ಮಹತ್ವಸ್ವರೂಪ: ಸರ್ಕಾರಿ ಪತ್ರ ವ್ಯವಹಾರ ಇಂದು ವಾಣಿಜ್ಯ ಪತ್ರ ವ್ಯವಹಾರದಂತೆ ಪ್ರತ್ಯೇಕ ಅಧ್ಯಯನ ಶಾಸ್ತ್ರವಾಗಿದೆ. ಆಡಳಿತ ಕನ್ನಡಕ್ಕೂ ವಾಣಿಜ್ಯ ಕನ್ನಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ವಾಣಿಜ್ಯ ಕನ್ನಡವು ಆಡಳಿತ ಕನ್ನಡದಷ್ಟು ವಿಸ್ತಾರ ಕ್ಷೇತ್ರ ಹಾಗೂ ವೈವಿಧ್ಯಗಳನ್ನು ಹೊಂದಿಲ್ಲ ಎನ್ನಬಹುದು. ಏಕೆಂದರೆ ಸರ್ಕಾರ ಜನಜೀವನದ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿದ್ದಾಗಿರುತ್ತದೆ ಹಾಗೂ ನೇರವಾಗಿ ವ್ಯವಹರಿಸುತ್ತದೆ. ಸರ್ಕಾರದಲ್ಲಿ ಪ್ರತ್ಯೇಕ ಇಲಾಖೆಗಳೂ ಉಪ ಇಲಾಖೆಗಳೂ ಇದ್ದು ಅವುಗಳಿಗೆ ಸಂಬಂಧಿಸಿದಂತೆ ಇಲಾಖಾ ಕಚೇರಿ, ಉಪ ಇಲಾಖಾ ಕಚೇರಿ, ಶಾಖಾ ಕಚೇರಿಗಳೂ, ಸಿಬ್ಬಂದಿ ಮತ್ತು ಅಧಿಕಾರಿ ವರ್ಗವೂ ಇರುತ್ತದೆ. ಈ ಎಲ್ಲಾ ಕಚೇರಿಗಳಲ್ಲೂ ವಿವಿಧ  ಹಂತಗಳಲ್ಲಿ ನಿರಂತರವಾಗಿ ಇಲಾಖೆಗಳೊಡನೆ, ಅಧಿಕಾರಿಗಳ ನಡುವೆ ಹಾಗೂ ಇಲಾಖೆ ಮತ್ತು ಸಾರ್ವಜನಿಕರೊಡನೆ ಪತ್ರ ವ್ಯವಹಾರ ನಡೆದೇ ಇರುತ್ತದೆ. ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದ ಮೇಲೆ ಸರ್ಕಾರಿ ಕಚೇರಿಗಳ ವ್ಯವಹಾರ ಮತ್ತು ವಾಣಿಜ್ಯ ವ್ಯವಹಾರ ರಂಗಗಳಲ್ಲಿ ಕನ್ನಡದ ಬಳಕೆಯಾಗಲೇಬೇಕು; ಈ ದೃಷ್ಟಿಯಿಂದ ಸರ್ಕಾರಿ ಪತ್ರಗಳಿಗೆ ವಿಶೇಷ ಮಹತ್ವವಿದೆ.

ವರ್ಗೀಕರಣ: ಸರ್ಕಾರಿ ಪತ್ರ ವ್ಯವಹಾರವನ್ನು ಸ್ಥೂಲವಾಗಿ ಮೂರು ಬಗೆಗಳಾಗಿ ವರ್ಗೀಕರಿಸಬಹುದು.

೧. ಸರ್ಕಾರಿ ಪತ್ರಗಳು (ಅಫೀಷಿಯಲ್ ಲೆಟರ್ಸ್‌)
೨. ಅರೆ ಸರ್ಕಾರಿ ಪತ್ರಗಳು (ಸೆಮಿ ಅಫಿಷಿಯಲ್ ಲೆಟರ್ಸ್‌)
೩. ಇತರ ಪತ್ರಗಳು (ಮಿಸಲೇನಿಯಸ್)

. ಸರ್ಕಾರಿ ಪತ್ರಗಳು: ಸರ್ಕಾರದ ಅಭಿಪ್ರಾಯ ಇಲ್ಲವೆ ಅಪ್ಪಣೆ (ಆದೇಶ) ಯನ್ನು ತಿಳಿಸುವಂಥ ಸರ್ಕಾರದ ಸಚಿವಾಲಯದಿಂದ ಹೊರಡುವ ಪತ್ರಗಳನ್ನು ಸರ್ಕಾರಿ ಪತ್ರಗಳು (ಅಧಿಕೃತ) ಎಂದು ಕರೆಯುತ್ತಾರೆ. *೧,೨ ಈ ಬಗೆಯ ಪತ್ರಗಳಲ್ಲಿ ಸರ್ಕಾರದ ಔಪಚಾರಿಕ ಅನುಮೋದನೆಯನ್ನು ತಿಳಿಸುವ ಸಲುವಾಗಿ ರಾಜ್ಯಪಾಲರ ಅನುಮೋದನೆ ಮೇರೆಗೆ/ಆದೇಶಾನುಸಾರ/ಅಧಿಕಾರ ನೀಡಿಕೆ ಪ್ರಯುಕ್ತ/ ಮಂಜೂರಾತಿ ಮೇರೆಗೆ ಎಂಬ ಪದಗಳನ್ನು ಸೇರಿಸುತ್ತಾರೆ. ಕಚೇರಿಯ ಮುಖ್ಯಾಧಿಕಾರಿಗಳು ಸಹಿ ಮಾಡದಿದ್ದಾಗ ಅವರಿಂದ ಅಧಿಕಾರ ಪಡೆದ ಅಧೀನ ಅಧಿಕಾರಿ ಸಹಿ ಮಾಡಿ ಕಳಿಸುವ ಪತ್ರಗಳಲ್ಲಿ ‘ಪರವಾಗಿ’ ಎಂಬ ಮಾತಿರುತ್ತದೆ. ಉದಾ: ಜಿಲ್ಲಾಧಿಕಾರಿಗಳ ಪರವಾಗಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುವ ಪತ್ರ ವ್ಯವಹಾರ, ರಾಜ್ಯದ ವಿವಿಧ ಇಲಾಖೆಗಳು ಮತ್ತು ರಾಜ್ಯ ಸಚಿವಾಲಯದೊಡನೆ ನಡೆಯುವ ವ್ಯವಹಾರದ ಪತ್ರಗಳು ಅಧಿಕೃತ ಪತ್ರಗಳಾಗಿರುತ್ತವೆ.

. ಅರೆ ಸರ್ಕಾರಿ ಪತ್ರಗಳು: ಬೇರೆ ಕಚೇರಿಯ ಅಧಿಕಾರಿ ವಿಷಯವನ್ನು ತಾನೇ ಗಮನಿಸಬೇಕಾದಾಗ ನೆನಪು ಪತ್ರಗಳನ್ನು ಬರೆದರೂ ಉತ್ತರ ಬಾರಾದಾಗ, ಜರೂರು ಸಂದರ್ಭಗಳಿದ್ದಾಗ ಬರೆಯುವ ಪತ್ರಗಳನ್ನು ಅರೆ ಸರ್ಕಾರಿ ಪತ್ರಗಳು ಎಂದು ಕರೆಯುತ್ತಾರೆ. ಇಂಥ ಸಂದರ್ಭಗಳಲ್ಲಿ ಖಾಸಗಿ ಜನರಿಗೆ, ಸ್ಥಳೀಯ ಸಂಸ್ಥೇಗಳ ಅಧಿಕಾರಿಗಳಿಗೆ ಬರೆಯುವ ಪತ್ರಗಳು ಅರೆ ಸರ್ಕಾರಿ ಪತ್ರಗಳು ಎನ್ನಿಸಿಕೊಳ್ಳುತ್ತವೆ.

. ಇತರ ಪತ್ರಗಳು: ಈ ವಿಭಾಗದಲ್ಲಿ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ, ಒಬ್ಬ ಅಧಿಕಾರಿ ಮತ್ತೊಬ್ಬ ಅಧಿಕಾರಿಗೆ, ಒಂದು ಕಚೇರಿ ಅಧಿಕಾರಿಯಿಂದ ಸಾರ್ವಜನಿಕರಿಗೆ ಅಥವಾ ಸಂಬಂಧಪಟ್ಟ ವ್ಯಕ್ತಿಗಳಿಗೆ ಇಲ್ಲವೇ ಸಂಸ್ಥೇಗಳಿಗೆ ತಲುಪುವ ಪತ್ರಗಳಾದ ನಡೆವಳಿಕೆಗಳು, (ಪ್ರೊಸಿಡಿಂಗ್ಸ್), ಅಧಿಕೃತ ಜ್ಞಾಪನ (ಅಫೀಷಿಯಲ್ ಮೆಮೊರಾಂಡಂ) ಅಧಿಸೂಚನೆ (ನೋಟಿಫಿಕೇಷನ್) ಹಿಂಬರಹ (ಎಂಡಾರ್ಸ್‌ಮೆಂಟ್) ಇವೇ ಮೊದಲಾದವು ಸಮಾವೇಶವಾಗುತ್ತವೆ. ಇವುಗಳ ವ್ಯವಹಾರದ ಸ್ವರೂಪ ಪತ್ರ ರಚನಾ ವಿಧಾನ ಉಳಿದೆರಡು ವರ್ಗಗಳ ಪತ್ರಗಳಿಗಿಂತ ಸಾಕಷ್ಟು ಭಿನ್ನವಾಗಿರುತ್ತವೆ.

ಮತ್ತೊಂದು ರೀತಿಯ ವರ್ಗೀಕರಣ: ಪ್ರಕಟಣೆಯ ದೃಷ್ಟಿಯಿಂದ ಸರ್ಕಾರಿ ಪತ್ರಗಳನ್ನು ಇನ್ನೊಂದು ರೀತಿಯಲ್ಲಿಯೂ ವರ್ಗೀಕರಿಸಬಹುದು; ಸಾರ್ವಜನಿಕರ ಅರಿವಿಗಾಗಿ ಪ್ರಕಟಿಸುವ ಸರ್ಕಾರಿ ವಿಷಯಗಳು ಒಂದು ಬಗೆ; ಈ ಗುಂಪಿಗೆ ನಡೆವಳಿಕೆಗಳು, ಪತ್ರಿಕಾ ಪ್ರಕಟಣೆಗಳು, ಅಧಿಸೂಚನೆಗಳು ಸೇರ್ಪಡೆಯಾಗುತ್ತವೆ.

ಇಲಾಖೆಗಳಿಗೆ ಸಂಬಂಧಿಸಿದಂತಹ ವಿಷಯಗಳು ಇನ್ನೊಂದು ಬಗೆ; ವರ್ಗ, ನೇಮಕಾತಿ, ಬಡ್ತಿ, ನಿವೃತ್ತಿ ಮೊದಲಾದವುಗಳಿಗೆ ಸಂಬಂಧಿಸಿದ ಅಧಿಕೃತ ಜ್ಞಾಪನಾ ಪತ್ರಗಳು ಈ ಗುಂಪಿಗೆ ಸೇರುತ್ತವೆ.

ಇಲಾಖೆಗಳು ಹೊರಡಿಸುವ ಸೂಚನೆಗಳು ಮತ್ತು ಆಜ್ಞೆಗಳು ಮೂರನೆಯ ಬಗೆಯಾಗಿವೆ; ಹಿಂಬರೆಹ ಮತ್ತು ಸುತ್ತೋಲೆಗಳು ಈ ವರ್ಗಕ್ಕೆ ಸೇರುತ್ತವೆ.

ಒಟ್ಟಿನಲ್ಲಿ ಸರ್ಕಾರಿ ಪತ್ರ ವ್ಯವಹಾರ ವೈವಿಧ್ಯಮಯವೂ ವಿಸ್ತೃತವೂ , ಆದ ಕ್ಷೇತ್ರವನ್ನೂ ಒಳಗೊಂಡಿದೆ. ಅದರ ಪೈಕಿ ‘ಸುತ್ತೋಲೆ’ ವಿಶಿಷ್ಟ ಸ್ಥಾನವನ್ನು ಗಳಿಸಿದೆ ಎಂದು ಹೇಳಬಹುದು.

ಸರ್ಕಾರಿ ಸುತ್ತೋಲೆ ಲಕ್ಷಣಗಳು: ‘ಸರ್ಕಾರಿ ಸುತ್ತೋಲೆ’ ಸರ್ಕಾರದ ವಿವಿಧ ಇಲಾಖೆಗಳ ನಡುವೆ ನಡೆಯುವ ವ್ಯವಹಾರಕ್ಕೆ ಸಂಬಂಧಿಸಿರುತ್ತದೆ. ಒಂದು ವಿಷಯವನ್ನು ನಾನಾ ಇಲಾಖೆಗಳಿಗೆ ಅಥವಾ ಅನೇಕ ವ್ಯಕ್ತಿಗಳಿಗೆ ತಿಳಿಸಬೇಕಾದಾಗ ಸರ್ಕಾರಿ ಸುತ್ತೋಲೆ ಪ್ರಕಟವಾಗುತ್ತದೆ. ಸರ್ಕಾರಿ ಸುತ್ತೋಲೆಯಲ್ಲಿ ಎಲ್ಲಾ ಅಧಿಕಾರಿಗಳ ಅಥವಾ ಸಂಸ್ಥೆಗಳ ಉದ್ದಿಷ್ಟ ವಿಳಾಸಗಳನ್ನೆಲ್ಲಾ ಪಟ್ಟಿ ಮಾಡಿರುವುದಿಲ್ಲ. ಸುತ್ತೋಲೆಯ ಕೊನೆಯಲ್ಲಿ ಸಾಮಾನ್ಯ ಸೂಚನೆಯನ್ನು ನೀಡಿರಲಾಗುತ್ತದೆ. ಉದಾ: ಎಲ್ಲಾ ಇಲಾಖಾ ಮುಖ್ಯಸ್ಥರಿಗೆ, ಸಮಸ್ತ ಸಂಬಳ ಬಟವಾಡೆ ಅಧಿಕಾರಿಗಳಿಗೆ, ಪ್ರತಿಯೊಂದು ಜಿಲ್ಲಾ ಖಜಾನಾಧಿಕಾರಿಗಳಿಗೆ….. ಇತ್ಯಾದಿ. ಇದರಲ್ಲಿ ಕ್ರಮಾಂಕ, ದಿನಾಂಕಗಳಿರುವುದರ ಜೊತೆಗೆ ಸುತ್ತೋಲೆ ನೀಡಿದ ಇಲಾಖೆಯ ಹೆಸರು ಸುತ್ತೋಲೆ ಎಂಬ ಶೀರ್ಷಿಕೆಗಳು ಇರುತ್ತವೆ; ಪತ್ರದ ಮೇಲ್ಬಾಗದಲ್ಲಿ ‘ಕರ್ನಾಟಕ ಸರ್ಕಾರ’ ಎಂದು ಪ್ರಕಟವಾಗಿರುತ್ತದೆ. ‘ಉಲ್ಲೇಖ’ ಕೆಲವೊಮ್ಮೆ ಇರುತ್ತದೆ. ಕೆಲವೊಮ್ಮೆ ಇರುವುದಿಲ್ಲ.. ತಳಭಾಗದಲ್ಲಿ ಯಾರಿಗೆ ಅಥವಾ ಯಾವ ಅಧಿಕಾರಿಗಳಿಗೆ, ಇಲಾಖೆಗಳಿಗೆ ಎಂಬ ಸಾಮಾನ್ಯ ಸೂಚನೆ ಇರುತ್ತದೆ. ಕೆಲವೊಮ್ಮೆ ಇರುವುದಿಲ್ಲ. ಸರ್ಕಾರಿ ಸುತ್ತೋಲೆಯಲ್ಲಿ  ಒಳವಿಳಾಸ ಮತ್ತು ಸಂಬೋಧನೆಗಳಿರುವುದಿಲ್ಲ. ಏಕೆಂದರೆ ಇದು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಬರೆದ ವೈಯಕ್ತಿಕ ಪತ್ರ ಅಥವಾ ವ್ಯವಹಾರ ಪತ್ರವಾಗಿರುವುದಿಲ್ಲ; ಸಾಕಷ್ಟು ಜನರಿಗೆ ಅಥವಾ ಅಧಿಕಾರಿಗಳಿಗೆ ತಿಳಿಸುವ ಒಂದೇ ವಿಷಯದ ಪ್ರಕಟಣೆಯಾಗಿರುತ್ತದೆ.

ವಿಷಯವನ್ನು ಒಂದು ಅಥವಾ ಎರಡು ವಾಕ್ಯಗಳಲ್ಲಿ ಸೂಚಿಸುವುದರಿಂದ ಪತ್ರದ ವಿಷಯವೇನು ಎಂಬುದು ತಕ್ಷಣ ತಿಳಿಯುತ್ತದೆ; ಇದರಿಂದ ಫೈಲು ಮಾಡಲು ಮತ್ತು ವರ್ಗೀಕರಣಕ್ಕೆ ಅನುಕೂಲವಾಗುತ್ತದೆ. ಹಾಗೂ ಯಾರಿಗೆ ಸಂಬಂಧಿಸಿದ ಪತ್ರ ಎಂದು ನಿರ್ಧರಿಸಲೂ ಸುಲಭವಾಗುತ್ತದೆ.

ಉಲ್ಲೇಖವು ಯಾರಾದರೂ ಬರೆದ ಅಥವಾ ಕೋರಿದ ವಿಷಯದ ಫಲವಾಗಿ ಪ್ರಕಟಿಸಿದ ಸುತ್ತೋಲೆಯಾದಾಗ ಅದರ ಬಗ್ಗೆ ಉಲ್ಲೇಖವಿರುತ್ತದೆ; ಸರ್ಕಾರದ ಅಥವಾ ಸರ್ಕಾರಿ ಇಲಾಖೆಯ ವರಿಷ್ಠಾಧಿಕಾರಿಗಳು ತಾವೇ ಹೊರಡಿಸಿದ ಸುತ್ತೋಲೆಯಾದಾಗ ಉಲ್ಲೇಖವಿರುವುದಿಲ್ಲ.

ಒಕ್ಕಣೆಯ ಭಾಗದಲ್ಲಿ ಅನಗತ್ಯ ಅಂಶಗಳನ್ನು ಸೇರಿಸದೆ ಮುಖ್ಯಾಂಶವನ್ನು ಆದಷ್ಟೂ ನಿರ್ದಿಷ್ಟವಾಗಿ ಸಂಕ್ಷಿಪ್ತವಾಗಿ ಬರೆಯಬೇಕು; ಬೇರೆ ಬೇರೆ ಅಂಶಗಳನ್ನು ಬೇರೆ ಬೇರೆ ಪ್ಯಾರಾಗಳಲ್ಲಿ ನಮೂದಿಸಬೇಕು. ನಿರೂಪಣಾ ವಿಧಾನ ‘ಪರೋಕ್ಷ ಕಥನ’ ದ ಮಾದರಿಯಲ್ಲಿರುತ್ತದೆ.

ಮುಕ್ತಾಯದಲ್ಲಿ ಸುತ್ತೋಮೆ ಹೊರಡಿಸಿದ ಅಧಿಕಾರಿ ಹೆಸರು, ಇಲಾಖೆಯ ನಾಮವಿರುತ್ತದೆ; ಆದರೆ ವಂದನಾ ಪೂರ್ವಕ ಮುಕ್ತಾಯದ ನುಡಿಗಳಾದ ‘ತಮ್ಮ ನಂಬುಗೆಯ’, ‘ನಿಮ್ಮ ವಿಶ್ವಾಸದ’ ಇತ್ಯಾದಿ ಯಾವ ಮಾತುಗಳನ್ನೂ ಸುತ್ತೋಲೆಯಲ್ಲಿ ಬಳಸುವುದಿಲ್ಲ.

ಸಾಮಾನ್ಯ ಸೂಚನೆ: ಪ್ರತಿಗಳು ನಿರ್ದಿಷ್ಟ ವಿಭಾಗದ ಅಧಿಕಾರಿಗಳಿಗೆ ಅಥವಾ ನಿರ್ದಿಷ್ಟ ಇಲಾಖೆಗಳಿಗೆ ಸೀಮಿತವಾಗಿದ್ದರೆ ಅಯಾ ಇಲಾಖೆಗಳ ಹೆಸರನ್ನು ಸಾಮಾನ್ಯವಾಗಿ ಸೂಚಿಸುತ್ತಾರೆ. ನಿರ್ದಿಷ್ಟ ವಿಳಾಸಗಳನ್ನು ಬರೆಯುವುದಿಲ್ಲ. ಸುತ್ತೋಮೆ ಸಾರ್ವಜನಿಕ ಸ್ವರೂಪದ್ದಾಗಿದ್ದರೆ ಎಲ್ಲಾ ಇಲಾಖೆಗಳಿಗೂ ಅಥವಾ ಬಹುತೇಖ ಇಲಾಖೆಗಳಿಗೆ ಅನ್ವಯಿಸುವಾಗ ಯಾವ ಯಾವ ಇಲಾಖೆಗಳಿಗೆ ಇಲ್ಲವೇ ಯಾವ ಅಧಿಕಾರಿಗಳಿಗೆ ಎಂಬುದನ್ನು ನಮೂದಿಸುವುದಿಲ್ಲ.

ಸರ್ಕಾರಿ ಸುತ್ತೋಲೆಯಲ್ಲಿ ಬರುವ ಅಂಶಗಳನ್ನು ಈ ಕೆಳಕಂಡ ನಮೂನೆಯಲ್ಲಿ ಕಾಣಬಹುದು.

೧. ಕರ್ನಾಟಕ ಸರ್ಕಾರ
೨. ಕಚೇರಿ/ಇಲಾಖೆಯ ಹೆಸರು………….
೩. ಸ್ಥಳ………………ದಿನಾಂಕ………………..

೪……………………………..

೫. ಶೀರ್ಷಿಕೆ………………..
೬. ವಿಷಯ…………………
೭. ಉಲ್ಲೇಖ…………………..
೮. ಒಕ್ಕಣೆ ………………………………………………………………….
………………………………………………………………………………………..
………………………………………………………………………………………..
……………………………………………………………………………
…………………………………………………………………………….
೯. ಸಹಿ……………………………………..
೧೦. ಪದನಾಮ…………………………..
೧೧. ಇಲಾಖೆ……………………………
೧೨. ಸಾಮಾನ್ಯ ಸೂಚನೆ
ಪ್ರತಿಗಳು….,,,,,,,,,,,,,,…………………… ಇಲಾಖೆಗಳಿಗೆ
………………………………,……. ಇಲಾಖಾಧಿಕಾರಿಗಳಿಗೆ
…………………………,,,,,,.,………………….. ಅವರಿಗೆ

ಮಾದರಿ ೧

ಕರ್ನಾಟಕ ಸರ್ಕಾರ

ಸಂಖ್ಯೆ: ಜೆ.ಎ.ಡಿ. ೨೮ ಪಿ.ಒ. ಎಲ್. ೭೬

ಕರ್ನಾಟಕ ಸರ್ಕಾರದ ಸಚಿವಾಲಯ
ಸಾಮಾನ್ಯ ಆಡಳಿತ ಇಲಾಖೆ (ರಾಜಕೀಯ)
ವಿಧಾನ ಸೌಧ, ಬೆಂಗಳೂರು.
ದಿನಾಂಕ: ೧೫ನೇಯ ಮೇ…………………

ಸುತ್ತೋಲೆ

ವಿಷಯ: ಆಡಳಿತ ವ್ಯವಹಾರಗಳಲ್ಲಿ ಕನ್ನಡದ ಬಳಕೆ

ಜಿಲ್ಲಾ ಮತ್ತು ಅದಕ್ಕಿಂತ ಕೆಳಗಿನ ಮಟ್ಟದ ಎಲ್ಲಾ ಕಚೇರಿಗಳ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಬೇಕೆಂದು ಸರ್ಕಾರದ ನೀತಿಯಾಗಿದ್ದು, ಆ ಬಗ್ಗೆ ಆದೇಶಗಳು ಹೊರಟಿರುವುದು ಈಗಾಗಲೇ ನಿಮಗೆ ತಿಳಿದಿರಬಹುದು. ನಮ್ಮ ಸರ್ಕಾರದಿಂದ ರಿಚಿಸಿರುವ ಅನೇಕ ಕಾರ್ಪೋರೇಷನ್‌ಗಳ ಮಂಡಳಿಗಳ ಕಾರ್ಯವ್ಯಾಪ್ತಿ ಬಹಳ ವ್ಯಾಪಕವಾಗಿದ್ದು ತಾಲ್ಲೂಕು ಮತ್ತು ಅದಕ್ಕಿಂತ ಕೆಳಗಿನ ಮಟ್ಟಗಳಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿರುವ ಅನೇಕ ವಿಷಯಗಳಲ್ಲಿ ವ್ಯಾಪಿಸಿದೆ ಆದಕಾರಣ ಜನರ ಅನುಕೂಲ ದೃಷ್ಟಿಯಿಂದ ಕಾರ್ಪೋರೇಷನ್, ಮಂಡಳಿಗಳು ತಮ್ಮ ಪತ್ರ ವ್ಯವಹಾರಗಳನ್ನೆಲ್ಲ ಕನ್ನಡದಲ್ಲಿ ನೆನೆಸಬೇಕಾದದ್ದು ಸೂಕ್ತವೆಂದು ಕಾಣುತ್ತದೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಆದೇಶಗಳು, ಆಜ್ಞೆಗಳು, ಬಿಲ್ಲುಗಳು ಮತ್ತು ಫಾರ್ಮುಗಳನ್ನು ಕನ್ನಡದಲ್ಲಿ ಜಾರಿ ಮಾಡಬಹುದೆಂದು ತೋರುತ್ತದೆ. ಈ ದಿಸೆಯಲ್ಲಿ ಕೋರ್ಪೋರೇಷನ್ನುಗಳು ಮತ್ತು ಮಂಡಳಿಗಳು ಹೆಚ್ಚು ಸ್ವಾತಂತ್ರ್ಯದಿಂದ ಮುಂದುವರಿಯಬಹುದಾಗಿದೆ. ಆದಕಾರಣ ಈ ಮೂಲಕ ತಮಗೆ ಸೂಚಿಸವುದೇನೆಂದರೆ ತಮ್ಮ ಕಾರ್ಪೋರೇಷನ್ ಮಂಡಳಿಯ, ತಮ್ಮ ಎಲ್ಲಾ ಅಧಿಕಾರಿಗಳಿಗೂ ಕನ್ನಡದಲ್ಲಿ ಪತ್ರ ವ್ಯಹಾರ ನಡೆಸುವಂತೆ ಸೂಕ್ತ ಆದೇಶಗಳನ್ನು ಕಳುಹಿಸಿಕೊಡಬೇಕೆಂದು ಕೋರುತ್ತೇನೆ. ಇದಕ್ಕೆ ಬೇಕಾಗುವ ಬೆರಳಚ್ಚು ಯಂತ್ರಗಳು ಈಗ ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ. ಹಾಗೂ ಬೆರಳಚ್ಚು ಯಂತ್ರದಲ್ಲಿ ತರಬೇತಿ ಪಡೆದವರು ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ  ರಿಜಿಸ್ಟರು ಮಾಡಿಸಿ ಕೆಲಸಕ್ಕೆ ಹಾಜರಾಗಲು ತಯಾರಾಗಿದ್ದಾರೆ. ಈ ವಿಷಯವಾಗಿ ಮತ್ತೇನಾದರೂ ಮಾರ್ಗದರ್ಶನ ಅಥವಾ ಸಲಹೆ ಬೇಕಾಗಿದ್ದರೆ ಭಾಷೆ ಮತ್ತು ಕನ್ನಡ ಅಭಿವೃದ್ದಿ ನಿರ್ದೇಶಕರು ಸಲಹೆ ಕೊಡಲು ಉತ್ಸುಕರಾಗಿದ್ದಾರೆ. ಆದಕಾರಣ ತಾವು ಕೂಡಲೆ ಈ ವಿಷಯದಲ್ಲಿ ಸೂಕ್ತ ಆದೇಶಗಳನ್ನು ಜಾರಿ ಮಾಡಬೇಕೆಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ.

ಸಹಿ
ಸರ್ಕಾರದ ಮುಖ್ಯ ಕಾರ್ಯದರ್ಶಿ

ಪ್ರತಿಗಳು:
೧. ರಾಜ್ಯದ ಎಲ್ಲಾ ಕಾರ್ಪೋರೇಷನ್‌ಗಳ ಆಡಳಿತಾಧಿಕಾರಿಗಳಿಗೆ
೨. ರಾಜ್ಯದ ಎಲ್ಲಾ ಮಂಡಳಿಗಳ ಅಧ್ಯಕ್ಷರಿಗೆ
೩. ಭಾಷೆ ಮತ್ತು ಕನ್ನಡ ಅಭಿವೃದ್ಧಿ ನಿರ್ದೇಶಕರು, ಕರ್ನಾಟಕ ಸರ್ಕಾರ ಬೆಂಗಳೂರು.

ಮಾದರಿ

ಕರ್ನಾಟಕ ಸರ್ಕಾರ

ಸಂಖ್ಯೆ: ಕಾಶಿಇ-೧೧ ಸಂಕೀರ್ಣ – ಸಾಮಾನ್ಯ ೮೫-೮೬

ಕಾಲೇಜು ಶಿಕ್ಷಣ ನಿರ್ದೇಶಕರ ಕಚೇರಿ
ಬೆಂಗಳೂರು
ದಿನಾಂಕ: ೨೭-೧೨-೮೫

ಸುತ್ತೋಲೆ

ಕರ್ನಾಟಕ ರಾಜ್ಯದ ಹಲವಾರು ಭಾಗಗಳಲ್ಲಿ ತೀವ್ರ ತರವಾದ ಬರಗಾಲ ಜನ ಜಾನುವಾರುಗಳನ್ನು ಪೀಡಿಸುತ್ತಿದೆ. ಇಂಥ ದಾರುಣವಾದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೀಡಾಗಿರುವ ನಮ್ಮ ಸೋದರ ಸೋದರಿಯರಿಗೆ ನಮ್ಮ ನೆರವಿನ ಹಸ್ತವನ್ನು ನೀಡಬೇಕಾದದ್ದು ಅವರ ದುಸ್ತರವಾದ ಪರಿಸ್ಥಿತಿಯಲ್ಲಿ ನೆರವು ನೀಡುವುದು ಮಾನವೀಯ ಹಾಗು ನಮ್ಮ ನೈತಿಕ ಕರ್ತವ್ಯವೂ ಹೌದು. ಮಾನ್ಯ ಮುಖ್ಯಮಂತ್ರಿಯವರೂ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿರುತ್ತಾರೆ. ಆದ್ದರಿಂದ ಸರ್ಕಾರ ಹಾಗೂ ಖಾಸಗಿ ಕಾಲೇಜುಗಳಲ್ಲಿ ಸೇವೆಯಲ್ಲಿರುವ ಎಲ್ಲಾ ಬಂಧುಗಳಲ್ಲಿಯೂ ನಾನು ಸೂಚಿಸುವುದೇನೆಂದರೆ ಎಲ್ಲರೂ ಸ್ವಸಂತೋಷದಿಂದ ತಮ್ಮ ಒಂದು ದಿನದ ಸಂಬಳವನ್ನು ಉದಾರವಾಗಿ ‘ಮುಖ್ಯಮಂತ್ರಿಯವರ ಬರ ಪರಿಹಾರ ನಿಧಿ’ ಹೆಸರಿಗೆ ಪಡೆದು ಶ್ರೀ ಜೆ.ಬಿ.ದೇವ್‌ಆನಂದ್, ಸಹಾಯಕ ನಿರ್ದೇಶಕರು, ಕಾಲೇಜು ಶಿಕ್ಷಣ ನಿರ್ದೇಶನಾಲಯ, ಅರಮನೆ ರಸ್ತೆ, ಬೆಂಗಳೂರು – ೫೬೦ ೦೦೧ ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ವಿನಂತಿ. ಹೀಗೆ ಬಂದ ಎಲ್ಲಾ ಡ್ರಾಫ್ಟುಗಳನ್ನು ಸಂಚಯಿಸಿ ಒಟ್ಟಿಗೆ ನಿಮ್ಮೆಲ್ಲರ ಪರವಾಗಿ ಮುಖ್ಯಮಂತ್ರಿಯವರಿಗೆ ತಲುಪಿಸಲಾಗುತ್ತದೆ.

ಸಹಿ
ಕಾಲೇಜು ಶಿಕ್ಷಣ ನಿರ್ದೇಶಕರು

ಪ್ರತಿಗಳನ್ನು ಕೆಳಕಂಡವರಿಗೆ ಅಗತ್ಯ ಶೀಘ್ರ ಕ್ರಮಕ್ಕಾಘಿ ಕಳುಹಿಸಲಾಗಿದೆ.

೧. ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು
೨. ಎಲ್ಲಾ ಅನುದಾನ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು
೩. ಎಲ್ಲಾ ಅನುದಾನರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು
೪. ಎಲ್ಲಾ ಪ್ರಾದೇಶಿಕ ಕಚೇರಿಗಳ ಉಪನಿರ್ದೇಶಕರು
೫. ನಿರ್ದೇಶನಾಲಯದ ಎಲ್ಲಾ ಅಧಿಕಾರಿಗಳು

ಸೂಚನೆ: ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ ಸೇವೆಯಲ್ಲಿರುವ ಉದಾರಿಗಳೆಲ್ಲರಿಂದ ಹಣವನ್ನು ಸಂಗ್ರಹಿಸಿ ಒಟ್ಟಿಗೆ ಮೇಲ್ಕಂಡ ವಿಳಾಸಕ್ಕೆ ಡ್ರಾಫ್ಟನ್ನು ರವಾನಿಸಬೇಕು.