ಮಹತ್ವ

ವಾಣಿಜ್ಯ ಕ್ಷೇತ್ರದಲ್ಲಿ ನಡೆಯುವ ವ್ಯವಹಾರಗಳೆಲ್ಲ ಕೇವಲ ವ್ಯಕ್ತಿಗಳ ನಡುವೆ ಅಥವಾ ಸಂಸ್ಥೆಗಳ ನಡುವೆ ಇಲ್ಲವೆ ವ್ಯಕ್ತಿ ಮತ್ತು ಸಂಸ್ಥೆಗಳ ನಡುವೆ ನಡೆಯುವಂಥವಾಗಿರುತ್ತವೆ. ಈ ವ್ಯವಹಾರದಲ್ಲಿ ವ್ಯಕ್ತಿಯನ್ನೋ ಸಂಸ್ಥೆಯನ್ನೋ ಉದ್ದೇಶಿಸಿ ಪತ್ರ ವ್ಯವಹಾರ ನಡೆಯುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಕೆಲವಾರು ವಿಷಯಗಳನ್ನು ವ್ಯಕ್ತಿಗಳ ಅಥವಾ ಸಂಸ್ಥೆಗಳ ಗಮನಕ್ಕೆ ತರಲು ಏಕಕಾಲದಲ್ಲಿ ನೂರಾರು ಮಂದಿಗೆ ಶೀಘ್ರವಾಗಿ ತಿಳಿಯಲು ಅನೇಕ ಪ್ರತಿಗಳನ್ನು ಪ್ರಕಟಿಸುತ್ತಾರೆ. ಈ ಬಗೆಯ ಪ್ರಕಟಣೆಗಳನ್ನು ‘ಪರಿಪತ್ರ’ ಅಥವಾ ‘ಸುತ್ತೋಲೆ’ ಎಂದು ಕರೆಯುತ್ತಾರೆ. ಪರಿಪತ್ರ ನಿರ್ದಿಷ್ಟ ವ್ಯವಹಾರಕ್ಕೆ ಸಂಬಂಧಿಸಿದ್ವರಿಗೆ ಅಥವಾ ಅನೇಕರಿಗೆ, ಕೆಲವೊಮ್ಮೆ ಇಡೀ ಜನತೆಗೆ ಸಮಸ್ತ ಗ್ರಾಹಕರಿಗೆ ತಿಳಿಸುವ ಪ್ರಕಟಣೆಯಾಗಿರುತ್ತದೆ; ಎಲ್ಲರಿಗೂ ತಿಳಿಸುವ ವಿಷಯ ಮತ್ತು ವಿಧಾನದಲ್ಲಿ ವ್ಯತ್ಯಾಸವಿರುವುದಿಲ್ಲ. ಲಿಪಿ ಯಂತ್ರದ ಪ್ರತಿ ಅಥವಾ ಮುದ್ರಿತ ಪ್ರತಿಗಳನ್ನು ಹಂಚಲಾಗುವುದು.

ವಾಣಿಜ್ಯ ಕ್ಷೇತ್ರದಲ್ಲಿ ಸಂಸ್ಥೆಗೆ ಸಂಬಂಧಿಸಿದ, ಅನೇಕರಿಗೆ ತಿಳಿಯಬೇಕಾದ ಮಹತ್ವ ಪೂರ್ಣವಾದ ಸಂಗತಿ ಅಥವಾ ಘಟನೆಯನ್ನು ಕುರಿತು ಹೊರಡಿಸುವ ಪ್ರಕಟಣೆ ಎಲ್ಲರಲ್ಲೂ ಪ್ರಸಾರವಾಗುವುದರಿಂದ ಇದಕ್ಕೆ ಸುತ್ತೋಲೆ ಅಥವಾ ಪರಿಪತ್ರ ಎಂಬ ಹೆಸರು ಬಂದಿದೆ. ಆದರೆ ಇದು ಜಾಹೀರಾತಲ್ಲ. ಕಾನೂನು ಬದ್ಧವಾಗಿ ನೀಡುವ ತಿಳಿವಳಿಕೆ ಪತ್ರವೂ ಅಲ್ಲ; ಮುಖ್ಯವಾಗಿ ವ್ಯಾಪಾರಿ ಸಂಸ್ಥೆಯೊಡನೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿದವರ ಗಮನಕ್ಕೆ ತರಬೇಕಾದ ಪ್ರಕಟಣಾ ಪತ್ರ.

ಲಕ್ಷಣಗಳು: ವಾಣಿಜ್ಯ ಪರಿಪತ್ರದ ಮೇಲೆ ಒಳವಿಳಾಸ ನಮೂದಿಸಿರುವುದಿಲ್ಲ. ಆದರೆ ಪರಿಪತ್ರ ನೇರವಾಗಿ ವ್ಯಕ್ತಿಯನ್ನು ಸಂಬೋಧಿಸಿದ ಧಾಟಿಯಲ್ಲಿ ಇರುತ್ತದೆ. ಸರ್ಕಾರಿ ಸುತ್ತೋಲೆಯ ಧಾಟಿ ಇದಕ್ಕಿಂತ ಭಿನ್ನವಾಗಿರುತ್ತದೆ. ಅದು ಪರೋಕ್ಷ ಧಾಟಿಯಲ್ಲಿರುತ್ತದೆ.  ವಾಣಿಜ್ಯ ಪರಿಪತ್ರವನ್ನು ಓದಿದಾಗ ಖಾಸಗಿ ಪತ್ರವನ್ನು ಓದಿದ ಅನುಭವವಾಗಬೇಕು. ಪರಿಪತ್ರಗಳಿಗೆ ಸ್ವಹಸ್ತಾಕ್ಷರಗಳಲ್ಲಿ ಸಹಿ ಹಾಕಿದರೆ ಆತ್ಮೀಯತೆಯ ಸ್ಪರ್ಶ ಉಂಟಾಗುತ್ತದೆ. ಒಂದು ವೇಳೆ ಸ್ವಹಸ್ತಾಕ್ಷರಗಳಲ್ಲಿ ಸಹಿ ಹಾಕುವ ಶಕ್ಯವಿಲ್ಲದಿದ್ದಲ್ಲಿ ಯಥಾಸಹಮುದ್ರೆ(ಫ್ಯಾಕ್ಸಿ ಮಿಲಿ) ಬಳಸುವುದು ಸೂಕ್ತ. ‘ಗೆ’ ವಿಳಾಸ ಕವರಿನ ಮೇಲಿರುವುದರಿಂದ ಪರಿಪತ್ರವನ್ನು ವಿಳಾಸದಾರರಿಗೆ ಕಳಿಸಿದ್ದು ಎಂಬುದು ಸ್ಪಷ್ಟವಾಗುತ್ತದೆ. ಆದರೂ ಕೆಲವರು ಪರಿಪತ್ರದ ಪತ್ರಿಯ ಮೇಲ್ಭಾಗದಲ್ಲಿ ವಿಳಾಸದಾರರ ಹೆಸರನ್ನಷ್ಟೇ ಬರೆಯುವುದನ್ನು ಗಮನಿಸಬೇಕು. ಪರಿಪತ್ರ ಅನೇಕರಿಗೆ ಸೇರುವುದರಿಂದ ಅದು ಎಲ್ಲರಿಗೂ ಹಿತವಾಗುವ ಶೈಲಿಯಲ್ಲಿ ರಚಿತವಾಗಿರಬೇಕು. ವೈಯಕ್ತಿಕವಾಗಿ ಬರೆಯುವ ಪತ್ರದಲ್ಲಿರಬೇಕಾದ ಗುಣಗಳೆಲ್ಲವೂ ಅದರಲ್ಲಿರಬೇಕು.

ಸಂದರ್ಭಾನುಸಾರ ಪರಿಪತ್ರದ ಒಕ್ಕಣೆಯಲ್ಲಿ ಅಲ್ಪಸ್ವಲ್ಪ ಮಾರ್ಮಾಡುಗಳಾಗುವುದೂ ಉಂಟು. ಎಲ್ಲಾ ಬಗೆಯ ಪರಿಪತ್ರಗಳಲ್ಲಿಯೂ ವಿಷಯ ನಿರೂಪಣೆ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಉದಾಹರಣೆಗೆ, ವ್ಯಾಪಾರವನ್ನು ಹೊಸದಾಗಿ ಪ್ರಾರಂಭವಾಗುವ ದಿನ, ವೇಳೆ, ಕಾರ್ಯಕ್ರಮದ ವಿವರ, ಸಾರ್ವಜನಿಕ ಹಿತೈಷಿಗಳ ಪ್ರೋತ್ಸಾಹಕ್ಕೆ ವಿನಂತಿ, ಸಂಸ್ಥೆಯನ್ನು ಹೊಸದಾಗ ಪ್ರಾರಂಭ ಮಾಡುತ್ತಿರುವುದರ ಅಗತ್ಯ, ಲಭಿಸುವ ವಿಶೇಷ ಸೌಲಭ್ಯ ಮತ್ತು ಆಕರ್ಷಣೆಯ ವಿಚಾರಗಳನ್ನು ಪರಿಪತ್ರದಲ್ಲಿ ತಿಳಿಸಬೇಕು. ಆ ಪತ್ರದಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡುವ ನಿರೂಪಣಾ ಧಾಟಿ ಇರಬೇಕು; ಆದರೆ ಆತ್ಮಪ್ರಶಂಸಾ ಧಾಟಿಯಲ್ಲಿರಬಾರದು. ವ್ಯಾಪಾರ ಸಂಸ್ಥೆಯ ಅಧಿಕೃತ ಚಿಹ್ನೆ, ವ್ಯಾಪಾರ ನಿರ್ವಾಹಕನ ಸಹಿ, ವ್ಯಾಪಾರ ಮಾಡುವ ವಸ್ತುಗಳ ವಿವರ ಇಲ್ಲಿ ಮುಖ್ಯ. ವ್ಯವಹರಿಸುವಂಥವರಿಗೆ ಈ ಎಲ್ಲಾ ಅಂಶಗಳು ಉಪಯುಕ್ತವೆನಿಸುತ್ತವೆ.

ಹೊಸ ಶಾಖೆಯನ್ನು ಪ್ರಾರಂಭಿಸಿದಾಗ ಕಳಿಸುವ ಪರಿಪತ್ರದಲ್ಲಿ  ಮುಖ್ಯವಾಗಿ ಶಾಖೆಯ ವ್ಯವಸ್ಥಾಪಕರ ಹೆಸರು ಮತ್ತು ಮಾದರಿ ಸಹಿಗಳಿರುತ್ತವೆ; ಜೊತೆಗೆ ಹೊಸ ಶಾಖೆಯನ್ನು ಪ್ರಾರಂಭಿಸುತ್ತಿರುವುದರ ಅಗತ್ಯ ಹಾಗೂ ಅದರಿಂದ ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ಪ್ರಸ್ತಾಪವಿರುತ್ತದೆ.

ವ್ಯಾಪಾರ ಸ್ಥಳದ ಬದಲಾವಣೆಯಾದಾಗ ಸಂಬಂಧಿಸಿದ ಗ್ರಾಹಕರ ಗಮನಕ್ಕೆ ತರಲು ಪರಿಪತ್ರವನ್ನು ಹೊರಡಿಸಬೇಕು; ಇದರಲ್ಲಿ ಹೊಸ ಸ್ಥಳದ ವಿಳಾಸ, ಪ್ರಾರಂಭವಾಗುವ ದಿನಾಂಕ, ಕೆಲಸದ ವೇಳೆಯನ್ನು ನಮೂದಿಸಬೇಕು.

ಸಂಸ್ಥೆಯ ಪಾಲುದಾರ, ಕಾರ್ಯಕರ್ತ, ಪ್ರತಿನಿಧಿ, ಕಾರ್ಯನಿರ್ವಾಹಕ ಮೊದಲಾದ ಮುಖ್ಯ ವ್ಯಕ್ತಿಗಳು ವ್ಯವಹಾರದ ದೃಷ್ಟಿಯಿಂದ ಗಮನಾರ್ಹರಾದವರು; ಅವರಲ್ಲಿ ಬದಲಾವಣೆಗಳಾಗಬಹುದು; ಉದಾಹರಣೆಗೆ: ಹೊಸಬರು ಬರುವುದು, ವಯೋವೃದ್ಧರು ನಿವೃತ್ತರಾಗುವದು ಮೊದಲಾದ ವಿದ್ಯಮಾನಗಳು ಯಾವುದೇ ಸಂಸ್ಥೆಯಲ್ಲಾದರೂ ಕಾಣಿಸಿಕೊಳ್ಳುವ ಸಾಮಾನ್ಯ ಸಂಗತಿಗಳು. ಇಂಥ ಸಂದರ್ಭಗಳಲ್ಲಿ ಹೊರಡಿಸುವ ಪರಿಪತ್ರಗಳಲ್ಲಿ ಮುಖ್ಯವಾಗಿ ವ್ಯಕ್ತಿಯ ಬದಲಾವಣೆಗೆ ಕಾರಣ, ಹೊಸಬರ ಪರಿಚಯ, ಇದರ ಫಲವಾಗಿ ವ್ಯಾಪಾರದ ವಿಧಾನದಲ್ಲಿ ಉಂಟಾದ ವ್ಯತ್ಯಾಸಗಳನ್ನು (ಇದ್ದಲ್ಲಿ) ತಿಳಿಸಬೇಕು; ಹೊಸಬರೊಂದಿಗೆ ಮತ್ತು ಸಂಸ್ಥೆಯೊಂದಿಗೆ ಮೊದಲಿನಂತೆ ಗ್ರಾಹಕರಿಂದ ಸಹಕಾರ ದೊರೆಯಲಿ ಎಂದು ಆಶಿಸುವುದು ಇವೇ ಮೊದಲಾದ ಅಂಶಗಳು ಇರಬೇಕು. ಹೊಸ ಪಾಲುದಾರ ಬಂದಾಗ ಸಂಸ್ಥೆ ಸಂತೋಷ ವ್ಯಕ್ತಪಡಿಸುವುದು, ಪಾಲುದಾರನೊಬ್ಬ ನಿವೃತ್ತನಾದಾಗ *೧ ಇದರುವರೆಗಿನ ಆತನ ಸೇವೆಗೆ ಕೃತಜ್ಞತೆಯ ನುಡಿ, ಮರಣ ಹೊಂದಿದರೆ ಸಂತಾಫದ ಸೂಚನೆ, ಪ್ರತಿನಿಧಿ ರಾಜೀನಾಮೆ ಇತ್ತಿದ್ದರೆ ಬದಲಾದ ವ್ಯಕ್ತಿಯ ಬಗ್ಗೆ ವಿವರ ಸೂಚಿಸುವುದು, ಸಂಸ್ಥೆಗೆ ಮೋಸ ಮಾಡಿ ಕಣ್ ತಪ್ಪಿಸಿ ಓಡುವ ವ್ಯಕ್ತಿಗಳ ಬಗ್ಗೆ ಎಚ್ಚರವಹಿಸುವಂತೆ ಸೂಚಿಸುವುದು ಸಾಮಾನ್ಯ.

ಎಷ್ಟೋ ಸಂದರ್ಭಗಳಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಹಲವಾರು ಸಂಸ್ಥೆಗಳು ಒಟ್ಟುಗೂಡಿದರೆ ಹೆಚ್ಚು ಲಾಭದಾಯಕವೆಂದೋ, ಮಿತವ್ಯಯ ಸಾಧ್ಯವೆಂದೋ, ಪೈಪೋಟಿ ತಪ್ಪುತ್ತದೆ ಎಂದೋ ಒಂದಾಗಲು ಹಣವಿಸುತ್ತವೆ. ಇಂಥ ಸಂದರ್ಭಗಳಲ್ಲಿ ಸಂಸ್ಥೆಗಳು ಎರಡು ಬಗೆಗಳಲ್ಲಿ ಒಂದುಗೂಡುತ್ತವೆ. ಮೊದಲನೆಯದಾಗಿ ಈ ಮೊದಲು ವ್ಯಾಪಾರ ಮಾಡುತ್ತಿದ್ದ ಸಂಸ್ಥೆಗಳು ಕಾನೂನು ರೀತ್ಯಾ ವಿಸರ್ಜಿತವಾಗಿ, ಆ ಎಲ್ಲ ಸಂಸ್ಥೆಗಳೂ ಸೇರಿಕೊಂಡು ಹೊಸ ಸಂಸ್ಥೆಯನ್ನು ಸ್ಥಾಪಿಸುತ್ತದೆ. ಎರಡನೆಯದಾಗಿ, ಆ ಉಳಿದ ಸಂಸ್ಥೆಯಲ್ಲಿ ಅವೆಲ್ಲಾ ವಿಲೀನ ಹೊಂದಬಹುದು. ಹೀಗೆ ಸಂಸ್ಥೆಗಳ ಸಂಯೋಗ(ವಿಲೀನಿಕರಣ) ಎರಡು ರೀತಿಯಲ್ಲಿ ಆಗುತ್ತದೆ *೨.

ವ್ಯಾಪಾರ ಸಂಸ್ಥೆ ಹಲವು ಸಲ ಕೈಯಿಂದ ಕೈಗೆ ಬದಲಾಗುವುದುಂಟು. ಕೆಲವರು ಇಡೀ ಸಂಸ್ಥೆಯನ್ನೇ ವಿಕ್ರಯಿಸಬಹುದು. ಇಲ್ಲವೆ ಆಸ್ತಿ ಹಂಚಿಕೆ ಹಿನ್ನೆಲೆಯಲ್ಲಿ ಮಕ್ಕಳಿಗೆ ವರ್ಗಾವಣೆ ಮಾಡುವುದುಂಟು. ಹೀಗೆ ಹಲವಾರು ಕಾರಣಗಳಿಗಾಗಿ ಸಂಸ್ಥೆಯ ಮಾಲೀಕತ್ವದಲ್ಲಿ ಬದಲಾವಣೆಗಳಾದಾಗ ಪರಿಪತ್ರ ಪ್ರಕಟಿಸಿ ಇನ್ನು ಮುಂದೆ ಇಂಥವರು ಪಾಲುದಾರರು ಅಥವಾ ಮಾಲೀಕರು; ಅವರೊಡನೆ ವ್ಯವಹರಿಸಬೇಕು; ನಮಗೆ ನೀಡುತ್ತಿದ್ದ ಸಹಕಾರ  ಪ್ರೋತ್ಸಾಹಗಳು ಅವರಿಗೆ ನೀಡಿ ಎಂದು ಕೋರುತ್ತಾರೆ. ಇಂಥ ಸಂದರ್ಭಗಳಲ್ಲಿ ವ್ಯಾಪಾರದ ಜವಾಬ್ದಾರಿಯನ್ನು ವಹಿಸಿಕೊಂಡವರು ಪತ್ರವನ್ನು ಕಳಿಸುವುದುಂಟು. *೩.

ಕೆಲವೊಮ್ಮೆ ಸಂಸ್ಥೆಯಿಂದ ಹೊರಗೆ ಹಾಕಲ್ಪಟ್ಟ, ಅನಧಿಕೃವಾಗಿ ಸಂಸ್ಥೆಯನ್ನು ಬಿಟ್ಟ, ಸಂಸ್ಥೆಯ ಹೆಸರಿನಲ್ಲಿ ಅವ್ಯವಹಾರ ನಡೆಸಿದ ವ್ಯಕ್ತಿಗಳ ಬಗ್ಗೆ ಪರಿಪತ್ರಗಳನ್ನು ಅಚ್ಚು ಮಾಡಿಸಿ ಗ್ರಾಹಕರಿಗೆ ಕಳಿಸುವುದುಂಟು. ಹೀಗೆ ಪರಿಪತ್ರಗಳನ್ನು ನಾನಾ ಸಂದರ್ಭಗಳಲ್ಲಿ ಕಳಿಸಿಕೊಡಲಾಗುತ್ತದೆ; ಕೆಲವು ಸಂಗತಿಗಳನ್ನು ಸಂದರ್ಭಕ್ಕೆ ತಕ್ಕಂತೆ ವಿಶಿಷ್ಟ ರೀತಿಯಲ್ಲಿ ನಿರೂಪಿಸಲಾಗುತ್ತೆ ಎಂಬ ವಿಷಯ ದಿಟವಾದುದು.

ವರ್ಗೀಕರಣ: ಪರಿಪತ್ರಗಳನ್ನು ಖಾಸಗಿ ಪರಿಪತ್ರಗಳು, ಸಾರ್ವಜನಿಕ ಪರಿಪತ್ರಗಳು, ವಾಣಿಯ ಪರಿಪತ್ರಗಳು, ಸರ್ಕಾರಿ ಸುತ್ತೋಲೆಗಳು ಎಂದು ನಾಲ್ಕು ಬಗೆಯಾಗಿ ವರ್ಗೀಕರಿಸಬಹುದು.

ಖಾಸಗಿ ಪರಿಪತ್ರಗಳು: ಈ ಪತ್ರಗಳು ಜನ್ಮ ಶುಭಾಶಯಗಳು, ಗೃಹ ಪ್ರವೇಶ, ಷಷ್ಠಬ್ಧಿ, ನಿಧನ ವಿಶೇಷ ಪೂಜಾ ಕಾರ್ಯಕ್ರಮ ಮೊದಲಾದವುಗಳಿಗೆ ಸಂಬಂಧಿಸಿರುತ್ತವೆ. ಇವು ವೈಯಕ್ತಿಕ ಸ್ವರೂಪದ ಪರಿಪತ್ರಗಳಾಗಿ ಪ್ರಕಟವಾಗುತ್ತವೆ. ಇವು ಬಹುತೇಕ ಆಹ್ವಾನ ಪತ್ರಿಕೆಗಳ  ಸ್ವರೂಪದಲ್ಲಿರುತ್ತವೆ.

ಸಾರ್ವಜನಿಕ ಪರಿಪತ್ರಗಳು: ಇವನ್ನು ಸಾಮಾನ್ಯವಾಗಿ ಸಂಸ್ಥೆಗಳು ಹೊರಡಿಸುತ್ತವೆ; ಕೆಲವೊಮ್ಮೆ ಗಣ್ಯ ವ್ಯಕ್ತಿಗಳೂ ಪ್ರಕಟಿಸುವುದುಂಟು. ರಾಮನವಮಿ, ಈದ್‌ಮಿಲಾದ್, ಗಣೇಶೋತ್ಸವ ಮೊದಲಾದ ವಿಶೇಷ ಸಾರ್ವಜನಿಕ ಕಾರ್ಯಕ್ರಮಗಳ ಅಂಗವಾಗಿ ಸುತ್ತೋಲೆಯನ್ನು ಹೊರಡಿಸುತ್ತಾರೆ. ಬಸವ ಜಯಂತಿ, ಪುರಂದರೋತ್ಸವ ೧೦೦೧ ಸತ್ಯನಾರಾಯಣ ಪೂಜೆ, ನವರಾತ್ರಿ ಉತ್ಸವ, ಸಪ್ತಾಹಗಳು, ಆರಾಧನೆಗಳು ಮೊದಲಾದ ಧಾರ್ಮಿಕ ಸಮಾರಂಭಗಳ ಬಗ್ಗೆಯೂ ಸುತ್ತೋಲೆಗಳು ಪ್ರಕಟವಾಗುತ್ತವೆ. ಇವು ಬಹುಮಟ್ಟಿಗೆ ಪ್ರಕಟಣೆಗಳಾಇ, ಹೇಳಿಕೆಗಳಾಗಿ, ಮಹಾಜನಗಳಲ್ಲಿ ವಿನಂತಿ, ಧಾರ್ಮಿಕ ಬಂಧುಗಳಲ್ಲಿ ಬಿನ್ನಹ, ಆಸ್ತಿಕ ಮಹಾಶಯರಲ್ಲಿ ವಿಜ್ಞಾಪನೆ ಎಂಬ ಮೊದಲಾದ ಸಂಬೋಧನೆಗಳಲ್ಲಿ ಪ್ರಕಟವಾಗುತ್ತವೆ.

ವಾಣಿಜ್ಯ ಪರಿಪತ್ರಗಳು: ಇವು ವಾಣಿಜ್ಯ ಕ್ಷೇತ್ರದಲ್ಲಿ ಸಂಸ್ಥೆಗಳಿಗೆ, ಷೇರುದಾರರಿಗೆ, ಸಾರ್ವಜನಿಕರಿಗೆ, ಮಾರಾಟಗಾರರಿಗೆ, ಗ್ರಾಹಕರಿಗೆ ಸಂಬಂಧಿಸಿದಂತೆ ಪ್ರಕಟವಾಗುತ್ತವೆ. ವಾಣಿಜ್ಯ ಪರಿಪತ್ರಗಳಿಗೂ ವಾಣಿಜ್ಯೇತ ಪರಿಪತ್ರಗಳಿಗೂ ಕೆಲವು ವ್ಯತ್ಯಾಸಗಳು ಕಂಡು ಬರುತ್ತವೆ. ಉದಾಹರಣೆಗೆ: ಸಾರ್ವಜನಿಕ ಸುತ್ತೋಲೆಗಳು ಯಾರಿಗೆ ಬೇಕಾದರೂ ನೀಡಬಹುದು. ಆದರೆ ವಾಣಿಜ್ಯ ಪರಿಪತ್ರಗಳು ನಿರ್ದಿಷ್ಟ ವರ್ಗಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಮಾತ್ರ ಕಳಿಸಿಕೊಡುವಂಥವು. ಈ ಮಾತಿಗೆ ನಿದರ್ಶನವಾಗಿ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ಪರಿಪತ್ರಗಳನ್ನು ಗಮನಿಸಬಹುದು.

ಸರ್ಕಾರಿ ಸುತ್ತೋಲೆಗಳು: ಇವು ಸರ್ಕಾರಿ ಪತ್ರ ವ್ಯವಹಾರದ ಒಂದು ಭಾಗವಾಗಿವೆ. ಸರ್ಕಾರಿ ಪತ್ರ ವ್ಯವಹಾರದಲ್ಲಿ ಅಧಿಕೃತ ಪತ್ರಗಳು, ಅರೆ ಅಧಿಕೃತ ಪತ್ರಗಳು, ಜ್ಞಾಪನ ಪತ್ರಗಳು, ಇಸ್ತಿ ಹಾರ್ನಾಮೆ ಮೊದಲಾದ ಅನೇಕ ಬಗೆಯ ಪತ್ರಗಳಿವೆ. ಅವುಗಳ ಪೈಕಿ ಸರ್ಕಾರಿ ಸುತ್ತೋಲೆಯೂ ಒಂದಾಗಿದೆ (ನೋಡಿ: ೭.೨)

ವಾಣಿಜ್ಯ ಪರಿಪತ್ರಗಳನ್ನೇ ಗಮನಿಸಿದಲ್ಲಿ ಸಂದರ್ಭಾನುಸಾರ ಪಾಲುದಾರರಿಗೆ ಸಂಬಂಧಿಸಿದ ಪರಿಪತ್ರಗಳು, ಸಂಸ್ಥೆಗೆ ಸಂಬಂಧಿಸಿದ ಪರಿಪತ್ರಗಳು, ಮಾರಾಟಗಾರರಿಗೆ ಸಂಬಂಧಿಸಿದ ಪರಿಪತ್ರಗಳು, ಇತರ ಸಂದರ್ಭಗಳ ಪರಿಪತ್ರಗಳು ಎಂದು ನಾಲ್ಕು ಬಗೆಯಾಗಿ  ವರ್ಗೀಕರಿಸಬಹುದು. ವಾಣಿಜ್ಯ ಸುತ್ತೋಲೆಯನ್ನು ಬರೆಯುವ ಸಂದರ್ಭಗಳಾಗುವುವು ಎಂಬುದನ್ನು ಪರಿಶೀಲಿಸಿದಾಗ  ವಾಣಿಜ್ಯ ಪತ್ರದ ವ್ಯಾಪ್ತಿ ಚೆನ್ನಾಗಿ ಅರಿವಿಗೆ ಬರುತ್ತದೆ.

ವಾಣಿಜ್ಯ ಸುತ್ತೋಲೆಯ ಸಂದರ್ಭಗಳು

ವಾಣಿಜ್ಯ ಪರಿಪತ್ರಗಳನ್ನು ಬರೆಯುವ ಸಂದರ್ಭಗಳು ಇಷ್ಟೇ ಎಂದು ಹೇಳಲಾಗದು. ಆದರೂ ಕೆಲವು ಮುಖ್ಯ ಸಂದರ್ಭಗಳನ್ನು ಹೀಗೆ ಪಟ್ಟಿ ಮಾಡಬಹುದು.

ಪಾಲುದಾರರಿಗೆ ಸಂಬಂಧಿಸಿದ ಸಂದರ್ಭಗಳು

೧) ಹೊಸ ಪಾಲುದಾರರನ್ನು ಜೊತೆಗೆ ಸೇರಿಸಿಕೊಂಡಾಗ
೨) ಪಾಲುದಾರ ಮಡಿದಾಗ
೩) ಪಾಲುಗಾರಿಕೆ ವಿಸರ್ಜನೆಯಾದಾಗ
೪) ಪಾಲುದಾರರು ವಂಚಿಸಿ ಪಲಾಯನವಾದಾಗ
೫) ಪಾಲುದಾರ ನಿವೃತ್ತನಾದಾಗ.

ಸಂಸ್ಥೆಗೆ ಸಂಬಂಧಿಸಿದ ಸಂದರ್ಭಗಳು

೧) ಸಂಸ್ಥೆ ತನ್ನ ಹಕ್ಕುಗಳಲಿ ಇತರರಿಗೆ ವಹಿಸಿಕೊಟ್ಟಾಗ
೨) ಹೊಸದಾಗಿ ನಿಯೋಗಾಧಿಕಾರ ಹೊಂದಿದಾಗ
೩) ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯಲ್ಲಿ ಲೀನವಾದಾಗ
೪) ಸಂಸ್ಥೆಯ ಹೊಸ ಶಾಖೆ ಪ್ರಾರಂಭಿಸುವಾಗ
೫) ಕಾರಣಾಂತರಗಳಿಂದ ಸಂಸ್ಥೆಯನ್ನು ಮುಚ್ಚುವಾಗ
೬) ಸಂಸ್ಥೆಯ ಕಚೇರಿ ಅಥವಾ ವ್ಯಾಪಾರದ ಅಂಗಡಿಯನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿದಾಗ ಅಥವಾ ಇದ್ದ ಸ್ಥಳದಲ್ಲೇ ವಿಸ್ತರಿಸಿದಾಗ
೭) ಸಂಸ್ಥೆಯ ಆಡಳಿತಾಧಿಕಾರಿಗಳಲ್ಲಿ ಬದಲಾವಣೆಯಾಗ
೮) ಸಂಸ್ಥೆಯ ಹೆಸರನ್ನು ಬದಲಾಯಿಸುವಾಗ
೯) ಸಂಸ್ಥೆಯ ವಿಳಾಸ ಬದಲಾವಣೆಯಾದಾಗ
೧೦) ಸಂಸ್ಥೆಯ ಸಭೆಗಳನ್ನು ಕರೆದಾಗ

ಮಾರಾಟಗಾರರಿಗೆ ಸಂಬಂಧಿಸಿದ ಸಂದರ್ಭಗಳು

೧) ಅಧಿಕೃತ ಮಾರಾಟಗಾರರನ್ನು ಹೊಸದಾಗಿ ನೇಮಕ ಮಾಡಿಕೊಂಡಾಗ
೨) ಅಧಿಕೃತ ಮಾರಾಟಗಾರರನ್ನು ತೆಗೆದು ಹಾಕಿದಾಗ
೩) ಅಧಿಕೃತ ಮಾರಾಟಗಾರರಲ್ಲಿ ಬದಲಾವಣೆ ಮಾಡಿದಾಗ
೪) ಅನಧಿಕೃತ ಮಾರಾಟಗಾರರು ನಕಲಿ ಮಾಲು ಮಾರುತ್ತಿದಾಗ
೫) ಮಾರಾಟಗಾರರೊಬ್ಬರಿಗೆ ಕೊಟ್ಟಿದ್ದ ಅಧಿಕಾರವನ್ನು ಹಿಂತೆಗೆದುಕೊಂಡಾಗ

ಇತರ ಸಂದರ್ಭಗಳು

೧) ಹೊಸ ವಸ್ತುಗಳ ಮಾರಾಟದ ಪ್ರಕಟಣೆ ನೀಡುವಾಗ
೨) ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದಾಗ
೩) ಸಂಸ್ಥೆಗೆ ಸೇರಿದ ವಸ್ತುಗಳನ್ನು ಹರಾಜು ಮಾಡುವಾಗ
೪) ಸಾರ್ವಜನಿಕರಿಂದ ಚಂದಾ ವಸೂಲಿ ಮಡುವಾಗ
೫) ಪ್ರತಿನಿಧಿಗಳು, ಮಾರಾಟಗಾರರು ವಂಚಿಸಿದಾಗ

ಜಾಹೀರಾತು ಮಾರಾಟದ ಮಿತಿ: ಜಾಹೀರಾತು ಮತ್ತು ಪರಿಪತ್ರಗಳಿಗಿರುವ ವ್ಯತ್ಯಾಸಗಳೇನು? ಎಂಬುದನ್ನು ಸ್ವಲ್ಪ ಪರಿಶೀಲಿಸೋಣ. ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಪರಿಪತ್ರವನ್ನು ಕಳಿಸುವ ಬದಲು ಜಾಹೀರಾತಿನ ಮೂಲಕ ವಿವರಗಳನ್ನು ಪ್ರಕಟಿಸಿದರೆ ಹೆಚ್ಚು ಉಪಯುಕ್ತವಲ್ಲವೇ? ಎಂದು ಕೆಲವರು ಕೇಳಬಹುದು. ಆದರೆ ವಾಸ್ತವವಾಗಿ ಹಾಗೆ ಹೇಳಲಾಗದು; ಏಕೆಂದರೆ ಜಾಹೀರಾತಿಗಿಲ್ಲದ ಕೆಲವು ಅನುಕೂಲಗಳು ಪರಿಪತ್ರಗಳಿಗಿವೆ.

ಪರಿಪತ್ರದಲ್ಲಿ ಪ್ರಸ್ತಾಪಿಸುವ ವಿಷಯಗಳೆಲ್ಲವನ್ನೂ ಜಾಹೀರಾತಿನ ಮೂಲಕ ಪೂರ್ಣವಾಗಿ ತಿಳಿಸಲು ಸಾಧ್ಯವಾಗದು. ಏಕೆಂದರೆ ಜಾಹೀರಾತಿನ ವೆಚ್ಚ ಪರಿಪತ್ರಗಳ ವೆಚ್ಚಕ್ಕಿಂತ ಹೆಚ್ಚಾಗುತ್ತದೆ; ಪತ್ರಿಕೆಗಳ ಮೂಲಕ ಎಲ್ಲ ವಿವರಗಳನ್ನೂ ಪುಟಗಟ್ಟಲೆ ಜಾಹೀರಾತು ನೀಡಿದರೆ ಅತಿಯಾಗುತ್ತದೆ; ಪದೇ ಪದೇ ಹಲವಾರು ಬಾರೀ ಒಂದೇ ವಿಷಯವನ್ನು ಜಾಹೀರಾತು ಮಾಡಲು ಆರ್ಥಿಕ ದೃಷ್ಟಿಯಿಂದ ಸಾಧ್ಯವಾಗುವುದಿಲ್ಲ; ಅಷ್ಟೇ ಅಲ್ಲ, ಒಂದು ಸಲ ಪ್ರಕಟಿಸಿದರೆ ಅಥವಾ ಯಾವುದೋ ಒಂದು ಪತ್ರಿಕೆಯಲ್ಲಿ ಪ್ರಕಟಿಸಿದರೆ ಸಂಬಂಧಿಸಿದ ಎಲ್ಲರೂ ಗಮನಿಸುತ್ತಾರೆ ಎಂದು ಖಾತ್ರಿಯಿಲ್ಲ; ಜಾಹೀರಾತು ಪ್ರಕಟವಾಗುವ ಪತ್ರಿಕೆಗೆ ಸಂಬಂಧಿಸಿದವರೆಲ್ಲರೂ ಚಂದಾದಾರರಾಗಿರುವುದಿಲ್ಲ; ಅಥವಾ ಅವರಿರುವ ಎಡೆಯಲ್ಲಿ ಆ ಪತ್ರಿಕೆ ಸುಲಭವಾಗಿ ಸಿಗದಿರುವ ಸಂಭವವುಂಟು. ವಿದೇಶದಲ್ಲಿರುವ ಕನ್ನಡಿಗರಿಗೆ ಅಥವಾ ಉತ್ತರ ಭಾರತದಲ್ಲಿರುವ ಕನ್ನಡಿಗರಿಗೆ ಕನ್ನಡ ಪತ್ರಿಕೆ ಸುಲಭವಾಗಿ ಸಿಗದು; ಆದ ಕಾರಣ ಪರಿಪತ್ರಗಳಿಗೆ ವಿಶಿಷ್ಟ ಸ್ಥಾನವಿದೆ ಎನ್ನಬಹುದು; ಅಷ್ಟೇ ಅಲ್ಲ; ಅದು ಜಾಹೀರಾತಿಗಿಂತ ಭಿನ್ನವಾಗಿದೆ; ಮತ್ತೊಂದು ಅಂಶವೆಂದರೆ, ಜಾಹೀರಾತಿನಲ್ಲಿ ವಿನ್ಯಾಸಕ್ಕೆ ಪ್ರಾಶಸ್ತ್ಯವಿದೆ; ಪರಿಪತ್ರದಲ್ಲಿ ವಿಷಯಕ್ಕೆ ಪ್ರಾಶಸ್ತ್ಯವಿದೆ. ಜಾಹೀರಾತಿಗಿಂತ ಪರಿಪತ್ರ ಹೆಚ್ಚು ಆತ್ಮೀಯ ಸ್ವರೂಪದ್ದಾಗಿರುತ್ತದೆ.

ಪರಿಪತ್ರದ ಸೌಲಭ್ಯ: ಮೊದಲೇ ಹೇಳಿದಂತೆ ಪರಿಪತ್ರಗಳ ವೆಚ್ಚ ಜಾಹೀರಾತಿನ ವೆಚ್ಚಕ್ಕಿಂತ ಕಡಿಮೆ; ಅದಕ್ಕಿಂತ ಹೆಚ್ಚಾಗಿ ಜಾಹೀರಾತಿನಲ್ಲಿ ಪ್ರಕಟಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ಪರಿಪತ್ರಗಳ ಮೂಲಕ ತಿಳಿಸಬಹುದು. ಪರಿಪತ್ರ ಅಲ್ಪ ಕಾಲದಲ್ಲಿ ಅನೇಕರಿಗೆ ತಲುಪಬಲ್ಲದು; ಪರಿಪತ್ರವನ್ನು ಬಿಡುವಿದ್ದಾಗ ಓದಬಹುದು; ಹಲವು ಬಾರಿ ಓದಬಹುದು; ಉಳಿದವರಿಗೂ ಓದಲು ಕೊಡಬಹುದು.

ಪ್ರತಿನಿಧ ಮಾಧ್ಯಮದ ಮಿತಿ: ಪರಿಪತ್ರದ ಮಾಧ್ಯಮಕ್ಕೆ ಹೋಲಿಸಿದರೆ ಪ್ರತಿನಿಧಿ ಮಾಧ್ಯಮದ ಮಿತಿ ಅವರಿಗೆ ಬರುತ್ತದೆ. ಪ್ರತಿನಿಧಿಯ ಮೂಲಕ ವಿಷಯವನ್ನು ಅಗತ್ಯವಿದ್ದವರಿಗೆ ತಲುಪಿಸಬಹುದು; ಆದರೆ ಇದು ದುಬಾರಿ ವೆಚ್ಚದ ವಿಷಯ; ಮತ್ತು ಶ್ರಮದಾಯಕ ಹಾಗೂ ಸಾಕಷ್ಟು ಕಾಲವನ್ನು ನುಂಗುವಂಥದ್ದು; ಅದೂ ಅಲ್ಲದೆ ಪ್ರತಿನಿಧಿ ಹೋದಾಗ ಗ್ರಾಹಕ ಅಥವಾ ಸಂಬಂಧಪಟ್ಟ ವ್ಯಕ್ತಿಗಳು ವೈಯಕ್ತಿಕವಾಗಿ ಸಿಗುತ್ತಾರೆ ಎಂಬ ಖಾತ್ರಿ ಇರದು. ಇಷ್ಟಿದ್ದರೂ ಅವರಿಗೆ ಮಾತನಾಡಲು, ವಿಷಯವನ್ನು ಕೇಳಲು ವ್ಯವದಾನವಿದ್ದಿತೆಂದು ಹೇಗೆ ಹೇಳುವುದು?

ಪ್ರತಿಗಳ ತಯಾರಿಕೆ : ಪರಿಪತ್ರಗಳ ಸಾಕಷ್ಟು ಪ್ರತಿಗಳನ್ನು ಸಿದ್ಧಪಡಿಸಬೇಕಾಗುವುದು; ಹತ್ತಾರು, ನೂರಾರು ಕೆಲವೊಮ್ಮೆ ಸಾವಿರಾರು ಪ್ರತಿಗಳ ಅಗತ್ಯ ಬೀಳುತ್ತದೆ; ಸಾಕಷ್ಟು ಪ್ರತಿಗಳು ಬೇಕಾದಾಗ ಕೆಲವರು ಅಚ್ಚು ಮಾಡಿಸುತ್ತಾರೆ. ಪ್ರತಿಗಳ್ನು ತೆಗೆಯುವಲ್ಲಿ ಹಲವಾರು ವಿಧಾನಗಳಿವೆ. ಕಾರ್ಬನ್ ಪ್ರತಿ ವಿಧಾನ, ನಕಲು ಯಂತ್ರ ಪ್ರತಿ ವಿಧಾನ, ಜೆರಾಕ್ಸ್ ಪ್ರತಿ ವಿಧಾನ, ಮುದ್ರಣ ವಿಧಾನ ಇತ್ಯಾದಿ. ಇವುಗಳಲ್ಲಿ ಕಾರ್ಬನ್ ಪ್ರತಿ ವಿಧಾನದ ಮೂಲಕ ಹೆಚ್ಚು ಪ್ರತಿಗಳನ್ನು ಪಡೆಯಲು ಕಾಲ, ಶ್ರಮ, ವೆಚ್ಚ ಎಲ್ಲವೂ ಅಧಿಕವಾಗುವುದರಿಂದ ಇದು ಉಪಯುಕ್ತ ವಿಧಾನವಲ್ಲ; ಮತ್ತು ಕಾರ್ಬನ್ ಪ್ರತಿಗಳು ತೆಳುವಾದ್ದರಿಂದ ಬಾಳಿಕೆಯೂ ಬರುವುದಿಲ್ಲ.

ಇನ್ನು ಕೈಬರೆಹದ ಮೂಲಕ ಅಥವಾ ಬೆರಳಚ್ಚು ಯಂತ್ರದ ಸಹಾಯದಿಂದ ಕೊರೆಯಚ್ಚಿನ ಕಾಗದದ ಮೇಲೆ (ಸ್ಟೆನ್ ಸಿಲ್ ಪೇಪರ್ ) ಪರಿಪತ್ರದ ವಿಷಯವನ್ನು ಮೂಡಿಸಿ ಚಕ್ರ ಲೇಖನಯಂತ್ರದ ಮೂಲಕ (ಸೈಕ್ಲೋಸ್ಟೈಲ್ ಮಿಷನ್) ಅಥವಾ ಪ್ರತಿಯಂತ್ರ (ಡೂಪ್ಲಿಕೇಟರ್) ನೆರವಿನಿಂದ ಪ್ರತಿಗಳನ್ನು ತೆಗೆಯುವ ವಿಧಾನ ಇದುವರೆಗೆ ವಿಶೇಷವಾಗಿ ಬಳಕೆಯಲ್ಲಿತ್ತು. ಈಗ ಜೆರಾಕ್ಸ್ ಯಂತ್ರಗಳು ವಿಶೇಷವಾಗಿ ಬಳಕೆಗೆ ಬಂದಿವೆ; ಅದರಲ್ಲೂ ಇತ್ತೀಚೆಗೆ ಸ್ವಯಂಚಾಲಿತ ಅಗತ್ಯವಾದ ಸಂಖ್ಯೆಯ ಪ್ರತಿಗಳನ್ನು ಪಡೆಯುವ ಸೌಕರ್ಯ ಒದಗಿವೆ. ವೇಗ, ವೆಚ್ಚ, ಶ್ರಮ, ಮೊದಲಾದ ಎಲ್ಲ ದೃಷ್ಟಿಗಳಲ್ಲೂ ಜೆರಾಕ್ಸ್ ಯಂತ್ರದ ಬೆಲೆ ಸಾವಿರಗಟ್ಟಲೆ ಆಗಿರುವುದರಿಂದ, ಎಲ್ಲರೂ ಕೊಂಡು ಬಳಸಲು ಸಾಧ್ಯವಿಲ್ಲದಿರುವುದಿಂದ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಡೂಪ್ಲೀಕೇಟರ್ ಮತ್ತು ಸೈಕ್ಲೋಸ್ಟೈಲ್ ಯಂತ್ರಗಳು ಬಳಕೆಯಾಗುತ್ತಿವೆ.

ಅಚ್ಚು ಮೂಡಿಸುವುದು ಮೊದಲಿನಿಂದಲೂ ಇರುವ ವಿಧಾನವಾಗಿದೆ. ಅಧಿಕ ಸಂಖ್ಯೆಯ ಪ್ರತಿಗಳಿಗೆ ಇದು ಉಪಯುಕ್ತ. ಜೆರಾಕ್ಸ್ ಯಂತ್ರದ ಪ್ರತಿಗಳಲ್ಲಿ ನಕ್ಷೆ, ಚಿತ್ರ ಇತ್ಯಾದಿಗಳು ಪಡಿಮೂಡಿದರೂ ಎಲ್ಲವೂ ಕಪ್ಪುಬಿಳುಪು ರೂಪದಲ್ಲೇ ಇರುತ್ತವೆ; ಅಚ್ಚಿನಲ್ಲಿ ಮಾತ್ರ ವರ್ಣ-ವೈವಿಧ್ಯ ಕಾಣಬಹುದು; ಬೇರೆ ಬೇರೆ ಬಣ್ಣಗಳ ಶಾಯಿಯಲ್ಲಿ ವಿವಿಧ ವಿನ್ಯಾಸ, ಆಕಾರದ ಅಕ್ಷರಗಳಲ್ಲಿ ವಿಷಯವನ್ನು ಅಚ್ಚು ಮಾಡಿಸಲು ಸಣ್ಣಕ್ಷರಗಳಲ್ಲಿ ಹೆಚ್ಚು ವಿಷಯವನ್ನು ಅಳವಡಿಸಬಹುದು; ಶೀರ್ಷಿಕೆ,, ದಿನಾಂಕ, ವಿಳಾಸಗಳನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ನೀಡಬಹುದು.

ಪಾಲುದಾರರೊಬ್ಬರು ಸಂಸ್ಥೆಯಿಂದ ನಿವೃತ್ತರಾದಾಗ ಬರೆದ ಪತ್ರ
ಮಾದರಿ

ಶಿವರಾಮ ಕೃಷ್ಣನ್ ಮತ್ತು ಕಂಪನಿ

೬, ಚರ್ಚ್ ರಸ್ತೆ,
ಕಿಟಲ್ ರಸ್ತೆ
ಮಂಗಳೂರು

ದಿನಾಂಕ: ೮-೬-೧೯೮೭

ಮಾನ್ಯರೆ,

ದಿನಾಂಕ ೭/೬/೧೯೮೭ರಂದು ನಮ್ಮ ಸಂಸ್ಥೆಯ ಪಾಲುದಾರರಲ್ಲಿ ಒಬ್ಬರಾದ ಶ್ರೀ ಶಿವಯ್ಯನವರು ಸಂಸ್ಥೇಯ ಪಾಲುದಾರಿಕೆಯಿಂದ ನಿವೃತ್ತರಾಗಿದ್ದಾರೆಂದು ಈ ಮೂಲಕ ತಮಗೆ ತಿಳಿಸುತ್ತಿದ್ದೇವೆ. ಅನಾರೋಗ್ಯದ ನಿಮಿತ್ತ ನಿವೃತ್ತಿ ಬಯಸಿರುವ ಶ್ರೀಯುತರು ಸಂಸ್ಥೇಗೆ ಸಲ್ಲಿಸಿರುವ ಸೇವೆ ಅಮೋಘವಾದುದು. ಅವರ ಅನುಭವಪೂರ್ಣ ಸೇವೆ ಇನ್ನಿಲ್ಲವಾದರೂ ಅವರು ಗೌರವ ಸಲಹೆಗಾರರಾಗಿ ಮುಂದುವರಿಯಲು ಒಪ್ಪಿಗೆ ನೀಡಿದ್ದಾರೆ. ಶ್ರೀಯುತರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯಲ್ಲೇ ಗ್ರಾಹಕರಿಗೆ ಸೇವೆ ಸಲ್ಲಿಸುತ್ತೇವೆಂಬ ಭರವಸೆಯನ್ನು ನಾವು ನೀಡುತ್ತೇವೆ.

ಶ್ರೀ ಶಿವಯ್ಯನವರ ನಿವೃತ್ತಿಯ ಕಾರಣ ನಮ್ಮ ಸಂಸ್ಥೆಗೆ ಇನ್ನು ಮುಂದೆ ‘ರಾಮಕೃಷ್ಣನ್ ಮತ್ತು ಕಂಪೆನಿ’ ಎಂದು ಪುನರ್ ನಾಮಕರಣ ಮಾಡಿದ್ದೇವೆ. ಇಂದಿನಿಂದ ಎಲ್ಲ ವ್ಯವಹಾರಗಳಲ್ಲಿಯೂ ‘ರಾಮಕೃಷ್ಣನ್ ಮತ್ತು ಕಂಪನಿ’ ಎಂದೇ ವ್ಯವಹರಿಸಬೇಕೆಂದು ನಮ್ಮನ್ನು ಕೋರುತ್ತೇವೆ. ತಮ್ಮ ಸಹಕಾರ, ಪ್ರೋತ್ಸಾಹ ಎಂದಿನಂತೆಯೇ ಮುಂದುವರಿಯುತ್ತವೆಂದು ನಂಬಿದ್ದೇವೆ.

ತಮ್ಮ ವಿಶ್ವಾಸಿಗಳು
ಶಿವರಾಮಕೃಷ್ಣನ್ ಮತ್ತು ಕಂಪನಿ
ಅರ್ಥಾತ್
(ರಾಮಕೃಷ್ಣನ್ ಮತ್ತು ಕಂಪನಿ)

 

ಸಂಸ್ಥೆಗಳು ಸಂಯೋಗಗೊಳ್ಳುವಾಗ ಹೊರಡಿಸುವ ಪರಿಪತ್ರ
ಮಾದರಿ

ರಾಮ ಮತ್ತು ಕಂಪನಿ
ರಹೀಂ ಮತ್ತು ಕಂಪನಿ

ಗುಲ್ಬರ್ಗ

ತಾರೀಖು: ೭-೮-೧೯೮೭

ಮಾನ್ಯರೆ,

ಕಳೆದ ಮೂರು ವರ್ಷಗಳಿಂದ ಪ್ರತ್ಯೇಕವಾಗಿ ಸುಗಂಧ ವಸ್ತುಗಳ ಮಾರಾಟ ಮಾಡುತ್ತಿರುವ ‘ರಾಮ ಮತ್ತು ಕಂಪನಿ’ ಹಾಗೂ ‘ರಹೀಂ ಮತ್ತು ಕಂಪೆನಿ’ ಎಂಬ ಎರಡೂ ಸ್ವತಂತ್ರ ಸಂಸ್ಥೇಗಳನ್ನು ಒಂದುಗೂಡಿಸಿ ಇದೇ ಆಗಸ್ಟ್ ೧೫ರಿಂದ ‘ರಾಮರಹೀಂ ಮತ್ತು ಕಂಪೆನಿ’ ಎಂಬ ಹೆಸರಿನಲ್ಲಿ ಸಂಸ್ಥೇಯ ವ್ಯವಹಾರಗಳನ್ನು ನಡೆಸಲಿದ್ದೇವೆ. ಇನ್ನು ಮುಂದೆ ನಮ್ಮ ಎಲ್ಲಾ ಗ್ರಾಹಕರೂ ಈ ಕೆಳಕಂಡ ಕಾರ್ಯಾಲಯದ ವಿಳಾಸದೊಡನೆ ವ್ಯವಹರಿಸಬೇಕೆಂದು ಕೋರುತ್ತೇವೆ. ಸಂಯೋಗ ಹೊಂದಿರುವ ನಮ್ಮ ಹೊಸ ಸಂಸ್ಥೆಗೆ ತಾವು ಮೊದಲಿನಂತೆ ಸಹಕಾರವನ್ನೂ ಪ್ರೋತ್ಸಾಹವನ್ನೂ ನೀಡಬೇಕೆಂದು ವಿನಯದಿಂದ ವಿಜ್ಞಾಪಿಸಿಕೊಳ್ಳುತ್ತಿದ್ದೇವೆ.

ನಮ್ಮ ಸಂಸ್ಥೆಯ ವಿಳಾಸ:                                                  ತಮ್ಮ ವಿಶ್ವಾಸಿಗಳು
ರಾಮ ರಹೀಂ ಮತ್ತು ಕಂಪನಿ                                              ರಾಮ ಮತ್ತು ಕಂ
೪೮, ಗುಮ್ಮಟ ರಸ್ತೆ                                                           ರಹೀಂ ಮತ್ತು ಕಂ.
ಗುಲ್ಬರ್ಗ

ಕೆಲಸದ ವೇಳೆ: ಬೆ.೯ರಿಂದ ೧.೩೦
ಸಂ.೩.೩೦ರಿಂದ ೮.೩೦

 

ಸಂಸ್ಥೆಯೊಂದಕ್ಕೆ ಪಾಲುದಾರ ಹೊಸದಾಗಿ ಸೇರಿದಾಗ ಗಮನಿಸಲು ಕೋರಿ ಕಳಿಸಿದ ಪರಿಪತ್ರ
ಮಾದರಿ

ಶ್ರೀ ವಿಜಯ ನಂದೀಶ್ವರ ಟ್ರಾನ್ಸ್ಪೋರ್ಟ್ ಕಂಪನಿ

ಕಲಾಸಿಪಾಳ್ಯಂ
ಬೆಂಗಳೂರು
ತಾ.೨೮-೧೨-೧೯೮೭

ದೂರವಾಣಿ: 489321

ಮಹನೀಯರೆ,

ಶ್ರೀ ಭೋಗನಂದೀಶ್ವರ ಟ್ರಾವಲ್ಸ್ ಸಂಸ್ಥೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವ್ಯವಸ್ಥಾಪಕರಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದ್ದ ಕಂಪೆನಿಯ ಪಾಲುದಾರರಲ್ಲಿ ಒಬ್ಬರಾಗಿದ್ದ ಶ್ರೀ ಭೋಗಯ್ಯನವರು ಕಳೆದ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದವಾಗುತ್ತದೆ.

ಶ್ರೀಯುತರು ನಿಧನದಿಂದ ತೆರವಾದ ಜಾಗದಲ್ಲಿ ನಮ್ಮ ಸಂಸ್ಥೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಉಪನಿರ್ವಾಹಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ವಿಜಯಪ್ಪನವರು ದಿ.೪-೧-೧೯೮೮ರಿಂದ ನಮ್ಮ ಸಂಸ್ಥೆಯ ಪಾಲುಗಾರರಾಗುತ್ತಿದ್ದಾರೆಂದು ತಿಳಿಸಲು ಸಂತೋಷವಾಗುತ್ತದೆ; ತತ್ಪರಿಣಾಮವಾಗಿ ನಮ್ಮ ಸಂಸ್ಥೆಯ ಹೆಸರು ಇನ್ನು ಮುಂದೆ ಶ್ರೀ ಭೋಗನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂಪನಿ ಎನ್ನುವುದನ್ನು ‘ಶ್ರೀ ವಿಜಯ ನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂಪನಿ’ ಎಂದು ಬದಲಾಯಿಸಲಾಗುತ್ತದೆ. ದಯವಿಟ್ಟು ಎಲ್ಲರೂ ಈ ಹೆಸರಿನ ಬದಲಾವಣೆಯನ್ನು ಗಮನಿಸಿ ವ್ಯವಹರಿಸಬೇಕೆಂದು ಕೋರುತ್ತೇವೆ. ಎಂದಿನಂತೆ ನಿಮ್ಮ ಪ್ರೋತ್ಸಾಹವೇ ನಮಗೆ ಶ್ರೀ ರಕ್ಷೆಯಾಗಿದೆ.

ನಿಮ್ಮ ವಿಶ್ವಾಸದ,
ಶ್ರೀ ವಿಜಯ ನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂ
ಮೊದಲಿನ ಹೆಸರು  :
(ಶ್ರೀ ಭೋಗನಂದೀಶ್ವರ ಟ್ರಾನ್ಸ್‌ಪೋರ್ಟ್ ಕಂ.)

ಪಾಲುದಾರರ ಶ್ರೀ ವಿಜಯಪ್ಪನವರ
ಸಹಿ ಹೀಗಿದೆ……………