ಆಕ್ಷೇಪಣಾ ಪತ್ರದ ಮುಂದಿನ ಹೆಜ್ಜೆಯೇ ಪ್ರತಿಭಟನಾ ಪತ್ರ. ಗ್ರಾಹಕ ಮಾರಾಟಗಾರನನ್ನು ಆಕ್ಷೇಪಿಸಿದಾಗ, ಮಾರಾಟಗಾರ ಆಕ್ಷೇಪಣೆಗಳನ್ನು ವಿನಯ ಪೂರ್ವಕವಾಗಿ ಸ್ವೀಕರಿಸಿ, ಆ ಬಗ್ಗೆ ಒಪ್ಪದೆ, ತಮ್ಮ ವರ್ತನೆಯೇ ಸರಿಯೆಂದು ಮಾರಾಟಗಾರರು ಸಮರ್ಥಿಸಿಕೊಳ್ಳುವುದುಂಟು. ಅಥವಾ ಗ್ರಾಹಕರ ಆಕ್ಷೇಪಣೆಗಳಿಗೆ ಉತ್ತರ ನೀಡದೆ ಸಾರಾಸಗಟಾಗಿ ತಿರಸ್ಕರಿಸಿ ಬಿಡಬಹುದು ಅಥವಾ ಅಲಕ್ಷಿಸಬಹುದು. ಇಂತಹ ಸಂದರ್ಭಗಳಲ್ಲಿ ತನ್ನ ಆಕ್ಷೇಪಣೆಯನ್ನು ಸಮರ್ಥಿಸಿಕೊಂಡು ಮಾರಾಟಗಾರನ ವರ್ತನೆಯನ್ನು ಅಥವಾ ಉತ್ತರವನ್ನು ಪ್ರತಿಭಟಿಸಿ ಗ್ರಾಹಕನು ಬರೆಯುವ ಪತ್ರವೇ ಪ್ರತಿಭಟನಾ ಪತ್ರ.

ಮಾರಾಟಗಾರನ ಪರಮಧ್ಯೇಯವೆಂದರೆ ಸರಕು ಮಾರಾಟ. ಆ ಮೂಲಕ ಲಾಭ ಸಂಪಾದನೆ. ಅದಕ್ಕೆ ಆಧಾರ ಸ್ತಂಭವಾದ ಗ್ರಾಹಕನನ್ನು ಉಳಿಸಿಕೊಳ್ಳುವುದು. ಈ ದೃಷ್ಟಿಯಿಂದ ಆಕ್ಷೇಪಣಾಪತ್ರಗಳು ಗ್ರಾಹಕರಿಂದ- ಬಂದಾಗ ಅದಕ್ಕೆ ಸಮಾಧಾನ ಬರೆಯಬೇಕಾಗುತ್ತದೆ. ಆರೋಪಕ್ಕೆ ಪ್ರತ್ಯಾರೋಪಮದ್ದಲ್ಲ; ಆದ್ದರಿಂದ ಗ್ರಾಹಕ ಹೇಳುತ್ತಿರುವುದು ಸರಿಯೆಂದು ಮನವರಿಕೆಯಾದಾಗ ಬಿಕರಿದಾರ ಅದನ್ನು ನಿಸ್ಸಂಕೋಚವಾಗಿ ಒಪ್ಪಿಕೊಂಡು ಮುಂದೆ ಇಂತಹ ಪ್ರಮಾದಗಳಾಗದಂತೆ ಎಚ್ಚರವಹಿಸುತ್ತೇನೆ ಎಂಬ ಭರವಸೆಯನ್ನು ನೀಡಬೇಕು. ಹೀಗೇನಾದರೂ ಮಾಡದಿದ್ದರೆ, ತನ್ನ ದೊಡ್ಡಸ್ತಿಕೆ ಉಳಿಸಿಕೊಳ್ಳಲು ಮೊಂಡು ಹಟದಿಂದ ಮಾಡಿದ ತಪ್ಪನ್ನೇ ಸಮರ್ಥಿಸಲು ಶತಪ್ರಯತ್ನ ಮಾಡಿದಾಗ ಗ್ರಾಹಕನಿಂದ ಪುಂಖಾನು ಪುಂಖವಾಗಿ ಪ್ರತಿಭಟನಾ ಪತ್ರಗಳು ಬರುತ್ತವೆ. ಇದರ ಪರಿಣಾಮವಾಗಿ ಮಾರಾಟಗಾರ ಒಬ್ಬ ಉತ್ತಮ ಗ್ರಾಹಕನನ್ನು ಕಳೆದುಕೊಳ್ಳಬಹುದು. ಉತ್ತಮ ಗ್ರಾಹಕನಾಗಲಿ, ಉತ್ತಮ ಮಾರಾಟಗಾರನಾಗಲಿ ಇಂಥ ದುರ್ಬರ ಸನ್ನಿವೇಶಗಳು ಬರದಂತೆ ಆದಷ್ಟು ಎಚ್ಚರವಹಿಸುವುದು ಒಳ್ಳೆಯದು. ಆಕ್ಷೇಪಣಾ ಪತ್ರಗಳಷ್ಟು ಸಂಖ್ಯೆಯಲ್ಲಿ ಪ್ರತಿಭಟನಾ ಪತ್ರಗಳು ಬರುವುದಿಲ್ಲ.

ಸರಕುಗಳ ಮಟ್ಟವನ್ನು ಸಮರ್ಥಿಸಿಕೊಳ್ಳುವಾಗ, ಸರಕಿನ ಬೆಲೆ ಉಳಿದ ಸಂಸ್ಥೆಗಳಿಗಿಂತ ಕಡಿಮೆ ಎಂದು ಬಿಕರಿದಾರ ಹೇಳಿಕೊಂಡಾಗ, ಆ ಸಂಗತಿಗಳು ಅಪ್ರಾಮಾಣಿಕವಾದವು ಎಂದು ಗ್ರಾಹಕ ಆಕ್ಷೇಪಿಸಬಹುದು. ಆಗ ಬಿಕರಿದಾರ ವಾದ ಮಾಡುವ ಸಾಧ್ಯತೆಗಳಿರುತ್ತವೆ; ಆದರೆ ಗ್ರಾಹಕ ಮಾತ್ರ ಪ್ರತಿಭಟಿಸದೆ ಬಿಡುವುದಿಲ್ಲ. ಪರಸ್ಪರ ಖರೀದಿದಾರ ಹಾಗು ಬಿಕರಿದಾರರಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದಾಗ ರಾಜೀಮನೋಭಾವದಿಂದ ವರ್ತಿಸುವುದು ಒಳ್ಳೆಯದು. ಒಟ್ಟಿನಲ್ಲಿ ಪ್ರತಿಭಟನಾ ಪತ್ರವನ್ನು ಬರೆಯಬೇಕಾದ ಸನ್ನಿವೇಶವನ್ನು ಯಾರು ಬೇಕಾದರೂ ತಂದು ಕೊಳ್ಳಬಹುದು; ಅಂಥ ಸಂದರ್ಭಗಳೊದಗಿದರೆ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ.

ಸರಕುಗಳನ್ನು ಒದಗಿಸುವುದರಲ್ಲಿ ಬಿಕರಿದಾರ ವಿಳಂಬ ಮಾಡಿದಾಗ ಗ್ರಾಹಕ ಬರೆಯುವ ಆಕ್ಷೇಪಣಾ ಪತ್ರ
ಮಾದರಿ

ಅಪ್ಪುಲೇಖನ ಸಾಮಗ್ರಿ ಮಾರಾಟಗಾರರು

ತಂತಿ: ಅಪ್ಪು                                                                     ಹಾರೋಹಳ್ಳಿ
ದೂರವಾಣಿ : ೫೩೪೨೧೦                                            ಕನಕಪುರ ತಾಲೂಕು
ಬೆಂಗಳೂರು ಜಿಲ್ಲೆ

ಪತ್ರ ಸಂಖ್ಯೆ: ಆಪ೧೮ಮೈ/೮೭-೮೮            ದಿ.೧೫ನೆಯ ಜೂನ್, ೧೯೮೭

ಅವರಿಗೆ,

‘ನವೀನ್’ ಮತ್ತು ಕಂಪನಿ
ಲೇಖನ ಸಾಮಾಗ್ರಿ ಸಗಟು ಮಾರಾಟಗಾರರು
ಹಳೆ ಮೊಹಲ್ಲಾ
ಮೈಸೂರು-೮೯

ಮಹನೀಯರೆ,

ವಿಷಯ: ಸರಕು ರವಾನೆ ವಿಳಂಬವಾದದ್ದರ ಬಗ್ಗೆ

ನಮ್ಮ ಉಲ್ಲೇಖ: ಅಪಸಂ.೩೮-೩/೮೭-೮೮ ದಿ.೧೫-೩-೮೭

ಶಾಲಾ ವಿದ್ಯಾರ್ಥಿಗಳಿಗೆ ಬೇಕಾದ ಬಿಳಿ ಕಾಗದದ ಬರೆಯುವ ಪುಸ್ತಕಗಳು, ಗೆರೆ ಎಳೆದ ಕಾಗದದ ಪುಸ್ತಕಗಳು, ಪೆನ್ನು-ಪೆನ್ಸಿಲ್ಲು-ರಬ್ಬರು-ಇಂಕು, ಜ್ಯಾಮಿತಿ ಪೆಟ್ಟಿಗೆಗಳನ್ನು ಕಳಿಸಿಕೊಡಿ ಎಂದು ನಾವು ನಿಮಗೆ ಆದೇಶ ಪತ್ರವನ್ನು ಬರೆದು ಈಗಾಗಲೇ ಮೂರು ತಿಂಗಳು ಕಳೆದಿದೆ. ಶಾಲೆಗಳು ಆಗಲೇ ಪ್ರಾರಂಭವಾಗಿದೆ. ಆದರೂ ನಿಮ್ಮಿಂದ ಸರಕಾಗಲೀ ಪತ್ರವಾಗಲೀ ನಮಗೆ ಬಾರದಿರುವುದು ವಿಷಾದಕರ. ನೀವು ಹೀಗೆ ವರ್ತಿಸುವುದರಿಂದ ನಮಗಿಲ್ಲಿ ಅನೇಕ ತೊಂದರೆಗಳುಂಟಾಗುತ್ತವೆ.

ಈವರೆಗೆ ಪತ್ರವನ್ನೇ ಬರೆಯದಿರುವ ನೀವು ಬರೆವಣಿಗೆಯ ಸಾಮಾಗ್ರಿಗಳನ್ನು ಕಳಿಸಿಕೊಡುತ್ತೀರಿ ಎಂದು ನಂಬುವುದಾದರೂ ಹೇಗೇ? ನಾವು ಬೇರೆಯವರಿಂದ ಸಾಮಾಗ್ರಿಯನ್ನು ತರಿಸಿಕೊಳ್ಳುವ ಧೈರ್ಯವನ್ನಾದರೂ ಮಾಡುವುದು ಹೇಗೆ? ಒಟ್ಟಿನಲ್ಲಿ ನಮ್ಮನ್ನು ನೀವು ಚಿಂತ್ರಾಕ್ರಾಂತರನ್ನಾಗಿ ಮಾಡಿದ್ದೀರಿ.

ನಮ್ಮ ನಾಡಿನಲ್ಲಿಯೇ ಗಣ್ಯ ವ್ಯಾಪಾರ ಸಂಸ್ಥೆಯಾಗಿದ್ದು, ಸ್ವರ್ಣ ಮಹೋತ್ಸವವನ್ನು ಆಚರಿಸಿರುವ ನೀವು ಈ ರೀತಿ ವಿಳಂಬ ಪ್ರವೃತ್ತಿಯನ್ನು ಅನುಸರಿಸುತ್ತಿರುವುದು ನಿಮಗೆ ಶೋಭೆ ತರುವಂಥದಲ್ಲ. ಇನ್ನಾದರೂ ಈ ಪತ್ರ ಕಂಟ ಕೂಡಲೇ ಸರಕನ್ನು ಕಳಿಸಿಕೊಡಿ ಇಲ್ಲವೇ ಸರಕು ಒದಗಿಸಲು ಸಾಧ್ಯವಿಲ್ಲವೆಂದು ತಿಳಿಸಿ; ನಾವು ಬೇರೆ ವ್ಯವಸ್ಥೇಯನ್ನು ಮಾಡಿಕೊಳ್ಳುತ್ತೇವೆ.

ಇತಿ,
ಪದ್ಮನಾಭಯ್ಯ
ಮಾಲೀಕ

ಪಿಕೆ/

ಕೇಳಿದ ಸರಕಿಗೆ ಬದಲಾಗಿ ಬೇರೆ ಸರಕನ್ನು ಕಳಿಸಿದಾಗ ಆಕ್ಷೇಪಿಸಿ ಬರೆದ ಪತ್ರ
ಮಾದರಿ

ನೇತ್ರಾನಂದಟಿ.ವಿ.ಮಾರಾಟಗಾರರು
ಸುರಪುರ, ಧಾರವಾಡ

ತಂತಿ : ‘ನೇತ್ರ’
ದೂರವಾಣಿ: ೬೯೩೨೪೫

ಪತ್ರಾಂಕ: ಅಪ.೧೧-೨/೮೭-೮೮                 ದಿನಾಂಕ : ೮ನೆಯ ಅಕ್ಟೋಬರ್, ೧೯೮೭

ಪುಷ್‌ವೆಲ್ ಟಿ.ವಿ.ಕಂಪೆನಿ
ಕಾರ‍್ಮಿಕ ನಗರ, ಹೊಸದುರ್ಗ ಜಿಲ್ಲೆ

ಶ್ರೀಯುತರೆ,

ನಮ್ಮ ಆದೇಶ ಪತ್ರದಲ್ಲಿ ೨೦ ಕಪ್ಪು ಬಿಳುಪು ಟಿವಿಗಳನ್ನೂ (ಮಾಡೆಲ್ ಕೆ.ಬಿ.೪೮೭), ೪೦ ವರ್ಣ ಟಿ.ವಿ.ಗಳನ್ನೂ (ಮಾಡೆಲ್ ಟಿಸಿ ೭೭೭೮) ಅವಕ್ಕೆ ಸಂಬಂಧಿಸಿದ ಸ್ಟ್ಯಾಂಡು, ಆಂಟೀನಾ ಮತ್ತಿತರ ಉಪಕರಣಗಳನ್ನು ಕಳಿಸಿಕೊಡಿ ಎಂದು ಬರೆದಿದ್ದೆವು. (ಪಸಂ. ೩೨ಕ್ರ ಆ/೨/೮೭-೮೮ ದಿ. ಸೆಪ್ಟಂಬರ್ ೨೦, ೧೯೮೭)

ನೀವು ಕಳಿಸಿದ ಸುರಕ್ಷಾ ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ೪೦ ವರ್ಣ ಟಿ.ವಿ ಗಳ ಬದಲಾಗಿ ೪೦ ಸೂಪರ್ ಸ್ಟಾರ್ ರೇಡಿಯೋಗಳಿದ್ದವು. ೨೦ ಕಪ್ಪು ಬಿಳುಪು ಟಿ.ವಿಗಳನ್ನು ದೊಡ್ಡ ಸೈಜಿನ ಬದಲು ಚಿಕ್ಕ ಸೈಜಿನವನ್ನು ಕಳಿಸಿದ್ದೀರಿ. ಏಕೆ ಹೀಗಾಯಿತೋ ತಿಳಿಯಲಿಲ್ಲ. ಆದರೆ ನೀವು ಹೀಗೆ ಮಾಡಿದ್ದರಿಂದ ನಮಗೂ ನಮ್ಮ ಗ್ರಾಹಕರಿಗೂ ಅತೀವ ತೊಂದರೆಯುಂಟು ಮಾಡಿದ್ದೀರಿ.

ಮುಂದಿನ ವಾರ ಪ್ರಾರಂಭವಾಗುವ ಭಾರತ-ವೆಸ್ಟ್ಂಡೀಸ್ ಟೆಸ್ಟ್ ಸರಣಿಗಳನ್ನು ನೋಡಲು ಬಯಸಿ ವರ್ಣದ ಟಿ.ವಿ.ಗಳನ್ನು ಈಗಾಗಲೇ ನಮಗೆ ಆದೇಶ ನೀಡಿದವರನ್ನು ನಿರಾಶೆಗೊಳಿಸಬೇಕಾಗಿದೆ. ಚಿಕ್ಕ ಗಾತ್ರದ ಟಿ.ವಿ.ಗಳು ನಮ್ಮಲ್ಲಿ ಖರ್ಚಾಗುವುದಿಲ್ಲ. ನಿಮ್ಮದು ದೊಡ್ಡ ವ್ಯಾಪಾರ ಸಂಸ್ಥೆಯಾಗಿದ್ದು, ಸರಿಯಾದ ಮೇಲ್ವಿಚಾರಣೆಯಲ್ಲಿ ಗ್ರಾಹಕರು ಕೇಳಿದ ಸರಕನ್ನು ಎಚ್ಚರಿಕೆಯಿಂದ ಕಳಿಸಲಾಗದಿದ್ದುದು ಮನ್ನಿಸುವಂಥ ಅಪರಾಧವಲ್ಲ.

ಈ ಪತ್ರ ಕಂಡ ತಕ್ಷಣ ನಾವು ಕೇಳಿದ ಸರಕುಗಳನ್ನು ಕಳಿಸಿಕೊಡಿ; ಇದಕ್ಕಾಗಿ ನಿಮಗೆ ಒಂದು ವಾರದ ಗಡುವು ಕೊಡುತ್ತೇವಷ್ಟೇ! ಇಲ್ಲಿರುವ ಸಣ್ಣ ಗಾತ್ರದ ಟಿ.ವಿಗಳನ್ನು ಕೂಡಲೇ ವಾಪಸ್ ಪಡೆಯಲು ವ್ಯವಸ್ಥೆ ಮಾಡಿ. ಯಾವುದಕ್ಕೂ ತಂತಿ ಇಲ್ಲವೇ ದೂರವಾಣಿಯ ಮೂಲಕ ತಿಳಿಸಿ; ಅನಂತರ ಕಾರ್ಯ ಪ್ರವೃತ್ತರಾಗಬೇಕೆಂದು ಕೋರದೆ ವಿಧಿಯಿಲ್ಲ. ಹೀಗೆ ನಿರಾಸೆಯನ್ನೂ ತೊಂದರೆಯನ್ನೂ ಮತ್ತೆ ಉಂಟು ಮಾಡಿದ್ದೇ ಆದರೆ ವ್ಯಾಪಾರ ಸಂಬಂಧ ಅನಿವಾರ್ಯವಾಗಿ ತಪ್ಪಿ ಹೋಗುವ ಸಂಭವವಿದೆ ಎಂದು ಹೇಳದೆ ವಿಧಿಯಿಲ್ಲ.

ಇತಿ,
ಸದಾನಂದ
ಪಾಲುದಾರ

ಎಸ್‌ಪಿ/

ಸರಕು ಹಾನಿಗೊಳಗಾದಾಗ ಗ್ರಾಹಕ ಮಾಡುವ ಆಕ್ಷೇಪಣೆ
ಮಾದರಿ

ಪದ್ಮಿನಿಕನ್ನಡಿ ವ್ಯಾಪಾರಿಗಳು

ತಂತಿ: ‘ಪದ್ಮಿನಿ’                                      ೬, ಆಲೂರು ರಸ್ತೆ
ದೂರವಾಣಿ: ೪೮೯೩೨೪                             ತೈಲೂರು
ದ.ಕ.ಜಿಲ್ಲೆ

ಪತ್ರ ಸಂಖ್ಯೆ: ಆಪ ೩-೨/೮೭-೮೮                  ತಾರೀಕು: ಅಕ್ಟೋ ೧೯, ೧೯೮೭

‘ಆದಿತ್ಯ’ ಕನ್ನಡಿ ತಯಾರಕರು
ವಿಮಾನ ಪುರ
ಬೆಂಗಳೂರು- ೫೬೦ ೦೦೮

ಮಹಾಶಯರೆ,

ದಿನಾಂಕ ೧-೧೦-೯೭ ರಂದು ನಾವು ಕಳಿಸಿದ ಕ್ರಯಾದೇಶಕ್ಕನುಸಾರವಾಗಿ ಕನ್ನಡಿ ಸರಕನ್ನು ಕಳಿಸಿದ್ದಕ್ಕಾಗಿ ವಂದನೆಗಳು.

ನಾವು ನಿಲುಗನ್ನಡಿ ಸರಕು ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ತುಂಬ ನಿರಾಶೆಯೂ ವಿಸ್ಮಯವೂ ಆಯಿತು; ೫೦ ನಿಲುಗನ್ನಡಿಗಳಲ್ಲಿ ಮೇಲಿನ ೧೨ ನಿಲುಗನ್ನಡಿಗಳು ಒಡೆದಿದ್ದವು. ೫೦೦ ಕೈಗನ್ನಡಿಗಳಲ್ಲಿ ಗುಂಡಾಕಾರದ ೧೦೦ ಕನ್ನಡಿಗಳು ಕಟ್ಟಿನಿಂದ ಗುಂಡಾಗಿ ಈಚೆ ಬಂದಿದ್ದವು. ಚೌಕನೆ ಕನ್ನಡಿಗಳ ಕಟ್ಟುಗಳು ಸಡಿಲವಾಗಿವೆ. ಬಹುಶಃ ಸರಕುಗಳನ್ನು ಪರಿಶೀಲಿಸಿ ಕಳಿಸಿಲ್ಲವೋ? ಅಥವಾ ಪ್ಯಾಕಿಂಗ್ ಸರಿಯಿಲ್ಲವೋ? ತಿಳಿಯದಾಗಿದೆ. ಇಂಥ ಸೂಕ್ಷ್ಮ ವಸ್ತುಗಳನ್ನು ಕಳಿಸುವಾಗ ಅವಕ್ಕೆ ತಕ್ಕ ರಕ್ಷಣಾಕ್ರಮಗಳನ್ನು ಕೈಗೊಳ್ಳದೆ ಮತ್ತು ರವಾನೆ ಮಾಡುವ ಸಂದರ್ಭದಲ್ಲಿ ಪರೀಕ್ಷೆ ಮಾಡದೆ ಇರುವುದು ಸಂಸ್ಥೆಯ ಘನತೆಗೆ ಶೋಭೆ ತರುವಂಥದಲ್ಲ. ನಮ್ಮಲ್ಲಿ ಹಾಲಿ ಕನ್ನಡಿಗಳ ಸ್ಟಾಕೇ ಇರಲಿಲ್ಲ; ತರಿಸಿಕೊಂಡಿದ್ದರ ಗತಿ ಹೀಗಾಗಿದೆ! ಒಡೆದು ಹೋದ ಮತ್ತು ಹಾನಿಗೊಳಗಾದ ಕನ್ನಡಿಗಳಿಗೆ ಬದಲಾಗಿ ಬೇರೆ ಕನ್ನಡಿಗಳನ್ನು ಕಳಿಸಿಕೊಡುವ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ಕೋರುತ್ತೇವೆ; ಹಾನಿಗೊಳಗಾದ ಇಲ್ಲಿರುವ ಕನ್ನಡಿಗಳನ್ನು ತೆಗೆದುಕೊಂಡು ಹೋಗಬೇಕೆಂದು ತಿಳಿಸುತ್ತಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೀರಿ ಎಂದು ನಂಬಿದ್ದೇವೆ.

ನಿಮ್ಮ ವಿಶ್ವಾಸಿಗಳು,
ವಿಜಯೇಂದ್ರ ಸರಸ್ವತಿ,
ಮಾಲೀಕರು
‘ಪದ್ಮಿನಿ’ ಕನ್ನಡಿ ವ್ಯಾಪಾರಿಗಳು

ಎಸ್‌ಪಿ/