ಠೇವಣಿಗಳು:

ಬ್ಯಾಂಕುಗಳು ಸಾರ್ವಜನಿಕರಲ್ಲಿ ಉಳಿತಾಯ ಪ್ರವೃತ್ತಿಯನ್ನುಂಟು ಮಾಡಲು ನಾನಾ ರೀತಿಯಲ್ಲಿ ಠೇವಣಿಗಳನ್ನು ಸಂಗ್ರಹಿಸುತ್ತವೆ. ಗ್ರಾಹಕರಿಂದ ಪಡೆಯುವ ಠೇವಣಿಗಳಿಗೆ ಕಾಲಕಾಲಕ್ಕೆ ಗೊತ್ತಾದ ದರದಲ್ಲಿ ನಿಯಮಾನುಸಾರ ಬಡ್ಡಿಯನ್ನು ನೀಡುತ್ತವೆ. ವಿವಿಧ ಠೇವಣಿಗಳು ಹಲವಾರು ಬಗೆಯಾದರೂ ಮುಖ್ಯವಾಗಿ ನಾಲ್ಕು ಬಗೆಯ ಠೇವಣಿಗಳು ಚಾಲ್ತಿಯಲ್ಲಿರುವುದನ್ನು ಕಾಣುತ್ತೇವೆ.

ಸಾವಧಿ ಠೇವಣಿ ಖಾತೆ (ಫಿಕ್ಸೆಡ್ ಡಿಪಾಸಿಟ್ ಅಕೌಂಟ್)

ಈ ಬಗೆಯ ಖಾತೆಯನ್ನು ತೆರೆಯುವ ಗ್ರಾಹಕನು ಗೊತ್ತಾದ ಅವಧಿಗೆ ಬ್ಯಾಂಕಿನಲ್ಲಿ ಠೇವಣಿ ಇಡಬೇಕು; ಅವಧಿ ಮುಗಿದ ಮೇಲೆ ಗ್ರಾಹಕನ ಕೋರಿಕೆಯ ಮೇರೆಗೆ ಹಿಂದಿರುಗಿಸಲಾಗುವುದು; ಇಲ್ಲವೇ ಮತ್ತೆ ಗ್ರಾಹಕನು ತಿಳಿಸುವ ನಿರ್ದಿಷ್ಟಾವಧಿಯವರೆಗೆ ನವೀಕರಿಸಲಾಗುವುದು. ಠೇವಣಿ ಇದ್ದಷ್ಟು ಕಾಲದಲ್ಲಿ ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಬಡ್ಡಿಯ ಹಣವನ್ನು ಖಾತೆದಾರನ ಲೆಕ್ಕಕ್ಕೆ ಜಮಾ ಮಾಡಲಾಗುವುದು. ಈ ಬಗೆಯ ಠೇವಣಿಗಳಿಗೆ ಉಳಿದ ಬಗೆಯ ಖಾತೆಗಳ ಠೇವಣಿಗಳಿಗಿಂತ ಸ್ವಲ್ಪ ಹೆಚ್ಚಿನ ದರದಲ್ಲಿ ಬಡ್ಡಿಯನ್ನು ನೀಡಲಾಗುವುದು. ಗ್ರಾಹಕನಿಟ್ಟ ಠೇವಣಿ ಹಣಕ್ಕೆ ದಾಖಲೆಯಾಗಿ ನಿರ್ದಿಷ್ಟ ನಮೂನೆಯಲ್ಲಿ ಅಧಿಕೃತ ರಸೀದಿಯನ್ನು ನೀಡಲಾಗುವುದು. ಅದನ್ನು ಹಾಜರುಪಡಿಸಿ ಅಗತ್ಯಬಿದ್ದಾಗ ೭೫% ರಷ್ಟು ಇಟ್ಟ ಹಣದ ಮೇಲೆ ಸಾಲವನ್ನು ಪಡೆಯಬಹುದು. ಅವಧಿ ಮುಗಿದಾಗ ಇಟ್ಟ ಹಣವನ್ನು ಪಡೆಯಲು ಈ ದಾಖಲೆ ಪತ್ರವನ್ನು ಗ್ರಾಹಕನು ಹಾಜರುಪಡಿಸಬೇಕು. ಈ ಬಗೆಯ ಠೇವಣಿಗಳಿಗೆ ನೀಡುವ ಬಡ್ಡಿ ದರದ ಪರಿಮಿತಿಯನ್ನು ರಿಸರ್ವ್ ಬ್ಯಾಂಕ್ ಗೊತ್ತು ಮಾಡಿರುತ್ತದೆ.

ಚಾಲ್ತಿ ಠೇವಣಿ ಖಾತೆ (ಕರೆಂಟ್ ಡಿಪಾಸಿಟ್ ಅಕೌಂಟ್)

ಸಾಮಾನ್ಯವಾಗಿ ವ್ಯಾಪಾರಿಗಳು, ದಳ್ಳಾಳಿಗಳು, ಸಾಹುಕಾರರು, ಅಧಿಕ ಹಣದ ವ್ಯವಹಾರ ಮಾಡುವವರು ದಿನನಿತ್ಯ ಸಂಸ್ಥೆಯ ಪರವಾಗಿ ಹಣದ ವಹಿವಾಟು ನಡೆಸುವವರು ಈ ಬಗೆಯ ಲೆಕ್ಕವನ್ನು ಬ್ಯಾಂಕುಗಳಲ್ಲಿ ಪ್ರಾರಂಭಿಸಲು ಬ್ಯಾಂಕು ಗೊತ್ತು ಮಾಡಿರುವ ಕನಿಷ್ಟ ಮೊತ್ತದ ಹಣಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನ ಖಾತೆಯಲ್ಲಿಟ್ಟಿರಬೇಕು. ಇದು ಉಳಿತಾಯ ಖಾತೆಯಲ್ಲಿರಬೇಕಾದ ಕನಿಷ್ಠ ಮೊತ್ತಕ್ಕಿಂತ ಅಧಿಕ ಮೊತ್ತವಾಗಿರುತ್ತದೆ. ಉಳಿತಾಯ ಖಾತೆದಾರರು ಚೆಕ್ಕುಗಳ ಬಳಕೆಯನ್ನು ಪರಿಮಿತ ಸಂಖ್ಯೆಯಲ್ಲಿ ಬಳಸಬೇಕು; ಆದರೆ ಚಾಲ್ತಿ ಠೇವಣಿ ಗ್ರಾಹಕರು ಅಗತ್ಯಬಿದ್ದಾಗಲೆಲ್ಲಾ ಎಷ್ಟು ಚೆಕ್ಕುಗಳನ್ನಾದರೂ ನೀಡಿ ಇಟ್ಟ ಹಣವನ್ನು ಹಿಂದಕ್ಕೆ ಪಡೆಯಬಹುದು; ಅಥವಾ ಇತರರಿಗೆ ಚೆಕ್ಕುಗಳನ್ನು ನೀಡಬಹುದು. ಚಾಲ್ತಿ ಠೇವಣಿ ಖಾತೆಯವರಿಗೂ ಲೆಕ್ಕದಲ್ಲಿ ಉಳಿದ ಹಣಕ್ಕೆ ಉಳಿದಷ್ಟು ಕಾಲಕ್ಕೆ, ಗೊತ್ತಾದ ದರದಲ್ಲಿ ಬಡ್ಡಿ ನೀಡಲಾಗುತ್ತದೆ. ಆದರೆ ಈ ಬಡ್ಡಿದರ, ಖಾಯಂ ಠೇವಣಿಯ ಬಡ್ಡಿದರಕ್ಕಿಂತ ಕಡಿಮೆ ಇರುತ್ತದೆ. ಚಾಲ್ತಿ ಠೇವಣಿ ಲೆಕ್ಕದಾರರಿಗೆ ಜಮಾ ಹಾಳೆಗಳ ಪುಸ್ತಕ (ಪೇಇನ್‌ಸ್ಲಿಪ್-ಬುಕ್), ಚೆಕ್‌ಬುಕ್ ಮತ್ತು ಗ್ರಾಹಕ ಲೆಕ್ಕದ ಪುಸ್ತಕಗಳನ್ನು ನೀಡಲಾಗುವುದು. ಅಧಿಕ ಮೊತ್ತದ ಹಣದ ವಹಿವಾಟಿಗೆ ಈ ಬಗೆಯ ಖಾತೆ ಹೆಚ್ಚು ಉಪಯುಕ್ತ. ಚಾಲ್ತಿ ಠೇವಣಿ ಖಾತೆಯವರಿಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಬ್ಯಾಂಕ್ ಅಧಿಕಾರಿಗಳ ನಿಷ್ಕರ್ಷೆ ಪ್ರಕಾರ ಖಾತೆಯಲ್ಲಿರುವ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವರು; ಅದನ್ನು ಶೀಘ್ರವಾಗಿ ಗ್ರಾಹಕ ತಪ್ಪದೆ ಹಿಂದಿರುಗಿಸಬೇಕು.

ಉಳಿತಾಯ ಠೇವಣಿ ಖಾತೆ (ಸೇವಿಂಗ್ಸ್ ಡಿಪಾಸಿಟ್ ಅಕೌಂಟ್)

ಮಿತವ್ಯಯವನ್ನು ರೂಢಿಸಲು, ಖರ್ಚಿನ ಮೇಲೆ ಹಿಡಿತ ಸಾಧಿಸಲು ಸಾಮಾನ್ಯ ಜನರು ಹೆಚ್ಚಾಗಿ ಬಳಸಿಕೊಳ್ಳುವ ಬ್ಯಾಂಕಿನ ಖಾತೆ ಇದು. ಎಲ್ಲ ಬಗೆಯ ಬ್ಯಾಂಕುಗಳಲ್ಲಿಯೂ ಈ ರೀತಿಯ ಸೇವೆ ಸಾಮಾನ್ಯವಾಗಿ ಲಭ್ಯವಿರುತ್ತದೆ. ಈ ಬಗೆಯ ಖಾತೆದಾರನಿಗೆ ವಾರಕ್ಕೆ ಇಷ್ಟು ಬಾರಿ ಮಾತ್ರ ಖಾತೆಯಿಂದ ಹಣವನ್ನು ಪಡೆಯಬಹುದು ಅಥವಾ ಚೆಕ್ಕುಗಳ ಮೂಲಕ ನೀಡಬಹುದು ಎಂದು ನಿರ್ದಿಷ್ಟ ನಿಯಮವನ್ನು ವಿಧಿಸಿರುತ್ತದೆ. ಈ ಬಗೆಯ ಖಾತೆಯಲ್ಲಿಯೂ ಹಣವಿದ್ದಷ್ಟೂ ಮೊತ್ತಕ್ಕೆ ಗೊತ್ತಾದ ದರದಂತೆ ಬಡ್ಡಿಯನ್ನು ನೀಡಲಾಗುತ್ತದೆ. ಸದ್ಯದಲ್ಲಿ ೫% ಬಡ್ಡಿಯ ದರವನ್ನು ನಿಗದಿ ಮಾಡಿದೆ. ಸಾವಧಿ ಠೇವಣಿಯ ಬಡ್ಡಿದರಕ್ಕಿಂತ ಇದರ ದರ ಕಡಿಮೆಯಿರುತ್ತದೆ. ಈ ಬಗೆಯ  ಖಾತೆಯ ಮೂಲೋದ್ದೇಶ ಉಳಿತಾಯವೇ ಹೊರತು ಲಾಭಾಂಶ ಅಥವಾ ಬಡ್ಡಿ ಗಳಿಕೆಯಲ್ಲ. ಉಳಿತಾಯ ಖಾತೆದಾರನಿಗೆ ‘ಪಾಸ್‌ಬುಕ್’ ಕೊಡಲಾಗುತ್ತದೆ. *೧. ಚೆಕ್ಕಿನ ಬಿಡಿ ಹಾಳೆಗಳನ್ನು ಬ್ಯಾಂಕಿನಲ್ಲೇ ತೆಗೆದುಕೊಂಡು ಹಣವನ್ನು ಪಡೆಯಬಹುದು. ಚೆಕ್‌ಬುಕ್ ಬೇಕಾದರೆ ಖಾತೆಯಲ್ಲಿ ಸದಾ ನಿರ್ದಿಷ್ಟ-ಕನಿಷ್ಟ ಮೊತ್ತದ ಹಣವಿರಲೇಬೇಕು. ಖಾತೆ ತೆರೆಯಲು ಐದು ರೂಪಾಯಿಗಳಿದ್ದರೆ ಸಾಕು; ಆದರೆ ಚೆಕ್‌ಬುಕ್ ಪಡೆಯಲು ಉಳಿತಾಯ ಖಾತೆಯಲ್ಲಿ ೫೦೦ರೂ.ಗಳಿಗೆ ಕಡಿಮೆ ಇಲ್ಲದಷ್ಟು ಹಣವಿರಬೇಕು. ಉಳಿತಾಯ ಠೇವಣಿ ಖಾತೆ ಅಥವಾ ಚಾಲ್ತಿ ಖಾತೆ ಇಲ್ಲವೇ ಇನ್ನಿತರ ಬಗೆಯ ಠೇವಣಿ ಖಾತೆಯನ್ನು ಪ್ರಾರಂಭಿಸಲು ಭಾವೀ ಖಾತೆದಾರನು ಮೊದಲು ನಿರ್ದಿಷ್ಟ ನಮೂನೆ ಪತ್ರಗಳನ್ನು ಭರ್ತಿಮಾಡಿಕೊಡಬೇಕಾಗುತ್ತದೆ *೨. ಬ್ಯಾಂಕಿನಲ್ಲಿ ದೊರೆಯುವ ‘ಚಲನ್’ ಅನ್ನು ಭರ್ತಿ ಮಾಡಿ ಪ್ರಾರಂಭದ ಕನಿಷ್ಟ ಮೊತ್ತದ ಹಣವನ್ನು ಕಟ್ಟಬೇಕು *೩. ಮಾದರಿ ಸಹಿ ಕಾರ್ಡನ್ನು ಭರ್ತಿ ಮಾಡಿಕೊಡಬೇಕು. *೪. ಅದೇ ಬ್ಯಾಂಕಿನಲ್ಲಿ ಲೆಕ್ಕವಿಟ್ಟಿರುವ ಗ್ರಾಹಕರೊಬ್ಬರ ಪರಿಚಯದ ಸಹಿ ಇರಬೇಕು. *೫.

ಇತರ ಠೇವಣಿ ಖಾತೆಗಳು:

ಮೇಲೆ ತಿಳಿಸಿದ ಮೂರು ಬಗೆಯ ಖಾತೆಗಳಲ್ಲದೆ ನಾನಾ ಬಗೆಯ ಠೇವಣಿ ಖಾತೆಗಳು ವಿವಿದ್ದೋದ್ದೇಶಗಳಿಗಾಗಿ ಬ್ಯಾಂಕುಗಳಲ್ಲಿ ಲಭ್ಯವಿದೆ. ಒಂದೇ ಬಾರಿ ನಿರ್ದಿಷ್ಟ ಮೊತ್ತವಿಟ್ಟು ಗೊತ್ತಾದ ಕಾಲದ ನಂತರ ಇಮ್ಮಡಿ ಹಣ ಪಡೆಯುವ ಠೇವಣಾತಿ ಯೋಜನೆ, ದಿನನಿತ್ಯವೂ ಗೊತ್ತಾದ ಮೊತ್ತವನ್ನು ಸಲ್ಲಿಸುವ ಪಿಗ್ಮಿಡಿಪಾಸಿಟ್, ನಿರ್ದಿಷ್ಟ ಕ್ರಮದಲ್ಲಿ- ಕಂತುಗಳನ್ನು ಕಟ್ಟುತ್ತಾ ಹೋಗಿ ಅವಧಿ ಮುಗಿದ ನಂತರ ನಿಗದಿಯಾದ ರೀತಿಯಲ್ಲಿ ಬಡ್ಡಿ ಸಹಿತ ಹಣವನ್ನು ಹಿಂದಕ್ಕೆ ಪಡೆಯುವ ನಿರಂತರ ಪರಂಪರೆ, ಈ ಎಲ್ಲ ಯೋಜನೆಗಳು ಮುಖ್ಯವಾಗಿ ‘ಹನಿಗೂಡಿ ಹಳ್ಳವಾಗುವ ರೀತಿ’ ಜೇನುಗಳು ಮಧುಸಂಗ್ರಹಿಸಿದಂತೆ ಅಲ್ಪಪ್ರಮಾಣದ ಧನಸಂಗ್ರಹ, ಒಟ್ಟಾಗಿ ಭಾರೀಖರ್ಚಿನ ಬಾಬತ್ತಿಗೆ – ಬಳಕೆಗೆ ಬರುವಂತೆ ಮಾಡುವುದರಲ್ಲಿ ಉಪಯುಕ್ತವಾಗಿವೆ; ವಿದ್ಯಾಭ್ಯಾಸ, ವಿವಾಹ ಮುಂತಾದ ವಿಶೇಷ ಸಂದರ್ಭಗಳಿಗೆ ಈ ಬಗೆಯ ಯೋಜನೆಗಳು ನೆರವಾಗುತ್ತವೆ.

ಗ್ರಾಹಕನ ಠೇವಣಿಯೋಜನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳು ಬಳಸುವ ಅಚ್ಚಾದ ನಮೂನೆಗಳನ್ನು ಮತ್ತು ಗ್ರಾಹಕ-ಬ್ಯಾಂಕರನ ನಡುವಣ ಪತ್ರಗಳಲ್ಲಿ ಕೆಲವನ್ನು ಮಾದರಿಗಾಗಿ ಈ ಮುಂದೆ ಕೊಡಲಾಗಿದೆ.

ಭಾವೀ ಗ್ರಾಹಕನು ಖಾತೆ ತೆರೆಯುವುದು

ಪ್ರಾಪ್ತ ವಯಸ್ಕನಾದ ಯಾವ ಪ್ರಜೆಯಾದರೂ ಬ್ಯಾಂಕಿನಲ್ಲಿ ನಿಯಮಾನುಸಾರ ಖಾತೆ ತೆರೆಯಲು ಅರ್ಹನಾಗಿರುತ್ತಾನೆ. ಹುಚ್ಚರೂ ಕುಡುಕರೂ ಅನರ್ಹತೆಯ ಪಟ್ಟಿಯಲ್ಲಿ ಬರುವುದರಿಂದ, ಅವರು ಖಾತೆಯನ್ನು ತೆರೆಯಲು ಶಕ್ಯವಿಲ್ಲ. ಅಪ್ರಾಪ್ತ ವಯಸ್ಕರಾಗಿದ್ದರೆ ಅವರ ಪರವಾಗಿ ಪೋಷಕರು ಖಾತೆ ತೆರೆಯಬಹುದು.

ಬ್ಯಾಂಕಿನಲ್ಲಿ ಖಾತೆ ಪ್ರಾರಂಭಿಸುವವರು ಕೆಲವು ನಿರ್ದಿಷ್ಟ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ, ಆಯಾ ಬ್ಯಾಂಕಿನ ಅಧಿಕೃತ ಅರ್ಜಿ ನಮೂನೆಗಳನ್ನು ಅವರು ಭರ್ತಿ ಮಾಡಿಕೊಡಬೇಕು. ಈ ಅರ್ಜಿ ನಮೂನೆಯಲ್ಲಿ ವ್ಯಕ್ತಿಯ ಹೆಸರು, ಉದ್ಯೋಗ, ಪೂರ್ಣವಿಳಾಸ, ಮಾದರಿ ಸಹಿಗಳು, ಕಾಲಕಾಲಕ್ಕೆ ಬದಲಾಗುವ ಬ್ಯಾಂಕಿನ ನಿಯಮಾವಳಿಗೆ ಬದ್ದನಾಗಿರುತ್ತೇನೆಂಬ ಹೇಳಿಕೆಗೆ ಒಪ್ಪಿಗೆ ಇತ್ಯಾದಿ ವಿವರಗಳಿರುತ್ತವೆ. ಆತ ಬ್ಯಾಂಕಿಗೆ ಪರಿಚಿತನಾದ ವ್ಯಕ್ತಿಯ ಶಿಫಾರಸ್ಸನ್ನೂ ಪಡೆಯಬೇಕಾಗುತ್ತದೆ.

ಭಾವೀ ಗ್ರಾಹಕನು ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸುವ ಮುನ್ನು ಖಾತೆ ತೆರೆಯಲು ಕೋರಿಕೆ ಸಲ್ಲಿಸುವ ಅರ್ಜಿಯನ್ನು ನೀಡುವುದೂ ಉಂಟು. ಖಾತೆ ತೆರೆಯುವ ವ್ಯಕ್ತಿ ಅದೇ ಬ್ಯಾಂಕಿನ ಅಥವಾ ಅದರ ಶಾಖೆಯ ಇಲ್ಲವೇ ಬೇರೆ ಬ್ಯಾಂಕಿನ ವ್ಯಕ್ತಿಯೊಬ್ಬರಿಂದ ಪರಿಚಯ ಪತ್ರವನ್ನು ಲಿಖಿತ ರೂಪದಲ್ಲಿ ಪಡೆದು ಸಲ್ಲಿಸಬೇಕಾಗುತ್ತದೆ.

ಖಾತೆದಾರನ ಮಾದರಿ ಸಹಿಯನ್ನು ಪ್ರತ್ಯೇಕ ಕಾರ್ಡಿನ ಮೇಲೆ ಪಡೆಯುವುದುಂಟು. ಖಾತೆದಾರ ಚೆಕ್ಕುಗಳನ್ನು ಕಳುಹಿಸಿದಾಗ, ಅದರಲ್ಲಿನ ಸಹಿ ಅವನದೇ ಅಲ್ಲವೇ ಎಂದು ದೃಢೀಕರಿಸಿಕೊಳ್ಳಲು ಈ ಮಾದರಿ ಕಾರ್ಡಿನಲ್ಲಿರುವ ಸಹಿಯೊಂದಿಗೆ ತುಲನೆ ಮಾಡಿ ನೋಡಲಾಗುತ್ತದೆ. ಖೊಟ್ಟಿ ಸಹಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಬ್ಯಾಂಕಿನವರು ಈ ಪದ್ದತಿಯನ್ನು ಅನುಸರಿಸುತ್ತಾರೆ.

ಬ್ಯಾಂಕು ನಿಗದಿ ಮಾಡಿರುವ ಕನಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಠೇವಣಿಯಾಗಿಟ್ಟು ತನ್ನ ಹೆಸರಿನಲ್ಲಿ ಖಾತೆಯನ್ನು ಪ್ರಾರಂಭಿಸಬೇಕು. ನಂತರ ಖಾತೆದಾರ ಚಲನ್ ಪುಸ್ತಕ (ಹಣ ಕಟ್ಟಲು ಬಳಸುವ ಹಾಳೆಗಳ ಪುಸ್ತಕ) ಚೆಕ್ಕು ಪುಸ್ತಕ, (ಹಣ ಪಡೆಯಲು ಬಳಸುವ ಹಾಳೆಗಳ ಪುಸ್ತಕ-ಧನಾದೇಶ ಪುಸ್ತಕ) ಜಮಾ ಮಾಡಿದ ಮತ್ತು ಹಿಂದಕ್ಕೆ ಪಡೆದ ಹಣದ ವಿವರಗಳನ್ನೊಳಗೊಂಡ ‘ಪಾಸ್‌ಬುಕ್’ ಅನ್ನು ಬ್ಯಾಂಕಿನಿಂದ ಪಡೆಯುತ್ತಾನೆ.

ವ್ಯಕ್ತಿಗಳು ಮಾತ್ರವಲ್ಲ ಪಾಲುದಾರಿಗೆ ಸಂಸ್ಥೆಗಳು, ಸಂಯುಕ್ತ ಬಂಡವಾಳ ಸಂಸ್ಥೆಗಳು, ವ್ಯಾಪಾರೇತರ ಕಂಪನಿಗಳು, ಸ್ಥಳೀಯ ಸಂಸ್ಥೆಗಳು, ಖಾತೆಯನ್ನು ಆರಂಭಿಸಬಹುದು. ಇಂತಹ ಸಂದರ್ಭಗಳಲ್ಲಿ ಆಯಾ ಸಂಸ್ಥೆಗಳ ಪರವಾಗಿ ವ್ಯವಹರಿಸುವ ವ್ಯಕ್ತಿಗಳ ಬಗ್ಗೆ ಹಾಗೂ ಆ ಸಂಸ್ಥೆಗಳ ನಿಯಮಾವಳಿಯ ಬಗ್ಗೆ ಬ್ಯಾಂಕ್ ಸೂಕ್ತ ನಿಯಮಗಳನ್ನು ಪರಿಪಾಲಿಸುತ್ತದೆ *೬

ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ತಮ್ಮ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆಯಬಹುದು. ಅಂತಹ ಖಾತೆಯನ್ನು ‘ಸಂಯುಕ್ತ ಖಾತೆ’ ಎಂದು ಕರೆಯುತ್ತಾರೆ. ಇಂತಹ ಸಂದರ್ಭಗಳಲ್ಲಿ, ಖಾತೆಯ ವ್ಯವಹಾರ ಮಾಡುವಾಗ ಒಮ್ಮತದ ಸೂಚನೆಯನ್ನೂ ಅವರೆಲ್ಲರ ಸಹಿಗಳನ್ನೊಳಗೊಂಡ ಅಧಿಕಾರ ಪತ್ರವನ್ನೂ ಬ್ಯಾಂಕು ಪಡೆದಿರಬೇಕು. ಚೆಕ್ಕು ಹಾಗೂ ಹುಂಡಿಗಳನ್ನು ವರ್ಗಾಯಿಸುವ ವಿಚಾರದಲ್ಲಿ ಯಾರಿಗೆ ಹಕ್ಕಿದೆ ಎಂಬುದು ನಿರ್ದಿಷ್ಟವಾಗಿ ತಿಳಿದಿರಬೇಕು. ಖಾತೆಯಲ್ಲಿನ ಶಿಲ್ಕು ಹಣಕ್ಕೆ ಉತ್ತರಾಧಿಕಾರಿಗಳಾರು ಎಂಬುದನ್ನು ಖಾತೆದಾರರು ಬ್ಯಾಂಕಿಗೆ ಲಿಖಿತ ರೂಪದಲ್ಲಿ ನೀಡಿರಬೇಕು.

ಅನಕ್ಷರಸ್ಥ ವ್ಯಕ್ತಿಗಳೂ ಬ್ಯಾಂಕಿನಲ್ಲಿ ಖಾತೆ ತೆರೆಯಬಹುದು; ಅವರಿಗೆ ಸಹಿ ಹಾಕಲೂ ಬಾರದಿದ್ದಾಗ ಆ ವ್ಯಕ್ತಿಯ ಹೆಬ್ಬೆರಳಿನ ಗುರುತನ್ನೂ ಜೊತೆಗೆ ಸಾಕ್ಷಿ ವ್ಯಕ್ತಿಯ ಸಹಿಯನ್ನೂ ಖಾತೆದಾರನ ಭಾವಚಿತ್ರ ಲಗತ್ತಿಸಿದ ಅರ್ಜಿ ಫಾರಂ ಅನ್ನೂ ನ್ಯಾಯಾಧೀಶರಿಂದ ದೃಢೀಕರಣಪಡಿಸಿಕೊಂಡಿರಬೇಕು; ಹಣ ಪಡೆಯುವಾಗ ಖಾತೆದಾರನೇ ಬ್ಯಾಂಕಿಗೆ ಬರಬೇಕು.

ಗ್ರಾಹಕನ ಸೇವಿಂಗ್ಸ್ ಅಕೌಂಟ್ ಪಾಸ್ಬುಕ್ (ಉಳಿತಾಯ ಖಾತೆ)
ಮಾದರಿ

(೨)

ಗ್ರಾಹಕನ ಸಾವಧಿಯೋಜನೆ ಪಾಸ್ಬುಕ್

 

ಗ್ರಾಹಕನು ಹೊಸತಾಗಿ ಖಾತೆ ತೆರೆಯುವಾಗ ಭರ್ತಿ ಮಾಡಬೇಕಾದ ನಮೂನೆ
ಮಾದರಿ

ಉದ್ದಾರಿ ಬ್ಯಾಂಕ್ ಲಿಮಿಟೆಡ್,.
ರಾಮಣ್ಣನಗರ, ತಿಂಗಳೂರು-೪

ಸ್ಥಳ : ……………………
ದಿನಾಂಕ : ……………………

ವ್ಯವಸ್ಥಾಪಕರು,
ಉದ್ದಾರಿ ಬ್ಯಾಂಕ್ ಲಿ. ಅವರಿಗೆ

ಕ್ರಮಸಂಖ್ಯೆ ………………………
ಕಡತದ ಸಂಖ್ಯೆ ………………

ಮಾನ್ಯರೆ

ನಿಮ್ಮ ಬ್ಯಾಂಕಿನಲ್ಲಿ ಶ್ರೀ/ಶ್ರೀಮತಿ…………….. ಆದ ನಾನು/ ನಾವು ಚಾಲ್ತಿ/ ಉಳಿತಾಯ/ಠೇವಣಿ ಖಾತೆಯನ್ನು/ ಜಂಟಿ ಖಾತೆಯನ್ನು ಪ್ರಾರಂಭಿಸಲು ಕೋರುತ್ತಿದ್ದೇನೆ/ ಕೋರುತ್ತಿದ್ದೇವೆ. ಖಾತೆಯನ್ನು ಪ್ರಾರಂಭಿಸಲು ಕನಿಷ್ಟ ಮೊತ್ತ ರೂಪಾಯಿಗಳು . ……….. (ಅಕ್ಷರಗಳಲ್ಲಿ ……………….. ರೂಪಾಯಿಗಳು) ಪ್ರಾರಂಭದ ಠೇವಣಿಯಾಗಿ ಜಮಾ ಮಾಡುತ್ತಿದ್ದೇನೆ/ಮಾಡುತ್ತಿದ್ದೇವೆ.

ಬ್ಯಾಂಕಿನೊಡನೆ ವ್ಯವಹರಿಸುವಾಗ ಈಗ ಜಾರಿಯಲ್ಲಿರುವ ನಿಯಮಗಳಿಗೂ ಮತ್ತು ಕಾಲಕಾಲಕ್ಕೆ ಬದಲಾಗಬಹುದಾದ ನಿಯಮಗಳಿಗೂ ಬದ್ಧನಾಗಿರಲು/ ಬದ್ಧರಾಗಿರಲು ಒಪ್ಪಿದ್ದೇನೆ/ಒಪ್ಪಿದ್ದೇವೆ. (ಏಕವ್ಯಕ್ತಿ/ಜಂಟಿ ವ್ಯಕ್ತಿಗಳು/ಸಂಸ್ಥೆ ಖಾತೆ ಪ್ರಾರಂಭಿಸುವಾಗ ಭರ್ತಿ ಮಾಡತಕ್ಕದ್ದು)

ಖಾತೆಯ ವ್ಯವಹಾರವನ್ನು ಶ್ರೀ/ಶ್ರೀಮತಿ………………. ಆದ ನಾನು ಅವರು ನಿರ್ವಹಿಸುತ್ತೇನೆ/ನಿರ್ವಹಿಸುತ್ತಾರೆ. ನಾನು/ನಮ್ಮ ಪೈಕಿ ಯಾರಾದರೂ ನಿಧನರಾದ ಪಕ್ಷಕ್ಕೆ  ……………………… ಅವರಿಗೆ ಖಾತೆಯಲ್ಲಿ ಜಮಾ ಆಗಿರುವ ಮೊತ್ತ ಪಾವತಿಯಾಗತಕ್ಕದ್ದು.

(ಸಂಸ್ಥೆಗಳು, ಲಿಮಿಟೆಡ್ ಕಂಪನಿಗಳು ಖಾತೆ ಪ್ರಾರಂಭಿಸುವಾಗ ಭರ್ತಿಮಾಡತಕ್ಕದ್ದು)

ಖಾತೆಯ ವ್ಯವಹಾರವನ್ನು ಈ ನಮೂನೆಯೊಂದಿಗೆ ಲಗತ್ತಿಸಿರುವ ‘ನಿರ್ಣಯ ಪ್ರತಿ’ ಯಲ್ಲಿರುವಂತೆ ಶ್ರೀ/ಶ್ರೀಮತಿ……………… ಅವರು ಜಂಟಿಯಾಗಿ/ ಜಂಟಿಯಾಗಿ ನಿರ್ವಹಿಸುತ್ತಾರೆ.

ಖಾತೆದಾರರ ಪೂರ್ಣ ಹೆಸರು: ಶ್ರೀ/ಶ್ರೀಮತಿ……………………………
ಉದ್ಯೋಗ ………………………….
ಕಚೇರಿ ವಿಳಾಸ :
…………………………………..
…………………………………..
…………………………………..
ಮನೆ ವಿಳಾಸ:
…………………………………
…………………………………
………………………………….

ಸಹಿ: ………………………………

ಮಾದರಿ ಸಹಿ ಕಾರ್ಡು

 

ಹಣದ ಜಮಾಹಾಳೆ (ಚಲನ್) (ಉಳಿತಾಯ ಖಾತೆ)
ಮಾದರಿ

ಮಾದರಿ ಸಹಿಕಾರ್ಡು (ಸಾವಧಿ ಠೇವಣಿಗಳಿಗೆ)
ಮಾದರಿ

ಮುಂಭಾಗ

ದಿನಾಂಕ : …………………………….
ಖಾತೆ ಸಂಖ್ಯೆ:………………………

ದಿನೋದ್ದಾರಿ ಬ್ಯಾಂಕು
ವ್ಯವಸ್ಥಾಪಕರು

ಸನ್ಮಾನ್ಯರೆ,

ನಾನು/ನಾವು ಬ್ಯಾಂಕಿನಲ್ಲಿ …………………….. ಠೇವಣಿ ಖಾತೆಯನ್ನು ನನ್ನ/ನಮ್ಮ ……………………… ಎಂಬ ಹೆಸರಿನಲ್ಲಿ …………… ನೆಯ ಇಸವಿ …………… ತಿಂಗಳಿಂದ ಮೊದಲ್ಗೊಂಡು………….. ವರ್ಷ.,……………………. ತಿಂಗಳ ಅವಧಿಗೆ ತೆರೆಯಲು ಮತ್ತು ಒಟ್ಟಿಗೆ ಅಥವಾ ಪ್ರತಿ ತಿಂಗಳೂ/ ಮೂರು ತಿಂಗಳಿಗೊಮ್ಮೆ/ ಆರು ತಿಂಗಳಿಗೊಮ್ಮೆ/ ವರ್ಷಕ್ಕೊಮ್ಮೆ……………. ದಿನದಂದು ರೂ……….. ಕುರಿತು ಕಟ್ಟಲು ಅನುಮತಿಸಬೇಕಾಗಿ ಬಿನ್ನಹ.

ನಾನು/ನಾವು ನೀವು ನೀಡಿರುವ ನಿಯಮಾವಳಿ ಪ್ರಕಾರ ಬ್ಯಾಂಕಿನ ನಿಯಮಗಳಿಗೆ ಬದ್ದರಾಗಿರುತ್ತೇನೆ/ಬದ್ಧರಾಗಿರುತ್ತೇವೆ.

ನಿಮ್ಮ ನಂಬುಗೆಯ
……………………….

 ಮಾದರಿ ಸಹಿ ಕಾರ್ಡು

ಮಾದರಿ

ಹಿಂಭಾಗ

ಚಿರಂಜೀವಿ ……………….. ಅವನ / ಅವಳ ಜನ್ಮ ದಿನಾಂಕ ………………….ನೆಯ ……………… ತಿಂಗಳು …………. ನೆಯ ವರ್ಷ ಎಂದು ಪ್ರಾಮಣಿಸುತ್ತೇನೆ. (ಖಾತೆದಾರ ಅಪ್ರಾಪ್ತ ವಯಸ್ಕನಾದಲ್ಲಿ ಮಾತ್ರ ಇದನ್ನು ಭರ್ತಿ ಮಾಡಿ)

………………………
ಪೋಷಕರ ಸಹಿ

ಮಾದರಿ ಸಹಿ
೧. ……………………………………………..
೨. ……………………………………………..
೩. …………………………………………….ಪರಿಚಯದಾರರು ……………………………..

……………………………………………………

……………………………………………………

ಖಾತೆದಾರನ ಹೆಸರು : ……………………………….ಪೂರ್ಣ ವಿಳಾಸ: ………………………………………

…………………………………………………………..

…………………………………………………………..

………………        …………………………….
ಲೆಕ್ಕಿಗನ ಸಹಿ           ಶಾಖಾ ನಿರ್ವಾಹಕನ ಸಹಿ

ಸಂಸ್ಥೆಗಳ ಪರವಾಗಿ ವ್ಯವಹರಿಸುವ ವ್ಯಕ್ತಿಗಳು ಯಾರೆಂದು ತಿಳಿಸುವ ನಿರ್ಣಯ ಪ್ರತಿ ಮತ್ತು ಅವರ ಮಾದರಿ ಸಹಿ ಕಾರ್ಡು
ಮಾದರಿ

ಮೇಲು ಪತ್ರ

ಅಂಬೇಡ್ಕರ್ ಶಿಕ್ಷಣ ಸಮಿತಿ
ಜ್ಯೋತಿ ನಗರ, ಜಾಣೂರು

ತಾರೀಖು : ೧೫-೯-೧೯೮೭
ಕ್ರಮ ಸಂಖ್ಯೆ : ಬ್ಯಾಂವ್ಯ ೫೯

ವ್ಯವಸ್ಥಾಪಕರು,
ಉದ್ಧಾರಿ ಬ್ಯಾಂಕ್ ಲಿ.-ಅವರಿಗೆ

ಮಾನ್ಯರೆ,

ದಿನಾಂಕ ೬ ಆಗಸ್ಟ್ ೧೯೮೭ ರಂದು ಜರುಗಿದ ಮೇಲ್ಕಂಡ ಸಮಿತಿಯ ಸಭೆಯಲ್ಲಿ, ನಿಮ್ಮ ಬ್ಯಾಂಕಿನಲ್ಲಿ ನಮ್ಮ ಸಂಸ್ಥೆಯ ಪರವಾಗಿ ವ್ಯವಹರಿಸಲು ಇಬೆರನ್ನು ಸರ್ವಾನುಮತದಿಂದ ಗೊತ್ತು ಮಾಡಲಾಗಿದೆ. ಈ ಇಬ್ಬರ ಮಾದರಿ ಸಹಿಕಾರ್ಡನ್ನು ಪ್ರಾಮಾಣೀಕರಿಸಿ ಕಳುಹಿಸಲಾಗಿದೆ ಮತ್ತು ನಿರ್ಣಯ ಪತ್ರತಿಯನ್ನು ಲಗತ್ತಿಸಿದೆ. ಅಂಗೀಕರಿಸಬೇಕಾಗಿ ಬಿನ್ನಿಹ.

ತಮ್ಮ ವಿಶ್ವಾಸಿ
ದೇವರಾಜ್
ಕಾರ್ಯದರ್ಶಿ

ಅಡಕ ಪತ್ರ : ನಿರ್ಣಯ ಪ್ರತಿ
ಮಾದರಿ ಸಹಿ ಕಾರ್ಡು

ನಿರ್ಣಯ ಪ್ರತಿ

ದಿನಾಂಕ ೬ನೆಯ ಆಗಸ್ಟ್ ೧೯೮೭ ರಂದು ಜರುಗಿದ ಅಂಬೇಡ್ಕರ್ ಶಿಕ್ಷಣ ಸಮಿತಿಯ ಸಭೇಯಲ್ಲಿ ಸರ್ವಾನುಮತದಿಂದ ಅಂಗೀಕಾರವಾದ ನಿರ್ಣಯಗಳಲ್ಲಿ ೧೬ ನೆಯ ನಿರ್ಣಯದ ಭಾಗ ಇಂತಿದೆ :

ನಿರ್ಣಯ ೧೬

“ಉದ್ಧಾರಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ನಮ್ಮ ಸಂಸ್ಥೆಯ ಪರವಾಗಿ ಖಾತೆ ತೆರದು ಹಣ ತುಂಬುವ,ಹಣಪಡೆಯುವ ಹಾಗೂ ಚೆಕ್ ಇದ್ಯಾದಿ ವ್ಯವಹಾರಗಳನ್ನೆಲ್ಲ ನಿರ್ವಹಿಸಲು ಸಂಸ್ಥೆಯ ಪರವಾಗಿ ಬ್ಯಾಂಕಿನ ವಿವಿಧ ಪತ್ರಗಳಿಗೆ ಸಹಿಮಾಡಲು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಷಕಂಠಪ್ಪ ಹಾಗೂ ಕೋಶಾಧಿಕಾರಿ ಅಮೃತಣ್ಣ ಅವರು ಜಂಟಿಯಾಗಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡಲಾಗಿದೆ. ಈ ಸಭೆಯ ದಿನಾಂಕದಿಂದ ಈ ನಿರ್ಣಯ ಜಾರಿಗೆ ಬರುದುವು.”

ಸಹಿ
ವಿಷಕಂಠಪ್ಪ
ಅಧ್ಯಕ್ಷರು