ಸ್ವರೂಪ

ಪ್ರತಿಯೊಂದು ಸಂಸ್ಥೆಗೂ ನಾಲ್ಕು ಆಧಾರಾಂಗಗಳು ಇರುತ್ತವೆ. ಮೊದಲನೆಯದು ನಿರ್ವಹಣಾಂಗ, ಎರಡನೆಯದು ಉತ್ಪಾದನಾಂಗ, ಮೂರನೆಯದು ಮಾರಾಟಾಂಗ, ನಾಲ್ಕನೆಯದು ಮೇಲ್ವಿಚಾರಣಾಂಗ. ಕಚೇರಿ, ಆಡಳಿತ ಮಂಡಳಿ, ಕಾರ್ಖಾನೆ, ಮಾರಾಟಮಳಿಗೆ ಈ ನಾಲ್ಕು ಮೇಲೆ ಹೇಳಿದ ನಾಲ್ಕು ಅಂಗಗಳ ಕಾರ್ಯಸ್ಥಾನಗಳಾಗಿವೆ. ವಸ್ತುಗಳನ್ನು ತಯಾರಿಸುವುದು, ಇಲ್ಲವೇ ತಯಾರಿಸಿದ ವಸ್ತುಗಳನ್ನು ಬೇರೆಡೆಯಿಂದ ತರಿಸಿಕೊಳ್ಳುವುದು; ವಸ್ತುಗಳನ್ನು ಉತ್ಪಾದಿಸಿದ ಅಥವಾ ಸಂಗ್ರಹಿಸಿದ ವಿಭಾಗ, ಸಂಗ್ರಹಿಸಿದ ವಸ್ತುಗಳನ್ನು ಜಾಹೀರಾತು, ಮಾರಾಟ ಪತ್ರಗಳ ಮೂಲಕ ಗ್ರಾಹಕರಿಗೆ ವಿವರವಾಗಿ ಮುಟ್ಟಿಸಿ ಮಾರಾಟಕ್ಕೆ ವ್ಯವಸ್ಥೇ ಮಾಡುವ ಮಾರಾಟಾಂಗ, ಸರಕು ಸಂಗ್ರಹಣೆ, ಮಾರಾಟಕ್ಕೆ ಸಂಬಂಧಿಸಿದ ವ್ಯವಸ್ಥೆ, ಗ್ರಾಹಕರಿಗೆ ತಲುಪಿಸಲು ಸಾಗಾಣಿಕೆ, ಹಣ ವಸೂಲಿಗೆ ಪತ್ರ ವ್ಯವಹಾರ ಇತ್ಯಾದಿ ಕಾರ್ಯಗಳ ನಿರ್ವಹಣೆಗೆ ಮೀಸಲಾದ ಆಡಳಿತಾಂಗ ಅಥವಾ ಕಚೇರಿ ವ್ಯವಸ್ಥೆ; ಇವೆಲ್ಲವನ್ನೂ ಹತೋಟಿಯಲ್ಲಿಟ್ಟುಕೊಂಡು ಬಂಡವಾಳ ಹೂಡುವ, ಅಧಿಕಾರ ಚಲಾಯಿಸುವ ವ್ಯವಸ್ಥೆಯ ಹೊಣೆ ಹೊತ್ತ ಮಾಲಿಕ ಅಥವಾ ಆಡಳಿತ ವರ್ಗ- ಈ ನಾಲ್ಕು ವಿಭಾಗಗಳಲ್ಲಿ ಕಚೇರಿ ಸಿಬ್ಬಂದಿ  ವ್ಯವಸ್ಥೇ ಮಹತ್ವ ಪೂರ್ಣವಾದುದು; ಇದನ್ನು ಇಡೀ ಕಾರ್ಯಕ್ಷೇತ್ರದ ಸೂತ್ರಾಂಗ ಎನ್ನಬಹುದು.

ಪ್ರತಿಯೊಂದು ಕ್ಷೇತ್ರಕ್ಕೂ ಸಿಬ್ಬಂದಿ ವರ್ಗದ ಅಗತ್ಯವಿದೆ. ಈ ಸಿಬ್ಬಂದಿ ವರ್ಗದ ಕರೆ, ಸಂದರ್ಶನ, ಆಯ್ಕೆ, ನೇಮಕ, ಖಾಯಂಗೊಳಿಸುವಿಕೆ, ರದ್ದು ಮಾಡುವಿಕೆ, ಬಡ್ತಿ ನೀಡುವಿಕೆ ಮೊದಲಾದ ವಿದ್ಯಮಾನಗಳಿಗೆ ಸಂಬಂಧಿಸಿದ ವ್ಯವಹಾರ ಪತ್ರಗಳನ್ನು ಉದ್ಯೋಗ ಪತ್ರಗಳೆಂದು ಕರೆಯುತ್ತಾರೆ. ವ್ಯಕ್ತಿಯ ಉದ್ಯೋಗಕ್ಕೆ ಸಂಬಂಧಿಸಿದ ಪತ್ರಗಳು ವಾಣಿಜ್ಯ ರಂಗದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವ್ಯಾಪಾರ ರಂಗದಲ್ಲಿ ಹಣವೆಷ್ಟು ಮುಖ್ಯವೋ ಜನವೂ ಅಷ್ಟೇ ಮುಖ್ಯ. ಕೇವಲ ಹಣದಿಂದಲೇ ಎಲ್ಲ ವ್ಯವಹಾರಗಳೂ ಸಾಗುವುದಿಲ್ಲ. ತಕ್ಕ ಸಾಮರ್ಥ್ಯ ಅರ್ಹತೆಗಳಿರುವ ಜನಗಳ ಸಹಾಯ ಅತ್ಯಗತ್ಯ. ದಕ್ಷ-ಕುಶಲ ಕೆಲಸಗಾರರಿಲ್ಲದಿದ್ದಲ್ಲಿ ವಸ್ತುಗಳ ಗುಣಮಟ್ಟ ಕಳಪೆಯಾಗುತ್ತದೆ. ಚತುರಮತಿ, ಸೌಜನ್ಯಯುತ ಮಾರಾಟಗಾರರಿಲ್ಲದಿದ್ದರೆ ವ್ಯಾಪಾರದಲ್ಲಿ ಇಳಿಮುಖವಾಗುತ್ತದೆ. ಕಚೇರಿಯ ಸಿಬ್ಬಂದಿ ದಕ್ಷರೂ ಪ್ರಾಮಾಣಿಕರೂ ಆಗಿರದಿದ್ದಲ್ಲಿ ಸಂಸ್ಥೆಗೆ ಅಪಕೀರ್ತಿ ಉಂಟಾಗುತ್ತದೆ. ಆಡಳಿತ ಮಂಡಳಿಯಲ್ಲಿ ಯೋಗ್ಯರೂ ಕಾರ್ಯಕುಶಲಿಗಳೂ ಇಲ್ಲದಿದ್ದರೆ ಸಂಸ್ಥೆಗೆ ಆರ್ಥಿಕ ನಷ್ಟ ಸಂಭವಿಸುತ್ತದೆ. ಆದ್ದರಿಂದ ಎಲ್ಲ ಹಂತಗಳಲ್ಲಿಯೂ ಸಮರ್ಥ ಜನರ ಅಗತ್ಯವಿರುತ್ತದೆ. ವಾಣಿಜ್ಯ ಕ್ಷೇತ್ರದ ಜೀವಾಳವೆಂದರೆ ಸೇವಾನಿರತ ಜನರು; ಒಂದು ರೀತಿಯಲ್ಲಿ ಹಣದಂತೆ ಜನರೂ ಸಂಸ್ಥೇಯ ಬಂಡವಾಳ, ಮೂಲಾಧಾರವೆಂದರೆ ತಪ್ಪಿಲ್ಲ.

ಉತ್ಪಾದನಾಂಗ, ನಿರ್ವಹಣಾಂಗ ಯಾವುದೇ ಇರಲಿ, ಅದಕ್ಕೆ ತಕ್ಕ ಜನರನ್ನು ಆಯ್ಕೆ ಮಾಡುವುದು ಸುಲಭದ ಕಾರ್ಯವಲ್ಲ ಮತ್ತು ಸ್ವೇಚ್ಛೆಯಾಗಿ ವ್ಯಕ್ತಿಯ ಇಷ್ಟಾನಿಷ್ಟಗಳಂತೆ ಆಯ್ಕೆ ಮಾಡಲು ಬರುವುದಿಲ್ಲ. ಪ್ರತಿಯೊಂದು ಉದ್ಯೋಗಕ್ಕೂ ಆಯ್ಕೆ ಮಾಡಲು, ಉದ್ಯೋಗ ನೀಡಲು ನಿರ್ದಿಷ್ಟ ನೀತಿ ನಿಯಮಗಳಿವೆ; ಕಟ್ಟುಪಾಡುಗಳಿವೆ; ಏಕ ವ್ಯಕ್ತಿ ಮಾಲೀಕತ್ವದ ಸಂಸ್ಥೆಯಲ್ಲಿಯೂ ಸಹ ವ್ಯಕ್ತಿಗಳು ಇಷ್ಟಾನುಸಾರ ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ. ಹೆಚ್ಚು ದಕ್ಷ, ಅನುಭವಶಾಲಿ, ವಿದ್ಯಾರ್ಹತೆಯ ವ್ಯಕ್ತಿ ಸ್ಪರ್ಧಾತ್ಮಕ ರೀತಿಯಲ್ಲಿ ಉದ್ಯೋಗಕ್ಕೆ ಬರಬೇಕೆಂದು ಆಶಿಸುತ್ತಾನೆ. ಇದಕ್ಕಾಗಿ ಕೆಲವೊಂದು ವಿಧಿ ವಿಧಾನಗಳನ್ನು ಸರ್ವೇ ಸಾಧಾರಣವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಅನುಸರಿಸುತ್ತಾರೆ. ವಾಣಿಜ್ಯ ಕ್ಷೇತ್ರದಲ್ಲಿಯೂ ಈ ಬಗೆಯ ಆಯ್ಕೆ ನೇಮಕ ಕಾರ್ಯಗಳು ನಡೆಯುತ್ತವೆ.

ಸಿಬ್ಬಂದಿ ವ್ಯವಸ್ಥೆಯ ಮೊದಲ ಘಟ್ಟವೆಂದರೆ ಅವಶ್ಯಕತೆಗೆ ತಕ್ಕಂತೆ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ಅವುಗಳಿಗೆ ಕಾರ್ಯದ ಹೊಣೆ, ಸಂಬಳ, ಬೇಕಾದ ವ್ಯಕ್ತಿ ಅರ್ಹತೆ, ಅನುಭವ ಮೊದಲಾದ ಅಂಶಗಳನ್ನು ನಿರ್ಧರಿಸಿ ಆ ಬಗ್ಗೆ ಅಭ್ಯರ್ಥಿಗಳನ್ನು ಆಹ್ವಾನಿಸಲು ಜಾಹೀರಾತು ನೀಡುವುದು; ಅರ್ಜಿ ಹಾಕಿದ ವ್ಯಕ್ತಿಗಳಲ್ಲಿ ಅರ್ಹರಾದವರನ್ನು ಸಂದರ್ಶನಕ್ಕೆ ಕರೆ ನೀಡುವುದು, ಆಯ್ಕೆಯಾದ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನೇಮಿಸುವುದು, ನಂತರ ತಾತ್ಕಲಿಕ ಸೇವಾವಧಿ ಪರಿಶೀಲನೆ, ಖಾಯಂಗೊಳಿಸುವಿಕೆ, ಅದಕ್ಷರಾಗಿದ್ದಲ್ಲಿ, ಅವ್ಯವಹಾರ ನಡೆಸಿದ್ದಲ್ಲಿ, ಅಂಥವರನ್ನು ವಜಾ ಮಾಡುವಿಕೆ, ದಕ್ಷತೆ ಪ್ರಾಮಾಣಿಕತೆಗಳಿಂದ ದುಡಿದವರಿಗೆ ಬಡ್ತಿ ನೀಡುವುದು; ಗೊತ್ತಾದ ಸೇವಾವಧಿ ನಂತರ ನಿವೃತ್ತಿಗೊಳಿಸುವುದು ಇವೇ ಮೊದಲಾದ ಉದ್ಯೋಗಕ್ಕೆ ಸಂಬಂಧಿಸಿದ ಕ್ರಮಬದ್ಧ ವ್ಯವಹಾರಗಳನ್ನು ಎರಡನೆಯ ಘಟ್ಟವೆನ್ನಬಹುದು.

ಮೇಲ್ಕಂಡ ಉದ್ಯೋಗದ ಹಂತಗಳನ್ನು ವ್ಯವಹಾರ ಪತ್ರಗಳ ಹಿನ್ನೆಲೆಯಲ್ಲಿ ಈ ರೀತಿ ವರ್ಗೀಕರಿಸಬಹುದು. ಜಾಹೀರಾತು, ಅಭ್ಯರ್ಥನ, ಸಂದರ್ಶನ ಪತ್ರಗಳು; ನೇಮಕಾತಿ, ಹಾಜರಾತಿ ಬಡ್ತಿ, ವಜಾ ಪತ್ರಗಳು; ಶಿಕ್ಷೆ, ರದ್ದು, ರಾಜಿನಾಮೆ, ನಿವೃತ್ತಿ ಪತ್ರಗಳು ಎಂದು ಹಲವು ಬಗೆಗಳನ್ನಾಗಿ ವರ್ಗೀಕರಿಸಬಹುದಾಗಿದೆ.

ಈ ಪತ್ರಗಳನ್ನು ಸಾಧಾರಣವಾಗಿ ಕಚೇರಿ ಸಿಬ್ಬಂದಿ, ಆಡಳಿತ ಮಂಡಳಿಯ ಸೂಚನೆ ಆದೇಶಾನುಸಾರವಾಗಿ ಸಿದ್ಧಪಡಿಸುತ್ತದೆ. ಒಂದು ರೀತಿಯಲ್ಲಿ ವಿಷಯ ನಿರ್ಧಾರ ಆಡಳಿತ ಮಂಡಳಿಯದು; ನಿರೂಪಣೆ ಜಾರೀಕರಣ ಕಚೇರಿ ಸಿಬ್ಬಂದಿಯದು ಎನ್ನಬಹುದು. ಒಟ್ಟಿನಲ್ಲಿ ಉದ್ಯೋಗ ಪತ್ರಗಳು ಕಚೇರಿ ಸಿಬ್ಬಂದಿ ಮತ್ತು ಆಡಳಿತ ವರ್ಗದ ಜಂಟಿ ಹೊಣೆಗಾರಿಕೆಗೆ ಸೇರಿವೆ ಎನ್ನಬಹುದು. ಹೀಗೆ ವ್ಯಕ್ತಿಗಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವುದರಿಂದ ಪ್ರಾರಂಭಿಸಿ ನಿವೃತ್ತಿ ಅಥವಾ ವಜಾ ಆಗುವವರೆಗೆ ವ್ಯಕ್ತಿಯ ನೌಕರಿಗೆ ಸಂಬಂಧಿಸಿದ ಪತ್ರಗಳನ್ನು ಉದ್ಯೋಗ ಪತ್ರಗಳೆಂದು ಕರೆಯಬಹುದು.

ಮಹತ್ವ

ಉದ್ಯೋಗ ವ್ಯವಹಾರ ಪತ್ರಗಳಿಗೆ ವಿಶೇಷ ಮಹತ್ವವಿದೆ. ನಿರುದ್ಯೋಗ ಹೆಚ್ಚುತ್ತಿರುವ ಪ್ರಸ್ತುತ ಕಾಲದಲ್ಲಿ ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಕಾಲ ಹೋಗಿ ‘ಉದ್ಯೋಗಂ ಸ್ತ್ರೀ ಲಕ್ಷಣಂ’ ಸಹ ಆಗಿರುವ ಈ ಕಾಲದಲ್ಲಿ ಪೈಪೋಟಿ ಹೆಚ್ಚುತ್ತಿದೆ. ಆದ ಕಾರಣ, ಅಭ್ಯರ್ಥಿಗಳನ್ನು ಆಯುವುದು, ನೇಮಕ ಮಾಡುವುದು ಸುಲಭದ ಕೆಲಸವಲ್ಲ. ಅರ್ಹತೆ, ಅನುಭವಗಳನ್ನು ಗಮನಿಸುವುದರ ಜೊತೆಗೆ ‘ವಶೀಲಿ ಲಂಚ’ ಗಳ ವಿರುದ್ಧ ಉದ್ಯೋಗದಾತರು ಹೋರಾಡಬೇಕಾಗಿದೆ. ವಾಣಿಜ್ಯ ಕ್ಷೇತ್ರದಲ್ಲಿ ದಕ್ಷ ವ್ಯಕ್ತಿಗಳ ಆಯ್ಕೆ ಅತಿಮುಖ್ಯ; ಇಲ್ಲದಿದ್ದರೆ ಸಂಸ್ಥೆ ಬಹುಬೇಗ ಕಣ್ಣು ಮುಚ್ಚುತ್ತದೆ. ಸರಕು ಉತ್ಪಾದನೆ, ಸಕಾಲದಲ್ಲಿ ಸರಕನ್ನು ಪೂರೈಸುವುದು, ಸಮಸ್ಯೆಗಳ ಪರಿಹಾರ ಮಾಡಲು ಅರ್ಹ ವ್ಯಕ್ತಿಗಳು ಸದಾ ಸಿದ್ಧರಿರಬೇಕಾಗುತ್ತದೆ. ಅಂಥವರನ್ನು ಬೇಕಾದಾಗ ಸರಕನ್ನು ಕೊಂಡುಕೊಳ್ಳುವಂತೆ ಪಡೆಯಲಾಗದು. ಇಂಥವರನ್ನು ಸಂಬಳ ನೀಡಿ ಖಾಯಂ ಆಗಿ ನೇಮಕ ಮಾಡಿಕೊಳ್ಳಬೇಕು. ಈ ಕಾರಣದಿಂದ ಜಾಹೀರಾತು ಅತ್ಯಗತ್ಯ. ದಕ್ಷ ಉದ್ಯೋಗಿಗಳಿದ್ದರೆ ಉತ್ಪಾದನೆಯಲ್ಲಿ ನಷ್ಟವುಂಟಾಗುವುದಿಲ್ಲ. ಬೇಡಿಕೆ ತಗ್ಗುವುದಿಲ್ಲ; ವಸೂಲಿ ಸಮರ್ಪಕವಾಗಿ ನಡೆಯುತ್ತದೆ; ಆಡಳಿತ ವರ್ಗಕ್ಕೆ ಮಾರ್ಗದರ್ಶನವೂ ಲಭಿಸುತ್ತದೆ.

ಜಾಹೀರಾತಿನ ಮಹತ್ವ

ವ್ಯವಹಾರ ನಡೆಸಲು ಹಣಬೇಕು ನಿಜ. ಆದರೆ ಹಣವಷ್ಟೇ ಸಾಲು, ಜನಬೇಕು. ಜನ ಎಂದರೆ ಸಂತೆ ಮಂದಿಯಲ್ಲ. ಅವರು ವಿದ್ಯಾವಂತರೂ ಅನುಭವಸ್ಥರೂ ದಕ್ಷರೂ ಪ್ರಾಮಾಣಿಕರೂ ತಜ್ಞರೂ ಆಗಿರಬೇಕು. ಇಂಥ ವ್ಯಕ್ತಿಗಳು ನಾಡಿನಾದ್ಯಂತ ಹರಿದು ಹಂಚಿಹೋಗಿರುತ್ತಾರೆ. ಮಾಲೀಕ ಅಥವಾ ಆಡಳಿತ ವರ್ಗ ಇಂಥ ಜನರ ಸೇವೆ ಪಡೆದು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಂಬಳದ ಮೂಲಕ ಅಥವಾ ಇತರ ಪ್ರತಿಫಲದ ಮೂಲಕ ಖಾಯಂ ಆಗಿ ಅಥವಾ ಹಂಗಾಮಿಯಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಆಯ್ಕೆಯಾಗಿ ನೀಡುವ ಪ್ರಕಟನೆಯೇ ಜಾಹೀರಾತು. ಮಾಲೀಕ-ಅಭ್ಯರ್ಥಿ ಬೇರೆ ಬೇರೆ ಎಡೆಗಳಲ್ಲಿರುವುದರಿಂದ ಅವರಿಬ್ಬರ ಅವಶ್ಯಕತೆಗಳ ಪರಸ್ಪರ ಅರಿವಿಲ್ಲದಿರುವುದರಿಂದ ಇಬ್ಬರಿಗೂ ಇರುವ ಸಂಪರ್ಕ ಮಾಧ್ಯಮವೆಂದರೆ ‘ಜಾಹೀರಾತು’ ಜಾಹೀರಾತಿಲ್ಲದೆ ನೇರವಾಗಿ ವ್ಯಕ್ತಿಯನ್ನು ಭೇಟಿ ಮಾಡುವುದೂ ಬಾಯಿ ಮಾತಿನಲ್ಲಿ ನೇಮಕ ಮಾಡಿಕೊಳ್ಳುವುದು ಸುಲಭವಲ್ಲ. ಉಚಿತವೂ ಅಲ್ಲ. ದೈಹಿಕ ಶ್ರಮದ ಕೂಲಿ ಕೆಲಸ ಮೊದಲಾದವುಗಳಲ್ಲಿ ಈ ಬಗೆಯ ನೇರ ಭೇಟಿ, ಬಾಯಿ ಮಾತಿನ ಮೂಲಕ ನೇಮಕ ಸಾಧ್ಯವಾಗಬಹುದಾದರೂ ಕ್ರಮಬದ್ದ ಉದ್ಯೋಗಗಳಿರುವ ಸಂಸ್ಥೆಯಲ್ಲಂತೂ ಸಾಧ್ಯವಿಲ್ಲ. ಆದಕಾರಣ, ಉದ್ಯೋಗಗಳಿಗಾಗಿ ಜಾಹೀರಾತು ಅನಿವಾರ್ಯ ಸಾಧನವಾಗಿದೆ.

ಜಾಹೀರಾತು ಒಂದು ಕಲೆ

ಜಾಹೀರಾತು ನೀಡುವುದು ಅಗತ್ಯವಾದರೂ, ಜಾಹೀರಾತನ್ನು ರಚಿಸುವುದು, ಪ್ರಚುರಪಡಿಸುವುದು ಸುಲಭದ ಕೆಲಸವಲ್ಲ; ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ವಿಶಿಷ್ಟ ಅರ್ಹತೆಗಳಿರಬೇಕು. ಆದ ಕಾರಣ ಜಾಹೀರಾತುಗಳನ್ನು ಭಿನ್ನ ಭಿನ್ನ ಜನರ ಅವಶ್ಯಕತೆಗಳಿಗೆ ತಕ್ಕಂತೆ ಸಿದ್ಧಪಡಿಸಿ ಪ್ರಚುರಿಸಲು ಅನೇಕ ಸಂಸ್ಥೆಗಳಿವೆ. ಜಾಹೀರಾತು ಸಂಸ್ಥೆಗಳು ಗೊತ್ತಾದ ಶುಲ್ಕವನ್ನು ಪಡೆದು ವ್ಯಕ್ತಿ ಅಥವಾ ಸಂಸ್ಥೆಗಳಿಗಾಗಿ ಈ ಕಾರ್ಯವನ್ನು ನಿರ್ವಹಿಸುತ್ತವೆ. ಬ್ಯಾಂಕುಗಳೂ, ಬೃಹತ್ ಸಂಸ್ಥೆಗಳೂ ಪ್ರಕಟಣೆ ಪ್ರಚಾರಗಳಿಗಾಗಿ ತಮ್ಮದೇ ಆದ ಜಾಹೀರಾತು ವಿಭಾಗಗಳನ್ನೂ ಪ್ರತ್ಯೇಕ ಸಿಬ್ಬಂದಿಯನ್ನೂ ಹೊಂದಿರುತ್ತದೆ. ಜಾಹೀರಾತು ಎಂದರೆ ಕೇವಲ ಉದ್ಯೋಗಗಳಿಗೆ ಮೀಸಲಾದ ಪ್ರಕಟಣೆ ಎಂದು ತಿಳಿಯಬೇಕಿಲ್ಲ. ಇತರ ನಾನಾ ಉದ್ದೇಶಗಳಿಗಾಗಿಯೂ ಅವನ್ನು ಬಳಸುತ್ತಾರೆ. ಎಲ್ಲ ವರ್ಗದ ಜನರೂ ಎಲ್ಲ ಸಂಸ್ಥೆಗಳೂ ಅನೇಕ ಕಾರಣಗಳಿಗಾಗಿ ನಾನಾ ರೀತಿಯಲ್ಲಿ ಜಾಹೀರಾತುಗಳನ್ನು ಬಳಸುತ್ತಾರೆ. ಜಾಹೀರಾತನ್ನು ಪ್ರಕಟಿಸಿದ ಅಥವಾ ಗಮನಿಸಿದ ಸಂಸ್ಥೆ ಮತ್ತು ವ್ಯಕ್ತಿಗಳಿಲ್ಲ ಎಂದರೆ ತಪ್ಪಾಗುವುದಿಲ್ಲ.

ಜಾಹೀರಾತಿನ ಸಾಮಾನ್ಯ ಲಕ್ಷಣಗಳು

ಯಾವ ವರ್ಗದ ಜಾಹೀರಾತೇ ಆಗಿರಲಿ, ಅದು ಕೆಲವು ಸಾಮಾನ್ಯ ಲಕ್ಷಣಗಳನ್ನು ಒಳಗೊಂಡಿರುತ್ತದೆ; ಅಂತೆಯೇ ವಿಶಿಷ್ಟ ಲಕ್ಷಣಗಳನ್ನೂ ಹೊಂದಿರುತ್ತದೆ.

೧. ಜಾಹೀರಾತು ಮುಖ್ಯವಾಗಿ ಉದ್ಯೋಗದಾತನ ಅವಶ್ಯಕತೆಗೆ ಅನುಸಾರವಾಗಿ ಪ್ರಕಟವಾಗುತ್ತದೆ; ಅದಕ್ಕೆ ಅನುಗುಣವಾದ ಅರ್ಹತೆಗಳನ್ನೂ ಉದ್ಯೋಗದಾತ ನಿರೀಕ್ಷಿಸುತ್ತಾನೆ. ಉದಾಹರಣೆಗೆ, ಅಡಿಗೆ ಕೆಲಸಕ್ಕೆ ಪಾಕಶಾಸ್ತ್ರ ಪ್ರಾವೀಣ್ಯದ ಅರ್ಹತೆಯನ್ನು ಗಮನಿಸಲಾಗುತ್ತದೆಯೇ? ಹೊರತು, ಅವನ ವಿದ್ಯಾರ್ಹತೆ ಎಷ್ಟು? ಎಷ್ಟೆತ್ತರದ ಆಳು? ಯಾವ ಬಣ್ಣ? ಬರವಣಿಗೆ ಸುಂದರವಾಗಿದೆಯೇ? ಇತ್ಯಾದಿ ಅಂಶಗಳನ್ನು ಗಮನಿಸಲಾಗದು. ಕಾವಲುಗಾರನ ಕೆಲಸಕ್ಕೆ ದೃಢಾಂಗದ, ಚುರುಕು ದೃಷ್ಟಿಯ, ಆರೋಗ್ಯವಂತ, ಪ್ರಾಮಾಣಿಕ ಆಳು ಬೇಕೇ ಹೊರತು, ಅವನು ಲೇಖನ ಬರೆದಿರಬೇಕು. ಬಡವನಾಗಿರಬೇಕು. ಇಂಥ ಜಿಲ್ಲೆಯವನಾಗಿರಬೇಕು ಎಂಬ ಮುಂತಾದ ಅಂಶಗಳು ಮುಖ್ಯವಲ್ಲ.

೨. ಜಾಹೀರಾತಿನಲ್ಲಿ, ಆಯಾ ಉದ್ಯೋಗಕ್ಕೆ ಅವಶ್ಯಕವಾದ ಅಂಶಗಳನ್ನೆಲ್ಲ ಸ್ಪಷ್ಟವಾಗಿ ವಿವರವಾಗಿ ಪ್ರಕಟಿಸಬೇಕು. ಅದಕ್ಕಾಗಿ ಕೆಲವು ಸಂಸ್ಥೆಗಳು ನಿರ್ದಿಷ್ಟ ನಮೂನೆಗಳನ್ನು ಪ್ರಕಟಿಸಿ ಅವುಗಳ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ನಿಯಮ ವಿಧಿಸುತ್ತದೆ; ಮತ್ತೆ ಕೆಲವು ಸಂಸ್ಥೆಗಳು ಮುಖ್ಯಾಂಶಗಳ ಶೀರ್ಷಿಕೆಯನ್ನು ತಿಳಿಸಿ, ಅಭ್ಯರ್ಥಿಗಳು ಸ್ವಯಂ ಲಿಖಿತ ಬಿನ್ನಹ ಕಳಿಸಲು ತಿಳಿಸುತ್ತಾರೆ.

೩. ಯಾವುದೇ ಜಾಹೀರಾತಾದರೂ ಮನ ಸೆಳೆಯುವಂತಿರಬೇಕು; ನಿರಾಸೆಗೊಂಡ ನಿರುದ್ಯೋಗಿಗಳಿಗೆ ಆಸೆ ಹುಟ್ಟಿಸುವಂತಿರಬೇಕು. ಪದಾರ್ಥಗಳ ಮಾರಾಟದ ಜಾಹೀರಾತು ಆಗಿದ್ದಲ್ಲಿ ವಸ್ತುಗಳ ಬಳಕೆಯ ಮಹತ್ವ, ಆಕಾರ, ಬೆಲೆ ಇತ್ಯಾದಿಗಳನ್ನು ಸುಚಿತ್ರವಾಗಿ ವರ್ಣರಂಜಿತವಾಗಿ ಪ್ರಕಟಗೊಂಡಿದ್ದು ಉಳಿದ ತಯಾರಿಕೆಗಳನ್ನು ತೊರೆದು ಇದಕ್ಕೆ ಒಲಿಯುವಂತಿರಬೇಕು. ಈ ಕಾರಣದಿಂದ, ಕೆಲವು ವ್ಯಾಪಾರ ಸಂಸ್ಥೆಗಳು ತಮ್ಮದೇ ಆಗ ವಿನ್ಯಾಸ-ಸಾಹಿತ್ಯದಿಂದ ಪ್ರತ್ಯೇಕವಾಗಿ ಪುಟಗಟ್ಟಲೆ ಜಾಹೀರಾತನ್ನು ಪ್ರಕಟಿಸುತ್ತದೆ. ಅನೇಕ ಜಾಹೀರಾತುಗಳು ವರ್ಗೀಕೃತ ಜಾಹೀರಾತು ವಿಭಾಗದಲ್ಲಿ ಪ್ರಕಟವಾಗುತ್ತವೆ; ಇಲ್ಲಿ ವಿವರಗಳು ಮುಖ್ಯವೇ ಹೊರತು ಅಂದ ಚಂದದ ಆಕರ್ಷಕ ಚಿತ್ರಗಳಲ್ಲ. ನಿರ್ದಿಷ್ಟ ನಮೂನೆಗಳನ್ನು ಬಳಸುವ ಸಂಸ್ಥೆಗಳು ಜಾಹೀರಾತನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತವೆ.

೪. ಜಾಹೀರಾತಿನಲ್ಲಿ, ವಿವರಗಳು ಅಸ್ಪಷ್ಟವಾಗಿರಬಾರದು; ಸುದೀರ್ಘವಾಗಿರಬಾರದು; ನೀರಸ ನುಡುಗಳಿರಬಾರದು; ಉಚಿತ ಪದ ಪ್ರಯೋಗ, ಅರ್ಥಪೂರ್ಣ ವಾಕ್ಯಗಳ ಬಳಕೆ, ಸರಳ ಹಾಗು ಚಮತ್ಕಾರ ರಚನೆ ಇರಬೇಕು. ಜಾಹೀರಾತು ಥಟ್ಟನೆ ಓದುಗನ ಮನಸ್ಸನ್ನು ಸೆರೆ ಹಿಡಿಯುವಂತಿರಬೇಕು. ಬೇಸರವನ್ನುಂಟು ಮಾಡುವ ಸಾಹಿತ್ಯಕ ಜಾಹೀರಾತು ಶ್ರೇಷ್ಟ ವ್ಯಕ್ತಿಗಳನ್ನು ಕಳೆದುಕೊಳ್ಳುತ್ತದೆ ಎಂಬ ಮಾತನ್ನ ನೆನಪಿನಲ್ಲಿಟ್ಟಿರಬೇಕು.

೫. ಜಾಹೀರಾತಿನ ದೃಶ್ಯಾಂಶಗಳಾಗಲೀ ವಾಚಾನಾಂಶಗಳಾಗಲೀ ಗುಣಮಟ್ಟದಲ್ಲಿ ಉತ್ತಮವಿರಬೇಕು. ಅಶ್ಲೀಲ ಜಾಹೀರಾತುಗಳು, ಸತ್ಯಕ್ಕೆ ದೂರವಾದ ಸಂಗತಿಗಳ ಜಾಹೀರಾತುಗಳು ಅರ್ಹ ವ್ಯಕ್ತಿಗಳನ್ನೂ ಸತ್ಪುರುಷರನ್ನೂ ಸೆಳೆಯಲಾರವು. ಉದಾಃ ಅಶ್ಲೀಲ ಭಿತ್ತಿ ಚಿತ್ರಗಳ ಚಲನಚಿತ್ರಗಳು ಎಂದೂ ಜನಮನ್ನಣೆಯನ್ನು ಪಡೆದಿಲ್ಲ. ಅತಿ ಹೆಚ್ಚಿನ ಮಾರಾಠದ ‘ನಂ.೧’ ‘ಸರ್ವೋತ್ಕೃಷ್ಟ ಇದೊಂದೇ’ ಇತ್ಯಾದಿ ಮಾತುಗಳು ಅನೇಕ ಜಾಹೀರಾತುಗಳಲ್ಲಿ ಉತ್ಪ್ರೇಕ್ಷೆಯ ಮಾತುಗಳಾಗಿದದು ಅದಕ್ಕೆ ಜನ ವಿಶೇಷ ಮಹತ್ವವನ್ನು ನೀಡುವುದಿಲ್ಲ.