ರಾಗ ಭೈರವಿ ಏಕತಾಳ

ಪೇಳಿರಿನಿಮ್ಮಪ್ಪನಿಗೆ | ಕಡು | ಖೂಳೆನು ಬರಲೆನ್ನಡೆಗೆ |
ಕಾಳಗ ಕೊದಗಲಿಭರದಿ | ಯಮ | ಪಾಳಯಕೂಡುತರವದಿ     || ೧ ||

ಯಂದರುಹುತಚಾರರನು | ಕರ | ಬಂಧಿಸಿಬಿಡೆದಾನವನು |
ಕುಂದುತಲೈತಂದವರು | ಖಳ | ಬಂದಿಹಪರಿಪೇಳಿದರೂ        || ೨ ||

ಖಿಡಿಖಿಡಿಗೆದರುತಲೆಮನು | ಭೋ | ರ್ಗುಡಿಸುತಬರೆದಾನವನು |
ಖಡುಗವತೂಗುತನಿಂದೂ | ಬಾ | ದಡಿಗನೆಬಿಡೆನಾನಿಂದೂ     || ೩ ||

ದುರುಳಖಳಾಧಮನಿನ್ನಾ | ಶಿರ | ವರಿಯದೆ ಬಿಟ್ಟೆಹೆಮುನ್ನಾ |
ತೆರಳಿಬಂದಿಹೆನೀಧುರಕೆ | ಈ | ಗಿರಿಸೆನುಜೀವದಿಜೋಕೆ         || ೪ ||

ಅಂದಿನಸಮರವಿದಲ್ಲ | ಗೆಲು | ವಂದವತೋರುವೆಹಲ್ಲಾ |
ವಂದುಳಿಸೆನುನಾನೀಗಾ | ಮದ | ದಂಧನೆನಿಲುನೀಬೇಗಾ       || ೫ ||

ರಾಗ ಶಂಕರಾಭರಣ ಮಟ್ಟೆತಾಳ

ಘೋರಧನುಜನಿಲ್ಲು ಶೌರ‍್ಯ | ವ್ಯಾರೊಳಿನಿತು ತೋರುತಿಹೆಯ |
ಧೀರನೆಮನಪರಿಯ ನೋಡೆನುತ್ತಲೆಚ್ಚನೂ   || ೧ ||

ಬರುವಶರವಪಿಡಿದುಜಂಭ | ಕರದಿತಿಕ್ಕಿ ಪುಡಿಯಗೈದು |
ತಿರುಹಿಶೂಲವನ್ನು ವಕ್ಷಕೆಸದನಾಕ್ಷಣ          || ೨ ||

ಭರಕೆತಪ್ಪುತಾಗಲೆಮನು | ಭರಿತರೋಷದಿಂದದಂಡ |
ತಿರುಹಿಬರಲುಗುರುವರೇಣ್ಯ ತಡದುಪೇಳ್ದನು || ೩ ||

ಭಾಮಿನಿ

ಬೇಡಸಂಗರಬಿಡುಬಿಡೀಕ್ಷಣ |
ಮಾಡಿಹನುಬಲಿವಿಶ್ವಜಿತುಮಖ |
ರೂಢಿಯೊಳಗಿವರನ್ನು ಜಯಸುವರಿಲ್ಲ ಸಮರದೊಳು ||
ಕೂಡಿಹರು ಖಳರೆಲ್ಲವಮ್ಮಡಿ |
ಮಾಡಿಹರುಸುರನಾಶಬುದ್ಧಿಯ |
ವೋಡುನೀಖಗರೂಪದಿಂದಲಿ ಪುರವಬಿಡುಬೇಗಾ      || ೧ ||

ರಾಗ ಕೇತಾರಗೌಳ, ಅಷ್ಟತಾಳ

ಗುರುರಾಯನೊಚನಾವ ಕೇಳುತ್ತಲಂತಕ | ಪರಿವಾರದೊಡಗೂಡುತ್ತಾ |
ಪುರವಾಬಿಟ್ಟಾಕ್ಷಣಶುಕರೂಪದೊಳಗೆಲ್ಲ ಹಿಮಗಿರಿಸಾರಿದರೂ    || ೧ ||

ಜಂಭದೈತ್ಯನು ಬಹುಸಂಭ್ರಮದೊಳುಪೋಗಿ | ಕುಂಭಿಪಾಕಾದಿಯೊಳು |
ಹಂಬಲಿಸುತರೋಧಿಪರನೆತ್ತಿ ಪೇಳಿದ | ನಂಬುಗೆಗಳನೀಯುತ್ತಾ || ೨ ||

ರಕ್ಷೀಪೆನಿಮ್ಮಾನು ಬಿಡಿಬಿಡಿಭಯಗಳ | ಶಿಕ್ಷಿಪನಲ್ಲನಾನು |
ದಕ್ಷಾನಾಗಿಹೆನೆಂದು ಪುರಕೆಕಾವಲನಿಟ್ಟು | ತಕ್ಷಣತ್ರಿದಿವಕೈದಾ   || ೩ ||

ಬಲಿಚಕ್ರವರ್ತಿಗೆನಮಿಸಿವೃತ್ತಾಂತವ | ನೊಲವಿಂದಲರುಹೀದಾನು |
ಭಲರೆಶಭಾಸೆನುತಿರಲಗ್ನಿಪುರಕಿತ್ತಾ | ಲೊಳಪೊಕ್ಕುವೃಷಪರ್ವನೂ        || ೪ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ತಳ್ಳಿದ್ವಾರದೊಳಿರ್ಪಚರರನು | ಎಲ್ಲಿಹನುಶಿಖಿನೋಳ್ಪನೆನ್ನುತ |
ಮಲ್ಲಯಕ್ಷಾಧಿಪನುತೆರಳಿದನೊಳಗೆಬೇಗಾ    || ೧ ||

ಜ್ವಲನಸಂತೋಷದಲಿ ಸಿಂಹಾಸನದಿಕುಳ್ಳಿರೆಕಂಡು ಘರ್ಜಿಸು |
ತೆಲೆಲೆಚಾಪವಕೊಂಡು ಬಾರೆನ್ನೆಡೆಗೆರಣಕೆ    || ೨ ||

ಕುಟಿಲತನದೊಳುಬಂದು ವೈರೋ | ಚನಿಯಧರ‍್ಮವ ಸೆಳದಮೂರ್ಖರೆ |
ವಟುವೆನೀನೆಲೆಚೋರ ಯನ್ನನುಗೆಲಿದೆಹಿಂದೆ || ೩ ||

ಗಂಡುಗಲಿಬಾರೀಗಸಮರ | ಪ್ರಚಂಡನಾದರೆನಿಲ್ಲುನಿಲ್ಲೆನೆ |
ಕೆಂಡವನುಖಾರುತ್ತದಳ್ಳುರಿಯಿಂದಲಗ್ನಿ        || ೪ ||

ಭಲರೆಯಕ್ಷಾಧೀಶನೆನ್ನೊಳು | ಕಲಹಕೋಸುಗಬಂದೆ ಭಾಪುರೆ |
ಗಳವನರಿಯುವೆನೆನಲು ಪೇಳಿದನೆಕ್ಷನಾಗ    || ೫ ||

ರಾಗ ಭೈರವಿ ಏಕತಾಳ

ಶರವಿದತಾಳೆಂದೆನುತ | ಹೆದೆ | ಗಿರಿಸುತ ಗುರಿನೋಡುತ್ತಾ |
ಕೆರಳುತಲೆಕ್ಷಾಧಿಪನೂ | ಬಿಡ | ಮುರಿಯುತವೈಶ್ವಾನರನೂ     || ೧ ||

ಧರಣಿಯುಬಿರಿವಂದದಲಿ | ಹೂಂ | ಕರಿಸುತಶಿಖಿಕೋಪದಲಿ ||
ತರಿತರಿದೊಟ್ಟುತಲಾಗಾ | ನಿಂ | ದಿರುವನಕಾಣುತಬೇಗಾ       || ೨ ||

ಕುಹಕಿಯೆನಿನ್ನಂಗವನೂ | ನಾ | ದಹಿಸುವೆನೋಡಿದನೀನು ||
ಮಹಶರಕಾಳಾಂಜನವಾ | ಬಿ | ಟ್ಟಹೆನಾತೋರಿಸುಛಲವಾ      || ೩ ||

ಪ್ರಳಯಾಗ್ನಿಯು ಭೋರ್ಗುಡಿಸೀ | ಜಗ | ವಿಲಯನತರ ಧಗಧಗಿಸೀ |
ಎಲೆಪಾಮರನೋಡೆನುತಾ | ಖಡಿ | ದಿಳುಹುತಶಿಖಿಕೋಪಿಸುತಾ         || ೪ ||

ಯಕ್ಷಾಧಿಪನೋಡೆನ್ನಾ | ಜಗ | ಭಕ್ಷಕನೆಂಬರುನಿನ್ನಾ |
ಶಿಕ್ಷಿಪಛಲವೆಂದಾಗ | ಬಿಡ | ಲಕ್ಷಯಶರ ಶಿಖಿಬೇಗಾ    || ೫ ||

ರಾಗ ಮಾರವಿ ಏಕತಾಳ

ವೃಷಪರ್ವನುಖಿಡಿಗೆದರಿ ಭ್ರಂಶುಂಡಿಯೊ | ಳೆಸದದಖಂಡಿಸುತಾ ||
ಅಸಮಪರಾಕ್ರಮಿ ಶಿಖಿಚಾಪವಮುರಿ | ದೊಸುಧೆಗೆಕೆಡಹಿದನೂ  || ೧ ||

ಭಾಸುರಮಾಗಿಹಖಡುಗವನಗ್ನಿಯು | ರೋಷದಿತಿರುಹಿಡಲು ||
ತೋಷದಿಖಂಡಿಸಿಪಿಡಿದನುಶರೆಯಂ | ನಾಶುಗಪ್ರಿಯಸಖನಾ   || ೨ ||

ತೋರೊನಿನ್ನಯ ಬಲದರ್ಪವನೆಲೆ | ವೀರಶಿಖಾಮಣಿಯೆ ||
ಬಾರೆನ್ನುತ ಕರಬಂಧಿಸಿ ರಥದೊಳು | ಭೋರನೆಕೆಡಹುತಲಿ     || ೩ ||

ಹರುಷದಿ ಜಯಭೇರಿಗಳನು | ಪೊಡಿಸುತ ಪೊರಟತಿ ಶೀಘ್ರದಲಿ ||
ತೆರಳಿದ ಧನಪಾಶುಗರನು ನಿರರುತಿ | ವರುಣರಪಟ್ಟಣಕೆ        || ೪ ||

ಭಾಮಿನಿ

ಗುರುವಚನದಿಂದವರುನಾನಾ |
ತೆರದಖಗರೂಪದೊಳುತಮ್ಮಯ |
ಪುರವತೆಜಿಸಿರೆಬಂದು ವಾಹಿನಿಯೊಡನೆ ವೃಷಪರ್ವಾ ||
ಪರಿಕಿಸುತ ಶೂನ್ಯ ಗೃಹಂಗಳ |
ನರರೆಯೆತ್ತೈದಿದರು ಲಂಡಿಗ |
ಳಿರಲಿಸಮಯವನೋಡಿಹನನವಮಾಳ್ಪೆನೆಂದೆನುತಾ  || ೧ ||

ವಾರ್ಧಿಕ್ಯ

ಆತತೂಕ್ಷಣವೆ ಪೊರವಂಟು ಸಂತೋಷದಿಂ |
ದ್ಯಾತುಧಾನಾಸೀಕ ಚಲಿಚಕ್ರವರ್ತಿಗೆರಗಿ |
ಹೂತನುದ್ಯಾವನದಿ ಬೀಡಿಕೆಯನೆಸಗೀರ್ಪ |
ಬಲಿಚಕ್ರವರ್ತಿಗೆರಗಿ | ಮಾತರಿತ್ಯಕುಬೇರನಿರುತಿ ಪ್ರಾಚೇತಸರು | ಭೀ
ತಿಯೊಳಗೆತ್ತಪೋದರೊ ಕಾಣೆಸಂಗರದಿ |
ವೀತಿಹೋತ್ರನ ಕರೆಯಪಿಡಿತಂದೆನೋಡೆನುತ | ಮುಂದಿಳುಹಲಾನಂದದಿ ||

ರಾಗ ಕೇದಾರಗೌರ ಝಂಫೆ

ಕಂಡು ಬಲಿಯೆಂದನಗುತಾ | ಸುರರೊಳ್ಪ | ಚಂಡಶಿಖಿಯಂಬ ಮಾತಾ |
ಚಂಡವೃಷಪರ್ವನಿಂದಾ | ಬರಿದೆಕಳ | ಕೊಂಡನೀಮೂರ್ಖನೆಂದಾ       || ೧ ||

ಈತನೆಜ್ಞಾದಿಗಳಲಿ | ಹವಿಗಳನು | ಪ್ರೀತಿಯಿಂದನಿತ್ಯರೆಯೆಲಿ |
ಪೀತಾವಾಸನಿಗೀವನು | ಶರೆಪಿಡಿಯೆ | ಖಾತಿಗೊಂಬನುತ್ರೀಶನೂ        || ೨ ||

ಯಲೆಧನಂಜಯನೆಕೇಳೊ | ಯಮ್ಮೊಡನೆ | ಘಳಿಸಬೇಡಹಿತ ತೆರಳೊ |
ಕೊಲೆನುನಾನೆಂದೆನುತಲೀ | ತರೆಬಿಟ್ಟು | ಕಳುಹೆ ನಡದನು ಭರದಲಿ     || ೩ ||

ಧುರದೊಳೀಯಮರೇಂದ್ರನಾ | ಶಿರವಚಂ | ಡರಿಯಬೇಕೈ ಖೂಳನಾ ||
ದುರಧೀರಬಲಿಯನ್ನು ತಾ | ಕೀರ್ತಿಗಳ | ಮೆರೆಸಿಕೊಂಬೆನು ಸಂತತಾ    || ೪ ||

ಎಂದು ಯೋಚಿಸುತಾಗಳು | ಸೌಂದರ‍್ಯ | ದಿಂದರಂಜಿಪ ಗೃಹಗಳೂ |
ಮುಂದೆಸೆಯಲಿಹುದನೋಡೀ | ಬಲಿಮಹಾನಂದದಿಂ ಸುರರಪಾಡೀ      || ೫ ||

ರಾಗ ಸೂರಟ ಏಕತಾಳ

ಪರಮಾನಂದದೊಳು | ಸುರಪುರ | ಮೆರವುದುವಿಭವದೊಳು |
ಥರಥರರತ್ನದಕುರಜುಮೇರುವೆಗಳು | ಮರಕತಬೀದಿಯುಮಾಣಿಕಧ್ವಜಗಳು        || ೧ ||

ಕಲಹಂಸಾದಿಗಳು | ಮತ್ತಾ | ಜಲಚರಪಕ್ಷಿಗಳು |
ಅಳುಕದ ಸಾರಸಕುಮುದೋತ್ಪಲದೊಳು | ತಿಳಿನೀರಿನಕೊಳ ಪೊಳೆಯತಲಿರುವವು        || ೨ ||

ಸುತ್ತಲುರಂಜಿಸುವಾ | ಭೋರ್ಗರೆ ಯುತ್ತಿಹಸುರನದಿಯಾ |
ಕೆತ್ತಿಹ ಗೋಮೇಧಿಕಸೋಪಾನದಿ | ತತ್ತೀರದಿ ಫಲಪುಷ್ಪದತರುಲತೆ       || ೩ ||

ಕುಲಿಶೋಪಪುನೆಲದೀ | ವಿದ್ರುಮ | ನೆಲೆಸೌಧದಗೃಹದೀ |
ಲಲನೆಯರ್ವೀಣಾಗಾನವಿನೋದದಿ | ಲಲಿತಾಕ್ಷರಮೃದುಮಧುರದವಚನದಿ        || ೪ ||

ಭೇರೀನಾದಗಳು | ತಮ್ಮಟೆ | ಭೋರಿಡುವಾದ್ಯಗಳು |
ನೀರಜನಯನೆಯರ್ನಾಟ್ಯಸೌರಂಭದಿ | ಮಾರಾಕಾರದಸುಮನಸರೀರ್ಪರು        || ೫ ||

ಭಾಮಿನಿ

ಸೊಕ್ಕಿಹರುಸುಮನಸರುಭೋಗದಿ |
ಘಕ್ಕನಿಂದವರನುಮಡುಹಿದುರ್ಗವ |
ನಕ್ಕರಿಂಶಳಕೊಂಬೆನೆನ್ನುತ ಬಲಿಯುಮಾರ್ಬಲಕೆ ||
ಪೊಕ್ಕು ಲೂಟಿಯಗೈದುದಿವಿಜರ |
ಕಕ್ಕುಲಿತೆಗೊಳಿಸೆಂದುನೇಮಿಸಿ |
ಶುಕ್ರದತ್ತದ ಶಂಖವನುನಾದಿಸಿನಬ್ಬರಿಸಿ      || ೧ ||

ವಾರ್ಧಿಕ್ಯ

ಏನಿದೇನಾಶ್ಚರ‍್ಯ ಪುರಿಯಪ್ರಾಕಾರದೊ |
ಳ್ದಾನವರ ಬೊಬ್ಬಾಟ ಕೇಳುತಿದೆಯಾರ್ಭಟಿಸಿ |
ಕ್ಷೀಣಬಲಬಲಿಚಕ್ರವರ್ತಿ ಬಂದಿಹನ್ಯಾಕೆ ಗೋಣರಿವೆನೆಂದು ಸುರಪಾ ||
ಭಾನುಸುತ ವರುಣ ಧನಪಾದಿಗಳ ಸ್ಮರಿಸಿಸುರ |
ಸೇನೆಯಂ ನೆರಹಬೇಕೆಂದೆನುತಲೆತ್ನಿಸಲ್ಕಾ
ಣುತಲೆ ಗುರುರಾಯ ನೈತಂದುವೇಗದಿಂ | ದರುಹಿದಂ ಪುರುಹೂತಗೆ    || ೧ ||

ರಾಗ ತೋಡಿ ಏಕತಾಳ

ತಾಳುತಾಳೆಲೊ ಪಾಕಶಾಸನಾ | ನಾನು  | ಪೇಳೂವನುಡಿ ಕಾರ‍್ಯ ಸಾಧನಾ  || ಪಲ್ಲ ||
ಕಾಳಾಗವಿಂದಿಗೆಬೇಡಾ ಸಾರಿದೆಕೇಳು || ಅನುಪಲ್ಲ ||

ಹಿಂದೀನಪರಿಯಲ್ಲಲಾಲಿಸೂ | ಬಲಿ | ಮುಂದೇಪೋಗಲುಸಮಾಧಾನಿಸೂ |
ಛಂದಾದಿವಿಶ್ವಜಿತುಯಜ್ಞಾಗೈದಿಹವನ | ತಾಳತಾಳೆಲೊ        || ೧ ||

ಹರಿಹರ ಬ್ರಹ್ಮರಿಗಂಜನೂ | ಸುರ | ನರರಾಲೆಕ್ಕಿಸುವನಶೂರನೂ |
ಬರದೂ ಜಯವು ಹರಿ | ರಕ್ಷೀಪಮುಂದಕೆ || ತಾಳುತಾಳೆಲೊ ಪಾಕಶಾಸನಾ      || ೨ ||

ದಿವಿಜಾರೆಲ್ಲಾರು ಕಾಮರೂಪದೀ | ತೆರ | ಳುವದೀಗವಿಪಿನಕೆವೇಗದೀ |
ಯುವತೀಯರೊಡಗೊಂಡು ಪೋಗೀರೆಂದನು ಗುರು | ತಾಳುತಾಳೆಲೋ || ೩ ||

ರಾಗ ಕೇತಾರಗೌಳ ಅಷ್ಟತಾಳ

ಯನುತಲಾಂಗೀರಸನರುಹೆಪುರಂದರ | ಘನಚಿಂತೆಗಳತಾಳುತ್ತಾ |
ಮನದಿಭೀತಿಯಗೊಂಡು ಸುರರೆಲ್ಲಾನಿಮ್ಮಾಯ | ತನುವರಕ್ಷಿಪುದೆಂದನೂ          || ೧ ||

ತರುಣಿಪುಲೋಮಜೆಯೊಡನೆಂದ ದುಗುಡಾದಿ | ಹರಿಕರುಣಗಳೆಂದಿಗೊ |
ನಿರುತದೈತ್ಯರ ದೆಸೆಯೊಳಗೀಗ ವಿಪಿನಾಕೆ | ತೆರಳೂವಕಾಲಬಂತು      || ೨ ||

ಅರಕ್ಷಣನಿಲ್ಲಬಾರದುನಾವೆಂದೆನುತಾಲಿ | ಸುರಪಾಲಶಚಿಯೊಡನೆ |
ಭರದಿ ಪಾರಾವತಪಕ್ಷಿರೂಪವತಾಳಿ | ತೆರಳೀದರುಭಯಾರಂದೂ        || ೩ ||

ಗೊರವಕಕ್ರೌಂಚ ಕಾರಂಡರೂಪದಿ ಸರ‍್ವ | ಸುರರೆಲ್ಲಾ ವೇಗದಿಂದಾ |
ಪುರವತಜಿಸಿಪೋಗೆ ಬಲಿಚಕ್ರವರ್ತಿಯು | ಚರಿಸುತ್ತಾ ಬೀದಿಯೊಳೂ      || ೪ ||

ವಾರ್ಧಿಕ್ಯ

ಪರಿಪರಿಯ ಖಗರೂಪದಿಂದಲೋಡುತಲೀರ್ಪ |
ಸುರರನೀಕ್ಷಿಸಿ ನಗುತಬಲಿಯು ಸಂತೋಷದಿಂ |
ಸುರಪನೊಡ್ಡೋಲಗದಮಂದಿರಕೆ ದಾನವರ ಬಳಸಿಬಂದಾಕ್ಷಣದೊಳೂ ||
ಸುರತರುಣಿ ನಾಟ್ಯಸಂಗೀತವಾದ್ಯಗಳಿಂದ |
ಮೆರವವೈಭವವೆತ್ತಲಡಗಿಪಾಳಾಗಿಹುದು |
ತರುಣಿ ಪುರುಷರನೋರ್ವರಂಕಾಣೆನೀಪುರದಿ ಪೋಗಲೊಳ್ಳಿತುಮೂರ್ಖರೂ       || ೧ ||

ರಾಗ ಮಾರವಿ ಏಕತಾಳ

ಕರಸುತಶುಕ್ರನ ಮತದೊಳಗಾಸುರ | ಪುರದಸಿಂಹ್ವಾಸನದಿ ||
ಹರುಷದಿಮಂಡಿಸಿ ಮೂಲೋಕದಧೊರೆ | ತನವನುಕೈಕೊಂಡಾ || ೧ ||

ಶುಂಭನಿಶುಂಭರು ಶೀಕ್ಷಾ | ಭಾಗವಸಂಭ್ರಮದೊಳಗೊಹಿಸಿ ||
ಕುಂಭಿನಿಜನರವಿಚಾರವನೆಮಪದ | ವೆಂಬಧಿಕಾರದೊಳೂ       || ೨ ||

ಮಾಲಿಸುಮಾಲಿಗಳೊರುಣ ನೈರುತ್ಯರ | ಪಾಲಿಪಧೊರೆತನವಾ ||
ತಾಳುತಧಾನ್ಯಾದಿಗಳಿಗೆ ಜಲವನು | ಕೂಲಿಸಿಬೆಳೆಸುವದೂ     || ೩ ||

ನರಕಮುರಾಸುರರೀರ್ವರು ಮರುತನ | ಪುರಿಯಧಿಕಾರದೊಳು ||
ಧರೆಯೊಳು ಶ್ವಾಸೊಛ್ವಾಸದಿಜೀವರ | ಪರಿಪಾಲಿಸುತಿಹುದೂ   || ೪ ||

ರಾಗ ಕಂಬೋಧಿ ಝಂಪೆತಾಳ

ದುಷ್ಟಾಶೀಕ್ಷಣೆಗಾಗಿ | ವಿಪ್ರಚಿತಿತಾರಕರು |  ಶಿಷ್ಟಾಪಾಲನೆಕನಕ ಭಂಡಾರಗಳಿಗೆ ||
ದಿಟ್ಟವೃಷಪರ್ವ ಧೂಮ್ರಾಕ್ಷವಾತಾಪಿಗಳು |  ಪಟ್ಟಾಭಿಷಿಕ್ತರಾಗುವದು ಮುಂದೆನುತಾ        || ೧ ||

ಉರಗಾಕನ್ನೆಯರೆಲ್ಲಾಬರಲೀನಾಟ್ಯಕೆ ಸತತಾ | ವಿರಚಿಸಲೀವಾದ್ಯಗಳ | ನೆಕ್ಷಾರಾಕ್ಷಸರೂ ||
ಸುರಪಸಭೇಗಿಮ್ಮಡಿಯ | ಮೆರಸಾಬೇಕನುದಿನದೀ | ಧರೆಮೂರಕರಸಾನಾ | ನಾದೇರಕ್ಷಿಪೆನೂ       || ೨ ||

ಮೊದಲಿಂದ್ರಾಸೇನಾನೆಂ | ಬಭಿಧಾನವಿತ್ತೆನಗೇ | ಕದನದೊಳುಧರಣಿಯೆನೂ | ಗೆದ್ದಾಕಾರಣದೀ ||
ವದಗಿದುದು ಬಲಿಚಕ್ರವರ್ತಿಯಂಬುವನಾಮ | ಮುದದೊಳೀಗಬಲೀಂದ್ರನಾದೆನಾನೆನುತಾ || ೩ ||

ಭಾಮಿನಿ

ಇತ್ತಲಾಬಲಿ ತೋಷದಿಂದಿರ |
ಲತ್ತಲದಿತಿಯು ವೆಸನದಿಂದಲಿ |
ಪುತ್ರನಾಖಂಡಲಗೆಸಂಪದವಳಿದು ವ್ಯಾಕುಲದಿ ||
ಮೃತ್ಯುದಾನವರಿಂದ ವಿಪಿನದಿ |
ಪತ್ನಿಸಹವಾಸಿಸುವದಾಯಿತೆ |
ಸುತ್ತ ಕಸ್ಯಪನೆಡೆಗೆ ನಡೆತಂದಾಗ ಲಭಿನಮಿಸೆ         || ೧ ||

ರಾಗ ತುಜಾವಂತು ಝಂಪೆತಾಳ

ಬಾರೆನ್ನಾಮೋಹದರ | ಗಿಣಿಯೇ ಸುಶೀಲೆ | ನೀರಾಜಾಂಬಕಿ ನಿನ್ನಾ | ದುಗುಡಗಳಪೇಳೇ |
ಚಾರೂಚಂದಿರಕಾಂತೀ ಪೊಲ್ವಾ ಕಪೋಲೇ | ತೋರುತಿದೇಚಿಂತೋಪ ರಾಗಗಳುವಿಮಲೇ || ೧ ||

ರಾಗ ಮಧುಮಾಧವಿ ತ್ರಿವುಡೆತಾಳ

ಪತಿಯೆಲಾಲಿಸುಯನ್ನದುಗುಡವ | ಸುತಪುರಂಧರಗಾದಭವಣೆಯ |
ಸತತತಮ್ಮಯಬಳಿಯೊಳುಸುರಲು | ವ್ರತಿಪಬೆದರಿಕೆಯಾಪುದೂ         || ೧ ||

ರಾಗ ತುಜಾವಂತ ಝಂಪೆತಾಳ

ತರುಣಿಮಣಿಕೇಳೆನ್ನಾ | ನುಡಿಯಾ ಗುಣರನ್ನೇ | ವಿರಚಿಸಿದಕರ‍್ಮ ಘಟ | ಕೇಳೆಸಂಪನ್ನೇ |
ಹೊರಗಿಹುದುಜೀವ | ಮಾಯವನುಳಿದುಕನ್ನೇ | ಬರಿಮೋಹಸತಿಸುತರೂ ಕೇಳೆಮೋಹನ್ನೇ || ೧ ||

ರಾಗ ಮಧುಮಾಧವಿ ತ್ರಿವುಡೆತಾಳ

ಪರಮಪುರುಷನ ಮಾಯೆಯೊಳುನಾ | ನಿರುತಡಿಂಬವ ಪೊತ್ತಕಾರಣ |
ತರಳರೆಂಬಭಿಮಾನತಪ್ಪದು | ಕೊರತೆಗಳಪರಿ | ಹರಿಪುದೂ    || ೨ ||

ರಾಗ ತುಜಾವಂತು ಝಂಪೆತಾಳ

ಆರಿಂದಾಭಾವಣೆಗಳು | ಬಂತಿವನಿಗುಸುರೇ | ಮೂರೂಲೋಕಾಧಿಪನ | ಪೋಲ್ವಾರಿನ್ಯಾರೇ |
ಕ್ರೂರಾವೃತ್ರಾದಿಗಳ | ಮಡುಹೀಶೃಂಗಾರೇ | ವಾರುಧಿಯಾಮಥಿಸಿ ಸುಧೆ | ಪಡದಿಹನೂನೀರೇ        || ೧ ||

ರಾಗ ಮಧುಮಾಧವಿ ತ್ರಿವುಡೆತಾಳ

ಶ್ರೋಣಿತಾಧಿಪಬಲಿಯಗೆಲಿದನು | ಕ್ಷೀಣಬಲನವವಿಶ್ವಜಿತುಗಳ |
ತಾನೆಸಗಿಧುರಕೊದಗೆಭಯದೊಳು | ಕಾಣದೈದಿದವಿಪಿನಕೇ     || ೧ ||

ರಾಗ ತುಜಾವಂತು ಝಂಪೆತಾಳ

ಇದಕೇನಾನೇನೆಸಗಾಬೇಕೂನೀಪೇಳೇ |
ಮೊದಲೇಗೈದಿಹಕರ್ಮ ಬಿಡಲರಿದುಕೇಳೇ |
ಚದುರೇವ್ಯಾಮೋಹಗಳ | ಬಿಟ್ಟೂ ದೃಢತಾಳೇ |
ಮಧುವೈರೀಚರಣ ಸದ್ಭಕ್ತಿಯೊಳುಬಾಳೇ     || ೧ ||

ರಾಗ ಮಧುಮಾಧವಿ ತ್ರಿವುಡೆತಾಳ

ಹರಿಯಕರುಣಾರಸದೊಳಿಂದ್ರಗೆ | ದುರಿತನಾಶನವಾಗಿ ಸಂಪದ ||
ಪರಮಸುಖವನುಪೊಂದಿ ಮೆರೆಯುವ | ತೆರನಸತ್ಪಥವಿವರಿಸೂ || ೨ ||

ಭಾಮಿನಿ

ಕ್ಷೀರಸಾಗರಶಯನಗೋಸುಗ |
ನಾರಿಕೇಳ್ಪಾಲ್ಗುಣದಶುಕ್ಲದಿ |
ಭೂರಿಹರುಷದಿ ಪ್ರತಿಪದಾದಿಯ ದ್ವಾದಶಾನ್ಹದೊಳು ||
ಕ್ಷೀರದಭಿಷೇಕದೊಳು ಮತ್ತಾ |
ಕ್ಷೀರಪರಮಾನ್ನಗಳರ್ಪಿಸಿ |
ನೀರಜೇಕ್ಷಣನಾಮವಷ್ಟಾಕ್ಷರಿಯಜಪಗೈದೂ  || ೧ ||

ವಾರ್ಧಿಕ್ಯ

ಪರಮಮಂಗಲೆಕೇಳು ವರಪಯೋವ್ರತವಿದಂ |
ವಿರಚಿಸಲು ಸದ್ಭಕ್ತಿಭಾವದೊಳ್ ಶ್ರೀಹರಿಯು |
ತರಳನಾಗುದ್ಭವಿಸಿ ನಿನ್ನಮನದಿಷ್ಟಮಂ ನಿರುತಪಾಲಿಪನೆನ್ನುತಾ ||
ತೆರಳಲಾಮುನಿ ಪಕೆ ತರುಣಿಮಣಿಯಾವ್ರತವ |
ಹರುಷದಿಂದೆಸಗುತಿರಲಿತ್ತಲಮರಾವತಿಯ |
ಪುರದಿ ಬಲಿಚಕ್ರವರ್ತಿಯುಶುಕ್ರನಂಕರಸಿ ಚರಣಕರಗುತಲೆಂದನೂ       || ೧ ||

ರಾಗ ಕೇತಾರಗೌಳ, ಝಂಪೆತಾಳ

ಲಾಲಿಸೈಗುರುವರ‍್ಯನೇ | ಹಿಂದೆಸುರ | ಪಾಲನೆಸಗಿದನೊಂಚನೇ |
ಕೋಳುಗೊಂಡುದುಭೋಗವು | ಬಂತೆನಗೆಪಾಲಿಸಲು ಮೂರ‍್ಲೋಕವೂ    || ೧ ||

ಯನ್ನವಿಕ್ರಮಪೋಲ್ವರೂ | ಸುಭಟಗ್ರ | ಗಣ್ಯರಿನೆಲ್ಲಿರ್ಪರೂ |
ಚನ್ನವಾಗನುಭವಿಸುವೇ | ಅಮರಪದ | ವನ್ನು ನಾಸ್ಥಿರಗೊಳಿಸುವೇ       || ೨ ||

ಹರಿಕೃಪೆಯೊಳೀವಿಭವವು | ಯನಗೀಗ | ದೊರಕಿದುದುಮತ್ಪುಣ್ಯವು ||
ಶರಣಪ್ರಹ್ಲಾದನಿಂಗೇ | ಪೌತ್ರನೆಂ | ದರಿದಿತ್ತದೇವನೆನಗೇ       || ೩ ||

ರಾಗ ಕೇತಾರಗೌಳ, ಅಷ್ಟತಾಳ

ಧೊರೆಯೆಲಾಲಿಸು ಪುರಂಧರನಂತೆ ನಿನಗೀಗ | ಸ್ಥಿರವಾಗದೀಪದವೀ |
ಚರಿಸಿದನವನುಪೂರ್ವದಿ ಮಹಾಪುಣ್ಯವ | ನರಿಯೆನೀನೆಂದಶುಕ್ರ         || ೧ ||

ಅಂಥಯೋಗ್ಯತೆಯನಿಂದ್ರನುಪಡದುದ ಗುರು | ಸಂತಸದಿಂದರು ಹೊ |
ಯಂತೂಶಾಶ್ವತಭೋಗವಾಳ್ವನೆಂಬುದಗುಣ | ವಂತನೆಪೇಳೆಂದನು     || ೨ ||

ಧೊರೆರಾಯಕೇಳ್ ಶತಕ್ರತುವಗೈದವರಿಂಗೆ | ಸುರರಾಜಪದವಿಯೆಂದೂ |
ಹರಿಯನೇಮಗಳಂತೆ ವಿರಚಿಸಿದನು ಪುರಂ | ಧರನುತಾ ಶತಮಖವಾ   || ೩ ||

ಭಾಮಿನಿ

ಕರುಣದಿಂದವಧರಿಸುಗುರುವರ |
ವಿರಚಿಸಿಹೆನೇಕೋನಶತಕೃತು |
ಹರುಷದಿಂದುಳಿದೊಂದನೀಗಳೆಮಾಡಿ ನರಹರಿಯಾ ||
ಶರಣನೆಂಬುವ ಕೀರ್ತಿಸಂತತಿ |
ಸ್ಥಿರಗೊಳಿಸಿ ಮೂರ‍್ಲೋಕಸಂಪದ |
ಪರಮಭೋಗದಿಮೆರವೆ | ನೆಂದಿಗೆಮಳ್ಪುದೀಮುಖವಾ || ೧ ||

ರಾಗ ನೀಲಾಂಬ್ರಿ ಏಕತಾಳ
(ಕೇಳೊತಮ್ಮಾ ಬಾಲಾರೀರ್ವರೂ ಎಂಬಂತೆ)

ಬರುವಾಶುಕ್ಲಪಂಚಮಿಯೊಳು | ರಚಿಸೈಯ್ಯಾಕರ್ಮ | ಧರೆಯೂರೇವಾನದಿಯಾತಟದೊಳು ||
ನೆರಹುಸಂಬಾರಗಳವಿಭವಾದಿ | ತರಿಸಯ್ಯದಿವ್ಯ | ತುರಗಾವನ್ನುಬಲಿಯೆಗಾಢದೀ  || ೧ ||

ಬರಿಸುಮಯನಾಚರರಮುಖದೊಳು | ಸೌಂದರ‍್ಯಶಾಲಾ | ವಿರಚಿಸಾಲಿನೂತನದೊಳೂ ||
ಧರಣಿಯೊಳಗುಳ್ಳಖಿಳಾವಿಭುದಾರ | ಕರಸಯ್ಯಾ ವಾಂಛಾ | ವಿರುವಾದಿತ್ತು ಕಳುಹೂಸರ್ವರಾ        || ೨ ||

ಎಂದುಶುಕ್ರನರುಹೆ ಕೇಳುತ್ತಾ | ಬಲಿರಾಯಜಂಭಾ | ಗೆಂದಾಸಿದ್ಧವಾಗಲೆನ್ನುತ್ತಾ ||
ವಂದಿಸುತ್ತಾಪೊರಟುನಡದಾನೂ | ಸನ್ನಾಹಗಳ | ಛಂದಾದಿಂದನೆರಹೂತೀರ್ದನೂ         || ೩ ||

ದ್ವಿಪದೆ

ನಿಲಿಸಿದನುಮಹಿಷನನು | ಸುರಪುರದೊಳಾಗಾ ||
ಇಳೆಗೆಬಂದನುಯಜ್ಞ | ಕೆನುತಲತಿಭೇಗಾ     || ೧ ||

ಇತ್ತಕ್ಷೀರಾರ್ಣವದೊಳೊಂದುದಿನ ಹರಿಯೂ ||
ಇತ್ತನೋಲಗ ಲಕ್ಷ್ಮಿಸಹಿತ | ಗುಣನಿಧಿಯು    || ೨ ||

ಶಂಖಚಕ್ರಾಬ್ಜಗಧರತ್ನಕುಂಡಲದಿ ||
ಪಂಕಜೇಕ್ಷಣ ವೈಜಯಂತಿಮಾಲಿಕದಿ         || ೩ ||

ಕಸ್ತೂರಿತಿಲಕನವರತ್ನಮಕುಟದೊಳೂ ||
ಸುತ್ತಸೇವಿಪತುಂಬುರಾದಿನಿವಹದೊಳು       || ೪ ||

ಚರಣಸೇವಿಪ ಸರ್ವಮಂಗಲೆಯನೋಡೀ ||
ಪರಮಪುರುಷನುಪೇಳ್ದ | ಕಿರುನಗೆಯಗೂಡೀ || ೫ ||