ಬ್ಯಾಂಕುಗಳ ಪ್ರಧಾನ ಕಚೇರಿಗೂ ಶಾಖಾ ಕಚೇರಿಗೂ ನಡೆಯುವ ಪತ್ರ ವ್ಯವಹಾರ:

ಬ್ಯಾಂಕುಗಳ ಪತ್ರ ವ್ಯವಹಾರದಲ್ಲಿ ಠೇವಣಿ ಮತ್ತು ಸಾಲಗಳಿಗೆ ಸಂಬಂಧಿಸಿದ ವ್ಯವಹಾರಗಳು ಹೆಚ್ಚಾಗಿ ಗ್ರಾಹಕ ಮತ್ತು ಬ್ಯಾಂಕು ನಡುವೆ ನಡೆಯುವುದು ನಿಜ. ಆದರೆ ಅನೇಕ ಬಾರಿ ಗ್ರಾಹಕನ ಕೋರಿಕೆಗಳ ಬಗ್ಗೆ-ಸಾಲ, ಓವರ್ ಡ್ರಾಫ್ಟ್ ಇತ್ಯಾದಿ-ಶಾಖಾ ಕಚೇರಿಗಳ ವ್ಯವಸ್ಥಾಪಕರು ತಾವೇ ಸ್ವತಂತ್ರ ತೀರ್ಮಾನವನ್ನು ಕೈಗೊಳ್ಳಲಾರದು. ಈ ಬಗ್ಗೆ ಕೇಂದ್ರ ಕಚೇರಿಯೊಡನೆ ವ್ಯವಹರಿಸಿ ಗ್ರಾಹಕರಿಗೆ ತೀರ್ಮಾನಗಳನ್ನು ತಿಳಿಸಬೇಕಾಗುವುದು. *೧,೨. ಮತ್ತೆ ಕೆಲವು ಸಂದರ್ಭಗಳಲ್ಲಿ ಕೇಂದ್ರ ಕಚೇರಿ ಶಾಖಾ ಕಚೇರಿಗಳ ನೆರವನ್ನು ಬಯಸಿ ಪತ್ರ ವ್ಯವಹಾರ ನಡೆಸುತ್ತವೆ. ಸ್ಥಳೀಯ ವಾಣಿಜ್ಯ ಸ್ಥಿತಿಯನ್ನು ಕುರಿತು, ಹೊಸ ಶಾಖೆಯನ್ನು ತೆರೆಯುವುದರ ಬಗ್ಗೆ *೩, ೪ ಬೇಡಿಕೆಗಳನ್ನು ಪೂರೈಸುವುದರ ಬಗ್ಗೆ, ಸ್ಥಳ ಬದಲಾವಣೆ ಬಗ್ಗೆ ಕೇಂದ್ರ ಕಚೇರಿಗೆ ಶಾಖಾ ಕಚೇರಿಗಳು ಪತ್ರ ಬರೆದು ವಿವರಗಳನ್ನು ತಿಳಿಸುತ್ತವೆ. ಕೆಲವೊಮ್ಮೆ ಪ್ರಧಾನ ಬ್ಯಾಂಕು ಅಥವಾ ಬ್ಯಾಂಕಿನ ಶಾಖೆ ಇತರ ಬ್ಯಾಂಕುಗಳೊಡನೆ ಗ್ರಾಹಕನ ಪರವಾಗಿ ವ್ಯವಹರಿಸುವುದುಂಟು. *೫

ಬ್ಯಾಂಕಿನ ಶಾಖಾ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಬಡ್ತಿ ನೀಡುವ ಬಗ್ಗೆ, ಸೇವಾ ಕಾರ್ಯವನ್ನು ಖಾಯಂಗೊಳಿಸುವುದರ ಬಗ್ಗೆ, ಅನಧಿಕೃತ ಗೈರು ಹಾಜರಿ ನೌಕರರ ಬಗ್ಗೆ ಕ್ರಮಕೈಗೊಳ್ಳುವ ವಿಚಾರದಲ್ಲಿ, ಗ್ರಾಹಕರ ಆಕ್ಷೇಪಣೆಗಳ ಬಗ್ಗೆ-ಹೀಗೆ ಶಾಖಾ ಕಚೇರಿಯ ಆಡಳಿತ ಹಾಗೂ ಸಿಬ್ಬಂಧಿ ವರ್ಗಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಧಾನ ಕಚೇರಿಯೊಡನೆ ಶಾಖಾ ಕಚೇರಿ ವ್ಯವಹರಿಸಬೇಕಾಗುತ್ತದೆ. *೬

ಕೇಂದ್ರ ಕಚೇರಿ, ಸ್ಥಳೀಯ ವಾಣಿಜ್ಯಾವಕಾಶ ಸ್ಥಿತಿಗಳ ಬಗ್ಗೆ ಅಥವಾ ವ್ಯಾಪಾರಿಗಳೊಬ್ಬರ ಸ್ಥಿತಿಗಳ ಬಗ್ಗೆ ಇಲ್ಲವೇ ನೂತನ ಯೋಜನೆಯನ್ನು ಶಾಖಾ ಕಚೇರಿ ಪ್ರದೇಶದಲ್ಲಿ ಅಳವಡಿಸುವ ಬಗ್ಗೆ ವಿವರಗಳನ್ನು ಕೇಳಿದಾಗ ಶಾಖಾ ವ್ಯವಸ್ಥಾಪಕರು ಕೇಂದ್ರ ಕಚೇರಿಗೆ ವರದಿ ರೂಪದಲ್ಲಿ ಖಚಿತ ಮಾಹಿತಿಯೊಡನೆ ಹಾಗೂ ಸಮೀಕ್ಷೆಗಳೊಡನೆ ಸಿದ್ಧಪಡಿಸಿದ ಸಂಗತಿಗಳನ್ನೂ, ಸೂಕ್ತ ಸಲಹೆಗಳೊಂದಿಗೆ ಕಳಿಸಿಕೊಡಬೇಕಾಗುವುದು. ಪ್ರತಿ ತಿಂಗಳೂ ಶಾಖೆಯ ವಹಿವಾಟಿನ ಅಥವಾ ನಿರ್ದಿಷ್ಟ ಯೋಜನೆಯ ‘ಪ್ರಗತಿ ವರದಿ’ಯನ್ನು ಕಳಿಸಿಕೊಡಬೇಕಾಗುತ್ತದೆ.

ಸಾಮಾನ್ಯವಾಗಿ ಶಾಖಾ ಕಚೇರಿಗಳ ವ್ಯವಸ್ಥಾಪಕರು ಅನೇಕ ವಿಚಾರಗಳಲ್ಲಿ ಕೇಂದ್ರ ಕಚೇರಿಯ ಸೂಚನೆಗಳಿಗೆ ಅನುಸಾರವಾಗಿ ಅಥವಾ ಹಿಂದಿನ ವ್ಯವಸ್ಥಾಪಕರು ಕೈಗೊಂಡ ತೀರ್ಮಾನಗಳ ಮಾದರಿಯಲ್ಲಿ ನಿರ್ಣಯಗಳನ್ನು ಕೈಗೊಂಡು ಕಾರ್ಯನಿರ್ವಹಿಸುತ್ತಿರುತ್ತಾರೆ. ಆದರೆ ಹಲವು ಸಲ ಹೊಸ-ಹೊಸ ಸಮಸ್ಯೆಗಳು ಉದ್ಭವಿಸಿದಾಗ ಶಾಖಾ ವ್ಯವಸ್ಥಾಪಕರು ಸ್ವಯಂ ತಾವೇ ನಿರ್ಧಾರಗಳನ್ನು ಕೈಗೊಳ್ಳುವುದು ಕಠಿಣ. ಅಂತಹ ಸಂದರ್ಭಗಳಲ್ಲಿ ಕೇಂದ ಕಚೇರಿಯೊಡನೆ ವ್ಯವಹರಿಸುತ್ತಾನೆ. ಶಾಖಾ ಕಚೇರಿಯ ಅಧಿಕಾರಕ್ಕೆ ಮೀರಿದ ಸಂಗತಿಗಳಲ್ಲಿಯೂ ಸ್ವತಂತ್ರ ತೀರ್ಮಾನ ಕೈಗೊಳ್ಳುವಂತಿಲ್ಲ. ಇಂತಹ ಸಂದರ್ಭಗಳಲ್ಲಿ ಕೇಂದ್ರ ಕಚೇರಿಯಿಂದ ಮಾರ್ಗದರ್ಶನ ಪಡೆಯಬೇಕಾಗುತ್ತದೆ. ನೌಕರರನ್ನು ಖಾಯಂ ಮಾಡುವಾಗ, ಗ್ರಾಹಕರೊಬ್ಬರು ಅಧಿಕ ಮೊತ್ತದ ಸಾಲದ ಸೌಲಭ್ಯವನ್ನು ಕೇಳಿದಾಗ ಆ ಬಗ್ಗೆ ಸೂಕ್ತ ಶಿಫಾರಸ್ಸುಗಳೊಡನೆ ಅರ್ಜಿಗಳನ್ನು ಕಳಿಸಿ ಕೇಂದ್ರ ಕಚೇರಿಯಿಂದ ಉತ್ತರ ಪಡೆಯಬೇಕು. ಆದ ಕಾರಣ ಅಂಗೀಕಾರ, ಅನುಮತಿಗಾಗಿ ಕೇಂದ್ರ ಕಚೇರಿಗೆ ಶಿಫಾರಸುಗಳನ್ನು ನೀಡುವುದು ವಿವರ ನೀಡುವುದೂ ಶಾಖಾ ವ್ಯವಸ್ಥಾಪಕರ ಮುಖ್ಯ ಕೆಲಸಗಳೆನ್ನಬಹುದು.

ಶಾಖಾ ಕಚೇರಿ ಕಳಿಸುವ ಮನವಿಗಳನ್ನೂ ಅರ್ಜಿಗಳನ್ನೂ ಕೇಂದ್ರ ಕಚೇರಿ ಅಂಗೀಕರಿಸಬೇಕೆಂಬ ನಿಯಮವಿಲ್ಲ. ಆದರೆ ಗ್ರಾಹಕನಿಗೆ ತೃಪ್ತಿಕರವಾದ ಉತ್ತರ ನೀಡುವ ರೀತಿಯಲ್ಲಿ ಅರ್ಜಿಗಳನ್ನು ತಿರಸ್ಕರಿಸಬೇಕಾಗುತ್ತದೆ. ಏಕೆಂದರೆ, ಗ್ರಾಹಕರು ಕೇಂದ್ರ ಕಚೇರಿ ತನ್ನ ಅರ್ಜಿಯನ್ನು ಹೇಗೆ ತಿರಸ್ಕರಿಸಿತು ಎಂದು ಕೇಳಿದಾಗ ಸಮರ್ಪಕ ಉತ್ತರ ನೀಡುವುದು ಶಾಖಾ ವ್ಯವಸ್ಥಾಪಕರ ಕರ್ತವ್ಯವಾಗಿರುತ್ತದೆ.

ಓವರ್ ಡ್ರಾಫ್ಟ್ ಕೇಳಿ ಗ್ರಾಹಕರೊಬ್ಬರು ಸಲ್ಲಿಸಿದ ಅರ್ಜಿ ಬಗ್ಗೆ ಪ್ರಧಾನ ಕಾರ್ಯಾಲಯಕ್ಕೆ ಶಾಖಾ ವ್ಯವಸ್ಥಾಪಕರು ಬರೆದ ಪತ್ರ

ಮಾದರಿ

ಸುಖದಾಯಿನೀ ಬ್ಯಾಂಕ್ ಲಿ
ಬೆಂಗಳೂರು

ಕೋಟೆ ಶಾಖೆ
ಹಾಲೂರು

೪ನೆಯ ಅಕ್ಟೋಬರ್ ೧೯೮೭

ಪ್ರಧಾನ ವ್ಯವಸ್ಥಾಪಕರು
ಸುಖದಾಯಿನೀ ಬ್ಯಾಂಕ್ ಲಿ.
ಬೆಂಗಳೂರು

ಮಾನ್ಯರೆ,

‘ಝಗ ಝಗ ವಸ್ತ್ರಾಲಯ’ ದ ಮಾಲೀಕರಾದ ಶ್ರೀಮಿರುಗಪ್ಪನವರು ಆರು ತಿಂಗಳ ಅವಧಿಗೆ ಸುಮಾರು ೩೦,೦೦೦ ರೂ.ವರೆಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಕೋರಿ ಅರ್ಜಿಸಲ್ಲಿಸಿದ್ದಾರೆ. ಹೊರಗಿನ ಪ್ರಾಂತ್ಯಗಳಿಗೆ ಸಿದ್ಧಪಡಿಸಿದ ಉಡುಪುಗಳನ್ನು ಸರಬರಾಜು ಮಾಡಲು ಅಪಾರ ಆದೇಶಗಳು ಬಂದಿರುವುದರಿಂದಲೂ ಸ್ವದೇಶಿ ಮಹಾತ್ಮ ಮರುಳಪ್ಪನವರ ಜನ್ಮ ಶತಮಾನೋತ್ಸವದ ಅಂಗವಾಗಿ ವಿನೂತನ ದೇಶೀಯ ವಸ್ತ್ರಗಳನ್ನು ಸಿದ್ಧಪಡಿಸುತ್ತಿರುವುದರಿಂದಲೂ ಅಧಿಕ ವಹಿವಾಟಿಗಾಗಿ ಮೇಲ್ಕಂಡ ಕೋರಿಕೆ ಸಲ್ಲಿಸಿದ್ದಾರೆ.

ಈ ಕೆಳಕಂಡ ಸುಭದ್ರತಾ ಆಧಾರಗಳನ್ನು ನೀಡಲೂ ಸಿದ್ಧರಿದ್ದಾರೆ:

೧) ಹೊಸಪೇಟೆಯಲ್ಲಿರುವ ಇವರ ಮಾಲೀಕತ್ವದ ಬಟ್ಟೆಗಿರಣಿಯಲ್ಲಿರುವ ೫೦೦೦ರೂ. ಬೆಲೆ ಬಾಳುವ ಸಿದ್ಧ ಸರಕು;

೨) ಅಕ್ಷಯ ಪಾತ್ರೆ ಕಾರ್ಖಾನೆಯ ಬಂಡವಾಳದ ಷೇರುಗಳು ೫೦೦೦, ೧೦೦ರೂ. ಬೆಲೆಯ ಈ ಷೇರಿಗೆ ಮಾರುಕಟ್ಟೆಯಲ್ಲಿ ೧೫೦ರೂ. ಬೆಲೆಯಿದೆ,

೩) ವರ್ಷಕ್ಕೆ ಸುಮಾರು ನಾಲ್ಕು ಲಕ್ಷ ರೂ. ವಹಿವಾಟು ನಡೆಸುವ ಶ್ರೀ ಸಣ್ಣಪ್ಪನವರ ಪಾಲುಗಾರಿಕೆ ಸಂಸ್ಥೆಯಲ್ಲಿ ಇವರಿಗೆ ಸೇರಿದ ಒಂದು ಲಕ್ಷ ರೂ. ಬೆಲೆ ಬಾಳುವ ಯಂತ್ರೋಪಕರಣಗಳ ಆಧಾರ;

೪) ತಿಂಗಳಿಗೆ ೨೦೦ರೂ. ಕಟ್ಟುವ ಜೀವಾ ವಿಮಾ ಪಾಲಿಸಿ.

ಶ್ರೀ ಮಿರುಗಪ್ಪನವರು ಕಳೆದ ಹತ್ತು ವರ್ಷಗಳಿಂದ ನಮ್ಮ ಬ್ಯಾಂಕಿನಲ್ಲಿ ಚಾಲ್ತಿ ಠೇವಣಿ ಖಾತೆಯ ಮೂಲಕ ವ್ಯವಹರಿಸುತ್ತಿದ್ದಾರೆ. ಪ್ರಾಮಾಣಿಕ ಸಜ್ಜನ ವ್ಯಕ್ತಿಗಳಾಗಿರುವ ಅವರು ನಮ್ಮೊಂದಿಗೆ ತೃಪ್ತಿಕರವಾಗಿ ವ್ಯವಹರಿಸುತ್ತಿದ್ದಾರೆ. ಇವರು ಕೇಳಿರುವ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡಲು ಯಾವ ಆಕ್ಷೇಪಣೆಯೂ ಇಲ್ಲ. ಶ್ರೀಯುತರು ಸಲ್ಲಿಸಿದ ಅರ್ಜಿಯನ್ನು ಅಂಗೀಕಾರಕ್ಕಾಗಿ ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.

ತಮ್ಮ ವಿಶ್ವಾಸಿ,
ಜಯಪ್ಪ
ಶಾಖಾ ವ್ಯವಸ್ಥಾಪಕ

ಓವರ್ ಡ್ರಾಫ್ಟ್, ಸೌಲಭ್ಯ ಕೇಳಿದ ಗ್ರಾಹಕರೊಬ್ಬರ ಕೋರಿಕೆಯನ್ನು ಮನ್ನಿಸಿ ಪ್ರಧಾನ ಕಚೇರಿ, ಶಾಖಾ ಕಚೇರಿಗೆ ಬರೆದ ಉತ್ತರ

ಮಾದರಿ

ಸುಖದಾಯಿನೀ ಬ್ಯಾಂಕ್ ಲಿ.
ಕೇಂದ್ರ ಕಚೇರಿ, ಬೆಂಗಳೂರು

ದಿನಾಂಕ: ೧೫ನೆಯ ಅಕ್ಟೋಬರ್ ೧೯೮೮

ಶಾಖಾ ವ್ಯವಸ್ಥಾಪಕರು
ಕೋಟೆ ಶಾಖೆ
ಸುಖದಾಯಿನೀ ಬ್ಯಾಂಕ್ ಲಿ.
ಹಾಲೂರು.

ಮಾನ್ಯರೆ,

ದಿನಾಂಕ ೪ನೆಯ ಅಕ್ಟೋಬರ್ ೧೯೮೭ರ ಪತ್ರದೊಂದಿಗೆ ಕಳಿಸಿದ ‘ಝಗ ಝಗ ವಸ್ತ್ರಾಲಯದ ಶ್ರೀಮಿರುಗಪ್ಪನವರ ೩೦೦೦೦ರೂ. (ಮೂವತ್ತು ಸಾವಿರ ರೂಪಾಯಿಗಳು) ಓವರ್ ಡ್ರಾಫ್ಟಿನ ಕೋರಿಕೆಯನ್ನು ಪರಿಶೀಲಿಸಿದೆ. ಕೊಟ್ಟಿರುವ ಸುಭದ್ರತಾ ಆಧಾರಗಳನ್ನು ಗಮನಿಸಿ, ಅವರಿಗೆ ೨೦೦೦೦ರೂ.ಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ಮಂಜೂರಾತಿ ಮಾಡಿದೆ.

ಇಂತು,
ಸರಿಯಪ್ಪ
ಕೇಂದ್ರ ಕಚೇರಿ
ಸುಖದಾಯಿನೀ ಬ್ಯಾಂಕ್ ಲಿ.

ಬ್ಯಾಂಕಿನ ಕೇಂದ್ರ ವ್ಯವಸ್ಥಾಪಕರಿಗೆ ಶಾಖಾ ಕಚೇರಿ ತೆರೆಯುವುದರ ಬಗ್ಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರ ವರದಿ
ಮಾದರಿ

ಧನಾಭಿವೃದ್ಧಿ ಬ್ಯಾಂಕ್ ಲಿ.
ಕೇಂದ್ರ ಕಚೇರಿ, ಉಡುಪನಗರ

ಜಂಗಲಿಪುರ ಶಾಖೆ
ಜಯನಗರ
೨೨ನೆಯ ಅಕ್ಟೋಬರ್ ೧೯೮೭

ಪ್ರಧಾನ ವ್ಯವಸ್ಥಾಪಕರು
ಧನಾಭಿವೃದ್ಧಿ ಬ್ಯಾಂಕ್ ಲಿ.

ಮಾನ್ಯರೆ,

ನಮ್ಮ ಬ್ಯಾಂಕಿನ ಹತ್ತು ಹೊಸಶಾಖೆಗಳನ್ನು ಈ ವರ್ಷ ಪ್ರಾರಂಭಿಸಬೇಕೆಂಬ ನಿರ್ದೇಶಕರ ಮಂಡಳಿಯ ನಿರ್ಧಾರಕ್ಕೆ ಅನುಸಾರವಾಗಿ ನಮ್ಮ ಶಾಖೆಯ ಹತ್ತಿರದ ಪ್ರದೇಶದಲ್ಲಿ ಹೊಸಶಾಖೆಯನ್ನು ತೆರೆಯುವುದರ ಬಗ್ಗೆ ಪರಿಶೀಲನೆ ನಡೆಸಿ ಈ ಕೆಳಕಂಡ ವರದಿ ಸಲ್ಲಿಸುತ್ತಿದ್ದೇನೆ.

ವಿಶಾಲೂರು ನಗರಾಭಿವೃದ್ಧಿ ಸಂಸ್ಥೆ, ನಗರವನ್ನು ವಿಸ್ತರಿಸುವ ದೃಷ್ಟಿಯಿಂದ ಸುತ್ತಮುತ್ತಲ ಅನೇಕ ಪ್ರದೇಶಗಳನ್ನು ಈಗಾಗಲೇ ಪ್ರಾಧಿಕಾರದ ವಶಕ್ಕೆ ತೆಗೆದುಕೊಂಡಿದೆ. ಈ ಪೈಕಿ ವಿಶಾಲೂರು ಉತ್ತರದಲ್ಲಿ ವಿಶ್ವೇಶ್ವರ ಕೈಗಾರಿಕಾ ನಗರವೊಂದನ್ನು ಸ್ಥಾಪಿಸಲು ನಿರ್ಧರಿಸಿದ. ಈಗಾಗಲೇ ಅಲ್ಲಿ ಖಾಸಗಿಯಾಗಿ ಹತ್ತಾರು ಸಣ್ಣಪುಟ್ಟ ಕೈಗಾರಿಕೆಗಳು ಸ್ಥಾಪಿತವಾಗಿವೆ. ಕೋಳಿ ಸಾಕಣೆ, ಡೈರಿ ಫಾರಂಗಳು, ಮರಕೊಯ್ಯುವ ಕಾರ್ಖಾನೆ, ವಾಹನಗಳ ರಿಪೇರಿ ವರ್ಕ್‌ಶಾಪ್‌ಗಳು ನೆಲಸಿವೆ. ಮಧ್ಯಮವರ್ಗದವರು ಹೆಚ್ಚಾಗಿ ವಾಸಮಾಡುವ ಈ ಪ್ರದೇಶದಲ್ಲಿ ಕೈಗಾಡಿ ವ್ಯಾಪಾರಿಗಳೂ ಕೈಕಸಬಿನ ಜನರೂ ಸಾಕಷ್ಟು ಮಂದಿ ಇದ್ದಾರೆ. ನಮ್ಮ ಶಾಖೆಗೆ ಈಗಾಗಲೇ ಹಲವಾರು ಕಿಲೋಮೀಟರ್ ದೂರವಿರುವ ಈ ಪ್ರದೇಶದಿಂದ ಕೈಗಾಡಿ ವ್ಯಾಪಾರಿಗಳೂ ಕೈಕಸಬಿನ ಜನರೂ ಸಾಕಷ್ಟು ಮಂದಿ ಇದ್ದಾರೆ ನಮ್ಮ ಶಾಖೆಗೆ ಈಗಾಗಲೇ ಹಲವಾರು ಕಿಲೋಮೀಟರು ದೂರವಿರುವ ಈ ಪ್ರದೇಶದಿಂದ ಸುಮಾರು ೧೦೦೦ ಮಂದಿ ನಮ್ಮ ಶಾಖೆಯಲ್ಲಿ ಖಾತೆ ತೆರೆದು ವ್ಯವಹರಿಸುತ್ತಿದ್ದಾರೆ. ಇನ್ನೂ ಅನೇಕರು, ಬ್ಯಾಂಕು ದೂರ ಎಂಬ ಕಾರಣದಿಂದ ಖಾತೆ ತೆರೆದಿಲ್ಲ.

ಕೇಂದ್ರ ಸರ್ಕಾರ ಯೋಜಿಸಿರುವ ಹೊಸ ರೈಲು ಮಾರ್ಗ ಈ ಕೈಗಾರಿಕಾ ಪ್ರದೇಶದ ಬಳಿ ಹಾದುಹೋಗುವ ಸಾಧ್ಯತೆಯಿದೆ. ಪದೇಪದೇ ನಗರದ ಒಳಭಾಗಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದು ಖಾಸಗಿಯಾಗಿ ಆಟೋರಿಕ್ಷಾ, ಸ್ಕೂಟರ್, ಸೈಕಲ್ ಮೊದಲಾದ ವಾಹನಗಳನ್ನು ಕೊಳ್ಳಬೇಕೆಂದು ಜನ ಅಪೇಕ್ಷಿಸುತ್ತಿದ್ದಾರೆ, ವಾಹನ ಸಾಲಕ್ಕಾಗಿಯೂ ದೀರ್ಘಾವಧಿ ಸುಲಭ ಕಂತಿನ ಸಾಲಕ್ಕಾಗಿಯೂ ಜನ ಕಾತರರಾಗಿದ್ದಾರೆ.

ಈ ಎಲ್ಲ ಕಾರಣಗಳಿಂದ ವಿಶ್ವೇಶ್ವರಯ್ಯ ಕೈಗಾರಿಕಾನಗರದಲ್ಲಿ ನಮ್ಮ ಗ್ರಾಹಕರಿಗೂ ಸಾರ್ವಜನಿಕರಿರೂ ವ್ಯಾಪಾರೋದ್ಯಮಿಗಳಿಗೂ ನಮ್ಮ ಬ್ಯಾಂಕಿನ ಶಾಖೆಯೊಂದನ್ನು ಪ್ರಾರಂಭಿಸುವುದು ಸಕಾಲಿಕವೂ ಅಗತ್ಯವೂ ಆಗಿದೆ. ಇನ್ನೂ ಹೆಚ್ಚಿನ ಮಾಹಿತಿಗಳು ಅಗತ್ಯವಿದ್ದರೆ ಪೂರೈಸಲಾಗುತ್ತದೆ.

ಇಂತು ತಮ್ಮ ವಿಶ್ವಾಸಿ
ಗೋವಿಂದಯ್ಯ
ಶಾಖಾ ವ್ಯವಸ್ಥಾಪಕ

ಬ್ಯಾಂಕಿನ ಹೊಸ ಖಾತೆ ತೆರೆಯುವುದರ ಬಗ್ಗೆ ಕೇಂದ್ರ ವ್ಯವಸ್ಥಾಪಕರು ಶಾಖಾ ವ್ಯವಸ್ಥಾಪಕರಿಗೆ ಬರೆದ ಉತ್ತರ ಪತ್ರ
ಮಾದರಿ

ಧನಾಭಿವೃದ್ಧಿ ಬ್ಯಾಂಕ್ ಲಿ
ಕೇಂದ್ರ ಕಚೇರಿ, ಉಡುಪನಗರ

ಜಂಗಲಿಪುರ ಶಾಖೆ
ಜಯನಗರ
೩೦ನೆಯ ಅಕ್ಟೋಬರ್ ೧೯೮೭

ಶಾಖಾ ವ್ಯವಸ್ಥಾಪಕರು
ಧನಾಭಿವೃದ್ದಿ ಬ್ಯಾಂಕ್ ಲಿ.
ಜಂಗಲಿಪುರ ಶಾಖೆ
ಜಯನಗರ

ಮಾನ್ಯರೆ,

ದಿನಾಂಕ ೨೫ ಅಕ್ಟೋಬರ್ ೧೯೮೭ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಈ ವರ್ಷ ಬ್ಯಾಂಕಿನ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಹತ್ತು ಶಾಖಾ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಯಿತು. ಈ ಬಗ್ಗೆ ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಹೊಸ ಶಾಖೆ ತೆರೆಯುವ ಅಗತ್ಯ ಹಾಗೂ ಇರುವ ಅನುಕೂಲಗಳನ್ನು ಕುರಿತು ಒಂದು ವರದಿಯನ್ನು ಮುಂದಿನ ತಿಂಗಳ ೨೦ನೆಯ ದಿನಾಂಕದೊಳಗೆ ಕೇಂದ್ರ ಕಚೇರಿಗೆ ತಲುಪಿಸಬೇಕೆಂದು ಕೋರಲಾಗಿದೆ.

ಇಂತು,
ಧನಪಾಲಪ್ಪ
ವ್ಯವಸ್ಥಾಪಕ

ಬ್ಯಾಂಕಿನ ಕೇಂದ್ರ ಕಚೇರಿಯಿಂದ ಹೊರಗಿನವರಿಗೆ ಸರಕು ರಫ್ತು ಮಾಡಲು ಸಿದ್ಧವಿರುವ ವ್ಯಾಪಾರಿಗಳ ಬಗ್ಗೆ ವಿವರಗಳನ್ನು ಕೇಳಿ ಶಾಖಾ ಕಚೇರಿಗಳಿಗೆ ಬರೆದ ಪತ್ರ

ಮಾದರಿ

ವಿಶ್ವಸೇವಾ ಬ್ಯಾಂಕ್ ಲಿ.
ಕೇಂದ್ರ ಕಚೇರಿ
ಬ್ರಹ್ಮಾಂಡಪುರ

ತಂತಿ: ‘ಮಿಂಚು’
ದೂರವಾಣಿ: ೧೨೩೪೫೬

ದಿನಾಂಕ: ೧೯-೧೧-೧೯೮೭

ಶ್ರೀ ಭಕ್ತಪ್ಪ
ವ್ಯವಸ್ಥಾಪಕರು
ಅಣುಪುರ ಶಾಖೆ-ಅವರಿಗೆ

ಮಾನ್ಯರೆ,

ನಮ್ಮ ಗ್ರಾಹಕರಾದ, ಉತ್ತರಭಾರತದ ದೆಹಲಿಯಲ್ಲಿರುವ ‘ಚಳಿ ರಕ್ಷಕ ವಸ್ತ್ರ ಮಾರಾಟ ಸಂಸ್ಥೆ’ ಯವರು ಬೃಹತ್ ಪ್ರಮಾಣದಲ್ಲಿ ಕನಿಷ್ಠ ಹತ್ತು ಸಾವಿರ ಪುರುಷರ ಉಡುಪುಗಳನ್ನು ಆಮದು ಮಾಡಿಕೊಳ್ಳಲು ತಿಳಿಸಿ ಸರಬರಾಜು ಮಾಡುವ ವ್ಯಾಪಾರಿಗಳ ಬಗ್ಗೆ ವಿವರಗಳನ್ನು ನೀಡಬೇಕೆಂದು ಕೋರಿದ್ದಾರೆ.

ಈ ಸಂಸ್ಥೆಯವರ ಅವಶ್ಯಕತೆಯನ್ನು ಪೂರೈಸುವ ಗ್ರಾಹಕ ವ್ಯಾಪಾರಿಗಳು, ನಿಮ್ಮ ಶಾಖೆಯಲ್ಲಿ ಯಾರಾದರೂ ಇದ್ದರೆ ಅವರ ವಿಳಾಸ-ವಿವರಗಳನ್ನೂ ಮಾರಾಟದ ನಿಯಮಗಳನ್ನೂ ಮತ್ತು ತಕ್ಷಣದಲ್ಲಿ ದೊರೆಯುವ ಸಿದ್ಧ ಉಡುಪುಗಳ ಮಾಹಿತಿಯನ್ನೂ ಆದಷ್ಟು ಶೀಘ್ರವೇ ಅವರಿಂದ ಲಿಖಿತದಲ್ಲಿ ಪಡೆದು, ನಮ್ಮ ಕಚೇರಿಗೆ ಮುಂದಿನ ವಾರದೊಳಗಾಗಿ ತಲುಪಿಸಬೇಕಾಗಿ ಕೋರಲಾಗಿದೆ.

ತಮ್ಮ ವಿಶ್ವಾಸಿ
ಧನ್ಯಪ್ಪ
ಪ್ರಧಾನ ವ್ಯವಸ್ಥಾಪಕ
ವಿಶ್ವಸೇವಾ ಬ್ಯಾಂಕ್ ಲಿ

ಆಡಳಿತಾತ್ಮಕ ಸಂದರ್ಭಗಳಲ್ಲಿ ತಾನೇ ತೀರ್ಮಾನಕೈಗೊಳ್ಳಲು ಸಾಧ್ಯವಾಗದಿದ್ದಾಗ ಬ್ಯಾಂಕಿನ ಶಾಖೆಯ ವ್ಯವಸ್ಥಾಪಕರೊಬ್ಬರು ಕೇಂದ್ರ ಕಚೇರಿಗೆ ಬರೆಯುವ ಪತ್ರ

ಮಾದರಿ

ಸಂಪದಭಿವೃದ್ಧಿ ಬ್ಯಾಂಕ್ ಲಿ.
ಲಕ್ಷ್ಮೀ ಬಡಾವಣೆ, ವಿಷ್ಣುಪುರ

ಚಿಕ್ಕಪೇಟೆ ಶಾಖೆ
ಲಕ್ಷ್ಮೀಬಡಾವಣೆ

ದಿನಾಂಕ: ೮ನೆಯ ನವೆಂಬರ್ ೧೯೮೭

ಪ್ರಧಾನ ವ್ಯವಸ್ಥಾಪಕರು
ಕೇಂದ್ರ ಕಚೇರಿ
ಸಂಪದಭಿವೃದ್ಧಿ ಬ್ಯಾಂಕ್ ಲಿ.
ವಿಷ್ಣುಪುರ-ಅವರಿಗೆ

ಮಾನ್ಯರೆ,

ವಿಷಯ: ಜಾಣಮಲ್ಲಪ್ಪ ಅವರ ಸೇವೆಯನ್ನು ಖಾಯಂಗೊಳಿಸುವಿಕೆ.

ನಮ್ಮ ಶಾಖೆಯಲ್ಲಿ ಕಳೆದ ವರ್ಷ ನವೆಂಬರ್ ೯ರಿಂದ ತಾತ್ಕಾಲಿಕವಾಗಿ ನೇಮಕಗೊಂಡ ಶ್ರೀ ಜಾಣಮಲ್ಲಪ್ಪನವರು ‘ನಿತ್ಯಜಮಾನಿಧಿ’ ಅಂಗವಾಗಿ ಗ್ರಾಹಕರಿಂದ ಪ್ರತಿದಿನ ಠೇವಣಿ ಸಂಗ್ರಹದ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದ್ದಾರೆ. ನಿತ್ಯಜಮಾನಿಧಿಗೆ ಸೇರ್ಪಡೆಯಾಗಿರುವ ಗ್ರಾಹಕ ಸದಸ್ಯರಿಂದ ಯಶಸ್ವಿಯಾಗಿ ಠೇವಣಿ ಸಂಗ್ರಹ ಕಾರ್ಯವನ್ನು ನಿರ್ವಹಿಸುವುದರ ಜೊತೆಗೆ ಹೊಸ ಗ್ರಾಹಕರನ್ನೂ ಕೂಡಿಸಿಕೊಟ್ಟಿದ್ದಾರೆ. ಇದೂ ಅಲ್ಲದೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮಹಿಳಾ ನಿಧಿ ಯೋಜನೆಯ ಅಂಗವಾಗಿ ಮಹಿಳಾ ಗ್ರಾಹಕರನ್ನೂ ಕೂಡಿಸಿಕೊಟ್ಟಿದ್ದಾರೆ. ಈ ವರ್ಷ ಅತಿಹೆಚ್ಚಿನ ಗ್ರಾಹಕರನ್ನು ಕೂಡಿಸಿದವರಿಗೆ ನೀಡುವ ‘ಗ್ರಾಹಕ ಸೇವಾ ಪ್ರವೀಣ’ ಪ್ರಶಸ್ತಿಯನ್ನು ಅವರು ಗಳಿಸಿದ್ದಾರೆ.

ಅವರ ತಾತ್ಕಾಲಿಕ ಸೇವಾವಧಿ ಈ ನವೆಂಬರ್ ೯ಕ್ಕೆ ಮುಗಿಯುತ್ತದೆ. ಶ್ರೀ ಜಾಣಮಲ್ಲಪ್ಪನವರು ತಮ್ಮ ತಾತ್ಕಾಲಿಕ ಸೇವಾವಧಿಯಲ್ಲಿ ಶ್ರದ್ದಾಪೂರ್ಣ ದುಡಿಮೆಯಿಂದ ಸಮರ್ಪಕ ಕಾರ್ಯನಿರ್ವಹಣೆಯಿಂದ ಮೇಲಾಧಿಕಾರಿಗಳಿಗೆ ತೃಪ್ತಿಕರವಾಗುವಂತೆ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಮನ್ನಿಸಿ, ಅವರನ್ನು ಖಾಯಂ ನೌಕರರನ್ನಾಗಿ ಸಂಸ್ಥೆಯಲ್ಲಿ ನೇಮಕಮಾಡಲು ಎಲ್ಲ ರೀತಿಯಲ್ಲಿಯೂ ಅರ್ಹರಾಗಿದ್ದಾರೆ ಎಂದು ಈ ಮೂಲಕ ಶಿಪಾರಸನ್ನು ಮಾಡುತ್ತಿದ್ದೇನೆ.

ನಿಮ್ಮ ನಂಬುಗೆಯ,
ನೆರೆ ಹೊರೆಯಪ್ಪ
ಚಿಕ್ಕಪೇಟೆ ಶಾಖೆ
ಸಂಪದಭಿವೃದ್ಧಿ ಬ್ಯಾಂಕ್ ಲಿ.