ಪ್ರಶ್ನೆಪತ್ರಿಕೆಯಮಾದರಿಗಳು

ಎರಡನೆಯ ಬಿ.ಕಾಂ.ಪರೀಕ್ಷೆ ನವೆಂಬರ್/ಡಿಸೆಂಬರ್ ೧೯೮೭
ಭಾಗ-೧ – ಪ್ರಥಮ ಭಾಷೆ-ಕನ್ನಡ
ಪತ್ರಿಕೆ-ಕನ್ನಡ ಪಠ್ಯಪುಸ್ತಕಗಳು ಮತ್ತು ವ್ಯಾವಹಾರಿಕ ಕನ್ನಡ

೧. ಈ ಗದ್ಯಭಾಗದ ಸಂಕ್ಷೇಪ ಲೇಖನವನ್ನು ಸಿದ್ಧಪಡಿಸಿ: / ೧೦

ಸಾರ್ವಜನಿಕ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಿಕೊಂಡು ಬರುವಂಥ ನಾಗರೀಕ ಪ್ರಜ್ಞೆ ನಮಗೆ ಇನ್ನೂ ಏಕೆ ಬಂದಿಲ್ಲ? ನಮ್ಮ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಕೊಳೆಗಳು ತುಂಬಿದಂತೆಯೇ ಇಲ್ಲೂ ಅದನ್ನೇ ಬಿಂಬಿಸಿದ್ದೇವೆ. ಇದನ್ನು ಸರಿಪಡಿಸಲು ಸಾಧ್ಯವಿಲ್ಲವೆ? ನಮ್ಮ ಪರಿಸರವನ್ನು ನಿರ್ಮಲವಾಗಿ ಇಡಲು ನಮ್ಮ ಜನರಿಗೆ ತರಬೇತಿ ಅರಿವು ಹೊಣೆಗಾರಿಕೆಗಳನ್ನು ಕಲಿಸಬೇಕಲ್ಲ? ಯಾರು ಕಲಿಸಬೇಕು?

ನಾಯಕರೆನಿಸಿಕೊಂಡವರು ಆಗಾಗ ವಿದೇಶಗಳಿಗೆ ಹೋಗಿ ಬಂದು ಅಲ್ಲಿ ರಸ್ತೆಗಳನ್ನು ಅಷ್ಟು ಚೊಕ್ಕಟವಾಗಿಡುತ್ತಾರೆಂದು ಇಲ್ಲಿಗೆ ಬಂದು ಭಾಷಣ ಬಿಗಿಯುತ್ತಾರೆ. ಇಲ್ಲಿಯೂ ಅದನ್ನು ಅನುಷ್ಟಾನಕ್ಕೆ ಏಕೆ ತರುವುದಿಲ್ಲ? ವಿದೇಶಿಯರ ಒಳ್ಳೆಯ ಗುಣಗಳನ್ನು ನಾವು ಏಕೆ ಅನುಸರಿಸುತ್ತಿಲ್ಲ?

ವಿದೇಶಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿಯೂ ವ್ಯವಸ್ಥಿತವಾಗಿ ಕಸದ ತೊಟ್ಟಿಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ಹಲವಾರು ಉದ್ಯಮದವರು, ಕಾರ್ಖಾನೆಗಳ ಮಾಲೀಕರು ಕೊಟ್ಟಿರುತ್ತಾರೆ. ಅವುಗಳ ಮೇಲೆ ಸುಂದರವಾಗಿ, ಆಕರ್ಷಕವಾಗಿ ಸ್ವಚ್ಛತೆಯ ಕುರಿತು ಒಂದು ಸಾಲು ಜಾಹೀರಾತು ಕೂಡ ಇರುತ್ತದೆ. ಜನರು ಕಸದ ಚೂರುಗಳನ್ನು ಅಲ್ಲಿಗೇ ತೆಗೆದುಕೊಂಡು ಹೋಗಿ ಹಾಕುತ್ತಾರೆ. ಚಿಕ್ಕಂದಿನಿಂದಲೂ ಮಕ್ಕಳಿಗೆ ಆ ರೀತಿ ತರಬೇತಿ ಕೊಡುತ್ತಾರೆ. ಇಷ್ಟು ಸುಲಭದ ಕೆಲಸ ಮಾಡಲು ನಮಗೆ ಆಲಸ್ಯ. ರಸ್ತೆಯ ಮೇಲೆ ಕಸ ಹಾಕಿದರೆ ದಂಡ ಹಾಕುತ್ತಾರೆ. ರಸ್ತೆಯಲ್ಲಿ ಯಾರೂ ಉಗುಳುವುದಿಲ್ಲ. ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುವುದಿಲ್ಲ. ಭಿತ್ತಿಪತ್ರಗಳನ್ನೂ ಎಲ್ಲೆಂದರಲ್ಲಿ ಅಂಟಿಸುವುದಿಲ್ಲ. ಈ ರೀತಿ ವ್ಯವಸ್ಥೇ ಅಚ್ಚುಕಟ್ಟುತನ ಮಾಡಲು ಭಾರಿ ಖರ್ಚು ಬರುವುದಿಲ್ಲ. ಆದರೆ, ಅದರ ಹಿಂದೆ ಇರುವ ಶ್ರದ್ಧೆ, ಶಿಸ್ತುಗಳು ಅನನ್ಯವಾದವುಗಳು. ಜನರ ಮನೋಭಾವವನ್ನೇ ತಿದ್ದಿಸರಿಪಡಿಸುವ ಈ ರೀತಿಯ ತರಬೇತಿ ಮಾಡಲೆಂದೇ ನಮ್ಮ ಸರ್ಕಾರವೂ ಒಂದು ವಿಭಾಗ ತೆರೆಯಬೇಕು. ಜನರಿಗೆ ಶುಚಿಪ್ರಜ್ಞೆ ಇಲ್ಲದ ಕಾಣ ಕಸದ ಬುಟ್ಟಿಗಳಿಗಾಗಿ ಅದಕ್ಕೆ ಕಸಹಾಕುವ ತರಬೇತಿಗಾಗಿ ಸರ್ಕಾರ ಒಂದು ವಿಭಾಗ ತೆರೆಯಬೇಕಾಗುತ್ತದೆ. ಇದು ನಮ್ಮ ಹಣೆಬರಹ!

೨. ಆದೇಶ ಪತ್ರವೆಂದರೇನು? ಬೆಂಗಳೂರಿನ ವ್ಯಾಪಾರಿಯೊಬ್ಬರು ಚಿಕ್ಕಮಗಳೂರಿನ ಕಾಫಿ ಉತ್ಪಾದಕರೊಬ್ಬರಿಗೆ ಬರೆದ ಆದೇಶ ಪತ್ರವನ್ನೂ, ಅವರು ಕಾಫಿ ಬೀಜದ ಮಾರಾಟದ ಹಕ್ಕನ್ನು ಕಾಫಿ ಮಂಡಳಿಗೆ ನೀಡಿರುವುದಾಗಿ ತಿಳಿಸಿದ ಬರೆದ ಆದೇಶ ತಿರಸ್ಕಾರ ಪತ್ರವನ್ನೂ ಬರೆಯಿರಿ / ೧೫

ಅಥವಾ

ಪರಿಪತ್ರ ಎಂದರೇನು? ಇದನ್ನು ಯಾವ ಸಂದರ್ಭಗಳಲ್ಲಿ ಹೊರಡಿಲಾಗುತ್ತದೆ? ಒಂದು ಮಾದರಿ ಪರಿಪತ್ರವನ್ನು ಬರೆಯಿರಿ.

೩. ಪ್ರತಿಭಟನಾ ಪತ್ರ ಎಂದರೇನು? ಈ ಬಗೆಯ ಪತ್ರವನ್ನು ಬರೆಯಬೇಕಾದ ಸಂದರ್ಭಗಳು ಯಾವುವು? ಒಂದು ಮಾದರಿ ಪ್ರತಿಭಟನಾ ಪತ್ರ ಬರೆಯಿರಿ / ೧೫

ಅಥವಾ

ಕೂಡು ಬಂಡವಾಳ ಸಂಸ್ಥೆಯ ಕಾರ್ಯದರ್ಶಿಯ ಕಾರ್ಯವ್ಯಾಪ್ತಿಯನ್ನು ಸಮಗ್ರವಾಗಿ ವಿವರಿಸಿ.

೪. ಇವುಗಳಲ್ಲಿ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ / ೧೦
(ಅ) ವರದಿಗಳು
(ಆ) ವ್ಯವಹಾರೋಜ್ಜೀವನ ಪತ್ರ
(ಇ) ಅಭ್ಯರ್ಥನ ಪತ್ರ
(ಈ) ಹುದ್ದೆಗಳ ನೇಮಕಾತಿ ಪತ್ರ

 

ಏಪ್ರಿಲ್/ ಮೇ೧೯೮೮ರಪ್ರಶ್ನೆಪತ್ರಿಕೆ

೧. ಈ ಭಾಗದ ಸಂಕ್ಷೇಪ ಲೇಖನವನ್ನು ಸಿದ್ಧಪಡಿಸಿ:

ಆಧುನಿಕ ಯುಗದಲ್ಲಿ ಮಾನವನ ಐಹಿಕ ಅಭ್ಯುದಯಕ್ಕೆ ಸಾಧನವಾಗಿರುವ ವ್ಯವಸ್ಥೆಗಳಲ್ಲಿ ಸಹಕಾರ ವ್ಯವಸ್ಥೆ ಬಹಳ ಮುಖ್ಯವಾದದ್ದು. ಹಲವಾರು ಕೂಡಿ ಒಬ್ಬರೊಡನೊಬ್ಬರು ಸಹಕರಿಸಿ ನಡೆಯುವುದೇ ಸಹಕಾರ ವ್ಯವಸ್ಥೆಯ ಪ್ರಧಾನ ಲಕ್ಷಣ. ಪರಸ್ಪರ ಸಹಾಯದ ಮೂಲಕ ಸ್ವಸಹಾಯ-ಎಂಬುದೇ ಇದರ ಮೂಲ ಸೂತ್ರ. ಸಮಾಜದಲ್ಲಿ ಪ್ರತಿಯೊಬ್ಬರೂ ಇತರರೊಂದಿಗೆ ಸಹಕರಿಸಿ ನಡೆಯಬೇಕಾದದ್ದು ಅನಿವಾರ್ಯ. ಸ್ಥೂಲವಾಗಿ ನೋಡುವುದಾದರೆ, ಮಾನವನ ನಾಗರೀಕತೆ ಎಷ್ಟು ಪ್ರಾಚೀನವೋ ಸಹಕಾರವೂ ಅಷ್ಟೇ ಪ್ರಾಚೀನ.

ಹೀಗೆ ಅತ್ಯಂತ ಪುರಾತನವಾದ ಈ ಸಹಕಾರ ತತ್ವವನ್ನು ವ್ಯವಹಾರ ಪ್ರಪಂಚಕ್ಕೆ ಅನ್ವಯಿಸುವ ಪದ್ಧತಿ ಆರಂಭವಾದದ್ದು ಇತ್ತೀಚೆಗೆ. ಲಾಭದಷ್ಟಿಯಿಂದಲೇ ನಡೆಯಿಸಲ್ಪಡುವ ಬಂಡವಾಳ ವ್ಯವಸ್ಥೇಗೂ, ಸಮಾಜದ ಉನ್ನತಿಯನ್ನೇ ಪ್ರಧಾನವಾಗಿ ಪರಿಗಣಿಸಿ ವ್ಯಕ್ತಿಗೆ ಪ್ರಾಧಾನ್ಯ ನೀಡುವ ಸಮಾಜವಾದಕ್ಕೂ ನಡುವಣ ಸೇತುವೆಯೇ ಸಹಕಾರ ಎಂಬುದು ಈ ಚಳುವಳಿಯಲ್ಲಿ ನಂಬಿಕೆಯನ್ನಿಟ್ಟಿರುವವರ ಮುಖ್ಯವಾದ ವಾದ. ಬಂಡವಾಳ ವ್ಯವಸ್ಥೆಯ ಲಾಭದ ಚೌಕಟ್ಟಿನಲ್ಲಿ ಸಮಾಜವಾದೀ ವ್ಯವಸ್ಥೆಯ ಸಮಷ್ಟಿ ದೃಷ್ಟಿಯನ್ನು ರೂಢೀಸುವುದೇ ಸಹಕಾರ ವ್ಯವಸ್ಥೆಯ ಪ್ರಧಾನ ಉದ್ದೇಶ.

ವೈಯಕ್ತಿಕವಾಗಿ ಹೆಚ್ಚಿನ ಅಧಿಕ ಬಲವನ್ನು ಹೊಂದಿಲ್ಲದ ಸಾಮಾನ್ಯ ಜನರು ತಂತಮ್ಮ ಶಕ್ತಿಗಳನ್ನೆಲ್ಲಾ ಕ್ರೋಡೀಕರಿಸಿ ವ್ಯವಹಾರ ನಡೆಸಿ, ತನ್ಮೂಲಕ ಪ್ರಾಪ್ತವಾಗುವ ಫಲವನ್ನು ತಂತಮ್ಮಲ್ಲೇ ಹಂಚಿಕೊಳ್ಳುವ ಸಲುವಾಗಿ ಸಹಕಾರ ಚಳುವಳಿ ಆರಂಭವಾಯಿತು. ವ್ಯವಹಾರ ಪ್ರಪಂಚಕ್ಕೆ ಅಳವಡಿಸಿದ ಪ್ರಜಾಪ್ರಭುತ್ವವೇ ಸಹಕಾರ. ಶ್ರೀಸಾಮಾನ್ಯನ ಉದ್ಧಾರಕ್ಕೆ ಸಹಕಾರವೇ ಸರಳೋಪಾಯ-ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬತ್ತ-ಎಂಬ ಗಾದೆಗೆ ಅನುಸಾರವಾಗಿ ಹಲವು ದುರ್ಬಲರು ಕೂಡಿ ಮಾಡಿಕೊಂಡ ಸಂಘವೇ ಸಹಕಾರ ಸಂಘ.

೨. ಪರಿಪತ್ರಗಳೆಂದರೇನು? ಪರಿಪತ್ರಗಳನ್ನು ಯಾವ ಸಂದರ್ಭಗಳಲ್ಲಿ ಹೊರಡಿಸುತ್ತಾರೆ? ಒಂದು ಮಾದರಿ ಪತ್ರವನ್ನು ರಚಿಸಿ  / ೧೫

ಅಥವಾ

ಗ್ರಾಹಕರೊಡನೆ ನಡೆಸುವ ಬ್ಯಾಂಕ್ ವ್ಯವಹಾರದ ವಿವಿಧ ರೀತಿಗಳನ್ನು ತಿಳಿಸಿ. ಅವುಗಳಲ್ಲಿ ಮೂರನ್ನು ವಿವರಿಸಿ. ಒಂದಕ್ಕೆ ಮಾದರಿಯನ್ನು ರಚಿಸಿ.

೩. ಆದೇಶ ಪತ್ರವೆಂದರೇನು? ಉತ್ತಮ ಪತ್ರದ ಲಕ್ಷಣಗಳನ್ನು ತಿಳಿಸಿ ಒಂದು ಮಾದರಿಯನ್ನು ತಿಳಿಸಿ    / ೧೫

ಅಥವಾ

ಜಾಹೀರಾತು ಎಂದರೇನು? ಅದರ ಪ್ರಮುಖ ಅಂಶಗಳನ್ನು ತಿಳಿಸಿ. ‘ಶಾಂತಿ ರೇಷ್ಮೆ ಭಂಡಾರ’ ದಲ್ಲಿ ಖಾಲಿ ಇರುವ ನಗದು ಗುಮಾಸ್ತೆ ಹುದ್ದೆಗೆ ಅರ್ಜಿಗಳನ್ನು ಕೋರಿ ‘ಶುಕವಾಣಿ’ ಪತ್ರಿಕೆಗೆ ಜಾಹಿರಾತು ಸಿದ್ದಪಡಿಸಿ

೪. ಇವುಗಳಲ್ಲಿ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ / ೧೦

ಅ) ಪ್ರತಿಭಟನಾ ಪತ್ರ
ಆ) ಸರ್ಕಾರಿ ಸುತ್ತೋಲೆಗಳು
ಇ) ಚೆಕ್ಕುಗಳು
ಈ) ಪರಿಚಯ ಪತ್ರ

 

ಏಪ್ರಿಲ್/ಮೇ೧೯೮೯ಪ್ರಶ್ನೆಪತ್ರಿಕೆ

೧. ಈ ಗದ್ಯ ಭಾಗದ ಸಂಕ್ಷೇಪ ಲೇಖನವನ್ನು ಸಿದ್ಧಪಡಿಸಿ / ೧೦

ಅಡಿಗೆ ಎಣ್ಣೆ ಸಂಬಂಧಿಸಿದಂತೆ ನಮ್ಮ ಸರ್ಕಾರದ ನೀತಿ ಭಿನ್ನವಾದದ್ದು. ಈಗ ಗೋಧಿಯ ಆಮದು ಬಹುತೇಕ ನಿಂತೇ ಹೋಗಿದ್ದರೂ ಖಾದ್ಯ ತೈಲದ ಆಮದು ನಿಲ್ಲಲಿಲ್ಲ. ವರ್ಷಕ್ಕೆ ಸುಮಾರು ರೂ.೯೫೦ಕೋಟಿಯಷ್ಟು ಹಣವನ್ನು ವಿದೇಶಿ ವಿನಿಮಯ ರೂಪದಲ್ಲಿ ನಾವು ತೆರುತ್ತಾ ಬರುತ್ತಿದ್ದೇವೆ. ನಮ್ಮ ವಿದೇಶಿ ವಿನಿಯಮ ಪರಿಸ್ಥಿತಿಗೆ ಇದರಿಂದ ತೀವ್ರ ಆಂತಕ ಉಂಟಾಗಿದೆ.

ಖಾದ್ಯ ತೈಲಕ್ಕೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ಬೆಲೆಗಳು ಭಾರತದ ಬೆಲೆಗಳಿಗಿಂತ ಕಡಿಮೆ ಮಟ್ಟದಲ್ಲಿವೆ. ಭಾರತದಲ್ಲಿ ಉತ್ಪಾದನೆಯ ವೆಚ್ಚ ಅಧಿಕ. ಆದರೆ ಬಳಕೆದಾರನ ಹಿತವನ್ನು ಗಮನದಲ್ಲಿಟ್ಟು ಎಣ್ಣೆಯನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿದೆ. ಇದರಿಂದ ಸರ್ಕಾರ ನಷ್ಟವನ್ನೇನೂ ಮಾಡಿಕೊಳ್ಳುತ್ತಿಲ್ಲ. ಆಮದಾದ ಎಣ್ಣೆಯ ಬೆಲೆ(ಸಾರಿಗೆ ಮುಂತಾದ ಎಲ್ಲ ವೆಚ್ಚಗಳೂ ಸೇರಿ) ಕೆ.ಜಿ.ಗೆ ಸುಮಾರು ರೂ.೮ ಎಂದು ಅಂದಾಜು ಮಾಡಲಾಗಿದೆ. ಆದರೆ ಇದರ ಬಿಕರಿ ಬೆಲೆಯನ್ನು ಹನ್ನೆರಡು ರೂಪಾಯಿನಂತೆ ನಿಗದಿಪಡಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಕೆ.ಜಿ.ಗೆ.ರೂ. ೪ರಂತೆ ಲಾಭ. ಆಂತರಿಕವಾಗಿ ತೈಲ ಉತ್ಪಾದನೆಯ ವೆಚ್ಚ ಕೆ.ಜಿ.ಗೆ ರೂ. ೧೭ ಇದ್ದದ್ದರಿಂದ, ಆಮದು ತೈಲದ ಕಡಿಮೆ ಬೆಲೆಯ ಇದಿರು ಭಾರತೀಯ ತೈಲೋತ್ಪಾದನೆ, ಎಣ್ಣೆ ಬೀಜದ ಉತ್ಪಾದನೆ ಹೆಚ್ಚಿಸುವುದು ಸಾಧ್ಯವಿರಲಿಲ್ಲ. ಸರ್ಕಾರದ ಯಾವುದೇ ಪ್ರೋತ್ಸಾಹದ ಕ್ರಮಗಳಿಂದಾಗಲಿ ಎಣ್ಣೆ ಬೀಜದ ಉತ್ಪಾದನೆ ಹೆಚ್ಚಿಸುವುದು ಸಾಧ್ಯವಿರಲಿಲ್ಲ. ಹಸುರುಕ್ರಾಂತಿಯೂ ಈ ಕ್ಷೇತ್ರಕ್ಕೆ ಅಷ್ಟಾಗಿ ಹಬ್ಬಲಿಲ್ಲ. ಎಣ್ಣೆಬೀಜದ ಉತ್ಪಾದನೆಯಲ್ಲಿ ರೈತರು ಬಹುತೇಕ ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತ ಬರುತ್ತಿದ್ದಾರೆ.

ಗೋಧಿ ಬೆಳೆಯುವ ಜಮೀನಿನಲ್ಲಿ ಶೇ.೭೨ರಷ್ಟು ನೆಲವೂ, ಬತ್ತ ಬೆಳೆಯುವ ಜಮೀನಿನಲ್ಲಿ ಶೇ.೪೨ರಷ್ಟು ನೀರಾವರಿಗೆ ಒಳಪಟ್ಟಿದೆ. ಆದರೆ ಎಣ್ಣೆ ಬೀಜ ಬೆಳೆಯುವ ನೆಲದಲ್ಲಿ ಶೇ.೮೫ರಷ್ಟು ಭಾಗ ಮಳೆಯನ್ನೇ ಅವಲಂಬಿಸಿದ್ದು, ಒಂದು ವೇಳೆ ಮಳೆ ಚೆನ್ನಾಗಿ ಬಂದರೂ ಎಣ್ಣೆ ಬೀಜಗಳ ಪೈರು ಕ್ರಿಮಿಕೀಟಗಳಿಗೆ ಪಕ್ಕಾಗುವ ಅಪಾಯ ಹೆಚ್ಚು. ಇವನ್ನೆಲ್ಲ ಎದುರಿಸಿ ಈ ಫಸಲು ತೆಗೆಯಲು ರೈತನಿಗೆ ಹೆಚ್ಚಿನ ಪ್ರೋತ್ಸಾಹ ಸಂಶೋಧನೆಯ ನೆರವು ಅಗತ್ಯವೆಂಬುದು ಮನವರಿಕೆಯಾಗಿದೆ.

೨. ವಿಚಾರಣಾ ಪತ್ರ ಮತ್ತು ವ್ಯವಹಾರೋಜ್ಜೀವನ ಪತ್ರ ಎಂದರೇನು? ಇವುಗಳನ್ನು ಯಾವ ಸಂದರ್ಭಗಳಲ್ಲಿ ಬರೆಯಲಾಗುವುದು? ಯಾವುದಾದರೂ ಒಂದಕ್ಕೆ ಮಾದರಿ ಪತ್ರ ಬರೆಯಿರಿ     / ೧೫

ಅಥವಾ

ಒಂದು ವ್ಯಾಪರ ಪತ್ರದ ಚಿತ್ರ ಬರೆದು ಅದರ ವಿವಿಧ ಅಂಗಗಳನ್ನು ಗುರುತಿಸಿ ಮತ್ತು ಅವುಗಳನ್ನು ವಿವರಿಸಿ.

೩. ಅಭ್ಯರ್ಥನ ಪತ್ರವೆಂದರೇನು? ಅದನ್ನು ಬರೆಯುವಾಗ ಗಮನಿಸಬೇಕಾದ ಅಂಶಗಳೇನು? ಒಂದು ಮಾದರಿ ಅಭ್ಯರ್ಥನ ಪತ್ರ ಬರೆಯಿರಿ / ೧೫

ಅಥವಾ

ಸುಲೇಖಾ ಪೆನ್ ಕಂಪೆನಿಯ ವ್ಯಾಪಾರ ಇಳಿಯುತ್ತಿರುವುದಕ್ಕೆ ಕಾರಣಗಳನ್ನು, ಈ ಇಳಿತವನ್ನು ತಡೆಗಟ್ಟಲು ಕ್ರಮಗಳನ್ನು ಸೂಚಿಸಿ ಕಾರ್ಯದರ್ಶಿ ತನ್ನ ಕಂಪನಿಯ ನಿರ್ದೇಶಕರಿಗೆ ನೀಡಿದ ವರದಿಯನ್ನು ಬರೆಯಿರಿ.

೪. ಇವುಗಳಲ್ಲಿ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ: / ೧೦

(ಅ) ಪರಿಪತ್ರ
(ಆ) ನಡೆವಳಿಕೆ
(ಇ) ಸಮಿತಿ ವರದಿ
(ಈ) ಆದೇಶ ಪತ್ರ

(ವಾಣಿಜ್ಯ ಕನ್ನಡದ ಪ್ರಶ್ನೆಗಳ ಮಾದರಿಯನ್ನು ಮಾತ್ರ ಇಲ್ಲಿ ಕೊಡಲಾಗಿದೆ)

 

IV Semester B.Com. Examination, May/June 2006
(Semester Scheme)
LANGUAGE KANNADA
Part-I, Paper – IV :
ವ್ಯಾವಹಾರಿಕ ಕನ್ನಡ ಮತ್ತು ಪಠ್ಯ

Time : 3 Hours                                       Max. Marks : 90

ಭಾಗ-೧

೧. ಈ ಗದ್ಯಭಾಗದ ಸಂಕ್ಷೇಪ ಲೇಖನವನ್ನು ಸಿದ್ಧಪಡಿಸಿ ಸೂಕ್ತ ಶೀರ್ಷಿಕೆಯನ್ನು ನೀಡಿ:          / ೧೦

ಬದಲಾವಣೆಗಳಾಗುವುದು ತಪ್ಪಲ್ಲ. ಶಿಕ್ಷಣ ಚಲನಶೀಲವಾಗಬೇಕೆಂದು ಬಯಸುವವರು ಈ ಬದಲಾವಣೆಗಳನ್ನು ಸ್ವಾಗತಿಸಿಯಾರು. ಆದರೆ ಅನೇಕ ಶೈಕ್ಷಣಿಕ ಬದಲಾವಣೆಗಳಿಗೆ ಪ್ರಗತಿಪರ ಶಿಕ್ಷಣ ಚಿಂತಕರೇ ವಿರೋಧ-ಕಟುಟೀಕೆ ವ್ಯಕ್ತಪಡಿಸುತ್ತಿದ್ದಾರೆ. “ಬದಲಾವಣೆಬೇಕು ಎನ್ನುವವರೇ ಬದಲಾವಣೆಗೊಳಗಾದಾಗ ಹಳೆಯ ಪದ್ದತಿಗೇ ಜೋತುಬಿದ್ದು ವಿರೋಧಿಸುವುದೇಕೆ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಎಲ್ಲ ಬದಲಾವಣೆಗಳು ಸ್ವಾಗತಾರ್ಹವಲ್ಲ, ಸ್ವೀಕಾರಾರ್ಹವಲ್ಲ, ಕಣ್ಮುಚ್ಚಿಕೊಂಡು ಬದಲಾವಣೆಗಳನ್ನು ಸ್ವಾಗತಿಸುವುದು ಹುಂಬತನ. ಶಿಕ್ಷಣರಂಗದಲ್ಲಿ ಯಾವುದೇ ಬದಲಾವಣೆ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡುವಂಥದ್ದಾಗಬಾರದು, ಮೇಲಿನಿಂದ ಕೆಳಕ್ಕೆ ಹೇರಿದ್ದಾಗಬಾರದು. ನಮ್ಮ ಒಟ್ಟು ಶಿಕ್ಷಣ ವ್ಯವಸ್ಥೇ ವಿಕೇಂದ್ರಿಕರಣ, ಸೂಕ್ಷ್ಮ ಯೋಜನೆ, ಸಬಲೀಕರಣ, ಸ್ಥಳೀಯ ಯೋಜನೆ ಇತ್ಯಾದಿ ಘೋಷಣೆಗಳನ್ನು ಧಾರಾಳವಾಗಿ ಬಳಸುತ್ತದೆ. ಆದರೆ ಪ್ರತಿಯೊಂದು ಸಣ್ಣ ವಿಷಯವೂ ಮೇಲಿನಿಂದ ಹೇರಲ್ಪಟ್ಟದ್ದಾಗಿರುತ್ತದೆ. ಯಾವುದೇ ಬದಲಾವಣೆ ಮಾಡುವ ಸಂದರ್ಭದಲ್ಲಿ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಡನೆ ಚರ್ಚಿಸಿ, ಅವರಿಗೆ ವ್ಯಾಪಕವೂ ತಲಸ್ಪರ್ಶಿಯೂ ಆದ ತರಬೇತಿ ನೀಡಿದಾಗ ಮಾತ್ರ ಶೈಕ್ಷಣಿಕ ಪ್ರಯೋಗಗಳು ಯಶಸ್ವಿಯಾಗುತ್ತವೆ. ಆದರೆ ಕ್ಷೇತ್ರದಲ್ಲಿ ನಿತ್ಯವೂ ದುಡಿಯುವ ಶಿಕ್ಷಕರ ಅಭಿಪ್ರಾಯಗಳನ್ನು ಪರಿಗಣಿಸುವ ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವ್ಯವಸ್ಥೆ ನಮ್ಮಲಿಲ್ಲ. ಬದಲಾಗಿ ಅನುದಾನಿತ ಹಾಗೂ ಅನುದಾನರಹಿತ ಕ್ಷೇತ್ರದಲ್ಲಿ ಇಂದು ದುಡಿಯುತ್ತಿರುವ ಶಿಕ್ಷಕರು ಎದುರಿಸುತ್ತಿರುವ ಸೇವಾಭದ್ರತೆ, ವೇತನ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಚಾಪೆಯ ಕೆಳಗೆ ತೂರಿ ಬದ್ಧತೆ, ದಕ್ಷತೆ ಇತ್ಯಾದಿಯಾಗಿ ಉಪದೇಶಿಸುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ.

೨. ಹುದ್ದೆಗಳ ಜಾಹೀರಾತಿನ ಮುಖ್ಯಾಂಶಗಳು ಯಾವುವು? ಒಂದು ವ್ಯಾಪಾರ ಸಂಸ್ಥೆಗೆ ಬೇಕಾಗಿರುವ ಆಡಳಿತ ಸಹಾಯಕರಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಜಾಹೀರಾತನ್ನು ಸಿದ್ಧಪಡಿಸಿ

ಅಥವಾ

ಅಭ್ಯರ್ಥದ ಪತ್ರದ ಮುಖ್ಯಾಂಶಗಳು ಯಾವುದು? ಒಂದು ದಿನ ಪತ್ರಿಕೆಯ ವರದಿಗಾರರ ಹುದ್ದೆಗೆ ಅಭ್ಯರ್ಥನ ಪತ್ರವನ್ನು ಬರೆಯಿರಿ. / ೧೦

೩. ಕೂಡು ಬಂಡವಾಳ ಸಂಸ್ಥೆಯ ಕಾರ್ಯದರ್ಶಿಯ ವಿವಿಧ ಕರ್ತವ್ಯಗಳು ಹಾಗೂ ಜವಾಬ್ದಾರಿಗಳನ್ನು ಪರಿಚಯಿಸಿ.

ಅಥವಾ

ಕಂಪನಿಯೊಂದರ ನಿರ್ದೇಶನ ಮಂಡಳಿ ಸಭೆಯ ತಿಳುವಳಿಕೆ ಪತ್ರವನ್ನು ಕಾರ್ಯಸೂಚಿಯೊಂದಿಗೆ ತಯಾರಿಸಿ. / ೧೦

೪. ಏಕವ್ಯಕ್ತಿ ವರದಿ ಎಂದರೇನು? ಸರ್ಕಾರಿ ಆಸ್ಪತ್ರೆಯೊಂದರ ಸೇವಾ-ವ್ಯವಸ್ಥೆಯನ್ನು ಸುಧಾರಿಸಲು ತಜ್ಞರೊಬ್ಬರು ಸರ್ಕಾರಕ್ಕೆ ಸಲ್ಲಿಸುವ ವರದಿಯೊಂದನ್ನು ಸಿದ್ಧಪಡಿಸಿ.

ಅಥವಾ

ಸಮಿತಿಯ ವರದಿಯ ಮುಖ್ಯಲಕ್ಷಣಗಳನ್ನು ಪರಿಚಯಿಸಿ.

ಪರೀಕ್ಷಾಕ್ರಮದ ಸುಧಾರಣೆಯ ಬಗೆಗೆ ಸಮಿತಿಯ ವರದಿಯೊಂದನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ / ೧೦

೫. ನಾಲ್ಕಕ್ಕೆ ಟಿಪ್ಪಣಿ ಬರೆಯಿರಿ / (೫x೪=೨೦)

೧) ನೇಮಕಾತಿ ಪತ್ರ
೨) ಹಾಜರಾತಿ ವರದಿ
೩) ವಾರ್ಷಿಕ ಸಾಮಾನ್ಯ ಸಭೆ
೪) ನಡೆವಳಿಕೆ
೫) ನಿರ್ದೇಶಕ ಮಂಡಳಿ
೬) ವರದಿಯ ಮಹತ್ವ

ಭಾಗ

೬. ಎರಡು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಬರೆಯಿರಿ. / (೨x೫=೨೦)

೧) ಅನಾಥ ಶವಗಳನ್ನು ನೋಡಿದಾಗ ಜೋಸೆಫನಿಗೆ ಏನನ್ನಿಸಿತು?
೨) ಮೆಹರುನ್ನೀಸಾ ಮತ್ತು ಕೈಜಮ್ಮರ ನಡುವಣ ಸಂಬಂಧ ಹೇಗಿತ್ತು?
೩) ಸಮದ್‌ನನ್ನು ಕುರಿತು ಮೆಹರುನ್ನೀಸಳ ಮನದಲ್ಲಿ ಎಂಥ ಭಾವನೆಗಳು ಮೂಡುತ್ತಿದ್ದವು.
೪) ಮಲಾಯಿಕರು ಧರ್ಮವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ?

೭. ಎರಡು ಪ್ರಶ್ನೆಗಳಿಗೆ ಉತ್ತರ ಬರೆಯಿರಿ. / (೨x೧೦=೨೦)

೧) ಬೊಳುವಾರರರ ಕಥೆಗಳಲ್ಲಿ ಕಂಡುಬರುವ ಮುಸ್ಲಿಂ ಸಂವೇದನೆಯ ಸ್ವರೂಪವನ್ನು ಪರಿಚಯಿಸಿ.
೨) ಧರ್ಮ ಮತ್ತು ಅರ್ಥಗಳ ಮುಖಾಮುಖಿಯಿಂದ ಉಂಟಾಗುವ ಪರಿಣಾಮಗಳನ್ನು ‘ಜನ್ನತ್’ ಕಥೆಯಲ್ಲಿ ಹೇಗೆ ಚರ್ಚಿಸಲಾಗಿದೆ?
೩) “ಸಂಘರ್ಷದ ಕೊನೆಯಲ್ಲಿ ಗೆಲ್ಲುವುದು ಮನುಷ್ಯ ಪ್ರೀತಿಯೇ” ಎಂಬುದನ್ನು ‘ಅಂಕ’ ಹೇಗೆ ಮನವರಿಕೆ ಮಾಡಿಕೊಟ್ಟಿದೆ? ವಿವರಿಸಿ.
೪) ‘ಒಂದು ತುಂಡು ಗೋಡೆ’ ಕಥೆ ಅಯೋದ್ಯೆಯ ಮಂದಿರ-ಮಸೀದಿ ಹಗರಣವನ್ನು ನೆನಪಿಗೆ ತರುವ ಬಗೆಯನ್ನು ವಿಶ್ಲೇಷಿಸಿ.

mso�:y�i-� (/� ly:Tunga; mso-hansi-font-family:Tunga’>ಹೆಚ್ಚು ಪ್ರತಿಗಳನ್ನು ಪಡೆಯಲು ಕಾಲ, ಶ್ರಮ, ವೆಚ್ಚ ಎಲ್ಲವೂ ಅಧಿಕವಾಗುವುದರಿಂದ ಇದು ಉಪಯುಕ್ತ ವಿಧಾನವಲ್ಲ; ಮತ್ತು ಕಾರ್ಬನ್ ಪ್ರತಿಗಳು ತೆಳುವಾದ್ದರಿಂದ ಬಾಳಿಕೆಯೂ ಬರುವುದಿಲ್ಲ.

 

ಇನ್ನು ಕೈಬರೆಹದ ಮೂಲಕ ಅಥವಾ ಬೆರಳಚ್ಚು ಯಂತ್ರದ ಸಹಾಯದಿಂದ ಕೊರೆಯಚ್ಚಿನ ಕಾಗದದ ಮೇಲೆ (ಸ್ಟೆನ್ ಸಿಲ್ ಪೇಪರ್ ) ಪರಿಪತ್ರದ ವಿಷಯವನ್ನು ಮೂಡಿಸಿ ಚಕ್ರ ಲೇಖನಯಂತ್ರದ ಮೂಲಕ (ಸೈಕ್ಲೋಸ್ಟೈಲ್ ಮಿಷನ್) ಅಥವಾ ಪ್ರತಿಯಂತ್ರ (ಡೂಪ್ಲಿಕೇಟರ್) ನೆರವಿನಿಂದ ಪ್ರತಿಗಳನ್ನು ತೆಗೆಯುವ ವಿಧಾನ ಇದುವರೆಗೆ ವಿಶೇಷವಾಗಿ ಬಳಕೆಯಲ್ಲಿತ್ತು. ಈಗ ಜೆರಾಕ್ಸ್ ಯಂತ್ರಗಳು ವಿಶೇಷವಾಗಿ ಬಳಕೆಗೆ ಬಂದಿವೆ; ಅದರಲ್ಲೂ ಇತ್ತೀಚೆಗೆ ಸ್ವಯಂಚಾಲಿತ ಅಗತ್ಯವಾದ ಸಂಖ್ಯೆಯ ಪ್ರತಿಗಳನ್ನು ಪಡೆಯುವ ಸೌಕರ್ಯ ಒದಗಿವೆ. ವೇಗ, ವೆಚ್ಚ, ಶ್ರಮ, ಮೊದಲಾದ ಎಲ್ಲ ದೃಷ್ಟಿಗಳಲ್ಲೂ ಜೆರಾಕ್ಸ್ ಯಂತ್ರದ ಬೆಲೆ ಸಾವಿರಗಟ್ಟಲೆ ಆಗಿರುವುದರಿಂದ, ಎಲ್ಲರೂ ಕೊಂಡು ಬಳಸಲು ಸಾಧ್ಯವಿಲ್ಲದಿರುವುದಿಂದ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಡೂಪ್ಲೀಕೇಟರ್ ಮತ್ತು ಸೈಕ್ಲೋಸ್ಟೈಲ್ ಯಂತ್ರಗಳು ಬಳಕೆಯಾಗುತ್ತಿವೆ.

ಅಚ್ಚು ಮೂಡಿಸುವುದು ಮೊದಲಿನಿಂದಲೂ ಇರುವ ವಿಧಾನವಾಗಿದೆ. ಅಧಿಕ ಸಂಖ್ಯೆಯ ಪ್ರತಿಗಳಿಗೆ ಇದು ಉಪಯುಕ್ತ. ಜೆರಾಕ್ಸ್ ಯಂತ್ರದ ಪ್ರತಿಗಳಲ್ಲಿ ನಕ್ಷೆ, ಚಿತ್ರ ಇತ್ಯಾದಿಗಳು ಪಡಿಮೂಡಿದರೂ ಎಲ್ಲವೂ ಕಪ್ಪುಬಿಳುಪು ರೂಪದಲ್ಲೇ ಇರುತ್ತವೆ; ಅಚ್ಚಿನಲ್ಲಿ ಮಾತ್ರ ವರ್ಣ-ವೈವಿಧ್ಯ ಕಾಣಬಹುದು; ಬೇರೆ ಬೇರೆ ಬಣ್ಣಗಳ ಶಾಯಿಯಲ್ಲಿ ವಿವಿಧ ವಿನ್ಯಾಸ, ಆಕಾರದ ಅಕ್ಷರಗಳಲ್ಲಿ ವಿಷಯವನ್ನು ಅಚ್ಚು ಮಾಡಿಸಲು ಸಣ್ಣಕ್ಷರಗಳಲ್ಲಿ ಹೆಚ್ಚು ವಿಷಯವನ್ನು ಅಳವಡಿಸಬಹುದು; ಶೀರ್ಷಿಕೆ,, ದಿನಾಂಕ, ವಿಳಾಸಗಳನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ನೀಡಬಹುದು.

ಪಾಲುದಾರರೊಬ್ಬರು ಸಂಸ್ಥೆಯಿಂದ ನಿವೃತ್ತರಾದಾಗ ಬರೆದ ಪತ್ರ
ಮಾದರಿ

ಶಿವರಾಮ ಕೃಷ್ಣನ್ ಮತ್ತು ಕಂಪನಿ

೬, ಚರ್ಚ್ ರಸ್ತೆ,
ಕಿಟಲ್ ರಸ್ತೆ
ಮಂಗಳೂರು

ದಿನಾಂಕ: ೮-೬-೧೯೮೭

ಮಾನ್ಯರೆ,

ದಿನಾಂಕ ೭/೬/೧೯೮೭ರಂದು ನಮ್ಮ ಸಂಸ್ಥೆಯ ಪಾಲುದಾರರಲ್ಲಿ ಒಬ್ಬರಾದ ಶ್ರೀ ಶಿವಯ್ಯನವರು ಸಂಸ್ಥೇಯ ಪಾಲುದಾರಿಕೆಯಿಂದ ನಿವೃತ್ತರಾಗಿದ್ದಾರೆಂದು ಈ ಮೂಲಕ ತಮಗೆ ತಿಳಿಸುತ್ತಿದ್ದೇವೆ. ಅನಾರೋಗ್ಯದ ನಿಮಿತ್ತ ನಿವೃತ್ತಿ ಬಯಸಿರುವ ಶ್ರೀಯುತರು ಸಂಸ್ಥೇಗೆ ಸಲ್ಲಿಸಿರುವ ಸೇವೆ ಅಮೋಘವಾದುದು. ಅವರ ಅನುಭವಪೂರ್ಣ ಸೇವೆ ಇನ್ನಿಲ್ಲವಾದರೂ ಅವರು ಗೌರವ ಸಲಹೆಗಾರರಾಗಿ ಮುಂದುವರಿಯಲು ಒಪ್ಪಿಗೆ ನೀಡಿದ್ದಾರೆ. ಶ್ರೀಯುತರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯಲ್ಲೇ ಗ್ರಾಹಕರಿಗೆ ಸೇವೆ ಸಲ್ಲಿಸುತ್ತೇವೆಂಬ ಭರವಸೆಯನ್ನು ನಾವು ನೀಡುತ್ತೇವೆ.

ಶ್ರೀ ಶಿವಯ್ಯನವರ ನಿವೃತ್ತಿಯ ಕಾರಣ ನಮ್ಮ ಸಂಸ್ಥೆಗೆ ಇನ್ನು ಮುಂದೆ ‘ರಾಮಕೃಷ್ಣನ್ ಮತ್ತು ಕಂಪೆನಿ’ ಎಂದು ಪುನರ್ ನಾಮಕರಣ ಮಾಡಿದ್ದೇವೆ. ಇಂದಿನಿಂದ ಎಲ್ಲ ವ್ಯವಹಾರಗಳಲ್ಲಿಯೂ ‘ರಾಮಕೃಷ್ಣನ್ ಮತ್ತು ಕಂಪನಿ’ ಎಂದೇ ವ್ಯವಹರಿಸಬೇಕೆಂದು ನಮ್ಮನ್ನು ಕೋರುತ್ತೇವೆ. ತಮ್ಮ ಸಹಕಾರ, ಪ್ರೋತ್ಸಾಹ ಎಂದಿನಂತೆಯೇ ಮುಂದುವರಿಯುತ್ತವೆಂದು ನಂಬಿದ್ದೇವೆ.

ತಮ್ಮ ವಿಶ್ವಾಸಿಗಳು
ಶಿವರಾಮಕೃಷ್ಣನ್ ಮತ್ತು ಕಂಪನಿ
ಅರ್ಥಾತ್
(ರಾಮಕೃಷ್ಣನ್ ಮತ್ತು ಕಂಪನಿ)

 

ಸಂಸ್ಥೆಗಳು ಸಂಯೋಗಗೊಳ್ಳುವಾಗ ಹೊರಡಿಸುವ ಪರಿಪತ್ರ
ಮಾದರಿ

ರಾಮ ಮತ್ತು ಕಂಪನಿ
ರಹೀಂ ಮತ್ತು ಕಂಪನಿ

ಗುಲ್ಬರ್ಗ

ತಾರೀಖು: ೭-೮-೧೯೮೭

ಮಾನ್ಯರೆ,

ಕಳೆದ ಮೂರು ವರ್ಷಗಳಿಂದ ಪ್ರತ್ಯೇಕವಾಗಿ ಸುಗಂಧ ವಸ್ತುಗಳ ಮಾರಾಟ ಮಾಡುತ್ತಿರುವ ‘ರಾಮ ಮತ್ತು ಕಂಪನಿ’ ಹಾಗೂ ‘ರಹೀಂ ಮತ್ತು ಕಂಪೆನಿ’ ಎಂಬ ಎರಡೂ ಸ್ವತಂತ್ರ ಸಂಸ್ಥೇಗಳನ್ನು ಒಂದುಗೂಡಿಸಿ ಇದೇ ಆಗಸ್ಟ್ ೧೫ರಿಂದ ‘ರಾಮರಹೀಂ ಮತ್ತು ಕಂಪೆನಿ’ ಎಂಬ ಹೆಸರಿನಲ್ಲಿ ಸಂಸ್ಥೇಯ ವ್ಯವಹಾರಗಳನ್ನು ನಡೆಸಲಿದ್ದೇವೆ. ಇನ್ನು ಮುಂದೆ ನಮ್ಮ ಎಲ್ಲಾ ಗ್ರಾಹಕರೂ ಈ ಕೆಳಕಂಡ ಕಾರ್ಯಾಲಯದ ವಿಳಾಸದೊಡನೆ ವ್ಯವಹರಿಸಬೇಕೆಂದು ಕೋರುತ್ತೇವೆ. ಸಂಯೋಗ ಹೊಂದಿರುವ ನಮ್ಮ ಹೊಸ ಸಂಸ್ಥೆಗೆ ತಾವು ಮೊದಲಿನಂತೆ ಸಹಕಾರವನ್ನೂ ಪ್ರೋತ್ಸಾಹವನ್ನೂ ನೀಡಬೇಕೆಂದು ವಿನಯದಿಂದ ವಿಜ್ಞಾಪಿಸಿಕೊಳ್ಳುತ್ತಿದ್ದೇವೆ.

ನಮ್ಮ ಸಂಸ್ಥೆಯ ವಿಳಾಸ:                                                  ತಮ್ಮ ವಿಶ್ವಾಸಿಗಳು
ರಾಮ ರಹೀಂ ಮತ್ತು ಕಂಪನಿ                                              ರಾಮ ಮತ್ತು ಕಂ
೪೮, ಗುಮ್ಮಟ ರಸ್ತೆ                                                           ರಹೀಂ ಮತ್ತು ಕಂ.
ಗುಲ್ಬರ್ಗ

ಕೆಲಸದ ವೇಳೆ: ಬೆ.೯ರಿಂದ ೧.೩೦
ಸಂ.೩.೩೦ರಿಂದ ೮.೩೦

 

ಸಂಸ್ಥೆಯೊಂದಕ್ಕೆ ಪಾಲುದಾರ ಹೊಸದಾಗಿ ಸೇರಿದಾಗ ಗಮನಿಸಲು ಕೋರಿ ಕಳಿಸಿದ ಪರಿಪತ್ರ
ಮಾದರಿ

ಶ್ರೀ ವಿಜಯ ನಂದೀಶ್ವರ ಟ್ರಾನ್ಸ್ಪೋರ್ಟ್ ಕಂಪನಿ

ಕಲಾಸಿಪಾಳ್ಯಂ
ಬೆಂಗಳೂರು
ತಾ.೨೮-೧೨-೧೯೮೭

ದೂರವಾಣಿ: 489321

ಮಹನೀಯರೆ,

ಶ್ರೀ ಭೋಗನಂದೀಶ್ವರ ಟ್ರಾವಲ್ಸ್ ಸಂಸ್ಥೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವ್ಯವಸ್ಥಾಪಕರಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದ್ದ ಕಂಪೆನಿಯ ಪಾಲುದಾರರಲ್ಲಿ ಒಬ್ಬರಾಗಿದ್ದ ಶ್ರೀ ಭೋಗಯ್ಯನವರು ಕಳೆದ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದವಾಗುತ್ತದೆ.

ಶ್ರೀಯುತರು ನಿಧನದಿಂದ ತೆರವಾದ ಜಾಗದಲ್ಲಿ ನಮ್ಮ ಸಂಸ್ಥೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಉಪನಿರ್ವಾಹಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ವಿಜಯಪ್ಪನವರು ದಿ.೪-೧-೧೯೮೮ರಿಂದ ನಮ್ಮ ಸಂಸ್ಥೆಯ ಪಾಲುಗಾರರಾಗುತ್ತಿದ್ದಾರೆಂದು ತಿಳಿಸಲು ಸಂತೋಷವಾಗುತ್ತದೆ; ತತ್ಪರಿಣಾಮವಾಗಿ ನಮ್ಮ ಸಂಸ್ಥೆಯ ಹೆಸರು ಇನ್ನು ಮುಂದೆ ಶ್ರೀ ಭೋಗನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂಪನಿ ಎನ್ನುವುದನ್ನು ‘ಶ್ರೀ ವಿಜಯ ನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂಪನಿ’ ಎಂದು ಬದಲಾಯಿಸಲಾಗುತ್ತದೆ. ದಯವಿಟ್ಟು ಎಲ್ಲರೂ ಈ ಹೆಸರಿನ ಬದಲಾವಣೆಯನ್ನು ಗಮನಿಸಿ ವ್ಯವಹರಿಸಬೇಕೆಂದು ಕೋರುತ್ತೇವೆ. ಎಂದಿನಂತೆ ನಿಮ್ಮ ಪ್ರೋತ್ಸಾಹವೇ ನಮಗೆ ಶ್ರೀ ರಕ್ಷೆಯಾಗಿದೆ.

ನಿಮ್ಮ ವಿಶ್ವಾಸದ,
ಶ್ರೀ ವಿಜಯ ನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂ
ಮೊದಲಿನ ಹೆಸರು  :
(ಶ್ರೀ ಭೋಗನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂ.)

ಪಾಲುದಾರರ ಶ್ರೀ ವಿಜಯಪ್ಪನವರ
ಸಹಿ ಹೀಗಿದೆ……………