ಕನ್ನಡದಲ್ಲಿ ಪಠ್ಯಗ್ರಂಥಗಳ ನಿರ್ಮಾಣವಾಗುತ್ತಿರುವುದಕ್ಕೆ ಒಂದು ವಿಶಿಷ್ಟ ಇತಿಹಾಸವೇ ಇದೆ. ಅಚ್ಚಿನ ಯುಗ ಪ್ರಾರಂಭವಾದ ಮೇಲೆ ಬ್ರಿಟಿಷರ ಕಾಲದಲ್ಲಿ ಶಾಲೆಗಳಿಗಾಗಿ ನೂತನ ವಿದ್ಯಾಭ್ಯಾಸ ಪದ್ಧತಿಗೆ ಅನುಗುಣವಾಗಿ ಪಠ್ಯಭಾಗಗಳನ್ನು ಗೊತ್ತು ಮಾಡಿ, ಅದಕ್ಕೆ ತಕ್ಕಂತೆ ಪಠ್ಯಗ್ರಂಥಗಳನ್ನು ಬರೆಯಿಸಿ ಪ್ರಕಟಿಸುವ ಪರಿಪಾಠವುಂಟಾಯಿತು; ಅನೇಕ ಕನ್ನಡ ಲೇಖಕರು ಸ್ವತಂತ್ರವಾಗಿಯೂ ಪಠ್ಯಗ್ರಂಥಗಳನ್ನು ರಚಿಸಿದರು.

ಬೆಂಗಳೂರು ವಿಶ್ವವಿದ್ಯಾಲಯವು ಇದುವರೆಗೆ ತಾನೇ ಪ್ರಕಟಿಸಿದ ಹಾಗೂ ಇತರರು ಪ್ರಕಟಿಸಿದ ಗ್ರಂಥಗಳಲ್ಲಿ ಪಠ್ಯಭಾಗಕ್ಕೆ ಅನುಗುಣವಾದವನ್ನು ಕಾಲೇಜುಗಳಲ್ಲಿ ಕನ್ನಡ ಅಧ್ಯಯನಕ್ಕೆ ಸಂಬಂಧಿಸಿದಂತೆ ಗೊತ್ತು ಮಾಡುತ್ತಾ ಇತ್ತು; ಶಾಸ್ತ್ರ ವಿಷಯದ ಗ್ರಂಥಗಳನ್ನು ಪಂಡಿತರು ರಚಿಸಿದ ಗ್ರಂಥಗಳನ್ನು ನಿಯಾಮಕ ಮಾಡಲಾಗುತ್ತಿತ್ತು. ಈ ಗ್ರಂಥಗಳು ಪಠ್ಯಭಾಗದ ಎಲ್ಲ ಅಂಶಗಳನ್ನೂ ಒಳಗೊಳ್ಳುತ್ತಿರಲಿಲ್ಲ ಮತ್ತು ಪ್ರತಿಪಾದಿತ ಸಂಗತಿಗಳು ಗೊತ್ತು ಮಾಡಿದ ಪಠ್ಯಭಾಗಕ್ಕೆ ತಕ್ಕ ಪ್ರಮಾಣದಲ್ಲಿರುತ್ತಿರಲಿಲ್ಲ. ಈ ಕೊರತೆಯನ್ನು ನಿವಾರಿಸಲು ಈಗ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ವ್ಯಾಕರಣ, ಅಲಂಕಾರ, ಛಂದಸ್ಸು, ಸಾಹಿತ್ಯ ಚರಿತ್ರೆ, ವಾಣಿಜ್ಯ ಶಾಸ್ತ್ರ ಮೊದಲದ ವಿಷಯಗಳಿಗೆ ಸಂಬಂಧಿಸಿದ ಪಠ್ಯಭಾಗಗಳಿಗೆ ಸೂಕ್ತವಾದ ರೀತಿಯಲ್ಲಿ ಪರಿಣತರಿಂದ ಗ್ರಂಥಗಳನ್ನು ಸಿದ್ಧಪಡಿಸಿ ಪ್ರಕಟಿಸುತ್ತಿದೆ. ಈ ಮಾಲಿಕೆಯಲ್ಲಿ ಪ್ರಕೃತ ‘ವಾಣಿಜ್ಯ ಕನ್ನಡ ಪರಿಚಯ’ ಗ್ರಂಥವೂ ಒಂದಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಕಾಂ ತರಗತಿಗೆ ಕನ್ನಡದಲ್ಲಿ ವ್ಯಾವಹಾರಿಕ ಕನ್ನಡ ಅಧ್ಯಯನಕ್ಕೆ ಗೊತ್ತು ಮಾಡಿದ ಪಠ್ಯಭಾಗಕ್ಕೆ ಅನುಗುಣವಾಗಿ ರಚಿತವಾದ ಈ ಗ್ರಂಥವು ಕನ್ನಡ ವಾಣಿಜ್ಯ ಗ್ರಂಥಗಳಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ. ಇದುವರೆಗೆ ಪಠ್ಯಭಾಗಗಳ ಅಧ್ಯಯನಕ್ಕಾಗಿ ಬಳಸುತ್ತಿದ್ದ ವ್ಯಾವಹಾರಿಕ ಕನ್ನಡ ಗ್ರಂಥಗಳಲ್ಲಿ ಇದ್ದ ಕೆಲವು ಅಧ್ಯಾಯಗಳು ಪಠ್ಯಭಾಗಕ್ಕೆ ಗೊತ್ತು ಮಾಡುತ್ತಿರಲಿಲ್ಲ; ಮತ್ತೆ ಕೆಲವು ವಿಷಯಗಳು ಸಂಕ್ಷಿಪ್ತವಾಗಿರುತ್ತಿದ್ದವು; ಇಲ್ಲವೆ ಅತೀ ವಿಸ್ತಾರವಾಗಿರುತ್ತಿದ್ದವು. ಒಂದೇ ಪುಸ್ತಕದಲ್ಲಿ ಕೆಲವು ವಿಷಯಗಳಿಗೆ ಸಾಕಷ್ಟ ವಿವರಗಳು ಸಿಗುತ್ತಿರಲಿಲ್ಲ; ಸಿಕ್ಕಿದರೂ ಅವು ಸಮಗ್ರವಾಗಿದೆ ಎನಿಸುತ್ತಿರಲಿಲ್ಲ. ಹೀಗಾಗಲೂ ಕಾರಣ ಈ ಗ್ರಂಥಗಳಾವೂವೂ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಕನ್ನಡ ಪಠ್ಯಭಾಗಕ್ಕೆ ತಕ್ಕಂತೆ ರಚಿತವಾದ ಗ್ರಂಥಗಳಾಗಿರಲಿಲ್ಲ ಎಂಬುದು. ಈ ಕೊರತೆಯನ್ನು ಮೊದಲ ಬಾರಿಗೆ ಈ ಗ್ರಂಥ ನಿವಾರಿಸಿದೆ.

ಕನ್ನಡದಲ್ಲಿ ವಾಣಿಜ್ಯ ಕನ್ನಡದ ಬಗ್ಗೆ ಸಮಗ್ರ ಪಠ್ಯಗ್ರಂಥವೊಂದು ಇನ್ನೂ ಪ್ರಕಟವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ನಾಡಿನ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪಠ್ಯಭಾಗಗಳನ್ನು ಗೊತ್ತು ಮಾಡಿರುವುದು. ಹೀಗಾಗಿ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಭಾಗಗಳನ್ನು  ಒಳಗೊಂಡ ವಾಣಿಜ್ಯ ಕನ್ನಡ ಗ್ರಂಥ ಪ್ರಕಟವಾಗಲು ಅಶಕ್ಯವಾಗಿದೆ. ಇದಕ್ಕೆ ಪರಿಹಾರವೆಂದರೆ ವಾಣಿಜ್ಯ ಕನ್ನಡ ಪಠ್ಯವಿಷಯಗಳಲ್ಲಿ ಪ್ರಶ್ನೆಪತ್ರಿಕೆ ಹಾಗು ಅಂಕಗಳ ಹಂಚಿಕೆ ವಿಚಾರದಲ್ಲಿ ಎಲ್ಲ ವಿಶ್ವವಿದ್ಯಾಲಯಗಳು ಏಕರೂಪತೆಯನ್ನು ತರಬೇಕಾಗಿದೆ. ಆದ ಕಾರಣ ವಾಣಿಜ್ಯ ಕನ್ನಡ ಗ್ರಂಥದ ವಿಷಯವಾಗಿ ಸೇರಬೇಕಾಗಿದ್ದ ಕೆಲವು ವಿಷಯಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯಭಾಗದಲ್ಲಿ ಇಲ್ಲದಿರುವುದರಿಂದ ಅವನ್ನು ಬಿಡಲಾಗಿದೆ.

ಈ ಗ್ರಂಥಗಳ ರಚನೆ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಭಾಷೆಗಳಲ್ಲಿರುವ ವಾಣಿಜ್ಯಶಾಸ್ತ್ರಕ್ಕೆ ಮುಖ್ಯವಾಗಿ ಪತ್ರ ವ್ಯವಹಾರಕ್ಕೆ ಸಂಬಂಧಿಸಿದ ಪಠ್ಯಗ್ರಂಥಗಳನ್ನೂ ಪಠ್ಯೇತರ ಗ್ರಂಥಗಳನ್ನೂ ಭಾಷಾಕೋಶಗಳನ್ನೂ ಪತ್ರಿಕಾ ಲೇಖನಗಳನ್ನೂ ಆಡಳಿತ ಭಾಷೆಯಾಗಿ ಕನ್ನಡವನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಪ್ರಕಟಿಸಿರುವ ಅನೇಕ ಗ್ರಂಥಗಳನ್ನೂ ಅಧ್ಯಯನ ಮಾಡಿ ಸೂಕ್ತವೆನಿಸಿದ ಅಂಶಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ; ಆ ಗ್ರಂಥಗಳ ಲೇಖಕರಿಗೆಲ್ಲರಿಗೂ ನಾವು ಋಣಿಗಳಾಗಿದ್ದೇವೆ.

ಈ ಗ್ರಂಥ ರಚನೆಗೆ ಪ್ರೇರಣೆ ನೀಡಿದ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಮತ್ತು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ಹು.ಕಾ.ಜಯದೇವ್ ಅವರಿಗೆ ನಾವು ಅಭಾರಿಗಳಾಗಿದ್ದೇವೆ. ಆಕರ ಗ್ರಂಥಗಳನ್ನು ಒದಗಿಸಿ ನಿರೂಪಣಾ ವಿಧಾನಕ್ಕೆ ಮಾರ್ಗದರ್ಶನ ಮಾಡಿ, ಸಹಕರಿಸಿದ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನ ಕನ್ನಡ ಪ್ರವಚಕರಾದ ಶ್ರೀ ಜಿ.ಅಶ್ವತ್ಥನಾರಾಯಣ ಅವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಗ್ರಂಥ ರಚನೆಗೆ ಪ್ರೋತ್ಸಾಹ ನೀಡಿ ಸಹಕರಿಸಿದ ಆಚಾರ್ಯ ಪಾಠಾಶಾಲಾ ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆದರ ಪ್ರೊ. ವಿ. ಅನ್ನಪೂರ್ಣಮ್ಮನವರಿಗೂ. ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ. ರಾಮನಾಥನ್ ಅವರಿಗೂ, ವಾಣಿಜ್ಯ ರೀಡರ್ ಶ್ರೀಮತಿ ಕೆ.ವಿ. ನಳಿನಿ ಅವರಿಗೂ ನಾವು ಕೃತಜ್ಞರಾಗಿದ್ದೇವೆ. ತಮ್ಮ ಬರಹಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಪ್ರೊ.ಅ.ರಾ. ಮಿತ್ರ ಅವರಿಗೂ ಪಠ್ಯಪುಸ್ತಕ ಸಮಿತಿಯ ಸದಸ್ಯರಿಗೂ ನಮ್ಮ ವಂದನೆಗಳು.

ಈ ಗ್ರಂಥದ ಎರಡನೆಯ ಮುದ್ರಣಕ್ಕೆ ನೆರವಾದ ಪ್ರಸಾರಾಂಗದ ನಿರ್ದೇಶಕರಾದ ಡಾ. ಡಿ. ಸರ್ವೋತ್ತಮ ಕಾಮತ್, ಉಪನಿರ್ದೇಶಕರಾದ ಶ್ರೀಮತಿ ಅಂದನೂರು ಶೋಭ ಅವರಿಗೂ, ಅಲ್ಪಕಾಲದಲ್ಲಿ ಡಿ.ಟಿ.ಪಿ ಮಾಡಿಕೊಟ್ಟ ಸನ್ಮತಿ ಗ್ರಾಫಿಕ್ಸ್ ಅವರಿಗೂ, ಅಲ್ಪಕಾಲದಲ್ಲಿ ಸುಂದರವಾಗಿ ಮುದ್ರಿಸಿಕೊಟ್ಟ ಬೆಂಗಳೂರು ವಿಶ್ವವಿದ್ಯಾಲಯದ ಮುದ್ರಣಾಲಯದ ಸಿಬ್ಬಂಧಿ ವರ್ಗಕ್ಕೂ ನಾವು ಅಭಾರಿಗಳಾಗಿದ್ದೇವೆ.

ನಮ್ಮ ಈ ಪ್ರಯತ್ನದಲ್ಲಿ ದೋಷಗಳಿರುವುದು ಅಸಂಭವವಲ್ಲ, ಅವನ್ನು ಸಹೃದಯರು ತಿಳಿಸುವ ಕೃಪೆ ಮಾಡಿದರೆ ಮುಂದಿನ ಮುದ್ರಣದಲ್ಲಿ ಅವನ್ನು ಸರಿಪಡಿಸುತ್ತೇವೆ; ವಿದ್ಯಾರ್ಥಿಗಳೂ, ಅಧ್ಯಾಪಕ ಮಿತ್ರರೂ, ವಾಣಿಜ್ಯ ಶಾಸ್ತ್ರಸಕ್ತರೂ ಈ ಗ್ರಂಥವನ್ನು ಆದರದಿಂದ ಬರಮಾಡಿಕೊಂಡರೆ ನಮ್ಮ ಶ್ರಮ ಸಾರ್ಥಕವೆಂದು ತಿಳಿಯುತ್ತೇವೆ.

ಎಂ.ಆರ್.ಲಕ್ಷ್ಮೀದೇವಿ
ಜೆ.ಅಬ್ದುಲ್ ಬಷೀರ್