ಸ್ವರೂಪ ಮಹತ್ವ

ನಿರುದ್ಯೋಗಿ ಪದವೀಧರರಿಗೆ ಪತ್ರಿಕೆಗಳಲ್ಲಿ ಉದ್ಯೋಗಿಗಳ ಜಾಹೀರಾತುಗಳನ್ನು ನೋಡಿದಾಗ ಬಾಯಾರಿದವನು ಮರುಭೂಮಿಯಲ್ಲಿ ನೀರಿನ ಚಿಲುಮೆಯನ್ನು ಕಂಡಂತೆ ಸಂತೋಷವಾಗುತ್ತದೆ. ಅವರಲ್ಲಿ ಉತ್ಸಾಹ ಮೂಡಿ, ನಿರಾಸೆಯೆಂಬ ಒಣಗಿದ ಮರ ಚಿಗುರುತ್ತದೆ; ಕೆಲಸವೆಂಬ ‘ಫಲ’ ಸಿಗುತ್ತದೆ ಎಂಬ ಆಸೆ ಮೂಡುತ್ತದೆ. ಇಂಥ ಆಸೆ ಭಗ್ನವಾಗದಿರಬೇಕಾದರೆ ಉದ್ಯೋಗಪೇಕ್ಷಿಗಳು ಉತ್ತಮ ಅಭ್ಯರ್ಥನ ಪತ್ರಗಳನ್ನು ಸಿದ್ಧಪಡಿಸಬೇಕಾಗುತ್ತದೆ.

ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತಿಗನುಸಾರವಾಗಿ ಅರ್ಹ ಪದವೀಧರನು ಉದ್ಯೋಗದಾತರಿಗೆ ಬರೆಯುವ ಪತ್ರಗಳನ್ನು ಅಭ್ಯರ್ಥನ ಪತ್ರಗಳು ಅಥವಾ ಪ್ರಾರ್ಥನಾ ಪತ್ರಗಳೆಂದು ಕರೆಯುವುದ; ಇವನ್ನು ಅರ್ಜಿಗಳೆಂದೂ ಕರೆಯುವುದುಂಟು.

ಪತ್ರವು ಕೇವಲ ಯಾರಿಗೆ ಬರೆದದ್ದು ಎಂದಷ್ಟೇ ತಿಳಿಸುವುದಿಲ್ಲ, ಬರೆದವರು ಎಂಥವರು ಎಂಬುದನ್ನೂ ತಿಳಿಸುತ್ತದೆ. ಎಷ್ಟೋ ವ್ಯಕ್ತಿಗಳು ಅರ್ಹತೆ, ಪ್ರತಿಭೆಗಳನ್ನು ಹೊಂದಿದ್ದಾಗಲೂ ಕೆಟ್ಟ ಅಭ್ಯರ್ಥನ ಪತ್ರಗಳ ಕಾರಣದಿಂದ ಉದ್ಯೋಗ ವಂಚಿತರಾಗಿರುವುದೂ ಉಂಟು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ತಪ್ಪಿಲ್ಲದ ಅರ್ಜಿ ಬರೆದರೆ ಸಾಲದು; ಉದ್ಯೋಗ ದೊರಕಿಸಿಕೊಳ್ಳಲು ಆಕರ್ಷಕ ಶೈಲಿಯ ಸುಂದರ ನಿರೂಪಣೆಯ ಸರ್ಜಿಗಳು ಬೇಕು. ನಿಜ ಹೇಳಬೇಕಾದರೆ ಅರ್ಜಿ, ಅಭ್ಯರ್ಥಿಯ ಅಂತರಂಗದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅಚ್ಚಾದ ಅರ್ಜಿ ಭರ್ತಿ ಮಾಡುವುದು ಅಥವಾ ಬಿಳಿ ಹಾಳೆಯ ಮೇಲೆ ಅರ್ಜಿ ಬರೆಯುವುದು ಕೇವಲ ಯಾಂತ್ರಿಕ ಕಾರ್ಯವಲ್ಲ; ಅದೊಂದು ಕುಶಲಕಲೆ, ಜಾಣ್ಮೆಯ ಪ್ರದರ್ಶನ, ಪ್ರತಿಭೆಯ ದ್ಯೋತಕ, ವ್ಯಕ್ತಿಗೆ ಅರ್ಹತೆಯೆಂಬುದು ಅದೃಷ್ಟದ ಕೀಲಿ. ಯಶಸ್ವಿ ಅರ್ಜಿ ಕೇವಲ ಸಂದರ್ಶನವನ್ನಷ್ಟೇ ಅಲ್ಲ. ಉದ್ಯೋಗವನ್ನೂ ದೊರಕಿಸಿಕೊಡುವುದರಲ್ಲಿ ನೆರವಾಗಬಲ್ಲದು. ಆದರೆ ಅರ್ಜಿದಾರನು ಅರ್ಜಿ ಬರೆಯುವಾಗ ಅಥವಾ ಭರ್ತಿ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಪ್ರಸನ್ನ ಚಿತ್ತವುಳ್ಳವನಾಗಿರಬೇಕು, ಪರೀಕ್ಷಾರ್ಥಿಯಂತೆ ಉತ್ತರ ನೀಡಬೇಕು.

ಸರಿಯಾಗಿ ಹೂಡದ ಬಾಣ ಗುರಿತಪ್ಪಿ ಇನ್ನಾರಿಗೋ ತಾಗುವಂತೆ ಅನುಚಿತ ಅರ್ಜಿ ಆಯ್ಕೆ ಪಟ್ಟಿಗೆ ಸೇರುವ ಬದಲು ಕಸದ ಬುಟ್ಟಿಯಲ್ಲಿ ವಿರಾಜಿಸುತ್ತದೆ. ಅರ್ಜಿಯೇ ಬರೆಯಲು ಬಾರದವ ಇನ್ನೇನು ಮಾಡಬಲ್ಲ ಎನ್ನಿಸಿಬಿಡಬಹುದು; ವ್ಯಕ್ತಿತ್ವವನ್ನು ಕುಬ್ಜಗೊಳಿಸಿ ಬಿಡಬಹುದು. ಆದ್ದರಿಂದ ಸಮರ್ಪಕ ರೀತಿಯಲ್ಲಿ ಅಭ್ಯರ್ಥನ ಪತ್ರಗಳನ್ನು ಸಿದ್ಧಪಡಿಸುವುದು ಉಭಯತ್ರರಿಗೂ ಕ್ಷೇಮ. ಇಲ್ಲಿ ‘ಅರ್ಭರ್ಥನ ಪತ್ರ’ ಹೇಗಿರಬೇಕು? ಸಾಧಾರಣವಾಗಿ ಅದು ಯಾವ ಅಂಶಗಳನ್ನು ಒಳಗೊಂಡಿರಬೇಕು? ಅಭ್ಯರ್ಥಿ ಗಮನಿಸಬೇಕಾದ ಅಂಶಗಳಾವುವು? ಎಂಬುದನ್ನು ನಿದರ್ಶನಗಳೊಡನೆ ವಿಸ್ತಾರವಾಗಿ ವಿವರಿಸಲಾಗಿದೆ.

ವರ್ಗೀಕರಣ

ಜಾಹೀರಾತುದಾರರು ಅಭ್ಯರ್ಥನ ಪತ್ರಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸುತ್ತಾರೆ. ಹಲವಾರು ಉದ್ಯೋಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದರೆ ಆಯಾ ಉದ್ಯೋಗಾನುಸಾರ, ಒಂದೇ ಉದ್ಯೋಗವಾದಲ್ಲಿ ಅರ್ಹತಾನುಸಾರ ವಿದ್ಯಾಭ್ಯಾಸದಲ್ಲಿ ಪಡೆದ ಅಂಕಗಳ ಶೇಕಡಾವಾರು, ಹುದ್ದೆಗಳನ್ನು ವಿವಿಧ ವರ್ಗಗಳಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾರ್ವತ್ರಿಕ ಇತ್ಯಾದಿ ವರ್ಗದವರಿಗಾಗಿ ಮೀಸಲಾಗಿರಿಸಿದ್ದರೆ ಆ ರೀತಿ ಮೊದಲ ಹಂತವಾಗಿ ವರ್ಗಿಕರಿಸುತ್ತಾರೆ. ಮತ್ತೆ ಆಯಾ ವರ್ಗದ ಅರ್ಜಿಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಗೊತ್ತಾದ ಕ್ರಮದಲ್ಲಿ ಅರಿಸುತ್ತಾರೆ. ಅನಂತರ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರಗಳನ್ನು ಕಳಿಸಲಾಗುತ್ತದೆ.

ಅಭ್ಯರ್ಥಿಗಳ ದೃಷ್ಟಿಯಲ್ಲಿ ಹೇಳುವುದಾದರೆ, ಅರ್ಜಿದಾರರು ಅರ್ಜಿಗಳನ್ನು ಉದ್ಯೋಗದಾತರಿಗೆ ಎರಡು ಬಗೆಯಲ್ಲಿ ಸಲ್ಲಿಸುತ್ತಾರೆ. ಮೊದಲನೆಯ ವರ್ಗವನ್ನು ಜಾಹೀರಾತು ಆಧಾರಿತ ಅಭ್ಯರ್ಥನ ಪತ್ರಗಳೆಂದೂ ಎರಡನೆಯ ವರ್ಗವನ್ನು ‘ಸ್ವಯಂ ನಿವೇದಿತ ಅಭ್ಯರ್ಥನ ಪತ್ರಗಳೆಂದೂ ಕರೆಯಬಹುದು.

ಸ್ವಯಂ ನಿವೇದಿತ ಅರ್ಜಿ

ಸ್ವಯಂ ನಿವೇದಿತ ಅರ್ಜಿಗಳನ್ನು ಅರ್ಜಿದಾರರು, ಜಾಹೀರಾತು ಇಲ್ಲದಿದ್ದರೂ, ಉದ್ಯೋಗ ಸಿಗಬಹುದೆಂಬ ನಿರೀಕ್ಷೆಯಿಂದ ಅಥವಾ ಕೆಲಸ ಖಾಲಿ ಇರಬಹುದು ಎಂಬ ಭಾವನೆಯಿಂದ ಇಲ್ಲವೇ ಕೆಲಸ ಖಾಲಿ ಇದೆ ಎಂಬ ಸುದ್ದಿಯನ್ನು ಸಂಸ್ಥೆಯಲ್ಲಿರುವ ವ್ಯಕ್ತಿಗಳೋ ಮಿತ್ರರೋ ತಿಳಿಸಿದ್ದರಿಂದ ತಾವಾಗಿ ಆ ಬಗ್ಗೆ ಅರ್ಜಿ ಸಲ್ಲಿಸುತ್ತಾರೆ. ಇವನ್ನು ‘ಸ್ವಯಂ ನಿವೇದಿತ ಅರ್ಜಿ’ ಗಳೆನ್ನುವರು.

ನೌಕರಿಗೆ ಜನ ಬೇಕಾಗಿದ್ದಾರೆ ಎಂದು ಜಾಹೀರಾತುಗಳ ಮೂಲಕ ಘೋಷಿಸಿದಾಗ ಅರ್ಜಿದಾರ ಸಲ್ಲಿಸುವ ಪತ್ರವನ್ನು ‘ಜಾಹೀರಾತು ಆಧಾರಿತ ಅರ್ಜಿಗಳು’ ಎಂದು ಕರೆಯುತ್ತಾರೆ.

ಜಾಹೀರಾತು ಆಧಾರಿತ ಅರ್ಜಿಗಳಲ್ಲಿ ಇಷ್ಟೇ ಅಂಶಗಳನ್ನು ತಿಳಿಸಬೇಕು. ಹೀಗೆಯೇ ತಿಳಿಸಬೇಕು ಎಂದು ನಮೂದಿಸುವುದರಿಂದ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವುದಷ್ಟೇ ಕೆಲಸ. ಜಾಹೀರಾತಿನಲ್ಲಿ ನಿರ್ದಿಷ್ಟ ಅರ್ಜಿ ನಮೂನೆ ಇರುತ್ತದೆ. ಅಥವಾ ಇಂಥಿಂಥ ವಿಷಯಗಳನ್ನು ತಿಳಿಸಿ ಎಂದಿರುತ್ತದೆ. ಆದರೆ ಸ್ವಯಂ ನಿವೇದಿತ ಅರ್ಜಿಗಳಿಗೆ ನಿರ್ದಿಷ್ಟ ನಮೂನೆ ಇರುವುದಿಲ್ಲ. ಆದರೂ ಅರ್ಜಿದಾರ ಅಗತ್ಯ ಮಾಹಿತಿಗಳನ್ನೆಲ್ಲ ತಿಳಿಸಬೇಕು. ಸ್ವಯಂ ನಿವೇದಿತ ಅರ್ಜಿದಾರನಿಗೆ ಕೆಲವು ಅನುಕೂಲಗಳಿವೆ. ಮೊದಲನೆಯದಾಗಿ, ಕೆಲಸ ಖಾಲಿ ಇರುವ ಸುದ್ದಿ ಅನೇಕ ಜನರಿಗೆ ತಿಳಿದಿರುವುದಿಲ್ಲ. ಏಕೆಂದರೆ ಆ ಬಗ್ಗೆ ಜಾಹೀರಾತು ಇರುವುದಿಲ್ಲ. ಇದರಿಂದ ಸ್ಪರ್ಧೆ ಕಡಿಮೆ ಎರಡನೆಯದಾಗಿ, ಒಂದೇ ಬಗೆಯ ಅರ್ಜಿಗಳನ್ನು ಏಕಕಾಲದಲ್ಲಿ ಅನೇಕ ಸಂಸ್ಥೆಗಳಿಗೆ ಉದ್ಯೋಗಗಳಿಗೆ ಸಲ್ಲಿಸಬಹುದು.

ಈ ವಿಧಾನದಲ್ಲಿಯೂ ಕೆಲವು ಅನಾನುಕೂಲಗಳಿವೆ. ಅರ್ಜಿದಾರನಿಗೆ ಉದ್ಯೋಗ ಖಾಲಿ ಇರುವ ಸಂಗತಿ ಅಥವಾ ಭರ್ತಿ ಮಾಡುವ ವಿಚಾರ ಇಲ್ಲವೇ ಅದಕ್ಕಾಗಿ ಇರುವ ನಿಯಮಗಳು ಖಚಿತವಾಗಿ ತಿಳಿಯದ ಕಾರಣ ಅರ್ಜಿದಾರನಿಗೆ ಉದ್ಯೋಗದ ಬಗ್ಗೆ ಸ್ಪಷ್ಟ ಚಿತ್ರಣವಿರುವುದಿಲ್ಲ. ಆದ್ದರಿಂದ ಅರ್ಜಿದಾರನು ಮಾಲೀಕನಿಗೆ ಅಗತ್ಯವಾದ ವಿವರಗಳಾವುವು ಎಂಬುದನ್ನು ಊಹಿಸಿಕೊಂಡು ಅರ್ಜಿಯನ್ನು ಸಿದ್ದಪಡಿಸಬೇಕಾಗುತ್ತದೆ.

ಸ್ವಯಂ ನಿವೇದಿತ ಪ್ರಾರ್ಥನಾ ಪತ್ರಗಳನ್ನು ಪ್ರಾರಂಭ ಮಾಡುವಾಗ ‘ನೌಕರಿ ಖಾಲಿ ಇದೆ ಎಂದು ಭಾವಿಸಿ ಅರ್ಜಿ ಸಲ್ಲಿಸುತ್ತಿದ್ದೇನೆ…’ ‘…. ಅವರಿಂದ ತಿಳಿದು ಬಂದಿತು’… ಆದ್ದರಿಂದ ಅರ್ಜಿ ಸಲ್ಲಿಸುತ್ತಿದ್ದೇನೆ ಇತ್ಯಾದಿ ಬರೆಯಬೇಕು.

ಬಿಳಿ ಹಾಳೆಯಲ್ಲಿ ನೀಲುಕಪ್ಪು ಇಲ್ಲವೆ ನೀಲು ಶಾಯಿಯಲ್ಲಿ ಅರ್ಜಿಯನ್ನು ಬರೆಯಬೇಕು. ಉದ್ಯೋಗದಾತರಿಂದ ಉತ್ತರ ಪಡೆಯುವುದಕ್ಕಾಗಿ ಸ್ವವಿಳಾಸ ಅಂಚೆ ಲಕೋಟೆಯನ್ನಿಡಬೇಕು. ಉಳಿದೆಲ್ಲ ಸಂಗತಿಗಳಲ್ಲಿ ಅಭ್ಯರ್ಥಿ ಅರ್ಜಿ ಬರೆಯುವಾಗ ಗಮನಿಸಬೇಕಾದ ವಿವರಗಳನ್ನೆಲ್ಲಾ ಅನುಸರಿಸಬೇಕು.

ಜಾಹೀರಾತು ಆಧಾರಿತ ಅಭ್ಯರ್ಥಿನ ಪತ್ರ

ಜಾಹೀರಾತನ್ನು ಆಧರಿಸಿದ ಅಭ್ಯರ್ಥನ ಪತ್ರಗಳೇ ಅಧಿಕವಾಗಿರುತ್ತವೆ. ಈ ಬಗೆಯ ನೌಕರಿ ಜಾಹೀರಾತುಗಳಲ್ಲಿ ಎರಡು ಬಗೆ; ಅರ್ಜಿ ನಮೂನೆ ನೀಡಿರುವ ಜಾಹೀರಾತುಗಳು, ಅರ್ಜಿ ನಮೂನೆ ಇಲ್ಲದೆ ವಿವರಗಳನ್ನು ಬಯಸುವ ಜಾಹೀರಾತುಗಳು. ಇಂತಹ ಜಾಹೀರಾತುಗಳಿಗೆ ಅಭ್ಯರ್ಥಿ ಉತ್ತರ ನೀಡುವಾಗ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು. ಮೊದಲನೆಯದಾಗಿ, ಜಾಹೀರಾತು ಪ್ರಕಟವಾದ ಪತ್ರಿಕೆಯ ಹೆಸರು, ದಿನಾಂಕ ಇತ್ಯಾದಿಯನ್ನು ಪ್ರಸ್ತಾಪಿಸಬೇಕು, ನಿರ್ದಿಷ್ಟ ಅರ್ಜಿ ನಮೂನೆ ಇದ್ದಲ್ಲಿ ಅದನ್ನೇ ಭರ್ತಿಮಾಡಿ, ನಿರ್ದಿಷ್ಟ ದಿನಾಂಕದೊಳಗೆ ತಲುಪಿಸಬೇಕು. *೧, ೨, ಜಾಹೀರಾತುದಾರ ತಿಳಿಸಿದ ವಿಳಾಸಕ್ಕೆ ಅರ್ಜಿಯನ್ನು ಕಳಿಸಬೇಕು. ಪತ್ರಿಕಾ ವಿಳಾಸ ಅಥವಾ ಪೋಸ್ಟ್ ಬಾಕ್ಸ್ ಫಾರಂಗಳಿಗೆ ಅರ್ಜಿ ಶುಲ್ಕ ಇರುತ್ತದೆ. ಅದನ್ನು ತೆತ್ತು ಅರ್ಜಿಯನ್ನು ತರಬೇಕಾಗುತ್ತದೆ. ಮತ್ತೆ ಕೆಲವು ಸಾರಿ ಪತ್ರಿಕೆಯಲ್ಲಿ ಅಚ್ಚಾದ ನಮೂನೆಯನ್ನು ಟೈಪಿಸಿ ಅಥವಾ ಕೈಬರಹದಲ್ಲಿ ಬರೆದು ಕಳುಹಿಸಬಹುದು ಎಂಬ ಸೂಚನೆ ಇರುತ್ತದೆ.

ಸಾಮಾನ್ಯವಾಗಿ ಅಭ್ಯರ್ಥಿ ಅರ್ಜಿಯನ್ನು ಭರ್ತಿ ಮಾಡುವಾಗ ಗಮನಿಸಬೇಕಾದ ಅಂಶಗಳನ್ನು ಜಾಹೀರಾತು ಆಧಾರಿತ ಅರ್ಜಿಗಳನ್ನು ಭರ್ತಿ ಮಾಡುವವರೂ ಗಮನಿಸಬೇಕು. ಉದಾಹರಣೆಗೆ, ಚಿತ್ತಾಗಬಾರದು, ತಿದ್ದಬಾರದು, ಗೀಚಬಾರದು, ಸೀಸದ ಕಡ್ಡಿಯಲ್ಲಿ ಬರೆಯಬಾರದು ಇತ್ಯಾದಿ ಅಂಶಗಳು ಎಲ್ಲರೂ ಗಮನಿಸುವಂಥವೇ ಆಗಿವೆ.

ಉದ್ಯೋಗ ಜಾಹೀರಾತುಗಳಿಗೆ ಪ್ರತಿಯಾಗಿ ಅಭ್ಯರ್ಥನ ಪತ್ರಗಳು ಬಂದರೆ, ಮಾರಾಟದ ಜಾಹೀರಾತುಗಳಿಗೆ ಪ್ರತಿಕ್ರಿಯೆಯಾಗಿ ಆದೇಶ ಪತ್ರಗಳು ಬರುತ್ತವೆ. ಮಾರಾಟದ ಜಾಹೀರಾತುಗಳ ಗುರಿ ಸರಕು ಮಾರಾಟವಾದರೆ, ಉದ್ಯೋಗ ಜಾಹೀರಾತುಗಳ ಗುರಿ ನೌಕರರ ನೇಮಕವಾಗಿರುತ್ತದೆ. ಮಾರಾಟದ ಜಾಹೀರಾತುಗಳಲ್ಲಿ ಸರಕುಗಳ ಬಗ್ಗೆ ಆಕರ್ಷಕ ವಿವರಗಳಿದ್ದರೆ. ಉದ್ಯೋಗ ಜಾಹೀರಾತುಗಳಲ್ಲಿ ಅರ್ಜಿದಾರರಿಗೆ ಬೇಕಾದ ಉಪಯುಕ್ತ ವಿವರಗಳಿರುತ್ತವೆ. ಹೀಗೆ ಉದ್ಯೋಗ ಜಾಹೀರಾತುಗಳಲ್ಲಿ ಅರ್ಜಿದಾರರಿಗೆ ಬೇಕಾದ ಉಪಯುಕ್ತ ವಿವರಗಳಿರುತ್ತವೆ. ಹೀಗೆ ಉದ್ಯೋಗ ಜಾಹೀರಾತುಗಳಿಗೂ ಮಾರಾಟ ಜಾಹೀರಾತುಗಳಿಗೂ ಸಾಕಷ್ಟು ಅಂತರಗಳಿರುತ್ತವೆ. ಇಷ್ಟಾದರೂ ಮಾರಾಟ ಮತ್ತು ಉದ್ಯೋಗ ಜಾಹೀರಾತುಗಳು ವಾಣಿಜ್ಯ ಜಾಹೀರಾತುಗಳು ಎಂಬ ಒಂದೇ ವರ್ಗಕ್ಕೆ ಸೇರುತ್ತವೆ ಎಂಬುದನ್ನು ನೆನಪಿಡಬೇಕು.

ಆದ ಕಾರಣ, ಅಭ್ಯರ್ಥನ ಪತ್ರಗಳು ಉದ್ಯೋಗ ಜಾಹೀರಾತುಗಳಿಗೆ ಮಾತ್ರ ಸಂಬಂಧಿಸಿದವಾಗಿರುತ್ತವೆ. ಸರಕುಗಳನ್ನು ಕುರಿತು ಬರೆಯುವಂಥವು ವಿಚಾರಣಾ ಪತ್ರಗಳಾಗಿರುತ್ತವೆ.

ಉತ್ತಮ ಅಭ್ಯರ್ಥನ ಪತ್ರದ ಲಕ್ಷಣಗಳು

ಅಭ್ಯರ್ಥಿಯ ದೃಷ್ಟಿಯಿಂದ ಗಮನಿಸಬೇಕಾದ ಅಂಶಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ: ಅಭ್ಯರ್ಥನ ಪತ್ರ ಸಾಮಾನ್ಯವಾಗಿ ಒಳಗೊಂಡಿರಲೇಬೇಕಾದ ಅಂಶಗಳಾಗುವುವು? ಉತ್ತಮ ಅಭ್ಯರ್ಥನ ಪತ್ರದಲ್ಲಿ ಕಂಡು ಬರುವ ಸಂಗತಿಗಳಾವುವು? ಎಂಬುದನ್ನು ಇಲ್ಲಿ ಪಟ್ಟಿ ಮಾಡಿ ಪ್ರಸ್ತಾಪಿಸಲಾಗಿದೆ: ೧. ಅರ್ಜಿದಾರನ ವಿಳಾಸ ೨. ಅರ್ಜಿಯ ದಿನಾಂಕ ೩. ಜಾಹೀರಾತುದಾರನ ಹೆಸರು, ವಿಳಾಸ ೪. ಗೌರವ ಸಂಬೋಧನೆ ೫. ಪತ್ರದ ಪ್ರಾರಂಭ ೬. ಪತ್ರದ ಒಡಲು (ಒಕ್ಕಣೆ) ೭. ಪತ್ರದ ಮುಕ್ತಾಯ ೮. ವಂದನಾನುಡಿಗಳು ೯. ಸಹಿ ೧೦. ಲಗತ್ತುಗಳು

ಅರ್ಜಿದಾರನ ವಿಳಾಸ ಮತ್ತು ಅರ್ಜಿಯ ದಿನಾಂಕಗಳನ್ನು ಎರಡನೆಯ ಹಂತ: ಅರ್ಜಿ ಬರೆಯುವಾಗ ಕ್ರ.ಸಂ. ೧೬ರಲ್ಲಿ ಪ್ರಸ್ತಾಪಿಸಲಾಗಿದೆ.

ಜಾಹೀರಾತುದಾರನ ಹೆಸರು ಮತ್ತು ವಿಳಾಸ

ಅಭ್ಯರ್ಥನ ಪತ್ರವನ್ನು ಯಾರಿಗೆ ಬರೆಯುತ್ತಿದ್ದೇವೆ ಎಂಬುದನ್ನು ಮೊದಲು ಗಮನಿಸಬೇಕಾದ ಸಂಗತಿ. ಪ್ರಕಟಿತ ಜಾಹೀರಾತಿಗೆ ಅನುಸಾರವಾಗಿ ಹುದ್ದೆ (ಪದನಾಮ). ಸಂಸ್ಥೆಯ ಹೆಸರನ್ನು ಬರೆಯಬೇಕು; ಆದರೆ ವ್ಯಕ್ತಿಯ ಹೆಸರನ್ನು ಬರೆಯಬಾರದು. ಇದನ್ನು ಪುಟದ ಎಡಭಾಗದಲ್ಲಿ ಸ್ವಲ್ಪ ಕೆಳಗಡೆ ಬರೆಯಬೇಕು. ಉದಾಹರಣೆ:

೧) ವ್ಯವಸ್ಥಾಪಕರು
ಬನ್ನೂರು ಉಣ್ಣೆ ಸಂಸ್ಥೆ
ಮಂಡ್ಯ ಜಿಲ್ಲೆ

೨) ಕಾರ್ಯದರ್ಶಿಗಳು
ಕಮ್ಮಾರ ಸಹಕಾರ ಸಂಘ
ಹಳೇಕೊಪ್ಪಲು
ಚಿಕ್ಕಮಗಳೂರು

ಜಾಹೀರಾತಿನಲ್ಲಿ ಅಂಚೆ ಚೀಲ ಅಥವಾ ಅಂಚೆ ಪೆಟ್ಟಿಗೆ ಕೊಟ್ಟಿದ್ದರೆ, ಅಭ್ಯರ್ಥಿ ಒಳವಿಳಾಸವಾಗಿ ಅದನ್ನೇ ನಮೂದಿಸಬೇಕು. ಜಾಹೀರಾತುದಾರನ ಅಂಚೆಪೆಟ್ಟಿಯ ವಿಳಾಸವಿದ್ದರೆ ಪತ್ರಿಕೆಯ ಹೆಸರನ್ನು ಜಾಹೀರಾತುದಾರನ ವಿಳಾಸದಲ್ಲಿ ನಮೂದಿಸಬೇಕು. ಆದರೆ  ಪತ್ರಿಕೆಯ ಅಂಚೆ ಪೆಟ್ಟಿಗೆಯ ವಿಳಾಸವಿದ್ದರೆ ಪತ್ರಿಕೆಯ ಹೆಸರು ಮತ್ತು ಅಂಚೆ ಚೀಲದ ಸಂಖ್ಯೆಗಳಿರುತ್ತವೆ. ಉದಾಹರಣೆಗೆ:

ಪತ್ರಿಕೆಯ ಅಂಚೆಪೆಟ್ಟಿಗೆ ವಿಳಾಸವಿದ್ದರೆ:

೧) ಜಾಹೀರಾತುದಾರರು
ಸುಜನವಾಣಿ ದಿನಪತ್ರಿಕೆ
ಬಾಕ್ಸ್ ನಂ.೭೭೮೭
ಬೆಂಗಳೂರು- ೫೬೦ ೦೦೧

ಜಾಹೀರಾತುದಾರನ ಅಂಚೆಪಟ್ಟಿ ವಿಳಾಸವಿದ್ದರೆ:

೨) ಜಾಹೀರಾತುದಾರರು
ಅಂಚೆ ಪಟ್ಟಿ ಸಂಖ್ಯೆ ೪೪೭
ಬೆಂಗಳೂರು- ೫೬೦ ೦೪೧

ಸರ್ಕಾರಿ ಉದ್ಯೋಗಗಳಿಗಾಗಿ ಅರ್ಜಿ ಹಾಕುವಾಗ ಅರ್ಜಿಯಲ್ಲಿ ಕೊಟ್ಟ ಅಥವಾ ಜಾಹೀರಾತಿನಲ್ಲಿ ತಿಳಿಸಿರುವ ವಿಳಾಸವನ್ನೇ ಉಲ್ಲೇಖಿಸಬೇಕು.

ಗೌರವ ಸಂಬೋಧನೆ

‘ಗೆ’ ವಿಳಾಸ ಬರೆದ ಮೇಲೆ ಅದರ ಕೆಳಗೆ ಪತ್ರದ ಪ್ರಾರಂಭದಲ್ಲಿ ಮಾನ್ಯರೆ/ಸನ್ಮಾನ್ಯರೆ ಎಂದು ಸಂಬೋಧಿಸಲಾಗುತ್ತದೆ.

ಪತ್ರದ ಪ್ರಾರಂಭ

ಒಳ್ಳೆಯ ಪ್ರಾರಂಭವೆಂದರೆ ಅರ್ಧ ಕೆಲಸ ಆದಂತೆಯೇ ಎಂಬ ಮಾತೊಂದಿದೆ. ಆದ್ದರಿಂದ ಪತ್ರದ ಪ್ರಾರಂಭ ಅಕರ್ಷಕವಾಗಿ, ಉಪಯುಕ್ತವಾಗಿರಬೇಕು. ಪತ್ರ ಮಂಟಪದ ಮುಖದ್ವಾರವೆಂದರೆ, ಪ್ರಾರಂಭ ವಾಕ್ಯವೆನ್ನಬಹುದು.

ಕೆಲವು ಮಾದರಿ ವಾಕ್ಯಗಳನ್ನು ಗಮನಿಸಿ:

೧) ದಿನಾಂಕ ೧೮-೬-೧೯೮೭ ರಂದು ‘ಸಿಂಹ ಗರ್ಜನೆ ದಿನ ಪತ್ರಿಕೆ’ ಯಲ್ಲಿ ಪ್ರಕಟಿಸಿದ ಜಾಹೀರಾತಿಗೆ ಅನುಸಾರವಾಗಿ ತಮ್ಮ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

೨) ಆಕಾಶವಾಣಿ ಬೆಂಗಳೂರು ನಿಲಯದಲ್ಲಿ ತಾರೀಖು ೭ನೆ ಆಗಸ್ಟ್ ೧೯೮೭ರಂದು ಪ್ರಸಾರವಾದ ಪ್ರಕಟಣೆಯಂತೆ ಸುದ್ದಿ ಓದುವವರ ಹುದ್ದೆಗೆ ಈ ಮೂಲಕ ಅಭ್ಯರ್ಥನ ಪತ್ರವನ್ನು ಸಲ್ಲಿಸುತ್ತಿದ್ದೇನೆ.

ಸ್ವಯಂ ನಿವೇದಿತ ಅಭ್ಯರ್ಥನ ಪತ್ರಗಳನ್ನು ಬರೆಯುವಾಗ ಪ್ರಾರಂಭದ ವಾಕ್ಯಗಳು ಜಾಹಿರಾತಿಗೆ ಉತ್ತರಿಸುವ ಅಭ್ಯರ್ಥನ ಪತ್ರಗಳಿಗಿಂತ ಭಿನ್ನವಾಗಿರುತ್ತವೆ.

ಉದಾಹರಣೆಗೆ

೧) ಮಾನ್ಯರೆ,

ಈ ತಿಂಗಳ ಕೊನೆಯಲ್ಲಿ ನಿಮ್ಮ ಕಚೇರಿಯಲ್ಲಿ ಗುಮಾಸ್ತೆ ಹುದ್ದೆಯಿಂದ ಒಬ್ಬರು ನಿವೃತ್ತರಾಗುತ್ತಾರೆ ಎಂದು ತಿಳಿದುಬಂದಿತು. ಖಾಲಿ ಬೀಳುವ ಆ ಜಾಗಕ್ಕೆ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ.

೨) ತಮ್ಮಲ್ಲಿ ಯಾವುದಾದರೂ ಉದ್ಯೋಗ ಖಾಲಿ ಇದ್ದರೆ ಈ ಕೆಳಕಂಡ ಅರ್ಹತೆಯುಳ್ಳ ನನ್ನನ್ನು ಸೂಕ್ತ ಕಂಡರೆ ನೇಮಿಸಿಕೊಳ್ಳಲು ಪ್ರಾರ್ಥಿಸುತ್ತೇನೆ.

೩) ಗಣ್ಯ ವ್ಯಕ್ತಿಗಳು, ಹುದ್ದೆ ಖಾಲಿ ಇರುವ ವಿಚಾರವನ್ನು ತಿಳಿಸಿದಾಗ ಅವರ ಹೆಸರನ್ನು ಉಲ್ಲೇಖಿಸಬಹುದು.

“ತಮ್ಮ ಮಿತ್ರರೂ ಪಾಲುದಾರರೂ ಆದ ಸಾಹೂಕಾರ್ ಚೆನ್ನಪ್ಪನವರು ತಮ್ಮ ಸಂಸ್ಥೆಯಲ್ಲಿ ಮಾರಾಟಗಾರ ಹುದ್ದೆಯೊಂದು ಖಾಲಿ ಇದೆ ಎಂದು ತಿಳಿಸಿದರು. ನನ್ನ ಅರ್ಹತೆಗಳು ಈ ಉದ್ಯೋಗಕ್ಕೆ ಸೂಕ್ತವಾಗಿವೆ ಎಂದು ತಿಳಿದು ಈ ಕೆಳಕಂಡ ವಿವರಗಳೊಡನೆ ಅರ್ಜಿ ಸಲ್ಲಿಸುತ್ತಿದ್ದೇನೆ”

ಅಭ್ಯರ್ಥನ ಪತ್ರದ ಪ್ರಾರಂಭ ಒಂದೇ ವಾಕ್ಯವಿರಬಹುದು. ಇಲ್ಲವೇ ಹಲವಾರು ವಾಕ್ಯಗಳಿರಬಹುದು. ಎಷ್ಟೇ ವಾಕ್ಯಗಳಿದ್ದರೂ ಅವೆಲ್ಲವನ್ನೂ ಸೇರಿಸಿ ಪ್ರಾರಂಭದ ವಾಕ್ಯವೃಂದವನ್ನಾಗಿ ಬರೆಯಬೇಕು.

೪) ಪ್ರವಾಸ ಮಾಡಬಲ್ಲ ಉತ್ತರ ಆರೋಗ್ಯವುಳ್ಳ ಚುರುಕಾಗಿ ಮಾತನಾಡಬಲ್ಲ, ಹಲವಾರು ಭಾಷೆಗಳಲ್ಲಿ ನುರಿತ ಸಂಚಾರಿ ಮಾರಾಟಗಾರರು ತಮಗೆ ಬೇಕಾಗಿದ್ದಾರೆ ಎಂದು ತಿಳಿದುಬಂದಿತು. ಆದ ಕಾರಣ ಈ ಕೆಳಕಂಡ ವಿವರಗಳನ್ನು ತಮಗೆ ತಿಳಿಸುತ್ತಿದ್ದೇನೆ. ನಿಮ್ಮ ಅವಶ್ಯಕತೆಗೆ ನಾನು ಸೂಕ್ತ ವ್ಯಕ್ತಿಯಾಗಬಲ್ಲೆ ಎಂದು ಭಾವಿಸಿದ್ದೇನೆ.

ಒಡಲು

ಪತ್ರದ ಪ್ರಾರಂಭದಲ್ಲಿ ಹೇಳಿದ ಮಾತುಗಳಿಗೆ ಅನುಗುಣವಾಗಿ ಪತ್ರದ ಒಕ್ಕಣೆ ಸಾಗಬೇಕು. ಪತ್ರದಲ್ಲಿ ವಿಷಯಗಳನ್ನು ಮಂಡಿಸುವಾಗ ‘ಅಹಂ ದೃಷ್ಟಿ’ ಇರಬಾರದು. ‘ತ್ವಂದೃಷ್ಟಿ’ ಇರಬೇಕು; ಎಂದರೆ ಯಾರಿಗಾಗಿ ಈ ಅರ್ಜಿಯನ್ನು ಬರೆಯುತ್ತಿದ್ದೇವೆಯೋ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಗಬೇಕು. ಪತ್ರ ಓದಿದ ಕೂಡಲೇ ಜಾಹೀರಾತುದಾರ ಅಥವಾ ಮಾಲೀಕನಿಗೆ ಸಂದರ್ಶನಕ್ಕೆ ಕರೆಯುವ ಮನಸ್ಸಾಗಬೇಕು. ‘ನಿಮಗಾಗಿ ಬೇಕಾದ ಸಂಗತಿಗಳು’ ಎಂಬ ರೀತಿಯಲ್ಲಿ ವಿವರಗಳು ಇರಬೇಕು. ‘ನಾನೆಂಥವನು! ನನ್ನದೆಲ್ಲ ಸಂಗತಿಗಳನ್ನು  ತಿಳಿಸುವ’ ಎಂಬ ದೃಷ್ಟಿ ಇರಬಾರದು. ಅಹಂ ದೃಷ್ಟಿಯಿಂದ ಅನಗತ್ಯ ಸಂಗತಿಗಳು ಮಂಡಿತವಾಗಿ ಜಾಹೀರಾತುದಾರನ ದೃಷ್ಟಿಯಲ್ಲಿ ಅರ್ಜಿದಾರ ಅಧಿಕ ಪ್ರಸಂಗಿಯಾಗಿ ಇಲ್ಲವೇ ಅನವಶ್ಯಕ ಮಾಹಿತಿ ನೀಡಿದ ಅರ್ಜಿದಾರನಾಗಿ ಕಾಣುತ್ತಾನೆ; ಪರಿಣಾಮವಾಗಿ ಉದ್ಯೋಗ ಸಿಗುವುದು ಕನಸಾಗುತ್ತದೆ.

ಸಂಗತಿಗಳನ್ನು ವಿನಯ ಪೂರ್ವಕವಾಗಿ ನಿವೇದಿಸಬೇಕು. ಉತ್ಪ್ರೇಕ್ಷೆ, ಜಂಭಗಾರಿಕೆಯ ನುಡಿಗಳನ್ನು ಬಳಸಬಾರದು; ವಿಶೇಷ ಅರ್ಹತೆಗಳನ್ನುಳ್ಳ ತಾನು ಉದ್ಯೋಗಿಯಾದರೆ ಎಷ್ಟರ ಮಟ್ಟಿಗೆ ಸಮರ್ಥ ರೀತಿಯಲ್ಲಿ ಸೇವೆ ಸಲ್ಲಿಸುವೆ ಎಂಬುದು ಉದ್ಯೋಗದಾತನ ಮನಸ್ಸಿಗೆ ಬರುವಂತೆ ಒಕ್ಕಣೆ ಬರೆಯಬೇಕು. ಪತ್ರದಲ್ಲಿ ಸಂಸಾರ ತಾಪತ್ರಯಗಳನ್ನು ಹೇಳಿಕೊಳ್ಳಬಾರದು. ಕೆಲಸ ಕೊಡಿ ಎಂದು ದೈನ್ಯಭಾವದಲ್ಲಿ ಬೇಡಿಕೊಳ್ಳಬಾರದು; ಪತ್ರ ಆತ್ಮೀಯವಾಗಿ ನೇರ ನಿರೂಪಣೆಯಲ್ಲಿರಬೇಕು. ‘ಪ್ರಕೃತ ಲೇಖಕ’ ‘ಕೆಳಗೆ ಸಹಿ ಮಾಡುವವರು ತಿಳಿಸುವುದೇನಂದರೆ’ ಎಂಬ ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ರೀತಿಯ ಪರೋಕ್ಷ ಧಾಟಿಯನ್ನು ಬಳಸಬಾರದು. ಕೆಲವು ಅಗತ್ಯ ಅಂಶಗಳನ್ನು ವಾಕ್ಯ ರೂಪದಲ್ಲಿ ಅಥವಾ ಪಟ್ಟಿ ರೂಪದಲ್ಲಿ ನೀಡಬಹುದು. ಉದಾಹರಣೆಗೆ:

ವಾಕ್ಯ ರೂಪ:

ನನ್ನ ಹೆಸರು ರಂಜನಾರಾವ್, ವಯಸ್ಸು ೩೦ ವರ್ಷ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ೪ನೆಯ ರಸ್ತೆ, ೨೦ನೆಯ ಸಂಖ್ಯೆಯ ಮನೆಯಲ್ಲಿ ವಾಸ, ಎಸ್.ಎಸ್.ಎಲ್.ಸಿ ವರೆಗೆ ಓದಿದ್ದೇನೆ. ಬೆರಳಚ್ಚು ಮತ್ತು ಶೀಘ್ರಲಿಪಿಯನ್ನು ಬಲ್ಲೆ; ಸೀನಿಯರ್ ಪರೀಕ್ಷೆಗೆ ಕುಳಿತಿದ್ದೇನೆ ಇತ್ಯಾದಿ.

ಇದರ ಪಟ್ಟಿ ರೂಪ:
ಹೆಸರು : ರಂಜನಾರಾವ್
ವಯಸ್ಸು: ೩೦ ವರ್ಷ
ವಿಳಾಸ: ೨೦, ೪ನೆಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
ಇತರ ಅರ್ಹತೆಗಳು: ಬೆರಳಚ್ಚು, ಶೀಘ್ರಲಿಪಿ ಬಲ್ಲೆ, ಸೀನಿಯರ್ ಪರೀಕ್ಷೆಗೆ ಕುಳಿತಿದ್ದೇನೆ.

ನಿರ್ದಿಷ್ಟ ನಮೂನೆಯಿಲ್ಲದ ಕೈಯಾರೆ ಬರೆದು ಸಲ್ಲಿಸುವ ಅರ್ಜಿಗಳಲ್ಲಿ ಹೆಸರು, ವಯಸ್ಸು, ವಿಳಾಸ, ತೂಕ, ಎತ್ತರ, ವಿದ್ಯಾರ್ಹತೆ, ಇತರ ಶೈಕ್ಷಣಿಕ ಅರ್ಹತೆಗಳು, ಭಾಷೆಗಳ ಪರಿಚಯ, ವಿವಾಹಿತನೇ/ಳೇ, ಅವಿವಾಹಿತನೇ/ ಳೇ ಎಂಬ ವಿಚಾರ, ಕ್ರೀಡೆ, ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಪಡೆದ ಬಹುಮಾನ, ಪೂರ್ವಾನುಭವ ಇದ್ದಲ್ಲಿ ಆ ಬಗ್ಗೆ ವಿವರಗಳು, ಈ ಮೊದಲು ನೌಕರಿ ಮಾಡುತ್ತಿದ್ದುದನ್ನು ಹೇಳುವಾಗ ಆ ಸಂಸ್ಥೆಯನ್ನು ಬಿಟ್ಟ ಕಾರಣದ ಪ್ರಸ್ತಾಪ, ಈಗ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಮೂಲಕ ಕಳಿಸಿದ್ದರೆ ಯಾವ ಕಾರಣಕ್ಕಾಗಿ ಅರ್ಜಿ ಕಳುಹಿಸುತ್ತಿರುವುದು ಎಂಬ ವಿಚಾರ ಮುಂತಾದವನ್ನು ತಿಳಿಸಬೇಕು.

ಅರ್ಜಿಗೆ ಅರ್ಹತಾ ಪತ್ರಗಳನ್ನು ಲಗತ್ತಿಸಿದೆ, ನಾನು ‘ನಿರ್ವಹಿಸುವ ಕಾರ್ಯದ ಬಗ್ಗೆ, ಸಾಮರ್ಥ್ಯ ಪ್ರತಿಭೆಗಳ ಬಗ್ಗೆ ಇಂಥವರು ನೀಡಿರುವ ಅರ್ಹತಾ ಪತ್ರಗಳನ್ನು ಕಳುಹಿಸುತ್ತಿದ್ದೇನೆ’ ಎಂಬಂಶವನ್ನು ನಮೂದಿಸಬೇಕು; ಅಥವಾ ಪರಾಮರ್ಶನಕ್ಕಾಗಿ ಈ ಕೆಳಕಂಡ ವ್ಯಕ್ತಿಗಳ ವಿಳಾಸಗಳನ್ನು ನೀಡಿದ್ದೇನೆ ಎಂದು ಹೇಳಿ ಅಂಥವರ ಪೂರ್ಣ ವಿಳಾಸಗಳನ್ನು ಸ್ಪಷ್ಟವಾಗಿ ಕೊಡಬೇಕು. ಪರಾಮರ್ಶನ ವಿಳಾಸಗಳು ಅಭ್ಯರ್ಥನ ಪತ್ರದ ಮುಖ್ಯಾಂಶ. ಏಕೆಂದರೆ ಜಾಹೀರಾತುದಾರ ಅಥವಾ ಉದ್ಯೋಗದಾತನಿಗೆ ಅಭ್ಯರ್ಥಿ ಯಾವ ಮಟ್ಟದವನು ಎಂಬುದನ್ನು ತಿಲಿಯಲು ಸಾಧನವಾಗುತ್ತದೆ. ವ್ಯಕ್ತಿ ಪರಿಚಯವಿಲ್ಲದ ಸಂಸ್ಥೆಗಳಿಗೆ ಆ ಕೊರತೆಯನ್ನು ಪರಾಮರ್ಶನ ಪತ್ರಗಳು ನಿವಾರಿಸುತ್ತವೆ. ಅರ್ಜಿದಾರ ತನ್ನನ್ನು ಚೆನ್ನಾಗಿ ಬಲ್ಲ, ತನ್ನ ಬಗ್ಗೆ ಸದಭಿಪ್ರಾಯನ್ನೂ ಆಸಕ್ತಿಯನ್ನೂ ಹೊಂದಿರುವ ಗಣ್ಯವ್ಯಕ್ತಿಗಳ ಹೆಸರನ್ನೂ ಪರಾಮರ್ಶಕರನ್ನಾಗಿ ಕೊಡಬೇಕು. ನಿರ್ದಿಷ್ಟ ನೌಕರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇಂಥ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿರುವ ನಾನು, ನಿಮ್ಮ ಹೆಸರನ್ನು ಪರಾಮರ್ಶನಕ್ಕಾಗಿ ನೀಡಿದ್ದೇನೆ ಎಂಬುದನ್ನು ಅವರಿಗೆ ತಪ್ಪದೆ ತಿಳಿಸಬೇಕು.

ವ್ಯಕ್ತಿಗತ ವಿವರಗಳನ್ನು ಕ್ರಮಬದ್ಧವಾಗಿ ನಿರೂಪಿಸಬೇಕು. ಪೂರ್ವಾನುಭವವನ್ನು ತಿಳಿಸುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕು. ಕೆಲಸ ಮಾಡುತ್ತಿದ್ದ ಸಂಸ್ಥೆಯ ಹೆಸರು, ವಿಳಾಸ, ನಿರ್ವಹಿಸುತ್ತಿದ್ದ ಹುದ್ದೆ, ಸಾಧಿಸಿದ ವಿಶೇಷ ಪ್ರಗತಿ, ಕೆಲಸಕ್ಕೆ ಸೇರಿದ ಮತ್ತು ಕೆಲಸ ಬಿಟ್ಟ ತಾರೀಖು ಹಾಗೂ ಕಾರಣ, ಪಡೆಯುತ್ತಿದ್ದ ಸಂಬಳ (ಅಗತ್ಯವಿದ್ದಲ್ಲಿ) ದ ವಿವರಗಳು. ಕೆಲಸ ಬಿಟ್ಟ ವೈಯಕ್ತಿಕ ಕಾರಣಗಳನ್ನು ಸಾಮಾನ್ಯವಾಗಿ ತಿಳಿಸುವುದಿಲ್ಲ. ಆದರೆ ಸಾರ್ವತ್ರಿಕ ಕಾರಣಗಳನ್ನು ತಿಳಿಸುವುದುಂಟು. ಉದಾಹರಣೆಗೆ ‘ಮುಷ್ಕರದಿಂದ ಕಾರ್ಖಾನೆ ಮುಚ್ಚಿರುವುದು’, ‘ಪಾಲುದಾರರು ಬೇರೆಯಾಗಿ ಸಂಸ್ಥೆ ಮುಚ್ಚಿದ್ದು’ ಇತ್ಯಾದಿ. ವಿಶೇಷ ಅರ್ಹತೆಗಳನ್ನು ತಿಳಿಸುವಾಗ, ‘ಪಡೆದಿರುವ ವಿಶೇಷ ತರಬೇತಿ, ಗಳಿಸಿದ ಬಹುಮಾನಗಳು, ವಿದ್ಯಾರ್ಥಿ ವ್ಯಾಸಂಗ ವೇತನಗಳು, ನಿಯತಕಾಲಿಕೆ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳ ವಿವರ, ಗ್ರಂಥ ಪ್ರಕಟಣೆ, ಪ್ರಸಿದ್ಧ ಸಂಸ್ಥೆಗಳಲ್ಲಿ, ಸದಸ್ಯನಾಗಿರುವ ವಿಚಾರ, ಹವ್ಯಾಸಗಳು, ಚಿತ್ರಕಲೆ, ಸಂಗೀತ, ಪೋಟೋಗ್ರಫಿ, ಕ್ರೀಡೆ, ಕೈಗೊಂಡ ಪ್ರವಾಸ, ಸಾಹಸ ಕಥನ- ಮುಂತಾದವನ್ನು ತಿಳಿಸಬೇಕು.

ಸಾಮಾನ್ಯವಾಗಿ ಅಭ್ಯರ್ಥನ ಪತ್ರಗಳಲ್ಲಿ ಸಂಬಳದ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ. ಈಗ ಪಡೆಯುತ್ತಿರುವ ಸಂಬಳವನ್ನಾಗಲೀ ಅಥವಾ ಸೇರಲಿರುವ ನೌಕರಿಗೆ ನಿರೀಕ್ಷಿಸುವ ಸಂಬಳವನ್ನಾಗಲಿ ತಿಳಿಸಿದಾಗ ಆ ಆಧಾರದ ಮೇಲೆ ಅಭ್ಯರ್ಥನ ಪತ್ರ ತಿರಸ್ಕೃತವಾಗಬಹುದು. ಉದ್ಯೋಗದಾತನಿಗೆ ನಾನು ಕೊಡುವ ಸಂಬಳಕ್ಕೆ ಈ ವ್ಯಕ್ತಿ ಸರಿದೂಗಲಾರ ಎನ್ನಿಸಬಹುದು. ಕೆಲವೊಮ್ಮೆ ಜಾಹೀರಾತುದಾರರೇ ನೀವು ನಿರೀಕ್ಷಿಸುವ ಸಂಬಳ ತಿಳಿಸಿ’ ಎಂದು ಕೇಳುವುದೂ ಉಂಟು; ಕೊಡುವ ಸಂಬಳ ಶ್ರೇಣಿಯನ್ನು ಕೆಲವೊಮ್ಮೆ ತಾವೇ ತಿಳಿಸಿರುತ್ತಾರೆ. ‘ನೀವು ನಿರೀಕ್ಷಿಸುವ ಸಂಬಳ ತಿಳಿಸಿ’ ಎಂದಾಗ, ಅಭ್ಯರ್ಥಿ ‘ಸಂದರ್ಶನ ಕಾಲದಲ್ಲಿ ಮಾತನಾಡಿ ನಿರ್ಧರಿಸೋಣ’ ಎಂದು ತಿಳಿಸುವುದು ಸೂಕ್ತ.

ಕೆಲವೊಮ್ಮೆ ಕೆಲವು ಸಂಗತಿಗಳನ್ನು ತಿಳಿಸುವ ಅಗತ್ಯವಿರುತ್ತದೆ. ಸ್ವಂತ ಮೋಟಾರು ಸೈಕಲ್ಲು, ಬೈಸಿಕಲ್ಲು ಇತ್ಯಾದಿ ವಾಹನಗಳನ್ನು ಹೊಂದಿರುವ ವಿಚಾರ; ವಿದೇಶಿ ಭಾಷೆಗಳ ಪರಿಚಯ, ಪ್ರವಾಸದಲ್ಲಿ ಆಸಕ್ತಿ, ಭಾರತದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧವಿರುವುದು ಇತ್ಯಾದಿ.

ಮುಕ್ತಾಯ

ಪತ್ರದ ಪ್ರಾರಂಭದಷ್ಟೇ ಮುಕ್ತಾಯವೂ ಮಹತ್ವ ಪೂರ್ಣವಾದ ವಿಚಾರವಾಗಿದೆ. ಉದ್ಯೋಗದಾತ ಸಂದರ್ಶನಕ್ಕೆ ಕರೆ ಕೊಡುವ ರೀತಿಯಲ್ಲಿ ಅಭ್ಯರ್ಥನ ಪತ್ರದ ಮುಕ್ತಾಯವಿರಬೇಕು; ದೈನ್ಯ ಭಾವದ ಕೋರಿಕೆಯಿರಬಾರದು; ಆದರೆ ಭರವಸೆ, ನಿರೀಕ್ಷೆಗಳ ಮಾದರಿಯಲ್ಲಿರಬೇಕು. ಉದಾಹರಣೆಗೆ: ೧) ನೀವು ಅವಕಾಶ ನೀಡಿದರೆ ಪತ್ರದಲ್ಲಿ ಉಲ್ಲೇಖಿಸಿದ ಸಂಗತಿಗಳಲ್ಲದೆ ಅಗತ್ಯವಿರುವ ಹೆಚ್ಚಿನ ಮಾಹಿತಿಯನ್ನು ಒದಗಿಸಬಲ್ಲೆ ೨) ಹೆಚ್ಚಿನ ವಿವರಗಳಿಗಾಗಿ ತಾವು ದೂರವಾಣಿ ೮೮೭೭೬೬ನ್ನು ಸಂಪರ್ಕಿಸಬಹುದು ೩) ಮೇಲ್ಕಂಡ ಉದ್ಯೋಗಕ್ಕೆ ಆಯ್ಕೆ ಮಾಡಿದ್ದಲ್ಲಿ ನಾನು ಶ್ರದ್ಧೆ, ಭಕ್ತಿ, ಪರಿಶ್ರಮಗಳಿಂದ ಸೇವೆ ಸಲ್ಲಿಸುತ್ತೇನೆ ಎಂಬ ಭಿನ್ನವಿಸುತ್ತೇನೆ. ೪) ಉದ್ಯೋಗಾವಕಾಶವನ್ನು ನಿಮ್ಮ ಸಂಸ್ಥೆಯಲ್ಲಿ ನೀಡಿದ್ದೇ ಆದರೆ ಪ್ರಾಮಾಣಿಕವಾಗಿ ಶ್ರಮದಿಂದ ದುಡಿಯುತ್ತೇನೆ ೫) ನಿಮ್ಮಿಂದ ಆಶಾದಾಯಕ ಉತ್ತರವನ್ನು ನಿರೀಕ್ಷಿಸುತ್ತಿದ್ದೇನೆ ೬) ಮೇಲ್ಕಂಡ ಅಂಶಗಳು ತಮಗೆ ತೃಪ್ತಿಕರವಾಗಿವೆ ಎಂದು ಭಾವಿಸಿದ್ದೇನೆ ೮) ಸಂದರ್ಶನ ಪತ್ರ ಕಳಿಸಲು ಅಥವಾ ಉತ್ತರಿಸಲು ಸ್ವವಿಳಾಸವಿರುವ ಅಂಚೆ ಲಕೋಟೆಯನ್ನು ಪತ್ರಕ್ಕೆ ಲಗತ್ತಿಸಿದ್ದೇನೆ ೯) ನನ್ನ ಅರ್ಹತೆಗಳು ಮತ್ತು ನಾನು ನೀಡಿರುವ ಮಾಹಿತಿಗಳು, ನೀವು ಪ್ರಕಟಿಸಿರುವ ಖಾಲಿ ಹುದ್ದೆಗೆ ಸೂಕ್ತವಾಗಿವೆ ಎಂದು ಭಾವಿಸಿದ್ದೇನೆ ೧೦) ತಾವು ಅವಕಾಶ ನೀಡಿದರೆ ತಮ್ಮ ಸಂಸ್ಥೆಗೆ ಕಳಶಪ್ರಾಯ ಸೇವೆಯನ್ನು ಸಲ್ಲಿಸುವ ಭರವಸೆ ಕೊಡುತ್ತೇನೆ.

ವಂದನ ಪೂರ್ವಕ ಮುಕ್ತಾಯ

ವಂದನೆಗಳೊಡನೆ ಗೌರವ ಸಲ್ಲಿಸಿ ಪತ್ರದ ಬಲ ಭಾಗದಲ್ಲಿ ಕೆಳಗೆ ಸಹಿ ಮಾಡುವಾಗ ಮೇಲ್ಕಾಣಿಸಿದ ಸಂಬೋಧನಾ ನುಡಿಗನುಗುಣವಾಗಿ, ಸರಳವಾದ, ಔಚಿತ್ಯ ಪೂರ್ಣವಾದ ಶಬ್ದವನ್ನು ಬಳಸಬೇಕು. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೆ, ತಮ್ಮ ವಿಶ್ವಾಸಿ, ತಮ್ಮ ವಿಧೇಯ ಎಂದೂ, ಖಾಸಗಿ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೆ ತಮ್ಮ ನಂಬುಗೆಯ, ತಮ್ಮ ಒಲವಿನ, ತಮ್ಮ ನಲ್ಮೆಯ, ತಮ್ಮ ಆತ್ಮೀಯ ಎಂಬ ಮುಂತಾದ ಪದಗಳನ್ನು ಬಳಸಬಹುದು.

ಅರ್ಜಿಯಲ್ಲಿ ಉತ್ಪ್ರೇಕ್ಷಾಲಂಕಾರಗಳನ್ನೂ ಅತಿಶಯೋಕ್ತಿಗಳನ್ನೂ ಬಳಸಬಾರದು; ಅಲಂಕಾರಿಕ ಭಾಷೆ ಕೃತಕ ಎನಿಸಿಕೊಳ್ಳುವುದಲ್ಲದೆ ಪತ್ರದ ಹಿನ್ನೆಲೆಯಲ್ಲಿ ಅಸಹಜವೆನ್ನಿಸಲೂಬಹುದು; ಪಾಂಡಿತ್ಯದ ಪ್ರದರ್ಶನವೂ ಆಗಬಹುದು. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂಬಾಂತಗಬಾರದು. ಉದಾಹರಣೆಗೆ:

ಸದಾ ಹನುಮಭರತರೋಪಾದಿ ಆಜ್ಞಾ ಪರಿಪಾಲಕಾಗ್ರೇಸರ
ವಿನಮ್ರ ಪಾದರೇಣು ಸ್ವೀಕಾರಿ, ತಮ್ಮ ಪರಮ ಪವಿತ್ರ
ಪಾದಾರವಿಂದ ಅನುಗ್ರಹಾಕಾಂಕ್ಷಿ, ಪೂಜ್ಯಾನುಗ್ರಹೀತ
ಆಜ್ಞಾಶಿರಸಾರಾಧಕ; ಹೂವ ತರುವರ ಮನೆಗೆ ಹುಲ್ಲತಾರೆನೆಂಬ
ಸೇವಕ, ಹುಲ್ಲಾಗಿ ಬೆಟ್ಟದಡಿ ಮನೆಗೆ ಮಲ್ಲಿಗೆಯಾಗಿ
ದೀನ ದುರ್ಬಲರಿಗೆ ಬೆಲ್ಲಸಕ್ಕರೆಯಾಗಿ ಸೇವೆ ಸಲ್ಲಿಸಲು ಸದಾ
ಕಂಕಣ ಬದ್ಧನಾಗಿರುವ ಇತ್ಯಾದಿ

ಸಹಿ

ಅಭ್ಯರ್ಥಿಯ ಸಹಿ ಸುಂದರವಾಗಿ, ಸ್ಪಷ್ಟವಾಗಿದ್ದರೆ ಚೆನ್ನ. ಆದರೆ ಕೆಲವರು ಹಲವಾರು ಕಾರಣಗಳಿಂದ ಚಿತ್ರ-ವಿಚಿತ್ರ ರೀತಿಯಲ್ಲಿ ಇತರರಿಗೆ ಅರ್ಥವಾಗದಂತೆ ಹಾಗೂ ಅನುಕರಿಸಲಾಗದಂತೆ ರುಜು ಹಾಕುತ್ತಾರೆ. ಇಂಥ ಸಂದರ್ಭದಲ್ಲಿ ಆವರಣ ಚಿಹ್ನೆ ಬಳಸಿ, ಪೂರ್ಣ ಹೆಸರನ್ನು ಬಿಡಿ ಅಕ್ಷರಗಳಲ್ಲಿ ಬರೆಯುವುದು ಸೂಕ್ತ. ಹೆಮ್ಮಕ್ಕಳ ಹೆಸರಿನ ಪ್ರಾರಂಭದಲ್ಲಿ ಕುಮಾರಿ/ ಶ್ರೀಮತಿ ಎಂಬ ಪದಗಳನ್ನು ಬಳಸುವುಂಟು. ನೌಕರಿ ಜಾಹೀರಾತುದಾರ ಅಪೇಕ್ಷಿಸುವುದಾದರೆ ಕೆಲಸದ ದೃಷ್ಟಿಯಿಂದ ಅರ್ಜಿದಾರ, ವಿವಾಹಿತನೇ/ಳೇ, ಅವಿವಾಹಿತನೇ/ಳೇ ಎಂಬುದನ್ನು ತಿಳಿಸಬೇಕಾದಾಗ, ಸ್ತ್ರೀಪುರುಷರಿಬ್ಬರೂ ತಮ್ಮ ಹೆಸರಿನ ಪ್ರಾರಂಭದಲ್ಲಿ ವಿವಾಹಿತರು ಶ್ರೀ/ಶ್ರೀಮತಿ ಎಂದೂ, ಅವಿವಾಹಿತರು ಕುಮಾರ/ಕುಮಾರಿ ಎಂದೂ ಬರೆಯಬಹುದು.

ಲಗತ್ತುಗಳು

ಮುಖ್ಯ ಪತ್ರದ ಜೊತೆ ಸೇರಿಸುವ ಬಗೆಬಗೆಯ ಪ್ರಮಾಣ ಪತ್ರಗಳನ್ನು ಲಗತ್ತು ಪತ್ರಗಳು ಎನ್ನುವರು. ಅಡಕ, ಜೊತೆ ಪತ್ರ ಎಂ ಪರ‍್ಯಾಯ ಪದಗಳನ್ನೂ ಬಳಸುತ್ತಾರೆ. ಅಂಕಪಟ್ಟಿ, ಯೋಗ್ಯತಾ ಪತ್ರ, ಅನುಭವ ಪತ್ರ, ಬಹುಮಾನದ ಸರ್ಟಿಫಿಕೇಟು ಇವು ಅಭ್ಯರ್ಥನ ಪತ್ರಕ್ಕೆ ಲಗತ್ತು ಪತ್ರಗಳಾಗಿರುತ್ತವೆ. ಲಗತ್ತು ಪತ್ರಗಳಿಗೆ ಕ್ರಮಸಂಖ್ಯೆಯನ್ನು ಕೊಟ್ಟು ಜೋಡಿಸಿ ಆ ಪ್ರಕಾರವಾಗಿಯೇ ಮುಖ್ಯ ಪತ್ರದ ಎಡಭಾಗದಲ್ಲಿ ಅಂತ್ಯದಲ್ಲಿ ನಮೂದಿಸಬೇಕು.

ಅಭ್ಯರ್ಥಿ ಗಮನಿಸಬೇಕಾದ ಅಂಶಗಳು

ಅರ್ಹ ಪದವೀಧರರು ನೌಕರಿ ಜಾಹೀರಾತುಗಳಿಗನುಸಾರವಾಗಿ ಅಭ್ಯರ್ಥನ ಪತ್ರಗಳನ್ನು ಭರ್ತಿ ಮಾಡಿ ಕಳಿಸುವಾಗ ಹತ್ತಾರು ಅಂಶಗಳತ್ತ ಗಮನವೀಯಬೇಕು. ನಾವು ಕಳಿಸುವ ಅರ್ಜಿ ಅನುಚಿತವಾಗಿದ್ದಲ್ಲಿ ಮೊದಲಿಗೇ ಹಾದಿ ತಪ್ಪಿದ ಪ್ರಯಾಣಿಕನಂತಾಗುತ್ತದೆ ನಮ್ಮ ಸ್ಥಿತಿ. ಉದ್ಯೋಗಗಳಿಕೆಯಲ್ಲಿ ಅರ್ಜಿ ಮೊದಲ ಮೆಟ್ಟಿಲು; ಸಂದರ್ಶನ ಮಧ್ಯದ ಮೆಟ್ಟಿಲು, ಕೆಲಸಕ್ಕೆ ಹಾಜರಾಗುವುದು ಕೊನೆಯ  ಮೆಟ್ಟಿಲು. ಮೊದಲಲ್ಲೇ ಎಡವಿದವರು ಗುರಿ ಮುಟ್ಟುವುದು ಹೇಗೆ? ಅಟ್ಟಕ್ಕೆ ಹಾರದವನು ಬೆಟ್ಟಕ್ಕೆ ಹಾರಿಯಾನೆ? ಎಂಬಂತಾಗುವುದು.

ಯಾವುದೇ ನೌಕರಿಗೆ ಅರ್ಜಿಯನ್ನು ಸಿದ್ಧಪಡಿಸುವಾಗ ಅಥವಾ ಭರ್ತಿ ಮಾಡುವಾಗ ಗಮನಿಸಬೇಕಾದ ಸಂಗತಿಗಳನ್ನು ಅರ್ಜಿ ಬರೆಯುವ ಮೊದಲು, ಅರ್ಜಿ ಬರೆಯುವಾಗ, ಅರ್ಜಿ ಬರೆದ ಮೇಲೆ ಎಂದು ಮೂರು ಹಂತಗಳಲ್ಲಿ ಇಲ್ಲಿ ವಿವೇಚಿಸಲಾಗಿದೆ.

ಮೊದಲ ಹಂತ: ಅರ್ಜಿ ಬರೆಯುವ ಮೊದಲು

೧. ನಿಮಗೆ ಸೂಕ್ತವಲ್ಲದ, ಅರ್ಹತೆ ಮೀರಿದ ನೌಕರಿಯ ಜಾಹೀರಾತುಗಳಿಗೆ ಅರ್ಜಿ ಸಲ್ಲಿಸಬೇಡಿ; ಆಯ್ಕೆ ಸಂಭವ ಅತಿಕಡಿಮೆ. ಆದ್ದರಿಂದ ಹಣ, ಶ್ರಮ ಎರಡೂ ವ್ಯರ್ಥ; ಅಲ್ಲದೆ ನಿರಾಸೆ ಹೊಂದುವ ಸಂದರ್ಭಗಳೇ ಅಧಿಕ.

೨. ಈಗಾಗಲೇ ಕೆಲಸದಲ್ಲಿದ್ದು ಆ ಸಂಸ್ಥೆಯ ಮೂಲಕ ಅಥವಾ ಅನುಮತಿ ಪಡೆದು ಅರ್ಜಿ ಹಾಕುವಾಗ ಆ ಸಂಸ್ಥೆಯ ಖಾಲಿ ಶೀರ್ಷಿಕೆ ಹಾಳೆ (ಲೆಟರ್ ಹೆಡ್) ಗಳನ್ನು ಬಳಸುವುದು ಉಚಿತವಲ್ಲ.

೩. ಅರ್ಜಿಯನ್ನು ಯಾವ ರೀತಿ ಭರ್ತಿ ಮಾಡಬೇಕು ಎಂಬುದನ್ನು ಗಮನಿಸಿ. ಕಂಪ್ಯೂಟರ್‌ಗಾಗಿ ಸಿದ್ಧಪಡಿಸಿದ ಅರ್ಜಿಗಳಾದರೆ ಕಾಲಂ ಭರ್ತಿಗೆ ಅಂಕಿಗಳನ್ನು ಬಳಸಬೇಕಾಗುತ್ತದೆ. ಆ ಬಗ್ಗೆ ಸೂಚನೆಗಳಿರುತ್ತವೆ; ಅವುಗಳನ್ನು ಚೆನ್ನಾಗಿ ಓದಿಕೊಂಡು ಸೂಚನೆಗನುಗುಣವಾಗಿ ಅರ್ಜಿಯನ್ನು ಭರ್ತಿ ಮಾಡಿ.

ಉದಾ: ನೀವು ಹೆಂಗಸರೇ, ಗಂಡಸರೇ

ಸೂಚನೆ: ಗಂಡಸರಾದರೆ ಖಾಲಿ ಜಾಗದಲ್ಲಿ ೦೧ ಅಂಕಿ ಬರೆಯಿರಿ;
ಹೆಂಗಸರಾದರೆ ೦೨ ಅಂಕಿ ಬರೆಯಿರಿ.

೪. ಹಾಳೆಯ ಒಂದೇ ಬದಿಯಲ್ಲಿ ಬರೆಯಲು ಬೇಕಾದಷ್ಟು ಶುದ್ಧ ಬಿಳಿಹಾಳೆಗಳನ್ನು ಸಿದ್ಧಪಡಿಸಿಕೊಳ್ಳಿ, ಕೊಳೆಯಾದ, ಮಡಚಿದ ಹಾಳೆಗಳನ್ನು ಬಳಸಬೇಡಿ.

೫. ಪೆನ್ನಿನಲ್ಲಿ ಶಾಯಿ ಇದೆಯೇ, ರೀಫಿಲ್ ಸರಿಯಾಗಿ ಬರೆಯುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

೬. ಅರ್ಜಿ ಭರ್ತಿ ಮಾಡಲು ಬೇಕಾದ ಮಾಹಿತಿಗಳ ಕಾಗದ ಪತ್ರಗಳನ್ನು ಮತ್ತು ಕಳಿಸಬೇಕಾದ ದಾಖಲೆಗಳ ನಕಲುಗಳನ್ನು ಕ್ರಮಬದ್ಧವಾಗಿ ಹತ್ತಿರದಲ್ಲಿ ಜೋಡಿಸಿಟ್ಟುಕೊಳ್ಳಿ. ಉದಾಃ ಜಾಹೀರಾತು ಪ್ರಕಟವಾದ ಪತ್ರಿಕೆ ಅಥವಾ ಬರೆದುಕೊಂಡ ಜಾಹೀರಾತು ವಿವರಗಳು; ಅಂಕಪಟ್ಟಿಗಳ ವಿವರ, ಯೋಗ್ಯತಾ ಪತ್ರಗಳು, ಜಾತಿ ಸರ್ಟಿಪೀಕೇಟುಗಳು ಇತ್ಯಾದಿ.

೭. ಅರ್ಜಿ ಬರೆಯುವ ಮುನ್ನ ಬೇಕಾದ ಅರ್ಹತೆಗಳನ್ನು ಗಮನಿಸಿ. ಕನಿಷ್ಠ ಅರ್ಹತೆಗಳಿದ್ದರೂ ಅರ್ಜಿ ಹಾಕಿ, ಅವಕಾಶ, ಅದೃಷ್ಟ ಒಮ್ಮೊಮ್ಮೆ ಒಲಿಯಬಹುದು; ಅದಕ್ಕಿಂತ ಹೆಚ್ಚಾಗಿ ಅನೇಕ ವೇಳೆ ಉದ್ಯೋಗ ಸಿಗದಿದ್ದರೂ, ಸಂದರ್ಶನ ಸಿಗುತ್ತದೆ; ಸಂದರ್ಶನದಿಂದ ಅನುಭವ ಹೆಚ್ಚುತ್ತದೆ.

೮. ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಸ್ವಬರಹದಲ್ಲಿ ಕಳಿಸಬೇಕೇ? ಬೆರಳಚ್ಚಿನಲ್ಲಿ (ಟೈಪಿಸಿ) ಕಳಿಸಬೇಕೇ? ನಿರ್ದಿಷ್ಟ ನಮೂನೆಯಲ್ಲಿ ಕಳಿಸಬೇಕೇ? ನಿರ್ದಿಷ್ಟ ನಮೂನೆಯನ್ನು ಕಾಪಿ ಮಾಡಿಕೊಂಡು ಅದನ್ನು ಭರ್ತಿಮಾಡಿ ಕಳಿಸಬೇಕೇ? ಎಂಬುದನ್ನು ನಿರ್ಧರಿಸಿಕೊಳ್ಳಿ.

೯. ಅರ್ಜಿ ಭರ್ತಿ ಮಾಡುವ ಮೊದಲು ಮಾನಸಿಕವಾಗಿ ನಿರ್ದಿಷ್ಟ ನಮೂನೆಯಲ್ಲಿರುವ ಪ್ರಶ್ನೆಗಳಿಗೆಲ್ಲಾ ಬೇಕಾದ ದಾಖಲೆಗಳು, ಉತ್ತರಗಳು ನಿಮ್ಮಲ್ಲಿ ಸಿದ್ದವಿದೆಯೇ ಎಂಬುದನ್ನು ಅರ್ಜಿಯನ್ನು ಪೂರ್ತಿಯಾಗಿ ಓದಿ ಖಚಿತಪಡಿಸಿಕೊಳ್ಳಿ.

೧೦. ಅರ್ಜಿಯಲ್ಲಿರುವ ಕಾಲಂಗಳನ್ನು ಭರ್ತಿ ಮಾಡುವ ಮುಂಚೆ ಯಾವ ಕಾಲಂ ಸರಿಯಾಗಿ ಗೊತ್ತಾಗಲಿಲ್ಲ ಎಂಬುದನ್ನು ಗುರುತು ಹಾಕಿಟ್ಟುಕೊಳ್ಳಿ. ಬಲ್ಲವರಿಂದ ವಿವರಗಳನ್ನು ಕೇಳಿ ತಿಳಿದುಕೊಂಡು ಆಮೇಲೆ ಭರ್ತಿ ಮಾಡಿ; ಆದರೆ ನೀವೇ ಊಹೆ ಮಾಡಿ ಭರ್ತಿ ಮಾಡಬೇಡಿ.

ಎರಡನೆಯ ಹಂತ; ಅರ್ಜಿ ಬರೆಯುವಾಗ

೧.  ಹಾಳೆಯ ಒಂದೇ ಬದಿಯಲ್ಲಿ ಬರೆಯಿರಿ, ಇಲ್ಲವೇ ಟೈಪು ಮಾಡಿ, ಅರ್ಜಿ ನಮೂನೆ ಇದ್ದರೆ ಕಾಲಂ ಜಾಗದಲ್ಲೇ ಸಣ್ಣದಾಗಿ ತಪ್ಪಿಲ್ಲದಂತೆ ಉತ್ತರಿಸಲು ಯತ್ನಿಸಿ.

೨. ಅರ್ಜಿ ಬರೆಯುವಾಗ ಹಾಳೆಯ ಎಡಭಾಗದಲ್ಲಿ ಖಾಲಿ ಅಂಚು ಬಿಡಿ; ಮೇಲ್ಭಾಗದಲ್ಲಿ ಖಾಲಿ ಅಂಚು ಇರಲಿ; ಆದರೆ ಹಾಳೆಯ ಕೆಳಭಾಗದಲ್ಲಿ ಮೇಲ್ಭಾಗಕ್ಕಿಂತ ಹೆಚ್ಚು ಖಾಲಿ ಜಾಗವಿರಲಿ ಈ ಭಾಗ ಖಾಲಿ ಇದ್ದರೆ ಅಧಿಕಾರಿಗಳಿಗೆ ಟಿಪ್ಪಣಿ ಬರೆಯಲು ಅನುಕೂಲವಾಗುತ್ತದೆ.

೩. ಅಗತ್ಯವಿರುವ ಕಡೆಗಳಲ್ಲೆಲ್ಲಾ ಲೇಖನ ಚಿಹ್ನೆಗಳನ್ನು ಬಳಸಿ.

೪. ಕೇಳಿರುವ ವಿವರಗಳಿಗೆ ನೀವು ನೀಡುವ ಉತ್ತರಗಳು ನೇರವಾಗಿ, ಸರಳವಾಗಿ, ಸಂಕ್ಷಿಪ್ತವಾಗಿ ಇರಲಿ.

೫. ವಿವರಗಳನ್ನು ನೀಡುವಾಗ ಶಕ್ಯವಿದ್ದಷ್ಟು ಶೀರ್ಷಿಕೆ, ಉಪಶೀರ್ಷಿಕೆಗಳನ್ನು ಬಳಸಿ ಹಾಗೂ ಮಹತ್ವದ ಮಾತುಗಳನ್ನು ಕೆಳಗೆರೆ ಎಳೆದು ಇಲ್ಲವೆ ಬಣ್ಣದ ಗೆರೆ ಎಳೆಯುವುದರ ಮೂಲಕ ಎತ್ತಿ ತೋರಿಸಿ.

೬. ಈಗಾಗಲೇ ಕೆಲಸದಲ್ಲಿದ್ದರೆ, ಜಾಹೀರಾತಿನಲ್ಲಿ ಉಲ್ಲೇಖಿತ ಕೆಲಸ ಸಿಕ್ಕಾಗ, ಇರುವ ಕೆಲಸ ಬಿಡುವ ಕಾರಣ ತಿಳಿಸಿ. ಅಥವಾ ಕೆಲಸದಲ್ಲಿ ಇಲ್ಲದಿದ್ದರೆ, ಜಾಹೀರಾತಿನ ಪ್ರಕಟಣೆಯ ವಿವರಗಳನ್ನು ಪತ್ರಿಕೆಯ ಹೆಸರು, ದಿನಾಂಕ ತಿಳಿಸಿ.

೭. ಅರ್ಜಿಯಲ್ಲಿ ಕಾಗುಣಿತದೋಷಗಳು, ವಾಕ್ಯರಚನಾ ತಪ್ಪುಗಳು, ವ್ಯಾಕರಣ ನಿಯಮ ಭಂಗಗಳು ಆಗದಂತೆ ಎಚ್ಚರ ವಹಿಸಿ, ದೋಷ ರಹಿತ ಭಾಷೆಯನ್ನು ಬಳಸಿ.

೮. ಚಿತ್ತಿಲ್ಲದೆ, ತಿದ್ದದೆ, ಗೀಚದೆ, ಹೊಡೆದು ಹಾಕದೆ, ಸ್ಪಷ್ಟಾಕ್ಷರಗಳಲ್ಲಿ ಸಾಧ್ಯವಿದ್ದಷ್ಟೂ ದುಂಡಗೆ, ಕಣ್ಣಿಗೊತ್ತಿಕೊಳ್ಳುವ ರೀತಿಯಲ್ಲಿ ಬರೆಹ-ಲಿಪಿ ವಿನ್ಯಾಸವಿರಲಿ.

೯. ಅರ್ಜಿಯಲ್ಲಿ ವಿವರಗಳನ್ನು ಕ್ರಮಬದ್ಧವಾಗಿ ಪ್ರಸ್ತಾಪಿಸಿ, ಕ್ರಮವಾಗಿ ಶೀರ್ಷಿಕೆಗಳನ್ನು ನೀಡಿ. ಉದಾ: ಮೊದಲು ವ್ಯಕ್ತಿ ವಿವರ, ಅನಂತರ ವಿದ್ಯಾಭ್ಯಾಸ, ಮೂರನೆಯದಾಗಿ ಅನುಭವ, ನಾಲ್ಕನೆಯದಾಗಿ ವಿಶೇಷ ಅರ್ಹತೆಗಳು ಇತ್ಯಾದಿ.

೧೦. ಪತ್ರದ ಮೊದಲಲ್ಲಿ, ಬಲಭಾಗದ ಮೂಲೆಯಲ್ಲಿ ಅಥವಾ ಪತ್ರದ ಕೊನೆಯಲ್ಲಿ ಎಡಭಾಗದಲ್ಲಿ ದಿನಾಂಕವನ್ನು ಮರೆಯದೆ ಬರೆಯಬೇಕು. ಪತ್ರದ ಕೊನೆಯೆಲ್ಲಿ ಬಲಭಾಗದಲ್ಲಿ ಸಹಿ ಮಾಡುವುದನ್ನು ಮರೆಯಬಾರದು. ಸಹಿ ವಾಚನೀಯವಿಲ್ಲದಿದ್ದಾಗ ಆವರಣ ಚಿಹ್ನೆ ಹಾಕಿ ಸಹಿಯ ಕೆಳಗೆ ಬಿಡಿ ಅಕ್ಷರಗಳಲ್ಲಿ ಸ್ಪಷ್ಟವಾಗಿ ಪೂರ್ಣ ಹೆಸರನ್ನು ಬರೆಯಿರಿ.

೧೧. ಶೈಲಿಯ ದೃಷ್ಟಿಯಿಂದ ಕಠಿಣ ಪದಗಳನ್ನು ಅಪೂರ್ವ ಗ್ರಾಂಥಿಕ ಪದಗಳನ್ನು ಅಥವಾ ಸುದೀರ್ಘ ವಾಕ್ಯಗಳನ್ನು ರಚಿಸಬೇಡಿ. ಸರಳ ವಾಕ್ಯಗಳನ್ನು ರಚಿಸಿ, ಸುಲಭವಾದ ಪದಗಳನ್ನು ಬಳಸಿ. ಎಲ್ಲರೂ ಬಳಸುವ ಅನ್ಯಭಾಷಾ ಪದಗಳನ್ನು ಬಳಸಿ, ಪದಗಳ ಬಳಕೆಯಲ್ಲಿ ಮಡಿವಂತಿಕೆ ಬೇಡ, ಅರ್ಥದ ಅಭಿವ್ಯಕ್ತಿ ಮುಖ್ಯ.

೧೨. ಅನವಶ್ಯಕ ವಿವರಗಳನ್ನು ನೀಡಬೇಡಿ, ಅಗತ್ಯ ವಿವರಗಳನ್ನು ಬಿಡಬೇಡಿ. ಬಡಾಯಿ ಕೊಚ್ಚಬೇಡಿ. ಸುಳ್ಳು ಹೇಳಬೇಡಿ. ಅಹಂ-ದೃಷ್ಟಿಯಿಂದ ಬರೆಯಬೇಡಿ. ತ್ವಂ ದೃಷ್ಟಿ ಬಿಡಬೇಡಿ.

೧೩. ಅರ್ಜಿಯಲ್ಲಿ ವಿವರಗಳನ್ನು ನೀಡುವಾಗ ದೈನ್ಯಭಾವ ಬೇಡ. ದೀನಾರ್ಥ ಪ್ರಾರ್ಥನೆಗಳು ಬೇಡ. ಕೆಲಸ ಸಿಗುತ್ತದೆ ಎಂಬ ಕಲ್ಪನೆಯಿಂದ ಹೀಗೆ ಬರೆಯಬಾರದು. ‘ನನ್ನ ತಾಯಿ ವಿಧವೆ, ನನ್ನ ತಂಗಿ-ತಮ್ಮಂದಿರು ಚಿಕ್ಕವರು; ನಾನೇ ಹಿರಿಯ, ನನ್ನಿಂದಲೇ ಸಂಸಾರ ಸಾಗಬೇಕು. ನಿಮ್ಮ ಮಗನೆಂದು ತಿಳಿಯಿರಿ, ಏನಾದರೂ ಮಾಡಿ ಕೆಲಸ ಕೊಡಿ, ನೀವೇ ಗತಿ ಇತ್ಯಾದಿ.

೧೪. ಅಹಂಭಾವದ ಮಾತುಗಳನ್ನು ಆಡಬಾರದು: ‘ನಾನು ಆದರ್ಶವಾದಿ, ನನಗೆ ನಿಮ್ಮ ಸಂಬಳ ಮುಖ್ಯವಲ್ಲ, ನಿಯತ್ತು ಮುಖ್ಯ. ನೀವು ನನಗೆ ಇಂಥಿಂಥ ಸೌಲಭ್ಯ ನೀಡಬೇಕು. ನೀವಲ್ಲದಿದ್ದರೆ ಇನ್ನೊಬ್ಬರು ಕೆಲಸ ಕೊಡುತ್ತಾರೆ. ಆದರೂ ನೋಡೋಣವೆಂದು ಅರ್ಜಿ ಸಲ್ಲಿಸುತ್ತಿದ್ದೇನೆ. ಕೂಡಲೇ ಉತ್ತರಿಸಿ. ನಿಮಗೆ ಶಕ್ತಿಯಿದ್ದರೆ ೩೦೦೦ರೂ. ಗಳಿಗಿಂತಲೂ ಮೇಲ್ಪಟ್ಟು ಸಂಬಳ ಕೊಡಬೇಕು. ತಿಳಿಯಿತೇ? ಇತ್ಯಾದಿ ಬರೆಯಬಾರದು.

೧೫. ಅರ್ಜಿಯನ್ನು ಒಂದೇ ಸಲ ತದೇಕ ಚಿತ್ತರಾಗಿ ಭರ್ತಿಮಾಡಿ, ಈಗೊಂದು ಕಾಲಂ, ಆಗೊಂದು ಕಾಲಂ, ಇಂದು ಅರ್ಧ ಅರ್ಜಿ, ನಾಳೆ ಅರ್ಧ ಅರ್ಜಿಯನ್ನು ಭರ್ತಿ ಮಾಡಬೇಡಿ; ಅಥವಾ ಇತರರಿಗೆ ಭರ್ತಿ ಮಾಡಲು ಹೇಳಬೇಡಿ. ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಿ.

೧೬. ಸ್ವಯಂ ನಿವೇದಿತ ಅಭ್ಯರ್ಥನ ಪತ್ರಗಳನ್ನು ಖಾಲಿ ಹಾಳೆಯಲ್ಲಿ ಬರೆಯುವಾಗ ಅಭ್ಯರ್ಥಿಯ ವಿಳಾಸವನ್ನು ಪತ್ರದ ಮೇಲ್ಭಾಗದ ಮೂಲೆಯಲ್ಲಿ ನಮೂದಿಸಬೇಕು. ವಿಳಾಸದ ಕೆಳಗೆ ದಿನಾಂಕವನ್ನು ಬರೆಯಬೇಕು. ಪತ್ರದ ಎಡ ಮೇಲ್ಭಾಗದಲ್ಲಿ ಅಭ್ಯರ್ಥಿಯ ವಿಳಾಸ ಬರೆದರೆ ‘ಇಂದ’ ಎಂಬ ಮಾತಿರಬೇಕು. ಹೀಗೆ ಬರೆದಾಗ ಉದ್ದೇಶಿತ ವ್ಯಕ್ತಿ ವಿಳಾಸಕ್ಕೆ ‘ಗೆ/ ಅವರಿಗೆ/ ಎಂಬ ಪದವನ್ನು ಬಳಸಬೇಕು. ದಿನಾಂಕ ಮತ್ತು ಸ್ಥಳವನ್ನು ಇಂಥ ಸಂದರ್ಭಗಳಲ್ಲಿ ಪತ್ರದ ಕೆಳಭಾಗದಲ್ಲಿ ಅಂಚಿನ ಪ್ರಾರಂಭದಲ್ಲಿ ಮುಕ್ತಾಯ ವಾಕ್ಯಗಳ ನಂತರ ಬರೆಯಬೇಕು.

೧೭. ಹಾಲಿ ಕೆಲಸದಲ್ಲಿರುವ ಸಂಸ್ಥೆಯನ್ನೋ, ಮಾಲೀಕರನ್ನೋ, ಇತರರನ್ನೋ ದೂಷಿಸುವ ಮಾತುಗಳನ್ನಾಡಬೇಡಿ. ‘ಅನ್ಯರ ದೂಷಣೆ ನಿಮಗೇ ತಿರುಗುಬಾಣ’ ಎಂಬುದನ್ನು ನೆನಪಿಡಿ.

ಮೂರನೆಯ ಹಂತ: ಅರ್ಜಿ ಬರೆದ ಮೇಲೆ

೧. ಅಂಚೆಯಲ್ಲಿ ಅರ್ಜಿಯನ್ನು ಕಳಿಸಬೇಕಾದಾಗ ಜಾಹೀರಾತಿನಲ್ಲಿ ಸ್ಪಷ್ಟ ನಿರ್ದೇಶನವಿದ್ದರೆ ಅದರಂತೆ ಕಳಿಸಿ. ಉದಾ: ಲಕೋಟೆ ಮೇಲೆ ಗುಮಾಸ್ತೆ ಹುದ್ದೆಗಾಗಿ ಎಂದು ಮೇಲ್ಬರಹ ಬರೆಯಿರಿ, ರಿಜಿಸ್ಟರ್ಡ್ ಅಂಚೆಯಲ್ಲಿ ಕಳಿಸಿ ಇತ್ಯಾದಿ.

೨. ಸ್ವಯಂ ನಿವೇದಿತ ಅರ್ಜಿಗಳನ್ನು ಕಳಿಸುವಾಗ ಸಾಮಾನ್ಯವಾಗಿ ಕಾರ್ಡು, ಅಂತರ್ದೇಶೀಯ ಬಳಸಬೇಡಿ. ಅತಿ ಚಿಕ್ಕ ಲಕೋಟೆಯನ್ನು ಬಳಸಬೇಡಿ, ಸಾಕಷ್ಟು ಉದ್ದವಾದ ಲಕೋಟೆಯನ್ನು ಬಳಸಿ, ಅರ್ಜಿಗಳನ್ನು ಹೆಚ್ಚು ಪದರ ಪದರಗಳನ್ನಾಗಿ ಮಡಚಬೇಡಿ.

೩. ಅರ್ಜಿಯನ್ನು ಕಳಿಸಬೇಕಾದ ಮೇಲ್ವಿಳಾಸವನ್ನು ಜಾಹೀರಾತಿನಲ್ಲಿ ಸೂಚಿಸಿರುವ ಪ್ರಕಾರ ಬರೆಯಿರಿ. ಹೆಸರಿದೆಯೇ? ಪತ್ರಿಕೆ ದ್ವಾರಾ ಇದೆಯೇ? ಅಂಚೆ ಪೆಟ್ಟಿಗೆ ಸಂಖ್ಯೆ ಇದೆಯೇ? ಎಂಬುದನ್ನು ಗಮನಿಸಿ. ವಿಳಾಸವನ್ನು ಚಿತ್ತಿಲ್ಲದಂತೆ, ತಪ್ಪಿಲ್ಲದಂತೆ, ತಿದ್ದದೆ, ಗೆರೆ ಹೊಡೆಯದೆ, ಶುದ್ಧವಾಗಿ, ದುಂಡಾಗಿ, ಅಕ್ಷರಗಳು ಬಿಡಿಯಾಗಿರುವಂತೆ ಬರೆಯಿರಿ.

೪. ಸೂಕ್ತ ರೀತಿಯಲ್ಲಿ ಸಂಬೋಧನಾ ಪದಗಳನ್ನು ಬಳಸಿ.

೫. ಲಗತ್ತಿಸಬೇಕಾದ ಪತ್ರಗಳಿದ್ದರೆ ಅಥವಾ ದಾಖಲೆಗಳ ನಕಲುಗಳಿದ್ದರೆ ಅವುಗಳನ್ನು ಕ್ರಮವಾಗಿ ಜೋಡಿಸಿ. ಅವನ್ನು ಪತ್ರದಲ್ಲಿ ನಮೂದಿಸಿಯೇ ಎಂಬುದನ್ನು ಪರಿಶೀಲಿಸಿ. ಅನಂತರ ಅರ್ಜಿ ಜೊತೆಗೆ ಲಗತ್ತಿಸಿ ಅರ್ಜಿಯನ್ನು ಲಕೋಟೆಯೊಳಗೆ ಹಾಕಿ.

೬. ಅರ್ಜಿಗಳನ್ನಾಗಲಿ ದಾಖಲೆಗಳನ್ನಾಗಲಿ ನಿಮ್ಮ ಸ್ವಂತಕ್ಕೆ ನಕಲು (ಜೆರಾಕ್ಸ್) ಪ್ರತಿಗಳನ್ನು ಮಾಡಿಸಿ ಇಟ್ಟುಕೊಳ್ಳಿ, ನೌಕರಿ ಜಾಹೀರಾತುದಾರರಿಗೆ ಕಳಿಸಬೇಡಿ.

೭. ಕೆಲವೊಮ್ಮೆ ದ್ವಿಪ್ರತಿ, ತ್ರಿಪ್ರತಿ ಕಳಿಸುವಾಗಲೂ ಪ್ರತಿಯೊಂದನ್ನು ಮೂಲ ಪ್ರತಿಯ ಹಾಗೆ ಬರೆಯಿರಿ, ಇಲ್ಲವೇ ಟೈಪಿಸಿ ಅಥವಾ ಅಚ್ಚಾದ ನಮೂನೆಯ ಪ್ರತಿಗಳಲ್ಲೇ ಭರ್ತಿ ಮಾಡಿ.

೮. ಸಿದ್ಧಪಡಿಸಿದ ಅರ್ಜಿಯನ್ನು ಕೂಡಲೇ ಅಂಚೆಗೆ ಹಾಕಿ, ಇನ್ನೂ ಕೊನೆಯ ದಿನಾಂಕ ಬಹು ದೂರವಿದೆಯೆಂದು ನಿಧಾನಿಸಬೇಡಿ. ಆಮೇಲೆ ತಡವಾಗಬಹುದು. ಇಲ್ಲವೇ ಮರೆತು ಹೋಗಬಹುದು ಅಥವಾ ಅರ್ಜಿ ಕಳೆದು ಹೋದರೂ ಹೋಗಬಹುದು. ಅಂಚೆಗೆ ಹಾಕುವ ದಿನ ಅನಿವಾರ್ಯ ಕಾರಣಗಳಿಗಾಗಿ ನೀವೊಂದು ಊರಿನಲ್ಲಿ, ಅರ್ಜಿಯೊಂದು ಊರಿನಲ್ಲಿ ಎಂದಾಗಿ ಬಿಡಬಹುದು.

೯. ಕೆಲವರು ಜಾಹೀರಾತುಗಳಲ್ಲಿ ಅಭ್ಯರ್ಥಿಯ ಭಾವಚಿತ್ರವನ್ನು ಕಳಿಸಲು ಕೋರಿರುತ್ತಾರೆ. ಇತ್ತೀಚೆ ತೆಗೆಸಿದ ೩ “ -೨” ಆಕಾರದ ಪಾಸ್‌ಪೋರ್ಟ್ ಭಾವಚಿತ್ರವನ್ನು ಕಳಿಸಿ. ಆ ಭಾವಚಿತ್ರ ಸಂದರ್ಶನಕ್ಕೆ ಹೋಗುವ ರೀತಿಯ ಉಡುಪಿನಲ್ಲಿದ್ದರೆ ಒಳ್ಳೆಯದು. ಸಾಮಾನ್ಯವಾಗಿ ಎದೆ ಮಟ್ಟದ ಚಿತ್ರವನ್ನು ಜಾಹೀರಾತುದಾರರು ಅಪೇಕ್ಷಿಸುತ್ತಾರೆ. ಜಾಹೀರಾತುದಾರರು ಕೇಳದಿದ್ದಾಗ ತಾವಾಗಿ ಅರ್ಜಿದಾರರು ಭಾವಚಿತ್ರವನ್ನು ಕಳಿಸಬೇಕಿಲ್ಲ.

೧೦. ಸಂದರ್ಶನ ಬಂದಾಗ ಉತ್ಸಾಹದಿಂದ ಭಾಗವಹಿಸಿ. ಪ್ರತಿಯೊಂದು ಸಂದರ್ಶನವೂ ಅನುಭವದ ಸಂಗ್ರಹ; ಮುಂದಿನ ಸಂದರ್ಶನಗಳಿಗೆ ತಯಾರಿ.

ಉದ್ಯೋಗ ಜಾಹೀರಾತಿಗೆ ಉತ್ತರವಾಗಿ ಸ್ವಹಸ್ತಾಕ್ಷರದಲ್ಲಿ ಖಾಸಗಿಯಾಗಿ ಬರೆದ ಅರ್ಜಿ ಪತ್ರ
ಮಾದರಿ

ದಿನಾಂಕ ೧೦-೭-೧೯೮೭

ವ್ಯವಸ್ಥಾಪಕರು
ಶ್ರೀ ಮಾರ್ಕಂಡೇಯ ಔಷಧಿ ತಯಾರಕರು
ಶಾಶ್ವತ ನಿಲಯ, ಅಮೃತನಗರ
ದೇವನೂರು.

ಮಾನ್ಯರೆ,

‘ವರದಾನ ಪತ್ರಿಕೆ’ ಯಲ್ಲಿ ತಮ್ಮ ಸಂಸ್ಥೆಯ ಔಷಧಿಗಳನ್ನು ಮಾರಾಟ ಮಾಡಲು ಮಾರಾಟದ ಪ್ರತಿನಿಧಿಗಳು ಸಂಬಳದ ಮೆಲೆ ಅಥವಾ ಕಮೀಷನ್ ಆಧಾರದ ಮೇಲೆ ಬೇಕಾಗಿದ್ದಾರೆ ಎಂದು ದಿನಾಂಕ ೭-೭-೧೯೮೭ರಂದು ಪ್ರಕಟವಾದ ಜಾಹೀರಾತಿನ ಪ್ರಕಾರ ಈ ಅರ್ಜಿಯನ್ನು ಬರೆಯುತ್ತಿದ್ದೇನೆ.

ಬಿ.ಎಸ್ಸಿ. ಪದವಿ ಪಡೆದ ನಂತರ ಡಿ.ಪಾರ‍್ಮ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಾನು ಕಳೆದ ಮೂರು ವರ್ಷಗಳಿಂದ ‘ಆರೋಗ್ಯ ಮೆಡಿಕಲ್ ಸ್ಟೋರ್ಸ್‌’ನಲ್ಲಿ ಒಪ್ಪೊತ್ತಿನ ಮಾರಾಟ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ದಿವ್ಯ ಸಂಜೀವಿನಿ ಮಾತ್ರೆ ಮತ್ತು ದೀರ್ಘಾಯು ಟಾನಿಕ್ ತಯಾರಿಕೆಗಳ ಚಿರಂಜೀವಿ ಫಾರ್ಮ ಸ್ಯೊಟಿಕಲ್ ಕಂಪೆನಿ ಪ್ರತಿನಿಧಿಯಾಗಿ ನಮ್ಮ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸಿದ್ಧ ಔಷಧಿ ತಯಾರಿಕಾ ಸಂಸ್ಥೆಯ ಮಾರಾಟ ಪ್ರತಿನಿಧಿಯಾಗಿ ದೇಶಾದ್ಯಂತ ಸಂಚರಿಸಿ ಅನುಭವ ಪಡೆಯಲು ಉತ್ಸುಕನಾಗಿದ್ದೇನೆ.

ತಮ್ಮ ಕಂಪನಿಯಲ್ಲಿ ಅಂಥ ಅವಕಾಶವಿದೆ ಎಂದು ತಿಳಿದು ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ. ಹಿಂದಿ, ಇಂಗ್ಲೀಷ್, ಕನ್ನಡ, ತಮಿಳು, ತೆಲುಗು ಭಾಷೆಗಳನ್ನು ಓದಲು ಬರೆಯಲು ಮಾತನಾಡಲು ಬಲ್ಲೆ. ಮೇಲೆ ತಿಳಿಸಿದಂತೆ ಮೆಡಿಕಲ್ ಸ್ಟೋರ‍್ಸ್‌ನಲ್ಲಿ ಮತ್ತು ಕಂಪನಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲು ಸಿದ್ದನಾಗಿದ್ದೇನೆ. ಮತ್ತೊಂದು ವಿಷಯ: ಲೋಕಾನುಭವ ರೈಲು ಯಾತ್ರಾ ಕಂಪನಿಯಲ್ಲಿ ಮಾರ್ಗದರ್ಶಕನಾಗಿ ಅಖಿಲ ಭಾರತ ಪ್ರವಾಸವನ್ನು ಹಲವಾರು ಬಾರಿ ಕೈಗೊಂಡಿರುವುದರಿಂದ ಜನಸಂಪರ್ಕ ಹಾಗೂ ಸ್ಥಳಗಳ ಪರಿಚಯ ನನಗೆ ಚೆನ್ನಾಗಿ ಆಗಿದೆ. ನನ್ನ ಪೂರ್ವಾನುಭವದ ಪ್ರಮಾಣ ಪತ್ರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ.

ತಮ್ಮ ಜಗತ್ಪ್ರಸಿದ್ಧ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವುದರಿಂದ ಶ್ರೇಷ್ಠ ಮಾರಾಟಗಾರ ಪ್ರತಿನಿಧಿಯೆನಿಸಿಕೊಳ್ಳುವ, ಆ ಮೂಲಕ ತಮಗೆ ಕೀರ್ತಿ ತರುವ ಅವಕಾಶವನ್ನು ಒದಗಿಸುವಿರೆಂದು ನಂಬಿದ್ದೇನೆ.

ವಂದನೆಗಳೊಂದಿಗೆ,

ತಮ್ಮ ಸೇವಾಕಾಂಕ್ಷಿ
ದೃಢಾಂಗರಾವ್

ನಂ. ೯೫, ೪ನೆಯ ರಸ್ತೆ
ಕೋಟೆ ಬಡಾವಣೆ
ನವದುರ್ಗ ಜಿಲ್ಲೆ

ಜಾಹೀರಾತು ನೋಡಿ ನಮೂನೆಯಲ್ಲಿ ಮಾಹಿತಿ ನೀಡಿ ಕಳುಹಿಸುವ ಅಭ್ಯರ್ಥನ ಪತ್ರದ ಮಾದರಿ
ಮಾದರಿ

ದಿನಾಂಕ : ೧೫ನೆಯ ಜುಲೈ ೧೯೮೭

ಕಾರ್ಯದರ್ಶಿಗಳು
ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ
ವಿದ್ಯಾನಗರ.

ಸನ್ಮಾನ್ಯರೆ,

ದಿನಾಂಕ ೫ ಜುಲೈ ೧೯೮೭ರಂದು ‘ಸಂಧ್ಯಾಜ್ಯೋತಿ’ ದಿನ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿಗೆ ಅನುಸಾರವಾಗಿ ತಮ್ಮ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ‘ಜ್ಞಾನಗಂಗಾ’ ಕಲಾ ಕಾಲೇಜಿನಲ್ಲಿ ತೆರವಾಗಿರುವ ಕನ್ನಡ ಅಧ್ಯಾಪಕ ಹುದ್ದೆಗೆ, ಜಾಹೀರಾತಿನಲ್ಲಿ ಪ್ರಕಟವಾದ ನಮೂನೆಯಲ್ಲಿ ಪ್ರಾರ್ಥನಾ ಪತ್ರವನ್ನು ಸಲ್ಲಿಸುತ್ತಿದ್ದೇನೆ. ಈ ಕೆಳಕಂಡ ವಿವರಗಳು ತಮ್ಮ ದೃಷ್ಟಿಯಿಂದ ತೃಪ್ತಿಕರವಾಗಿದ್ದು, ನಾನೊಬ್ಬ ಸಮರ್ಪಕ ಅರ್ಹ ಅಭ್ಯರ್ಥಿಯಾಗಿದ್ದೇನೆಂದು ಭಾವಿಸಿದ್ದೇನೆ. ತಾವು ಸಂದರ್ಶನಕ್ಕೆ ಕರೆದಾಗ ಹಾಜರಾಗಲು ಸಿದ್ಧನಿದ್ದೇನೆ.

ವಂದನೆಗಳೊಡೆನೆ,

ತಮ್ಮ ವಿಧೇಯ,
ಆದಿ ಪಂಪಾವತಿ

ಅಡಕಗಳು:
೧) ಭರ್ತಿ ಮಾಡಿದ ಅರ್ಜಿ ನಮೂನೆ
೨) ಸರ್ಟಿಫಿಕೇಟುಗಳು:
ಅ) ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಆ) ಎಂ.ಎ.ಅಂಕಪಟ್ಟಿ
ಇ) ಚಿನ್ನದ ಪದಕದ ಸರ್ಟಿಫಿಕೇಟ್
ಈ) ಕನ್ನಡ ಬೆರಳಚ್ಚು, ಶೀಘ್ರ ಲಿಪಿ ಸರ್ಟಿಫಿಕೇಟ್‌ಗಳು
ಉ) ಹಿಂದಿ ಪದವಿ ಸರ್ಟಿಪೀಕೇಟ್
ಊ) ಕ್ರಿಕೆಟ್ ಪ್ರಶಸ್ತಿ ಪತ್ರ
ಎ) ದೇವರಪ್ಪ, ನಿಶಾರಾಣಿ ಕಾಲೇಜುಗಳ ಸರ್ಟಿಪಿಕೇಟುಗಳು

ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ, ವಿದ್ಯಾನಗರ

‘ಸಂಧ್ಯಾಜ್ಯೋತಿ’ ದಿನಪತ್ರಿಕೆಯಲ್ಲಿ ದಿನಾಂಕ ೫ ಜುಲೈ ೧೯೮೭ರಂದು ಪ್ರಕಟವಾದ ಜಾಹೀರಾತಿನ ಪ್ರಕಾರ ಕನ್ನಡ ಅಧ್ಯಾಪಕ ಹುದ್ದೆಗೆ ಸಲ್ಲಿಸುತ್ತಿರುವ ಅರ್ಜಿ.

೧. ಹೆಸರು ಆದಿ ಪಂಪಾವತಿ
೨. ವಿಳಾಸ ೯, ಜಿನರಸ್ತೆ, ಅರಿಕೇಸರಿಪೇಟೆ, ಶ್ರವಣಬೆಳಗೊಳ
೩. ವಯಸ್ಸು, ಜನ್ಮ ದಿನಾಂಕ ೨೮ ವರ್ಷ, ೧೦-೧೦-೧೯೫೯
೪. ಜಾತಿ ಜೈನ
೫. ತಂದೆಯ ಹೆಸರು ಮಾಧವ ವೀರಯ್ಯ
೬. ವಿದ್ಯಾಭ್ಯಾಸ ಎಂ.ಎ(ಕನ್ನಡ), ಭಾಷಾಶಾಸ್ತ್ರ, ವಿಶೇಷ ವ್ಯಾಸಂಗ, ಮೊದಲ ರ‍್ಯಾಂಕ್, ದೊಡ್ಡ ಬೆಲೆಯಪ್ಪ ಚಿನ್ನದ ಪದಕ ವಿಜೇತ
೭. ವಿಶೇಷ ಪರಿಣತಿ ಕನ್ನಡ ಬೆರಳಚ್ಚು, ಶೀಘ್ರ ಲಿಪಿ ಪರಿಣತಿ, ಹಿಂದಿ ರಾಷ್ಟ್ರಭಾಷಾ ವಿಶಾರದ ಪದವಿ
೮. ಭಾಷೆಗಳ ಪರಿಚಯ ಕನ್ನಡ, ಇಂಗ್ಲೀಷ್, ತೆಲುಗು, ಹಿಂದಿ, ಬಂಗಾಳಿ
೯. ಪೂರ್ವಾನುಭವ ದೇವರಪ್ಪ ಕಾಲೇಜಿನಲ್ಲಿ ೮ ತಿಂಗಳು ಹಂಗಾಮಿ ಅಧ್ಯಾಪಕ, ನಿಶಾರಾಣಿ ಕಾಲೇಜಿನಲ್ಲಿ ೪ ತಿಂಗಳು ಅರೆಕಾಲಿಕ ಅಧ್ಯಾಪಕ
೧೦. ನಿರೀಕ್ಷಿಸುವ ಸಂಬಳ ಸರ್ಕಾರಿ ಸ್ಕೇಲಿನಂತೆ
೧೧. ಇತರ ವಿವರಗಳು ಕ್ರಿಕೆಟ್ ಆಟದಲ್ಲಿ ವಿಶೇಷ ಆಸಕ್ತಿ. ಜಿಲ್ಲಾ ಮಟ್ಟದ ಉತ್ತಮ ಆಟಗಾರ ಪ್ರಶಸ್ತಿ ವಿಜೇತ
೧೨. ಪೂರ್ವಾನುಭವದ ಅರ್ಹತಾ ಪತ್ರಗಳು ಲಗತ್ತಿಸಿದೆ
೧೩. ನಿಮಗೆ ಪರಿಚಯವಿರುವ ಇಬ್ಬರು ಗಣ್ಯರ ವಿಳಾಸ ೧. ಶ್ರೀ ಪರೋಪಕಾರಯ್ಯ, ಎಂ.ಎಲ್.ಎ
೨. ಪ್ರಸಿದ್ಧ ಸಾಹಿತಿ ಶ್ರೀ ಮಹಾದೇವ ಶರ್ಮ,
೪, ಚಲುವಯ್ಯ ರಸ್ತೆ, ಬಾಹುಬಲಿಪೇಟೆ, ಶ್ರವಣಬೆಳಗೊಳ.

ನಾನು ನೀಡಿರುವ ಮೇಲ್ಕಂಡ ಮಾಹಿತಿಗಳು ಸತ್ಯವಾಗಿದೆ ಎಂದು ದೃಢೀಕರಿಸುತ್ತೇನೆ ಮತ್ತು ಅವುಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಂದರ್ಶನ ಕಾಲದಲ್ಲಿ ಹಾಜರುಪಡಿಸುತ್ತೇನೆ.

ಆದಿ ಪಂಪಾವತಿ
ಅಭ್ಯರ್ಥಿಯ ಸಹಿ

ಸೂಚನೆ

ಕಾಲಂ ೯ನ್ನು ಭರ್ತಿ ಮಾಡಲು ಈ ಕೆಳಗೆ ಕಾಣಿಸಿದ ಉದ್ಯೋಗಗಳಲ್ಲಿ ನೀವು ಬಯಸಿದುದರ ಸಂಖ್ಯೆ ಹಾಕಿ:

೧. ಹಪ್ಪಳ ಮಾಡುವುದು ೦೧
೨. ಉಪ್ಪಿನ ಕಾಯಿ ಹಾಕುವುದು ೦೨
೩. ಕಸೂತಿ ಹಾಕುವುದು ೦೩
೪. ಸ್ವೆಟರ್ ಹಾಕುವುದು ೦೪
೫. ಮಕ್ಕಳ ಉಡುಪು ಹೊಲಿಯುವುದು ೦೫
೬. ಕೊಬ್ಬರಿ ಗಿಟಕಿನಲ್ಲಿ ಚಿತ್ರ ಕೆತ್ತನೆ ೦೬
೭. ಶ್ಯಾವಿಗೆ ಮಾಡುವುದು ೦೭
೮. ಹೂ ಬತ್ತಿ, ಹತ್ತಿಸರ ಮಾಡುವುದು ೦೮
೯. ಕಾಗದದ ಹೂಕಟ್ಟುವುದು ೦೯
೧೦. ಬಟ್ಟೆ ಬೊಂಬೆ ಮಾಡುವುದು ೧೦

ದೃಢೀಕರಣ ಪತ್ರ

ಮೇಲೆ ತಿಳಿಸಿರುವ ಮಾಹಿತಿಯು ನನಗೆ ತಿಳಿದ ಮಟ್ಟಿಗೆ ಸತ್ಯವಾದುದು ಮತ್ತು ಯಾವುದನ್ನೂ ಮುಚ್ಚುಮರೆ ಮಾಡಿಲ್ಲವೆಂದು ನಾನು ಘೋಷಿಸುತ್ತೇನೆ.

ದಿನಾಂಕ: …………………….
ಸ್ಥಳ: …………………………..

                                                            ……………………………..
ಅರ್ಜಿದಾರರ ಸಹಿ ಅಥವಾ
ಹೆಬ್ಬೆಟ್ಟಿನ ಗುರುತು

ಪ್ರಮಾಣ ಪತ್ರ

ಗಣ್ಯ ಖಾಸಗಿ ವ್ಯಕ್ತಿಗಳು ಅಥವಾ ಸರಕಾರೀ ಅಧಿಕಾರಿಗಳು ಪ್ರಮಾಣಪತ್ರವನ್ನು ನೀಡಬೇಕು.

ಶ್ರೀಮತಿ ……………………….. ಅವರು ಅರ್ಜಿಯಲ್ಲಿ ತಿಳಿಸಿರುವ ಸಂಗತಿಗಳು ನನಗೆ ತಿಳಿಸಿದ ಮಟ್ಟಿಗೆ ಸತ್ಯವಾಗಿವೆ ಎಂದು ದೃಢೀಕರಿಸುತ್ತೇನೆ ಮತ್ತು ಅವರು ನನ್ನ ಸಂಬಂಧಿಗಳಲ್ಲ.

ತಾ|…………………………..                                               ……………………………
ಸಹಿ ಮತ್ತು ಮೊಹರು