ವಾಣಿಜ್ಯ ಪ್ರಪಂಚದಲ್ಲಿ ಪತ್ರ ವ್ಯವಹಾರ ವಿವಿಧ ಮುಖಗಳಲ್ಲಿ ನಡೆಯುತ್ತದೆ. ಪ್ರಾರಂಭದ ಹೆಜ್ಜೆಯೆಂದರೆ ವಿಚಾರಣಾ ಪತ್ರ, ವಿಚಾರಣೆ ಮಾಡುವುದು ಮಾನವನ ಸಹಜ ಸ್ವಭಾವಗಳಲ್ಲಿ ಒಂದು. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ.

ಅಗತ್ಯ: ವೈಜ್ಞಾನಿಕ ಪ್ರಗತಿಯ ಹಾದಿಯಲ್ಲಿರುವ ಮಾನವನಿಗೆ ವಿಚಾರಣಾ ಪತ್ರಗಳ ಅಗತ್ಯವಿದೆಯೇ? ವ್ಯಾಪಾರೀ ಸಂಸ್ಥೆಗಳು ಗ್ರಾಹಕನಿಗೆ ಅನೇಕ ಜಾಹೀರಾತುಗಳನ್ನು ಪ್ರಕಟಣೆಗಳನ್ನೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುವುದಿಲ್ಲವೇ? ಸರಕು ಮಾರಾಟ ಹಾಗು ಕೊಳ್ಳುವವರ ಅನುಕೂಲಕ್ಕೆ ತೆರೆದಿಟ್ಟ ಅಂಗಡಿಯಂತೆ ಜಾಹೀರಾತುಗಳನ್ನು ಎಲ್ಲ ಮಾಹಿತಿಗಳನ್ನೂ ನೀಡುವುದಿಲ್ಲವೇ? ಎಂದು ಕೆಲವರು ಪ್ರಶ್ನಿಸಬಹುದು ನಿಜ. ವರ್ತಮಾನ ಪತ್ರಿಕೆ, ರೇಡಿಯೋ, ದೂರದರ್ಶನ, ಪ್ರಚಾರ ಪತ್ರ, ಪ್ರಕಟಣೆಗಳಲ್ಲಿ ಧಾರಣೆವಾಶಿ ಅಳತೆ, ತೂಕ, ಮಾದರಿ, ವಿನ್ಯಾಸ ಮುಂತಾದವುಗಳ ವಿವರಗಳಿರುತ್ತವೆ. ಈ ಎಲ್ಲ ಪ್ರಕಟಣೆಗಳು ತಮ್ಮ ಸಂಸ್ಥೆಯ ವಸ್ತುಗಳ ತಯಾರಿಕೆಯತ್ತ  ಗ್ರಾಹಕನ ಮನಸೆಳೆಯುತ್ತವೆ ಅಷ್ಟೇ! ಆದರೆ ಮಾರಾಟಗಾರನ ದೃಷ್ಟಿಯಲ್ಲಿ ಎಲ್ಲ ವಿವರಗಳನ್ನೂ ಅವು ಪೂರೈಸುವುದಿಲ್ಲ. ಸಾಮಾನ್ಯವಾಗಿ ಜಾಹೀರಾತುಗಳಲ್ಲಿ ಮತ್ತು ಪ್ರಕಟಣೆಗಳಲ್ಲಿ ಮಾರಾಟದ ನಿಯಮಗಳನ್ನಾಗಲಿ ಅದಕ್ಕೇ ಸಂಬಂಧಿಸಿದ ರಿಯಾಯಿತಿ ಮುಂತಾದ ಸಂಗತಿಗಳನ್ನಾಗಲೀ ಪ್ರಕಟಿಸುವುದಿಲ್ಲ. ಆದ ಕಾರಣ ವ್ಯಾಪಾರಿಗಳು ಮಾರಾಟದ ವಿವರಗಳನ್ನು ಕೇಳಿ ಅಥವಾ ಪತ್ರ ಬರೆದು ತಿಳಿದುಕೊಳ್ಳಲೇಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ವಿವರಗಳನ್ನು ತಿಳಿಸಿ ಎಂದು ಕೇಳಿ ಗ್ರಾಹಕ ಮಾರಾಟ ಸಂಸ್ಥೆಗೆ ಬರೆಯುವ ಪತ್ರಗಳನ್ನು ವಿಚಾರಣಾ ಪತ್ರಗಳು ಎನ್ನುವರು. ‘ಎನ್‌ಕ್ವೈರಿ’ ಎಂಬ ಪದಕ್ಕೆ ಕೇಳಿಕೆ, ಪ್ರಶ್ನೆ, ವಿಚಾರಣೆ, ಶೋಧನೆ, ತನಿಖೆ ಎಂದು ಮುಂತಾದ ಅರ್ಥಗಳಿರುತ್ತವೆ.

ಮಾರಾಟಗಾರರು ತಮ್ಮ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪಾದಕರು ಅಥವಾ ಸಗಟು ವ್ಯಾಪಾರಿಗಳು ಹಂಚಿಕೆದಾರರು ಸಕಾಲಕ್ಕೆ ಸರಕುಗಳನ್ನು ಒದಗಿಸಬಲ್ಲರೇ? ನೀಡುವ ರಿಯಾಯಿತಿ ಸರಕು ಕಳಿಸುವ ವಿಧಾನ, ಹಣಸಂದಾಯದ ರೀತಿ ಮುಂತಾದವುಗಳ ಬಗ್ಗೆ ಗ್ರಾಹಕನಿಗೆ ವಿವರಗಳು ಬೇಕಾಗುತ್ತವೆ. ಅದಕ್ಕಾಗಿ ಸರಕು ಇರುವ ಸ್ಥಳವನ್ನು ಹುಡುಕಿಕೊಂಡು ಅದರ ಮಾಲೀಕನನ್ನು ಕಂಡ ವ್ಯಾಪಾರಿ ಕುದುರಿಸಲಾಗದು. ಆದ ಕಾರಣ ಕುಳಿತ ಕಡೆಯೇ ವಿವರಗಳನ್ನು ಪಡೆಯಲು ಗ್ರಾಹಕ ವಿಚಾರಣಾ ಪತ್ರವನ್ನು ಬರೆಯಬೇಕಾಗುತ್ತವೆ. ಹೀಗೆ ಒಂದು ಸಂಸ್ಥೆಯಿಂದ ತಮಗೆ ಬೇಕಾದ ಸರಕುಗಳನ್ನು ತರಿಸಿಕೊಳ್ಳುವ ಮೊದಲು ಮಾರಾಠದ ವಿವರ ಅಥವಾ ಇತರ ಮಾಹಿತಿಯನ್ನು ಪಡೆಯಲು ಬರೆಯುವ ಪತ್ರಕ್ಕೆ ವಿಚಾರಣಾ ಪತ್ರ ಎಂದು ಹೆಸರು.

‘ಸರಿಯಾಗಿ ಖರೀದಿಸಿದರೆ ಅರ್ಧಕ್ಕರ್ಧ ಮಾರಾಟ ಮಾಡಿದ ಹಾಗೆ’ ಎಂಬಂತೆ ಸರಿಯಾದ ರೀತಿಯ ವಾಣಿಜ್ಯ ವಿಚಾರಣಾ ಪತ್ರದ ಮುಖಾಂತರ ಸರಿಯಾದ ಸರಕನ್ನು ತರಿಸಿಕೊಂಡು ಮಾರಾಟ ಮಾಡುವುದು ಸುಲಭ. ಅಷ್ಟೇ ಅಲ್ಲ, ತಾನು ಹಾಕಿರುವ ಬಂಡವಾಳಕ್ಕೆ ಧಕ್ಕೆಯೊದಗದಂತೆ ಸುಲಭವಾಗಿ ಲಾಭಗಳಿಸಬಹುದು. ಈ ದೃಷ್ಟಿಯಿಂದ ಪ್ರತ್ಯಕ್ಷಕೊಳ್ಳುವಿಕೆಯ ಬದಲಿ ವ್ಯವಸ್ಥೆಯೇ ವಿಚಾರಣಾ ಪತ್ರ ಎನ್ನಬಹುದು. ವಿಚಾರಣಾ ಪತ್ರ, ಬದಲಿ ರಾಯಭಾರಿಯಾಗಿರುವುದರಿಂದ ಅದನ್ನು ರಚಿಸಲು ವಿಶೇಷ ಗಮನಹರಿಸುವ ಅಗತ್ಯವಿದೆ.

ಬಗೆಗಳು: ವಿಚಾರಣಾ ಪತ್ರಗಳು ಹತ್ತಾರು ವಿಷಯಗಳಿಗೆ ಸಂಬಂಧಿಸಿದವಾಗಿರುತ್ತವೆ. ಇವನ್ನು ವಿಕ್ರಯ-ವಿಚಾರಣಾ ಪತ್ರಗಳು ಮತ್ತು ವಿಕ್ರಯೇಯರ ವಿಚಾರಣಾ ಪತ್ರಗಳು ಎಂದು ವರ್ಗಿಕರಿಸಬಹುದು. ಇವನ್ನು ಮಾರಾಟ ವಿಚಾರಣಾ ಪತ್ರಗಳು ಮತ್ತು ಸಾಮಾನ್ಯ ವಿಚಾರಣಾ ಪತ್ರಗಳು ಎಂದು ಕೆಲವರು ವಿಭಾಗಿಸಿದ್ದಾರೆ. ಆದ್ದರಿಂದ ಮಾರಾಟಕ್ಕೆ ಸಂಬಂಧಿಸಿದ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪತ್ರಗಳನ್ನು ವಿಕ್ರಯ ವಿಚಾರಣಾ ಪತ್ರಗಳು ಹಾಗೂ ಮಾಹಿತಿ ವಿಚಾರಣಾ ಪತ್ರಗಳು ಎಂದು ವಿಭಾಗಿಸಬಹುದು. ವಿಕ್ರಯ ವಿಚಾರಣಾ ಪತ್ರಗಳಿಗೆ ಸಂಬಂಧಿಸಿದಂತೆ ಇನ್ನೆರಡು ಬಗೆಯ ಪತ್ರಗಳನ್ನು ಕಾಣಬಹುದು. ಮೊದಲನೆಯದಾಗಿ ಮರು ವಿಚಾರಣಾ ಉತ್ತರ ಪತ್ರಗಳು ಮತ್ತು ಸ್ವಯಂ ವಿವರ ನೀಡಿಕೆ ಪತ್ರಗಳು, ವಿಚಾರಣಾ ಪತ್ರಕ್ಕೆ ಶೀಘ್ರ ಉತ್ತರ ನೀಡಿ ಗ್ರಾಹಕರನ್ನು ತಮ್ಮತ್ತ ಗಮನಹರಿಸುವಂತೆ ಸಂಸ್ಥೇಗಳು ಮಾಡುವ ಪ್ರಯತ್ನಗಳಿವು. ಒಟ್ಟಿನಲ್ಲಿ ವಿಚಾರಣಾ ಪತ್ರಗಳು ವ್ಯಾಪಾರ ಜಗತ್ತಿನ ಮೊದಲ ಹಂತ ಎನ್ನಬಹುದು.

ಕೇವಲ ಒಂದೆರಡು ವಿವರಗಳು ಬೇಕಾದಾಗ ವ್ಯಾಪಾರ ಸಂಸ್ಥೆ ಹತ್ತಿರವಿದ್ದರೆ, ಮತ್ತೊಂದು ವ್ಯಾಪಾರ ಸಂಸ್ಥೆ ಸೇವಕನ ಮೂಲಕ ಚೀಟಿಯನ್ನು ಬರೆದು ಕಳಿಸಿ ವಿಚಾರಿಸುವೂ ಉಂಟು. ಉದಾಹರಣೆಗೆ: ‘ಕಳೆದ ವಾರ ಬಂದ ನೀರಿನ ಹೊಸ ಪೈಪಿನ ದರ ಎಷ್ಟು? ನಮ್ಮ ಗಿರಾಕಿಗಳೊಬ್ಬರು ಕೇಳುತ್ತಿದ್ದಾರೆ’. ‘ನೀವು ೧೦೦ ರುಬ್ಬು ಯಂತ್ರಗಳನ್ನು ಇನ್ನೊಂದು ವಾರದೊಳಗೆ ಸರಬರಾಜು ಮಾಡಲು ಸಾಧ್ಯವೇ?’ ‘ವಾಣಿಜ್ಯ ಕನ್ನಡ ಪರಿಚಯ ಗ್ರಂಥ ಪ್ರಕಟವಾಗಿದೆಯೇ? ಸಾಕಷ್ಟು ಪ್ರತಿಗಳು ನಿಮ್ಮಲ್ಲಿ ಸಿಗುತ್ತವೆಯೇ?’ ಮುಂತಾದ ವಿವರಗಳನ್ನು ಹತ್ತಿರದ ಅಂಗಡಿ ಅಥವಾ ಸಂಬಂಧಿಸಿದ ಅಂಗಡಿಗಳ ಮಾಲೀಕರನ್ನು ವಿಚಾರಿಸುವುದೂ ಸಹ ವಿಚಾರಣಾ ಪತ್ರದ ಅಂಗವೇ ಆಗಿರುತ್ತದೆ. ಇಂಥ ವಿಚಾರಣಾ ಚೀಟಿಗಳನ್ನು ‘ಚೀಟಿ ವಿಚಾರಣೆ’ ಗಳೆಂದು ಕರೆಯಬಹುದು. ಸಣ್ಣಪುಟ್ಟ ಸಂಗತಿಗಳನ್ನು ದೂರವಾಣಿಯ ಮೂಲಕ ಅಥವಾ ಸೇವಕರ ಮೂಲಕ ವಿಚಾರಿಸಬಹುದು. ಇಂಥ ವಿಚಾರಣೆಗಳನ್ನು ಬಾಯಿ ಮಾತಿನ ವಿಚಾರಣೆಗಳೆಂದು ಕರೆಯಬಹುದು.

ಒಟ್ಟಿನಲ್ಲಿ ವಿಚಾರಣಾಪತ್ರಗಳನ್ನು ಆರು ಭಾಗ ಮಾಡಲು ಸಾಧ್ಯವಿದೆ:

೧. ವಿವರ ಬೇಡಿಕೆ ಪತ್ರಗಳು (ಗ್ರಾಹಕ ಬರೆಯುವ ವಿಚಾರಣಾ ಪತ್ರ)
೨. ವಿವರ ನೀಡಿಕೆ ಪತ್ರಗಳು (ವಿಚಾರಣಾ ಪತ್ರಕ್ಕೆ ಮಾಲೀಕರು ನೀಡುವ ಪ್ರತ್ಯುತ್ತರ ಪತ್ರ)
೩. ಬರೆದ ಪತ್ರದ ಬಗ್ಗೆ ವಿಚಾರಿಸಲು ಬರೆಯುವ ಮರು ವಿಚಾರಣಾ ಪತ್ರಗಳು
೪. ಅಗತ್ಯ ಬಿದ್ದಾಗ ತಾವಾಗಿ ಬರೆಯುವ ಸ್ವಯಂ ವಿವರ ನೀಡಿಕೆ ಪತ್ರಗಳು
೫. ಹತ್ತಿರದಲ್ಲಿದ್ದಾಗ ಒಂದೆರಡು ಸಂಗತಿಗಳನ್ನು ವಿಚಾರಿಸಲು ಬರೆದು ಕಳಿಸುವ ಚೀಟಿ ವಿಚಾರಣೆಗಳು.
೬. ಸೇವಕನ ಮೂಲಕ ಅಥವಾ ದೂರವಾಣಿಯ ಮೂಲಕ ಕೇಳಿ ತಿಳಿಯುವ ಬಾಯಿ ಮಾತಿನ ವಿಚಾರಣೆಗಳು.

ಉಪಯೋಗಗಳು: ವಿಚಾರಣಾ ಪತ್ರ ಬರೆಯುವುದರಿಂದ ಸಂಸ್ಥೆಗೆ ಅನೇಕ ಸಂಗತಿಗಳು ಪರಿಚಯವಾಗುತ್ತದೆ; ಗ್ರಾಹಕರ ಬೇಡಿಕೆಯ ಸ್ವರೂಪ ತಿಳಿದುಬರುತ್ತದೆ. ಮಾರಾಟಗಾರರ ನಿರೀಕ್ಷೆ ಏನಿರಬಹುದು ಎಂಬುದು ಅರಿವಿಗೆ ಬರುತ್ತದೆ; ತಮ್ಮ ವಸ್ತುಗಳಿಗಿರುವ ಬೇಡಿಕೆಯ ಸ್ಪಷ್ಟ ಚಿತ್ರವೊಂದು ಸಿಗುತ್ತದೆ; ಹೊಸ ಹೊಸ ವ್ಯಾಪಾರಾವಕಾಶಗಳೂ ಹಣ, ಕೀರ್ತಿಗಳಿಸುವ ಸಂದರ್ಭಗಳೂ ಒದಗುತ್ತವೆ.

ತಾವು ಬರೆದ ವಿಚಾರಣಾ ಪತ್ರಗಳಿಗೆ ವ್ಯಾಪಾರ ಸಂಸ್ಥೆಗಳು ಉತ್ತರ ನೀಡಿದರೆ ಗ್ರಾಹಕರಿಗೆ ಆ ಸಂಸ್ಥೆಗಳ ಬಗ್ಗೆ ಸದ್ಭಾವನೆ ಮೂಡುತ್ತದೆ. ಸಂಸ್ಥೆ ನೀಡಿದ ಸಕಾಲದ ಸೂಕ್ತ ಉತ್ತರದಿಂದ ಗ್ರಾಹಕ ಸಂಸ್ಥೆಗಳು ಆ ಸಂಸ್ಥೆಯೊಡನೆ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಲು ಇಚ್ಛಿಸುತ್ತವೆ. ಹೊಸ ಬಾಂಧವ್ಯದಿಂದ ಮಾಲೀಕ-ಗ್ರಾಹಕರಿಬ್ಬರಿಗೂ ಲಾಭವುಂಟು. ಆದ ಕಾರಣ, ವಿಚಾರಣಾ ಪತ್ರಗಳನ್ನು  ‘ಮಾಲೀಕ ಮತ್ತು ಗ್ರಾಹಕರ ನಡುವಣ ಬಾಂಧವ್ಯದ ಸೇತುವೆಗಳು’ ಅಥವಾ ‘ಹಳೆಯ ಸೇತುವೆಗಳ ಅಭಿವೃದ್ಧಿಕಾರ್ಯ’ ಎಂದು ಕರೆಯಬಹುದು.

ಮಾಹಿತಿ ವಿಚಾರಣಾ ಪತ್ರ: ಪ್ರತಿಯೊಂದು ಸಂಸ್ಥೆಗೂ ದಿನನಿತ್ಯ ವಿಚಾರಣಾ ಪತ್ರಗಳು ಬರುತ್ತಲೇ ಇರುತ್ತವೆ. ಮಾಹಿತಿ ವಿಚಾರಣಾ ಪತ್ರಗಳು ಕೇವಲ ವಾಣಿಜ್ಯ ಕ್ಷೇತ್ರಕ್ಕೆ ಮಾತ್ರ ಮೀಸಲಲ್ಲ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿಯೂ ಇವುಗಳ ವ್ಯಾಪ್ತಿ ಹೆಚ್ಚು. ಉದ್ಯೋಗಾವಕಾಶಗಳು ರಜೆ ಸೌಲಭ್ಯ, ವೈದ್ಯಕೀಯ ಸಹಾಯ, ಸಾರಿಗೆ ಸಂಪರ್ಕ, ವಿಶೇಷ ಅರ್ಹತೆ ಇರುವವರಿಗೆ ದೊರಕಬಹುದಾದ ಬಡ್ತಿ, ಬಡ್ತಿ ಮಂಜೂರಾತಿ ತಡವಾದದ್ದಕ್ಕೆ ಕಾರಣವನ್ನು ತಿಳಿಯಲು ಅಪೇಕ್ಷಿಸುವುದು, ನ್ಯಾಯಬದ್ಧ ಹಕ್ಕುಗಳನ್ನು ಕುರಿತು ಸಂಸ್ಥೆ ಅಥವಾ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರ, ಕಾರಣಗಳನ್ನು ಬಯಸುವುದು- ಇವೇ ಮೊದಲಾದವುಗಳ ಸಂಬಂಧದಲ್ಲಿ ಕೆಳ ಅಧಿಕಾರಿಗಳೂ ನೌಕರರೂ ಮೇಲಧಿಕಾರಿಗಳಿಗೆ ವಿಚಾರಣಾ ಪತ್ರಗಳನ್ನು ಬರೆಯುತ್ತಲೇ ಇರುತ್ತಾರೆ. ಇವುಗಳ ಬಗ್ಗೆ ಉತ್ತರಗಳು ಕೆಲವೊಮ್ಮೆ ಕೂಡಲೇ ಬರುವುದುಂಟು; ಆದರೆ ಅನೇಕ ಸಲ ಉತ್ತರಗಳು ತಡವಾಗಿ ಬರುತ್ತವೆ. ವಾಣಿಜ್ಯ ವಿಚಾರಣಾ ಪತ್ರಗಳಿಗೆ ‘ಈ ತಡ’ ಎಂಬ ಮಾತು ಅನ್ವಯಿಸುವುದಿಲ್ಲ. ಮಾಲೀಕರಿಂದ ಉತ್ತರ ಬರುವುದು ತಡವಾದರೆ ವ್ಯಾಪಾರ ಸಂಬಂಧ ಪ್ರಾರಂಭವಾಗಬಹುದು ಅಥವಾ ವ್ಯಾಪಾರ ಸಂಬಂಧ ಕಡಿದು ಹೋಗಬಹುದು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಸಂಸ್ಥೆಗಳು ಗ್ರಾಹಕರ ವಿಚಾರಣಾ ಪತ್ರಗಳಿಗೆ ಶೀಘ್ರ ಉತ್ತರ ನೀಡಬೇಕು.

ಆಡಳಿತ ವ್ಯವಹಾರದಲ್ಲಿ ನೌಕರ-ಅಧಿಕಾರಿಗಳ ನಡುವೆ ವಿನಿಮಯವಾಗುವ ಮಾಹಿತಿ ವಿಚಾರಣಾ ಪತ್ರಗಳ ಜೊತೆಗೆ, ಸಂಸ್ಥೆಗೆ ಹೊರಗಿನಿಂದ ಬರುವ ಮಾಹಿತಿ ವಿಚಾರಣಾ ಪತ್ರಗಳೂ ಉಂಟು, ಎಲ್ಲ ಸಂಸ್ಥೆಗಳಿಗೂ ಈ ಬಗೆಯ ಪತ್ರಗಳು ಹೆಚ್ಚು ಬರುವುದಿಲ್ಲ. ಸಾರ್ವಜನಿಕ ಸಂಪರ್ಕವುಳ್ಳ ಸಂಸ್ಥೆಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಈ ಬಗೆಯ ಮಾಹಿತಿ ವಿಚಾರಣಾ ಪತ್ರಗಳು ಬರುವುದನ್ನು ಕಾಣಬಹುದು. ಸರ್ಕಾರಿ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರಿಗಳು ಅಂಕಿ ಅಂಶಗಳನ್ನು ಸಂಗ್ರಹಿಸುವಾಗ ಮತ್ತು ಸಂಶೋಧಕರು ತಮ್ಮ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿವರವಾಗಿ ಅಪೇಕ್ಷಿಸಿದಾಗ, ಸಾಮಾನ್ಯರಿಗೆ ನೀಡಲಾಗದೆ ಕೆಲವು ಮಾಹಿತಿಗಳನ್ನು ಸಂಬಂಧಿಸಿದವರು ನೀಡುವುದುಂಟು. ಮಾಹಿತಿ ವಿಚಾರಣಾ ಪತ್ರ ಅಥವಾ ವಿವರಾಪೇಕ್ಷಾ ಪತ್ರಗಳನ್ನು ಕೇವಲ ಲಾಭ ನಷ್ಟಗಳ ದೃಷ್ಟಿಯಿಂದ ಅಥವಾ ಸಂಸ್ಥೆಗೆ ವೃಥಾ ಕಾಲ-ಶ್ರಮಗಳು ವ್ಯಯವಾಗುತ್ತದೆ ಎಂಬ ದೃಷ್ಟಿಯಿಂದ ನೋಡಲಾಗದು. ಮಾಹಿತಿಗಳನ್ನು ಪೂರೈಸುವುದು ನೈತಿಕ ಜವಾಬ್ದಾರಿ, ಸೌಜನ್ಯದ ಲಕ್ಷಣ ಹಾಗೂ ಸಾರ್ವಜನಿಕೋಪಯೋಗಿ ಕಾರ್ಯವಾಗಿದೆ.

ಈ ಬಗೆಯ ಮಾಹಿತಿಗಳನ್ನು ಆಪೇಕ್ಷಿಸುವವರು ಸಾಮಾನ್ಯವಾಗಿ ಎರಡು ಅಂಶಗಳನ್ನು ಮರೆಯಬಾರದು. ಮೊದಲನೆಯದಾಗಿ, ಈ ವಿವರಗಳನ್ನು ತಾನು ಅಪೇಕ್ಷಿಸುತ್ತಿರುವುದೇಕೆ ಮತ್ತು ಈ ಸಂಸ್ಥೆಯಿಂದಲೆ ದೊರಕಲು ಸಾಧ್ಯ ಎಂಬ ಭರವಸೆಯನ್ನು ತಿಳಿಸಬೇಕು. *೧*. ಎರಡನೆಯದಾಗಿ ಮಾಹಿತಿ ನೀಡಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುವುದೂ, ಮಾಹಿತಿ ಕೇಳುವಾಗ ಸಂಸ್ಥೆಗೆ ಅಥವಾ ವ್ಯಕ್ತಿ ನೀಡುತ್ತಿರುವ ತೊಂದರೆಗಾಗಿ ಕ್ಷಮಾಯಾಚನೆ ಮಾಡುವುದು ಹಾಗೂ ತನ್ನಿಂದ ಸಂಸ್ಥೆಗೇನಾದರೂ ಉಪಕಾರವಾಗುವುದಿದ್ದತೆ ನೆರವಾಗಲು ಭರವಸೆಯನ್ನು ನೀಡುವುದು ಈ ಅಂಶಗಳನ್ನು ಸಾಮಾನ್ಯವಾಗಿ ಈ ಬಗೆಯ ವಿಚಾರಣಾ ಪತ್ರದಲ್ಲಿ ಉಲ್ಲೇಖಿಸುತ್ತಾರೆ. ಮಾಹಿತಿ ವಿಚಾರಣಾ ಪತ್ರಕ್ಕೆ- ಪ್ರತ್ಯುತ್ತರ ನೀಡುವುದು ಸೌಜನ್ಯದ ಲಕ್ಷಣವಾಗಿದೆ. *೨.

ವಾಣಿಜ್ಯ ವಿಚಾರಣಾ ಪತ್ರ: ಸಾಮಾನ್ಯ ವಿಚಾರಣಾ ಪತ್ರ ಮತ್ತು ವಾಣಿಜ್ಯ ವಿಚಾರಣಾ ಪತ್ರಗಳೆರಡೂ ವಿವರ ಕೇಳಿಕೆಯ ಪತ್ರಗಳೇ ಆದರೂ, ವಾಣಿಜ್ಯ ವಿಚಾರಣಾ ಪತ್ರ ಮುಖ್ಯವಾಗಿ ಗ್ರಾಹಕರಿಂದ ಅಥವಾ ವಾಣಿಜ್ಯ ಸಂಸ್ಥೆಗಳಿಂದ ಸರಕುಗಳ ಮಾರಾಟ, ಸರಬರಾಜು, ದರ, ರಿಯಾಯಿತಿ, ಸಾಲಸೌಲಭ್ಯ ಮೊದಲಾದ ಸಂಗತಿಗಳನ್ನು ಕುರಿತು ಬರರೆದ ಪತ್ರಗಳಾಗಿರುತ್ತವೆ. *೩. ವಾಣಿಜ್ಯ ವಿಚಾರಣಾ ಪತ್ರಗಳನ್ನು ಹೊಸಬರೂ ಬರೆಯುತ್ತಾರೆ. ಈಗಾಗಲೇ ಸಂಸ್ಥೆಯೊಂಧಿಗೆ ವ್ಯವಹರಿಸುತ್ತಿರುವವರೂ (ಹಳೆಯ ಗಿರಾಕಿಗಳು) ಬರೆಯುತ್ತಾರೆ. ಹೊಸದಾಗಿ ಸಂಸ್ಥೆಯಿಂದ ಸರಕುಗಳ ವಿವರಗಳನ್ನು ಆಪೇಕ್ಷಿಸಿದ ಪತ್ರಗಳೂ, ಮಾಮೂಲಾಗಿ ವ್ಯವಹರಿಸುತ್ತಿದ್ದವರು ಅಪೇಕ್ಷಿಸುವ ವಿವರಗಳ ಪತ್ರಗಳಿಗೂ ಸ್ವಲ್ಪ ವ್ಯತ್ಯಾಸವುಂಟು.

ಹೊಸದಾಗಿ ಅಥವಾ ಮೊದಲ ಬಾರಿ ವಿಚಾರಣಾ ಪತ್ರ ಬರೆಯುವವರು ತಮಗೆ ಈ ಸಂಸ್ಥೆಗೆ ಪತ್ರ ಬರೆಯಲು ಮಾಹಿತಿ ಎಲ್ಲಿಂದ ಸಿಕ್ಕಿತು ಎಂಬುದನ್ನು ತಿಳಿಸಿದಾಗ *೪. ಆ ಸಂಸ್ಥೆಗೆ ಸಂತೋಷವುಂಟಾಗಿ ಆಸಕ್ತಿಯಿಂದ, ಶೀಘ್ರವಾಗಿ ಉತ್ತರಿಸಬಹುದು *೫.

ಸಾಮಾನ್ಯವಾಗಿ ಈ ಕೆಳಕಂಡ ಕಾರಣಗಳಿಗಾಗಿ ವಿಚಾರಣಾ ಪತ್ರಗಳನ್ನು ಬರೆಯಲಾಗುತ್ತದೆ. ಕ್ರಮಬದ್ಧವಾಗಿ ಕೊಳ್ಳುವ ಸರಕುಗಳನ್ನಲ್ಲದೆ ಆಗಾಗ ಕೊಳ್ಳುವ ಸರಕುಗಳ ಬಗ್ಗೆ ನಿರ್ದಿಷ್ಟ ಮಾಹಿತಿ ಮಾರಾಟದ ವ್ಯಕ್ತಿಗೆ ಇರುವುದಿಲ್ಲ. ಸಾಕಷ್ಟು ಕಾಲದ ಅಂತರದಿಂದ ಮಾರುಕಟ್ಟೆ ದರ ವ್ಯತ್ಯಾಸವಾಗಿರುತ್ತದೆ. ಹೊಸ ನಮೂನೆ ಮಾಲು ಬಂದಿರುತ್ತದೆ; ಮೊದಲಿಗಿಂತ ಈಗ ವೈವಿರ್ಧಯಮಯ ಸರಕು ಬಂದಿರಬಹುದು; ಆದ ಕಾರಣ ಹಿಂದೊಮ್ಮೆ ಅಥವಾ ಹಲವು ಸಲ ಸರಕನ್ನು ಕೊಂಡಿದ್ದರೂ ಪ್ರಕೃತವಾಗಿ ಅದೇ ಸರಕಿನ ದರ  ಸೂಚಿ ಮತ್ತು ಇತರ ವಿವರಗಳನ್ನು ಪಡೆಯಲು ವಿಚಾರಣಾ ಪತ್ರ ಬರೆಯಬೇಕಾಗುತ್ತದೆ. ವಿಚಾರಣಾ ಪತ್ರವನ್ನು ಬರೆಯುವ ಗ್ರಾಹಕ ಈ ಮುಂದಿನ ಅಂಶಗಳನ್ನು ಗಮನಿಸಬೇಕು; ಗ್ರಾಹಕ ಪ್ರಕಟಿತ ಜಾಹೀರಾತನ್ನು ಕಂಡು ಮೊದಲ ಬಾರಿಗೆ ವಿಚಾರಣಾ ಪತ್ರ ಬರೆಯುತ್ತಿದ್ದರೆ ಆ ಜಾಹೀರಾತಿನ ಬಗ್ಗೆ ಉಲ್ಲೇಖ ನೀಡಬೇಕು; ಅಥವಾ ಯಾವುದಾದರೂ ಸಂಸ್ಥೆ -ವ್ಯಕ್ತಿಯಿಂದ ಸರಕುಗಳ ಬಗ್ಗೆ ಮಾಹಿತಿ ಸಿಕ್ಕಿದ್ದರೆ ಆ ಬಗ್ಗೆ ಬರೆಯಬೇಕು.

ವ್ಯಾಪಾರವನ್ನು ಮುಂದುವರಿಸುವ ಭಾವನೆಯಲ್ಲಿ ವಿವರಗಳನ್ನು ಕೇಳಿರಿ, ಸರಕುಗಳ ಬಗ್ಗೆ ವಿಚಾರಿಸುವಾಗ ಬೇಕಾಗಿರುವ ಸರಕಿನ ಪ್ರಮಾಣ, ಗುಣಮಟ್ಟ, ದರ, ಶೇಕಡ ರಿಯಾಯಿತಿ, ಸರಕು ಸಾಗಾಣಿಕೆ ವೆಚ್ಚದ ನಿರ್ವಹಣೆಯ ಜವಾಬ್ದಾರಿ, ಸರಕು ಸಮ್ಮತವಾದಲ್ಲಿ ಮುಂದೆ ಮಾಡಬಹುದಾದ ವ್ಯಾಪಾರದ ಅಂದಾಜು ಪ್ರಮಾಣ, ಸಾಲಸೌಲಭ್ಯದ ರೀತಿ ಅಥವಾ ನಗದು ವ್ಯಾಪಾರ ವ್ಯವಹಾರ ನಿಯಮಗಳು, ಪ್ಯಾಕಿಂಗ್ ಮತ್ತು ಬಟವಾಡೆ ಅವಧಿ, ಸಾಲಸೌಲಭ್ಯವನ್ನು ಅಪೇಕ್ಷಿಸಿದ್ದಲ್ಲಿ ತನ್ನ ಸಂಸ್ಥೆ ಬಗ್ಗೆ ನೀಡಿದ ಗಣ್ಯ ಸಂಸ್ಥೆಗಳ ಶಿಫಾರಸು ಪತ್ರಗಳ ಜೋಡಣೆ ಇವೇ ಮೊದಲಾದ ಅಂಶಗಳತ್ತ ಗಮನ ಹರಿಸಬೇಕು.

ವಿಚಾರಣಾ ಪತ್ರದಲ್ಲಿ ಪ್ರಸ್ತಾಪಿಸುವ ಅಂಶಗಳು ತುಂಬ ಕಡಿಮೆ ಇದ್ದಾಗ ಅಂಚೆ ಕಾರ್ಡು ಅಥವಾ ಅಂತರ್ದೇಶಿಯ ಪತ್ರದಲ್ಲಿ ಬರೆಯಬಹುದು; ಆದರೆ ಸಂಸ್ಥೆಗಳು ತಮ್ಮ ಶೀರ್ಷಿಕಾ ಪತ್ರದಲ್ಲಿ ಬರೆಯುವುದೇ ಒಳ್ಳೆಯದು.

ಯಾವುದೇ ವಿಚಾರಣಾ ಪತ್ರವಾದರೂ ವಿಷಯವನ್ನು ನೇರವಾಗಿ ಪ್ರಸ್ತಾಪಿಸಿರಬೇಕು. ವಿವರಗಳನ್ನು ಸ್ಪಷ್ಟವಾಗಿ ಕೇಳಬೇಕು; ಇನ್ನೊಬ್ಬರ ಕಾಲ ಹಾಗೂ ಪರಿಶ್ರಮಗಳನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಆದಷ್ಟು ಚಿಕ್ಕದಾಗಿ ಚೊಕ್ಕವಾಗಿ ವಿಚಾರಣಾ ಪತ್ರವನ್ನು ಬರೆಯಬೇಕು. ತಕ್ಷಣದ ವ್ಯಾಪರಕ್ಕಿಂತ ಭವಿಷ್ಯದ ವ್ಯವಹಾರ-ಸಂಬಂಧಗಳ ದೃಷ್ಟಿಯಿಂದ ವಿಚಾರಣಾ ಪತ್ರಗಳಿಗೆ ಮಹತ್ವವಿದೆ.

ವಿಚಾರಣಾ ಪತ್ರಗಳಿಗೆ ಉತ್ತರ ನೀಡಿಕೆ: ಅಲಕ್ಷ್ಯ, ಉದಾಸೀನ ಭಾವನೆಗಳು ವ್ಯಾಪಾರ ಕ್ಷೇತ್ರದಲ್ಲಿ ಒಳ್ಳೆಯ ಫಲವನ್ನು ನೀಡಲಾರವು. ಒಂದು ವಿಚಾರ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದಕ್ಕೆ ಸೂಕ್ತ ಗಮನವೀಯಬೇಕಾದದ್ದು ಮಾನವಧರ್ಮ. “ವಿಚಾರಣಾ ಪತ್ರಗಳು ಕೇವಲ ವಿವರಾಪೇಕ್ಷೀ ಪತ್ರಗಳು, ವಿಚಾರಣೆ ಮಾಡುತ್ತಿರುವವರು ವ್ಯಾಪಾರ ಮಾಡಿಯಾರು ಎಂಬುದಕ್ಕೆ ಎಲ್ಲದೆ ಖಾತ್ರಿ? ಉತ್ತರಿಸಿದರೆ ಆಯಿತು” – ಎಂಬ ಆಲಕ್ಷ್ಯ ಭಾವನೆಯನ್ನು ಮಾರಾಟಗಾರ ತಾಳಬಾರದು. ವಿಚಾರಣಾ ಪತ್ರ ಯಾವುದೇ ಆಗಿರಲಿ ಕೂಡಲೇ ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸುವುದು ಬಹುಮುಖ್ಯ. ಸಮರ್ಪಕ ಮಾಹಿತಿ ನೀಡಿ, ಸಕಾಲದಲ್ಲಿ ಉತ್ತರಿಸಿದಾಗ ಮಾರಾಟ ಸಂಸ್ಥೆ ಬಗ್ಗೆ ಗ್ರಾಹಕ ಸಂಸ್ಥೆಗೆ ಗೌರವ, ವಿಶ್ವಾಸಗಳು ಮೂಡುತ್ತವೆ; ವ್ಯವಹರಿಸಬೇಕೆಂಬ ಅಪೇಕ್ಷೆಯುಂಟಾಗುತ್ತದೆ. ವಿಚಾರಣಾ ಪತ್ರಕ್ಕೆ ಉತ್ತರ ಬರುವುದು ವಿಳಂಬವಾದರೆ ಅಥವಾ ಉತ್ತ ಬರದೇ ಇದ್ದರೆ ಗ್ರಾಹಕ ಬೇರೆ ಕಡೆ ವ್ಯವಹರಿಸಲು ಇದ್ದ ಸದವಕಾಶ ಕಳೆದು ಹೋಗುತ್ತದೆ. ಅಂತೆಯೇ ಉತ್ತರ ನೀಡದಿದ್ದ ಸಂಸ್ಥೆಯ ಔದಸೀನ್ಯದ ಬಗ್ಗೆ ಉಳಿದವರಲ್ಲಿ ಪ್ರಸ್ತಾಪಿಸಿದಾಗ ಆ ಸಂಸ್ಥೆಯ ಕೀರ್ತಿ ಕುಗ್ಗುತ್ತದೆ; ಅದರಲ್ಲೂ ಮೊದಲ ಬಾರಿಗೆ ವಿಚಾರಣಾ ಪತ್ರ ಬರೆದ ಗ್ರಾಹಕನಿಗೆ ಮಾಲೀಕ ಶೀಘ್ರವಾಗಿ, ಸಮಗ್ರವಾಗಿ ಉತ್ತರಿಸದಿದ್ದರೆ ಅದು ಭಾರೀ ಗಿರಾಕಿಯೊಬ್ಬರನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ವ್ಯಾಪಾರ ಮಾಡಲಿ ಬಿಡಲಿ ವಿವರಗಳನ್ನು ಕೇಳಿ ಬರೆದ ವಿಚಾರಣಾ ಪತ್ರಕ್ಕೆ ಸಮರ್ಪಕ ಉತ್ತರಗಳನ್ನು ನೀಡಬೇಕು. *೬ ಏಕೆಂದರೆ ಬಾಂಧವ್ಯ- ವಿಶ್ವಾಸಗಳು ಉಳಿದಿದ್ದರೆ ಇಂದಲ್ಲ-ನಾಳೆ ವ್ಯಾಪಾರವಕಾಶ ಉಂಟಾಗಬಹುದು ಅಥವಾ ಸಂಸ್ಥೆಯ- ವಿಶ್ವಾಸ ಬಾಂಧವ್ಯ, ಪ್ರಾಮಾಣಿಕತೆಗಳನ್ನು ಗ್ರಾಹಕ ಸಂಸ್ಥೆ ಉಳಿದವರಲ್ಲಿ ಪ್ರಸ್ತಾಪಿಸಿದಾಗ ಅವರು ವ್ಯಾಪಾರ ಸಂಬಂಧವನ್ನು ಪ್ರಾರಂಭಿಸಬಹುದು. ಒಟ್ಟಾರೆ ಆದರಿಂದ ಲಾಭವಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಯಾವುದೇ ಸಂದರ್ಭದಲ್ಲಾಗಲೀ; ಎಂಥ ವಿಚಾರಣಾ ಪತ್ರವೇ ಆಗಲಿ ಅದಕ್ಕೆ ಉಚಿತ ರೀತಿಯಲ್ಲಿ, ಶೀಘ್ರವಾಗಿ ಉತ್ತರಿಸಬೇಕು.

ಕೆಲವೊಮ್ಮೆ ವಿಚಾರಣಾ ಪತ್ರದಲ್ಲಿ ಕೇಳಿರುವ ವಿವರಗಳನ್ನೆಲ್ಲಾ ಒಮ್ಮೆಗೇ, ಕೂಡಲೇ ನೀಡಲಾಗದಿರಬಹುದು; ಅಂಥ ಸಂದರ್ಭಗಳಲ್ಲಿ ಲಭ್ಯವಿರುವ ವಿವರಗಳನ್ನಷ್ಟೇ ನೀಡಿ ಉಳಿದ ವಿವರಗಳನ್ನು ಆದಷ್ಟು ಬೇಗ, ಸಾಧ್ಯವಾದರೆ ಇಂಥ ದಿನಾಂಕದೊಳಗೆ ತಿಳಿಸುತ್ತೇವೆ ಎಂಬ ಭರವಸೆಗಳನ್ನು ನೀಡಬೇಕು.

ವಿಚಾರಣಾ ಪತ್ರಗಳಿಗೆ ಉತ್ತರ ನೀಡುವಾಗ ಹಲವು ವಿಧಾನಗಳನ್ನು ಅನುಸರಿಸಬಹುದು; ಸಾಮಾನ್ಯವಾಗಿ ದರಪಟ್ಟಿ, ಸರಕು ವಿವರ ಪಟ್ಟಿ, ವ್ಯಾಪಾರದ ಷರತ್ತುಗಳು, ಸರಕುಗಳನ್ನು ಕೊಂಡುಕೊಳ್ಳಲು ಭರ್ತಿ ಮಾಡಬೇಕಾದ ಫಾರಂ-ಇವೇ ಮೊದಲಾದವನ್ನು ಅನೇಕ ಸಂಸ್ಥೆಗಳು ಅಚ್ಚು ಮಾಡಿಸಿ ಇಟ್ಟಿರುತ್ತವೆ. ಸಾಮಾನ್ಯವಾಗಿ ಅವನ್ನೇ ಅಗತ್ಯಬಿದ್ದಾಗ ಕಳಿಸಿಕೊಡುವ ಪರಿಪಾಠವನ್ನಿಟ್ಟುಕೊಂಡಿರುತ್ತವೆ. ಆದರೆ ಅನೇಕ ಸಲ ಅಚ್ಚು ಮಾಡಿದ ದಿನಾಂಕಕ್ಕೂ ವಿಚಾರಣಾ ಪತ್ರದ ದಿನಾಂಕಕ್ಕೂ ನಡುವಣ ಅವಧಿಯಲ್ಲಿ ಹಲವಾರು ಬದಲಾವಣೆಗಳಾಗಿ ದರವ್ಯತ್ಯಾಸ, ರಿಯಾಯಿತಿ ಸೌಲಭ್ಯದಲ್ಲಿ ಬದಲಾವಣೆ ಅಥವಾ ಸರಕುಗಳಲ್ಲಿ ಕೆಲವು ಸ್ಟಾಕಿಲ್ಲದಿರುವುದು ಇತ್ಯಾದಿ ವ್ಯತ್ಯಾಸಗಳು ಸಂಭವಿಸಿರಬಹುದು. ಆ ಸಂದರ್ಭಗಳಲ್ಲಿ ಅಚ್ಚಾದ ವಿವರಗಳನ್ನು ತಿದ್ದಿ ಕಳಿಸಬೇಕು; ತೀರಾ ಬದಲಾವಣೆಗಳಿದ್ದರೆ ಬರೆದು ಅಥವಾ ಹೊಸ ಮುದ್ರಿತ ಪ್ರತಿಯನ್ನು ಕಳಿಸಬೇಕು. ಅಚ್ಚಿನ ಪ್ರತಿಗಳಲ್ಲಿ ಇಲ್ಲದ ವಿವರಗಳನ್ನು ಗ್ರಾಹಕ ವ್ಯಾಪಾರಿ ಬಯಸಿದ್ದರೆ ಆ ಬಗ್ಗೆ ಬರೆದು ಉತ್ತರಿಸಬೇಕು.

ವಿಚಾರಣಾ ಉತ್ತರ ಪತ್ರಗಳ ಲಕ್ಷಣಗಳು: ಸಾಮಾನ್ಯವಾಗಿ ದರಪಟ್ಟಿ, ಸರಕು ಪಟ್ಟಿ, ವ್ಯಾಪಾರನಿಯಮ ಮೊದಲಾದವನ್ನು ಮಾರಾಟಗಾರರು ತಾವು ಬರೆಯುವ ಪತ್ರದೊಡನೆ ಲಗತ್ತಿಸಿ ಕಳಿಸುತ್ತಾರೆ; ಆ ಬಗ್ಗೆ ಪತ್ರದಲ್ಲೂ ನಮೂದಿಸಿರುತ್ತಾರೆ. ಹೀಗೆ ಗ್ರಾಹಕ ಕೇಳಿದ ವಿವರಗಳ ಬಗ್ಗೆ ಪ್ರಸ್ತಾಪಿಸುತ್ತಾ ಇಂತಿಂಥ ವಿವರಗಳು ಇಂತಿಂತಹ ಪುಟಗಳಲ್ಲಿವೆ ಎಂದು ಬರೆಯುವುದೂ ಒಳ್ಳೆಯದು. ಕೇವಲ ಒಂದೆರಡು ಮಾಹಿತಿಗಳನ್ನು ಅಥವಾ ಚಿಕ್ಕಪುಟ್ಟ ವಿವರಗಳನ್ನು ಗ್ರಾಹಕ ಅಪೇಕ್ಷಿಸಿದ್ದರೆ, ಅದನ್ನು ಪತ್ರದಲ್ಲಿಯೇ ಸೂಚಿಸಿ ತಿಳಿಸಬಹುದು. ಯಾವುದೇ ಸಂದರ್ಭದಲ್ಲಾಗಲಿ ಮಾಹಿತಿಗಳು ಅಸ್ಪಷ್ಟವಾಗಿರಬಾರದು. ತಪ್ಪಾಗಿ ನಮೂದಾಗಬಾರದು, ಅಥವಾ ವಿಚಾರಣಾ ಪತ್ರಗಳಿಗೆ ಉತ್ತರ ಬರೆಯುವಾಗ ಪ್ರಾರಂಭದಲ್ಲಿ ವಿವರಗಳನ್ನು ಕೇಳಿದ್ದಕ್ಕಾಗಿ ಸಂತೋಷವನ್ನೂ, ಮುಕ್ತಾಯದಲ್ಲಿ ವ್ಯಾಪಾರ ಮಾಡುವರೆಂಬ ಭರವಸೆಯನ್ನೂ ವ್ಯಕ್ತಪಡಿಸಬೇಕು; ಅಥವಾ ಸಂಸ್ಥೆಗೆ ಪ್ರಚಾರ ಸಿಗಲಿ, ಗ್ರಾಹಕನಿಗೆ ಹೆಚ್ಚು ವಿಷಯ ತಿಳಿಯಲಿ ಎಂಬ ಆತ್ಯುತ್ಸಾಹದಿಂದ ಗ್ರಾಹಕ ಬರೆದ ವಿಚಾರಣಾ ಪತ್ರಕ್ಕೆ ಅಗತ್ಯವಾದ ವಿವರಕ್ಕಿಂತ ಹೆಚ್ಚು ವಿವರಗಳನ್ನು ಕಳಿಸಬಾರದು. ಗ್ರಾಹಕ ಕೇಳಿದ ವಿವರಗಳಿಗೆ ಪೂರಕವಾದ ಅಂಶಗಳಲ್ಲಿ ಅವನ್ನು ತಿಳಿಸಬಹುದು. ಉದಾಹರಣೆಗೆ: ‘ನೀರೆತ್ತುವ ಪಂಪಿನ ಮಾದರಿಯೊಂದರ ಬಬಗ್ಗೆ ವಿವರ ಕೇಳಿ ಒಬ್ಬ ಗ್ರಾಹಕ ಬರೆದಿದ್ದರೆ ಆತ ಕೇಳಿದ ಮಾದರಿಯ ಬಗ್ಗೆ ವಿವರ ನೀಡುವುದರ ಜೊತೆಗೆ ಇತರ ಬಗೆಯ ನೀರೆತ್ತುವ ಪಂಪುಗಳ ಬಗ್ಗೆ ವಿವರವನ್ನು ಕೊಟ್ಟರೆ ತಪ್ಪಾಗುವುದಿಲ್ಲ. ಆದರೆ ನಮ್ಮಲ್ಲಿ ವಿವಿಧ ಬಗೆಯ ಟ್ರಾಕ್ಟರುಗಳು, ರುಬ್ಬು ಯಂತ್ರಗಳು, ಕೃಷಿ ಉಪಕರಣಗಳು ದೊರೆಯುತ್ತವೆ ಎಂಬ ಮಾಹಿತಿ ನೀಡಿದಾಗ ಅದು ಅನಗತ್ಯವೆನಿಸುತ್ತವೆ. ಆದ್ದರಿಂದ ವಿಚಾರಣಾ ಪತ್ರಕ್ಕೆ ನೀಡುವ ಉತ್ತರ ಹಿತಮಿತವಾಗಿರಬೇಕು, ವಿಚಾರಣಾ ಪತ್ರದ ಅಗತ್ಯಗಳನ್ನಷ್ಟೇ ಪೂರೈಸಬೇಕು. ಸಂಶೋಧಕರು ಅಂಕಿ ಅಂಶಗಳ ತಜ್ಞರು, ಸಾಮಾಜಿಕ ಕಾರ್ಯಕರ್ತರು ಪ್ರಶ್ನಾವಳಿಗಳನ್ನು ಕಳಿಸಿದ್ದರೆ ಅವುಗಳಿಗೆ ತಕ್ಕ ರೀತಿಯಲ್ಲಿ ಉತ್ತರ ನೀಡಬೇಕು. ಸಂಸ್ಥೆಯ ಕಾರ್ಯ ಪರಿಶೀಲನೆಯ ಬಗ್ಗೆ ಅಥವಾ ಇತರ ವಿಚಾರಣೆಗಳ ಬಗ್ಗೆ ಚರ್ಚಿಸುವಂಥ ಸಂಗತಿಗಳಿದ್ದಾಗ ಸಾಕಷ್ಟು ಮಾಹಿತಿ-ದಾಖಲೆಗಳನ್ನು ನೀಡಬೇಕಾದಾಗ ಸುದೀರ್ಘವಾಗಿ ಪತ್ರ ಬರೆಯುವ ಬದಲು ಸಂಸ್ಥೆಗೆ ಬಂದು ತಿಳಿದುಕೊಂಡು ಹೋಗಲು ಕೋರಬಹುದು. ಆದರೆ ಸಾಮಾನ್ಯವಾಗಿ ವಾಣಿಜ್ಯರಂಗದ ವಿಚಾರಣಾ ಪತ್ರಗಳಲ್ಲಿ ಇಂಥ ಪ್ರಮೇಯ ಬರುವುದಿಲ್ಲ. ಪತ್ರದ ಮೂಲಕವೇ ಅಗತ್ಯ ಮಾಹಿತಿಯನ್ನು ಪಡೆಯುವುದುಂಟು; ಒಂದೆರಡು ಸಂಗತಿಗಳ ಬಗ್ಗೆ ವಿಚಾರಣೆ ಮಾಡಬೇಕಾದಾಗ ಪೋನಿನ ಮೂಲಕ ಅಥವಾ ವ್ಯಾಪಾರ ಸಂಸ್ಥೆ ತೀರ ಹತ್ತಿರವಿದ್ದರೆ ಸೇವಕರ ಮುಖಾಂತರ ಬಾಯಿಮಾತಿನ ಮೂಲಕ ಅಥವಾ ಚೀಟಿ ಬರೆದು ಕಳಿಸಿ ವಿವರಗಳನ್ನು ಅಪೇಕ್ಷಿಸಬಹುದು; ಇವನ್ನು ಚುಟುಕು ವಿಚಾರಣಾ ಪತ್ರಗಳೆಂದು ಕರೆಯಬಹುದು.

ಗ್ರಾಹಕರು ಸರಕುಗಳ ಬಗ್ಗೆ ವಿವರಣೆ ಪಡೆಯಲು ವಿಚಾರಣಾ ಪತ್ರಗಳನ್ನು ಬರೆದಾಗ ಆ ಬಗೆಯ ಸರಕುಗಳನ್ನು ತಾವು ಉತ್ಪಾದಿಸದಿದ್ದಾಗ, ಅವು ಬೇರೆಯವರಲ್ಲಿ ದೊರೆಯುತ್ತಿದ್ದರೆ ಅಥವಾ ಗ್ರಾಹಕರು ಕೇಳಿದ ಮಾಹಿತಿ ಬೇರೆ ಕಡೆ ಲಭಿಸುವಂತಿದ್ದು ತಾವು ಅವರನ್ನು ಸಂಪರ್ಕಿಸಬಹುದೆಂದು ವಿವರ ನೀಡಿ ಒಂದು ಸಂಸ್ಥೆ ಪತ್ರ ಬರೆಯುವುದು ಸೌಜನ್ಯದ ಲಕ್ಷಣವೂ ಹೌದು, ಸೇವಾ ಮನೋಭಾವವೂ ಹೌದು, ವಾಣಿಜ್ಯ ನೀತಿಯೂ ಹೌದು.

ಮರು ವಿಚಾರಣಾ ಉತ್ತರ ಪತ್ರ: ಇದನ್ನು ‘ಅನುಗತ ಪತ್ರ’ ವೆಂದೂ ಕರೆಯುವರು. ಸರಕುಗಳನ್ನು ಕೊಳ್ಳಲು ಬಯಸಿ ಗ್ರಾಹಕ ವಿಚಾರಣಾ ಪತ್ರವನ್ನು ಬರೆಯುತ್ತಾನೆ. ವಿಚಾರಣಾ ಪತ್ರವನ್ನು ಪಡೆದ ಸಂಸ್ಥೆ ಸಕಾಲದಲ್ಲಿ ಉತ್ತರವನ್ನು ನೀಡುತ್ತದೆ, ಅದಕ್ಕೆ ಪ್ರತಿಫಲವಾಗಿ ಗ್ರಾಹಕರು ಉತ್ತರವನ್ನೂ ಬರೆಯದೆ ಸರಕು ಆದೇಶವನ್ನೂ ನೀಡದೆ ಸುಮ್ಮನಿರಬಹುದು. ಆಗ ಮಾಲೀಕ ಗ್ರಾಹಕನಿಗೆ ಇನ್ನಷ್ಟು ಮಾಹಿತಿ ಅಗತ್ಯವಿದ್ದಲ್ಲಿ ಒದಗಿಸುತ್ತೇವೆ- ಎಂಬ ಧಾಟಿಯಲ್ಲಿ ‘ಮರು ಪತ್ರ’ ಬರೆಯುತ್ತಾನೆ. ಹೀಗೆ ಬರೆಯುವಾಗ ವಿನಯ ಪೂರ್ವಕ ನಿರೂಪಣೆಯನ್ನು ಅನುಸರಿಸಬೇಕು. ನೀವು ನಮ್ಮಿಂದ ವಿವರ ಪಡೆದದ್ದೇಕೆ? ಅದರ ಬಗ್ಗೆ ಏಕೆ ಏನನ್ನೂ ಹೇಳಿಲ್ಲ? ನಿಮಗಾದ ತೊಂದರೆ ಏನು? ನಿರಾಸೆ ಏನು? ನೀವು ಹೀಗೆ ಮಾಡಬಹುದೇ? ನಾವು ನಿಮಗೆ ವಿವರಗಳನ್ನು ಕಳಿಸಲು ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತಲ್ಲ! ಎಂದು ಮುಂತಾಗಿ ಒರಟು ರೀತಿಯಲ್ಲಿ ಪತ್ರ ಬರೆಯಬಾರದು. ಅದಕ್ಕೆ ಬದಲು ಉಪಾಯವಾಗಿ ಜಾಣ್ಮೆಯಿಂದ ನಾವು ಉತ್ತರಿಸಿದ ಪತ್ರ ನಿಮ್ಮ ಕೈಸೇರಲಿಲ್ಲವೇ? ಅಥವಾ ನಿಮಗೆ ಮತ್ತಷ್ಟು ಮಾಹಿತಿ ಬೇಕೆ? ಅಥವಾ ನಮ್ಮ ವ್ಯಾಪಾರೀ ನಿಯಮಗಳೂ ಸರಕೂ ನಿಮಗೆ ಸಮರ್ಪಕವೆನಿಸಲಿಲ್ಲವೇ? ಈ ಬಗ್ಗೆ ನೀವು ವಿವರವನ್ನು ತಿಳಿಸಿದರೆ ಉಪಕಾರವಾಗುತ್ತದೆ. ನಮ್ಮಿಬ್ಬರ ವ್ಯಾಪಾರ ಬಾಂಧವ್ಯ ಸದಾ ಸುಗಮವಾಗಿ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ ಎಂದು ಮುಂತಾಗಿ ಬರೆಯಬಹುದು. ಅಥವಾ ಯಾವುದಾದರೂ ವಿಷಯದ ಬಗ್ಗೆ ಚರ್ಚಿಸುವುದಿದ್ದಲ್ಲಿ ನಮ್ಮ ಪ್ರತಿನಿಧಿಯನ್ನು ನಿಮ್ಮ ಬಳಿಗೆ ಕಳಿಸುತ್ತೇವೆ. ಇಲ್ಲವೇ ನೀವು ನಿಮ್ಮ ಪ್ರತಿನಿಧಿಗಳು ನಮ್ಮಲ್ಲಿಗೆ ಬಂದರೆ ತುಂಬ ಸಂತೋಷವಾಗುತ್ತದೆ ಎಂದು ತಿಳಿಸಬಹುದು. ಹೀಗೆ ಮಾಲೀಕ ಬರೆದಾಗ ಅಷ್ಟಾಗಿ ಲಕ್ಷ್ಯ ನೀಡದ ವಿಚಾರಣಾ ಕರ್ತ ಮರು ಚಿಂತನೆ ಮಾಡುವಂತಾಗುತ್ತದೆ. ಗ್ರಾಹಕನಿಗೆ ಬೇರೆ ವ್ಯವಹಾರ ಇನ್ನೂ ಕುದುರದಿದ್ಧಾಗ ಇವನೊಡನೆಯೇ ವ್ಯಾಪಾರ ಮಾಡಲು ನಿರ್ಧರಿಸಬಹುದು; ಮರುವಿಚಾರಣಾ ಪತ್ರವು ಒಂದು ರೀತಿಯಲ್ಲಿ ಮರಳಿ ಯತ್ನವ ಮಾಡು ಎಂಬ ಗಾದೆಗೆ ನಿದರ್ಶನದಂತಿದೆ.

ಸ್ವಯಂ ವಿವರ ನೀಡಿಕೆ ಪತ್ರ: ಭಾರೀ ಸಗಟು ವ್ಯಾಪಾರ ಸಂಸ್ಥೆಗಳಲ್ಲಿ ವಿವಿಧ ಬಗೆಯ ವಸ್ತುಗಳ ಮಾರಾಟವಾಗುತ್ತಿರುತ್ತದೆ. ಹೊಸ ನಮೂನೆಯ ಸರಕುಗಳ ಉತ್ಪಾದನೆಯಾಗುತ್ತಿರುತ್ತದೆ. ಅಥವಾ ಸರಕು ತೀರುವಳಿ ಮುಂತಾದ ಕಾರಣಗಳಿಗಾಗಿ ಹೊಸ ರಿಯಾಯಿತಿಗಳನ್ನೂ ಘೋಷಿಸಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಮಾರಾಟ ಸಂಸ್ಥೆ ತನ್ನ ಗ್ರಾಹಕರಿಗೆ ಈಚಿನ ರಿಯಾಯಿತಿ ಹಾಗೂ ಹೊಸ ಬಗೆಯ ಸರಕುಗಳನ್ನು ಕುರಿತು ತಾವಾಗಿ ವಿವರ ತಿಳಿಸಲು ‘ಸ್ವಯಂ ವಿವರ ನೀಡಿಕೆ ಪತ್ರ’ ವನ್ನು ಬರೆಯುತ್ತಾರೆ. ಆಗ ಆ ಬಗೆಯ ಮಾಹಿತಿ ಕೆಲವು ಗ್ರಾಹಕರಿಗೆ ಅನುಕೂಲವಾಗಿ ಪರಿಣಮಿಸಬಹುದು; ಇದರಿಂದ ಸಂಸ್ಥೆಯ ವ್ಯಾಪಾರಾಭಿವೃದ್ಧಿಯೂ ಆಗಬಹುದು. *೭

ವಿಕ್ರಯೇತರ ವಿಚಾರಣಾ ಪತ್ರದ ಕೆಲವು ಮಾದರಿಗಳು

ಮಾದರಿ

ಮಹಾಭಾಗ್ಯಮ್ಮ
೯೬, ೪ನೆಯ ರಸ್ತೆ
ಪುಟ್ಟಳ್ಳಿ, ತುಮಕೂರು ಜಿಲ್ಲೆ
ದಿನಾಂಕ: ೧೮ ನೆಯ ಮೇ, ೮೭.

ಅಧ್ಯಕ್ಷರು
ಬಡವಿದ್ಯಾರ್ಥಿ ಉದ್ಧಾರ ಸಂಘ (ರಿ)
ವಿದ್ಯಾ ವಿಲಾಶ ನಗರ
ತಮಟೂರು ಜಿಲ್ಲೆ

ಮಾನ್ಯರೆ,

ಕಳೆದ ವಾರದ ‘ಗುಟ್ಟು ರಟ್ಟು’ ದಿನಪತ್ರಿಕೆಯಲ್ಲಿ ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಕರ್ಯವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕುಚೇಲ ವಿದ್ಯಾರ್ಥಿ ನಿಧಿಯಿಂದ ಕಾಲೇಜು ಶುಲ್ಕವನ್ನು ನೀಡುವುದಾಗಿಯೂ ಪ್ರಕಟಿಸಿದ್ದೀರಿ. ಈ ಪ್ರಕಟಣೆಯನ್ನು ನೋಡಿ ತುಂಬ ಸಂತೋಷವಾಯಿತು. ನನ್ನ ಮೂರನೆಯ ಮಗನನ್ನು ನಿಮ್ಮ ಉಚಿತ ಹಾಸ್ಟೆಲಿಗೆ ಸೇರಿಸಬೇಕಾಗಿದೆ ಮತ್ತು ನಮ್ಮ ಪಕ್ಕದ ಮನೆಯ ಬಂಧುಗಳ ಮಗಳೊಬ್ಬಳು ಈ ಸಲ ರ‍್ಯಾಂಕ್ ಪಡೆದು ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲಾಗದೆ ಆರ್ಥಿಕ ಆಡಚಣೆಯಲ್ಲಿದ್ದಾರೆ.

ಹಾಸ್ಟೆಲಿಗೆ ಸೇರಲು ಮತ್ತು ಕುಚೇಲ ವಿದ್ಯಾರ್ಥಿನಿಧಿಯಿಂದ ನೆರವನ್ನು ಪಡೆಯಲು ಇರುವ ನಿಯಮಗಳೇನು? ಅವನ್ನು ನಾವು ಹೇಗೆ ಪಡೆದುಕೊಳ್ಳಬೇಕು? ದಯವಿಟ್ಟು ತಿಳಿಸಬೇಕೆಂದು ಕೋರುತ್ತೇನೆ. ಮೇಲಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ತುಂಬ ಬೇಕಾದ ಅರ್ಜಿ ಇದ್ದರೆ ಕೂಡಲೇ ಕಳಿಸಿಕೊಡಬೇಕೆಂದು ಪ್ರಾರ್ಥಿಸುತ್ತೇವೆ.

            ಇಂತು,
ಮಹಾಭಾಗ್ಯಮ್ಮ

 

ಮೇಲಿನ ಪತ್ರಕ್ಕೆ ಉತ್ತರ
ಮಾದರಿ

ಬಡವಿದ್ಯಾರ್ಥಿ ಉದ್ದಾರ ಸಂಘ (ರಿ)
ವಿದ್ಯಾ ವಿಲಾಸ ನಗರ, ತಮಟೂರು ಜಿಲ್ಲೆ

ದಿನಾಂಕ : ೨೨ನೆಯ ಮೇ, ೮೭

ತಂತಿ: ‘ಉದ್ಧಾರ’
ದೂರವಾಣಿ : ೬೪೩೫೦೮

ಶ್ರೀ ಮಹಾಭಾಗ್ಯಮ್ಮನವರಿಗೆ,

ಶ್ರೀಮತಿಯವರೆ,

ದಿನಾಂಕ ೧೮ನೆಯ ಮೇ, ೮೭ರಂದು ನೀವು ಬರೆದ ಪತ್ರ ತಲುಪಿತು; ತುಂಬ ಸಂತೋಷವಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ತಪ್ಪದೆ ಪಡೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈ ಪತ್ರದ ಜೊತೆಯಲ್ಲಿ ಕಳಿಸುತ್ತಿರುವ ಅರ್ಜಿ ಫಾರಂನಲ್ಲಿ ನೀವು ಕೇಳಿರುವ ಎಲ್ಲ ವಿವರಗಳೂ ಇವೆ. ಈ ಅರ್ಜಿಯನ್ನು ಭರ್ತಿ ಮಾಡಿ ಅಂಕಪಟ್ಟಿಯೊಡನೆ ಈ ತಿಂಗಳ ೩೧ರೊಳಗೆ ತಲುಪಿಸಬೇಕು, ಶಾಲಾ ಕಾಲೇಜುಗಳು ಪ್ರಾರಂಭವಾದ ಮೇಲೆ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಇಂತು,
ಮಹಾಬಲಯ್ಯ
ಅಧ್ಯಕ್ಷ
ಬಡವಿದ್ಯಾರ್ಥಿ ಉದ್ಧಾರ ಸಂಘ (ರಿ)

 

ವಿಕ್ರಯ ವಿಚಾರಣಾ ಪತ್ರದ ಕೆಲವು ಮಾದರಿಗಳು
ಮಾದರಿ

ವಿಶ್ವವ್ಯಾಪಿ ಮಾರಾಟ ಸಂಸ್ಥೆ
ಕಲಾನಗರ, ಬೆಂಗಳೂರು – ೫

ತಂತಿ: ‘ಜಗತ್ತು’
ದೂರವಾಣಿ: ೪೪೮೮೭೭

ಪತ್ರಾಂಕ : ವಿವಿಪ ೧/೮೭-೮೮                                             ದಿನಾಂಕ : ೧೬ನೆಯ ನವೆಂಬರ್ ೧೯೮೭

ವ್ಯವಸ್ಥಾಪಕರು
ಮುದ್ದುಕೃಷ್ಣ ಬೊಂಬೆ ಸಂಸ್ಥೆ
ರನ್ನಪಟ್ಟಣ

ಮಾನ್ಯರೆ,

ಯೂರೋಪು, ಅಮೇರಿಕಾ, ಜಪಾನ್ ಮೊದಲಾದ ದೇಶಗಳಿಗೆ ಭಾರತೀಯ ಕಲಾತ್ಮಕ ವಸ್ತುಗಳನ್ನು ಆಟಿಕೆಗಳನ್ನೂ ರಫ್ತು ಮಾಡುವ ಆದೇಶಗಳು ನಮ್ಮ ಪಾಲಿಗೆ ಬಂದಿದೆ.

ನಿಮ್ಮ ಸಂಸ್ಥೆ ಮುದ್ದು ಮಕ್ಕಳ ಬೊಂಬೆಗಳನ್ನೂ ಬಣ್ಣಬಣ್ಣದ ಮರದ ಆಟಿಕೆಗಳನ್ನು ಸೊಗಸಾಗಿ ತಯಾರಿಸುತ್ತಿದೆ ಎಂದು ನಮ್ಮ ವ್ಯಾಪಾರೀ ಮಿತ್ರರೊಬ್ಬರು ತಿಳಿಸಿದರು. ಆದ್ದರಿಂದ ನಿಮ್ಮೊಡನೆ ನಾವು ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದೇವೆ.

ನಿಮ್ಮ ಸರಕು ಪಟ್ಟಿಯನ್ನೂ ಕನಿಷ್ಠ ದರವನ್ನೂ ಮತ್ತು ಮಾದರಿಗಳನ್ನೂ ಕೂಡಲೇ ಕಳಿಸಬೇಕೆಂದು ಕೋರುತ್ತೇವೆ. ನಿಮ್ಮ ಮಾದರಿಗಳೂ ಬೆಲೆಗಳೂ ನಮಗೆ ಒಪ್ಪಿಗೆಯಾದರೆ ನಾವು ಅಧಿಕ ಪ್ರಮಾಣದ ತಯಾರಿಕೆಗೆ ಆದೇಶ ನೀಡುತ್ತೇವೆ. ನೀವು ಅಧಿಕ ಪ್ರಮಾಣದಲ್ಲಿ ಆಟಿಕೆಗಳನ್ನು ತಯಾರಿಸಿಕೊಡಲು ಸಾಧ್ಯವೇ? ಅದಕ್ಕೆ ಬೇಕಾಗುವ ಕಾಲಾವಧಿ ಇತ್ಯಾದಿ ವಿವರಗಳನ್ನು ತಿಳಿಸುತ್ತೀರೆಂದು ನಂಬಿದ್ದೇವೆ.

ಆದಷ್ಟು ಕಡಿಮೆ ದರದಲ್ಲಿ ಅತ್ಯುತ್ತಮ ಸರಕನ್ನು ನೀವು ನೀಡಬಲ್ಲಿರಿ ಎಂಬ ವಿಶ್ವಾಸ ನಮಗಿದೆ.

ಈ ಪ್ರಾರಂಭದ ವಿಚಾರಣಾ ಪತ್ರವು ನಮ್ಮಿಬ್ಬರ ನಿರಂತರ ವ್ಯಾಪಾರಕ್ಕೆ ಬುನಾದಿಯಾಗಲಿ ಎಂದು ಆಶಿಸುತ್ತೇವೆ. ನಿಮ್ಮ ಉತ್ತರವನ್ನು ನಿರೀಕ್ಷಿಸುತ್ತಿದ್ದೇವೆ.

ನಿಮ್ಮ ವಿಶ್ವಾಸಿ,
ಲೋಕಪಾಲಯ್ಯ
ವ್ಯವಸ್ಥಾಪಕ
ವಿಶ್ವವ್ಯಾಪಿ ಮಾರಾಟ ಸಂಸ್ಥೆ

ರಂಪ/ಕೆಎಸ್‌ಕೆ

ಜಾಹೀರಾತು ನೋಡಿ ವಿವರ ಪಡೆಯಲು ಬರೆದ ವಿಚಾರಣಾ ಪತ್ರ
ಮಾದರಿ

ಸಮಗ್ರ ಗೃಹವಸ್ತು ಭಂಡಾರ
ಚಾಮರಾಜಪೇಟೆ, ಬೆಂಗಳೂರು – ೧೮

ತಂತಿ : ಸ್ವಗೃಹ
ದೂರವಾಣಿ: ೩೮೪೯೯೧

೫, ಶಂಕರ ರಸ್ತೆ
ಚಾಮರಾಜಪೇಟೆ
ಬೆಂಗಳೂರು- ೫೬೦ ೦೧೮

ಪತ್ರಾಂಕ: ಜಾವಿಪ.೧/೮೭/೮೮

ದಿನಾಂಕ : ೩೦ನೆಯ ನವೆಂಬರ್ ೧೯೮೭.

ವ್ಯವಸ್ಥಾಪಕರು
ಮಾರಾಟ ವಿಭಾಗ
ನಿರ್ಮಲ ಬಟ್ಟೆ ಒಗೆಯುವ ಯಂತ್ರ ತಯಾರಿಕಾ ಸಂಸ್ಥೆ
ವೇಗಪುರ, ತುಮಕೂರು ಜಿಲ್ಲೆ

ಮಾನ್ಯರೆ,

‘ಮಹಿಳಾ ವಾಣಿ’ ಪತ್ರಿಕೆಯಲ್ಲಿ ನೀವು ಪ್ರಕಟಿಸಿದ ‘ಬಟ್ಟೆ ಒಗೆಯುವ ಯಂತ್ರ’ ದ ಜಾಹೀರಾತನ್ನು ಗಮನಿಸಿದೆವು. ಈ ಕಾಲದಲ್ಲಿ ಉದ್ಯೋಗಿ ಮಹಿಳೆಯರಿಗೆ ವರದಾನದಂತಿರುವ ನೀವು ತಯಾರಿಸುತ್ತಿರುವ ಬಟ್ಟೆ ಒಗೆಯುವ ಯಂತ್ರಗಳನ್ನು ಮಾರಾಟ ಮಾಡಲು ಇಚ್ಛಿಸಿದ್ದೇವೆ; ಗೃಹಿಣಿಯರಿಗೆ ಸಮಸ್ತ ಗೃಹೋಪಯೋಗಿ ವಸ್ತುಗಳು ಒಂದೇ ಕಡೆ ಸಿಗಬೇಕೆಂಬ ಕಾರಣದಿಂದ ನಮ್ಮ ಕೇಂದ್ರ ಎಲ್ಲ ಬಗೆಯ ವಸ್ತುಗಳನ್ನೂ ಮಾರಾಟ ಮಾಡುತ್ತಿದೆ. ಬಟ್ಟೆ ಒಗೆಯುವ ಯಂತ್ರದ ಕೊರತೆಯೊಂದು ಉಳಿದಿತ್ತು. ಈಗ ಅದೂ ಪೂರೈಸಿದಂತಾಯಿತು.

ನೀವು ತಯಾರಿಸಿರುವ ನಿರ್ಮಲ ಬಟ್ಟೆ ಒಗೆಯುವ ಯಂತ್ರದ ವೈಶಿಷ್ಟ್ಯಗಳೇನು? ಯಂತ್ರಗಳ ದರ, ರಿಯಾಯಿತಿ, ಸಾಗಾಣಿಕೆ ವಿಧಾನ, ಕೊಳ್ಳಬೇಕಾದ ಕನಿಷ್ಠ ಪ್ರಮಾಣ, ಹಣವನ್ನು ರವಾನಿಸಬೇಕಾದ ರೀತಿ-ಮುಂತಾದ ವಿವರಗಳನ್ನು ಶೀಘ್ರವಾಗಿ ಕಳಿಸಬೇಕೆಂದು ಕೋರುತ್ತೇವೆ.

ಈ ಬಗ್ಗೆ ತಾವು ಅಚ್ಚು ಮಾಡಿರುವ ಸಾಹಿತ್ಯವೇನಾದರೂ ಇದ್ದರೆ ದಯವಿಟ್ಟು ಕಳಿಸಿ ಕೊಡಬೇಕೆಂದೂ ಕೋರುತ್ತೇವೆ. ಕಳೆದ ಐವತ್ತು ವರ್ಷಗಳಿಂದ ಗ್ರಾಹಕರಿಂದ ವಿಶ್ವಾಸ-ಮೆಚ್ಚುಗೆ ಗಳಿಸಿರುವ ನಾವು ಏಕಪ್ರಕಾರವಾಗಿ ವ್ಯಾಪಾರ ಮಾಡುತ್ತಿದ್ದೇವೆ; ಅಷ್ಟೇ ಅಲ್ಲ, ಗೃಹಿಣಿಯರ ಹಿತಕ್ಕಾಗಿ ಪ್ರಾರಂಭವಾದ ಏಕೈಕ ಸಂಸ್ಥೆ ನಮ್ಮದಾಗಿದೆ.

ನಿಮ್ಮ ನಂಬುಗೆಯ
ರತನ್ ಲಾಲ್
ವ್ಯವಸ್ಥಾಪಕ
ಸಮಗ್ರ ಗೃಹವಸ್ತು ಭಂಡಾರ.

ಪಿಕೆ/ಸಿ

ಮೇಲಿನ ಪತ್ರಕ್ಕೆ ಉತ್ತರ
ಮಾದರಿ

ನಿರ್ಮಲ ಬಟ್ಟೆ ಒಗೆಯುವ ಯಂತ್ರ ತಯಾರಿಕಾ ಸಂಸ್ಥೆ
ವೇಗಪುರ, ತುಮಕೂರು ಜಿಲ್ಲೆ

ತಂತಿ: ನಿರ್ಮಲ
ದೂರವಾಣಿ: ೪೩೪೫೦೯

ಪತ್ರಾಂಕ: ವಿಪತ್ರ ೧ ಬೆಂ/೮೭-೮೮                               ದಿನಾಂಕ: ೮ನೆಯ ಡಿಸೆಂಬರ್ ೧೯೮೭

 

ವ್ಯವಸ್ಥಾಪಕರು,
ಸಮಗ್ರ ಗೃಹವಸ್ತು ಭಂಡಾರ,
೫, ಶಂಕರ ರಸ್ತೆ, ಚಾಮರಾಜಪೇಟೆ,
ಬೆಂಗಳೂರು-೫೬೦ ೦೧೮

ಮಾನ್ಯರೆ,

ತಮ್ಮ ಉಲ್ಲೇಖ: ಪತ್ರಾಂಕ: ಜಾವಿಪ.೧/೮೭-೮೮

ನಮ್ಮ ಮೇಲೆ ವಿಶ್ವಾಸವಿಟ್ಟು ತಾವು ಬರೆದ ವಿಚಾರಣಾ ಪತ್ರ (ದಿನಾಂಕ: ೩೦-೧೧-೧೯೮೭) ತಲುಪಿತು. ವಂದನೆಗಳು. ಇತ್ತೀಚೆಗೆ ನಾವು ಬಟ್ಟೆ ಒಗೆಯುವ ಯಂತ್ರಗಳ ಬಗ್ಗೆ ಪತ್ರಿಕಾ ಜಾಹೀರಾತನ್ನು ಕೊಟ್ಟಿದ್ದೇವು. ಈಗಾಗಲೇ ನಮಗೆ ಅನೇಕ ವಿಚಾರಣಾ ಪತ್ರಗಳು ಬಂದಿವೆ. ತಾವು ನಮ್ಮ ಗ್ರಾಹಕರಾಗಲು ಬಯಸಿರುವುದು ನಮಗೆ ತುಂಬ ಸಂತೋಷವನ್ನುಂಟು ಮಾಡಿದೆ. ಈ ಪತ್ರದೊಂದಿಗೆ ನಿರ್ಮಲ ಬಟ್ಟೆ ಒಗೆಯುವ ಯಂತ್ರದ ವೈಶಿಷ್ಟ್ಯಗಳನ್ನೂ, ವಿವಿಧ ನಮೂನೆಗಳನ್ನೂ ಒಟ್ಟು ಸೇರಿಸಿ ಪ್ರಕಟಿಸಿರುವ ಕೈಪಿಡಿಯೊಂದನ್ನು ತಮಗೆ ಕಳುಹಿಸುತ್ತಿದ್ದೇವೆ. ಜೊತೆಗೆ ಬೆಲೆ ಪಟ್ಟಿಯನ್ನೂ ನಮ್ಮ ವ್ಯಾಪಾರ ನಿಯಮಗಳ ಪ್ರತಿಯೊಂದನ್ನೂ ಈ ಪತ್ರಕ್ಕೆ ಲಗತ್ತಿಸಿದ್ದೇವೆ. ಇವುಗಳಿಂದ ತಮಗೆ ಬೇಕಾದ ವಿವರಗಳ್ನು ಪಡೆಯಬಹುದು.

ನಮ್ಮೊಡನೆ ವ್ಯಾಪಾರ ಮಾಡುವವರು ಒಮ್ಮೆಗೆ ಕೊನೆಯ ಪಕ್ಷ ೨೫ ಯಂತ್ರಗಳನ್ನು ಕೊಳ್ಳಬೇಕಾಗುತ್ತದೆ. ಮೂಲಬೆಲೆಯಲ್ಲಿ ೩೦% ರಿಯಾಯಿತಿಯನ್ನು ನೀಡುತ್ತೇವೆ. ನಾವು ಯಂತ್ರಗಳನ್ನು ‘ವೇಗವರ್ಧಕ ಟೆಂಪೊ’ ಮೂಲಕ ಕಳಿಸುತ್ತೇವೆ. ನೀವು ಹಣವನ್ನು ಚೆಕ್ಕಿನ ಮೂಲಕ ಕಳುಹಿಸಿಕೊಡಬೇಕಾಗುತ್ತದೆ. ಸದ್ಯಕ್ಕೆ ನಾವು ನಗದು ವ್ಯಾಪಾರ ಪದ್ದತಿಯನ್ನಿಟ್ಟುಕೊಂಡಿದ್ದೇವೆ. ತಮಗೆ ನಮ್ಮ ಮಾರಾಟದ ನಿಯಮಗಳು ಒಪ್ಪಿಗೆಯಾಗುತ್ತವೆ ಎಂದು ಭಾವಿಸಿದ್ದೇವೆ.

ಶೀಘ್ರದಲ್ಲಿಯೇ ತಮ್ಮಿಂದ ಯಂತ್ರಗಳ ಆದೇಶ ಬರುತ್ತದೆಂದು ನಿರೀಕ್ಷಿಸುತ್ತೇವೆ.

ವಂದನೆಗಳು,

ತಮ್ಮ ವಿಶ್ವಾಸಿ
ತೋರಾಧೂಂಡೂ
ವ್ಯವಸ್ಥಾಪಕ

ಲಗತ್ತುಗಳು – ೩

ಆದ್ಯಕ್ಷರಗಳು : ಪಿ.ಟಿ.ಕೆ.

 

ವಿಕ್ರಯ ವಿಚಾರಣಾ ಪತ್ರ ೩ಕ್ಕೆ ಉತ್ತರ
ಮಾದರಿ

ಮುದ್ದು ಕೃಷ್ಣ ಬೊಂಬೆ ಸಂಸ್ಥೆ
ರನ್ನಪಟ್ಟಣ

ತಂತಿ: ‘ಮುದ್ದು’
ದೂರವಾಣಿ: ೪೪೯೬೦೫

ಪತ್ರಾಂಕ: ವಿವಿಪು – ೧/೮೭-೮೮       ದಿನಾಂಕ: ೨೨ನೆಯ ನವೆಂಬರ್ ೧೯೮೭

ವ್ಯವಸ್ಥಾಪಕರು
ವಿಶ್ವವ್ಯಾಪಿ ಮಾರಾಟ ಸಂಸ್ಥೆ
ಕಲಾನಗರ, ಬೆಂಗಳೂರು-೫

ಮಾನ್ಯರೆ,

ನಿಮ್ಮ ಉಲ್ಲೇಖ: ವಿವಿಪ್ರ-೮೭-೮೮ ದಿನಾಂಕ: ೧೬-೧೧-೧೯೮೭

ನಿಮ್ಮ ಪತ್ರ ತಲುಪಿತು. ನಮ್ಮ ಮೇಲೆ ವಿಶ್ವಾಸವಿಟ್ಟು ವಿಕ್ರಯ ವಿಚಾರಣಾ ಪತ್ರ ಬರೆದದ್ದಕ್ಕಾಗಿ ವಂದನೆಗಳು.

ನಿಮ್ಮ ಆಪೇಕ್ಷೆಯ ಮೇರೆಗೆ ನಮ್ಮಲ್ಲಿ ದೊರೆಯುವ ಬೊಂಬೆಗಳ ಒಂದೊಂದು ಮಾದರಿಯನ್ನು ಒಳಗೊಂಡ ರಕ್ಷಾಪೆಟ್ಟಿಗೆಯನ್ನು ನಿಮಗೆ ಆಂಜನೇಯ ಸಾರಿಗೆ ವಾಹನ ಸಂಸ್ಥೆಯ ಮೂಲಕ ಕಳಿಸುತ್ತೇವೆ. ಸದ್ಯದಲ್ಲಿ ಸರಕು ಪಟ್ಟಿ ಹಾಗೂ ದರಪಟ್ಟಿಯನ್ನು ಪತ್ರದೊಂದಿಗೆ ಕಳಿಸುತ್ತಿದ್ದೇವೆ. ನಮ್ಮ ಬೊಂಬೆಗಳು ಮತ್ತು ಅವುಗಳ ದರಗಳು ನಿಮಗೆ ಸಮರ್ಪಕವೆನಿಸುತ್ತವೆ ಎಂದು ಭಾವಿಸಿದ್ದೇವೆ.

ನೀವು ಆಪೇಕ್ಷಿಸಿದಂತೆ ಅಧಿಕ ಪ್ರಮಾಣದಲ್ಲಿ ಬೊಂಬೆಗಳನ್ನು ತಯಾರು ಮಾಡಿಕೊಡಲು ನಾವು ಸಿದ್ದರಿದ್ದೇವೆ. ಆದರೆ ಕನಿಷ್ಠ ಪಕ್ಷ ಮೂರು ತಿಂಗಳ ಕಾಲಾವಧಿ ಬೇಕಾಗುತ್ತದೆ. ಮತ್ತು ಒಪ್ಪಿತ ಬೆಲೆಯಲ್ಲಿ ಶೇ.೫೦ರಷ್ಟು ಹಣವನ್ನು ಮುಂಗಡವಾಗಿ ನೀಡಬೇಕಾಗುತ್ತದೆ.  ಬೊಂಬೆಗಳನ್ನು ಒಂದೇ ಕಂತಿನಲ್ಲಿ ಲಾರಿ ಮೂಲಕ ತಲುಪಿಸುತ್ತೇವೆ. ಬ್ಯಾಂಕಿನ ಮೂಲಕ ಹಣಪಾವಿ ಮಾಡಿ ಲಾರಿ ರಸೀತಿ ಮತ್ತು ಬಿಕರಿ ಪಟ್ಟಿಗಳನ್ನು ಪಡೆಯತಕ್ಕದ್ದು.

ನೀವು ಅಧಿಕ ಪ್ರಮಾಣದಲ್ಲಿ ಆದೇಶ ನೀಡುವುದಿದ್ದರೆ ನಿಮ್ಮ ನಿರ್ಧಾರಿತ ರಿಯಾಯಿತಿ ಶೇ.೨೦ರ ಜೊತೆಗೆ ಶೇ.೫ ವಿಶೇಷ ರಿಯಾಯಿತಿಯನ್ನೂ ನೀಡುತ್ತೇವೆಂದು ತಿಳಿಸಲು ಸಂತೋಷವಾಗುತ್ತದೆ. ನಮ್ಮಿಬ್ಬರ ವ್ಯಾಪಾರ ಸಂಬಂಧ ಶುಭ ಸಂದರ್ಭಗಳಲ್ಲಿ ಪ್ರಾರಂಭವಾಗಲಿ ಹಾಗೂ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತೇವೆ.

ನಿಮ್ಮ ಆದೇಶಪತ್ರವನ್ನು ಎದುರುನೋಡುತ್ತಿದ್ದೇವೆ.

ವಂದನೆಗಳು,

ನಿಮ್ಮ ವಿಶ್ವಾಸಿ
ಸಮೀರಪ್ಪ
ವ್ಯವಸ್ಥಾಪಕ
ಮುದ್ದು ಕೃಷ್ಣ ಬೊಂಬೆ ಸಂಸ್ಥೆ

ಪಿಕೆ/ಪಿಟಿ

ಸ್ವಯಂ ವಿವರ ನೀಡಿಕೆ ಪತ್ರ: (ಹಳೆಯ ಗ್ರಾಹಕರಿಗೆ ಮಾರಾಟಗಾರರು ತಮ್ಮಲ್ಲಿ ಮಾರಾಟಕ್ಕಿಟ್ಟಿರುವ ಹೊಸ ವಸ್ತುಗಳ ಗಮನ ಸೆಳೆಯಲು ಬರೆಯುವ ಪತ್ರ)

ಮಾದರಿ

ಸುಗಂಧಸಾರ ಸಾಬೂನು ಸಂಸ್ಥೆ

ತಂತಿ: ‘ಸುಗಂಧ’                                                                                                ೪೮, ಶೃಂಗಾರ ಲಹರಿ ರಸ್ತೆ
ದೂರವಾಣಿ: ೩೮೪೯೫೨                                                                             ಶುಚಿಪೇಟೆ, ಅಖಿಲೇಶ್ವರ

ಪತ್ರಾಂಕ : ಸ್ವವಿಪ:೪೮ ಸಾ/೮೭-೮೮                                                ದಿನಾಂಕ : ೧೦ ನವೆಂಬರ್ ೧೯೮೭

ಶ್ರೀಮತಿ ಸುಹಾಸಿನಿ ಭಟ್
ಮಾಲೀಕರು
ಸೌಭಾಗ್ಯ ಸ್ಟೋರ್ಸ್‌
೫, ಊರ್ವಶಿ ರಸ್ತೆ
ವಿಜಯಪುರ

ಶ್ರೀಮತಿಯವರೇ,

ಮಹಿಳೆಯರ ಚರ್ಮ ರಕ್ಷಣೆಗೆ ಸಹಾಯಕವಾಗುವಂಥ ನಾನಾ ಬಗೆಯ ಸೋಪುಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ವಿಷಯ ನಿಮಗೆ ತಿಳಿದೇ ಇದೆ. ಬಣ್ಣಬಣ್ಣದ ಕಾಗದಗಳಿಂದ ಸುತ್ತಿದ, ಆಕರ್ಷಕ ಚಿತ್ರಗಳಿಂದ ಕೂಡಿದ ಸೋಪುಗಳು ಎಲ್ಲಾ ಕಡೆ ಬರುತ್ತಿದೆ. ಸಿನಿಮಾ ತಾರೆಯರ ಜಾಹೀರಾತಿನ ಮೂಲಕ ಎಷ್ಟೋ ಸೋಪುಗಳು ತಯಾರಾಗುತ್ತಿವೆ. ಆ ಸೋಪಿನ ಬಗ್ಗೆ ನಾವೇನೂ ಹೆಚ್ಚಿಗೆ ಹೇಳಲು ಬಯಸುವುದಿಲ್ಲ. ಆದರೆ ಇತ್ತೀಚೆಗೆ ನಾವು ತಯಾರಿಸಿದ ‘ಅಮೃತಾ ಸುಪ್ರಿಯಾ’, ‘ಸುಕೋಮಲ್’ ಸಾಬೂನುಗಳು ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತವೆಂಬ ವಿಶ್ವಾಸವನ್ನು ಮಾತ್ರ ವ್ಯಕ್ತಪಡಿಸುತ್ತೇವೆ.

ಆರೋಗ್ಯದ ದೃಷ್ಟಿಯಿಂದ, ಅಲ್ಪ ಬೆಲೆಯ ಗುಣಯುಕ್ತ ಸಾಬೂನು ತಯಾರಿಸುವ ಇಚ್ಛೆ ನಮ್ಮದಾಗಿತ್ತು. ಮಹಿಳೆಯರೂ ಕೂಡ ಇದನ್ನು ಅಪೇಕ್ಷಿಸುತ್ತಿದ್ದರು. ಇದಕ್ಕಾಗಿ ನಮ್ಮ ಸಂಸ್ಥೆ ಕಳೆದ ೧೫ ವರ್ಷಗಳಿಂದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಫಲವಾಗಿ ಸರ್ವಗುಣ ಸಂಪನ್ನ ಸೋಪನ್ನು ತಯಾರಿಸಿದೆ; ಜನರ ಬಹಳ ದಿನಗಳ ಬೇಡಿಕೆಯನ್ನು ಪೂರೈಸಿದೆ.

‘ಅಮೃತಾ’, ‘ಸುಪ್ರಿಯಾ’, ‘ಸುಕೋಮಲ್’ ಸೋಪಿನ ಬೇರೆ ಬೇರೆ ಗಾತ್ರಗಳ ಮಾದರಿಯನ್ನು ನಿಮಗೆ ಉಚಿತವಾಗಿ ಕಳಿಸುತ್ತಿದ್ದೇವೆ. ಬಳಸಿ ನೋಡಿ, ಬಹುಶಃ ಮಹಿಳೆಯರೂ ಕೊಂಡಾಡುವುದರಲ್ಲಿ ಸಂಶಯವಿಲ್ಲ. ನಿಮ್ಮ ಸ್ವಾನುಭವದಿಂದ ಮಾರಾಟ ಪ್ರಾರಂಭ ಮಾಡಿ. ಈ ಸೋಪಿನಿಂದ ಚರ್ಮದ ಕಾಂತಿ ಹೆಚ್ಚುತ್ತದೆಯೇ ವಿನಾ ದೇಹದ ಯಾವುದೇ ಭಾಗಕ್ಕೂ ಅಪಾಯವಾಗುವುದಿಲ್ಲವೆಂಬ ಭರವಸೆಯನ್ನು ನೀಡುತ್ತೇವೆ. ಹಾಲಿನಂಥ ಬಿಳುಪು ಅಮೃತಶಿಲೆಯಂಥ ನುಣುಪು ಆದ ಈ ಸೋಪು ಮಹಿಳೆಯರ ಕೋಮಲ ಹಸ್ತಗಳ ಸರಸ ಹಿಡಿತ ಸಿಗುವ ಆಕಾರದಲ್ಲಿದೆ: ಈ ಮೂರು ಬಗೆಯ ಮಾದರಿಗಳನ್ನೂ ನಿಮ್ಮ ಕುಟುಂಬದವರು ಬಳಸಿ ಆನಂದಿಸುತ್ತಾರೆ ಎಂದು ನಂಬಿದ್ದೇವೆ. ಮನೆಮಂದಿಯೆಲ್ಲಾ ಬಳಸಬಹುದಾದ ಸೋಪನ್ನು ನೀವೂ ತರಿಸಿಕೊಂಡು ಮಾರಾಟಮಾಡುತ್ತೀರಿ ಎಂಬ ಭರವಸೆ ನಮಗಿದೆ.

ನಿಮ್ಮ ವಿಶ್ವಾಸಿ,
ಸುಭದ್ರಾನಂದ
ವ್ಯವಸ್ಥಾಪಕ.

ಅಡಕ: ಕರಪತ್ರ
ಬೆಲೆಪಟ್ಟಿ