ಕಾರ್ಯದರ್ಶಿಯ ಸ್ಥಾನಸ್ವರೂಪ: ‘ಕಂಪನಿಯ ಕಾರ್ಯದರ್ಶಿ’ ಎಂಬ ಮಾತಿನಲ್ಲಿರುವ ‘ಕಂಪೆನಿ’ ಎಂಬುದು ಒಂದು ವಿಶಿಷ್ಟ ಸಂಸ್ಥೆಯಾದರೆ, ‘ಕಾರ್ಯದರ್ಶಿ’ ಎಂಬುವನು ವಿಶೇಷ ಕರ್ತವ್ಯಗಳ ನಿರ್ವಹಣೆಯ ವ್ಯಕ್ತಿಯಾಗಿರುತ್ತಾನೆ. ಕಂಪೆನಿಯ ಸ್ವರೂಪ ಪರಿಚಯಗಳಾದ ಮೇಲೆ ಕಾರ್ಯದರ್ಶಿಯ ಕಾರ್ಯ ಸ್ವರೂಪದ ಪರಿಚಯ ಅಗತ್ಯವಿದೆ; ಏಕೆಂದರೆ ಕಂಪೆನಿಯ ವ್ಯವಹಾರಗಳ ಸೂತ್ರಧಾರಿ ಕಾರ್ಯದರ್ಶಿ, ಕಾರ್ಯದರ್ಶಿ ಪದದ ಅರ್ಥ ವ್ಯಾಪ್ತಿ ಸೀಮಿತವಾದುದಲ್ಲ, ವ್ಯಾಪಕವಾದುದು.

ಇಂಗ್ಲಿಷ್ ಭಾಷೆಯಲ್ಲಿರುವ ‘ಸೆಕ್ರೆಟರಿ’, ಎಂಬ ಪದಕ್ಕೆ ಸಮಾನಾರ್ಥಕವಾಗಿ ಕನ್ನಡದಲ್ಲಿ ‘ಕಾರ್ಯದರ್ಶಿ’ ಎಂಬ ಪದವನ್ನು ಬಳಸುತ್ತಿದ್ದೇವೆ. ಇಂಗ್ಲಿಷಿನ ‘ಸೆಕ್ರೆಟರಿ’ ಪದದ ಮೂಲ ಲ್ಯಾಟಿನ್ ಭಾಷೆಯ ‘ಸೆಕ್ರೆಟೇರಿಯಸ್’ ಎಂದರೆ ‘ರಹಸ್ಯ’ ಸಂಗತಿಗಳನ್ನು ಲಿಖಿತಗೊಳಿಸುವುದು ಎಂದರ್ಥ. ಆದರೆ ಇಂದು ಕಾರ್ಯದರ್ಶಿಯ ಕಾರ್ಯ ವ್ಯಾಪ್ತಿ ಕೇವಲ ಗೋಪ್ಯ ವಿಷಯಗಳ ಲೇಖನ ಕಾರ್ಯಕ್ಕಷ್ಟೇ ಸೀಮಿತಗೊಂಡಿಲ್ಲ, ಅದನ್ನು ಮೀರಿ ಹಬ್ಬಿದೆ; ಲೇಖನ ಕಾರ್ಯ, ಪವ್ರವ್ಯವಹಾರ, ಲೆಕ್ಕಪತ್ರಗಳ ಮೇಲ್ವಿಚಾರಣೆ, ಮಾಹಿತಿ ಸಂಗ್ರಹಣೆ, ಸಭೆಗಳ ವ್ಯವಸ್ಥೆ, ವರದಿ ತಯಾರಿ ಮೊದಲಾದ ಕಾರ್ಯಗಳನ್ನು ಕಾರ್ಯದರ್ಶಿ ನಿರ್ವಹಿಸುತ್ತಾನೆ. ಕಾರ್ಯದರ್ಶಿ ಎಂಬ ಸ್ಥಾನ ಕೇವಲ ಕಂಪೆನಿಗಳಲ್ಲಿ ಮಾತ್ರ ಇರುತ್ತದೆ ಎನ್ನಲಾಗುವುದಿಲ್ಲ. ವ್ಯಾಪಾರ, ಕೈಗಾರಿಕಾ ಕ್ಷೇತ್ರ, ಕಲೆ-ಸಾಹಿತ್ಯ, ವೈಜ್ಞಾನಿಕ ಸಂಸ್ಥೆಗಳಲ್ಲಿಯೂ ಕಾರ್ಯದರ್ಶಿಯ ಹುದ್ದೆಯನ್ನು ಕಾಣಬಹುದು. ಆದರೆ ಕಂಪನಿ ಕಾರ್ಯದರ್ಶಿ ವ್ಯವಹಾರಕ್ಕೂ ಉಳಿದ ಕ್ಷೇತ್ರಗಳ ಕಾರ್ಯದರ್ಶಿ ವ್ಯವಹಾರಕ್ಕೂ ಸಾಕಷ್ಟು ಅಂತರಗಳಿವೆ. ಇಲ್ಲಿ ಕಂಪೆನಿಯ ಕಾರ್ಯದರ್ಶಿಯ ವ್ಯವಹಾರವನ್ನಷ್ಟೇ ಗಮನಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ನಾನಾ ಬಗೆಯ ಕಾರ್ಯದರ್ಶಿಗಳನ್ನು ಇಲ್ಲಿ ಹೆಸರಿಸಬಹುದು. ಆಪ್ತ ಕಾರ್ಯದರ್ಶಿ, ಕಾರ್ಮಿಕ ಕಾರ್ಯದರ್ಶಿ, ಸಹಕಾರ ಸಂಘಗಳ ಕಾರ್ಯದರ್ಶಿ, ಶಿಕ್ಷಣ ಕಾರ್ಯದರ್ಶಿ, ವಿಶ್ವಸಂಸ್ಥೆ ಕಾರ್ಯದರ್ಶಿ ಮೊದಲಾದ ವಿವಿಧ ಬಗೆಯ ಕಾರ್ಯದರ್ಶಿಗಳ ಪೈಕಿ ಕಂಪೆನಿ ವ್ಯವಹಾರ ಮತ್ತು ಇತರ ವ್ಯವಹಾರಗಳನ್ನು ನೋಡಿಕೊಳ್ಳುವ ಕಂಪೆನಿ ಕಾರ್ಯದರ್ಶಿ ಒಬ್ಬನಾಗಿದ್ದಾನೆ.

ಮಹತ್ವ: ಕಂಪೆನಿ ಕಾರ್ಯಾಲಯದ ನೇತಾರನೇ ಕಾರ್ಯದರ್ಶಿ. ಷೇರುದಾರರೆಲ್ಲರೂ ಕಂಪೆನಿಯ ಆಡಳಿತಕ್ಕೆ ಬಾಧ್ಯರಾದರೂ ಎಲ್ಲರೂ ಆಡಳಿತ ನಡೆಲಾರರು. ಆದಕಾರಣ ಷೇರುದಾರರಿಂದ ಆಯ್ಕೆಯಾದ ಸಣ್ಣ ಸಮಿತಿ ಆಡಳಿತ ನಿರ್ವಹಣೆ ಮಾಡುತ್ತದೆ. ಆ ಸಮಿತಿಯನ್ನು  ನಿರ್ದೇಶಕರ ಮಂಡಳಿ( ಬೋರ್ಡ್ ಆಫ್ ಡೈರೆಕ್ಟರ್ಸ್‌) ಎಂದು ಕರೆಯುವರು. ಈ ಮಂಡಳಿ ಕೈಗೊಳ್ಳುವ ತೀರ್ಮಾನಗಳನ್ನು ಕಾರ್ಯ ರೂಪಕ್ಕೆ ತರು ವ್ಯಕ್ತಿಯೆಂದರೆ ಕಾರ್ಯದರ್ಶಿ, ಆದ್ದರಿಂದ ಕಂಪೆನಿ ಕಾರ್ಯದರ್ಶಿ ಕಂಪೆನಿಯ ಅಧಿಕೃತ ಪ್ರತಿನಿಧಿ, ಮುಖವಾಣಿ, ಉತ್ಸವ ಮೂರ್ತಿಯಾಗಿರುತ್ತಾನೆ ಎನ್ನಬಹುದು. ಕಂಪೆನಿ ಕಾರ್ಯದರ್ಶಿ, ನಿರ್ದೇಶಕ ಮಂಡಳಿಗೆ ಸಲಹೆಗಾರನಾಗಿ, ಕಾನೂನು ವಿಚಾರಗಳಲ್ಲಿ ಮಾರ್ಗದರ್ಶಿಯಾಗಿರುತ್ತಾನೆ; ದೈನಂದಿನ ವ್ಯವಹಾರಗಳಲ್ಲಿ ಸಲಹೆ ನೀಡುತ್ತಾನೆ. ಇತ್ತ ಷೇರುದಾರ ಅತ್ತ ಸಾರ್ವಜನಿಕ ಮತ್ತೆ ನಿರ್ದೇಶಕರ ಮಂಡಳಿ ಈ ತ್ರಿಭುಜದ ಕೇಂದ್ರ ಬಿಂದುವೇ ಕಾರ್ಯದರ್ಶಿ; ಈ ತ್ರಿಭುಜಗಳ ಮಧ್ಯಸ್ಥನಾಗಿದ್ದುಕೊಂಡು ಕಾರ್ಯದರ್ಶಿ ಕಾರ್ಯವನ್ನು ನಿರ್ವಹಿಸುತ್ತಾನೆ.

ಕಂಪೆನಿಯ ನಿರ್ದೇಶಕ ಮಂಡಳಿಯ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಲು, ನೌಕರರ ಕಾರ್ಯಶಕ್ತಿಯನ್ನು ಹೊಂದಿರುವ ಸಮನ್ವಯಾಧಿಕಾರಿಯಾದ ಕಾರ್ಯದರ್ಶಿ ಸಂಸ್ಥೆಯ ಉಸಿರು; ವಾಸ್ತವಿಕ ಆಡಳಿತಾಧಿಕಾರಿ ಎನ್ನಬಹುದು. ಕಾರ್ಯಾಲಯದ ಸಿಬ್ಬಂದಿಯ ಕುಂದುಕೊರತೆಗಳನ್ನು ನಿರ್ದೇಶಕ ಮಂಡಳಿಯ ಮುಂದಿಟ್ಟು ಪರಿಹಾರ ಮಾರ್ಗಕ್ಕೆ ವ್ಯವಸ್ಥೆ ಮಾಡುತ್ತಾನೆ; ಷೇರುದಾರರ ಸೂಚನೆಗಳನ್ನು ನಿರ್ದೇಶಕ ಮಂಡಳಿಯ ಗಮನಕ್ಕೆ ತರುತ್ತಾನೆ. ಕಂಪೆನಿಯ ಕುಲಸಚಿವನಾಗಿ (ರಿಜಿಸ್ಟ್ರಾರ್) ನಿರ್ದೇಶಕರ ಆದೇಶಗಳನ್ನು ಕಾರ್ಯಗತಗೊಳಿಸುತ್ತಾನೆ.

ಇಷ್ಟೆಲ್ಲಾ ಮಹತ್ವದ ಕಾರ್ಯ ನಿರ್ವಾಹಕನಾದರೂ ಕಾನೂನಿನ ದೃಷ್ಟಿಯಲ್ಲಿ ಕಂಪೆನಿಯ ಅಧೀನ ನೌಕರ ಕಾರ್ಯದರ್ಶಿ, ಏಕೆಂದರೆ ಅವನಿಗೆ ಸ್ವಂತದ ಅಧಿಕಾರಗಳಿಲ್ಲ; ಯಾವುದೇ ನಿರ್ಣಯವನ್ನೂ ತಾನಾಗಿ ಕೈಗೊಳ್ಳುವಂತಿರಲಿ ಆತ ಕಾನೂನಿನ ಪರಿಪಾಲಕ ನಿರ್ದೇಶಕ ಮಂಡಳಿಯ ಅಜ್ಞಾಪಾಲಕ. ಆದರೆ ವಾಸ್ತವವಾಗಿ ಕಾರ್ಯದರ್ಶಿಯ ಕಾರ್ಯಸ್ವರೂಪವನ್ನು ಗಮನಿಸಿದರೆ ಅವನನ್ನು ಹರಿವ ನದಿಯಲ್ಲಿ ದೋಣಿ ನಡೆಸುವ ಅಂಬಿಗನೆನ್ನಬಹುದು, ಪ್ರತಿವರ್ಷ ಅಥವಾ ಆಗಾಗ ಸಂಭವಿಸುವ ಚುನಾವಣೆಗಳ ಪ್ರಯುಕ್ತ ಮತ್ತು ಇತರ ಕಾಣಗಳಿಂದ ಭಾಗಶಃ ಷೇರುದಾರರೂ ನಿರ್ದೇಶಕರೂ ಬದಲಾಗುತ್ತಿದ್ದರೂ ಕಾರ್ಯದರ್ಶಿ ಮಾತ್ರ ಬದಲಾಗುವುದಿಲ್ಲ.

ಅರ್ಹತೆಗಳು: ಕಂಪೆನಿ ಕಾರ್ಯದರ್ಶಿ ಬಹುಶ್ರುತನಾಗಿರಬೇಕು. ಬಹುಮುಖ ವ್ಯಕ್ತಿತ್ವವನ್ನು ಹೊಂದಿದವನಾಗಿರಬೇಕು. ಏಕೆಂದರೆ ಏಕಕಾಲದಲ್ಲಿ ಆತ ವಿಭಿನ್ನ ವ್ಯಕ್ತಿತ್ವದ ಜವಾಬ್ದಾರಿ ಜನರೊಂದಿಗೆ ವ್ಯವಹರಿಸುತ್ತಾನೆ. ಆತ ನಾನಾ ದಾಖಲೆ, ಸಾಕ್ಷ್ಯಗಳನ್ನು  ಕಾಲಕಾಲಕ್ಕೆ ಲೆಕ್ಕಪರಿಶೋಧಕರಿಗೆ ನಿಯಮಾನುಸಾರ ನೀಡಬೇಕು; ಷೇರುದಾರರ ದೂರು-ದೋಷಗಳಿಗೆ ಪರಿಹಾರ ಒದಗಿಸಬೇಕು. ಅಂತೆಯೇ ಅವರಿಗೆ ಸಲಹೆ ಮಾರ್ಗದರ್ಶನ ನಿಡಬೇಕು; ಕಾಲಕಾಲಕ್ಕೆ ಲೆಕ್ಕ-ತೆರಿಗೆಗಳಣ್ನು ತೆರಿಗೆ ಅಧಿಕಾರಿಗಳಿಗೆ ಒಪ್ಪಿಸಬೇಕು. ಇಷ್ಟೆಲ್ಲಾ ಕಾರ್ಯವನ್ನು ನಿರ್ವಹಿಸಬೇಕಾದ ಕಾರ್ಯದರ್ಶಿ ಯಾವುದೇ ಸಂದರ್ಭದಲ್ಲೂ ಕೋಪತಾಪಗಳಿಗೆ ಒಳಗಾಗದೆ ಸಹನೆ, ಸಂಯಮ, ಶಾಂತಮೂರ್ತಿಯಾಗಿ ಮಂದಸ್ಮಿತನಾಗಿದ್ದುಕೊಂಡು ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕು. ತೂಕ-ತಾಳಗಳು ತಪ್ಪದಂತೆ ದೈನಂದಿನ ವ್ಯವಹಾರವನ್ನು ಸಾಗಿಸಬೇಕು.

ಕಂಪೆನಿಯ ಇಂಥ ಮಹತ್ವ ಪೂರ್ಣ ಸ್ಥಾನವನ್ನು ಅಲಂಕರಿಸುವ ವ್ಯಕ್ತಿಗೆ ಸಾಕಷ್ಟು ವಿಶಿಷ್ಟ ಅರ್ಹತೆಗಳಿರಬೇಕು. ಆತ ಜನರೊಂದಿಗೆ ಸೌಜನ್ಯ ಪೂರ್ವಕವಾಗಿ ವರ್ತಿಸಬೇಕು, ಕರ್ತವ್ಯನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿಯಬೇಕು; ಈ ವ್ಯಕ್ತಿಗತ ಗುಣಗಳಲ್ಲದೆ ಕಂಪೆನಿಯ ಕಾನೂನಿಗೆ ಅನುಗುಣವಾಗಿ ಹಲವಾರು ಅರ್ಹತೆಗಳನ್ನು ಕಾರ್ಯದರ್ಶಿ ಪಡೆದಿರಬೇಕಾಗುತ್ತದೆ.

ಕಂಪೆನಿಯ ಷೇರು ಬಂಡವಾಳ ೨೫ ಲಕ್ಷ ರೂ. ಅಥವಾ ಅದನ್ನು ಮೀರಿದ್ದರೆ, ಕಂಪೆನಿ ಕಾರ್ಯದರ್ಶಿಯು ಅಖಿಲಭಾರತ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯ ಸದಸ್ಯನಾಗಿರಬೇಕು, ಕಂಪೆನಿ ಷೆರು ಬಂಡವಾಳ ೨೫ ಲಕ್ಷ ರೂ.ಗಳಿಗಿಂತ ಕಡಿಮೆಯಿದ್ದಲ್ಲಿ ಕಪೆನಿಯ ನಿಯಮಾವಳಿಯಲ್ಲಿ ಗೊತ್ತು ಮಾಡಿ ಅಂಗೀಕರಿಸುವ ಸಂಸ್ಥೆಗಳ ಸದಸ್ಯತ್ವ ಅಥವಾ ಪದವಿ, ಡಿಪ್ಲೋಮಾಗಳಲ್ಲಿ ಒಂದನ್ನಾದರೂ ಹೊಂದಿರಬೇಕು. ಈ ಬಗೆಯ ನಿಯಮವು ವಿಜ್ಞಾನ, ಕಲೆ, ಸಾಹಿತ್ಯ, ಧರ್ಮ, ದಾನಗಳ ನಿರ್ವಹಣೆ ನಿರ್ವಹಣೆ ಅಭಿವೃದ್ಧಿಗಳಿಗಾಗಿ ಸ್ಥಾಪಿತಗೊಂಡ ಲಾಭೋದ್ದೇಶರಹಿತ ಸಂಸ್ಥೆಗಳ ಕಾರ್ಯದರ್ಶಿಗೆ ಅನ್ವಯಯವಾಗಲಾರದು.

ಕಾರ್ಯದರ್ಶಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆದಿರಬೇಕು; ವ್ಯವಹಾರ ಜ್ಞಾನಕ್ಕೆ ಅಗತ್ಯವಾದ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಕಾನೂನು ಶಾಸ್ತ್ರ ಮುಂತಾದವುಗಳಲ್ಲಿ ಸಾಕಷ್ಟು ಪರಿಣತನಾಗಿರಬೇಕು. ಇಂಗ್ಲಿಷ್, ಹಿಂದಿ ಕನ್ನಡ ಮುಂತಾದ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಪ್ರಾದೇಶಕ ಭಾಷೆಗಳಲ್ಲಿ ಸಾಕಷ್ಟು ಜ್ಞಾನ ಪಡೆದಿರಬೇಕು, ಕೇವಲ ಪರಿಚಯಾತ್ಮಕ ಭಾಷಾ ಜ್ಞಾನ ಉಪಯುಕ್ತವಾಗಲಾರದು. ಓದುವ, ಮಾತನಾಡುವ, ಅರ್ಥ ಮಾಡಿಕೊಳ್ಳುವ ಭಾಷಾ ತಿಳಿವಳಿಕೆಯೂ ಸಾಲದು. ವರದಿಗಳನ್ನು ಸಿದ್ಧಪಡಿಸಲು, ಮಾಹಿತಿಯನ್ನು ಸಂಗ್ರಹಿಸಲು, ಪ್ರಕಟಣೆಗಳನ್ನು ತಯಾರಿಸಲು ಸರಳವಾಗಿ, ಸಂಕ್ಷಿಪ್ತವಾಗಿ ಖಚಿತರೂಪದಲ್ಲಿ ನಿರ್ಣಯಗಳನ್ನು ನಿರೂಪಿಸಲು ಪತ್ರ ವ್ಯವಹಾರ ಮಾತುಕತೆ ನಡೆಸಲು ಸಾಕಷ್ಟು ಭಾಷಾ ಪಾಂಡಿತ್ಯ ಅನಿವಾರ್ಯವಾಗಿ ಇರಬೇಕಾಗುತ್ತದೆ. ಆದ್ದರಿಂದ ಕಾರ್ಯದರ್ಶಿಯಾದವನಿಗೆ ಬಹು ಭಾಷಾಜ್ಞಾನ, ಪಾಂಡಿತ್ಯ, ವ್ಯವಹಾರ ಶಾಸ್ತ್ರಗಳ ಪರಿಚಯ ಪ್ರೌಢಮಟ್ಟದಲ್ಲಿ ಇರಬೇಕಾಗುತ್ತದೆ. ಕಾನೂನುಗಳ ತಜ್ಞನಲ್ಲದ ವ್ಯಕ್ತಿ ಸಮರ್ಥ ಕಾರ್ಯದರ್ಶಿಯಾಗಲಾರನು. ಆದ್ದರಿಂದ ಕಂಪೆನಿಯ ವ್ಯವಹಾರಗಳಿಗೆ  ಸಂಬಂಧಿಸಿದ ಕಾನೂನುಗಳ ವಿಚಾರಗಳಲ್ಲಿ ತಜ್ಞನಾಗಿರಬೇಕು. ಉಳಿದ ಪೂರಕ ಕಾನೂನುಗಳ ಬಗ್ಗೆ ಸಾಕಷ್ಟು ಪರಿಜ್ಞಾನವಿರಬೇಕು. ಇಲ್ಲದಿದ್ದಲ್ಲಿ ಕಾರ್ಯದರ್ಶಿಯ ಕಾರ್ಯ ನಿರ್ವಹಣೆ ಕಷ್ಟವಾಗುತ್ತದೆ. ವರಮಾನ ತೆರಿಗೆ ಕಾಯಿದೆ, ಮಾರಾಟದ ತೆರಿಗೆ ಕಾಯಿದೆ, ವಿಮಾ ಕಾಯಿದೆ, ವಿದೇಶಿ ವಿನಿಮಯ ಕಾಯಿದೆ, ಕಾರ್ಮಿಕ ಕಲ್ಯಾಣ ಕಾಯಿದೆಗಳ ಬಗ್ಗೆ ಪೂರ್ಣ ಜಞಆನ ಕಂಪೆನಿ ಕಾರ್ಯದರ್ಶಿಗಿರಬೇಕು. ಇದರ ಜೊತೆಗೆ ಬ್ಯಾಂಕಿಂಗ್ ಪದ್ಧತಿ ಪರಚಯ, ಷೇರು ಮಾರುಕಟ್ಟೆಯ ವಿದ್ಯಮಾನಗಳ ಅರಿವು ಹಾಗೂ ಆರ್ಥಿಕ ವ್ಯವಹಾರಗಳ ಲೆಕ್ಕ ಶಾಸ್ತ್ರಗಳನ್ನು ಕಾರ್ಯದರ್ಶಿ ಚೆನ್ನಾಗಿ ಬಲ್ಲವನಾಗಿರಬೇಕು.

ಕಂಪೆನಿಯ ಕಾರ್ಯ ನಿರ್ವಹಣೆ, ಕಾರ್ಯಾಲಯ ರಚನೆ, ಸಿಬ್ಬಂದಿ ವರ್ಗದವರ ಸಂಘಟನೆ, ಪತ್ರ ವ್ಯವಹಾರ, ವಿವಿಧ ವಿಭಾಗಗಳ ಸಮನ್ವಯ, ಕಂಪೆನಿಯ ಕಾರ್ಯದಲ್ಲಿ ಶ್ರಮ ಉಳಿತಾಯದ ವೇಳೆ, ಉಳಿತಾಯದ ವ್ಯವಸ್ಥೆಗಳ ಜಾರೀಕರಣ, ಸಿಬ್ಬಂದಿ ವರ್ಗದವರ ಆಡಳಿತ ನಿರ್ವಹಣೆ ಇವೇ ಮೊದಲಾದ ವಿಚಾರಗಳಲ್ಲಿ ಕಾರ್ಯದರ್ಶಿ ಸಿದ್ಧಹಸ್ತನಾಗಿರಬೇಕು.

ಕಾರ್ಯದರ್ಶಿಯ ವ್ಯಕ್ತಿತ್ವ ಕಂಪೆನಿಯ ಕಾರ್ಯನಿರ್ವಹಣೆಯ ಅನೇಕ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಕಾರ್ಯದರ್ಶಿ ಶಿಸ್ತಿನಿಂದ ಕ್ರಮಬದ್ಧವಾಗಿ ದುಡಿಯಲು ದೃಢಕಾಯನೂ ಆರೋಗ್ಯವಂತನೂ ಆಗಿರಬೇಕು. ಜನತೆಯ ನಡುವೆ ಸುಲಲಿತವಾಗಿ ವ್ಯವಹರಿಸಲು ಆತ ಸ್ನೇಹಶೀಲನೂ ವಾಗ್ಮಿಯೂ ಉದಾತ್ತನೂ ಆತ್ಮೀಯನೂ ಆಗಿರಬೇಕು; ಕಾಲನಿಷ್ಠೆ, ಕರ್ತವ್ಯ ಪ್ರಜ್ಞೆ, ದಕ್ಷತೆ, ಪ್ರಾಮಾಣಿಕತೆ, ಸೇವಾ ತತ್ಪರತೆಗಳಿಂದ ಜನತೆಗೆ ಸಮರ್ಥ ಕೈಂಕರ್ಯವನ್ನೆಸಗಬೇಕು. ಕಂಪೆನಿಯೆಂಬ ಹಡಗಕನ್ನು ಪ್ರಗತಿಯ ದಡಕ್ಕೆ ಕರೆದೊಯ್ಯುವ ಕಪ್ತಾನನೇ ಕಾರ್ಯದರ್ಶಿ.

ಅಧಿಕಾರಹೊಣೆಗಾರಿಕೆ: ಕಂಪೆನಿ ಕಾರ್ಯದರ್ಶಿ ಸ್ವತಂತ್ರ ವ್ಯಕ್ತಿಯೂ ಅಲ್ಲ, ಕಂಪೆನಿಯ ಸರ್ವಶ್ರೇಷ್ಠ ಮೇಲಾಧಿಕಾರಿಯೂ ಅಲ್ಲ. ಏಕೆಂದರೆ ಆತ ನಿರ್ದೇಶಕ ಮಂಡಳಿಯ ಆದೇಶಾನುಸಾರ ವರ್ತಿಸುವ ನೌಕರನೂ ಹೌದು, ಕಂಪೆನಿಯ ಸಿಬ್ಬಂದಿ ವರ್ಗಕ್ಕೆ ಸೇರಿದ ಅಧಿಕಾರಿಯೂ ಹೌದು. ಆದರೂ ಸಹ ಎಲ್ಲರಿಗೂ ಅಧೀನವಾದ ವ್ಯಕ್ತಿಯೂ ಆಗಿರದೆ ಹತ್ತಾರು ಜನರನ್ನು ಅಧೀನದಲಿಟ್ಟುಕೊಂಡು ಅಧಿಕಾರ ಚಲಾಯಿಸುವ ಮತ್ತು ಅಧಿಕಾರವುಳ್ಳ ನಿರ್ದೇಶಕ ಮಂಡಳಿಯವರಿಗೆ ಅಧೀನನಾಗಿದ್ದುಕೊಂಡು ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿದ್ದಾನೆ. ಕಾರ್ಯದರ್ಶಿಯ ಅಧಿಕಾರ, ಹೊಣೆಗಾರಿಕೆ ಮತ್ತು ಕರ್ತವ್ಯ ನಿರ್ವಹಣೆಗಳನ್ನು ಪರಿಶೀಲಿಸಿದಾಗ ಅವನ ದ್ವಿಮುಖ ವ್ಯಕ್ತಿತ್ವ ಸ್ಪಷ್ಟಾಗಿ ಗೋಚರವಾಗುತ್ತದೆ.

ಕಂಪೆನಿ ಕಾರ್ಯದರ್ಶಿಯ ಅಧಿಕಾರಿಗಳು ಹಲವು ತೆರನಾಗಿರುತ್ತವೆ. ನಿರ್ದೇಶಕ ಮಂಡಳಿ ಕಾರ್ಯದರ್ಶಿಯ ಕಾರ್ಯನಿರ್ವಹಣೆಯ ಅನುಕೂಲಕ್ಕೋಸ್ಕರ ಕೆಲವು ಅಧಿಕಾರಗಳನ್ನು ನೀಡಿರುತ್ತಾರೆ. ಮತ್ತೆ ಕೆಲವು ಅಧಿಕಾರಿಗಳು ಅಧ್ಯಾಹೃತವಾಗಿ, ತಾವಾಗಿಯೇ ಸಹಾಯಕ್ಕೆ ಒದಗಿ ಬರುತ್ತಾರೆ; ಈ ಎರಡೂ ಬಗೆಯ ಅಧಿಕಾರಿಗಳನ್ನು ಸಮಂಜಸ ರೀತಿಯಲ್ಲಿ ನಡೆಸಿಕೊಂಡು ಹೋಗಲು ಕಾರ್ಯದರ್ಶಿಗೆ ಅವಕಾಶವಿರುತ್ತದೆ. ನಿರ್ದೇಶಕ ಮಂಡಳಿ ನೀಡುವ ಅಧಿಕಾರಿಗಳ ಹೆಸರು ಸಾಮಾನ್ಯವಾಗಿ ಲಿಖಿತರೂಪದಲ್ಲಿರುತ್ತದೆ. ಕಾರ್ಯದರ್ಶಿ ಲಿಖಿತ ಅಧಿಕಾರವನ್ನು ಪಡೆದು ಅನೇಕ ವಿಷಯಗಳಲ್ಲಿ ವ್ಯವಹರಿಸಬೇಕಾಗುತ್ತದೆ. ಉದಾಹರಣೆಗೆ, ಕಂಪೆನಿಯ ಪರವಾಗಿ ಸಾಲವೆತ್ತಲು, ಇತರ ಕಂಪೆನಿಗಳೊಡನೆ ಒಪ್ಪಂದ ಮಾಡಿಕೊಳ್ಳಲು, ದಾಖಲೆ ಪುಸ್ತಕದಿಂದ ಸದಸ್ಯರ ಹೆಸರನ್ನು ತೆಗೆದುಹಾಕಲು ಕಾರ್ಯದರ್ಶಿ ನಿರ್ದೇಶಕ ಮಂಡಳಿಯ ಲಿಖಿತಾಧಾರವನ್ನು ಪಡೆಯಬೇಕಾಗುತ್ತದೆ. ನಿರ್ದೇಶಕ ಮಂಡಳಿ ನೀಡಿದ ಅಧಿಕಾರಗಳನ್ನು ಚಲಾಯಿಸುವ ಹಕ್ಕು ಕಾರ್ಯದರ್ಶಿಗೆ ಇರುತ್ತದೆ. ಅಷ್ಟೇ ಅಲ್ಲ, ಕಂಪೆನಿ ಪರವಾಗಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕಾಗದ ಪತ್ರಗಳಿಗೆ ಸಹಿ ಹಾಕಲು ಮತ್ತು ಕಾರ್ಯಾಲಯದ ವಿಭಾಗಗಳ ಮೇಲ್ವಿಚಾರಣೆ ನಡೆಸುವ ಹಾಗೂ ನಿಯಂತ್ರಿಸುವ ಹಕ್ಕು ಸಹಜವಾಗಿ ಕಾರ್ಯದರ್ಶಿಗಿರುತ್ತದೆ.

ಕಾರ್ಯದರ್ಶಿಯ ಹೊಣೆಗಾರಿಕೆಗಳು ಹತ್ತಾರಿವೆ. ಕಂಪೆನಿಯ ಕಾನೂನುಗಳು ಮತ್ತು ಇತರ ಕಾನೂನುಗಳು ಪ್ರಕಾರ ಕರ್ತವ್ಯ ಭ್ರಷ್ಟ ಕರ್ತವ್ಯ ಭ್ರಷಟ ಕಾರ್ಯದರ್ಶಿ ಶಿಕ್ಷಾರ್ಹನಾಗುತ್ತಾನೆ. ಆದ್ದರಿಂದಲೇ ಆತ ಬಹು ಎಚ್ಚರಿಕೆಯಿಂದ ಕಾಲಕಾಲದಲ್ಲಿ ತನ್ನ ಕರ್ತವ್ಯಗಳಿಗೆ ಚ್ಯುತಿಯೊದಗದಂತೆ ನಿರ್ವಹಿಸುತ್ತಾ ಇರಬೇಕು. ಆತ ಕಂಪೆನಿಯ ಸಿಬ್ಬಂದಿ ವರ್ಗದವರ ಆದಾಯಕರವನ್ನು ಸಂಬಂಧಪಟ್ಟ ಅಧಿಕಾರಿಳಿಗೆ ಸಕಾಲದಲ್ಲಿ ಸಲ್ಲಿಸಬೇಕು. ಕಾಲಕಾಲಕ್ಕೆ ಸ್ಥಿತಿವಿವರಣ ಪಟ್ಟಿ ಅಥವಾ ಅಢಾವೆ ಪಟಟಿ (ಬ್ಯಾಲೆನ್ಸ್ ಷೀಟ್)ಯನ್ನು ಕಂಪೆನಿಯ ರಿಜಿಸ್ಟ್ರಾರರಿಗೆ ನೊಂದಾಯಿಸಬೇಕು. ಕಂಪೆನಿಯ ಒಪ್ಪಂದಕ್ಕೆ ಭಂಗವಾಗಿ ಅದರಿಂದ ನಷ್ಟವುಂಟಾದರೆ ಅದಕ್ಕೆ ಕಾರ್ಯದರ್ಶಿಯೇ ಹೊಣೆಗಾರನಾಗುತ್ತಾನೆ; ಸಾರ್ವಜನಿಕರಲ್ಲಿ ಕಂಪೆನಿಯ ಬಗ್ಗೆ ತಪ್ಪು ತಿಳಿವಳಿಕೆಯುಂಟಾಗದಂತೆ ವರ್ತಿಸಬೇಕು. ನಿರ್ದೇಶಕ ಮಂಡಳಿ ಸಭೆಗಳನ್ನೂ ವಾರ್ಷಿಕ  ಸಾಧಾರಣ ಸಭೆಗಳನ್ನೂ ಕರೆಯುವುದು, ಶಾಸನಬದ್ದ ವರದಿಯನ್ನು ಷೇರುದಾರರಿಗೆ ರವಾನಿಸುವುದು, ಷೇರುದಾರರ ಮತ್ತು  ನಿರ್ದೇಶಕ ಮಂಡಳಿಗಳ ನಡೆವಳಿಕೆಗಳನ್ನು ದಾಖಲಿಸುವುದು, ಆ ದಾಖಲೆ ಪುಸ್ತಕಗಳನ್ನು ಸಂರಕ್ಷಿಸುವುದು, ಸದಸ್ಯರು ಇಚ್ಛಿಸಿದರೆ ಕಾರ್ಯ ಕಲಾಪಗಳ ವರದಿ ಪುಸ್ತಕಗಳನ್ನು ಪರಿಶೀಲನೆಗೆ ನೀಡುವುದು-ಇವೇ ಮೊದಲಾದ ಶಾಸನಬದ್ಧ ಕಾರ್ಯಗಳನ್ನು ನಿರ್ವಹಿಸುವ ಹೊಣೆಗಾರಿಕೆ ಕಾರ್ಯದರ್ಶಿಗೆ ಸೇರಿದೆ. ಈ ಬಗೆಯ ಹೊಣೆಗಾರಿಕೆಗಳ ನಿರ್ವಹಣೆಯಲ್ಲಿ ಕಾರ್ಯದರ್ಶಿ ತಪ್ಪಿತಸ್ಥನಾದರೆ ಸೂಕ್ತ ಶಿಕ್ಷೆಗೆ ಗುರಿಯಾಗುತ್ತಾನೆ.

ನೇಮಕ: ಸಾಮಾನ್ಯವಾಗಿ ಕಂಪೆನಿ ಕಾರ್ಯದರ್ಶಿಯಾಗಿ ಹೆಸರನ್ನು ಕಂಪೆನಿಯ ನಿಯಮಾವಳಿಗಳಲ್ಲಿ ಕಂಪೆನಿಯ ಪ್ರವರ್ತಕತರು ನಮೂದಿಸುತ್ತಾರೆ. ಆದರೆ ಹೀಗೆ ನಮೂದಿಸಿದ ವ್ಯಕ್ತಿಯನ್ನೇ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಬೇಕೆಂಬ ಕಡ್ಡಾಯವೇನಿಲ್ಲ. ಕಾರ್ಯದರ್ಶಿಯಾದವನು ಈ ದೃಷ್ಟಿಯಿಂದ ನಿರ್ದೇಶಕ ಮಂಡಳಿಯ ಪ್ರಥಮ ಸಭೆಯಲ್ಲಿಯೇ ತನ್ನ ನೇಮಕವನ್ನು ಒಪ್ಪಂದದ ಮೂಲಕ ಸರೀಕರಿಸಿಕೊಳ್ಳಬಹುದು. ನೇಮಕ ದಿನಾಂಕ, ಹುದ್ದೆಯ ಕಾಲಾವಧಿ, ಪಡೆಯುವ ಸಂಭಾವನೆ, ರಜಾ ಸೌಲಭ್ಯ ಇತ್ಯಾದಿ ವಿವರಗಳನ್ನು ಆತ ಖಚಿತಪಡಿಸಿಕೊಳ್ಳಬಹುದು.

ಕಾರ್ಯದರ್ಶಿಯನ್ನು ನೇಮಕ ಮಾಡಿದ ನಿರ್ಣಯವನ್ನು ನಿರ್ದೇಶಕ ಮಂಡಳಿಯ ದಾಖಲೆ ಪುಸ್ತಕದಲ್ಲಿಯೂ ಸಭೆಯ ಕಾರ್ಯಕಲಾಪಗಳ ವರದಿಯಲ್ಲಿಯೂ ದಾಖಲೆ ಮಾಡಲಾಗುತ್ತದೆ. ಕಾರ್ಯದರ್ಶಿಯ ಸೇವಾವಧಿ ಅಲ್ಪ ಕಾಲದ್ದೇ ಇರಲಿ, ದೀರ್ಘ ಕಾಲದ್ದೇ ಇರಲಿ, ಆತನ ಕರ್ತವ್ಯ ನಿರ್ವಹಣೆಯಲ್ಲಿ  ವ್ಯತ್ಯಾಸವಿರಲಾರದು.  ಕಂಪೆನಿ ಕಾನೂನಿನ ಪ್ರಕಾರ ಕಂಪೆನಿಯ ರಿಜಿಸ್ಟ್ರಾರರಿಗೆ ಕಾರ್ಯದರ್ಶಿಯನ್ನು ನೇಮಕ ಮಾಡಿದ ವಿಚಾರ, ರದ್ದಾಗುವ ರೀತಿ, ನೀಡುವ ಸಂಭಾವನ ಇತ್ಯಾದಿ  ವಿವರಗಳ್ನು ಒಳಗೊಂಡ ಕಾರ್ಯದರ್ಶಿ ನೇಮಕ ನಿರ್ಣಯವನ್ನು ಕಳಿಸಬೇಕು.

ಕಂಪೆನಿಯ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ಕೆಲವು ನಿರ್ಬಂಧಗಳಿವೆ. ಸಾಮಾನ್ಯವಾಗಿ ಕಂಪೆನಿಯ ನಿರ್ದೇಶಕರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗದು. ಒಂದು ವೇಳೆ, ನಿರ್ದೇಶಕರು ಕಾರ್ಯದರ್ಶಿ ಸ್ಥಾನವನ್ನು ಅರ್ಹತೆಗಳ ಕಾರಣದಿಂದ  ಅಲಂಕರಿಸಿದ್ದೇ ಆದರೆ ಅವರು ನಿರ್ದೇಶಕರಾಗಿ ಮುಂದುವರಿಯಲು ಸಾಧ್ಯವಿಲ್ಲ; ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ  ಮಾಡಿಕೊಳ್ಳಬೇಕು. ವಿಶೇಷ ಸಂದರ್ಭಗಳಲ್ಲಿ ಸರ್ವ ಸದಸ್ಯರ ಸಭೆಯ ಒಪ್ಪಿಗೆ ಪಡೆದು ನಿರ್ದೇಶಕರನು ಕಾರ್ಯದರ್ಶಿಯಾಗಿ ನೇಮಕಗೊಳ್ಳಬಹುದು. ನಿರ್ದೇಶಕರ ಸಂಖ್ಯೆ ಎರಡೇ ಇದಾಗ ಹೀಗೆ ನೇಮಕವಾಗಲು ಸಾಧ್ಯವಿಲ್ಲ. ಬೇರೆ ಕಂಪೆನಿಯಲ್ಲಿ ಕಾರ್ಯದರ್ಶಿ ಆಗಿರುವಾತನನ್ನು ಮತ್ತೆ ಇನ್ನೊಂದು ಕಂಪೆನಿಗೆ ಕಾರ್ಯದರ್ಶಿಯನ್ನಾಗಿ ನೇಮಿಸಲಾಗದು. ಏಕೆಂದರೆ ಯಾವ ವ್ಯಕ್ತಿಯೇ ಆಗಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕಂಪೆನಿಗಳಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲು ಅವಕಾಶವಿಲ್ಲ; ಹಾಗೆಯೇ ಕಂಪೆನಿಯ ಲೆಕ್ಕ ಪರಿಶೋಧಕರು ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಸಾಧ್ಯವಿಲ್ಲ.

ಕಂಪೆನಿ ಕಾರ್ಯದರ್ಶಿ ಎರಡು ರೀತಿಯ ನಿಯೋಜಿತನಾಗಿರಬಹುದು. ಸಾಮಾನ್ಯ ಸಭೆ ಮತ್ತು ನಿರ್ದೇಶಕರ ಸಭೆಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆ, ಷೇರುಗಳ ನೀಡಿಕೆಯ ಮೇಲ್ವಿಚಾರಣೆ-ವರ್ಗಾವಣೆ, ಆನುವಂಶಿಕ ನೊಂದಾವಣೆ, ಲಾಭಾಂಸ ಪಾವತಿ ಪತ್ರವನ್ನು (ಡಿವಿಡೆಂಟ್ ವಾರಂಟ್) ಸಿದ್ಧಪಡಿಸುವುಕೆ, ಕಂಪೆನಿ ರಿಜಿಸ್ಟ್ರಾರರಿಗೆ ಕಾಗದ ಪತ್ರಗಳನ್ನು ಕಳಿಸಿಕೊಡುವುದು, ಕಂಪೆನಿಯ ದಾಖಲೆ ಪತ್ರ-ಪುಸ್ತಕಗಳನ್ನೂ ಸಂರಕ್ಷಿಸುವುದು ಇವೇ ಮುಂತಾದ ಕಚೇರಿಯ ದಿನನಿತ್ಯದ ಕಾರ್ಯಗಳಿಗಾಗಿಯೇ ನಿರ್ದೇಶಕ ಮಂಡಳಿ ಕಾರ್ಯದರ್ಶಿಯನನ್ನು ನೇಮಿಸಿದರೆ ಅಂಥ ಕಾರ್ಯದರ್ಶಿಯನ್ನು ‘ದಿನನಿತ್ಯ ವ್ಯವಹಾರದ ಕಾರ್ಯದರ್ಶಿ’ (ರೋಟೀನ್ ಸೆಕ್ರೆಟರಿ) ಎಂದು ಕರೆಯುತ್ತಾರೆ.

ಮೇಲ್ಕಾಣಿಸಿದ ದಿನನಿತ್ಯ ವ್ಯವಹಾರ ಕಾರ್ಯಗಳ ಜೊತೆಗೆ ಕಂಪೆನಿಯ ವಿವಿಧ ಬಗೆಯ ಪತ್ರ, ವ್ಯವಹಾರ ನಿರ್ವಹಣೆ, ನಿರ್ದೇಶಕ ಮಂಡಳಿಗೆ ಮಾರ್ಗದರ್ಶನ, ವ್ಯಾಪಾರೀ ಒಪ್ಪಂದಗಳ ನಿರ್ವಹಣೆ, ಕಂಪೆನಿ ಕಾರ್ಯಾಲಯದ ಸಂಘಟನೆ ನಿಯಂತ್ರಣ, ಹೊಣೆಗಾರಿಕೆ ಮೊದಲಾದ ವಿಚಾರಗಳಲ್ಲಿ ನಿರ್ದೇಶಕ ಮಂಡಳಿ ವಹಿಸಿಕೊಟ್ಟ ಕಾರ್ಯ ನಿರ್ವಾಹಕ ಅಧಿಕಾರಗಳನ್ನು ನಿರ್ವಹಿಸುವ ಕಾರ್ಯದರ್ಶಿಯನ್ನು ಕಾರ್ಯ ನಿರ್ವಾಹಕ ಕಾರ್ಯದರ್ಶಿ (ಎಕ್ಸಿಕ್ಯೂಟಿವ್ ಸೆಕ್ರೆಟರಿ) ಎಂದು ಕರೆಯುತ್ತಾರೆ. ಯಾವ ಬಗೆಯ ಕಾರ್ಯದರ್ಶಿಯನ್ನು ಕಂಪೆನಿ ನಿರ್ವಹಣೆಗೆ ನೇಮಿಸಿಕೊಳ್ಳಬೇಕು ಎಂಬ ನಿರ್ಧಾರ ನಿರ್ದೇಶಕರ ಮಂಡಳಿಗೆ ಸೇರಿದ್ದಾಗಿದೆ.

ನಿವೃತ್ತಿ: ಸಾಮಾನ್ಯವಾಗಿ ಕಾರ್ಯದರ್ಶಿ ಲಿಖಿತ ಒಪ್ಪಂದಾನುಸಾರ ಕಂಪೆನಿಯಿಂದ ನಿವೃತ್ತನಾಗುತ್ತಾನೆ. ಲಿಖಿತ ಒಪ್ಪಂದದಲ್ಲಿ ಕಾರ್ಯದರ್ಶಿಯನ್ನು ನಿವೃತ್ತಿಗೊಳಿಸುವ ಬಗ್ಗೆ ನಿರ್ದಿಷ್ಟ ನಿರ್ದೇಶನಗಳಿಲ್ಲದಾಗ ಸಾಕಷ್ಟು ಕಾಲಾವಧಿ ನೀಡಿ (೩ ತಿಂಗಳು/೬ ತಿಂಗಳ ಕಾಲಾವಕಾಶದ ತಿಳಿವಳಿಕೆ ಪತ್ರ ನೀಡಿ) ನಿವೃತ್ತಿಗೊಳಿಸಬೇಕು; ತಿಳಿವಳಿಕೆ ಪತ್ರವನ್ನು ನೀಡದೆ ಕಾರ್ಯದರ್ಶಿಯನ್ನು ಆ ಹುದ್ದೆಯಿಂದ ತೆಗೆದು ಹಾಕುವ ಸಂದರ್ಭಗಳೂ ಕೆಲವಿದೆ; ಕಂಪೆನಿಯ ಹಣವನ್ನು ದುರುಪಯೋಗಗೊಳಿಸಿದಾಗ ನಿರ್ದೇಶಕರ ಆದೇಶಗಳನ್ನು ಪರಿಪಾಲಿಸದಿದ್ದಾಗ, ಒಪ್ಪಂದದ ನಿಯಮಗಳನ್ನು ಮೀರಿದಾಗ, ದುರ್ನಡತೆಯಿದ ವರ್ತಿಸಿದಾಗ ತಿಳಿವಳಿಕೆ ಪತ್ರವನ್ನು ನೀಡದೆ ಕಾರ್ಯದರ್ಶಿಯನ್ನು ಕಂಪೆನಿಯಿಂದ ತೆಗೆದು ಹಾಕಬಹುದು.

ಮತ್ತೆ ಕೆಲವು ಸಂದರ್ಭಗಳಲ್ಲಿ ಕಾರ್ಯದರ್ಶಿ ಹುದ್ದೆ ತನಗೆ ತಾನೇ ರದ್ದಾಗುತ್ತದೆ. ನ್ಯಾಯಾಲಯಗಳ ಆದೇಶಗಳಿಗನುಸಾರವಾಗಿ ಕಂಪನಿಯನ್ನು ಕಡ್ಡಾಯವಾಗಿ ಮುಚ್ಚಲು ನಿರ್ಣಯ ಸ್ವೀಕರಿಸಿದಾಗ, ಕಂಪೆನಿಗೆ ಆಸ್ತಿ ನಿರ್ವಾಕರನ್ನು ನೇಮಿಸಿದಾಗ ಕಂಪೆನಿ ಸಿಬ್ಬಂದಿ ವರ್ಗದ ಜೊತೆ ಕಾರ್ಯದರ್ಶಿಯೂ ಮನೆಗೆ ತೆರಳುತ್ತಾನೆ