ಸ್ವರೂಪ- ಮಹತ್ವ: ವ್ಯಾಪಾರ ಪ್ರಾರಂಭದ ಹೆಜ್ಜೆಯೆಂದರೆ ವಿಚಾರಣಾ ಪತ್ರ. ಖರೀದಿದಾರ ಸಂಸ್ಥೆ ಬಿಕಕದಾರ ಸಂಸ್ಥೆಗೆ ಪತ್ರಿಕಾ ಜಾಹೀರಾತು ನೋಡಿಯೋ ಇಲ್ಲವೇ ವಿಷಯವನ್ನು ಬೇರೆ ರೀತಿಯಲ್ಲಿ ತಿಳಿದೋ ವಿಚಾರಣಾ ಪತ್ರವನ್ನು ಬರೆಯುತ್ತದೆ. ಕೆಲವೊಮ್ಮೆ ಬಿಕರಿದಾರ ತಾನಾಗಿಯೇ ಗ್ರಾಹಕನಿಗೆ ನೀಡಿಕೆ ಪತ್ರ ೧. ಅಥವಾ ವ್ಯವಹಾರೋಜ್ಜೀವನ ಪತ್ರವನ್ನು ಬರೆದು ಸರಕು ಮಾಹಿತಿಯನ್ನು ಕೊಡುವನು. ಹೀಗೆ ಬೇಕಾದ ಸರಕಿನ ದರ ಮತ್ತು ಇತರ ಮಾಹಿತಿಗಳು ಸಿಕ್ಕಿದಾಗ ಅವನ್ನು ನಿರ್ದಿಷ್ಟ ಬೆಲೆಗೆ ಅಗತ್ಯವಾದ ಪ್ರಮಾಣದಲ್ಲಿ ಪಡೆಯಲು ಬಿಕರಿದಾರ ಸಂಸ್ಥೆಗೆ ಖರೀದಿದಾರ ಸಂಸ್ಥೆ ಬರೆಯುವ ಪತ್ರವನ್ನು ಆದೇಶಪತ್ರ ಅಥವಾ ಕ್ರಯಾದೇಶ ಪತ್ರ ಎನ್ನಬಹುದು.

ಕನ್ನಡದಲ್ಲಿ ಸರ್ಕಾರಿ ಆಜ್ಞೆಗಳಿಗೂ ಇತರ ಅಧಿಕಾರಯುತ ಸೂಚನೆಗಳಿಗೂ ‘ಆದೇಶ’ ಶಬ್ದದ ಬಳಕೆಯಾಗುವುದರಿಂದ ಅರ್ಥಸ್ಪಷ್ಟೀಕರಣ ದೃಷ್ಟಿಯಿಂದ ಇಲ್ಲಿ ‘ಕ್ರಯಾದೇಶ ಪತ್ರ’ ಎಂಬ ಮಾತನ್ನು ಬಳಸಲಾಗಿದೆ. ಅಷ್ಟೇ ಅಲ್ಲ, ‘ಆದೇಶ ಪತ್ರ’ ಎಂಬ ಪ್ರಯೋಗಕ್ಕಿಂತ ಈ ಶಬ್ದ ಪ್ರಯೋಗ ಸೂಕ್ತವೂ ಉಚಿತವೂ ಆಗಿದೆ. ಆದರೂ ಎರಡು ಶಬ್ದಗಳನ್ನೂ ಇಂದು ಸಮಾನವಾಗಿ ಬಳಸುತ್ತಿದ್ದಾರೆ.

ಸಾಮಾನ್ಯವಾಗಿ ವಿಚಾರಣಾ ಪತ್ರಗಳು ಬಂದಾಗ ಮಾಲೀಕ ಅವುಗಳಿಗೆ ಉತ್ತರ ಬರೆಯುತ್ತಾನೆ; ದರ ಸೂಚಿ ಪತ್ರ, ಸರಕು ವಿವರ ಪಟ್ಟಿ ಇತ್ಯಾದಿಗಳನ್ನು ಗ್ರಾಹಕ ಸಂಸ್ಥೆಗೆ ಕಳಿಸುತ್ತಾನೆ. ಬಿಕರಿದಾರ ಕ್ರಯಾದೇಶ ಪತ್ರವನ್ನು ನಿರೀಕ್ಷಿಸುವುದು ಸ್ವಾಭಾವಿಕ, ಹಾಗೆ ಕ್ರಯಾದೇಶ ಪತ್ರಗಳು ಬರುವುದೂ ಉಂಟು. ಆದರೆ ಈ ಮಾತು ಅನೇಕ ಸಂದರ್ಭಗಳಲ್ಲಿ ನಿಜವಲ್ಲ; ಏಕೆಂದರೆ, ಪ್ರತಿ ವಿಚಾರಣಾ   ಕರ್ತನೂ ಕೇವಲ ಒಬ್ಬರಿಗೋ ಇಬ್ಬರಿಗೋ ವಿಚಾರಣಾ ಪತ್ರವನ್ನು ಬರೆದಿರುವುದಿಲ್ಲ; ಹತ್ತಾರು ಮಂದಿಗೆ ಬರೆದಿರುವ ಸಂಭವವಿರುತ್ತದೆ. ಅಂತೆಯೇ ಹಲವಾರು ಮಂದಿ ವಿಚಾರಣಾ ಕರ್ತರಿಗೆ ತಮ್ಮ ಸರಕನ್ನು ಕುರಿತು ನೀಡಿಕೆ ಪತ್ರ ಅಥವಾ ಮಾರಾಟ ಪತ್ರವನ್ನು ತಾವಾಗಿಯೇ ಕಳಿಸಿರುತ್ತಾರೆ. ಹೀಗೆ ಹತ್ತಾರು ಪತ್ರಗಳು ಬಂದಾಗ ತನಗೆ ಸೂಕ್ತವಾಗಿ ಕಂಡ ಸಂಸ್ಥೆಗೆ ಕ್ರಯಾದೇಶವನ್ನು ಕಳಿಸುತ್ತಾನೆ; ಉಳಿದ ಸಂಸ್ಥೆಗಳಿಗೆ ಉತ್ತರಿಸದೆ ಸುಮ್ಮನಾಗುತ್ತಾನೆ. ಆದರೆ ‘ನಿಮ್ಮ ದರ ಸೂಚಿ ಪತ್ರವೂ ಸರಕು ಪಟ್ಟಿಯೂ ಬಂದವು. ನಾವು ಅದನ್ನು ಒಪ್ಪಿಲ್ಲ; ಇತರರನ್ನು ಒಪ್ಪಿದ್ದೇವೆ’ ಎಂದು ಯಾರೂ ಬರೆಯಲು ಹೋಗುವುದಿಲ್ಲ. ವಿವರಗಳನ್ನು ಕೇಳಿದಾಗ ನಾವು ನಿಮ್ಮಲ್ಲಿಯೇ ಸರಕನ್ನು ಕೊಳ್ಳುತ್ತೇವೆ ಎಂದು ಯಾರು ಯಾರಿಗೂ ಭರವಸೆ ನೀಡುವುದಿಲ್ಲ.

ಆದ್ದರಿಂದ ಲಾಟರಿಯಲ್ಲಿ ಪ್ರತಿ ಟಿಕೆಟ್ಟಿಗೂ ಬಹುಮಾನ ಸಿಗುವ ಸಂಭವವಿದ್ದಂತೆ ವಿಚಾರಣಾ ಪತ್ರಕ್ಕೆ ಬರೆದ ಪ್ರತಿ ಉತ್ತರಕ್ಕೂ ಕ್ರಯಾದೇಶ ಬರುವ ಸಂಭವವಿರುತ್ತದೆ. ಆದರೆ ಇಂಥದ್ದಕ್ಕೆ ಬರುತ್ತದೆ ಎಂದು ಯಾರೂ ಹೇಳಲಾರರು.

ಕ್ರಯಾದೇಶ ಪತ್ರದ ಭಾಷೆ ಕರಾರುವಕ್ಕಾಗಿರಬೇಕು; ಅನುಮಾನ, ಸಂದಿಗ್ಧತೆ ಶ್ಲೇಷಾರ್ಥಗಳಿಗೆ ಎಡೆಯಿರಬಾರದು; ಈ ಪತ್ರದಲ್ಲಿ ಜಾಹೀರಾತಿನಲ್ಲಿ ಬಳಸುವಂತೆ ಅಲಂಕಾರಿಕ ಭಾಷೆಯನ್ನಾಗಲೀ ಆಕರ್ಷಕ ನುಡಿಗಳನ್ನಾಗಲೀ ಬಳಸುವ ಅಗತ್ಯವಿಲ್ಲ; ವ್ಯಾವಹಾರಿಕವಾಗಿ ಅಗತ್ಯವಿರುವ ವಿವರಗಳನ್ನು ಸರಳ ಭಾಷೆಯಲ್ಲಿ ಸ್ಪಷ್ಟವಾಗಿ ತಿಳಿಸಿದರೆ ಸಾಕು. ‘ಹೆಚ್ಚು ಕಡಿಮೆ ಹತ್ತೋ ಇಪ್ಪತ್ತೋ ಮೂಟೆ ಕಳಿಸಿ’ ಸುಮಾರು ಸಾವಿರ ಪ್ಯಾಕೇಟಿಗಳಿಗಾಗುವಷ್ಟು ಚಿಲ್ಲರೆ ಕಲ್ಲು ಸಕ್ಕರೆಯನ್ನು ಕಳಿಸಿ, ಕಳೆದ ಸಲ ಕಳಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಾಗಿ ಕಳಿಸಿ’ ಎಂಬ  ತರಹದ ಮಾತುಗಳಿಗೆ ಕ್ರಯಾದೇಶ ಪತ್ರಗಳಲ್ಲಿ ಎಡೆಯಿಲ್ಲ; ‘ಲೋಕಪ್ರಖ್ಯಾತವಾದ, ಸಿನಿಮಾ ತಾರೆಯರು ಬಳಸುವ, ಕ್ರಿಕೆಟ್ ಆಟಗಾರರು ಬಾಯಿ-ಬಾಯಿ ಬಿಡುವ, ವೃದ್ಧರಿಗೆ ಆಪ್ಯಾಯಮಾನವಾದ, ಯುವಕರಿಗೆ ಚೇತೋಹಾರಿಯಾದ, ವಿದೇಶಗಳಲ್ಲಿ ಅತಿಬೇಡಿಕೆ ಇರುವ, ಮನಮೋಹಕ, ಆರೋಗ್ಯವರ್ಧಕ, ಸುಂದರಾಕಾರದ, ಸುಲಭ ಬೆಲೆಯ ಸಕಲ ಜನಪ್ರಿಯ, ಮೀಡಿಯಂ ಸೈಜಿನ, ೩೦ ರೂ. ಬೆಲೆಯ ೨೫೦ ಪ್ಯಾಕೆಟ್ ಟೀ ಸೊಪ್ಪನ್ನು ಕಳಿಸಿ’ ಎಂದು ಜಾಹೀರಾತು ಮಾದರಿಯಲ್ಲಿ ಕ್ರಯಾದೇಶ ಪತ್ರ ಬರೆಯಬಾರದು. ‘ಸಕಲ ಜನಪತ್ರಿಯ ಬ್ರಾಂಡಿನ ಮೀಡಿಯಂ ಸೈಜಿನ ೩೦ರೂ. ಬೆಲೆಯ ೨೫೦ ಪ್ಯಾಕೆಟ್ ಟೀ ಸೊಪ್ಪನ್ನು ಕಳಿಸಿ’ ಎಂದು ಬರೆದರೆ ಸಾಕು.

ಭಾರೀ ಬೇಡಿಕೆಯ ಕ್ರಯಾದೇಶ ಪತ್ರವನ್ನು ಕಳಿಸಿದಾಗ ಕೆಲವು ಖರೀದಿದಾರರು ಉಪಕಾರದ ಭಾವನೆಯನ್ನೂ, ದೊಡ್ಡಸ್ತಿಕೆಯ ಧೋರಣೆಯನ್ನೂ ತಳೆಯುವುದುಂಟು. ಅಥವಾ ನಾವೇ ಶ್ರೇಷ್ಠ ಬಹುದೊಡ್ಡ ಮಾರಾಟಗಾರರು, ಧವಳ ಕೀರ್ತಿ ಪ್ರಾಯರು, ಗ್ರಾಹಕರಿಗೆ ನಾವೇ ಮೂಲಾಧಾರವೆಂದು ಕೆಲವು ಬಿಕರಿದಾರರು ಬೀಗುವುದುಂಟು. ಆದರೆ ಇದು ಖಚಿತವಾದ ಧೋರಣೆಯಲ್ಲ. ಏಕೆಂದರೆ ಉಭಯತ್ರರೂ ಲಾಭಕ್ಕಾಗಿ, ತಂತಮ್ಮ ವ್ಯಾಪಾರಾಭಿವೃದ್ಧಿಗಾಗಿ ಶ್ರಮಿಸುವವರೇ ಹೊರತು ಉಳಿದವರ ಉದ್ದಾರಕ್ಕಾಗಿ ತಾವು ನಷ್ಟಕ್ಕೆ ಒಳಗಾಗುವ ಜನವಲ್ಲ.

ಕ್ರಯಾದೇಶ ಪತ್ರವು ಒಂದು ರೀತಿಯಲ್ಲಿ ಶಾಸನ ಬದ್ಧ ಒಪ್ಪಂದವಿದ್ದಂತೆ ಎನ್ನಬಹುದು. ಏಕೆಂದರೆ ಕ್ರಯಾದೇಶದ ಮೂಲಕ ಇತ್ತ ಬಿಕರಿದಾರ ಅತ್ತ ಖರೀದಿದಾರ ಇಬ್ಬರೂ ನಿರ್ದಿಷ್ಟ ನಿಯಾಮಾನುಸರಣೆಗೆ ಒಳಗಾಗುತ್ತಾರೆ. ಕ್ರಯಾದೇಶಾನುಸಾರ ಸರಕುಗಳು ಬಂದಾಗ ಖರೀದಿದಾರ ಅವನ್ನು ಸ್ವೀಕರಿಸಿ ಅವಕ್ಕೆ ನೀಡಬೇಕಾದ ಹಣವನ್ನು ಸಕಾಲದಲ್ಲಿ ಪಾವತಿಮಾಡಬೇಕು. ಬಿಕರಿದಾರ ಖರೀದಿದಾರನ ವಿಚಾರಣಾ ಪತ್ರಕ್ಕೆ ಉತ್ತರ ಬರೆಯುತ್ತಾನೆ. ಆ ಉತ್ತರದಲ್ಲಿ ತಿಳಿಸಿದ ಮತ್ತು ಲಗತ್ತಿಸಿದ ದರ ಸೂಚಿ ಪತ್ರ ಹಾಗು ಸರಕು ಪಟ್ಟಿ ಪ್ರಕಾರ ಖರೀದಿದಾರ ಕ್ರಯಾದೇಶವನ್ನು ಕಳಿಸಿರುತ್ತಾನೆ. ಆ ಪ್ರಕಾರ ಬಿಕರಿದಾರ ಸರಕನ್ನು ಕಳಿಸಿಕೊಡಬೇಕು. ಆತ ಕಳಿಸುವ ಸರಕು ದೋಷಯುಕ್ತವಾಗಿರಬಾರದು. ಹಣ ಸ್ವೀಕಾರ ನಿಯಮ ಬದ್ಧವಾಗಿರಬೇಕು. ಆದ್ದರಿಂದ ಕ್ರಯಾದೇಶ ಪತ್ರದ ಮೂಲಕ ಬಿಕರಿದಾರ ಹಾಗೂ ಖರೀದಿದಾರರಿಬ್ಬರೂ ಲಿಖಿತ-ಅಲಿಖಿತ ನಿಯಮಗಳಿಗೆ ಒಳಗಾಗುತ್ತಾರೆ.

ಕ್ರಯಾದೇಶ ನಮೂನೆಗಳು: ಅಧಿಕ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕಾಗಿ ವಿಚಾರಣಾ ಪತ್ರಕ್ಕೆ ಉತ್ತರ ಬರೆಯುವಾಗ ಅಥವಾ ‘ಸ್ವಯಂ ನೀಡಿಕೆ ಪತ್ರ’ ಬರೆದಾಗ ಅದರೊಂದಿಗೆ ದರಸೂಚಿ ಪತ್ರ ಮತ್ತು ಸರಕು ಪಟ್ಟಿಯನ್ನು ಕಳಿಸುವುದರ ಜೊತೆಗೆ ಕ್ರಯಾದೇಶ ಪತ್ರದ ಮುದ್ರಿತ ನಮೂನೆಯನ್ನೂ ರವಾನಿಸುತ್ತಾರೆ. ಅಂತೆಯೇ ಸಾಕಷ್ಟು ಬೃಹತ್ ಪ್ರಮಾಣದಲ್ಲಿ ವಿವಿಧ ಮೂಲಗಳಿಂದ ಪದೇ ಪದೇ ಸರಕುಗಳನ್ನು ಆಮದು ಮಾಡಿಕೊಳ್ಳುವ ಖರೀದಿದಾರ ಸಂಸ್ಥೆಗಳೂ ತಮ್ಮದೇ ಆದ ರೀತಿಯಲ್ಲಿ ಕ್ರಯಾದೇಶ ನಮೂನೆಗಳನ್ನು ಅಚ್ಚು ಮಾಡಿಟ್ಟುಕೊಂಡು ಬಳಸುತ್ತೇವೆ.

ಕ್ರಯಾದೇಶ ನಮೂನೆ ಪತ್ರವನ್ನು ಭರ್ತಿಮಾಡಿ ಕಳಿಸುವಾಗ ಅದರೊಂದಿಗೆ, ಕ್ರಯಾದೇಶ ಪತ್ರ ನಮೂನೆಯಲ್ಲಿ ಬರೆಯಲಾಗದ ವಿಚಾರಗಳನ್ನು ತಿಳಿಸಲು ‘ಮೇಲ್ಪತ್ರವನ್ನು’ (ಕವರಿಂಗ್ ಲೆಟರ್) ಬರೆಯಲಾಗುತ್ತದೆ.

ಅಚ್ಚಾದ ಕ್ರಯಾದೇಶ ಪತ್ರಗಳ ನಮೂನೆಯನ್ನು ಬಳಸುವುದರಿಂದ ಹಲವಾರು ಅನುಕೂಲಗಳಿವೆ. ಬಿಕರಿದಾರ ಮತ್ತು ಖರೀದಿದಾರರಿಬ್ಬರಿಗೂ ಬೇಕಾದಂತಹ ಅಂಶಗಳು ಬಿಟ್ಟು ಹೋಗುವುದಿಲ್ಲ. ವಿವರಗಳು ಕ್ರಮಬದ್ಧವಾಗಿ ಮಂಡಿತವಾಗಿರುತ್ತವೆ. ಆದೇಶ ಪತ್ರಗಳನ್ನು ಬರೆಯುವುದರಲ್ಲಿ ಪರಿಣತಿ ಇಲ್ಲದವರಿಗೆ ಇದರಿಂದ ಮಾರ್ಗದರ್ಶನ ಸಿಗುತ್ತವೆ. ನಿರ್ದಿಷ್ಟ ಆಕಾರದ ಕಾಗದದಲ್ಲಿ  ಕ್ರಯಾದೇಶ ಅಚ್ಚಾಗಿರುವುದರಿಂದ ಕಡತ ಜೋಡಣೆ (ಫೈಲಿಂಗ್) ಗೆ ಅನುಕೂಲವಾಗುತ್ತ ಆದೇಶ ಪತ್ರಗಳಲ್ಲಿ ಹಲವಾರು ಬಗೆಯ ವಿನ್ಯಾಸಗಳನ್ನು ಕಾಣಬಹುದು. ಸಾಮಾನ್ಯವಾಗಿ ಅದು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ:

ಮುಖ್ಯಲಕ್ಷಣಗಳು: ಕ್ರಯಾದೇಶ ಪತ್ರದ ಮುಖ್ಯ ಲಕ್ಷಣಗಳು ಗುಣ, ಗಾತ್ರ ಕಟ್ಟವಣೆ (ಪ್ಯಾಕಿಂಗ್), ದರ, ಹಣ ಸಂದಾಯದ ನಿಯಮಗಳು, ಸಾಗಾಣಿಕ ವಿಧಾನ, ಸರಕು ರವಾನೆಯ ಕಾಲ, ಸ್ಥಳ, ವಿಮೆ ವಿಚಾರಗಳಿಗೆ ಸಂಬಂಧಿಸಿವೆ. ಗ್ರಾಹಕ ಕ್ರಯಾದೇಶ ಪತ್ರವನ್ನು ಬರೆಯುವ ಮುನ್ನ ಸರಕುಗಳು ದೊರಕುವ ಸುದ್ದಿ ಮೂಲವನ್ನು ಗಮನಿಸಬೇಕು. ‘ನಿಮಗೆ ಬೇಕಾದ ಸರಕುಗಳನ್ನು ಇಂಥ ಸಂಸ್ಥೆ ಒದಗಿಸಬಲ್ಲದು’ ಎಂದು ಸೋದರ ವ್ಯಾಪಾರೀ ಸಂಸ್ಥೆಗಳು ತಿಳಿಸಿರಬಹುದು; ಪತ್ರಿಕಾ ಜಾಹೀರಾತುಗಳಿಂದ ತಿಳಿಯಬಹುದು. ೨. ಮಾರಾಟಗಾರರು ತಾವಾಗಿಯೇ ಕಳಿಸುವ ವಿಶೇಷ ಪ್ರಕಟಣೆಗಳಿಂದ ಖರೀದಿದಾರರು ಮಾಹಿತಿಯನ್ನು ಪಡೆಯಬಹುದು. ಆದ ಕಾರಣ ಮಾರಾಟಗಾರ ಕಳಿಸುವ ಪ್ರಕಟಣೆಗಳು ಹಾಗು ಪತ್ರಿಕಾ ಜಾಹೀರಾತುಗಳು, ಗ್ರಾಹಕ ಮತ್ತು ಮಾರಾಟಗಾರರ ನಡುವಣ ಪರಿಚಯದ ಕೊಂಡಿಗಳು ಎಂದು ಕರೆಯಬಹುದು. ಇದರ ಫಲವಾಗಿಯೇ ವಿಚಾರಣಾ ಪತ್ರ, ಉತ್ತರ ಪತ್ರ ಹೀಗೆ ವ್ಯವಹಾರ ಸಾಗುತ್ತದೆ; ಪರಿಣಾಮವಾಗಿ ಬಿಕರಿದಾರ ಖರೀದಿದಾರರ ನಡುವೆ ಅಧಿಕೃತ ವಾಣಿಜ್ಯ ಪತ್ರವಾಗಿ, ಶಾಸನ ಬದ್ಧ ಒಪ್ಪಂದದ ರೀತಿಯ ಪತ್ರವಾಗಿ ‘ಕ್ರಯಾದೇಶ’ ಕಾರ್ಯವನ್ನು ನಿರ್ವಹಿಸುತ್ತದೆ. ಆದ್ದರಿಂದ ವಾಣಿಜ್ಯ ರಂಗದಲ್ಲಿ ಆದೇಶ ಪತ್ರ ವಿರ್ದಿಷ್ಟ ಅಧಿಕೃತ ಘಟ್ಟವಾಗಿದೆ.

ಕ್ರಯಾದೇಶ ಪತ್ರವನ್ನು ಮೊದಲ ಬಾರಿಗೆ ಕಳಿಸುತ್ತಿದ್ದರೆ ಮೇಲೆ ತಿಳಿಸಿದಂತೆ ಆಕರವನ್ನು ಸೂಚಿಸಬೇಕು. ಎಂದರೆ ಜಾಹೀರಾತು ಪ್ರಕಟವಾದ ಪತ್ರಿಕೆಯ ಹೆಸರು, ದಿನಾಂಕ, ಬಿಕರಿ ಸಂಸ್ಥೆ, ಕಳಿಸಿದ ನೀಡಿಕೆ ಪತ್ರ, ಪತ್ರದ ಸಂಖ್ಯೆ, ದಿನಾಂಕ, ವಿಚಾರಣಾ ಉತ್ತರ ಪತ್ರದ ದಿನಾಂಕ, ಪತ್ರಾಂಕ ಮುಂತಾದುದನ್ನು ತಪ್ಪದೆ ಕ್ರಯಾದೇಶ ಪತ್ರದಲ್ಲಿ ನಮೂದಿಸಬೇಕು. ಇದರಿಂದ ಬಿಕರಿದಾರರಿಗೆ ಖರೀದಿದಾರ ಯಾವ ಮೂಲದಿಂದ ಕ್ರಯಾದೇಶ ಪತ್ರ ಬಂದಿದೆ ಎಂದು ತಿಲಿಯಲೂ ಮತ್ತು ಕಚೇರಿಯಲ್ಲಿ ಕಡತ ಜೋಡಣೆ ಮಾಡಲೂ ಅನುಕೂಲವಾಗುತ್ತದೆ.

ಕ್ರಯಾದೇಶ ಪತ್ರದಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಸಮರ್ಪಕವಾಗಿ ನಿರೂಪಿಸಬೇಕು; ಉದಾಹರಣೆಗೆ ಸರಕುಗಳಿಗೆ ಸಂಬಂಧಿಸಿದ ಹಣವನ್ನು ಹೇಗೆ ರವಾನೆ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು; ನಗದು ಅಥವಾ ಸಾಲದ ವ್ಯವಹಾರವೇ? ಶೀಘ್ರ ಹುಂಡಿಯೇ? ನಿಧಾನ ಹುಂಡಿಯೇ? ಚೆಕ್ಕೆ? ಪೋಸ್ಟಲ್ ಆರ್ಡರೇ? ಯಾವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಕ್ರಯಾದೇಶ ಪತ್ರದಲ್ಲಿ ಸರಕುಗಳ ಬಗ್ಗೆ ಪೂರ್ಣ ವಿವರಗಳನ್ನು ನಮೂದಿಸಬೇಕು; ಅಳತೆ, ತೂಕ, ಮಾದರಿ, ಬಣ್ಣ, ಸಂಖ್ಯೆ, ಮೊಬಲಗು, ಮಾದರಿ ಹೆಸರು- ಇತ್ಯಾದಿ ವಿವರಗಳನ್ನು ಪ್ರತಿ ಸರಕಿಗೂ ಸಂಬಂಧಿಸಿದಂತೆ ಸ್ಪಷ್ಟವಾಗಿ ತಿಳಿಸಬೇಕು. ಬಿಕರಿ ಸಂಸ್ಥೆಯು ಕಳಿಸಿದ ಸರಕು ಪಟ್ಟಿ ಅಥವಾ ದರಸೂಚಿ ಪಟ್ಟಿ ಪ್ರಕಾರ ಸಂಖ್ಯಾ ನಿರ್ದೇಶನವಿರಬೇಕು. ಸರಕು ರವಾನೆಯ ವಿಧಾನವನ್ನೂ ಕ್ರಯಾದೇಶದಲ್ಲಿ ಅನುಮಾನಕ್ಕೆಡೆಯಿಲ್ಲದಂತೆ ತಿಳಿಸಬೇಕು. ಉದಾ: ಲಾರಿ, ವಿಮಾನ, ಟ್ರಕ್ಕು, ರೈಲು ಇತ್ಯಾದಿ. ಸಾಗಾಣಿಕೆ ವಾಹನ ವಿಚಾರವನ್ನೂ ಕಳಿಸಬೇಕಾದ ಅವಧಿಯ ಮಿತಿಯನ್ನೂ ತಿಳಿಸಬೇಕು. ವಸ್ತುಗಳಿಗೆ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಲ್ಲಿ ಅದನ್ನೂ ಉಲ್ಲೇಖಿಸಬೇಕು. ಜೊತೆಗೆ ಆ ಪ್ರಕಾರ ಬೇಡಿಕೆ ಸಲ್ಲಿಸಿರುವುದನ್ನೂ ತಿಳಿಸಬೇಕು.

ಸರಕುಗಳ ಕಟ್ಟವಣೆ ವೆಚ್ಚವನ್ನು ಭರಿಸುವವರು ಯಾರು? ಪ್ಯಾಕಿಂಗ್ ಹೇಗಿರಬೇಕು? ಸುಂಕ ಜಮಾ ಪತ್ರ, ಸಾಗಣೆ ವಿಮೆ ವಿಚಾರಗಳನ್ನು ಸ್ಪಷ್ಟಪಡಿಸಿರಬೇಕು.

ಕ್ರಯಾದೇಶವನ್ನು ತಂತಿ ೩, ದೂರವಾಣಿ ೪, ಬಾಯಿ ಮಾತಿನಲ್ಲಿ ಸಲ್ಲಿಸಿದಾಗ ಅದನ್ನು ಅನಂತರ ಪತ್ರಮುಖೇನ ದೃಢೀಕರಿಸಬೇಕು.

ಸಾಮಾನ್ಯವಾಗಿ ವಾಣಿಜ್ಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಲವಾರು ವಿಳಾಸಗಳಿರುತ್ತವೆ. ಉದಾಹರಣೆಗೆ: ಕಚೇರಿ ವಿಳಾಸ, ಗೋಡೌನ್ (ಮಳಿಗೆ) ವಿಳಾಸ, ಶಾಖೆಗಳ ವಿಳಾಸ, ವ್ಯವಸ್ಥಾಪಕರ ವಿಳಾಸ, ಸರಕಿನ ಗ್ರಾಹಕರ ವಿಳಾಸ ಇತ್ಯಾದಿ. ಖರೀದಿದಾರರು ಬಿಕರಿದಾರರಿಗೆ ಯಾವ ವಿಳಾಸಕ್ಕೆ ಸರಕುಗಳನ್ನು ಕಳಿಸಬೇಕು ಎಂಬುದನ್ನು ತಿಳಿಸಬೇಕು.

ಪತ್ರದ ಮುಕ್ತಾಯ ಭಾಗದಲ್ಲಿ ಪ್ರಾಮಾಣಿಕ ರವಾನೆಗಾಗಿ ರಿಯಾಯಿತಿ ಸೌಲಭ್ಯಗಳಿಗಾಗಿ ಶೀಘ್ರ ಸಾಗಾಣಿಕೆಗಾಗಿ, ಸರಕಿನ ಉತ್ತಮ ಗುಣ ಮಟ್ಟಕ್ಕಾಗಿ ಆಶಿಸಿ ವಂದನೆಗಳನ್ನು ಸಲ್ಲಿಸಬೇಕು.

ನಮೂನೆಗಳನ್ನು ಭರ್ತಿಮಾಡುವಾಗ ಅದರ ಜೊತೆಯಲ್ಲಿರುವ ಲಗತ್ತುಗಳನ್ನು ಗಮನಿಸಬೇಕು. ನಮೂನೆ ಅಚ್ಚಾದ ಮೇಲೆ ಸೇರ್ಪಡೆಯಾಗಬೇಕಾಗಿದ್ದ ಸಂಗತಿಗಳನ್ನೂ, ಹೊಸ ರಿಯಾಯಿತಿಗಳನ್ನೂ ಬದಲಿಸಿದ ಕಾಲಂಗಳನ್ನೂ ಅದರಲ್ಲಿ ತಿಳಿಸಿರುತ್ತಾರೆ. ಆದೇಶ ಪತ್ರದ ಕಾಲಂಗಳಿಗೆ ಸಂಬಂಧಿಸಿದ ಸೂಚನೆ-ಮಾಹಿತಿಗಳನ್ನು ಪ್ರತ್ಯೇಕ ಪ್ರಕಟಣೆಯನ್ನಾಗಿ ಅಚ್ಚು ಮಾಡಿ ಲಗತ್ತಿಸಿರುತ್ತಾರೆ. ಕ್ರಯಾದೇಶ ಪತ್ರವನ್ನು ಭರ್ತಿಮಾಡುವ ಮುನ್ನ ಇವನ್ನು ಗಮನಿಸಬೇಕು. ಆದರೆ ಉತ್ತಮ ವಾಣಿಜ್ಯದ ಸಂಸ್ಥೆಗಳೂ ಆರ್ಥಿಕಾನುಕೂಲವಿರುವ ಸಂಸ್ಥೆಗಳೂ ಮಾರಾಟದ ನಿಯಮಗಳಲ್ಲಿ ವ್ಯತ್ಯಾಸಗಳಾದಾಗ, ಆ ವ್ಯತ್ಯಾಸಗಳನ್ನು ಹಳೇ ನಮೂನೆಯ ಕ್ರಯಾದೇಶ ಪತ್ರಗಳಿಗೆ ಸೇರ್ಪಡೆ, ತಿದ್ದುಪಡಿಗಳನ್ನು ಮಾಡದೆ ಹೊಸ ಕ್ರಯಾದೇಶ ನಮೂನೆಗಳನ್ನು ಅಚ್ಚು ಮಾಡಿಸುತ್ತಾರೆ.

ಸರಕು ಆದೇಶ ಪತ್ರ ಬಂದಾಗ ಅದಕ್ಕೆ ಬಿಕರಿದಾರ ಉತ್ತರ ನೀಡುತ್ತಾ ಅಭಿನಂದನೆಯನ್ನೂ ಸಲ್ಲಿಸಬೇಕು; ಅಥವಾ ಅಚ್ಚಾದ ಆದೇಶ ಪತ್ರದ ನಮೂನೆಯಲ್ಲಿ ಬಿಕರಿದಾರರು ಖರೀದಿದಾರರಿಗೆ ಸರಕು ಆದೇಶ ನೀಡಿದ್ದಕ್ಕಾಗಿ ವಂದನೆಗಳು ಎಂದು ಉಲ್ಲೇಖಿಸಿರಬೇಕು.

ಗ್ರಾಹಕ ಸಂಸ್ಥೆಗಳಿಂದ ಕ್ರಯಾದೇಶ ಪತ್ರಗಳು ಬಂದೊಡನೆ ಮಾಲೀಕ ಸಂಸ್ಥೆಗಳು ಆ ಬಗ್ಗೆ ಶೀಘ್ರ ಕ್ರಮವನ್ನು ಕೈಗೊಳ್ಳಬೇಕಾದದ್ದು ಅವರ ಕರ್ತವ್ಯ. ಜೊತೆಗೆ ಗ್ರಾಹಕ ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಬೇಕು. ತಕ್ಷಣದ ಅವರ ಪ್ರತಿಕ್ರಿಯೆ ಏನು ಎಂಬುದನ್ನೂ ತಿಳಿಸಬೇಕು. ಕ್ರಯಾದೇಶ ಉತ್ತರಗಳನ್ನು ಸಾಮಾನ್ಯವಾಗಿ ಕಾರ್ಡು ಅಥವಾ ಅಂತರ್ ದೇಶಿಯ ಪತ್ರಗಳ ಮುಖೇನ ತಿಳಿಸುತ್ತಾರೆ. ಆದೇಶಗಳು ಪುನರಾವರ್ತನೆಯಾಗಿರಲಿ, ಅವು ಸಣ್ಣಪುಟ್ಟ ಆದೇಶಗಳಾಗಿರಲಿ, ಗ್ರಾಹಕರಿಗೆ ತಕ್ಷಣ ಉತ್ತರಿಸಿ ಕೃತಜ್ಞತೆಗಳನ್ನು ಸಲ್ಲಿಸುವುದು ಸುಸಂಸ್ಕೃತದ ಸತ್ಸಂಪ್ರದಾಯವಾಗಿದೆ. ಇದರಿಂದ ಗ್ರಾಹಕರ ಆತಂಕ ನಿವಾರಣೆಯೂ ಆಗುತ್ತದೆ.

ಆದೇಶ ಪತ್ರದ ಸ್ವೀಕಾರ ದಾಖಲೆಯನ್ನು ಕಳಿಸುವಾಗ ಆದೇಶಕರ್ತ ಖಾಯಂ ಗ್ರಾಹಕನೇ? ಅಧಿಕ ಬೇಡಿಕೆ ಸಲ್ಲಿಸಿರುವವನೇ? ವ್ಯವಹಾರೋಜ್ಜೀವನ ಗ್ರಾಹಕನೇ? ಹೊಸ ಗ್ರಾಹಕನೇ? ಎಂಬ ಸಂಗತಿಗಳನ್ನು ಗಮನಿಸಿ ಇವರಿಗೆ ತಕ್ಕಂತೆ ವಿಶೇಷ ಹಾಗೂ ಸೂಕ್ತ ನುಡಿಗಳನ್ನು ಬರೆಯಬೇಕು. ಇದರಿಂದ ಗ್ರಾಹಕರಲ್ಲಿ ಭರವಸೆ, ಉತ್ಸಾಹ, ಸಂತೋಷಗಳು ಹೆಚ್ಚಿ ಹೆಚ್ಚು ಬೇಡಿಕೆಗಳು ಬರಲು ಸಾಧ್ಯವಾಗುತ್ತದೆ.

ಆದೇಶ ಪತ್ರಕ್ಕೆ ಸ್ವೀಕೃತಿ ದಾಖಲೆ ಕಳಿಸುವ ಮುಂಚೆ, ಕ್ರಯಾದೇಶ ಪತ್ರದ ವಿವರಗಳು ಸಮರ್ಪಕವಾಗಿಯೇ ಎಂಬುದನ್ನು ಮಾಲೀಕ ಪರಿಶೀಲಿಸಬೇಕು. ಕುಂದು ಕೊರತೆಗಳೇನಾದರೂ ಇದ್ದರೆ ಖರೀದಿದಾರನಿಗೆ ಆ ಬಗ್ಗೆ ಟಿಪ್ಪಣಿ ಬರೆದು ತಿಳಿಸಬೇಕು.

ಒಟ್ಟಿನಲ್ಲಿ ಗ್ರಾಹಕನ ಕ್ರಯಾದೇಶ ಪತ್ರ ಮತ್ತು ಮಾರಾಟಗಾರನ ಉತ್ತರ ಪತ್ರಗಳೆರಡೂ ‘ವ್ಯಾಪಾರದ ಬುನಾದಿಗಳಾಗಿವೆ’ ಎನ್ನಬಹುದು. ಇದರ ಫಲವೇ ಅಕ್ಷೇಪಣಾ ಪತ್ರ, ಸಮಾಧಾನ ಪತ್ರ, ವಸೂಲಿ ಪತ್ರ, ಮಾರಾಟ ಪತ್ರ, ಸಾಲಪತ್ರ; ಈ ಪತ್ರ ವ್ಯವಹಾರ ಕೊಂಡಿಯಂತೆ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.

ವರ್ಗೀಕರಣ: ಕ್ರಯಾದೇಶ ಪತ್ರಗಳನ್ನು ಹಲವಾರು ದೃಷ್ಟಿಗಳಿಂದ ಹಲವಾರು ಬಗೆಗಳಾಗಿ ವರ್ಗೀಕರಿಸಬಹುದು. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.

೧. ಗ್ರಾಹಕನು ಬಿಕರಿ ಸಂಸ್ಥೆಗೆ ಕಳಿಸುವ ಕ್ರಯಾದೇಶ ಪತ್ರಗಳು

೨. ಗ್ರಾಹಕನ ಕ್ರಯಾದೇಶ ಪತ್ರಗಳಿಗೆ ಬಿಕರಿ ಸಂಸ್ಥೆ ಬರೆಯುವ ಆದೇಶ ತಿರಸ್ಕಾರ ಪತ್ರಗಳು

೩. ಹಲವಾರು ಕಾರಣಗಳಿಂದ ಬಿಕರಿ ಸಂಸ್ಥೆ ಬರೆಯುವ ಆದೇಶ ತಿರಸ್ಕಾರ ಪತ್ರಗಳು

೪. ಖರೀದಿ ಸಂಸ್ಥೆ ಹಲವಾರು ಕಾರಣಗಳಿಂದ ಬರೆಯುವ ಕ್ರಯಾದೇಶ ರದ್ದು ಪತ್ರಗಳು ಎಂದು ಕ್ರಯಾದೇಶ ಪತ್ರಗಳನ್ನು ನಾಲ್ಕು ಭಾಗ ಮಾಡಬಹುದು.

ಸರಕು ರವಾನೆ ದೃಷ್ಟಿಯಿಂದ ಇವನ್ನು ಇನ್ನೊಂದು ರೀತಿಯಲ್ಲಿ ವರ್ಗೀಕರಿಸಬಹುದು;

೧. ಪೂರ್ಣ ಸರಕು ಪೂರೈಕೆಯ ಕ್ರಯಾದೇಶ ಪತ್ರ

೨. ಅಪೂರ್ಣ ಸರಕು ಪೂರೈಕೆಯ ಆದೇಶ ಪತ್ರಗಳು

೩. ವಿಳಂಬ ಸಾಗಣೆಯ ಆದೇಶ ಪತ್ರಗಳು

೪. ದೋಷ ಪೂರ್ಣ ಆದೇಶ ಪತ್ರಗಳು

ಯಾವುದೇ ಬಗೆಯ ಆದೇಶ ಪತ್ರವಾಗಲೀ ಅದಕ್ಕೆ ನೀಡುವ ಉತ್ತರವಾಗಲೀ, ಕೆಲವು ಅಂಶಗಳನ್ನು ಅವು ಒಳಗೊಂಡಿರಬೇಕು ಎಂಬುದು ಖಚಿತ ವಿಚಾರವಾಗಿದೆ.

ಪೂರ್ಣ ಸರಕು ಪೂರೈಕೆಯ ಕ್ರಯಾದೇಶ ಪತ್ರ: ಖರೀದಿದಾರನಿಂದ ಸರಕು ಆದೇಶ ಪತ್ರ ಬಂದಾಗ ಅವು ಸಮರ್ಪಕವಾಗಿದ್ದು ಆತ ಕೇಳಿದ ಎಲ್ಲ ಸರಕುಗಳು ಬಿಕರಿದಾರನ ಬಳಿ ಇದ್ದು ಆ ಎಲ್ಲ ಬೇಡಿಕೆಗಳನ್ನು ಪೂರೈಸಲು ಶಕ್ಯವಾದರೆ ಅಂತಹ ಪತ್ರಗಳನ್ನು ಪೂರ್ಣ ಸರಕು ಪೂರೈಕೆಯ ಆದೇಶ ಪತ್ರಗಳು ಎನ್ನಬಹುದು.

ಅಪೂರ್ಣ ಸರಕು ಪೂರೈಕೆಯ ಆದೇಶ ಪತ್ರ: ಕೆಲವೊಮ್ಮೆ ಹಲವಾರು ಕಾರಣಗಳಿಂದ ಆದೇಶ ಪತ್ರ ಸಮರ್ಪಕವಾಗಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಖರೀದಿದಾರ ಸಂಸ್ಥೆ ಕೇಳಿದ ಸರಕುಗಳನ್ನು ಕೇಳಿದಷ್ಟು ಪ್ರಮಾಣದಲ್ಲಿ ಬಿಕರಿದಾರನು ಪೂರೈಸಲು ಸಾಧ್ಯವಾಗದಿರಬಹುದು. ಅಂತಹ ಸಂದರ್ಭಗಳಲ್ಲಿ ಇರುವ ಸರಕನ್ನು ಕಳಿಸಿ ಉಳಿದುದನ್ನು ಕಳಿಸುವುದರ ಬಗ್ಗೆ ಭರವಸೆಯನ್ನೂ ಅದಕ್ಕೆ ಬೇಕಾದ ಅವಧಿಯನ್ನೂ ಸೂಚಿಸುತ್ತಾನೆ. ಜೊತೆಗೆ ಈಗ ಆದ ತೊಂದರೆಗಾಗಿ ವಿಷಾದವನ್ನೂ ವ್ಯಕ್ತಪಡಿಸುತ್ತಾನೆ.

ಈ ಬಗೆಯ ಆದೇಶ ಪತ್ರಗಳನ್ನು ಅಪೂರ್ಣ ಸರಕು ಪೂರೈಕೆಯ ಆದೇಶ ಪತ್ರಗಳು ಎನ್ನಬಹುದು. *೬ ಇಲ್ಲಿ, ಆದೇಶ ಪತ್ರಗಳು ಅಪೂರ್ಣವೆಂದಲ್ಲ, ಅದರಲ್ಲಿರುವ ಸರಕುಗಳ ಪೂರೈಕೆ ಬಿಕರಿ ಸಂಸ್ಥೆಯಿಂದ ಪೂರ್ಣವಾಗಿ ಸರಬರಾಜು ಆಗಿರುವುದಿಲ್ಲ ಎಂಬುದನ್ನು ಗಮನಿಸತಕ್ಕ ವಿಚಾರವಾಗಿದೆ. ಇಂತಹ ಸಂದರ್ಭಗಳಲ್ಲಿ ಪೂರೈಸದಿರಲು ಸರಕುಗಳನ್ನು ಪೂರೈಸುವವರೆಗೆ ಈ ಆದೇಶ ಪತ್ರವನ್ನು ಜಾರಿಯಲ್ಲಿಟ್ಟಿರಬೇಕು; ಅದನ್ನು ರದ್ದು ಮಾಡಬಾರದು ಅಥವಾ ‘ಐಟಂಗಳನ್ನು ವಜಾ’ ಮಾಡಬಾರದು ಎಂದು ಬಿಕರಿದಾರ ಸಂಸ್ಥೆ ಕೋರಿಕೊಳ್ಳಬೇಕು.

ದೋಷ ಪೂರ್ಣ ಆದೇಶ ಪತ್ರಗಳೂ, ವಿಳಂಬ ಸಾಗಣೆಯ ಆದೇಶ ಪತ್ರಗಳೂ ಸರಕು ರವಾನೆಗೆ ಸಂಬಂಧಿಸಿದ ಸಂಗತಿಗಳೇ ಆಗಿವೆ. ಆದ್ದರಿಂದ ಇವೂ ಅಪೂರ್ಣ ಸರಕು ರವಾನೆಯ ಆದೇಶ ಪತ್ರಗಳಿಗೆ ಸಂಬಂಧಿಸಿದವು ಎನ್ನಬಹುದು.

ದೋಷಪೂರ್ಣ ಆದೇಶ ಪತ್ರ: ದೋಷಪೂರ್ಣ ಆದೇಶ ಪತ್ರಗಳಿಗೆ ಮುಖ್ಯ ಕಾರಣಕರ್ತರು ಗ್ರಾಹಕ ಸಂಸ್ಥೆಗಳಾಗಿರುತ್ತವೆ. ಆದೇಶಗಳನ್ನು ಕಳಿಸುವವರು ಅಗತ್ಯವಾದ ಅಂಶಗಳನ್ನೆಲ್ಲಾ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು. ನಮೂದಿಸಿವೆಯೇ ಇಲ್ಲವೇ ಎಂಬುದನ್ನು ಪತ್ರ ಕಳಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸಬೇಕು.

ತಮ್ಮ ಅಗತ್ಯದ ಸರಕಿನ ಆಕಾರ, ವಿನ್ಯಾಸ, ಅಳತೆ, ತೂಕ, ಸಂಖ್ಯೆ, ದರ, ನಮೂನೆ, ಬಣ್ಣ, ಸಂಕೇತ ಸಂಖ್ಯೆ, ಹೆಸರು ಮೊದಲಾದವನ್ನು ತಿಳಿಸುವಲ್ಲಿ ಲೋಪವುಂಟಾಗಿವೆಯೇ ಎಂಬುದನ್ನು ಗಮನಿಸಬೇಕು. ದರ ಸೂಚಿ ಪತ್ರ ಮತ್ತು ಸರಕು ಬಿಕರಿ ಪಟ್ಟಿಯನ್ನು ಕಳಿಸಿದ್ದರೆ ಅದರ ಪ್ರಕಾರ ಆದೇಶ ನೀಡಿದೆಯೇ ಎಂಬುದನ್ನು ಗಮನಿಸಬೇಕು. ಒಟ್ಟಿನಲ್ಲಿ ಯಾವುದೇ ಕಾರಣದಿಂದಲಾದರೂ ಆದೇಶ ಪಟ್ಟಿಯಲ್ಲಿ ಅಗತ್ಯವಾದ ವಿವರಗಳು ಇಲ್ಲದಿದ್ದಲ್ಲಿ ಬಿಕರಿದಾರ ಸರಕುಗಳನ್ನು ಕಳಿಸಲೂ ಹಣ ಪಡೆಯಲೂ ತೊಂದರೆಯುಂಟಾಗುವ ರೀತಿಯ ಆದೇಶ ಪತ್ರವಿದ್ದಲ್ಲಿ ಅಂತಹ ಪತ್ರಗಳನ್ನು ದೋಷಪೂರ್ಣ ಕ್ರಯಾದೇಶ ಪತ್ರಗಳು ಎಂದು ಕರೆಯಬಹುದು.

ದೋಷಪೂರ್ಣ ಕ್ರಯಾದೇಶ ಪತ್ರ ಬಂದಾಗ ಗ್ರಾಹಕನ ಮೇಲೆ ದೋಷರೋಪಣೆ ಮಾಡುವುದು ಮುಖ್ಯವಲ್ಲ; ಅದರ ಬದಲಾಗಿ ದೋಷ ನಿವಾರಣೆ ಪ್ರಯತ್ನಿಸಿ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗುವಂತೆ ಮಾಡುವುದು ಮುಖ್ಯ ಎಂಬುದನ್ನು ಬಿಕರಿ ಸಂಸ್ಥೆ  ನೆನಪಿಡಬೇಕು. ಆದ ಕಾರಣ ದೋಷ ಪೂರ್ಣ ಆದೇಶ ಪತ್ರಗಳಿಗೆ ಖರೀದಿಸಿದಾಗ ಸೌಜನ್ಯ ಪೂರ್ಣವಾಗಿ, ನಯವಾಗಿ ಉತ್ತರ ನೀಡಬೇಕು. ಗ್ರಾಹಕನಿಗೆ ಮಾರ್ಗದರ್ಶನ ಮಾಡುವ ರೀತಿಯಲ್ಲಿ, ಅಗತ್ಯ ಮಾಹಿತಿಗೆ ನೆರವಾಗುವ ಪ್ರಕಟಣೆಗಳನ್ನು ಲಗತ್ತಿಸಬೇಕು. ಈಗಾಗಲೇ ಕಳಿಸಿದ ಪತ್ರಗಳಲ್ಲಿಯೆ ಸೂಕ್ತ ವಿವರಗಳ ಬಗ್ಗೆ ಗಮನ ಸೆಳೆಯಬೇಕು. *೭

ವಿಳಂಬ ಸಾಗಣೆಯ ಆದೇಶ ಪತ್ರ: ಗ್ರಾಹಕನಿಂದ ಬಂದ ಕ್ರಯಾದೇಶ ಪತ್ರಗಳು ಸಮರ್ಪಕವಾಗಿದ್ದರೂ ಸಕಾಲದಲ್ಲಿ ಸರಕುಗಳನ್ನು ಕಳಿಸಲು ಬಿಕರಿ ಸಂಸ್ಥೆಗೆ ಸಾಧ್ಯವಾಗದಿರಬಹುದು. ಇದಕ್ಕೆ ಹತ್ತಾರು ಕಾರಣಗಳಿರಬಹುದು. ಕೆಲವು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು; ಸರಕುಗಳ ದಾಸ್ತಾನು ಕೊರತೆಯಿರಬಹುದು, ಸಂಸ್ಥೆಯ ಉತ್ಪಾದನಾ ಯಂತ್ರಗಳು ರಿಪೇರಿಗೊಳಗಾಗಿರಬಹುದು, ಉತ್ಪಾದನಾ ಕೇಂದ್ರ ಅಥವಾ ಆಡಳಿತ ಕಚೇರಿಯಲ್ಲಿ ಮುಷ್ಕರ ನಡೆದಿರಬಹುದು. ಕಚೇರಿ ಅಥವಾ ಕಾರ್ಖಾನೆಯ ಸ್ಥಳ ಪಲ್ಲಟವಾಗಿರಬಹುದು;  ದಿಢೀರನೆ ಹೆಚ್ಚು ಸರಕುಗಳಿಗಾಗಿ ಬೇಡಿಕೆ ಬಂದಿರಬಹುದು. ಸಾರ್ವಜನಿಕ ಗಲಾಟೆ ಗೊಂದಲ ಮುಷ್ಕರಗಳಿಂದ ಸಾಗಾಣಿಕೆ ತೊಂದರೆಯುಂಟಾಗಿರಬಹುದು, ಉತ್ಪಾದನಾ ಸಾಮರ್ಥ್ಯ ಬೇಡಿಕೆಯ ಪ್ರಮಾಣ ಪೂರೈಸಲು ಅಶಕ್ತವಾಗಿರಬಹುದು. ಬಿರುಗಾಳಿ-ಮಳೆ-ಪ್ರವಾಹ ಮೊದಲಾದ ನೈಸರ್ಗಿಕ – ಪ್ರಕೋಪಗಳಿಂದ ಹಡಗು, ವಿಮಾನ, ಲಾರಿ, ಟ್ರಕ್ಕು, ಬಸ್ಸು ಇತ್ಯಾದಿಗಳಲ್ಲಿ ಸರಕು ಸಾಗಣೆ ಕಷ್ಟವಾಗಿರಬಹುದು *೮. ಸರ್ಕಾರದ ಹೊಸ ಕಾನೂನುಗಳನ್ನು ಅನ್ವಯಿಸಬೇಕಾಗಿ ಒಂದು ಹೊಸ ಸಮಸ್ಯೆಗಳೂ ಅಡಚಣೆಗಳೂ ಉಂಟಾಗಿರಬಹುದು. ಕಚ್ಚಾ ಸಾಮಾಗ್ರಿಗಳ ಅಭಾವ ಉಂಟಾಗಿರಬಹುದು- ಇವೇ ಮೊದಲಾದವು ಬಿಕರಿ ಸಂಸ್ಥೆಗೆ ಸಂಬಂಧಿಸಿದ ಕಾರಣಗಳು. ಈ ಕಾರಣಗಳಿಂದಲೇ ಗ್ರಾಹಕನ ಕ್ರಯಾದೇಶಪಾಲನೆ ಮಾಡಲು ತಕ್ಷಣ ಸಾಧ್ಯವಾಗದಿರಬಹುದು.

ರದ್ದು ಆದೇಶ ಪತ್ರ: ಸರಕನ್ನು ಕಳಿಸಿ ಎಂದು ಖರೀದಿ ಸಂಸ್ಥೆ ಬಿಕರಿ ಸಂಸ್ಥೆಗೆ ಬೇಡಿಕೆಯನ್ನು ಸಲ್ಲಿಸಿದಾಗ ಹಲವಾರು ಕಾರಣಗಳಿಂದ ಆದೇಶವನ್ನು ರದ್ದು ಮಾಡುವ ಸಂದರ್ಭಗಳು ಒದಗಿಬರುವುದುಂಟು. ಅಂತಹ ಸಂದರ್ಭಗಳಲ್ಲಿ ಬರೆಯುವ ಪತ್ರಗಳೇ ಕ್ರಯಾದೇಶ ರದ್ದು ಪತ್ರಗಳು. ಗ್ರಾಹಕ ಸಂಸ್ಥೆ ಕ್ರಯಾದೇಶವನ್ನು ರದ್ದು ಮಾಡಲು ಹಲವಾರು ಕಾರಣಗಳಿವೆ. ಉದಾಹರಣೆ: ಮಾರಾಟಗಾರನೋ ಕೊಳ್ಳುವವನೋ ದಿವಾಳಿ ಆಗಿದ್ದರೆ, ಸರಕುಗಳ ಗುಣಮಟ್ಟದ ಬಗ್ಗೆ ದೋಷಾರೋಪಣೆ ಬಂದು ನಿಜವಾಗಿದ್ದಲ್ಲಿ, ಹಣಕಾಸಿನ ಅಭಾವವುಂಟಾದಾಗ, ಇತರರಿಂದ ಇನ್ನೂ ಕಡಿಮೆ ಬೆಲೆಗೆ ಸರಕು ದೊರೆಯುವುದು ಖಾತ್ರಿಯಾದಾಗ, ಸರಕನ್ನು ಬಿಕರಿ ಸಂಸ್ಥೆ ಒದಗಿಸಲು ತಡಮಾಡಿದಾಗ, ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಇಳುವರಿಯಾದಾಗ- ಇನ್ನೂ ಮುಂತಾದ ಸಂದರ್ಭಗಳಲ್ಲಿ ಗ್ರಾಹಕ ತನ್ನ ಕ್ರಯಾದೇಶ ರದ್ದು ಮಾಡಲು ಮಾಲೀಕನಿಗೆ ಪತ್ರ ಬರೆದರೆ ಅಚ್ಚರಿಯೇನಿಲ್ಲ. ಅಸಂಭವವೇನಲ್ಲ. ನಿರ್ದಿಷ್ಟ ರೀತಿಯ ವ್ಯಾಪಾರ ಮಾಡುತ್ತಿದ್ದ ಗ್ರಾಹಕ. ಕಾರಾಣಾಂತರಗಳಿಂದ ಬೇರೆ ಬಗೆಯ ವ್ಯಾಪಾರನ್ನು ಪ್ರಾರಂಭಿಸಿದಾಗ ಈ ಮೊದಲು ಕಳಿಸಿದ್ದ ಕ್ರಯಾದೇಶವನ್ನು ರದ್ದು ಮಾಡುವ ಬಗ್ಗೆ ಒಂದು ನಿದರ್ಶನವನ್ನು ನೋಡಬಹುದು. * ೯

ಬಿಕರಿ ಸಂಸ್ಥೆ ಸರಕುಗಳನ್ನು ಕಳಿಸುವ ಮೊದಲು ಖರೀದಿದಾರ ಆದೇಶ ರದ್ದು ಪತ್ರವನ್ನು ತಲುಪಿಸಬೇಕು. * ೧೦ ತಂತಿ, ವ್ಯಕ್ತಿ, ಪತ್ರ, ದೂರವಾಣಿ ಇವುಗಳ ಪೈಕಿ ಯಾವುದರ ಮೂಲಕವಾಗಿಯಾದರೂ ಶೀಘ್ರವಾಗಿ ಸುದ್ದಿಯನ್ನು ಮಾರಾಟಗಾರನಿಗೆ ತಲುಪಿಸಬೇಕು. ತಂತಿ ಸೌಕರ್ಯವಿಲ್ಲದಾಗ ಅಥವಾ ಹತ್ತಿರದಲ್ಲೇ ಒಂದೆರಡು ಗಂಟೆ ಪ್ರಯಾಣದಲ್ಲಿ ವ್ಯಕ್ತಿ ವಾಹನ ಸಂಚಾರದಲ್ಲಿ ಸುದ್ದಿ ಮುಟ್ಟಿಸಬಹುದಾದರೆ, ಅಥವಾ ಸಾಕಷ್ಟು ಅವಧಿ ಇದ್ದು ಪತ್ರವೇ ಅನುಕೂಲ ಮಾಧ್ಯಮವಾದರೆ ಅದನ್ನು ಬಳಸಿಕೊಳ್ಳಬಹುದು. ಒಟ್ಟಿನಲ್ಲಿ ಶೀಘ್ರವಾಗಿ, ಸಕಾಲದಲ್ಲಿ ಉಚಿತವಾದ ರೀತಿಯಲ್ಲಿ ಸುದ್ದಿಯನ್ನು ಸಂಬಂಧಿಸಿದವರಿಗೆ ತಲುಪಬೇಕು ಅಷ್ಟೇ!

ಕೆಲವು ಸಂಸ್ಥೆಗಳ ನಿಯಾಮಾನುಸಾರ ಒಮ್ಮೆ ಆದೇಶ ಕಳಿಸಿದ ಮೇಲೆ ಹಿಂತೆಗೆದುಕೊಳ್ಳಲಾಗದು. ಅಂತಹ ಸಂದರ್ಭಗಳಲ್ಲಿ ನಷ್ಟ ಕಟ್ಟಿಕೊಡಲು ಸಿದ್ಧವಿರಬೇಕು. ಕೆಲವು ಸಂಸ್ಥೆಗಳು ಸಾಗಣೆ ವೆಚ್ಚವನ್ನು ನೀಡಿದ್ದರೆ ಸರಕುಗಳನ್ನು ಕಳಿಸಿದ್ದಲ್ಲಿ ಹಿಂತೆಗೆದುಕೊಳ್ಳುತ್ತೆವೆ. ಮತ್ತೆ  ಕೆಲವು ಸಂಸ್ಥೆಗಳು ಕಳಿಸಿದ ಸರಕನ್ನು ಯಾವುದೇ ಸಂದರ್ಭದಲ್ಲೂ ಹಿಂತೆಗೆದುಕೊಳ್ಳುವುದಿಲ್ಲ. ಆದ ಕಾರಣ, ಒಮ್ಮೆ ಆದೇಶ ಕಳಿಸಿದ ಮೇಲೆ ಅದನ್ನು ರದ್ದು ಮಾಡಬಾರದು; ತೀರಾ ಅನಿವಾರ್ಯವಾದರೆ ಅಂತಹ ಸಂದರ್ಭಗಳಲ್ಲಿ ನಷ್ಟಭರಿಸಲು ಸಿದ್ಧರಿರಬೇಕು! ಕೆಲವೊಮ್ಮೆ ಆದೇಶ ರದ್ದಿಗೆ ಕಾರಣ ತಿಳಿಸುವುದರ ಜೊತೆಗೆ ಆದೇಶದ ರದ್ದಿನಿಂದ ಆದ ನಷ್ಟಕ್ಕೆ ಪ್ರತಿಯಾಗಿ ಬೇರೆ ಬದಲಿ ಸರಕನ್ನಾಗಲಿ ಅಥವಾ ಮುಂದೆ ಕೊಳ್ಳಲು ಸಾಧ್ಯವಿದ್ದರೆ ಆ ಬಗ್ಗೆ ಭರವಸೆಯನ್ನು ನೀಡಬೇಕು. ಖರೀದಿದಾರನ ಆದೇಶಾನುಸಾರ ಪದಾರ್ಥಗಳು ಬಿಕರಿದಾರನ ಹತ್ತಿರ ಇಲ್ಲದಿದ್ದಾಗ, ಬಿಕರಿದಾರ ಬದಲಿ ವಸ್ತುಗಳನ್ನು ಕಳಿಸಿಕೊಡಲೇ ಎಂದು ಕೇಳಿ ಪತ್ರ ಬರೆಯುತ್ತಾನೆ * ೧೧. ಗ್ರಾಹಕ ಒಪ್ಪಿದರೆ ಬದಲಿ ವಸ್ತುಗಳನ್ನು ಕಳಿಸುತ್ತಾನೆ ಇಲ್ಲವೇ ಬೇರೆಯವರನ್ನು ಸಂಪರ್ಕಿಸಿ ಎಂದು ಸಲಹೆ ನೀಡುತ್ತಾನೆ.

ತಿರಸ್ಕಾರ ಕ್ರಯಾದೇಶ ಪತ್ರ: ಬಿಕರಿ ಸಂಸ್ಥೆ ತನಗೆ ಬಂದ ಕ್ರಯಾದೇಶ ಪತ್ರಗಳನ್ನೆಲ್ಲಾ ಅಂಗೀಕರಿಸಿ ಸದಾ ಸರಕನ್ನು ಸರಬರಾಜು ಮಾಡುತ್ತಾನೆ ಎಂದು ಹೇಳಲಾಗದು. ಕೆಲವು ಸಂದರ್ಭಗಳಲ್ಲಿ ಖರೀದಿ ಸಂಸ್ಥೆ ಆದೇಶಗಳನ್ನು ರದ್ದು ಮಾಡುವ ಸಂದರ್ಭಗಳಲ್ಲಿ ಹೇಗೆ ಒದಗಿಸುತ್ತದೆಯೋ ಹಾಗೆಯೇ ಬೆಕರಿ ಸಂಸ್ಥೆಗಳಿಗೆ ಆದೇಶಗಳನ್ನು ತಿರಸ್ಕರಿಸುವ ಸನ್ನಿವೇಶಗಳುಂಟಾಗುತ್ತವೆ; ಅವನ್ನು ಹೀಗೆ ಸಂಗ್ರಹಿಸಬಹುದು; ಪದಾರ್ಥಗಳಿಗೆ ಬೇಡಿಕೆ ಸಲ್ಲಿಸಿದ ವ್ಯಕ್ತಿ ದಿವಾಳಿ ಎದ್ದಿದ್ದರೆ ಸರಕು ಕಳಿಸಲಾಗದು, ಕೆಲವೊಮ್ಮೆ ಸರಕುಗಳಿಗೆ ರಿಯಾಯಿತಿ ಬೆಲೆ ಅಥವಾ ಪ್ರಕಟಣ ಪೂರ್ವ ಬೆಲೆಯಲ್ಲಿ ಕೊಳ್ಳಲು ನಿರ್ದಿಷ್ಟ ಕಾಲದವರೆಗೆ ಅವಕಾಶ ನೀಡಿರುತ್ತಾರೆ. ಅಂಥ ಅವಧಿಯನ್ನು ಮೀರಿ ಬಂದ ಆದೇಶಗಳನ್ನು ತಿರಸ್ಕರಿಸುವುದುಂಟು. ಕೆಲವು ಉತ್ಪಾದಕರು ಸರಕುಗಳನ್ನು ಪ್ರಾದೇಶಿಕವಾಗಿ ಕೆಲವಾರು ವಿಭಾಗಗಳಿಗೆ ಸರಕನ್ನು ಮಾರುವ ಹಕ್ಕುಗಳನ್ನೂ ನೀಡಿರುತ್ತಾರೆ. ಅಂತಹ ವೇಳೆಯಲ್ಲಿ ತಮಗೆ ಬಂದ ಆದೇಶಗಳನ್ನು ಅವರು ಅಂಗೀಕರಿಸಲಾರದು. ಆಗ ನೀವು ಇಂಥವರೊಡನೆ ವ್ಯವಹರಿಸಿ ಎಂದು ತಿಳಿಸಬಹುದು ಅಥವಾ ತಮಗೆ ಬಂದ ಆದೇಶ ಪತ್ರವನ್ನು  ಅವರಿಗೆ ಕಳಿಸಿ, ಗ್ರಾಹಕ ಸಂಸ್ಥೆಗೆ ಈ ಬಗ್ಗೆ ಸುದ್ದಿಯನ್ನು ಕಳಿಸಬಹುದು. ಆದೇಶ ಪತ್ರಗಳು ನಿಯಮಾನುಸಾರವಿಲ್ಲದಿದ್ದಾಗಲೂ ತಿರಸ್ಕೃತವಾಗಬಹುದು. ಆದೇಶಗಳನ್ನು ತಿರಸ್ಕರಿಸುವ ಸಂಸ್ಥೆಗಳು ಕಾರಣವನ್ನು ಸೂಚಿಸಿ ಗ್ರಾಹಕ ಸಂಸ್ಥೆಗೆ ಪತ್ರ ಬರೆಯಬೇಕು. ವಿನಯಪೂರ್ವಕವಾಗಿ, ಮನನೋಯದ ರೀತಿಯಲ್ಲಿ ಪತ್ರ ಓದಿದವರಿಗೆ ವಿಷಯ ಮನವರಿಕೆಯಾಗುವಂತೆ ಪತ್ರ ಬರೆಯಬೇಕು.

ಆದೇಶ ಪತ್ರ ಬರುವ ವೇಳೆಗೆ ಈ ಮೊದಲೇ ಬಂದ ಭಾರೀ ಬೇಡಿಕೆಯ ಆದೇಶ ಕಾರಣದಿಂದ ಸರಕುಗಳು ಮುಗಿದಿದ್ದಾಗ ಅಥವಾ ಉತ್ಪಾದನೆ ನಿಂತಾಗ, ಹೆಚ್ಚಿನ ಬೆಲೆಗೆ ಆದೇಶ ಪತ್ರಗಳು ಬಂದಾಗ ಕಡಿಮೆ ಬೆಲೆಯ ಆದೇಶ ಪತ್ರಗಳನ್ನು ತಿರಸ್ಕರಿಸುವ ಸಂಭವವುಂಟು. ಆದರೆ ಒಮ್ಮೆ ಮಾರಾಟದ ನಿಯಮಗಳನ್ನು ಗ್ರಾಹಕ ಸಂಸ್ಥೆಗೆ ಕಳಿಸಿದಾಗ ಅವುಗಳ ಪ್ರಕಾರ ಆದೇಶ ಕಳಿಸಿದಾಗ ಶಕ್ಯವಿದ್ದಷ್ಟು ಆದೇಶಗಳನ್ನು ಅಂಗೀಕರಿಸಬೇಕಾದುದು ವ್ಯಾಪಾರ ಧರ್ಯವಾಗಿದೆ. ಆದೇಶವನ್ನು ಸದ್ಯಕ್ಕೆ ಪಾಲಿಸಲು ಆಗದಿದ್ದರೂ ಮುಂದೆ ಹೀಗಾಗಬಾರದೆಂಬ ಭರವಸೆಯನ್ನು ಗ್ರಾಹಕನಿಗೆ ನೀಡಬೇಕು. ಆದೇಶ ಪಾಲನೆ ಮಾಡಿ ಸರಕನ್ನು ಕಳಿಸದಿದ್ದಾಗ ಕಾರಣವೇನೇ ಇರಲಿ- ಕ್ಷಮೆಯನ್ನು ಕೋರಬೇಕು.

ಸರಕು ಸ್ವೀಕಾರ ವಿಚಾರ: ಬಿಕರಿ ಸಂಸ್ಥೆ ಕ್ರಯಾದೇಶ ಪತ್ರಾನುಸಾರ ಸರಕನ್ನು ಕಳಿಸಿದಾಗ, ಅದನ್ನು ಬಿಡಿಸಿಕೊಳ್ಳುವ ಜವಾಬ್ದಾರಿ ಗ್ರಾಹಕ ಸಂಸ್ಥೆಯದಾಗಿರುತ್ತದೆ. ಸರಕನ್ನು ಪಡೆದ ಕೂಡಲೇ ಅವು ಸರಿಯಾಗಿದ್ದರೆ ಕೃತಜ್ಞತೆಯನ್ನೂ ಲೋಪವಿದ್ದರೆ ಆ ಲೋಪವನ್ನು ಕುರಿತೂ ಪತ್ರ ಬರೆಯಬೇಕು. ಒಂದು ವೇಳೆ ಮಾರಾಟಗಾರನೇ ಸರಕು ಸ್ವಾಧೀನ ಪತ್ರವನ್ನು ಸರಕಿನೊಂದಿಗೆ ಕಳಿಸಿದ್ದರೆ ಅದಕ್ಕೆ ಸಹಿ ಹಾಕಿದ ಗ್ರಾಹಕನು ಮತ್ತೆ ಪ್ರತ್ಯೇಕ ಪತ್ರ ಬರೆಯುವ ಅಗತ್ಯವಿಲ್ಲ. ಸರಕು ಸ್ವೀಕಾರ ಪತ್ರ ಸ್ಪಷ್ಟವಾಗಿಯೂ, ಸಂಕ್ಷಿಪ್ತವಾಗಿಯೂ ಇರಬೇಕು. ಜೊತೆಗೆ ಸಕಾಲದಲ್ಲಿ ಬಿಕರಿದಾರನಿಗೆ ತಲುಪುವಂತೆ ನೋಡಿಕೊಳ್ಳಬೇಕು.

ಸರಕಿನ ಹಣ ಸಂದಾಯ ವಿವರ: ಸರಕನ್ನು ಪಡೆಯಲು ತೋರುವ ಆಸಕ್ತಿಯನ್ನೇ ಆ ಸರಕಿನ ಹಣವನ್ನು ಮಾರಾಟಗಾರನಿಗೆ ಮುಟ್ಟಿಸಲೂ ಗ್ರಾಹಕ ಆಸಕ್ತಿಯನ್ನು ತೋರಬೇಕು. ಹಣವನ್ನು ಶೀಘ್ರವಾಗಿ, ಪೂರ್ಣವಾಗಿ, ನಿರ್ದಿಷ್ಟ ಕ್ರಮದಲ್ಲಿ ಸಂದಾಯ ಮಾಡಬೇಕು. ಸರಕುದಾರನಿಗೆ (ಮಾಲೀಕ) ಹಣವನ್ನು ಹಲವಾರು ವಿಧಾನಗಳಲ್ಲಿ ರವಾನಿಸಬೇಕು.

ಚೆಕ್ಕು, ತಕ್ಷಣದ ಹುಂಡಿ, ನಿಧಾನ ಹುಂಡಿ ಮೂಲಕ ಹಣವನ್ನು ಸಲ್ಲಿಸುವುದು ಸಾಮಾನ್ಯ ಪದ್ಧತಿಯಾಗಿದೆ. ಮಾರಾಟಗಾರ ಕೇಳಿದಾಗ ಹಣವನ್ನು ಖರೀದಿದಾರ ತಕ್ಷಣ ನೀಡಬೇಕೆಂದು ಆಜ್ಞಾಪಿಸಿ ಬರೆದ ಬ್ಯಾಂಕಿನ ಪತ್ರವೇ ‘ಶೀಘ್ರ ಹುಂಡಿ’. ಸರಕು ಸ್ವೀಕಾರಿ ನಿರ್ದಿಷ್ಟಾವಧಿಯ ನಂತರ ಕೇಳಿದಾಗ ಅಥವಾ ತಕ್ಷಣ ಕೇಳಿದಾಗ ಮಾರಾಟಗಾರನಿಗೆ ಹಣವನ್ನು ಸಲ್ಲಿಸಬೇಕು. ಈ ನಿಯಮಕ್ಕೆ ಒಪ್ಪಿ ಹುಂಡಿಗೆ ಸಹಿ ಹಾಕಿ ಸರಕನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು ಎಂದು ತಿಳಿಸಿ ನೀಡಿದ ಹಣ ಸಲ್ಲಿಸಬೇಕಾಗುತ್ತದೆ. ನಿಧಾನ ಹುಂಡಿಯಿಂದ ಸರಕು ಖರೀದಿದಾರನಿಗೆ ಹಣವನ್ನು ನೀಡಲು ಸಾಕಷ್ಟು ಕಾಲಾವಧಿ ಸಿಗುತ್ತದೆ. ಅತಿ ಹೆಚ್ಚಿನ ಹಣದ ಮೊತ್ತವಾಗಿಲ್ಲದಿದ್ದಾಗ ವಿಮಾ ಪತ್ರ ಮನಿಯಾರ್ಡರ್, ಅಂಚೆ ಆದೇಶಗಳ ಮುಖಾಂತರ ಕಳಿಸಬಹುದು.

ನೀಡಿಕೆ ಪತ್ರವನ್ನಾಧರಿಸಿ ಗ್ರಾಹಕ ಕಳಿಸಿದ ಕ್ರಯಾದೇಶ

ಮಾದರಿ

ಸುಸೂತ್ರ ಮಾರಾಟ ಸಂಸ್ಥೆ
ರಾಗಿಪೇಟೆ, ಚಂದ್ರಪುರ

ತಂತಿ: ‘ಸುಸೂತ್ರ’
ದೂರವಾಣಿ: ೬೮೯೩೪೨

ಪತ್ರಾಂಕ : ನೀಪಆಕ್ರ ೬/೮೭-೮೮                                                     ದಿನಾಂಕ : ೧೫ ಜುಲೈ ೧೯೮೭

ನಿಖಿಲಾಂಡೇಶ್ವರಿ ಮತ್ತು ಕಂಪನಿ
ಸಣ್ಣಪೇಟೆ, ಹಗಲೂರು

ಮಾನ್ಯರೆ,

ನೀವು ಬರೆದ ನೀಡಿಕೆ ಪತ್ರ (ಪತ್ರಾಂಕ ನೀಪ ೮೭೬/೮೭-೮೮ ದಿನಾಂಕ : ೮-೭-೧೯೮೭) ತಲುಪಿತು. ವಂದನೆಗಳು. ಪತ್ರದೊಡನೆ ಕಳಿಸಿದ ಸರಕು ಪಟ್ಟಿನ್ನೂ ದರವನ್ನೂ ಗಮನಿಸಿದೆವು. ಅದರಲ್ಲಿ ನಮೂದಿಸಿರುವ ಬೊಂಬೆಗಳೂ ದರವೂ ನಮಗೆ ಒಪ್ಪಿಗೆಯಾಗಿದೆ. ಆದ್ದರಿಂದ ಈಗ ನಾವು ಆದೇಶಿಸುತ್ತಿರುವ ಬೊಂಬೆಗಳನ್ನು ‘ಜೈ ಸಿದೇಶ್ವರ ಲಾರಿ ಸರ್ವೀಸ್’ ಮೂಲಕ ಕಳಿಸಿಕೊಡಬೇಕೆಂದು ಕೋರುತ್ತೇವೆಲ ಸರಕು ನಮಗೆ ಎರಡು ವಾರಗಳೊಳಗೆ ತಲುಪಬೇಕು. ಸರಕು ಬಿಕರಿ ಪಟ್ಟಿಯನ್ನೂ ಲಾರಿ ರಸೀದಿಯನ್ನೂ ‘ವಿಜಯಲೀಲಾ ಬ್ಯಾಂಕಿನ’ ಮೂಲಕ (ರಾಗಿ ಪೇಟೆ ಶಾಖೆ) ಕಳಿಸಿಕೊಡಬೇಕೆಂದೂ ಕೋರುತ್ತೇವೆ.

ನಿಮ್ಮ ವಿಶ್ವಾಸಿ
ಸಯಾಜಿರಾವ್
ಮಾಲೀಕ

ಕ್ರಯಾದೇಶ ಪತ್ರ

ಕ್ರ. ಸಂ.

ಸರಕು ಪಟ್ಟಿ ಸಂಖ್ಯೆ

ಸೈಜು

ವಿವರ

ದರ ರೂ.ಪೈ.

ಪ್ರಮಾಣ (ಸಂಖ್ಯೆ)

ಮೊತ್ತ ರೂ. ಪೈ

೧. ಸಂ.೧೮/೩ ದೊಡ್ಡದು ಪ್ಲಾಸ್ಟಿಕ್ ಮಕ್ಕಳ ಬೊಂಬೆ ೧೦೦-೦೦ ೫೦೦-೦೦
೨. ಸಂ.೨೩/೫ ಮಧ್ಯಮ ಮರದ ಕುದುರೆಗಳು ೫೦-೦೦ ೧೦ ೫೦೦-೦೦
೩. ಸಂ.೪೩/೧೧ ೬ ವರ್ಷದ ಮಕ್ಕಳಿಗೆ ಸೈಕಲ್ ೧೫೦-೦೦ ೭೫೦-೦೦
೪. ಸಂ.೬೯/೧೪ ೩ ವರ್ಷದ ಮಕ್ಕಳಿಗೆ ಕೈಗಾಡಿ ೧೦-೦೦ ೨೦೦ ೨೦೦-೦೦
೫. ಸಂ.೭೧/೬ ನರ್ಸರಿ ಮಕ್ಕಳಿಗೆ ಬ್ಯಾಟು ಚೆಂಡು ೨೦-೦೦ ೫೦ ೧೦೦೦-೦೦

ರೂ.

೨೯೫೦-೦೦

ರಿಯಾಯಿತಿ ರೂ.

೭೫೦-೦೦

ರೂ.

೨೨೦೦-೦೦