ಮಹತ್ವ

ಸಂದರ್ಶನಗಳಿಲ್ಲದೆ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎನ್ನಬಹುದು. ಜಾಹೀರಾತು ಪ್ರಕಾರ ಅರ್ಹಪದವೀಧರರು ಅಭ್ಯರ್ಥನ ಪತ್ರಗಳನ್ನು ಕಳಿಸುತ್ತಾರೆ; ಉದ್ಯೋಗದಾತರು ಬಂದ ಎಲ್ಲ ಅರ್ಜಿಗಳನ್ನೂ ವರ್ಗಿಕರಿಸುತ್ತಾರೆ. ತಮ್ಮ ಉದ್ದೇಶಾನುಸಾರ ಪ್ರಕಟಿಸಿದ ನಿಯಮಗಳಿಗೆ ತಕ್ಕಂತೆ ವರ್ಗೀಕರಿಸಿದ ಅರ್ಜಿಗಳಲ್ಲಿ ಗೊತ್ತಾದ ಸಂಖ್ಯೆಯಷ್ಟನ್ನು ಆರಿಸುತ್ತಾರೆ. ಹೀಗೆ ಆರಿಸುವಾಗ ಅರ್ಹತಗೆ ಆದ್ಯತೆ ನೀಡುವುದು ಸಾಮಾನ್ಯ ಸಂಗತಿ. ವಿಶೇಷ ಕಾರಣಗಳಿಗಾಗಿ ವಿಶೇಷ ವರ್ಗಗಳಿಂದಲೂ ಅರ್ಜಿಗಳನ್ನು ಸಂದರ್ಶನಕ್ಕಾಗಿ ಆರಿಸುತ್ತಾರೆ.

ಸಂದರ್ಶನ ಕಾರ್ಯಕ್ರಮವನ್ನು ಏಕೆ ಏರ್ಪಡಿಸುತ್ತಾರೆ? ಇದಕ್ಕೆ ಹಲವಾರು ಕಾರಣಗಳಿವೆ; ಮನುಷ್ಯ ಮನುಷ್ಯನನ್ನು ಅರ್ಥಮಾಡಿಕೊಲ್ಳಲು ಸಾಧ್ಯವಾಗುವುದು ಎದುರಿದ್ದಾಗ; ಮನುಷ್ಯನ ಗುಣ ಸ್ವಭಾವಗಳನ್ನು ಪತ್ರದ ಮೂಲಕ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ ಅವನನ್ನು ಮಾತನಾಡಿಸಿದಾಗ ಅರಿಯಲು ಸಾಧ್ಯ. ನೌಕರಿಗೆ ಬೇಕಾದ ಅರ್ಹತೆಯನ್ನು ಅರಿಯಲು ಅಭ್ಯರ್ಥಿ ಅರ್ಜಿಯಲ್ಲಿ ನಿವೇದಿಸಿರುವ ಅಂಶಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವ್ಯಕ್ತಿಯ ದೈಹಿಕ ಹಾಗು ಬೌದ್ಧಿಕ ಸಾಮರ್ಥ್ಯ ಅರಿಯಲು ಮೌಖಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳನ್ನು ನಡೆಸುತ್ತಾರೆ. ಕೆಲವೊಮ್ಮೆ ಕೆಲವು ವಿಶಿಷ್ಟ ಉದ್ಯೋಗಗಳಿಗೆ ಆಯ್ಕೆ ಮಾಡುವಾಗ ಪ್ರಯೋಗಾತ್ಮಕ ಪರೀಕ್ಷೆಯನ್ನು ನಡೆಸುತ್ತಾರೆ. ಉದಾ: ‘ಅಧ್ಯಾಪಕರನ್ನು ನೇಮಿಸಿಕೊಳ್ಳುವಾಗ ಯಾವುದಾದರೊಂದು ತರಗತಿಯಲ್ಲಿ ಪಾಠ ಮಾಡಲು ಹೇಳಬಹುದು’ ‘ವಸ್ತು ತಯಾರಿಕಾ ಪ್ರಾವೀಣನಿಗೆ ಒಂದು ಮಾದರಿ ತಯಾರಿಸಲು ಹೇಳಬಹುದು’ ಆದ್ದರಿಂದ ಸಂದರ್ಶನವನ್ನು ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ಪ್ರಯೋಗ ಪರೀಕ್ಷೆ ಎಂದು ಮೂರು ಬಗೆಯಾಗಿ ವರ್ಗೀಕರಿಸಬಹುದು.

ವಿದ್ಯಾರ್ಹತೆಗಳಿದ್ದ ಮಾತ್ರಕ್ಕೆ ಸಂದರ್ಶನ ಕಾಲದಲ್ಲಿ ಒಬ್ಬ ವ್ಯಕ್ತಿ ಉದ್ಯೋಗಕ್ಕೆ ಆಯ್ಕೆಯಾಗುತ್ತಾನೆ ಎಂದೇನೂ ಇಲ್ಲ. ವಿದ್ಯಾರ್ಹತೆಗಳಷ್ಟೇ ಅಲ್ಲದೆ ಇತರೆ ಅರ್ಹತೆಗಳನ್ನು ಪರೀಕ್ಷಿಸುವುದೇ ಸಂದರ್ಶನದ ಉದ್ದೇಶವಾಗಿರುತ್ತದೆ. ಲಿಖಿತ ಪರೀಕ್ಷೆಗಳಲ್ಲಿ ವಿದ್ಯಾರ್ಹತೆಯ ಸತ್ವ ಪರೀಕ್ಷೆಯಾಗುತ್ತದೆ. ಅಷ್ಟೆ. ವ್ಯಕ್ತಿಯ ಮಾತುಗಾರಿಕೆ, ಚಾತುರ್ಯ, ಶೀಘ್ರ ನಿರ್ಧಾರ ಸ್ವಭಾವ, ವಿನಯವಂತಿಕೆ, ಅಂಗಚೇಷ್ಟೇಗಳಿಲ್ಲದಿರುವಿಕೆ, ಪ್ರಸನ್ನ ಭಾವ ಇತ್ಯಾದಿ ಅಂಶಗಳ ಪರಿಶೀಲನೆ ಸಂದರ್ಶನದಲ್ಲಿ ಮಾತ್ರ ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರಗಳನ್ನು ಕಳಿಸುತ್ತಾರೆ; ನಿರ್ದಿಷ್ಟ ನಮೂನೆಯ ಪ್ರತಿಗಳನ್ನು ಆಯಾ ವ್ಯಕ್ತಿಗಳಿಗೆ ತಕ್ಕಂತೆ, ದಿನಾಂಕ, ವೇಳೆ, ಸ್ಥಳಗಳನ್ನು ಸೂಚಿಸಿ, ಪತ್ರಕ್ಕೆ ಕ್ರಮಸಂಖ್ಯೆ ಕೊಟ್ಟು ಸಂದರ್ಶನ ಪತ್ರವನ್ನು ರವಾನಿಸುತ್ತಾರೆ. ಕೆಲವೊಮ್ಮೆ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಾಗ ತರಬೇಕಾದ ದಾಖಲೆಗಳ ವಿವರವನ್ನೂ ಸ್ಪಷ್ಟಪಡಿಸಿರುತ್ತಾರೆ. ಜಾಹೀರಾತುದಾರರು ಪರಾಮರ್ಶನ ವಿಳಾಸಗಳಿಗೆ ಪತ್ರಬರೆದು ಉತ್ತರವನ್ನೂ ತರಿಸಿಕೊಳ್ಳುತ್ತಾರೆ. ಕೆಲವು ಸಂಸ್ಥೆಗಳು ಜಾಹೀರಾತಿನಲ್ಲಿಯೇ, ಅಭ್ಯರ್ಥಿಗಳು ದಾಖಲೆಗಳೊಂದಿಗೆ ದಿನಾಂಕ ……………. ರಂದು ………………… ಸಮಯಕ್ಕೆ ಸರಿಯಾಗಿ ……………. ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗತಕ್ಕದ್ದು ಎಂದೂ ಪ್ರಕಟಿಸುವುದುಂಟು. ಸಾಮಾನ್ಯವಾಗಿ ಕೆಲವು ವಿಶೇಷ ಉದ್ಯೋಗಿಗಳಿಗೆ ಅರ್ಜಿದಾರರು ಸಿಗುವುದೇ ಕಷ್ಟ. ಆದ್ದರಿಂದ ಆ ರೀತಿ ಪ್ರಕಟಿಸುವರು; ಅಥವಾ ಯಾವುದಾದರೂ ಶಿಕ್ಷಣ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಕನಿಷ್ಟ ವಿದ್ಯಾರ್ಹತೆ ಇದ್ದವರಿಗೆಲ್ಲಾ ಸಂದರ್ಶನ ನೀಡಬೇಕಾಗುತ್ತದೆ. ಆಗಲೂ ಸಂದರ್ಶನ ಪತ್ರಗಳನ್ನು ಕಳಿಸದೆ ಜಾಹೀರಾತಿನಲ್ಲೇ ಇಂಥ ದಿನ ಸಂದರ್ಶನಕ್ಕೆ ಹಾಜರಾಗಿ ಎಂದು ತಿಳಿಸಿರುತ್ತಾರೆ. ಸಂದರ್ಶನ ಪತ್ರ *೧ಅ, ೧ಆ, ಒಪ್ಪಿಗೆ ಪತ್ರ *೨ ಸಂದರ್ಶನ ರದ್ದು ಪತ್ರಗಳಿಗೆ *೩ ಮಾದರಿಗಳನ್ನು ಕೊಟ್ಟಿದೆ.

ಸಂದರ್ಶನಕ್ಕೆ ಅಭ್ಯರ್ಥಿಯ ಸಿದ್ಧತೆ

ಸಂದರ್ಶನ ಕಾರ್ಯಕ್ರಮ ಉದ್ಯೋಗ ಪಡೆಯಲು ಮಹಾದ್ವಾರವಿದ್ದಂತೆ. ಸಂದರ್ಶನದಲ್ಲಿ ಗೆಲುವು ಪಡೆದವನಿಗೆ ನೌಕರಿ ಬಹುಮಟ್ಟಿಗೆ ಖಾತ್ರಿ ಎಂದೇ ಹೇಳಬಹುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿ ಈ ಕೆಳಕಂಡ ಅಂಶಗಳನ್ನು ಗಮನಿಸಬೇಕು.

೧. ಶುಚಿಯಾದ, ಸರಳವಾದ ಉಡುಪನ್ನು ಅಚ್ಚುಕಟ್ಟಾಗಿ ಧರಿಸಿರಬೇಕು; ಸರಳ ಅಲಂಕಾರ ಮಾಡಿಕೊಂಡಿರಬೇಕು.

೨. ಸಂದರ್ಶನಕ್ಕೆ ಸಕಾಲದಲ್ಲಿ ಹಾಜರಾಗಬೇಕು. ಮಾರ್ಗಮಧ್ಯದಲ್ಲಿ ವಾಹನ ಸಿಗದಿರುವುದು ಅಥವಾ ವಾಹನ ಕೆಡುವುದು ಇತ್ಯಾದಿ ಸಂಭವಿಸಿ ಜೀವನದ ಸುವರ್ಣಾವಕಾಶವನ್ನು ಹಾಳು ಮಾಡಿಕೊಳ್ಳಬಹುದು. ಆದ ಕಾರಣ, ಸ್ವಲ್ಪ ಹೊತ್ತು ಮುಂಚಿತವಾಗಿ ಹಾಜರಾಗುವ ಪರಿಪಾಠ ಇಟ್ಟುಕೊಳ್ಳಬೇಕು.

೩. ಸಂದರ್ಶನ ಕಾಲದಲ್ಲಿ ಹಾಜರಾದಾಗ ಉದ್ಯೋಗದಾತರು ಕೇಳಿದರೆ ತೋರಿಸಲು, ಅರ್ಜಿಯಲ್ಲಿ ನಿವೇದಿಸಿದರೆ ದಾಖಲೆಗಳ ಮೂಲ ಪ್ರತಿಗಳೆಲ್ಲವನ್ನೂ ಓರಣವಾಗಿ ಜೋಡಿಸಿ ತೆಗೆದುಕೊಂಡು ಹೋಗಬೇಕು.

೪. ಸಂದರ್ಶನದಲ್ಲಿ ತನ್ನ ಸರದಿ ಬರುವವರೆಗೆ ತಾಳ್ಮೆಯಿಂದ ಕಾಯುತ್ತಿರಬೇಕು. ಇತರರನ್ನು ಆಕ್ರಮಿಸಿ ಹೋಗುವುದು, ಚಡಪಡಿಸುವುದು, ಅವಸರ ಮಾಡುವುದು ಸಲ್ಲದು.

೫. ಸಂದರ್ಶನ ನಡೆಸುತ್ತಿರುವ ಜಾಗದಲ್ಲೇ ಇದ್ದು, ಕ್ರಮಸಂಖ್ಯೆ, ಹೆಸರು ಮುಂತಾದ ಆಧಾರಗಳ ಮೇಲೆ ಉದ್ಯೋಗದಾತರು ಅಭ್ಯರ್ಥಿಗಳನ್ನು ಕರೆಯಬಹುದು. ಸಂದರ್ಶನ ಕೊಠಡಿಗೆ ಯಾವ ರೀತಿ ಕರೆಯುತ್ತಾರೆ ಎಂಬುದನ್ನು ತಿಳಿದುಕೊಂಡು ಸಕಾಲದಲ್ಲಿ ಹಾಜರಾಗಬೇಕು. ಸಂದರ್ಶನ ಕರೆ ಪತ್ರಗಳನ್ನು ಅಧಿಕ ಸಂಖ್ಯೆಯಲ್ಲಿ ಅಚ್ಚು ಮಾಡಿಸುವುದೂ ಉಂಟು, ತಕ್ಕ ಸಂಖ್ಯೆಯಲ್ಲಿದ್ದಾಗ ಸಾಮಾನ್ಯವಾಗಿ ಟೈಪಿಸುತ್ತಾರೆ; ಕೆಲವರು ಭರ್ತಿ ಮಾಡಬೇಕಾದ ಜಾಗಗಳನ್ನು ಬಿಟ್ಟು ಅಚ್ಚು ಮಾಡಿದ ಕಾರ್ಡುಗಳನ್ನೂ ಬಳಸುತ್ತಾರೆ. ಇದರಿಂದ ಸಾಕಷ್ಟು ಲೇಖನ ಸಾಮಗ್ರಿಯ ಉಳಿತಾಯವಾಗುತ್ತದೆ. ಪ್ರತಿವರ್ಷ ಅಥವಾ ಆಗಾಗ ಸಂದರ್ಶನ ಕಾರ್ಯಕ್ರಮ ಎಲ್ಲಿ ನಡೆಯುತ್ತಿರುತ್ತವೋ ಅಲ್ಲೆಲ್ಲಾ, ಹೀಗೆ ಸಂದರ್ಶನ ಕರೆ ಪತ್ರಗಳನ್ನು ಅಚ್ಚು ಮಾಡಿಸಿ ಇಟ್ಟಿರುತ್ತಾರೆ.

ಸಂದರ್ಶನ ಕಾಲದಲ್ಲಿ ಅಭ್ಯರ್ಥಿ ಗಮನಿಸಬೇಕಾದ ಅಂಶಗಳು

೧. ಸಂದರ್ಶನಕ್ಕೆ ಕರೆದಾಗ ತಕ್ಷಣ ಒಳಗೆ ಹೋಗಬೇಕು. ಕುಳಿತುಕೊಳ್ಳಲು ಹೇಳುವವರೆಗೂ ಕೂಡಬಾರದು.

೨. ಸಂದರ್ಶನ ಕೊಠಡಿಯಲ್ಲಿರುವವರೆಲ್ಲರಿಗೂ ನಮಸ್ಕರಿಬೇಕು.

೩. ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಬೇಕು; ಆವೇಶಗೊಳ್ಳಬಾರದು; ಉದಾಸೀನ ಮನೋಭಾವದಿಂದ ಇಲ್ಲವೇ ಅಹಂಕಾರದಿಂದ ಉತ್ತರಿಸಬಾರದು.

೪. ಅಭಿಪ್ರಾಯಗಳನ್ನು ಕೇಳಿದಾಗ ವೈಯಕ್ತಿಕ ನಿಂದಾರೂಪದಲ್ಲಿ ಹೇಳಬಾರದು.

೫. ಅರ್ಜಿಯಲ್ಲಿ ನಮೂದಿಸಿರುವ, ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದವಿರಬೇಕು, ತಡವರಿಸಬಾರದು.

೬. ತಿಳಿಯದಿದ್ದಾಗ ಸುಳ್ಳನ್ನು ಹೇಳುವುದಾಗಲೀ ಕಾಲ್ಪನಿಕ ಅಥವಾ ಊಹಾತ್ಮಕ ಉತ್ತರಗಳನ್ನು ಹೇಳುವುದಕ್ಕಾಗಲೀ ಯತ್ನಿಸಬಾರದು. ‘ತಿಳಿದಿಲ್ಲ’ ಎನ್ನುವುದೇ ಸೂಕ್ತ.

೭. ಸ್ಪಷ್ಟ ಉಚ್ಚಾರಣೆಯೊಡನೆ, ಅಂಗಾಂಗ ಭಂಗಿಗಳಿಲ್ಲದೆ ಉತ್ತರಿಸಬೇಕು.

೮. ಉತ್ತರಗಳನ್ನು ಲಂಬಿಸದೆ, ಅಸ್ಪಷ್ಟವಾಗಿಸದೆ, ನೇರವಾಗಿ ಸರಳವಾಗಿ ಹೇಳಬೇಕು.

೯. ಅರೆಬರೆ ವಾಕ್ಯಗಳನ್ನು ಅರ್ಧಮರ್ಧ ಉತ್ತರಗಳನ್ನೂ ಹೇಳಬಾರದು.

ಕೆಲವೊಮ್ಮೆ ಕೆಲವರು ಸಂದರ್ಶನ ಪತ್ರಗಳಿಗೆ ಉತ್ತರಿಸಿ ಎಂದು ತಿಳಿಸಿರುತ್ತಾರೆ. ಕೆಲವರು ಉಲ್ಲೇಖಿಸಿರುವುದಿಲ್ಲ. ಸಾಮಾನ್ಯವಾಗಿ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುತ್ತಾರೆ ಎಂಬುದು ಅವರ ದೃಷ್ಟಿ. ಆದರೆ ಸಂದರ್ಶನ ಪತ್ರಗಳಿಗೆ ಉತ್ತರಿಸಲು ಕೇಳಿದವರಿಗೆ ಅಭ್ಯರ್ಥಿಗಳು ಉತ್ತರಿಸಲೇಬೇಕಾಗುತ್ತದೆ.

ಫಲಿತಾಂಶ ಪ್ರಕಟನೆ

ಸಂದರ್ಶನದ ನಂತರ ಫಲಿತಾಂಶಗಳನ್ನು ಆಯಾ ಸ್ಥಳಗಳಲ್ಲಿಯೇ ಸ್ವಲ್ಪ ಹೊತ್ತಿನ ನಂತರ ಪ್ರಕಟಿಸುವುದುಂಟು; ಕೆಲವರು ೨-೩  ದಿನಗಳಾದ ಮೇಲೆ ಪ್ರಕಟಿಸುತ್ತಾರೆ; ಅಥವಾ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರವಾಗಿ ನೇಮಕಾತಿ ಪತ್ರಗಳನ್ನು ಕಳಿಸುತ್ತಾರೆ.

ಸಂದರ್ಶನ ಕರೆ ಪತ್ರ (ಅಚ್ಚಾದ ನಮೂನೆ)
ಮಾದರಿ

ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ, ವಿದ್ಯಾನಗರ

ಪಸಂ.ಕ.ಅಹು.೯೨/೮೭-೮೮                                    ದಿನಾಂಕ : ೨೯ ಜುಲೈ ೧೯೮೭

ಅವರಿಗೆ,
ಶ್ರೀ ಆದಿಪಂಪಾವತಿ ಎಂ.ಎ
೯, ಜಿನರಸ್ತೆ
ಅರಿಕೇಸರಿಪೇಟೆ
ಶ್ರವಣಬೆಳಗೊಳ

ಮಾನ್ಯರೆ,

ದಿನಾಂಕ: ೫ ಜುಲೈ ೧೯೮೭ರಂದು ‘ಸಂಧ್ಯಾಜ್ಯೋತಿ’ ದಿನಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ಸಂಸ್ಥೆಯ ‘ಕನ್ನಡ ಅಧ್ಯಾಪಕ’ ಹುದ್ದೆಯ  ಜಾಹೀರಾತಿಗೆ ಅನುಗುಣವಾಗಿ ನೀವು ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿದೆ.

ದಿನಾಂಕ: ೮ ಆಗಸ್ಟ್ ೧೯೮೭ರಂದು ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ‘ಜ್ಞಾನಗಂಗಾ ಕಲಾ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ಕೋರಿದೆ.

ನಿಮ್ಮ ವಿದ್ಯಾರ್ಹತೆಯ ಮೂಲ ದಾಖಲಾತಿ ಪ್ರತಿಗಳನ್ನೂ ಇತರ ಅರ್ಹತಾ ಪತ್ರಗಳನ್ನೂ ಸಂದರ್ಶನ ಕಾಲದಲ್ಲಿ ಹಾಜರುಪಡಿಸಬೇಕು. ನೀವು ಸಂದರ್ಶನಕ್ಕೆ ಬಂದು ಹೋಗುವ ಬಸ್ ವೆಚ್ಚವನ್ನು ಮಾತ್ರ ಸಂಸ್ಥೆ ಭರಿಸುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ತಕ್ಷಣ ಕೆಲಸಕ್ಕೆ ಹಾಜರಾಗಲು ಸಿದ್ಧರಿರಬೇಕು; ಮರುಅಂಚೆಯಲ್ಲಿ ಉತ್ತರಿಸಬೇಕಾಗಿ ಬಿನ್ನಹ.

ನೀವು ಈಗಾಗಲೇ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಆ ಸಂಸ್ಥೆಯಿಂದ ‘ಬೇರೆ ಕೆಲಸಕ್ಕೆ ಹೋಗಲು ನಮ್ಮ ಆಕ್ಷೇಪಣೆ ಇಲ್ಲ; ಅನುಮತಿ ನೀಡಿದೆ’ ಎಂಬ ಪ್ರಮಾಣ ಪತ್ರವನ್ನು ಮೇಲಧಿಕಾರಿಗಳಿಂದ ಪಡೆದಿರಬೇಕು.

ತಿಮ್ಮರಸಪ್ರಭು
ಕಾರ್ಯದರ್ಶಿ
ಜ್ಞಾನಗಂಗಾ ಶಿಕ್ಷಣ ಸಂಸ್ಥೆ

ಸಂದರ್ಶನ ಕರೆ ಪತ್ರದ ಇನ್ನೊಂದು ಮಾದರಿ (ಭರ್ತಿ ಮಾಡುವ ನಮೂನೆ)
ಮಾದರಿ

ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ, ವಿದ್ಯಾನಗರ

ಪಸಂ: ಕ ಅಹು: ೯೨/೮೭-೮೮                    ದಿನಾಂಕ : ೨೯ನೆಯ ಜುಲೈ ೮೭

ಅವರಿಗೆ,

ಶ್ರೀ ಆದಿಪಂಪಾಪತಿ ಎಂ.ಎ.
೯, ಜಿನ ರಸ್ತೆ
ಅರಿಕೇಸರಿಪೇಟೆ
ಶ್ರವಣಬೆಳಗೊಳ

ಮಾನ್ಯರೆ,

ದಿನಾಂಕ ೮-೮-೧೯೮೭ರಂದು ಶನಿವಾರ ಬೆಳಿಗ್ಗೆ/ ಮಧ್ಯಾಹ್ನ ೧೧ ಗಂಟೆಗೆ ಪ್ರಾಂಶುಪಾಲರ ಕೊಠಡಿ ಸ್ಥಳದಲ್ಲಿ ಕನ್ನಡ ಅಧ್ಯಾಪಕ ಹುದ್ದಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಸಂದರ್ಶನ ಏರ್ಪಡಿಸಿದೆ. ನೀವು ಸಕಾಲದಲ್ಲಿ ದಾಖಲೆಗಳೊಡನೆ ಸಂದರ್ಶನಕ್ಕೆ ಹಾಜರಾಗಲು ಕೋರಿದೆ. ಸಂದರ್ಶನಕ್ಕೆ ಬಂದು ಹೋಗುವವರಿಗೆ ಪ್ರಥಮ ದರ್ಜೆ ರೈಲು/ಬಸ್ ಪ್ರಯಾಣದ ವೆಚ್ಚವನ್ನೂ ಸಂಸ್ಥೆ ನೀಡುತ್ತದೆ. ನಿಮ್ಮ ಸಂದರ್ಶನ ಸಂಖ್ಯೆ ೯೨.

ತಿಮ್ಮರಸಪ್ರಭು
ಕಾರ್ಯದರ್ಶಿ
ಜ್ಞಾನಗಂಗಾ ಶಿಕ್ಷಣ ಸಂಸ್ಥೆ

ಸಂದರ್ಶನ ಕರೆಗೆ ಅಭ್ಯರ್ಥಿ ಬರೆದ ಒಪ್ಪಿಗೆ ಪತ್ರ
ಮಾದರಿ

ಆದಿಪಂಪಾವತಿ
೯, ಜಿನರಸ್ತೆ
ಅರಿಕೇಸರಿ ಪೇಟೆ
ಶ್ರವಣಬೆಳಗೊಳ

ದಿ. ೩ನೆಯ ಆಗಸ್ಟ್ ೧೯೮೭

ಅವರಿಗೆ,

ಕಾರ್ಯದರ್ಶಿಗಳು
ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ
ವಿದ್ಯಾನಗರ

ಮಾನ್ಯರೆ,

ತಾವು ೨೯ನೆಯ ಜುಲೈ ೧೯೮೭ರಂದು ಬರೆದ (ಪಸಂ.ಕಅಹು ೯೨/೮೭-೮೮) ಸಂದರ್ಶನ ಕರೆ ಪತ್ರ ತಲುಪಿತು. ವಂದನೆಗಳು. ತಾವು ತಿಳಿಸಿರುವ ದಿನದಂದು (೮ನೆಯ ಆಗಸ್ಟ್ ೮೭) ಸಕಾಲದಲ್ಲಿ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಡನೆ ಹಾಜರಾಗುತ್ತೇನೆ.

ತಮ್ಮ ನಂಬುಗೆಯ,
ಆದಿಪಂಪಾವತಿ

ಸಂಸ್ಥೆ ಅಭ್ಯರ್ಥಿಗಳಿಗೆ ಕಳಿಸುವ ಸಂದರ್ಶನ ರದ್ದು ಪತ್ರದ ಮಾದರಿ
ಮಾದರಿ

ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ, ವಿದ್ಯಾನಗರ

ಪಸಂ: ಭೌ ಅಹು ೨೮/೮೭-೮೮                           ದಿ. ೫ ಆಗಸ್ಟ್ ೧೯೮೭
ದೂರವಾಣಿ: ೬೬೭೭೮೮

ಅವರಿಗೆ,
ಶ್ರೀ ರಮಾಕಾಂತ, ಎಂ.ಎಸ್ಸಿ
೧೨, ಸಂಪಿಗೆ ರಸ್ತೆ
ಮಲ್ಲೇಶ್ವರಂ,
ಬೆಂಗಳೂರು

ಮಾನ್ಯರೆ,

ದಿನಾಂಕ ೭ನೆಯ ಆಗಸ್ಟ್ ೮೭ರಂದು ಮಧ್ಯಾಹ್ನ ೩ ಗಂಟೆಗೆ ಸರಿಯಾದ ಮೇಲ್ಕಂಡ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರ ಕೊಠಡಿಯಲ್ಲಿ ಏರ್ಪಡಿಸಿದ್ದ ಸಂದರ್ಶನ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಿದೆ. ಮುಂದಿನ ದಿನಾಂಕವನ್ನು ಪತ್ರ ಮುಖೇನ ತಿಳಿಸಲಾಗುವುದು. ತಮಗಾದ ತೊಂದರೆಗೆ ವಿಷಾಧಿಸುತ್ತೇನೆ.

ತಿಮ್ಮರಸಪ್ರಭು
ಕಾರ್ಯದರ್ಶಿ