ಸಂದರ್ಶನಕ್ಕೆ ಹಾಜರಾಗಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಉದ್ಯೋಗದಾತರು ನೇಮಕ ಪತ್ರಗಳನ್ನು ಕಳುಹಿಸುತ್ತಾರೆ. ನೇಮಕಪತ್ರ ಬಹು ಮುಖ್ಯವಾದದ್ದು; ಅಭ್ಯರ್ಥಿ ನೇಮಕ ಪತ್ರವನ್ನು ಪಡೆದಾಗಲೇ ಅವನಿಗೆ ಉದ್ಯೋಗ ಖಾತರಿ. ನೇಮಕ ಪತ್ರವನ್ನು ಸೇವಾವಧಿ ಪೂರ್ಣ ರಕ್ಷಿಸಿಟ್ಟುಕೊಂಡಿರಬೇಕು. ಏಕೆಂದರೆ ನೇಮಕಾತಿಗಳನ್ನು ಹಲವಾರು ನಿಯಮಗಳನುಸಾರ ಮಾಡಿರುತ್ತಾರೆ. ಕಾಲಕಾಲಕ್ಕೆ ನೇಮಕಾತಿ ನಿಯಮಗಳು ಬದಲಾಗುತ್ತಾ ಇರುತ್ತವೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಉದ್ಯೋಗಿ ತನ್ನ ನೇಮಕಾತಿ ನಿಯಮಗಳನುಸಾರ ಹೊಸ ನಿಯಮಗಳಲ್ಲಿ ಕೆಲವು ಅವರಿಗೆ ಅನ್ವಯಿಸಿರಬಹುದು ಅಥವಾ ಅನ್ವಯವಾಗದಿರಬಹುದು.

ಸಾಮಾನ್ಯವಾಗಿ ನೇಮಕಾತಿ ಪತ್ರಗಳನ್ನು ಮುದ್ದಾಂ ಇಲ್ಲವೇ ದಾಖಲೆಯುಳ್ಳ ಅಂಚೆ ಮೂಲಕ ಕಳಿಸುತ್ತಾರೆ. ನೇಮಕಾದೇಶ ಪತ್ರದಲ್ಲಿ ಕೆಲವು ಸಂಗತಿಗಳು ಅವಶ್ಯವಾಗಿ ನಮೂದಾಗಿರಬೇಕು;

೧. ಅಭ್ಯರ್ಥಿ ಸಲ್ಲಿಸಿದ ಅರ್ಜಿಯ ದಿನಾಂಕ, ಸಂದರ್ಶನ ಪತ್ರದ ದಿನಾಂಕ ಮತ್ತು ಕ್ರಮಾಂಕಗಳ ಉಲ್ಲೇಖ

೨. ಅಭ್ಯರ್ಥಿಯ ಹೆಸರು, ವಿಳಾಸ, ಅರ್ಜಿ ಹಾಕಿದ ಉದ್ಯೋಗದ ಹೆಸರು

೩. ನೇಮಕಗೊಂಡ ಹುದ್ದೆಯ ಹೆಸರು, ಸಂಬಳ-ಶ್ರೇಣಿ ಇತರ ವಿಶೇಷ ಸವಲತ್ತುಗಳು

೪. ಅಭ್ಯರ್ಥಿ ನೌಕರಿಗೆ ಹಾಜರಾಗಬೇಕಾದ ದಿನಾಂಕ, ವೇಳೆ, ಸ್ಥಳ ಮತ್ತು ಕೆಲಸಕ್ಕೆ ಸೇರಲು ನೀಡಿರುವ ಅವಧಿ

೫. ಉದ್ಯೋಗ ತಾತ್ಕಾಲಿಕವೇ ಖಾಯಮ್ಮೇ? ಒಪ್ಪಂದದ್ದೇ? ಅರೆಕಾಲಿಕವೇ?

೬. ಉದ್ಯೋಗದಲ್ಲಿ ಖಾಯಂ ಮಾಡುವ ಮೊದಲಿನ ಪರೀಕ್ಷಾರ್ಥಕ ಅವಧಿ ಅಥವಾ ತರಬೇತಿ ಅವಧಿ ಇಲ್ಲವೇ ಪರಿಶೀಲನಾ ಅವಧಿ.

೭. ನೌಕರಿ ಹಾಜರಾತಿ ವರದಿಯನ್ನು ಯಾರಿಗೆ ಸಲ್ಲಿಸಬೇಕು ಮತ್ತು ಆ ವೇಳೆಯಲ್ಲಿ ಹಾಜರ್‌ಪಡಿಸಬೇಕಾದ ಮೂಲ ದಾಖಲೆಗಳು.

೮. ನೇಮಕಾದೇಶದ ಪ್ರತಿಗಳನ್ನು ಯಾರು ಯಾರಿಗೆ ಕಳಿಸಿದೆ ಎಂಬ ಪಟ್ಟಿ

೯. ನೇಮಕಾದೇಶ ಹೊರಡಿಸಿದವರ ಹೆಸರು, ಪದನಾಮ, ಸಹಿ, ಪತ್ರದ ದಿನಾಂಕ

೧೦. ಇತರ ವಿವರಗಳು.

ನೇಮಕಾದೇಶ ಪತ್ರ (ಸಂದರ್ಶನ ಕರೆ ಪತ್ರ ಮಾದರಿ ೧ಅ ಗೆ ಅನುಸಾರವಾಗಿ)
ಮಾದರಿ

ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ, ವಿದ್ಯಾನಗರ

ನೇಮಕಾದೇಶ ಪತ್ರ

ಪಸಂ,ಕಅಹು.೧೮/೮೭-೮೮                      ದಿನಾಂಕ : ೧೧ ಆಗಸ್ಟ್ ೧೯೮೭

ಉಲ್ಲೇಖ: ಅಭ್ಯರ್ಥಿ ಅರ್ಜಿ ಸಂಖ್ಯೆ : ೯೨
ಸಂದರ್ಶನ ಕರ ಪತ್ರ ಸಂಖ್ಯೆ: ೯೨

ಮಾನ್ಯರೆ,

ನಮ್ಮ ಸಂಸ್ಥೆಯ ‘ಜ್ಞಾನಗಂಗಾ ಕಲಾ ಕಾಲೇಜಿನ’ ಕನ್ನಡ ಅಧ್ಯಾಪಕ ಹುದ್ದೆಗೆ ಅಭ್ಯರ್ಥಿಗಳಾದ ನಿಮ್ಮನ್ನು (ಶ್ರೀ ಆದಿಪಂಪಾಪತಿ) ದಿನಾಂಕ ೮ ಆಗಸ್ಟ್ ೧೯೮೭ರಂದು ನಡೆದ ಸಂದರ್ಶನದಲ್ಲಿ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಲು ಸಂತೋಷವಾಗುತ್ತದೆ.

ನಿಮ್ಮನ್ನು ಅಲ್ಪಾವಧಿ / ಪೂರ್ಣಾವಧಿ ಕನ್ನಡ ಅಧ್ಯಾಪಕ ಹುದ್ದೆಗೆ ರೂ. ೨೦೦೦ – ೫೦ – ೨೩೦೦ – ೭೫ – ೨೯೦೦ – ೯೦ – ೩೩೫೦ – ೧೦೦ – ೩೭೫೦ ವೇತನ ಶ್ರೇಣಿಯಲ್ಲಿ ಇತರ ಭತ್ಯೆಗಳೊಡನೆ ನೇಮಕ ಮಾಡಲಾಗಿದೆ.

ಈ ಕೆಳಕಂಡ ನಿಯಮಗಳಿಗೆ ಒಳಪಟ್ಟು ಎರಡು ವರ್ಷ ಪರೀಕ್ಷಾರ್ಥಕ ಸೇವಾವಧಿಯಲ್ಲಿ ಸಮರ್ಪಕ ಕಾರ್ಯನಿರ್ವಹಿಸಿದ ನಂತರ ಆಡಳಿತ ವರ್ಗವು ನಿಮ್ಮ ಹುದ್ದೆಯನ್ನು ಖಾಯಂಗೊಳಿಸುತ್ತದೆ.

೧. ಪರೀಕ್ಷಾರ್ಥಕ ಸೇವಾವಧಿಯಲ್ಲಿ ಕೆಲಸ, ನಡತೆ, ಪರಿಣತಿ ಮೊದಲಾದ ವಿಚಾರಗಳಲ್ಲಿ ಯಾವುದೇ ದೂರು, ದೋಷಗಳು ಕಂಡುಬಂದರೂ ಯಾವುದೇ ಕಾರಣ ನೀಡದೆ, ವಿಚಾರಣೆಯಿಲ್ಲದೆ ನಿಮ್ಮನ್ನು ಅಧ್ಯಾಪಕ ಹುದ್ದೆಯಿಂದ ವಜಾ ಮಾಡಬಹುದು.

೨. ನಮ್ಮ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವವರು ಬೇರೆಲ್ಲೂ ನಮ್ಮ ಅನುಮತಿ ಇಲ್ಲದೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೆಲಸಕ್ಕೆ ಸೇರತಕ್ಕದ್ದಲ್ಲ.

೩. ಸಂಸ್ಥೆಯ ಪರವಾಗಿ ಇತರರಲ್ಲಿ ವ್ಯವಹರಿಸಬಾರದು.

೪. ಯಾವುದೇ ಕಾರಣಕ್ಕಾಗಲಿ ನೀವು ಕೆಲಸ ಬಿಡಬೇಕಾಗಿ ಬಂದರೆ, ಒಂದು ತಿಂಗಳು ಮುಂಚಿತವಾಗಿ ನೋಟಿಸು ಕೊಡಬೇಕು. ನಾವು ನಿಮ್ಮನ್ನು ಕೆಲಸದಿಂದ ತೆಗೆದು ಹಾಕುವಾಗಲೂ ಒಂದು ತಿಂಗಳು ಮುಂಚಿತವಾಗಿ ನೋಟೀಸು ನೀಡುತ್ತೇವೆ. ನಂತರ ಹುದ್ದೆಯಿಂದ ಬಿಡುಗಡೆಯಾಗಲು ಅವಕಾಶವಿರುತ್ತದೆ.

೫. ನಮ್ಮ ಸಂಸ್ಥೆಯ ಯಾವುದೇ ಶಾಖೆಯಲ್ಲಾದರೂ ಕೆಲಸ ಮಾಡಲು ಸಿದ್ದರಿರಬೇಕು.

೬. ಈ ಪತ್ರದೊಂದಿಗಿರುವ ದ್ವಿಪ್ರತಿ ನೇಮಕಾತಿ ಪತ್ರವನ್ನು ಭರ್ತಿ ಮಾಡಿ ಒಂದು ವಾರದೊಳಗೆ ಕಚೇರಿಗೆ ತಲುಪಿಸಬೇಕು.

ಈ ಪತ್ರದ ದಿನಾಂಕದಿಂದ ಪ್ರಾರಂಭಿಸಿ ಎರಡು ವಾರಗಳೊಳಗೆ ಕೆಲಸಕ್ಕೆ ಹಾಜರಾಗಿ, ಹಾಜರಾತಿ ವರದಿಯನ್ನು ಪ್ರಾಂಶುಪಾಲರಿಗೆ ಒಪ್ಪಿಸಬೇಕು. ಕನಿಷ್ಟ ಪಕ್ಷ ೫ ವರ್ಷಗಳಾದರೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬ ಮುಚ್ಚಳಿಕೆಯನ್ನು ಬರೆದುಕೊಡಲು ಸಿದ್ದರಿರಬೇಕು.

ತಿಮ್ಮರಸಪ್ರಭು
ಕಾರ್ಯದರ್ಶಿ
ಜ್ಞಾನಗಂಗಾ ಶಿಕ್ಷಣ ಸಂಸ್ಥೆ

ಪ್ರತಿಗಳು:
೧) ಶ್ರೀ ಆದಿಪಂಪಾಪತಿ
೨) ಪ್ರಾಂಶುಪಾಲರು
೩) ಮುಖ್ಯ ಕರಣಿಕರು
೪) ಕಚೇರಿ
೫) ಕಾಲೇಜು ಶಿಕ್ಷಣ ಇಲಾಖೆ

(ಅಭ್ಯರ್ಥಿನ ಪತ್ರ ೧ಕ್ಕೆ ನೀಡಿದ ಉತ್ತರ ಹಾಗೂ ನೇಮಕಾದೇಶ ಪತ್ರ)
ಮಾದರಿ

ಮಾರ್ಕಂಡೇಯ ಔಷಧಿ ತಯಾರಕರು
ಶಾಶ್ವತ ನಿಲಯ, ಕೇಂದ್ರ ಕಚೇರಿ, ಅಮೃತೂರು

ಪತ್ರ ಸಂಖ್ಯೆ: ೨/೮೭-೮೮                       ದಿನಾಂಕ : ೨೦ನೆಯ ಜುಲೈ ೧೯೮೭

ಶ್ರೀ ದೃಢಾಂಗರಾವ್
೯೫, ೪ನೆಯ ರಸ್ತೆ
ಕೋಟೆ ಬಡಾವಣೆ
ನವದುರ್ಗ ಜಿಲ್ಲೆ

ಉಲ್ಲೇಖ: ಮಾರಾಟಗಾರನ ಪ್ರತಿನಿಧಿ ಉದ್ಯೋಗಕ್ಕೆ ದಿನಾಂಕ ೧೦-೭-೧೯೮೭ರಂದು ಬರೆದುಕೊಂಡ ಅರ್ಜಿ.

ಮಾನ್ಯರೆ,

ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಮಾರಾಟಗಾರ ಪ್ರತಿನಿಧಿ ಹುದ್ದೆಗೆ ನಿಮ್ಮನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ. ನಿಮ್ಮ ಒಪ್ಪಿಗೆಯಿದ್ದಲ್ಲಿ ಈ ಪತ್ರದ ದಿನಾಂಕದಿಂದ ಒಂದು ವಾರದೊಳಗೆ ನೇರವಾಗಿ ಬಂದು ನಮ್ಮ ಕಚೇರಿಯ ವ್ಯವಸ್ಥಾಪಕರಿಗೆ ಹಾಜರಾತಿ ವರದಿ ಸಲ್ಲಿಸಿ ಕೆಲಸಕ್ಕೆ ಸೇರಿಕೊಳ್ಳಬೇಕು. ಇಲ್ಲದಿದ್ದಲ್ಲಿ ಈ ನೇಮಕಾತಿ ರದ್ದಾಗಿದೆ ಎಂದು ತಿಳಿಯತಕ್ಕದ್ದು.

೧. ಈ ನೇಮಕಾತಿ ಆಜ್ಞೆ ನೀವು ಕೆಲಸಕ್ಕೆ ಹಾಜರಾದ ದಿನಾಂಕದಿಂದ ಜಾರಿಗೆ ಬರುತ್ತದೆ.

೨. ಮೊದಲ ಆರು ತಿಂಗಳು ಪರೀಕ್ಷಾರ್ಥಕ ಅವಧಿ ಎಂದು ಪರಿಗಣಿಸಲಾಗುವುದು. ಈ ಅವಧಿಯಲ್ಲಿ ತಿಂಗಳಿಗೆ ೫೦೦ರೂ. ತಾತ್ಕಾಲಿಕ ಸಂಚಿತ ಸಂಬಳ ನೀಡಲಾಗುವುದು.

೩. ಪರೀಕ್ಷಾರ್ಥಕ ಅವಧಿಯಲ್ಲಿ ನಿಮ್ಮ ಕೆಲಸ, ವರ್ತನೆ, ಕಾರ್ಯಪ್ರಗತಿಗಳನ್ನು ಗಮನಿಸುತ್ತೇವೆ. ನಮಗೆ ತೃಪ್ತಿಕರವಾಗಿ ಕಂಡು ಬಂದರೆ ತಿಂಗಳಿಗೆ ೧೦೦೦ರೂ. ಸಂಬಳ ಮತ್ತು ನೀವು ಮಾಡುವ ವ್ಯಾಪಾರದಲ್ಲಿ ಶೇ.೧೦ರಷ್ಟು ನೀಡಲಾಗುವುದು.

೪. ಪ್ರವಾಸಲ್ಲಿದ್ದಾಗ ದಿನಭತ್ಯೆ-ದಿನಕ್ಕೆ ೨೦ರೂ.ಸ್ಥಳದಲ್ಲಿ, ೫೦ ರೂ. ಪರಸ್ಥಳದಲ್ಲಿ ನೀಡಲಾಗುವುದು, ರೈಲು ಅಥವಾ ಬಸ್ಸಿನ ಹಾಗೂ ಇತರ ವಾಹನ ಪ್ರಯಾಣ ವೆಚ್ಚಗಳನ್ನು ವಾಸ್ತವಿಕ ದರದ ಪ್ರಕಾರ ನೀಡಲಾಗುವುದು.

೫. ಬೆಳಗಾಂ, ಧಾರವಾಡ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ನಮ್ಮ ಸಂಸ್ಥೆಯ ಮಾರಾಠ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

೬. ನಮ್ಮ ಸಂಸ್ಥೆಯ ತಯಾರಿಕೆಗಳನ್ನಲ್ಲದೆ ಬೇರೆ ಸಂಸ್ಥೆಗಳ ತಯಾರಿಕೆಗಳ ಬಗ್ಗೆ ವ್ಯವಹಾರ-ಮಾರಾಟ ಮಾಡಬಾರದು.

೭. ೧೦,೦೦೦ ರೂ. ಖಾತ್ರಿ ಹಣವಾಗಿ ಸಂಸ್ಥೆಗೆ ನೀಡತಕ್ಕದ್ದು ಅಥವಾ ಇಬ್ಬರು ಗಣ್ಯರಿಂದ ಖಾತ್ರಿ ಕೊಡಿಸತಕ್ಕದ್ದು.

೮. ಕಾಲಕಾಲಕ್ಕೆ ಸಂಸ್ಥೆ ವಿಧಿಸುವ ಷರತ್ತುಗಳಿಗೆ ಬದ್ದರಾಗಿರಲು ಸಿದ್ಧರಿರಬೇಕು.

೯. ಸಂಸ್ಥೆಯ ಪರವಾಗಿ ಭಾರತಾದ್ಯಂತ ಯಾವುದೇ ಭಾಗದಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

೧೦. ಒಂದು ವಾರದೊಳಗೆ ಒಪ್ಪಿಗೆ ಪತ್ರವನ್ನು ಕಳುಹಿಸಬೇಕು. ಎರಡು ವಾರಗಳೊಳಗೆ ಕೆಲಸಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಈ ನೇಮಕಾತಿ ರದ್ದಾಗುತ್ತದೆ ಎಂದು ತಿಳಿಯತಕ್ಕದ್ದು.

ರಾಮ್‌ಸಿಂಗ್
ವ್ಯವಸ್ಥಾಪಕ

ಬೆ: ಶಂ/