ವಾಣಿಜ್ಯ ಪತ್ರಗಳ ವೈವಿಧ್ಯವನ್ನು ಕಂಡಾಗ ಯಾರಿಗಾದರೂ ಅಚ್ಚರಿ ಮೂಡುತ್ತದೆ. ವಾಣಿಜ್ಯ ಪತ್ರಗಳು ಎಷ್ಟೇ ವೈವಿಧ್ಯಗಳಿಂದ ಕೂಡಿದ್ದರೂ ಅವನ್ನು ಗ್ರಾಹಕ ಮಾರಾಟಗಾರರ ಸಂಬಂಧದ ಹಿನ್ನೆಲೆಯಲ್ಲಿ ತ್ರಿವಿಧವಾಗಿ ವರ್ಗೀಕರಿಸಬಹುದು:

೧. ಗ್ರಾಹಕನು ಸಂಸ್ಥೆಗೆ ಬರೆಯುವ ಪತ್ರಗಳು: ವಿಚಾರಣಾ ಪತ್ರ, ಆದೇಶ ಪತ್ರ, ಆಕ್ಷೇಪಣಾ ಪತ್ರ, ಅಭ್ಯರ್ಥನ ಪತ್ರ ಇತ್ಯಾದಿ.

೨. ಸಂಸ್ಥೆ ಗ್ರಾಹಕರಿಗೆ ಬರೆಯುವ ಪತ್ರಗಳು: ತಗಾದೆ ಪತ್ರ, ಪರಾಮರ್ಶನ ಪತ್ರ, ಸಮಾಧಾನ ಪತ್ರ, ಪರಿಪತ್ರ, ಮಾರಾಟಪತ್ರ ಇತ್ಯಾದಿ.

೩. ಸಂಸ್ಥೆ, ಸಂಸ್ಥೆಯೊಂದಿಗೆ ವ್ಯವಹರಿಸುವಾಗ ಬರೆಯುವ ಪತ್ರಗಳು: ಕಾನೂನು ಪತ್ರಗಳು, ಬ್ಯಾಂಕು ಪತ್ರಗಳು, ಪತ್ರಿಕಾ ಪತ್ರಗಳು, ಸಾರ್ವಜನಿಕ ಪತ್ರಗಳು ಇತ್ಯಾದಿ

ವ್ಯವಹಾರ ಉಜ್ಜೀವನ ಪತ್ರಗಳು ಸಂಸ್ಥೆ ಗ್ರಾಹಕರಿಗೆ ಬರೆಯುವ ಪತ್ರಗಳ ವರ್ಗಕ್ಕೆ ಸೇರುತ್ತವೆ. ವ್ಯವಹಾರ ಉಜ್ಜೀವನ ಪತ್ರ ಮಾರಾಟ ಪತ್ರಕ್ಕಿಂತ, ಆದೇಶ ಪ್ರತ್ಯುತ್ತರ ಪತ್ರಕ್ಕಿಂತ ಭಿನ್ನವಾದುದು. ಗ್ರಾಹಕ ಪತ್ರ ಬರೆಯದಿದ್ದಾಗ ಮಾರಾಟಗಾರನೇ ಸ್ವಯಂ ಬರೆದು ಕಳಿಸುವ ಮತ್ತು ಕಾಲಮಿತಿ ಸೂಚಿತವಲ್ಲದ ಪತ್ರಗಳ ವರ್ಗಕ್ಕೆ ಸೇರುತ್ತವೆ ವ್ಯವಹಾರೋಜ್ಜೀವನ ಪತ್ರ, ಇಂಗ್ಲೀಷಿನಲ್ಲಿ ಇವನ್ನು ‘ಆಫರ್ಸ್‌’ ಎಂದು ಕರೆಯುತ್ತಾರೆ.

ನವೀನ ಮಾದರಿ ವಸ್ತುವೊಂದನ್ನು ಉತ್ಪಾದಿಸಿದಾಗ, ಇರುವ ಸರಕುಗಳ ದಾಸ್ತಾನನ್ನು ಖರ್ಚು ಮಾಡುವಾಗ, ಹೊಸ ಬಗೆಯ ರಿಯಾಯಿತಿ ಆಕರ್ಷಣೆಗಳ ಮಾಹಿತಿಯನ್ನು ನೀಡಿ ವ್ಯಾಪಾರಿ ಮಾಜಿ ಗ್ರಾಹಕರಿಗೆ ಅಥವಾ ಭಾವೀ ಗ್ರಾಹಕರಿಗೆ ಇಲ್ಲವೇ ಚಾಲ್ತಿ ಗ್ರಾಹಕರಿಗೆ ಪತ್ರಗಳನ್ನು ಕಳಿಸುತ್ತಾರೆ; ಹೀಗೆ ಪತ್ರಗಳನ್ನು ಕಳಿಸುವಾಗ ಮಾಜಿ ಗ್ರಾಹಕನು ಮತ್ತೆ ವ್ಯವಹಾರ ಪ್ರಾರಂಭಿಸಲು ಪ್ರತ್ಯೇಕವಾಗಿ ಬರೆಯುವ ಪತ್ರ ವ್ಯವಹಾರ ಉಜ್ಜೀವನ ಪತ್ರದ ವರ್ಗಕ್ಕೆ ಸೇರುತ್ತದೆ.

ಗ್ರಾಹಕ-ಸಂಸ್ಥೆಗಳ ನಡುವೆ ವ್ಯವಹಾರ ನಡೆಯುತ್ತಿದ್ದಾಗ ಕೆಲವೊಮ್ಮೆ ಹಲವಾರು ಕಾರಣಗಳಿಗಾಗಿ ಗ್ರಾಹಕ ತನ್ನ ವ್ಯಾಪಾರ ವ್ಯವಹಾರವನ್ನು ಸದ್ದಿಲ್ಲದೆ ನಿಲ್ಲಿಸಿ ಬಿಡುತ್ತಾನೆ. ವ್ಯಾಪಾರದ ಗಡಿಬಿಡಿಯಲ್ಲಿ ಮಾರಾಟಗಾರ ತಕ್ಷಣ ಇದನ್ನು ಗಮನಿಸಲು ಸಾಧ್ಯವಾಗುವುದಿಲ್ಲ; ವಾರ್ಷಿಕ ತಃಖ್ತೆ ನಡೆಸಿದಾಗ ಅಥವಾ ತನ್ನೆಲ್ಲಾ ಗ್ರಾಹಕರಿಗೂ ಹೊಸ ಮಾರಾಟದ ಬಗ್ಗೆ ಪರಿಪತ್ರಗಳನ್ನು ಕಳಿಸಿಕೊಡಲು ಯತ್ನಿಸಿದಾಗ ತಮ್ಮ ಕೆಲವು ಗ್ರಾಹಕರು ವ್ಯಾಪಾರ-ವ್ಯವಹಾರವನ್ನು ಸಾಕಷ್ಟು ಕಾಲದಿಂದ ಸ್ಥಗಿತಗೊಳಿಸಿರುವುದು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ವ್ಯವಹಾರವನ್ನು ಸಾಕಷ್ಟು ಕಾಲ ನಡೆಸುತ್ತಿದ್ದ ಗ್ರಾಹಕ, ಕಾರಣಾಂತರಗಳಿಂದ ವ್ಯವಹಾರವನ್ನು ನಿಲ್ಲಿಸಿದರೆ ಅವನೊಡನೆ ವ್ಯಾಪಾರ ವ್ಯವಹಾರವನ್ನು ಉಜ್ಜೀವಿಸಲು (ಚಿಗುರಿಸಲು) ಮಾರಾಟಗಾರ ಬರೆಯುವ ಪತ್ರಗಳನ್ನು ವ್ಯವಹಾರ ಉಜ್ಜೀವನ ಪತ್ರಗಳೆಂದು ಕರೆಯುವರು” *೧

ಗ್ರಾಹಕ ವ್ಯವಹಾರವನ್ನು ಏಕೆ ನಿಲ್ಲಿಸಿದನು? ಎಂಬ ಪ್ರಶ್ನೆ ಮಹತ್ವ ಪೂರ್ಣವಾದದ್ದು. ಮಾರಾಟಗಾರ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಅಗತ್ಯ. ಇಲ್ಲದಿದ್ದಲ್ಲಿ ಅದೇ ಕಾರಣಗಳಿಂದ ಇತರ ಗ್ರಾಹಕರೂ ತಮ್ಮ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳುತ್ತಾ ಬಂದು ಸಂಸ್ಥೆಯ ವ್ಯಾಪಾರ ಕುಂಠಿತವಾಗಿ ಕೊನೆಗೊಮ್ಮೆ ವ್ಯಾಪಾರ ಸಂಸ್ಥೆ ಬಾಗಿಲು ಹಾಕಬೇಕಾಗಬಹುದು. ಹೀಗಾಗದಿರಲು ವ್ಯವಹಾರೋಜ್ಜೀವನ ಪತ್ರಗಳು ವಿಶೇಷ ಆಸ್ಥೆವಹಿಸುತ್ತವೆ. ಆದ್ದರಿಂದಲೇ ಅವಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗಿದೆ.

ಗ್ರಾಹಕ ವ್ಯಾಪಾರ ನಿಲ್ಲಿಸಲು ಕಾರಣಗಳು

ಗ್ರಾಹಕ ಮಾರಾಟಗಾರನೊಂದಿಗೆ ವಿನಾಕಾರಣ ವ್ಯವಹಾರ ನಿಲ್ಲಿಸುವುದಿಲ್ಲ. ಕೇವಲ ವ್ಯವಹಾರ ನಡೆಸಿದ ಕಾಲಾವಧಿಗೂ ವ್ಯಾಪಾರ ನಿಲ್ಲಿಸಿದ್ದಕ್ಕೂ ಸಂಬಂಧವಿರದು. ಗ್ರಾಹಕ ಅಲ್ಪಕಾಲ ವ್ಯವಹಾರ ನಡೆಸಿರಲಿ. ದೀರ್ಘಕಾಲ ವ್ಯಾಪಾರ ನಡೆಸಿರಲಿ ಮಾರಾಟಗಾರನು ಗ್ರಾಹಕನ ಅವಶ್ಯಕತೆಯನ್ನು ಸಮರ್ಪಕವಾಗಿ ಪೂರೈಸದಿದ್ದಾಗ ಗ್ರಾಹಕನಿಗೆ ಅತೃಪ್ತಿಕರವಾದ ಸನ್ನಿವೇಶ ಒದಗಿದಾಗ ವ್ಯವಹಾರ ಸ್ಥಗಿತಗೊಳ್ಳಬಹುದು. ಸಂಸ್ಥೆಗೆ ಸಂಬಂಧಿಸಿದಂತಹ ಕಾರಣಗಳೂ ಇರಬಹುದು. ಹೊಸ ಗ್ರಾಹಕರು ಹೆಚ್ಚಿದಂತೆಲ್ಲಾ ಕೆಲವು ಸಂಸ್ಥೆಗಳು ಹಳೆಯ ಗ್ರಾಹಕರತ್ತ ಅಷ್ಟಾಗಿ ಗಮನವೀಯದಿರಬಹುದು; ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಸರಕನ್ನು ಸಕಾಲದಲ್ಲಿ ಪೂರೈಸದಿರಬಹುದು. ಉಳಿದ ಸಂಸ್ಥೆಗಳಿಗಿಂತ ಹೆಚ್ಚು ತೃಪ್ತಿಕರವಾಗಿ ಸರಕು ಸಾಮಗ್ರಿಗಳನ್ನು ಒದಗಿಸಬಹುದು. *೨ ಬೆಲೆ, ಗುಣ, ರಿಯಾಯಿತಿ ವಿಶೇಷಗಳಲ್ಲಿ ಇತರ ಸಂಸ್ಥೆಗಳು ಹೆಚ್ಚಿನ ಸವಲತ್ತುಗಳನ್ನು ಗ್ರಾಹಕನಿಗೆ ನೀಡುತ್ತಿರಬಹುದು. ಗ್ರಾಹಕನು ಗಮನಕ್ಕೆ ತಂದ ಲೋಪ-ದೋಷಗಳನ್ನು ಮಾರಾಟಗಾರ ಸರಿಪಡಿಸಿಕೊಳ್ಳದಿರಬಹುದು.

ಕೆಲವು ವೇಳೆ ವ್ಯವಹಾರ ಸ್ಥಗಿತಗೊಳ್ಳಲು ಗ್ರಾಹಕನೇ ಕಾರಣವಿರಬಹುದು. ಮಾರಾಟಗಾರನೊಂದಿಗೆ ವ್ಯವಹಾರ ನಡೆಸುವಾಗ ವಿರಸವುಂಟಾಗಿರಬಹುದು. ನಂಬಿಕೆ ಹೊರಟು ಹೋಗಿರಬಹುದು. ಗ್ರಾಹಕನಿಗೆ ಭಾರಿ ಅಸಮಾಧಾನ, ಅತೃಪ್ತಿಗಳಾಗಿರಬಹುದು. ತನ್ನ ಅವಶ್ಯಕರೆಗಳಿಗನುಸಾರವಾಗಿ ಎಷ್ಟು ಬಾರಿ ತಿಳಿಸಿದರೂ ಸರಕುಗಳನ್ನು ಪೂರೈಸಿದರೂ ಅವುಗಳಿಗೆ ಸಕಾಲದಲ್ಲಿ, ನಿಯಾಮನುಸಾರ ಹಣ ಸಲ್ಲಿಸಲು ಆರ್ಥಿಕ ಶಕ್ತಿ ಇಲ್ಲದಿರಬಹುದು. ಗ್ರಾಹಕನು ವ್ಯವಹಾರ ಸಾಗಿಸಲು ಬಂಡವಾಳ, ಸಾಲಭಾವ ಮುಂತಾದ ತೊಂದರೆಗಳುಂಟಾಗಿರಬಹುದು.

ಒಟ್ಟಿನಲ್ಲಿ ಮಾರಾಟಗಾರ ಗ್ರಾಹಕರಿಬ್ಬರಲ್ಲಿ ಯಾರಿಗಾದರೂ ಸಂಬಂಧಿಸಿದ ಕಾರಣಗಳೇ ಇರಲಿ, ಮಾರಾಟಗಾರನು ಗ್ರಾಹಕನನ್ನು ಮತ್ತೆ ತನ್ನ ವ್ಯವಹಾರ ಪ್ರಪಂಚದಲ್ಲಿ ಕಾರ್ಯ ಪ್ರವೃತ್ತನಾಗಿ ಮಾಡಲು ಪ್ರಯತ್ನಿಸಬೇಕಾದುದು ಆತನ ಕರ್ತವ್ಯವಾಗಿರುತ್ತದೆ.

ಸಾಮಾನ್ಯವಾಗಿ ವ್ಯವಹಾರವನ್ನು ಪುನರುಜ್ಜೀವಿಸಲು ನಡೆಸುವ ಪ್ರಯತ್ನಗಳು ತಕ್ಕಷ್ಟು ಪ್ರತಿಫಲವನ್ನು ಈಯುತ್ತವೆ ಎನ್ನಬಹುದು. ಎಲ್ಲೋ ಕೆಲವೊಮ್ಮೆ ಹಠಮಾರಿ ಗ್ರಾಹಕ ಎಷ್ಟೇ ಸಮಾಧಾನ ಮಾಡಿದರೂ ಏನೇ ಆಕರ್ಷಣೆಯೊಡ್ಡಿದರೂ ವ್ಯವಹಾರವನ್ನು ಉಜ್ಜೀವನಗೊಳಿಸದಿರಬಹುದು. ಇಂಥ ಸಂದರ್ಭಗಳಲ್ಲಿ ಗ್ರಾಹಕ ವ್ಯಾಪಾರಿಗೆ ನಕಾರಾತ್ಮಕವಾಗಿ ಉತ್ತರಿಸಿದರೆ ಆಶ್ಚರ್ಯವಿಲ್ಲ. ಇಷ್ಟಾದರೂ ‘ಮರಳಿ ಯತ್ನವ ಮಾಡು’ ಎಂಬ ಧೋರಣೆ ವ್ಯಾಪಾರಿಗಿರಬೇಕು.

ಮಾರಾಟಗಾರ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು: ವ್ಯವಹಾರವನ್ನು ನಿಲ್ಲಿಸಿದ ಮೇಲೆ ಗ್ರಾಹಕನೊಡನೆ ವ್ಯಾಪಾರ ಉಜ್ಜೀವನಕ್ಕೆ ಪ್ರಯತ್ನಿಸುವುದಕ್ಕಿಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವ್ಯವಹಾರ ನಿಲ್ಲದಂತೆ ನೋಡಿಕೊಳ್ಳುವದು ಶ್ರೇಷ್ಠ ವ್ಯಾಪಾರಿಯ ಲಕ್ಷಣವಾಗಿದೆ. ರೋಗ ನಿವಾರಣೆಗಿಂತ ರೋಗ ಬರದಂತೆ ತಡೆಗಟ್ಟಲು ಪ್ರಯತ್ನಿಸುವುದು ಮೇಲಲ್ಲವೇ! ಗ್ರಾಹಕನು ಲೋಪ-ದೋಷಗಳನ್ನು ಎತ್ತಿ ತೋರಿಸಿದಾಗ ಮಾರಾಟಗಾರ ಸರಿಪಡಿಸಿಕೊಳ್ಳಲು ಯತ್ನಿಸಬೇಕು. ಮೂರ್ಖತನದ ಹಠದಿಂದ ತಮ್ಮದೇ ಸರಿಯೆಂಬ ಧೋರಣೆಯನ್ನು ಮಾರಾಟಗಾರ ತಾಳಬಾರದು. ಗ್ರಾಹಕ ತೋರಿಸಿದ ಕುಂದು ಕೊರತೆಗಳನ್ನು ವಿನಯ ಪೂರ್ವಕವಾಗಿ ಸ್ವೀಕರಿಸಿ ಆ ಬಗ್ಗೆ ಪರಿಹಾರ ಮಾರ್ಗವನ್ನು ವ್ಯಕ್ತಪಡಿಸಬೇಕು. ಗ್ರಾಹಕರಿಂದ ತಡವಾಗಿ ಪತ್ರ ಬಂದಾಗ ಅಥವಾ ಸಾಕಷ್ಟು ಕಾಲ ಬಾರದಿದ್ದಾಗ ಜ್ಞಾಪನ ಪತ್ರಗಳನ್ನು ಬರೆಯುತ್ತಿರಬೇಕು. ಆಗಾಗ, ಇರುವ ಗ್ರಾಹಕರು, ಹೊಸ ಗ್ರಾಹಕರು, ಬಿಟ್ಟು ಹೋದ ಗ್ರಾಹಕರು ಎಂಬ ಪಟ್ಟಿಗಳನ್ನು ಸಿದ್ಧಪಡಿಸಿಕೊಂಡು ಕಾಲಕಾಲಕ್ಕೆ ಪರಿಶೀಲಿಸುತ್ತಾ ಆ ಬಗ್ಗೆ ಸೂಕ್ತಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಹಕರು ನೀಡುವ ಸಲಹೆಗಳನ್ನು ಅಹಂಕಾರದಿಂದ-ಅಲಕ್ಷ್ಯದಿಂದ ತಿರಸ್ಕರಿಸಬಾರದು; ಸಾಧ್ಯವಿದ್ದಷ್ಟನ್ನೂ ಮನ್ನಿಸಬೇಕು. ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಹೊಸದಾಗಿ ಮಾರಾಟ ಪರಿಪತ್ರಗಳನ್ನು ಸಿದ್ಧಪಡಿಸಿದಾಗಲೆಲ್ಲ ಮಾಜಿ ಗ್ರಾಹಕರಿಗೆ ತಪ್ಪದೆ ಕಳಿಸುವ ಪರಿಪಾಠವನ್ನಿಟ್ಟುಕೊಳ್ಳಬೇಕು.

ಸಾಮಾನ್ಯವಾಗಿ ಗ್ರಾಹಕನು ತಾನು ಯಾವ ಕಾರಣದಿಂದ ವ್ಯವಹಾರ ನಿಲ್ಲಿಸುತ್ತಿದ್ದಾನೆಂಬುದನ್ನು ತಿಳಿಸುವುದಿಲ್ಲ. ಗ್ರಾಹಕ ತನ್ನದೇ ಆದ ಕಾರಣಕ್ಕಾಗಿ ಇದ್ದಕ್ಕಿದ್ದಂತೆ ವ್ಯಾಪಾರ ನಿಲ್ಲಿಸಿ ಬಿಡುತ್ತಾನೆ; ಏಕೆಂದರೆ ಕಾರಣ ತಿಳಿಸಿ ನಿಷ್ಠೂರ ಏಕೆ ಕಟ್ಟಿಕೊಳ್ಳಬೇಕು ಎಂಬ ಭಾವನೆ ಒಂದೆಡೆಯಾದರೆ, ವ್ಯವಹಾರ ಬೇಡವೆಂದ ಮೇಲೆ ಪತ್ರವೇಕೆ ಬರೆಯಬೇಕು ಎಂಬ ಉದಾಸೀನ ಭಾವನೆ ಇನ್ನೊಂದೆಡೆ ಗ್ರಾಹಕನಿಗಿರುತ್ತದೆ. ಆದರೆ ಮಾರಾಟಗಾರ ಮತ್ತೆ ಮತ್ತೆ ಪತ್ರಗಳನ್ನು ಬರೆಯುತ್ತಿರುತ್ತಾನೆ. “ನಮ್ಮೊಂದಿಗೆ ಏಕೆ ವ್ಯವಹಾರ ನಿಲ್ಲಿಸಿದಿರಿ? ನಮ್ಮಲ್ಲಿ ಲೋಪ-ದೋಷಗಳಿದ್ದರೆ ತಿಳಿಸಿ, ತಿದ್ದಿಕೊಳ್ಳುತ್ತೇವೆ. ನಾವು ಸದಾ ಗ್ರಾಹಕರ ಹಿತೈಷಿಗಳು. ನೀವೇ ನಮ್ಮ ಮಾರ್ಗದರ್ಶಿಗಳು, ನಿಮ್ಮ ಅವಶ್ಯಕತೆಗಳೇನಿವೆ? ಈಗ ನಾವು ನೀಡುತ್ತಿರುವ ಹೊಸ ಸವಲತ್ತುಗಳಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು ಎಂದು ನಂಬಿದ್ದೇವೆ” ಎಂದು ಮುಂತಾಗಿ ಮಾರಾಟಗಾರ ಬರೆದಾಗ ಗ್ರಾಹಕನಲ್ಲಿ ಸ್ಫೂರ್ತಿಯುಂಟಾಗಬಹುದು; ಮತ್ತೆ ವ್ಯವಹಾರ ಪ್ರಾರಂಭಿಸಲು ಯೋಚಿಸುವ ಸಂದರ್ಭ ಬರುತ್ತದೆ *೩ ಇಂದಲ್ಲ ನಾಳೆ ‘ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಎಂಬ ಹಾರೈಕೆ ಮಾರಾಟಗಾರನದಾಗಿರುತ್ತದೆ.

ಮುಖ್ಯ ಲಕ್ಷಣಗಳು: ಒಳ್ಳೆಯ ವ್ಯವಹಾರೋಜ್ಜೀವನ ಪತ್ರವನ್ನು ರಚಿಸುವುದು ಸುಲಭದ ಕೆಲಸವಲ್ಲ. ವ್ಯವಹಾರೋಜ್ಜೀವನ ಪತ್ರ ಹಲವಾರು ಲಕ್ಷಣಗಳನ್ನು ಒಳಗೊಂಡಿರಬೇಕು. ಮೊದಲನೆಯದಾಗಿ, ಹಿಂದಿನ ವ್ಯವಹಾರದಲ್ಲಿಯ ಸ್ನೇಹ ಬಾಂಧವ್ಯಗಳನ್ನು ಪ್ರಸ್ತಾಪಿಸಬೇಕು. ಎರಡನೆಯದಾಗಿ, ವ್ಯವಹಾರವನ್ನು ನಿಲ್ಲಿಸಿದ ಕಾರಣವನ್ನು ತಿಳಿಸಲು ವಿನಯ ಪೂರ್ವಕವಾಗಿ ಪ್ರಾರ್ಥಿಸಬೇಕು. ಮೂರನೆಯದಾಗಿ, ಈಗ ಹೊಸದಾಗಿ ನೀಡುತ್ತಿರುವ ಸವಲತ್ತುಗಳನ್ನು ಪ್ರಸ್ತಾಪಿಸಬೇಕು. (ಸಾಲ ಸೌಲಭ್ಯ ಬೇರೆ ಬೇರೆ ಪದಾರ್ಥಗಳನ್ನು ಮಾರಾಟಕ್ಕಿಟ್ಟಿರುವುದು, ರಿಯಾಯಿತಿ ಹೆಚ್ಚಿಸಿರುವುದು ಇತ್ಯಾದಿ) ನಾಲ್ಕನೆಯದಾಗಿ ಗ್ರಾಹಕನೇನಾದರೂ ಲೋಪ-ದೋಷಗಳನ್ನು ಅಥವಾ ತಾನು ವ್ಯವಹಾರ ನಿಲ್ಲಿಸಲು ಕಾರಣಗಳನ್ನು ತಿಳಿಸಿದಾಗ ಕೂಡಲೇ ಅವುಗಳಿಗೆ ಉತ್ತರಿಸಬೇಕು.

ಒಟ್ಟಿನಲ್ಲಿ ಹಿಂದಿನ ಲೋಪ-ದೋಷಗಳು, ಆಕ್ಷೇಪಣೆ, ವಿರಸವೆಲ್ಲವನ್ನೂ ಮರೆತು ಗ್ರಾಹಕನ ಸಮಸ್ಯೆಗಳಿಗೆ ಉತ್ತರ ಸಿಕ್ಕಿ ತೃಪ್ತನಾಗಿ ಮತ್ತೆ ವ್ಯವಹಾರವನ್ನು ಉಜ್ಜೀವನಗೊಳಿಸುವ ರೀತಿಯಲ್ಲಿ ಆತ್ಮೀಯವಾಗಿ ಬರೆಯಬೇಕು. ಇದರಿಂದ ಹೊಸ ಗ್ರಾಹಕರು ಹೆಚ್ಚುವುದರ ಜೊತೆಗೆ ಮಾಜಿ ಗ್ರಾಹಕರ ವ್ಯವಹಾರವೂ ಮುಂದುವರಿಯುಂತಾಗಿ ಮಾರಾಟಗಾರನ ಕಾರ್ಯ ಕ್ಷೇತ್ರ ವಿಸ್ತಾರಗೊಳ್ಳುತ್ತದೆ. ಒಣಗಿದ ಮರ ಚಿಗುರಲು ಗೊಬ್ಬರ-ನೀರು ನೀಡಿದಂತೆ, ನಿಂತು ಹೋದ ವ್ಯಾಪಾರ ವ್ಯವಹಾರವನ್ನು ಮಾರಾಟಗಾರ ಒಳ್ಳೆಯ ಮಾತುಗಳ ಮೂಲಕ, ಕೆಲವು ಆಕರ್ಷಣೆಗಳನ್ನೊಡ್ಡುವುದರ ಮುಖಾಂತರ ಮುಂದುವರಿಸಲು ಸಾಧ್ಯವಾಗುತ್ತದೆ.

ಹಲವಾರು ತಿಂಗಳುಗಳಿಂದ ವ್ಯವಹಾರವನ್ನು ನಿಲ್ಲಿಸಿರುವ ಸಂಸ್ಥೆಗೆ ಮತ್ತೆ ವ್ಯವಹಾರ ಮುಂದುವರಿಸಲು ಕೋರಿ ಬರೆದ ಪತ್ರ
ಮಾದರಿ ೧

ಸುಪ್ರಿಯ ಸಹಕಾರ ಸಂಘ

ತಂತಿ: ‘ಸಹಕಾರ ಸಾವಿರ’                                          ೩, ಶಾಮಣ್ಣ ರಸ್ತೆ
ದೂರವಾಣಿ: ೪೯೨೨೧೮                                              ೬ನೆಯ ಬ್ಲಾಕ್, ಜಯನಗರ
ಬೆಂಗಳೂರು-೫೬೦ ೦೧೧

ಪಸಂ ವ್ಯಪ.೪೩-೮/೮೭-೮೮                              ದಿನಾಂಕ: ೨೫ನೆಯ ಡಿಸೆಂ ೧೯೮೭
ಲಗತ್ತುಗಳು :

ಪ್ರೊ. ಕೆ.ಟಿ.ಶರ್ಮ ಬಿ.ಎ.ಎಂ.ಕಾಂ;
ಪ್ರಾಂಶುಪಾಲರು,
ನಂದನ ಪಾಠಶಾಲಾ ವಾಣಿಜ್ಯ ಕಾಲೇಜು
ನರಸಿಂಹರಾಜ ಕಾಲೋನಿ,
ಬೆಂಗಳೂರು – ೫೬೦ ೦೧೯ ಅವರಿಗೆ,

ಸನ್ಮಾನ್ಯರೆ,

ವಿಷಯ: ‘ಲೇಖನ ಸಾಮಗ್ರಿ ತರಿಸಿಕೊಳ್ಳದಿರುವ ಬಗ್ಗೆ’

ಕಳೆದ ಹತ್ತು ವರ್ಷಗಳಿಂದಲೂ ತಮ್ಮ ವಿದ್ಯಾಸಂಸ್ಥೆಗೆ ಪ್ರತಿತಿಂಗಳೂ ಸೀಮೆಸುಣ್ಣ, ಶಾಯಿ, ಮರುಭರ್ತಿ (ರೀಪಿಲ್) ಶಾಯಿ ಪ್ಯಾಡು, ಹಲಗೆಯೊರಸಿ, ಬಿಳಿಕಾಗದ, ಗೆರೆ ಕಾಗದ, ಲೆಕ್ಕದ ಪುಸ್ತಕ, ಗುಂಡುಪಿನ್ನು ಮುಂತಾದ ಲೇಖನ ಸಾಮಾಗ್ರಿಗಳನ್ನು ತಪ್ಪದೆ ತರಿಸಿಕೊಳ್ಳುತ್ತಿದ್ದ ನಮ್ಮ ಖಾಯಂ ಗ್ರಾಹಕರು ತಾವು. ಆದರೆ ಇತ್ತೀಚೆಗೆ, ಅಂದರೆ ಕಳೆದ ಆರು ತಿಂಗಳುಗಳಿಂದ ತಾವು ಯಾವುದೇ ರೀತಿಯ ಬರೆವಣಿಗೆಯ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿಲ್ಲ. ಹೀಗೆ ತಾವು ನಮ್ಮಿಂದ ಸರಕನ್ನೂ ತರಿಸಿಕೊಳ್ಳದೆ ಪತ್ರಗಳನ್ನೂ ಬರೆಯದೆ ಏಕೆ ತಟಸ್ಥವಾಗಿದ್ದೀರಿ ಎಂಬುದು ಗೊತ್ತಾಗಲಿಲ್ಲ.

‘ನಾವು ಪದಾರ್ಥಗಳನ್ನು ತಡವಾಗಿ ಕಳಿಸುತ್ತಿದ್ದೇವೆಯೇ? ಬೆಲೆಯೇನಾದರೂ ಹೆಚ್ಚಾಯಿತೆ? ಸರಕಿನಲ್ಲೇನಾದರೂ ಲೋಪದೋಷಗಳಿವೆಯೇ? ತಮ್ಮ ಅಗತ್ಯದ ಸರಕು ನಮ್ಮಲಿಲ್ಲವೇ? ನಮ್ಮ ಸರಬರಾಜುದಾರರಿಂದ ಅವಿನಯದ ವರ್ತನೆಯೇನಾದರೂ ನಡೆದಿದೆಯೇ? ಸರಕನ್ನು ಸಕಾಲದಲ್ಲಿ ತಲುಪಿಸುತ್ತಿಲ್ಲವೇ?” ದಯವಿಟ್ಟು ಕಾರಣವನ್ನು ತಾವು ನಿರ್ದಾಕ್ಷಿಣ್ಯವಾಗಿ ತಿಳಿಸಬೇಕೆಂದು ಕೋರುತ್ತೇವೆ. ನಾವೇನಾದರೂ ಅಪರಾಧವೆಸಗಿದ್ದರೆ, ಯಾವುದೇ ರೀತಿಯಲ್ಲಿ ತಮಗೆ ಅಸಮಾಧಾನವುಂಟಾಗುವಂತೆ ವರ್ತಿಸಿದ್ದರೆ ಮುಂದೆ ಹಾಗಾಗದಂತೆ ಎಚ್ಚರವಹಿಸುತ್ತೇವೆಂಬ ಭರವಸೆಯನ್ನು ನೀಡುತ್ತೇವೆ. ದಯವಿಟ್ಟು ಕಾರಣ ತಿಳಿಸಿ ಎಂದು ಮತ್ತೊಮ್ಮೆ ಬೇಡುತ್ತೇವೆ.

ನಮ್ಮೊಡನೆ ದೀರ್ಘ ಕಾಲದಿಂದ ವ್ಯವಹರಿಸುತ್ತಾ ಸುಮಧುರ ಬಾಂಧವ್ಯವನ್ನು ಹೊಂದದ್ದ ತಮಗೆ ಸೇವೆ ಸಲ್ಲಿಸಲು ನಾವು ಸದಾಸಿದ್ಧರಾಗಿದ್ದೇವೆ. ಈ ಪತ್ರವನ್ನು ಕಂಡ ತಕ್ಷಣ ಮೊದಲಿನಂತೆ ಸರಕು ಆದೇಶವನ್ನು ನೀಡುತ್ತೀರಿ ಎಂದು ನಂಬಿದ್ದೇವೆ.

ವಂದನ ಪೂರ್ವಕವಾಗಿ,

ತಮ್ಮ ಸೇವಾಕಾಂಕ್ಷಿ
ರಜನಿಕಾಂತ್
ಕಾರ್ಯದರ್ಶಿ.

ಸರಕು ಆದೇಶ ನೀಡದಿರಲು ಕಾರಣ ತಿಳಿಸಿ ಸಂಘಕ್ಕೆ ಬರೆದ ಪತ್ರ (ಮಾದರಿ ಕ್ಕೆ ಉತ್ತರ)
ಮಾದರಿ

ನಂದನ ಪಾಠಶಾಲಾ ವಾಣಿಜ್ಯ ಕಾಲೇಜು
ನರಸಿಂಹರಾಜ ಕಾಲೋನಿ, ಬೆಂಗಳೂರು – ೫೬೦ ೦೧೯

ದೂರವಾಣಿ : ೬೦೧೭೮೬

ಪತ್ರಾಂಕ: ಸುವವ್ಯಪು ೨-೮/೮೭-೮೮             ದಿನಾಂಕ: ೧ನೆಯ ಜ, ೧೯೮೮

ಶ್ರೀ ರಜನಿಕಾಂತ್, ಬಿ.ಕಾಂ
ಕಾರ್ಯದರ್ಶಿ
ಸುಪ್ರಿಯ ಸಹಕಾರ ಸಂಘ
೩, ಶಾಮಣ್ಣ ರಸ್ತೆ, ೪ನೆಯ ಬ್ಲಾಕ್
ಜಯನಗರ, ಬೆಂಗಳೂರು-೫೬೦ ೦೧೧

ಮಹನೀಯರೆ,

ನಿಮ್ಮ ಪತ್ರ ತಲುಪಿತು, (ಪಸಂ.ವ್ಯಪ ೪೩-೮/೮೭-೮೮ ದಿ.೨೫-೧೨-೧೯೮೭) ನಮ್ಮ ಮೇಲೆ ವಿಶ್ವಾಸವಿಟ್ಟು ಪತ್ರ ಬರೆದಿದ್ದಕ್ಕಾಗಿ ಅನಂತಾನಂತ ವಂದನೆಗಳು. ಗ್ರಾಹಕರ ಬಗ್ಗೆ ನಿಮಗಿರುವ ಕಳಕಳಿ ಮೆಚ್ಚುವಂಥದ್ದು. ‘ಇತ್ತೀಚೆಗೆ ನಮ್ಮಿಂದ ಏಕೆ ಲೇಖನ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿಲ್ಲ?” ಎಂದು ನೀವು ಕೇಳಿದ್ದೀರಿ. ಇರಲಿ, ಸತ್ಯ ಕಠೋರವಾದರೂ ತಿಳಿಸಬೇಕಾದದ್ದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ಆದರೂ ಸತ್ಯ ಪ್ರಿಯರಿಗೆ ಅದು ಪಥ್ಯವೆಂದು ಭಾವಿಸಿ ನಿಮ್ಮ ಪತ್ರಕ್ಕೆ ಉತ್ತರ ಬರೆಯುತ್ತಿದ್ದೇವೆ.

ನೀವು ಮೊದಲು ನಮಗೆ ಸರಬರಾಜು ಮಾಡುತ್ತಿದ್ದ ಸಾಮಗ್ರಿಗಳು ಉತ್ತಮ ದರ್ಜೆಯವಾಗಿರುತ್ತಿದ್ದವು. ಆದರೆ ಬರಬರುತ್ತಾ ಅವು ಕಳಪೆಯಾದವು ಎಂಬುದನ್ನು ತಿಳಿಸಲು ವಿಷಾದವಾಗುತ್ತದೆ. ಏಕೆಂದರೆ ಹೊಳಪಿನ ಕಾಗದ ಮಸುಕಾಯಿತು. ಮುರಿಯದ ಸೀಮೆಸುಣ್ಣ ಪುಡಿ ಸುಣ್ಣವಾಯಿತು. ಗಂಗಾಸಲಿಲದಂತೆ ಸಲೀಸಾಗಿ ಪ್ರವಹಿಸುತ್ತಿದ್ದ ಶಾಯಿ ರೋಗಿ ಕಕ್ಕುವಂತೆ ಉಂಡುಂಡೆಯಾಗುತ್ತಾ ಬಂತು. ರೀಫಿಲ್ಲುಗಳ ಒಳಗಿನಿಂದ ನಾ ಹೊರ ಬರುವುದಿಲ್ಲ ಎಂದು ಇಂಕು ಹಟ ಹಿಡಿಯಿತು, ಹಲಗೆಯೊರಸಿಗಳ ಮರದ ತುಂಡು ಮತ್ತು  ಬಟ್ಟೆ ಬೇರೆ ಬೇರೆಯಾಗುತ್ತಾ ಬಂದವು. ನೀವು ಕಳಿಸುತ್ತಿದ್ದ ಸರಕಿನ ಪವಾಡ ಒಂದೇ ಎರಡೇ! ನೀವು ಈಗೀಗ ಕಳಿಸುತ್ತಿರುವ ವಸ್ತುಗಳು ಕಳಪೆ ದರ್ಜೆಯವು ಎಂದು ನಾವು ಎಷ್ಟೋ ಬಾರಿ ತಿಳಿಸಿದ್ದೆವು. ಆದರೂ ನೀವು ಅತ್ತ ಲಕ್ಷ್ಯ ಹರಿಸಲಿಲ್ಲ. ನಮಗೆ ಅಸಮಾಧಾನವಾಯಿತು. ಇದೇ ಸಂದರ್ಭದಲ್ಲಿ ನಮ್ಮ ಸಂಸ್ಥೆಗೆ ಬೇರೊಬ್ಬ ಮಾರಾಟಗಾರರು ಶ್ರೇಷ್ಠ ದರ್ಜೆಯ ಸರಕನ್ನು ಸರಬರಾಜು ಮಾಡುತ್ತಿದ್ದಾರೆ. ಅವರ ಸಮಯ ನಿಷ್ಠೆ ಮತ್ತು ನಮ್ಮ ಸಂಸ್ಥೆಯ ಬಗ್ಗೆ ಅವರು ತೋರಿಸುತ್ತಿರುವ ಗೌರವಾದರಗಳು ಅವರಿಂದ ವಸ್ತುಗಳನ್ನು ತರಿಸಿಕೊಳ್ಳಲು ನಮಗೆ ಪ್ರೇರಣೆ ನೀಡಿದವು ಎಂದು ಹೇಳದೆ ವಿಧಿಯಿಲ್ಲ. ಆದ್ದರಿಂದ ನಾವು ನಿಮ್ಮೊಡನೆ ನಡೆಸುತ್ತಿದ್ದ ವ್ಯವಹಾರವನ್ನು ಸ್ಥಗಿತಗೊಳಿಸಲೇ ಬೇಕಾಯಿತು. ಇನ್ನು ಮೇಲೆ ಪತ್ರ ಬರೆಯುವುದರಿಂದಲೂ ಸರಕು ಆದೇಶ ನೀಡುವುದರಿಂದಲೂ ಯಾವ ಪ್ರಯೋಜನವೂ ಇಲ್ಲ ಎನಿಸಿತು.

ಇಷ್ಟಾದರೂ ನಾವು ನಿಮ್ಮ ಸ್ನೇಹ-ಸೌಜನ್ಯ ವರ್ತನೆಯ ಬಗ್ಗೆ ಎಂದೂ ತಪ್ಪ ತಿಳಿದವರಲ್ಲ. ವ್ಯಾಪಾರ ವ್ಯವಹಾರದಲ್ಲಿ ಪ್ರತಿಯೊಬ್ಬರೂ ತಂತಮ್ಮ ಗುರಿಯತ್ತ ದೃಷ್ಟಿಯಿಟ್ಟಿರುತ್ತಾರೆ. ಈಗ ನೀವು ವಿಶೇಷ ಸವಲತ್ತುಗಳನ್ನು ನೀಡುವುದರೊಂದಿಗೆ ಶ್ರೇಷ್ಠ ದರ್ಜೆಯ ಲೇಖನ ಸಾಮಗ್ರಿಗಳನ್ನು ಕಳುಹಿಸಿಕೊಡುವ ಭರವಸೆಯನ್ನು ವ್ಯಕ್ತಪಡಿಸಿರುವುದರಿಂದ ನಮ್ಮನ್ನು ಆಲೋಚನೆಗೀಡು ಮಾಡಿದ್ದೀರಿ. ಇದು ತುಂಬ ಸಂತೋಷದ ಸಂಗತಿ. ನಾವು ನಿಮಗೆ ಕ್ರಯಾದೇಶ ಕಳುಹಿಸುವುದರ ಬಗ್ಗೆ ಯೋಚಿಸುತ್ತೇವೆ.

ನಿಮ್ಮ ವಿಶ್ವಾಸಿ,
ಪ್ರಾಂಶುಪಾಲರು
ನಂದನ ಪಾಠಶಾಲಾ ವಾಣಿಜ್ಯ ಕಾಲೇಜು
ಬೆಂಗಳೂರು-೧೯.

ವ್ಯಾಪಾರ ನಿಲ್ಲಿಸಲು ಕಾರಣ ತಿಳಿಸಿದ ಗ್ರಾಹಕ ಸಂಸ್ಥೇಗೆ ಮಾರಾಟ ಸಂಸ್ಥೆ ನೀಡುವ ಉತ್ತರ : (ಮಾದರಿ ೨ಕ್ಕೆ ಉತ್ತರ)
ಮಾದರಿ

ಸುಪ್ರಿಯ ಸಹಕಾರ ಸಂಘ

ತಂತಿ: ‘ಸಹಕಾರ ಸಾವಿರ’                                ೯, ಶಾಮಣ್ಣ ರಸ್ತೆ
ದೂರವಾಣಿ : ೪೯೩೨೧೮                                   ೬ನೆಯ ಬ್ಲಾಕ್, ಜಯನಗರ
ಬೆಂಗಳೂರು- ೫೬೦ ೦೧೧

ಪಸಂ:೪೪-೮/೮೭-೮೮                            ದಿನಾಂಕ: ೭ನೆಯ ಜನವರಿ ೧೯೮೭
ಸಂಲಗ್ರ : ೧ (ಮಾಹಿತಿ ಪತ್ರ)

ಪ್ರೊ. ಎಂ.ಆರ್.ರಂಗನಾಥ್, ಬಿ.ಎಂ.ಎಂ.ಕಾಂ.
ಪ್ರಾಂಶುಪಾಲರು
ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು
ನರಸಿಂಹರಾಜ ಕಾಲೋನಿ
ಬೆಂಗಳೂರು- ೫೬೦ ೦೧೯ ಅವರಿಗೆ

ಸನ್ಮಾನ್ಯರೇ,

ತಮ್ಮ ಉಲ್ಲೇಖ: ಪಸಂ: ಸುಸವ್ಯಪಲು ೨-೮/೮೭-೮೮ ದಿನಾಂಕ: ೧-೧-೧೯೮೭

೨೫-೧೨-೧೯೮೭ ರಂದು ಬರೆದ ಪತ್ರಕ್ಕೆ ಕೃಪೆ ಮಾಡಿ ತಾವು ಉತ್ತರ ಬರೆದದ್ದಕ್ಕಾಗಿ ಅನಂತಾನಂದ ವಂದನೆಗಳು. ತಾವು ಪತ್ರ ಬರೆದು ನಮ್ಮ ಕಣ್ಣು ತೆರೆಸಿ ಉಪಕಸಿರಿದ್ದೀರಿ; ನಮ್ಮ ಲೋಪ ದೋಷಗಳತ್ತ ಬೆರಳು ಮಾಡಿ, ವಾಣಿಜ್ಯ ಜಗತ್ತಿನಲ್ಲಿ ವಿಜಯ ಸಂಪಾದನೆಯಾಗಲು ಹೇಗೆ ವರ್ತಿಸಬೇಕು ಎಂಬ ಬಗ್ಗೆ ನಮಗೆ ಸ್ಫೂರ್ತಿ ನೀಡಿದ್ದೀರಿ; ಇದಕ್ಕಾಗಿ ನಾವು ತಮಗೆ ಚಿರಋಣಿಗಳಾಗಿದ್ದೇವೆ. ತಮ್ಮಂಥ ಗ್ರಾಹಕವರೇಣ್ಯರಿಂದ ವಾಣಿಜ್ಯ ಕ್ಷೇತ್ರ ಪ್ರಗತಿ ಹೊಂದುತ್ತದೆಂಬುದರ ಬಗ್ಗೆ ನಮಗೆ ಸಂಶಯವಿಲ್ಲ.

ತಮಗೆ ನಾವು ಪ್ರತಿ ತಿಂಗಳೂ ಸರಬರಾಜು ಮಾಡುತ್ತಿದ್ದ ಲೇಖನ ಸಾಮಗ್ರಿಗಳನ್ನು ನಾವು ತಯಾರಿಸುತ್ತಿರಲಿಲ್ಲ. ಬೇರೆ ಬೇರೆ ಮಾರಾಟಗಾರರಿಂದ ಸಗಟು ಖರೀದಿಸಿ ತಮ್ಮ ಆದೇಶಾನುಸಾರ ಸರಬರಾಜು ಮಾಡುತ್ತಿದ್ದೆವು. ಪ್ರಾರಂಭದಲ್ಲಿ ನಮಗೆ ಸರಬರಾಜಾಗುತ್ತಿದ್ದ ವಸ್ತುಗಳು ನಿಜವಾಗಿಯೂ ಶ್ರೇಷ್ಠ ದರ್ಜೆಯವಾಗಿರುತ್ತಿದ್ದವು. ನಮ್ಮ ಗ್ರಾಹಕರಿಗೆ ತೃಪ್ತಿಯನ್ನುಂಟು ಮಾಡುತ್ತಿದ್ದವು. ಆದರೆ ನಮಗೆ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ತಯಾರಿಕಾ ಸಂಸ್ಥೆ ಹಸ್ತಾಂತರಗೊಂಡು ಹೊಸಬರು ಅದರ ಅಧಿಕಾರವನ್ನು ವಹಿಸಿಕೊಂಡರು. ಅವರು ತಇ ಲಾಭದಾಶೆಗೆ ಸಿಲುಕಿ ಕಳಪೆ ದರ್ಜೆಯ ಸಾಮಗ್ರಿಗಳನ್ನು ಉತ್ಪಾದಿಸಲು ಪ್ರಾರಂಭಿಸಿದರು. ಅಂಥ ವಸ್ತುಗಳನ್ನೇ ನಾವೂ ನಮ್ಮ ಗ್ರಾಹಕರಿಗೆ ಕಳಿಸಿಕೊಡುತ್ತಿದ್ದೆವು. ಇದ್ದಕ್ಕಿದ್ದಂತೆ ನಮ್ಮ ಸತ್ಯಸಂಧ ಗ್ರಾಹಕ-ಗ್ರಾಹಕ ಸಂಸ್ಥೆಗಳಿಂದ ಬಗೆಬಗೆಯಾಗಿ ದೂರುಗಳು ಬರತೊಡಗಿದವು; ಆಗ ನಾವು ಪರಿಶೀಲನಾತಂಡವೊಂದನ್ನು ವ್ಯವಸ್ಥೆ ಮಾಡಿ ಅನ್ಯ ಉತ್ಪಾದಕರಿಂದ ಸಾಮಗ್ರಿಯನ್ನು ತರಿಸಿಕೊಳ್ಳಲು ಪ್ರಾರಂಭಿಸಿದೆವು. ಇದೂ ಕೂಡ ನಮಗೆ ತೃಪ್ತಿಯನ್ನುಂಟು ಮಾಡಲಿಲ್ಲ. ಆದ್ದರಿಂದ ನಾವೇ ಪದಾರ್ಥಗಳನ್ನು ತಯಾರಿಸಿ ನಿಮ್ಮ ಗ್ರಾಹಕರ ಅಭೀಷ್ಟಗಳನ್ನು ಈಡೇರಿಸಬೇಕೆಂದು ಮನಸ್ಸು ಮಾಡಿದೆವು. ‘ಧೈರ್ಯವೇ ದೊಡ್ಡ ಸಾಧನ’, ‘ಮನಸ್ಸಿದ್ದಲ್ಲಿ ಮಾರ್ಗ’ ಎಂಬಂತೆ ತಮ್ಮ ಪ್ರಯತ್ನ ನಮ್ಮ ಉದ್ದೇಶವನ್ನೂ ಮೀರಿ ಫಲಕೊಡಲು ಪ್ರಾರಂಭಿಸಿತು. ಶ್ರೇಷ್ಠ ಮಟ್ಟದ ಸರಕನ್ನು ಈಗ ತಯಾರಿಸುತ್ತಿದ್ದೇವೆ.

ಆದ್ದರಿಂದ ಇನ್ನು ಮುಂದೆ ನಮ್ಮ ಗ್ರಾಹಕರಿಂದ ಆಕ್ಷೇಪಣೆಗಳು ಬರುವುದಿಲ್ಲ. ಪದಾರ್ಥಗಳನ್ನು ನಾವೇ ತಯಾರಿಸಿ ನಾವೇ ಸರಬರಾಜು ಮಾಡುವುದರಿಂದ ಹಿಂದಿನ ಬೆಲೆಗಳಿಗಿಂತ ಈಗಿನ ಬೆಲೆಗಳು ಸ್ವಲ್ಪ ಕಡಿಮೆಯಾಗಿದೆ. ಸರಕು ಶ್ರೇಷ್ಠ ದರ್ಜೆಯದಾಗಿದೆ ಎಂಬುದನ್ನು ತಿಳಿಸಲು ಹೆಮ್ಮೆಯಾಗುತ್ತದೆ.

ಈಗ ನಾವು ಹೊದ ಮಾದರಿಯ ಹಲಗೆಯೊರಸಿ, ಇಂಕು ಪ್ಯಾಡು, ಮರುಭರ್ತಿ (ರೀಪಿಲ್ಲು) ಗಳನ್ನು ಮಾರಾಟಕ್ಕಿಟ್ಟಿದ್ದೇವೆ. ಹೊಸ ರಿಯಾಯಿತಿಗಳನ್ನೂ ಘೋಷಿಸಿದ್ದೇವೆ. ಈ ಪತ್ರಕ್ಕೆ ಲಗತ್ತಿಸಿರುವ ಮಾಹಿತಿ ಪತ್ರವನ್ನು ತಾವು ಗಮನಿಸಬೇಕಾಗಿ ಪ್ರಾರ್ಥಿಸುತ್ತೇವೆ. ನಮ್ಮಿಂದಾದ ತೊಂದರೆಗಳಿಗೆ ಕ್ಷಮಾಪಣೆಯನ್ನು ಬೇಡುತ್ತೇವೆ; ಇನ್ನು ಮುಂದೆ ದಯವಿಟ್ಟು, ನಮ್ಮೊಡನೆ ವ್ಯಾಪಾರ ವ್ಯವಹಾರವನ್ನು ಮುಂದುವರೆಸುತ್ತೀರಿ ಎಂದು ನಂಬಿದ್ದೇವೆ. ತಮ್ಮ ಕ್ರಯಾದೇಶ ಪತ್ರವನ್ನು ನಾವು ಎದುರು ನೋಡಬಹುದಲ್ಲವೇ?

ವಂದನೆಗಳೊಂದಿಗೆ,

ತಮ್ಮ ಶುಭಾಕಾಂಕ್ಷಿಗಳು
ಪಿ.ಕೆ.ರಮಾಕಾಂತ
ಕಾರ್ಯದರ್ಶಿ
ಸುಪ್ರಿಯ ಸಹಕಾರ ಸಂಘ

ಜಿ: ಎಸ್‌ಪಿ/

* * *