ಚಾಮುಂಡಿ ಬೆಟ್ಟದ ತಪ್ಪಲು. ಮೈಸೂರು-ನಂಜನಗೂಡು ರಸ್ತೆಯಲ್ಲಿ ಒಂದೆಡೆ ಹೊರಳಿ, ಹಳ್ಳ-ಕೊಳ್ಳ-ಪೊದರುಗಳ ಹಾದಿಯಲ್ಲಿ ಒಂದಿಷ್ಟು ದೂರ ನಡೆದು, ಕುಳಿತುಕೊಳ್ಳಲು ಪ್ರಶಸ್ತವಾದ ಸ್ಥಳವೊಂದನ್ನು ಹುಡುಕುತ್ತಿದ್ದೆವು. ಅಲ್ಲೇ ಒಂದಷ್ಟು ಎತ್ತರವಾದ ಸ್ಥಳದಲ್ಲಿ ಅಗಲವಾದ ಬಂಡೆಯೊಂದು ಕಾಣಿಸಿತು. ಕುಳಿತುಕೊಳ್ಳಲು ಇದೇ ಸರಿಯಾದ ಜಾಗ ಅಂದುಕೊಂಡು ಅದರ ಮೇಲೇರಿದೆವು. ಶಾಮರಾಯರು ತಮ್ಮ ಕೊರಳಿಗೆ ಸುತ್ತಿಕೊಂಡಿದ್ದ ವಸ್ತ್ರವನ್ನು ಬಿಚ್ಚಿ, ಕೈಯಲ್ಲಿ ಹಿಡಿದು ಬಂಡೆಯ ಮೇಲಿನ ಧೂಳು ಕೊಡವಿ ಕೂತರು. ನಾನು ಅವರ ಬದಿಯಲ್ಲೇ ಸ್ವಲ್ಪ ದೂರದಲ್ಲೇ ಕೂತೆ.

ದೂರದ ಬಾನಿನಲ್ಲಿ, ಎರಡಾಳೆತ್ತರದಲ್ಲಿ ಸಂಜೆಯ ಸೂರ್ಯ. ಬಾನಂಚಿಗೆ ಹಸರು-ಕಪ್ಪಾಗಿ ಒತ್ತಿಕೊಂಡ ತೆಂಗಿನ ತೋಟದ ತುರುಗಲು. ಅನತಿ ದೂರದಲ್ಲಿ ಆಗಾಗ ರಸ್ತೆಯನ್ನು ರುಬ್ಬಿಕೊಂಡು ಓಡುವ ವಾಹನಗಳ ಅಸ್ಪಷ್ಟವಾದ ಸದ್ದು. ನಮ್ಮ ಬೆನ್ನ ಹಿಂದೆ ಚಾಮುಂಡಿ ಬೆಟ್ಟದ ಬಂಡೆ-ಗಿಡ ಮರಗಳ ಏರುವೆಯ ಘನೀಭೂತ ಮೌನ.

‘ಸೊಗಸಾಗಿದೆ ಕಣಯ್ಯಾ ಜಾಗ’ ಅನ್ನುತ್ತ ಶಾಮರಾಯರು ತಮ್ಮ ಜುಬ್ಬದ ಜೇಬಿಗೆ ಕೈ ಹಾಕಿ ಮೆತ್ತಗೆ ನಸ್ಯದ ಡಬ್ಬಿಯನ್ನು ಹೊರತೆಗೆದರು. ಒಂದು ಚಿಟಕಿ ನಶ್ಯ ಏರಿಸಿದರು. ತೃಪ್ತಿಯಿಂದ ಮೊದಲೇ ಹೊಳೆಯುವ ಕಣ್ಣುಗಳು ಇನ್ನಷ್ಟು ಹೊಳೆದವು. ‘ಸರಿ, ಶುರು ಮಾಡಯ್ಯ, ಮತ್ತೇಕೆ ತಡ’ ಅಂದರು.

ನಾನು  ನನ್ನ ಕೈಚೀಲದಿಂದ ಒಂದು ಕಾಗದದ ಕಂತೆಯನ್ನು ತೆಗೆದೆ. ಒಂದರ ಜತೆಗೊಂದು ಟ್ಯಾಗ್ ಹಾಕಿದ ಹಾಳೆಗಳಲ್ಲಿ ಆ ವಾರ ನಾನು ಬರೆದ ಒಂದೊಂದೇ ಕವಿತೆಯನ್ನು ಓದತೊಡಗಿದೆ. ಶ್ಯಾಮರಾಯರು ಅತ್ಯಂತ ಪ್ರೀತಿಯಿಂದ  ಹಾಗೂ ಕುತೂಹಲದಿಂದ ನನ್ನ ಮೊದಲು-ತೊದಲ ಕವಿತೆಗಳನ್ನು ಕೇಳಿ, ನಡುನಡುವೆ ತಲೆದೂಗಿ ಮೆಚ್ಚಿಗೆಯನ್ನು ಸೂಚಿಸುವರು. ಹೀಗೆ ನಡು ನಡುವೆ ಸಣ್ಣಪುಟ್ಟ ತಿದ್ದುಪಾಡುಗಳನ್ನು ಸೂಚಿಸುವರು. ಪ್ರತಿವಾರವೂ ನಾನು ಬರೆದ ಎಂತೆಂಥ ಸಾಮಾನ್ಯವಾದ ಕವಿತೆಗಳನ್ನೂ ಅವುಗಳಲ್ಲೇನೋ ಮಹಾವಿಶೇಷವಿದೆಯೆಂಬಂತೆ ಆಲಿಸಿ ಬೆನ್ನು ತಟ್ಟುವರು.

ಆ ದಿನಗಳಲ್ಲೇ ನಾನು ಬರೆದದ್ದು ‘ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು’ ಎಂಬ ಕವಿತೆಯನ್ನು. ಈ ಹೊತ್ತು ತುಂಬ ಜನಪ್ರಿಯವಾಗಿರುವ ಈ ಕವಿತೆಯನ್ನು ನಾನು ಬರೆದದ್ದು ಅವರನ್ನು ಕುರಿತೇ. ಯಾಕೆಂದರೆ ಮೊದಲು ನಾನು ಎದೆ ತುಂಬಿ ಹಾಡಿದ್ದನ್ನು ಮನವಿಟ್ಟು ಕೇಳಿದವರು ಅವರೇ.

ಆಗ ನಾನು ಮೈಸೂರಿನ ಮಹಾರಾಜಾ ಕಾಲೇಜಿನ ಬಿ.ಎ.ಅನರ‍್ಸ್ ಓದುತ್ತಿದ್ದ ವಿದ್ಯಾರ್ಥಿ. ಅವರು ನನ್ನ ವಿದ್ಯಾಗುರುಗಳು.

ನಾನು ೧೯೪೬ರ ಕಾಲದಲ್ಲಿ ಮೈಸೂರು ಮಹಾರಾಜಾ ಕಾಲೇಜು ಸೇರಿದ್ದು. ಅದಕ್ಕೂ ಮೊದಲು ಒಂದೆರಡು ವರ್ಷ ಮನೆಯೊಳಗಿನ ಅನಾನುಕೂಲತೆಗಳ ಕಾರಣದಿಂದ ನನ್ನ ವಿದ್ಯಾಭ್ಯಾಸ ಸ್ಥಗಿತಗೊಂಡು, ಕೆಲವು ದಿನ ಮಿಡ್ಲ್ ಸ್ಕೂಲ್ ಉಪಾಧ್ಯಾಯನಾಗಿ, ಕೆಲವು ದಿನ ತಾಲ್ಲೂಕು ಕಛೇರಿ ಗುಮಾಸ್ತನಾಗಿ ಕೆಲಸ ಮಾಡಿ, ಕೊನೆಗೂ ಮನೆಯೊಳಗಿನ ಪ್ರತಿರೋಧಗಳನ್ನು ಪ್ರತಿಭಟಿಸಿ, ಓದನ್ನು ಮುಂದುವರೆಸುವ ನಿಶ್ಚಯದಿಂದ ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ಸೇರಿದ್ದೆ. ಯಾವ ದೊಡ್ಡ ಮನುಷ್ಯರ ಪರಿಚಯವೂ ಶಿಫಾರಸೂ ಇಲ್ಲದ ನನಗೆ, ಸುತ್ತೂರು ಮಠದ ವಿದ್ಯಾರ್ಥಿನಿಲಯದಲ್ಲಿ ಅಶನ-ವಸತಿಯ ಸೌಲಭ್ಯ ದೊರಕುವುದು ಸಾಧ್ಯವಿರಲಿಲ್ಲ.

ನನ್ನಂತೆಯೇ ಇದ್ದ ಕೆಲವು ಸಹಪಾಠಿಗಳೊಂದಿಗೆ ಕೊಠಡಿಯೊಂದನ್ನು ಹಿಡಿದು, ಹೇಗೋ ಕಾಲ ತಳ್ಳುತ್ತಿದ್ದೆ. ದುಡಿದು ಗಳಿಸಿ ತಂದಿದ್ದ ಅಲ್ಪಸ್ವಲ್ಪ ಹಣವೂ ಖರ್ಚಾಗಿ, ಪರಿಸ್ಥಿತಿ ತುಂಬ ಸಂದಿಗ್ಧವೂ ಆದ ಒಂದು ದಿನ, ತರಗತಿಯಲ್ಲಿ ಕೂತು ಶಾಮರಾಯರು ಮಾಡುತ್ತಿದ್ದ ಕುಮಾರವ್ಯಾಸ ಭಾರತದ ಪಾಠವನ್ನು ಕೇಳುತ್ತಿದ್ದೆ.

ಇದ್ದಕ್ಕಿದ್ದ ಹಾಗೆ ನನಗೆ ಬವಳಿ ಬಂದಿತೆಂದು ತೋರುತ್ತದೆ. ಡೆಸ್ಕಿನಮೇಲೆ ತಲೆ ಇರಿಸಿ  ಒರಗಿದೆ. ಕೊಂಚ ಹೊತ್ತಿನ ಮೇಲೆ ಸುಧಾರಿಸಿಕೊಂಡು ಮಂಕಾಗಿ ಕೂತ ನನ್ನನ್ನು ಶ್ಯಾಮರಾಯರ ಕಣ್ಣು  ಗಮನಿಸಿತು.

ತರಗತಿ ಮುಗಿದ ಕೂಡಲೇ ನನ್ನ ಕಡೆ ನೋಡಿ, ‘ನನ್ನ ಜತೆ ಬಾ’ ಅಂದರು.‘ಏನ್ ಸಮಾಚಾರ, ಯಾಕೆ ಹೀಗಿದ್ದೀ, ಊಟ ಮಾಡಿದೆ ತಾನೆ?’ ಎಂದರು. ‘ಊಟ ಆಗಿದೆ ಸಾರ್, ಏನೋ ಸ್ವಲ್ಪ ತಲೆ ಸುತ್ತಿದ್ದ ಹಾಗಾಯಿತು’ ಎಂದು ಸುಳ್ಳು ಹೇಳಿದೆ. ‘ಎಲ್ಲಿ ಮಾಡಿದೆ? ಯಾವ ಹಾಸ್ಟೆಲ್?’ ಅಂದರು ‘ಹೋಟೆಲಲ್ಲಿ ಮಾಡಿದೆ ಸಾರ್’ ಎಂದೆ. ‘ಸುಳ್ಳು, ನೀನು ಊಟಾನೇ ಮಾಡಿಲ್ಲ ಅನ್ನೋದನ್ನ ನಿನ್ನ ಮುಖವೇ ಹೇಳುತ್ತೆ. ಬಾ ನನ್ನ ಜತೆಗೆ’ ಎಂದು ಮನೆಗೆ ಕರೆದುಕೊಂಡು ಹೋದರು. ‘ಲೇ, ನನ್ನ ಜತೆ ಇವನಿಗೂ ಎಲೆ ಹಾಕೇ’ ಎಂದು ಅಡುಗೆ ಮನೆಯೊಳಗಿನ ತಮ್ಮ ಮಡದಿಗೆ ಕೇಳುವಂತೆ ಹೇಳಿದರು.

ಮುಂದಿನ ಹದಿನೈದು ನಿಮಿಷಗಳಲ್ಲಿ ನಡೆದಿತ್ತು ನಮ್ಮ ಊಟ.‘ಬಡ್ಸು ಸರಿಯಾಗಿ ಬಡ್ಸು’ ಅನ್ನುತ್ತಲೇ ‘ನೋಡಿದೆಯಾ, ನನಗ್ಗೊತ್ತು, ನೀನು ಊಟ ಮಾಡಿಲ್ಲ ಅಂತ’. ‘ಲೇ ಇನ್ನೊಂದ್ ಸ್ವಲ್ಪ ಹುಳಿ ಹಾಕು’ ಎಂದರು. ನಾನು ತೀರಾ ಸಂಕೋಚದಿಂದ ಸದ್ದಿಲ್ಲದೆ ಊಟ ಮಾಡತೊಡಗಿದೆ. ‘ನಾಚಿಕೋಬೇಡ, ಈಟ್ ಶೇಮ್‌ಲೆಸ್‌ಲೀ. ಹಾಗೆಂದ್ರೇನು ಗೊತ್ತೆ? ಸಂಕೋಚವಿಲ್ಲದೆ ಊಟ ಮಾಡು’ ಅಂತ ಎಂದು ಅದನ್ನು ಅನುವಾದ ಮಾಡಿ ಬಾಯಿ ತುಂಬಾ ನಕ್ಕರು. ಆನಂತರ ನಿಧಾನವಾಗಿ ನನ್ನ ಪೂರ್ವೋತ್ತರಗಳನ್ನು ವಿಚಾರಿಸಿದರು.

ಒಂದೆರಡು ದಿನದ ನಂತರ ಸುತ್ತೂರು ಮಠದ ಜಗದ್ಗುರುಗಳ ಹತ್ತಿರ ಕರೆದುಕೊಂಡು ಹೋಗಿ ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿದರು.

ಈ ಸಂದರ್ಭವನ್ನು ಕುರಿತು ಸುತ್ತೂರು ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮಿಗಳನ್ನು ಕುರಿತ ಗೌರವಗ್ರಂಥವಾದ ‘ಅರ್ಚನ’ (೧೯೮೪)ದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಕುರಿತು ತಮ್ಮ ನೆನಪುಗಳನ್ನು ದಾಖಲಿಸಿರುವ, ಕಿರು ಲೇಖನದಲ್ಲಿ ಶಾಮರಾಯರು ಪ್ರಸ್ತಾಪಿಸಿದ್ದಾರೆ. ಅದನ್ನೇ ಇಲ್ಲಿ ಉಲ್ಲೇಖಿಸುತ್ತೇನೆ:

‘ಶ್ರೀ ಶ್ರೀಗಳವರನ್ನು ವೈಯಕ್ತಿಕ ಕಾರಣಗಳಿಗಾಗಿ ನಾನೆಂದೂ ಭೇಟಿಯಾಗಿರಲಿಲ್ಲ. ಒಮ್ಮೆ ಮಾತ್ರ ಅವರನ್ನು ಕೃಪಾ ಯಾಚನೆ ಮಾಡಬೇಕಾದ ಸಂದರ್ಭವೊದಗಿತು’.

ಬಡ ಹುಡುಗನೊಬ್ಬ ನನ್ನ ಶಿಷ್ಯನಾಗಿದ್ದ. ಒಮ್ಮೆ ತರಗತಿಯಲ್ಲಿ ಬಾಡಿದ ಮುಖದಿಂದ ಕುಳಿತಿದ್ದ ಆತನನ್ನು ಕಂಡು ನನ್ನ ಮನಸ್ಸು ಚುರುಗುಟ್ಟಿತು. ಪಾಠವಾಗುತ್ತಲೆ ಆತನನ್ನು ಕರೆದು ‘ನಿನ್ನ ಊಟವಾಯಿತೆ?’ ಎಂದು ಪ್ರಶ್ನಿಸಿದೆ. ಕಡು ಬಡವನಾದರೂ ತುಂಬ ಆತ್ಮಗೌರವವುಳ್ಳ ಹುಡುಗ ಆತ. ‘ಆಗಿದೆ’ ಎಂದ. ನಾನು ನಂಬಲಿಲ್ಲ. ಮಾತನಾಡುತ್ತಾ ಆಡುತ್ತಾ ಆತನನ್ನು ನನ್ನ ಮನೆಯ ಒಳಗೆ ಕರೆದೊಯ್ದೆ. ಗೃಹಿಣಿಯನ್ನು ಕರೆದು ಊಟಕ್ಕೆ ಕೂರಿಸಿದೆ. ಊಟವಾದ ಮೇಲೆ ಆತನ ಇತಿಹಾಸವನ್ನೆಲ್ಲ ತಿಳಿದುಕೊಂಡೆ.

ಆತ ಓದಿನ ಆಸೆಯಿಂದ ಬರಿಗೈಯಲ್ಲಿ ಮೈಸೂರನ್ನು ಸೇರಿದ್ದು. ವಸತಿಗಾಗಲೀ, ಊಟಕ್ಕಾಗಲೀ ಯಾವ ಅನುಕೂಲವೂ ಇರಲಿಲ್ಲ. ಒಂದೆರಡು ದಿನ ಆತನನ್ನು ನನ್ನ ಬಳಿಯೇ ಇರಿಸಿಕೊಂಡಿದ್ದೆ. ಒಂದು ದಿನ ಆ ಹುಡುಗನನ್ನು ಕರೆದುಕೊಂಡು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಬಳಿಗೆ ಹೋದೆ. ಅವರಿಗೆ ಹುಡುಗನ ಪರಿಚಯವನ್ನು ಮಾಡಿಸಿ ಅಶನ-ವಸತಿಗಳನ್ನು ನೀಡುವಂತೆ ಪ್ರಾರ್ಥೀಸಿದೆ.

ಅವರೊಮ್ಮೆ ನಕ್ಕರು. ‘ಇವನು ಲಿಂಗಾಯತ ಹುಡುಗ. ನೀವು ಬ್ರಾಹ್ಮಣರು. ಇವನಲ್ಲಿ ನಿಮಗೇಕೆ ಇಷ್ಟು ಆಸಕ್ತಿ’ ಎಂದರು. ನಾನು ಸ್ವಲ್ಪ ಕಟುವಾಗಿಯೇ ಹೇಳಿದೆ. ‘ನನ್ನ ವಿದ್ಯಾರ್ಥಿಗಳು ನನ್ನ ಮಕ್ಕಳು. ಅವರೆಲ್ಲ ಜಾತ್ಯತೀತರು. ಅವರದು ವಿದ್ಯಾರ್ಥಿಗಳ ಜಾತಿ. ನಾನು ಅವರ ಗುರು’.

ಸ್ವಾಮೀಜಿಯವರ ನಗುಮುಖ ಮತ್ತಷ್ಟು ಅರಳಿತು.

‘ನಾನು ಅದನ್ನು ಬಲ್ಲೆ. ಕೇವಲ ಹಾಸ್ಯಕ್ಕಾಗಿ ಹಾಗೆ ಹೇಳಿದೆ’ ಎಂದು ಸ್ವಾಮಿಗಳು ಆಗಿಂದಾಗಲೆ ಆ ಹುಡುಗನನ್ನು ಮಠದ ವಿದ್ಯಾರ್ಥಿ ಮಂದಿರಕ್ಕೆ ಸೇರಿಸಿಕೊಂಡರು. ಆತನೇ ಇಂದು ಸುಪ್ರಸಿದ್ಧ ಕನ್ನಡದ ಕವಿ ಎಂದು ಹೆಸರಾಗಿರುವ ಡಾ. ಜಿ.ಎಸ್. ಶಿವರುದ್ರಪ್ಪ.’

***

ಮಹಾರಾಜ ಕಾಲೇಜಿನ ಆ ದಿನಗಳಲ್ಲಿ ಶಾಮರಾಯರ ತರಗತಿಗಳೆಂದರೆ ಹಾಜರಿ ಭರ್ತಿ. ಬೇರೆ ಬೇರೆ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಬಂದು ಅನಧಿಕೃತವಾಗಿ ತರಗತಿಯಲ್ಲಿ ತುಂಬಿಕೊಳ್ಳುತ್ತಿದ್ದರೆಂದು ಪ್ರತೀತಿ. ಕುಮಾರವ್ಯಾಸ, ಹರಿಹರ ಶ್ಯಾಮರಾಯರ ನೆಚ್ಚಿನ ಕವಿಗಳು. ಪಾಠ ಮಾಡುವ ವೇಳೆ ಅವರು ಆಯಾ ಕವಿಗಳ ಭಾವದಲ್ಲಿ ಕರಗಿ ಹೋಗುತ್ತಿದ್ದರು.

ಅವರಿಗೆ ಹೇಳಿಕೊಳ್ಳುವಂಥ ವಾಗ್ಮಿತೆಯಿರದಿದ್ದರೂ ಹೃದಯಸ್ಪರ್ಶಿಯಾದ ಯಾವುದೋ ಒಂದು ಸಮ್ಮೋಹಕತೆ ಎಲ್ಲರನ್ನೂ ಸೆಳೆದುಕೊಳ್ಳುವಂತಿತ್ತು.

ಅವತ್ತೊಂದು ದಿನ ತರಗತಿ ಮುಗಿದಾಗ- ‘ಯಾಕೋ, ಎರಡು ಮೂರು ದಿನ ಕಾಣಿಸಲೇ ಇಲ್ಲ. ಚಕ್ಕರ್ ಬೇರೆ ಹೊಡೀತೀಯೋ’ ಎಂದು ಗದರಿಸಿದರು. ಅದು ಹೇಗೋ ನಾನು ಗೈರು ಹಾಜರಾದ್ದನ್ನು ಅವರು ಗುರುತಿಸಿದ್ದರು. ನಾನೆಂದೆ, ‘ಊರಿಂದ ಯಾರೋ ಬಂದಿದ್ದರು ಸಾರ್… ಅದಕ್ಕೆ’ ಎಂದು ತೊದಲಿದೆ. ‘ಗೊತ್ತು ಗೊತ್ತು ನೀನು ಯಾಕೆ ಬಂದಿಲ್ಲಾಂತ. ನೀನು ಈ ತಿಂಗಳ ಫೀಜನ್ನೇ ಕಟ್ಟಿಲ್ಲವಂತೆ. ಹಾಗಂತ ಲೇಟಾದದ್ದಕ್ಕೆ ನಿನ್ನ ಹೆಸರನ್ನು ನೋಟೀಸ್ ಬೋರ್ಡ್ ಮೇಲೆ ಹಾಕಿದಾರಂತೆ, ಹೌದೇ?’ ಎಂದರು.

ಇದನ್ನೆಲ್ಲ ಇವರು ಹೇಗೆ ಪತ್ತೆ ಮಾಡಿದರೋ ಏನೋ ಅಂದುಕೊಳ್ಳುತ್ತ ‘ಏನಿಲ್ಲ ಸಾರ್ ಊರಿನಿಂದ ಹಣ ಬರೋದು ಈ ಸಲ ಸ್ವಲ್ಪ ತಡವಾಗಿದೆ ಅಷ್ಟೆ. ಮತ್ತೇನಿಲ್ಲ’ ಅಂದೆ. ‘ಅಯ್ಯೋ ರ‍್ಯಾಸ್ಕಲ್ ಏನಾಗಿತ್ತೋ ನಿನಗೆ ‘ಅನ್ನುತ್ತಾ ತಮ್ಮ ಜೇಬಿನಿಂದ ದುಡ್ಡು ತೆಗೆದು ಕೈಗೆ ತುರುಕುತ್ತಾ, ‘ಮೊದಲು ಫೀಜು ಕಟ್ಟಿ ಕ್ಲಾಸಿಗೆ ಸರಿಯಾಗಿ ಬಾ’ ಅಂದರು. ‘ಬೇಡಿ ಸಾರ್, ಬೇಡಿ ಸಾರ್’ ಅಂದರೂ ಕೇಳದೆ’ ‘ನೋಡಯ್ಯ, ನಾನೇನೂ ದಾನ ಕೊಡ್ತಾ ಇಲ್ಲ.  Payable when able. ನಾಳೆ ನೀನು ಕೆಲಸಕ್ಕೆ ಸೇರಿ ದುಡಿಯೋ ಕಾಲದಲ್ಲಿ ಹಿಂದಕ್ಕೆ ಕೊಟ್ಟರಾಯಿತು. ಅಷ್ಟೇ. ಸುಮ್ಮನೆ ಈಗ ತಗೋಬೇಕು’ ಅನ್ನುತ್ತ ಅಲ್ಲಿ ನಿಲ್ಲದೆ ನಡೆದೇ ಬಿಟ್ಟರು.

ಕ್ರಮೇಣ ಗೊತ್ತಾಯಿತು. ಶಾಮರಾಯರು ಹೀಗೆ ಗುರುತಿಸಿ ಸಹಾಯ ಮಾಡಿದ್ದು ನನಗೊಬ್ಬನಿಗೇ ಅಲ್ಲ, ಎಷ್ಟೋ ಜನಕ್ಕೆ. ಅವರಿಗೆ ಬರುತ್ತಿದ್ದ ಸಂಬಳವಾದರೂ ಎಷ್ಟು. ಸಾವಿರವಲ್ಲ. ಐನೂರಲ್ಲ. ಬಹುಶಃ ಅದಕ್ಕೂ ಕಡಿಮೆ. ಆದರೂ ಅವರ ಕೊಡುಗೆಗೆ ತಡೆಯಿರಲಿಲ್ಲ. ತಮ್ಮ ಸ್ವಂತದ ಕಷ್ಟಗಳನ್ನೂ ಕಡೆಗಣಿಸಿ, ಹಲವು ಹತ್ತು ಮಂದಿಗೆ ಸಹಾಯ ಮಾಡಿದರು. ಹಾಗೆ ಅವರು ಕೊಟ್ಟದ್ದರಲ್ಲಿ ಅವರಿಗೆ ಹಿಂದಕ್ಕೆ ಬಂದದ್ದು ಎಷ್ಟೋ ಏನೋ. ಅವರಿಂದ ಹೀಗೆ ಹಣ ಪಡೆದುಕೊಂಡವರಲ್ಲಿ ಎಷ್ಟೋ ಮಂದಿ, ಹಿಂದಿರುಗಿಸದೆ ಇದ್ದ ನಿದರ್ಶನಗಳೂ ಸಾಕಷ್ಟಿವೆ. ಹಾಗಂತ ಅವರೆಂದೂ ಬೇಜಾರು ಮಾಡಿಕೊಳ್ಳಲಿಲ್ಲ.  ಆ ಕುರಿತು ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಹೀಗೆ ಆರ್ಥಿಕವಾಗಿ ಅವರಿಂದ ಉಪಕೃತರಾದವರ ಮಾತಿರಲಿ, ಅವರ ಮನೆಯಲ್ಲಿ ವಾರಾನ್ನಕ್ಕೆ ಬಂದು ಹೋಗುವ ವಿದ್ಯಾರ್ಥಿಗಳ ಸಂಖ್ಯೆಗೂ, ಯಾವಾಗೆಂದರೆ ಅವಾಗ ಬಂದು ಹೋಗುವ ಅತಿಥಿ ಅಭ್ಯಾಗತರ ಸಂಖ್ಯೆಗೂ ಕೊರತೆ ಇರಲಿಲ್ಲ. ಅದೇನು ಮನೆಯೋ ಛತ್ರವೋ ಎಂದು ಅನಿಸಿದ್ದುಂಟು ನನಗೆ.

ಯಾವತ್ತೂ ತಮ್ಮ ತಾಪತ್ರಯಗಳನ್ನು ಹೊರಗೆ ತೋರಿಸಿಕೊಳ್ಳದೆ, ಅದು ಹೇಗೆ ಎಲ್ಲಾ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದರೋ ನನಗೆ ಅರ್ಥವಾಗುತ್ತಿರಲಿಲ್ಲ. ಬದಲಾದ ಪರಿಸ್ಥಿತಿಯ ಈ ದಿನಗಳಲ್ಲಿ, ಈ ಸಂಗತಿಗಳನ್ನೆಲ್ಲ ಹೇಳಿದರೆ ನಂಬುವವರೂ ಕಡಿಮೆಯೇ. ಅವರಿವರದ್ದನ್ನು ಬಡಿದು ಬಾಚಿಕೊಳ್ಳುವ ಪ್ರವೃತ್ತಿಯೇ ಪ್ರಧಾನವಾಗಿರುವಂತೆ ತೋರುವ ಇಂದಿನ ಸಂದರ್ಭದಲ್ಲಿ, ಯಾರಿಗಾದರೂ ಕೈ ಎತ್ತಿ, ಏನನ್ನಾದರೂ ಕೊಡುವ ಔದಾರ್ಯವಾಗಲೀ, ಹಾಗೆ ಪಡೆದುದನ್ನು ಸ್ಮರಿಸುವ ಕೃತಜ್ಞತೆಯ ಪ್ರತಿಕ್ರಿಯೆಗಳಾಗಲೀ-ತೀರಾ ವಿರಳವೆಂದೇ ಹೇಳಬೇಕು.

***

ಶ್ಯಾಮರಾಯರು ಕೇವಲ ಶ್ರೇಷ್ಠ ಅಧ್ಯಾಪಕರಷ್ಟೇ ಅಲ್ಲ. ಬಹು ದೊಡ್ಡ ವಿದ್ವಾಂಸರೂ ಹೌದು. ಅವರು ಕೈಕೊಂಡ ಗ್ರಂಥ ಸಂಪಾದನಾ ಕಾರ‍್ಯವಾಗಲಿ, ‘ಶಿವಶರಣ ಕಥಾಕೋಶ’ದಂಥ ಕೋಶ ನಿರ್ಮಾಣವಾಗಲೀ, ರಾಮಾಯಣ ಮಹಾಭಾರತ ಭಾಗವತದಂಥ ವಿಸ್ತೃತವಾದ ಸಾರಸ್ವತ ಪ್ರಪಂಚಗಳನ್ನು ತುಂಬ ಸೊಗಸಾದ -ಕನ್ನಡದಲ್ಲಿ ನಿರೂಪಿಸಿದ ‘ಜನಪ್ರಿಯ ಸಾಹಸ’ಗಳಾಗಲಿ, ಸಾಮಾನ್ಯವಾದ ಕೊಡುಗೆಗಳಲ್ಲ. ಆದರೆ ಅವರ ಈ ಸಾಧನೆಗಳಿಗೆ ತಕ್ಕ ಸ್ಥಾನಮಾನಗಳು ಅವರಿಗೆ ವಿಶ್ವವಿದ್ಯಾಲಯದಲ್ಲಿ ಬಹುಕಾಲ ಲಭ್ಯವಾಗಲೇ ಇಲ್ಲ. ಇನ್ನೇನು ಅವರ ಸೇವಾವಧಿ ಮುಗಿಯುತ್ತ ಬಂದಿದೆ ಅನ್ನುವ ಹೊತ್ತಿಗೆ ಅವರು ಪ್ರಸಾರಾಂಗದ ನಿರ್ದೇಶಕರಾದರು; ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯದ ಗ್ರಂಥಪಾಲರಾದರು. ಇದರ ಜತೆಗೆ ಅವರು ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯನ್ನು ಪ್ರಾರಂಭಿಸಿ ‘ನಾಡಿನ ಎಷ್ಟೋ ಬರೆಹಗಾರರನ್ನು ಬೆಳಕಿಗೆ ತಂದರು.’ ಹಾಗೆ ಬೆಳಕಿಗೆ ಬಂದವರಲ್ಲಿ ನಾನೂ ಒಬ್ಬ.

ನನಗೆ ಚೆನ್ನಾಗಿ ನೆನಪಿದೆ. ಆಗ ನಾನಿನ್ನೂ ಬಿ. ಎ. ಆನರ‍್ಸ್ ವಿದ್ಯಾರ್ಥಿ. ಶಾಮರಾಯರು ತಮ್ಮ ಅಣ್ಣನವರಾದ ದಿವಂಗತ ಟಿ. ಎಸ್ ವೆಂಕಣ್ಣಯ್ಯನವರ ಹೆಸರಿನಲ್ಲಿ ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯನ್ನು ತಮ್ಮ ಆಪ್ತ ಮಿತ್ರ ಪ್ರೊ. ಎಚ್. ಎಂ.ಶಂಕರನಾರಾಯಣ ರಾಯರ ಜತೆಗೆ ಸೇರಿ ಪ್ರಾರಂಭಿಸಿದರು.

ನಾನು ವೆಂಕಣ್ಣಯ್ಯನವರನ್ನು ನೋಡಿದವನಲ್ಲ. ನಾನು ಮಹಾರಾಜಾ ಕಾಲೇಜಿಗೆ ವಿದ್ಯಾರ್ಥಿಯಾಗಿ ಬರುವ ಹೊತ್ತಿಗೆ ಅವರಾಗಲೇ ದಂತಕತೆಯಾಗಿದ್ದರು. ಮೈಸೂರು ಮಹಾರಾಜಾ ಕಾಲೇಜಿನ ನಾಲ್ಕನೆ ನಂಬರ್ ಕೊಠಡಿಯಲ್ಲಿ, ಅಂದು ಆಗ ತಾನೇ ಪ್ರಾಧ್ಯಾಪಕರಾಗಿ ಬಂದಿದ್ದ, ಶ್ರೀ ಕುವೆಂಪು ಅವರು ಕೂರುತ್ತಿದ್ದ ಕುರ್ಚಿಯ ಹಿಂದೆ, ಎತ್ತರದ ಗೋಡೆಯ ಮೇಲೆ ವಿರಾಜಮಾನವಾಗಿತ್ತು ವೆಂಕಣ್ಣಯ್ಯನವರ ಫೋಟೋ. ನಿಶ್ಯಬ್ದ ದೀಪದಂಥ ಕಣ್ಣುಗಳ ನೀರವ-ಪ್ರಶಾಂತ ಭಾವದ ಆ ಮುಖದ ದರ್ಶನ ನಮ್ಮಲ್ಲಿ ಒಂದು ಬಗೆಯ ಗೌರವವನ್ನು ಪ್ರಚೋದಿಸುತ್ತಿತ್ತು.

ನಮ್ಮ ಶಾಮರಾಯರು ಆ ವೆಂಕಣ್ಣಯ್ಯನವರ ಸಾಕ್ಷಾತ್ ತಮ್ಮ. ಅವರ ಹೆಸರಿನ ಗ್ರಂಥ ಮಾಲೆ ಪ್ರಾರಂಭವಾದ ಸ್ವಲ್ಪ ಕಾಲದ ಆನಂತರ ಒಂದು ದಿನ ಶಾಮರಾಯರು ಹೇಳಿದರು: ‘ಹ್ಯಾಗೂ ನಮ್ಮದೊಂದು ಪ್ರಕಾಶನ ಶುರುವಾಗಿದೆಯಲ್ಲ. ನಿನ್ನ ಪದ್ಯಗಳ ಸಂಗ್ರಹವೊಂದನ್ನು ಯಾಕೆ ಪ್ರಕಟ ಮಾಡಬಾರದು?’ ನಾನು ದಂಗು ಬಡಿದು ನಿಂತೆ. ನಾನು ಏನೋ ನನಗೆ ತೋಚಿದ ಹಾಗೆ ಒಂದಷ್ಟು ಪದ್ಯ ಬರೆಯುತ್ತಿದ್ದೆ. ಅವುಗಳನ್ನು ನನ್ನ ಪ್ರೀತಿಯ ಮೇಷ್ಟ್ರು ಆಗಾಗ ಕೂತು ಕೇಳುತ್ತಿದ್ದರು. ಅವರು ಹಾಗೆ ಕೇಳಿ ಸಂತೋಷಪಡುವುದಷ್ಟೆ ನನಗೆ ಸಾಕು ಅನ್ನುವಂಥ ಒಂದು ಮನಃಸ್ಥಿತಿಯಲ್ಲಿದ್ದೆ. ಅವುಗಳನ್ನು ಹೀಗೆ ಸಂಗ್ರಹವಾಗಿ ತರಬೇಕೆಂಬ ಹಂಬಲವೆ ನನ್ನಲ್ಲಿ ಇನ್ನೂ ಹಣ್ಣಾಗಿರಲಿಲ್ಲ. ಆದರೆ ಶಾಮರಾಯರು ನನ್ನ ಕಂತೆಯೊಳಗಿರುವ ಒಂದಷ್ಟು ಕವಿತೆಗಳನ್ನು ಆರಿಸಿ, ಅವರೇ ಕುವೆಂಪು ಅವರಿಂದ ಮುನ್ನುಡಿಯ ನಾಲ್ಕು ಮಾತು ಬರೆಯಿಸಿ ‘ಸಮಗಾನ’ ಎಂಬ ಹೆಸರಿನ ನನ್ನ ಮೊದಲ ಕವನ ಸಂಗ್ರಹವನ್ನು ಪ್ರಕಟಿಸಿಯೇ ಬಿಟ್ಟರು.

ಈ ಪುಸ್ತಕ ಪ್ರಕಟವಾಗುವ ಹೊತ್ತಿಗೆ, ನನ್ನ ಬಿ.ಎ. ಆನರ‍್ಸ್ ಪರೀಕ್ಷೆಯ ಫಲಿತಾಂಶ ಬಂದು, ದಾವಣಗೆರೆಯ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ನಾನು ನೇಮಕಗೊಂಡು ಕೆಲವೇ ತಿಂಗಳಾಗಿತ್ತು. ಹೀಗೆ ನಾನು ನೆಲೆ ನಿಂತ ಬಗ್ಗೆ ಮೈಸೂರಿನಿಂದ ಶಾಮರಾಯರು ತಮ್ಮ ಸಂತೋಷವನ್ನು ಸೂಚಿಸಿ ಪತ್ರ ಬರೆದರು: ‘ಮಗೂ ನನ್ನ ಆಸೆ ಫಲಿಸಿತು. ದೇವರು ನಿನಗೆ ಒಳ್ಳೆಯದನ್ನು ಮಾಡಲಿ.’ ಫಲಿಸಿದ್ದು ಯಾರ ಆಸೆ, ಏನು ಕತೆ!

ಯಾವುದಿದು ಈ ಅವ್ಯಾಜ ಪ್ರೀತಿಯ ಮಹಾಪೂರ! ಇದರ ಉಗಮವೆಲ್ಲಿ? ಹೇಗೆ ಇದು ನಮ್ಮೆದುರಿಗೆ ಮೂರ್ತಗೊಂಡು, ಎಲ್ಲ ಬಗೆಯ ಮಾನವ ನಿರ್ಮಿತ ಗಡಿ-ಗೆರೆಗಳನ್ನು ದಾಟಿ ಎಲ್ಲರನ್ನೂ ಅಕ್ಕರೆಯ ತೆಕ್ಕೆಯಲ್ಲಿ ತಬ್ಬಿಕೊಂಡಿತು! ವಾತ್ಸಲ್ಯದ ಪ್ರತಿಮಾ ಸ್ವರೂಪರಾದ ಇಂಥ ವಿರಳ ವ್ಯಕ್ತಿಗಳು ಎಷ್ಟು ಜನರ ಋಣದ ಗಣಿಗಳೋ-

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನ ಗಣಿಯೋ!

ಚದುರಿದ ಚಿಂತನೆಗಳು : ೨೦೦೦