ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ನಡೆದ  ಒಂದು ಸಂಗತಿ ಇದು.

ನಮ್ಮ ಕನ್ನಡ ನಾಡಿನಲ್ಲಿ ಉಡುಪಿಯ ಹೆಸರನ್ನು ಯಾರು ಕೇಳಿಲ್ಲ? ಅದು ಪ್ರಸಿದ್ಧ ಯಾತ್ರಾಸ್ಥಳ. ಅಲ್ಲಿನ ಶ್ರೀಕೃಷ್ಣನ ದೇವಾಲಯಕ್ಕೆ ಭಾರತದ ಮೂಲೆ ಮೂಲೆಯಿಂದ ಅಪಾರ ಜನ ಬರುತ್ತಾರೆ.

ಶ್ರೀಕೃಷ್ಣನ ಪೂಜೆಯನ್ನು  ಎಂಟು ಮಠಗಳ ಸ್ವಾಮಿಗಳು ಮಾಡುತ್ತಾರೆ. ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದವರು ಶ್ರೀ ಆನಂದತೀರ್ಥರು; ಇವರನ್ನು ಮಧ್ವಾಚಾರ್ಯರು ಎಂದೂ ಕರೆಯುತ್ತಾರೆ.

ಶ್ರೀ ಮಧ್ವಾಚಾರ್ಯರಿಗೆ ಶ್ರೀ ಕೃಷ್ಣನ ಪೂಜೆ ಎಂದೆಂದಿಗೂ ನಡೆದುಕೊಂಡು ಬರಬೇಕು ಎಂದು ಅಪೇಕ್ಷೆ. ಇದಕ್ಕಾಗಿ ಎಂಟು ಮಠಗಳನ್ನು  ಸ್ಥಾಪಿಸಿದರು. ಇವುಗಳಲ್ಲಿ ಒಂದು ’ಸೋದೆ ಮಠ’ ಎಂಬುದು.

ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಈ ಮಠದಲ್ಲಿ ಒಬ್ಬ ಸ್ವಾಮಿಗಳಿದ್ದರು.

ತಿರುಪತಿಯ ಹೆಸರು ಕೇಳಿದ್ದೀರಲ್ಲ? ಉಡುಪಿಯ ಹಾಗೆಯೇ ಬಹು ಪ್ರಸಿದ್ಧವಾದ ಯಾತ್ರೆಯ ಸ್ಥಳ ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯವೂ ಭಾರತದಲ್ಲೆಲ್ಲ ಪ್ರಸಿದ್ಧ. ಇಲ್ಲಿಗೂ ಸಾವಿರಾರು ಜನ ಭಕ್ತರು ಬರುತ್ತಾರೆ. ಸೋದೆ ಮಠದ ಯತಿಗಳು ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ತಿರುಪತಿಗೆ ಬಂದರು.

ಶ್ರೀ ವೆಂಕಟೇಶ್ವರನ ದೇವಸ್ಥಾನ ಬೆಟ್ಟದ ಮೇಲಿದೆ. ಯತಿಗಳು ದೂರದಿಂದ ಮೊದಲನೆಯ ಬಾರಿ ಬೆಟ್ಟವನ್ನು ನೋಡಿದಾಗ ಅದು ಸಾಲಿಗ್ರಾಮದ ಹಾಗೆ ಕಂಡಿತಂತೆ. ಸಾಲಿಗ್ರಾಮ ಶಿಲೆ ವಿಷ್ಣುವಿನ ಭಕ್ತರಿಗೆ ತುಂಬ ಪವಿತ್ರ.

ಯತಿಗಳಿಗೆ ಚಿಂತೆಯಾಯಿತು. ಸಾಲಿಗ್ರಾಮದ ಮೇಲೆ ಕಾಲಿಟ್ಟು ಹತ್ತುವುದು ಎಷ್ಟು ಅಪಚಾರ! ದೊಡ್ಡ ತಪ್ಪು! ಆದರೆ ಬೆಟ್ಟ ಹತ್ತದೆ ಶ್ರೀ ವೆಂಕಟೇಶ್ವರನ ದರ್ಶನ ಆಗುವಂತಿಲ್ಲ. ಬೆಟ್ಟವನ್ನು ಅಂಬೆಗಾಲಿಡುವ ಮಗುವಿನ ಹಾಗೆ ಮೊಳಕಾಲಿನಲ್ಲಿ ಹತ್ತಿದರಂತೆ ಯತಿಗಳು.

ಅನಂತರ ದೇವಸ್ಥಾನಕ್ಕೆ ಹೋಗಿ, ಶ್ರೀ ವೆಂಕಟೇಶ್ವರನ ದರ್ಶನ ಮಾಡಿದರು.  ಸಾಲಿಗ್ರಾಮಹ ಮಾಲೆಯನ್ನೆ ದೇವರಿಗೆ ಅರ್ಪಿಸಿದರು.

ಆಗ ಅವರು ಶ್ರೀ ವೆಂಕಟೇಶ್ವರನ ಮೂರ್ತಿಗೆ ಸಮರ್ಪಿಸಿದ ಮಾಲೆಯನ್ನು ಈಗಲೂ ಕಾಣಬಹುದು.

ಶ್ರೀ ಮಧ್ವಾಚಾರ್ಯರು

ಪುಣ್ಯಕರ್ಮ ಎಂದರೆ ಒಳ್ಳೆಯ ಕೆಲಸ; ಪಾಪಕರ್ಮ ಎಂದರೆ ಕೆಟ್ಟ ಕೆಲಸ. ನಾವು ಒಳೆಯ ಕೆಲಸ ಮಾಡಿದರೆ ಕೆಲಸ ಮಾಡಿದರೆ ಫಲ ಒಳ್ಳೆಯದು ಕೆಟ್ಟ ಕೆಲಸ ಮಾಡಿದರೆ ಫಲ ಕೆಟ್ಟದ್ದು. ಹಾಗಾದರೆ ಒಳ್ಳೆಯದು ಎಂದರೇನು, ನಾವು ಇಲ್ಲಿ ಬದುಕಬೇಕಾದ ರೀತಿ ಹೇಗೆ ಎಂಬ ಪ್ರಶ್ನೆಗಳು ಏಳುತ್ತವೆ.

ಆದರೆ ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಅಷ್ಟು ಸುಲಭವಲ್ಲ. ಅದಕ್ಕೆ ಉತ್ತರ ಕೊಡಲು ಬಹುಮಂದಿ ಬುದ್ಧಿವಂತರು ಬಹು ಕಾಲದಿಂದ ಪ್ರಯತ್ನ ಮಾಡಿದ್ದಾರೆ. ಮಾನವರ ಬದುಕು ಹಸಾಗಬೇಕಾದರೆ, ಒಳ್ಳೆಯದು ಎನಿಸಿಕೊಳ್ಳಬೇಕಾದರೆ ನಾವು ಅನುಸರಿಸಬೇಕಾದ ಮಾರ್ಗ ಯಾವುದು ಎಂಬುದನ್ನು ಬೋಧಿಸಿದ್ದಾರೆ.

ಈ ಬಗೆಯ ಧರ್ಮಬೋಧೆ ಮಾಡಿದ ಭಾರತೀಯ ದರ್ಶನಕಾರರಲ್ಲಿ ಶ್ರೀ ಮಧ್ವಾಚಾರ್ಯರು (೧೨೩೭-೧೩೧೮) ಬಹು ದೊಡ್ಡವರಲ್ಲಿ ಒಬ್ಬರು. ಇವರು ಭಾರತದಲ್ಲೆಲ್ಲ ಸಂಚಾರ ಮಾಡಿದರು. ಭಗವಂತನಲ್ಲಿ ಭಕ್ತಿ ಇಡಿ, ಒಳ್ಳೆಯವರಾಗಿ ಬಾಳಿ ಎಂದು ಉಪದೇಶ ಮಾಡಿದರು.

ಸೋದೆ ಮಠವೆಂಬುದು ಶ್ರೀ ಮಧ್ವಾಚಾರ್ಯರಿಂದ ಹದಿನೆಂಟನೆಯ ತಲೆಯವರಾದ ಶ್ರೀ ವಾದಿರಾಜತೀರ್ಥ ಶ್ರೀಪಾದಂಗಳವರ ಕಾಲದಲ್ಲಿ ಅವರಿಂದ ಆ ಹೆಸರು ಪಡೆಯಿತು. (ಸೋದೆ ವಾದಿರಾಜರ ಮಠ ಎಂದೂ ಹೇಳುತ್ತಾರೆ.) ವಾದಿರಾಜರು ಎಂಟು ಮಠಗಳಲ್ಲಿ ಒಂದು ಮಠದ ಯತಿಶ್ರೇಷ್ಠರು ಆದರೂ ಕಾರಣಾಂತರದಿಂದ ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಬಳಿ ಇರುವ ಸೋದೆಯಲ್ಲಿ ಬಹುಕಾಲ ನೆಲೆಸಿದರು. ಅವರ ಅವತಾರ ಅಲ್ಲೇ ಪೂರ್ಣವಾಗಿ ಅವರ ವೃಂದಾವನವೂ ಅಲ್ಲೇ ಸ್ಥಪಿತವಾಯಿತು. ಆದ್ದರಿಂದ ಅವರಿಗೆ ಸೋದೆ ವಾದಿರಾಜರು ಎಂದು ಹೆಸರಾಯಿತು. ಅವರ ಮಠಕ್ಕೆ ಸೋದೆ ಮಠ ಎಂದೂ ಹೆಸರಾಯಿತು. ಇವರಿಗಿಂತ ಮುಂಚೆ ಈ ಮಠಕ್ಕೆ ಕುಂಭಾಸಿ ಮಠ ಎಂಬ ಹೆಸರಿದ್ದಿತು.

ವಾದಿರಾಜರು ಬಹು ದೊಡ್ಡ ವಿದ್ವನ್ಮಣಿಗಳು, ಸಮಾಜ ಸುಧಾರಕರು, ವಾದಿಗಳಲ್ಲಿ ರಾಜರು, ಪವಾಡ ಪುರುಷರು, ವರ ಕವಿಗಳು-ಎಂದು ಇತಿಹಾಸದಲ್ಲಿ ಸುಪ್ರಸಿದ್ಧರು.

ಮಗುವಾದರೆ ಮಠಕ್ಕೆ ಕೊಡುವಿರ?

ಉಡುಪಿ-ಕುಂದಾಪುರ ಮಾರ್ಗದಲ್ಲಿ ಕೋಟೇಶ್ವರ ಎಂಬ ಪ್ರಸಿದ್ಧ ಕ್ಷೇತ್ರವಿದೆ. ಅಲ್ಲಿಗೆ ಸಮೀಪದಲ್ಲಿ ಕುಂಭಾಸಿ ಕ್ಷೇತ್ರಕ್ಕೆ ಈಶಾನ್ಯದಲ್ಲಿ ಹೂವಿಕೆರೆ ಎಂಬ ಒಂದು ಸಣ್ಣ ಹಳ್ಳಿ. ಅಲ್ಲಿ ಹದಿನೈದನೆಯ ಶತಮಾನದಲ್ಲಿ (ಎಂದರೆ ಸುಮಾರು ಐದು ನೂರು ವರ್ಷಗಳ ಹಿಂ‌‌ದೆ) ಶ್ರೀ ರಾಮಾಚಾರ್ಯ-ಗೌರಮ್ಮ ಎಂಬ ಸಾತ್ವಿಕ ದಂಪತಿಗಳು ಸುಖವಾಗಿ ವಾಸ ಮಾಡಿಕೊಂಡಿದ್ದರು. ಅವರ ವಾಸ ಹೂವಿನಕೆರೆಗೆ ಸೇರಿದ ತಮ್ಮ ಸ್ವಂತ ಜಮೀನಿನ ಮಧ್ಯೆಯೇ ಒಂದು ಕುಟೀರದಲ್ಲಿ. ಹಣ, ದೊಡ್ಡ ಸ್ಥಾನ ಈ ಬಗೆಯ ಯಾವ ಆಸೆಯೂ ಅವರಿಗೆ ಇರಲಿಲ್ಲ. ದೇವರು ಕೊಟ್ಟುದರಲ್ಲೇ ಅವರಿಗೆ ತೃಪ್ತಿ. ಆದರೆ ಅವರ ಮನಸ್ಸಿಗೆ ಮಾತ್ರ ಸಮಾಧಾನವಿರಲಿಲ್ಲ. ಇದಕ್ಕೆ ಕಾರಣ ಅವರಿಗೆ ಮಕ್ಕಳಿರಲಿಲ್ಲ. ಒಂದು ಮಗುವಾದರೆ ಸಂತೋಷದಿಂದ ಸಂಸಾರ ಮಾಡಬಹುದು ಎನ್ನುವ ಹಂಬಲ ಅವರಿಗೆ.

ಹತ್ತಿರವೇ ಇದ್ದ ಕುಂಭಸಿಯಲ್ಲಿ ಶ್ರೀ ವಾಗೀಶ ತೀರ್ಥರೆಂಬ ತಪಸ್ವಿಗಳು ವಾಸವಾಗಿದ್ದರು. ಈ ದಂಪತಿಗಳು ಅಲ್ಲಿಗೆ ಹೋದರು. ಆ ಮಠದ ಭೂವರಾಹ ದೇವರಲ್ಲಿ ಸೇವೆ ಸಲ್ಲಿಸಿದರು. ನಮಗೆ ಒಂದು ಮಗುವನ್ನು ಕೊಡು ಎಂದು ಬೇಡಿಕೊಂಡರು. ದೇವರಿಗೆ ಹರಕೆ ಮಾಡಿಕೊಳ್ಳುವ ಪದ್ಧತಿ ಇಲ್ಲವೆ? ಗೌರಮ್ಮ ಭೂವರಾಹ ದೇವರಿಗೆ ಹರಕೆಯನ್ನು ಹೊತ್ತುಕೊಂಡಳು, ನನಗೆ ಮಗ ಹುಟ್ಟಿದರೆ ನಿನಗೆ ಲಕ್ಷಾಲಂಕಾರ ಸೇವೆ ಮಾಡಿಸುತ್ತೇನೆ ಎಂದು! ಸ್ವಾಮಿಗಳಲ್ಲೂ ಗಂಡ ಹೆಂಡತಿ ತಮ್ಮ ಆಸೆಯನ್ನು ತೋಡಿಕೊಂಡರು.

ಶ್ರೀ ವಾಗೀಶತೀರ್ಥರು ನಿಮಗೆ ಗಂಡು ಮಗುವಾದರೆ ಅದನ್ನು ಮಠಕ್ಕೆ ಕೊಡುವಿರ? ಎಂದು ಕೇಳಿದರು.

ಈ ಪ್ರಶ್ನೆಯನ್ನು ಕೇಳಿ  ಗಂಡ ಹೆಂಡತಿಗೆ ಅಷ್ಟೇನೂ ಸಂತೋಷವಾಗಲಿಲ್ಲ. ತಮಗೆ ಮಗು ಬೇಕು ಎಂದು ಬೇಡಿಕೊಳ್ಳುತ್ತಿರುವುದು ಮಗುವನ್ನು ಬೇರೆಯವರಿಗೆ ಕೊಡುವುದಕ್ಕೆ? ಆದರೆ ಸ್ವಾಮಿಗಳು ಕೇಳುತ್ತಿದ್ದಾರೆ. ಗಂಡ ಹೆಂಡತಿ ಉತ್ತರ ಕೊಡಲು ತೋರದೆ ಸುಮ್ಮನೆ ನಿಂತರು. ಸ್ವಾಮಿಗಳು ಯೋಚಿಸಿ ಮತ್ತೆ ಹೇಳಿದರು; ಮಗು ಮನೆಯಲ್ಲಿ ಹುಟ್ಟಿದರೆ ನಿಮಗೆ, ಹೊರಗೆ ಹುಟ್ಟಿದರೆ ನಮ್ಮ ಮಠಕ್ಕೆ, ಎನು ಹೇಳುತ್ತೀರಿ?

ಸ್ವಾಮಿಗಳು ಕೇಳಿದರೆ ಇಲ್ಲ ಎನ್ನುವುದು ಹೇಗೆ ಎಂದು ದಂಪತಿಗಳು ಯೋಚಿಸುತ್ತಿದ್ದರು. ಈ ಮಾತನ್ನು ಕೇಳಿ ಗೌರಮ್ಮನ ಮನಸ್ಸು ಸ್ವಲ್ಪ ಸಮಾಧಾನಪಟ್ಟಿತು. ಮಗು ಮನೆಯ ಹೊರಗೆ ಹುಟ್ಟುವ ಸಂಭವವೆಲ್ಲಿ? ಆದ್ದರಿಂದ ಸ್ವಾಮಿಗಳ ಮಾತನ್ನು ಒಪ್ಪಿದರೂ ಮಗು ನಮಗೇ. ಸ್ವಾಮಿಗಳಿಗೂ ನಾವು ಅವರ ಮಾತನ್ನು ಒಪ್ಪಿದರೂ ಮಗು ನಮಗೇ. ಸ್ವಾಮಿಗಳಿಗೂ ನಾವು ಅವರ ಮಾತು ಕೇಳಲಿಲ್ಲ ಎಂಬ ಬೇಸರವಿಲ್ಲ ಎಂಬುದೇ ಆ ಸಮಾಧಾನಕ್ಕೆ ಕಾರಣ.

“ಆಗಬಹುದು” ಎಂದು ಹೇಳಿ ನಮಸ್ಕಾರ ಮಾಡಿ ಹಿಂದಕ್ಕೆ ಬಂದರು.

ಇದಾದ ಕೆಲ ಕಾಲದ ತರುವಾಯ ಗೌರಮ್ಮ ಗರ್ಭಿಣಿಯಾದಳು. ರಾಮಾಚಾರ್ಯರು, ಅವರ ಹೆಂಡತಿ ಯೋಚನೆ ಮಾಡಿದರು. ಗಂಡು ಕೂಸು ಹುಟ್ಟಿದರೆ ಅದನ್ನು ಮಠಕ್ಕೆ ಒಪ್ಪಿಸುವುದು ಹೇಗೆ? ಆದ್ದರಿಂದ ಮಗು ಯಾವ ಕಾರಣಕ್ಕೂ ಮನೆಯ ಹೊರಗೆ ಹುಟ್ಟಬಾರದು ಎಂದು ತೀರ್ಮಾನಿಸಿದರು. ಗೌರಮ್ಮನೂ ಸದಾ ಜಾಗೃತಳಾಗಿದ್ದು ಮನೆಯಲ್ಲೇ ಇರುವುದಾಗಿ ತೀರ್ಮಾನಿಸಿದಳು.

ಮನುಷ್ಯ ತಾನೊಂದು ನೆನೆದರೆ ದೈವ ತಾನೊಂದು ಬಗೆಯುವುದು ಎನ್ನುತ್ತಾರೆ. ನಾವು ಎಷ್ಟೋ ಎಚ್ಚರಿಕೆಯಿಂದ ಒಂದು ಪ್ರಯತ್ನ ಮಾಡಿ, ಖಂಡಿತ ಹೀಗೆಯೇ ಆಗುತ್ತದೆ ಎಂದು ಲೆಖ್ಖ ಹಾಕುತ್ತೇವೆ, ಅದು ತಪ್ಪಿ ಹೋಗುತ್ತದೆ ಎಂಬುದು ಬಹುವೇಳೆ ನಮ್ಮ ಅನುಭವಕ್ಕೆ ಬರುವುದಲ್ಲವೆ? ರಾಮಾಚಾರ್ಯ ದಂಪತಿಗಳಿಗೂ ಅದು ಚೆನ್ನಾಗಿ ಅನುಭವಕ್ಕೆ ಬಂದಿತು.

ಗೌರಿ ಗದ್ದೆ

ಗೌರಮ್ಮನಿಗೆ ಪ್ರಸವ ಕಾಲ ಹತ್ತಿರ ಬಂದಂತೆ ಮನಸ್ಸು ಜಾಗೃತವಾಗಿದ್ದು ಕಳವಳವೂ ಆಗುತ್ತಿದ್ದಿತು. ಶಾಲೀವಾಹನ ಶಕ ೧೪೦೨ ಶಾರ್ವರೀ ಸಂವತ್ಸರ (ಕ್ರಿಸ್ತಶಕ ೧೪೮೦)  ಮಾಘ ಶುದ್ಧ ದ್ವಾದಶಿಯ ದಿನ. ಅಂದು ಸಾಧನೆ ದ್ವಾದಶಿ, ಎಂದರೆ ಬೇಗನೆ ಎಲ್ಲರ ಊಟ ಆಗಬೇಕು. ರಾಮಾಚಾರ್ಯರ ಮನೆಯಲ್ಲಿ ಬೆಳಗಿನ ಝಾವದಲ್ಲೇ ಎದ್ದು ಅಡಿಗೆ-ಪೂಜಾ ಕಾರ್ಯಗಳಲ್ಲಿ ನಿರತರಾದರು. ಇನ್ನೂ ಪೂರ್ತಿ ಬೆಳಗಾಗಿಲ್ಲ, ಎಲ್ಲರೂ ಭೋಜನಕ್ಕೆ ಕುಳಿತರು. ಆ ಸಮಯದಲ್ಲಿ ಒಂದೆರಡು ದನಗಳು ಗದ್ದೆಯ ಒಳಕ್ಕೆ ಬಂದವು. ಸೊಂಪಾಗಿ ಬೆಳೆದು ನಿಂತಿದ್ದ ಹಚ್ಚ ಹಸಿರ ಪಚ್ಚೆ ಪೈರನ್ನು ಮೇಯಲು ಪ್ರಾರಂಭಿಸಿದವು. ಇದನ್ನು ಮನೆಯೊಳಗಿನಿಂದಲೇ ಗೌರಮ್ಮ ಕಂಡಳು. ಪಾಪ, ಪೈರಿನ ಕಡೆ ಲಕ್ಷ್ಯ ಹೆಚ್ಚು ಹೋಯಿತು. ಉಳಿದ ವಿಚಾರವೆಲ್ಲ ಮರೆತು ಹೋಯಿತು. ತಾನೇ ದನಗಳನ್ನು ಓಡಿಸಲು ಮನೆಯಿಂದ ಹೊರಗೆ ಧಾವಿಸಿದಳು. ಇದನ್ನು ಉಳಿದವರು ಯಾರೂ ಗಮನಿಸಲೂ ಇಲ್ಲ.

ಮನೆಯಿಂದ ಕೊಂಚ ದೂರ ಗದ್ದೆಯ ಅಂಚಿಗೆ ಹೋಗಿ ಗೌರಮ್ಮ ದನ ಓಡಿಸಿದಳು. ಅಲ್ಲಿಂದ ಮನೆಯ ಕಡೆ ಹೊರಟಳು. ಆದರೆ ಗೌರಮ್ಮನಿಗೆ ಆಯಾಸವಾಯಿತು. ಏನು ಮಾಡುವುದು? ಅಲ್ಲೇ ಒಂದು ಮರ. ಸ್ವಲ್ಪ ಆಯಾಸ ಕಡಿಮೆ ಆದ ಮೇಲೆ ಎದ್ದು ಹೋಗುತ್ತೇನೆ ಎಂದುಕೊಂಡಳು, ಮರದ ಕೆಳಗೆ ಕುಳಿತಳು. ಸೂರ್ಯೋದಯವಾಗುವ ಸುಮೂಹರ್ತದಲ್ಲೇ ಮನೆಯಲ್ಲಿ ಯಾರಿಗೂ ತಿಳಿಯದೆ ಗದ್ದೆ ಬಯಲು ಮರದ ಕೆಳಗೆ- ಮನೆಯ ಹೊರಗಡೆ ಮಗು ಹುಟ್ಟಿಬಿಟ್ಟಿತು! ಮಗು ಮುದ್ದಾಗಿತ್ತು. ಆಶ್ಚರ್ಯವಾಗುವ ಕಳೆ ಮುಖದಲ್ಲಿ.

ಶ್ರೀ ವಾಗೀಶತೀರ್ಥರಿಗೆ ಮಾತು ಕೊಟ್ಟು ಆಗಿ ಹೋಗಿತ್ತು, ಮಗು ಮನೆಯ ಹೊರಗೆ ಹುಟ್ಟಿದರೆ ಅದನ್ನು ಮಠಕ್ಕೆ ಒಪ್ಪಿಸುತ್ತೇವೆ ಎಂದು. ಗಂಡ ಹೆಂಡತಿ ಮಗುವನ್ನು ಸ್ವಾಮಿಗಳಿಗೆ ಒಪ್ಪಿಸಿದರು.

ವಾಗೀಶರು ಮಗುವಿಗೆ ತಾವು ಪೂಜಿಸುತ್ತಿದ್ದ ಭೂವರಾಹ ಸ್ವಾಮಿಯ ಹೆಸರನ್ನೇ ಇಟ್ಟರು. ಭೂವರಾಹ ಹುಟ್ಟಿದ ಈ ಗದ್ದೆಗೆ ಈಗಲೂ ಗೌರೀ ಗದ್ದೆಯೆಂದೇ ಹೆಸರಿದೆ. ಇಲ್ಲಿ ಬೆಳೆದ ಅಕ್ಕಿಯನ್ನೆ ಈಗಲೂ ಶ್ರೀ ವಾದಿರಾಜರ ಆರಾಧನೆಯಂದು ನಿವೇದನೆ ಮಾಡು ಪದ್ಧತಿಯೂ ಇದೆ. ಈ ಗದ್ದೆಯಲ್ಲೇ ಅವರು ಹುಟ್ಟಿದ ಸ್ಥಳದಲ್ಲಿ ಈಗ ವಾದಿರಾಜರ ಗುಡಿಯೂ ಇದೆ.

ಬಾಲ್ಯಅಸಾಧಾರಣ ಗುಣ

ಭೂವರಾಹ ಶ್ರೀಮಠದ ಶಿಶುವೇ ಆದರೂ ತಾಯಿಯ ಲಾಲನೆ-ಪಾಲನೆಯಲ್ಲೇ ಮಗುವನ್ನು ಬಿಡಲಾಯಿತು. ಭೂವರಾಹ ಮೂರ್ತಿಗೆ ಮಾಡಿದ ಅಭಿಷೇಕದ ಹಾಲು ನಿತ್ಯವೂ ಹೂವಿನಕೆರೆಗೆ ಈ ಮಗುವಿಗಾಗಿ ಹೋಗುತ್ತಿತ್ತು. ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸ ಪ್ರಾರಂಭಿಸಿ ಐದನೆಯ ವಯಸ್ಸಿನಲ್ಲೇ ಬ್ರಹ್ಮೋಪದೇಶವೂ ತಂದೆಯವರಿಂದಲೇ ನಡೆಯಿತು. ಅನಂತರ ಮಗವನ್ನು ಶ್ರೀ ಮಠಕ್ಕೆ ಕರೆಸಿಕೊಂಡು ವಿದ್ಯಾಭ್ಯಾಸಕ್ಕೆ ಏರ್ಪಾಡು ಮಾಡಿದರು. ಚಿಕ್ಕ ಗುರುಗಳಾಗಿದ್ದ ಶ್ರೀ ವಿದ್ಯಾನಿಧಿ ತೀರ್ಥರೇ ಭೂವರಾಹನ ಗುರುಗಳು. ಹುಡುಗ ಬುದ್ಧಿವಂತ, ಬಹು ಚ          ಟುವಟಿಕೆಯವನು. ಅವನ ಬುದ್ಧಿಶಕ್ತಿಯಿಂದ ವಿದ್ಯಾ ಗುರುಗಳಿಗೆ ಬಹು ಸಂತೋಷ. ವಾಗೀಶತೀರ್ಥರು ಇವನ ಜಾತಕವನ್ನು ಬರೆಸಿ ಪರೀಶೀಲಿಸಿದಾಗ ಬಹು ಸೊಗಸಾಗಿ ಮಾತನಾಡುವ ಶಕ್ತಿ, ವಾದದಲ್ಲಿ ಗೆಲ್ಲುವ ಶಕ್ತಿ ಈತನಿಗಿವೆ, ಮುಂದೆ ಸಂನ್ಯಾಸಿಯಾಗುತ್ತಾನೆ ಎಂದು ಅವರಿಗೆ ತೋರಿತು. ಭೂವರಾಹನಿಗೂ ಸನ್ಯಾಸ ಆಶ್ರಮ ಕೊಡುವುದಾಗಿ ಯೋಚಿಸಿದರು. ಆದರೂ ಒಂದು ಮಾಡಿ ನೋಡಬೇಕು ಎನ್ನಸಿತು. ಪರೀಕ್ಷೆ ನಡೆಸಿದರು.

ಬಾಲಕ ಭೂವರಾಹ ’ನಾವು ಹಣ್ಣನ್ನು ಮುಟ್ಟಬಾರದು’ಎಂದು ಗೆಳೆಯರಿಗೆ ಹೇಳಿದ.

ಒಂದು ಕೋಣೆಯಲ್ಲಿ ಗುರಗಳು ಹಲವು ಬಗೆಯ ಹಣ್ಣುಗಳನ್ನು ಇಡಿಸಿದರು. ಭೂವರಾಹನ ಜೊತೆಯ ಅನೇಕ ಬಾಲಕರನ್ನು ಕರೆದು, ಆ ಹಣ್ಣುಗಳಲ್ಲಿ ಯಾವುದನ್ನಾದರೂ ನಾವು ತಿನ್ನಬಹುದು-ಗುರುಗಳಿಗೆ ಮಾತ್ರ ತಿಳಿಸಬಾರದು; ನಿನ್ನ ಮೇಲಿನ ಮಮತೆಯಿಂದ ಅವರು ನಮ್ಮನ್ನು ಆಕ್ಷೇಪಿಸಲಾರರು ಎಂದು ಭೂವರಾಹನಿಗೆ ಹೇಳಿ ಕರೆದುಕೊಂಡು ಹೋಗಿ. ಆಗ ಅವನೇನು ಹೇಳುವನೋ ನನಗೆ ಬಂದು ತಿಳಿಸಿ ಎಂದರು!

ಓರಗೆಯ ಹುಡುಗರು ಹಾಗೆಯೇ ಮಾಡಿದರು. ಹಣ್ಣುಗಳನ್ನು ತಿನ್ನೋಣ; ಗುರುಗಳಿಗೆ ಹೇಗೆ ಗೊತ್ತಾಗುತ್ತದೆ? ಗೊತ್ತಾದರೂ ಅವರು ಬಯ್ಯುವುದಿಲ್ಲ, ಗುರುಗಳಿಗೆ ನಿನ್ನನ್ನು ಕಂಡರೆ ತುಂಬ ಪ್ರೀತಿ ಎಂದರು. ಆ ಬಾಲಕ ಅದನ್ನು ಒಪ್ಪಲಿಲ್ಲ. ಗುರುಗಳಿಗೆ ಗೊತ್ತಾಗಲಿ ಬಿಡಲಿ, ನಾವು ಹಣ್ಣನ್ನು ಮುಟ್ಟಬಾರದು. ನಾವು ಅದನ್ನು ಅವರ ಅಪ್ಪಣೆ ಇ‌ಲ್ಲದೆ ತೆಗೆದುಕೊಳ್ಳಬಾರದು ಎಂದು ಖಂಡಿತವಾಗಿ ನುಡಿದ.

ಗುರುಗಳು ಇನ್ನೊಂದು ಪರೀಕ್ಷೆ ಮಾಡಿದರು. ಒಂದು ಕೋಣೆಯಲ್ಲಿ ಪುಸ್ತಕ, ಹಣ್ಣು ಮುಂತಾದ ಅನೇಕ ಬಗೆಯ ಪದಾರ್ಥಗಳನ್ನಿರಿಸಿದರು. ವಿವಿಧ ವಯಸ್ಸಿನ ಹಲವು ಬಾಲಕರನ್ನು ಕರೆದು, ನಿಮಗೆ ಏನು ಬೇಕೋ ತೆಗೆದುಕೊಳ್ಳಿ ಎಂದರು. ಕೆಲವರು ತಿಂಡಿಯನ್ನು ಆರಿಸಿದರು, ಕೆಲವರು ಹಣ್ಣುಗಳಿಗೆ ಕೈಚಾಚಿದರು. ಭೂವರಾಹ ಮಾತ್ರ ಒಳ್ಳೆಯ ಶಾಸ್ತ್ರಗ್ರಂಥವೊಂ‌ದನ್ನು ಆರಿಸಿ ತೆಗೆದುಕೊಂಡು ಬಂದನಂತೆ!

ಒಮ್ಮೆ ಶಾಲೆಯಲ ಹತ್ತಿರವೇ ಬಯಲಾಟ ನಡೆಯುತ್ತಿತ್ತು. ಬಯಲಾಟವನ್ನು ನೋಡಲು ಹೋಗೋಣವೆಂದು ಅವನ ಜೊತೆಯ ಹುಡುಗರು ಬಲಾತ್ಕರಿಸಿದಾಗ ಅದಕ್ಕೂ ಭೂವರಾಹ ಒಪ್ಪಲಿಲ್ಲ. ಗುರುಗಳ ಅಪ್ಪಣೆಯಿಲ್ಲದೆ ಹೋಗಬಾರದು ಎಂದ.

ಸನ್ಯಾಸ ದೀಕ್ಷೆ

ಭೂವರಾಹ ವ್ಯಾಸಂಗದ ಆಸಕ್ತಿ, ಶುದ್ಧವಾದ ಅಭಿರುಚಿ, ಪ್ರಾಮಾಣಿಕತೆ, ತೇಜಸ್ಸು ಮುಂತಾದವುಗಳ ಕಂಡು ಕೇಳಿ ಗುರುಗಳಿಗೆ ತುಂಬ ಸಂತೋಷವಾಯಿತು ಆತನಿಗೆ ಏಳನೆಯ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮ ಕೊಟ್ಟರು. ’ವಾದಿರಾಜ ತೀರ್ಥ’ ಎಂದು ನಾಮಕರಣ ಮಾಡಿದರು. ಶಾಸ್ತ್ರ-ಸಿದ್ಧಾಂತ ಮುಂತಾದವುಗಳ ಪಾಠ ಹೇಳಲು ಪ್ರಾರಂಭಿಸಿದರು. ಬಹು ಸ್ವಲ್ಪ ಕಾಲದಲ್ಲಿ ವಾದಿರಾಜರು ಎಲ್ಲ ಶಾಸ್ತ್ರಗಳ ಸಾರವನ್ನೂ ಗ್ರಹಿಸಿ ಅಪಾರ ವಿದ್ವತ್ತನ್ನು ಪಡೆದುಕೊಂಡರು. ಯತಿಗಳಿಗೆ ಉಚಿತವಾದ ಪ್ರಣವ ಮಂತ್ರ ಮೊದಲಾದುವನ್ನು ಶ್ರದ್ಧಾ ಭಕ್ತಿಗಳಿಂದ ನಿತ್ಯವೂ ಸಹಸ್ರಾರು ಬಾರಿ ಜಪ ಮಾಡಿದರು. ಮಂತ್ರ ಸಿದ್ಧಿಯನ್ನು ಸಂಪಾದಿಸಿ ಮಹಾಮಹಿಮರಾದರು. ಇದರೊಂದಿಗೇ ವಾದಿರಾಜರು ಹಯಗ್ರೀವ ದೇವರ ಉಪಾಸನೆಯನ್ನು ಬಹು ಭಕ್ತಿಯಿಂದ ಮಾಡಿ, ಆ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.

ಶ್ರೀ ವಾದಿರಾಜರು ಮಾಡಿದ ಒಂದು ಕೆಲಸ ವಿಶೇಷವಾದುದು. ಗುರುಗಳ ಅಪ್ಪಣೆಯನ್ನು ಪಡೆದು ಅವರು ಭಾರತದ ಪುಣ್ಯಕ್ಷೇತ್ರಗಳಿಗೆ ಹೋದರು, ಪ್ರತಿಯೊಂದು ಕಡೆಯೂ ಭಕ್ತಿಯಿಂದ ದೇವರ ಪೂಜೆ ನಡೆಸಿದರು. ಭಾರತದಲ್ಲಿ ಎಷ್ಟು ಪವಿತ್ರ ಸ್ಥಳಗಳಿವೆ, ಅಲ್ಲವೆ? ಸಾವಿರಾರು ಜನರು ಇಂತಹ ಸ್ಥಳಗಳಿಗೆ ಹೋಗಿ ಬರುತ್ತಾರೆ. ಅವರಿಗೆ ಆ ಸ್ಥಳಗಳ ವಿಷಯ ತಿಳಿಯುವುದು ಹೇಗೆ? ಪ್ರತಿಯೊಂದು ಸ್ಥಳದ ಪರಿಚಯ ಮಾಡಿ ಕೊಡುವವರು ಯಾರು? ವಾದಿರಾಜರು ಇತರ ಯಾತ್ರಿಕರಿಗೆ ಸಹಾಯವಾಗಲಿ ಎಂದು ತೀರ್ಥಪ್ರಬಂಧ ಎಂಬ ಪುಸ್ತಕವನ್ನು ಸಂಸ್ಕೃತದಲ್ಲಿ ಬರೆದರು. (ಆಗ ಭಾರತದಲ್ಲಿ ಎಲ್ಲ ಕಡೆಗಳಲ್ಲಿಯೂ ಉಪಯೋಗದಲ್ಲಿದ್ದ ಭಾಷೆ ಎಂದರೆ ಸಂಸ್ಕೃತ ತಾನೆ?) ಯಾವ ಕ್ಷೇತ್ರವಾದ ಮೇಲೆ ಯಾವ ಕ್ಷೇತ್ರಕ್ಕೆ ಹೋಗಬೇಕು; ಪ್ರತಿ ಸ್ಥಳದಲ್ಲಿ ನೋಡಬೇಕಾದುದೇನು, ಮಾಡಬೇಕಾದುದೇನು; ಆ ಕ್ಷೇತ್ರ ಏಕೆ ಮುಖ್ಯ – ಈ ಎಲ್ಲ ವಿಚಾರಗಳನ್ನು ಈ ಗ್ರಂಥ ತಿಳಿಸುತ್ತದೆ. ಈ ’ತೀರ್ಥಪ್ರಬಂಧ’ ಯಾತ್ರಿಕರ ಕೈಪಿಡಿ ಎನ್ನಬಹುದು. ಸುಮಾರು ನಾಲ್ಕು ನೂರ ಐವತ್ತು ವರ್ಷಗಳ ಹಿಂದೆ ಈ ಯತಿಗಳು ಹೀಗೆ ಇತರ ಯಾತ್ರಿಕರ ಕಷ್ಟಸುಖಗಳ ವಿಷಯ ಯೋಚನೆ ಮಾಡಿ ಪುಸ್ತಕ ಬರೆದರು.

ದೇವರೇ ವಿಷ ತಿಂದ

ವಾದಿರಾಜರು ದೇವರ ಅನುಗ್ರಹದಿಂದ ಉಳಿದುಕೊಂಡ ಕಥೆಯೂ ಬಹು ಸ್ವಾರಸ್ಯವಾಗಿದೆ. ವಾದಿರಾಜರ ಉಪಾಸನಾಮೂರ್ತಿ ಹಯವದನ ಮೂರ್ತಿ ಎಂದು ಆಗಲೇ ಹೇಳಿದೆಯಷ್ಟೆ. ಈ ಕುದುರೆ ಮುಖದ ದೇವರಿಗೆ ಅವರು ನಿತ್ಯವೂ ’ಮಡ್ಡಿ’ (ಹಯಗ್ರೀವ)ಯನ್ನು ನಿವೇದನೆ ಮಾಡುತ್ತಿದ್ದರು. ಒಂದು ದೊಡ್ಡ ಹರಿವಾಣದ ತುಂಬ ಈ ಭಕ್ಷ್ಯವನ್ನು ತುಂಬಿ ಅದನ್ನು ತಲೆಯ ಮೇಲಿಟ್ಟುಕೊಂಡು ಕುಳಿತು ಹಯವದನನನ್ನು ಸ್ಮರಿಸುತ್ತಿದ್ದರು. ಹಯವದನ ಸುಂದರವಾದ ಬಿಳಿಯ ಬಣ್ಣದ ಕುದುರೆಯ ರೂಪದಿಂದ ಬಂದು ವಾದಿರಾಜರ ಎರಡು ಭುಜಗಳ ಮೇಲೂ ತನ್ನೆರಡು ಮುಂಗಾಲುಗಳನ್ನು ಇರಿಸಿಕೊಂಡು ಅವರ ತಲೆಯ ಮೇಲಿದ್ದ ಹಯಗ್ರೀವವನ್ನು ಮೆಲ್ಲುತ್ತಿದ್ದನಂತೆ. ವಾದಿರಾಜರ ಈ ಭಂಗಿಯ ಚಿತ್ರವನ್ನು ಈಗಲೂ ಅನೇಕ ಕಡೆ ನೋಡಬಹುದು.

ತಟ್ಟೆಯಲ್ಲಿದ್ದ ಹಯಗ್ರೀವವನ್ನು ತಿಂದು ಭಕ್ತರಿಗಾಗಿ ಸ್ವಲ್ಪ ಪ್ರಸಾದವನ್ನು ಉಳಿಸುತ್ತಿದ್ದುದು ವಾಡಿಕೆಯಾಗಿತ್ತು. ಆದರೆ ಒಮ್ಮೆ ತಟ್ಟೆ ಪೂರ್ತಿ ಖಾಲಿಯಾಯಿತು. ನೆಕ್ಕಿ ನಿಕ್ಕಿ ಹಯಗ್ರೀವವನ್ನು ಪೂರೈಸಿಬಿಟ್ಟಿದ್ದ ಹಯವದನಸ್ವಾಮಿ. ಇಂದೇಕೆ ಪ್ರಸಾದ ದಯಪಾಲಿಸಲಿಲ್ಲ ದೊರೆ ಎಂದು ವಾದಿರಾಜರು ಚಿಂತಿಸಿದರು. ಅಂದು ಅವರಿಗೆ ಸ್ವಪ್ನ ಸೂಚನೆಯಾಯಿತು. ನಿನಗಾಗದವರು ಇಂದಿನ ನೈವೇದ್ಯದಲ್ಲಿ ವಿಷ ಹಾಕಿದ್ದುದರಿಂದ ನಾನೇ ಅದನ್ನು ಪೂರ್ತಿ ಸ್ವೀಕರಿಸಿದ್ದೇನೆ. ವಿಷದಿಂದ ಹಸಿರಾಗಿರುವ ನನ್ನ ಪ್ರತಿಮೆ ನಲವತ್ತೆಂಟು ದಿನಗಳ ’ಗುಳ್ಳ’ದ  ನಿವೇದೆಯಿಂದ ಪರಿಹಾರವಾಗುತ್ತದೆ” ಎಂದು!

ಉಡುಪಿಯ ಬಳಿ ಒಂದು ಹಳ್ಳಿಯ ಭೂಮಿಯಲ್ಲಿ ಮಾತ್ರ ಬೆಳೆಯುವ ಈ ಕಾಯಿ ವಾದಿರಾಜಗುಳ್ಳ ಎಂದು ಈಗಲೂ ಪ್ರಸಿದ್ಧವಾಗಿದೆ. ವಾದಿರಾಜರು ಈ ಗುಳ್ಳದ ಕಾಯಿಯನ್ನು ದಿನವೂ ಅರ್ಪಿಸಿ ಪೂಜಿಸಿದರು.  ತರುವಾಯ ಹಯವದನ ಮೂರ್ತಿಯ ಹಸಿರೆಲ್ಲ ಹೋಗಿ ಕಂಠದಲ್ಲಿ ಮಾತ್ರ ಹಸಿರು ಉಳಿಯಿತು.

ಶ್ರೀ ಹಯವದನ

ಈ ಹಯಗ್ರೀವ ಪ್ರತಿಮೆ ವಾದಿರಾಜರಲ್ಲಿ ಬಂದು ಸೇರಿದ್ದು ಕೂಡ ಒಂದು ಪವಾಡವೇ ಆಗಿದೆ.

ಅಕ್ಕಸಾಲಿಯೊಬ್ಬ ಗಣಪತಿಯ ವಿಗ್ರಹವನ್ನು ಮಾಡುವ ಉದ್ದೇಶದಿಂದ ಪಂಚಲೋಹ ಕಾಯಸಿ ಎರಕ ಹೊಯ್ದನು. ಆದರೆ ಅಚ್ಚು ಗಣಪತಿಯದೇ ಆಗಿದ್ದರೂ, ತೆಗೆದು ನೋಡಿದಾಗ ಅದು ಗಜಗ್ರೀವದ ಬದಲು ಹಯಗ್ರೀವ ಮೂರ್ತಿಯಾಗಿತ್ತು! ಅಕ್ಕಸಾಲಿಗ ಕೋಪಗೊಂಡು ಕೆಂಪಗೆ ಇನ್ನೂ ಬಿಸಿಯಲ್ಲೇ ಇದದ ಹಯಗ್ರೀವ ವಿಗ್ರಹವನ್ನು ಸುತ್ತಗೆಯಿಂದ ಜಜ್ಜತೊಡಗಿದನು. ಆದರೆ ಅದು ಆ ಏಟಿಗೆ ಸ್ವಲ್ಪವೂ  ಬಗ್ಗಲಿಲ್ಲ!

ಹಯವದನ ಬಿಳಿಯ ಕುದುರೆಯ ರೂಪದಿಂದ ಬರುತ್ತಿದ್ದನಂತೆ.

“ನನ್ನನ್ನು ವಾದಿರಾಜರಿಗೆ ಅರ್ಪಿಸು” ಎಂದು ಸೂಚನೆಯಾಯಿತು. ಮೆರವಣಿಗೆಯಿಂದ ಕೊಂಡೊಯ್ದು ಮಠಕ್ಕೆ ಒಪ್ಪಿಸಲು, ವಾದಿರಾಜರು ಭಕ್ತಿಯಿಂದ ಹಯವದನನನ್ನು ಬರಮಾಡಿಕೊಂಡು ಪೂಜಿಸಲು ಪ್ರಾರಂಭಿಸಿದರು.

ಆ ಸ್ವರ್ಣಕಾರ ಗುಂಪಿನವರೆಲ್ಲಾ ವಾದಿರಾಜರ ಶಿಷ್ಯರಾದರು. ಈಗಲೂ ಈ ವಂಶಸ್ಥರೆಲ್ಲಾ ಸೋಕೆ ಮಠದ ಶಿಷ್ಯರೇ ಆಗಿದ್ದಾರೆ.

ಈ ಹಯವದನ ವಾದಿರಾಜರ ಜೀವನದಲ್ಲಿ ಅನೇಕ ವಿಚಿತ್ರ ಲೀಲೆಗಳನ್ನು ತೋರಿದ್ದಾನೆ. ಒಮ್ಮೆ ಪಂಢರಪುರದಲ್ಲಿ ಸ್ವಾಮಿಗಳು ಬಿಡಾರ ಮಾಡಿದಾಗ, ಹಯವದನ ದೇವದಿವ್ಯಾಶ್ವ ರೂಪದಲ್ಲಿ ಬಂದು ಹೊಲದಲ್ಲಿ ಕಡಲೆ ಪೈರನ್ನು ಮೇಯಲಾರಂಭಿಸಿದನಂತೆ. ಆ ಕುದುರೆಯನ್ನು ಹಿಡಿಯಲು ಜನ ಪ್ರಯತ್ನಪಟ್ಟರು. ಅದು ವಾದಿರಾಜರ ಬಿಡಾರದವರೆಗೂ ಬಂದು ಅದೃಶ್ಯವಾಯಿತು. ಆ ಹೊಲದೊಡೆಯ ಸ್ವಾಮಿಗಳಲ್ಲಿ ದೂರಿಕೊಂಡನು.

ವಾದಿರಾಜರು ನಮ್ಮ ಮಠದಲ್ಲಿ ಕುದುರೆಯಿಲ್ಲ ಎಂದರು. ಮರುದಿನ  ಆ ಬಿಳಿ ಕುದುರೆ ಅದೇ ಹೊಲಕ್ಕೆ ದಾಳಿಯಿಟ್ಟತು. ಯಜಮಾನನೇ ಅಟ್ಟಿಸಿಕೊಂಡು ಬಂದನು. ಸ್ವಾಮಿಗಳ ಪೂಜೆ ನಡೆಯುವ ಕಾಲಕ್ಕೆ ಸರಿಯಾಗಿ ಬಂದು ಕುದುರೆಯು ಪೂಜೆಯನ್ನು ನೋಡುತ್ತ ಕುಳಿತಿದ್ದ ನೂರಾರು ಜನರನ್ನು ಭೇದಿಸಿಕೊಂಡು ಬಂದಿತು. ಪೂಜಾಪೀಠದಲ್ಲಿ ವಿರಾಜಮಾನಾಗಿದ್ದ ಹಯಗ್ರೀವ ಮೂರ್ತಿಯಲ್ಲಿ ಐಕ್ಯವಾದಂತೆ ಭಾಸವಾಯಿತು. ಜಮೀನ್ದಾರ ಈ  ಅಚ್ಚರಿಯನ್ನು ವಾದಿರಾಜರಲ್ಲಿ ನಿವೇದಿಸಿಕೊಂಡಾಗ, ಗುರುಗಳೆಂದರು:

“ನೀನು ಪುಣ್ಯವಂತ. ಆದ್ದರಿಂದಲೇ ಹಯವದನ ನಿನಗೆ ದರ್ಶನ ವಿತ್ತಿದ್ದಾನೆ. ಇದರಿಂದ ನಿನಗೆ ತುಂಬ ಒಳ್ಳೆಯದಾಗುವುದು.”

ಹೀಗೆ ವಾದಿರಾಜರ ಗಾಢವಾದ ಭಕ್ತಿ, ಇದರಿಂದ ದೇವರು ಅವರಿಗೆ ಅನುಗ್ರಹ ಮಾಡಿದ್ದು ಇವನ್ನು ಕುರಿತು ಇಂದಿಗೂ ಜನರ ಬಾಯಲ್ಲಿ, ಸ್ಮರಣೆಯಲ್ಲಿ ಅನೇಕ ಕಥೆಗಳು ಉಳಿದುಬಂದಿವೆ.

ಭೂತವನ್ನು ಗೆದ್ದ ಮಹಿಮೆ

ಶ್ರೀ ವಾದಿರಾಜರು ಒಳ್ಳೆಯವರಿಗೆ ಸಹಾಯ ಮಾಡುತ್ತಿದ್ದರು, ಕೆಟ್ಟವರಿಗೆ ಶಿಕ್ಷಿಸುತ್ತಿದ್ದರು, ಅವರಿಗೆ ವಿಶೇಷ ಶಕ್ತಿ ಇತ್ತು ಎಂದು ಅನೇಕ ಸ್ವಾರಸ್ಯವಾದ ಕಥೆಗಳನ್ನು ಹೇಳುತ್ತಾರೆ. ಅವರು ಹಲವು ಪವಾಡಗಳನ್ನು ಮಾಡಿದರು ಎಂದೂ ಕಥೆಗಳಿವೆ. ಈ ಪವಾಡಗಳನ್ನು ಮಾಡಲು ಅವರಿಗೆ ಒಬ್ಬ ಭೂತರಾಜನ ಸಹಾಯವಿತ್ತು ಎಂದೂ ಹೇಳುತ್ತಾರೆ.

ನಾರಾಯಣಾಚಾರ್ಯ ಎಂಬ ಒಬ್ಬ ಶಿಷ್ಯ ಇವರ ಬಳಿ ವ್ಯಾಸಂಗಮಾಡಿ ದೊಡ್ಡ ವಿದ್ವಾಂಸನಾದನು. ಆದರೆ ಆತನಿಗೆ ವಿದ್ಯೆಯಿಂದ ವಿನಯ ಬರಲಿಲ್ಲ.

ಮದ ಅಧಿಕವಾಯಿತು. ಮಠಕ್ಕೆ ಯಾರು ಬಂದರೂ ಅವರ ಅವಮಾನ ಮಾಡುವುದೇ ಆತನಿಗೆ ಸಂತೋಷದ ಕೆಲಸ, ಎಲ್ಲರನ್ನೂ ಆಕ್ಷೇಪಿಸುವುದೇ ಒಂದು ಚಟ. ಇದು  ಗುರುಗಳಾದ ವಾದಿರಾಜರ ಗಮನಕ್ಕೆ ಬಂದಿತ್ತು. ಅವನಿಗೆ ಬುದ್ಧಿ ಕಲಿಸಲು ಸರಿಯಾದ ಸಮಯಕ್ಕಾಗಿ ಅವರು ಮೌನದಿಂದ ಕಾಯುತ್ತಿದ್ದರು. ನಾರಾಯಣಾಚಾರ್ಯ ಸಾಕ್ಷಾತ್ ಗುರುಗಳನ್ನೂ ತೀಕ್ಣವಾಗಿ ಆಕ್ಷೇಪಣೆ ಮಾಡುತ್ತ ಬಂದನು. ಒಮ್ಮೆ ವ್ಯಾಸ ಮುನಿಗಳೆದುರಿಗೇ ವಾದಿರಾಜರನ್ನೇ ಈತ ನಿಂದಿಸಿದ. ಗುರುಗಳಿಗೆ ಈ ಅವಿಧೇಯ ದುಷ್ಟ ಶಿಷ್ಯನಿಗೆ ಶಿಕ್ಷೆಯಾಗಬೇಕು ಎನಿಸಿತು. ಅವನನ್ನು “ಬ್ರಹ್ಮ ರಾಕ್ಷಸನಾಗು” ಎಂದು ಶಪಿಸಿದರಂತೆ!

ಕಥೆ ಇಲ್ಲಿಗೆ ಮುಗಿಯಲಿಲ್ಲ; ಇನ್ನೂ ಇದೆ.

ನಾರಾಯಣಾಚಾರ್ಯ ಬ್ರಹ್ಮರಾಕ್ಷಸನಾದರೂ, ಹಿಂದಿನ ವಾಸನೆ ಆತನಿಗೆ ತಪ್ಪಲಿಲ್ಲ. ವಿಜಯನಗರದ ಹತ್ತಿರ ಬಂದು ದಾರಿಯಲ್ಲಿ ಮರದ ಮೇಲೆ ಈ ನಾರಾಯಣ ಬೊಮ್ಮರಕ್ಕಸ ಕುಳಿತ. ಆ ದಾರಿಯಲ್ಲಿ ಬಂದವರನ್ನೆಲ್ಲಾ ಹೆದರಿಸಿ ಅರ್ಥವಾಗದ ಒಂದು ಪ್ರಶ್ನೆಯನ್ನು ಘರ್ಜಿಸುತ್ತಿದ್ದನು. “ಆ ಕಾ ಮಾ ವೈ ಕೋ ನ ಸ್ನಾತಃ?” ಎಂಬುದು ಪ್ರಶ್ನೆ. ಈ ಪ್ರಶ್ನೆಯೇ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಪ್ರಶ್ನೆಗೆ ಉತ್ತರ ಹೇಳಲಿಲ್ಲವೆಂಬ ನೆವದಿಂದ ಅವರನ್ನು ಪೀಡಿಸುತ್ತಿದ್ದನು. ಅನೇಕರು ರಕ್ತಕಾರಿ ಪ್ರಾಣ ಬಿಡುತ್ತಿದ್ದರು.

ಈ ವಿಷಯ ವಾದಿರಾಜರ ಕಿವಿಗೆ ಬಿದ್ದಿತು. ಈ ಬ್ರಹ್ಮ ರಾಕ್ಷಸನಿಂದ ಜನರನ್ನು ಕಾಪಾಡಬೇಕು ಎಂದು ಅವರು ಉದ್ದೇಶಪೂರ್ವಕವಾಗಿಯೇ ಆ ದಾರಿಯಲ್ಲಿ ಬಂದರು. ಅವರಿಗೂ ಆ ಘರ್ಜನೆ ಕೇಳಿತು, ವಾದಿರಾಜರು ಜ್ಞಾನಿಗಳು, ಈ ಶಿಷ್ಯನ ವೃತ್ತಾಂತವೆಲ್ಲಾ ಅವರಿಗೆ ತಿಳಿಯಿತು. ಅವರು ನಸುನಗುತ್ತ ಉತ್ತರಿಸಿದರು. ರಕ್ಕಸನ ಪ್ರಶ್ನೆ ಹೀಗೆ: “ಆಷಾಡ, ಕಾರ್ತೀಕ,ಮಾಘ ಮತ್ತು ವೈಶಾಖ ಮಾಸಗಳಲ್ಲಿ ಯಾರು ವಿಧಿಯ ಅನುಸಾರವಾಗಿ ಸ್ನಾನ ಮಾಡುವುದಿಲ್ಲ?” ಎಂದು. ವಾದಿರಾಜರು ಹೇಳಿದರು, “ನೀನೇ ಮಾಡುವುದಿಲ್ಲ” ಎಂದು! ತನ್ನ  ಪ್ರಶ್ನೆಯನ್ನು ಅರ್ಥಮಾಡಿಕೊಂಡವರು ಯಾರು ಎಂದು ಬ್ರಹ್ಮರಾಕ್ಷಸ ಬೆರಗಾದ. ಅನಂತರ ಗುರುಗಳನ್ನು ಗುರುತಿಸಿ ಅವರಿಗೆ ಶರಣಾಗತನಾದ. “ನೀವು ಹೇಳಿದಂತೆ ಕೇಳಿಕೊಂಡಿರುತ್ತೇನೆ” ಎಂದು ಒಪ್ಪಿದ.

ಅಂದಿನಿಂದ ವಾದಿರಾಜರ ಪವಾಡಗಳು ಅಧಿಕವಾದವು. ಮಹಿಮೆ ಅಗಾಧವಾಯಿತು.

ಈಗಲೂ ಸೋದೆಯಲ್ಲಿ “ನಾರಾಯಣ ಭೂತ” ಎಂಬ  ಭೂತದ ಪೂಜೆ ನಡೆಯುತ್ತದೆ. ಈ ನಾರಾಯಣ ಭೂತ ನಾರಾಯಣಾಚಾರ್ಯನೇ, ಗುರುಗಳ ದಯೆಯಿಂದ ಅವನ ಶಾಪ ಕಳೆಯಿತು, ಈಗ ಪೂಜೆ ನಡೆಯುತ್ತಿದೆ ಎಂದು ಹೇಳುತ್ತಾರೆ.

ವ್ಯವಸ್ಥೆಯಲ್ಲಿ ಎತ್ತಿದ ಕೈ

ಕನ್ನಡನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಹಯ ಪ್ರಸಿದ್ಧವಾದ ಸ್ಥಳ. ಇಲ್ಲಿ ಮಂಜುನಾಥ ಸ್ವಾಮಿಯ ದೇವಾಲಯ ಇದೆ. ಪ್ರತಿನಿತ್ಯ ಸಾವಿರಾರು ಮಂದಿ ಯಾತ್ರಿಕರು ಬರುತ್ತಾರೆ. ಮಂಜುನಾಥ ‌ಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಿದವರು ಶ್ರೀ ವಾದಿರಾಜರು. ಇಲ್ಲಿ ಪೂಜೆಗಳು ಸರಿಯಾಗಿ ನಡೆಯುವಂತೆ ವ್ಯವಸ್ಥೆ ಮಾಡಿದವರು ಅವರೇ. ಇಂದಿಗೂ ಈ ದೇವಾಲಯದಲ್ಲಿ ಪೂಜೆ ಮಾಡುವವರು ಮಾಧ್ವ ಅರ್ಚಕರೇ.

ವಾದಿರಾಜರು ಮಹಾ ತಪಸ್ವಿಗಳು, ಮಹಾವಿದ್ವಾಂಸರು. ದೇವಾಲಯ, ಮಠ ಮೊದಲಾದ ಸಂಸ್ಥೆಗಳು ಹೀಗೆ ನಡೆಯಬೇಕು ಎಂದು ಏರ್ಪಾಡು ಮಾಡುವುದರಲ್ಲಿಯೂ ಬಹು ಸಮರ್ಥರು. ಯಾವ ಕೆಲಸವಾದರೂ ಕ್ರಮವಾಗಿ, ಒಪ್ಪವಾಗಿ ನಡೆಯಬೇಕು. ಇದಕ್ಕೆ ವ್ಯವಸ್ಥೆ ಬೇಕು. ಯಾರು ಒಂದು ಕೆಲಸವನ್ನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಲ್ಲ ಸ್ಪಷ್ಟವಾಗಿರಬೇಕು. ಇಂತಹ ಏರ್ಪಾಟನ್ನು ಮಾಡುವುದರಲ್ಲಿ ವಾದಿರಾಜರು ಎತ್ತಿದ ಕೈ.

ಪರ್ಯಾಯೋತ್ಸವ

’ಪರ್ಯಾಯೋತ್ಸವ’ ಎಂದು ಕೇಳಿದ್ದೀರ?

ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಎಂಟು ಮಠಗಳ ಸ್ವಾಮಿಗಳು ಪೂಜೆ ಮಾಡುತ್ತಾರೆ, ಪ್ರತಿ ಮಠದ ಯತಿಗಳು ಎರಡು ವರ್ಷ ಶ್ರೀ ಕೃಷ್ಣನ ಪೂಜೆ ಮಾಡಬೇಕು, ಸರದಿ ಪ್ರಕಾರ ಎಂಟು ಮಠಗಳವರೂ ಪೂಜೆ ನಡೆಸಬೇಕು (ಎಂದರೆ ಪ್ರತಿ ಮಠಕ್ಕೆ ಹದಿನಾಲ್ಕು ವರ್ಷಕ್ಕೆ ಒಂದು ಸಲ ಪೂಜೆ ನಡೆಸುವ ಅವಕಾಶ ಬರಬೇಕು.) ಎಂದು ಶ್ರೀ ವಾದಿರಾಜರು ವ್ಯವಸ್ಥೆ ಮಾಡಿದರು. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅವರು ಹೇಳಿದಂತೆ ಇಂದೂ ನಡೆಯುತ್ತದೆ. ಎರಡು ವರ್ಷಕ್ಕೆ ಒಂದು ಸಲ ಒಬ್ಬ ಸ್ವಾಮಿಗಳು ಮತ್ತೊಬ್ಬರಿಗೆ ಶ್ರೀ ಕೃಷ್ಣನ ಪೂಜೆಯ ಕರ್ತವ್ಯವನ್ನು ವಹಿಸಿಕೊಡುತ್ತಾರೆ. ಇದು ಸಂಕ್ರಾಂತಿಯಾದ ಮೇಲೆ ಎರಡನೆಯ ಮತ್ತು ಮೂರನೆಯ ದಿನ ನಡೆಯುತ್ತದೆ. ಇದು ’ಪರ್ಯಾಯೋತ್ಸವ’.

ಯಾರೂ ಕೀಳಲ್ಲ

ಕೋಟ ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಬೇರೆ ಬೇರೆ ಜಾತಿಯವರಲ್ಲಿ ವಾದ ಹುಟ್ಟಿತು. ಜಗಳ ಬೆಳೆದು ಅನಾಹುತವಾಗುತ್ತದೆ ಎಂಬ ಸ್ಥಿತಿ ಬಂದಿತು. ಅದನ್ನು ತಿಳಿದ ವಾದಿರಾಜರು ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡಿದರು. ಕೋಟೇಶ್ವರದಲ್ಲಿ ಕೀಳು ಎ‌ನ್ನಿಸಿದ್ದವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು, ಅವರನ್ನು ಮೇಲಕ್ಕೆತ್ತಿದರು.

ಅಕ್ಷರ ಬಾರದೆ, ತುಳುಭಾಷೆ ಮಾತ್ರ ಬರುತ್ತಿದ್ದ  ಹಿಂದುಳಿದ ’ಅಸ್ಪೃಶ್ಯರು’ ಕೆಲವರಿದ್ದರು. ವಾದಿರಾಜರು ಅವರಿಗಾಗಿ ತುಳುಭಾಷೆಯಲ್ಲಿಯೇ ದೇವರನಾಮಗಳನ್ನು ರಚಿಸಿದರು.

ಕನಕದಾಸರು ಬಹು ದೊಡ್ಡ ಭಕ್ತರು. ಅವರು ಕೀಳು ಕುಲದಲ್ಲಿ ಹುಟ್ಟಿದವರು ಎಂದು ಕೆಲವರು ಅವರನ್ನು ಗೌರವದಿಂದ ಕಾಣಲಿಲ್ಲ. ಅವರು ಉಡುಪಿಗೆ ಬಂದಾಗ ಅವರನ್ನು ದೂರ ಇಟ್ಟರು. ಇದು ವಾದಿರಾಜರಿಗೆ ತಿಳಿದಾಗ, ಅವರು ಕನಕದಾಸರನ್ನು ಕರೆಸಿ ಮಾತನಾಡಿದರು. ಇತರರಿಗೆ ಅವರ ಘನತೆಯನ್ನು ತಿಳಿಸಿಕೊಟ್ಟರು.

ರಾಜನನ್ನು ಉದ್ಧರಿಸಿದರು

ವಾದಿರಾಜರು ಉಡುಪಿಯಲ್ಲಿದ್ದವರು. ಸೋದೆಯಲ್ಲಿ ನೆಲೆಸಿದ ಕಾರಣ ಕಥೆಯೂ ಸ್ವಾರಸ್ಯವಾಗಿದೆ.

ಕಾರವಾರ ಜಿಲ್ಲೆಯ ಸಿರಸಿಗೆ ಹನ್ನೆರಡು ಮೈಲಿ ದೂರದಲ್ಲಿರುವ ಸೋಂದ ಮೂರು ಲಕ್ಷ ಪ್ರಜಾಸಂಖ್ಯೆಯ ಅರಸಪ್ಪನಾಯಕನ ರಾಜಧಾನಿಯಾಗಿತ್ತು. ಇದಕ್ಕೆ ಹತ್ತಿರವೇ ಶಾಲ್ಮಲೀ ನದಿ ಹರಿಯುತ್ತದೆ. ಸುತ್ತ ಮಲೆನಾಡಿನ ಪ್ರಕೃತಿ ಸೌಂದರ್ಯ ಮೆರೆಯುತ್ತದೆ.

ಅರಸಪ್ಪನಾಯಕ ನೆರೆಯ ರಾಜರೊಂದಿಗೆ ಒಮ್ಮೆ ಯುದ್ಧ ಮಾಡಬೇಕಾಯಿತು. ಯುದ್ಧದಲ್ಲಿ ಸೋತುಹೋದ. ಹೆಂಡತಿಯ ಸಮೇತ ಅರಣ್ಯದ ಪಾಲಾದನು.

ಕಾಡಿನಲ್ಲಿ ಅಲೆಯುತ್ತ ಬಂದ ಅರಸಪ್ಪ ಮಧ್ಯೆ ಒಂದೆಡೆ ಅಚ್ಚರಿಯಿಂದ ನಿಂತ.

ಮುಖದಲ್ಲಿ ತೇಜಸ್ಸು ತುಳುಕಾಡುತ್ತಿದ್ದ ಸನ್ಯಾಸಿಗಳೊಬ್ಬರು ತಪಸ್ಸು ಮಾಡುತ್ತಿದ್ದರು. ಅವರನ್ನು ನೋಡುತ್ತ ಅರಸಪ್ಪನಿಗೆ ಭಕ್ತಿ ಉಕ್ಕಿ ಬಂದಿತು. ಹೆಂಡತಿಯೊಡನೆ ಮುಂದೆ ಬಂದು ಅವರ ಪಾದಗಳಿಗೆ ನಮಸ್ಕರಿಸಿದ.

ತಪಸ್ಸು ಮಾಡುತ್ತಿದ್ದವರು ವಾದಿರಾಜರು. ಕಣ್ತೆರೆದು ನೋಡಿದರು. ಅರಸಪ್ಪ ತನ್ನ ಶೋಚನೀಯ ಸ್ಥತಿಯನ್ನು ಬಿನ್ನವಿಸಿಕೊಂಡ, ತನ್ನನ್ನು ಹೇಗಾದರೂ ಕಾಪಾಡಬೇಕೆಂದು ಕೇಳಿಕೊಂಡ.

ದುಷ್ಟ ಗುರುವಿನ ದುರುಪದೇಶದಿಂದ ಅರಸಪ್ಪ ಅನೇಕ ಅಯೋಗ್ಯ ಕಾರ್ಯಗಳನ್ನು ಮಾಡಿದ್ದ-ಅವೇ ಅವನ ಈ ದುಸ್ಥಿತಿಗೆ ಕಾರಣವೆಂದು ವಾದಿರಾಜರಿಗೆ ತಿಳಿಯಿತು. ಆದರೂ ತಮಗೆ ಶರಣಾಗತನಾದವನನ್ನು ರಕ್ಷಿಸುವುದು ಧರ್ಮ, ಅವನೂ ಪಶ್ಚಾತ್ತಾಪದಿಂದ ತುಂಬಿದ್ದಾನೆ. ಎನ್ನಿಸಿತು. ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿ, “ಈಗ ಹೋಗಿ ಯುದ್ಧ ಮಾಡು, ವಿಜಯಿಯಾಗುವೆ” ಎಂದರು.

ಹಿಂದೆ ಬಲವಾದ ಸೈನ್ಯವನ್ನೆ ಕಟ್ಟಿಕೊಂಡು ಯುದ್ಧಕ್ಕೆ ಹೋಗಿದ್ದ ಅರಸಪ್ಪ. ಶಕ್ತಿವಂತರಾದ ಶತ್ರುಗಳ ಕೈಯಲ್ಲಿ ಸೋತಿದ್ದ. ಈಗ, ನಾಲ್ಕು ಕೆಂಪು ಮಂತ್ರಾಕ್ಷತೆ ಕಾಳನ್ನು ಕೈಯಲ್ಲಿ ಹಿಡಿದು ಯುದ್ಧಕ್ಕೆ ಹೋಗುವುದೇ?

ಮತ್ತೆ ಗುರುಗಳ ಮುಖ  ಕಂಡು, ’ಅವರು ಹೇಳಿದುದೇ ನನಗೆ ಅಪ್ಪಣೆ’ ಎಂದುಕೊಂಡ.

ಒಬ್ಬನೇ ಯುದ್ಧಕ್ಕೆ ಹೊರಟ

ಅವನ ಬೇಡಿಕೆಯಿಲ್ಲದೇ ದೊಡ್ಡ ಅಶ್ವಸೇನೆಯೊಂದು ನೆಲದಿಂದ ಸಿಡಿದೆದ್ದು ಸಹಾಯಕ್ಕೆ ನಿಂತಿತು! ವಾದಿರಾಜರಿಗೆ ವಿಧೇಯನಾಗಿದ್ದ ಭೂತರಾಜನ ಬಳಗ ಅಶ್ವಗಳನ್ನು ಉಪಯೋಗಿಸಿಕೊಂಡು ಸೋದೆಯನ್ನಾಕ್ರಮಿಸಿದ್ದ ಶತ್ರು ಸೇನೆಯನ್ನು ಹೊಡೆದೋಡಿಸಿತು. ಅರಸಪ್ಪ ನಾಯಕನಿಗೆ ಪ್ರಯಾಸವಿಲ್ಲದೆಯೇ ರಾಜ್ಯವನ್ನು ಹಿಂತುರುಗಿಸಿ ಸೋದೆಯ ಕೆರೆಯೊಳಗೆ ಹೋಗಿ ಲೀನವಾಯಿತು!

ಅರಸಪ್ಪ ವಾದಿರಾಜರ ದಯೆಯಿಂದ ಹೀಗೆ ನಿರಾಯಾಸವಾಗಿ ತನ್ನ ರಾಜ್ಯವನ್ನು ಪಡೆದ. ಹೃದಯದಲ್ಲಿ ಭಕ್ತಿ ಮತ್ತು ಕೃತಜ್ಞತೆ ಉಕ್ಕಿದವು. ಅವರ ನೆಚ್ಚಿನ ಶಿಷ್ಯನಾದನು.

ನನ್ನನ್ನು ಉದ್ಧಾರ ಮಾಡಿ ತಾವು ಇಲ್ಲಿಯೆ ನಿಲ್ಲಬೇಕು. ತಮ್ಮ ಸೇವಕ ನಾನು. ನನ್ನದೆಲ್ಲವನ್ನೂ ತಮಗೆ ಧಾರೆ ಎರೆಯಲು ನಾನು ಸಿದ್ಧ ಎಂದು ಬೇಡಿ ನಮಸ್ಕರಿಸಿದ. ವಾದಿರಾಜರು ಒಪ್ಪ ಅಲ್ಲಿ ನಿಂತರು. ಸೋದೆಯಲ್ಲಿ ತಮ್ಮ ಮಠವೊಂದನ್ನು ಕಟ್ಟಸಿದರು.

ಹೀಗೆ ವಾದಿರಾಜರು ಸೋದೆಗೆ ಬಂದುದಕ್ಕೆ ಒಂದು ಕಥೆಯನ್ನು ಇಂದಿಗೂ ಜನ ಹೇಳುತ್ತಾರೆ. ಸೋದೆಯಲ್ಲಿ ’ಹಯಗ್ರೀವ ಸರೋವರ’ ಎಂಬ ಕೆರೆ ಇದೆ. ಭೂತರಾಜ ಇದೇ ಕೆರೆಯಲ್ಲಿ ಮಾಯವಾದದ್ದು ಎನ್ನುತ್ತಾರೆ.

ತ್ರಿವಿಕ್ರಮ ಪ್ರತಿಷ್ಠೆ

ವಾದಿರಾಜರು ಬದರೀ ಯಾತ್ರೆ ಮಾಡಿದರು. ಹಿಂತುರುಗಿ ಬಂದ ಮೇಲೆ ಸೋದೆಯನ್ನು ಪವಿತ್ರ ಕ್ಷೇತ್ರವನ್ನಾಗಿ ಮಾಡಬೇಕು ಎಂದು ತೋರಿತು. ಬದರಿಯಲ್ಲಿದ್ದ ಲಕ್ಷ್ಮೀ-ತ್ರಿವಿಕ್ರಮ ಮೂರ್ತಿಗಳನ್ನು ಶಿಲಾರಥ ಸಮೇತ ತರಿಸಿ ಕ್ರಿಸ್ತ ಶಕ ೧೫೮೨ರಲ್ಲಿ (ಶಾಲೀವಾಹನ ಶಕ ೧೫೦೪) ವೈಶಾಕ ಶುದ್ಧ ಪೂರ್ಣಿಮೆಯಂದು ಸೋದೆಯಲ್ಲಿ ಪ್ರತಿಷ್ಠೆ ಮಾಡಿದರು.

 

ವಾದಿರಾಜರು ಅರಸಪ್ಪನಿಗೆ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.

ತ್ರಿವಿಕ್ರಮ ದೇವರ ರಥೋತ್ಸವವನ್ನು ಹದಿನೇಳು ವರ್ಷಗಳ ಕಾಲ ಅವರೇ ನೆರವೇರಿಸಿದರು. ಅದಲ್ಲದೆ ಆಕಾಶ ಗಂಗ, ಅಮೃತ ಗಂಗ, ಪಾತಾಳ ಗಂಗ, ಶೀತಲ ಗಂಗ ಮತ್ತು ಧವಳ ಗಂಗ ಎಂಬ ಹೆಸರಿನ ಪಂಚ ಗಂಗಾ ಪ್ರತಿಷ್ಠೆಯನ್ನು ಮಾಡಿ ಅಲ್ಲಿ ನೀರಿಗೆ ಯಾವಾಗಲೂ ಕೊರತೆಯಿಲ್ಲದಂತೆ ಮಾಡಿದರು. ಧವಳ ಗಂಗೆಯ ದಡಗಳಲ್ಲಿ ಈಶ್ವರ ಲಿಂಗ, ವೀಣಾಪಾಣೊ, ಮಾರುತಿ, ಕೊಳಲ ಕೃಷ್ಣರನ್ನು ಪ್ರತಿಷ್ಠಾಪಿಸಿದರು. ಮತ್ತೊಂದು ದಂಡೆಯಲ್ಲಿ ತಾವು ಪ್ರಪಂಚವನ್ನು ಬಿಡುವಾಗ ಪ್ರವೇಶ ಮಾಡಲು ಶಿಲಾ ವೃಂದವನವನ್ನು ನಿರ್ಮಾಣ ಮಾಡಿಸಿದರು. ಸೋದೆ ಕ್ಷೇತ್ರದಲ್ಲಿ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠ ಎಂಬ ಮೂರು ಭಾಗಗಳು; ಈ ಕ್ಷೇತ್ರ ಇಂದಗೂ ಪವಿತ್ರಾಗಿಯೂ ಪ್ರಶಾಂತವಾಗಿಯೂ ಇದೆ.

ಸಾಧನೆಗಳು

ವಾದಿರಾಜರು ತಮ್ಮ ಅನೇಕ ಅಪೂರ್ವ ಸಾಧನೆಗಳಿಂದ ಬಹು ಪ್ರಸಿದ್ಧರಾದರು. ಜನರಿಗೆ ಒಳ್ಳೆಯದಾಗಲಿ ಎಂದೇ ಅವರು ಅನೇಕ ಕೆಲಸಗಳನ್ನು ಮಾಡಿದರು. ೧೪೮೦ರಲ್ಲಿ ಹುಟ್ಟಿದ ಅವರು ಒಂದು ನೂರ ಇಪ್ಪತ್ತು ವರ್ಷಗಳು ಬಾಳಿದರು. ಅವರ ಜೀವನವೆಲ್ಲ ದೇವರ ಧ್ಯಾನ, ಪೂಜೆ, ಇತರರಿಗೆ ಒಳ್ಳೆಯ ದಾರಿ ತೋರಿಸುವುದು, ಕಷ್ಟದಲ್ಲಿರುವವರಿಗೆ ಸಹಾಯಮಾಡುವುದು ಇವುಗಳಲ್ಲಿಯೇ ಕಳೆಯಿತು. ಅವರ ವಿಷಯವಾಗಿ ಎಷ್ಟೋ ಕಥೆಗಳನ್ನು ಭಕ್ತರು ಹೇಳುತ್ತಾರೆ ಅನೇಕರ ಕಷ್ಟಗಳನ್ನು ಕಳೆದರು, ಕೆಟ್ಟವರ ಅಹಂಕಾರವನ್ನು ಮುರಿದರು ಎಂಬುದು ಈ ಕಥೆಗಳ ಹೂರಣ. ಬಹುಮಂದಿ ಶಿಷ್ಯರಿಗೆ ವಿದ್ಯೆ ಕಲಿಸಿದರು. ಅವರು ರಚಿಸಿದ ಗ್ರಂಥಗಳು ಸಂಖ್ಯೆಯಿಂದಲೂ, ಯೋಗ್ಯತೆಯಿಂದಲೂ ದೊಡ್ಡವು. ವಾದಿರಾಜರು ಬಹು ದೊಡ್ಡ ವಿದ್ವಾಂಸರಾಗಿದ್ದರು. ಸಂಸ್ಕೃತ-ಕನ್ನಡ ಎರಡೂ ಭಾಷೆಗಳಲ್ಲಿ ಸೊಗಸಾದ ಕೃತಿಗಳನ್ನು ರಚಿಸಿದ್ದಾರೆ.

ಸದ್ಗ್ರಂಥಗಳು

ಕನ್ನಡದಲ್ಲಿ ಲಕ್ಷ್ಮೀ ಶೋಭಾನೆ, ವೈಕುಂಠ ವರ್ಣನೆ, ಹರಿಭಕ್ತಿ ಲತಾ, ಗುಂಡಕ್ರಿಯೆ, ಸ್ವಪ್ನಪದ, ಮಹಾಭಾರತ ತಾತ್ಪರ್ಯ ನಿರ್ಣಯ ಟೀಕೆ, ಕೀರ್ತನೆಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಯುಕ್ತಿಮಲ್ಲಿಕಾ, ರುಕ್ಮಿಣೀಶ ವಿಜಯ, ಭಾರತ ಲಕ್ಷಾಲಂಕಾರ, ಮಧ್ವಾಷ್ಟಕ, ಭೂಗೋಲ ನಿರ್ಣಯ, ಗುರ್ವರ್ಥ ದೀಪಿಕಾ, ಗುರುಭಾವ ಪ್ರಕಾಶಿಕಾ, ಕವಿಕದಂಬ ಕಂಠಭೂಷಾ, ಶ್ರೀ ಶ್ರೀಶಗುಣ ದರ್ಪಣ, ದುರ್ಗಾಸ್ತೋತ್ರ, ಶ್ರೀಕೃಷ್ಣ ಸ್ತುತಿ, ಶ್ರೀ ಲಕ್ಷ್ಮೀಸ್ತುತಿ, ದಶಾವತಾರ ಸ್ತೋತ್ರ, ಹಯಗ್ರೀವ ಸ್ತೋತ್ರ ಮುಂತಾದ ಕೃತಿಗಳು ಪ್ರಸಿದ್ಧವಾಗಿವೆ.

ಗ್ರಂಥಗುಣ

ವಾದಿರಾಜರ ಗ್ರಂಥಗಳಲ್ಲಿಲ ಮಾತುಗಳ ಸೊಗಸು ವಿಶಿಷ್ಟ ಗುಣ. ಹಯಗ್ರೀವ ದೇವರಲ್ಲಿ ವಾದಿರಾಜರಿಗೆ ತುಂಬಾ ಭಕ್ತಿ. ಅಶ್ವಧಾಟಿಯಲ್ಲಿ ಅವರು ರಚಿಸಿರುವ ಅನೇಕ ಕೃತಿಗಳನ್ನು ಹೇಳುತ್ತಿದ್ದರೆ-ಹಾಡುತ್ತಿದ್ದರೆ ಕೇಳುವವರ ಮನಸ್ಸಿನಲ್ಲಿ ಭಕ್ತಿ ಉಕ್ಕುತ್ತದೆ. ಸಾಮಾನ್ಯ ಜನರ ಮನಸ್ಸಿಗೆ ತಟ್ಟುವ ಹಾಗೆ ಸುಂದರವಾದ ಕೃತಿಗಳನ್ನು ಅವರು ಬರೆದರು; ಪಂಡಿತರು ಮೆಚ್ಚುವಂತೆಯೂ ಕಾವ್ಯವನ್ನು ಬರೆಯುವ ಶಕ್ತಿ ಅವರಿಗಿತ್ತು. ಅವರ ರುಕ್ಮಿಣೀಶ ವಿಜಯ ಎಂಬ ಕಾವ್ಯವನ್ನು ಮಹಾ ವಿದ್ವಾಂಸರೂ ಮೆಚ್ಚುತ್ತಾರೆ. ಇದನ್ನು ಅವರು ಬರೆದುದನ್ನು ಕುರಿತೇ ಒಂದು ಕಥೆ ಇದೆ.

ಮಾಘ ಎಂಬ ಕವಿ ಶಿಶುಪಾಲ ವಧೆ ಎಂಬ ಕಾವ್ಯವನ್ನು ಬರೆದ. ಶ್ರೀಕೃಷ್ಣನು ಶಿಶುಪಾಲನನ್ನು ಕೊಂದು ರುಕ್ಮಿಣಿಯನ್ನು ಮದುವೆಯಾದದ್ದು ಇದರ ಕಥೆ. ಇದನ್ನು ಅನೇಕ ವಿದ್ವಾಂಸರು ಹೊಗಳಿದರು. ಪೂನಾ ನಗರದಲ್ಲಿ ಈ ಕಾವ್ಯವನ್ನು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿ ಗೌರವಿಸಲು ಏರ್ಪಾಟಾಗಿತ್ತು. ವಾದಿರಾಜರು ” ಈ ಕಾವ್ಯದಲ್ಲಿ ಅನೇಕ ದೋಷಗಳಿವೆ” ಎಂದರು. ಹಲವರಿಗೆ ಕೋಪ ಬಂದಿತು: ಇದಕ್ಕಿಂತ ಒಳ್ಳೆಯ ಕಾವ್ಯ ಇವರು ಬರೆಯಬಲ್ಲರೆ? ಎಂದು ಆಕ್ಷೇಪಣೆ ಮಾಡಿದರು. ವಾದಿರಾಜರು ಅದೇ ಕಥೆಯನ್ನು ತೆಗೆದುಕೊಂಡು ಸುಂದರವಾದ ಕಾವ್ಯ ಬರೆದರು. ಅಲ್ಲದೆ, ’ಶಿಶುಪಾಲವಧೆ’ ಎಂಬ ಹೆಸರಿನಲ್ಲಿ ಸಾವಿನ ಪ್ರಸ್ತಾಪ ಇದೆ: ಶ್ರೀಕೃಷ್ಣನ ಮದುವೆಯ ಕಥೆಯ ಹೆಸರಿನಲ್ಲಿ ಇದು ಬೇಡ ಎಂದು ರುಕ್ಮಿಣೀಶ ವಿಜಯ ಎಂದು ಮಂಗಳವನ್ನು ಸೂಚಿಸುವ ಹೆಸರನ್ನು ಕೊಟ್ಟರು. ಹದಿನೇಳೇ ದಿನಗಳಲ್ಲಿ ಕಾವ್ಯವನ್ನು ಮುಗಿಸಿದರು. ಇಲ್ಲಿ ಒಂದು ಸೊಗಸೆಂದರೆ ಒಂದೇ ವಾಕ್ಯಕ್ಕೆ ಬೇರೆ ಬೇರೆ ಅರ್ಥಗಳು ಇರುತ್ತವೆ ವಾಕ್ಯ ಓದಿದಾಗ ಈ ಹಲವು ಅರ್ಥಗಳು ಮನಸ್ಸಿಗೆ ಬರುತ್ತವೆ. ಪೂನಾ ನಗರದ ವಿದ್ವನ್ಮಣಿಗಳು ಅದನ್ನು ಪರಿಶೀಲಿಸಿ ತಲೆದೂಗಿ ಅದಕ್ಕೆ ವಿಶೇಷ ಮರ್ಯಾದೆಯನ್ನು ಮಾಡಿದರು. ಈ ಕಾವ್ಯ ವಾದಿರಾಜರು ಎಂತಹ ದೊಡ್ಡ ಕವಿಗಳು, ಅವರ ಭಕ್ತಿ ಎಷ್ಟು ಆಳವಾದದ್ದು ಎಂಬುದನ್ನು ತೋರಿಸುತ್ತದೆ.

ಮಹಾಭಾರತ ಲಕ್ಷಾಲಂಕಾರವೆಂಬ ಗ್ರಂಥ ಅಪೂರ್ವ ಇತಿಹಾಸ ಉಳ್ಳದ್ದಾಗಿದೆ. ತಾಯಿ ಗೌರಮ್ಮ ಗಂಡು ಮಗು ಹುಟ್ಟಿದರೆ ಭೂವರಾಹ ಸ್ವಾಮಿಗೆ ಲಕ್ಷಾಲಂಕಾರ ಮಾಡಿಸಿ ಸಮರ್ಪಿಸುವೆನೆಂದು ಹರಕೆ ಹೊತ್ತಿದ್ದಳಷ್ಟೆ? ಹರಕೆ ನಡೆಸಲು ಸಾಧ್ಯವೇ ಎಂಬ ಆಲೋಚನೆಯೇ ಮಾಡಲಿಲ್ಲ. ಮಗುವಿನ ಆಸೆಯಿಂದ ಮಾಡಿಕೊಂಡ ಹರಕೆಯಿದು. ದೇವರಿಗೆ ಲಕ್ಷಾಭರಣ ಮಾಡಿಸುವ ಚೈತನ್ಯ ಆ ಕುಟುಂಬಕ್ಕಿರಲಿಲ್ಲ. ಅದು ಹಾಗೇ ಉಳಿದಿತ್ತು. ಮಗ ಬಹು ಪ್ರಸಿದ್ಧ ಪಂಡಿತಾದ, ದೊಡ್ಡ ಪೀಠಾಧಿಪತಿಯಾದ, ಮಹಿಮಾವಂತನಾದ. ತಾಯಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆಗ ತನ್ನ ಬಹು ದಿನಗಳಿಂದ ಉಳಿದಿದ್ದಲ ಹರಕೆಯ ವಿಷಯವನ್ನು ಮಗನಲ್ಲಿ ಹೇಳಿಕೊಂಡಳು. ವಾದಿರಾಜರು ಅಪೂರ್ವ ಶ್ರೇಷ್ಠ ರೀತಿಯಲ್ಲಿ ತಾಯಿಯ ಹರಕೆಯನ್ನು ಸಲ್ಲಿಸಿಕೊಟ್ಟರು.

ಮಹಾಭಾರತದಲ್ಲಿ ದೊಡ್ಡ ವಿದ್ವಾಂಸರಿಗೂ ಅರ್ಥವಾಗದ ಕೆಲವು ಭಾಗಗಳಿವೆ. ವಾದಿರಾಜರು ಈ ಭಾಗಗಳು ಅರ್ಥವಾಗುವಂತೆ ಒಂದು ಗ್ರಂಥವನ್ನೆ ಬರೆದು, ಅದನ್ನೇ ಭೂವರಾಹ ಸ್ವಾಮಿಗೆ ಅರ್ಪಿಸಿದರು. ಭಾರತವನ್ನು ಬರೆದ ಶ್ರೀ ವೇದವ್ಯಾಸರ ಹೃದಯವನ್ನು ಹೊರಗೆಡಹುವ ‌ಗ್ರಂಥವಾಯಿತು ಇದು. ವಾದಿರಾಜರು ಲಕ್ಷ ಆಭರಣಗಳನ್ನು ಮಾಡಿ ದೇವರಿಗೆ ಒಪ್ಪಸಬಹುದಾಗಿತ್ತು. ಆ ಶಕ್ತಿ ಅವರಿಗೆ ಇತ್ತು. ಅವರ ಕಾಲಕ್ಕೆ ಅವರ ಮಠ ಸಂಪತ್ತಿನಿಂದ ತುಂಬಿತ್ತು. ಎಷ್ಟೋ ಆಭರಣಗಳನ್ನು ಮಾಡಿಸಿ ಹಯವದನನನ್ನೂ ಭೂವರಾಹನನ್ನೂ ಅಲಂಕರಿಸಿ ಪೂಜಿಸಿದ್ದರು. ಆದರೆ ಮಹಾಭಾರತದಂತಹ ಬಹು ಪವಿತ್ರ ಗ್ರಂಥ ಜನರಿಗೆ ಅರ್ಥವಾಗುವಂತೆ ಮಾಡಿದರೆ ದೇವರಿಗೂ ಸಂತೋಷ, ಲಕ್ಷ ಆಭರಣಕ್ಕಿಂತ ಇಂತಹ ಸೇವೆಯಿಂದಲೇ ಭಗವಂತನಿಗೆ ತೃಪ್ತಿ ಎನ್ನಿಸಿತು ಅವರಿಗೆ. ಇವರ ಸೇವೆ ಹೊಸ ರೀತಿಯದು, ಜ್ಞಾನವೇ ಬೆಳಕು, ಜ್ಞಾನಕ್ಕೆ ಸಮಾನವಾದುದಿಲ್ಲ ಎಂಬುದನ್ನು ತೋರಿಸಿಕೊಡುವ ಸೇವೆ.

ಶ್ರೀ ಶ್ರೀಶಗುಣದರ್ಪಣ ಎಂಬುದು ಮಹಾಲಕ್ಷ್ಮೀ ಸ್ತುತಿ.ಇದನ್ನು ಈಗಲೂ ಸೋದೆಯ ತ್ರಿವಿಕ್ರಮ ದೇವರ ಗುಡಿಯಲ್ಲಿರುಮ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಪಠಿಸುವ ಪದ್ಧತಿಯಿದೆ.

ಇದು ರಚನೆಯಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಒಮ್ಮೆ ಕಡುಬಡವನೊಬ್ಬ ವಾದಿರಾಜರ ಬಳಿಗೆ ಬಂದು ದುಃಖ ದೈನ್ಯಗಳಿಂದ ತನ್ನ ದಾರಿದ್ರ್ಯ ರೋಗಕ್ಕೆ ಲಕ್ಷ್ಮೀಸ್ತುತಿಯೇ ಚಿಕಿತ್ಸೆ ಎಂದು ತಿಳಿದರು.  ತಾವೇ ಒಂದು ಸ್ತುತಿಯನ್ನು ರಚಿಸಿ, ಅವನಿಗೆ ಉಪದೇಶ ಮಾಡಿದರು. ’ಇದನ್ನು ಭಕ್ತಿಯಿಂದ ಪಾರಾಯಣ ಮಾಡು’ ಎಂದು ಅಪ್ಪಣೆ ಮಾಡಿದರು. ಶ್ರೀ ಶ್ರೀಶಗಣದರ್ಪಣವೆಂಬ ಈ ಲಕ್ಷ್ಮೀನರಾಯಣರ ಸ್ತೋತ್ರ ಸಂಪತ್ತನ್ನು ಕರುಣಿಸಿತು; ಭಕ್ತಿಯಿಂದ ಪಾರಾಯಣ ಮಾಡುತ್ತದದ ಅವನ ಸುತ್ತಲೂ ಬಂಗಾರದ ಮಳಯೇ ಸುರಿಯಿತು ಎಂದು ಹೇಳುತ್ತಾರೆ. ಇದರಿಂದ ವಾದಿರಾಜರ ಶಕ್ತಿ ಅಲ್ಲದೆ ಬಡವರಲ್ಲಿ ಅವರಿಗಿದ್ದ ಕರುಣೆಯೂ ತಿಳಿಯುತ್ತದೆ.

ಲಕ್ಷ್ಮೀಶೋಭಾನೆ ಎಂಬ ಅವರ ಕೃತಿ ಕನ್ನಡದಲ್ಲಿದೆ, ಇದು ಸತ್ತವರನ್ನೇ ಎತ್ತಿ ಬದುಕಿಸಿದ ಸಂಜೀವಿನಿ ಎಂದು ಪ್ರಸಿದ್ಧವಾಗಿದೆ.

ಅರಸಪ್ಪನಾಯಕನ ಅಳಿಯ ಸತ್ತುಹೋದ. ಆಗ ವಾದಿರಾಜರು ಲಕ್ಷ್ಮೀಶೋಭಾನೆಯನ್ನು ಹಾಡಿ ಲಕ್ಷ್ಮೀನಾರಾಯಣರನ್ನು ಪ್ರಾರ್ಥಿಸಿ, ಅವನನ್ನು ಬದುಕಿಸಿದರು ಎಂದು ಹೇಳುತ್ತಾರೆ. ದೇವತೆಗಳೂ ರಾಕ್ಷಸರೂ ಸಮುದ್ರವನ್ನು ಕಡೆದರು; ಸಮುದ್ರದಿಂದ ಲಕ್ಷ್ಮೀದೇವಿ ಎದ್ದು ಬಂದಳು ಎಂಬ ಕಥೆ ಶ್ರೀಬದ್ಭಾಗವತದಲ್ಲಿ ಬರುತ್ತದೆ. ನೂರೆಂಟು ನುಡಿಗಳ ಈ ಶೋಭಾನೆ ಹಾಡು ಬಹಳ ಸರಳವಾದ ರೀತಿಯಲ್ಲಿ ಈ ಅಮೃತ ಮಂಥನ ಕಥೆಯನ್ನು ನಿರೂಪಿಸುತ್ತದೆ. ಶ್ರೀದೇವಿಯ ಈ ಸ್ತ್ರೋತ್ರವನ್ನು ಮಾಡಿದ ವಧೂವರರಿಗೆ ಲಕ್ಷ್ಮೀದೇವಿ ದೀರ್ಘ ಆಯುಸ್ಸನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗೆ ಶ್ರೀ ವಾದಿರಾಜರ ಕೃತಿಗಳು ಒಂದೊಂದೂ ಮಹಮೆಯುಳ್ಳವಾಗಿವೆ.

ಆ ಕಾಲದಲ್ಲಿ ವಿಜಯನಗರಕ್ಕೆ ವೆಂಕಟಪತಿ ಎನ್ನುವವನು ರಾಜ. ಅವನ ಆಸ್ಥಾನದಲ್ಲಿ ಅನೇಕರು ಮಹಾಪಂಡಿತರು ಇದ್ದರು. ಒಮ್ಮೆ ರಾಜನು, ಆ ಪಂಡಿತರ ಜೊತೆಗೆ ವಾದ ಮಾಡುವಂತೆ ವಾದಿರಾಜರನ್ನು ಪ್ರಾರ್ಥಿಸಿದ. ಇದ್ದಕ್ಕಿದ್ದ ಹಾಗೆ ಈ ಪ್ರಾರ್ಥನೆ ಬಂದಿತು. ಆದರೂ ವಾದಿರಾಜರು ಅವರೆಲ್ಲರನ್ನೂ ಸೋಲಿಸಿದರು. ರಾಜ ಅವರ ಬುದ್ಧಿಶಕ್ತಿಯನ್ನು ಮೆಚ್ಚಿಕೊಂಡು, ಅವರಿಗೆ ’ಪ್ರಸಂಗಾಭರಣ ತೀರ್ಥರು’ ಎಂದು ಬಿರುದನ್ನು ಸಮರ್ಪಿಸಿದ. ಆ ಕಾಲದಲ್ಲಿ ದೆಹಲಿಯಲ್ಲಿ ಆಳುತ್ತಿದ್ದ ಮೊಘಲ್ ಚಕ್ರವರ್ತಿ ಬಾಬರನೂ ವಾದಿರಾಜರಿಗೆ ಗೌರಮ ಸಲ್ಲಿಸಿದ.

ವೃಂದಾವನ

ಇಷ್ಟೆಲ್ಲಾ ಅಪೂರ್ವ ಅನರ್ಘ್ಯ ಕಾರ್ಯಗಳನ್ನು ಸಾಧಿಸಿ ಮಹಾಮಹಿಮರಾದ ಶ್ರೀ ವಾದಿರಾಜರು ನೂರಿಪ್ಪತ್ತು ವರ್ಷಗಳಷ್ಟು ದೀರ್ಘ ಕಾಲ ಭೂಮಿಯ ಮೇಲೆ ವಾಸವಾಗಿದ್ದು ಬಹು ಜನರನ್ನು ಉದ್ಧರಿಸಿದರು. ಸಶರೀರರಾಗಿ ಕ್ರಿಸ್ತ ಶಕ ೧೮೦೦ರಲ್ಲಿ ಫಾಲ್ಗುಣ ಬಹುಳ ತೃತೀಯ ದಿನದಂದು ವೃಂದಾವನ ಪ್ರವೇಶ ಮಾಡಿದರು.

ಅವರು ವೃಂದಾವನದಲ್ಲಿ ಕುಳಿತು ಮುನ್ನೂರ ಎಪ್ಪತ್ತೆರಡು ವರ್ಷಗಳು ಕಳೆದುಹೋಗಿವೆ. ಈಗಲೂ ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಅವರ ವೃಂದಾವನಕ್ಕೆ ಪೂಜೆ ಸಲ್ಲಿಸುತ್ತಾರೆ. ವೃಂದಾವನದ ಹೊರವಲಯದ ಪಕ್ಕದಲ್ಲೇ ಭೂತರಾಜರ ಗುಡಿಯಿದೆ. ಅವರು ತಪಸ್ಸು ಮಾಡುತ್ತಿದ್ದ ಸ್ಥಳ ಈಗಲೂ ’ತಪೋವನ’ ಎಂದು ಪ್ರಸಿದ್ಧವಾಗಿದೆ. ಸಾವಿರಾರು ಮಂದಿ ಭಕ್ತರು ಈ ಸ್ಥಳಗಳನ್ನು ಸಂದರ್ಶಿಸಿ ಪುನೀತರಾಗಿ ಬರುತ್ತಾರೆ. ಸೋದೆ ಒಂದು ಶಾಂತಿಯ ತವರಾಗಿದೆ.