ವಾಮನ ಚರಿತ್ರೆ

ವೃತ್ತ

ಸರ್ವಾತ್ಮಂತ್ರಿಗುಣಾಕರಂ ಮುರರಿಪುಂ | ವೈಕುಂಠವಾಸಂಹರಿಂ ||
ಸರ್ವಾನಂದಪಯೋನಿಧಿಂಶಿರಿವರಂ | ಲೋಕೇಶ್ವರಂಮಾಧವಂ ||
ಸರ್ವಾಭೀಷ್ಟಫಲಪ್ರದಂನಘಧರಂ | ಪಂಕೇಜಪತ್ರೇಕ್ಷಣಂ ||
ಸರ‍್ವೋಪದ್ರವನಾಶನಂಸುರವರಂ | ಧ್ಯಾಯಾಮಿಕಂಠೀರವಂ  || ೧ ||

ರಾಗ ನಾಟಿ ಝಂಪೆತಾಳ

ಕರಿರಾಜಘನವಕ್ತ್ರ | ಸುರನಮಿತಾಹರಪುತ್ರಾ | ಶರಣುಕೋಮಲಗಾತ್ರಾ |
ಸರಸಿರುಹನೇತ್ರಾ || ಜಯ | ಜಯತೂ | ಜಯತೂ    || ೧ ||

ಧೂಮಕೇತನೆನಿನ್ನಾ | ಪ್ರೇಮಾದಿಂದಲಿ ಭಜಿಪೆ | ಕಾಮಿತವನೊಲಿದೀಯೊ |
ಸ್ವಾಮಿವಿಘ್ನೇಶಾ || ಜಯ | ಜಯತೂ | ಜಯತೂ      || ೨ ||

ಮೂಷೀಕಾರೂಢಗಣ | ಪೋಷರವಿಶಶಿಭಾಸಾ | ಕ್ಲೇಶಹರಕಮ್ಮರಡಿ |
ವಾಸಗಣಧೀಶಾ || ಜಯ | ಜಯತೂ | ಜಯತೂ      || ೩ ||

ಭಾಮಿನಿ

ಚಂಡಮುಂಡಾಸುರನಿಷೂಧಿನಿ | ಚಂಡಿಕೆವಾರಾಹಿಭಗವತಿ |
ಭಂಡಮರ್ಧಿನಿ ಬ್ರಾಹ್ಮಿಮಹಿಷಾಂತಕಿಯೆ ಕೌಮಾರೀ ||
ಖಂಡಪರಶುಪ್ರಿಯೆ ಚತುರ್ದಶ | ಮಂಡಲಾಧಿಪೆತ್ರಿಪುರಸುಂದರಿ |
ಶುಂಡಲಾನನಜನನಿ ರಾಜೇಶ್ವರಿಯೆಮಾಂಪಾಹೀ      || ೧ ||

ದ್ವಿಪದಿ

ಹರಿಹರಬ್ರಹ್ಮಾದಿಗಳಿಗೆವಂದಿಸುವೆ |
ಶಿರಿಗೌರಿವಾಗ್ದೇವಿಯರನು ಪೂಜಿಸುವೆ        || ೧ ||

ಪರಮವೇದೌವ್ಯಾಸನಂಘ್ರಿಗಳಭಜಿಸೀ ||
ಅರಿತಂತೆ ಕೃತಿಮಾಳ್ಪೆ ವಿಬುಧರನುನುತಿಸೀ || ೨ ||

ಪರಮಭಾಗವತಾಖ್ಯಪೌರಾಣವನ್ನು ||
ವರಯುತಿರೆ ಶಕಮುನಿಪಗುತ್ತರಾಸುತನು    || ೩ ||

ವಂದಿಸುತ ಬೆಸಗೊಂಡ ಹರಿಶರಣಬಲಿಯ |
ಬಂಧಿಸಿದ ಚಿನ್ಮಯನದ್ಯಾಕೆಂಬಪರಿಯ       || ೪ ||

ಅರುಹಬೇಹುದೆನಲ್ಕೆ ಶುಕಮುನಿಪನಾಗ |
ಧರಣಿಪಗೆಪೇಳಿದನು ವಿವರದಿಂಬೇಗಾ        || ೫ ||

ರಾಗ ಸೌರಾಷ್ಟ್ರ – ತ್ರಿವುಡೆ ತಾಳ

ಧರಣಿಪಾಲಕ ಕೇಳುಪೂರ್ವದಿ | ಸುರಪಮುಖ್ಯಾಮರರುದೈತ್ಯರು |
ಶರಧಿಮ ಥಿಸಿದ ಕಥೆಯನೊರದಿಹೆ ಸಾಂಗವಾಗಿ      || ೧ ||

ಪರಮಪುರುಷನು ಖಳರನೊಂಚಿಸಿ | ಸುರರಿಗಿತ್ತಿರೆಸುಧೆಯತವಕದಿ |
ಧುರವೆಸಗೆಬಲಿಜಂಭ ಶಂಭರರೆಲ್ಲಕನಲಿ      || ೨ ||

ದಿವಿಜರೊಳ್ಕಾರುಣ್ಯಭಾವದಿ | ಭವಭಯಾಂತಕ ಗಲಿದುದೈತ್ಯರ |
ತವಕದೊಳ್ ತ್ರೈಭುವನಪಾಲಕಪದವಿಯನ್ನು || ೩ ||

ಸ್ಥಿರಗೊಳಿಸಿವಾಸವಗೆತೋಷದಿ | ತೆರಳಿದನುವೈಕುಂಠಮಂದಿರ |
ವರಕೆ ಲಕ್ಷುಮೀವರನು ಪೇಳುವೆನಡದಕಥೆಯಾ        || ೪ ||

ರಾಗ ಭೈರವಿ ಝಂಪೆತಾಳ

ಇತ್ತಾನೋಲಗನಾಕಮಂದಿರದಿಶಚಿವರನು | ಮಿತ್ರಸುತಶಿಖಿಪವನ ವರುಣರೊಡಗೂಡಿ ||
ಚಿತ್ರಸೇನಾಜ್ಞೆಯೊಳ್ ಖೇಚರೋರುಗರುಡ | ಸಪ್ತಮರುದಷ್ಟವಸುರುದ್ರಕಿನ್ನರರು   || ೧ ||

ಮೆರದಿರಲು ಸಭೆಯೊಳಗೆ | ಸುದತಿಯರುನಟಿಸುತಿರೆ | ಪರಿಪರಿಯೊಳುಪಚರಿಸಿ | ಸಕಲರನುಸುರಪ ||
ಮರುತಪಾವಕಮುಖ್ಯರೊಡನೆ ತನ್ನಾತ್ಮದೊಳ | ಗಿರುವಶೋಕಾತುರವನೆಂದನಾಕ್ಷಣದಿ    || ೨ ||

ಶ್ರೋಣೀತಾಧೀಶನಹ | ಬಲಿಚಕ್ರವರ್ತಿಯೆನು | ಮಾನಾದಿಂದನುಸರಿಸಿ | ಜಂಭವೃಷಪರ್ವಾ ||
ದಾನವರುವಾತಾಪಿಮುರ ನರಕತಾರಕರು | ಗೋಣರಿಯಬೇಕೆನುತ ಪೀಡಿಸಿದರೆಮ್ಮ        || ೩ ||

ದುಷ್ಟಶುಂಭನಿಶಂಭಚಂಡಹೇತಿಪ್ರಹೇತಿ | ಭ್ರಷ್ಟಶಂಬರಮಹಿಷ ಬಲವಿಪ್ರಚಿತ್ತಿ ||
ಅಷ್ಟಸೇನಾಪತಿಗಳೊಡನಬ್ಧಿಮಥನದಲಿ | ಕುಟ್ಟಿಹಳಚೆರಮೇಶ ಜಯವಿತ್ತನೆಮಗೆ   || ೪ ||

ಸೃಷ್ಟಿಮೂರಕೆ ಶ್ರೇಷ್ಟನೆಂದೆನಗೆ ಶ್ರೀಹರಿಯು | ಕೊಟ್ಟನಧಿಕಾರವನು | ಮರುಕವಿದೆಮನದಿ ||
ದಿಟ್ಟಬಲಿಯಂದಿಗೆನ್ನನು ಜಯಸಿಕಳೆಯುವನೊ | ಪಟ್ಟದಧಿಕಾರ ಸುರಪುರದಸಂಪದವಾ     || ೫ ||

ರಾಗ ಕೇತಾರಗೌಳ, ಅಷ್ಟತಾಳ

ಎಂದಾಮಾತನು ಕೇಳುತೆಂದ ವೈಶ್ಯಾನರ |  ಸಿಂಧೂಶಯನನೆಮ್ಮಾನು |
ಛಂದಾದಿರಕ್ಷಿಸದಿಹನೆಚಿಂತೆಗಳ್ಯಾಕೆ | ಮುಂದಿನ್ಯೋಚನೆಸುರಪಾ        || ೧ ||

ಧುರಪರಾಕ್ರಮಿ ವೃತ್ರನಿಂದಪಹೃತವಾದ | ಸುರರಸಂಪದವನೋಡೀ |
ಹರಿಯುಪ್ರೇರಿಸಿದಂತೆಗೈಸಿದ ಕುಲಿಶದಿ | ದುರುಳನಗೆಲಿದೆನೀನು         || ೨ ||

ಮರುತನೆಂದನು ಹಿಂದೆದುರುಳಹಿರಣ್ಯಕ | ಧರೆಮೂರರೊಡಯನಾಗಿ |
ಸುರರಧಿಕಾರವಪೊಂದಿರೆ ನರಹರಿ | ಕರುಳುಗಿದನುಖಳನಾ     || ೩ ||

ಅಂಥಪೌರುಷಬಲಿಚಕ್ರವರ್ತಿಯೊಳುಂಟೆ | ಚಿಂತಿಪುದ್ಯಾಕೆನೀನು |
ದಂತಿ ವಹನಕೇಳು ಮಧುರಿಪುನಮ್ಮನಿ | ರಂತರಸಲಹುವನು   || ೪ ||

ಮರುತ ಲಾಲಿಸುಮೂರುಭುವನಪಾಲಕನೆಂದು | ಕರವರನಗೆನರಿದೆ |
ದುರುಳವೈರೋಚನಿಯೊಳಗುಂಟುಪಾತಾಳ | ನರಲೋಕಧೊರೆತನವೂ || ೫ ||

ಸುರಲೋಕಮಾತ್ರಾವೆನ್ನೊಶವಿದೆ | ಬಲಿಗೀಗಪರಮಾಪ್ತಕಿಂಕರರು |
ದುರುಳಕಾಲಿಕನಿವಾತಕವಚಶೂರ | ತ್ರಿಂಶತಿಯರ್ಬುಧವೂ      || ೬ ||

ಯಂದಿಗೆಬರುವರೊ ಸುರರಪಾಳಯವೆಲ್ಲ | ತಿಂದೂಜೀರ್ಣಿಪರೊ ಕಾಣೇ |
ಸಿಂಧೂಶಯನಗಿದಭಾರಿಭಾರಿಗು ದೂರ | ಲಂದವೆಪೇಳಿನೀವೂ || ೭ ||

ರಾಗ ಸೌರಾಷ್ಟ್ರ, ಅಷ್ಟತಾಳ

ಬಿಡುಬಿಡುಮಘವಾನೆನುತಾಲೆಮನೂ | ಕಡುಪಾಪಿಗಳನ್ನು ||
ಬಡಿದೂದಂಡಾದಿಂದನರಕಕಿಡಿಸಿ ಬಾಧಿಪೆನಾನೂ     || ೧ ||

ಹರಿಯುಶರಧಿಯನ್ನು ಮಥಿಸಿ | ಬರಿಸಿಯಮೃತವನ್ನೂ ||
ಕರುಣಿಸಿಹನುಮರಣವುಂಟೆ | ಮರುಳಾದೇಯೊನೀನು || ೨ ||

ಹರುಷಾಶೋಕಾಸರ್ವರಿಂಗೇ | ನಿರುತಾವಿಹುದೂ ನೋಡೂ ||
ಕೊರತೇಬಂದಾಗದರಾಗೊಡವೆಸುರಪಾಧೈರ‍್ಯಮಾಡೂ         || ೩ ||

ಭಾಮಿನಿ

ತರಣಿಜನನುಡಿಕೇಳಿ ತನ್ನಯ |
ಶಿರವನೊಲಿಯುತಸುರಪ ಬಲಿಯನು |
ತರಿಯಲೆತ್ನವನೆಸದು ಹಂಬಲಿಸುತ್ತಲಿರಲಾಗಾ ||
ಕರದಿದಂಡವಧರಿಸಿ ಧೌತಾಂ |
ಬರವನಳವಟ್ಟಲ್ಲಿಗೈತಹ |
ಗುರುವರೇಣ್ಯನಿಗೆರಗಿ ಸತ್ಕರಿಸುತ್ತ ಕುಳ್ಳಿರಿಸಿ ||         || ೧ ||

ರಾಗ ಸೌರಾಷ್ಟ್ರ, ತ್ರಿವುಡೆ ತಾಳ

ಗುರುವೆನೀನಿರದೀ ಸುಧರ್ಮವು | ಮೆರವದುಂಟೆನಿರ್ಮಲಾಂಬರ |
ತ್ವರದುಶಶಿಯನನ್ನುಡುಗಣಂಗಳೊಳೇನುಸ್ವಾರ್ಥಾ    || ೧ ||

ವರದುನಾನಾ ತೆರದಯುಕ್ತಿಯ | ಸುರರಪಾಲಿಪಗುರುವೆಯನ್ನಯ |
ಪರಮಸಚಿವರ ಜಯಜಯನ್ನುತ | ಲೆರಗೆಸುರಪಾ     || ೨ ||

ಎತ್ತುತಪ್ರೀತಿಯೆಲಿ ಕುಳ್ಳಿರಿ | ಸುತ್ತಲಾಂಗೀರಸನುಪೇಳ್ದನು |
ಸ್ವಸ್ತವೆತವಮನಕೆಸಂತತಪೇಳುಪೇಳೈ       || ೩ ||

ಯನಲುಕೈಮುಗಿದಾಗಶಕ್ರನು | ಮನದಸಂಶಯಪೇಳ್ವೆ ಕೇಳೈ |
ಘನಬಲಾಢ್ಯನು ಬಲಿಯು ಮೆರದಿಹ | ಧರಣಿಯೊಳಗೇ || ೪ ||

ಉರಗನರ ಲೋಕದೊಳುಸರ್ವರು – ಚರಣಸೇವಕರಾವಿರೋಚನ |
ತರಳನಿಂಗತಿ ಹಿತರುಯನ್ನನು | ಕೇಳ್ವರ‍್ಯಾರೈ         || ೫ ||

ಕಾರಣಂಗಳದೇನುಕೀರ್ತಿಯು | ಕ್ರೂರನಾದರುತುಂಬಿಕೊಂಡಿದೆ |
ಮೂರುಲೋಕಾಧೀಶನೆನ್ನಯಬಾಳುವೆರ್ಥಾ  || ೬ ||

ರಾಗ ಬೇಗಡೆ, ಆದಿತಾಳ
(ಏನಿದೂ ನಿಮ್ಮಲ್ಲಿ ಸಂವಾದ ಎಂಬಂತೆ)

ಸುರಪಕೇಳೈಬಲಿಯ ಸಂಪದವು | ಸತ್ಕೀರ್ತಿಯಂಬುದು |
ಮೆರವುದೊಂದೇಧರ್ಮಸದ್ಗುಣವು | ಶಿರಿಮನೋಹರನಿಂಗೆಭಕ್ತನು |
ಧರೆಯಮರಸುಪ್ರೀತನಾತನು | ಶರಣಪ್ರಹ್ಲಾದಂಗೆಪೌತ್ರನು |
ದುರುಳನಲ್ಲವನ್ಯಾಕೆನಿಂದಿಪೆ        || ೧ ||

ವರವೆಕೇಳೈಧರ್ಮವನುಸರಿಸೀ | ಸೌಭಾಗ್ಯಲಕ್ಷ್ಮೀಯು |
ಸ್ಥಿರದಿನೆಲಸುವಳಯ್ಯ ಘನವೆನಿಸೀ | ಶಿರಿಯನನುವರ್ತಿಪುದು ಭೋಗವು |
ಬೆರದುಕೊಂಬುದು ಕಾಂತಿಯದರೊಳು | ನಿರುತವಾಗಿಯೆಕೀರ್ತಿ ಜಗದೊಳು |
ಮೆರವುದೈತೇಜದೊಳುಶಚಿವರ     || ೨ ||

ಬಲಿಯುಸಂತತಬಿಡನು ಧರ್ಮವನು | ಕಾಮ್ಯಾರ್ಥವೆಲ್ಲವ |
ನೊಲಿದು ಯಾಚಕರಿಂಗೆ ಕೊಡುತಿಹನು | ನಿಳಯಕೈತಂದತಿಥಿಗಳನಿ |
ಶ್ಚಲಭಕ್ತಿಗಳಿಂದ ಪೂಜಿಸಿ | ಹಲವಿಧದ ಷಡ್ರಸದೊಳುಣಿಸುವ |
ನಿಳೆಯೊಳವನನು ಪೋಲ್ವರಿಲ್ಲೈ     || ೩ ||

ರಾಗ ಕೇತಾರಗೌಳ, ಝಂಪೆ

ಪರರಶಿರಿಗಾಗಿ ನೀನು | ದುಃಖಿಪುದು | ಥರವಲ್ಲ ಪೇಳ್ವೆನಾನು |
ಸುರರಾಜಸೈರಿಸೆನುತಾ | ಪೇಳೆಶಚಿ | ವರನೆಂದನಾಗನಗುತಾ || ೧ ||

ಗುರುವೆ ಧರ್ಮವೆಶ್ರೇಷ್ಟವು | ಸಾರಿಹುದು | ವರಶಾಸ್ತ್ರ ಶ್ರುತಿಸಾರವು |
ಅರಿಯದಾತನಗುಣವನು | ನಿನ್ನೊಡನೆ | ವರದೆನಾನೀಪರಿಯೆನೂ        || ೨ ||

ಹರುಷದೊಳಗಿಹುದೆನ್ನುತಾ | ಸುರಪನಿಂ | ಗರುಹಿಗುರುವರನೇಳುತಾ |
ತೆರಳೆ ಗೃಹಕತಿವೇಗದಿ | ಸುರರಾಜ | ನರಿತಾಗತನ್ನಮನದಿ    || ೩ ||

ವರುಣ ಮಾರುತವನಲರೂ | ವಟುರೂಪ | ಧರಿಸಿಬನ್ನಿರಿಪ್ರೌಢರೂ |
ಪರಮ ಭೂಸುರನಾಪೆನು | ಬಲಿಯಡೆಗೆ | ತೆರಳಿಪೋಗುವದೆಂದನೂ    || ೪ ||

ಅಸ್ತೆನುತದಿಕ್ಪಾಲರೂ | ರೂಪನ್ಯ | ವೆತ್ತಿತೋಷದಿಪೊರಟರೂ |
ವೃತ್ತ ವೈರಿಯುಕಪಟದೀ | ವಿಬುಧನಾಗುತ್ತಬರ | ಲತಿತ್ವರ‍್ಯದಿ   || ೫ ||

ಭಾಮಿನಿ

ಧರಣಿಪತಿ ಕೇಳಿತ್ತಶ್ರೋಣಿತ |
ಪುರದಧಿಪಬಲಿಚಕ್ರವರ್ತಿಯು |
ತರಣಿಯುದಯದಿ ಮಜ್ಜನಾದಿಗಳನ್ನು ವಿರಚಿಸುತಾ ||
ಹರಿಯನರ್ಚಿಸಿ ದಿವ್ಯತೀರ್ಥವ |
ಪರಮಭಕ್ತಿಗಳಿಂದ ಕೊಳುತಲೆ |
ಹರುಷದಿಂದೋಲಗಕೆ ಬಂದರಿತಾಗತನ್ನೊಳಗೆ        || ೧ ||

ರಾಗ ಕೇತಾರಗೌಳ, ಅಷ್ಟತಾಳ

ಶರಧಿಮಥನದೊಳು ಧುರಗೈಯ್ಯೆ ವಿಜಯವು | ಸುರಪಗಾದುದೆ ಭಲರೆ |
ಸುರತರುತುರಗವೈರಾವತಸುಧೆಗಳ | ದುರುಳನೊಂಚಿಸಿಕೊಂಡನೆ      || ೧ ||

ವಾಸುದೇವನದಯದಿಂದಾಗಲಿಂದ್ರಗೆ | ಲೇಸಾದುದಲ್ಲದಿರೆ |
ಮೋಸಕಾರನಕಂಠವರಿಯುತ್ತಲೀರ್ದರು | ರೋಷಾದಿಖಳರಾಯರೂ     || ೨ ||

ಬಡವಾನೆಜಂಭನುವೃಷಪರ್ವಮಹಿಷನು | ದಡಿಗತಾರಕಬಲನೂ |
ವಡನಿವರೊಂಚಿಸಿಗೆಲಿಸಿದನಿಂದ್ರನು | ವಡಯಲಕ್ಷ್ಮೀಕಾಂತನೂ || ೩ ||

ಹರಿಗೆನಾಕಿಂಕರಮರವಾನೆ ಯನ್ನನು | ಧುರದೊಳಿಂದ್ರನತರಿದೂ |
ಸುರಪುರವನುಶಳಕೊಂಬೆಪೌರುಷದಿಂದ | ಮೆರವೆಮೂರ್ಲೋಕದಲ್ಲೀ    || ೪ ||

ವಾರ್ಧಿಕ

ಪರಿಕಿಸುತಲಾದೈತ್ಯಸಭೆಯ ಸಂತೋಷದಿಂ |
ದರರೆ ವಾತಾಪಿಪಾಲೋಮನಿಲ್ವಲಜಂಭ |
ನರಕವೃಷಪರ್ವ ಧೂಮ್ರಾಕ್ಷತಾರಕ ಮುಖ್ಯ | ಸಚಿವರಿರದಿರೆಕರಸುತಾ |
ಹರುಷದಿಂಕುಳ್ಳಿರಿಸುತವರೊಡನೆಪೇಳಿದಂ |
ನಿರುಕಿಸುತಸಮಯಸಂದರ್ಭದೊಳ್ಸುಮನಸರ |
ತರಿದುಸ್ವರ್ಗವನಾಳಲೆಣಿಸಿರ್ಪೆನಿಮ್ಮಿರವ ನರುಹಿರೆನೆವೃಷಪರ್ವನು      || ೧ ||

ರಾಗ ಮಾರವಿ – ಏಕತಾಳ

ಕೊಡುಕೊಡುನೇಮವವೆನಗೀಕ್ಷಣಸುರ | ರೊಡಯನಶರೆವಿಡಿದು ||
ಸಡಗರದೊಳಿನಿನಗೊಪ್ಪಿಸದಿರೆನಾ | ದಡಿಗನೆವೃಷಪರ್ವಾ       || ೧ ||

ತರಣಿಜಶಿರವನ್ನರಿವೆನುವಹ್ನಿಯ | ನುರುಳಿವೆಮಾರುತನ ||
ಕೊರವೆನಖಡುಗದಿ ನಿರುತಿಕುಬೇರರ | ನಿರಿಸೆನುಜೀವದಲಿ      || ೨ ||

ಸುರಸತಿಯರ ನಿಮ್ಮರಸಿ ವಿಂಧ್ಯಾವಳಿಚರಣಸೇವಿಪತೆರದಿ ||
ತ್ವರಿತದಿಗೈಸುವೆನೆನುತಿರೆ ಜಂಭನು | ಯರಗುತಲಿಂತೆಂದಾ    || ೩ ||

ರಾಗ ಘಂಟಾರವ, ಏಕತಾಳ
(ತಾಳಿ ಪರ್ವತಕಲ್ಮರಂಗಳನೆಲ್ಲ ಎಂಬಂತೆ)

ಪಾಲಿಸಪ್ಪಣೆ ಸುರರಪಾಳ್ಯವನಾನು | ಶೀಳಿಬಿಸುಡದೆಬರಲು ಜಂಭನೆ |
ಶೂಲಿಗಂಜೆನು ಸಮರದಿ   || ೧ ||

ಕ್ರೂರಮಾಯ ಜರ್ಝರಿಯಾದ ದಳ್ಳುರಿ | ದೋರಿಭಸ್ಮೀಕೃತವಗೈಯ್ಯುವೆ |
ಭಾರಿಸಿಡಿಲಾಗೆರಗುವೆ     || ೨ ||

ಹಿಂದೆವಾರುಧಿಮಥನದಿನಿನ್ನನು | ಕೊಂದುಕಳೆದರು ಶುಕ್ರನಿರದಿರೆ |
ಸಂದಿತಂದಿಗೆಭೋಗವು    || ೩ ||

ಭಾಮಿನಿ

ತಾಳಿರೈವೃಷಪರ್ವಜಂಭರೆ |
ಕಾಲಭೇದವನರಿತು ದಿವಿಜರ |
ಪಾಳಯವನುಗ್ಗೊತ್ತಿ ತ್ರಿದಿವವ | ನಾಳಲೆತ್ನಿಸುವೆ ||
ಶೂಲಿಸನ್ನಿಭಭಟರು ನೀವೆಂದೋಲಗವ |
ಬೀಳ್ಕೊಟ್ಟು ಮಜ್ಜನಖೇಲದಿಂದೇಳುತಿರೆ |
ಶಚಿವರನೊಟುಗಳೊಡಗೂಡಿ        || ೧ ||

ಕಂದಪದ್ಯ

ಹರಿತಹಭೂಸುರವರರಂ |
ಪರಿಕಿಸುತಾಗವಿರೋಚನಿಭಕುತಿಯೊಳೆರಗುತ |
ಕರತಂದಾಸನವೇರಿಸಿ | ದರುಶನಮಾತ್ರದಿಹರಿದುದು ಕಿಲ್ಬಿಷವೆನುತಂ   || ೧ ||

ರಾಗ ಶಂಕರಾಭರಣ, ಆದಿತಾಳ
(ಕೇಳೂ ದಾನವಕುಲ ಎಂಬಂತೆ)

ಧನ್ಯನಾದೆನುವಿಪ್ರ | ವರರೆ ನಾನೀಗಾ | ಸನ್ನುತಾಂಗರೆ ನಿಮ್ಮಾಗಮನದಿಭೇಗಾ   || ಪಲ್ಲವಿ ||

ಪೂತವಾಯಿತುಗೃಹ | ಪಾದಧೂಸರದೀ | ಪೂತವಾಯಿತು ಶಿರ | ವೆರಗಿವಂದನದೀ         || ೧ ||

ಪೂತನಾದೆನು ದಿವ್ಯ | ಮೂರ್ತಿದರ್ಶನದೀ | ಪೂತನಾದೆನು ವಿಪ್ರವರರ ಸ್ಪರ್ಶನದೀ        || ೨ ||

ಚರಣದೊಳಜ ಹರಿ | ಯುರದೊಳಗಿಹನೂ | ಶಿರದೊಳಗೀಶನುನೆಲಸಿಕೊಂಡಿಹನೂ         || ೩ ||

ಧರಣಿಸುರರೆ ನಿಮ್ಮಾಶ್ವಾಸವಾಶುಗನೂ | ಪರಮಜ್ಯೋತಿರ್ಮಯ | ಮುಖದಿಪಾವಕನೂ   || ೪ ||

ತರಣಿಚಂದ್ರರೆ ನಿಮ್ಮನೇತ್ರದೊಳಿಹರೂ |  ಸುರರುರೆನಿಮ್ಮಯ ಕೇಶದೊಳಿಹರೂ  || ೫ ||

ರಾಗ ಕಾಂಬೋಧಿ, ಝಂಪೆತಾಳ

ಪರಿಪರಿಯಾಸ್ತುತಿಸುತಿಹ | ಧೊರೆಗೇಪೇಳಿದಿವಿಪ್ರ |
ದರಣಿಯೊಳುನಿನ್ನಂಥ | ಪ್ರಾಜ್ಞನೃಪರುಂಟೇ ||
ಕೊರತೆಯೊಂದಿದೆ ಯನ್ನ | ತರಳರಿವರೊಡಗೂಡಿ |
ಹರಿತಂದೆನಿನ್ನೊಡನೆಯಾಚಿಸುವಮನದೀ    || ೧ ||

ಇಂತೆನಲೂಬಲಿಚಕ್ರ | ವರ್ತಿಪೇಳಿದಾಗ |
ಸಂತಸದೊಳ್ವಾಂಛಿತವ | ನೀವೆನಾಕಡೆಗೇ ||
ಸಂತೀಗಮಧ್ಯಾನ್ಹ ಕಾಲಮಾಗಿದೆ ತೃಷ್ಣೆ |
ಯಂತುಬಾಧಿಪುದೈಸೆ | ಬನ್ನಿಭೋಜನಕೇ    || ೨ ||

ಧರಣಿಪಾಲನೆಯಮಗೆ | ಭೋಜ್ಯಾಪೇಕ್ಷೆಗಳಿಲ್ಲ |
ಕರುಣಾದಿಂವಾಂಛಿತವ | ನಿತ್ತರದುವಿಹಿತಾ ||
ಪರರನ್ನದೊಳ್ಮನವನಿರಿಸುವರು ನಾವಲ್ಲ |
ಬರಿದೆಪೀಡಿಸ ಬಾರದೆಂದನಾವಿಬುಧಾ       || ೩ ||

ಭಾಮಿನಿ

ಧರಣಿಸುರಕೇಳನ್ನವೆಂಬುದೆ |
ಪರಮಸಾಕ್ಷಾದ್ಬ್ರಹ್ಮವೆನಿಪುದು |
ಸರುವಜೀವಾಧಾರವನ್ನದಿಜೀವನುದ್ಭವವು ||
ನಿರುತನೀವತಿಥಿಗಳು ನಿಮ್ಮನು |
ತ್ವರದುಭುಜಿಸಲು ಯನಗೆರೌರವ |
ನರಕವಲ್ಲದೆಗತಿಯಕಾಣೆನು ಬನ್ನಿದಯದಿಂದ || ೧ ||

ರಾಗ ಕಾಂಬೋಧಿ ಆದಿತಾಳ
(ಏಸುದಿನಬೇಕೆನ್ನ ಪ್ರಾಣೇಶನಕಾಂಬುವದಕ್ಕೆ ಎಂಬಂತೆ)

ಧರಣಿಪಾಲಾಕೇಳೊನೀನು | ಹರುಷದಿಂದವಾಂಛಿತವಾ |
ಕರುಣಿಸಾಲುಭೋಜ್ಯಾಕಿಂತ | ಪರಮತೃಪ್ತರಾಗೂತಿಹೆವು       || ೧ ||

ರಾಗ ಕೇತಾರಗೌಳ, ಅಷ್ಟತಾಳ

ಥಟ್ಟಾನರುಹಬೇಕು ಭೂಸುರತವ ಮನ | ದಿಷ್ಟಾವನೀವೆ ನಾನೂ |
ಕೊಟ್ಟಾಭಾಷೆಗೆ ತಪ್ಪಾಲರಿಯೆನೆಂದೆಂದಿಗೂ | ಭ್ರಷ್ಟಾನಾಗೆನುಜಗದೀ     || ೧ ||

ರಾಗ ಕಾಂಬೋಧಿ, ಆದಿತಾಳ

ಅದರಾಲಿಸಯ್ಯಾಧೊರೆಯೆ | ಮೋದದಿಂದನಿನ್ನೊಳೀರ್ಪ |
ಸಾಧುಧರ್ಮಗುಣವಾಭೇಗಾ | ಹ್ಲಾದದಿಂದಕೊಡು ಕೊಡೆನಗೇ   || ೧ ||

ರಾಗ ಕೇತಾರಗೌಳ, ಅಷ್ಟತಾಳ

ಧನಧಾನ್ಯಕನಕಕ್ಷೇತ್ರವಸ್ತ್ರಾದಿಗ | ಳನು ಯಾಚಿಪರುದ್ವಿಜರೂ |
ಗುಣವಾನ್ಯಾಚಿಸಲೇನುಕಾರಣನಿಮ್ಮಯ | ಮನಕಿದುವಿಹಿತವಾಯ್ತೆ        || ೧ ||

ರಾಗ ಕಾಂಬೋದಿ ಆದಿತಾಳ

ಯಾತಕೀವಿಚಾರಾನಿನಗೇ | ಪ್ರೀತಿಯಾದರೀಗಾಲೆನ್ನಾ |
ಮಾತಿನಂತೇ ಧರ್ಮಾಗುಣವಾ | ಭೂತಳೇಶಕರುಣೀಸುವದೂ  || ೧ ||

ರಾಗ ಕೇತಾರಗೌಳ, ಅಷ್ಟತಾಳ

ಧೃಡದಿಭೂಸುರಗಿತ್ತವಚನ ತಪ್ಪುವದುಂಟೇ | ಕೊಡುವೆಸದ್ಧರ್ಮವೆಂದು |
ಮಡದಿವಿಂಧ್ಯಾವಳಿಯೊಳುಪೇಳ್ದ ಜಲವನ್ನು | ಕಡುವೇಗತಾರೆನುತಾ     || ೧ ||

ರಾಗ ಪಂತುವರಾಳಿ, ಏಕತಾಳ
(ಕಂತೂ ಪಿತನ ಕರೆಯೋ ಎಂಬಂತೆ)

ಕೊಡುವೇಯಾಧರ‍್ಮವನ್ನು | ಮತ್ಕಾಂತನೆ | ಪಡದೀಪರತ್ನವನ್ನು    || ಪಲ್ಲ ||
ಪಡವಿಯೊಳಗೆ ಜ್ಯೋತಿ | ಯಂತೇರಂಜಿಸಿ ಮುಂದೇ |
ಕೊಡು ವಾ ಸದ್ಗತಿಗಳನ್ನು | ಕೆಡಿಸಿಕೊಂಬೆ   || ಅನುಪಲ್ಲ ||

ಓದಿಹೆನೃಪನೀತಿಯಾ | ಮತ್ತದರೊಳ | ಗಾದಿಯೊಳಿಹಭೋಧೆಯಾ |
ಮೇದಿನಿಪಾಲಕಕೊಡಲಿದರೊಳುಕಷ್ಟ |  ಸಾಧಿಸಿಬರುತಿಹುದೂ |
ನಿನಗೆಮತ್ತೆ | ಭಾದಕವಾಗುವದೂ   || ೧ ||

ಕನಕಾರತ್ನಗಳಲ್ಲದೇ | ಗೋಭೂದಾನ | ಮನೆಗ್ರಾಮಗಳ ಕೇಳದೇ
ಗುಣವಾನ್ಯಾಚಿಸಿದ ಬ್ರಾಹ್ಮಣನಾನಂಬವದುಂಟೇ | ಯನುಮಾನತೋರುತಿದೇ |
ಭಾಷೆಗೆತಪ್ಪ | ಲನುಮಾನವಿಲ್ಲಮುಂದೇ      || ೨ ||

ವಾರ್ಧಿಕ

ವರಮನೋಹರೆಲಾಲಿಸೇನಾದಡೀದಿನಂ | ಪರಮವಿಪ್ರೋತ್ತುಮಗೆ ಕೊಟ್ಟ ಭಾಷೆಯನುಳಿದು |
ಮರೆಮಾಚಲೀಧರಣೀ | ಹೊರಳು ಶ್ರೀಹರಮನಕೆ | ಕೊರತೆಯಪ್ಪುದುಯನ್ನುತಾ ||
ಪರಮತುಲಸೀದಳವ ಪಿಡಿದು ಭೂವರನಾಗ | ತರುಣಿಯಳಕರದಿಂದ ಜಲವೆರಸಿ ತನ್ನೊಳಿಹ |
ಪರಮಸದ್ಧರ್ಮಪರಮಾತ್ಮಗರ್ಪಿತವೆನುತ ಭೂಸುರೋತ್ತಮಗಿತ್ತನೂ     || ೧ ||

ಥಳಥಳಿಪದಿವ್ಯಪೀತಾಂಬರವನಳವಟ್ಟು | ಘಲಿರುಘಲಿರೆಂತೆಂಬ ಕಿರುಗೆಜ್ಜೆನಾದದಿಂ |
ದಿಳೆಯರಸನಂಗದಿಂ ಪೊರಮಟ್ಟುಪೋಗುತಿಹ ಚಲುವೆಯಳಕರವಿಡಿಯುತಾ ||
ಲಲಿತೆನೀನೆನ್ನತ್ವರದೆಲ್ಲಿಪೋಗುವೆಮಾತೆ | ಕಲಹಂಸಗಮನೆನೀಬಾರೆಂದು ಧರಣಿಪತಿ |
ನಳಿನಾಕ್ಷಿಯಳಕರವಪಿಡಿದು ನಿಲ್ಲಿಸಲಾಗ ಲತಿವಿರಾಗದೊಳಂದಳೂ      || ೨ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ನೆಲಸೆನಾ ಸೌಭಾಗ್ಯಲಕ್ಷ್ಮಿಯು | ಚಲಿಸುವೆನು ಸದ್ಧರ್ಮದೊಂದಿಗೆ |
ಚಲುವತೇಜವುಕೀರ್ತಿಭೋಗಗಳ್ತೊರೆಯರೆನ್ನಾ         || ೧ ||

ಅರಿಯದೇನಿನ್ನರಿಯುಸುರಪಗೆ | ಪರಮಧರ್ಮವನಿತ್ತಕಾರಣ |
ತ್ವರೆಯಲಾರೆವು ಜೇಷ್ಟಗುಣವನು | ಪೋಪೆವೀಗಾ      || ೨ ||

ಕರವಬಿಡುನಾಪೋಪೆನೆನ್ನುತ | ಪರಮಭಾಗ್ಯದಲಕ್ಷ್ಮಿಪೊರಡಲು |
ತೆರಳೆಕೀರ್ತಿಯು ತೇಜಜೊತೆಯೆಲಿಸುರಪನೆಡೆಗೆ      || ೩ ||