ಸ್ವರೂಪ

ವಾಣಿಜ್ಯ ಕ್ಷೇತ್ರದಲ್ಲಿ ಸರಕು ಜಾಹೀರಾತುಗಳು ಮಾರಾಟ ಹೆಚ್ಚಿಸುವಲ್ಲಿ ನೆರವಾದರೆ ನೌಕರಿ ಜಾಹೀರಾತುಗಳು ಸಂಸ್ಥೆಯ ಸಾಮರ್ಥ್ಯ ಹೆಚ್ಚಿಸುವಲ್ಲಿ ನೆರವಾಗುತ್ತವೆ. ನೌಕರಿ ಜಾಹೀರಾತುಗಳು ಕೇವಲ ವಾಣಿಜ್ಯ ರಂಗಕ್ಕೆ ಸೀಮಿತವಲ್ಲ; ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿವೆ ಎಂಬುದನ್ನು ಮರೆಯಲಾಗದು. ಯಾವುದೇ ಕ್ಷೇತ್ರದಲ್ಲಾದರೂ ದುಡಿಮೆಗಾಗಿ ಪ್ರತಿಫಲ ನೀಡಲು ಸಿದ್ಧವಿರುವ ಸಂಸ್ಥೆಯ, ಪ್ರತಿಫಲಾಪೇಕ್ಷೆಯಿಂದ ದುಡಿಮೆಗೆ ಸಿದ್ಧವಿರುವ ವ್ಯಕ್ತಿಯ ಬಾಂಧವ್ಯ ಏರ್ಪಡಿಸುವ ಸೇತುವೆ ಎಂದರೆ ‘ನೌಕರಿ ಜಾಹೀರಾತುಗಳು’ ಎನ್ನಬಹುದು. ಸಂಬಳ ಅಥವಾ ಪ್ರತಿಫಲಕ್ಕೆ ಅನುಗುಣವಾಗಿ ನೌಕರ ತನ್ನ ಚೇತನಾ ರೂಪವಾದ ಸೇವೆ-ಶಕ್ತಿಗಳನ್ನು ಶ್ರದ್ದೆಯಿಂದ ನೀಡಲು ಸಿದ್ಧವಾಗಿರುವ ನೌಕರಿ ಜಾಹೀರಾತು ಒಂದು ಬಗೆಯಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ವಿಷಯವೇ ಎನ್ನಬಹುದು. ಏಕೆಂದರೆ ಜಾಹೀರಾತುಗಳ ಫಲವಾಗಿ ಶ್ರಮ, ಜಾಣ್ಮೆ, ಅನುಭವ, ಚಿಂತನೆ, ಬುದ್ಧಿ, ದೇಹಶಕ್ತಿ, ಮೊದಲಾದ ವ್ಯಕ್ತಿಯ ಆಂತರಿಕ ಸರಕುಗಳು ಮಾಲೀಕನು ನೀಡುವ ಸಂಬಳಕ್ಕೆ ಉದ್ಯೋಗದ ಮೂಲಕ ವಿಕ್ರಯವಾಗುತ್ತವೆ. ನೌಕರಿ ವಿಚಾರದಲ್ಲಿ ಜಾಹೀರಾತಿನ ಪಾತ್ರ ‘ಪುರೋಹಿತ’ ನಂತೆ ಎನ್ನಬಹುದು. ವರ ಒಂದು ಕಡೆ, ವಧು ಒಂದು ಕಡೆ ಇರುವಾಗ ಇಬ್ಬರನ್ನೂ ಕೂಡಿಸುವ ಪುರೋಹಿತನಂತೆ ಸಂಬಳ, ಕೂಲಿ, ಸಂಭಾವನೆ, ಪ್ರತಿಫಲವನ್ನು ನೀಡಲು ಸಿದ್ಧವಿರುವ ಮಾಲೀಕ ಅಥವಾ ಸಂಸ್ಥೆ ಒಂದು ಕಡೆ, ಸಂಸ್ಥೆಯ ಅಗತ್ಯ ಸೇವೆಯನ್ನು ಪೂರೈಸುವ ಶಕ್ತಿ ಸಾಮರ್ಥ್ಯ, ಅರ್ಹತೆ, ಅನುಭವಗಳುಳ್ಳ ವ್ಯಕ್ತಿ ಸಮೂಹ ಇನ್ನೊಂದೆಡೆ ಈ ಎರಡು ವರ್ಗಗಳನ್ನು ಕೂಡಿಸುವ ಸಂಪರ್ಕ ಮಾಧ್ಯಮ ಅಥವಾ ಸಮೂಹ ಮಾಧ್ಯಮವೆಂದರೆ ನೌಕರಿ ಜಾಹೀರಾತುಗಳು.

ಲಕ್ಷಣಗಳು

೧. ನೌಕರಿ ಜಾಹೀರಾತು ಮತ್ತು ಮಾರಾಟ ಜಾಹೀರಾತುಗಳು ಎರಡೂ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದರೂ ನೌಕರಿ ಜಾಹೀರಾತುಗಳಲ್ಲಿ ನೌಕರ ಎಂಥವನು ಎಂಬುದು ಮಾಲೀಕನಿಗೆ ಮುಖ್ಯವಾದ ಸಂಗತಿಯಾಗಿರುತ್ತದೆ. ಹಾಗೆಯೇ ಮಾಲೀಕ ಎಂಥವನು ಎಂಬುದು ನೌಕರನಿಗೆ ಮುಖ್ಯವಾಗುತ್ತದೆ. ಆದರೆ ಮಾರಾಟದ ಜಾಹೀರಾತುಗಳಲ್ಲಿ ಗ್ರಾಹಕ-ಮಾಲೀಕರಿಬ್ಬರ ಕಣ್ಣು ‘ಸರಕಿನ’ ಮೇಲೇ ಇರುತ್ತದೆ.

೨. ನೌಕರಿ ಜಾಹೀರಾತುಗಳ ಮೂಲೋದ್ದೇಶ ಉದ್ಯೋಗಕ್ಕೆ ತಕ್ಕ ಸಮರ್ಥ ವ್ಯಕ್ತಿಯನ್ನು ಆಯುವುದೇ ಆಗಿದೆ. ಮನಸೆಳೆಯುವ ರೀತಿಯಲ್ಲಿ ಶೀರ್ಷಿಕೆ ಕೋರಿಕೆಗಳಿರಬೇಕು. ಉದಾಹರಣೆಗೆ, ‘ಕೆಲಸ ಖಾಲಿ ಇದೆ’, ‘ಬೇಕಾಗಿದ್ದಾರೆ’ ಮೊದಲಾದ ಶೀರ್ಷಿಕೆಗಳು ಸಾಮಾನ್ಯ ರೀತಿಯವು. ‘ನಿರುದ್ಯೋಗಿಗಳೇ ಗಮನಿಸಿ, ಕುಳಿತ ಕಡೆ ತಿಂಗಳಿಗೆ ಸಾವಿರ ಗಳಿಸಿ’, ‘ಮಹಿಳೆಯರಿಗೆ ಸುವರ್ಣಾವಕಾಶ’, ‘ವಿದ್ಯಾರ್ಥಿಗಳಿಗೆ ಸುಸಂಧಿ’, ‘ಪಾಸಾಗಬೇಕೇ?’ ‘ತಕ್ಷಣ ಬೇಕಾಗಿದ್ದಾರೆ’ ಇತ್ಯಾದಿ ಶೀರ್ಷಿಕೆಗಳು ಮನಸೆಳೆಯುವಂಥವು.

೩. ಅಚ್ಚಾದ ನಮೂನೆಗಳ ಅಗತ್ಯ: ಅಸಮರ್ಪಕ ಮಾಹಿತಿಯ ಅಸ್ಪಷ್ಟ ಜಾಹೀರಾತು ಒಳ್ಳೆಯ ಉದ್ಯೋಗಿಯನ್ನು ಕಳೆದು ಕೊಳ್ಳುತ್ತವೆ. ಜಾಹೀರಾತನ್ನು ನೀಡುವಾಗ ಉದ್ಯೋಗದ ದೃಷ್ಟಿಯಿಂದ ಹಾಗೂ ಉದ್ಯೋಗಿ ದೃಷ್ಟಿಯಿಂದ ಪ್ರಕಟಣೆಯಲ್ಲಿ ತಿಳಿಸಲೇಬೇಕಾದ ಸಂಗತಿಗಳಾವುವು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು; ಅದರಂತೆಯೇ ಪ್ರಕಟಿಸಬೇಕು. ಸಾಮಾನ್ಯವಾಗಿ ಅಗತ್ಯವಾದ ಅಂಶಗಳು ನಮೂದಾಗಿರಬೇಕು. ಈ ದೃಷ್ಟಿಯಿಂದ ಅಚ್ಚಾದ ನಮೂನೆಗಳನ್ನು ಪ್ರಕಟಿಸಿದರೆ ಹೆಚ್ಚು ಅನುಕೂಲ. ಈಗಂತೂ ಅರ್ಜಿಗಳು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತವೆ; ಕೆಲಸಕ್ಕಾಗಿ ಬಂದ ಆ ಅರ್ಜಿಗಳನ್ನು ವರ್ಗೀಕರಿಸಲು ಹೆಚ್ಚು ಶ್ರಮ, ಕಾಲ ಹಿಡಿಸುವುದರಿಂದ ಕಂಪ್ಯೂಟರಿನ ನೆರವನ್ನು ಪಡೆಯುವುದು ಸಹಜ, ಆದ ಕಾರಣ, ನಿರ್ದಿಷ್ಟ ನಮೂನೆಯಲ್ಲಿಯೇ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ಸಾರುತ್ತಾರೆ. ಕೆಲವರು ಫಾರಂ ಅನ್ನು ಬರೆದು ತರಿಸಿಕೊಳ್ಳಲು ತಿಳಿಸಿದರೆ ಮತ್ತೆ ಕೆಲವರು ಪ್ರಕಟಣೆಯಲ್ಲಿಯೇ ನೀಡಿರುತ್ತಾರೆ. ಉದಾಹರಣೆಗೆ ಲೋಕಸೇವಾ ಆಯೋಗದ ಪ್ರಕಟಣೆಗಳನ್ನು ಗಮನಿಸಬಹುದು. ನೌಕರಿ ಜಾಹೀರಾತುಗಳು ಅಥವಾ ಟೆಂಡರುಗಳು ವಿಸ್ತಾರವಾಗಿದ್ದರೆ ಕೆಲವರು ಪೂರ್ಣವಾಗಿ ಜಾಹೀರಾತು ಮಾಡುವರು; ಮತ್ತೆ ಕೆಲವರು ಸಂಕ್ಷಿಪ್ತವಾಗಿ ಜಾಹೀರಾತುಗೊಳಿಸುವರು, ಮತ್ತು ವಿವರಗಳಿಗೆ ಪತ್ರಿಕೆ ನೋಡಿ ಅಥವಾ ಕಚೇರಿಗೆ ಬರೆದು ಅರ್ಜಿ ತರಿಸಿಕೊಳ್ಳಿ ಎಂದೂ ತಿಳಿಸಿರುತ್ತಾರೆ.

೪. ಸಾಮಾನ್ಯವಾಗಿ ನೌಕರಿ ಅರ್ಜಿಗಳಲ್ಲಿ ಈ ಮುಂದೆ ಕಾಣಿಸಿದ ಅಂಶಗಳು ಪ್ರಕಟವಾಗಿರುತ್ತವೆ. ಉದ್ಯೋಗದ ಹೆಸರು, ಸಂಬಳ ಶ್ರೇಣಿ ಅಥವಾ ಒಟ್ಟು ಮೊತ್ತ, ಇತರ ವಿಶೇಷ ಸವಲತ್ತುಗಳು ಅರ್ಜಿ ಸ್ವೀಕಾರಕ್ಕೆ ಕೊನೆಯ ದಿನಾಂಕ ಮತ್ತು ವೇಳೆ, ಅರ್ಜಿಗಳನ್ನು ಸಲ್ಲಿಸುವ ರೀತಿ ಮತ್ತು ಅರ್ಜಿಗಳು ದೊರೆಯುವ ಬಗೆ, ಅರ್ಜಿಗಳು ತಲುಪಬೇಕಾದ ವಿಳಾಸ ಮತ್ತು ಅರ್ಜಿ ಶುಲ್ಕ (ಅರ್ಜಿ ಶುಲ್ಕ ಕೆಲವೊಮ್ಮೆ ಇರುವುದಿಲ್ಲ) ಅರ್ಜಿದಾರನ ವಯಸ್ಸು, ತಾಯಿ, ತಂದೆ, ಮನೆ, ವಿಳಾಸ ಉದ್ಯೋಗದಲ್ಲಿದ್ದರೆ ಕಚೇರಿ ವಿಳಾಸ, ಅರ್ಜಿದಾರನ ಉದ್ಯೋಗದ ಪೂರ್ವಾನುಭವ, ಅಗತ್ಯವಿರುವ ವಿದ್ಯಾರ್ಹತೆ, ಇತರ ಅರ್ಹತೆಗಳು, ಖಾಲಿ ಇರುವ ಉದ್ಯೋಗಗಳ ಸಂಖ್ಯೆ, ಹೆಸರು, ಶೇಕಡಾವಾರು ಮೀಸಲಾತಿ, ಸಂದರ್ಶನಕ್ಕೆ ಬರಲು ಅಭ್ಯರ್ಥಿ ಖರ್ಚನ್ನು ಭರಿಸುವ ವಿಚಾರ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆಗಳ ಬಗ್ಗೆ ವಿವರಗಳು. ಎಲ್ಲ ನೌಕರಿ ಜಾಹೀರಾತುಗಳಲ್ಲಿಯೂ ಇಷ್ಟೇ ವಿವರಗಳು ಇರುತ್ತವೆ ಎಂದು ಹೇಳಲಾಗುವುದಿಲ್ಲ. ಆಯಾ ಉದ್ಯೋಗಕ್ಕೆ ತಕ್ಕಂತೆ ಬೇಕಾದ ಮಾಹಿತಿಗೆ ತಕ್ಕಂತೆ ಜಾಹೀರಾತು ಪ್ರಕಟವಾಗಿರುತ್ತದೆ. ಅರ್ಜಿಯ ಉದ್ದ ಒಂದು ಪುಟದಿಂದ ಹಿಡಿದು ಹತ್ತಾರು ಪುಟಗಳವರೆಗೆ ಹರಿಯಬಹುದು.

೫. ಅರ್ಜಿ ಸಂಬಂಧಪಟ್ಟ ಇಲಾಖೆ ಅಥವಾ ಸಂಸ್ಥೆಯ ಹೆಸರಿನಲ್ಲಿ ಪ್ರಕಟವಾಗಿರುತ್ತದೆ; ಕೊನೆಯಲ್ಲಿ ಅಧಿಕಾರಿಯ ಹೆಸರು ಇಲ್ಲವೆ ಪದನಾಮ ಅಥವಾ ಪರವಾಗಿ ಎಂದಿರುತ್ತದೆ. ಅಂಚೆ ವಿಳಾಸವಿದ್ದರೆ, ಕೆಲವು ವೇಳೆ ಅಂಚೆಶೀಲ ಪಟ್ಟಿಗೆ ಸಂಖ್ಯೆಯನ್ನು ನೀಡಿರುತ್ತಾರೆ.

ನಿರ್ದಿಷ್ಟ ನಮೂನೆ ಇಲ್ಲದ ಪ್ರಕಟವಾಗುವ ಜಾಹೀರಾತಿನ ಮಾದರಿ
ಮಾದರಿ

ಜ್ಞಾನಗಂಗಾ ಶಿಕ್ಷಣ ಸಂಸ್ಥೆ (ರಿ)
ಜಾಣರಪೇಟೆ, ವಿದ್ಯಾನಗರ

                                                            ದಿನಾಂಕ: ೫ನೆಯ ಜುಲೈ ೧೯೮೭

ಬೇಕಾಗಿದ್ದಾರೆ

ಕೆಳಕಂಡ ಅಧ್ಯಾಪಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ:

ಅವಧಿ

ಹುದ್ದೆ

ಸಂಖ್ಯೆ

ಕನಿಷ್ಟ ವಿದ್ಯಾರ್ಹತೆ

ಮೀಸಲಾತಿ

ಪೂರ್ಣಾವಧಿ ಭೌತಶಾಸ್ತ್ರ ದ್ವಿತಿಯ ದರ್ಜೆ ಸ್ನಾತ ಕೋತ್ತರ ಪದವಿ ಜಿ.ಎಂ
ರಸಾಯನಶಾಸ್ತ್ರ ಎಸ್‌ಸಿ ೧
ಕನ್ನಡ ಎಸ್‌ಟಿ /
ಗಣಿತ ಎಸ್‌ಟಿ
ಭಾಗಾವಧಿ ಸಂಸ್ಕೃತ ಜಿ.ಎಂ
ಹಿಂದಿ
ಮರ್ಕೆಂಟೈಲಾ

ಸೂಚನೆಗಳು: ಅರ್ಹರಾದವರು ಹತ್ತು ರೂ. ಪೋಸ್ಟಲ್ ಆರ್ಡರಿನೊಂದಿಗೆ ಈ ಜಾಹೀರಾತು ಪ್ರಕಟಣೆ ದಿನಾಂಕದಿಂದ ೨೧ ದಿನಗಳೊಳಗೆ ಸಂಸ್ಥೆಯ ಕಾರ್ಯದರ್ಶಿಯವರಿಗೆ ಅರ್ಜಿಯನ್ನು ಕಳಿಸಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಜಾತಿ ಸರ್ಟೀಫಿಕೇಟನ್ನು ಲಗತ್ತಿಸಬೇಕು.

ವಯಸ್ಸು, ವಿದ್ಯಾರ್ಹತೆ, ಅನುಭವ ಇತ್ಯಾದಿಗಳ ಪೂರ್ಣ ವಿವರಗಳನ್ನು ಸ್ವಹಸ್ತಾಕ್ಷರ ಲಿಖಿತ ಅರ್ಜಿಯಲ್ಲಿ ನಮೂದಿಸಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಕಳಿಸಬೇಕು. ಸರ್ಕಾರಿ ನಿಯಮಗಳುಸಾರ ಸಂಬಳ ನೀಡಲಾಗುವುದು ನಿಗದಿತ ಅರ್ಜಿ ಫಾರಂಗಳನ್ನು ಸಂಸ್ಥೆಯಿಂದ ಪಡೆಯಬಹುದು.

ಸಹಿ
ತಿಮ್ಮರಸಪ್ರಭು
ಕಾರ್ಯದರ್ಶಿ
ಜ್ಞಾನ ಗಂಗಾ ಶಿಕ್ಷಣ ಸಂಸ್ಥೆ (ರಿ)

 

ನೌಕರಿ ಜಾಹೀರಾತುಗಳಲ್ಲಿ ವಿಸ್ತೃತ ಜಾಹೀರಾತು. ಸಂಕ್ಷಿಪ್ತ ಜಾಹೀರಾತು ಎಂದು ಎರಡು ಬಗೆ. ಇಲ್ಲಿ ಪೆಟ್ಟಿಗೆ ಸಂಖ್ಯೆಯ ಮಾದರಿಯೊಂದಿಗೆ ಸಂಕ್ಷಿಪ್ತ ಜಾಹೀರಾತಿಗೆ ಒಂದು ಮಾದರಿ ಕೊಟ್ಟಿದೆ.

ಮಾದರಿ

ತರಬೇತಿ ಸಹಾಯಕರು ಬೇಕಾಗಿದ್ದಾರೆ.

ದಿನಾಂಕ …………………..

ಒಂದು ಪ್ರಮುಖ ಸರಕು ಸಾಗಣೆಯ ಸಂಸ್ಥೆಯು ದೇಶದ ನಾನಾ ಭಾಗಗಳಲ್ಲಿರುವ ತನ್ನ ಕಚೇರಿಗಳಿಗೆ ತರಬೇಕಿ ಸಹಾಯಕರನ್ನು ನೇಮಿಸಿಕೊಳ್ಳಲು ಇಚ್ಛಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷ ಅವಧಿಯ ತರಬೇತಿಯನ್ನು ಪಡೆಯಬೇಕು ಮತ್ತು ಈ ಅವಧಿಯಲ್ಲಿ ಅವರಿಗೆ ಮಾಹೆಯಾನ ೫೦೦ರೂ. ಗಳನ್ನು ತರಬೇತಿ ಭತ್ಯೆಯಾಗಿ ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಮುಗಿಸಿದ ಮೇಲೆ ಅವರನ್ನು ಕಂಪನಿಯ ಸೇವೆಗೆ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು.

ಕನಿಷ್ಟ ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಪಾಸಾಗಿರಬೇಕು
ವಯಸ್ಸು: ೨೫ ವರ್ಷ ಮೀರಿರಬಾರದು
ಮಹಿಳೆಯರೂ ಅರ್ಜಿಗಳನ್ನು ಸಲ್ಲಿಸಬಹುದು
ಹಿಂದಿ ಮತ್ತು ಇಂಗ್ಲೀಷ್ ಭಾಷೆ ತಿಳಿದವರಿಗೆ ಪ್ರಾಶಸ್ತ್ಯ ಕೊಡಲಾಗುವುದು.

ಪೂರ್ಣ ವ್ಯಕ್ತಿಗಳ ವಿವರಗಳೊಂದಿಗೆ ಆಗಸ್ಟ್ ೨೦ರೊಳಗೆ ಅರ್ಜಿಯನ್ನು ಇಲ್ಲಿಗೆ ಕಳುಹಿಸಬೇಕು.

ಬಾಕ್ಸ್ ೨೦. ೮೮೭೬ ಕೇರಾಫ್ ಉದ್ಯೋಗವಾಣಿ
ದಿನಪತ್ರಿಕೆ, ಅಂಗಳೂರು – ೫೬೦ ೦೦೪