ಏಕ ವ್ಯಕ್ತಿ ವರದಿಯನ್ನು ಹಲವು ಬಗೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕೆ.ಎಂ.ಕೆ ಅವರು “ವಾಣಿಜ್ಯ ಪ್ರವೀಣನೊಬ್ಬ ತನ್ನ ಕಕ್ಷಿಗಾರನಿಗಾಗಿ ಅವರಿಗೆ ಬೇಕಾದ ವಿಷಯಗಳ ಮೇಲೆ ರಚಿಸುವ ಸಲಹಾತ್ಮಕ ವರದಿ” ಎಂದರೆ, ಎಚ್ಚೆಸ್ಕೆ ಅವರು “ನೌಕರ ತನ್ನ ಯಜಮಾನನಿಗೂ, ಪ್ರವೀಣ ತನ್ನನ್ನು ಈ ಕಾರ್ಯಕ್ಕಾಗಿ ನೇಮಿಸಿಕೊಂಡ ಸಂಸ್ಥೆಗೂ ಸಲ್ಲಿಸುವ ವರದಿ” ಎಂದಿದ್ದಾರೆ.

ಏಕ ವ್ಯಕ್ತಿ ವರದಿಯ ಸಾಮಾನ್ಯ ಲಕ್ಷಣಗಳನ್ನು ಹೀಗೆ ಕ್ರೋಢಿಕರಿಸಬಹುದು: ಏಕವ್ಯಕ್ತಿ ವರದಿ ಉತ್ತಮ ವಾಣಿಜ್ಯ ಪತ್ರದ ಲಕ್ಷಣಗಳನ್ನು ಒಳಗೊಂಡಿರುತ್ತದೆ; ನಿರೂಪಣಾ ವಿಧಾನ ತರ್ಕಬದ್ಧವಾಗಿರುತ್ತದೆ; ವಿವಿಧ ಶೀರ್ಷಿಕೆಗಳಿಂದ ಕೂಡಿದ್ದು  ವಿಭಜನಾತ್ಮಕವಾಗಿರುತ್ತದೆ. ಏಕರೂಪಶೈಲಿಯಿಂದ ಕೂಡಿರುತ್ತದೆ; ಉತ್ತಮ ಪುರುಷ ಏಕವಚನದ ಬಳಕೆಯಿರುತ್ತದೆ. ವರದಿಯ ಪ್ರಾರಂಭದಲ್ಲಿ ಪೀಠಿಕೆ ಅಂತ್ಯದಲ್ಲಿ ಸಾರಾಂಶ ಮತ್ತು ತೀರ್ಪುಗಳು ಇರುತ್ತವೆ. ಏಕವ್ಯಕ್ತಿ ವರದಿಯನ್ನು ಸಲ್ಲಿಸುವ ವ್ಯಕ್ತಿ ಸಾಮಾನ್ಯವಾಗಿ ಆಯಾ ಕ್ಷೇತ್ರಗಳ ಪರಿಣತನಾಗಿರುತ್ತಾನೆ. ೧. ಮೌಖಿಕ ವರದಿಗಳು ಅನೇಕ ವೇಳೆ ಏಕವ್ಯಕ್ತಿ ವರದಿಯೇ ಆಗಿರುತ್ತವೆ. ಬ್ಯಾಂಕ್ ಶಾಖಾ ಕಚೇರಿ ವ್ಯವಸ್ಥಾಪಕ ಕೇಂದ್ರ ಕಚೇರಿಗೆ ಸಲ್ಲಿಸುವ ವರದಿ, ಕಂಪನಿ ಕಾರ್ಯದರ್ಶಿಯ ವರದಿ, ವ್ಯವಸ್ಥಾಪಕ ಸಿಬ್ಬಂದಿಯ ಪರವಾದ  ವರದಿ, ಲೆಕ್ಕ ಪರಿಶೋಧಕರ ವರದಿ ಮೊದಲಾದವು ಏಕವ್ಯಕ್ತಿ ವರದಿಗೆ ನಿದರ್ಶನವಾಗಿವೆ. ಹಿರಿಯ ಅಧಿಕಾರಿಗೆ ಕಿರಿಯ ವಿಭಾಗಾಧಿಕಾರಿ ಸಲ್ಲಿಸುವ ವರದಿಗಳೆಲ್ಲ ಏಕವ್ಯಕ್ತಿ ವರದಿಗಳೇ ಆಗಿವೆ.

ಏಕವ್ಯಕ್ತಿ ವರದಿಗಳು ಪರಿಶೀಲನಾ ವರದಿಗಳೂ ಆಗಿರಬಹುದು; ಶಿಫಾರಸುವರದಿಗಳೂ ಆಗಿಬಹುದು; ೨. ನಿಯತಕಾಲಿಕ ವರದಿಗಳೂ ಅನಿಯಕಾಲಿಕ ವರದಿಗಳೂ ಆಗಿರಬಹುದು; ಔಪಚಾರಿಕ ಅಥವಾ ಅನೌಪಚಾರಿಕ ವರದಿಗಳೂ ಆಗಿರಬಹುದು; ಆದಕಾರಣ ಈ ಬಗೆಯೆ ವರದಿಯೇ ಆಗಿರಬೇಕೆಂಬ ನಿರ್ಬಂಧ ಏಕವ್ಯಕ್ತಿಗೆ ವರದಿಗೆ ಸಲ್ಲದು. ಆದರೆ ಯಾವುದೇ ಸಂದರ್ಭದಲ್ಲಾಗಲಿ ಯಾವುದೇ ಬಗೆಯ ವರದಿಯಾಗಲಿ ವರದಿ ನೀಡಿದ ವ್ಯಕ್ತಿ ಒಬ್ಬನೇ ಎಂಬುದು ಮುಖ್ಯ ಸಂಗತಿಯಾಗಿರುತ್ತದೆ. ಆದ್ದರಿಂದಲೇ ಇದನ್ನು ‘ಏಕವ್ಯಕ್ತಿ-ವರದಿ’ ಎಂದು ಕರೆಯಲಾಗುತ್ತದೆ.

ಏಕವ್ಯಕ್ತಿ ವರದಿ:

ಹೊಸದೊಂದು ಶಾಲಾ ಶಾಖೆಯನ್ನು ಪ್ರಾರಂಭಿಸುವುದು ಬಗ್ಗೆ ಸಲ್ಲಿಸಿದ ಏಕವ್ಯಕ್ತಿ ವರದಿ ಆದರಿ
ಮಾದರಿ

ಡಾ|| ಪುಟ್ಟಣ್ಣ ಎಂ.ಎ, ಪಿಎಚ್.ಡಿ
೪೮, ಜನಸೇನಾ ನಿವಾಸ
ಜನಶಂಕರಿ ಬಡಾವಣೆ
ವಿದ್ಯಾಪುರ

ಗೆ,
ಅಧ್ಯಕ್ಷರು,
ಬಡವರ ಬಂಧು ವಿದ್ಯಾ ಸಂಸ್ಥೆ
ವಿದ್ಯಾಪುರ.

ವಿಷಯ: “ಬಡವರ ಬಂಧು ವಿದ್ಯಾ ಸಂಸ್ಥೆ ಶಾಖೆಯನ್ನು ಜನಶಂಕರಿ ಬಡಾವಣೆಯಲ್ಲಿ ಪ್ರಾರಂಭಿಸುವ ಬಗ್ಗೆ ಸಾಮಾಜಿಕ ಕಾರ್ಯಕರ್ತನಾದ ನಾನು ನೀಡುತ್ತಿರುವ ವರದಿ”.

ಮಾನ್ಯರೆ,

ತಾವು (ದಿನಾಂಕ ೧೯-೧೦-೧೯೮೭ ಪತ್ರಾಂಕ: ಪ್ರೌತೆವ: ೧/೮೭) ಬರೆದ ಪತ್ರದಲ್ಲಿ ‘ಜನಶಂಕರಿ ಬಡಾವಣೆಯಲ್ಲಿ ನಿಮ್ಮ ವಿದ್ಯಾಸಂಸ್ಥೆಯ ಆಶ್ರಯದಲಿ ಪ್ರೌಢಶಾಲೆಯೊಂದನ್ನು ಪ್ರಾರಂಭಿಸುವ ಬಗ್ಗೆ ಇರುವ ಅನುಕೂಲ- ಅನಾನುಕೂಲಗಳನ್ನು ವರದಿ ಮಾಡಲು, ನನ್ನನ್ನು  ನೇಮಿಸಿದ್ದು ಸರಿಯಷ್ಟೆ. ನಾನು ನಡೆಸಿದ ಸಮೀಕ್ಷೆಯಿಂದ ಈ ಕೆಳಕಂಡ ವರದಿಯನ್ನು ಸಲ್ಲಿಸುತ್ತಿದ್ದೇನೆ.

‘ಜನಸಂಕರಿ ಬಡಾವಣೆ’ಯು ಇತ್ತೀಚೆಗೆ ರೂಪುಗೊಂಡದ್ದಾದರೂ ಬಹು ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಯಾಗಿದೆ ಇದಕ್ಕೆ ಮುಖ್ಯ ಕಾರಣವೇನೆಂದರೆ ಇದರ ಒಂದು ಭಾಗವನ್ನು ‘ಕೈಗಾರಿಕಾ ಪ್ರದೇಶ’ವನ್ನಾಗಿ ಘೋಷಿಸಿ, ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಲು ವೀಶೇಷ ನೆರವನ್ನು ನೀಡಿರುವುದೇ ಆಗಿದೆ. ಇದರ ಫಲವಾಗಿ ಹಲವಾರು ಕಐಗಾರಿಕೆಗಳೂ ಕಾರ್ಖಾನೆಗಳೂ ಪ್ರಾರಂಭವಾಗಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರೂ ನೌಕರರೂ ಹೆಚ್ಚು ಸಂಖ್ಯೆಯಲ್ಲಿ ನೆಲಸಿ, ಜನಶಂಕರಿ ಬಡಾವಣೆ ಜಡಾಯಿಸಿದೆ. ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಅನುಕೂಲಕರವಾದ ಚಿಕ್ಕ ಚಿಕ್ಕ ಮನೆಗಳೂ ಗುಡಿಸಲುಗಳೂ ಬಾಡಿಗೆಗೆ ದೊರೆಯುತ್ತಿರುವುದರಿಂದಲೂ, ಹಾಗೆಯೇ ಸಣ್ಣ ಪ್ರಮಾಣದ ಹೋಟೆಲುಗಳೂ ಅಂಗಡಿಗಳೂ ಇತರ ಸಂಸ್ಥೆಗಳೂ ಅಸ್ತಿತ್ವಕ್ಕೆ ಬಂದಿರುವುದರಿಂದಲೂ ಇಲ್ಲಿ ಈಗಿರುವ ಏಕೈಕ ‘ಪ್ರೌಢಶಾಲೆ’ ಎಲ್ಲ ವಿದ್ಯಾರ್ಥಿಗಳಿಗೂ  ಅವಕಾಶಗಳನ್ನು ನೀಡಲು ಸಮರ್ಥವಾಗಿಲ್ಲ ವಿದ್ಯಾರ್ಥಿಗಳನ್ನು ಹೆಚ್ಚಿ ಸಂಖ್ಯೆಯಲ್ಲಿ ಆಕರ್ಷಿಸಲು ಈ ಶಾಲೆಗೆ ಕೆಲವು ಅಡ್ಡಿಗಳಿವೆ.

ಮೊದಲನೆಯದಾಗಿ, ಶಾಲೆ ಬಡಾವಣೆಯ ಮೂಲೆಯಲ್ಲಿದ್ದು ವಿದ್ಯಾರ್ಥಿಗಳು ಹೋಗಿಬರಲು ಶ್ರಮವಾಗುತ್ತದೆ; ಅಲ್ಲದೆ ವಾಹನ ಸಂಚಾರದ ಮಾರ್ಗವೂ ಇಲ್ಲ. ಶಾಲೆಯ ಸುತ್ತಮುತ್ತ ಹೊಲಗದ್ದೆ ತೋಟಗಳಿರುವುದರಿಂದ, ಅಂಗಡಿಮುಂಗಟ್ಟುಗಳಿಲ್ಲದಿರುವುದರಿಂದಲೂ ಶಾಲೆಗೆ ಆಟದ ಮೈದಾನ ಕಟ್ಟಡಗಳು ವಿಶಾಲವಾಗಿಲ್ಲದಿರುವುದರಿಂದಲೂ ಹೆಚ್ಚು ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಶಾಲೆಯ ಆಡಳಿತವರ್ಗ ಇಷ್ಟಪಡದಿರುವುದರಿಂದಲೂ ವಿದ್ಯಾರ್ಥಿಗಳು ನೀಡಲೇಬೇಕಾದ ಕೆಲವು ಶುಲ್ಕಳು ಅತಿ ಹೆಚ್ಚಾಗಿರುವುದರಿಂದ ನಿಜಕ್ಕೂ ಇಲ್ಲಿ ಮಧ್ಯಮ ವರ್ಗದ ಹಾಗೂ ಕೆಳವರ್ಗದ ಮಕ್ಕಳಿಗಾಗಿ ಇನ್ನೊಂದು ಪ್ರೌಢಶಾಲೆಯ ಅಗತ್ಯವಿದೆ.

ಎರಡನೆಯದಾಗಿ ಸುತ್ತಮುತ್ತ ಹಲವಾರು ಉನ್ನತ ಪ್ರಾಥಮಿಕ ಶಾಲೆಗಳಿರುವುದರಿಂದ ಹಾಗೂ ಅವುಗಳ ಫಲಿತಾಂಶ ಅತ್ಯುತ್ತಮವಾಗಿದ್ದು ಕನಿಷ್ಠ ಪಕ್ಷ ಪ್ರತಿವರ್ಷ ೫೦೦ ವಿದ್ಯಾರ್ಥಿಗಳು ಹೊರಬರುತ್ತಾರೆ. ಈಗಿರುವ ಪ್ರೌಢಶಾಲೆ ೨೦೦ಕ್ಕೂ ಹೆಚ್ಚು ಮಂದಿಗೆ ಪ್ರವೇಶಾವಕಾಶವನ್ನು ನೀಡಲಾರದು. ಉಳಿದ ವಿದ್ಯಾರ್ಥಿಗಳು ಬಹುದೂರದ ‘ನಿರಂಜನ ನಗರ’ ಮತ್ತು ‘ಬೈರಾಗಿ ಗುಡ್ಡದ’ ಪ್ರೌಢಶಾಲೆಗಳಿಗೆ ಪ್ರಯಾಸದಿಂದ ಹೋಗಿರಬರಬೇಕಾಗಿದೆ. ಅನೇಕ ತಂದೆ ತಾಯಿಗಳ ಆರ್ಥಿಕ ಅನುಕೂಲ ಅಷ್ಟಾಗಿ ಇಲ್ಲದೆ ಇರುವುದರಿಂದ ಮತ್ತು ಹೆಣ್ಣು ಮಕ್ಕಳನ್ನು ದೂರ ಕಳುಹಿಸಲು ಇಚ್ಛಿಸದೆ ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ; ಮತ್ತೊಂದು ಸಂಗತಿ, ಪ್ರೌಢಶಾಲೆಯ ಶಿಕ್ಷಕರಾಗಲು ಆಸಕ್ತಿಯಿರುವ ಅರ್ಹ ವ್ಯಕ್ತಿಗಳು-ಕೆಲವರು ಇಲ್ಲಿಯೇ ಇದ್ದು, ನಿವೃತ್ತ ಮುಖ್ಯೋಪಾಧ್ಯಾಯರೂ ಸಹ ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಇಲ್ಲಿ ‘ಬಡಾವಣೆಯ ಮಧ್ಯೆ’ ಧರ್ಮಿಷ್ಟರಾದ ದಾನ ಪ್ರಕಾಶ ಉದಾರಪ್ಪನವರು ವಿದ್ಯಾಭಿಮಾನಿಗಳಾಗಿದ್ದು ಅವರಿಗೆ ಸೇರಿದ ಕಟ್ಟಡ ಹಾಗೂ ವಿಶಾಲವಾದ ಒಂದು ನಿವೇಶನ ಪ್ರೌಢಶಾಲೆಯ ಸ್ಥಾಪನೆಗೆ ಅನುಕೂಲಕರವಾಗಿದೆ. ಈ ಎಲ್ಲ ಕಾರಣಗಳಿಂದ ಇಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಲು ಸೂಕ್ತವೂ ಅವಶ್ಯಕವೂ ಆಗಿದೆ ಎಂದು ನಾನು ಅಭಿಪ್ರಾಯ ಪಡುತ್ತೆನೆ.

ಸಲಹೆಗಳು: ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಸಲಹೆಗಳನ್ನು ತಮ್ಮಲ್ಲಿ ನಿವೇದಿಸುತ್ತಿದ್ದೇನೆ.

೧) ಮೇಲ್ಕಾಣಿಸಿದ ‘ಉದಾರಪ್ಪ’ನವರನ್ನು ವಿದ್ಯಾದಾನದ ಕಾರಣ ಮತ್ತು ಬಡಾವಣೆಯ ಜನರ ಅನುಕೂಲಕ್ಕಾಗಿ ಅಲ್ಲಿಯ ಜನರನ್ನು ಒಳಗೊಂಡು ಸಮಿತಿಯ ಮೂಲಕ ಭೇಟಿ ಮಾಡಿ ಪ್ರಾರ್ಥಿಸಿದರೆ ಶಾಲೆಗೆ ಅವರು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಕಟ್ಟಡವನ್ನೂ ಜಾಗವನ್ನೂ ನೀಡಬಹುದು.

೨) ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ವಿಧಿಸುವುದು, ಪುಸ್ತಕ ಭಂಡಾರ ಮತ್ತು ಆಟಪಾಟಗಳ ಅನುಕೂಲ ಹಾಗೂ ಸಮರ್ಥ ಸ್ಥಳೀಯ ವ್ಯಕ್ತಿಗಳ ನೇಮಕ ಮಾಡುವುದರ ಬಗ್ಗೆ ಪ್ರಚಾರ ನೀಡಿದರೆ ಜನ ಸಂಪೂರ್ಣ ಸಹಾಯ-ಸಹಕಾರ ದೊರೆಯುವುದರಲ್ಲಿ ಸಂಶಯವಿಲ್ಲ.

೩) ಕನ್ನಡ ಮಾಧ್ಯಮದಲ್ಲಿ ಓದಲು ಹೆಚ್ಚು ವಿದ್ಯಾರ್ಥಿಗಳು ಆಸಕ್ತರಾಗಿರುವುದರಿಂದ ಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ನಡೆಸುವುದು ಉಚತಿ.

೪) ಮತ್ತೊಂದು ಶಾಲೆಯ ಪ್ರಾರಂಭಕ್ಕೆ ಈಗಿರುವ ಶಾಲೆಯವರು ಖಂಡಿತ ಪ್ರೋತ್ಸಾಹವನ್ನು ನೀಡುವರು. ಏಕೆಂದರೆ, ವಿದ್ಯಾರ್ಥಿಗಳ ಪ್ರವೇಶದ ವಿಪರೀತ ಒತ್ತಡದ ನಿವಾರಣೆಗೆ ಅವರು ಶಾಲೆಯನ್ನು ವಿಸ್ತರಿಸುವ ಸ್ಥಿತಿಯಲ್ಲಿಲ್ಲ.

ಈ ಎಲ್ಲ ಕಾರಣಗಳಿಂದ ‘ಜನಶಂಕರಿ ಬಡಾವಣೆಯಲ್ಲಿ’ ಪ್ರೌಢಶಾಲೆಯೊಂದರ ಅಗತ್ಯವಿದೆ ಮತ್ತು ಅದಕ್ಕೆ ಅನುಕೂಲಗಳಿವೆ ಎಂದು ನಾನು ತಮಗೆ ತಿಳಿಸುತ್ತಿದ್ದೇನೆ. ಜನರ ಸ್ಥಿತಿಗತಿಗಳ್ನು ತಿಳಿಯಲು, ಅವುಗಳ ಪರಿಹಾರಕ್ಕೆ ಪ್ರಯತ್ನವೊಂದನ್ನು ನಡೆಸುವ ಅವಕಾಶ ನೀಡಿದ್ದಕ್ಕಾಗಿ ತಮಗೆ ನಾನು ಋಣಿಯಾಗಿದ್ದೇನೆ.

ಈ ವರದಿ ತಮಗೆ ಉಪಯುಕ್ತವೂ ಮಾರ್ಗದರ್ಶಕವೂ ಆದೀತೆಂದು ನಂಬಿದ್ದೇನೆ; ಮತ್ತು ವರದಿಯನ್ನು ತಾವು ನೀಡಿದ ಒಂದು ತಿಂಗಳ ಅವಧಿಯಲ್ಲಿ ಒಂದು ವಾರ ಮುಂಚಿತವಾಗಿ ಒಪ್ಪಿಸುತ್ತಿದ್ದೇನೆ. ವರದಿಯನ್ನು ಸಿದ್ಧಪಡಿಸಲು ಬೇಕಾದ ಸೌಕರ್ಯಗಳನ್ನು ತಾವು ಒದಗಿಸಿ ವೆಚ್ಚವನ್ನು ಭರಿಸಿದ್ಧಕ್ಕಾಗಿ ತಮಗೆ ನಾನು ಕೃತಜ್ಞನಾಗಿದ್ದೇನೆ.

ತಮ್ಮ ವಿಶ್ವಾಸಿ,
ಡಾ.ಪುಟ್ಟಣ್ಣ
ಸಮಾಜಸೇವಾ ಕಾರ್ಯಕರ್ತ.

ದಿನಾಂಕ ೧೦ನೆಯ ನವೆಂಬರ್, ೧೯೮೭

 

ಏಕವ್ಯಕ್ತಿ ವರದಿ:

ಶರವೇಗ ಯಂತ್ರೋಪಕರಣ ಸಂಸ್ಥೆಯ ಜಂಪಣ್ಣ ನಗರ ಶಾಖೆಯ ಮಾರಾಟದ ಪುನರ್ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಒಪ್ಪಿಸಿದ ವರದಿ.
ಮಾದರಿ

ಶರವೇಗ ಯಂತ್ರಯೋಪಕರಣ ಸಂಸ್ಥೆ
ಸಂಚಾರಪ್ಪನ ಗಲ್ಲಿ, ಪುಷ್ಪಕ ಪುರ

ಜಂಪಣ್ಣ ನಗರ ಶಾಖೆ
ದಿನಾಂಕ: ನವೆಂಬರ್ ೧೫, ೧೯೮೭

ನಿರ್ದೇಶಕರು
ಶರವೇಗ ಯಂತ್ರೋಪಕರಣ ಸಂಸ್ಥೆ

ಮಾನ್ಯರೆ,

‘ಶರವೇಗ ಯಂತ್ರೋಪಕರಣ ಸಂಸ್ಥೆಯ ಜಂಪಣ್ಣನಗರ ಶಾಖೆಯಲ್ಲಿ ಮಾರಾಟದ ಪುನರ್‌ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ದಿನಾಂಕ ೧೫ನೆಯ ಅಕ್ಟೋಬರ್, ೧೯೮೭ರಂದು ತಾವು ಕಳಿಸಿದ ಪತ್ರದನುಸಾರ ಈ ಕೆಳಕಂಡ ವರದಿಯನ್ನು ಸಲ್ಲಿಸುತ್ತಿದ್ದೇನೆ.

ಇಂತು,
ಉದ್ಧಾರಪ್ಪ

ಅಡಕ: ‘ವರದಿ’

ಶರವೇಗ ಯಂತ್ರೋಪಕರಣ ಸಂಸ್ಥೆಯ ಜಂಪಣ್ಣ ನಗರ ಶಾಖೆಯಲ್ಲಿ ಮಾರಾಟದ ಪುನರ್‌ವ್ಯವಸ್ಥೆಯ ಬಗ್ಗೆ ನೀಡಿದ ವರದಿ:

ಸಂಸ್ಥೆಯ ಶಾಖೆಯು ಜಂಪಣ್ಣ ನಗರದ ಗಡಿಬಿಡಿ ರಸ್ತೆಯಲ್ಲಿ, ಕೇಂದ್ರ ಸ್ಥಾನದಲ್ಲಿ ಇದೆ. ನಗರದ ಬಹುತೇಕ ಯಂತ್ರೋಪಕರಣಗಳ ಅಂಗಡಿಗಳು ಈ ರಸ್ತೆಯಲ್ಲಿಯೇ ಇವೆ. ಹೀಗಾಗಿ ಎಲ್ಲ ಬಗೆಯ ಯಂತ್ರೋಪಕರಣಗಳೂ ಅವುಗಳ ಬಿಡಿ ಭಾಗಗಳೂ ಇಲ್ಲಿ ದೊರೆಯುತ್ತವೆ ಎಂದು ನಗರದ ನಾನಾ ಕಡೆಗಳಿಂದ ಜನರು ಬರುತ್ತಾರೆ.

ಶರವೇಗ ಯಂತ್ರೋಪಕರಣಗಳು ಬಾಳಿಕೆ ಬರುವಂಥವೂ, ಕಡಿಮೆ ಬೆಲೆಯಲ್ಲಿ ಸಿಗುವುದರಿಂದಲೂ ಉಳಿದ ಕಡೆಗಳಿಗಿಂತ ಜನಸಂದಣಿ  ಇಲ್ಲಿ ಹೆಚ್ಚಾಗಿದೆ. ಸ್ಥಳಾಭಾವ, ಜನದಟ್ಟಣೆ, ಸಿಬ್ಬಂದಿ ಸಂಖ್ಯೆಯ ಕೊರತೆಗಳಿಂದ ಇಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಅವ್ಯವಸ್ಥೆ ತಲೆದೋರಿರುವುದು ಸ್ವಾಭಾವಿಕವಾಗಿದೆ. ಶಾಖೆ ಪ್ರಾರಂಭ ಮಾಡಿದಾಗ ಇದೇ ಪ್ರದೇಶದಲ್ಲಿ ಈ ಬಗೆಯ ಇತರ ಅಂಗಡಿಗಳು ಪ್ರಾರಂಭವಾಗುತ್ತವೆ ಎಂಬುದು ತಿಳಿದಿರಿಲಿಲ್ಲ. ವ್ಯಾಪಾರವು ಶೀಘ್ರವಾಗಿ ವೃದ್ಧಿಯಾಗಿರುತ್ತದೆ ಎಂದು ವ್ಯವಸ್ಥಾಪಕರು ಊಹಿಸಿರಲಿಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ತಲೆ ದೋರಿವೆ. ಇಲ್ಲಿರುವ ಅವ್ಯವಸ್ಥೆಗೆ ಕಾರಣವಾದ ಸಂಗತಿಗಳನ್ನು ಹೀಗೆ ವರ್ಗೀಕರಿಸಿ ವಿವರಿಸಬಹುದಾಗಿದೆ.

೧) ಸ್ಥಳಾಭಾವದ ಸಮಸ್ಯೆಗಳು: ಕಟ್ಟಡವು, ಕಚೇರಿ ಮತ್ತು ಮಾರಾಟ ವಿಭಾಗಗಳೆರಡಕ್ಕೂ ಸಾಕಾಗುವುದಿಲ್ಲ. ಇದರ ಪರಿಣಾಮವಾಗಿ ಕಚೇರಿಯಲ್ಲಿ ನಿಶ್ಯಬ್ದವಾಗಿ ಕೆಲಸ ಮಾಡಲೂ ಕಾಗದ ಪತ್ರಗಳನ್ನು ವ್ಯವಸ್ಥಿತವಾಗಿಡಲೂ ಬೇಕಾದ ಬೀರು(ಕಪಾಟು) ಇತ್ಯಾದಿಗಳ್ನು ಇಟ್ಟುಕೊಳ್ಳಲೂ ಸ್ಥಳಾವಕಾಶ ಸಾಲದಾಗಿದೆ. ಸಿಬ್ಬಂದಿ ವರ್ಗದವರಿಗೆ, ವಿಶ್ರಾಂತಿಪಡೆಯಲು ಎಡೆಯಿಲ್ಲ. ತಿರುಗಾಡುವುದಕ್ಕೆ ಮೀಸಲಾದ ದಾರಿ ಕಿಷ್ಕಿಂಧೆಯಾಗಿದೆ. ಯಂತ್ರೋಪಕರಣಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಲು ಸಾಧ್ಯವಿಲ್ಲದೆ ಎಲ್ಲೆಂದರಲ್ಲಿ ರಾಶಿರಾಶಿಯಾಗಿ ಬಿದ್ದಿವೆ; ಬಿಡಿ ಭಾಗಗಳನ್ನು ಪ್ರತ್ಯೇಕವಾಗಿಡಲು ಎಡೆಯಿಲ್ಲದೆ ಒಂದರೊಂದಿಗೆ ಇನ್ನೊಂದು ಪೇರಿಸಿದೆ. ಗ್ರಾಹಕರು ಕೇಳುವ ಭಾಗಗಳನ್ನು ಹುಡುಕಿ ತೆಗೆದು ಕೊಡಲು ಹೆಚ್ಚು ಕಾಲ ಹಿಡಿಯುತ್ತದೆ. ಅಷ್ಟೇ ಅಲ್ಲ, ವೃಥಾ ಶ್ರಮವಾಗುತ್ತದೆ. ಇದರಿಂದ ಗಿರಾಕಿಗಳಿಗೂ ಬೇಸರವಾಗುತ್ತದೆ. ಕೇಂದ್ರ ಸಂಸ್ಥೆಯಿಂದ ಬಂದ ಸರಕನ್ನಯು ಲೆಕ್ಕ ಮಾಡಿ ತೆಗೆದುಕೊಳ್ಳುವ ಮುಂಚೆ ಅದನ್ನು ಇಳಿಸಿ ಇಡಲು ಪ್ರತ್ಯೇಕ ಜಾಗವಿಲ್ಲ. ಹೀಗೆ ಸ್ಥಳಾಭಾವದಿಂದ ಹಲವಾರು ಅವ್ಯವಸ್ಥೆಗಳುಂಟಾಗಿದೆ.

೨) ಸಿಬ್ಬಂದಿ: ಸಿಬ್ಬಂದಿ ವರ್ಗದವರ ಸಂಖ್ಯೆ ಏನೇನೂ ಸಾಲದಾಗಿದೆ. ಲೆಕ್ಕ ಪತ್ರಗಳಿಡುವ ಕಚೇರಿಯನ್ನೂ ಸಿಬ್ಬಂದಿಯನ್ನೂ ಹೆಚ್ಚಿಸುವ ಅವಶ್ಯಕತೆ ಇದ್ದರೂ ಅದಕ್ಕಿಂತ ಹೆಚ್ಚಾಗಿ ಮಾರಾಟದ ವಿಭಾಗದಲ್ಲಿ ಸಹಾಯಕರನ್ನು ಕೂಡಲೇ ನೇಮಿಸಬೇಕು. ಏಕೆಂದರೆ, ಗುಂಪುಗುಂಪಾಗಿ ಬರುವ ಗ್ರಾಹಕರಿಗೆ ಬೇಕಾದ ಭಾಗಗಳನ್ನು ತೆಗೆದುಕೊಡಲು, ಬಿಲ್ಲು ಹಾಕಲು ಪೂರ್ಣ ಯಂತ್ರಗಳನ್ನು ಕೊಳ್ಳುವವರಿಗೆ ಅವುಗಳ ಕಾರ್ಯ ವಿಧಾನವನ್ನು  ತಿಳಿಸಲು ಈಗಿರುವ ನಾಲ್ಕು ಮಂದಿ ಏನೇನೂ ಸಾಲದು. ಈ ಮಧ್ಯೆ ಉಪಕರಣಗಳ ಬಗ್ಗೆ ವಿಚಾರಿಸಲು ಬಂದವರಿಗೆ ಉತ್ತರ ಹೇಳುವವರೇ ಇಲ್ಲ.

ಮೇಲ್ಕಂಡ ಮಾರಾಟದ ಕಾಲದಲ್ಲಿ ಸಿಬ್ಬಂದಿ ವರ್ಗದವರಿಗಿರುವ ಕಷ್ಟ ಹಾಗೂ ಗ್ರಾಹಕರಿಗೆ ಆಗುತ್ತಿರುವ ಅನಾನುಕೂಲಗಳಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಹೋಗಲಾಡಿಸಲು ಈ ಕೆಳಕಂಡ ಸಲಹೆ-ಸೂಚನೆಗಳನ್ನು ನೀಡುತ್ತಿದ್ದೇನೆ:

೧) ಈಗಿರುವ ಶಾಖೆಯನ್ನು ಬೇರೆ ಕಡೆ ಇರುವ ವಿಶಾಲವಾದ ಕಟ್ಟಡಕ್ಕೆ ವರ್ಗಾಯಿಸಬೇಕು. ಸದ್ಯಕ್ಕೆ ಅದೇ ಕಟ್ಟಡದಲ್ಲಿ ಖಾಲಿ ಇರುವ ಭಾಗವನ್ನು ಬಾಡಿಗೆಗೆ ಪಡೆದು ಹೆಚ್ಚಿನ ಸರಕನ್ನೂ ಕಚೇರಿಯ ಸಿಬ್ಬಂದಿಯನ್ನೂ ಅಲ್ಲಿಗೆ ವರ್ಗಾಯಿಸಿ ಕೇವಲ ಮಾರಾಟ ವಿಭಾಗದ ಅಧಿಕಾರಿ-ಸಹಾಯಕರಿಗೆ ಈ ಭಾಗವನ್ನು ಮೀಸಲಿಡುವುದು.

೨) ಸಾಕಷ್ಟು ಪೀಠೋಪಕರಣ, ಗೋಡೆಗಳಿಗೆ ಒರಗು ಮಾಡಗಳು- ಮುಂತಾದವನ್ನು ಒದಗಿಸಿ, ಸರಕನ್ನು ಅಚ್ಚುಕಟ್ಟಾಗಿ ಜೋಡಿಸುವುದು; ಇರುವ ಸ್ಥಳದಲ್ಲೇ ಎಡಕ್ಕೆ ಬಿಡಿಭಾಗ ಮಾರಾಟ, ಬಲಕ್ಕೆ ಪೂರ್ಣಯಂತ್ರ ಮಾರಾಟ ವಿಭಾಗಗಳನ್ನೇರ್ಪಡಿಸುವುದು.

೩) ಹೊಸ ಸಿಬ್ಬಂದಿಯನ್ನು ಕನಿಷ್ಟ ಪಕ್ಷ ಎಂಟು ಜನರನ್ನು ಮಾರಾಟ ವಿಭಾಗಕ್ಕೆ ನೇಮಿಸುವುದು ಅಥವಾ ಬೇರೆ ಶಾಖೆಯಿಂದ ವರ್ಗಾಯಿಸುವುದು.

೪) ಕೇಂದ್ರ ಸಂಸ್ಥೆಯಿಂದ, ಮಾರಾಟ ವೇಳೆ ಬಿಟ್ಟು ಬೇರೆ ವೇಳೆಯಲ್ಲಿ ತಲುಪುವಂತೆ ಸರಕನ್ನು ತರಿಸುವುದು.

೫) ವಿಚಾರಣೆಗೂ ವಿವರಣೆಗಳನ್ನು ನೀಡಲೂ ಬಂದ ಗ್ರಾಹಕರನ್ನು ಸ್ವಾಗತಿಸಲು ಪ್ರತ್ಯೇಕ ವಿಚಾರಣಾಧಿಕಾರಿಯನ್ನು ನೇಮಿಸುವುದು.

೬) ಒಬ್ಬ ಬೆರಳಚ್ಚುಗಾರರು, ಇಬ್ಬರು ಸಹಾಯಕರು, ಇಬ್ಬರು ಲೆಕ್ಕದ ಗುಮಾಸ್ತರನ್ನು ಕಚೇರಿ ವಿಭಾಗಕ್ಕೆ ನೇಮಿಸುವುದು.

ಮೇಲ್ಕಂಡ ಸೂಚನೆ-ಸಲಹೆಗಳನ್ನು ಅನುಸರಿಸಿದರೆ ಗ್ರಾಹಕರಿಗಾಗುತ್ತಿರುವ ತೊಂದರೆಗಳನ್ನೂ ಕಚೇರಿಯ ಕೊರತೆಗಳನ್ನೂ ತಕ್ಕಮಟ್ಟಿಗಾದರೂ ತಕ್ಷಣವೇ ಹೋಗಲಾಡಿಸಲು ಶಕ್ಯವಿದೆ ಎಂದು ಭಾವಿಸಿದ್ದೇನೆ.

ಇಂತು,
ಉದ್ಧಾರಪ್ಪ
ವ್ಯವಸ್ಥಾಪಕರ ವಿಭಾಗ
ಕೇಂದ್ರ ಕಚೇರಿ
ಶರವೇಗ ಯಂತ್ರೋಪಕರಣ ಸಂಸ್ಥೆ