ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಸೇರಿ ನೀಡುವ ವರದಿಯನ್ನು ‘ಸಮಿತಿ ವರದಿ’ ಎನ್ನುತ್ತಾರೆ. ವರದಿಗೆ ಸಂಬಂಧಿಸಿದ ಕಾರ್ಯಕ್ಷೇತ್ರ ವಿಶಾಲವಾಗಿದ್ದಾಗ, ಬಹುಪ್ರಮಾಣದ ಕಾರ್ಯವಿದ್ದಾಗ ವರದಿ ನೀಡಲು ಒಬ್ಬರ ಶಕ್ತಿ ಮೀರಿದ ಅಥವಾ ಒಬ್ಬರಿಗೆ ಬಹುಕಾಲ ಹಿಡಿಸುವ ಸಂದರ್ಭದಲ್ಲಿ ಹಲವರನ್ನು ನೇಮಿಸಲಾಗುತ್ತದೆ. ಅವರು ನೀಡುವ ವರದಿಯೇ ಸಮಿತಿ ವರದಿ ಅಥವಾ ಬಹುವ್ಯಕ್ತಿ ವರದಿ ಎನ್ನಬಹುದು.

ಸಮಿತಿ ವರದಿ ಕೆಲವು ಹಂತಗಳಲ್ಲಿ ರೂಪುಗೊಳ್ಳುತ್ತದೆ. ಸದಸ್ಯರು ಮೊದಲು ಸಭೆ ಸೇರಿ ತಮ್ಮ ಕಾರ್ಯದ ಗುರಿ, ತನಿಖಾ ವಿಧಾನ, ಸಂಗ್ರಹಿಸಬೇಕಾದ ಮಾಹಿತಿ, ಅದಕ್ಕೆ ಬೇಕಾಗುವ ಅವಧಿ, ಕಾರ್ಯದ  ಹಂಚಿಕೆ ಇತ್ಯಾದಿಗಳನ್ನು ನಿರ್ಧರಿಸಿ ವರದಿಯ ಬಗ್ಗೆ ರೂಪರೇಷೆ ಸಿದ್ಧಪಡಿಸಿತ್ತಾರೆ. ಅನಂತರ ಕಾರ‍್ಯೋನ್ಮುಖರಾಗಿ, ಲಿಖಿತ ದಾಖಲೆಯನ್ನು ಪರಿಶೀಲಿಸಿ, ಸಾರ್ವಜನಿಕರ ಸಂದರ್ಶನ, ಬೇರೆ ಬೇರೆ ಸ್ಥಳಗಳಿಗೆ ಭೇಟಿ, ಪತ್ರಿಕಾ ವರದಿ ಮೊದಲಾದ ಕಾರ್ಯಗಳನ್ನು ಕೈಗೊಳ್ಳುತ್ತಾರೆ.

ಕೆಲವೊಮ್ಮೆ ಈ ಬಗೆಯ ಕೆಲಸಗಳಿಗಾಗಿ ಉಪಸಮಿತಿಗಳನ್ನು ‘ವರದಿ ಸಮಿತಿ’ ನೇಮಿಸುವುದುಂಟು. ಇಂಥ ಸಂದರ್ಭಗಳಲ್ಲಿ ಮುಖ್ಯ ಸಮಿತಿ, ಉಪಸಮಿತಿಗಳ ವರದಿಗಳನ್ನು ಪರಿಶೀಲಿಸುತ್ತದೆ. ಸಮಗ್ರ ಮಾಹಿತಿ ಪರಿಶೀಲನೆಯ ನಂತರ ಕರಡು ವರದಿ ಸಿದ್ಧಾವಾಗುತ್ತದೆ. ಇದನ್ನು ಉಪಸಮಿತಿ ಅಥವಾ ಒಬ್ಬ ವ್ಯಕ್ತಿ ಸಿದ್ಧಮಾಡುತ್ತಾನೆ  ‘ಮುಖ್ಯ ಸಮಿತಿ’ ಇದನ್ನು ಕೂಲಂಕಷವಾಗಿ ಚರ್ಚಿಸಿ ಪರಿಷ್ಕಾರ ರೂಪದ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಾನೆ. ವರದಿಯಲ್ಲಿ ಸದಸ್ಯರು ತಮ್ಮ ಸಲಹೆಗಳನ್ನು ಶಿಫಾರಸುಗಳಾಗಿ ಸೂಚಿಸುತ್ತಾರೆ; ಸರ್ವಾನುಮತದ ಅಥವಾ ಬಹುಮತದ ಅಭಿಪ್ರಾಯಗಳನ್ನು ರೂಪಿಸುತ್ತಾರೆ. ಕೆಲವೊಮ್ಮೆ ಭಿನ್ನಮತದ ಸದಸ್ಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಅದೇ ವರದಿಯಲ್ಲಿ  ಪ್ರತ್ಯೇಕವಾಗಿ ಲಿಖಿಸುತ್ತಾರೆ.

ಏಕವ್ಯಕ್ತಿ ವರದಿಗಿಂತ ಸಮಿತಿ ವರದಿ ಹೆಚ್ಚು ಮಾಹಿತಿಯುಕ್ತವೂ ವಿಮರ್ಶಿತವೂ ಆಗಿರುತ್ತದೆ; ಹೆಚ್ಚು ಶಿಫಾರಸುಗಳನ್ನು ಒಳಗೊಂಡಿರುತ್ತದೆ; ಅನೇಕ ತಜ್ಞರ ಅನುಬವ ಜ್ಞಾನದರ್ಶನದ ಫಲವಾಗಿ ಮೂಡಿಬಂದಿರುತ್ತದೆ. * ೧. ಆದಕಾರಣ ಹೆಚ್ಚು ಉಪಯುಕ್ತ ವರದಿಯೂ ಆಗಿರುತ್ತದೆ.

ಸಮಿತಿಗಳ ನೇಮಕದಿಂದಲೇ ಅನೇಕ ತಜ್ಞರ ನೆರವನ್ನು ಪಡೆಯುವುದರಿಂದ ಸಮಸ್ಯೆಗಳಿಗೆ ನಾನಾ ರೀತಿಯ ಪರಿಹಾರೋಪಾಯಗಳನ್ನು  ತಿಳಿಯಬಹುದು, ಸಮಸ್ಯೆಗಳ ಕೂಲಂಕಷ ವಿಮರ್ಶೆಗಳನ್ನು ಸಾಧ್ಯವಾಗುವುದು. ಅಲ್ಪಕಾಲದಲ್ಲಿ  ಹೆಚ್ಚು ಮಾಹಿತಿ ಸಿಗುತ್ತದೆ. ನಿಷ್ಪಕ್ಷಪಾತ, ಪರಿಪೂರ್ಣ ಅಭಿಪ್ರಾಯಗಳು ತೌಲನಿಕವಾಗಿ ಮೂಡಿ ಬಂದಿರುತ್ತವೆ.

ಸಮಿತಿವರದಿ:

ಸಂಸ್ಥೆಯೊಂದರ ಮಾರಾಟ ಇಳಿಮುಖವಾದಾಗ ಬಗ್ಗೆ ಕಾರಣಗಳನ್ನು ತಿಳಿಸಲು ಮತ್ತು ಶಿಫಾರಸುಗಳನ್ನು ಮಂಡಿಸಲು ನೇಮಕವಾದಾಗ ಸಮಿತಿ ನೀಡುವ ವರದಿ.

ಮಾದರಿ

ಝಂಝಂ ತಂಪು ಪಾನೀಯ ಸಂಸ್ಥೆ

ಸುರುಚಿ ವಿಲಾಸ
ತಣ್ಣೀರು ನಗರ

ದಿನಾಂಕ: ೧-೭-೧೯೮೭

ವ್ಯವಸ್ಥಾಪಕರು
ಝಂಝಂ ತಂಪು ಪಾನೀಯ ಸಂಸ್ಥೆ
ತಣೀರು ನಗರ

ಮಾನ್ಯರೆ,

ದಿನಾಂಕ ೧-೫-೧೯೮೭ರಂದು ವ್ಯವಸ್ಥಾಪಕರ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯಾನುಸಾರ ನೀವು ತಿಳಿಸಿದ ಪ್ರಕಾರ ಸಂಸ್ಥೆಯ ಝಂ ಝಂ ತಂಪು ಪಾನೀಯಗಳ ಮಾರಾಟವು ಇಳಿಮುಖವಾಗಿರುವುದರ ಬಗ್ಗೆ ಸಮೀಕ್ಷೆ ನಡೆಸಿ, ಅದಕ್ಕೆ ಕಾರಣಗಳನ್ನು ವಿವೇಚಿಸಿ ಸಿದ್ಧಪಡಿಸಿದ ವರದಿಯನ್ನು ಈ ಪತ್ರಕ್ಕೆ  ಲಗತ್ತಿಸಿದೆ. ದಯಮಾಡಿ ಅಂಗೀಕರಿಸಬೇಕಾದಗಿ ಬಿನ್ನಹ. ವರದಿಯಲ್ಲಿ ಸೂಚಿತವಾಗಿರುವ ಶಿಫಾರಸುಗಳ ಅನುಷ್ಠಾನದಿಂದ ಸಂಸ್ಥೆಯ ವ್ಯಾಪಾರದ ಅಭಿವೃದ್ಧಿ ಆಗುತ್ತದೆ ಎಂದು ನಿರೀಕ್ಷಿಸಿದ್ದೇವೆ.

ತಮ್ಮ ವಿಶ್ವಾಸಿಗಳು,
ಸೌಂದರ ರಾಜನ್
ಅಧ್ಯಕ್ಷರು.

ಅಡಕ: ‘ವರದಿ’

ಹಿನ್ನೆಲೆ: ಕಳೆದ ಹತ್ತು ವರ್ಷಗಳಿಂದ ಜನಪ್ರಿಯ ಝಂಝಂ ತಂಪು ಪಾನೀಯಗಳ ವ್ಯಾಪಾರದ ಪ್ರಮಾಣ ಕ್ರಮೇಣ ಕುಗ್ಗುತ್ತಿರುವುದನ್ನು ಕಂಡು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವ್ಯವಸ್ಥಾಪಕರ ಮಂಡಳಿ ನಿರ್ಣಯವೊಂದನ್ನು ಕೈಗೊಂಡಿತು.  ಆ ಪ್ರಕಾರ ತಜ್ಞರ ಉಪಸಮಿತಿಯೊಂದನ್ನು ನೇಮಿಸಿ ಅವರಿಂದ ಸೂಚಿತವಾಗುವ ಶಿಫಾರುಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸುವುದರ ಮೂಲಕ ಸಂಸ್ಥೆಯ ವ್ಯಾಪಾರವನ್ನು ಅಭಿವೃದ್ಧಿಪಡಿಸಬೇಕೆಂದು ನಿರ್ಧರಿಸಲಾಯಿತು.

ಈ ನಿರ್ಣಯಾನುಸಾರ ಶ್ರೀ ಸೌಂದರ ರಾಜನ್ ಅಧ್ಯಕ್ಷರು, ಶ್ರೀ ಮೋಹನ್‌ರಾವ್ ಕಾರ್ಯದರ್ಶಿ ಶ್ರೀಗಳಾದ ಕಾಂತರಾಜ್, ದಿವ್ಯಸ್ಪರ್ಶಪ್ಪ, ಥಳಕಣ್ಣ, ಉಜ್ವಲಾಬಾಯಿ, ಸಹಸ್ರಕಿರಣ ಈ ಐವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.

ಮೇಲ್ಕಂಡ ಸಮಿತಿಯಲ್ಲಿರುವ ನಾವು ಕೂಲಂಕಷ ಸಮೀಕ್ಷೆ ನಡೆಸಿ, ಈ ಕೆಳಕಂಡ ವರದಿಯನ್ನು ನಿರ್ದೇಶಕರ ಮಂಡಳಿಗೆ ಒಪ್ಪಿಸುತ್ತಿದ್ದೇವೆ.

ಸಮೀಕ್ಷೆ: ಸಂಸ್ಥೆಯು ಕಳೆದ ಹತ್ತು ವರ್ಷಗಳ ವ್ಯಾಪಾರದ ವಾರ್ಷಿಕ ವರದಿಗಳನ್ನೂ ಸಂಬಂಧಿಸಿದ ಪತ್ರವ್ಯವಹಾರವನ್ನೂ ತೌಲನಿಕವಾಗಿ ಪರಾಮರ್ಶಿಸಲಾಯಿತು. ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿದ ಇತರ ಕಂಪನಿಗಳ ಪಾನೀಯಗಳೊಂದಿಗೆ ಹೋಲಿಸಿ ನೋಡಲಾಯಿತು. ತಯಾರಿಕೆಯಲ್ಲಿ ಲೋಪವೇ? ಉಳೀದ ತಯಾರಿಕೆಗಳ ಸ್ಪರ್ಧಾ ಲೋಪವೇ? ಎಂಬುದನ್ನು ಪರಿಶೀಲಿಸಲಾಯಿತು. ಸಂಸ್ಥೆಯ ತಂಪು ಪಾನೀಯಗಳನ್ನು ಮಾರಾಟ ಮಾಡುವ  ಸಗಟು ವ್ಯಾಪಾರಿಗಳನ್ನೂ ಚಿಲ್ಲರೆ ವ್ಯಾಪಾರಿಗಳನ್ನೂ ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

‘ಝಂಝಂ ತಂಪು ಪಾನೀಯ’ವನ್ನು ಬಳಸುವ ಗ್ರಾಹಕರಿಗೆ ಮೊದಲಿನಿಂದ ನೀವು ಕುಡಿಯುವ ತಂಪು ಪಾನೀಯ ಯಾವುದು? ಈಗ ಕುಡಿಯುತ್ತಿರುವುದು ಯಾವುದು? ಏಕೆ? ನೀವು ಈ ತಂಪು ಪಾನೀಯಗಳನ್ನು ಕುಡಿಯಲು ಕಾರಣಗಳೇನು? ಅವುಗಳಲ್ಲಿ ನೀವು ಕಂಡುಕೊಂಡ ವೈಶಿಷ್ಟ್ಯಗಳೇನು? ಇತ್ಯಾದಿ ಪ್ರಶ್ನಾವಿಯನ್ನು ಕಳಿಸಿ ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಮಾರುಕಟ್ಟೆಯಲ್ಲಿ ಲಭ್ಯವಿರುವ ತಂಪು ಪಾನೀಯಗಳ ಮಾರಾಟದ ಪ್ರಮಾಣ, ಸೀಸೆಗಳ ಆಕಾರ, ಪ್ರಚಾರ ಸಾಹಿತ್ಯ, ಮಾರಾಟದ ಕ್ಷೇತ್ರಗಳ ವ್ಯಾಪ್ತಿ, ವ್ಯಾಪಾರಗಳ ಸ್ಥಾನಮಾನ, ಅವರು ಒಟ್ಟು ತಂಪು ಪಾನೀಯಗಳ ಮಾರಾಟದಲ್ಲಿ ನಮ್ಮ ಸಂಸ್ಥೆಯ ತಂಪು ಪಾನೀಯದ ಮಾರಾಟ ಪ್ರಮಾಣ ಇತ್ಯಾದಿಗಳನ್ನು ಗಮನಿಸಲಾಯಿತು.

ಈಚೆಗೆ ಪತ್ರಿಕೆ, ರೇಡಿಯೋ, ದೂರದರ್ಶನಗಳಲ್ಲಿ ತಂಪು ಪಾನೀಯಗಳ ಬಳಕೆ ಬಗ್ಗೆ ಬರುತ್ತರುವ ಜಾಹಿರಾತುಗಳು, ಅವಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ-ಇವುಗಳನ್ನು ಸಮೀಕ್ಷಿಸಲಾಯಿತು ಸಮಿತಿ ಹಲವು ಬಾರಿ ಸಭೇ ಸೇರಿ ಕಲೆ ಹಾಕಿದ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಿ, ಚರ್ಚಿಸಿತು.

ವ್ಯಾಪಾರದ ಇಳುವರಿಗೆ ಕಾರಣಗಳು: ಕಳೆದ ಹತ್ತು ವರ್ಷಗಳಿಂದ ಝಂ ಝಂ ತಂಪು ಪಾನೀಯ ಮೊದಲಿದ್ದ ತನ್ನ ಜನಪ್ರಿಯತೆಯನ್ನು ಕ್ರಮೇಣ ಕಳೆದುಕೊಳ್ಳಲು ಕಾರಣಗಳೆಂದರೆ: ಗುಣಮಟ್ಟ ಕುಗ್ಗಿರುವುದು, ರುಚಿ ವ್ಯತ್ಯಾಸವಾಗಿರುವುದು, ಸೀಸೆಗಳ ಗಾತ್ರ ಕುಗ್ಗಿರುವುದು, ಬೆಲೆ ದುಬಾರಿಯಾಗಿರುವುದು ಇತ್ಯಾದಿ.

ಇದೇ ಅವಧಿಯಲ್ಲಿ ಇತರೆ ತಂಪು ಪಾನೀಯ ಸಂಸ್ಥೆಗಳ ಅಸ್ತಿತ್ವಕ್ಕೆ ಬಂದು ಅವು ನವೀನ ಪ್ರಚಾರದೊಂದಿಗೆ ಆಕರ್ಷಕ ದರಗಳಲ್ಲಿ ಗ್ರಾಹಕರಿಗೆ ಸರಬರಾಜು ಮಾಡುತ್ತಿವೆ. ಜನರು ಬದಲಾವಣೆಗಾಗಿ ಅವುಗಳತ್ತ ಒಲಿಯುತ್ತಿದ್ದಾರೆ.

ಪತ್ರಿಕೆ, ಟಿ.ವಿ, ರೇಡಿಯೋಗಳಲ್ಲಿ ನಮ್ಮ ಸಂಸ್ಥೆಯ ತಂಪು ಪಾನೀಯದ ಬಗ್ಗೆ ಜಾಹೀರಾತುಗಳು ಹೆಚ್ಚು ಆಕರ್ಷಕವಾಗಿ ಮೂಡಿ ಬರುತ್ತಿಲ್ಲ ಮತ್ತು ಹೊಸ ರೀತಿಯ ವಿನ್ಯಾಸಗಳನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ ನಮ್ಮ ಜಾಹೀರಾತುಗಳು ವಿಶೇಷವಾಗಿ ಯುವಜನರನ್ನು ಆಕರ್ಷಿಸುತ್ತಿಲ್ಲ.

ಸರಬರಾಜು ವ್ಯವಸ್ಥೆಯಲ್ಲಿ ತಡವಾಗುತ್ತಿರುವುದು, ಕೆಲವು ಕಡೆ ಸರಬರಾಜುದಾರರು ಸೌಜನ್ಯದಿಂದ ವರ್ತಿಸುದಿರುವುದು ಮತ್ತೊಂದು ಮುಖ್ಯ ಕಾರಣ-ಮಾರಾಟದಲ್ಲಿ ಇಳಿಮುಖವಾಗಲು. ಉಳಿದ ಸಂಸ್ಥೆಗಳು ನಮ್ಮ ಸಂಸ್ಥೆಗಿಂತ ಹೆಚ್ಚಿನ ಸೋಡಿಯನ್ನು ಕೊಡುತ್ತವೆ; ಮಾರಾಟ ವಿಧಾನದಲ್ಲಿ ಹೊಸ ಹೊಸ ರೀತಿಗಳನ್ನು ಅಳವಡಿಸಿಕೊಂಡಿವೆ. ಮನೆ ಮನೆಗೆ ಮಾರಾಟ, ಮಾರಾಟಕ್ಕೆ ಯುವತಿಯರ ನೇಮಕ, ಆಕರ್ಷಕ ಜಾಹಿರಾತು, ಕರಪತ್ರಗಳ ಹಂಚಿಕೆ, ರುಚಿ ನೋಡಲು ಉಚಿತ ಹಂಚಿಕೆಗೆ ವಿಶಿಷ್ಟ ರೀತಿಯ ಸೀಸೆಗಳಲ್ಲಿ ತಯಾರಿಕೆ, ವಿಶೇಷ ಸಾಂಸ್ಕೃತಿಕ  ಕಾರ್ಯಕ್ರಮಗಳ ನಡುವೆ ಪ್ರಚಾರ, ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿತರಣೆಗೆ ವ್ಯವಸ್ಥೆ ಮಾಡಲು ಹೆಚ್ಚು ಗಮನ ನೀಡುವುದು-ಇವೇ ಮೊದಲಾದ ಕಾರಣಗಳಿಂದ ಶೇ. ೬೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಝಂಝಂ ತಂಪು ಪಾನೀಯದ ವ್ಯಾಪಾರ ಹೆಚ್ಚುತ್ತದೆ.

ಶಿಫಾರಸುಗಳು: ೧) ಗುಣ ನಿಯಂತ್ರಣ: ಮೊದಲನೆಯದಾಗಿ ಸಂಶೋಧಕರನ್ನು ನೇಮಿಸಿಕೊಂಡು ಹೊಸ ರುಚಿಯ ತಯಾರಿಕೆಗೆ ಪ್ರಯತ್ನಿಸಬೇಕು. ಮಾರುಕಟ್ಟೆಯಲ್ಲಿರುವ ತಂಪು ಪಾನೀಯಗಳ ರುಚಿಯನ್ನು ಗಮನಿಸಿ ಇನ್ನೂ ಹೆಚ್ಚು ರುಚಿಯ ಪಾನೀಗಳನ್ನು ತಯಾರಿಸಬೇಕು.

೨) ಸೀಸೆಗಳು: ಸೀಸೆಗಳ ಮೇಲಿನ ಚೀಟಿಗಳನ್ನು ಮನ ಸೆಳೆಯುವ ರೀತಿಯಲ್ಲಿ ಮುದ್ರಿಸಬೇಕು. ಸೀಸೆಗಳ ಆಕಾರವನ್ನು ಆಕರ್ಷಕವಾಗಿ ಬದಲಿಸಬೇಕು. ಈ ಬಗ್ಗೆ ಸೀಸೆ ತಯಾರಿಕೆಯವರಲ್ಲಿ ಹೊಸ ವಿನ್ಯಾಸ ರೂಪಿಸಲು ಪ್ರಯತ್ನಿಸಬೇಕು.

೩) ಸೌಜನ್ಯ ವರ್ತನೆ: ವಿಶೇಷವಾಗಿ ಅಂಗಡಿಗಳಿಗೆ ಹೋಗಿ ಮಾರಾಟ ಮಾಡುವವರು, ಸರಬರಾಜು ಮಾಡುವ ಸಿಬ್ಬಂದಿಯವರು ಸೌಜನ್ಯದಿಂದ ವರ್ತಿಸಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು.

೪) ಪ್ರಚಾರ: ಪ್ರಚಾರ ಶಾಖೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕು. ವಿನ್ಯಾಸಕಾರರನ್ನೂ  ಆಕರ್ಷಕ ಜಾಹಿರಾತು ರಚಕರನ್ನೂ ಸಂಸ್ಥೆಗಾಗಿ ನೇಮಿಸಿಕೊಳ್ಳಬೇಕು.

೫) ತಜ್ಞರು: ಮಾರಾಟದ ಕಲೆಯಲ್ಲಿ ತಜ್ಞರಾದವರನ್ನು ಸಲಹೆಗಾರರನ್ನಾಗಿ ಇಟ್ಟುಕೊಳ್ಳಬೇಕು.

೬) ಜಾಹೀರಾತು: ಪತ್ರಿಕೆ, ಟಿ.ವಿ, ರೇಡಿಯೋಗಳಲ್ಲಿ ಪ್ರಚಾರಕ್ಕಾಗಿ ಹೆಚ್ಚು ಹಣ ವಿಇಯೋಗಿಸಬೇಕು; ಭಿನ್ನ ರೀತಿಗಳಲ್ಲಿ ಜಾಹೀರಾಉಗಳನ್ನು ನೀಡಬೇಕು.

೭) ವ್ಯವಸ್ಥೆ: ಕರಪತ್ರ ಹಂಚಿಕೆ, ಮನೆಮನೆಗೆ ಭೇಟಿ, ಸಮಾರಂಭಗಳ ವ್ಯವಸ್ಥೆ, ನಡುನಡುವೆ ಪಾನೀಯಗಳ ಹಂಚಿಕೆ ಇವೇ ಮೊದಲಾದ ಕ್ರಮಗಳನ್ನು ಕೈಗೊಳ್ಳಬೇಕು.

೮) ವಿಶೇಷ ಗಮನ: ಇದುವರೆಗೆ  ಸಂಸ್ಥೆಯ ತಂಪು ಪಾನೀಯ ಮಾರಾಟ ಮಾಡದಿರುವ ಪ್ರದೇಶಗಳಲ್ಲಿ ಬಳಕೆಗೆ ತರಲು ಹೆಚ್ಚಾಗಿ ಗಮನವೀಯಬೇಕು.

೯) ರಿಯಾಯಿತಿ: ಹೆಚ್ಚು ಪ್ರಮಾಣದ ವ್ಯಾಪಾರ ಮಾಡುವವರಿಗೆ ಹೆಚ್ಚಿನ ರಿಯಾಯಿತಿಯನ್ನು, ಸಿಬ್ಬಂದಿಗೆ ಲಾಭಾಂಶ ಹಂಚಿಕೆಯನ್ನೂ ನೀಡಬೇಕು. ಸಾಲಸೌಲಭ್ಯವನ್ನೂ ಹೆಚ್ಚಿಸಬೇಕು.

೧೦) ಪರಾಮರ್ಶೆ: ಕಾಲಕಾಲಕ್ಕೆ ಅಂದರೆ ಸುಮಾರು ಮೂರು ತಿಂಗಳಿಗೊಮ್ಮೆ ಮಾರುಕಟ್ಟೆಯ ಸ್ಥಿತಿಗತಿಗಳ ಸಮೀಕ್ಷೆ ಹಾಗೂ ವಹಿವಾಟುಗಳನ್ನು ಪರಾಮರ್ಶಿಸುತ್ತಿರಬೇಕು.

* * *