ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂಸ್ಥಾನಿ ಸಂಗೀತವನ್ನು ವ್ಯಾಪಕ ಪ್ರಚಾರಪಡಿಸಿ, ಸಂಗೀತ ಶಾಲೆ ಪ್ರಾರಂಭಿಸಿ ಅನೇಕ ಆಸಕ್ತರಿಗೆ ಹಿಂದೂಸ್ಥಾನಿ ಸಂಗೀತ ಶಿಕ್ಷಣ ನೀಡಿರುವ ಶ್ರೀ ವಾಮನರಾವ್ ಬೆಟಗೇರಿ ಅವರು ಕರ್ನಾಟಕದ ಹಿರಿಯ ತಲೆಮಾರಿನ ಹಿಂದೂಸ್ಥಾನಿ ಗಾಯಕರಲ್ಲೊಬ್ಬರು. ವಾಮನ ರಾವ್‌ ಬೆಟಗೇರಿಯವರು ೧೯೧೪ರ ಜೂನ್‌ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಜನಿಸಿದರು. ಇವರದು ಕಲಾ ಕುಟುಂಬ. ತಂದೆ ವರಕವಿ ತಿಪ್ಪಯ್ಯ ಮಾಸ್ತರರು. ಸಂಗೀತ, ನಾಟಕ, ಸಾಹಿತ್ಯ ವಿಭಾಗಗಳಲ್ಲಿ ಉತ್ತಮ ವಿದ್ವಾಂಸರು. ವಾಮನರಾಯರ ಸಂಗೀತ ಶಿಕ್ಷಣ ಅವರ ಅಣ್ಣಂದಿರಾದ ಶ್ರೀ ನಾಗೇಶ ಮಾಸ್ತರರಲ್ಲಿ ನಡೆಯಿತು. ಅಕ್ಕಂದಿರಾದ ಭವಾನಿ ಬಾಯಿ, ಅಂಬಾಬಾಯಿ ಉತ್ತಮ ಗಾಯಕಿಯರು.

ವಾಮನ ಮಾಸ್ತರರ ಉನ್ನತ ಶಿಕ್ಷಣ ಪಂ. ರಾಮರಾವ್‌ ಪಿತ್ರೆ ಅನಂತರ ಪಂ. ರಾಮಕೃಷ್ಣ ವಝೆ ಬುವಾರಲ್ಲಿ ನಡೆಯಿತು. ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಪಾಂಡಿತ್ಯ ಪಡೆದ ಮಾಸ್ತರರು ೧೯೩೫ರಲ್ಲಿ ಶ್ರೀ ಸರಸ್ವತಿ ಸಂಗೀತ ಶಾಲೆಯನ್ನು ಸ್ಥಾಪಿಸಿ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಇವರ ಈ ಶಾಲೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದಾಗ, ನಡುಗಾಲ ಸರ್ಕಾರದ ಮಾನ್ಯ ಪ್ರಧಾನಮಂತ್ರಿ ದಿ|| ಬಿ.ಜಿ. ಖೇರ್, ನಾರಾಯಣ ಸಂಗಮ, ದೇವರಾಜ ಅರಸ್‌ ಅವರಲ್ಲದೆ ಗೋಕರ್ಣ ಪರ್ತಗಾಳಿ ಮಠದ ಜೀವೋತ್ತಮ ದ್ವಾರಕಾನಾಥ ತೀರ್ಥರು ಶಾಲೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೈಸೂರು ದಸರಾ ಉತ್ಸವ, ಉಡುಪಿ ಪರ್ಯಾಯ ಸಮಾರಂಭಗಳಲ್ಲಿ ಇವರ ಗಾಯನ ಕಛೇರಿಗಳು ನಡೆದಿವೆ.

ಸರಸ್ವತೀ ಸಂಗೀತ ವಿದ್ಯಾಲಯದಿಂದ ಶಿಕ್ಷಣ ಪಡೆದ ಅನೇಕ ಕಲಾವಿದರು ಪ್ರಸಿದ್ಧರಾಗಿದ್ದಾರೆ.

ಅನೇಕ ಸಂಘ-ಸಂಸ್ಥೆಗಳು ಮಠಾಧಿಪತಿಗಳು ಇವರ ಅಮೋಘ ಸಂಗೀತ ಸೇವೆಗಾಗಿ ಗೌರವಿಸಿ ಸನ್ಮಾನಿಸಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಪ್ರಶಸ್ತಿಯೊಂದಿಗೆ ‘ಕರ್ನಾಟಕ ಕಲಾ ತಿಲಕ’ ಎಂಬ ಬಿರುದು ನೀಡಿ ಗೌರವಿಸಿದೆ.