ಸ್ವರೂಪ: ಉತ್ಪಾದನೆಯಾದ ಸರಕುಗಳನ್ನು ಮಾರಾಟ ಮಾಡುವುದು ಸುಲಭದ ಕಾರ್ಯವಲ್ಲ; ಜತೆಗೆ ಅದು ಒಬ್ಬರಿಂದ ಆಗುವ ಕೆಲಸವೂ ಅಲ್ಲ, ಮಾರಾಟಗಾರನಿಗೂ ಗ್ರಾಹಕನಿಗೂ ನಡುವೆ ನೂರಾರು-ಸಾವಿರಾರು ಕೈಗಳು ಕಾರ್ಯ ನಿರ್ವಹಿಸುತ್ತವೆ. ಯಾರೊಬ್ಬರ ಕರ್ತವ್ಯ ನಿರ್ವಹಣೆಯಲ್ಲಿ ಚ್ಯುತಿಯಾದರೂ ಗ್ರಾಹಕನಿಗೆ ತೊಂದರೆಯಾಗುತ್ತದೆ; ಆಗ ಮಾರಾಟಗಾರನಿಗೆ ಆಕ್ಷೇಪಣೆ ಕಟ್ಟಿಟ್ಟುಬುತ್ತಿ. ಯಾವುದೇ ವಿಚಾರದ ಬಗ್ಗೆ ಯಾರೂ ಸುಮ್ಮನೆ ದೂರುವುದಿಲ್ಲ ಎಂಬ ಸಂಗತಿಯನ್ನು ನೆನಪಿಡಬೇಕು. ಯಾವುದೇ ಒಂದು ದೂರಿನ ಹಿಂದೆ ಸತ್ಯ ಅಡಗಿರುತ್ತದೆ. ಆದ ಕಾರಣ ಮಾರಾಟಗಾರರು ಗ್ರಾಹಕರ ಆಕ್ಷೇಪಣೆಗಳನ್ನು ಸಮಾಹಿತ ಚಿತ್ತದಿಂದ ಪರಿಶೀಲಿಸಿ ಉಚಿತ ರೀತಿಯಲ್ಲಿ ಉತ್ತರ ಪತ್ರಗಳನ್ನು ಬರೆಯಬೇಕು; ಗ್ರಾಹಕರ ಆರೋಪಗಳನ್ನು ತಿರಸ್ಕರಿಸದೆ, ಅಲಕ್ಷಿಸದೆ ಸೂಕ್ತ ಸಮಾಧಾನವನ್ನು ತಿಳಿಸಲು ಬರೆಯುವ ಪತ್ರಗಳನ್ನು ಸಮಾಧಾನ ಪತ್ರಗಳೆಂದು ಕರೆಯಬಹುದು.

ಆಕ್ಷೇಪಿಸಿದವರನ್ನು ಸಮಾಧಾನ ಪಡಿಸುವುದು ಸುಲಭದ ಕೆಲಸವಲ್ಲ. ಚಿಕ್ಕ ಮಗುವನ್ನಾಗಲಿ ವಯಸ್ಸಾದ ಹಿರಿಯರನ್ನಾಗಲೀ ಸಮಾಧಾನ ಪಡಿಸುವುದು ಭಗೀರಥ ಪ್ರಯತ್ನವೇ ಸರಿ ಎಂಬುದು ನಿತ್ಯ ಜೀವನದಲ್ಲಿ ಕಂಡಿದ್ದೇವೆ. ಇನ್ನು ಬಿಸಿ ನೆತ್ತರು ಹರಿಯುವ ತರುಣನ ವಿಚಾರವನ್ನು ಹೇಳುವ ಅಗತ್ಯವೇ ಇಲ್ಲ. ವ್ಯಾಪಾರ ವ್ಯವಹಾರದಲ್ಲಿ ಪ್ರತಿಯೊಬ್ಬರೂ ಲಾಭದತ್ತ ಕಣ್ಣಿಟ್ಟಿರುವಾಗ ಅಲ್ಲಿ-ಇಲ್ಲಿ ಪ್ರಮಾದಗಳು ಸಂಭವಿಸಿದೆ ಇರುವುದಿಲ್ಲ. ತೊಂದರೆಯನ್ನು ಅನುಭವಿಸಿದ ಗ್ರಾಹಕನಿಗೆ ಆಗ ಸಮಾಧಾನ ಹೇಳುವುದು ಕಷ್ಟದ ಕಾರ್ಯ; ಆದರೂ ಬಹು ಎಚ್ಚರಿಕೆಯಿಂದ ಮಾರಾಟಗಾರ ಸಂದರ್ಭವನ್ನು ನಿಭಾಯಿಸಬೇಕು. ಇಲ್ಲದಿದ್ದರೆ ಅವರಿಬ್ಬರ ವ್ಯಾಪಾರ ಸಂಬಂಧ ಕಡಿದು ಹೋಗಬಹುದು.

ನಾವು ಮಾಡಿದ ತಪ್ಪನ್ನು ಮತ್ತೊಬ್ಬರು ಎತ್ತಿ ತೋರಿಸಿದಾಗ ಒಪ್ಪಿಕೊಳ್ಳುವ ಬುದ್ಧಿ, ಔದಾರ್ಯ ನಮಗಿರಬೇಕು. ತಾಳ್ಮೆಯಿಂದ ತಾವು ಮಾಡಿದ ತಪ್ಪುಗಳನ್ನು ಪರೀಕ್ಷಿಸಿ ಪರಿಶೀಲಿಸಿ ಅವುಗಳನ್ನು ನಿವಾರಿಸಲು ಪ್ರಯತ್ನಿಸಬೇಕು. “ತಪ್ಪಿದ್ದರೆ ಕ್ಷಮಿಸಿ, ಆದ ತಪ್ಪಿಗೆ ವಿಷಾದಿಸುತ್ತೇವೆ. ಮುಂದೆ ಹೀಗೆ ತಪ್ಪಾಗದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಆಕ್ಷೇಪಣೆಯನ್ನು ತೀವ್ರವಾಗಿ ಪರಿಶೀಲಿಸುತ್ತೇವೆ” ಇತ್ಯಾದಿ ಮಾತುಗಳ ಮೂಲಕ ಗ್ರಾಹಕರನ್ನು ಸಮಾಧಾನ ಪಡಿಸಬೇಕು.

ಹೀಗೆ ತಾವೆಸಗಿದ ಅಪರಾಧಗಳನ್ನು ಒಪ್ಪಿಕೊಳ್ಳದೆ, “ನಾವು ಈವರೆಗೆ ಒಂದು ತಪ್ಪನ್ನೂ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಈಗಾಗಿರುವ ತಪ್ಪು ನಮ್ಮದಲ್ಲ; ನೀವು ಆರೋಪಿಸಿರುವ ದೂರಿಗೆ ನಾವು ಹೊಣೆಯಲ್ಲ, ತಪ್ಪು ಮಾಡಿರುವುದು ನೀವು, ಅದಕ್ಕೆ ನಾವೇಕೆ ಜವಾಬ್ದಾರರಾಗೋಣ?’ ಎಂದು ಮುಂತಾಗಿ ವಾದ ಮಾಡುವುದರ ಮೂಲಕ ತಾವೆಸಗಿದ ತಪ್ಪನ್ನು ಒಪ್ಪಿಕೊಳ್ಳಲು ಮರೆಮಾಚುವುದು ಸರಿಯಾದ ಮಾರ್ಗವಲ್ಲ. ಇನ್ನು ತಪ್ಪು ತೋರಿದವರನ್ನು ಗೇಲಿ ಮಾಡುವುದಾಗಲೀ ತಿರಸ್ಕಾರದಿಂದ ನೋಡುವುದಾಗಲೀ ಸಭ್ಯರ ಲಕ್ಷಣವಲ್ಲ. ತಪ್ಪಿಗಾಗಿ ಕಣ್ಣೀರ್ಗರೆಯಬೇಕಿಲ್ಲ, ವ್ಯಥೆಯಿಂದ ಹಾಸಿಗೆ ಹಿಡಿಯಬೇಕಾದ್ದಿಲ್ಲ, ಚಿಕಿತ್ಸಕ ಬುದ್ಧಿಯಿಂದ ಎಸಗಿದ ತಪ್ಪಿಗೆ ಕಾರಣ ತಿಳಿದು ಪರಿಹಾರವನ್ನು ಹುಡುಕಬೇಕು. ಆಕ್ಷೇಪಿಸಿದವರಿಗೆ ಸಹಾನುಭೂತಿಯಿಂದ ಸಮಾಧಾನಕರ ನುಡಿಗಳಿಂದ ಉತ್ತರಿಸಬೇಕು. ಆಕ್ಷೇಪಣೆ ಮಾಡುವ ಗ್ರಾಹಕರಿಗೆ ಜವಾಬ್ದಾರಿಯುತ ಅಧಿಕಾರಿಗಳು ಸಂಸ್ಥೆಯ ಪರವಾಗಿ ತಕ್ಷಣ ಸೂಕ್ತವಾಗಿ ಉತ್ತರ ಬರೆಯಬೇಕು. ಇದರಿಂದ ದೂರಿತ್ತವರಿಗೆ ಮನ್ನಣೆಯಿತ್ತಂತಾಗುತ್ತದೆ; ಸಂಸ್ಥೆಯ ಬಗ್ಗೆ ಅವರು ಸದ್ಬಾವಣೆಯನ್ನು ತಾಳುವಂತಾಗುತ್ತದೆ.

ಕಷ್ಟನಷ್ಟಗಳು ತಮಗೆ ಉಂಟಾದದ್ದರಿಂದಲೂ ಮತ್ತೆ ಈ ಪ್ರಕಾರ ತೊಂದರೆಗಳು ನಮಗೆ ಅಥವಾ ಇತರರಿಗೆ ಆಗದಿರಲಿ ಎಂದೂ, ಮತ್ತು ತಿಳಿಯದೆ ಪ್ರಮಾದವಾಗಿರಬಹುದೇನೋ, ತಿಳಿಸಿದರೆ ತಿದ್ದಿಕೊಳ್ಳಬಹುದೆಂದು ಭಾವಿಸಿ ಕೆಲವರು ಆಕ್ಷೇಪಣೆ ಮಾಡಿರುತ್ತಾರೆ; ಖಂಡಿತವಾದಿ-ನಿಷ್ಠುರವಾದಿ ಎಂಬಂತೆ ಸತ್ಯನಿರೂಪಣೆ ಮಾಡುವ ಗ್ರಾಹಕ ನಿಜವಾಗಿಯೂ ಮಾರಾಟಗಾರನ ಹಿತೈಷಿಯೇ ಆಗಿರುತ್ತಾನೆ. ಆದ್ದರಿಂದ ಗ್ರಾಹಕನಿಗೆ ಮಾರಾಟಗಾರ ಸಮಾಧಾನ ಪತ್ರಗಳನ್ನು ಬರೆಯುವುದು ಮಾರಾಟಗಾರನ ಕರ್ತವ್ಯವೂ ಹೌದು. ಸೌಜನ್ಯವೂ ಹೌದು.

ಲಕ್ಷಣಗಳು: ಆಕ್ಷೇಪಣಾಪತ್ರವನ್ನು ಪಡೆದ ಮಾರಾಟಗಾರ ಸಮಾಧಾನಕರ ಉತ್ತರ ಬರೆಯುವ ಮೊದಲು, ಗ್ರಾಹಕ ಮಾಡಿರುವ ಆಕ್ಷೇಪಣೆ ಸಾಧುವಾದುದೇಮ ಸತ್ಯವಾದುದೇ ಎಂಬುದನ್ನು ಪರಿಶೀಲಿಸಬೇಕು. ವಸ್ತುಗಳ ಸಂಖ್ಯೆ, ಅಳತೆ, ತೂಕ ಮುಂತಾದವುಗಳಲ್ಲಿ ಲೋಪದೋಷಗಳಿದ್ದರೆ ಗ್ರಾಹಕನಿಂದ ಆ ವಸ್ತುಗಳನ್ನು ಹಿಂದಕ್ಕೆ ಪಡೆದು ಅವಕ್ಕೆ ಪ್ರತಿಯಾಗಿ ದೋಷರಹಿತ ಪದಾರ್ಥಗಳನ್ನು ಬಿಕರಿದಾರ ಕಳಿಸಬೇಕು; ಆ ಖರ್ಚನ್ನು ಆತನೇ ಭರಿಸಬೇಕು. ಗ್ರಾಹಕನಿಗೆ ಹಣವನ್ನು ಹಿಂದಿರುಗಿಸುವ ಪ್ರಮೇಯ ಬಂದರೆ ಲೆಕ್ಕ್ಕೆ ಜಮಾ ಮಾಡಬೇಕು; ಮುಂದೆ ಹಾಗಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಬಿಕರಿದಾರ ಆದಷ್ಟು ಶೀಘ್ರವಾಗಿ ಸಮಾಧಾನ ಪತ್ರವನ್ನು ಬರೆಯಬೇಕು. ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕು, ಮುಂದೆ ಹಾಗಾಗದಂತೆ ಎಚ್ಚರವಹಿಸುತ್ತೇವೆಂದು ಭರವಸೆಯನ್ನು ನೀಡಬೇಕು. ತಪ್ಪನ್ನು ತೇಲಿಸುವ ಅಥವಾ ವಾದ ಮಾಡಿ ನಿರಾಕರಿಸುವ ಮನೋಭಾವ ಪತ್ರದಲ್ಲಿ ವ್ಯಕ್ತವಾಗಬಾರದು; ಗ್ರಾಹಕನದು ಅರಣ್ಯರೋದನವಾಗದಂತೆ ಬಿಕರಿದಾರನ ಮೈಯೆಲ್ಲಾ ಕಿವಿಯಾಗಿರಬೇಕು. ಒಂದು ವೇಳೆ ಗ್ರಾಹಕನ ಆಕ್ಷೇಪಣೆಯಲ್ಲಿ ಹುರುಳಿಲ್ಲದಿದ್ದಲ್ಲಿ ಮಾಲೀಕ ಸಂಸ್ಥೇ ಉದ್ರೇಕಕಾರಿಯಾದ ಭಾಷೆಯನ್ನು ಬಳಸದೆ ವಿನಯಪೂರ್ವಕವಾಗಿ ಆಕ್ಷೇಪಣೆಯನ್ನು ನಿರಾಕರಿಸಬೇಕು. ಸಕಾರಣವಾಗಿ ಸಮಾಧಾನ ಪತ್ರವನ್ನು ಬರೆಯಬೇಕು. ಗಿರಾಕಿಯ ಬಗ್ಗೆ ಸದ್ಭಾವನೆ, ವಾಸ್ತವಾಂಶದ ನಿರೂಪಣೆ, ಸಮಾಧಾನಕರ ನುಡಿ, ಮಾಡಿದ ತಪ್ಪಿಗೆ ಕ್ಷಮೆ ಕೋರಿಕೆ ಮುಂತಾದ ಅಂಶಗಳು ಸಮಾಧಾನ ಪತ್ರದಲ್ಲಿ ವ್ಯಕ್ತವಾಗಬೇಕು.

ಮೇಲೆ ನಿರೂಪಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಕರಿದಾರ ಸಂಸ್ಥೆ ಅಥವಾ ವ್ಯಕ್ತಿ ಬರೆಯುವ ಸಮಾಧಾನ ಪತ್ರಗಳನ್ನು ಹಲವು ಬಗೆಯಾಗಿ ವರ್ಗೀಕರಿಸಬಹುದು: ತಪ್ಪನ್ನು ಒಪ್ಪಿಕೊಂಡು, ತಿದ್ದಿಕೊಳ್ಳುತ್ತೇವೆಂದು ಭರವಸೆ ನೀಡುವ ಪತ್ರಗಳು, ಆಕ್ಷೇಪಣೆಯನ್ನು ಸಾಧಾರವಾಗಿ ತಿರಸ್ಕರಿಸುವ ಪತ್ರಗಳು, *೧; ಆಕ್ಷೇಪಣೆಗಳನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರಲು ಅವಧಿ ಕೋರುವ ಪತ್ರಗಳು, ಹೊಂದಾಣಿಕೆಗಾಗಿ-ಪರಸ್ಪರ ರಾಜಿಗೆ ಪ್ರಯತ್ನಿಸುವ ಪತ್ರಗಳು *೨; ಪ್ರತಿಭಟನಾ ಪತ್ರಗಳು ಇತ್ಯಾದಿ.

ಒಟ್ಟಿನಲ್ಲಿ ಹೇಳುವುದಾಧರೆ ಸಮಾಧಾನ ಪತ್ರವು ಗ್ರಾಹಕನನ್ನು ಉಳಿಸಿಕೊಳ್ಳಲು ಮಾರಾಟಗಾರ ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ತನ್ನ ದೋಷಗಳನ್ನು ತಿದ್ದಿಕೊಳ್ಳಲು ಉತ್ತಮ ಸಾಧನವೆಂದು ಹೇಳಬಹುದು.

ಹಾನಿಗೊಳಗಾದ ಸರಕಿನ ಬಗ್ಗೆ ಗ್ರಾಹಕ ಬರೆದ ಆಕ್ಷೇಪಣೆಗೆ ಮಾರಾಟಗಾರ ಬರೆದ ಸಮಾಧಾನ ಪತ್ರ (ಆಕ್ಷೇಪಣಾ ಪತ್ರ ೩ಕ್ಕೆ ಉತ್ತರ)
ಮಾದರಿ

ಆದಿತ್ಯಕನ್ನಡಿ ತಯಾರಕರು
ವಿಮಾನಪುರ, ಬೆಂಗಳೂರು

ತಂತಿ: ‘ಆದಿತ್ಯ’                                            ದೂರವಾಣಿ: ೬೫೩೭೮೯

ಪತ್ರಾಂಕ: ಆಪಸ ೨-೫೦/೮೭-೮೮                         ದಿನಾಂಕ: ಅಕ್ಟೋ ೨೮, ೧೯೮೭

ಶ್ರೀಮತಿ ವಿಜಯೇಂದ್ರ ಸರಸ್ವತಿ
ಮಾಲೀಕರು, ಪದ್ಮಿನಿ ಕನ್ನಡಿ ವ್ಯಾಪಾರಿಗಳು
೬, ಆಲೂರು ರಸ್ತೆ, ತೈಲೂರು
ದ.ಕ.ಜಿಲ್ಲೆ

ಶ್ರೀಮತಿಯವರೆ,

ವಿಷಯ: ‘ತಮ್ಮ ಆಕ್ಷೇಪಣೆಗೆ ಉತ್ತರ’

ತಮ್ಮ ಕ್ರಯಾದೇಶ ಪತ್ರಾನುಸಾರ ನಾವು ಕಳಿಸಿದ ಸರಕು ತಲುಪಿದೆ ಎಂದು ತಿಳಿಸಿದ್ದೀರಿ. ಸಂತೋಷ. ಆದರೆ ನಾವು ರವಾನಿಸಿರುವ ಕನ್ನಡಿಗಳಲ್ಲಿ ೧೨ (ಹನ್ನೆರಡು) ನಿಲುಗನ್ನಡಿಗಳು ಒಡೆದು ಹೋಗಿರುವುದನ್ನೂ, ೧೦೦ (ನೂರು) ಗುಂಡಾಕೃತಿಯ ಕನ್ನಡಿಗಳು ಚೌಕಟ್ಟಿನಿಂದ ಹೊರಬಂದಿರುವುದನ್ನೂ, ಚೌಕನೆ ಕನ್ನಡಿಗಳ ಕಟ್ಟು ಸಡಿಲವಾಗಿರುವುದನ್ನೂ ಪ್ರಸ್ತಾಪಿಸಿದ್ದೀರಿ.

ಒಡೆದ ಹಾಗೂ ಸಡಿಲ ಚೌಕಟ್ಟಿನ ಕನ್ನಡಿಗಳನ್ನು ಕಳಿಸಿದ್ದೀರಿ ಎಂದು ಯಾರೂ ಈವರೆಗೆ ನಮ್ಮನ್ನು ಆಕ್ಷೇಪಿಸಿಲ್ಲ; ಬಹುಶಃ ನೀವೊಬ್ಬರೇ ಮೊಟ್ಟ ಮೊದಲ ಬಾರಿಗೆ ಅಸಮಾಧಾನ ವ್ಯಕ್ತಪಡಿಸುವವರು. ನಮ್ಮಲ್ಲಿ ಸರಕು ರವಾನೆ ವಿಭಾಗ ಪ್ರತ್ಯೇಕವಾಗಿದ್ದು, ನಿಪುಣರ ಮೇಲ್ವಿಚಾರಣಾ ವಿಭಾಗವೊಂದು ಆ ಬಗ್ಗೆ ರವಾನೆ ಸಮಯದಲ್ಲಿ ಸರಕುಗಳನ್ನು ಪರಿಶೀಲಿಸುತ್ತದೆ. ಪ್ಯಾಕಿಂಗ್ ಬಗ್ಗೆ ತಮಗೆ ಸಂಶಯ ಮೂಡಿರುವುದು ನಿರಾಧಾರವಾದದ್ದು. ನಮಗೆ ‘ಸುರಕ್ಷಾ ಪ್ಯಾಕಿಂಗ್ ಪ್ರಶಸ್ತಿ ೧೯೮೦’ ಅನ್ನು ಅಖಿಲ ಭಾರತ ತಯಾರಿಕಾ ಸಂಘ ನೀಡಿರುವುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಬಹುಶಃ ಮರದ ಪೆಟ್ಟಿಗೆಗಳಲ್ಲಿ ಹುಲ್ಲು, ಕಾಗದಗಳ ಮೆತ್ತೆಗಳ ನಡುವೆ ಇರುವ ಕನ್ನಡಿಗಳನ್ನು ತಾವು ಹೊರತೆಗೆಯುವಲ್ಲಿ ಒರಟಾಗಿ ಸುತ್ತಿಗೆಗಳನ್ನು ಬಳಸಿ ಪೆಟ್ಟು ಜೋರಾಗಿ ಹಾಕಿ ತೆರೆದಿರಬೇಕು. ಭಾರೀ ಪೆಟ್ಟುಗಳಿಂದ ಮುಚ್ಚಳವನ್ನೂ ಮೀರಿ ಒಳಗಿನ ಗಾಜು ‘ಜಖಂ’ ಆಗಿದೆ ಎನಿಸುತ್ತದೆ; ಅದು ಸಾಧ್ಯವೂ ಹೌದು. ತಮ್ಮ ನೌಕರರು ಪೆಟ್ಟಿಗೆಗಳನ್ನು ಯಾವ ರೀತಿ ತೆರೆದರು ಎಂಬ ಬಗ್ಗೆ ದಯವಿಟ್ಟು ವಿಚಾರಿಸಬೇಕೆಂದು ಕೋರುತ್ತೇವೆ. ಮತ್ತೊಂದು ವಿಚಾರ: ಗಾಜಿನ ರಕ್ಷಾ ಪೆಟ್ಟಿಗೆಗಳನ್ನು ಹೇಗೆ ತೆರೆಯಬೇಕೆಂಬ ಬಗ್ಗೆ ಅಚ್ಚಾದ ಸಾಹಿತ್ಯವೊಂದನ್ನು ನಾವು ಬರೆದ ಪತ್ರಕ್ಕೆ ಲಗತ್ತಿಸಿದ್ದನ್ನು ತಮ್ಮ ಸ್ಮರಣೆಗೆ ತರಲು ಬರಸುತ್ತಿದ್ದೇವೆ. ನಾವಂತೂ ಗ್ರಾಹಕರಿಗೆ ಎಂದೂ ಉತ್ತಮ ಸರಕನ್ನೂ ಉತ್ತಮ ಸೇವೆಯನ್ನೂ ದೊರಕಿಸಿಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ; ಬೀಳುವುದೂ ಇಲ್ಲ. ಇದು ನಮ್ಮ ನಿಯಮ. ಆದ್ದರಿಂದ ತಮ್ಮ ಆಕ್ಷೇಪಣೆಗೂ ತಮಗೆ ಸಂಭವಿಸಿರುವ ನಷ್ಟಕ್ಕೂ ನಾವು ಜವಾಬ್ದಾರರಲ್ಲ ಎಂಬುದನ್ನು ಸ್ಪಷ್ಟಪಡಿಸಬಯಸುತ್ತೇವೆ. ನಮಗೆ ಮತ್ತೆ ಸರಕೇನಾದರೂ ಬೇಕಿದ್ದಲ್ಲಿ ಆದೇಶ ಕಳಿಸಿ. ಸದ್ಯಕ್ಕೆ ತಮಗಾದ ನಷ್ಟ ಹಾಗೂ ಅಸಮಾಧಾನಕ್ಕೆ ನಾವು ವಿಷಾದವನ್ನು ಸೂಚಿಸಬಯಸುತ್ತೇವೆ. ನಮ್ಮ ವ್ಯವಹಾರ ನಿರಾತಂಕವಾಗಿ ಸಾಗಲಿ ಎಂದು ಹಾರೈಸುತ್ತೇವೆ.

ತಮ್ಮ ವಿಶ್ವಾಸಿಗಳು,
ಆದಿತ್ಯ ಕನ್ನಡಿ ತಯಾರಕರು.

ಪಿಎಸ್/

ಸರಕು ತಲುಪುವುದು ವಿಳಂಬವಾದಾಗ ಗ್ರಾಹಕ ಆಕ್ಷೇಪಿಸಿ ಬರೆದ ಪತ್ರಕ್ಕೆ ಕಳಿಸಿದ ಸಮಾಧಾನ ಪತ್ರ.
(ಆಕ್ಷೇಪಣಾ ಪತ್ರ ೧ಕ್ಕೆ ಉತ್ತರ)
ಮಾದರಿ

ನವೀನ್ ಮತ್ತು ಕಂಪನಿ
ಲೇಖನ ಸಾಮಾಗ್ರಿಗಳ ಸಗಟು ಮಾರಾಟಗಾರರು

ತಂತಿ: ‘ನವೀನ್’                                                   ಹಳೆ ಮೊಹಲ್ಲಾ
ದೂರವಾಣಿ: ೫೩೪೨೯೦                                           ಮೈಸೂರು

ಪತ್ರ ಸಂಖ್ಯೆ: ಆಪಸ ೨-೧೦/೮೭-೮೮                        ತಾ. ೨೫ನೆಯ ಜೂನ್ ೧೯೮೭

‘ಅಪ್ಪು’ ಲೇಖನ ಸಾಮಾಗ್ರಿ ಮಾರಾಟಗಾರರು
ಹಾರೋಹಳ್ಳಿ
ಕನಕಪುರ ತಾಲೂಕು
ಬೆಂಗಳೂರು ಜಿಲ್ಲೆ- ಅವರಿಗೆ,

ಮಾನ್ಯ ಗ್ರಾಹಕರೆ,

ವಿಷಯ: ‘ನಿಮ್ಮ ಆಕ್ಷೇಪಣಾ ಪತ್ರಕ್ಕೆ ಉತ್ತರ’

ದಿನಾಂಕ ೧೫-೬-೧೯೮೭ ರಂದು ನೀವು ಬರೆದ ಪತ್ರ ತಲುಪಿತು. ವಂದನೆಗಳು. ನಿಮಗಾಗಿರುವ ತೊಂದರೆಗೆ ವಿಷಾದವನ್ನು ಸೂಚಿಸಬಯಸುತ್ತೇವೆ. ನಿಮ್ಮ ಆದೇಶವನ್ನು ಪರಿಪಾಲಿಸಲು ತಡವಾಗಿರುವುದು ಸರಿಯಷ್ಟೆ. ನಿಮ್ಮೊಡನೆ ವ್ಯವಹಾರವನ್ನು ಪ್ರಾರಂಭಿಸಿದಾಗಿನಿಂದ ಈವರೆಗೆ ಹೀಗಾಗಿರಲಿಲ್ಲ. ಈ ವಿಳಂಬಕ್ಕೆ ನಾವು ಸರ್ವಥಾ ಕಾರಣರಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ.

ಕಳೆದ ಮೂರು ತಿಂಗಳಿಂದ ನಮ್ಮ ನೌಕರರು ಮುಷ್ಕರ ಹೂಡಿದ್ದರಿಂದ ಸಾಕಷ್ಟು ಸರಕು ತಯಾರಾಗಲಿಲ್ಲ. ಆದ್ದರಿಂದ ನಾವು ನಿಮಗೆ ಸರಕನ್ನು ಕಳಿಸಲಾಗಲಿಲ್ಲ; ಪ್ರತಿದಿನವೂ ಇಂದು ಅಥವಾ ನಾಳೆ ಮುಷ್ಕರ ನಿಲ್ಲುತ್ತದೆ ಎಂದು ನಿರೀಕ್ಷಿಸುತ್ತಿದ್ದುದರಿಂದಲೂ ಸಂಧಾನಗಳು ನಡೆಯುತ್ತಿದ್ದುದರಿಂದಲೂ ನಿಮಗೆ ಖಚಿತವಾಗಿ ಪತ್ರ ಮುಖೇನ ತಿಳಿಸಲೂ ಸಾಧ್ಯವಾಗಲಿಲ್ಲ. ಆದಾಗ್ಯೂ ನಿಮಗಾದ ತೊಂದರೆಗಾಗಿ ನಾವು ಕ್ಷಮಾಪಣೆಯನ್ನು ಬೇಡುತ್ತೇವೆ. ಈಗ ಮುಷ್ಕರ ನಿಂತು ಯಥಾಪ್ರಕಾರ ಸರಕು ಉತ್ಪಾದನೆ ಕಾರ್ಯ ನಡೆಯುತ್ತಿದೆ. ಆದ್ದರಿಂದ ಮುಂದಿನ ವಾರದೊಳಗೆ ನಿಮಗೆ ತಪ್ಪದೆ ಸರಕನ್ನು ಕಳಿಸುವ ವ್ಯವಸ್ಥೇ ಮಾಡುತ್ತೇವೆ. ನಿಮಗೆ ಒಪ್ಪಿಗೆ ಇದೆ ಎಂದು ಭಾವಿಸಿದ್ದೇವೆ. ನಿಮ್ಮಂಥಾ ಗ್ರಾಹಕರು ನಮ್ಮ ಸಂಸ್ಥೆಗೆ ರಕ್ಷಾಕವಚವಿದ್ದಂತೆ. ನಮ್ಮಿಬ್ಬರ ನಡುವಿನ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗಲಿ ಎಂದು ಆಶಿಸುತ್ತೇವೆ.

ವಂದನೆಗಳು

ನಿಮ್ಮ ಹಿತಾಕಾಂಕ್ಷಿಗಳು,
ಧರ್ಮಪಾಲಯ್ಯ
ಪಾಲುದಾರ
ನವೀನ್ ಮತ್ತು ಕಂ.

ಟಿವಿ/