‘ಸತ್ಯವಂತನಿಗೆ ಮಾತೊಂದೆ, ಬಾಳೆಗೆ ಗೊನೆಯೊಂದೆ’ ಆದರೆ ವಾಣಿಜ್ಯ ಜಗತ್ತಿನಲ್ಲಿ ಪ್ರತಿವ್ಯವಹಾರಕ್ಕೆ ಪತ್ರವೊಂದೆ ಎಂದು ಹೇಳಲಾಗದು. ಹಲವಾರು ಸಲ ಕಾಯಿಸಿದ ಕಬ್ಬಿಣವನ್ನು ಸದೆಬಡಿದಾಗ ನಿರೀಕ್ಷಿತ ಆಕಾರವನ್ನು ತಾಳುವಂತೆ ‘ಮರಳಿ ಯತ್ನವ ಮಾಡು’ ಎಂಬುದು ವ್ಯಾಪಾರದ ಸೂತ್ರಗಳಲ್ಲಿ ಒಂದಾಗಿದೆ. ವಾಣಿಜ್ಯ ರಂಗದಲ್ಲಿ ಯಾವುದೇ ಒಂದು ಗುರಿಯನ್ನು ಸಾಧಿಸಬೇಕಾದರೆ ಒಂದು ಸಲದ ಯತ್ನ ಸಾಕಾಗುವುದಿಲ್ಲ. ವಿಚಾರಣಾ ಪತ್ರವನ್ನು ಒಬ್ಬರಿಗೆ ಬರೆದರೆ ಸಾಲದು; ಅದಕ್ಕೆ ಒಮ್ಮೆ ಪ್ರತ್ಯುತ್ತರ ಪತ್ರವನ್ನು ಕಳಿಸಿದರೆ ಸಾಲದು; ಸಾಲವಸೂಲಿಗೆ ಒಮ್ಮೆ ಪತ್ರ ಕಳಿಸಿದರೆ ಸಾಲ ವಸೂಲಾಗುವುದಿಲ್ಲ; ಮಾರಾಟ ಪತ್ರವನ್ನಾಗಲಿ, ಜಾಹೀರಾತನ್ನಾಗಲಿ ಒಮ್ಮೆ ನೀಡಿದರೆ ಸಾಲದು, ಪ್ರತಿಯೊಂದು ವ್ಯವಹಾರದಲ್ಲಿಯೂ ಪದೇ ಪದೇ ಪ್ರಯತ್ನ ನಡೆಸಿ ಪ್ರಭಾವ ಬೀರುವುದು ಅಗತ್ಯ. ಈ ದೃಷ್ಟಿಯಿಂದ ಗ್ರಾಹಕರನ್ನು ಒಲಿಸಿಕೊಳ್ಳಲು, ಸರಕನ್ನು ಮಾರಲು ಸಾಲವನ್ನು ವಸೂಲಿ ಮಾಡಲು- ಇತರ ಗುರಿಸಾಧನೆಗಳಿಗಾಗಿ ಮತ್ತೆ ಮತ್ತೆ ಬರೆಯುವ ಪತ್ರವನ್ನು ‘ಅನುಗತ ಪತ್ರ’ ವೆಂದು ಕರೆಯಬಹುದು. ಅನುಗತ ಪತ್ರವೆಂದರೆ ಒಮ್ಮೆ ಬರೆದ ಪತ್ರಕ್ಕೆ ಪೂರಕವಾಗಿ ಬರೆದ ಜ್ಞಾಪಕ ಪತ್ರ; ಗ್ರಾಹಕನಿಗೆ ಮನದಟ್ಟು ಮಾಡಿಸಲು ಹಾಗು ಅವನ ಗಮನ ಸೆಳೆಯಲು ಹಲವು ಬಾರಿ ಕಳಿಸುವ ಪತ್ರವೆನ್ನಬಹುದು.

ಅನುಗತ ಪತ್ರದ ಸಂದರ್ಭಗಳು

೧. ವಿಚಾರಣಾ ಪತ್ರವೊಂದನ್ನು ಗ್ರಾಹಕ ಸಂಸ್ಥೆ ಬರೆದಾಗ ಬಿಕರಿದಾರ ಸಂಸ್ಥೆ ಅದಕ್ಕೆ ಒಮ್ಮೆ ಉತ್ತರಿಸಿದ ಮಾತ್ರಕ್ಕೆ ಅದರ ಕರ್ತವ್ಯ ಮುಗಿಯಬಹುದು; ಆದರೆ ಗುರಿಸಾಧನೆಯಾಗುವುದಿಲ್ಲ. ಆದ್ದರಿಂದ ಬಿಕರಿದಾರ ಸಂಸ್ಥೆ ಮತ್ತೆ ಮತ್ತೆ ಅನುಗತ ಪತ್ರವನ್ನೂ ಬರೆಯಬೇಕಾಗುತ್ತದೆ.

೨. ಬಾಕಿ ವಸೂಲು ಪತ್ರ ಬರೆದ ಕೂಡಲೇ ಸಾಲ ತೀರಿಕೆಯಾಗುವ ಹಾಗಿದ್ದರೆ ‘ರಾಮರಾಜ್ಯ’ ಎಂದೋ ಬರುತ್ತಿತ್ತು. ಕೇಳಿದ ಕೂಡಲೇ ಸಾಲ ತೀರಿಸುವವರು ಇಲ್ಲವೆಂದು ಇದರ ಅರ್ಥವಲ್ಲ, ಅಪರೂಪ ಎಂದಷ್ಟೆ! ಎಷ್ಟೋ ಸಾರಿ ಸಾಲವನ್ನು ತೀರಿಸಬೇಕು ಎಂದುಕೊಂಡರೂ ಪರಿಸ್ಥಿತಿ ಅನುಕೂಲಕರವಾಗಿರುವುದಿಲ್ಲ. ಆದ ಕಾರಣ ಸಾಲಿಗ ಸಾಲಗಾರನಿಗೆ ಹಣವಸೂಲಿಗಾಗಿ ಜ್ಞಾಪಿಸಲು, ಒತ್ತಾಯ ಮಾಡಲು, ಸೂಕ್ತಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲು – ಹೀಗೆ ನಾನಾ ರೀತಿಗಳಲ್ಲಿ ಪುನಃಪುನಃ ಭಿನ್ನ ಭಿನ್ನ ಅವಧಿಗಳಲ್ಲಿ ಅನುಗತ ಪತ್ರಗಳನ್ನು ಬರೆಯಬೇಕಾಗುತ್ತದೆ. ಇದಕ್ಕಾಗಿ ಕೆಲವರು ಅಚ್ಚಾದ ನಮೂನೆಗಳನ್ನು ಬಳಸುವುದೂ ಉಂಟು.

೩. ಮಾರಾಟ ಪತ್ರ ಅಥವಾ ವಿಕ್ರಯ ಪತ್ರ, ಸರಕಿನ ಮಾರಾಟವನ್ನು ಹೆಚ್ಚಿಸಲು ಸಹಸ್ರಾರು ಮಂದಿಗೆ ಬಿಕರಿದಾರ ಸಂಸ್ಥೆ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿ ಬರೆಯುವಂಥದ್ದು. ಇದರಿಂದ ಗ್ರಾಹಕರೇ ನೇರವಾಗಿ ವ್ಯವಹರಿಸಲು ಅನುಕೂಲವಾಗುವುದು; ಸಂಸ್ಥೆಯ ಪ್ರಚಾರವಾಗುವುದು; ಹೀಗೆ ಗ್ರಾಹಕರು ಇದ್ದೆಡೆಗೆ ವ್ಯಾಪಾರೀ ಸಂಸ್ಥೆಯ ಸರಕಿನ ವಿವರ ಅಂಚೆಯ ಮೂಲಕ ತಾನಾಗಿ ಮನೆ ಬಾಗಿಲಿಗೆ ತರುವ ಸಾಧನವೇ ‘ಮಾರಾಟ ಪತ್ರ’ , ಮಾರಾಟ ಪತ್ರವೂ ಒಂದು ಬಗೆಯ ‘ಪ್ರಚಾರ ಪತ್ರ’ ಅಥವಾ ‘ಜಾಹೀರಾತು’ ಎನ್ನಬಹುದು. ಈ ಬಗೆಯ ಮಾರಾಟ ಪತ್ರವನ್ನು, ಗ್ರಾಹಕರ ಮನಸ್ಸನ್ನು ಸೆಳೆಯಲು ಹಾಗು ಆತ ಒಂದು ನಿರ್ಧಾರಕ್ಕೆ ಬರಲು ಮಾಡುವ ಹಾಗೆ ಮತ್ತೆ ಮತ್ತೆ ಗೊತ್ತಾದ ಅವಧಿಯಲ್ಲಿ ಬೇರೆ ಬೇರೆ ಸಂಗತಿಗಳನ್ನು ತಿಳಿಸುವ ನೆಪದಲ್ಲಿ ಕಳಿಸುತ್ತಿರಬೇಕು.

ಮೇಲೆ ನಿರೂಪಿಸಿದ ಅನುಗತ ಪತ್ರಗಳನ್ನು ಕ್ರಮವಾಗಿ ವಿಚಾರಣಾ ಅನುಗತ ಪತ್ರ, ವಸೂಲಿ ಅನುಗತ ಪತ್ರ, ಮಾರಾಟ ಅನುಗತ ಪತ್ರ ಎಂದು ಕರೆಯಬಹುದು. ಇತರ ಸಂದರ್ಭಗಳಲ್ಲಿ ಅನುಗತ ಪತ್ರಗಳು ಬರೆಯಲಾಗದು ಎನ್ನಲು ಸಾಧ್ಯವಿಲ್ಲ. ಒಮ್ಮೆ ಬರೆದ ವಿಚಾರವಾಗಿ ಪುನಃ ಪುನಃ ಬರೆದರೆ ಅದು ಅನುಗತ ಪತ್ರವೆಂದೇ ತಿಳಿಯಬೇಕು. ಅನುಗತ ಪತ್ರದ ಮಾದರಿಗಳನ್ನು ಆಯಾ ಬಗೆಯ ವಾಣಿಜ್ಯ ಪತ್ರಗಳ ನಿರೂಪಣೆಯಲ್ಲಿ ಕೊಡಲಾಗಿದೆ.