ಕನ್ನಡ ಸಾವಿರಾರು ವರ್ಷಗಳಿಂದ ಬೆಳೆಯುತ್ತಾ ಬರುತ್ತಿರುವಂಥ ಜೀವಂತ ಭಾಷೆಯಾಗಿದೆ. ರಾಜಮಹಾರಾಜರಿಂದ ಹಿಡಿದು ಶ್ರೀಸಾಮಾನ್ಯರವರೆಗೆ, ಅರಮನೆಯಿಂದ ಗುರುಮನೆವರೆಗೆ, ಅಂತಸ್ತುಗಳ ಭವನದಿಂದ ಬಡಗುಡಿಸಿಲಿನ ನಿವಾಸಿವರೆಗೆ-ಪ್ರತಿಯೊಬ್ಬರೂ ಬಳಸುವ ಭಾಷೆ ಕನ್ನಡ. ಸಾಮಾನ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಬಳಸುತ್ತ ಬಂದ ಹಾಗೆಯೇ ಶಾಸ್ತ್ರ, ವಿಜ್ಞಾನ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿಯೂ ಆಯಾ ವಿಷಯಗಳ ಪರಿಣತರು ಅಗತ್ಯಕ್ಕೆ ತಕ್ಕಂತೆ ಬಳಸುತ್ತಾ ಬೆಳೆಸುತ್ತಾ ಬಂದಿದ್ದಾರೆ. ಸಾಹಿತಿಗಳೂ ಶಾಸ್ತ್ರಜ್ಞರೂ ಕನ್ನಡದಲ್ಲಿ ಜ್ಞಾನಪ್ರಸಾರದ ದಿಗಂತವನ್ನು ವಿಸ್ತರಿಸಿದ್ದಾರೆ. ಇಂದು ಕನ್ನಡ ಕರ್ನಾಟಕದಲ್ಲಿ ರಾಜ್ಯಭಾಷೆಯೂ ಆಡಳಿತ ಭಾಷೆಯೂ ಶ್ರೀಸಾಮಾನ್ಯರ ವ್ಯವಹಾರದ ಭಾಷೆಯೂ ಆಗಿದೆ. ಅಷ್ಟೇ ಅಲ್ಲ. ಅನೇಕ ವಿದೇಶಿಯರೂ ಕನ್ನಡವನ್ನು ಕಲಿಯುತ್ತಿದ್ದಾರೆ. ಅಧ್ಯಯನದ ವಿಷಯವನ್ನಾಗಿ ಆರಿಸಿಕೊಳ್ಳುತ್ತಿದ್ದಾರೆ.

ಯಾವುದೇ ದೇಶದ ವ್ಯವಹಾರಗಳನ್ನಾದರೂ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಜನತೆ ನಡೆಸುವ ವ್ಯವಹಾರ ಮತ್ತು ಸರ್ಕಾರ ನಡೆಸುವ ವ್ಯವಹಾರ. ಯಾವುದೇ ವ್ಯವಹಾರದಲ್ಲಾಗಲಿ ಪತ್ರ ವ್ಯವಹಾರ ಪ್ರಮುಖ ಸಂಪರ್ಕ-ಸಂವಹನ ಮಾಧ್ಯಮವಾಗಿದೆ. ಮೌಖಿಕ ವ್ಯವಹಾರಗಳು. ದೂರವಾಣಿ, ತಂತಿ, ಸಂದರ್ಶನ, ಸಂವಾದಗಳ ಮೂಲಕ ನಡೆದರೂ ಅವು ಅಧಿಕೃತ ದಾಖಲೆಗಳಾಗಿ ಪರಿಣಮಿಸುವುದು ಬರವಣಿಗೆಯ ರೂಪವಾದ ಪತ್ರ ವ್ಯವಹಾರದಲ್ಲೇ.

ಆಡಳಿತ ವ್ಯವಹಾರದಲ್ಲಿ ಬಳಕೆಯಾಗುವ ಸರ್ಕಾರಿ ಪತ್ರ ವ್ಯವಹಾರವನ್ನು ಸ್ಥೂಲವಾಗಿ ಸರ್ಕಾರಿ ಪತ್ರ ವ್ಯವಹಾರ, ಅರೆ ಸರ್ಕಾರಿ ಪತ್ರ ವ್ಯವಹಾರ, ಇತರ ಪತ್ರ ವ್ಯವಹಾರ ಎಂದು ವರ್ಗೀಕರಿಸಬಹುದು.

ಜನಸಾಮಾನ್ಯರ ದೈನಂದಿನ ಪತ್ರ ವ್ಯವಹಾರವನ್ನು ಸಾಮಾನ್ಯ ವ್ಯವಹಾರ ಪತ್ರಗಳು, ಖಾಸಗಿ ವ್ಯವಹಾರ ಪತ್ರಗಳು, ಕೌಟುಂಬಿಕ ವ್ಯವಹಾರ ಪತ್ರಗಳು, ಸರ್ಕಾರಿ ಪತ್ರಗಳು, ಆರ್ಥಿಕ ವಿಚಾರಗಳ ಪತ್ರಗಳು, ವಾಣಿಜ್ಯ ಪತ್ರಗಳು ಎಂದು ಹಲವು ಬಗೆಯಲ್ಲಿ ವರ್ಗಿಕರಿಸಬಹುದು. ಈ ಬಗೆಯ ಪತ್ರ ವ್ಯವಹಾರಗಳಲ್ಲಿ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವ್ಯಕ್ತಿ-ವ್ಯಕ್ತಿಗಳ ನಡುವೆ, ಸಂಸ್ಥೆ-ಸಂಸ್ಥೆಗಳ ನಡುವೆ, ಮತ್ತು ವ್ಯಕ್ತಿ-ಸಂಸ್ಥೆಗಳ ನಡುವೆ ನಡೆಯುವ ವಾಣಿಜ್ಯ ಪತ್ರ ವ್ಯವಹಾರದ ಪರಿಚಯವನ್ನು ಈ ಗ್ರಂಥದಲ್ಲಿ ಮಾಡಿಕೊಡಲು ಪ್ರಯತ್ನಿಸಲಾಗಿದೆ.

ವಾಣಿಜ್ಯ ಕ್ಷೇತ್ರದಲ್ಲಿ ಪತ್ರವ್ಯವಹಾರಶಾಸ್ತ್ರ ವಿಶಿಷ್ಟ ಅಧ್ಯಯನದ ವಿಷಯವಾಗಿ. ಸರಕುಗಳ ಮಾರಾಟ, ಗ್ರಾಹಕ-ಮಾರಾಟಗಾರರ ಸಂಬಂಧದಲ್ಲಿ ಪತ್ರವ್ಯವಹಾರ ವಾಣಿಜ್ಯದ ಜೀವನಾಡಿಯಾಗಿದೆ. ವಾಣಿಜ್ಯದ ಸರ್ವಹಂತಗಳಲ್ಲಿಯೂ ಪತ್ರವ್ಯವಹಾರ ಅನಿವಾರ್ಯವಾಗಿದೆ.

ವಾಣಿಜ್ಯ ಕ್ಷೇತ್ರದ ಪತ್ರವ್ಯವಹಾರವನ್ನು ಸ್ಥೂಲವಾಗಿ ಭಾಗ ಮಾಡಬಹುದು. ಗ್ರಾಹಕರು ಮಾರಾಟ ಸಂಸ್ಥೆಯೊಡನೆ ವ್ಯವಹರಿಸುವಾಗ ಬಳಸುವ ಪತ್ರಗಳು : ವಿಚಾರಣಾಪತ್ರ ಕ್ರಯಾದೇಶ ಪತ್ರ, ಪರಿಚಯ ಪತ್ರ, ಆಕ್ಷೇಪಣಾ ಪತ್ರ, ಪ್ರತಿಭಟನಾ ಪತ್ರ,  ಅಭ್ಯರ್ಥನ ಪತ್ರ ಮೊದಲಾದವು ಈ ಗುಪಿಗೆ ಸೇರುತ್ತವೆ. ೨. ಸಂಸ್ಥೆ ಗ್ರಾಹಕನಿಗೆ ಬರೆಯುವ ಪತ್ರಗಳು : ಸರಕುರವಾನೆ ಪತ್ರ, ಆದೇಶ ಅಂಗೀಕಾರ ಪತ್ರ, ನೇಮಕಾದೇಶ ಪತ್ರ, ಪರಿಪತ್ರ, ಪರಾಮರ್ಶನ ಪತ್ರ ಉದರಿ ಪತ್ರ, ವಸೂಲಿ ಪತ್ರ, ಮಾರಾಟ ಪತ್ರ ಮುಂತಾದವು ಈ ಗುಂಪಿನಲ್ಲಿ ಸಮಾವೇಶವಾಗುತ್ತವೆ. ೨. ಸಂಸ್ಥೆ – ಸಂಸ್ಥೆಗಳ ನಡುವಣ ಪತ್ರವ್ಯವಹಾರ : ಇದರ ಕಕ್ಷೆಗೆ ಪತ್ರಿಕೆ ಸಂಪಾದಕರ ಪತ್ರಗಳು, ಬ್ಯಾಂಕಿಗ್ ಪತ್ರಗಳು, ಕಂಪೆನಿ ವ್ಯವಹಾರ ಪತ್ರಗಳು, ವಿಮಾಪತ್ರಗಳು ಆಯಾತ-ನಿರ್ಯಾತ ಪತ್ರಗಳು ಮೊದಲಾದವು ಸೇರುತ್ತವೆ.

ಯಾವುದೇ ವಾಣಿಜ್ಯ ಪತ್ರವಾದರೂ ಅದರ ನಿರೂಪಣಾ ವಿಧಾನ, ಭಾಷಾಬಳಕೆ, ವಿಷಯ ಜೋಡಣೆ ಮುಂತಾದವು ಹೇಗಿರಬೇಕೆಂಬುದರ ಬಗ್ಗೆ ಅನುಭವ ಪರಂಪರೆಗಳನ್ನಾಧರಿಸಿ ನಿರ್ದಿಷ್ಟ ಮಾದರಿ ಪತ್ರಗಳು ಬಳಕೆಯಲ್ಲಿವೆ; ಅದರದೇ ಆದ ನಿಯಮಾವಳಿಗಳೂ ಇವೆ. ಪತ್ರ ವ್ಯವಹಾರವು ಕೇವಲ ಯಾಂತ್ರಿಕ ಅಥವಾ ಕಾಲ್ಪನಿಕ ಬರೆಹವಲ್ಲ; ವ್ಯಾವಹಾರಿಕವಾಗಿ, ಸರಳವಾಗಿ, ಕಲಾತ್ಮಕವಾಗಿ ಆತ್ಮೀಯವಾಗಿ ನಿರೂಪಕವಾಗಿರುತ್ತದೆ. ವಿಷಯವನ್ನು ಸಂದರ್ಭಾಕನುಸಾರವಾಗಿ ವಿಧಿವಿಧಾನಗಳಿಗನುಗುಣವಾಗಿ, ನಿರ್ದಿಷ್ಟ ಕ್ರಮದಲ್ಲಿ ವಿಂಗಡಿಸಿಕೊಂಡು, ಜೋಡಿಸಿಕೋಂಡು ಪತ್ರಗಳನ್ನು ಬರೆಯಲಾಗುತ್ತದೆ. ಎದರ ಅಧ್ಯಯನವೇ ಪತ್ರವ್ಯವಹಾರ ಶಾಸ್ತ್ರ.

ವಾಣಿಜ್ಯ ಪತ್ರವ್ಯವಹಾರದ ಅಧ್ಯಯನವು ಚಿಲ್ಲರೆ ಅಂಗಡಿಯವನಿಂದ ಹಿಡಿದು, ಸರಕನ್ನು ಮಾರುವ-ಕೊಳ್ಳುವ ವ್ಯವಹಾರಕ್ಕೆ ನೆರವಾಗುವ, ಬ್ಯಾಂಕ್, ವಿಮೆ, ಸಾರಿಗೆ ಸಂಸ್ಥೆ, ಪಾಲುದಾರ ಸಂಸ್ಥೆಗಳವರೆಗೆ ಹಬ್ಬಿದೆ. ಪತ್ರದ ಚಲಾವಣೆಯಿಂದ ಹಣದ ಚಲಾವಣೆ-ಸರಕು ಚಲಾವಣೆಗಳಾಗಿ ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಯೊಡನೆ ವ್ಯವಹರಿಸಲು ಸಾಧ್ಯವಾಗಿರುವುದು ಪತ್ರವ್ಯವಹಾರದಿಂದಲೇ ಎಂದರೆ ಅತಿಶಯೋಕ್ತಿ ಯೇನಲ್ಲ. ಆದ್ದರಿಂದಲೇ ವಾಣಿಜ್ಯ ಪತ್ರಗಳು ‘ವ್ಯಾಪಾರಿಯ ಪ್ರತಿನಿಧಿಗಳು’, ‘ವ್ಯಾಪಾರ ಜಗತ್ತಿನ ರೂವಾರಿತಿಗಳು’, ವ್ಯಾಪರಿಯ ‘ಮಾನಸಿಕ ಚಟುವಟಿಕೆಯ ಭಾಗ’, ವ್ಯಾಪಾರಿಗಳ ‘ಸಂಬಂಧ ಸೇತುವೆ’, ‘ ಮೂಕರಾಭಾರಿಗಳು’ ಎಂದು ಕರಿದಿದ್ದಾರೆ, ವಾಣಿಜ್ಯ ರಂಗದಲ್ಲಿ ಪತ್ರಗಳನ್ನು ಸಮರ್ಪಕವಾಗಿ ಬರೆಯಲು ಅಭ್ಯಾಸ, ಅಧ್ಯಯನ, ಅನುಭವ, ಶಿಕ್ಷಣಗಳ ಅಗತ್ಯವಿದೆ.

ಪ್ರಸಕ್ತ ಗ್ರಂಥದಲ್ಲಿ ವಾಣಿಜ್ಯ ಕನ್ನಡ ಪರಿಚಯದ ದೃಷ್ಟಿಯಿಂದ ಗ್ರಾಹಕ ಮಾರಟಗಾರರ ನಡುವಣ ವ್ಯವಹಾರಕ್ಕಷ್ಟೇ ಸಂಬಂಧಿಸಿದ ಸಾಮಾನ್ಯ ವ್ಯವಹಾರ ಪತ್ರಗಳು, ಬ್ಯಾಂಕ್ ವ್ಯವಹಾರಪತ್ರಗಳು, ಉದ್ಯೋಗ ಪತ್ರಗಳು, ಪರಿಪತ್ರಗಳು, ಕಂಪೆನಿ ವ್ಯವಹಾರಪತ್ರಗಳು, ವರದಿಗಳು – ಇವನ್ನು ವಿವರಿಸಿದ. ಯಾವುದೇ ಪತ್ರ ವ್ಯವಹಾರವಾದರೂ ಮೂಲಭೂತವಾಗಿ ತಿಳಿಯಬೇಕಾದ ಪತ್ರದ ವಿನ್ಯಾಸ, ಲಕ್ಷಣ, ಸಂಕ್ಷೇಪ ಲೇಖನ ಮುಂತಾದವುಗಳನ್ನು ಮೊದಲು ಪ್ರಸ್ತಾಪಿಸಿದೆ. ಪತ್ರವ್ಯವಹಾರ ಕ್ಷೇತ್ರದಲ್ಲಿ ವಿಶೇಷವಾಗಿ ಬಳಸುವ ವಾಣಿಜ್ಯ ಪತ್ರಗಳನ್ನು ಕುರಿತು ಅಧ್ಯಯನ ಮತ್ತು ಮಾದರಿ ಪತ್ರಗಳ ರಚನೆ ಈ ಗ್ರಂಥದ ಮುಖ್ಯ ಗುರಿಯಾಗಿದೆ.