಿದ್ದರೆ ವಾಣಿಜ್ಯ ವ್ಯವಸ್ಥೆ ಭರದಲ್ಲಿ ಬೆಳೆಯಲು ಸಾಧ್ಯವಿಲ್ಲ. ವಾಣಿಜ್ಯ ವ್ಯವಸ್ಥೆ ಬೆಳೆಯದಿದ್ದರೆ ಅಭಿವೃದ್ದಿಯು ಸಾಧ್ಯವಾಗು ವುದಿಲ್ಲ. ಪ್ರಾಚೀನ ಕಾಲದಲ್ಲಿದ್ದಂತೆ ಇದ್ದದನ್ನು ಬೇರೆಡೆಗೆ ಒಯ್ದು ಬರೀ ಸರಕು ವರ್ಗಾವಣೆಯಿಂದ ಇಂದು ಯಾವುದೇ ದೇಶ ಮುಂದುವರಿಯಲಾರದು. ಈ ಕಾರಣದಿಂದ ವಾಣಿಜ್ಯ ವ್ಯವಸ್ಥೆಯ ಬೆಳವಣಿಗೆಗೆ ಪೂರಕವಾಗಿ ಕೆಲವು ಚಟುವಟಿಕೆಗಳು ಸಂಘಟಿತ ರೀತಿಯಲ್ಲಿ ಬೆಳೆಯಲೇಬೇಕು. ಈ ಚಟುವಟಿಕೆಗಳನ್ನು ವಾಣಿಜ್ಯ ವ್ಯವಸ್ಥೆಯ ಅಭಿವೃದ್ದಿಯ ಆಧಾರ ಸ್ತಂಭಗಳು ಅಥವಾ ವೇಗವರ್ಧಕಗಳೆಂದೂ ಕರೆಯಬಹುದು.

ಹಣ ಮತ್ತು ಬ್ಯಾಕಿಂಗ್

ಹಣವೆನ್ನುವುದು ವಾಣಿಜ್ಯ ಚಟುವಟಿಕೆಗಳ ಜೀವ ದ್ರವ್ಯವಾಗಿದೆ. ಹಣವಿಲ್ಲದೆ ಹೋಗಿದ್ದರೆ ಇಂದಿನ ವಾಣಿಜ್ಯ ಚಟುವಟಿಕೆಗಳು ಈ ಮಟ್ಟದಲ್ಲಿ ನಡೆಯುವುದು ಸಾಧ್ಯವೇ ಇರಲಿಲ್ಲ.

ಇಂದು ನಾವು ಯಾವುದನ್ನು ‘ಹಣ’ ಎಂದು ತಿಳಿಯುತ್ತೇವೆಯೋ ಅದು ಹಲವು ಶತಮಾನಗಳ ಅವಧಿಯಲ್ಲಿ ವಿಕಸನ ಹೊಂದಿರುವ ರೂಪ ಎನ್ನುವುದನ್ನು ಮರೆಯಬಾರದು. ಹಣ ಎಂದರೆ ಏನು? ಇದರ ಪ್ರಾಮುಖ್ಯವೇನು ಎನ್ನುವ ಸಾಮಾನ್ಯ ವಿಷಯಗಳ ಬಗ್ಗೆ ತಿಳಿವಳಿಕೆಯಿಲ್ಲದೆ ವಾಣಿಜ್ಯ ಜಗತ್ತಿನ ಸಂಗತಿಗಳನ್ನು ತಿಳಿದುಕೊಳ್ಳುವುದು ಕ್ಲಿಷ್ಟಕರವಾಗಿ ರುವುದರಿಂದ ‘ಹಣ’ದ ಬಗ್ಗೆ ಇಲ್ಲಿ ವಿಷಯ ಪ್ರಸ್ತಾಪಿಸುವುದು ಅಗತ್ಯ.

ವಾಣಿಜ್ಯ ಚಟುವಟಿಕೆಯಲ್ಲಿ ಖರೀದಿ ಮತ್ತು ಮಾರಾಟ ಬಹುಮುಖ್ಯ ಚಟುವಟಿಕೆ. ಖರೀದಿಸುವವನು ವಸ್ತುವಿನ ನಿರ್ಣಯಿತ ಮಲ್ಯವನ್ನು ಪಾವತಿ ಮಾಡಿ, ಪಾವತಿಸಿದ ಮೊತ್ತಕ್ಕೆ ಸಮವಾದ ವಸ್ತು ಯಾ ಸೇವೆಯನ್ನು ವಿನಿಮಯ ರೂಪದಲ್ಲಿ ಪಡೆಯುತ್ತಾನೆ. ಇಲ್ಲಿ ವಸ್ತುವಿನ ನಿರ್ಣಯಿತ ಮಲ್ಯ ಹಣದ ರೂಪದಲ್ಲಿ ವ್ಯಕ್ತವಾಗುತ್ತದೆ ಮತ್ತು ವಸ್ತುವಿಗೆ ವಿನಿಮಯವಾಗಿ ಹಣವನ್ನು ನೀಡಲಾಗುತ್ತದೆ. ಹಣವನ್ನು ಸರಳವಾಗಿ ಒಂದು ವಸ್ತುವಿನ ಬೆಲೆ ನಿರ್ಣಯ ಮತ್ತು ವಿನಿಯಮದಲ್ಲಿ ಅಳತೆಗೋಲು ಮತ್ತು ಮಾಧ್ಯಮದ ಪಾತ್ರವಹಿಸುವ ವಸ್ತು ಎಂದು ವ್ಯಾಖ್ಯಾನಿಸಬಹುದು. ವಸ್ತುವಿನ ಹಣ (ಮಲ್ಯ) ನಿರ್ಣಯದಲ್ಲಿ ಅಳತೆಗೋಲು ಯಾ ಸಾಧನ ಮತ್ತು ವಿನಿಮಯದ ಸಮಯ ಸಂಪರ್ಕ ಮಾಧ್ಯಮವಾಗಿರುವುದರ ಜೊತೆಗೇನೆ ಇದು ಸಂಪತ್ತನ್ನು ರಕ್ಷಿಸಿಡಬಹುದಾದ ರೂಪವೂ ಹೌದು.

ನಾಗರಿಕತೆಯ ವಿವಿಧ ಹಂತಗಳಲ್ಲಿ ಹಲವಾರು ವಸ್ತುಗಳು ‘ಹಣ’ವಾಗಿ ಚಾಲ್ತಿ ಯಲ್ಲಿದ್ದವು. ಆಡು, ಕುರಿ, ದನ, ಚರ್ಮ; ಧಾನ್ಯವೇ ಮೊದಲಾದ ವಸ್ತುಗಳು, ಲೋಹದ ಆವಿಷ್ಕಾರ ಆಗುವ ಮೊದಲು ಹಣವಾಗಿ ಬಳಕೆಯಲ್ಲಿದ್ದವು. ತದನಂತರ ಲೋಹದ ತುಂಡುಗಳು, ನಾಣ್ಯಗಳು ಚಲಾವಣೆಗೆ ಬಂದವು. ಅಮೂಲ್ಯವಾದ ಲೋಹ ಚಲಾವಣೆಯಲ್ಲಿ ರುವುದರಿಂದ ಸವಕಳಿಗೆ ಬಲಿಯಾಗಿ ನಷ್ಟವಾಗುವ ಕಾರಣ ಪ್ರಾತಿನಿಧಿಕವಾಗಿ ಕಾಗದದ/ಪೇಪರ್ ಹಣ ಚಲಾವಣೆಗೆ ಬಂದಿತು. ಸಂಪತ್ತನ್ನು ಪ್ರತಿನಿಧಿಸುವ ಕಾಗದದ ಹಣ ಚಲಾವಣೆಗೆ ಬಂದ ನಂತರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಬೆಳವಣಿಗೆ ಆಯಿತು. ಹಣವನ್ನು ಚಲಾವಣೆ ಯಲ್ಲಿರುವಂತೆ ಮಾಡುವ ಮೂಲಕ ಸದಾ ಕ್ರಿಯಾಶೀಲವಾಗುವಂತೆ ಮಾಡಿರುವ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ನಾವು ಬ್ಯಾಂಕಿಂಗ್ ಎಂದು ಕರೆಯಬಹುದು.

ಮೊದಲ ಹಂತದಲ್ಲಿ ಬ್ಯಾಂಕುಗಳು ವ್ಯಾಪಾರಸ್ಥರ ಹಣವನ್ನು ಶೇಖರಿಸಿಡುವ ಮತ್ತು ಹಾಗೆ ಶೇಖರಿಸಲಾದ ಮೊತ್ತದಿಂದ ಅಗತ್ಯವಿರುವವರಿಗೆ ಸಾಲ ನೀಡುವ ಸಂಸ್ಥೆಗಳಾಗಿದ್ದುವು. ಆದರೆ ವಾಣಿಜ್ಯ ಚಟುವಟಿಕೆ ವಿಸ್ತೃತವಾದಂತೆ ಬ್ಯಾಂಕುಗಳ ಕಾರ್ಯ ಚಟುವಟಿಕೆಯೂ ವಿಸ್ತಾರಗೊಳ್ಳುತ್ತಾ ಬಂದಿತು. ಇಂದು ಬ್ಯಾಂಕುಗಳು ಹಣವನ್ನು ಠೇವಣಿಯಾಗಿ ಪಡೆ ಯುವುದು ಮಾತ್ರವಲ್ಲದೆ ಹಣವನ್ನು ಸೃಷ್ಟಿಸುವ ಕ್ರಿಯೆಯಲ್ಲೂ ತೊಡಗಿವೆ. ಹಣವನ್ನು ಸೃಷ್ಟಿಸುವುದೆಂದರೆ ‘ನಕಲಿ ಹಣವನ್ನು’ ಚಲಾವಣೆಗೆ ಬಿಡುವುದಲ್ಲ. ‘ಹಣ’ ಯಾ ‘ಸಾಲ’ದ ಮೂಲವಿದೆ. ಉದಾಹರಣೆಗೆ ಅ ಎಂಬ ವ್ಯಕ್ತಿ ಬ್ಯಾಂಕಿನಲ್ಲಿ ರೂ. ೧೦,೦೦೦ ಠೇವಣಿ ಯಿಡುತ್ತಾನೆ. ರೂ. ೧೦,೦೦೦ವನ್ನು ಅವನು ಒಂದೇ ಬಾರಿಗೆ ಹಿಂದಕ್ಕೆ ಪಡೆಯುವುದಿಲ್ಲ. ಅವನು ಒಂದು ತಿಂಗಳಲ್ಲಿ ಹಣವನ್ನು ಹಂತ-ಹಂತವಾಗಿ ಹಿಂದಕ್ಕೆ ಪಡೆದು ಖರ್ಚು ಮಾಡುತ್ತಾನೆಂದು ತಿಳಿಯೋಣ. ಬ್ಯಾಂಕ್ ಅನುಭವದಿಂದ ತಿಳಿದಂತೆ ಗ್ರಾಹಕ ಠೇವಣಿ ಇಟ್ಟ ಹಣವನ್ನು ಕಂತು ಕಂತುಗಳಾಗಿ ಹಿಂದಕ್ಕೆ ಪಡೆಯುತ್ತಾರೆ. ಈ ಉದಾಹರಣೆಯಲ್ಲಿ ಮೊದಲೇ ಹೇಳಿದಂತೆ ರೂ. ೧೦,೦೦೦ರ ಠೇವಣಿದಾರ ಮೊದಲ ವಾರ ೩೦೦೦, ಎರಡನೇ ವಾರ ೨೦೦೦, ಮೂರನೇ ವಾರ ೩೦೦೦೦ ಮತ್ತು ನಾಲ್ಕನೇ ವಾರ ೧೦೦೦ ವಾಪಾಸು ಪಡೆಯುತ್ತಾನೆ ಎಂದು ಊಹಿಸೋಣ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕು ಈ ಠೇವಣಿದಾರನ ಹಣವನ್ನು ಬ್ಯಾಂಕಿನಲ್ಲಿ ಜಡವಾಗಿಡುವ ಬದಲು ಬೇರೆಯವರಿಗೆ ಸಾಲವಾಗಿ ನೀಡುತ್ತದೆ. ಆಗ ಒಬ್ಬ ಠೇವಣಿದಾರನ ಹಣ ಎರಡು ರೂಪದಲ್ಲಿ ಅಂದರೆ ಠೇವಣಿಯಾಗಿ ಹಾಗೂ ಸಾಲವಾಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ಕಾರ್ಯನಿರ್ವಹಿಸುವ ಮೂಲಕ ಇಡೀ ಅರ್ಥ ವ್ಯವಸ್ಥೆಯಲ್ಲಿ ಜಡವಾಗಿರುವ ಉತ್ಪಾದನಾ ಪರಿಕರಗಳನ್ನು ಸಕ್ರಿಯವಾಗಿಸುತ್ತದೆ. ಇದರಿಂದಾಗಿ ಒಟ್ಟು ಉತ್ಪಾದನೆಯ ಪ್ರಮಾಣದಲ್ಲಿ ಏರಿಕೆಯಾಗಿ ಜನರ ಜೀವನಮಟ್ಟದಲ್ಲಿ ಸುಧಾರಣೆ ಉಂಟಾಗುತ್ತದೆ. ಒಂದು ಅರ್ಥ ವ್ಯವಸ್ಥೆಯಲ್ಲಿ ಅಥವಾ ವ್ಯಾಪಾರೀ ಜಗತ್ತಿನಲ್ಲಿ ಹಣದ ಪ್ರಸರಣ ವೇಗವಾದಷ್ಟು ಉತ್ಪಾದನೆ, ಲಾಭ ಮತ್ತು ಆರ್ಥಿಕ ಚಟುವಟಿಕೆಗಳು ವೃದ್ದಿಯಾಗುತ್ತವೆ. ಈಗಂತೂ ಬ್ಯಾಂಕ್‌ಗಳು ಮಹತ್ವದ ಕೊಡುಗೆಗಳನ್ನು ನೀಡುವ ಮೂಲಕ ವಾಣಿಜ್ಯ ಜಗತ್ತಿನ ಅತ್ಯಮೂಲ್ಯ ವಲಯವಾಗಿವೆ. ಗ್ರಾಹಕರ ಹಣದ ವಹಿವಾಟಿನ ಎಲ್ಲಾ ವಿಷಯಗಳಲ್ಲಿ ಅನುಕೂಲಕರ ಸೇವೆ ಒದಗಿಸುವ ಮೂಲಕ ವಾಣಿಜ್ಯ ಜಗತ್ತಿನ ಕಾರ್ಯ ನಿರ್ವಹಣೆಯ ಗುಣಮಟ್ಟದಲ್ಲಿ ಬ್ಯಾಂಕುಗಳು ಬಹಳ ಸುಧಾರಣೆ ತಂದಿವೆ.

ವ್ಯಾಪಾರಿಗಳಿಗೆ, ಉದ್ದಿಮೆಗಳಿಗೆ ಅಗತ್ಯವಿರುವ ಬಂಡವಾಳ ಸಂಗ್ರಹಿಸಲು, ಬ್ಯಾಂಕುಗಳು ಸಹಕರಿಸುತ್ತಿವೆ. ಉದ್ದಿಮೆಗಳಿಗೆ ಅಗತ್ಯವಿರುವ ಕಾರ್ಯ ನಿರ್ವಾಹಕ ಬಂಡವಾಳವನ್ನು ಸಾಲವಾಗಿ ನೀಡುವ ಮೂಲಕ ಉದ್ದಿಮೆಗಳಿಗೆ ಸಹಾಯ ಮಾಡುತ್ತಿವೆ. ಒಟ್ಟಿನಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಮತ್ತು ಬಂಡವಾಳ ಸಂಬಂಧಿ ವಿಷಯಗಳ ಕುರಿತಂತೆ ಬ್ಯಾಂಕುಗಳು ಉದ್ಯಮ ಜಗತ್ತಿನ ಆಧಾರ ಸ್ತಂಭಗಳಾಗಿವೆ ಎನ್ನಬಹುದು.

ಬ್ಯಾಂಕುಗಳು ಕೇವಲ ಉದ್ದಿಮೆಗಳಿಗೆ ಮಾತ್ರವಲ್ಲದೆ ಗ್ರಾಹಕರಿಗೂ ಸೇವೆ ಸಲ್ಲಿಸುತ್ತವೆ. ವಾಣಿಜ್ಯ ಚಟುವಟಿಕೆ ನಡೆಯಬೇಕಿದ್ದರೆ ಮಾರುವವರಿರುವಂತೆ ಕೊಳ್ಳುವವರೂ ಇರಬೇಕಾಗುತ್ತದೆ. ಕೊಳ್ಳುವವರಿಗೂ ಸಾಲ ರೂಪದ ನೆರವು, ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಅಗತ್ಯವಿದೆ. ಇಂತಹ ಅವಶ್ಯಕತೆಗಳನ್ನು ಆಧುನಿಕ ರೀತಿಯಲ್ಲಿ, ಉನ್ನತ ತಂತ್ರಜ್ಞಾನ ಬಳಸಿಕೊಂಡು, ಬ್ಯಾಂಕಿಂಗ್ ವಲಯ ಪೂರೈಸುತ್ತಲಿದೆ.

ಸರಕಾರದ ಹಣಕಾಸಿನ ವಹಿವಾಟುಗಳನ್ನು, ನಿರ್ವಹಿಸುವಲ್ಲಿ ಬ್ಯಾಂಕುಗಳು ಸಹಕರಿ ಸುತ್ತವೆ. ಪ್ರತಿ ದೇಶದಲ್ಲಿ ಬ್ಯಾಂಕ್ ಸಂಸ್ಥೆಗಳನ್ನು ಆ ದೇಶದ ಕೇಂದ್ರೀಯ ಬ್ಯಾಂಕಿನ ನೇತೃತ್ವದಲ್ಲಿ ಸಂಘಟಿಸಲಾಗುತ್ತದೆ. ಭಾರತದಲ್ಲಿ ಬ್ಯಾಕಿಂಗ್ ವಲಯ ಭಾರತೀಯ ರಿಸರ್ವ್ ಬ್ಯಾಂಕಿನ ನೇತೃತ್ವದಲ್ಲಿ, ಅದರ ಮಾರ್ಗದರ್ಶನ ಮತ್ತು ನಿಯಂತ್ರಣಕ್ಕೊಳಪಟ್ಟು ಕಾರ್ಯವೆಸಗುತ್ತಿದೆ.

ಆರಂಭದ ದಿನಗಳಲ್ಲಿ ಖಾಸಗೀ ಒಡೆತನದಲ್ಲಿದ್ದು, ವಾಣಿಜ್ಯ ಜಗತ್ತಿನ್ನವಲಂಬಿಸಿದ್ದ ಬ್ಯಾಂಕುಗಳು ನಂತರದ ದಿನಗಳಲ್ಲಿ ಸರಕಾರದ ಒಡೆತನಕ್ಕೆ ಒಳಪಟ್ಟವು. ಸರಕಾರದ ಸುಪರ್ದಿನಲ್ಲಿರುವ ಬ್ಯಾಂಕುಗಳ ಮೇಲೆ ಸಾಮಾಜಿಕ ಹೊಣೆಗಾರಿಕೆಯನ್ನು ವಹಿಸಿ ಕೊಡಲಾಗಿದೆ. ಇಂತಹ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ವ್ಯಾಪಕವಾದ ಟೀಕೆಗಳಿವೆ. ಆದರೆ ಸಾಮಾಜಿಕ ಅಭಿವೃದ್ದಿಗೆ ಬ್ಯಾಂಕುಗಳು ನೀಡಿರುವ ಕೊಡುಗೆಗಳು ಕಡಿಮೆಯೇನಲ್ಲ ಎನ್ನುವ ಮಾತನ್ನು ಟೀಕಾಕಾರರೂ ಒಪ್ಪಿಕೊಳ್ಳುತ್ತಾರೆ. ೮೦ರ ದಶಕದ ನಂತರ ಬ್ಯಾಂಕುಗಳನ್ನು ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆಗೆ ಅಣಿಗೊಳಿಸುವ ದಿಸೆಯಲ್ಲಿ ಚಿಂತನೆ ನಡೆಯುತ್ತಿದೆ. ಈ ಸಂಬಂಧದ ನಿರ್ಧಾರದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಗ್ರಾಹಕರ, ಉದ್ದಿಮೆದಾರರ ಮತ್ತು ಸಾಮಾಜಿಕ ಅವಶ್ಯಕತೆಗಳಿಗೆ ಬ್ಯಾಂಕುಗಳು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿವೆ. ಮಾತ್ರವಲ್ಲ ಆಧುನೀಕತೆಯ ಪ್ರಸರಣವನ್ನು ಪೋಷಿಸುತ್ತಿವೆ.

ವಿಮೆ

ವಾಣಿಜ್ಯ ಜಗತ್ತಿನಲ್ಲಿ ಉದ್ದಿಮೆದಾರರು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಗಳಲ್ಲಿ, ಕಂಟಕ, ಗಂಡಾಂತರ ಯಾ ಅನಿರೀಕ್ಷಿತ ಅಪಾಯ ಅಥವಾ ವ್ಯಾವಹಾರಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರಿ ನಷ್ಟಕ್ಕೆ ಎಡೆ ಮಾಡಬಹುದಾದ ಸಂಭವನೀಯತೆ ಕೂಡಾ ಒಂದು. ಭವಿಷ್ಯತ್ತಿನಲ್ಲಿ ನಡೆಯಬಹುದಾದ ಘಟನೆಯ ಆಧಾರದ ಮೇಲೆ ನಿರ್ಧರಿತವಾಗಿರುವ ಈ ಗಂಡಾಂತರದಿಂದ ಪಾರಾಗುವ ಬಗ್ಗೆ ಎಲ್ಲ ಉದ್ದಿಮೆದಾರರೂ ಆತಂಕದಲ್ಲಿರುತ್ತಾರೆ. ಇಂತಹ ಅನಿಶ್ಚಿತತೆ, ಅಪಾಯ ಯಾ ಗಂಡಾಂತರದಿಂದ ಪಾರಾಗುವ ಉಪಾಯವೇ ‘ವಿಮೆ’. ವಿಮೆ ಎಂದರೆ ‘ಗಂಡಾಂತರದಿಂದ ಪಾರಾಗಲು ರೂಪಿಸಲಾದ ಒಂದು ಸಾಂಸ್ಥಿಕ ಸಂಘಟನೆ’. ವ್ಯವಹಾರದಲ್ಲಿ ಭವಿಷ್ಯತ್ತಿನಲ್ಲಿ ಆಗಬಹುದಾದ ಸಂಭಾವ್ಯ ನಷ್ಟದ ಹೊರೆಯನ್ನು ಬಹು ಜನರಿಗೆ ವರ್ಗಾಯಿಸುವ ಮೂಲಕ ಗಂಡಾಂತರದ ಪರಿಣಾಮವನ್ನು ನಗಣ್ಯವಾಗಿಸುವ ಮಾರ್ಗೋಪಾಯ ವಿಮೆಯ ಪ್ರಮುಖ ಅಂಶ. ಉದ್ದಿಮೆದಾರ ವಿಮಾ ಕಂಪನಿಗೆ ಒಂದು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಪಾವತಿಸುತ್ತಾನೆ ಮತ್ತು ಇಂತಹ ಪಾವತಿಗೆ ಪ್ರತಿಯಾಗಿ ನಷ್ಟ ಪರಿಹಾರವನ್ನು ತುಂಬಿಕೊಡುವ ವಾಗ್ದಾನವನ್ನು ವಿಮಾ ಕಂಪನಿಯಿಂದ ಪಡೆಯುತ್ತಾನೆ.

ವಿಮೆಯಲ್ಲಿ ಎರಡು ರೀತಿಯ ವಿಮೆಗಳಿವೆ; ಒಂದು ಸಾಮಾನ್ಯ ವಿಮೆ, ಎರಡು ಜೀವ ವಿಮೆ. ಸಾಮಾನ್ಯ ವಿಮೆ ನಷ್ಟ ತುಂಬಿಕೊಡುವ ವಾಗ್ದಾನ. ಆದರೆ ಜೀವ ವಿಮೆಯಲ್ಲಿ ನಷ್ಟ ತುಂಬಿಕೊಡುವುದು ಅಸಾಧ್ಯವಾದ್ದರಿಂದ ಮೊದಲೇ ಒಪ್ಪಿಕೊಂಡ ಮೊತ್ತದ ಪರಿಹಾರ ನೀಡುವ ವಾಗ್ದಾನವಾಗಿದೆ.

ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ನಿರ್ಧರಿತ ಪ್ರೀಮಿಯಂ ಪಾವತಿಸಿದ ಮೇಲೆ ಭವಿಷ್ಯತ್ತಿನಲ್ಲಿ ಸಂಭವನೀಯ ಕಾರಣದಿಂದ (ಒಪ್ಪಿಕೊಂಡಿರುವಂತೆ) ನಷ್ಟ ಉಂಟಾದರೆ ಅಂತಹ ನಷ್ಟವನ್ನು ವಿಮಾ ಕಂಪನಿ ಭರಿಸಿ ಕೊಡಬೇಕಾಗುತ್ತದೆ. ವಾಸ್ತವಿಕವಾಗಿ ಒಪ್ಪಂದವಿರುವುದು ವಿಮೆ ಪಡೆದವನ ಮತ್ತು ವಿಮಾ ಕಂಪನಿಯ ನಡುವೆ ನಷ್ಟಕ್ಕೆ ಒಳಗಾಗುವ ವಸ್ತುಗಳಿಗೆ ವಿಮೆಯಲ್ಲಿ ಬದಲಿಗೆ ಅಂತಹ ವಸ್ತುಗಳು ನಾಶವಾದಾಗ ಯಾ ಹಾನಿ ಗೊಳಗಾದಾಗ ವಿಮೆ ಪಡೆದವನಿಗೆ ಆಗಬಹುದಾದ ನಿಜವಾದ ನಷ್ಟವನ್ನು ಮಾತ್ರ ವಿಮಾ ಕಂಪನಿ ತುಂಬಿ ಕೊಡುತ್ತದೆ.

ವಿeನ ಮತ್ತು ತಂತ್ರಜ್ಞಾನ ಅತ್ಯಂತ ಮುಂದುವರಿದ ಈ ದಿನಗಳಲ್ಲಿ ಹಲವಾರು ರೀತಿಯ ಅನಿಶ್ಚಿತತೆಗಳನ್ನು ಸೂಕ್ತವಾದ ಮಾಹಿತಿ ತಂತ್ರಜ್ಞಾನದ ನೆರೆವಿನಿಂದ ನಿವಾರಿಸ ಬಹುದಾಗಿದೆ. ಇದೆಲ್ಲದರ ಹೊರತಾಗಿಯೂ ‘ವಿಮಾಕ್ಷೇತ್ರ’ವೂ ವ್ಯಾವಹಾರಿಕವಾಗಿ ಲಾಭದಾಯಕ ಚಟುವಟಿಕೆಯಾಗಿದೆ. ಇತ್ತೀಚಿನ ವರ್ಷಗಳವರೆಗೆ ಭಾರತದಲ್ಲಿ ವಿಮಾಕ್ಷೇತ್ರವು ಸಂಪೂರ್ಣ ಸರಕಾರದ ಸಾಮ್ಯದಲ್ಲಿತ್ತು. ಜಾಗತೀಕರಣದ ಪ್ರಕ್ರಿಯೆ ಪ್ರಾರಂಭವಾದ ನಂತರ ನಮ್ಮದೇಶದಲ್ಲಿಯೂ ಖಾಸಗಿ ವಲಯದಲ್ಲಿ ಬಹಳಷ್ಟು ವಿಮಾ ಕಂಪನಿಗಳು ಬೇರೂರಿವೆ.

ಸಾರಿಗೆ ಮತ್ತು ಸಂಪರ್ಕ

ವಾಣಿಜ್ಯ ರಂಗದ ಬೆಳವಣಿಗೆಗೆ ಇರುವ ಹಲವು ಅಡ್ಡಿ ಆತಂಕಗಳಲ್ಲಿ ಉತ್ಪಾದನೆ ಮಾಡುವ ಮತ್ತು ಬೇಡಿಕೆ ಇರುವ ಪ್ರದೇಶಗಳ ನಡುವಿನ ದೂರ ಅಥವಾ ಅಂತರವೂ ಒಂದು. ಬೇಡಿಕೆ ಇರುವ ಎಲ್ಲಾ ಕಡೆಗಳಲ್ಲಿ ವಸ್ತುಗಳನ್ನು ಉತ್ಪಾದಿಸಲಿಕ್ಕೆ ಆಗುವುದಿಲ್ಲ. ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣಗಳಿಂದಾಗಿ ಉತ್ಪಾದನೆ ಕೆಲವೊಂದು ಕಡೆ ನಡೆಯುತ್ತದೆ. ಆದರೆ ಅಂತಹ ವಸ್ತುಗಳಿಗೆ ಬೇಡಿಕೆಯು ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲಾ ಕಾಲದಲ್ಲಿ ಇರುತ್ತದೆ. ಕೆಲವೊಂದು ಪ್ರದೇಶಗಳು ಕೆಲವು ನಿರ್ದಿಷ್ಟ ವಸ್ತುವಿನ ಉತ್ಪಾದನೆಗೆ ಪ್ರಸಿದ್ದಿ ಪಡೆದಿವೆ. ಉದಾಹರಣೆಗೆ ಬೊಂಬಾಯಿ, ಮದರಾಸು, ಫರಿದಾಬಾದ್, ಬೆಂಗಳೂರು ಮುಂತಾದ ಪ್ರದೇಶಗಳು ಅಧಿಕ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿವೆ. ಆದರೆ ಅಲ್ಲಿ ಉತ್ಪಾದಿಸಲಾಗುವ ವಸ್ತುಗಳನ್ನು ದೂರ ದೂರದ ಊರುಗಳಿಗೆ ಸಾಗಿಸಬೇಕಾದ ಅಗತ್ಯವಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟನ್‌ನಿಂದ ಹಡುಗುಗಳ ಮೂಲಕ ವಸ್ತುಗಳನ್ನು ತಂದು ಭಾರತದಲ್ಲಿ ಮಾರುತ್ತಿದ್ದರು. ಅಂತೆಯೇ ಭಾರತದಿಂದ ಕಚ್ಚಾ ಸಾಮಗ್ರಿಗಳನ್ನು ಹಡುಗುಗಳ ಮೂಲಕ ಇಂಗ್ಲೆಂಡಿನಲ್ಲಿದ್ದ ಕಾರ್ಖಾನೆಗಳಿಗೆ ತಲುಪಿಸಲಾಗುತ್ತಿತ್ತು. ಎಷ್ಟು ವೇಗವಾಗಿ ಮತ್ತು ಚುರುಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಸ್ತು/ಸರಕು ಮತ್ತು ಜನರು ಸಂಚರಿಸಬಲ್ಲರೋ ಅಷ್ಟೇ ವೇಗದಲ್ಲಿ ವಾಣಿಜ್ಯ ವ್ಯವಸ್ಥೆಯ ವಿಕಸನವೂ ಆಗುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿ ಭೂಸಾರಿಗೆ, ಜಲಸಾರಿಗೆ ಮತ್ತು ವಾಯುಮಾರ್ಗಗಳೆಂಬ ಮೂರು ವಿಧಗಳಿವೆ. ಭೂಸಾಗಣೆಯಲ್ಲಿ ರೈಲ್ವೆ ಮತ್ತು ರಸ್ತೆ ಸಂಚಾರವೆನ್ನುವ ಉಪ ಪ್ರಭೇದಗಳನ್ನು ಮಾಡಬಹುದು. ಭೂಮಿ ಮತ್ತು ಜಲ ಮಾರ್ಗಗಳಲ್ಲಿ ಹೆಚ್ಚಿನ ಸರಕುಗಳ ಸಾಗಾಟ ನಡೆಯುತ್ತದೆ. ವಾಯುಮಾರ್ಗದ ಮೂಲಕ ಜನ ಸಂಚಾರ ಹೆಚ್ಚಾಗಿ ನಡೆಯುತ್ತದೆ.

ವಾಣಿಜ್ಯ ವ್ಯವಸ್ಥೆಯ ಬೆಳವಣಿಗೆಯ ದ್ಯೋತಕವಾಗಿ ಸಾರಿಗೆಯನ್ನು ನೋಡಲಾಗುತ್ತಿದೆ. ಯಾವ ದೇಶದಲ್ಲಿ ಸಾರಿಗೆ ವ್ಯವಸ್ಥೆಯ ಬೆಳವಣಿಗೆ ಉತ್ತಮವಾಗಿದೆಯೋ ಆ ದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಉತ್ತಮ ರೀತಿಯಲ್ಲಿ ಅಭಿವೃದ್ದಿ ಹೊಂದಿದೆ ಎಂದು ಹೇಳ ಬಹುದು. ಉದಾಹರಣೆಗೆ ಅಮೇರಿಕಾ, ಫ್ರಾನ್ಸ್, ಜಪಾನ್ ಮುಂತಾದ ದೇಶಗಳಲ್ಲಿ ಅತ್ಯುತ್ತಮ ರಸ್ತೆಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಹೆಚ್ಚು ಸರಕು ನಿರ್ವಹಿಸಬಲ್ಲ ಉತ್ತಮ ಬಂದರುಗಳಿವೆ. ಸರಕು ಮತ್ತು ಜನರ ಸಾಗಾಟದ ಜೀವನಾಡಿಯಾಗಿ ಇವತ್ತು ಸಾರಿಗೆ ವ್ಯವಸ್ಥೆ ಕೆಲಸ ಮಾಡುತ್ತದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆಳ ಮತ್ತು ವಿಸ್ತಾರಗೊಳಿಸುವ ದಿಸೆಯಲ್ಲಿ ಸಂಚಾರ ಮಾರ್ಗಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಸಂಚಾರ ವ್ಯವಸ್ಥೆ ಸುಗಮವಾಗಿದ್ದಾಗ ಉತ್ಪಾದಿತ ವಸ್ತುಗಳ ಶೀಘ್ರವಾಗಿ ಬಳಕೆದಾರರಿಗೆ ಯಾ ಗ್ರಾಹಕರಿಗೆ ತಲುಪುವುದು ಸಾಧ್ಯ. ಸಂಚಾರ ವ್ಯವಸ್ಥೆ ಸಮಪರ್ಕವಾಗಿದ್ದರೆ ಪ್ರಪಂಚದ ಒಂದು ಮೂಲೆಯಲ್ಲಿ ಉತ್ಪಾದನೆ ಯಾಗುವ ವಸ್ತುಗಳು ಇನ್ನೊಂದು ಮೂಲೆಯಲ್ಲಿ ಮಾರಾಟವಾಗುತ್ತಿವೆ. ಸಂಚಾರ ವ್ಯವಸ್ಥೆ ಸರಿಯಾಗಿಲ್ಲದಿದ್ದ ಕಾಲದಲ್ಲಿ ಕೇವಲ ದೀರ್ಘಕಾಲ ಹಾಳಾಗದೆ ಉಳಿಯುವಂತಹ ಚಿನ್ನ, ಬೆಳ್ಳಿಯ ಆಭರಣ, ಸಾಂಬಾರ ಪದಾರ್ಥ ಜವುಳಿ, ಮುಂತಾದವುಗಳು ವಾಣಿಜ್ಯದ ಸರಕು ಗಳಾಗಿದ್ದರೆ ಸಂಚಾರ ವ್ಯವಸ್ಥೆ ಅತ್ಯುತ್ತಮವಾಗಿರುವ ಈ ಕಾಲದಲ್ಲಿ ಅಲ್ಪಾಯುಷ್ಯವಿರುವ ತರಕಾರಿ, ಹೂ, ಹಣ್ಣುಗಳು ಕೂಡಾ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ವರ್ಗಾವಣೆಗೊಂಡು ಮಾರಾಟವಾಗುತ್ತಿವೆ. ವಾಣಿಜ್ಯ ವ್ಯವಸ್ಥೆಯ ಬೆಳವಣಿಗೆಯಲ್ಲಿ ಸಂಚಾರ ಮಹತ್ತರ ಪಾತ್ರವಹಿಸುತ್ತಿದೆ.

ಸಂಪರ್ಕ ಮತ್ತು ಸಂವಹನ (Communication) ಆಧುನಿಕ ವಾಣಿಜ್ಯ ಜಗತ್ತಿನ ಬೆಳವಣಿಗೆಯಲ್ಲಿ ವೇಗ ವರ್ಧಕ ಎನ್ನಬಹುದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಾಹಿತಿ ಪ್ರವಹಿಸುವ  ಪ್ರಕ್ರಿಯೆಯನ್ನು ಸಂಪರ್ಕ ಮತ್ತು ಸಂವಹನ ಎಂದು ಕರೆಯಬಹುದು. ಇಂದಿನ ದಿನಗಳಲ್ಲಿ ನಾವು ಜಗತ್ತಿನ ಯಾವ ಭಾಗಗಳೊಂದಿಗೆ ಹೇಗೆ ಸಂಪರ್ಕ ಹೊಂದಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಮನೆಯೊಳಗಿದ್ದುಕೊಂಡೇ ದೂರದೂರಿನಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸುವುದು ಮಾತ್ರವಲ್ಲ, ನಾವು ಅದರಲ್ಲಿ ಭಾಗವಹಿಸಲೂ ಸಾಧ್ಯ. ಆಧುನಿಕ ವಿeನದ ಬೆಳವಣಿಗೆ ನಮಗೆ ತಂತ್ರಜ್ಞಾನದ ಸಹಾಯದಿಂದ ಅನೇಕ ವರಗಳನ್ನೇ ನೀಡಿದೆ. ಕಂಪ್ಯೂಟರ್, ದೂರವಾಣಿ, ಮೊಬೈಲ್, ಟೆಲಿಕಾನ್ ಫರೆನ್ಸ್, ಫ್ಯಾಕ್ಸ್, ವಿಡಿಯೋ ಕಾನ್‌ಫರೆನ್ಸ್ ಇತ್ಯಾದಿ ವಿಧಾನಗಳ ಮೂಲಕ ಉತ್ಪಾದಕನಿಗೆ ಹಾಗೂ ಬಳಕೆದಾರನಿಗೆ ಅಗತ್ಯ ಮಾಹಿತಿ ಪಡೆಯುವುದು ಸುಲಭ ಸಾಧ್ಯವಾಗಿದೆ.

ಉತ್ಪಾದನೆ ಮಾಡಲಾದ ವಸ್ತುಗಳಿಗೆ ಅಧಿಕ ಬೇಡಿಕೆ ಎಲ್ಲಿದೆ, ಯಾವ ಸಮಯ ದಲ್ಲಿರುತ್ತದೆ ಇತ್ಯಾದಿ ಮಾಹಿತಿಯನ್ನು ಪಡೆಯುವುದು ಚಿಟಿಕೆ ಹೊಡೆದಷ್ಟೇ ಸುಲಭ. ಇದಕ್ಕೆ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಕ್ರಾಂತಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಿರುವ ವರ್ತಮಾನ ಜಗತ್ತಿನಲ್ಲಿ ಬೃಹತ್ ಮಾಹಿತಿ ಜಲ ಉಪಗ್ರಹದ ಮೂಲಕ ಕಾರ್ಯವೆಸಗುತ್ತಿದೆ. ಇದರ ಮೂಲಕ ಉತ್ಪಾದಕ ತನಗೆ ಬೇಕಾಗುವ ಉತ್ಪಾದನಾ ಪರಿಕರಗಳ ಬಗ್ಗೆ, ಉತ್ಪಾದಿತ ವಸ್ತುಗಳ ಮಾರಾಟದ ಬಗ್ಗೆ, ಗ್ರಾಹಕ ಸೇವೆಯ ಬಗ್ಗೆ, ಸಾಮಾಜಿಕ ಜವಾಬ್ದಾರಿಯ ಬಗ್ಗೆ, ಕಾನೂನಿನ ಬಗ್ಗೆ, ಈ ರೀತಿಯಲ್ಲಿ ಯಾವುದೇ ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ಮಾಹಿತಿಯ ಮೂಲಕ ಲಭ್ಯವಾಗುವ eನವನ್ನು ಉಪಯೋಗಿಸುವ ಮೂಲಕ ಉತ್ತಮ ಉತ್ಪನ್ನ ಹಾಗೂ ಉತ್ತಮ ಸೇವೆಯನ್ನೊದಗಿಸಬಹುದಾಗಿದೆ.

ಗ್ರಾಹಕರಿಗೆ ತಮ್ಮ ಸಂಪನ್ಮೂಲಕ್ಕೆ ಅನುಗುಣವಾಗಿ ಎಲ್ಲಿ ಯಾವ ವಸ್ತು ಯಾವ ಬೆಲೆಗೆ ದೊರೆಯುತ್ತದೆ. ಒಂದು ಉತ್ಪದನಾ ವಲಯದಲ್ಲಿ ಎಷ್ಟು ಜನ ಉತ್ಪಾದಕರಿದ್ದಾರೆ, ಪ್ರತಿಯೊಬ್ಬ ಉತ್ಪಾದಕ ತಯಾರಿಸುವ ವಸ್ತುವಿನ ಬೆಲೆ, ಅದರೊಂದಿಗೆ ಲಭ್ಯವಾಗುವ ಸೇವೆ, ಉತ್ಪಾದಕರ ಗ್ರಾಹಕ ಸೇವಾ ವಿಭಾಗದ ಸಾಧನೆ, ಇತ್ಯಾದಿ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಹಾಗಾಗಿ ಹಿಂದಿನ ದಿನಗಳಿಗೆ ಹೋಲಿಸಿದರೆ ಗ್ರಾಹಕನಿಗೆ ಅಧಿಕ ಸ್ವಾತಂತ್ರ್ಯ ಮತ್ತು ಅಧಿಕ ಆಯ್ಕೆಗಳಿವೆ.

ಸಂಪರ್ಕ ಮತ್ತು ಸಂವಹನ ಬರೀ ಉತ್ಪಾದನಾ ವಲಯ ಯಾ ವಾಣಿಜ್ಯ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ. ಇದರಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ ಪ್ರಯೋಜನವಿದೆ. ಉದಾಹರಣೆಗೆ ಸಮಾಜದ ಏಳಿಗೆ ಮತ್ತು ಆರ್ಥಿಕ ಅಭಿವೃದ್ದಿಯ ಬಗ್ಗೆ ನೀತಿ ರೂಪಿಸಲು ಸರಕಾರಕ್ಕೆ, ಸಂಬೋಧನೆ ಮತ್ತು ಅಧ್ಯಯನ ನಡೆಸಲು ಶಿಕ್ಷಣ ಸಂಸ್ಥೆಗಳಿಗೆ, ಸಂಪರ್ಕ ಮತ್ತು ಸಂವಹನ ಕ್ಷೇತ್ರದ ಕೊಡುಗೆ ಇದೆ. ಸಂಪರ್ಕ ಮತ್ತು ಸಂವಹನದ ಬಗೆಗಿನ ಪ್ರಾಥಮಿಕ ತಿಳುವಳಿಕೆ ವಾಣಿಜ್ಯ ಜಗತ್ತಿಗೆ ಪದಾರ್ಪಣೆ ಮಾಡುವ ಪ್ರತಿಯೊಬ್ಬರಿಗೂ ಇರಲೇಬೇಕು.

ಜಾಹೀರಾತು

ಇಂದಿನ ಯುಗವನ್ನು ಜಾಹೀರಾತುಗಳ ಯುಗವೆಂದರೂ ತಪ್ಪಾಗಲಿಕ್ಕಿಲ್ಲ. ಸಾವಿರಾರು ಜನ ಉತ್ಪಾದಕರು, ಅಸಂಖ್ಯ ಉತ್ಪನ್ನಗಳು, ವಿಶ್ವದಾದ್ಯಂತ ಚದುರಿ ಹೋಗಿರುವ ಕೋಟ್ಯಾಂತರ ಗ್ರಾಹಕರು ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ, ವಸ್ತು ಯಾ ಉತ್ಪನ್ನದ ಬಗ್ಗೆ ಶಿಕ್ಷಣ ನೀಡುವ ಮತ್ತು ಒಂದು ನಿರ್ದಿಷ್ಟ ಉತ್ಪನ್ನವನ್ನು ಖರೀದಿಸಲು ಪ್ರೇರೇಪಣೆ ನೀಡುವಂತಹ ಜಾಹೀರಾತುಗಳು ಅನಿವಾರ್ಯವಾಗಿವೆ. ಇಂದಿನ ಕರಾ ಮತ್ತು ಜಾಹೀರಾತಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಅಧಿಕವಿದೆ ಎನ್ನುವುದಕ್ಕೆ ಎಲ್ಲ ಮಾಧ್ಯಮಗಳು ಜಾಹೀರಾತಿನಿಂದ ಬರುವ ಆದಾಯದ ಮೇಲೆ ಮಾಧ್ಯಮಗಳು ಬಹುಪಾಲು ಅವಲಂಬಿತವಾಗಿರುವುದೇ ಸಾಕ್ಷಿಯಾಗಿದೆ.

ಯಾವುದೇ ಒಂದು ಉತ್ಪನ್ನ (ಸೇವೆಯ ವಸ್ತು)ದ ಬಗ್ಗೆ ಮಾಹಿತಿ, ಶಿಕ್ಷಣ, ಖರೀದಿಗೆ ಪ್ರಚೋದನೆ ನೀಡುವ ರೀತಿಯ ಲಿಖಿತ ಯಾ ಅಲಿಖಿತ ರೂಪದಲ್ಲಿ ನೀಡುವುದನ್ನು ಜಾಹೀರಾತು ಎನ್ನಬಹುದು. ಜಾಹೀರಾತನ್ನು ಲಿಖಿತವಾಗಿ ಯಾ ಅಲಿಖಿತವಾಗಿ ನೀಡ ಬಹುದು. ಮುದ್ರಣ ಮಾಧ್ಯಮದ ಮೂಲಕ ಲಿಖಿತ ರೂಪದಲ್ಲಿ ಜಾಹೀರಾತು ಮೂಡಿ ಬರುತ್ತದೆ. ಆಕಾಶವಾಣಿಯಂತಹ ಶ್ರಾವ್ಯ ಮಾಧ್ಯಮದಲ್ಲಿ ಇದು ಅಲಿಖಿತ ರೂಪದಲ್ಲಿ ರುತ್ತದೆ. ಆದರೆ ದೂರದರ್ಶನದಂತಹ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದಲ್ಲಿ ಲಿಖಿತ ಮತ್ತು ಅಲಿಖಿತ ರೂಪದಲ್ಲಿ ಜಾಹೀರಾತುಗಳಿರುತ್ತವೆ.

ಜಾಹೀರಾತು ನೀಡುವಾಗ ಉತ್ಪನ್ನ ಮತ್ತು ಜಾಹೀರಾತಿನ ಪರಿಣಾಮ ಅಂದರೆ ಗ್ರಾಹಕರ ಮೇಲೆ ಜಾಹೀರಾತು ಉಂಟು ಮಾಡಬಹುದಾದ ಪರಿಣಾಮ ಜಾಹೀರಾತಿನ ಮಾಧ್ಯಮ, ಜಾಹೀರಾತಿನಲ್ಲಿ ಉಪಯೋಗಿಸಲಾದ ಪದ ಪ್ರಯೋಗ, ಜಾಹೀರಾತನ್ನು ಅಣಿಗೊಳಿಸಿದ ರೀತಿ ಇವುಗಳನ್ನು ಅವಲಂಬಿಸಿರುತ್ತದೆ. ಜಾಹೀರಾತಿಲ್ಲದೆ ಇವತ್ತು ಏನನ್ನೂ ಮಾರಾಟ ಮಾಡಲಾಗದ ವಾತಾವರಣವಿದೆ. ಒಂದು ವಸ್ತುವಿನ ಬೆಲೆಯಲ್ಲಿ ಜಾಹೀರಾತಿಗೆ ತಗಲುವ ವೆಚ್ಚದ ಪ್ರಮಾಣವೂ ಗಣನೀಯವಾಗಿದೆ.

ಜಾಹೀರಾತಿಗೆ ಸಂಬಂಧಿಸಿದ ಚಟುವಟಿಕೆಗಳೆಲ್ಲವೂ ಒಟ್ಟಾಗಿ ಸೇರಿದರೆ ಅದೇ ವಾಣಿಜ್ಯ ಜಗತ್ತಿನ ಪ್ರಮುಖ ಅಂಗವಾಗುತ್ತದೆ. ಜಾಹೀರಾತು ಜಗತ್ತು ಇಂದು ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ನೂರಾರು ಕೋಟಿ ಬಂಡವಾಳ ಹೂಡಲ್ಪಟ್ಟಿರುವ ವ್ಯಾವಹಾರಿಕ ವಲಯವಾಗಿದೆ. ಅಧ್ಯಯನ, ಸಂಶೋಧನೆ ಹಾಗೂ ವ್ಯವಹಾರದ ದೃಷ್ಟಿಯಿಂದ ಜಾಹಿರಾತು ಪ್ರಪಂಚ ಪ್ರಾಮುಖ್ಯತೆಯನ್ನು ಹೊಂದಿದೆ.