ಬ್ಯಾಂಕಿನ ವ್ಯವಹಾರಗಳಲ್ಲಿ ಸಾಲ ನೀಡಿಕೆ ಮಹತ್ವದ ಕಾರ್ಯವಾಗಿದೆ. ಉತ್ಪಾದನಾ ಚಟುವಟಿಕೆಗಳನ್ನು ಗಮನಿಸಿ ಬ್ಯಾಂಕುಗಳು ಸಾಧಾರಣವಾಗಿ ಸಾಲ ನೀಡುತ್ತವೆ. ಸಾಲಗಾರನು ಸಾಲದ ನೆರವಿನಿಂದ ಸರಕು-ಸೇವೆಗಳನ್ನು ಉತ್ಪಾದಿಸಿ, ಮಾರಾಟಮಾಡಿ, ಲಾಭಗಳಿಕೆಯಿಂದ ಬಡ್ಡಿ ಸಮೇತ ಸಾಲವನ್ನು ಮರುಪಾವತಿ ಮಾಡುತ್ತಾನೆ. ಕೈಗಾರಿಕಾ ವಾಣಿಜ್ಯ ಕ್ಷೇತ್ರಗಳಂತೆ, ಸಾಮಾಜಿಕ-ಧಾರ್ಮಿಕ ಕಾರ್ಯಗಳು, ಉತ್ಪಾದನಾಂಗಗಳೂ ಲಾಭದಾಯಕ ಸಂಸ್ಥೆಗಳೂ ಆಗಿರುವುದಿಲ್ಲ. ಆದ್ದರಿಂದ ಅನುತ್ಪಾದಕ ಕಾರ್ಯಗಳಿಗೆ ಏಕಾಏಕಿ ಸಾಲವನ್ನು ಬ್ಯಾಂಕುಗಳು ನೀಡಲಾರವು.

ಸಾಲ ನೀಡಿಕೆಯಲ್ಲಿ ಉತ್ಪಾದಕ-ಮಾರಾಟಗಾರ ನಷ್ಟಕ್ಕೆ ಒಳಗಾದರೆ, ಬ್ಯಾಂಕು ಆ ಮೂಲಕ ನಷ್ಟಕ್ಕೆ ಒಳಗಾಗಲು ಇಚ್ಛಿಸುವುದಿಲ್ಲ; ಆದ ಕಾರಣ, ಸಾಲಗಾರನ ವಸ್ತು, ಆಸ್ತಿಗಳನ್ನು ಆಧಾರವಾಗಿ ಪಡೆದಿರುತ್ತವೆ. ಸಾಲಗಾರರು ವಸ್ತುಗಳನ್ನು ಆಧಾರವಾಗಿಟ್ಟ ಮಾತ್ರಕ್ಕೆ ಬ್ಯಾಂಕು ಸಾಲನೀಡಲೇಬೇಕೆಂಬ ನಿಯಮವಿಲ್ಲ. ಸಟ್ಟಾ, ಕಳ್ಳಪೇಟೆ, ಇತರೇ ಕಾನೂನು ಬಾಹಿರ ವ್ಯವಹಾರಗಳಿಗೆ ಬ್ಯಾಂಕು ಸಾಲ ನೀಡುವುದಿಲ್ಲ. ಬ್ಯಾಂಕು ಸಾಲ ನೀಡುವಾಗ, ಸಾಲಕ್ಕೆ ಇಡುವ ಭದ್ರತೆಯನ್ನು ಕುರಿತು ವಿಚಾರ ಮಾಡುವಂತೆಯೇ ಮರುಪಾವತಿ ಮಾಡುವ ವಿಧಾನವನ್ನೂ ಪರಿಶೀಲಿಸುತ್ತದೆ.

ಬ್ಯಾಂಕುಗಳು ಸಾಲಗಳನ್ನು ಸಾಮಾನ್ಯವಾಗಿ ಹುಂಡಿ, ಷೇರುಪತ್ರ, ಚರ-ಸ್ಥಿರಾಸ್ತಿ, ವಿಮಾಪಾಲಿಸಿ ಮೊದಲಾದವುಗಳ ದಾಖಲೆಗಳ ಆಧಾರದ ಮೇಲೆ ನೀಡುತ್ತವೆ. (ಬ್ಯಾಂಕು ಸಾಲ ನೀಡುವ ಮೊದಲು ಕೋರಿಕೆಯನ್ನು ಪರಿಶೀಲಿಸುತ್ತದೆ. *೧ ಅನಂತರ ಅದಕ್ಕೆ ಉತ್ತರವನ್ನು ಬರೆಯುತ್ತದೆ. *೨) ಕೆಲವು ವೇಳೆ ಕಬ್ಬಿಣ, ಸಿಮೆಂಟ್, ಮರಮುಟ್ಟು, ಮೌಲಿಕ ವಸ್ತು, ಬೆಳೆ ಮೊದಲಾದವುಗಳ ಆಧಾರದ ಮೇಲೂ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಈ ಬಗೆಯ ಸಾಲವನ್ನು (ಹೈಪಾಥಿಕೇಟೆಡ್ ಲೋನ್) ‘ತೋರಾಧಾರ ಸಾಲ’ ಎನ್ನುತ್ತಾರೆ. ಬ್ಯಾಂಕ್ ವ್ಯವಹಾರದಲ್ಲಿ ಸರಕಿನ ಅಥವಾ ಸ್ವತ್ತಿನ ಮೇಲೆ ಸಾಲಿಗನಿಗೆ ಸಾಲಗಾರ ನೀಡುವ ಹಕ್ಕಿನ ಒಪ್ಪಂದದಲ್ಲಿ ಅರ್ಥಾತ್, ‘ತೋರಾಧಾರ ಸಾಲ’ ನೀಡಿದಾಗ ಸರಕು ಸಾಲಿಗನ ವಶದಲ್ಲಿಡುವುದಿಲ್ಲ. ಅದರ ಮೇಲೆ ಬ್ಯಾಂಕರನಿಗೆ ‘ಧರಣಾಧಿಕಾರ’ (ಲೀನ್) ವಿರುತ್ತದೆ. ಈ ಧರಣಾಧಿಕಾರ ‘ಕಬ್ಜಾಧರಣಾಧಿಕಾರ’ ಕ್ಕಿಂತ (ಪೊಸೆಸರಿ) ಭಿನ್ನವಾದುದು.

ಮತ್ತೆ ಕೆಲವು ಸಂದರ್ಭಗಳಲ್ಲಿ ಬ್ಯಾಂಕುಗಳು ವಸ್ತು, ವಾಹನಗಳನ್ನು ಕೊಳ್ಳಲು, ಬೆಳೆಗಳನ್ನು ಬೆಳೆಯಲು ‘ಮುಂಗಡ ಸಾಲ’ ನೀಡುತ್ತವೆ. ಸರ್ಕಾರ, ಸಂಸ್ಥೆ, ವ್ಯಕ್ತಿಗಳು ಹೊಣೆಗಾರಿಕೆ ಹೊತ್ತು ಕೊಂಡಾಗಲೂ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಇದನ್ನು ‘ಹೊಣೆಗಾರಿಕೆ ಸಾಲ’ ಎನ್ನುತ್ತಾರೆ. ಪಡೆದ ಸಾಲವನ್ನು ಸಕಾಲದಲ್ಲಿ ತೀರಿಸದಿದ್ದಾಗ ಅಂಥವರಿಗೆ ಬ್ಯಾಂಕ್ ಅಂತಿಮ ಎಚ್ಚರಿಕೆ ನೀಡುತ್ತದೆ. *೩. ಬ್ಯಾಂಕುಗಳು ಸಾಲಗಾರನಿಗಲ್ಲದೆ ಬೇರಾರಿಗೂ ಅವನ ವಹಿವಾಟಿಗೆ ಸಂಬಂಧಿಸಿದ ವಿವರಗಳನ್ನೂ ಸಾಲದ ಮಾಹಿತಿಯನ್ನೂ ಠೇವಣಿಯ ವಿವರಗಳನ್ನೂ ಬಹಿರಂಗಗೊಳಿಸುವುದಿಲ್ಲ. ನಗದು ಉದರಿ ಸೌಲಭ್ಯವೂ (Cash credit Fecility) ಒಂದು ಬಗೆಯ ತಾತ್ಕಾಲಿಕ ಸಾಲವೆನ್ನಬಹುದು. “ಒಬ್ಬ ಗ್ರಾಹಕ ತನ್ನ ಬ್ಯಾಂಕ್ ಖಾತೆಯಲ್ಲಿ ಶಿಲ್ಕು ಇಲ್ಲದಿದ್ದರೂ ಹಣವನ್ನು ಮೀರೆಳೆಯಲು ಒಂದು ಪೂರ್ವ ನಿರ್ಧಾರಿತ ಮಿತಿಯನ್ನು ಮಂಜೂರು ಮಾಡಿ ಖಾತೆದಾರನು ಅದನ್ನೂ ಬಳಸಿಕೊಳ್ಳಲು ಬ್ಯಾಂಕ್ ಅವಕಾಶ ಮಾಡಿಕೊಡುತ್ತದೆ. ಋಣಿಗ್ರಾಹಕ ಈ ನಿರ್ಧಾರಿತ ಮೊತ್ತವನ್ನು ಅಗತ್ಯ ಬಿದ್ದಾಗಲೆಲ್ಲ ಚೆಕ್ಕುಗಳ ಮೂಲಕ ಪಡೆಯಬಹುದು. ವಾಸ್ತವವಾಗಿ ಬಳಸಿಕೊಂಡ ಮೊಬಲಗಿನ ಮೊತ್ತಕ್ಕೆ ಮಾತ್ರ ನಿರ್ದಿಷ್ಟ ಬಡ್ಡಿಯನ್ನು ತೆರಬೇಕಾಗುವುದು *೪ ‘ತೋರಾಧಾರದ ಮೇಲೂ ಜಾಮೀನಿನ ಮೇಲೂ ಸಾಮಾನ್ಯವಾಗಿ ಈ ಬಗೆಯ ನಗದಿ ಉದರಿ ಸೌಲಭ್ಯ ನೀಡಲಾಗುತ್ತದೆ *೫.

ಬ್ಯಾಂಕಿನಲ್ಲಿ ಸಾಲ ಪಡೆದಾಗ ಅಥವಾ ನಿರ್ದಿಷ್ಟಾವಧಿ ಠೇವಣಿ ಯೋಜನೆಗೆ ಹಣವನ್ನು ನಿಯತವಾಗಿ ಕಂತುಗಳಲ್ಲಿ ಕಟ್ಟಬೇಕಾದಾಗ ಅಥವಾ ಪ್ರತಿತಿಂಗಳೂ ಇಲ್ಲವೇ ಗೊತ್ತಾದ ಅವಧಿಯಲ್ಲಿ ಶುಲ್ಕ, ಚಂದಾ ಹಣ ಮುಂತಾದವನ್ನು ಕಟ್ಟಬೇಕಾದಾಗ ಗ್ರಾಹಕ, ತನ್ನ ಖಾತೆಯಿಂದ ಆಯಾ ಬಾಬ್ತುಗಳಿಗೆ ಹಣಸಂದಾಯ ಮಾಡಲು ಸ್ಥಾಯೀ ಸೂಚನೆಗಳನ್ನೂ, ಅವುಗಳಿಗೆ ಸಂಬಂಧಿಸಿದ ವಿವರಗಳನ್ನೂ ನೀಡಿ ‘ಕೋರಿಕೆ ಪತ್ರ’ ಸಲ್ಲಿಸುತ್ತಾನೆ. *೬. ಬ್ಯಾಂಕು ಆ ಬಗೆಯ ಕಾರ್ಯವನ್ನು ಗ್ರಾಹಕನ ಪರವಾಗಿ ನಿರ್ವಹಿಸುತ್ತದೆ. ಈ ಬಗೆಯ ಸೇವೆಗೆ ಗ್ರಾಹಕನು ಬ್ಯಾಂಕಿಗೆ ನಿರ್ದಿಷ್ಟ ಮೊತ್ತದ ‘ಸೇವಾಶುಲ್ಕ’ ವನ್ನು ನೀಡಬೇಕಾಗುತ್ತದೆ. *5

ಗ್ರಾಹಕರು ಬಡ್ಡಿಗಳಿಕೆಗಾಗಿ ಗೊತ್ತಾದ ಹಣವನ್ನು ನಿರ್ದಿಷ್ಟಾವಧಿವರೆಗೆ ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ. ಜೊತೆಗೆ ಅನೇಕ ನಿರ್ದಿಷ್ಟಾವಧಿ ಯೋಜನೆಯ ಠೇವಣಿಗಳನ್ನು ಪ್ರಾರಂಭಿಸುತ್ತಾರೆ. ಇಂಥ ಠೇವಣಿಗಳಿಗೆ ಕಂತುಗಳ ಮೂಲಕ ಹಣಕಟ್ಟುತ್ತಾರೆ. ಇದಕ್ಕೆ ಕಾಲಕಾಲಕ್ಕೆ ಬ್ಯಾಂಕ್ ನೀಡುವ ಬಡ್ಡಿಯೂ ಸಹ ಸೇರ್ಪಡೆಯಾಗುತ್ತಾ ಇರುತ್ತದೆ. ಗ್ರಾಹಕರ ಇಂಥ ಠೇವಣಿಗಳ ಮೇಲೆ ೭೫%ಕ್ಕೆ ಮೀರದಂತೆ ಬ್ಯಾಂಕುಗಳ ಸಾಲ ನೀಡುತ್ತವೆ. ಇಂತಹ ಸಾಲಗಳಿಗೆ ಬ್ಯಾಂಕ್ ನೀಡುವ ಬಡ್ಡಿಗಿಂತ ಸಾಮಾನ್ಯವಾಗಿ ೨% ಹೆಚ್ಚಿಗೆ ಬಡ್ಡಿ ವಿಧಿಸುತ್ತವೆ. ಬ್ಯಾಂಕ್ ನೀಡುವ ಇತರ ಸಾಲಗಳ ಮೇಲಿನ ಬಡ್ಡಿ ದರಕ್ಕಿಂತ ಇದರ ದರ ಕಡಿಮೆಯಿರುತ್ತದೆ. ಇಂಥ ಸಾಲಗಳನ್ನು ‘ಠೇವಣಿಗಳ ಮೇಲೆ ಸಾಲ’ ಎನ್ನುತ್ತಾರೆ.

ಸಾಲ ಸೌಲಭ್ಯವನ್ನು ನೀಡುವಂತೆ ಗ್ರಾಹಕರೊಬ್ಬರು ಬ್ಯಾಂಕೊಂದಕ್ಕೆ ಬರೆದ ಕೋರಿಕಾ ಪತ್ರ
ಮಾದರಿ

ಲೋಕಪ್ರಿಯ ಸುಗಂಧ ವ್ಯಾಪಾರಿಗಳು

ತಂತಿ: ಲೋಸುವ್ಯಾ                                              ೪೮, ದಾನೇಶ ನಿಲಯ
ದೂರವಾಣಿ: ೬೪೩೦೧೮                                        ಸುಂದರ ನಗರಿ
ತೈಲೂರು

ದಿನಾಂಕ: ೯ ಅ, ೧೯೮೭.

ವ್ಯವಸ್ಥಾಪಕರು,
ಸತ್ಯ ವಿಹಾರಿ ಬ್ಯಾಂಕ್ ಲಿ.
ಹರಿಶ್ಚಂದ್ರ ನಗರ ಶಾಖೆ
ಹರಿಶ್ಚಂದ್ರ ನಗರ – ಅವರಿಗೆ

ಮಾನ್ಯರೆ,

ನಮ್ಮ ಸಂಸ್ಥೆಯ ‘ಲೋಕಪ್ರಿಯ ಸುಗಂಧ ವಸ್ತುಗಳು, ಸ್ಥಳೀಯ ಮಾರುಕಟ್ಟೆಯ ವ್ಯಾಪ್ತಿ ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿವೆ. ಇತ್ತೀಚೆಗೆ ಅಂತರ ರಾಷ್ಟ್ರೀಯ ಸಂತೋಷ ಸುಖವರ್ಧಕ ವಸ್ತುಗಳ ಪ್ರದರ್ಶನದಲ್ಲಿ ನಮ್ಮ ಸಂಸ್ಥೆಯ ಲೋಕಪ್ರಿಯ ಸುಗಂಧ ವಸ್ತುಗಳು ಜನಪ್ರಿಯವಾಗಿ ಬಹುಮಾನಗಳನ್ನೂ ಗಳಿಸಿವೆ. ಪರಿಣಾಮವಾಗಿ ನಮ್ಮ ಸುಗಂಧ ದ್ರವ್ಯಗಳ ಉತ್ಪಾದನೆಯನ್ನು ನಾಲ್ವಡಿ ಹೆಚ್ಚಿಸಬೇಕಾಗಿದೆ. ಅಷ್ಟೇ ಅಲ್ಲ, ವಿದೇಶಿ ವ್ಯಾಪಾರ ಪ್ರಮಾಣವನ್ನೂ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ನಮಗೆ ಹೆಚ್ಚಿನ ಬಂಡವಾಳ ಅಗತ್ಯವಿರುವುದರಿಂದ ಕನಿಷ್ಟ ಪಕ್ಷ ೨ ಲಕ್ಷ ರೂ.ಗಳ ಅಲ್ಪಾವಧಿ ಸಾಲಬೇಕಾಗಿದೆ. ಇದನ್ನು ೩ ತಿಂಗಳ ಅವಧಿಯಲ್ಲಿ ತಪ್ಪದೆ ಹಿಂದಿರುಗಿಸುವ ಭರವಸೆ ನೀಡುತ್ತೇವೆ.

ನಮ್ಮ ಉದ್ಯಮಕ್ಕೆ ಹೊಸ ಪಾಲುದಾರರಾಗಿ ಇಬ್ಬರು ಮಿತ್ರರು ಸೇರುವವರಿದ್ದು, ಒಟ್ಟು ನಾವು ನಾಲ್ವರು ಪಾಲುದಾರರಾಗಿ ಈ ಕೆಳಕಂಡ ಭದ್ರತೆಗಳನ್ನು ನಾವು ಕೇಳಿರುವ ಸಾಲಕ್ಕೆ ಆಧಾರವಾಗಿ ನೀಡಲಿದ್ದೇವೆ.

೧) ನಮ್ಮ ಮಿತ್ರ ಪಾಲುದಾರರಾದ ಶ್ರೀ ಸಹಾಯಪ್ಪನವರ ಹೆಸರಿನಲ್ಲಿರುವ ರಟ್ಟಿನ ಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸುವ ೭೫,೦೦೦ ರೂ. ಬೆಲೆಬಾಳುವ ಯಂತ್ರೋಪಕರಣಗಳು.

೨) ನನ್ನ ಹೆಸರಿನಲ್ಲಿರುವ ೧ಲಕ್ಷ ರೂ. ಮೌಲ್ಯದ ಜೀವ ವಿಮಾ ಪಾಲಿಸಿ (ಸಂ.೩೮೩೮೬೬೬೭)

೩) ಸುಗಂಧ ದ್ರವ್ಯಗಳ ತಯಾರಿಕಾ ಕಾರ್ಖಾನೆಯ ೪ ಲಕ್ಷ ರೂ. ಬೆಲೆ ಬಾಳುವ ಕಟ್ಟಡ ಯಂತ್ರೋಪಕರಣಗಳು.

೪) ಮತ್ತೊಬ್ಬ ಪಾಲುದಾರರ ಸ್ವಂತದ ೧ ಲಕ್ಷ ರೂ. ಬೆಲೆ ಬಾಳುವ ಮನೆ.

ಇವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಸಾಲದ ಅರ್ಜಿಯನ್ನು ತಮ್ಮ ಅವಗಾಹನೆ, ಅನುಮೋದನೆ ಹಾಗೂ ಮಂಜುರಾತಿಗೆ ಕಳುಹಿಸಿದ್ದೇವೆ.

ತಮ್ಮ ವಿಶ್ವಾಸಿ,
ಮೃತ್ಯುಂಜಯಪ್ಪ
ಪಾಲುದಾರ

ಗ್ರಾಹಕರು ಕೇಳಿದ ಸಾಲದ ಬಗ್ಗೆ ಬ್ಯಾಂಕ್ ನೀಡಿದ ನಿರಾಕರಣ ಉತ್ತರ

ಮಾದರಿ

ಸತ್ಯವಿಹಾರಿ ಬ್ಯಾಂಕ್ ಲಿ
ಹರಿಶ್ಚಂದ್ರ ನಗರ ಶಾಖೆ

ತಂತಿ: ಸಬ್ಯಾಲಿ                                       ಹರಿಶ್ಚಂದ್ರ ನಗರ
ದೂರವಾಣಿ: ೧೬೩೮೯೧                             ದಿನಾಂಕ: ೧೫ ಅ, ೧೯೮೭.

ಶ್ರೀ ಮೃತ್ಯುಂಜಯಪ್ಪ
ಪಾಲುದಾರರು
ಲೋಕಪ್ರಿಯ ಸುಗಂಧ ವ್ಯಾಪಾರಿಗಳು
೪೮, ದಾನೇಶ ನಿಲಯ
ಸುಂದರ ನಗರಿ, ತೈಲೂರು

ಮಾನ್ಯರೆ,

ನೀವು ಸಲ್ಲಿಸದ ಸಾಲದ ಅರ್ಜಿಯನ್ನು ಇತರ ಆಧಾರಗಳ ದಾಖಲೆಗಳನ್ನೂ ಶಿಫಾರಸಿನೊಂದಿಗೆ ನಮ್ಮ ಕೇಂದ್ರ ಕಚೇರಿಗೆ ಅನುಮತಿಗಾಗಿ ಕಳುಹಿಸಲಾಗಿತ್ತು. ಅವುಗಳನ್ನು ಪರಿಶೀಲಿಸಿದ ನಂತರ ಕೇಂದ್ರ ಕಚೇರಿ ತಿಳಿಸಿದ ಉತ್ತರವನ್ನು ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ.

ನೀವು ನೀಡಿರುವ ಆಧಾರಗಳಲ್ಲಿ ಯಂತ್ರೋಪಕರಣಗಳ ಬೆಲೆ ೭೫,೦೦೦ ರೂ. ಮತ್ತು ೪ ಲಕ್ಷ ರೂ. ಎಂದು ತಿಳಿಸಿದ್ದೀರಿ. ಆದರೆ ಅವನ್ನು ಕೊಂಡು ಬಹುಕಾಲವಾಗಿರುವುದರಿಂದಲೂ, ಅವುಗಳ ಸವೆತದ ಮೌಲ್ಯ ಕಳೆದ ಈಗಿನ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ನೋಡಿದಾಗ ನೀವು ನಮೂದಿಸಿರುವ ಬೆಲೆಗಿಂತ ಅತಿ ಕಡಿಮೆ ಮೌಲ್ಯವಾಗಿರುತ್ತದೆ. ಇನ್ನೂ ಸ್ಥಿರಾಸ್ತಿ ಮನೆಯ ಮೌಲ್ಯಮಾಪನವನ್ನು ಪ್ರತ್ಯಕ್ಷವಾಗಿ ಮಾಡಬೇಕಾಗಿದೆ. ಜೀವವಿಮಾ ಪಾಲಿಸಿಯ ಮೊತ್ತ ಒಂದು ಲಕ್ಷ ರೂ. ಗಳಾದರೂ ಅದು ಇತ್ತೀಚಿನದಾಗಿದ್ದು ಅದಕ್ಕೆ ಕಟ್ಟಿದ ಕಂತಿನ ಹಣ ಬಹಳ ಕಡಿಮೆಯಿದೆ.

ಇಷ್ಟು ದೊಡ್ಡ ಮೊತ್ತದ ಸಾಲವನ್ನು ಮೂರು ತಿಂಗಳ ಅವಧಿಯಲ್ಲಿ ತೀರಿಸುವುದು ನಿಮ್ಮ ವ್ಯಾಪಾರದ ವ್ಯಾಪ್ತಿಯ ಹಿನ್ನೆಲೆಯಲ್ಲಿ ಸುಲಭ ಸಾಧ್ಯವಲ್ಲ. ಈ ಎಲ್ಲ ಕಾರಣಗಳನ್ನು ಗಮನಿಸಿಯೂ ನಮ್ಮ ಶಿಫಾರಸ್ಸುಗಳನ್ನು ಪರಿಗಣನೆಗೆ ತೆಗೆದುಕೊಂಡು ೫೦% ರಷ್ಟು ಸಾಲ  ನೀಡಬಹುದು. ‘ನೀವು ಕೇಳಿದಷ್ಟು ಮೊತ್ತದ ಸಾಲ ನೀಡಲು ಸಾಧ್ಯವಿಲ್ಲ’ ವೆಂದು ನಮ್ಮ ಕೇಂದ್ರ ಕಚೇರಿ ತಿಳಿಸಿದೆ.

ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಕೋರಲಾಗಿದೆ.

ಇಂತು,
ಸತ್ಯದೇವಪ್ಪ
ಶಾಖಾ ವ್ಯವಸ್ಥಾಪಕ
ಸತ್ಯವಿಹಾರಿ ಬ್ಯಾಂಕ್ ಲಿ.

 

ನಿರ್ದಿಷ್ಟ ಅವಧಿಯಲ್ಲಿ ಸಾಲವನ್ನು ತೀರಿಸದಿದ್ದ ಬಾಕಿದಾರನಿಗೆ ಬ್ಯಾಂಕ್ ನೀಡುವ ಅಂತಿಮ ಎಚ್ಚರಿಕೆ ಪತ್ರ
ಮಾದರಿ

ಹಿತರಕ್ಷಕ ಬ್ಯಾಂಕ್ ಲಿ
ರಕ್ಷಣಾಪುರ

ತಂತಿ: ಹಿಬ್ಯಾಲಿ                                                   ನವವನ ಪುರ ಶಾಖೆ.
ದೂರವಾಣಿ: ೪೩೨೧೦೩

ಪತ್ರದ ಸಂಖ್ಯೆ: ಎಪ೨/೧೯೮೭                                 ದಿನಾಂಕ: ೨೦-೧೦-೧೯೮೭

ಶ್ರೀ ಬಹುಸಾಲಪ್ಪ
ಪರಮಾತ್ಮ ಸ್ಟೋರ್ಸ್
ವೈಕುಂಠ ರಸ್ತೆ
ಹಾಯೂರು.

ಮಾನ್ಯರೆ,

ಕಳೆದ ವರ್ಷ ‘ಬಡ ವ್ಯಾಪಾರಿಗಳ ನೆರವು ಯೋಜನೆ’ ಯಡಿಯಲ್ಲಿ ದೀರ್ಘಾವಧಿ ಸಾಲ ಪಡೆದು ಇದುವರೆಗೂ ಸಾಲವನ್ನು ಪಾವತಿ ಮಾಡದೆ ಬಾಕಿದಾರರಾದ ನಿಮಗೆ ಈಗಾಗಲೇ ಹಲವಾರು ಸೂಚನಾ ಪತ್ರ ಮತ್ತು ಎಚ್ಚರಿಕೆ ಪತ್ರಗಳನ್ನು ಕಳಿಸಿದ್ದರೂ ಈ ಬಗ್ಗೆ ನೀವು ಸೂಕ್ತಕ್ರಮ ಕೈಗೊಂಡು ಸಾಲ ತೀರಿಸಲು ಯತ್ನಿಸಿಲ್ಲ. ದಂಡರಹಿತ ಮರುಪಾವತಿ ಅವಧಿ ಮುಗಿದು ಇದೀಗ ದಂಡ ಸಹಿತ ಮರುಪಾವತಿ ಅವಧಿ ಸಹ ಮುಗಿದಿದ್ದು ಕಾನೂನಿನ ಪ್ರಕಾರ ಉಗ್ರಕ್ರಮ ಕೈಗೊಳ್ಳಬೇಕಾಗಿದೆ.

ಈ ಪತ್ರವನ್ನು ‘ಅಂತಿಮ ಎಚ್ಚರಿಕೆ’ ಯನ್ನಾಗಿ ಕಳಿಸಲಾಗುತ್ತಿದೆ. ಈ ಪತ್ರ ತಲುಪಿದ ಒಂದು ವಾರದೊಳಗೆ ಪೂರ್ತಿ ಸಾಲವನ್ನು ಬಡ್ಡಿ ಹಾಗೂ ದಂಡಶುಲ್ಕದೊಡನೆ ಪಾವತಿ ಮಾಡಬೇಕೆಂದು ಸೂಚಿಸಲಾಗಿದೆ.

ತಮ್ಮ ವಿಶ್ವಾಸಿ,
ಚಂದ್ರಮುಖಿ
ವ್ಯವಸ್ಥಾಪಕರು
ಹಿತರಕ್ಷಕ ಬ್ಯಾಂಕ್ ಲಿ.

 

ನಗದು ಉದರಿ ಸೌಲಭ್ಯವನ್ನು ಕೋರಿ ಗ್ರಾಹಕ ಬ್ಯಾಂಕಿಗೆ ಬರೆದ ಪತ್ರ
ಮಾದರಿ

ದಾನಿ ಧರ್ಮಪ್ಪ ಮತ್ತು ಪುತ್ರರು
(ಬೆಲ್ಲದ ವ್ಯಾಪಾರಿಗಳು)

ತಂತಿ: ‘ಸಿಹಿ’                                                                  ಕಬ್ಬಿನ ಕಟ್ಟೆ
ದೂರವಾಣಿ: ೪೫೩೨೪೮                                                    ಸಕ್ಕರೆಪುರ

ಪತ್ರದ ಸಂಖ್ಯೆ: ನಉ ೪/೧೯೮೭                  ದಿನಾಂಕ ೨೦-೧೦-೧೯೮೭

ಜೊತೆ ಪತ್ರಗಳು : ೧

ವ್ಯವಸ್ಥಾಪಕರಯ
ಆಪದ್ಭಾಂಧವ ಬ್ಯಾಂಕ್ ಲಿ;
ಕಬ್ಬಿನಕಟ್ಟೆ
ಸಕ್ಕರೆಪುರ.

ಮಾನ್ಯರೆ,

ಕಬ್ಬಿನ ಕಟ್ಟೆಯ ಪ್ರದೇಶದಲ್ಲಿ ಪ್ರಸಿದ್ಧ ಬೆಲ್ಲದ ವ್ಯಾಪಾರಿಗಳಾದ ನಾವು ನಿರಂತರವಾಗಿ ಕಳೆದ ಎರಡು ದಶಕಗಳಿಂದ ನಮ್ಮೆಲ್ಲ ಹಣಕಾಸಿನ ವ್ಯವಹಾರವನ್ನು ನಿಮ್ಮ ಬ್ಯಾಂಕಿನ ಮೂಲಕವೇ ನಡೆಸುತ್ತಿದ್ದೇವೆ. ನಮ್ಮ ಚಾಲ್ತಿ ಲೆಕ್ಕದಲ್ಲಿ ಸಹಸ್ರಾರು ರೂಪಾಯಿಗಳ ವಹಿವಾಟನ್ನು ಪ್ರತಿ ತಿಂಗಳೂ ನಡೆಸುತ್ತಿರುವುದು ವಿದಿತ ಸಂಗತಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸರಕುಗಳು ಜನಪ್ರಿಯವಾಗಿದ್ದು ವ್ಯಾಪಾರ ಬಹುಮುಖವಾಗಿ ಬೆಳೆದಿದೆ. ಇದರ ಫಲವಾಗಿ ಕೆಲವು ಸಂದರ್ಭಗಳಲ್ಲಿ ಚಾಲ್ತಿ ಬಂಡವಾಳ ಸಾಲದೆ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ನಮಗೆ ತಾತ್ಕಾಲಿಕ ಪರಿಹಾರವಾಗಿ, ನಗದು ಉದರಿ ಸೌಲಭ್ಯದ ಅಗತ್ಯ ಬೀಳುತ್ತದೆ. ಸುಮಾರು ೧೫,೦೦೦ ರೂಪಾಯಿಗಳವರೆಗೆ ನಿಮ್ಮ ಬ್ಯಾಂಕಿನಿಂದ ಈ ಬಗೆಯ ಸೌಲಭ್ಯಗಳನ್ನು ಒದಗಿಸಿದಲ್ಲಿ ಉಪಕಾರವಾಗುತ್ತದೆ. ಇದರ ಬಗ್ಗೆ ನಿಮಗೆ ಅಗತ್ಯವಾದ ಭದ್ರತೆ-ಆಧಾರಗಳನ್ನು ನಾವು ನೀಡುತ್ತೇವೆ. ನಮ್ಮ ವಹಿವಾಟಿನ ವಾರ್ಷಿಕ ಆಯ-ವ್ಯಯಪಟ್ಟಿ ಹಾಗೂ ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ಒಳಗೊಂಡ ವರದಿಯ ಪ್ರತಿಯೊಂದನ್ನು ತಮ್ಮ ಪರಾಮರ್ಶನೆಗಾಗಿ ಕಳಿಸಿದ್ದೇವೆ.

ಮುಂದಿನ ವ್ಯವಸ್ಥೆಗಾಗಿ ತಮ್ಮಿಂದ ಉತ್ತರಾಪೇಕ್ಷಿಗಳಾಗಿದ್ದೇವೆ.

ಇಂತು ನಮ್ಮ ನಂಬುಗೆಯ,
ದಾನಿಧರ್ಮಪ್ಪ
ಮಾಲೀಕ

ನಗದು ಉದರಿ ಸೌಲಭ್ಯ ಕೇಳಿದ ಗ್ರಾಹಕರಿಗೆ ಬ್ಯಾಂಕು ನೀಡಿದ ಉತ್ತರ
ಮಾದರಿ

ಆಪದ್ಭಾಂಧವ ಬ್ಯಾಂಕ್ ಲಿ.
ಕಬ್ಬಿನಕಟ್ಟೆ, ಸಕ್ಕರೆಪುರ

ತಂತಿ: ಆಬ್ಯಾಲಿ                                                   ದೂರವಾಣಿ: ೮೭೩೪೫೬

ದಿನಾಂಕ: ೨೬-೧೦-೧೯೮೭

ಶ್ರೀ ದಾನಿಧರ್ಮಪ್ಪ ಮತ್ತು ಪುತ್ರರು
ಬೆಲ್ಲದ ವ್ಯಾಪಾರಿಗಳು
ಕಬ್ಬಿನಕಟ್ಟೆ
ಸಕ್ಕರೆಪುರ – ಅವರಿಗೆ

ಮಾನ್ಯರೆ,

ನಿಮ್ಮ ಚಾಲ್ತಿ ಖಾತೆ ೧೦೮೯ ರಲ್ಲಿ ವ್ಯವಹರಿಸುವಾಗ ೧೫,೦೦೦ರೂ.ಗಳವರೆಗೆ ನಗದು ಉದರಿ ಸೌಲಭ್ಯ ನೀಡಬೇಕೆಂದು ನೀವು ಕೋರಿ ಬರೆದ ಪತ್ರ ದಿನಾಂಕ ೨೦-೧೦-೧೯೮೭ ರಂದು ತಲುಪಿತು. ಇದಕ್ಕಾಗಿ ನೀವು ೨೦,೦೦೦ರೂ.ಗಳಿಗೂ ಮಿಕ್ಕ ಮೌಲ್ಯದ ಸ್ಥಿರ ಆಸ್ತಿಯನ್ನಾಗಲಿ ಆಧಾರ ಪತ್ರಗಳನ್ನಾಗಲಿ ಭರವಸೆಯಾಗಿ ನೀಡುವುದಾದರೆ, ನಗದು ಉದರಿ ಸೌಲಭ್ಯ ನೀಡಲು ನಮಗೆ ಸಾಧ್ಯವಾಗುತ್ತದೆ ಎಂದು ತಿಳಿಸಬಯಸುತ್ತೇವೆ. ನೀವು ಭರವಸೆಯಾಗಿ ನೀಡುವ ಆಸ್ತಿ ಅಥವಾ ಆಧಾರ ಪತ್ರಗಳು ಯಾವುದೇ ಹೊಣೆಗಾರಿಕೆಯಿಂದಾಗಲೀ ಮುಕ್ತವಾಗಿರಬೇಕು.

ಇದಕ್ಕೆ ನಿಮ್ಮ ಒಪ್ಪಿಗೆ ಇದ್ದರೆ ಇನ್ನೊಂದು ವಾರದಲ್ಲಿ ನೀವು ಕೇಳಿದ ಸೌಲಭ್ಯ ನೀಡಲು ಶಕ್ಯವಾಗುತ್ತದೆ.

ಇಂತು,
ಹವನ
(ಹಯವದನ)
ವ್ಯವಸ್ಥಾಪಕ
ಆಪದ್ಭಾಂಧವ ಬ್ಯಾಂಕ್ ಲಿ.

ನಿರಂತರ ಸೂಚನೆ ಕೊಟ್ಟು ಗ್ರಾಹಕ ಬ್ಯಾಂಕಿಗೆ ಬರೆಯುವ ಪತ್ರದ ಮಾದರಿ
ಮಾದರಿ

ನವರಂಗಪ್ಪ
ದಿನಸಿ ವ್ಯಾಪಾರಿ
ವಿಶಾಲನಗರ

ದಿನಾಂಕ: ೫-೧೨-೧೯೮೭

ವ್ಯವಸ್ಥಾಪಕರು
ಸೇವಾಧರ್ಮ ಬ್ಯಾಂಕ್ ಲಿ.
ವಿಶಾಲನಗರ
ಅಮೃತೂರು – ಇವರಿಗೆ

ಮಾನ್ಯರೆ,

ನಿಮ್ಮ ಶಾಖೆಯಲ್ಲಿರುವ ನನ್ನ ಚಾಲ್ತಿ ಠೇವಣಿ ಖಾತೆ (ಸಂ.೮೮೮) ಯಿಂದ ಈ ಮುಂದೆ ಕಾಣಿಸಿದ ಬಾಬುಗಳಿಗೆ ನಿರಂತರವಾಗಿ ಅವಧಿ ಮೀರದೆ ಹಣವನ್ನು ಪಾವತಿ ಮಾಡಬೇಕಾಗಿ ಕೋರುತ್ತೇನೆ.

೧) ‘ದಿವ್ಯದಾನ’ ಮಾಸಪತ್ರಿಕೆಗೆ ಪ್ರತಿ ತಿಂಗಳ ಚಂದಾ ೧೦ರೂ. ಗಳನ್ನು ತಿಂಗಳ ೩ನೆಯ ವಾರದೊಳಗೆ ಸಲ್ಲಿಸುವುದು.

೨) ನಿಮ್ಮ ಬ್ಯಾಂಕಿನ ‘ಕುಂಗನೂರು’ ಶಾಖೆಯಲ್ಲಿರುವ ‘ಪಂಚವಾರ್ಷಿಕ ವಿದ್ಯಾಭಿವೃದ್ಧಿ’ ಧನ ಯೋಜನೆಗೆ ಪ್ರತಿ ೩ ತಿಂಗಳಿಗೊಮ್ಮೆ ೧೨೦ರೂ.ಗಳನ್ನು ಸಂದಾಯ ಮಾಡುವುದು.

೩) ‘ಬಡವನೂರು ಗೋವಿಂದ ಅನಾಥಾಶ್ರಮ’ ಕ್ಕೆ ಪ್ರತಿವರ್ಷವೂ ಆಗಸ್ಟ್ ೧೫ರಂದು ಬಡಮಕ್ಕಳಿಗೆ ಅನ್ನದಾನಕ್ಕಾಗಿ ೫೦೦ರೂ.ಗಳನ್ನು ಸಲ್ಲಿಸುವುದು.

೪) ‘ಚಿರಂಜೀವಿ ಜೀವವಿಮಾ ಯೋಜನೆ’ ಯ ಪಾಲಿಸಿ ಸಂಖ್ಯೆ ೩೮೪೬೮೭೯೬ಕ್ಕೆ ವಿಮಾ ಕಂತು ೬೦೦ ರೂ.ಗಳನ್ನು ಪ್ರತಿತಿಂಗಳ ಮೊದಲ ವಾರದಲ್ಲಿ ಸಲ್ಲಿಸುವುದು.

೫) ನನ್ನ ಮಗಳು ಸಾ ಲಲಿತಳ ಹೆಸರಿನಲ್ಲಿ ನುಂಗೂರು ಜಯದೇವಿ ಶಿಕ್ಷಣ ಕಾಲೇಜಿಗೆ ಮಾಸಿಕ ಶುಲ್ಕ ೫೦ರೂ. ಗಳನ್ನು ಸಲ್ಲಿಸುವುದು.

ಈ ಬಗ್ಗೆ ಬ್ಯಾಂಕು ವಿಧಿಸುವ ಸೇವಾ ಶುಲ್ಕ ನೀಡಲು ನನ್ನ ಚಾಲ್ತಿ ಠೇವಣಿಯಲ್ಲಿ ಸಕಾಲಿಕವಾಗಿ ಶಿಲ್ಕು ಮೊಬಲಗು ಇರುವಂತೆ ನಾನು ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತೇನೆ. ಈ ಪಾವತಿಗಳ ಬಗ್ಗೆ ವಿವರಗಳನ್ನು ಭರ್ತಿಮಾಡಿದ ನಿಯಮಿತ ಪತ್ರ ನಮೂನೆಗಳನ್ನು ಸಹಿ ಮಾಡಿ ಈ ಪತ್ರದೊಂದಿಗೆ ಸಲ್ಲಿಸುತ್ತಿದ್ದೇನೆ.

ಉತ್ತರದ ನಿರೀಕ್ಷೆಯಲ್ಲಿರುವ,

ನಿಮ್ಮ ನಂಬುಗೆಯ
ನವರಂಗಪ್ಪ

ಸೇವಾಧರ್ಮ ಬ್ಯಾಂಕಿನ ವ್ಯವಸ್ಥಾಪಕರು ಶ್ರೀ ನವರಂಗಪ್ಪನವರಿಗೆ ಬರೆದ ಉತ್ತರ ಪತ್ರ
ಮಾದರಿ

ಸೇವಾಧರ್ಮ ಬ್ಯಾಂಕ್ ಲಿಮಿಟೆಡ್,
ವಿಶಾಲನಗರ, ಅಮೃತೂರು.

ತಂತಿ: ಸೇಬ್ಯಾಲಿ
ದೂರವಾಣಿ: ೮೮೭೭೬೬

ಪತ್ರದ ಸಂಖ್ಯೆ: ನಿಸೂಪ ೪/೧೯೮೭-೧೯೮೮                ದಿನಾಂಕ: ೧೦ ಡಿಸೆಂಬರ್ ೧೯೮೭

ಶ್ರೀ ನವರಂಗಪ್ಪ
ದಿನಸಿ ವ್ಯಾಪಾರಿ
ವಿಶಾಲನಗರ – ಅವರಿಗೆ
ಚಾಲ್ತಿ ಖಾತೆ ಸಂಖ್ಯೆ : ೮೮೮

ವಿಷಯ: ನಿರಂತರ ಸೂಚನೆ ನೀಡಿ ತಾವು ಬರೆದ ಪತ್ರಕ್ಕೆ ಉತ್ತರ.

ಮಾನ್ಯರೆ,

ದಿನಾಂಕ ೫ನೆಯ ಡಿಸೆಂಬರ್, ೧೯೮೭ರಂದು ಬರೆದ ಪತ್ರದಲ್ಲಿ ತಾವು ತಿಳಿಸಿರುವ ಚಂದಾ, ಶುಲ್ಕ, ವಿಮೆ ಮೊದಲಾದವುಗಳ ಕಂತಿನ ಹಣವನ್ನು ಕಾಲಕಾಲಕ್ಕೆ ನಿಮ್ಮ ಚಾಲ್ತಿ ಲೆಕ್ಕದಿಂದ ಸಂದಾಯ ಮಾಡುತ್ತೇವೆ. ಪ್ರತಿಯೊಂದ ಪಾವತಿಗೂ ಶೇಕಡ ೧ರಂತೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಇದಕ್ಕೆ ತಮ್ಮ ಒಪ್ಪಿಗೆಯಿದೆ ಎಂದು ಭಾವಿಸಿದ್ದೇವೆ.

ತಮ್ಮ ವಿಶ್ವಾಸದ
ನೆರವಯ್ಯ
ವ್ಯವಸ್ಥಾಪಕ
ಸೇವಾಧರ್ಮ ಬ್ಯಾಂಕ್