ಸ್ವರೂಪ, ಮಹತ್ವ: ಇಂದು ವಾಣಿಜ್ಯ ಕ್ಷೇತ್ರ ಕೇವಲ ಸಂಸ್ಥೆ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಮಾರುಕಟ್ಟೆ ಒಂದರೊಳಗೆ ನಡೆಯುವ ವ್ಯವಹಾರವಲ್ಲ. ಆದರೆ ಜಗತ್ತಿನ ಎಲ್ಲೆಡೆ ವ್ಯಾಪಿಸಿರುವ ವ್ಯವಹಾರವಾಗಿದೆ.

ಜಗತ್ತಿನ ನಾನಾ ಭಾಗಗಳಲ್ಲಿ ವಿವಿಧ ರೀತಿಯ ಸರಕುಗಳು ತಯಾರಾಗಿ ನಾನಾ ಜನರ ಕೈಸೇರುತ್ತೇವೆ, ಸರಕನ್ನು ಅನೇಕ ಜನರಿಗೆ ಮಾರುತ್ತಾರೆ. ದೇಶ-ಕಾಲಸ್ಥಿತಿ ವ್ಯಾಪಾರಿಗಳ ನಡುವೆ ಅಂತರವನ್ನುಂಟು ಮಾಡಿರುತ್ತದೆ.

ಆಧುನಿಕ ಜಗತ್ತಿನ ಸಂಪರ್ಕ ಮಾಧ್ಯಮಗಳು ಮತ್ತು ಸಾಗಣೆ ವ್ಯವಸ್ಥೇ ವ್ಯಕ್ತಿ ಕುಳಿತ ಕಡೆ ವ್ಯಾಪಾರ ಮಾಡುವಂತೆ ಅನುಕೂಲ ಕಲ್ಪಿಸಿಕೊಟ್ಟಿವೆ. ವ್ಯಕ್ತಿಯೊಬ್ಬನ ಮುಖದರ್ಶನವಿಲ್ಲದೆ ಪತ್ರಗಳ ಹಾಗೂ ಇತರ ಸಂಪರ್ಕ ಮಾಧ್ಯಮಗಳ ಮೂಲಕ ವ್ಯವಹರಿಸಬಹುದಾಗಿದೆ.

ವ್ಯಾಪಾರದಲ್ಲಿ ನಂಬಿಕೆ ಮುಖ್ಯ, ನಂಬಿಕೆ, ಪರಿಚಯ, ಆತ್ಮೀಯತೆ, ಅನುಭವ, ತಿಳಿವಳಿಕೆ ಮುಂತಾದವುಗಳಿಂದ ಬರುತ್ತದೆ.

ಮಾಲೀಕ ಮತ್ತು ಗ್ರಾಹಕರಿಬ್ಬರೂ ಹತ್ತಿರವಿದ್ದಾಗ ಪರಸ್ಪರ ಸಂಧಿಸಲು ಸಾಧ್ಯವಿದ್ದಾಗ ಪರಾಮರ್ಶನದ ಅಗತ್ಯ ಬೀಳುವುದಿಲ್ಲ. ಪರಸ್ಪರ ಪರಿಚಯ, ಉಭಯ ಕುಶಲೋಪರಿ ಸಾಕು. ಇವನು ಸರಕು ಕೊಟ್ಟರಾಯಿತು. ಅವನು ಕಾಸು ಕೊಟ್ಟರಾಯಿತು; ಕೊಡದಿದ್ದರೆ ಕೇಳಲು ಇವನಿಗೆ ಅವನು ಸಿಗುತ್ತಾನೆ; ಅವನಿಗೆ ಇವನು ಸಿಗುತ್ತಾನೆ. ಆದರೆ ದೂರದಲ್ಲಿದ್ದು ವ್ಯಾಪಾರ ಮಾಡುವವರಿಗೆ ಈ ಅನುಕೂಲವಿಲ್ಲ. ಅವರು ಹೊಸದಾಗಿ ವ್ಯಾಪಾರ ಮಾಡಲು ತೊಡಗುವ ಗ್ರಾಹಕನ ಆದೇಶಗಳನ್ನು ಮನ್ನಿಸಲು, ಸಾಲ ಸೌಲಭ್ಯವನ್ನು ನೀಡಲು ಪರಾಮರ್ಶನದ ಅಗತ್ಯ ಬೀಳುತ್ತದೆ. ಪರಾಮರ್ಶನ ಎಂದರೆ ತಾನು ಬಲ್ಲವರೂ ಅವನನ್ನು ಬಲ್ಲವರೂ ಆದವರಿಂದ ಪತ್ರದ ಮೂಲಕ ವಿವರ ತಿಳಿದು ನಂಬಿಕೆ ತಾಳುತ್ತಾರೆ; ಸಂಸ್ಥೆ, ಬ್ಯಾಂಕುಗಳನ್ನು ವಿಚಾರಿಸಿ ತಿಳಿಯುತ್ತಾರೆ. ಗ್ರಾಹಕನನ್ನೇ ಕೇಳಿ ಅವನು ನೀಡುವ ವಿಳಾಸಗಳಿಗೆ ಬರೆದು ವಿಚಾರಿಸಿಕೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲಿ ಬರೆಯುವ ಪತ್ರಗಳನ್ನು ಪರಾಮರ್ಶನ ಪತ್ರಗಳೆನ್ನುತ್ತಾರೆ. ಇವನ್ನು ಕೆಲವರು ಉಲ್ಲೇಖ ಪತ್ರಗಳೆಂದೂ ಕರೆಯುವರು.

ಗ್ರಾಹಕನ ಸ್ಥಿತಿಗತಿ, ಆರ್ಥಿಕ ಸಾಮರ್ಥ್ಯ ಬಂಡವಾಳಗಳ ಬಗ್ಗೆ ಮಾಹಿತಿಯನ್ನು ಎರಡು ಬಗೆಗಳಲ್ಲಿ ಸಂಗ್ರಹಿಸಬಹುದು. ಮೊದಲನೆಯದು ಆಂತರಿಕ ಮೂಲ, ತನ್ನ ಸಂಸ್ಥೆಯೊಂದಿಗೆ ಖಾಯಂ ಗ್ರಾಹಕನಾಗಿ ಇದುವರೆಗೆ ನಡೆಸಿದ ವ್ಯವಹಾರ ಪರಿಶೀಲನೆ ಅಥವಾ ತನ್ನ ಮಾರಾಟ ಪ್ರತಿನಿಧಿಯ ಮೂಲಕ ಈ ಗ್ರಾಹಕನ ವ್ಯಾಪಾರ ಸಾಮರ್ಥ್ಯ, ಬಂಡವಾಳ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು.

ಎರಡನೆಯ ಮೂಲವೆಂದರೆ ಗ್ರಾಹಕನೇ ನೀಡುವ ವಿಳಾಸಗಳಿಗೆ ಪತ್ರ ಬರೆದು ತಿಳಿದು ಕೊಳ್ಳುವುದು; ಇದೇ ಬಹಳ ಮುಖ್ಯವಾದುದು. ವಿದೇಶಗಳಲ್ಲಿ ವ್ಯಾಪಾರಿ ಸಂಘ ಸಂಸ್ಥೆಗಳ ಬಗ್ಗೆ ಎಲ್ಲ ಬಗೆಯ ವಿವರಗಳನ್ನು ನೀಡುವ ಸಂಸ್ಥೆಗಳು, ಪತ್ರಿಕೆ-ಪ್ರಕಟನೆ ಗ್ರಂಥಗಳು ತಿಳಿಸುತ್ತವೆ. ನಮ್ಮಲ್ಲಿ ಅಷ್ಟರ ಮಟ್ಟಿಗೆ ಪ್ರಗತಿಯಾಗಿಲ್ಲ.

ಪರಾಮರ್ಶನ ಪತ್ರವನ್ನು ಬರೆದಾಗ ಕೆಲವರು ಉತ್ತರಿಸದೆ ತಟಸ್ಥರಾಗಿ ಬಿಡುತ್ತಾರೆ. ನಮಗೇಕೆ ಈ ಉಸಾಬರಿ ಎಂಬ ಧೋರಣೆಯನ್ನು ತಾಳುವುದು ಅಷ್ಟು ಉಚಿತವಲ್ಲ. ಮತ್ತೆ ಕೆಲವರು ನಿಧಾನವಾಗಿ ಉತ್ತರಿಸುತ್ತಾರೆ. ಇನ್ನೂ ಕೆಲವರು ನಿಷೇಧಾತ್ಮಕವಾಗಿ ಉತ್ತರ ನೀಡುತ್ತಾರೆ. ಈ ದೃಷ್ಟಿಯಿಂದ ಪರಾಮರ್ಶನ ಪತ್ರಗಳನ್ನು ಅನುಕೂಲ ಪರಾಮರ್ಶನ ಪತ್ರಗಳು ಮತ್ತು ಪ್ರತಿಕೂಲ ಪರಾಮರ್ಶನ ಪತ್ರಗಳು ಎಂದು ವರ್ಗೀಕರಿಸಬಹುದು.

ಪರಾಮರ್ಶನವನ್ನು ಕೇಳಲು ಒದಗುವ ಸಂದರ್ಭಗಳು: ಪರಾಮರ್ಶನ ಪತ್ರ ಬರೆಯುವ ಸಂದರ್ಭಗಳು ಹಲವಾರಿವೆ. ಮುಖ್ಯವಾಗಿ ಹೊಸ ಗ್ರಾಹಕ ಸಂಸ್ಥೆ ಸರಕು ಆದೇಶವನ್ನು ಕಳಿಸಿ ಸಾಲ ಸೌಲಭ್ಯವನ್ನು ಕೇಳಿದಾಗ ಆ ಸಂಸ್ಥೆಯ ಆರ್ಥಿಕ ಸಾಮರ್ಥ್ಯ, ಸಾಲ ತೀರಿಕೆ, ಅನುಭವ ಮುಂತಾದವುಗಳ ಬಗ್ಗೆ ಇತರ ಸಂಸ್ಥೆಗಳಿಂದ ಪರಾಮರ್ಶನ ಪಡೆಯಲು ಪತ್ರ ಬರೆಯುತ್ತಾರೆ. ಉದ್ಯೋಗಿಗಳಿಗೆ ಅರ್ಜಿ ಹಾಕಿದಾಗ ನೇಮಕಾದೇಶಕ್ಕೆ ಮುನ್ನು ಅರ್ಜಿದಾರನ ಬಗ್ಗೆ ಪರಾಮರ್ಶನ ನಡೆಸುವುದೂ ಉಂಟು.

ಪರಾಮರ್ಶನದಿಂದ ಗ್ರಾಹಕನು ಎಷ್ಟರಮಟ್ಟಿಗೆ ನಂಬಿಕೆಗೆ ಅರ್ಹ ಎಂಬುದು ತಿಲಿಯುವುದರಿಂದ ಮುಂದೆ ಸಂಭವಿಸಬೇಕಾದ ಕಷ್ಟ-ನಷ್ಟಗಳು ತಪ್ಪುತ್ತವೆ; ಅಥವಾ ಅರ್ಹತೆಗೆ ತಕ್ಕಂತೆ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಖರೀದಿದಾರನ ಸಾಲ ತೀರಿಕೆ ಶಕ್ತಿ ಅಧಿಕವಾಗಿದ್ದರೆ ಬಿಕರಿದಾರ ಅಧಿಕ ಸಾಲ ನೀಡುವುದರಿಂದ ಅವನ ವ್ಯಾಪಾರ ವಿಸ್ತೃತಗೊಂಡು ಲಾಭವೂ ಅಧಿಕಗೊಳ್ಳುತ್ತದೆ.

ಪರಾಮರ್ಶನದಿಂದ ಮುಖ್ಯವಾಗಿ ತಿಳಿಯಬೇಕಾದ ಸಂಗತಿಗಳೆಂದರೆ: ಗ್ರಾಹಕನಿಗೆ ಬಂಡವಾಳ ಸಾಮರ್ಥ್ಯವೆಷ್ಟಿದೆ? ಇಲ್ಲಿ ಬಂಡವಾಳವೆಂದರೆ ಅವನು ವ್ಯಾಪಾರದಲ್ಲಿ ಹೂಡಿದ ಬಂಡವಾಳದ ಮೊತ್ತವಲ್ಲ, ಅವನ ಬಂಡವಾಳದ ಮೇಲಿರುವ ಸಾಲವನ್ನು ಕಳೆದು ಉಳಿದ ಬಂಡವಾಳ ಶಕ್ತಿ ಎಷ್ಟು ಎಂಬುದು ಮುಖ್ಯ; ವ್ಯವಹಾರ ಸಾಮರ್ಥ್ಯ ಇನ್ನೊಂದು ಅಂಶ. ಸಾಲ ತೀರಿಸಬಲ್ಲ ಎಂಬುದಷ್ಟೇ ಮುಖ್ಯವಲ್ಲ; ಎಷ್ಟರಮಟ್ಟಿಗೆ, ಯಾವ ಪ್ರಮಾಣದಲ್ಲಿ, ಎಷ್ಟು ಬೇಗ ತೀರಿಸಬಲ್ಲ ಎಂಬುದು ಮುಖು. ಇವೆಲ್ಲಕ್ಕಿಂತ ಮುಖ್ಯವಾದುದು ಸಕಾಲದಲ್ಲಿ ಶೀಘ್ರವಾಗಿ ಸಾಲ ತೀರಿಸುವ ಮನೋಭಾವ-ವಚನ ಪರಿಪಾಲನಾಗುಣ ಆತನಲ್ಲಿದೆಯೇ ಎಂಬುದೂ ಮುಖು. ಆಧ್ದರಿಂದ ಸಾಲಗಾರನ ಬಗ್ಗೆ ಅನೇಕ ಸಂಗತಿಗಳನ್ನು ತಿಳಿಸಿದ ನಂತರ ಸಾಲಿಗ ವ್ಯವಹರಿಸಬೇಕಾಗುತ್ತದೆ. ಇಂತಹ ಮಹತ್ವ ಪೂರ್ಣವಾದ ವಿವರಗಳನ್ನು ಕುರಿತು ವಿವರಣೆಯನ್ನು ನೀಡುವಂಥ ಸಾಧನಗಳೇ ಪರಾಮರ್ಶನ ಪತ್ರಗಳು.

ಮುಖ್ಯ ಲಕ್ಷಣಗಳು: ಪರಾಮರ್ಶನ ಪತ್ರಗಳನ್ನು ಕೇಳಿ ಸಂಸ್ಥೆಯೊಂದು ಪತ್ರ ಬರೆದಾಗ ಆದಷ್ಟು ಬೇಗನೆ ಉತ್ತರಿಸುವುದು ವಾಣಿಜ್ಯ ಧರ್ಮ. ಏಕೆಂದರೆ ಪರಾಮರ್ಶನ ಪತ್ರ ಬರುವವರೆಗೆ ಮಾರಾಟ ಸಂಸ್ಥೆ ಸಂಬಂಧಪಟ್ಟ ಗ್ರಾಹಕನೊಂದಿಗೆ ವ್ಯವಹಾರ ಪ್ರಾರಂಭಿಸುವುದಾಗಲೀ ಮುಂದುವರಿಸುವುದಾಗಲೀ ಸಾಧ್ಯವಾಗುವುದಿಲ್ಲ; ನಿಧಾನವಾಗಿ ಪರಾಮರ್ಶನ ಪತ್ರ ಬರೆದರೆ ಅಥವಾ ಬರೆಯದೇ ಇದ್ದರೆ, ಇಲ್ಲವೇ ಎಂದೋ ಒಂದು ದಿನ ಉತ್ತರಿಸಿದರೆ ಮಾರಾಟ ಸಂಸ್ಥೆಗೆ ನಷ್ಟವಾಗುವ ಸಾಧ್ಯತೆಗಳಿರುತ್ತವೆ. ಅಷ್ಟೇ ಅಲ್ಲ, ಆತಂಕವುಂಟಾಗುವುದು ಸಹಜ; ಗ್ರಾಹಕ ಸಂಸ್ಥೆಯ ಬಗ್ಗೆ ಸಂದೇಹವೂ ಬರಬಹುದು.

ಪರಾಮರ್ಶನ ಪತ್ರವನ್ನು ಸೌಜನ್ಯದಿಂದ ಬರೆಯಬೇಕು. ಏಕೆಂದರೆ ಹಲವು ವೇಳೆ ಪ್ರತಿಕೂಲ ಪರಾಮರ್ಶನ ನೀಡಬೇಕಾಗಿ ಬರಬಹುದು. ಆಗ ಒರಟಾಗಿ ಗ್ರಾಹಕ ಸಂಸ್ಥೆಗೆ ಕಷ್ಟ-ನಷ್ಟಗಳುಂಟಾಗಬಹುದು; ಅಥವಾ ಗ್ರಾಹಕ ಸಂಸ್ಥೆ ಅಭಿಪ್ರಾಯ ನೀಡಿದವರ ಮೇಲೆ ತಿರುಗಿ ಬೀಳಬಹುದು; ವೈಯಕ್ತಿಕ ರಾಗದ್ವೇಷಗಳು ಉಂಟಾಗುವ ರೀತಿಯಲ್ಲಿ ಪರಾಮರ್ಶನ ಪತ್ರವನ್ನು ಬರೆಯಬಾರದು; ವಾಸ್ತವಿಕ ಸಂಗತಿಗಳನ್ನು ಸರಳವಾಗಿ ತಿಳಿಸಿದರೆ ಸಾಕು; ಸತ್ಯಕ್ಕೆ ಅಪಚಾರವಾಗದಂತೆ ವಿನಯ ಪೂರ್ವಕವಾಗಿ, ಖಚಿತಾಭಿಪ್ರಾಯವನ್ನು ಚಿಕ್ಕದಾಗಿ ಚೊಕ್ಕವಾಗಿ ಪರಾಮರ್ಶನ ಪತ್ರದಲ್ಲಿ ಮೂಡಿಸಿದರೆ ಸಾಕು. ಸಂಸ್ಥೆಯ ಬಗ್ಗೆ ಪ್ರತಿಕೂಲ ಅಭಿಪ್ರಾಯವನ್ನು ನೀಡುವಾಗ ಸಾಕಷ್ಟು ಎಚ್ಚರ ವಹಿಸಬೇಕು. ಯಾರ ಆತ್ಮ ಗೌರವಕ್ಕೂ ಧಕ್ಕೆ ಬರಬಾರದು ಮತ್ತು ಪರಾಮರ್ಶನ ಕೇಳುವವರೂ, ಪರಾಮರ್ಶನ ನೀಡುವವರೂ ವಿಷಯವನ್ನು ಗೋಪ್ಯವಾಗಿಟ್ಟಿರಬೇಕಾದದ್ದು ವಾಣಿಜ್ಯ ನೀತಿಯಾಗಿದೆ. ಪರಾಮರ್ಶನ ಪತ್ರ ಬರೆಯುವಾಗ ವಿಷಯ ಗೋಪ್ಯವಾಗಿರಲಿ ಮತ್ತು ಇದು ಅಭಿಪ್ರಾಯವೇ ಹೊರತು ಅವರ ಪರವಾಗಿ ಜವಾಬ್ದಾರಿ ಹೊರಲು ಬರೆದ ಪತ್ರವಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಪರಾಮರ್ಶನಕ್ಕೆ ಬರೆಯುವ ಉತ್ತರ ಪತ್ರವು ಮಾಲೀಕ ಗ್ರಾಹಕರ ನಡುವಣ ಸಂಬಂಧವನ್ನು ಬೆಳೆಸುವ ಇಲ್ಲವೇ ಕೊನೆಗಾಣಿಸುವ ಸಾಧನವಾಗಿರುತ್ತದೆ. ಏಕೆಂದರೆ ಪರಾಮರ್ಶನ ಪತ್ರದ ಅಭಿಪ್ರಾಯಗಳನ್ನು ಆಧರಿಸಿ ಮಾಲೀಕ ಗ್ರಾಹಕನ ಬಗ್ಗೆ ತೀರ್ಮಾನವನ್ನು ಕೈಗೊಳ್ಳುತ್ತಾನೆ.

ಪರಾಮರ್ಶನ ಪತ್ರಗಳು ಬಂದಾಗ ಅನುಕೂಲ ಮತ್ತು ಅನಾನುಕೂಲ (ಪ್ರತಿಕೂಲ) ಪರಾಮರ್ಶನಗಳೆರಡೂ ಬಂದಲ್ಲಿ ತೌಲಸಿಕ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು ಅಭಿಪ್ರಾಯಗಳನ್ನು ಗಮನಿಸುವುದರ ಜೊತೆಗೆ ಅಭಿಪ್ರಾಯ ಸೂಚಿಸಿದ ಸಂಸ್ಥೆಗಳ ಹಿರಿಮೆ-ಗರಿಮೆಗಳನ್ನೂ ಗಮನಿಸಬೇಕು. ಅಗತ್ಯ ಕಂಡು ಬಂದರೆ ಮತ್ತೆ ಕೆಲವು ಮಂದಿಗೆ ಪರಾಮರ್ಶನವನ್ನು ಕೋರಿ ಪತ್ರ ಬರೆಯಬಹುದು.

ಪರಾಮರ್ಶನ ಪತ್ರವನ್ನು ಕೇವಲ ಒಬ್ಬ ವ್ಯಕ್ತಿಗೆ ಬರೆಯುವುದಿಲ್ಲ. ಕನಿಷ್ಠ ಪಕ್ಷ ಇಬ್ಬರು ಮೂವರಿಗಾದರೂ ಬರೆಯಬೇಕು; ಬರೆಯುವಾಗ ಅವರಿಂದ ಉತ್ತರ ಪಡೆಯಲು ಸಾಕಷ್ಟು ಅಂಚೆ ಚೀಟಿಗಳನ್ನು ಇಟ್ಟಿರಬೇಕು ಅಥವಾ ಸ್ವವಿಳಾಸ ಅಂಚೆ ಪತ್ರವಿಡುವುದು ಸೌಜನ್ಯದ ಸಂಗತಿಯೂ ಹೌದು, ಅಗತ್ಯದ ಅಂಶವೂ ಹೌದು.

ಪ್ರತಿಕೂಲ ಪರಾಮರ್ಶನ ಪತ್ರವನ್ನು ಬರೆಯುವಾಗ ಸಾಕಷ್ಟು ಎಚ್ಚರ ವಹಿಸುವುದರ ಜತೆಗೆ ವ್ಯಾಪಾರ ಸಂಸ್ಥೆಯ ಮಾಲೀಕ ಅಥವಾ ಪ್ರಧಾನ ವ್ಯಕ್ತಿಯ ಹೆಸರಿಗೇ ಕಳಿಸುವುದು ಒಳ್ಳೆಯದು. ಏಕೆಂದರೆ ಇಂಥ ವಿಷಯಗಳು ಆದಷ್ಟು ಗೋಪ್ಯವಾಗಿರಬೇಕು.

ಪರಾಮರ್ಶನ ಪತ್ರಗಳನ್ನು ಬರೆಯುವಾಗ ನಾವು ಇನ್ನೊಬ್ಬರಿಗೆ ಉಪಕರಿಸುತ್ತಿದ್ದೇವೆ ಎಂಬ ಭಾವನೆ ತಾಳಬಾರದು, ಮತ್ತು ಆ ಧಾಟಿಯಲ್ಲಿ ಉತ್ತರಿಸಬಾರದು. ಏಕೆಂದರೆ ನಾಳೆ ನಾವೂ ಸಹ ಅದೇ ರೀತಿ ಹೊಸ ಗ್ರಾಹಕರ ಬಗ್ಗೆ ತಿಳಿಯಲು ಆ ಸಂಸ್ಥೆಗೆ ಪರಾಮರ್ಶನಕ್ಕಾಗಿ ಪತ್ರ ಬರೆಯಬೇಕಾಗಿ ಬರಬಹುದು. ಆದ್ದರಿಂದ ಪರಾಮರ್ಶನ ಪತ್ರ ವ್ಯವಹಾರ ಪರಸ್ಪರ ಸಹಕಾರದ ವಾಣಿಜ್ಯ ನೀತಿಗೆ ನಿದರ್ಶನವೆನ್ನಬಹುದು.

ವರ್ಗೀಕರಣ: ಪರಾಮರ್ಶನ ಪತ್ರ ವ್ಯವಹಾರದಲ್ಲಿ ಹಲವಾರು ಬಗೆಯ ಪತ್ರಗಳನ್ನು ಕಾಣಬಹುದು: ಪರಾಮರ್ಶನ ವಿಳಾಸಗಳನ್ನು ಕೇಳುವ ಪತ್ರಗಳು *೧; ಪರಾಮರ್ಶಕರ ವಿಳಾಸಗಳನ್ನು ತಿಳಿಸಿ ಬರೆಯುವ ಪತ್ರಗಳು *೨; ಪರಾಮರ್ಶಕರಿಗೆ ಬರೆಯುವ ಪತ್ರಗಳು *೩; ಪರಾಮರ್ಶಕರು ಉತ್ತರಿಸುವ ಪತ್ರಗಳು ಎಂದು ಅದನ್ನು ನಾಲ್ಕು ಭಾಗ ಮಾಡಬಹುದು. ಈ ಪೈಕಿ ಪರಾಮರ್ಶಕರು ಉತ್ತರಿಸುವ ಪತ್ರಗಳ ಉತ್ತರದ ರೀತಿಯನ್ನು ಅನುಸರಿಸಿ ಮೂರು ಬಗೆಯ ಪರಾಮರ್ಶನ ಪತ್ರಗಳು ಎಂದು ವಿಂಗಡಿಸಬಹುದು; ಮೊದಲನೆಯದಾಗಿ ಅನುಕೂಲ ಪರಾಮರ್ಶನ ಉತ್ತರ ಪತ್ರಗಳು, ಎರಡನೆಯದಾಗಿ ಅನನುಕೂಲ ಪರಾಮರ್ಶನ ಉತ್ತರ ಪತ್ರಗಳು, ಮೂರನೆಯದಾಗಿ ಪರಾಮರ್ಶನ ಉತ್ತರ ನಿರಾಕರಣ ಪತ್ರಗಳು:

) ಅನುಕೂಲ ಪರಾಮರ್ಶನ ಪತ್ರ

ಅನುಕೂಲಕರ ಪರಾಮರ್ಶನ ಪತ್ರಗಳು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತವೆ. ಏಕೆಂದರೆ ಪರಾಮರ್ಶಕರ ವಿಳಾಸಗಳನ್ನು ಗ್ರಾಹಕರು ನೀಡುವಾಗ ತಮ್ಮ ಹಿತೈಷಿಗಳಾದ, ತಾವು ವ್ಯವಹರಿಸುತ್ತಿರುವ ಪರಿಚಯಸ್ಥ ಸಂಸ್ಥೆಗಳು- ವ್ಯಕ್ತಿಗಳ ವಿಳಾಸಗಳನ್ನೇ ಕೊಟ್ಟಿರುತ್ತಾರೆ. ಅನುಕೂಲ ಪರಾಮರ್ಶನ ಪತ್ರಗಳು ಬರೆಯುವ ತಮಗೆ ಪರಿಚಯವಿರುವ, ತಾವು ವ್ಯವಹರಿಸುತ್ತಿರುವ ಗ್ರಾಹಕ ಸಂಸ್ಥೆ ಬಗ್ಗೆ ಪರಾಮರ್ಶನ ಕೇಳಿದಾಗ ಗ್ರಾಹಕ ಮತ್ತು ತಮ್ಮ ನಡುವೆ ಎಷ್ಟು ವರ್ಷಗಳ ಸಂಬಂಧವಿದೆ? ಸಾಲ ತೀರಿಸುವುದರಲ್ಲಿ ಅವರಿಗಿರುವ ಪ್ರಾಮಾಣಿಕತೆ, ಅವರ ವ್ಯಕ್ತಿತ್ವದ ಬಗ್ಗೆ ಸದ್ಭಾವನೆ ಇವೇ ಮೊದಲಾದ ಸಂಗತಿಗಳನ್ನು ತಿಳಿಸಿ. ಇದು ಅಭಿಪ್ರಾಯವೇ ಹೊರತು, ಅವರ ಪರವಾಗಿ ನೀಡಿದ ಹೊಣೆ ಹೊರುವ ಉತ್ತರವಲ್ಲವೆಂದು ಸ್ಪಷ್ಟಪಡಿಸಬೇಕು *೪.

) ಅನನುಕೂಲ (ಪ್ರತಿಕೂಲ) ಪರಾಮರ್ಶನ ಪತ್ರ

ವ್ಯಾಪಾರಿಯೊಬ್ಬರು ಇನ್ನೊಬ್ಬ ವ್ಯಾಪಾರಿಯ ಬಗ್ಗೆ ಅಭಿಪ್ರಾಯ ಕೋರಿದ ಸಂಸ್ಥೆಗೆ ಸದಭಿಪ್ರಾಯ ತಿಳಿಸಿ ಬರೆದ ಪತ್ರ ಅನುಕೂಲ ಪರಾಮರ್ಶನ ಪತ್ರವಾಧರೆ, ನಕಾರಾತ್ಮಕವಾಗಿ ಉತ್ತರಿಸುವ ಪತ್ರಗಳನ್ನು ಅನನುಕೂಲ ಅಥವಾ ಪ್ರತಿಕೂಲ ಪರಾಮರ್ಶನ ಪತ್ರಗಳೆನ್ನುವರು. ಕೆಲವೊಮ್ಮೆ ವ್ಯಾಪಾರಿಗಳು ಸಕಾರಾತ್ಮಕವಾಗಿ ಉತ್ತರಿಸಲು ಸಾಧ್ಯವಾಗದಿರಬಹುದು; ಅಂತಹ ಸಂದರ್ಭಗಳಲ್ಲಿ ನಕಾರಾತ್ಮಕವಾಗಿ ಉತ್ತರ ನೀಡುವುದು ಅನಿವಾರ್ಯವಾಗಬಹುದು.

ಪ್ರತಿಕೂಲ ಪರಾಮರ್ಶನ ಪತ್ರಗಳನ್ನು ತುಂಬ ಎಚ್ಚರಿಕೆಯಿಂದ ಬರೆಯಬೇಕು. ಅದರಲ್ಲೂ ಸಾಲಸೌಲಭ್ಯವನ್ನು ಅಪೇಕ್ಷಿಸಿದ ಗ್ರಾಹಕನ ಅರ್ಥಿಕಾನುಕೂಲದ ಬಗ್ಗೆ ಮಾಹಿತಿಯನ್ನು ನೀಡುವಾಗ ತುಂಬ ಜಾಗರೂಕತೆಯಿಂದರಬೇಕು. ಸಾಲದ ಪ್ರಮಾಣ ವಸೂಲಾತಿಯಲ್ಲಿ ಉಂಟಾದ ಅನುಭವಗಳು, ಸಾಲ ವಾಪಸಾತಿ ವಿಧಾನ ಮೊದಲಾದ ಅಂಶಗಳ ಬಗ್ಗೆ ವ್ಯಕ್ತಿತ್ವಕ್ಕೆ ಧಕ್ಕೆಯೊದಗದಂತೆ ಮಾಹಿತಿ ನೀಡಬೇಕು. ವ್ಯಕ್ತಿಯ ಪೂರ್ಣಸ್ಥಿತಿಗಿಂತ ಈಗಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಾಮರ್ಶನ ಪತ್ರವನ್ನು ಬರೆಯಬೇಕಾಗುತ್ತದೆ; ವ್ಯವಹಾರದ ಕಾಲದಲ್ಲಿ ಕಂಡು ಬಂದ ಸೌಜನ್ಯರಹಿತ ವರ್ತನೆಗಳು, ನಿರ್ಲಕ್ಷ್ಯ, ಮನೋಭಾವ, ಸಾಲ ತೀರಿಕೆಯ ಅಸಾಮರ್ಥ್ಯ ಮುಂತಾದವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಂಥ ಸಂದರ್ಭಗಳಲ್ಲಿ ಒಳ್ಳೆಯ ಅಂಶಗಳಿದ್ದಾಗ ಅವನ್ನು ಉಲ್ಲೇಖಿಸಲು ಮರೆಯಬಾರದು. ನಿಷ್ಠೂರ ನಮಗೇಕೆ? ನಾವೇಕೆ ಕೆಟ್ಟವರಾಗಬೇಕು? ಎಂಬ ಭಾವನೆ ತಾಳದೆ ಪ್ರಾಮಾಣಿಕತೆಯ ಅಂಶಗಳನ್ನೂ ನಿರೂಪಿಸಬೇಕು *೫. ಅನನುಕೂಲ ಪರಾಮರ್ಶನ ನೀಡುವಾಗ ಕೆಲವಂಶಗಳನ್ನು ತಿಳಿಸಿದರೆ, ಅದು ಮಾರಾಟ ಸಂಸ್ಥೆಗೆ ಉಪಯುಕ್ತವೆನಿಸುತ್ತದೆ. ದೀರ್ಘಾವಧಿ ಸಾಲವನ್ನು ಆತನಿಗೆ ನೀಡಬಹುದೇ? ಸಾಲದ ಮೊತ್ತ ಎಷ್ಟನ್ನು ಮೀರಬಾರದು? ಎಂಬ ವಿವರ; ತಮಗೆ ಸಾಲವನ್ನು ಹಿಂದಿರುಗಿಸಿದ ವಿಧಾನ, ಸಾಲ ಮಾಡಿದ ಸಂದರ್ಭಗಳು ಇವೇ ಮುಂತಾದವನ್ನೂ ತಿಳಿಸುವುದು ಉಪಯುಕ್ತ ಹಾಗೂ ಸೂಕ್ತ.

) ಪರಾಮರ್ಶನ ಉತ್ತರ ನಿರಾಕರಣ ಪತ್ರ

ಕೆಲವೊಮ್ಮೆ ವ್ಯಾಪಾರಿಗಳು ಅನನುಕೂಲ ಪರಾಮರ್ಶನೆ ನೀಡಬೇಕಾಗಿ ಬರಬಹುದು. ಆಗ ಹಿಂಜರಿದು, ಉದಾಸೀನ ಭಾವ ತಾಳಿ ಅಥವಾ ಪರಾಮರ್ಶನ ನಿರಾಕರಿಸಿ ಉತ್ತರಿಸುತ್ತಾರೆ. ಇಂಥ ಪ್ರವೃತ್ತಿ ಒಳ್ಳೆಯದಲ್ಲ. ಆದರೆ ನಕಾರಾತ್ಮಕ ಉತ್ತರಗಳನ್ನು ನೀಡಲು ಇಷ್ಟವಿಲ್ಲದ ಮನೋಭಾವದ ಪ್ರತೀಕವಿದು. ಅಷ್ಟೇ ಅಲ್ಲ, ತಮ್ಮ ನಕಾರಾತ್ಮಕ ಉತ್ತರದಿಂದ ತಮ್ಮೊಂದಿಗಿನ ಈಗಿರುವ ವ್ಯವಹಾರಕ್ಕೆ ಅನನುಕೂಲವುಂಟಾಗಬಹುದು ಎಂಬ ಭಾವನೆಯೂ ಇರುವುದುಂಟು. ಏನೇ ಇರಲಿ, ನಿರಾಕರಣ ಉತ್ತರಗಳನ್ನು ಬರೆಯುವ ಪರಾಮರ್ಶಕರೂ ಇರುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ *೬

ಬಿಕರಿದಾರ ಗ್ರಾಹಕ ಸಂಸ್ಥೆಗೆ ಪರಾಮರ್ಶನ ವಿಳಾಸಗಳನ್ನು ಕೇಳಿ ಬರೆದ ಪತ್ರ
ಮಾದರಿ

ರಾಮಪ್ಪ ರೇಷ್ಮೆ ವ್ಯಾಪಾರಿಗಳು

ತಂತಿ: ‘ರಾಮ್’                                                          ಚೆಂಗೇರಿ
ದೂರವಾಣಿ: ೫೦೧೬೧೭                                               ಜರಿಯೂರು

ಪತ್ರಾಂಕ: ಹೊವ್ಯಾ ೧-೩೦/೧೯೮೭   ತಾ| ಅಕ್ಟೋಬರ್ ೧೦, ೧೯೮೭

ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿ
ಚೆಂಗಲವೆ ಕೇರಿ
ಥಳಕೂರು

ಆತ್ಮೀಯರೆ,

ಉಲ್ಲೇಖ: ತಮ್ಮ ಪತ್ರಾಂಕ. ಸಆ: ೧/೧೯೮೭ ದಿ.೧-೧೦-೮೭.

ತಮ್ಮ ಸರಕು ಆದೇಶ ಪತ್ರ ತಲುಪಿತು. ನಮ್ಮ ಮೇಲೆ ವಿಶ್ವಾಸವಿಟ್ಟು ಪತ್ರ ಬರೆದದ್ದಕ್ಕಾಗಿ ಕೃತಜ್ಞತೆಗಳು.

ನಮ್ಮೊಡನೆ ತಾವು ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಲು ಇಚ್ಛಿಸಿರುವುದು ಸಂತೋಷದ ಸಂಗತಿಯಾಗಿದೆ. ನಮಗೆ ಅಪರಿಚಿತವಾದ ತಾವು ನಮ್ಮೊಡನೆ ಮೊದಲ ಬಾರಿಗೆ ವ್ಯವಹರಿಸುತ್ತಿದ್ದೀರಿ ಮತ್ತು ತಮಗೆ ಸಾಲ ಸೌಲಭ್ಯವನ್ನು ನೀಡುವ ಬಗ್ಗೆ ತಮ್ಮ ಪರಿಚಯ ಮತ್ತು ಇತರ ವಿಚಾರಗಳನ್ನು ತಿಳಿಯಲು ಮೂವರು ಪರಾಮರ್ಶಕರ ವಿಳಾಸಗಳನ್ನು ನೀಡಬೇಕೆಂದು ಕೋರುತ್ತೇವೆ. ದಯವಿಟ್ಟು ಅನ್ಯರ್ಥಾ ಭಾವಿಸಬೇಡಿ; ವ್ಯಾಪಾರದಲ್ಲಿ ಹಣಕ್ಕಿಂತ ವಿಶ್ವಾಸ ಮುಖ್ಯವಲ್ಲವೆ! ವಿಶ್ವಾಸ ಮೂಡಲು ನಂಬಿಕೆ ಬರಬೇಕಲ್ಲವೇ? ಅಲ್ಲದೆ ಹೊಸ ಗ್ರಾಹಕರೊಡನೆ ವ್ಯವಹಾರ ಮಾಡುವ ಮುನ್ನ ನಾವು ಅನುಸರಿಸುವ ನೀತಿಯೂ ಇದೇ ಆಗಿದೆ. ಆದ್ದರಿಂದ ತಾವು ವ್ಯವಹರಿಸುವ ಬ್ಯಾಂಕಿನ ವಿಳಾಸವನ್ನೂ ಮೂರು ಪರಾಮರ್ಶನ ವಿಳಾಸವನ್ನೂ ತಿಳಿಸಬೇಕಾಗಿ ಕೋರುತ್ತೇವೆ. ತಮ್ಮಿಂದ ಪರಾಮರ್ಶನ ವಿಳಾಸಗಳು ನಮಗೆ ತಲುಪಿ ಮಾಹಿತಿ ದೊರೆತ ಮೇಲೆ ತಮ್ಮ ಆದೇಶಗಳನ್ನು ಗಮನಿಸುತ್ತೇವೆ.

ನಮ್ಮೀರ್ವರ ವ್ಯಾಪಾರದ ಬಾಂಧವ್ಯ ಚಿರಕಾಲ ಸುಗಮವಾಗಿ ಸಾಗುತ್ತದೆ ಎಂದು ನಂಬಿದ್ದೇವೆ; ಹಾಗೆ ಆಗಲಿ ಎಂದೂ ಹಾರೈಸುತ್ತೇವೆ.

ವಂದನೆಗಳೊಂದಿಗೆ,

ತಮ್ಮ ಹಿತೈಷಿಗಳು,
ರಾಮಪ್ಪ
ಮಾಲೀಕ
ರಾಮಪ್ಪ ರೇಷ್ಮೆ ವ್ಯಾಪಾರಿಗಳು

ಟಿಕೆ/

ಮಾರಾಟ ಸಂಸ್ಥೆಗೆ ಪರಾಮರ್ಶನ ವಿಳಾಸಗಳನ್ನು ನೀಡಿ ಬರೆದ ಪತ್ರ
ಮಾದರಿ

ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿ
ಚೆಂಗಲವೆಕೇರಿ, ಥಳಕೂರು

ತಂತಿ: ‘ಚೆಂಗಪ್ಪ’
ದೂರವಾಣಿ: ೭೭೮೮೯೦

ಪತ್ರದ ಸಂಖ್ಯೆ: ಹೊವ್ಯಾ ೩-೧೮೦/೧೯೮೭      ದಿನಾಂಕ: ೧೯೮೭ ಅಕ್ಟೋಬರ್ ೧೬

ರಾಮಪ್ಪ ರೇಷ್ಮೆ ವ್ಯಾಪಾರಿಗಳು
ಚೆಂಗೇರಿ, ಜರಿಯೂರು

ಮಹನೀಯರೆ,

ವಿಷಯ: ಪರಾಮರ್ಶಕರನ್ನು ಸೂಚಿಸಿ ಬರೆಯುತ್ತಿರುವ ಪತ್ರ
ತಮ್ಮ ಉಲ್ಲೇಖ: ಹೊವ್ಯಾ ೧-೩೦/೧೯೮೭ ತಾ| ೧೦-೧೦-೮೭

ತಮ್ಮ ಪತ್ರ ತಲುಪಿತು. ವಂದನೆಗಳು. ಹೊಸ ಗ್ರಾಹಕರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಅನಂತರ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಬೇಕೆಂದು ಎಲ್ಲರೂ ಅನುಸರಿಸುವ ವಾಣಿಜ್ಯ ನೀತಿಯೇ ಆಗಿದೆ. ಆದ ಕಾರಣ ಅನ್ಯಥಾ ಭಾವಿಸಬೇಕಾದ ಕಾರಣವಿಲ್ಲ.

ತಾವು ಆಪೇಕ್ಷಿಸದಂತೆ ಮೂವರು ಪರಾಮರ್ಶಕರ ವಿಳಾಸವನ್ನೂ ನಾವು ವ್ಯವಹರಿಸುತ್ತಿರುವ ಬ್ಯಾಂಕಿನ ವಿಳಾಸವನ್ನೂ ನೀಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿಯೇನಾದರೂ ತಮಗೆ ಬೇಕಿದ್ದಲ್ಲಿ ನಾವು ನೀಡಲು ಸಿದ್ದರಿದ್ದೇವೆ. ಆದಷ್ಟು ಬೇಗನೆ ನಮ್ಮ ಆದೇಶ ಪತ್ರಾನುಸಾರ ರೇಷ್ಮೆಗೂಡನ್ನು ಕಳುಹಿಸಿಕೊಡಬೇಕೆಂದು ಕೋರುತ್ತೇವೆ; ತಾವು ಕಳಿಸಿಕೊಡುತ್ತೀರಿ ಎಂಬ ನಂಬಿಕೆಯೂ ನಮಗಿದೆ.

ವಂದನೆಗಳೊಂದಿಗೆ
ತಮ್ಮ ನಂಬುಗೆಯ,
ಚೆಂಗಪ್ಪ
ಮಾಲೀಕ
ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿ

ಬ್ಯಾಂಕಿನ ವಿಳಾಸ:

ಕುಬೇರ ಬ್ಯಾಂಕ್ ಲಿ; ಚೆಂಗಲವೆಕೇರಿ ಶಾಖೆ

ಪರಾಮರ್ಶಕರ ವಿಳಾಸಗಳು:

೧) ದೇವರದಾಸಿಮಯ್ಯ ನೇಕಾರ ಸಂಘ
೯೬, ದೇವಾಂಗಪೇಟೆ, ರಾಮೇಶ್ವರನಗರ

೨) ಜಗಮಲ್ ರೇಷ್ಮೆ ಬಿತ್ತನೆ ಕೋಠಿ
೮೦, ಪುಟ್ಟಪೇಟೆ ಗಲ್ಲಿ
ಬಿಳಿಗೌಡ ವೃತ್ತ, ಬಿಡದಿ

೩) ರೇಷ್ಮೆ ಉದ್ಯೋಗಿಗಳ ಸೇವಾಸಂಘ
೬, ಕಲ್ಮಾಡಿ ಗುಡಿಬೀದಿ
ಮಣಿಗಲ್ ತಾಲೂರು
ನವದುರ್ಗ ಜಿಲ್ಲೆ

ಪಿವಿ

ಪರಾಮರ್ಶಕರಿಗೆ ಮಾರಾಟ ಸಂಸ್ಥೆ ಬರೆಯುವ ಪತ್ರ
ಮಾದರಿ

ರಾಮಪ್ಪ ರೇಷ್ಮೆ ವ್ಯಾಪಾರಿಗಳು
ಗೋಪ್ಯ

ತಂತಿ: ‘ರಾಮ್’                                                                 ಚೆಂಗೇರಿ
ದೂರವಾಣಿ: ೫೦೧೬೧೭                                                      ಜರಿಯೂರು

ಪತ್ರದ ಸಂಖ್ಯೆ: ಹೊವ್ಯಾ ೫/೧೬೮/೧೯೮೭                ತಾ: ಅಕ್ಟೋಬರ್ ೨೬, ೧೯೮೭

ವ್ಯವಸ್ಥಾಪಕರು
ದೇವರದಾಸಿಮಯ್ಯ ನೇಕಾರ ಸಂಘ
೯೬, ದೇವಾಂಗಪೇಟೆ
ರಾಮೇಶ್ವರ ನಗರ

ಬಂಧುಗಳೇ,

ವಿಷಯ: ಪರಾಮರ್ಶನಕ್ಕಾಗಿ ಕೋರಿಕೆ

ಥಳಕೂರಿನ ಚೆಂಗಲಿವೆ ಕೇರೀಯ ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿಯವರು ನಮ್ಮೊಡನೆ ಹೊಸದಾಗಿ ವ್ಯಾಪಾರ ಸಂಬಂಧವನ್ನು ಬೆಳೆಸಲು ಇಚ್ಛಿಸಿದ್ದಾರೆ. ಪ್ರತಿ ತಿಂಗಳೂ ೫೦,೦೦೦ ರೂ. (ಐವತ್ತು ಸಾವಿರ ರೂಪಾಯಿಗಳು ಮಾತ್ರ) ಬೆಲೆ ಬಾಳುವ ರೇಷ್ಮೆ ಗೂಡನ್ನು ಕೊಳ್ಳಲು ಆದೇಶ ನೀಡಿದ್ದಾರೆ. ‘ಹಣವನ್ನು ನಿರ್ದಿಷ್ಟ ಕಂತುಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ನೀಡುತ್ತೇವೆ ಸರಕನ್ನು ಮುಂಗಡವಾಗಿ ನೀಡಿ’ ಎಂದು ಕೇಳಿದ್ದಾರೆ.

ಅವರ ಬಗ್ಗೆ ನಾವು ವಿವರಗಳನ್ನು ಪಡೆಯಬೇಕಾಗಿದೆ. ಅವರು ಪರಾಮರ್ಶಕನಕ್ಕಾಗಿ ನಿಮ್ಮ ವಿಳಾಸವನ್ನು ಕೊಟ್ಟಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ, ನಿಮ್ಮ ಅವರ ವ್ಯಾಪಾರದ ಅನುಭವದ ಬಗ್ಗೆ ಮತ್ತು ಅವರ ಸಂಸ್ಥೆಯ ಬಗ್ಗೆ ನಿಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ನಿರ್ದಾಕ್ಷಿಣ್ಯವಾಗಿ ತಿಳಿಸಿ ನಮಗೆ ನೆರವಾಗಬೇಕೆಂದು ಕೋರುತ್ತೇವೆ. ಈ ಬಗ್ಗೆ ನೀವು ನೀಡುವ ಅಭಿಪ್ರಾಯವನ್ನಾಗಲೀ ನಿಮ್ಮ ಸಂಸ್ಥೆಯ ವಿಚಾರವನ್ನಾಗಲೀ ನಾವು ಬಹಿರಂಗ ಪಡಿಸುವುದಿಲ್ಲ; ಗೋಪ್ಯವಾಗಿಟ್ಟಿರುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ. ನೀವು ಉತ್ತರ ಪತ್ರವನ್ನು ಕಳಿಸಿಕೊಡುವುದಕ್ಕೋಸ್ಕರ ಸ್ವವಿಳಾಸವಿರುವ ಅಂಚೆ ಚೀಟಿಯನ್ನಂಟಿಸಿದ ಖಾಲಿ ಲಕೋಟೆಯನ್ನಿಟ್ಟಿದ್ದೇವೆ.

ನಿಮ್ಮ ವಿಶ್ವಾಸಿಗಳು,
ರಾಮಪ್ಪ (ಮಾಲೀಕ)
ರಾಮಪ್ಪ ರೇಷ್ಮೆ ವ್ಯಾಪಾರಿಗಳು

ಟಿಎನ್/ರಾ,

(ರಾಮಪ್ಪ ರೇಷ್ಮೆ ವ್ಯಾಪಾರಿಗಳು ಮೇಲ್ಕಂಡಂತೆ ಜಗಮಲ್ ರೇಷ್ಮೆ ಬಿತ್ತನೆ ಕೋಠಿಯವರಿಗೂ, ರೇಷ್ಮೆ ಉದ್ಯೋಗಿಗಳ ಸೇವಾ ಸಂಘಕ್ಕೂ ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿಯವರ ಬಗ್ಗೆ ಪರಾಮರ್ಶನೆ ನೀಡುವಂತೆ ಕೋರಿ ಪತ್ರ ಬರೆಯುತ್ತಾರೆ)

ಅನುಕೂಲ ಪರಾಮರ್ಶನ ಉತ್ತರ ನೀಡಿ ಬರೆದ ಪತ್ರ
ಮಾದರಿ

ದೇವರದಾಸಿಮಯ್ಯ ನೇಕಾರ ಸಂಘ
ಗೋಪ್ಯ

ತಂತಿ: ‘ದಾಸಿಮ’                                                     ೯೬, ದೇವಾಂಗ ಪೇಟೆ
ದೂರವಾಣಿ: ೫೦೬೬೦೬                                             ರಾಮೇಶ್ವರ ನಗರ

ಪತ್ರಾಂಕ: ಪಪಕೋಉ ೭೭/೮೭-೮೮                      ತಾ. ೧ನೆಯ ನವೆಂಬರ್, ೧೯೮೭

ಶ್ರೀ ರಾಮಪ್ಪ
ಮಾಲೀಕರು
ರಾಮಪ್ಪ ರೇಷ್ಮೆ ವ್ಯಾಪಾರಿಗಳು
ಚೆಂಗೇರಿ ಜರಿಯೂರು

ಮಾನ್ಯರೆ,

ವಿಷಯ: ಪರಾಮರ್ಶನ ಕೋರಿಕೆಗೆ ಉತ್ತರ
ಉಲ್ಲೇಖ: ಹೊ ವ್ಯಾ ೫/೧೮೬/೧೯೮೭ ದಿ ೨೬ನೆಯ ೧೯೮೭

ತಾವು ಥಳಕೂರಿನ ಚೆಂಗಲವೆಕೇರಿಯ ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿಯವರನ್ನು ಕುರಿತು ಪರಾಮರ್ಶನ ಕೋರಿ ಬರೆದ ಪತ್ರ ತಲುಪಿತು. ವಂದನೆಗಳು.

ಆ ಸಂಸ್ಥೆಯವರು ಕಳೆದ ಹತ್ತು ವರ್ಷಗಳಿಂದ ನಮ್ಮೊಡನೆ ತೃಪ್ತಿಕರವಾಗಿ ವ್ಯವಹರಿಸಿದ್ದಾರೆ. ಹಲವಾರು ಬಾರಿ ಪಡೆದ ಸಾಲಗಳನ್ನು ನೀಯ್ಯತ್ತಿನಿಂದ ಕಂತುಗಳಲ್ಲಿ ಬಡ್ಡಿ ಸಹಿತ ಹಿಂತಿರುಗಿಸಿದ್ದಾರೆ. ಸುಮಾರು ೫೦,೦೦೦ ರೂ. (ಐವತ್ತು ಸಾವಿರ ರೂಪಾಯಿಗಳು) ಗಳವರೆಗೆ ಸಾಲದ ವ್ಯವಹಾರವನ್ನು ನಡೆಸಿದ್ದಾರೆ. ತಡಮಾಡದೆ ಪತ್ರಗಳಿಗೆ ಉತ್ತರಿಸುವ ಅವರು ನಮ್ಮೊಡನೆ ವ್ಯವಹರಿಸುತ್ತಿರುವ ಪ್ರಾಮಾಣಿಕ ಗ್ರಾಹಕರಲ್ಲಿ ಅವರೂ ಒಬ್ಬರಾಗಿದ್ದಾರೆ. ಇದುವರೆಗಿನ ನಮ್ಮ ಅನುಭವದ ಆಧಾರದ ಮೇಲೆ ಈ ಸದಭಿಪ್ರಾಯವನ್ನು ತಿಳಿಸುತ್ತಿದ್ದೇವೆ. ಆದರೆ ಮುಂದೆ ಯಾವುದೇ ರೀತಿಯ ಅಹಿತ ಪ್ರಸಂಗ ನಿಮ್ಮಿಬ್ಬರ ನಡುವೆ ನಡೆದಲ್ಲಿ ಅದಕ್ಕೆ ತಾವು ಜವಾಬುದಾರರಾಗಲಾರೆವು ಎಂದೂ ಸೂಚಿಸಬಯಸುತ್ತೇವೆ.

ನಿಮ್ಮಿಬ್ಬರ ವ್ಯವಹಾರ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತೇವೆ.

ನಿಮ್ಮ ವಿಶ್ವಾಸದ,
ರಾಮಲಿಂಗಯ್ಯ
ವ್ಯವಸ್ಥಾಪಕ
ದೇವರ ದಾಸಿಮಯ್ಯ ನೇಕಾರ ಸಂಘ

ಪಿಸಿ

(ರಾಮಪ್ಪ ರೇಷ್ಮೆ ವ್ಯಾಪಾರಿಗಳ ಕೋರಿಕೆಯ ಮೇರೆಗೆ ಜಗಮಲ್ ರೇಷ್ಮೆ ಬಿತ್ತನೆ ಕೋಠಿಯವರೂ, ರೇಷ್ಮೆ ವ್ಯಾಪಾರಿಗಳ ಸೇವಾ ಸಂಘದವರೂ, ಚೆಂಗಪ್ಪ ರೇಷ್ಮೆ ಬಿತ್ತನೆ ಕೋಠಿಯವರನ್ನು ಕುರಿತು ಪರಾಮರ್ಶನ ಪತ್ರಗಳನ್ನು ಬರೆಯುತ್ತಾರೆ. ಅವುಗಳಲ್ಲಿ ಅನುಕೂಲ ಪರಾಮರ್ಶನ ಪತ್ರಗಳೂ ಇರಬಹುದು, ಪ್ರತಿಕೂಲ ಪರಾಮರ್ಶನ ಪತ್ರಗಳೂ ಇರಬಹುದು)

ಪ್ರತಿಕೂಲ ಪರಾಮರ್ಶನ ಉತ್ತರ ನೀಡಿದ ಪತ್ರ
ಮಾದರಿ

ನವೀನ್ ಪಾತ್ರೆ ವ್ಯಾಪಾರಿಗಳು
(ಸಗಟು ವ್ಯಾಪಾರ)
ಗೋಪ್ಯ

ತಂತಿ:    ‘ನವೀನ್’                                                   ಗಾಂಧಿಪೇಟೆ
ದೂರವಾಣಿ : ೬೭೮೯೧೦                                             ಬೆಂದಕಾಳೂರು

ಪತ್ರದ ಸಂಖ್ಯೆ : ಪ್ರಪಪ ೧-೩/೮೭-೮೮                              ೮/೧೧/೧೯೮೭

ವ್ಯವಸ್ಥಾಪಕರು
ಅಕ್ಷಯ ಪಾತ್ರೆ ಕಾರ್ಖಾನೆ
ಯುಧಿಷ್ಠಿರ ಪೇಟೆ, ಹಸ್ತಿನಾಪುರಿ

ಬಂಧುಗಳೆ,

ವಿಷಯ: ಪರಾಮರ್ಶನ ಕೋರಿಕೆಗೆ ಉತ್ತರ

ನೀವು ತಟ್ಟೂರು, ಕುಟ್ಟುಪೇಟೆಯ ‘ಸರ್ವಧಾರಿ ಪಾತ್ರೆ ವ್ಯಾಪಾರಿಗಳ’ ಬಗ್ಗೆ (ಶ್ರೀ ಭಿಮಪ್ಪ ಮಾಲೀಕರು) ಮತ್ತು ಅವರ ಸಂಸ್ಥೆಯ ವ್ಯವಹಾರವನ್ನು ಕುರಿತು ಪರಾಮರ್ಶನ ನೀಡುವಂತೆ ಕೋರಿ ಬರೆದ ಪತ್ರ ತಲುಪಿತು. ವಂದನೆಗಳು

ಶ್ರೀಯುತ ಭೀಮಪ್ಪನವರು ಕಳೆದ ಎರಡು ವರ್ಷಗಳಿಂದೀಚೆಗೆ ನಮ್ಮೊಂದಿಗೆ ವ್ಯಾಪಾರ ವ್ಯವಹಾರವನ್ನಿಟ್ಟುಕೊಂಡಿಲ್ಲ, ಅದಕ್ಕೆ ಮುಂಚೆ ಆರು ವರ್ಷಗಳ ಕಾಲ ವ್ಯವಹಾರ ನಡೆಸಿದ್ದಾರೆ. ಅವರು ಆ ಅವಧಿಯಲ್ಲಿ ಹಲವಾರು ಸಲ ತಾವು ಪಡೆದ ಸರಕುಗಳ ಹಣವನ್ನು ಹಿಂತಿರುಗಿಸಿರಾದರೂ ಸಕಾಲದಲ್ಲಿ ಸರಿಯಾದ ಕಂತುಗಳಲ್ಲಿ ಪೂರ್ಣವಾಗಿ ಹಿಂದಿರುಗಿಸಲಿಲ್ಲ. ಕೊನೆಗೆ ಬಾಕಿಯನ್ನು ದೀರ್ಘಕಾಲ ಉಳಿಸಿಕೊಂಡಾಗ, ಅವರಿಗೆ ನಾವು ಬರೆದ ಸಾಲ ವಸೂಲಿ ಪತ್ರಗಳ ಪರಿಣಾಮವಾಗಿ ಬಾಕಿ ಹಣವನ್ನೇನೊ ತೀರಿಸಿದರು; ಆದರೆ ಮತ್ತೆ ವ್ಯಾಪಾರ ಮಾಡಲಿಲ್ಲ.

ಅವರು ಈಗ ನಿಮ್ಮೊಂದಿಗೆ ವ್ಯಾಪಾರ ಪ್ರಾರಂಭಿಸುತ್ತಿರುವುದು ವಿಸ್ಮಯಕಾರಿ ಸಂಗತಿಯಾಗಿದೆ. ಏಕೆಂದರೆ ಎಲ್ಲ ಬಗೆಯ ರಿಯಾಯಿತಿಗಳನ್ನು ಕೊಟ್ಟಿದ್ದರೂ ವಿನಾಕಾರಣ ವ್ಯವಹಾರವನ್ನು ನಿಲ್ಲಿಸಿದ್ದಾರೆ. ಈ ಹಲವಾರು ಕಾರಣಗಳಿಂದ ಅವರ ವ್ಯವಹಾರ ನಮಗೆ ತೃಪ್ತಿಕರವಾಗಿ ಕಂಡು ಬಂದಿಲ್ಲ. ಆದ ಕಾರಣ, ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದಕ್ಕೆ ವಿಷಾದಿಸುತ್ತೇವೆ.

ಇನ್ನು ನಿಮ್ಮ ಇಷ್ಟಾನುಸಾರ ನೀವು ವರ್ತಿಸಬಹುದು. ದಯವಿಟ್ಟು ಈ ವಿಷಯವನ್ನು ಗೋಪ್ಯವಾಗಿಡುತ್ತೀರಿ ಎಂದು ನಂಬಿದ್ದೇವೆ.

ತಮ್ಮ ವಿಶ್ವಾಸಿಗಳು
ನವೀನ್ ಚಂದ್
ಮಾಲೀಕರು

ಟಿಎಸ್/

ಪರಾಮರ್ಶನ ಉತ್ತರ ನಿರಾಕರಣ ಪತ್ರ:
ಮಾದರಿ

ಆದಿತ್ಯವಿದ್ಯುದುಪಕರಣ ಸಂಸ್ಥೆ

ತಂತಿ : ‘ಆದಿತ್ಯ’                                                                ೬, ದೀಪಪೇಟೆ
ದೂರವಾಣಿ: ೬೦೧೩೪೫                                                      ಜ್ಯೋತಿನಗರ

ಪತ್ರದ ಸಂಖ್ಯೆ: ಹೊವ್ಯಾ ೮-೧೩೮/೮೭-೮೮              ದಿನಾಂಕ: ೧೨.೧೧.೧೯೮೭

‘ತನ್ಮಯ’ ದೂರದರ್ಶನ ಮಾರಾಟಗಾರರು
ಆನಂದಪುರ, ಬೆಂಗಳೂರು- ೫೬೦ ೦೦೯

ಮಹನೀಯರೆ,

ವಿಷಯ: ಪರಾಮರ್ಶನ ಕೋರಿ ಬರೆದ ಪತ್ರಕ್ಕೆ ಉತ್ತರ

ಉಲ್ಲೇಖ: ಪಸಂ ಪಕೋ : ೮-೭/೮೭-೮೮ ದಿ. ೨೦-೧೧-೮೭

ಮಹಾನಗರ ಸೂರ್ಯಪ್ರಕಾಶ ಎಂಟರ್‌ಪ್ರೈಸಸ್ ಅವರ ಬಗ್ಗೆ ಪರಾಮರ್ಶನೆಯನ್ನು ಕೋರಿ ಪತ್ರ ಬರೆದಿದ್ದೀರಿ. ವಂದನೆಗಳು.

ಸೂರ್ಯಪ್ರಕಾಶ…. ಅವರು ನಮ್ಮೊಂದಿಗೆ ಕೆಲವು ವರ್ಷಗಳ ಹಿಂದೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಈಚೆಗೆ ಅವರು ನಮ್ಮೊಡನೆ ಅಷ್ಟಾಗಿ ವ್ಯವಹರಿಸುತ್ತಿಲ್ಲ. ಆದ ಕಾರಣ ಅವರ ಬಗ್ಗೆ ಯಾವ ರೀತಿಯ ಅಭಿಪ್ರಾಯವನ್ನೂ ತಿಳಿಸುವ ಸ್ಥಿತಿಯಲ್ಲಿ ನಾವಿಲ್ಲ; ಅನ್ಯಥಾ ಭಾವಿಸಬೇಡಿ; ನಿಮಗಾಗುವ ನಿರಾಸೆಗಾಗಿ ವಿಷಾದಿಸುತ್ತೇವೆ.

ನಿಮ್ಮ ವಿಶ್ವಾಸಿಗಳು
ದೀಪಿಕಾ ಪ್ರಕಾಶ್
ವ್ಯವಸ್ಥಾಪಕ
ಆದಿತ್ಯ ವಿದ್ಯುದುಪಕರಣ ಸಂಸ್ಥೆ

(ಸಾಮಾನ್ಯವಾಗಿ ಮೂವರು ಪರಾಮರ್ಶಕರೂ ಸದಭಿಪ್ರಾಯವನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದರೆ ಮಾಲೀಕ-ಗ್ರಾಹಕ ಸಂಸ್ಥೆಗಳ ನಡುವೆ ವ್ಯಾಪಾರ ವ್ಯವಹಾರ ಪ್ರಾರಂಭವಾಗುತ್ತದೆ. ಪರಾಮರ್ಶಕರಲ್ಲಿ ಒಬ್ಬರು ಅಥವಾ ಇಬ್ಬರು ಪ್ರತಿಕೂಲ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದರೆ ವ್ಯಾಪಾರ ವ್ಯವಹಾರ ಪ್ರಾರಂಭವಾಗದಿರಬಹುದು)