ಜಾಹೀರಾತನ್ನು ನೋಡಿ ಕಳಿಸಿದ ಕ್ರಯಾದೇಶ ಪತ್ರ
ಮಾದರಿ

ಆದೇಶ ಪತ್ರ

ದಿನಾಂಕ : ೨೫-೭-೧೯೮೭

ಹೆಸರು :

ಇಂದ :
ವಿಳಾಸ : ಪಿಂಚಣಿದಾರರ ಅಧ್ಯಯನ ಸಂಘ
೯೬, ೧೪ನೆಯ ಮುಖ್ಯರಸ್ತೆ, ಜಯಪುರ
ಕ್ಷೇಮಂಕರ ನಗರ, ಸುಮಂಗಳ ಜಿಲ್ಲೆ

ಅವರಿಗೆ,
ಪ್ರಕಾಶಕರು,
ಚಿರಸಾಹಿತಿ ಸ್ಮಾರಕ ಪ್ರತಿಷ್ಠಾನ
೧೬೮, ೪ನೆಯ ಮುಖ್ಯರಸ್ತೆ
ಬಡೇಸಾಬ್ ಬಡಾವಣೆ
ಕ್ಷೇಮಂಕರ ನಗರ

ಮಾನ್ಯರೆ,

‘ಪುಸ್ತಕ ವಾಣಿ’ ದಿನ ಪತ್ರಿಕೆಯಲ್ಲಿ ನೀವು ಪ್ರಕಟಿಸಿದ ಜಾಹಿರಾತಿನ ಪ್ರಕಾರ (ದಿ.೨೦-೭-೧೯೮೭) ‘ಸುಜ್ಞಾನ ನಿಧಿ’ ಗ್ರಂಥದ ೧೦ ಪ್ರತಿಗಳನ್ನು ಪ್ರಕಟನಪೂರ್ವ ಬೆಲೆಯಲ್ಲಿ ನಮ್ಮ ಸಂಘಕ್ಕೆ ಕೊಳ್ಳಬಯಸಿದ್ದೇವೆ. ಅದರ ಜೊತೆಗೆ ಈ ಕೆಳಕಂಡ ಗ್ರಂಥಗಳನ್ನು ಕಳಿಸಿಕೊಡಬೇಕೆಂದು ನಿಮ್ಮನ್ನು ಕೋರುತ್ತಿದ್ದೇವೆ.

ಈ ಬಗ್ಗೆ (ರೂ. ೪೬೦-೦೦) ನಾಲ್ಕು ನೂರು ಅರವತ್ತು ರೂ. ಗಳನ್ನು (ಚೆಕ್ ಕಮೀಷನ್ ರೂ. ೫-೦೦ ಸೇರಿಸಿ) ಎಂ.ಒ. ಮೂಲಕ ಕಳಿಸುತ್ತಿದ್ದೇವೆ. ನೀವು ಪುಸ್ತಕಗಳನ್ನು ಅಂಚೆ ಮೂಲಕ (ರೆಕಾರ್ಡ್ ಡೆಲಿವರಿ ಬುಕ್ ಪೋಸ್ಟ್) ಕಳುಹಿಸಿಕೊಡಿ. ಅಂಚೆ ವೆಚ್ಚವನ್ನು ಇದರೊಂದಿಗೆ ಕಳುಹಿಸುತ್ತಿದ್ದೇವೆ.

ಕಳಿಸುತ್ತಿರುವ ಹಣದ ವಿವರ

ಕ್ರ.ಸಂ.

ಪುಸ್ತಕದ ಹೆಸರು

ಪ್ರತಿಗಳು

ದರ
ರೂ. ಪೈ

ಮೊತ್ತ
ರೂ. ಪೈ

೧. ಸುಜ್ಞಾನ ನಿಧಿ ೧೦ ಸಾದಾ ಪ್ರತಿ ೧೦-೦೦ ೧೦೦-೦೦
೨. ವೃದ್ದಾಪ್ಯದಲ್ಲಿ ಆರೋಗ್ಯ ರಕ್ಷಣೆ ೧೦ ಕ್ಯಾಲಿಕೋ ಪ್ರತಿ ೨೦-೦೦ ೨೦೦-೦೦
೩. ಸಂಕ್ಷಿಪ್ತ ಭಗವದ್ಗೀತೆ ೫ ಸಾದಾ ಪ್ರತಿ ೫-೦೦ ೨೫-೦೦
೪. ಭವ್ಯ ರಾಮಾಯಣ ಸಂಗ್ರಹ ೫ ಸಾದಾ ಪ್ರತಿ ೧೫-೦೦ ೭೫-೦೦
೫. ಯುವಕರಿಗೆ ಧರ್ಮ ಬೋಧೆ ೫ ಕ್ಯಾಲಿಕೋ ಪ್ರತಿ ೧೨-೦೦ ೬೦-೦೦
೩೫

ಒಟ್ಟು ರೂ.

೪೬೦-೦೦

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
ಜಗಲಿ ಜವರಯ್ಯ
ಕಾರ್ಯದರ್ಶಿ
ಪಿಂ.ಅ.ಸಂ

 

ತಂತಿ ಮೂಲಕ ಕಳಿಸಿದ ಆದೇಶದ ಸ್ಥಿರೀಕರಣ ಪತ್ರ
ಮಾದರಿ

ಸಿದ್ಧ ಪ್ರಸಿದ್ಧ ವನಸ್ಪತಿ ಸಂಸ್ಥೆ
(ತುಪ್ಪದ ಮಾರಾಟಗಾರರು)

ತಂತಿ: ‘ವನಸ್ಪತಿ’
ದೂರವಾಣಿ: ೩೮೩೦೪೧

ಬಸ್ ನಿಲ್ದಾಣ ರಸ್ತೆ
ರಾಮನಗರ

ಪತ್ರದ ಸಂಖ್ಯೆ: ಆಪಸ ೫೦/೮೭-೮೮           ತಾರೀಖು: ೧ ಅಕ್ಟೋಬರ್ ೧೯೮೭

ಅವರಿಗೆ,
ಸಕಲಪ್ಪ ಮತ್ತು ಮಕ್ಕಳು
ಸಗಟು ವ್ಯಾಪಾರಿಗಳು
೧೦ ವಿಘ್ನೇಶ್ವರ ರಸ್ತೆ
ಬೆನಕಪುರ

ಮಹನೀಯರೆ,

‘ಸ್ಫೂರ್ತಿ’ ವನಸ್ಪತಿ ತುಪ್ಪದ ೫೦೦ ಟಿನ್ನುಗಳನ್ನು ಇವತ್ತಿನ ಮಾರುಕಟ್ಟೆ ಬೆಲೆಯಲ್ಲಿ ನಾವು ಕೊಳ್ಳಲು ಸಿದ್ದರಿದ್ದೇವೆ. ಈ ಬಗ್ಗೆ ನಾವು ನಿಮಗೆ ‘ತಂತಿ ಆದೇಶ’ ವನ್ನು ಈ ರೀತಿ ಕಳಿಸಿದ್ದೇವೆ. ‘ಈ ತಿಂಗಳ ೨೦ನೆಯ ದಿನಾಂಕದೊಳಗೆ ನೀವು ನಮಗೆ ೫೦೦ ಟಿನ್ (೨೦ ಕೆ.ಜಿ.ಟಿನ್) ಸ್ಫೂರ್ತಿ ವನಸ್ಪತಿಯನ್ನು ಕಳಿಸಿ’

ಈ ಆದೇಶವನ್ನು ಅಂಗೀಕರಿಸಿ ಲಾರಿ ಮೂಲಕ ಕಳಿಸುವ ವ್ಯವಸ್ಥೆ ಮಾಡಿ. ಸರಕು ನಮಗೆ ಯಾವ ದಿನ ತಲುಪುತ್ತದೆ ಎಂಬ ಬಗ್ಗೆ ಶೀಘ್ರವಾಗಿ ತಿಳಿಸಬೇಕೆಂದು ಕೋರುತ್ತೇವೆ.

ನಿಮ್ಮ ವಿಶ್ವಾಸಿ
ನಾಜೂಕಯ್ಯ
ಮಾಲೀಕ
ಸಿ.ನ.ಸಂ.

ದೂರವಾಣಿ ಮೂಲಕ ತಿಳಿಸಿದ ಆದೇಶಾನುಸಾರ ಕಳಿಸಿದ ಕ್ರಯಾದೇಶ ಪತ್ರ
ಮಾದರಿ

ಸುಖೋಲ್ಲಾಸಿನೀ ಹೊದಿಕೆ ವ್ಯಾಪಾರಿಗಳು

ತಂತಿ: ‘ಉಲ್ಲಾಸಿ’
ದೂರವಾಣಿ: ೪೯೩೭೧೪

೪೦, ಬಂಗಾರಿ ರಸ್ತೆ
ಅರಳೇಪೇಟೆ
ಬೆಂಗಳೂರು

ಪತ್ರದ ಸಂಖ್ಯೆ: ದೂ ಅಕ್ರ ೪೮/೮೭-೮೮                   ದಿನಾಂಕ : ೭ನೆಯ ಜುಲೈ ೮೭
ಕನಕದಾಸ ಕಂಬಳಿ ತಯಾರಕರು
ಬೀರನಹಳ್ಳಿ, ತುಮಕೂರು ಜಿಲ್ಲೆ

ಮಾನ್ಯರೆ,

ದೂರವಾಣಿಯ ಮೂಲಕ ಈ ದಿನ ಬೆಳಿಗ್ಗೆ ೧೦ ಗಂಟೆಯಲ್ಲಿ ನಾವು ತಮ್ಮೊಡನೆ ಮಾತನಾಡಿದ ಪ್ರಕಾರ ಈ ಕೆಳಕಂಡ ಸರಕುಗಳಿಗಾಗಿ ಆದೇಶವನ್ನು ಕಳಿಸುತ್ತಿದ್ದೇವೆ; ದಯವಿಟ್ಟು ಅಂಗೀಕರಿಸಿ ಕಂಬಳಿಗಳನ್ನು ಮುಂದಿನ ವಾರದೊಳಗೆ ಮೇಲ್ಕಂಡ ವಿಳಾಸಕ್ಕೆ ಸಾಗಣೆ ವಾಹನದ ಮೂಲಕ ತಲುಪಿಸಬೇಕೆಂದು ಕೋರುತ್ತೇವೆ. ಈ ಸರಕಿನ ಜತೆ ಸ್ಟಾಂಪು ಹಚ್ಚಿದ ಹಣದ ರಸೀದಿಯನ್ನು ಕಳಿಸಿಕೊಡುವುದು.

ಕ್ರ.
ಸ.

ಹೆಸರು

ಅಳತೆ

ಬಣ್ಣ

ಸಂಖ್ಯೆ

ದರ
ರೂ. ಪೈ

ಮೊತ್ತ
ರೂ. ಪೈ

೧. ಸುಂದರ ಹಾಸು ಗಂಬಳಿ ದೊಡ್ಡ ಸೈಜು ಬಿಳಿ

೨೦

೯೦-೦೦

೧೮೦೦-೦೦

೨. ಚೆಲುವೆ ಹಾಸು ಗಂಬಳಿ ದೊಡ್ಡ ಸೈಜು ಕರಿ

೨೦

೯೦-೦೦

೧೮೦೦-೦೦

೩. ಗೋಪಾಲ ಹೊದಿಕೆ ಕಂಬಳಿ ದೊಡ್ಡ ಸೈಜು ಕೆಂಪು

೩೦

೭೦-೦೦

೨೧೦೦-೦೦

೪. ಉಲ್ಲಾಸಿನೀ ಹೊದಿಕೆ ಕಂಬಳಿ ದೊಡ್ಡ ಸೈಜು ನೀಲಿ

೩೦

೮೦-೦೦

೨೪೦೦-೦೦

೫. ಮಂಜರೀ ಮಕ್ಕಲ ಕಂಬಳಿ ಚಿಕ್ಕ ಸೈಜು ಕರಿ

೧೦೦

೩೦

೩೦೦೦-೦೦

೨೦೦

ಒಟ್ಟು

೧೧೧೦೦-೦೦

ರಿಯಾಯಿತಿ ಶೇ. ೨೦

೨೨೨೦-೦೦

ಮೊತ್ತ ರೂ.

೮೮೮೦-೦೦

ತಮ್ಮ ನಂಬುಗೆಯ,
ವಿಶ್ವನಾಥಯ್ಯ
ಮಾಲೀಕ
ಸು.ಹೊ.ವ್ಯಾ.

ಪೂರ್ಣ ಪೂರೈಕೆಯ ಕ್ರಯಾದೇಶ ಪತ್ರಕ್ಕೆ ಉತ್ತರ
ಮಾದರಿ

ಚಿರ ಸಾಹಿತಿಸ್ಮಾರಕ ಪ್ರತಿಷ್ಠಾನ
ಕ್ಷೇಮಂಕರ ನಗರ

ದೂರವಾಣಿ: ೪೯೨೧೦೯

೧೬೮, ೪ನೆಯ ಮುಖ್ಯರಸ್ತೆ
ಬಡೇಸಾಬ್ ಬಡಾವಣೆ,
ಕ್ಷೇಮಂಕರ ನಗರ
ದಿನಾಂಕ: ೨ನೆಯ ಆಗಸ್ಟ್ ೧೯೮೭

ಅವರಿಗೆ,

ಶ್ರೀ ಜಗಲಿ ಜವರಯ್ಯ ಬಿ.ಕಾಂ.
೯೬, ೧೪ನೆಯ ಮುಖ್ಯರಸ್ತೆ, ಜಯಪುರ
ಕ್ಷೇಮಂಕರ ನಗರ
ಸುಮಂಗಳ ಜಿಲ್ಲೆ

ಮಾನ್ಯರೆ,

‘ಪುಸ್ತಕ ವಾಣಿ’ ದಿನ ಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ಜಾಹೀರಾತನ್ನು ಓದಿ ನಮ್ಮ ಪ್ರಕಟಣೆಗಳ ಮಹತ್ವವನ್ನರಿತು ಅವನ್ನು ಕೊಳ್ಳಲು ತಾವು ದಿ.೨೫-೭-೮೭ ರಂದು ಆದೇಶ ಪತ್ರ ಕಳಿಸಿದ್ದಕ್ಕೆ ವಂದನೆಗಳು.

ನೀವು ಕೇಳಿರುವ ಪುಸ್ತಕಗಳನ್ನು ಇಂದೇ ಅಂಚೆ ಮೂಲಕ ರವಾನಿಸುತ್ತಿದ್ದೇವೆ. ನಮ್ಮಲ್ಲಿ ದೊರೆಯುವ ಇತರ ಪುಸ್ತಕಗಳ ಪಟ್ಟಿಯೊಂದನ್ನೂ ಈ ಪತ್ರಕ್ಕೆ ಲಗತ್ತಿಸಿದ್ದೇವೆ. ಅವುಗಳಲ್ಲಿ ಕೆಲವಾದರೂ ನಿಮ್ಮಂಥವರ ಅಭಿರುಚಿಗೆ ಒಗ್ಗುತ್ತದೆ ಎಂದು ನಾವು ತಿಳಿದಿದ್ದೇವೆ. ಆ ಬಗ್ಗೆ ನಮಗೆ ಆದೇಶ ಪತ್ರವನ್ನು ಬರೆಯುತ್ತೀರಿ ಎಂದು ನಂಬಿದ್ದೇವೆ. ನಿಮ್ಮ ಅನುಕೂಲಕ್ಕಾಗಿ ಕ್ರಯಾದೇಶ ಪತ್ರದ ಒಂದು ನಮೂನೆಯನ್ನು ಕಳುಹಿಸುತ್ತಿದ್ದೇವೆ.

ನಿಮ್ಮ ವಿಶ್ವಾಸಿ,
ರವೀಂದ್ರನಾಥ
ಪ್ರಕಾಶಕ
ಚಿ.ಸ್ಮಾ.ಪ

ಅಡಕಗಳು: ೨

 

ಅಪೂರ್ಣ ಪೂರೈಕೆಯ ಕ್ರಯಾದೇಶಕ್ಕೆ ಉತ್ತರ ಪತ್ರ
ಮಾದರಿ

ಕನಕದಾಸ ಕಂಬಳಿ ತಯಾರಕರು
ಬೀರನಹಳ್ಳಿ, ತುಮಕೂರು ಜಿಲ್ಲೆ

ತಂತಿ: ‘ಕನಕ’
ದೂರವಾಣಿ: ೪೯೩೨೫೬

ಪತ್ರಾಂಕ: ಅಪೂಅಪ ೪೦/೮೭-೮೮                       ದಿನಾಂಕ : ೧೫ನೆಯ ಜುಲೈ ೮೭
ಶ್ರೀ ವಿಶ್ವನಾಥಯ್ಯ
ಮಾಲೀಕರು
ಸುಖೋಲ್ಲಾಸಿನೀ ಹೊದಿಕೆ ವ್ಯಾಪಾರಿಗಳು
೪೦, ಬಂಗಾರಿ ರಸ್ತೆ, ಅರಳೇಪೇಟೆ
ಬೆಂಗಳೂರು.

ಮಾನ್ಯರೆ,

ತಾವು ದಿನಾಂಕ ೭ ಜುಲೈ ೧೯೮೭ರಂದು ಕಳಿಸಿದ ಕ್ರಯಾದೇಶ ಪತ್ರಕ್ಕಾಗಿ ಹೃತ್ಪೂರ್ವಕ ವಂದನೆಗಳು. ತಾವು ಕೇಳಿರುವ ಕಂಬಳಿಗಳಲ್ಲಿ ಚೆಲುವೆ ಹಾಸುಗಂಬಳಿಗಳು ದಾಸ್ತನಿಲ್ಲ. ಮುಂದಿನ ತಿಂಗಳ ಮೊದಲ ವಾರದಲ್ಲಿ ಸಿದ್ಧವಾಗುತ್ತವೆ. ಈಗ ಹೊಸದಾಗಿ ನವವಿನ್ಯಾಸದಲ್ಲಿ ನಡುವೆ ಸುಂದರ ಚಿತ್ರಗಳ ಹೆಣಿಗೆ ಇರುವ ‘ಸಿಂಗಾರಿ’ ಹಾಸುಗಂಬಳಿಗಳನ್ನು ಸಿದ್ಧಪಡಿಸಿದ್ದೇವೆ. ಇದರ ಬೆಲೆ ಮತ್ತು ಸೈಜು ಚೆಲುವೆ ಹಾಸುಗಂಬಳಿಗಳದ್ದೇ ಆಗಿದೆ. ಉಳಿದ ಕಂಬಳಿಗಳ ಜತೆ ಇವನ್ನು ಕಳಿಸೋಣವೇ? ಅಥವಾ ನೀವು ಕೇಳಿರುವ ಮತ್ತು ನಮ್ಮಲ್ಲಿ ದಾಸ್ತಾನಿರುವ ಕಂಬಳಿಗಳನ್ನು ಸದ್ಯಕ್ಕೆ ಕಳಿಸಿ ಉಳಿದ ಚೆಲುವೆ ಹಾಸುಗಂಬಳಿಗಳನ್ನು ಮುಂದಿನ ತಿಂಗಳು ಕಳಿಸಬಹುದೇ? ಯಾವುದಕ್ಕೂ ಶೀಘ್ರವಾಗಿ ಉತ್ತರಿಸಿದರೆ ಅನುಕೂಲವಾಗುತ್ತದೆ.

ತಮ್ಮ ವಿಶ್ವಾಸದ,

ಚೆನ್ನಕನಕಣ್ಣ
ವ್ಯವಸ್ಥಾಪಕ
ಕನಕದಾಸ ಕಂಬಳಿ ತಯಾರಕರು

ದೋಷ ಪೂರ್ಣ ಕ್ರಯಾದೇಶ ಪತ್ರಕ್ಕೆ ಬಿಕರಿದಾರ ನೀಡಿದ ಉತ್ತರ
ಮಾದರಿ

ನಿಖಿಲಾಂಡೇಶ್ವರಿ ಮತ್ತು ಕಂಪನಿ

ತಂತಿ: ‘ನಿಖಿಲ್’                                                                ಸಣ್ಣಪೇಟೆ
ದೂರವಾಣಿ : ೪೯೫೦೬೩                                                     ಹಗಲೂರು

ಪತ್ರಾಂಕ: ದೋಕ್ರ ಆ೨/೮೭-೮೮                ದಿನಾಂಕ : ೨೫ನೆಯ ಜುಲೈ ೮೭

ಶ್ರೀ ಸಯಾಜಿರಾವ್
ಮಾಲೀಕರು
ಸುಸೂತ್ರ ಮಾರಾಟ ಸಂಸ್ಥೆ
ರಾಗಿಪೇಟೆ, ಚಂದ್ರಪುರ

ಮಾನ್ಯರೆ,

ತಮ್ಮ ಉಲ್ಲೇಖ: ನೀಪ ಅಕ್ರ ೩/೮೭-೮೮. ದಿ.೧೫-೭-೮೭

ನಮ್ಮ ನೀಡಿಕೆ ಪತ್ರವನ್ನು ಮನ್ನಿಸಿ ತಾವು ಕಳಿಸಿದ ಆದೇಶ ಪತ್ರ ತಲುಪಿತು. ವಂದನೆಗಳು.

ತಾವು ಕಳಿಸಿರುವ ಆದೇಶ ಪತ್ರದಲ್ಲಿ ೪ನೆಯ ಐಟಂ ಸಂಖ್ಯೆ ೬೯/೧೪, ಮೂರು ವರ್ಷದ ಮಕ್ಕಳ ಕೈಗಾಡಿ ದರವನ್ನು ೧೦ ರೂ. ಎಂದು ಸೂಚಿಸಿ ಒಟ್ಟು ಮೊತ್ತ (೨೦೦ ಗಾಡಿಗಳಿಗೆ) ೨೦೦ರೂ. ಎಂದು ನಮೂದಿಸಿದ್ದೀರಿ. ಆದರೆ ಒಟ್ಟು ಮೊತ್ತ ೨೦೦೦ರೂ. ಗಳಾಗುತ್ತದೆ. ಆವಸರದಲ್ಲಿ ಆದ ಈ ಕೈತಪ್ಪನ್ನು ಸರಿಪಡಿಸಿ ಉಚಿತ ಆದೇಶವನ್ನು ಮರುಟಪಾಲಿಗೆ ದಯಮಾಡಿ ತಿಳಿಸಬೇಕೆಂದು ಕೋರುತ್ತೇವೆ. ನಿಮ್ಮ ಪತ್ರ ಬಂದ ತಕ್ಷಣ ಕ್ರಯಾದೇಶ ಪತ್ರಾನುಸಾರ ಸರಕನ್ನು ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ.

ವಂದನೆಗಳು,

ತಮ್ಮ ವಿಶ್ವಾಸಿ,
ಪಕ್ಕಾ ಲೆಕ್ಕಪ್ಪ
ಪಾಲುದಾರ
ನಿಖಿಲಾಂಡೇಶ್ವರಿ ಮತ್ತು ಕಂಪನಿ

ಬಿಕರಿ ಸಂಸ್ಥೆಗೆ ಪದಾರ್ಥಗಳನ್ನೊದಗಿಸಲು ವಿಳಂಬವಾದಾಗ ಖರೀದಿದಾರನ ಕ್ರಯಾದೇಶ ಪತ್ರಕ್ಕೆ ಬರೆದ ಉತ್ತರ
ಮಾದರಿ

ಮಹಾತ್ಮಗಾಂಧಿ ಗೃಹೋದ್ಯೋಗ ಸಂಸ್ಥೆ
(ಮಹಿಳಾಭಿವೃದ್ಧಿಗಾಗಿ ಮೀಸಲಾದ ಸಂಸ್ಥೆ)

ತಂತಿ : ‘ಗೃಹ’
ದೂರವಾಣಿ: ೪೩೫೬೭೮

೪೮, ಭೀಮವ್ವ ರಸ್ತೆ
ಹರಪನ ಹಳ್ಳಿ ತಾಲೂಕು
ಹರಿಹರೇಶ್ವರ ಜಿಲ್ಲೆ

ಪತ್ರಾಂಕ : ವಿಸಪ ೩/೮೭-೮೮                            ದಿನಾಂಕ: ೧೫ನೆಯ ಜುಲೈ, ೮೭

ಮಾಲೀಕರು
ಗೃಹಿಣಿ ಸ್ಟಾಲ್
೪ನೆಯ ಬ್ಲಾಕ್ ಜಯನಗರ
ಬೆಂಗಳೂರು-೫೬೦ ೦೧೧

ಶ್ರೀಮತಿಯವರೆ,

ಪ್ರತಿ ಸಲದಂತೆ ಈ ಬಾರಿಯೂ ನಿಮ್ಮ ಸರಕು ಆದೇಶ ಪತ್ರ ಬಂದಿದೆ. ಅದಕ್ಕಾಗಿ ಅನಂತಾನಂತ ವಂದನೆಗಳು.

“ಈ ತಿಂಗಳ ಕೊನೆಯೊಳಗೆ (೩೦-೭-೮೭) ನಾವು ಆದೇಶ ನೀಡಿರುವ ಪದಾರ್ಥಗಳನ್ನು ದಯವಿಟ್ಟು ಕಳಿಸಿ. ಏಕೆಂದರೆ ನಮ್ಮ ವ್ಯಾಪಾರ ಅಧಿಕವಾಗಿ ನಡೆಯುವುದು ತಿಂಗಳ ಮೊದಲ ವಾರದಲ್ಲೇ” ಎಂದು ದಿ.೧೫-೭-೮೭ರ ತಮ್ಮ ಪತ್ರದಲ್ಲಿ ತಿಳಿಸಿದ್ದೀರಿ. ಆದರೆ ಅನಿವಾರ್ಯ ಕಾರಣಗಳಿಂದ ಈ ಅವಧಿಯೊಳಗೆ ಈ ಬಾರಿ ಪದಾರ್ಥಗಳನ್ನು ನಿಮಗೆ ಒದಗಿಸಲು ಸಾಧ್ಯವಾಗದೆಂದು ತಿಳಿಸಲು ವಿಷಾದವಾಗುತ್ತಿದೆ.

ಕಳೆದ ವಾರ ಬಿದ್ದ ಬಾರೀ ಮಳೆಯ ಪರಿಣಾಮವಾಗಿ ನಮ್ಮ ಹಳ್ಳಿಯ ಸಂಪರ್ಕದ ಸೇತುವೆ ಕುಸಿದು ವಾಹನ ಪ್ರಯಾಣ ಸ್ಥಗಿತವಾಗಿದೆ. ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದಾಗ ಇನ್ನೆರಡು ವಾರಗಳಲ್ಲಿ ರಿಪೇರಿಯಾಗುತ್ತದೆಂದು ಅವರು ತಿಳಿಸಿದರು.

ಈ ಮಧ್ಯೆ ‘ಗೃಹಲಕ್ಷ್ಮಿ ಸೋಪುಗಳು’, ‘ವೆಂಕಜ್ಜಿಖಾರದ ಅವಲಕ್ಕಿ ಪೊಟ್ಟಣಗಳು, ಗುಂಡಮ್ಮ ಮಹಿಳಾ ಸಹಕಾರ ಸಂಘದಿಂದ ನಮಗಿನ್ನೂ ಬಂದಿಲ್ಲ. ಗುಂಡಮ್ಮ ಮಹಿಳಾ ಸಹಕಾರ ಸಂಘದ ಕಾರ‍್ಯಾಗಾರವನ್ನು ಸ್ವಂತ ಕಟ್ಟಡಕ್ಕೆ ದಿನಾಂಕ ೨೨-೭-೮೭ರಂದು ಬದಲಾಯಿಸುತ್ತಿದ್ದಾರೆ. ಇನ್ನೊಂದು ವಾರದೊಳಗೆ ಯಾವ ವ್ಯಾಪಾರ ವಹಿವಾಟೂ ನಡೆಸಲು ಸಾಧ್ಯವಾಗದು ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಮುಂದಿನ ತಿಂಗಳ ಎರಡನೆಯ ವಾರದಲ್ಲಿ ನಿಮ್ಮ ಆದೇಶದ ಸರಕನ್ನು ಕಳಿಸಲು ಸಾಧ್ಯವಾಗುತ್ತದೆ. ಅನಿರೀಕ್ಷಿತ ತೊಂದರೆಗಳಿಂದಾಗಿ ಮೊದಲ ಬಾರಿಗೆ ನಿಮ್ಮ ಆದೇಶ ಪಾಲನೆಯಲ್ಲಿ ವಿಳಂಬವಾಗುತ್ತಿದೆ. ಇದಕ್ಕಾಗಿ ಕ್ಷಮಾಪಣೆಯನ್ನು ಬೇಡುತ್ತೇವೆ. ನೀವು ಸಹಾನುಭೂತಿಯಿಂದ ನಮ್ಮ ಇಕ್ಕಟ್ಟಿನ ಪರಿಸ್ಥಿತಿಯನ್ನರಿತುಕೊಂಡು, ನಾವು ಸರಕು ರವಾನೆ ಮಾಡುವವರೆಗೂ ನೀವು ಕ್ರಯಾದೇಶವನ್ನು ಜಾರಿಯಲ್ಲಿಟ್ಟಿರುತ್ತೀರಿ ಎಂದು ನಂಬಿದ್ದೇವೆ.

ನಿಮ್ಮ ವಿಶ್ವಾಸಿ.
ಅಂಡಾಳಮ್ಮ,
ಮಾಲೀಕರು

ಪಿಸ/

ಕ್ರಯಾದೇಶವನ್ನು ರದ್ದು ಪಡಿಸಿ ಬರೆಯುವ ಪತ್ರ
ಮಾದರಿ

ಗ್ರಂಥ ಸರಸ್ವತಿ ಬುಕ್ಹೌಸ್
ಮೊಳಕಾಲ್ಮೂರು, ಬಳ್ಳಾರಿ

ತಂತಿ: ‘ಸರಸ್ವತಿ’
ದೂರವಾಣಿ: ೪೮೩೯೧೦

೬, ದರ್ಗಾರಸ್ತೆ
ಮೌಲ್ವಿ ಮೊಹಲ್ಲಾ

ದಿನಾಂಕ: ೨೦ನೆಯ ಆಗಸ್ಟ್ ೧೯೮೭

ಸುಧರ್ಮ ಸಾಹಿತ್ಯ ಭಂಡಾರ
೬, ಹಡ್ಸನ್ ರಸ್ತೆ
ಶಾಂತಿನಗರ, ಬೆಂಗಳೂರು

ಮಾನ್ಯರೆ,

ದಿನಾಂಕ ೧೨-೮-೧೯೮೭ ರಂದು ಬೇರೆ ಬೇರೆ ಶೀರ್ಷಿಕೆಗಳ ೫೦೦ ಕಾದಂಬರಿಗಳು, ೧೦೦ ಕಥಾಸಂಗ್ರಹಗಳು, ೫೦ ಕವನ ಸಂಕಲನಗಳು, ೫೦ ನಾಟಕಗಳು, ೨೦ ಜೀವನ ಚರಿತ್ರೆಗಳು ನಮಗೆ ಬೇಕು, ದಿನಾಂಕ ೨೫ರೊಳಗೆ ಕಳುಹಿಸಿಕೊಡಿ ಎಂದು ನಿಮಗೆ ನಾವು ಆದೇಶ ನೀಡಿದ್ದು ಸರಿಯಷ್ಟೇ! ಇಲ್ಲಿನ ತರುಣ ಮಂಡಲಿಯವರು ಗೃಹಶ್ರೀ ಪುಸ್ತಕ ಭಂಡಾರ ಸ್ಥಾಪನೆಗಾಗಿ ಮೇಲ್ಕಂಡ ಗ್ರಂಥಗಳನ್ನು ಸರಬರಾಜು ಮಾಡುವಂತೆ ನಮಗೆ ಆದೇಶ ನೀಡಿದ್ದರು. ಆದರೆ ಅವರು ಈಗ ಪುಸ್ತಕ ಭಂಡಾರ ಸ್ಥಾಪನೆಯನ್ನು ಬಿಟ್ಟು ಕ್ರೀಡಾ ಸಂಘವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ.

ಆದಕಾರಣ ದಯವಿಟ್ಟು ನಾವು ನಿಮಗೆ ಕಳಿಸಿದ ಪುಸ್ತಕಾದೇಶವನ್ನು ರದ್ದು ಮಾಡಬೇಕಾಗಿ ಭಿನ್ನವಿಸುತ್ತೇವೆ. ಇದರಿಂದ ನಿಮಗಾದ ತೊಂದರೆಗಾಗಿ ವಿಷಾಧಿಸುತ್ತೇವೆ.

ನಿಮ್ಮ ವಿಶ್ವಾಸಿ,
ಷರೀಫಪ್ಪ
ಮಾಲೀಕ
ಗ್ರಂಥ ಸರಸ್ವತಿ ಬುಕ್‌ಹೌಸ್

ಎಸ್‌ಕೆ/-

ಸರಕು ತಲುಪುವುದರಲ್ಲಿ ವಿಳಂಬವಾದುದರಿಂದ ಗ್ರಾಹಕ ತಾನು ನೀಡಿದ್ದ ಆದೇಶವನ್ನು ರದ್ದು ಪಡಿಸಿ ಬಿಕರಿದಾರನಿಗೆ ಬರೆಯುವ ಪತ್ರ.
ಮಾದರಿ೧೦

ನವಜೀವನ ಪ್ರೌಢಶಾಲೆ
ಸರಸ್ವತಿ ಪುರಂ, ಮೈಸೂರು

ದೂರವಾಣಿ: ೪೮೩೪೫೬

ನಮ್ಮ ಉಲ್ಲೇಖ: ನೋಪು ಆ ೬/೮೭-೮೮                  ದಿನಾಂಕ: ೧ನೆಯ ಏಪ್ರಿಲ್ ೧೯೮೭

ಬುಕ್ ಬೈಂಡಿಂಗ್ ವರ್ಕ್ಸ
ಜಯಪೇಟೆ
ಮಂಡ್ಯ ಜಿಲ್ಲೆ

ಮಾನ್ಯರೆ,

ನಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ೫೦ ರೀಮು ಬಿಳಿ ಕಾಗದ ಮತ್ತು ಗೆರೆ ಎಳೆದ ೧೦೦ ಪುಟಗಳ ೨೦೦೦ (ಎರಡು ಸಾವಿರ) ಬರವಣಿಗೆ ಪುಸ್ತಕಗಳನ್ನು ಕಳಿಸಿಕೊಡಿ ಎಂದು ನಾವು ಆದೇಶವನ್ನು ಕಳಿಸಿದ್ದೆವು. ಇದುವರೆಗೂ ನೀವು ಈ ಬಗ್ಗೆ ಏನನ್ನೂ ತಿಳಿಸಿಲ್ಲ. ಪುಸ್ತಕಗಳನ್ನು ಒದಗಿಸಲು ನಾವು ನೀಡಿದ ಅವಧಿಯೂ ಮುಗಿದಿದೆ. ಶಾಲಾ ಪ್ರಾರಂಭವಾಗುವ ವೇಳೆಗೆ ನಮಗೆ ಪುಸ್ತಕ-ಕಾಗದಗಳು ಸಿದ್ಧವಿರಲೇಬೇಕಾಗಿರುವುದರಿಂದ ನಾವು ಬೇರೆಯವರಿಗೆ ಅನಿವಾರ್ಯವಾಗಿ ಆದೇಶ ನೀಡಬೇಕಾಯಿತು. ಅತಿ ವಿಳಂಬದ ಕಾರಣ ನಾವು ನಿಮಗೆ ನೀಡಿದ್ದ ಸರಕು ಆದೇಶವನ್ನು ರದ್ದು ಮಾಡಿದ್ದೇವೆ. ಆದ್ದರಿಂದ ನೀವು ಪುಸ್ತಕಗಳನ್ನು ಕಳಿಸಬೇಡಿ. ಇದರಿಂದ ನಿಮಗಾಗುವ ತೊಂದರೆಗಾಗಿ ವಿಷಾದಿಸುತ್ತೇವೆ.

ಅಗತ್ಯಬಿದ್ದಾಗ ಸರಕು ಆದೇಶವನ್ನು ನೀಡುತ್ತೇವೆ ಎಂಬ ಭರವಸೆಯನ್ನು ಕೊಡುತ್ತೇವೆ.

ನಿಮ್ಮ ವಿಶ್ವಾಸಿ,
ರಾಜಣ್ಣ
ಮುಖ್ಯೋಪಾಧ್ಯಾಯರು

ಬದಲಿ ವಸ್ತುಗಳನ್ನು ಕಳಿಸುವುದೆ ಎಂದು ಬಿಕರಿದಾರ ಖರೀದಿದಾರನ ಕ್ರಯಾದೇಶ ಪತ್ರಕ್ಕೆ ಬರೆಯುವ ಉತ್ತರ
ಮಾದರಿ೧೧

ಸುಮಂಗಲಿ ಸುಗಂಧ ದ್ರವ್ಯ ಸಂಸ್ಥೆ
(ಮಂಗಳ ದ್ರವ್ಯ ವಸ್ತುಗಳ ಮಾರಾಟಗಾರರು)

ತಂತಿ: ಸುದ್ರವ್ಯ
ದೂರವಾಣಿ: ೪೩೨೫೬೯

೯, ಸುವಾಸಿನಿ ರಸ್ತೆ
ಸಹಸ್ರನಾರೀಪುರ
ಇಂದ್ರಪ್ರಸ್ಥ ಜಿಲ್ಲೆ

ದಿನಾಂಕ: ೨೦ ನೆಯ ಆಗಸ್ಟ್ ೧೯೮೭

ವ್ಯವಸ್ಥಾಪಕರು
ರುಕ್ಮಿಣಿ ಸ್ಟೋರ್ಸ್
ಮಂಗಳಪೇಟೆ, ಮಂಗಳೂರು

ಮಾನ್ಯರೆ,

ದಿನಾಂಕ ೧೨ನೆಯ ಆಗಸ್ಟ್ ೧೯೮೭ ರಂದು ತಾವು ಕಳಿಸಿದ ಆದೇಶ ಪತ್ರ ತಲುಪಿತು. ವಂದನೆಗಳು.

ನೀವು ಕೇಳಿದ ೧೦,೦೦೦ (ಹತ್ತು ಸಾವಿರ) ‘ಆರುಂಧತಿ’ ಬಳೆಗಳು, ೨೦೦೦(ಎರಡು ಸಾವಿರ) ‘ಸಾವಿತ್ರಿ’ ಬಳೆಗಳು, ಸಣ್ಣ ಸೈಜಿನ ದಮಯಂತಿ ಕುಂಕುಮದ ೨೦೦ ಡಬ್ಬಿಗಳು ದಾಸ್ತಾನಿವೆ. ಆದರೆ ಪ್ರೇಮ ಲೋಕ ಬಳೆಗಳೂ ಮುತ್ತೈದೆ ಕುಂಕುಮದ ಡಬ್ಬಿಗಳೂ ದಾಸ್ತಾನಿಲ್ಲ. ಇವುಗಳ ಬದಲಿಗೆ ನಮ್ಮಲ್ಲಿ ದಾಸ್ತಾನಿರುವ ತಾರೆ ಬಳೆಗಳನ್ನೂ ಸುಮಂಗಲಿ ಕುಂಕುಮದ ಡಬ್ಬಿಗಳನ್ನೂ ಅವುಗಳ ಬದಲಿಗೆ ಕಳಿಸಿಕೊಡುತ್ತೇವೆ. ಬೆಲೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ.

ನೀವು ಆಪೇಕ್ಷಿಸಿದರೆ ಮಾತ್ರ ಈ ಬದಲಿ ವಸ್ತುಗಳನ್ನೂ ನೀವು ಆದೇಶ ನೀಡಿರುವ ಮತ್ತು ನಮ್ಮಲ್ಲಿ ದಾಸ್ತಾನಿರುವ ಉಳಿದ ವಸ್ತುಗಳನ್ನೂ ಕಳಿಸಿಕೊಡುತ್ತೇವೆ. ಆದಷ್ಟು ಶೀಘ್ರವಾಗಿ ಪತ್ರ ಬರೆಯಬೇಕೆಂದು ಕೋರುತ್ತೇವೆ.

ನಿಮಗೆ ಪ್ರೇಮಲೋಕ ಬಳೆಗಳೂ ಮುತ್ತೈದೆ ಕುಂಕುಮದ ಡಬ್ಬಿಗಳೂ ಈಗಲೇ ಬೇಕಾಗಿದ್ದರೆ ಜಯಮಾಲಿನಿ ಟ್ರೇಡರ್ಸ್ (ಸುಹಾಸಿನಿ ರಸ್ತೆ, ನೂಪುರ ನಗರಿ, ಚಿತ್ರದುರ್ಗ) ಅವರನ್ನು ಸಂಪರ್ಕಿಸಬೇಕಾಗಿ ಕೋರುತ್ತೇವೆ.

ನಿಮ್ಮ ವಿಶ್ವಾಸಿ,
ಸುಹಾಸರಾವ್
ಮಾಲೀಕ

ಸಂ.