ನಿರ್ದೇಶಕ ಮಂಡಳಿ ಅಥವಾ ನಿರ್ವಾಹಕ ಮಂಡಳಿ ನಿಯಮಾನುಸಾರ ಅಗತ್ಯಬಿದ್ದಾಗ ಸಭೆ ಸೇರುತ್ತದೆ. ಈ ಸಭೆಯ ವ್ಯವಸ್ಥೆಯನ್ನು ಕಾರ್ಯದರ್ಶಿ ಮಾಡುತ್ತಾನೆ. ಸಾಮಾನ್ಯವಾಗಿ ೧೫ ದಿನಗಳಿಗೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ನಿರ್ದೇಶಕ ಮಂಡಳಿ ಸಭೆ ಸೇರುತ್ತದೆ. ನಿರ್ದೇಶಕರು ಕಂಪೆನಿ ವ್ಯವಹಾರಗಳ ಬಗ್ಗೆ ಸಾಮೂಹಿಕವಾಗಿ ನಿರ್ಣಯವನ್ನು ಕೈಗೊಳ್ಳಬೇಕು. ವೈಯಕ್ತಿಕವಾಗಿ ಒಬ್ಬ ನಿರ್ದೇಶಕ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲಾರನು. ಕೆಲವೊಮ್ಮೆ ವಿಶಿಷ್ಟ ಕಾರ್ಯ ನಿರ್ವಹಣೆಗಾಗಿ ನಿರ್ದೇಶಕರ ಉಪಸಮಿತಿಗಳನ್ನು ರಚಿಸಲಾಗುತ್ತದೆ. ಈ ಸಮಿತಿಗಳೂ ಸಹ ಸಭೆ ಸೇರಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ

ತಿಳಿವಳಿಕೆ ಪತ್ರ: ಎಲ್ಲಾ ನಿರ್ದೇಶಕರಿಗೂ ಸಭೆ ಸೇರುವ ಮೊದಲು  ತಿಳಿವಳಿಕೆ ಪತ್ರವನ್ನು ಕಳಿಸಿಕೊಡಲಾಗುವುದು. ೧. ಈ ಬಗೆಯ ಸಭಾ ತಿಳಿವಳಿಕೆ ಪತ್ರ ಕಳಿಸಬೇಕಾದ ಅವಧಿಯನ್ನು ಕಂಪೆನಿಯ ಲಿಖಿತ ನಿಯಮಾವಳಿಯಲ್ಲಿ ಕಾಣಬಹುದು; ಕಂಪೆನಿ ಕಾನೂನಿನ ಪ್ರಕಾರ ೨೧ ದಿನಗಳ ನಿರ್ಬಂಧ ಇಲ್ಲಿ ಅನ್ವಯಿಸುವುದಿಲ್ಲ. ಏಕೆಂದರೆ ಕಂಫೆನಿ ಕಾನೂನಿನಲ್ಲಿ ನಿರ್ದೇಶಕ ಮಂಡಳಿ ಸಭೆಗಳಿಗೆ ಸೂಚನಾಪತ್ರ ಕಳಿಸಲು ಇಷ್ಟೇ ದಿನಗಳ ಅವಧಿ ಇರಬೇಕೆಂದು ಗೊತ್ತು ಮಾಡಿಲ್ಲ.

ಕೋರಂ : ನಿರ್ದೇಶಕ ಮಂಡಳಿ ಸಭೆ ನಡೆಯಲು ಬೇಕಾದ ‘ಕೋರಂ’ ಅನ್ನು ಕಂಪನಿಯ ಲಿಖಿತ ನಿಯಮಾವಳಿಯಲ್ಲಿ ಗೊತ್ತು ಮಾಡಿರಬಹುದು ಅಥವಾ ನಿರ್ದೇಶಕರು ಸ್ವತಃ ನಿರ್ಧರಿಸಬಹುದು. ನಿರ್ದೇಶಕ ಮಂಡಳಿ ‘ಕೋರಂ’ ನಿರ್ಧರಿಸದಿದ್ದಾಗ ಕಂಪೆನಿ ಕಾನೂನಿನ ಪ್ರಕಾರ ‘ಕೋರಂ’ ನಿರ್ಧಾರವಾಗುತ್ತದೆ. ಒಟ್ಟು ಸಂಖ್ಯೆ ೧/೩ ಭಾಗದಷ್ಟು ಸಂಖ್ಯೆ ಅಥವಾ ಇಬ್ಬರು ನಿರ್ದೇಶಕರು – ಇವುಗಳಲ್ಲಿ ಯಾವುದು ಅಧಿಕವೋ ಆ ಸಂಖ್ಯೆಯನ್ನೇ ‘ಕೋರಂ’ ಎಂದು ತಿಳಿಯಬೇಕಾಗುತ್ತದೆ. ‘ಕೋರಂ’ ಅನ್ನು ಪರಿಗಣಿಸುವಾಗ ಅನಾಸಕ್ತ ನಿರ್ದೇಶಕರನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಬೇಕು; ಆಸಕ್ತ ನಿರ್ದೇಶಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳಲ್ಲಿ ಯಾವುದಾದರೂ ಸದಸ್ಯರಿಗೆ ಸಂಬಂಧಿಸಿದರೆ ಅವುಗಳಲ್ಲಿ ದಸ್ಯರು ಆಸಕ್ತರಾಗಿದ್ದಾರೆ ಅಂಥವರನ್ನು ಆಸಕ್ತ ನಿರ್ದೇಶಕರು ಎನ್ನುತ್ತಾರೆ. ಉಳಿದವರು ಅನಾಸಕ್ತ ನಿರ್ದೇಶಕರೆಂದು ಪರಿಗಣಿತರಾಗುತ್ತಾರೆ. ಕೆಲವು ವೇಳೆ ಸಂಬಂಧಪಟ್ಟ ವಿಷಯ ಚರ್ಚೆಗೆ ಬಂದಾಗ ಕೆಲವು ಸದಸ್ಯರು ತಾವೇ ಸಭೆಯಿಂದ ನಿರ್ಗಮಿಸುತ್ತಾರೆ; ಇಲ್ಲವೇ ಸಭಾಧ್ಯಕ್ಷರು ಅಂಥ ಸದಸ್ಯರನ್ನು ಹೊರಗೆ ಹೋಗಲು ತಿಳಿಸಬಹುದು.

ಸಾಮಾನ್ಯವಾಗಿ ನಿರ್ದೇಶಕ ಮಂಡಳಿಯ ಕಾರ್ಯಸೂಚಿಯಲ್ಲಿ ವಿಷಯಗಳು ಚರ್ಚೆಗೆ ಬರುತ್ತವೆ: ಹಿಂದಿನ ಸಭೆಯ ಕಾರ್ಯಕಲಾಪಗಳ ಸ್ಥಿರೀಕರಣ ಜಮಾ ಖರ್ಚು ಪರಿಶೀಲನೆ, ಸಿಬ್ಬಂದಿ ವರ್ಗದವರ ಬೇಡಿಕೆಗಳು, ಷೇರುಗಳ ಬಗ್ಗೆ ಬಂದ ಅರ್ಜಿಗಳೂ, ಸರ್ಕಾರದಿಂದ ಬಂದ ಪತ್ರಗಳ ಪರಾಮರ್ಶನ, ಸಾಲಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು. ತಜ್ಞರ ವರದಿ ಪರಿಶೀಲನೆ, ಮುಂದಿನ ಸಭೆಯ ವ್ಯವಸ್ಥೆ ಬಗ್ಗೆ ತೀರ್ಮಾಣ. ಪ್ರತಿ ಸಭೆಯಲ್ಲೂ ಈ ಎಲ್ಲ ವಿಷಯಗಳ ಬಂದೇ ಬರುತ್ತದೆ ಎಂಬ ನಿಯಮವಿಲ್ಲ. ಅಗತ್ಯಕ್ಕೆ ತಕ್ಕಂತೆ ವಿಷಯಗಳು ತೀರ್ಮಾನಕ್ಕಾಗಿ ಸಭೆಯ ಮುಂದೆ ಮಂಡಿತವಾಗುತ್ತವೆ.

ಸಭಾಧ್ಯಕ್ಷತೆ: ನಿರ್ದೇಶಕ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಕಂಪೆನಿಯ ನಿಯಮಾವಳಿಯಲ್ಲಿ ನಮೂದಿಸಿದ ವ್ಯಕ್ತಿ ಅಥವಾ ನಿರ್ದೇಶಕ ಮಂಡಳಿ ಆರಿಸಿದ ವ್ಯಕ್ತಿ ವಹಿಸುತ್ತಾನೆ. ಅಧ್ಯಕ್ಷರ  ಗೈರು ಹಾಜರಿಯಲ್ಲಿ ಉಪಾಧ್ಯಕ್ಷ ಕಾರ್ಯವನ್ನು ನಿರ್ವಹಿಸುತ್ತಾರೆ. ಸಭೆ ಪ್ರಾರಂಭವಾದ ಕಾಲುಗಂಟೆಯಲ್ಲಿ ಅಧ್ಯಕ್ಷರು ಬಾರದಿದ್ದಲ್ಲಿ, ಉಪಾಧ್ಯಕ್ಷರೂ ಇಲ್ಲದಿದ್ದಲ್ಲಿ, ಸಭೆಯಲ್ಲಿ ಹಾಜರಿರುವ ಒಬ್ಬರನ್ನು ತಾತ್ಪೂರ್ತಿಕವಾಗಿ ಸಭೆಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಭೆಯನ್ನು ನಡೆಸಬಹುದು.

ನಿರ್ಣಯಗಳು: ನಿರ್ದೇಶಕ ಮಂಡಳಿಯಲ್ಲಿ ಕಾರ್ಯಸೂಚಿಯ ವಿಷಯಗಳನ್ನು ಸರ್ವಾನುಮತ, ಬಹುಮತ ಮತ್ತು ನಿರ್ಣಾಯಕಮತ ಎಂಬ ಮೂರು ವಿಧಗಳಲ್ಲಿ ತೀರ್ಮಾನಿಸುತ್ತಾರೆ. ಕೆಲವು ವಿಷಯಗಳಿಗೆ ಸರ್ವಾನುಮತದ ಅಗತ್ಯವಿರುತ್ತದೆ. ಉದಾಹರಣೆಗೆ: ಪರಿಚಯಪತ್ರಕ್ಕೆ ಒಪ್ಪಿಗೆ ನೀಡಿಕೆ, ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮೊದಲಾದ ವಿಚಾರಗಳಲ್ಲಿ ಸಭೆ ಸರ್ವಾನುಮತ ನೀಡದಿದ್ದಲ್ಲಿ ಸಿಂಧುವಾಗದು; ಉಳಿದೆಲ್ಲ ವಿಚಾರಗಳಲ್ಲಿ ಬಹುಮತದ ಅಗತ್ಯವಿರುತ್ತದೆ; ಸಭಾಧ್ಯಕ್ಷನೂ ಮತ ಚಲಾಯಿಸಲು ಅವಕಾಶವಿರುತ್ತದೆ; ಇದರಿಂದ ವಿಷಯ ತೀರ್ಮಾನವಾಗುತ್ತದೆ, ಇದನ್ನು ನಿರ್ಣಾಯಕ ಮತವೆಂದು ಕರೆಯುತ್ತಾರೆ. ಕೆಲವೊಮ್ಮೆ ಸುತ್ತೋಲೆಯ ಮೂಲಕವೂ ನಿರ್ಣಯವನ್ನು ಕೈಗೊಳ್ಳುತ್ತಾರೆ. ಕೆಲವೊಮ್ಮೆ ನಿರ್ದೇಶಕ ಮಂಡಳಿಯು ಸಭೆ ಸೇರಲು ಕಾಲಾವಕಾಶಿವಿಲ್ಲದಿದ್ದಾಗ ಮತ್ತು ವಿಷಯ ಅತ್ಯಂತ ಜರೂರಾಗಿದ್ದಲ್ಲಿ ನಿರ್ದೇಶಕರ ಒಪ್ಪಿಗೆಯ ಅಗತ್ಯವಿದ್ದಾಗ ಸುತ್ತೋಲೆ ನಿರ್ಣಯಗಳನ್ನು ಅಂಗೀಕರಿಸಲಾಗುವುದು. ನಿರ್ದೇಶಕರ ಸಭೆ ಸೇರದೇನೆ ಕಾರ್ಯದರ್ಸಿ ಕರಡು ನಿಣ್ಯವನ್ನು ಎಲ್ಲ ನಿರ್ದೇಶಕ ಸದಸ್ಯರಿಗೂ ಚಲಾವಣೆ ಮಾಡಿ ಅವರಿಂದ ಪರ-ವಿರುದ್ಧ ಮತ ಪಡೆದು ವಿಷಯವನ್ನು ನಿರ್ಣಯಿಸಲಾಗುವ ತೀರ್ಮಾಣಕ್ಕೆ ಸುತ್ತೋಲೆ ನಿರ್ಣಯವೆನ್ನುತ್ತಾರೆ.

ಕಾರ್ಯಸೂಚಿ: ಸಾಮಾನ್ಯವಾಗಿ ಕಂಪೆನಿಗೆ ಸಂಬಂಧಿಸಿದ ವ್ಯವಹಾರವೆಲ್ಲ ನಿರ್ದೇಶಕ ಮಂಡಳಿಯ ಮುಂದೆ ಚರ್ಚೆಗೆ ಬರುತ್ತವೆ ಎನ್ನಬಹುದು. ಮುಖ್ಯವಾಗಿ ಚರ್ಚೆಗೆ ಬರುವ ವಿಷಯಗಳು ಹೀಗಿವೆ: ಕಂಪೆನಿ ಪರವಾಗಿ ಬೇರೆ ಸ್ಥಳಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ವಿಚಾರ, ಮಧ್ಯಂತರ ಲಾಭಾಂಶ ಹಂಚಿಕೆ ವಿಚಾರ, ಸಾಲ ಪತ್ರ ಹಂಚಿಕೆ, ಸಾಲವೆತ್ತುವಿಕೆ, ಷೇರುಗಳ ವರ್ಗಾವಣೆ ಮತ್ತು ಚಲಾವಣೆ, ಷೇರುಗಳ ಹಂಚಿಕೆ, ಸಿಬ್ಬಂದಿಯ ನೇಮಕ ಬಡ್ತಿ ವಿಚಾರಗಳು. ನಿವ್ವಳ ನಫೆ ವಿನಿಯೋಗ ವಿಧಾನದ ನಿರ್ಧಾರ…. ಇವೇ ಮೊದಲಾದ ಸಂಗತಿಗಳನ್ನು ನಿರ್ದೇಶಕರು ಚರ್ಚಿಸಿ ತೀರ್ಮಾಣಿಸುತ್ತಾರೆ.

ನಿರ್ದೇಶಕರ ಉಪ ಸಮಿತಿ ಸಭೆಗಳು: ಹಲವಾರು ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಿ ತೀರ್ಮಾನಿಸಲು ನಿರ್ದೇಶಕರ ಮಂಡಳಿ ತಮ್ಮಲ್ಲಿಯೇ ಇಬ್ಬರು ಅಥವಾ ಮೂವರನ್ನು ಸೇರಿಸಿ  ಉಪಸಮಿತಿ ಮಾಡಿ ಅವರಿಗೆ ಗೊತ್ತಾದ ವಿಷಯವನ್ನು ಒಪ್ಪಿಸುತ್ತದೆ. ಇಂಥ ಉಪ ಸಮಿತಿಗಳಲ್ಲಿ ಕೆಲವು ತಾತ್ಕಾಲಿಕವಾಗಿರುತ್ತವೆ. ಕೆಲವು ಖಾಯಂ ಆಗಿರುತ್ತವೆ. ಉದಾಹರಣೆಗೆ: ಷೇರು ವರ್ಗಾವಣೆ ಸಮಿತಿ, ಹಣಕಾಸಿನ ಸಮಿತಿ ಮೊದಲಾದವು ಖಾಯಂ ಸಮಿತಿಗಳಾಗಿರುತ್ತವೆ. ಕಾರ್ಯದರ್ಶಿ  ಈ ಉಪಸಮಿತಿಗಳ ವರದಿಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸುತ್ತಾನೆ.

ನಿರ್ದೇಶಕರ ಕರ್ತವ್ಯಗಳು: ನಿರ್ದೇಶಕರು ಹಲವಾರು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ; ಅವರಿಗೂ ಕೆಲವು ಹೊಣೆಗಾರಿಕೆಗಳಿವೆ. ಅವರು ಕಂಪೆನಿಗೆ ಬೇಕಾದ ಕನಿಷ್ಟ ಕಂತನ್ನು ಸಲ್ಲಿಸಬೇಕು. ಸದಸ್ಯರ ಕೋರಿಕೆಯ ಪ್ರಕಾರ  ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವುದು, ನಿರ್ದೇಶಕರ ವರದಿಯನ್ನು ಸಿದ್ಧಪಡಿಸುವುದು, ವಾರ್ಷಿಕ ಸಭೆಯ ಮುಂದೆ ಲೆಕ್ಕ ಪತ್ರ ಪರಿಶೋಧಕರ ವರದಿಯನ್ನು ಮಂಡಿಸುವುದು, ಸದಸ್ಯರಿಗೆ ಕಂಪೆನಿ ಲೆಕ್ಕ ಪುಸ್ತಕಗಳನ್ನು ಪರಿಶೀಲನೆಗೆ ತೆಗೆದಿಡುವ ವೇಳೆಯನ್ನು ನಿರ್ಧರಿಸುವುದು, ಲಾಭಾಂಶ ಹಂಚಿಕೆ ನಿರ್ಧಾರ ಇವೇ ಮೊದಲಾದ ಕರ್ತವ್ಯಗಳನ್ನು ನಿರ್ದೇಶಕರು ನಿರ್ವಹಿಸಬೇಕಾಗುತ್ತದೆ.

ನಿರ್ದೇಶಕರ ವರದಿ: ಕಾರ್ಯದರ್ಶಿ ಸಭಾಧ್ಯಕ್ಷರ ಸಲಹೆಯ ಮೇರೆಗೆ ನಿರ್ದೇಶಕ ವರದಿಯ ಕರಡನ್ನು ಸಿದ್ಧಪಡಿಸಿ ಅಂಗೀಕಾರಕ್ಕಾಗಿ ನಿರ್ದೇಶಕ ಮಂಡಳಿಯ ಮುಂದಿಡುತ್ತಾನೆ; ಅನಂತರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗುವುದು. ಕಂಪೆನಿ ವ್ಯವಹಾರಗಳ ಪುಟ್ಟ ವರದಿ, ನಿವೃತ್ತರಾಗುವ ನಿರ್ದೇಶಕರ ಪಟ್ಟಿ, ನಿವೃತ್ತರ ಜಾಗಕ್ಕೆ ಸೂಚಿತ ವ್ಯಕ್ತಿಗಳ ಪಟ್ಟಿ, ನಿವೃತ್ತರಾಗುವ ಲೆಕ್ಕ ಪರಿಶೋದಕರ ಹೆಸರು, ಅವರ ಸ್ಥಾನಕ್ಕೆ ಸೂಚಿತವಾದ ಹೆಸರುಗಳ ನಿರ್ಧಾರ, ಕಂಪೆನಿಯ ವಿಸ್ತರಣೆ ವಿಚಾರ, ಭವಿಷ್ಯತ್ತಿನ ಯೋಜನೆಗಳು, ಬಂಡವಾಳ ಹೆಚ್ಚಿಸುವಿಕೆ, ಬೋನಸ್ ಷೇರುಗಳ ನೀಡಿಕೆ, ಕಂಪೆನಿಯ ಒಡಂಬಡಿಕೆಗಳು ಮತ್ತು ಅವುಗಳ ಪರಿಣಾಮ ಇವೇ ಮೊದಲಾದ ಅಂಶಗಳನ್ನು ಈ ವರದಿ ಒಳಗೊಂಡಿರುತ್ತದೆ.

ವಿಶೇಷ ಸಾಮಾನ್ಯ ಸಭೆಗಳು: ನಿರ್ದೇಶಕ ಮಂಡಳಿಯು ವಿಶೇಷ ಸಾಮಾನ್ಯ ಸಭೆಯನ್ನು ಕರೆಯಬಹುದು; ಸದಸ್ಯರಿಂದ ಕೋರಿಕೆ ಬಂದಾಗ ಮತ್ತು ನ್ಯಾಯಾಲಯದಿಂದ ಆದೇಶ ಬಂದಾಗ ಕಾನೂನಿನ ಪ್ರಕಾರ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಬೇಕಾಗುತ್ತದೆ.

ನಡೆವಳಿಕೆಗಳು: ನಿರ್ದೇಶಕರ ಸಭೆಯ ನಡೆವಳಿಕೆಗಳನ್ನು ವಾರ್ಷಿಕ ಸಾಮಾನ್ಯ ಸಭೆಯ ನಡೆವಳಿಕೆಗಳನ್ನು ಬರೆಯುವ ಮಾದರಿಯಲ್ಲೇ ತಯಾರಿಸಲಾಗುತ್ತದೆ *೨.

 

ನಿರ್ದೇಶಕರ ಮಂಡಳಿ ಸಭೆಗಳುಕಾರ್ಯಸೂಚಿ
ಮಾದರಿ

ತಿಳಿವಳಿಕೆ ಪತ್ರ

ಸುಜನೋದ್ಧಾರ ಕೈಗಾರಿಕಾ ಕಂಪೆನಿ ಲಿಮಿಟೆಡ್
ಕೇಂದ್ರ ಕಚೇರಿ, ಅಂಬೇಡ್ಕರ್ ನಗರ, ಬೆಂಗಳೂರು

ಮಾನ್ಯರೆ,

ಮೇಲ್ಕಂಡ ಕಂಪೆನಿಯ ನಿರ್ದೇಶಕರ ಮಂಡಳಿಯ ಸಭೆಯು ಕಂಪೆನಿಯ ಕೇಂದ್ರ ಕಚೇರಿಯಲ್ಲಿ ೪-೧೦೧೯೮೭ರಂದು ಮಧ್ಯಾಹ್ನ ೩ ಗಂಟೆಗೆ ಸರಿಯಾಗಿ ಕೆಳಕಂಡ ಕಾರ್ಯಸೂಚಿಯ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲು ಸೇರಲಿದೆ ಎಂದು ತಮಗೆ ತಿಳಿಸುತ್ತಿದ್ದೇನೆ.

ತಾ.೨-೧೦-೧೯೮೭
ಬೆಂಗಳೂರು

ನಿಮ್ಮ ವಿಶ್ವಾಸದ,
ನಂಜುಂಡಪ್ಪ
ಕಾರ್ಯದರ್ಶಿ.

ಕಾರ್ಯಸೂಚಿ

೧. ಕಳೆದ ಸಭೆಯ ನಡೆವಳಿಕೆಯ ವಾಚನ ಮತ್ತು ಅಂಗೀಕಾರ

೨. ಷೇರು ವರ್ಗಾವಣೆ ವಿಚಾರ

೩. ನಗದು ಲೆಕ್ಕ ಹಾಗೂ ಬ್ಯಾಂಕಿನ ದಾಖಲೆ ಪುಸ್ತಕ (ಪಾಸ್‌ಬುಕ್)

೪. ನೌಕರರ ಸಂಬಳ ಸುಧಾರಣಾ ಸಮಿತಿಯ ರಚನೆ

೫. ಮುಂದಣ ಸಭೆಯ ದಿನಾಂಕ ನಿರ್ಧಾರ

೬. ಅಧ್ಯಕ್ಷರ ಅನುಮತಿ ಪಡೆದು ಚರ್ಚಿಸಬಹುದಾದ ಇತರ ವಿಷಯಗಳು.

 

ನಿರ್ದೇಕರ ಮಂಡಳಿನಡೆವಳಿಕೆ
ಮಾದರಿ

ಸುಜನೋದ್ಧಾರ ಗೃಹ ಕೈಗಾರಿಕಾ ಕಂಪೆನಿ ಲಿಮಿಟೆಡ್
ಕೇಂದ್ರ ಕಚೇರಿ, ಅಂಬೇಡ್ಕರ್ ನಗರ, ಬೆಂಗಳೂರು.

ದಿನಾಂಕ ೪-೧೦-೧೯೮೭ರಂದು ಮಧ್ಯಾಹ್ನ ೩ ಗಂಟೆಗೆ ಸರಿಯಾಗಿ ಕಂಪೆನಿಯ ಕೇಂದ್ರ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಭೆಯ ನಡೆಳಿಕೆ.

ಹಾಜರಿದ್ದವರು
ಸರ್ವಶ್ರೀ/ಶ್ರೀಮತಿ
೧. ರಾಮಾನುಜ
೨. ಅಬ್ಬುಲ್ ಖಾಲಕ್ ಜಿ.ಕೆ
೩. ರಮೇಶ್
೪. ಶ್ರೀನಿವಾಸ್
೫. ಸಿ. ಗೋವಿಂಧ ಶೆಟ್ಟಿ
೬. ಶಾಮಾಚಾರ್
೭. ವಲ್ಲಭ ಅಯ್ಯಂಗಾರ್
೮. ಕೆ.ಜಾನ್ಸನ್
೧೧. ಸಲೀಮುನ್ನಿಸ

ಅಧ್ಯಕ್ಷರು: ಶ್ರೀ ಜಯಶೀಲರಾವ್.

ಸಮಕ್ಷಮ: ಶ್ರೀ ನಂಜುಂಡಪ್ಪ-ಕಾರ್ಯದರ್ಶಿ

ಗೈರುಹಾಜರಾದವರು
ಸರ್ವಶ್ರೀ/ಶ್ರೀಮತಿ
೧. ಮುತ್ತು
೨. ವೆಂಕಣ್ಣಾಚಾರ್
೩. ರಾಮದೇವ್.ಎಸ್.

 

ಕ್ರ.ಸಂ

ವಿಷಯ

ನಡೆವಳಿಕೆ

೧. ಕಳೆದ ಸಭೆಯ ನಡೆವಳಿಕೆ ವಾಚನ ಮತ್ತು ಅಂಗೀಕಾರ ೧೬-೯-೧೯೮೭ರಂದು ನಡೆದ ಮಂಡಳಿಯ ಸಭೆಯ ಕಾರ್ಯ ಕಲಾಪಗಳನ್ನು ವಾಚನ ಮಾಡಿ ಸ್ಥರೀಕರಿಸಿ ಅಧ್ಯಕ್ಷರು ಸಹಿ ಹಾಕಿದರು.
೨. ಷೇರು ವರ್ಗಾವಣೆ ಶ್ರೀ ರಾಮಚಂದ್ರ ಅವರು ತಮ್ಮ ಷೇರುಗಳನ್ನು ಶ್ರೀ ನಾರಾಯಣ ಸ್ವಾಮಿಯವರಿಗೆ ವರ್ಗಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಕಾರ್ಯದರ್ಶಿ, ಮಂಜುರಾತಿ ನೀಡಬೇಕೆಂದು ಕೋರಿದರು. ಸಭೆ ಅಂಗೀಕಾರ ನೀಡಿ ನಿರ್ಣಯ ಮಾಡಿತು. “ಕಂಪೆನಿಯ ಷೇರುದಾರರಾದ ಶ್ರೀರಾಮಚಂದ್ರ ಅವರ ಷೇರುಗಳನ್ನು (ಸಂ.೧೮೦-೨೦೨) ಶ್ರೀ ನಾರಾಯಣಸ್ವಾಮಿಯವರಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಯಿತು. ಈ ಬಗ್ಗೆ ಕಾರ್ಯದರ್ಶಿಯವರು ಕ್ರಮಕೈಗೊಂಡು ಶ್ರೀ ನಾರಾಯಣಸ್ವಾಮಿಯವರಿಗೆ ಷೇರು ಸರ್ಟಿಫಿಕೇಟು ನೀಡಬೇಕೆಂದು ಸೂಚಿಸಲಾಯಿತು.
೩. ನಗದು ಲೆಕ್ಕ ಮತ್ತು ಬ್ಯಾಂಕಿನ ದಾಖಲಾತಿ ಪುಸ್ತಕ (ಪಾಸ್‌ಬುಕ್) ನಗದು ಲೆಕ್ಕ ಪುಸ್ತಕವನ್ನೂ ಬ್ಯಾಂಕು ದಾಖಲಾತಿ ಪುಸ್ತಕವನ್ನೂ ಸಭೆಯ ಮುಂದಿಡಲಾಯಿತು. ಎರಡನ್ನೂ ಪರಿಶೀಲಿಸಿದಾಗ ಲೆಕ್ಕಗಳು ಸರಿಯಾಗಿದ್ದವು.ಚಾಲ್ತಿ ಲೆಕ್ಕದ ಉಳಿಕೆ ರೂ. ೨೩೨೫-೮೫
ಠೇವಣಿ ಲೆಕ್ಕ: ರೂ. ೧೯೦೦-೦೦
ಒಟ್ಟು: ರೂ. ೪೨೨೫-೮೫
೪. ನೌಕರರ ಸಂಬಳ ಸುಧಾರಣೆ ಸಮಿತಿ ರಚನೆ ಕಾರ್ಯದರ್ಶಿಯವರು ನೌಕರರ ಬಹುಕಾಲದ ಬೇಡಿಕೆಯಾದ ಸಂಬಳ-ಸಾರಿಗೆ ಹೆಚ್ಚಳವನ್ನು ಕುರಿತ ಬಿನ್ನಹವನ್ನು ಸಭೆಯ ಮುಂದಿಟ್ಟರು. ಸಭೆಯು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ ನಂತರ ಈ ಕೆಳಕಂಡ ನಿರ್ಣಯವನ್ನು ಸ್ವೀಕರಿಸಿತು.”ಈ ಕಂಪೆನಿಯ ಸಿಬ್ಬಂದಿ ವರ್ಗದವರ ಸಂಬಳ ಸುಧಾರಣೆ ಬಗ್ಗೆ ವರದಿ ಸಲ್ಲಿಸಲು ಒಪ್ಪಿ ಈ ಕೆಳಕಂಡವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿದೆ. ಈ ಸಮಿತಿ ೩ ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕೆಂದು ಈ ಸಭೆ ಒಪ್ಪಿ ನಿರ್ಣಯ ಮಾಡಿದೆ.”

ಅಧಿಕಾರ ನಿಮಿತ್ತ ಅಧ್ಯಕ್ಷರು, ಕಾರ್ಯದರ್ಶಿ; ನಿರ್ದೇಶಕರಾದ ಶ್ರೀಮತಿ ಸಲೀಮುನ್ನಿಸ, ಶ್ರೀ ಕೆ.ಜಾನ್ಸನ್, ಶ್ರೀ.ಸಿ.ಗೋವಿಂದಶೆಟ್ಟಿ ಇವರು ಸಮಿತಿಯಲ್ಲಿರುತ್ತಾರೆ.

೫. ಮುಂದಿ ಸಭೆಯ ದಿನಾಂಕ ನಿರ್ಧಾರ ಮಂಡಳಿಯ ಮುಂದಿನ ಸಭೆ ೧೧-೧೧-೧೯೮೭ರಂದು ಬೆಳಗ್ಗೆ ೧೦ ಗಂಟೆಗೆ ಕಂಪೆನಿಯ ಕೇಂದ್ರ ಕಚೇರಿಯಲ್ಲಿ ಸೇರಬೇಕೆಂದು ತೀರ್ಮಾನಿಸಲಾಯಿತು.
೬. ಕಂಪೆನಿಯ ಪ್ರಕಟಣೆ ಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬಗ್ಗೆ ಅಧ್ಯಕ್ಷರ ಅನುಮತಿ ಪಡೆದು ಅಬ್ದುಲ್ ಖಾಲಕ್ ಜಿ.ಕೆ. ಅವರು ಕಂಪೆನಿಯ ನೋಟೀಸು, ಪ್ರಕಟಣೆ ಮೊದಲಾದವು ಕನ್ನಡದಲ್ಲಿ ಇಲ್ಲ; ಈಗ ಕನ್ನಡ ಆಡಳಿತ ಭಾಷೆಯಾಗಿದೆ; ಕಂಪೆನಿಯ ವ್ಯವಹಾರವೆಲ್ಲಾ ಇನ್ನು ಮೇಲೆ ಕನ್ನಡದಲ್ಲೇ ನಡೆಯಬೇಕೆಂದೂ ಈ ಬಗ್ಗೆ ಸೂಕ್ತ ಕ್ರಮಕೈಗೊಲ್ಳಬೇಕೆಂದೂ ಕೋರಿದರು: ಎಲ್ಲಾ ಸದಸ್ಯರೂ ಅನುಮೋದಿಸಿದರು, ಅಧ್ಯಕ್ಷರು, ಈ ಬಗ್ಗೆ ಸೂಕ್ತ ಆದೇಶವನ್ನು ಹೊರಡಿಸಲು ಕಾರ್ಯದರ್ಶಿಯವರಿಗೆ ಸೂಚಿಸಿದರು.

* * *