ಗ್ರಾಹಕನು ತನ್ನ ಖಾತೆಯಲ್ಲಿ ಇಟ್ಟಿರುವ ಹಣವನ್ನು ತಾನೇ ಹಿಂದಕ್ಕೆ ಪಡೆಯಲು ಇಲ್ಲವೇ ಇತರರಿಗೆ ಕೊಡಲು ಬ್ಯಾಂಕಿಗೆ ಆದೇಶ ನೀಡುವುದಕ್ಕೆ ಬಳುಸುವ ಬರೆಹದ ಅಜ್ಞಾಪತ್ರವೇ ‘ಚೆಕ್ಕು’ ಅಥವಾ ಧನಾದೇಶ ಪತ್ರ.

ಚೆಕ್ಕಿನ ಮುಖ್ಯ ಲಕ್ಷಣಗಳು

ಚೆಕ್ಕುದಾರ ಬ್ಯಾಂಕಿನ ಗ್ರಾಹಕನಾಗಿದ್ದು ತಾನು ಠೇವಣಿ ಇಟ್ಟ ಖಾತೆಯ ಲೆಕ್ಕದಲ್ಲಿ ಚೆಕ್ಕು ಬರೆಯುತ್ತಾನೆ. ಗ್ರಾಹಕನ ಹಣವನ್ನು ಇಟ್ಟುಕೊಂಡು ಚೆಕ್ಕಿಗೆ ಹಣಕೊಡುವ ದ್ರವ್ಯಾಲಯವೇ ‘ಬ್ಯಾಂಕರ್’. ಇನ್ನು ಚೆಕ್ಕಿನ ಹಣವನ್ನು ಪಡೆಯುವವನು ಚೆಕ್ಕು ನೀಡಿದವನೇ ಆಗಿರಬಹುದು ಅಥವಾ ಬೇರೆಯವರೇ ಆಗಿರಬಹುದು.

ಚೆಕ್ಕು ಲಿಖಿತಾದೇಶವಾಗಿರುತ್ತದೆಯೇ ಹೊರತು ಮೌಖಿಕ ಆದೇಶವಾಗಿರುವುದೊಲ್ಲ. ಸಾಮಾನ್ಯವಾಗಿ ಚೆಕ್ಕನ್ನು ಶಾಯಿಲ್ಲಿ ಬರೆಯುತ್ತಾರೆ. ಈಚೆಗೆ ಬಾಲ್ ಪಾಯಿಂಟ್ ಪೆನ್ನುಗಳಲ್ಲಿ ಬರೆಯುವುದನ್ನು ಮನ್ನಿಸಲಾಗುತ್ತಿದೆ. ಆದರೆ ಸೀಸದ ಕಡ್ಡಿಯಲ್ಲಿ ಬರೆದುದನ್ನು ಸಾಮಾನ್ಯವಾಗಿ ಬ್ಯಾಂಕುಗಳು ಅಂಗೀಕರಿಸುವುದಿಲ್ಲ. ಚೆಕ್ಕನ್ನು ಆಯಾ ಬ್ಯಾಂಕುಗಳು ಪ್ರಕಟಿಸಿದ ನಮೂನೆಯಲ್ಲಿಯೇ ಬರೆಯಬೇಕು ಎಂಬ ಸಾಮಾನ್ಯ ನಿಯಮ ಎಲ್ಲೆಡೆಯಲ್ಲಿಯೂ ಜಾರಿಯಲ್ಲಿದೆ. ಚೆಕ್ಕುಗಳ ವಿನ್ಯಾಸ, ಆಕಾರ, ಬಣ್ಣ, ನಿರೂಪಣೆ, ಭಾಷೆ ಇತ್ಯಾದಿಗಳಲ್ಲಿ ಒಂದು ಬ್ಯಾಂಕಿನ ಚೆಕ್ಕಿಗೂ ಇನ್ನೊಂದು ಬ್ಯಾಂಕಿನ ಚೆಕ್ಕಿಗೂ ವ್ಯತ್ಯಾಸವಿರುತ್ತದೆ. *೧(ಅ)೧, ೧(ಆ) ೨. ಆದರೆ ಚೆಕ್ಕಿನಲ್ಲಿ ದಿನಾಂಕ, ಪ್ರಾಪ್ತಿಕರ್ತನ ಹೆಸರು, ಗ್ರಾಹಕನ ಸಹಿ, ಅಂಕಿ ಮತ್ತು ಅಕ್ಷರಗಳಲ್ಲಿ ಮೊತ್ತದ ನಮೂದು, ಸ್ವಯಂ ಅಥವಾ ಧಾರಕನಿಗೆ ನೀಡಬೇಕೆಂಬ ಸ್ಪಷ್ಟನೆ, ನಿರ್ದಿಷ್ಟ ಕ್ರಮಸಂಖ್ಯೆ ಮೊದಲಾದ ಅಂಶಗಳು ಎಲ್ಲಾ ಬ್ಯಾಂಕಿನ ಚೆಕ್ಕುಗಳಲ್ಲೂ ಕಂಡುಬರುತ್ತವೆ.

ಬ್ಯಾಂಕು ಚೆಕ್ಕುಗಳನ್ನು ಕನಿಷ್ಠ ಪ್ರಮಾಣದ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಸದಾ ಬ್ಯಾಂಕಿನಲ್ಲಿಟ್ಟಿರುವ ಖಾತೆದಾರನಿಗೆ ೧೦/೨೦/೨೫ ಇತ್ಯಾದಿ ಸಂಖ್ಯೆಗಳಲ್ಲಿ ಚೆಕ್ಕು ಹಾಳೆಗಳಿರುವ ಚೆಕ್ಕು ಪುಸ್ತಕವನ್ನೇ ನೀಡುತ್ತದೆ. ಪ್ರತಿ ಚೆಕ್ಕಿಗೂ ಕ್ರಮಸಂಖ್ಯೆಗಳು ಇರುತ್ತವೆ. ಚೆಕ್‌ಬುಕ್‌ನಲ್ಲಿರುವ ‘ಕೋರಿಕೆ ಪತ್ರ’ ವನ್ನು *೩ ಭರ್ತಿ ಮಾಡಿ ಕಳಿಸಿದಾಗ ಕೊಟ್ಟಿದ್ದ ಚೆಕ್ ಹಾಳೆಗಳನ್ನೆಲ್ಲಾ ಬಳಸಿದ್ದನ್ನು ಗಮನಿಸಿ ಗ್ರಾಹಕನಿಗೆ ಹೊಸ ಚೆಕ್‌ಬುಕ್ ನೀಡಲಾಗುತ್ತದೆ.

ಚೆಕ್ಕ್ ಪುಸ್ತಕದಲ್ಲಿರುವ ಹಾಳೆಗಳ ಕ್ರಮಸಂಖ್ಯೆಗಳನ್ನು ಗ್ರಾಹಕನ ಸಹಿಯೊಡನೆ, ಅದಕ್ಕೆಂದೇ ಇಟ್ಟಿರುವ ರಿಜಿಸ್ಟರ್‌ನಲ್ಲಿ (ದಾಖಲಾತಿ ಪುಸ್ತಕ) ದಾಖಲೆ ಮಾಡಿಕೊಂಡು ಕೊಡುತ್ತಾರೆ.

ಬ್ಯಾಂಕಿನ ಕಾರ್ಯಾಲಯದಲ್ಲಿಯೇ ಬಾಯಿಬಿನ್ನಹಕ್ಕೆ ಬಿಡಿ ಚೆಕ್ಕನ್ನು ಗ್ರಾಹಕನ ಸಹಿ ಪಡೆದು ಕೊಡುತ್ತಾರೆ.

ಚೆಕ್ಕಿನ ಪುಸ್ತಕದ ರಕ್ಷಾಪುಟದಲ್ಲಿ ಹಾಗೂ ಒಳಪುಟಗಳಲ್ಲಿ ಗ್ರಾಹಕನಿಗೆ ಉಪಯುಕ್ತವಾದ ಸೂಚನೆಗಳನ್ನು ಕೆಲವಾರು ಬ್ಯಾಂಕುಗಳು ಅಚ್ಚು ಮಾಡಿರುತ್ತವೆ *೪

ಚೆಕ್ಕಿನಲ್ಲಿ ದಿನಾಂಕವನ್ನು ಪೂರ್ಣವಾಗಿ ತಪ್ಪಿಲ್ಲದಂತೆ ನಮೂದಿಸುವುದು ಅಗತ್ಯ. ದಿನಸಂಖ್ಯೆ, ತಿಂಗಳ ಸಂಖ್ಯೆ ಅಥವಾ ಹೆಸರು ಹಾಗೂ ಇಸವಿ ನಮೂದಿತವಾಗಿರಬೇಕು. ಅಪೂರ್ಣ ದಿನಾಂಕದ ಚೆಕ್ಕನ್ನು ಅಥವಾ ದಿನಾಂಕ ರಹಿತ ಚೆಕ್ಕನ್ನು ಬ್ಯಾಂಕು ಮನ್ನಿಸುವುದಿಲ್ಲ. ಚೆಕ್ಕಿನ ದಿನಾಂಕಗಳು ಮೂರು ಬಗೆಯಾಗಿವೆ. ಅದೇ ದಿನಾಂಕದ ಚೆಕ್ಕು, ಬಾವೀ ದಿನಾಂಕದ ಚೆಕ್ಕು, ಗತದಿನಾಂಕದ ಚೆಕ್ಕು. ಚೆಕ್ಕು ಬರೆದ ದಿನವೇ ಅದನ್ನು ಬ್ಯಾಂಕಿಗೆ ಸಲ್ಲಿಸಿದರೆ ಎಂದರೆ, ಚೆಕ್ ಬರೆದ ದಿನ ಬ್ಯಾಂಕಿಗೆ ಸಲ್ಲಿಸಿದ ದಿನ ಒಂದೇ ಆಗಿದ್ದರೆ ಅದನ್ನು ಅದೇ ದಿನಾಂಕದ ಚೆಕ್ಕೆಂದು ಕರೆಯುತ್ತಾರೆ. ಚೆಕ್ ಬರೆದ ದಿನಾಂಕಕ್ಕಿಂತ ಮುಂದಿನ ಯಾವುದೇ ದಿನಾಂಕವನ್ನು ನಮೂದಿಸಿದರೆ ಭಾವೀ ದಿನಾಂಕದ ಚೆಕ್ ಎನ್ನುತ್ತಾರೆ. ಚೆಕ್ ಸಲ್ಲಿಸುವ ದಿನಕ್ಕಿಂತ ಹಿಂದಿನ ಯಾವುದೇ ದಿನಾಂಕವಿದ್ದರೂ ಅದನ್ನು ಗತ ದಿನಾಂಕದ ಚೆಕ್ ಎನ್ನುತ್ತಾರೆ. ಗತದಿನಾಂಕದ ಚೆಕ್ಕಗಳನ್ನು ಮನ್ನಿಸುತ್ತಾರೆ ಎಂದರೂ, ಅದಕ್ಕೆ ಕಾಲಮಿತಿ ಇದೆ. ಸಾಮಾನ್ಯವಾಗಿ ಅದು ಆರು ತಿಂಗಳ ಅವಧಿಯನ್ನು ಮೀರಿರಬಾರದು. ಇನ್ನು ಕೆಲವು ಬ್ಯಾಂಕು ಅಥವಾ ಸಂಸ್ಥೆಗಳ ಚೆಕ್ಕಿನ ಮೇಲೆ ಇಷ್ಟು ತಿಂಗಳೊಳಗಾಗಿ ಇದರ ಹಣ ಪಡೆಯಬೇಕು ಎಂದು ತಿಳಿಸುತ್ತಾರೆ. ಗೊತ್ತಾದ ಅವಧಿ ಮೀರಿದ ಚೆಕ್ಕುಗಳನ್ನು ಅವಧಿ ಮೀರಿದ ಚೆಕ್ಕು ಎಂದು ಕರೆಯುತ್ತಾರೆ. ಚೆಕ್ಕಿನಲ್ಲಿ ನಮೂದಿತವಾದ ತಾರೀಖಿಗೆ ಮೊದಲು ಬ್ಯಾಂಕು ಹಣ ನೀಡುವುದಿಲ್ಲ. ಹಾಗೇನಾದರೂ ಚೆಕ್ಕಿನ ದಿನಾಂಕಕ್ಕೆ ಮೊದಲೇ ಹಣ ಪಾವತಿ ಮಾಡಿದರೆ ಅದರಿಂದ ಗ್ರಾಹಕನಿಗೆ ಉಂಟಾಗುವ ಕಷ್ಟನಷ್ಟಗಳಿಗೇ ಬ್ಯಾಂಕೇ ಹೊಣೆಯಾಗಬೇಕಾಗುತ್ತದೆ. ಚೆಕ್ಕಿನಲ್ಲಿ ಬರೆದಿರುವ ದಿನಾಂಕದಂದು ಬ್ಯಾಂಕಿಗೆ ರಜೆಯಿದ್ದರೆ, ಮರುದಿನ ಆ ಚೆಕ್ಕಿಗೆ ಹಣಪಾವತಿಯಾಗುತ್ತದೆ.

ಚೆಕ್ಕಿನಲ್ಲಿ ಪ್ರಾಪ್ತಿಕರ್ತನ ಹೆಸರನ್ನು ತಿಳಿಯುವಂತೆ ಬರೆಯಬೇಕು. ಸಾಮಾನ್ಯವಾಗಿ ಇಂಗ್ಲೀಷ್‌ನಲ್ಲಿ ಬಿಡಿ ಅಕ್ಷರಗಳಲ್ಲಿ ಬರೆಯುವುದುಂಟು. ಕನ್ನಡದಲ್ಲಾದರೆ ಅಕ್ಷರಗಳನ್ನು ತಪ್ಪಿಲ್ಲದಂತೆ ಬರೆಯಬೇಕು. ಚೆಕ್ಕನ್ನು ಬರೆಯುವಾಗ ಚಿತ್ತಾದರೆ, ಅಕ್ಷರ ತಪ್ಪಾದರೆ, ಬಿಟ್ಟು ಹೋದರೆ ಅಥವಾ ಯಾವುದೇ ರೀತಿಯಲ್ಲಿ ತಿದ್ದಿದರೂ ತಿದ್ದಾವಣೆ ಜೊತೆಗೆ ಪೂರ್ಣವಾಗಿ ಸಹಿ ಮಾಡಬೇಕು. ತೀರಾ ತಪ್ಪಾದಾಗ ಬೇರೆ ಚೆಕ್ಕನ್ನೇ ಬರೆಯುವುದು ಒಳ್ಳೆಯದು. ಪ್ರಾಪ್ತಿಕರ್ತ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಅವನ ಪೂರ್ಣ ಹೆಸರಷ್ಟೇ ಪರಿಗಣನೆಗೆ ಬರುತ್ತದೆ; ಅವನ ವಿದ್ಯಾರ್ಹತೆಗಳನ್ನಾಗಲೀ, ಗೌರವ ಪ್ರಶಸ್ತಿಗಳನ್ನಾಗಲಿ ಚೆಕ್ಕಿನಲ್ಲಿ ನಮೂದಿಸಲಾಗುವುದಿಲ್ಲ. ಸ್ವಂತಕ್ಕೆ ಚೆಕ್ಕು ಬರೆಯುವಾಗ ಆತ್ಮಾರ್ಥ ಅಥವಾ ನನಗೆ ಎಂದು ನಮೂದಿಸಿದರೆ ಸಾಕು; ಹೆಸರು ಬರೆಯುವ ಅಗತ್ಯವಿಲ್ಲ.

ಮೊಬಲಗನ್ನು ಚೆಕ್ಕಿನಲ್ಲಿ ಬರೆಯುವಾಗ ಖಾತೆದಾರ ಸಾಕಷ್ಟು ಎಚ್ಚರವಹಿಸಬೇಕು. ಗ್ರಾಹಕ ತಾನು ಬರೆಯುತ್ತಿರುವ ಚೆಕ್ಕು ನಗದಾಗಲು ಬೇಕಾಗುವಷ್ಟು ಹಣ ಲೆಕ್ಕದಲ್ಲಿ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಚೆಕ್ಕಿನಲ್ಲಿ ಮುಂದಿನ ದಿನಾಂಕವಿದ್ದರೆ ಆ ದಿನಕ್ಕೆ ಸರಿಯಾಗಿ ತನ್ನ ಖಾತೆಯಲ್ಲಿ ಅಷ್ಟು ಹಣ ಇರುವಂತೆ ನೋಡಿಕೊಳ್ಳಬೇಕು. ಚೆಕ್ಕಿನಲ್ಲಿ ಮೊಬಲಗನ್ನು ಅಕ್ಷರಗಳಲ್ಲಿ ನಮೂದಿಸುವಾಗ ಕೊನೆಯಲ್ಲಿ ‘ಮಾತ್ರ’ ಎಂಬ ಶಬ್ದವನ್ನು ಬಳಸಬೇಕು. ಅಕ್ಷರಗಳಲ್ಲಿ ಬರೆದ ಮೊಬಲಗಿಗೂ ಅಂಕಿಯಲ್ಲಿ ಬರೆದ ಮೊಬಲಗಿಗೂ ವ್ಯತ್ಯಾಸವಿರಬಾರದು. ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ ತಾನು ನೀಡಿದ ಮಾದರಿ ಸಹಿಗೆ ಅನುಗುಣವಾಗಿ ಚೆಕ್ಕಿನಲ್ಲಿ ಸಹಿ ಮಾಡಬೇಕು; ಇಲ್ಲದಿದ್ದರೆ ಬ್ಯಾಂಕು ಚೆಕ್ಕುಗಳನ್ನು ಮನ್ನಿಸುವುದಿಲ್ಲ.

ಚೆಕ್ಕುಗಳಲ್ಲಿ ಹೆಸರಿನ ಬದಿಯಲ್ಲಿ ಸೆಲ್ಫ್/ಬೇರರ್ ಎಂದಿರುತ್ತದೆ. ಬೇರರ್ ಎಂಬುದನ್ನು ಹೊಡೆದು ಹಾಕಿ ಆದೇಶಿತನಿಗೆ ಎಂದು ಬರೆದರೆ ಅದನ್ನು ‘ಆದೇಶಿತ ಚೆಕ್ಕು’ ಎನ್ನುತ್ತಾರೆ. ಇಂಥ ಚೆಕ್ಕುಗಳ ಹಿಂಭಾಗದಲ್ಲಿ ಪ್ರಾಪ್ತಿಕರ್ತ ಸಹಿ ಮಾಡಿರಬೇಕು; ಹಣವನ್ನು ಪಡೆಯುವಾಗ ಆದೇಶಿತನೂ ಸಹಿ ಮಾಡಬೇಕಾಗುತ್ತದೆ.

ಚೆಕ್ಕನ್ನು ಬರೆದು ಕೊಡುವಾಗ ಚೆಕ್ಕಿನ ಪಕ್ಕದಲ್ಲಿರುವ ‘ಪಾರ್ಶ್ವಪ್ರತಿ’ಯನ್ನು ಭರ್ತಿ ಮಾಡಬೇಕು. ಅದರಲ್ಲಿ ಯಾರಿಗೆ ……………………. ಎಂದು …………………….. ನೀಡಿದ್ದು, ಮೊತ್ತ ………………………… ಎಂಬ ವಿವರಗಳು ಸಿಗುತ್ತವೆ.

ಕೆಲವು ಬ್ಯಾಂಕುಗಳು ಪಾರ್ಶ್ವಪ್ರತಿ ಇಲ್ಲದ ಚೆಕ್ಕುಗಳನ್ನು ಬಳಸುತ್ತವೆ. ಅಂಥ ಸಂದರ್ಭಗಳಲ್ಲಿ ವಿವರ ದಾಖಲೆಗೆ ಚೆಕ್ಕಿನ ಒಳರಕ್ಷಣಾ ಪುಟದಲ್ಲಿನ ವಿವರಗಳನ್ನು ಗುರುತಿಸಿಕೊಳ್ಳಲು ಕಾಲಂಗಳನ್ನೂ ಅಂಕಣಗಳನ್ನೂ ನೀಡುತ್ತಾರೆ *೧ (ಆ)

ಚೆಕ್ಕುಗಳನ್ನು ಬರೆಯುವಾಗ ರೇಖಣ (ಕ್ರಾಸಿಂಗ್) ವಿಚಾರವನ್ನು ಗಮನಿಸಬೇಕು.

ಸಾಮಾನ್ಯವಾಗಿ ಇದರಲ್ಲಿ ರೇಖಾಂಕಿತ ಚೆಕ್ಕು, ರೇಖಣರಹಿತ ಚೆಕ್ಕು ಎಂದು ಎರಡು ಬಗೆ. ಇಂಗ್ಲೀಷಿನಲ್ಲಿ ಇವನ್ನು ‘ಕ್ರಾಸ್ಡ್ ಚೆಕ್’ ಮತ್ತು ‘ಓಪನ್ ಚೆಕ್’ ಎಂದು ಕರೆಯುತ್ತಾರೆ. ತೆರೆದ ಚೆಕ್ ಅಥಾ ರೇಖನ ರಹಿತ ಚೆಕ್ಕನ್ನು ಬ್ಯಾಂಕಿನಲ್ಲಿ ನೇರವಾಗಿ ಹಾಜರಿಪಡಿಸಿ ಹಣಪಡೆಯಬೇಕಾಗುತ್ತದೆ. ಭದ್ರತೆ ದೃಷ್ಟಿಯಿಂದ ರೇಖಿತ ಚೆಕ್ಕುಗಳು ಕ್ಷೇಮಕಾರಿಯಾಗಿವೆ. ರೇಖೆಗಳನ್ನು ಎಳೆಯುವುದರಲ್ಲಿ ಸಾಮಾನ್ಯ ರೇಖಣ ಮತ್ತು ವಿಶೇಷ ರೇಖಣ ಎಂದು ದ್ವಿವಿಧಗಳಿವೆ.

ಸಾಮಾನ್ಯ ರೇಖಣ ಚೆಕ್ (ಜನರಲ್ ಕ್ರಾಸಿಂಗ್ ಚೆಕ್)

ಚೆಕ್ಕಿನ ಮುಖಭಾಗದಲ್ಲಿ ಎಡಮೂಲೆಯಲ್ಲಿ ಓರೆಯಾಗಿ ಎರಡು ಸಮಾನಾಂತರ ಛೇದಕ ರೇಖೆಗಳನ್ನು ಬರೆಯುವುದಕ್ಕೆ ‘ರೇಖಣ’ (ಕ್ರಾಸಿಂಗ್) ಎಂದು ಕರೆಯುತ್ತಾರೆ. ಈ ಸಮಾನಾಂತರ ಛೇದಕರೇಖೆಗಳ ನಡುವೆ ‘ಮತ್ತು ಕಂಪೆನಿ’ ಎಂಬುದಾಗಿ, ಇಲ್ಲವೇ ‘ಪರಕ್ರಾಮ್ಯವಲ್ಲ’ (ನಾಟ್ ನೆಗೋಷಿಯಬಲ್) ಎಂಬುದಾಗಿ, ಅಥವಾ ಪ್ರಾಪ್ತಿಕರ್ತನ ಲೆಕ್ಕ (ಅಕೌಂಟ್ ಪೇಯಿ) ಎಂದೂ ಬರೆದರೆ ಅಂಥ ಚೆಕ್ಕುಗಳನ್ನು ಸಾಮಾನ್ಯ ರೇಖಣ ಚೆಕ್ ಎಂದು ಕರೆಯುತ್ತಾರೆ.

ಮಾದರಿ:

 ವಿಶೇಷ ರೇಖಣ ಚೆಕ್ (ಸ್ಪೆಷಲ್ ಕ್ರಾಸಿಂಗ್ ಚೆಕ್)

ಒಂದು ಚೆಕ್ಕಿನ ಮುಖದ ಮೇಲೆ ಅಡ್ಡಲಾಗಿ ಎರಡು ಸಮಾನಾಂತರ ಛೇದಕ ರೇಖೆಗಳನ್ನು ಬರೆದು (ಅಥವಾ ರೇಖೆಗಳನ್ನು ಬರೆಯದೆಯೇ) ಅವುಗಳ ನಡುವೆ ಒಂದು ಬ್ಯಾಂಕಿನ ಹೆಸರನ್ನು ಬರೆಯುವ ಚೆಕ್ಕೇ ವಿಶೇಷ ರೇಖಣ ಚೆಕ್. ಇದರೊಂದಿಗೆ ‘ಪರಕ್ರಾಮ್ಯವಲ್ಲ’ ಅಥವಾ ‘ಪ್ರಾಪ್ತಿಕರ್ತನ ಖಾತೆಗೆ ಎಂದೂ ಬರೆಯಬಹುದು.

ಮಾದರಿ:

 ಜೋಡಿ ರೇಖಣ ಚೆಕ್ (ಡಬಲ್ ಕ್ರಾಸಿಂಗ್ ಚೆಕ್)

ಚೆಕ್ಕಿನ ಮುಂಬದಿಯ ಎಡ ಮೂಲೆಯಲ್ಲಿ ಎರಡು ಸಮಾನಾಂತರ ಓರೆಗೆರೆಗಳ ನಡುವೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕುಗಳ ಹೆಸರುಗಳನ್ನು ಲಿಖಿಸಿದ್ದರೆ ಅಂತಹ ಚೆಕ್ಕುಗಳನ್ನು ‘ಜೋಡಿ ರೇಖಣ ಚೆಕ್’ ಗಳೆಂದು ಕರೆಯುತ್ತಾರೆ.

ಸಾಮಾನ್ಯ ರೇಖಣವನ್ನು ಒಳಗೊಂಡ ಚೆಕ್ಕಿನ ಮೊತ್ತವನ್ನು ‘ಪಾವತಿದಾರ ಬ್ಯಾಂಕು’ ಇನ್ನೊಂದು ಬ್ಯಾಂಕಿಗಲ್ಲದೆ ಬೇರೆ ಯಾರಿಗೂ ಕೊಡಕೂಡದು ಎಂದರೆ, ಪ್ರಾಪ್ತಿಕರ್ತನ ಪರವಾಗಿ ಬ್ಯಾಂಕೊಂದು ಮಾತ್ರ, ಚೆಕ್ಕಿನ ಮೊಬಲಗನ್ನು ಪಡೆಯಬಹುದು. ಜೊತೆಗೆ, ‘ಪ್ರಾಪ್ತಿಕರ್ತನ’ ಖಾತೆ ಎಂದು ಬರೆದಿದ್ದರೆ ಪ್ರಾಪ್ತಿಕರ್ತನ ಖಾತೆಗೇ ಜಮಾ ಮಾಡಬೇಕು. ಇದು ವಸೂಲಿದಾರ ಬ್ಯಾಂಕಿಗೆ’ ನೀಡಲಾದ ಸೂಚನೆ. ಚೆಕ್ಕಿನ ಪ್ರಾಪ್ತಿಕರ್ತ ಅದನ್ನು ಇನ್ನೊಬ್ಬನಿಗೆ ವರ್ಗಾಯಿಸುವಂತಿಲ್ಲ; ಪರಕ್ರಾಮ್ಯವಲ್ಲ ಎಂದು ಬರೆದಿದ್ದರೆ ಅಂಥ ಚೆಕ್ಕನ್ನು ವರ್ಗಾಯಿಸುವ ಹಕ್ಕು ಉಳಿದಿರುತ್ತದೆ. ವಿಶೇಷ ರೇಖಣ ಚೆಕ್ಕಿನಲ್ಲಿ ಯಾವ ಬ್ಯಾಂಕಿನ ಹೆಸರು ಬರೆಯಲಾಗಿದೆಯೋ ಆ ಬ್ಯಾಂಕಿಗೆ ಮಾತ್ರವೇ ಅದರ ಅಭಿಕೃರ್ತ (ಏಜೆಂಟ್) ಆಗಿರುವ ಇನ್ನೊಂದು ಬ್ಯಾಂಕಿಗೆ ಮಾತ್ರವೇ ಚೆಕ್ಕಿನ ಮೊಬಲಗನ್ನು ‘ಪಾವತಿದಾರ ಬ್ಯಾಂಕು’ ಪಾವತಿ ಮಾಡಬೇಕಾಗುತ್ತದೆ. ಹೀಗೆ ರೇಖಣ ಚೆಕ್ಕುಗಳನ್ನು ಬಳಸುವುದರಿಂದ ಚೆಕ್ಕಿನ ನಿಜವಾದ ಹಕ್ಕುದಾರನಲ್ಲದವನು ಅದರ ಮೇಲೆ ಹಣ ಪಡೆಯುವ ಸಾಧ್ಯತೆ ಕಡಿಮೆ.

ಚೆಕ್ಕಿನಂತೆಯೇ ಬಳಸುವ ಇನ್ನೊಂದು ಬಗೆಯ ಧನಾದೇಶಪಯ್ರ (ನಗದು ಪಾವತಿ ಆದೇಶ) ಉಂಟು. * ೫ ಅದನ್ನು ಇಂಗ್ಲೀಷಿನಲ್ಲಿ ‘ಡ್ರಾಫ್ಟು’ ಎನ್ನುತ್ತಾರೆ. ಕನ್ನಡದಲ್ಲಿ ‘ಧನ ಕೋರಿಕೆ ಪತ್ರ’ ಎನ್ನಬಹುದು. “೧೮೮೧ ನೆಯ ಇಸವಿಯ ಪರಕ್ರಾಮ್ಯ ಸಂಲೆಖಗಳ ಅಧಿನಿಯಮದ ‘೮೫ಎ’ ಪ್ರಕರಣದ ಪ್ರಕಾರ ಒಬ್ಬ ಬ್ಯಾಂಕರ್ ತನ್ನದೇ ಆದ ಇನ್ನೊಂದು ಶಾಖೆಯ ಮೇಲೆ ಅಥವಾ ಬೇರಾವುದೇ ಬ್ಯಾಂಕಿನ ಮೇಲೆ ನಿಶ್ಚಿತ ಮೊಬಲಗಿಗೆ ಪಾವತಿ ಮಾಡಬೇಕೆಂದು ಬರೆದ ಆದೇಶ. ಪ್ರಾಪ್ತಿ ಕರ್ತ ಬೇಡಿದಾಗ ಇದನ್ನು ಪಾವತಿ ಮಾಡಬೇಕು. ಇದು ಕೂಡ ಚೆಕ್ಕಿನಂತೆಯೇ ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಇದು ನೀಡಿದ ಕಾಲದಿಂದ ಆರು ತಿಂಗಳವರೆಗೆ ಚಲಾವಣೆಯಲ್ಲಿರುತ್ತದೆ. ಕೆಲವು ಬ್ಯಾಂಕುಗಳು ವಿವಿಧ ಮೊತ್ತಗಳ ಶ್ರೇಣಿಗೆ ವಿವಿಧ ಬಣ್ಣಗಳಲ್ಲಿ ಅಚ್ಚಾದ ನಮೂನೆಗಳನ್ನು ಬಳಸುತ್ತವೆ. ಮೊತ್ತದ ಪ್ರಮಾಣ ತಕ್ಷಣ ತಿಳಿಯಲು ಇದು ಸಹಕಾರಿ.

ಚೆಕ್ಕು ಅಥವಾ ಹುಂಡಿಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಮುಖ್ಯರಾಗಿರುತ್ತಾರೆ. ಒಬ್ಬ ರಚಕ (ಡ್ರಾಯರ್) ಇನ್ನೊಬ್ಬ ಗ್ರಹೀತ (ಡ್ರಾಯೀ). ೧೮೮೧ನೆಯ ಇಸವಿಯ ಪರಾಕ್ರಾಮ್ಯ ಸಂಲೇಖಗಳ ೭ನೆಯ ಪ್ರಕರಣದನುಸಾರ, “ಹುಂಡಿ ಅಥವಾ ಚೆಕ್ಕನ್ನು ರಚಿಸುವವನು ರಚಕ. ಇವನು ಹುಂಡಿಗೆ ಸಂಬಂಧಿಸಿದಂತೆ ಸಾಲಿಗ ಅಥವಾ ‘ಧನಿ’ ಆಗಿರುತ್ತಾನೆ. ಇನ್ನು ಗ್ರಹೀತನೆಂದರೆ “ಹುಂಡಿ ಅಥವಾ ಚೆಕ್ಕಿನ ಮೊಬಲಗನ್ನು ಯಾರು ಪಾವತಿ ಮಾಡಬೇಕೆಂದು ಆದೇಶಿಸಲಾಗಿದೆಯೋ ಆತ. ಚೆಕ್ಕಿಗೆ ಸಂಬಂಧಿಸಿದಂತೆ ಬ್ಯಾಂಕರ್ ಗ್ರಹೀತ. ಹುಂಡಿಯ ಒಪ್ಪಿಗೆದಾರ ಗ್ರಹೀತ”.

ಗ್ರಾಹಕನು ಕಳಿಸಿದ ಚೆಕ್ಕನ್ನು ಮಾನ್ಯ ಮಾಡಬೇಕು ಎಂಬುದು ಸಾಮಾನ್ಯ ನಿಯಮ. ಆದರೆ ಬ್ಯಾಂಕು ಅನೇಕ ಸಂದರ್ಭಗಳಲ್ಲಿ ಚೆಕ್ಕನ್ನು ಅಮಾನ್ಯ ಮಾಡುವುದುಂಟು. ಅದಕ್ಕೆ ಹಲವಾರು ಕಾರಣಗಳಿವೆ. ಚೆಕ್ ನೀಡಿದವರ ಖಾತೆಯಲ್ಲಿ ಚೆಕ್ಕಿನಲ್ಲಿ ನಮೂದಿತವಾದಷ್ಟು ಹಣವಿಲ್ಲದಿರಬಹುದು; ಚೆಕ್ಕಿನ ಪಾವತಿಯ ಅವಧಿ ಮೀರಿರಬಹುದು; ಚೆಕ್ಕಿನ ಸಹಿ ಸರಿ ಇಲ್ಲದಿರಬಹುದು; ಚೆಕ್ಕುದಾರ ನಗದು ಪಾವತಿ ಮಾಡದಂತೆ ಆದೇಶ ನೀಡಿರಬಹುದು; ಚೆಕ್ಕಿನ ಮೇಲೆ ನಮೂದಿತವಾದ ದಿನಾಂಕಕ್ಕಿಂತ ಮೊದಲೇ ಹಾಜರುಪಡಿಸಿರಬಹುದು; ಚೆಕ್ಕು ನೀಡಿದವನು ದಿವಾಳಿಯಾಗಿದ್ದಾನೆ ಇಲ್ಲವೇ, ಮೃತನಾಗಿದ್ದಾನೆ ಎಂಬ ಸುದ್ದಿ ಬ್ಯಾಂಕಿಗೆ ತಿಳಿದಿರಬಹುದು, ಇಂಥ ಹತ್ತಾರು ಸಂದರ್ಭಗಳಲ್ಲಿ ಬ್ಯಾಂಕ್ ಚೆಕ್ಕನ್ನು ನಗದೀಕರಣ ಮಾಡದೆ, ಚೆಕ್ಕುದಾರನಿಗೆ ಮರಳಿಸುತ್ತದೆ. ಹೀಗೆ ಹಿಂದಕ್ಕೆ ಕಳಿಸುವಾಗ ಅಚ್ಚು ಮಾಡಿದ ಕಾರಣಗಳಿಂದ ಕೂಡಿದ ಫಾರಂ ಅನ್ನು ಬಳಸಿಕೊಂಡು ಅದರಲ್ಲಿ ಸಂಬಂಧಪಟ್ಟ ಕಾರಣಕ್ಕೆ ಸರಿ ಚಿಹ್ನೆ (ಚಿ) ಗುರುತಿಸಿ ಕಳಿಸುತ್ತಾರೆ. *೬ ಇಲ್ಲವೇ ಆ ಬಗ್ಗೆ ಪತ್ರ ಬರೆಯುತ್ತಾರೆ *೭. ಕೆಲವೊಮ್ಮೆ ಈ ವಿಷಯವನ್ನು ಕುರಿತು ಗ್ರಾಹಕ ಬ್ಯಾಂಕಿನ ನಡುವೆ ಪತ್ರ ವ್ಯವಹಾರ ನಡೆಯುವುದುಂಟು. ಸಾಕಷ್ಟು ಹಣವಿಲ್ಲವೆಂದು ಬ್ಯಾಂಕ್ ತಿಳಿಸಿದರೆ ಗ್ರಾಹಕ ಇಂಥ ದಿನ ತಮ್ಮ ಖಾತೆಗೆ ಇಷ್ಟು ಹಣದ ಚೆಕ್ಕನ್ನು ಜಮಾ ಮಾಡಿದ್ದೆವು ಎಂದು ಹೇಳಬಹುದು. ಆದರೆ ಆ ಚೆಕ್ ಇನ್ನೂ ನಗದಾಗಿಲ್ಲವೆಂದೂ ಅದರ ಸಲ್ಲಿಕೆ ತಡವಾಗಿದೆಯೆಂದೂ ಅಥವಾ ಆಕಸ್ಮಿಕವಾಗಿ ಹಾಗಾಗಿರಬಹುದು ಎಂದು ವ್ಯವಸ್ಥಾಪಕರು ಭಾವಿಸಿದ್ದರೆ, ಹೆಚ್ಚಿನ ಹಣದ ಚೆಕ್ಕನ್ನು ಪಾವತಿ ಮಾಡಿ ಕೂಡಲೇ ಆ ಹಣವನ್ನು ತುಂಬಲು ಗ್ರಾಹಕರಿಗೆ ಪತ್ರ ಮುಖೇನ ತಿಳಿಸುವರು *೯. ಇಲ್ಲವೇ ಪತ್ರ ಬರೆಯುವುದು ಅಷ್ಟು ಸೂಕ್ತವಾಗದು ಎನ್ನಿಸಿದ ಸಂದರ್ಭಗಳಲ್ಲಿ, ಪತ್ರ ಕಂಡ ತಕ್ಷಣ ಬ್ಯಾಂಕಿಗೆ ಭೇಟಿ ನೀಡಿ ಎಂಬ ಕರೆಯನ್ನೂ ಸಹ ಕಳಿಸಬಹುದು. ಬ್ಯಾಂಕುಗಳು ಅನೇಕ ವೇಳೆ ಹಲವಾರು ಕಾರಣಗಳಿಗೆ ಇಂಥ ಕರೆ ಪತ್ರಗಳನ್ನು ಬರೆಯುವುದುಂಟು. *೧೦

ಚೆಕ್ಕಿನ ಮಾದರಿ (ನಕಲು ಭಾಗ (ಕೌಂಟರ್ ಫೈಲ್) ಇಲ್ಲದ್ದು)
ಮಾದರಿ()

 ಚೆಕ್ಕಿನ ಮಾದರಿ (ನಕಲು ಭಾಗ (ಕೌಂಟರ್ ಫೈಲ್) ಇರುವಂಥದ್ದು)

ಮಾದರಿ ()  

ಚೆಕ್ ಪುಸ್ತಕಕ್ಕೆ ಕೋರಿಕೆ ಪತ್ರ (ಬ್ಯಾಂಕಿನ ಚೆಕ್ ಪುಸ್ತಕದಲ್ಲಿರುವ ಅಚ್ಚಾದ ನಮೂನೆ)

ಮಾದರಿ ೩

ಉಳಿತಾಯ ಖಾತೆ :

(ಧಾರಕನ ಕೈಯಲ್ಲಿ ತರಿಸಿಕೊಳ್ಳುವುದಿದ್ದರೆ ಆತನ ಸಹಿಯನ್ನು ಕೋರಿಕೆ ಪತ್ರದ ಮೇಲೆ ಅಥವಾ ಪ್ರತ್ಯೇಕ ಪತ್ರದ ಮೂಲಕ ನೀವು ದೃಢೀಕರಿಸಿರಬೇಕು)

ಜೈಕಾರ ಬ್ಯಾಂಕ್ ಅವರಿಗೆ,

ದಿನಾಂಕ : ……………………….

ದಯಮಾಡಿ ಧಾರಕನ ಮೂಲಕ /ಅಂಚೆ ಮೂಲಕ ………………………………… ಸಂಖ್ಯೆ ಚೆಕ್  ಹಾಳೆಗಳುಳ್ಳ ಚೆಕ್ ಪುಸ್ತಕವನ್ನು ಕಳಿಸಿಕೊಡಿ.

ಸಹಿ ……………………………………..
ವಿಳಾಸ. …………………………..
……………………………………..
……………………………………..

೧೦/೨೫ ಸಂಖ್ಯೆಯಲ್ಲಿ ಚೆಕ್ಕುಗಳಿರುವ ಪುಸ್ತಕವನ್ನು ಧಾರಕನಿಗೆ ನೀಡಿದೆ.

 

ಚೆಕ್ಕಿನ ಬಗ್ಗೆ ಸೂಚನೆಗಳು : (ಚೆಕ್ಕಿನ ರಕ್ಷಾಪುಟದಲ್ಲಿ)
ಮಾದರಿ

ರಾಜೀವ ಬ್ಯಾಂಕ್ ಲಿಮಿಟೆಡ್
ಕುಸ್ತಿಪೇಟ್, ಹಸ್ತಿನಗರ

ಹೆಸರು ……………………….                      ಚೆಕ್ಕಿನ ಸಂಖ್ಯೆ / ಎಸ್‌ಬಿ ೮೦
ವಿಳಾಸ ………………………..

೪೮೯೦೦೧ ರಿಂದ ೪೮೯೦೧೦ ವರೆಗೆ

೧. ಚೆಕ್ ಪುಸ್ತಕವನ್ನು ಬೀಗ ಹಾಕಿದ ಜಾಗದಲ್ಲಿ ಜೋಪಾನವಾಗಿಡಿ.

೨. ಚೆಕ್ಕನ್ನು ಶಾಯಿಯಲ್ಲಿ ಬರೆಯಿರಿ, ಟೈಪಿಸಬೇಡಿ.

೩. ರೂಪಾಯಿಗಳು ಎಂಬಲ್ಲಿ, ಆದಷ್ಟು ಹತ್ತಿರದಲ್ಲಿ ಮೊಬಲಗನ್ನು ನಮೂದಿಸಿ.

೪. ರೂ. ಎಂಬಲ್ಲಿ ಅಂಕಿಗಳನ್ನು ಸೇರಿಸಲು ಸ್ಥಳವಿರದಂತೆ ಹತ್ತಿರ ಹತ್ತಿರ ಅಂಕಿಗಳನ್ನು ಬರೆಯಿರಿ.

೫. ರೇಖಣ ಮಾಡುವಾಗ ದೀರ್ಘವಾಗಿ ಚೆಕ್ಕಿನಾದ್ಯಂಥ ಇರಲಿ.

೬. ಭದ್ರತೆ ದೃಷ್ಟಿಯಿಂದ, ಅಂಚೆ ಅಥವಾ ಅನ್ಯರ ಮೂಲಕ ಕಳಿಸುವಾಗ ಚೆಕ್ಕನ್ನು ಕ್ರಾಸು ಮಾಡಿರಲಿ.

೭. ಖಾತೆ ಮುಕ್ತಾಯಗೊಳಿಸುವಾಗ ಬಳಸದ ಚೆಕ್ಕುಗಳನ್ನು ಬ್ಯಾಂಕಿಗೆ ಹಿಂದಿರುಗಿಸಿ.

೮. ಚೆಕ್ ಹಾಳೆಗಳು ಮುಗಿದಾಗ ಚೆಕ್ ಪುಸ್ತಕದಲ್ಲಿರುವ ಕೋರಿಕೆ ಪತ್ರ ಭರ್ತಿ ಮಾಡಿ ಕಳಿಸಿ, ಹೊಸ ಚೆಕ್ ಪುಸ್ತಕವನ್ನು ಪಡೆಯಿರಿ.

೯. ರಿಜಿಸ್ಟರ್ಡ್ ಅಂಚೆಯಲ್ಲಿ ಚೆಕ್ಕುಗಳನ್ನು ಕಳಿಸಿ.

೧೦. ಚೆಕ್ ಬರೆಯುವ ಮೊದಲು ಅಷ್ಟು ಹಣ ನಿಮ್ಮ ಖಾತೆಯಲ್ಲಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

೧೧. ಗಣಕಯಂತ್ರಕ್ಕೆ ಬಳಸುವ ಗೆರೆಗಳ ಮೇಲೆ ಸಹಿ ಮಾಡುವುದಾಗಲಿ, ಅಂಟಿಸುವುದಾಗಲಿ, ಮೊಹರು ಮಾಡುವುದಾಗಲಿ, ಕಟ್ಟು ಸೂಜಿ (ಸ್ಪೇಪಲ್) ಹಾಕುವುದಾಗಲೀ ಅಥವಾ ಏನನ್ನಾದರೂ ಗುರುತಿಸುವುದಾಗಲಿ ಮಾಡಬಾರದು. ಮೇಲ್ಭಾಗದ ಎಡಮೂಲೆಯಲ್ಲಿ ಮಾತ್ರ ಸ್ಟಾಂಪು ಹಚ್ಚಬೇಕು; ಹಚ್ಚಿದ ಸ್ಟಾಂಪಿನ ಮೇಲೆ ದಪ್ಪ ಗೆರೆಗಳನ್ನು ಎಳೆಯಬೇಕು.

(ಕಂಪ್ಯೂಟರ್ ಚೆಕ್ ಪುಸ್ತಕದ ರಕ್ಷಾಪುಟದ ಸೂಚನೆಗಳಲ್ಲಿ ಸೂಚನೆ ೧೧ ಅನ್ನು ಸೇರ್ಪಡೆ ಮಾಡಿರುತ್ತಾರೆ)

ನಕಲು ಭಾಗದ ಬದಲು ಒಳರಕ್ಷಾಪುಟದಲ್ಲಿ ನೀಡಿರುವ ದಾಖಲೆ ಸೂಚಿ
ಮಾದರಿ ೧ (ಆ)

ಚೆಕ್ಕಿನ ದಿನಾಂಕ ಯಾರಿಗಾಗಿ ಚೆಕ್ ಸಂಖ್ಯೆ ಮೊತ್ತ
       
       
       
       
       

ಡ್ರಾಫ್ಟು

ಮಾದರಿ

ಗ್ರಾಹಕನು ಬ್ಯಾಂಕಿಗೆ ನೀಡಿದ ಚೆಕ್ಕಿಗೆ ಹಣ ಪಾವತಿ ಮಾಡಲಾಗದೆ ಅದನ್ನು ಹಿಂದಿರುಗಿಸಬೇಕಾದಾಗ ಬ್ಯಾಂಕು ಗ್ರಾಹಕನಿಗೆ ಕಾರಣ ತಿಳಿಸಿ ಭರ್ತಿ ಮಾಡಿ ಕಳಿಸುವ ಅಚ್ಚಾದ ನಮೂನೆ

ಮಾದರಿ

ಧನಲಕ್ಷ್ಮೀ ಕಟಾಕ್ಷ ಬ್ಯಾಂಕ್ ಲಿಮಿಟೆಡ್.
ಸಂಪತ್ತು ಅಗ್ರಹಾರ, ಮೈಸೂರು.

ದೂರವಾಣಿ : ೯೩೪೫೬೦
ನೈಸೂರು
ತಾ. ೮ನೆಯ ಜುಲೈ ೧೯೮೭

ಶ್ರೀಮತಿ ರುಕ್ಮಿಣಿ ಪಿಎಸ್. ಅವರಿಗೆ
ಖಾತೆ ಸಂಖ್ಯೆ ೧೦೫೦

ಮಾನ್ಯರೆ,

ತಾವು ಕಳಿಸಿದ ೧-೭-೧೯೮೭ನೆಯ ತಾರೀಖಿನ (ಸಂ.ಎ/ಪಿ ೫೮೯೮ ರೂ. ೪೯೦ ಪೈ ೫೦)

ಚೆಕ್ಕನ್ನು ಈ ಕೆಳಕಂಡ ಕಾರಣಗಳಿಗಾಗಿ ಪಾವತಿ ಮಾಡದೆ ಹಿಂದಕ್ಕೆ ಕಳುಹಿಸಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಅಡಕ: ಚೆಕ್ ಸಂಖ್ಯೆ ಎ/ಪಿ ೫೮೯೮
ತಾರೀಖು : ೧-೭-೧೯೮೭

ಕೆ.ಪಿ.ಸಿದ್ದರಾಜು
ವ್ಯವಸ್ಥಾಪಕ

೧. ಚೆಕ್ಕಿನ ದಿನಾಂಕದ ಅವಧಿ ಮುಗಿದಿದೆ.

೨. ಚೆಕ್ಕಿನಲ್ಲಿ ನಮೂದಿಸಿದ ದಿನಾಂಕಕ್ಕಿಂತ ಮೊದಲೇ ಹಾಜರುಪಡಿಸಿದೆ.

೩. ಮೊತ್ತವನ್ನು ಅಕ್ಷರಗಳಲ್ಲಿ/ ಅಂಕಿಯಲ್ಲಿ ನಮೂದಿಸಿಲ್ಲ.

೪. ಸಹಿ/ಹಣ/ದಿನಾಂಕ ತಿದ್ದಿರುವ ಕಡೆ ಪೂರ್ಣ ಸಹಿ ಇಲ್ಲ.

೫. ಅಕ್ಷರಗಳಲ್ಲಿ ಬರೆದ ಮೊತ್ತಕ್ಕೂ ಅಂಕಿಯಲ್ಲಿ ಕಾಣಿಸಿರುವ ಮೊತ್ತಕ್ಕೂ ತಾಳೆಯಾಗುತ್ತಿಲ್ಲ.

೬. ಸಹಿ ಸರಿಯಲ್ಲ/ ಸಂಶಯಾಸ್ಪದವಾಗಿದೆ/ನಮ್ಮಲ್ಲಿರುವ ದಾಖಲೆ ಸಹಿಗಿಂತ ಭಿನ್ನವಾಗಿದೆ.

೭. ಚೆಕ್ಕು ನೀಡಿದವರು ಹಣ ಕೊಡಬೇಡಿ ಎಂದು ಆದೇಶಿಸಿದ್ದಾರೆ.

೮. ಈ ಚೆಕ್ಕು ನಮ್ಮ ಶಾಖೆಯದಲ್ಲ …………………… ಶಾಖೆಯಲ್ಲಿ ಹಾಜರುಪಡಿಸಿ.

೯. ಖಾತೆಯಲ್ಲಿರುವ ಹಣಕ್ಕಿಂತ ಚೆಕ್ಕಿನಲ್ಲಿ ನಮೂದಿಸಿರುವ ಹಣ ಹೆಚ್ಚಾಗಿದೆ.

೧೦. ಚೆಕ್ಕಿನಲ್ಲಿ ಮುಂಬದಿಯ ಸಹಿ/ಹಿಂಬದಿಯ ಸಹಿ/ ದಿನಾಂಕ ಬಿಟ್ಟು ಹೋಗಿದೆ.

೧೧. ಚೆಕ್ಕು ತುಂಬ ಮಾಸಿರುವುದರಿಂದ ಯಾವ ವಿವರಗಳೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ದಯವಿಟ್ಟು ಬೇರೆ ಚೆಕ್ಕನ್ನು ಕಳಿಸಿ.

೧೨. ಚೆಕ್ಕು ಕ್ರಾಸ್ ಮಾಡಿರುವುದರಿಂದ ನಗದು ಹಣ ನೀಡುವುದಿಲ್ಲ. ನಿಮ್ಮ ಲೆಕ್ಕಕ್ಕೆ ಜಮಾ ಮಾಡಿ.

ಚೆಕ್ಕು ಅಮಾನ್ಯವಾದದ್ದರ ಬಗ್ಗೆ ಬ್ಯಾಂಕು ಬರೆದ ಪತ್ರ
ಮಾದರಿ

ಧನಲಕ್ಷ್ಮೀ ಕಟಾಕ್ಷ ಬ್ಯಾಂಕ್ ಲಿ
ಸಂಪತ್ತು ಅಗ್ರಹಾರ, ಮೈಸೂರು

ದೂರವಾಣಿ: ೯೩೪೫೬೦
ಮೈಸೂರು
ದಿನಾಂಕ ೧೦-೭-೧೯೮೭

ಶ್ರೀ/ಶ್ರೀಮತಿ ಕಾರಾಗೃಹಪ್ಪ ಅವರಿಗೆ
ಖಾತೆ ಸಂಖ್ಯೆ ೬೧೮ …………………..

ಮಾನ್ಯರೆ,

ನೀವು ನಿಮ್ಮ ಮಿತ್ರರ ಮೂಲಕ ನಗದು ಪಡೆಯಲು ಕಳಿಸಿದ ಚೆಕ್ಕನ್ನು (ದಿನಾಂಕ ೭-೭-೧೯೮೭ ಚೆಕ್ ಸಂಖ್ಯೆ ಎ/ಪಿ ೯೮೬೩೦ ಮೊತ್ತ ರೂ. ೯೦೦) ಮಾನ್ಯ ಮಾಡದೆ ಮರಳಿಸುತ್ತಿರುವುದಕ್ಕಾಗಿ ವಿಷಾದಿಸುತ್ತೇವೆ. ನಿಮ್ಮ ಖಾತೆಯಲ್ಲಿ ಚೆಕ್ಕಿನಲ್ಲಿ ನೀವು ನಮೂದಿಸಿದ ಮೊತ್ತ ೯೦೦ ರೂ.ಗಳು ಇಲ್ಲದೆ ಕೇವಲ ೧೨೦ ರೂ.ಗಳು ಮಾತ್ರ ಇದ್ದುದರಿಂದ ಚೆಕ್ಕು ಅಮಾನ್ಯವಾಗಿದೆ.

ದಯಮಾಡಿ, ಇನ್ನು ಮುಂದೆ ಚೆಕ್ಕನ್ನು ನೀಡುವಾಗ ನಿಮ್ಮ ಖಾತೆಯಲ್ಲಿ ಹಣವೆಷ್ಟಿದೆಯೆಂಬುದನ್ನು ಘೋಷಿಸಿ ತಿಳಿದುಕೊಂಡರೆ ಒಳ್ಳೆಯದು; ಆಗ ಇಂಥ ಅಭಾಸಗಳು ಆಗಲಾರವು ಎಂಬು ಭಾವಿಸುತ್ತೇವೆ; ಅಥವಾ ಪಾಸ್ ಬುಕ್ಕಿನಲ್ಲಿ ಹಣ ಕಟ್ಟಿದ ಮತ್ತು ಹಣ ಪಡೆದ ಪೂರ್ಣ ವಿವರಗಳನ್ನು ಕಾಲಕಾಲಕ್ಕೆ ದಾಖಲೆ ಮಾಡಿಸಿಕೊಂಡು ಅದನ್ನು ಗಮನಿಸಿದ್ದರೂ ಹೀಗಾಗುತ್ತಿರಲಿಲ್ಲ. ಅಲ್ಲವೆ! ಸದ್ಭಾವನೆಯಿಂದ ಈ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ. ವಿಶ್ವಾಸವಿರಲಿ.

ವಂದನೆಗಳೊಡನೆ,

ತಮ್ಮ ವಿಶ್ವಾಸದ
ಕೆ.ಪಿ.ಸಿದ್ಧರಾಜು
ವ್ಯವಸ್ಥಾಪಕ

ಗ್ರಾಹಕನು ತನಗೆ ಬಂದಿದ್ದ ಬೇರೆ ಬ್ಯಾಂಕಿನ ಚೆಕ್ಕನ್ನು ತನ್ನ ಖಾತೆಗೆ ಕಟ್ಟಿದಾಗ ಅದು ಅಮಾನ್ಯವಾಗಿ ಬಂದ ಸಂದರ್ಭದಲ್ಲಿ ಬ್ಯಾಂಕ್ ಬರೆಯುವ ಪತ್ರ

ಮಾದರಿ

ಪರೋಪಕಾರಿ ಬ್ಯಾಂಕ್ ಲಿ
ನೆರವು ಪೇಟೆ, ಸಹಾಯಪುರ

ದೂರವಾಣಿ: ೪೮೭೮೮೭                                   ೮ನೆಯ ಸೆಪ್ಟಂಬರ್, ೧೯೮೭

ಶ್ರೀ ಲೆಕ್ಕಾಚಾರಪ್ಪ
ದಿನಸಿ ವ್ಯಾಪಾರಿಗಳು
ನೆರವು ಪೇಟೆ

ಮಾನ್ಯರೆ,

ವಿಷಯ: ‘ಚೆಕ್ ಸಂಖ್ಯೆ ೯೬೯೮ ದಿನಾಂಕ ೨೦ನೆಯ ಆಗಸ್ಟ್ ೧೯೮೭ ಮೊತ್ತ ರೂ. ೯೦೦.೦೦ ಹಿಂದಕ್ಕೆ ಬಂದದ್ದರ ಬಗ್ಗೆ’

ನೀವು ನಿಮ್ಮ ಖಾತೆಗೆ ಜಮಾ ಮಾಡಲು ಸಲ್ಲಿಸಿದ್ದ ‘ಹರಿಶ್ಚಂದ್ರ ಬ್ಯಾಂಕಿನ’ ಚೆಕ್ಕು ಪಾವತಿಯಾಗದೆ ನಮ್ಮ ಶಾಖೆಗೆ ಮರಳಿ ಬಂದಿದೆ. ಈ ಬಗ್ಗೆ ಹರಿಶ್ಚಂದ್ರ ಬ್ಯಾಂಕಿನವರು ಚೆಕ್ಕಿಗೆ ನಗದು ನೀಡಲು ಆಗದಿರುವ ಬಗ್ಗೆ ಕಾರಣವನ್ನು ತಿಳಿಸಿರುವ ಪತ್ರವನ್ನೂ ಇದರೊಂದಿಗೆ ಲಗತ್ತಿಸಿದ್ದೇವೆ.

ತಮ್ಮ ವಿಶ್ವಾಸಿ,
ಸುಭದ್ರರಾವ್
ವ್ಯವಸ್ಥಾಪಕ

ಲಗತ್ತು ಪತ್ರಗಳು :
೧) ಹರಿಶ್ಚಂದ್ರ ಬ್ಯಾಂಕಿನ ಪತ್ರ
೨) ಚೆಕ್ ಸಂಖ್ಯೆ ೯೬೯೮.

ಖಾತೆಯಲ್ಲಿರುವ ಹಣಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಕನ್ನು ಬ್ಯಾಂಕು ಮಾನ್ಯ ಮಾಡಿ ಹಣ ನೀಡಿದ ನಂತರ ಗ್ರಾಹಕನಿಗೆ ಬರೆಯುವ ಪತ್ರ

ಮಾದರಿ

ಬಹುಧನ ಬ್ಯಾಂಕ್ ಲಿ.
ನವೀನನಗರ, ಹಳೆಯೂರು
ದೊಡ್ಡಪೇಟೆ ಶಾಖೆ

ತಂತಿ: ಬಬ್ಯಾಲಿ

ದೂರವಾಣಿ : ೬೬೮೭೮೬

ದಿನಾಂಕ ೧೨ನೆಯ ಜುಲೈ ೧೯೮೭
ಕ್ರ.ಸಂ.೮೮೭೬೮

ಶ್ರೀ/ಶ್ರೀಮತಿ ನಾರಾಯಣ್………….. ಅವರಿಗೆ
ಖಾತೆ ಸಂಖ್ಯೆ ೯೯೯

ಮಾನ್ಯರೆ,

ತಾವು ೮ನೆಯ ಜುಲೈ ೧೯೮೭ರಂದು ಕಳಿಸಿದ ೩೮೫೦ ರೂ. ಮೊತ್ತದ ಚೆಕ್ಕನ್ನು (ಸಂ.೮೮೭೬೮ ದಿ. ೬ನೆಯ ಜುಲೈ ೧೯೮೭) ಮಾನ್ಯ ಮಾಡಿ ಧಾರಕರಿಗೆ ಹಣ ನೀಡಿದ್ದೇವೆ. ಆದರೆ ವಾಸ್ತವವಾಗಿ ನಿಮ್ಮ ಖಾತೆಯಲ್ಲಿ ಕೇವಲ ೨೮೫೦ ರೂ. ಹಣವಿತ್ತು. ಚೆಕ್ಕಿನಲ್ಲಿ ನಮೂದಿತವಾದ ಹಣ ನಿಮ್ಮ ಖಾತೆಯಲ್ಲಿ ಇಲ್ಲದಿದ್ದಾಗ, ಚೆಕ್ಕನ್ನು ಅಮಾನ್ಯ ಮಾಡಬೇಕೆಂಬ ನಿಯಮವಿದ್ದರೂ ಗಣ್ಯರಾದ ತಾವು ಆಕಸ್ಮಿಕವಾಗಿ ಅಥವಾ ಕಾರ್ಯಬಾಹುಳ್ಯದಿಂದ, ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಗಮನಿಸದೆ ಚೆಕ್ಕು ಬರೆದಿದ್ದೀರಿ ಎಂದು ಕಾಣುತ್ತದೆ. ಕಾರಣವೇನೇ ಇರಲಿ, ತಮ್ಮನ್ನು ಸಂದಿಗ್ಧತೆಯಲ್ಲಿ ಸಿಲುಕಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಹೆಚ್ಚುವರಿ ಹಣವನ್ನು ಪಾವತಿ ಮಾಡಿದ್ದೇವೆ. ಈ ಕೂಡಲೇ ನಿಮ್ಮ ಲೆಕ್ಕಕ್ಕೆ ಕೊರತೆಬಿದ್ದ ೧೦೦೦ರೂ. ಗಳನ್ನು ಜಮಾ ಮಾಡಬೇಕೆಂದು ಕೋರುತ್ತೇವೆ. ಸಾಲದ ಸೌಲಭ್ಯದ ಅಗತ್ಯವಿದ್ದಲ್ಲಿ ಆ ಬಗ್ಗೆ ನಮ್ಮ ಕಚೇರಿಗೆ ಬಂದು ವ್ಯವಸ್ಥಾಪಕರಲ್ಲಿ ವಿಚಾರವಿನಿಮಯ ಮಾಡಬಹುದು.

ನಿಮ್ಮ ಹಿತೈಷಿ,
ಕೆ. ಪ್ರಸನ್ನ
ವ್ಯವಸ್ಥಾಪಕ
ಬಹುಧನ ಬ್ಯಾಂಕ್ ಲಿ.
ದೊಡ್ಡಪೇಟೆ ಶಾಖೆ

ವಿಶೇಷ ಕಾರಣಕ್ಕಾಗಿ ಮುಖತಃ ಮಾತನಾಡಲು ವ್ಯವಸ್ಥಾಪಕರು ಗ್ರಾಹಕರನ್ನು ಬ್ಯಾಂಕಿನ ಕಚೇರಿಗೆ ಬರಲು ಕರೆ ನೀಡುವಾಗ ಬಳಸುವ ಅಚ್ಚಾದ ಪತ್ರ
ಮಾದರಿ: ೧೦

ಮುಖಪುಟ

ತಂತಿ: ಬಬ್ಯಾಲಿ

ದೂರವಾಣಿ: ೬೬೮೭೮೬

ಬಹುಧನ ಬ್ಯಾಂಕ್ ಲಿ
ನವೀನನಗರ, ಹಳೆಯೂರು
ದೊಡ್ಡಪೇಟೆ ಶಾಖೆ

ಸಂಖ್ಯೆ ಒಡಿ ೪೮-೨/೮೭
ವಿಷಯ: ‘ಓಡಿ ನೀಡಿರುವ ಬಗ್ಗೆ’
ಉಲ್ಲೇಖ: ಖಾತೆ ಸಂಖ್ಯೆ : ೭೭೮

ಮಾನ್ಯರೆ,

ಮೇಲ್ಕಾಣಿಸಿದ ವಿಷಯದ ಬಗ್ಗೆ ಸಮಾಲೋಚಿಸಲು ತಾವು ಆದಷ್ಟು ಬೇಗನೆ ನಮ್ಮ ಕಾರ‍್ಯಾಲಯಕ್ಕೆ, ಕೆಲಸದ ವೇಳೆಯಲ್ಲಿ ಭೇಟಿಯಾಗುವಿರೆಂದು ಆಶಿಸುತ್ತೇವೆ.

ನಿಮ್ಮ ವಿಶ್ವಾಸಿ
ಟಿ.ಸಿ.ಶಂಕರಾನಂದ
ಶಾಖಾ ವ್ಯವಸ್ಥಾಪಕ

ಕಾರ್ಡಿನ ಹಿಂಭಾಗ

ಸ್ಟಾಂಪು

 

 

ವಿಳಾಸ

ಗೆ,
ಶ್ರೀ/ಶ್ರೀಮತಿ ಅಬ್ದುಲ್ಲಾ
೪೮ ರಾಮಮಂದಿರ ರಸ್ತೆ
ಬಸವನಗುಡಿ
ಬೆಂಗಳೂರು
ಪಿನ್‌ಕೋಡ್ ೫೬೦೦೦೪

ಬಹುಧನ ಬ್ಯಾಂಕ್ ಲಿ.
ನವೀನನಗರ, ಹಳೆಯೂರು
ದೊಡ್ಡಪೇಟೆ ಶಾಖೆ