ಹನುಮಂತಪ್ಪಾ ಬಗರಿಕಾರ

ಶ್ರೇಷ್ಠ ತಬಲಾ ತಯಾರಕರಾಗಿ ಹೆಸರು  ಪಡೆದಿರುವ ಶ್ರೀಹನುಮಂತಪ್ಪಾ ಬಗರಿಕಾರ ಅವರು ಕರ್ನಾಟಕದ ಹೆಸರಾಂತ ತಯಾರಕರಲ್ಲೊಬ್ಬರು. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಭಾಗ್ಯನಗರದ ನಿವಾಸಿಯಾಗಿರುವ, ೮೫ ವರ್ಷ ವಯೋಮಾನದ ಶ್ರೀ ಹನುಮಂತಪ್ಪಾ ಬಗರಿಕಾರ ಅವರು ಚರ್ಮವಾದ್ಯಗಳನ್ನು ತಯಾರು ಮಾಡುವುದರಲ್ಲಿ ಎತ್ತಿದ ಕೈ. ತಬಲಾ, ಮೃದಂಗ, ಪಖವಾಜ್, ಡೋಲಕ್, ಡ್ರಮ್ಸ್, ಮದ್ದಲೆ, ನಗಾರಿ, ಡೊಳ್ಳು, ಹೀಗೆ ನಾನಾ ಬಗೆಯ ವಾದ್ಯಗಳನ್ನು ಸ್ವತಃ ತಯಾರು ಮಾಡುವ ಶ್ರೀ ಹನುಮಂತಪ್ಪ ಅವರು ಉತ್ತಮ ತಬಲಾ ವಾದಕರೂ ಹೌದು.

ಗುಬ್ಬಿ ಕಂಪನಿ, ಪಡಸೂರು ಕಂಪನಿ, ಕುಕನೂರಿನ ರೆಹಮಾನವ್ವ ಮತ್ತು ಏಣಗಿ ಬಾಳಪ್ಪನವರ ನಾಕಟ ಕಂಪೆನಿಯಲ್ಲಿ ತಬಲಾ ವಾದಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಪ್ರಸಿದ್ಧ ಕಲಾವಿದರಾದ ರಘುನಾಥ ನಾಕೋಡ, ನಾಲತ್ವಾಡ ಶೇಷಪ್ಪ ಮುಂತಾದವರಿಗೆ ತಬಲಾ ವಾದ್ಯಗಳನ್ನು ತಯಾರಿಸಿಯೂ ಕೊಟ್ಟಿದ್ದಾರೆ. ರಂಗ ಕಲಾವಿದರಿಗೆಲ್ಲಾ ಚಿರಪರಿಚಿತ ವ್ಯಕ್ತಿಯಾಗಿರುವ ಶ್ರೀ ಬಗರಿಕಾರ ಅವರು ತಯಾರಿಸಿದ ವಾದ್ಯಗಳು ಹೊರ ರಾಜ್ಯಗಳಿಗೂ ರವಾನೆಯಾಗಿವೆ.

ಇವರ ಕಲಾಸೇವೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.