ವಾಲಚಂದ್ ಹೀರಾಚಂದ್

ಭಾರತದ ಪ್ರಖ್ಯಾತ ಕೈಗಾರಿಕೋದ್ಯ ಮಿಗಳು, ಆಧುನಿಕ ಭಾರತದ ಶಿಲ್ಪಿಗಳಲ್ಲಿ ಒಬ್ಬರು. ಭಾರತದಲ್ಲಿ ಹಡಗುಗಳು, ವಿಮಾನಗಳು, ಕಾರುಗಳು ತಯಾರಾಗುವುದು ಸಾಧ್ಯವಾದದ್ದು ಇವರ ಸಾಹಸದಿಂದ. ಭಾರತ ಸರ್ಕಾರವೇ ವಿರೋಧಿಸಿದರೂ ದೇಶದ ಹಿತದೃಷ್ಟಿಯಿಂದ ಮುನ್ನಡೆದು ಯಶಸ್ವಿಯಾದ ಧೀರರು.

ವಾಲಚಂದ್ ಹೀರಾಚಂದ್

೧೯೪೧ನೇ ಇಸವಿ ಮೇ ತಿಂಗಳ ಒಂದು ಸಂಜೆ ಒಬ್ಬ ಹಿರಿಯರೂ, ಒಬ್ಬ ಯುವಕನೂ ನಡೆದುಕೊಂಡು ಹೋಗುತ್ತಿದ್ದರು. ಮಾತುಕತೆಯ ಮಧ್ಯೆ ಯುವಕ, ‘‘ಸ್ವಾಮಿ ನಿಮಗೆ ವಯಸ್ಸೆಷ್ಟು?’’ ಎಂದು ಕೇಳಿದ. ಆಗ ಅವರು ನಗುತ್ತ, ‘‘ಏಕೆ ಈ ಪ್ರಶ್ನೆ, ಮುದುಕನಂತೆ ಕಾಣುತ್ತಿದ್ದೀನಾ?’’ ಎಂದು ಹೇಳುತ್ತ ಧ್ವನಿ ಏರಿಸಿ, ‘‘ಒಂದು ವಿಷಯ ಜ್ಞಾಪಕದಲ್ಲಿರಲಿ; ಭಾರತದಲ್ಲಿ ಹಡಗು, ವಿಮಾನ ಮತ್ತು ಕಾರು ತಯಾರಾಗುವುದನ್ನು ನೋಡುವವರೆಗೆ ನನ್ನನ್ನು ಓಂಕಾರೇಶ್ವರಕ್ಕೆ (ಪೂನದ ಸ್ಮಶಾನ) ಹೊತ್ತುಕೊಂಡು ಹೋಗಲು ಬಿಡುವುದಿಲ್ಲ’’ ಎಂದರು. ಕೈಗಾರಿಕಾ ಭಾರತದ ಭವ್ಯ ಕನಸು ಕಾಣುತ್ತಿದ್ದ, ಕನಸು ನನಸಾಗುವಂತೆ ದುಡಿಯುತ್ತಿದ್ದ ಪ್ರಸಿದ್ಧ ವಾಣಿಜ್ಯೋದ್ಯಮಿ ವಾಲಚಂದ್ ಹೀರಾಚಂದರೇ ಈ ಹಿರಿಯರು.

ವಾಲಚಂದ್ ಹೀರಾಚಂದರು ತಮ್ಮ ಇಪ್ಪತ್ತ ನಾಲ್ಕನೆಯ ವಯಸ್ಸಿನಲ್ಲೇ ಸ್ವತಂತ್ರವಾಗಿ ಕೈಗಾರಿಕೋದ್ಯಮಕ್ಕೆ ಪ್ರವೇಶಿಸಿ ಅದರಲ್ಲಿ ತಮ್ಮ ಅಚ್ಚನ್ನು ಮೂಡಿಸಲು ದುಡಿದರು. ಕೈಗಾರಿಕೆಗಳನ್ನು ಕಟ್ಟಿದರು. ಸಾವಿರಾರು ಜನರಿಗೆ ಕೆಲಸ ಒದಗಿಸಿಕೊಟ್ಟರು. ಅವರ ದೃಷ್ಟಿಯಲ್ಲಿ ಮನುಷ್ಯ ನೂರು ವರ್ಷ ಬದುಕಿದರೆ ಸಾಲದು. ಅದನ್ನು ಉಪಯುಕ್ತವಾಗಿ ಕಳೆಯಬೇಕು. ‘‘ಉಪಯೋಗಿಸ ದೆಯೇ ಇರುವ ಮನೆಗೆ ಬಾಡಿಗೆ ಕೊಡುತ್ತ ಹೋಗುವುದ ರಲ್ಲಿ ಅರ್ಥವಿಲ್ಲ’’ ಎಂಬುದು ಅವರ ಜೀವನ ಸಿದ್ಧಾಂತ. ಪ್ರತಿಕೂಲ ಸನ್ನಿವೇಶಗಳನ್ನು ಪಟ್ಟುಹಿಡಿದು ಎದುರಿಸುವ ಧೈರ್ಯ, ಸಂದೇಹಗಳನ್ನು ಹೊರದೂಡಿ ಜಯದ ಬಗ್ಗೆ ನಂಬಿಕೆಯಿಟ್ಟು ನಡೆಯುವ ಮನೋಭಾವ, ಹತಾಶೆಯನ್ನು ಮೆಟ್ಟಿ ಭರವಸೆಯಿಂದ ಮುನ್ನುಗ್ಗುವ ಕೆಚ್ಚು ಮುಂತಾದ ಗುಣಗಳು ಅವರ ಜೀವನದಲ್ಲಿ ಗೆಲುವನ್ನು ತಂದವು.

ಓದಿಗಿಂತ ಸೇವೆ ಮುಖ್ಯ

ಅವರ ತಂದೆ ಹೀರಾಚಂದರು ಸೊಲ್ಲಾಪುರದಲ್ಲಿ ನೆಲೆಸಿದ್ದರು. ಅವರದು ಧಾರ್ಮಿಕ ಪ್ರವೃತ್ತಿ. ಆದರೆ ಮೂಢನಂಬಿಕೆಗಳನ್ನು ಕಂಡರೆ ಆಗುತ್ತಿರಲಿಲ್ಲ. ತಮ್ಮ ಧರ್ಮದಲ್ಲಿ ತಲೆಹಾಕಿದ್ದ ನ್ಯೂನತೆಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸುತ್ತಿದ್ದರು. ಇಂಥ ಹುಟ್ಟು ಹೋರಾಟಗಾರರ ನಾಲ್ಕನೇ ಮಗ ವಾಲಚಂದ. ಹುಟ್ಟಿದ್ದು ಸೊಲ್ಲಾಪುರದಲ್ಲಿ ೧೮೮೨ರ ನವೆಂಬರ್ ೨೩ ರಂದು. ತಾಯಿ ರಾಜುಬಾಯಿ ಮಗ ಹುಟ್ಟಿದ ಹದಿನೈದು ದಿನಗಳಲ್ಲೆ ತೀರಿಕೊಂಡರು.

ಪುಟ್ಟ ವಾಲಚಂದ ತಂದೆಯ ಮಾರ್ಗದರ್ಶನದಲ್ಲಿ ಬೆಳೆಯುತ್ತಿದ್ದ.

ವಾಲಚಂದರ ಮೊದಲ ಗುರು ಹೀರಾಚಂದರೇ. ಹೀರಾಚಂದರಿಗೆ ಶಿಕ್ಷಣದ ಬಗ್ಗೆ ತಮ್ಮದೇ ಆದ ಕಲ್ಪನೆಗಳಿದ್ದವು. ಶಿಕ್ಷಣ ಮನಸ್ಸು ಮತ್ತು ಚಾರಿತ್ರ್ಯವನ್ನು ತಿದ್ದಿ ವ್ಯಕ್ತಿಯನ್ನು ಎತ್ತಬೇಕು. ಇಂಥ ಶಿಕ್ಷಣಕ್ಕೆ ಶಾಲೆಯ ಮಾಸ್ತರನ್ನು ಪೂರ್ತಿ ನಂಬುವುದು ಅವರಿಗಿಷ್ಟವಿರಲಿಲ್ಲ. ಆದ್ದರಿಂದ ತಾವೇ ಮಗನ ಬಗ್ಗೆ ಮುತುವರ್ಜಿ ವಹಿಸಿದರು. ಶಿಸ್ತು, ಉಚ್ಚಮಟ್ಟದ ಆಲೋಚನೆ, ಎಲ್ಲ ಜೀವಿಗಳಲ್ಲಿ ಪ್ರೀತಿ ಮತ್ತು ಸಹಾನುಭೂತಿ, ಸೇವಾ ಮನೋಭಾವ, ಧಾರ್ಮಿಕ ಮತ್ತು ಇತರ ಕೆಲಸಗಳಲ್ಲಿ ಶ್ರದ್ಧೆ ಮುಂತಾದ ಗುಣಗಳನ್ನು ತಮ್ಮ ನಡತೆಯಿಂದ ಕಲಿಸಿಕೊಟ್ಟರು. ಇವನ್ನೆಲ್ಲ ಅರಗಿಸಿಕೊಂಡ ವಾಲಚಂದರು ಧೀಮಂತ ವ್ಯಕ್ತಿಯಾದುದರಲ್ಲಿ ಆಶ್ಚರ್ಯವಿಲ್ಲ.

ವಾಲಚಂದರ ಓದು ಸೊಲ್ಲಾಪುರದಲ್ಲಿ ಪ್ರಾರಂಭವಾಗಿ ಮುಂಬಯಿಯಲ್ಲಿ ಮುಂದುವರಿಯಿತು. ಪ್ರೌಢ ಶಿಕ್ಷಣ ಪಡೆಯುತ್ತಿರುವಾಗ ನಗರದಲ್ಲಿ ಪ್ಲೇಗ್ ಹರಡಿತು. ಆಗ ಪುಣೆಯಲ್ಲಿ ಓದನ್ನು ಮುಂದವರೆಸಿದರು.

ಆಗೆಲ್ಲ ಪ್ರಕ್ಷುಬ್ಧ ದಿನಗಳು. ದಾದಾಭಾಯಿ ನವರೋಜಿ, ಜಸ್ಟಿಸ್, ರಾನಡೆ ಮುಂತಾದವರು ದೇಶದ ಬಡತನ, ವಿದೇಶಿ ವಸ್ತುಗಳು ನಮ್ಮ ಆರ್ಥಿಕ ಸ್ಥಿತಿಗೆ ಉಂಟು ಮಾಡುತ್ತಿರುವ ಹಾನಿ ಮುಂತಾದವುಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು, ಉಪನ್ಯಾಸಗಳನ್ನು ಕೊಡುತ್ತಿದ್ದರು. ಇವು ವಾಲಚಂದರ ಮನಸ್ಸಿನ ಮೇಲೆ ಪ್ರಭಾವ ಬೀರಿದವು.

೧೯೦೩ರ ಕೊನೆಯ ಭಾಗ. ಕೊನೆಯ ವರ್ಷದ ಬಿ.ಎ. ಪರೀಕ್ಷೆಗೆ ಕೆಲವೇ ವಾರಗಳಿವೆ. ಆಗ ಇಬ್ಬರು ಅಣ್ಣಂದಿರು ಪ್ಲೇಗಿಗೆ ಆಹುತಿಯಾದರು. ಅತ್ತಿಗೆ ಮರಣೋನ್ಮುಖ ಳಾಗಿದ್ದಳು. ಯಾರು ಎಷ್ಟೇ ಹೇಳಿದರೂ ಕೇಳದೆ ವಾಲಚಂದರು ಪ್ಲೇಗು ಪೀಡಿತ ಮನೆಗೆ ಹೋಗಿ ರೋಗಗ್ರಸ್ತರ ಸೇವೆ ಮಾಡಿದರು. ಆದರೂ ಇವರ ಪ್ರಯತ್ನ ಫಲಿಸಲಿಲ್ಲ. ಅತ್ತಿಗೆ ಉಳಿಯಲಿಲ್ಲ. ಈ ದುಃಖ ಪರಂಪರೆಯನ್ನು ತಡೆದುಕೊಳ್ಳುವುದು ತಂದೆ ಹೀರಾ ಚಂದರಿಗೆ ಕಷ್ಟವಾಯಿತು. ಅವರು ತುಂಬ ಕುಗ್ಗಿ ಹೋದರು. ಇದನ್ನೆಲ್ಲ ನೋಡಿ ವಾಲಚಂದರು ಪದವೀಧರರಾಗುವ ಆಸೆಯನ್ನು ಕೈಬಿಟ್ಟರು. ಓದಿಗಿಂತ ತಂದೆಗೆ ಬೆಂಬಲವಾಗಿ ನಿಲ್ಲುವುದು ಮಗನ ಮೊದಲ ಕರ್ತವ್ಯವೆಂದು ಭಾವಿಸಿದರು.

ನೀರಿಗಿಳಿದೇ ಈಜು ಕಲಿಯಬೇಕು

ವ್ಯಾಪಾರಕ್ಕೆ ಕೈ ಹಾಕುವುದು ವಾಲಚಂದರ ಅಪೇಕ್ಷೆ. ತಂದೆ ಇದಕ್ಕೆ ತಮ್ಮ ಒಪ್ಪಿಗೆಯನ್ನಿತ್ತರು.

ಆಗ ವಾಲಚಂದರು ಜೋಳದ ವ್ಯಾಪಾರಕ್ಕೆ ಕೈಹಾಕಿದರು. ಅದರಲ್ಲಿ ನಷ್ಟವಾಯಿತು. ಅದೇ ವರ್ಷ ಸೊಲ್ಲಾಪುರದಲ್ಲಿ ಹತ್ತಿ ವ್ಯಾಪಾರ ಮಾಡುವ ಆಸೆ ಹುಟ್ಟಿತು. ವಾಲಚಂದರು ಆ ವ್ಯಾಪಾರಕ್ಕೆ ಕೈ ಹಾಕೇ ಹಾಕಿದರು. ಆದರೆ ಇದರಲ್ಲೂ ಕೈ ಸುಟ್ಟುಕೊಂಡರು. ಮಗನ ಸ್ವತಂತ್ರ ಪ್ರಯತ್ನಗಳು ಹೀಗೆ ವಿಫಲವಾಗುತ್ತಿರುವುದನ್ನು ಕಂಡು ತಂದೆಗೆ ಚಿಂತೆಯಾಯಿತು. ಅನುಭವದ ಕೊರತೆ ಇದಕ್ಕೆ  ಕಾರಣವೆಂದು ಬಗೆದು ತಮ್ಮ ಕಚೇರಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿಕೊಳ್ಳುವಂತೆ ತಿಳಿಸಿದರು. ವಾಲಚಂದರು ಹೀಗೆಯೇ ಮಾಡಿದರು. ಆದರೆ ಸ್ವಲ್ಪ ದಿನಗಳಲ್ಲೇ ಇದರಲ್ಲಿ ಅವರ ಆಸಕ್ತಿ ಕುಂದಿತು. ‘‘ಭಾರತೀಯರಿಗೆ ಪಾರಮಾರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಂಪದವನ್ನು ಉಂಟು ಮಾಡಲು ಕೈಗಾರಿಕೀಕರಣಕ್ಕೆ ಸಾಟಿಯಾದದ್ದು ಬೇರೆಯಿಲ್ಲ’’ ಎಂಬ ಜಸ್ಟಿಸ್ ಮಾಧವರಾವ್ ರಾನಡೆ ಅವರ ಮಾತುಗಳು ಯಾವಾಗಲೂ ವಾಲಚಂದರ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದ್ದವು. ಆದರೆ ಏನು ಮಾಡಬೇಕೆಂಬ ಸ್ಪಷ್ಟ ಕಲ್ಪನೆ ಇರಲಿಲ್ಲ.

ಈ ನಡುವೆ ಸೌದೆ ವ್ಯಾಪಾರಿಯೊಬ್ಬನೊಡನೆ ಪಾಲುದಾರರಾದರು. ಸ್ವಲ್ಪ ಹಣ ಬಂದಿತು. ಇದರಿಂದ ಆತ್ಮ ವಿಶ್ವಾಸವೂ ಬಂದಿತು.

ಇದಾದ ಸ್ವಲ್ಪ ದಿನಗಳಲ್ಲೇ ಲಕ್ಷ್ಮಣರಾವ್ ಬಲವಂತ ಪಾಠಕ್ ಎಂಬ ವ್ಯಕ್ತಿಯ ಪರಿಚಯವಾಯಿತು. ಆತ ರೈಲ್ವೆಯಲ್ಲಿ ಸಾಮಾನ್ಯ ಗುಮಾಸ್ತನಾಗಿದ್ದ. ಆತ ವ್ಯವಹಾರದಲ್ಲಿ ಪಳಗಿದವನು ಮತ್ತು ಬಹಳ ಚುರುಕು. ಆಗ ರೈಲ್ವೆ ಇಲಾಖೆಯವರು ಯೋಚಿಸುತ್ತಿದ್ದ ರೈಲುಮಾರ್ಗ ಹಾಕಲು ಅವಕಾಶ ಗಿಟ್ಟಿಸಿಕೊಂಡರೆ ಹಣ ಮಾಡುವುದು ಸಾಧ್ಯವಿತ್ತು. ಆತನಿಗೆ ಅಧಿಕಾರಿಗಳ ಪರಿಚಯವಿತ್ತು, ಕೆಲಸದ ತಿಳಿವಳಿಕೆ ಇತ್ತು. ಆದರೆ ಬೇಕಾದ ಬಂಡವಾಳವಿರಲಿಲ್ಲ. ಹಣ ಸಹಾಯ ನೀಡಿ ವ್ಯವಹಾರದಲ್ಲಿ ಭಾಗಸ್ಥರಾಗಲು ವಾಲಚಂದರು ಒಪ್ಪಿದರು.

ಪಾಠಕರ ಪ್ರಯತ್ನದಿಂದ ರೈಲು ಮಾರ್ಗ ನಿರ್ಮಾಣದ ಗುತ್ತಿಗೆ ಇವರಿಗೇ ಸಿಕ್ಕಿತು. ವಾಲಚಂದರು ಕೆಲಸ ನಡೆಯುವ ಸ್ಥಳಕ್ಕೆ ಹೋಗಿ ಮಳೆ ಗಾಳಿ ಎನ್ನದೆ ಅಲ್ಲಿ ನಿಂತು ಕೆಲಸ ಕಲಿತರು. ಈ ಅನುಭವ ಮುಂದಕ್ಕೆ ಅವರಿಗೆ ಪ್ರಯೋಜನವಾಯಿತು.

೧೯೦೫ರಲ್ಲಿ ಮಧ್ಯ ರೈಲ್ವೆ (ಆಗ ಜಿ.ಐ.ಪಿ. ರೈಲ್ವೆ) ಬೋರಿ ಬಂದರಿನಿಂದ ಕರ್ರೆ ರಸ್ತೆಯವರೆಗೆ ರೈಲು ಮಾರ್ಗ ಹಾಕಲು ಯೋಚಿಸಿತು. ಈ ಸ್ಥಳ ಮಟ್ಟಸವಾಗಿಲ್ಲದೆ ಹಳ್ಳ ದಿಣ್ಣೆಗಳಿಂದ ಕೂಡಿತ್ತು. ಈ ಕೆಲಸವನ್ನು ಕೈಗೊಳ್ಳಲು ತುಂಬ ಜನ ಹಿಂದೇಟು ಹಾಕಿದರು. ಆದರೆ ವಾಲಚಂದ್‌ರು ಒಪ್ಪಿಕೊಂಡು ಕೆಲಸದಲ್ಲಿ ಸಫಲರಾದರು. ಒಪ್ಪಿಕೊಂಡ ಅವಧಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆಂಬ ಹೆಸರು ಬಂತು. ರೈಲ್ವೆ ಅಧಿಕಾರಿಗಳಿಗೆ ಇವರಲ್ಲಿ ನಂಬಿಕೆ ಬಂತು.  ಆಗ ಇವರ ಪಾಲಿಗೆ ಇನ್ನೂ ಅನೇಕ ಕೆಲಸಗಳು ಬಂದವು. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು. ಹಣ ಮತ್ತು ಕೀರ್ತಿ ಎರಡೂ ಅವರ ಪಾಲಿಗೆ ಬಂದವು.

ಆಗ ಮೊದಲನೇ ಮಹಾಯುದ್ಧದ ಸಮಯ. ಕೆಲವು ಕಡೆ ತಾತ್ಕಾಲಿಕ ವಸತಿಗಾಗಿ ದಂಡಿನ ಪಾಳೆಯವನ್ನು ಕಟ್ಟಬೇಕಾಗಿತ್ತು. ಇಲ್ಲಿ ಖರ್ಚಿನ ವಿಷಯ ಮುಖ್ಯವಾಗಿರಲಿಲ್ಲ. ಆದರೆ ವೇಳೆ ಅಪವ್ಯಯವಾಗ ಬಾರದಿತ್ತು. ಹದಿನೈದು ಲಕ್ಷ ರೂಪಾಯಿಗಳ ಕೆಲಸವನ್ನು ಆರೇ ತಿಂಗಳಲ್ಲಿ ಮುಗಿಸಬೇಕಾಗಿತ್ತು. ಬಹುಮಂದಿ ಇಂಥ ಅವಸರದ ಕೆಲಸಗಳನ್ನು ಒಪ್ಪಿಕೊಂಡು ಕೈ ಸುಟ್ಟುಕೊಳ್ಳಲು ಸಿದ್ಧರಿರಲಿಲ್ಲ. ಕಂಗಾಲಾದ ಮಿಲಿಟರಿ ಅಧಿಕಾರಿಗಳು ವಾಲಚಂದರ ಸಹಾಯ ಕೋರಿದರು. ವಾಲಚಂದರು ಒಲ್ಲೆ ಎನ್ನಲಿಲ್ಲ. ಪಾದರಸದಂತೆ ಕೆಲಸ ಮಾಡಿದರು. ಸಯಾನ್ ಮತ್ತು ಮಾತುಂಗಗಳಲ್ಲಿ ಪಾಳೆಯ ಸಿದ್ಧವಾಯಿತು. ಇದಾದ ತಕ್ಷಣ ಬೆಳಗಾಂನ ಪಾಳೆಯದ ನಿರ್ಮಾಣ ಕಾರ್ಯ ಇವರ ಹೆಗಲ ಮೇಲೆ ಬಿತ್ತು.

ಬೆಳಗಾಂನಲ್ಲಿ ಇವರಿಗೆ ಯಾವ ವಸತಿ ಸೌಕರ್ಯವೂ ಇರಲಿಲ್ಲ. ರೈಲು ನಿಲ್ದಾಣದ ಕಾಯುವ ಕೊಠಡಿಯಲ್ಲಿ ಸಹ ಸ್ಥಳಾವಕಾಶವಿರಲಿಲ್ಲ. ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಅವರಿಗೆ ಹಳೆಯ ಸ್ನೇಹಿತ ದಿವಾನ್ ಬಹಾದೂರ್ ಅಣ್ಣಾಸಾಹೇಬ ಲಠ್ಠೆ ಅವರ ಜ್ಞಾಪಕ ಬಂತು. ಅವರ ಮನೆಗೆ ಹೋಗಲು ಒಂದು ಟಾಂಗಾ ಗೊತ್ತು ಮಾಡಿದರು. ಟಾಂಗಾವಾಲ ದಿನಕ್ಕೆ ಎಷ್ಟು ಸಂಪಾದಿಸುತ್ತಾನೆ, ಖರ್ಚೆಷ್ಟು, ಕುದುರೆ ಬೆಲೆ, ಟಾಂಗಾ ಬೆಲೆ ಎಲ್ಲ ವಿಚಾರಿಸಿಕೊಂಡರು. ಇದ್ದಕ್ಕಿದ್ದಂತೆಯೆ, ‘‘ಕುದುರೆ ಮತ್ತು ಟಾಂಗಾವನ್ನು ಕೊಳ್ಳಬಯಸಿದರೆ ಎಷ್ಟಕ್ಕೆ ಕೊಡುತ್ತೀಯ?’’ ಎಂದು ಕೇಳಿದರು. ಟಾಂಗಾವಾಲಾ ಇದನ್ನು ತಮಾಷೆಯೆಂದೇ ಬಗೆದ. ‘‘ಮುನ್ನೂರು ರೂಪಾಯಿ ಕೊಟ್ಟುಬಿಡಿ ಬುದ್ಧಿ’’ ಎಂದ. ವಾಲಚಂದರು, ‘‘ಒಪ್ಪಿದೆ. ಆದರೆ ನೀನು ಸಂಬಳಕ್ಕೆ ಕೆಲಸಮಾಡಬೇಕು’’ ಎಂದು ಹೇಳಿ ಅವನಿಗೆ ಹಣ ಕೊಟ್ಟರು.

ಸ್ನೇಹಿತನನ್ನು ಕಂಡು ಮಾತನಾಡಿದ ಮೇಲೆ ಕೆಲವು ಬಂಗಲೆಗಳನ್ನು ಬಾಡಿಗೆಗೆ ಗೊತ್ತು ಮಾಡುವಂತೆ ಕೇಳಿಕೊಂಡರು. ಕೆಲವೇ ಗಂಟೆಗಳಲ್ಲಿ ಬಂಗಲೆಗಳನ್ನು ಬಾಡಿಗೆಗೆ ಗೊತ್ತು ಮಾಡಲಾಯಿತು. ಅನಂತರ ಟಾಂಗಾವನ್ನು ರೈಲು ನಿಲ್ದಾಣಕ್ಕೆ ಕಳುಹಿಸಿ ಜನರನ್ನು ಬರ ಮಾಡಿಕೊಂಡರು. ಆ ದಿನದ ಸೂರ್ಯ ಮುಳುಗುವುದರೊಳಗೆ ಬೇಕಾದ ಕೆಲಸಗಾರರು, ವಾಹನಗಳು ಮತ್ತು ವಸ್ತುಗಳನ್ನು ಸೇರಿಸಿದ್ದರು. ಮಾರನೆಯ ದಿನದಿಂದಲೇ ಕೆಲಸ ಭರದಿಂದ ಸಾಗತೊಡಗಿತು. ಹೇಳಿದ ಅವಧಿಯೊಳಗೆ ಸೈನ್ಯದವರಿಗೆ ತೃಪ್ತಿಯಾಗುವ ರೀತಿಯಲ್ಲಿ ಕೆಲಸವನ್ನು ಮುಗಿಸಿಕೊಟ್ಟರು.

ಒಂದಾದಮೇಲೆ ಒಂದರಂತೆ ಕಷ್ಟದ ಕೆಲಸಗಳನ್ನು ನಿಭಾಯಿಸಿಕೊಂಡ ಮೇಲೆ ವಾಲಚಂದರಿಗೆ ಆತ್ಮವಿಶ್ವಾಸ ಹೆಚ್ಚಿತು. ಹೊಸ ಹೊಸ ಕ್ಷೇತ್ರಗಳಿಗೆ ಕಾಲಿಡಲು ಮುಂದಾದರು. ಆದರೆ ಪಾಲುದಾರರಾಗಿದ್ದ ಪಾಠಕರಿಗೆ ಇದರಿಂದ ಹೆದರಿಕೆಯಾಗುತ್ತಿತ್ತು. ಅವರು ಪಾಲುಗಾರಿಕೆಯಿಂದ ಹಿಂದೆ ಸರಿದರು. ಆಗ ವಾಲಚಂದರು ಏಕಾಂಗಿಯಾಗಿಯೇ ಮುಂದುವರಿಯಬೇಕಾಯಿತು.

ಯುದ್ಧ ಮುಗಿದ ಹೊಸದರಲ್ಲಿ ಮುಂಬಯಿ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲಾಯಿತು. ಭೂಮಿಯೊಳಗೆ ನುಗ್ಗಿದ ಸಮುದ್ರದ ನೀರನ್ನು ಹಿಂದಕ್ಕಟ್ಟಿ ಅದನ್ನು ವಾಸಯೋಗ್ಯವನ್ನಾಗಿ ಮಾಡುವ ಕಾರ್ಯಕ್ರಮ ಇದರ ಒಂದು ಅಂಗವಾಗಿತ್ತು. ಭಾರಿ ವಾಣಿಜ್ಯೋದ್ಯಮಿಗಳು ಇದರಲ್ಲಿ ಆಸಕ್ತಿ ತೋರಿಸಿದರು. ಆಗ ಕೆಲಸವನ್ನು ಗುತ್ತಿಗೆಗೆ ಕೊಡುವ ಯೋಚನೆಯನ್ನು ಸರ್ಕಾರ ಕೈ ಬಿಟ್ಟಿತು. ತನ್ನ ವತಿಯಿಂದಲೇ ಕೆಲಸ ನಿರ್ವಹಿಸಲು ಎಲ್ಲ ಕೆಲಸಗಳಿಗೂ ಇಂಗ್ಲಿಷರನ್ನೇ ನೇಮಿಸಿತು.

ಕೋಟ್ಯಂತರ ರೂಪಾಯಿ ಬಂಡವಾಳದ ಕೆಲಸವನ್ನು ಇಂಗ್ಲಿಷರಿಗೆ ವಹಿಸುವ ಸರ್ಕಾರದ ಧೋರಣೆ ವಾಲಚಂದರಿಗೆ ಹಿಡಿಸಲಿಲ್ಲ. ಲೇಖನ, ಕರಪತ್ರಗಳು, ಹೀಗೆ ಅನೇಕ ವಿಧಗಳಲ್ಲಿ ಪ್ರತಿಭಟಿಸಿದರು. ವಿರೋಧಕ್ಕೆ ಹೆದರಿ ಸರ್ಕಾರ ಭಾರತೀಯರ ಸಹಕಾರ ತೆಗೆದುಕೊಳ್ಳಲು ಒಪ್ಪಿತು. ಸರ್ಕಾರ ಪ್ರಖ್ಯಾತ ವಾಣಿಜ್ಯೋದ್ಯಮಿ ಸರ್ ದೋರಬ್ ತಾತಾರ ನೆರವು ಕೇಳಿತು. ಇದಕ್ಕಾಗಿ ಅವರು ೧೯೨೦ ರಲ್ಲಿ ‘‘ದಿ ತಾತಾ ಕನ್‌ಸ್ಟ್ರಕ್ಷನ್ ಕಂಪೆನಿ’ ಯನ್ನು ಪ್ರಾರಂಭಿಸಿದರು. ಇದರ ನಿರ್ದೇಶಕರ ಮಂಡಲಿಯಲ್ಲಿರಲು ಈ ವಿಷಯಗಳಲ್ಲಿ ನುರಿತ ವಾಲಚಂದರಿಗೆ ಆಹ್ವಾನ ಬಂತು.

ಸಮುದ್ರ ಪ್ರಯಾಣಕ್ಕೆ ತಿಮಿಂಗಲದ ಕಾಟ

ಆಗಾಗ ಪ್ರವಾಸ ಹೋಗುವುದು, ಹೊಸ ಸ್ಥಳಗಳ ಪರಿಚಯ ಮಾಡಿಕೊಳ್ಳುವುದು, ಅಲ್ಲಿನ ಕೈಗಾರಿಕೆಗಳ ಬಗ್ಗೆ ತಿಳಿಯುವುದು ವಾಲಚಂದರ ಅಭ್ಯಾಸ. ಹೀಗೊಮ್ಮೆ ಪ್ರವಾಸದಿಂದ ಮುಂಬಯಿಗೆ ಮರಳುತ್ತಿದ್ದರು. ದಾರಿಯಲ್ಲಿ ಗ್ವಾಲಿಯರ್ ನಿಲ್ದಾಣ ಸಿಕ್ಕಿತು. ಅಲ್ಲಿಳಿದು ಪುಸ್ತಕದ ಅಂಗಡಿಗೆ ಹೋಗಿ ಪತ್ರಿಕೆ ನೋಡುತ್ತಿದ್ದರು. ಅಲ್ಲಿ ಗ್ವಾಲಿಯರ್ ಮಹಾರಾಜರ ನಿಕಟ ಸಂಪರ್ಕವಿದ್ದ ವಾಟ್ಸನ್ ಎಂಬಾತ ಕಾಣಿಸಿದರು. ಏನು, ಎತ್ತ ಎಂದು ವಿಚಾರಿಸಲು ವಾಟ್ಸನ್ ‘‘ಮಹಾರಾಜರ ಬಳಿಯಿರುವ ಲಾಯಲ್ಟಿ ಎಂಬ ಹಡಗು ಮಾರಾಟಕ್ಕಿದೆ. ಇದನ್ನು ಕೊಳ್ಳುವವರಿಗೆ ಭಾರತ ಸರ್ಕಾರ ಕೆಲವು ಸವಲತ್ತುಗಳನ್ನು ಕೊಡಲು ಸಿದ್ಧವಿದೆ’’ ಎಂದರು.

‘‘ಒಳ್ಳೆಯದು, ಮಹಾರಾಜರಿಗೆ ಒಳ್ಳೆಯ ಗಿರಾಕಿಯನ್ನು ಹುಡುಕಿಕೊಡಬೇಕು’’.

‘‘ಏಕೆ, ಆಗಲೆ ಹುಡುಕಿ ಆಯಿತು. ನೀವೇ ಆ ಗಿರಾಕಿ’’ ಎಂದರು ವಾಟ್ಸನ್. ವಾಲಚಂದರು ಗಂಭೀರವಾಗಿ ಎಲ್ಲ ವಿಚಾರಗಳನ್ನು ತಿಳಿದುಕೊಂಡರು.

ಒಬ್ಬ ಭಾರತೀಯ ಹಡಗು ನಡೆಸಲು ಹೊರಡುವುದು ಅಂದಿನ ಸನ್ನಿವೇಶದಲ್ಲಿ ಗಂಡಾಂತರಕಾರಿಯಾಗಿತ್ತು. ಕಾರಣ ‘‘ಬ್ರಿಟಿಷ್ ಇಂಡಿಯ ಸ್ಟೀಮ್ ನ್ಯಾವಿಗೇಷನ್ ಕಂಪೆನಿ’ ಯೆಂಬ ಬ್ರಿಟಿಷರ ಸಂಸ್ಥೆ (ಬಿ.ಐ.) ಹಡಗು ಸಾಗಾಣಿಕೆಯಲ್ಲಿ ಏಕಸ್ವಾಮ್ಯ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಅದಕ್ಕಾಗಿ ಎಲ್ಲ ಬಗೆಯ ಅನೈತಿಕ ಆರ್ಥಿಕ ಕ್ರಮಗಳಿಂದ ಭಾರತೀಯರ ಕಂಪೆನಿಗಳನ್ನು ಮುಳುಗಿಸಿ ಬಿಡುತ್ತಿತ್ತು. ಹೀಗೆ ಎಷ್ಟೋ ಕಂಪೆನಿಗಳು ಬಿ.ಐ.ನ ದಾಳಿಗೆ ತುತ್ತಾಗಿದ್ದವು. ಇಂಥ ಪರಿಸ್ಥಿತಿಯಲ್ಲಿ ಹಡಗು ಕೊಳ್ಳುವುದು ಯೋಗ್ಯವೆ ಎಂದು ವಾಲಚಂದರು ಯೋಚಿಸಿದರು. ಆದರೆ ದೇಶದ ಹಿತದೃಷ್ಟಿಯಿಂದ ಸಮುದ್ರ ಸಾಗಾಣಿಕೆ ಕೈಗೊಳ್ಳುವ ಭಾರತೀಯರ ಹಡಗಿನ ಸಂಸ್ಥೆ ಇರುವುದು ಒಳ್ಳೆಯದು ಎಂದು ಅವರ ಒಳ ಮನಸ್ಸು ಹೇಳುತ್ತಿತ್ತು.

ಮುಂಬಯಿಯಲ್ಲಿ ಹಡಗು ನೋಡಿದ ಮೇಲೆ ಅದನ್ನು  ಕೊಳ್ಳಬೇಕೆಂಬ ನಿರ್ಧಾರ ದೃಢವಾಯಿತು. ಮುಖ್ಯಾಧಿಕಾರಿಯ ಜೊತೆ ಮಾತನಾಡಿ ಎಲ್ಲ ವಿವರಗಳನ್ನು ತಿಳಿದುಕೊಂಡರು. ಈ ಕೆಲಸದಲ್ಲಿ ಒಬ್ಬರೇ ಮುಂದುವರಿಯುವಂತೆ ಇರಲಿಲ್ಲ. ಆದ್ದರಿಂದ ಪ್ರಸಿದ್ಧ ವಾಣಿಜ್ಯೋದ್ಯಮಿ ನರೋತ್ತಮ ಮೊರಾರ್ಜಿಯವರ ಸಹಕಾರ ಪಡೆದರು. ೧೯೧೯ರ ಮಾರ್ಚ್ ೨೭ರಂದು ‘‘ದಿ ಸಿಂಧ್ಯ ಸ್ಟೀಮ್ ನ್ಯಾವಿಗೇಷನ್ ಕಂಪೆನಿ’’ ಪ್ರಾರಂಭವಾಯಿತು.

ಲಾಯಲ್ಟಿ ಯುದ್ಧಗಾಯಾಳುಗಳಿಗೆ ಚಿಕಿತ್ಸೆ ನಡೆಸುವ ಆಸ್ಪತ್ರೆ ಹಡಗಾಗಿತ್ತು. ಪ್ರಯಾಣಿಕರನ್ನು ಒಯ್ಯಲು ಉಪಯೋಗಿಸುವಂತಿರಲಿಲ್ಲ. ದುರಸ್ತಿಗೆ ಆರು ತಿಂಗಳಾದರೂ ಬೇಕೆಂದೂ, ಹತ್ತು ಲಕ್ಷ ರೂಪಾಯಿ ಖರ್ಚಾಗುವುದೆಂದೂ ತಿಳಿಯಿತು. ಆದರೆ ಇಂಗ್ಲೆಂಡಿನಲ್ಲಿ ಕಡಿಮೆ ಖರ್ಚಿನಲ್ಲಿ ಹಾಗೂ ಶೀಘ್ರವಾಗಿ ದುರಸ್ತಿ ಸಾಧ್ಯವೆಂದು ಗೊತ್ತಾಯಿತು. ಆಗ ಕನಿಷ್ಠ ದುರಸ್ತಿಯನ್ನು ಮಾಡಿ ಹಡಗನ್ನು ಪ್ರಯಾಣಕ್ಕೆ ಸಿದ್ಧಗೊಳಿಸಿದರು. ೧೯೧೯ರ ಏಪ್ರಿಲ್ ೫ ರಂದು ಮಹಾತ್ಮ ಗಾಂಧಿಯವರ ಹರಕೆ ಪಡೆದು ವಾಲಚಂದರು ತಮ್ಮ ಹಡಗಿನಲ್ಲೇ ಇಂಗ್ಲೆಂಡಿಗೆ ಹೊರಟರು. ಇದು ಭಾರತದಿಂದ ಇಂಗ್ಲೆಂಡಿಗೆ ಹೊರಟ ಪ್ರಥಮ ಭಾರತೀಯ ಹಡಗು.

ಇಂಗ್ಲೆಂಡನ್ನು ಸೇರಿದಾಗ ಅಲ್ಲಿ ಅನೇಕ ತೊಂದರೆಗಳು ಕಾದಿದ್ದವು. ಬಿ.ಐ. ನ ಮುಖ್ಯಸ್ಥ ಸರ್ ಜೇಮ್ಸ್ ಮೆಕೆ ತನಗೆ ಪ್ರತಿಸ್ಪರ್ಧಿಯಾದ ಸಿಂಧ್ಯ ಕಂಪೆನಿಯ ಮೇಲೆ ಹದ್ದಿನ ದೃಷ್ಟಿಯಿಟ್ಟಿದ್ದ. ಅದಕ್ಕೆ ಯಾರೂ ಸಹಾಯ ಮಾಡಬಾರದೆಂದು ತಾಕೀತು ಮಾಡಿದ್ದ. ಇದರಿಂದ ‘ಲಾಯಲ್ಟಿ’ ಯನ್ನು ದುರಸ್ತಿ ಮಾಡಲು ಎಲ್ಲರೂ ಹಿಂದೇಟು ಹಾಕಿದರು.

ಎಲ್ಲೆಲ್ಲೂ ಕತ್ತಲು ತುಂಬಿದ್ದ ಇಂಥ ಸಂದರ್ಭದಲ್ಲಿ ಕೆನೆಡಿಯ ರೂಪದಲ್ಲಿ ವಾಲಚಂದರಿಗೆ ಬೆಳಕು ಕಾಣಿಸಿತು. ಕೆನೆಡಿ ಹಿಂದೆ ಜೇಮ್ಸ್ ಮೆಕೆಯ ಸಹೋದ್ಯೋಗಿಯಾಗಿದ್ದಾತ. ಅವರಿಬ್ಬರಿಗೂ ಕೆಲವು ಕಾರಣಗಳಿಂದ ಬದ್ಧದ್ವೇಷ. ಹೀಗಾಗಿ ಆತ ವಾಲಚಂದರ ಸಹಾಯಕ್ಕೆ ಬಂದ. ನಿರೀಕ್ಷೆಗಿಂತ ಹಣ ಮತ್ತು ದುರಸ್ತಿಯ ಕಾಲಾವಧಿ ಹೆಚ್ಚಾದರೂ ‘ಲಾಯಲ್ಟಿ’ ಪ್ರಯಾಣಿಕರನ್ನು ಕೊಂಡೊಯ್ಯಲು ಸಿದ್ಧವಾಯಿತು. ಇದನ್ನು ಕಂಡು ಜೇಮ್ಸ್ ಮೆಕೆಯ ಕಣ್ಣು ಕೆಂಪಗಾಯಿತು. ಅವನಿಂದ ಆದ ತೊಂದರೆಗಳು ಒಂದೆರಡಲ್ಲ. ಆದರೆ ವಾಲಚಂದರು ಧೈರ್ಯದಿಂದ, ಆಲೋಚನೆಯಿಂದ ಎಲ್ಲವನ್ನೂ ನಿವಾರಿಸಿಕೊಂಡರು.

ಆದರೆ ಭಾರತದಿಂದ ಇಂಗ್ಲೆಂಡಿಗೆ ಪ್ರಯಾಣಿಕರನ್ನು ಕೊಂಡೊಯ್ಯುವುದು ಅಷ್ಟು ಲಾಭದಾಯಕವಾಗಿರಲಿಲ್ಲ. ಆದ್ದರಿಂದ ವಾಲಚಂದರು ಸರಕು ಸಾಗಾಣಿಕೆಯನ್ನು ಕೈಗೊಳ್ಳಲು ನಿಶ್ಚಯಿಸಿದರು. ಆದರೆ ಇದಕ್ಕೆ ಪುನಃ ಜೇಮ್ಸ್ ಮೆಕೆಯ ಉಪಟಳ ಅಡ್ಡಿ ಬಂತು. ಇದನ್ನು ನಿವಾರಿಸಿಕೊಳ್ಳಲು ಮುಂಬಯಿ ಮತ್ತು ರಂಗೂನುಗಳ ನಡುವೆ ಹಡಗುಗಳನ್ನು ನಡೆಸಲು ನಿಶ್ಚಯಿಸಿದರು. ರಂಗೂನಿನಲ್ಲಿ ಅಕ್ಕಿಯ ವ್ಯಾಪಾರ ಸಂಪೂರ್ಣವಾಗಿ ಭಾರತೀಯರ ಕೈಯಲ್ಲಿದ್ದುದರಿಂದ ಅವರ ನೆರವು ಪಡೆಯಬಹುದೆಂದು ವಾಲಚಂದರ ಎಣಿಕೆ. ಅವರಲ್ಲನೇಕರು ಸಹಾಯ ಹಸ್ತವನ್ನೂ ನೀಡಿದರು. ಆದರೆ ಇದರಿಂದ ಹಡಗು ತುಂಬುವಷ್ಟು ಸರಕು ಸಂಗ್ರಹವಾಗಲಿಲ್ಲ. ಇಷ್ಟು ಸಾಲದೆಂಬಂತೆ ಗಾಯದ ಮೇಲೆ ಉಪ್ಪು ಸವರಿದ ಹಾಗೆ ಜೇಮ್ಸ್ ಮೆಕೆಯ ಕಂಪೆನಿ ಸಾಗಾಣಿಕೆ ದರವನ್ನು ಒಂದು ಟನ್ ಅಕ್ಕಿಗೆ ೧೮ ರೂಪಾಯಿ ಇದ್ದುದನ್ನು ಆರು ರೂಪಾಯಿಗೆ ಇಳಿಸಿತು. ಈ ಹೊಸ ಹೊಡೆತವನ್ನು ತಡೆದುಕೊಳ್ಳಲು ವಾಲಚಂದರು ತಾವೇ ಅಕ್ಕಿಯನ್ನು ಕೊಂಡು ಹಡಗುಗಳಲ್ಲಿ ತುಂಬಿಸಿ ತಂದು ಮುಂಬಯಿಯಲ್ಲಿ ವ್ಯಾಪಾರ ಮಾಡಬೇಕಾಯಿತು.

ಪ್ರತಿಬಾರಿಯೂ ಈ ರೀತಿಯ ಹೊಡೆತಗಳನ್ನು ತಡೆದುಕೊಳ್ಳುವುದು ಕಷ್ಟ. ಅದಕ್ಕಾಗಿ ಬಿ.ಐ ಕಡೆಗಣಿಸಿದ್ದ ಭಾವನಗರ, ಮರ್ಮಗೋವ ಮುಂತಾದ ರೇವುಗಳಿಗೆ ಸಿಂಧ್ಯ ಕಂಪೆನಿ ತನ್ನ ಜಾಲ ಹರಡಿತು. ಅಕ್ಕಿಯ ಜೊತೆಗೆ ಸಕ್ಕರೆಯ ಸಾಗಾಣಿಕೆಯನ್ನು ಪ್ರಾರಂಭಿಸಿತು. ಸರ್ಕಾರದ ಬೆಂಬಲವಿದ್ದ ಬಿ.ಐ. ಹೊಸ ಆಟಗಳನ್ನಾಡಲು ಸಿದ್ಧವಾಯಿತು. ಹಣ ಹೂಡಿದವರಿಗೆ ಲಾಭ ಬರುವಂತೆ ಸಿಂಧ್ಯ ಕಂಪೆನಿಯನ್ನು ಕೊಳ್ಳುವುದಾಗಿ ಜೇಮ್ಸ್ ಮೆಕೆ ಹೇಳಿ ಕಳುಹಿಸಿದ. ಕಂಪೆನಿಯ ಅನೇಕ ಸದಸ್ಯರಿಗೆ ಈ ನಷ್ಟದ ವ್ಯವಹಾರವನ್ನು ಸಾಗಹಾಕಿ ಕೈ ತೊಳೆದುಕೊಳ್ಳುವುದು ಒಳ್ಳೆಯದು ಎನ್ನಿಸಿತ್ತು. ಆದರೆ ಇದಕ್ಕೆ ವಾಲಚಂದರು ಅಡ್ಡ ಬಂದರು. ‘‘ನಮಗೆ ಲಾಭ ಬರುವಂತೆ ಕೊಳ್ಳಲು ಮೆಕೆ ಏನೂ ಮೂರ್ಖನಲ್ಲ. ಈ ರಂಗದಿಂದ ಭಾರತೀಯರು ಕಾಲ್ತೆಗೆಯಬೇಕೆಂದೇ ಆತನ ಹಂಚಿಕೆ’’ ಎಂದು ಮನದಟ್ಟು ಮಾಡಿಸಿದರು. ಸದಸ್ಯರು ಸಹ ಇವರ ವಾದದಲ್ಲಿದ್ದ ಸತ್ಯವನ್ನು ಮನಗಂಡರು. ಇವರು ಜಗ್ಗುವವರಲ್ಲ ಎಂದು ಮನದಟ್ಟಾದ ಕೂಡಲೆ ಮೆಕೆ ಒಪ್ಪಂದಕ್ಕೆ ಸಿದ್ಧನಾದ. ಹೆಚ್ಚುಕಾಲ ಪೈಪೋಟಿಯನ್ನು ಎದುರಿಸುವುದು ಸಾಧ್ಯವಿಲ್ಲದುದರಿಂದ ನಿರ್ಬಂಧವುಳ್ಳ ಆ ಒಪ್ಪಂದಕ್ಕೆ ಸಿಂಧ್ಯ ಕಂಪೆನಿ ಒಪ್ಪಬೇಕಾಯಿತು.

ಸರ್ಕಾರದ ನಿರ್ಲಕ್ಷ್ಯ ಒಂದು ಕಡೆ, ವಿದೇಶೀಯ ಕಂಪೆನಿಗಳ ಒತ್ತಡ ಇನ್ನೊಂದು ಕಡೆ. ಹೀಗೆ ಭಾರತದ ವಾಣಿಜ್ಯ ರಂಗ ಅಡಕತ್ತರಿಯ ನಡುವೆ ಸಿಕ್ಕಿಕೊಂಡ ಅಡಕೆಯಂತಾಗಿತ್ತು. ಒಂಟೊಂಟಿಯಾಗಿ ಹೋರಾಡುತ್ತಿದ್ದುದರಿಂದ ಇವರ ಕೂಗು ಯಾರಿಗೂ ಕೇಳುತ್ತಿರಲಿಲ್ಲ. ಇದನ್ನು ಸರಿಪಡಿಸಲು ೧೯೩೦ ರಲ್ಲಿ ಭಾರತದ ‘ರಾಷ್ಟ್ರೀಯ ಹಬೆ ಹಡಗು ಒಡೆಯರ ಸಂಘ’ (ದಿ ಇಂಡಿಯನ್ ನ್ಯಾಷನಲ್ ಸ್ಟೀಮ್‌ಷಿಪ್ ಓನರ‍್ಸ್ ಅಸೋಸಿಯೇಷನ್) ಪ್ರಾರಂಭವಾಯಿತು. ಇದರಿಂದ ಇವರ ಮಾತಿಗೆ ಬೆಲೆ ಬರುವಂತಾಯಿತು.

ಜಲಗಂಡಗಳು

ನೀರಿನ ಸಾಗಾಣಿಕೆ ಪ್ರಗತಿ ಸಾಧಿಸಲು ಹಡಗು ಕಟ್ಟುವ ಮತ್ತು ದುರಸ್ತಿ ಮಾಡುವ ವ್ಯವಸ್ಥೆಯಿರಬೇಕು. ಇದನ್ನು ಮನಗಂಡು ವಾಲಚಂದರು ೧೯೩೯ ರಲ್ಲಿ ಈ ಬಗ್ಗೆ ಭಾರತ ಸರ್ಕಾರದೊಂದಿಗೆ ವ್ಯವಹರಿಸಿದರು. ಹೂಗ್ಲಿ ನದಿಯ ದಂಡೆಯಲ್ಲಿ ಇದಕ್ಕಾಗಿ ಸ್ಥಳಾವಕಾಶ ಮಾಡಿಕೊಡುವಂತೆ ಕೇಳಿದ ಮನವಿಗೆ ಬೆಲೆ ಬರಲಿಲ್ಲ. ವಾಲಚಂದರು ಪಟ್ಟು ಬಿಡಲಿಲ್ಲ. ಸೂಕ್ತ ಸ್ಥಳಕ್ಕಾಗಿ ಹುಡುಕಾಟ ಮುಂದುವರೆಸಿದರು. ವಿಶಾಖಪಟ್ಟಣದಲ್ಲಿ ಸೂಕ್ತ ಸ್ಥಳ ದೊರಕಿತು. ಆದರೆ ಬೇಕಾದ ಯಂತ್ರೋಪಕರಣಗಳನ್ನು ಹೊರಗಿನಿಂದ ತರಿಸಲು ಸರ್ಕಾರದಿಂದ ಅಡಚಣೆಯಾಯಿತು. ಇದೇ ಬ್ರಿಟಿಷರು ಇತರ ವಸಾಹತುಗಳಾದ ಆಸ್ಟ್ರೇಲಿಯ ಮತ್ತು ಕೆನಡಾಗಳಲ್ಲಿ ಹಡಗು ನಿರ್ಮಿಸುವ ಉದ್ಯಮಕ್ಕೆ ಎಲ್ಲ ಬಗೆಯ ಸಹಾಯವನ್ನು ನೀಡಿದರು. ತಮಾಷೆಯೆಂದರೆ ಭಾರತ ಸರ್ಕಾರದ ಪ್ರೋತ್ಸಾಹವೂ ಇದಕ್ಕಿತ್ತು. ಆದರೆ ಒಂದಲ್ಲ ಒಂದು ನೆಪವೊಡ್ಡಿ ಭಾರತದಲ್ಲಿ ಈ ನಿರ್ಮಾಣಕ್ಕೆ ಅಡ್ಡಿ ತರುತ್ತಿತ್ತು.

ಸರ್ಕಾರದ ಸಹಾಯ ಸಿಗಲಿ ಬಿಡಲಿ, ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಾಲಚಂದರು ನಿರ್ಧರಿಸಿದ್ದರು. ವಿಶಾಖಪಟ್ಟಣಕ್ಕೆ ಹೋಗಿ ಅಲ್ಲಿನ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ತಮ್ಮ ಉದ್ದೇಶವನ್ನು ತಿಳಿಸಿದರು. ಅಲ್ಲಿನ ಜನರೂ ಉತ್ಸಾಹ ತೋರಿಸಿದರು. ಹಡಗು ತಯಾರಿಸುವ ಕಂಪೆನಿಯ ಕಚೇರಿ ೧೯೪೦ ರ ನವೆಂಬರ್ ೪ ರಂದು ಪ್ರಾರಂಭವಾಯಿತು. ೧೯೪೧ ರ ಜೂನ್ ೨೧ ರಂದು ಬಾಬು ರಾಜೇಂದ್ರ ಪ್ರಸಾದರು ಶಂಕುಸ್ಥಾಪನೆ ಮಾಡಿದರು. ಈ ಕಾರ್ಯಕ್ರಮಗಳಿಗೆ ಸುಮಾರು ನಾಲ್ಕು ಸಾವಿರ ಜನರಿಗೆ ಆಹ್ವಾನ ಹೋಗಿತ್ತು. ಆದರೆ ಯಾವ ವಿದೇಶೀಯನನ್ನೂ ಕರೆಯಬಾರದೆಂದು ವಾಲಚಂದರು ಸೂಚನೆ ನೀಡಿದ್ದರು. ಸರ್ಕಾರ ರಾಷ್ಟ್ರೀಯ ನಾಯಕರ ಮತ್ತು ಉದ್ಯಮಗಳ ಬಗ್ಗೆ ತೋರುತ್ತಿದ್ದ ನಿರ್ಲಕ್ಷ್ಯದಿಂದ ರೋಸಿ ಹೋಗಿ ವಾಲಚಂದರು ಈ ನಿರ್ಧಾರಕ್ಕೆ ಬಂದಿದ್ದರು.

ನೌಕಾ ನಿರ್ಮಾಣದ ಕಂಪೆನಿ ಪ್ರಾರಂಭವಾಯಿತು ಎನ್ನುವಷ್ಟರಲ್ಲಿ ಹೊಸ ತೊಂದರೆಗಳು ಕಾಣಿಸಿಕೊಂಡವು. ಜಪಾನೀ ವಿಮಾನಗಳು ವಿಶಾಖಪಟ್ಟಣದ ಮೇಲೆ ಬಾಂಬುಗಳ ಸುರಿಮಳೆ ಸುರಿಸಿದವು. ಕೆಲಸಗಾರರು ಎಲ್ಲೆಂದರಲ್ಲಿ ಓಡತೊಡಗಿದರು. ‘‘ಯಂತ್ರಗಳು, ದಾಸ್ತಾನು ಮತ್ತು ಕೆಲಸಗಾರರನ್ನು ತಕ್ಷಣ ಮುಂಬಯಿಗೆ ಸಾಗಿಸಿರಿ’’ ಎಂದು ಸರ್ಕಾರದಿಂದ ತುರ್ತು ಆಜ್ಞೆ ಬಂತು. ಆದರೆ ಇನ್ನೂ ಹೆಚ್ಚು ಅಪಾಯದಲ್ಲಿದ್ದ ಕಲ್ಕತ್ತದ ಇಂಗ್ಲಿಷರ ಕಾರ್ಖಾನೆಗಳನ್ನು ವರ್ಗಾವಣೆ ಮಾಡಲು ಸರ್ಕಾರ ಕೇಳಲಿಲ್ಲ. ಹಡಗು ಕಟ್ಟುವ ಕೆಲಸ ನಿಲ್ಲಿಸುವಂತೆ ತಿಳಿಸಲಿಲ್ಲ. ವಾಲಚಂದರು ಈ ಬಗ್ಗೆ ದೂರಿತ್ತರೂ ಪ್ರಯೋಜನ ವಾಗಲಿಲ್ಲ. ಸರ್ಕಾರದ ಆಜ್ಞೆಗೆ ತಲೆಬಾಗಲೇಬೇಕಾಯಿತು. ಹೀಗಾಗಿ ನೌಕಾ ನಿರ್ಮಾಣಕ್ಕೆಂದು ತರಿಸಿಕೊಂಡ ಯಂತ್ರೋಪಕರಣಗಳು ವ್ಯರ್ಥವಾದವು. ಇದಕ್ಕಾಗಿ ನೇಮಿಸಿಕೊಂಡ ತಜ್ಞರು ಕೆಲಸವಿಲ್ಲದೆ ಕೊಳೆಯಬೇಕಾಯಿತು. ಸಾಲದುದಕ್ಕೆ ಇಂಗ್ಲೆಂಡಿನಿಂದ ತರಿಸಿಕೊಂಡಿದ್ದ ಅಗಾಧ ಪ್ರಮಾಣದ ಉಕ್ಕನ್ನು ಮಿಲಿಟರಿ ಕಾರ್ಯಗಳಿಗಾಗಿ ಸರ್ಕಾರವೇ ಬಳಸಿಕೊಂಡಿತು.

೧೯೪೪ ರ ಕೊನೆಯ ವೇಳೆಗೆ ಯುದ್ಧ ಕೊನೆಗೊಂಡಿತು. ಜಪಾನು ಶರಣಾಯಿತು. ಇಂಗ್ಲೆಂಡಿನಲ್ಲಿ ಸರ್ಕಾರ ಬದಲಾಯಿತು. ಭಾರತದಲ್ಲೂ ಬದಲಾವಣೆಗಳು ಕಾಣಿಸಿಕೊಂಡವು. ಆಗ ವಾಲಚಂದರು ನೌಕಾ ನಿರ್ಮಾಣದ ಯಂತ್ರೋಪಕರಣಗಳನ್ನು ಪುನಃ ವಿಶಾಖಪಟ್ಟಣಕ್ಕೆ ಸಾಗಿಸಿದರು. ೧೯೪೮ ರ ಹೊತ್ತಿಗೆ ಎರಡು ಹಡಗುಗಳ ನಿರ್ಮಾಣ ಮುಗಿಯಿತು. ೧೯೪೮ ರ ಮಾರ್ಚ ೧೪ ರಂದು ಸಿಂಧ್ಯ ಕಂಪೆನಿ ತಯಾರಿಸಿದ ಮೊದಲ ಹಡಗು ‘ಜಲಉಷ’ವನ್ನು ತೇಲಿ ಬಿಡಲಾಯಿತು.

ಅಡೆತಡೆಗಳನ್ನು ತಳ್ಳಿ ಮೇಲೇರಿತು ವಿಮಾನ

ವಾಲಚಂದರು ಅಮೆರಿಕದಿಂದ ಹಿಂದಿರುಗುತ್ತಿದ್ದರು. ಕಾಲ ಕಳೆಯಲು ವಿಮಾನ ಕುರಿತಾದ ಲೇಖನವನ್ನು ಓದುತ್ತಿದ್ದರು. ಲೇಖಕ ಪಾಲೆ ವಿಮಾನ ತಯಾರಿಕೆಯಲ್ಲಿ ನಿಷ್ಣಾತ. ಆತನೂ ಅದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ. ಇಬ್ಬರಿಗೂ ಪರಿಚಯವಾಯಿತು. ಮಾತು ಭಾರತದಲ್ಲಿ ವಿಮಾನ ತಯಾರಿಸುವುದರತ್ತ ಹರಿಯಿತು. ‘‘ಭಾರತದಲ್ಲಿ ವಿಮಾನ ತಯಾರಿಕೆಯ ಕಂಪೆನಿಯನ್ನು ಸ್ಥಾಪಿಸುವುದೇ ಆದರೆ ಸಹಕಾರ ನೀಡುತ್ತೀರಾ?’’ ಎಂದು ವಾಲಚಂದರು ನೇರವಾಗಿ ಪ್ರಶ್ನಿಸಿದರು. ಪಾಲೆ ಇದಕ್ಕೆ ಒಪ್ಪಿದ.

ಭಾರತದ ನೆಲದಲ್ಲಿ ಕಾಲಿಟ್ಟಿದ್ದೇ ತಡ, ವಾಲಚಂದರು ತಮ್ಮ ಪ್ರಯತ್ನಗಳನ್ನು ಪ್ರಾರಂಭಿಸಿದರು. ಯಥಾಪ್ರಕಾರ ಸರ್ಕಾರ ಎಲ್ಲದಕ್ಕೂ ತಣ್ಣೀರೆರಚಿತು. ಇದರ ಪರಿಚಯವಿದ್ದ ವಾಲಚಂದರು ಧೃತಿಗೆಡಲಿಲ್ಲ.

೧೯೩೯ ರ ಚಳಿಗಾಲ ಮುಗಿಯುತ್ತಲೇ ಯೂರೋಪಿನಲ್ಲಿ ಯುದ್ಧದ ಕಾವು ಹೆಚ್ಚಾಯಿತು. ಇಂಗ್ಲೆಂಡು, ಜರ್ಮನರ ವಾಯುದಾಳಿಯಿಂದ ತತ್ತರಿಸಿತು. ತನ್ನ ಉಳಿವಿಗಾಗಿ ಅದು ಪರದಾಡುತ್ತಿತ್ತು. ಈ ಸ್ಥಿತಿಯಲ್ಲಿ ಅದು ಭಾರತ ಸರ್ಕಾರಕ್ಕೆ ಕಾಗದ ಬರೆದು ವಸಾಹತುಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದೂ ವಿಮಾನ ಅಥವ ಹಡಗುಗಳನ್ನು ಸರಬರಾಜು ಮಾಡಲು ಬ್ರಿಟನ್ನಿಗೆ ಸಾಧ್ಯವಾಗುವುದಿಲ್ಲವೆಂದೂ ಖಚಿತವಾಗಿ ತಿಳಿಸಿತು.

ಈಗ ಭಾರತ ಸರ್ಕಾರ ನಿದ್ದೆಯಿಂದ ಎಚ್ಚೆತ್ತಿತು. ಇದಕ್ಕೆ  ಕಾರಣವೂ ಇತ್ತು. ಯುದ್ಧದಲ್ಲಿ ಬ್ರಿಟಿಷರ ಸ್ಥಿತಿ ಕಷ್ಟವಾಗಿ, ಜಪಾನಿನವರು ಗೆಲ್ಲುತ್ತ ಬಂದರು. ಇದರಿಂದ ಭಾರತದಲ್ಲಿ ತಯಾರಿಸಿದ ಹೊರತು ಬೇರೆ ಕಡೆಯಿಂದ ವಿಮಾನಗಳು ತಲುಪುವ ಬಗೆಯೇ ಇಲ್ಲವೆಂದಾಯಿತು. ಹೀಗಾಗಿ ಸರ್ಕಾರದ ಗಾಲಿ ತಿರುಗತೊಡಗಿತು. ಸರ್ಕಾರ ವಾಲಚಂದರ ವಿಮಾನ ತಯಾರಿಕೆಯ ಯೋಜನೆಯನ್ನು ಒಪ್ಪಿಕೊಂಡಿತು. ಈಗ ಕಾರ್ಖಾನೆ ಸ್ಥಾಪನೆಗೆ ಸೂಕ್ತವಾದ ನೆಲ ಬೇಕಾಯಿತು. ಮೈಸೂರು ಮಹಾರಾಜರು ಇದರಲ್ಲಿ ಆಸಕ್ತಿ ತೋರಿಸಿದರು. ವಾಲಚಂದರಿಗೆ ಬೆಂಗಳೂರು ನಗರದ ಹತ್ತಿರ ೨,೧೦೦ ಎಕರೆ ಜಮೀನು ದೊರಕಿತು. ಅದರಲ್ಲಿ ೭೦೦ ಎಕರೆಗಳನ್ನು ಮೈಸೂರು ಸರ್ಕಾರ ಉಚಿತವಾಗಿ ಕೊಟ್ಟಿತು. ಅಲ್ಲದೆ೨೫ ಲಕ್ಷ ರೂಪಾಯಿಗಳ ಷೇರು ಕೊಂಡಿತು.

ಆಗ ಕಾರ್ಖಾನೆಗೆಂದು ನಿಗದಿಯಾಗಿದ್ದ ಸ್ಥಳ ಬರಿ ಕಾಡಾಗಿತ್ತು. ಮೊದಲು ಕಾಡನ್ನು ಕಡಿದು ಸರಿಗೊಳಿಸುವ ಕೆಲಸ ನಡೆಯಿತು. ೧೯೪೧ರ ಜನವರಿ ೧೨ ರಂದು ಕಟ್ಟಡದ ಶಂಕುಸ್ಥಾಪನೆಯಾಯಿತು. ಹೀಗೆ ‘ಹಿಂದೂಸ್ಥಾನ ವಿಮಾನ ಸಂಸ್ಥೆ’ (ದಿ ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಕಂಪೆನಿ) ಜನ್ಮತಾಳಿತು. ಕೆಲಸಗಳು ಎಷ್ಟು ತ್ವರಿತವಾಗಿ ನಡೆದವೆಂದರೆ ಕಂಪೆನಿಯ ಮೊದಲ ತರಬೇತಿ ವಿಮಾನ ೧೯೪೧ ರ ಜುಲೈ ವೇಳೆಗೆ ಸಿದ್ಧವಾಯಿತು. ಮನಸ್ಸು ಮಾಡಿದರೆ ಭಾರತೀಯರು ಏನು ಮಾಡಬಹುದು ಎಂಬುದನ್ನು ವಾಲಚಂದರು ಪ್ರಪಂಚಕ್ಕೆ ತೋರಿಸಿಕೊಟ್ಟರು. ಆದರೂ ಆಗಿನ ಬ್ರಿಟಿಷ್ ಸರಕಾರ ಇದರ ಅಭಿವೃದ್ಧಿಗೆ ಗಮನ ಕೊಡಲಿಲ್ಲ. ಎರಡು ವರ್ಷಗಳ ಅವಧಿಯಲ್ಲಿ ಕೇವಲ ಒಂದು ನೂರು ವಿಮಾನಗಳ ತಯಾರಿಕೆಗೆ ಸರ್ಕಾರದ ಒಪ್ಪಿಗೆ ಸಿಕ್ಕಿತು. ಇದೇ ವೇಳೆಯಲ್ಲಿ ಒಂದೇ ತಿಂಗಳಿಗೆ ಸಾವಿರಾರು ವಿಮಾನ ತಯಾರಿಸಲು ಅಮೆರಿಕದ ಪ್ರತಿ ವಿಮಾನ ಕಾರ್ಖಾನೆಯಲ್ಲೂ ಏರ್ಪಾಟು ನಡೆದಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.

ಯುದ್ಧ ಇನ್ನೂ ತೀವ್ರವಾಯಿತು. ಜಪಾನು ಅಮೆರಿಕದ ಮೇಲೆ  ದಾಳಿ ಪ್ರಾರಂಭಿಸಿತು. ತಟಸ್ಥವಾಗಿದ್ದ ಅಮೆರಿಕ ಸಹ ಯುದ್ಧವನ್ನು ಪ್ರವೇಶಿಸಬೇಕಾಯಿತು. ಪೂರ್ವಕ್ಕೂ ಯುದ್ಧ ಹರಡುವ ಭೀತಿ ಇತ್ತು. ಬ್ರಿಟನ್ನಿನ ಹಡಗುಗಳು ಮುಳುಗಹತ್ತಿದವು. ಭಾರತದ ಕೆಲವು ಮುಖ್ಯ ನಗರಗಳ ಮೇಲೆ ಜಪಾನು ದಾಳಿ ನಡೆಸುವ ಸಾಧ್ಯತೆಯಿದೆ ಯೆಂದು ಸುದ್ದಿ ಬಂತು. ಭಾರತ ಸರ್ಕಾರಕ್ಕೆ ತಾನು ಉಳಿಯುವ ಭರವಸೆ ಇರಲಿಲ್ಲ. ಆದ್ದರಿಂದ ಯುದ್ಧ ಪ್ರಾಮುಖ್ಯವನ್ನು ಪಡೆದ ಬೆಂಗಳೂರಿನ ವಿಮಾನ ಕಾರ್ಖಾನೆಯನ್ನು ಶತ್ರುಗಳ ಕೈಗೆ ಒಪ್ಪಿಸುವುದಕ್ಕಿಂತ ನಾಶಪಡಿಸುವುದು ಸೂಕ್ತ ಎಂದು ಸರ್ಕಾರ ನಿರ್ಧರಿಸಿತು. ಇದರ ಬಗ್ಗೆ ಮಾತನಾಡಲು ಸರ್ಕಾರದ ಅಧಿಕಾರಿಯೊಬ್ಬ ವಾಲಚಂದರ ಬಳಿ ಬಂದ. ‘‘ಬೆಂಗಳೂರು ಜಪಾನಿನ ದಾಳಿಗೆ ತುತ್ತಾಗುವ ಸಾಧ್ಯತೆಯಿಂದೆ. ಆದ್ದರಿಂದ ವಿಮಾನ ಕಾರ್ಖಾನೆಯನ್ನು ಸ್ಫೋಟಗೊಳಿಸಬೇಕೆಂದು ಸರ್ಕಾರದ ನಿಲವು’’ ಎಂದು ತಿಳಿಸಿದ. ಇದನ್ನು ಕೇಳಿ ವಾಲಚಂದರ ರಕ್ತ ಕುದಿಯಿತು. ‘‘ಯಾರ ಕಾರ್ಖಾನೆಯನ್ನು ಸ್ಫೋಟಗೊಳಿಸುತ್ತೀರಿ? ಇದೇನು ಬ್ರಿಟಿಷ್ ಸರ್ಕಾರದ ಸ್ವತ್ತೆ?’’ ಎಂದು ಕೇಳಿದರು. ಸರ್ಕಾರಕ್ಕೆ ಏನು ಮಾಡಲೂ ತೋರದೆ ಅಧಿಕಾಂಶ ಷೇರುಗಳನ್ನು ಕೊಳ್ಳಲು ಮುಂದೆ ಬಂತು. ಷೇರುದಾರರ ಹಿತದೃಷ್ಟಿಯಿಂದ ವಾಲಚಂದರು ಇದಕ್ಕೆ ಒಪ್ಪಿದರು. ಕೊನೆಗೆ ಕಾರ್ಖಾನೆ ಭಾರತ ಸರ್ಕಾರದ ವಶಕ್ಕೆ ಬಂತು.

ಕಂಟಕಗಳನ್ನು ನಿವಾರಿಸಿಕೊಂಡು ಕಾರು ತಯಾರಾಯಿತು

ಒಂದು ದೇಶದ ಪ್ರಗತಿಗೆ ಶೀಘ್ರ ಸಂಪರ್ಕ ವ್ಯವಸ್ಥೆ ತುಂಬ ಮುಖ್ಯ. ಬ್ರಿಟನ್, ಅಮೆರಿಕ ಮುಂತಾದ ಎಲ್ಲ ದೇಶಗಳೂ ಇದಕ್ಕೆ ಗಮನ ಕೊಟ್ಟಿದ್ದವು. ಆದರೆ ಭಾರತವನ್ನಾಳುತ್ತಿದ್ದ ಬ್ರಿಟಿಷರ ವರ್ತನೆ ಇದಕ್ಕೆ ತದ್ವಿರುದ್ಧವಾಗಿತ್ತು. ಅವರು ಸಂಪರ್ಕ ವ್ಯವಸ್ಥೆಗೆ ಸರಿಯಾದ ಗಮನ ಕೊಡಲಿಲ್ಲ. ಇದ್ದ ಅಲ್ಪಸ್ವಲ್ಪ ಸಂಪರ್ಕ ವ್ಯವಸ್ಥೆಯು ಸೈನಿಕರ ಸಾಗಾಣಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿತ್ತು.

೧೯೩೫ ರಲ್ಲಿ ಬ್ರಿಟಿಷ್ ಪಾರ್ಲಿಮೆಂಟು ಭಾರತದಲ್ಲಿ ಸಂಯುಕ್ತ ರಾಜ್ಯ ಸ್ಥಾಪನೆಗೆ ಅಂಗೀಕಾರ ನೀಡಿತು. ಇದರಿಂದ ೧೯೩೭ ರಲ್ಲಿ ಅನೇಕ ಸಂಸ್ಥಾನಗಳು ಸ್ವಾಯತ್ತತೆ ಪಡೆದವು. ಇವುಗಳಲ್ಲಿ ಮುಂಬಯಿಯೂ ಒಂದು. ಇಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದುದರಿಂದ ರಾಷ್ಟ್ರಪ್ರಗತಿಯ ಯೋಜನೆಗಳಿಗೆ ಸಹಕಾರ ಸಿಗುತ್ತದೆ ಎಂದು ವಾಲಚಂದರಿಗೆ ತೋರಿತು. ತಕ್ಷಣ ಅವರು ಕಾರು ತಯಾರಿಕೆಗೆ ಸರ್ಕಾರದ ಸಹಾಯ ಕೋರಿ ಕಾಗದ ಬರೆದರು. ಸಹಾಯದ ಭರವಸೆಯೂ ದೊರೆಯಿತು. ಅಮೆರಿಕದಲ್ಲಿ ಅಗ್ರಗಣ್ಯ ಕಾರು ತಯಾರಿಕೆದಾರರಾದ ಕೆಸ್ಲರ್ ಕಾರ್ಪೊರೇಷನ್‌ನವರು ನೆರವು ನೀಡಲು ಮುಂದೆ ಬಂದರು. ಆದರೆ ಕನಸು ನನಸಾಗುವುದರೊಳಗೆ ಏನೇನೊ ಘಟನೆಗಳು ನಡೆದವು. ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿತು. ಅಧಿಕಾರಕ್ಕೆ ಬಂದ ಹೊಸ ಸರ್ಕಾರ ಸಹಾಯ ನೀಡಲು ಹಿಂದೇಟು ಹೊಡೆಯಿತು. ಅಷ್ಟೇ ಅಲ್ಲ ಹೊಸ ಕಂಪೆನಿಗಳನ್ನು ತೆರೆಯಲು ನಿರ್ಬಂಧಗಳನ್ನು ಹೇರಿತು. ವಾಲಚಂದರು ಇದನ್ನು ಉಗ್ರವಾಗಿ ಪ್ರತಿಭಟಿಸಿದರು. ಸರ್ಕಾರ ನಿಯಾಮಾವಳಿಗಳನ್ನು ಸಡಿಲಿಸಿ ಇವರಿಗೆ ಕಂಪೆನಿ ತೆರೆಯಲು ಅಪ್ಪಣೆ ಕೊಡುವುದರ ವೇಳೆಗೆ ೧೯೪೪ ನೇ ಇಸವಿ ಕಾಲಿಟ್ಟಿತ್ತು. ಆಗ ವಾಲಚಂದರು ‘ದಿ ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್’ ಎಂಬ ಕಂಪೆನಿಯನ್ನು ಸ್ಥಾಪಿಸಿದರು.

ಒಂದು ಕಡೆ ಕಾರ್ಖಾನೆಯ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಇನ್ನೊಂದು ಕಡೆ ಅಧಿಕಾರಿಗಳ ತರಬೇತು ನಡೆಯುತ್ತಿತ್ತು.

ಹೀಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ವಾಲಚಂದರು ಕಾರ್ಖಾನೆಯನ್ನು ಪ್ರಾರಂಭಿಸಿದರು. ೧೯೪೭ರ ಆಗಸ್ಟ್ ನಿಂದ ಉತ್ಪಾದನೆ ಪ್ರಾರಂಭವಾಯಿತು. ಕೆಲವು ದಿನಗಳಲ್ಲಿ ಇಟಲಿಯ ಫಿಯಟ್ ಕಂಪೆನಿಯ ಸಹಾಯವೂ ದೊರಕಿತು. ಈ ರೀತಿ ಅಮೆರಿಕದ ಕೆಸ್ಲರ್ ಕಾರ್ಪೊರೇಷನ್ ಮತ್ತು ಇಟಲಿಯ ಕಂಪೆನಿಗಳ ಸಹಕಾರದಿಂದ ಪ್ರಪಂಚ ವಿಖ್ಯಾತ ಪ್ಲಿಮತ್, ಡಾಡ್ಜ್, ಡಿಸೊಟೊ ಮತ್ತು ಫಿಯಟ್ ಕಾರುಗಳನ್ನು ವಾಲಚಂದರ ಕಂಪೆನಿ ತಯಾರಿಸತೊಡಗಿತು.

ಐದು ಗಂಟೆ ಸಾಕು

ಕಾರು ತಯಾರಿಸುವ ಯೋಚನೆಯ ಜೊತೆಗೆ ಇನ್ನೊಂದು ಯೋಚನೆಯು ವಾಲಚಂದರ ಮನಸ್ಸಿಗೆ ಬಂದಿತ್ತು. ಕಾರಿಗೆ ಅಗತ್ಯವಾದ ಎಂಜಿನನ್ನು ತಯಾರಿಸಬೇಕೆಂದು ನಿರ್ಧಾರ ಮಾಡಿದ್ದರು. ಆಗಲೇ ಭಾರತದಲ್ಲಿ ಬ್ರಿಟಿಷರ ಸಹಕಾರದಿಂದ ನಡೆಯುತ್ತಿದ್ದ ಎಂಜಿನ್ ತಯಾರಿಸುವ ಕಾರ್ಖಾನೆಯಿತ್ತು. ಇದು ಹಿಟ್ಟಿನ ಗಿರಣಿಗಳು, ಗರಗಸದ ಯಂತ್ರಗಳು, ನೀರೆತ್ತುವ ಪಂಪುಗಳನ್ನು ತಯಾರಿಸಲು ಅನುಕೂಲವಾಗಿತ್ತು. ಸರ್ ಧನ್ಜಿಷಾ ಕೂಪರ್ ಈ ಕಾರ್ಖಾನೆಯ ಮಾಲಿಕರಾಗಿದ್ದರು.

ಹೊಸದಾಗಿ  ಕಂಪೆನಿ ತೆರೆಯುವುದಕ್ಕಿಂತ ಇರುವ ಕಂಪೆನಿಯೊಡನೆ ಸಹಕಾರಕ್ಕೆ ಸಿದ್ಧವಾಗುವುದು ಒಳ್ಳೆಯದು ಎಂದು ವಾಲಚಂದರಿಗೆ ತೋರಿತು. ‘‘ಸಹಕಾರ ನೀಡಲು ತಾವು ಸಿದ್ಧ. ಅದರ ಅಗತ್ಯವಿದೆಯೆ?’’ ಎಂದು ಕೇಳಿದರು. ಸರ್ ಧನ್ಜಿಷಾರವರಿಗೂ ಇಂಥ ಒಬ್ಬ ಧೀಮಂತ ವ್ಯಕ್ತಿಯ ಸಹಕಾರ ಅಗತ್ಯವಾಗಿತ್ತು; ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆಗ ವಾಲಚಂದರು ಧನ್ಜಿಷಾ ಅವರ ಕಾರ್ಖಾನೆಗೆ ಭೇಟಿ ಕೊಟ್ಟು ಕೂಲಂಕಷವಾಗಿ ಪರೀಕ್ಷಿಸಿದರು. ಅನಂತರ ಕಾರ್ಖಾನೆಯ ಅಭಿವೃದ್ಧಿಗೆ ತಮ್ಮ ಸಲಹೆಗಳನ್ನು ನೀಡಿದರು.

ಇವರ ಮಾತುಕತೆಯನ್ನು ಕೇಳುತ್ತಿದ್ದ ಧನ್ಜಿಷಾರ ಮಗನಿಗೆ ಅಚ್ಚರಿಯಾಯಿತು. ತಂದೆ ಒಬ್ಬರೇ ಇದ್ದಾಗ, ‘‘ಅಪ್ಪಾ ವಾಲಚಂದರು ನಮ್ಮ ಕಾರ್ಖಾನೆಯ ಸುತ್ತಲೂ ಎರಡು ಮೂರು ಬಾರಿ ಓಡಾಡಿರಬಹುದು. ಇಲ್ಲಿ ಐದು ಗಂಟೆಗಳನ್ನು ಸರಿಯಾಗಿ ಕಳೆಯಲಿಲ್ಲ. ಆಗಲೇ ಸಹಾಯಕ್ಕೆ ಸಿದ್ಧರಾದರು. ಇಷ್ಟು ಕಡಿಮೆ ಅವಧಿಯಲ್ಲಿ ನಮ್ಮ ಕಾರ್ಖಾನೆ ಬಗ್ಗೆ ಅವರಿಗೇನು ಗೊತ್ತಾಯಿತು’’ ಎಂದು ಕೇಳಿದ. ಅದಕ್ಕೆ ಧನ್ಜಿಷಾ ‘‘ನೀನು ಐದು ಜನ್ಮಗಳಲ್ಲಿ ತಿಳಿಯುವುದನ್ನು ವಾಲಚಂದರು ಐದೇ ಗಂಟೆಗಳಲ್ಲಿ ಕಲಿಯುತ್ತಾರೆ’’ ಎಂದು ತಿಳಿಸಿದರು.

ಮುಂದಿನ ಕೆಲವು ದಿನಗಳಲ್ಲೇ ವಾಲಚಂದ ಮತ್ತು ಧನ್ಜಿಷಾರ ನಡುವೆ ವಿವರವಾದ ಮಾತುಕತೆಯಾಯಿತು. ‘ಕೂಪರ್ ಇಂಜಿನಿಯರಿಂಗ್ ಲಿಮಿಟೆಡ್’ ಎಂಬ ಹೊಸ ಕಂಪೆನಿಯನ್ನು ಸ್ಥಾಪಿಸಲು ನಿರ್ಧಾರವಾಯಿತು. ಧನ್ಜಿಷಾರು ತಮ್ಮ ಕಂಪೆನಿಯನ್ನು ಹೊಸ ಕಂಪೆನಿಗೆ ಮಾರಲು ಒಪ್ಪಿಕೊಂಡರು. ೧೯೪೦ ರಲ್ಲಿ ಹೊಸ ಕಂಪೆನಿ ಜನ್ಮ ತಾಳಿತು. ಇದು ಭರದಿಂದ ಅಭಿವೃದ್ಧಿ ಪಡೆದು ಕೊನೆಗೆ ಮೋಟರ್ ಕಾರಿಗೆ ಸರಿಹೊಂದುವ ಎಂಜಿನನ್ನು ತಯಾರಿಸತೊಡಗಿತು.

ಅಳುತ್ತಿದ್ದ ಭೂಮಿ ನಗುವಂತೆ ಆಯಿತು

ವ್ಯವಸಾಯದ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದ ವಾಲಚಂದರು ವ್ಯವಸಾಯಾಭಿವೃದ್ಧಿಯಲ್ಲಿ ತಮ್ಮ ಪಾತ್ರವೂ ಇರಬೇಕೆಂದು ನಿರ್ಧರಿಸಿದರು. ಅವರ ಜಾಯಮಾನಕ್ಕೆ ತಕ್ಕಂತೆ ತಕ್ಷಣ ಕಾರ್ಯತತ್ಪರರಾದರು. ನಾಸಿಕ್ ಜಿಲ್ಲೆಯ ರಾವಲಗಾಂವ್ ಹಳ್ಳಿಯಲ್ಲಿ ೧೫೦೦ ಎಕರೆ ಜಮೀನನ್ನು ಕೊಂಡರು. ಈ ಎಲ್ಲ ಜಮೀನುಗಳ ಬಹುಭಾಗ ಅಡವಿಯಾಗಿತ್ತು. ಕಳ್ಳಕಾಕರು ಮತ್ತು ಡಕಾಯಿತರಿಗೆ ಅನುಕೂಲವಾಗಿತ್ತು. ಆದ್ದರಿಂದ ಮೊದಲು ಅಡವಿಯನ್ನು ಕಡಿದು ವ್ಯವಸಾಯ ಯೋಗ್ಯವನ್ನಾಗಿ ಮಾಡಿದರು.

ವಾಲಚಂದರು ರಾವಲಗಾಂವ್‌ಗೆ ಅಡಿಯಿಟ್ಟ ಮೊದಲ ದಿವಸವೇ ಹಳ್ಳಿಯ ಮುಖಂಡರನ್ನು ಕಂಡರು. ನನಗೆ ವ್ಯವಸಾಯದ ಅನುಭವವಿಲ್ಲ. ನಿಮಗೆ ಅನುಭವವಿದೆ, ಆದರೆ ಹಣದ ಅಡಚಣೆಯಿಂದ ಭೂಮಿಯನ್ನು ಅಭಿವೃದ್ಧಿಪಡಿಸುವುದರಲ್ಲಿ ನಿಮಗೆ ತೊಂದರೆಯಿದೆ. ನಿಮ್ಮ ಅನುಭವದ ನೆರವನ್ನು ನನಗೆ ಕೊಡಿ. ನಿಮಗೆ ಬೇಕಾದ ಹಣ ಸಹಾಯವನ್ನು ನಾನು ಮಾಡುತ್ತೇನೆ’’ ಎಂದರು. ಇವರ ಬಿಚ್ಚು ಮನಸ್ಸಿನ ನೇರ ಮಾತುಗಳಿಂದ ಹಳ್ಳಿಗರು ಪ್ರಭಾವಿತರಾದರು. ತಮ್ಮ ಸಹಾಯ ಮತ್ತು ಸಹಕಾರಗಳನ್ನು ಕೊಡುವುದಾಗಿ ಭರವಸೆ ನೀಡಿದರು.

ವಾಲಚಂದರು ವ್ಯವಸಾಯಕ್ಕೆ ಇನ್ನಷ್ಟು ಗಮನ ನೀಡಿದರು. ವ್ಯವಸಾಯ ತೃಪ್ತಿಕರವಾಗಿ ನಡೆಯತೊಡಗಿದ ಮೇಲೆ ಬೆಲ್ಲದ ಸಣ್ಣ ಕಾರ್ಖಾನೆಯನ್ನು ಪ್ರಾರಂಭಿಸಿದರು. ಇದಾದ ಕೆಲವು ಕಾಲದಲ್ಲೇ ಸಕ್ಕರೆ ಉದ್ಯಮಕ್ಕೆ ರಕ್ಷಣೆ ನೀಡುವುದಾಗಿ ಸರ್ಕಾರ ಘೋಷಿಸಿತು. ಇದರ ಲಾಭ ಪಡೆಯಲು ಅನೇಕರು ಸಕ್ಕರೆ ಕಾರ್ಖಾನೆಗಳನ್ನು ತೆರೆದರು. ಸರಿಯಾದ ಸಿದ್ಧತೆಯಿಲ್ಲದೆ ಪ್ರಾರಂಭಿಸಿದುದರಿಂದ ಅನೇಕರು ತೊಂದರೆಗೊಳಗಾದರು. ಇಂಥವರನ್ನು ಗಮನಿಸಿ ವಾಲಚಂದರು ಎಚ್ಚರಿಕೆಯಿಂದ ಹೆಜ್ಜೆಯಿಟ್ಟರು. ಕಾರ್ಖಾನೆಗೆ ಎಷ್ಟು ಬೇಕೊ ಅಷ್ಟು ಕಬ್ಬನ್ನು ತಮ್ಮ ಸ್ವಂತ ನೆಲದಲ್ಲೇ ಬೆಳೆದರು. ರಾವಲಗಾಂವ್‌ಗೆ ಸಮೀಪದಲ್ಲೇ ಕಾರ್ಖಾನೆಯನ್ನು ಪ್ರಾರಂಭಿಸಿದರು. ಸಕ್ಕರೆ ಕಾರ್ಖಾನೆ ನಡೆಸುವ ಆಧುನಿಕ ಪದ್ಧತಿಯನ್ನು ಅರಿಯಲು ಜನರನ್ನು ಪರದೇಶಗಳಿಗೆ ಕಳುಹಿಸಿಕೊಟ್ಟರು. ಅಷ್ಟೇ ಅಲ್ಲ ಕಬ್ಬಿನ ಗುಣ ಮತ್ತು ಪ್ರಮಾಣವನ್ನು ಉತ್ತಮಪಡಿಸಲು ಪ್ರಯೋಗಗಳನ್ನು ಕೈಗೊಂಡರು.

ಈ ಎಲ್ಲ ಅಭಿವೃದ್ಧಿಗಳ ಫಲ ಹಳ್ಳಿಗರ ಜೀವನ ಮಟ್ಟ ಏರುವುದರಲ್ಲಿ ವ್ಯಕ್ತವಾಯಿತು. ವಾಲಚಂದರು ಜಮೀನುಗಳನ್ನು ಖರೀದಿಸಿದಾಗ ರಾವಲಗಾಂವ್ ೧೫೦ ರಿಂದ ೨೦೦ ಜನರಿರುವ ಚಿಕ್ಕ ಹಳ್ಳಿಯಾಗಿತ್ತು. ಕಷ್ಟಪಟ್ಟು ವ್ಯವಸಾಯ ಮಾಡಿದರೂ, ದನಗಳ ಹಾಲು ತುಪ್ಪ ಮಾರಿದರೂ ಹೊಟ್ಟೆಬಟ್ಟೆಗೆ ಸಾಕಾಗುವಷ್ಟು ಆದಾಯವಿರಲಿಲ್ಲ. ಆದರೆ ಆ ಕುಗ್ರಾಮದ ಚಿತ್ರವೇ ಬದಲಾಗಿತ್ತು. ಅದು ಈಗ ೫೦೦೦ ಜನರಿರುವ ಊರಾಗಿತ್ತು. ಕೆಲಸವಿಲ್ಲದವರಿಗೆ ಕೆಲಸ ಸಿಕ್ಕಿತು. ಕಡಿಮೆ ಆದಾಯದವರು ಆದಾಯವನ್ನು ಹೆಚ್ಚಿಸಿಕೊಂಡರು. ಹೊಟ್ಟೆಬಟ್ಟೆಗೆ ಸಾಕಾಗುವಷ್ಟು ಹಣ ಸೇರಿ ಜನರ ಜೀವನಮಟ್ಟ ಸುಧಾರಿಸಿತು.

ವಾಲಚಂದರು ಯಾವಾಗಲೂ ಸಂಪ್ರದಾಯಬದ್ಧ ದಾರಿಯಲ್ಲೇ ಹೋಗುತ್ತಿರಲಿಲ್ಲ. ಅವರು ತಮ್ಮ ಗುರಿಗಳನ್ನು ಮುಟ್ಟುವುದಕ್ಕೆ ಬಹುಶಃ ಇದೂ ಒಂದು ಕಾರಣವಿದ್ದೀತು. ಅವರ ಇಂಥ ಒಂದು ಸ್ವಭಾವವನ್ನು ‘‘ಮಾರ್ಷ್‌ಲೆಂಡ್ ಪೆಸ್ ಅಂಡ್ ಕಂಪೆನಿ’’ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರದಲ್ಲಿ ಕಾಣಬಹುದು. ಈ ಕಂಪೆನಿ ಐದಾರು ವರ್ಷಗಳಿಂದ ನಷ್ಟದಲ್ಲಿ ನಡೆಯುತ್ತಿತ್ತು. ೧೯೩೦-೩೧ರಲ್ಲಿ ಮುಚ್ಚುವ ಸ್ಥಿತಿಗೆ ಬಂದಿತ್ತು. ೧೯೩೨ ರಲ್ಲಿ ಸಕ್ಕರೆಗೆ ರಕ್ಷಣೆ ಕೊಡುವ ಸರ್ಕಾರದ ನೀತಿ ಪ್ರಕಟವಾಯಿತು. ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ವಾಲಚಂದರು ಕೈಬಿಟ್ಟರು. ಇಂಜಿನಿಯರಿಂಗ್ ವಸ್ತುಗಳ ತಯಾರಿಕೆಯ ಕಂಪೆನಿಯನ್ನು ಸಕ್ಕರೆ ಉತ್ಪಾದನೆ ಮಾಡುವ ಕಂಪೆನಿಯಾಗಿ ಬದಲಾಯಿಸಲು ನಿರ್ಧರಿಸಿದರು! ಇದು ತೀರ ವಿಚಿತ್ರ ಎನ್ನಿಸಿತು ಜನರಿಗೆ. ಆದರೆ ವಾಲಚಂದರು ಕಂಪೆನಿಗೆ ಇದರಿಂದಲೇ ಮುಕ್ತಿ ಎಂದು ಎಲ್ಲರನ್ನೂ ಒಪ್ಪಿಸಿದರು.

ಈ ಕಂಪೆನಿಗಾಗಿ ಕಾಲಂಬ್ ಎಂಬ ಹಳ್ಳಿಯಲ್ಲಿ ಜಮೀನನ್ನು ಕೊಂಡರು. ವ್ಯವಸಾಯಕ್ಕೆ ಇದು ಅಷ್ಟು ಯೋಗ್ಯವಾಗಿರಲಿಲ್ಲ. ಆದರೆ ವಾಲಚಂದರ ಧೈರ್ಯಕ್ಕೆ ಇದು ಅಡ್ಡಿ ತರಲಿಲ್ಲ. ಅವರ ಪ್ರಯತ್ನದಿಂದ ನೆಲ ವ್ಯವಸಾಯ ಯೋಗ್ಯವಾಯಿತು. ಅನಂತರ ಅಲ್ಲಿ ಒಂದು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿದರು. ಇದಾದ ಮೂರು ನಾಲ್ಕು ವರ್ಷಗಳಲ್ಲಿ ಮುಳುಗಿಹೋಗುವ ಸ್ಥಿತಿಯಲ್ಲಿದ್ದ ಕಂಪೆನಿ ಚೇತರಿಸಿಕೊಂಡಿತು. ಅಷ್ಟೇ ಅಲ್ಲ, ಅಳುತ್ತಿದ್ದ ಭೂಮಿಯೂ ನಗುವಂತೆ ಆಯಿತು.

ಇವರೇ ವಾಲಚಂದ್!

ವಾಲಚಂದ್ ತುಂಬು ಜೀವನ ನಡೆಸಿದ ವ್ಯಕ್ತಿ. ಅವರದು ಚಟುವಟಿಕೆಯ ಬಾಳು. ವ್ಯರ್ಥವಾಗಿ ಕಾಲ ಕಳೆಯುವುದನ್ನು ಅವರು ಸಹಿಸುತ್ತಿರಲಿಲ್ಲ. ಆದ್ದರಿಂದ ಕಾಡು ಹರಟೆಗೆ ಬರುವವರಿಗೆ ಉತ್ತೇಜನ ಕೊಡುತ್ತಿರಲಿಲ್ಲ. ಕೊಂಕಣ ಸುತ್ತಿಕೊಂಡು ಮೈಲಾರಕ್ಕೆ ಬರುವುದು ಅವರಿಗಿಷ್ಟವಿಲ್ಲ. ಏನು ಹೇಳುವುದಿದ್ದರೂ ನೇರವಾಗಿ ಹೇಳಬೇಕೆಂದು ಅವರ ಅಪೇಕ್ಷೆ. ದೂರವಾಣಿಯಿಂದ ಆಗುವ ಕೆಲಸಕ್ಕಾಗಿ ಮುಖತಃ ಭೇಟಿ ಮಾಡುವುದು ಅನಾವಶ್ಯಕ ಎಂಬುದು ಅವರ ಭಾವನೆ. ಈ ಕಾರಣಗಳಿಂದ ವಾಲಚಂದರಿಗೆ ಜನರೊಡನೆ ಸೇರುವುದು ಇಷ್ಟವಿಲ್ಲ ಎಂಬ ಆಕ್ಷೇಪಣೆಯೂ ಬಂತು. ಆದರೆ ಮುಖ್ಯ ವಿಚಾರಗಳ ಬಗ್ಗೆ ಮಾತನಾಡುವಾಗ ಅತೀವ ಆಸಕ್ತಿಯಿಂದ ಕೇಳುತ್ತಿದ್ದರು.

ವಾಲಚಂದರು ಕೆಲಸಗಾರರಿಗೆ ಉತ್ತಮ ಯಜಮಾನರೂ ಆಗಿದ್ದರು. ಮನೆಯವರನ್ನು ಹೇಗೆ ನೋಡಿಕೊಳ್ಳುತ್ತಿದ್ದರೊ ಕೆಲಸಗಾರರನ್ನೂ ಹಾಗೇ ನೋಡಿಕೊಳ್ಳುತ್ತಿದ್ದರು. ಮೇಲು ಕೀಳೆನ್ನದೆ ಕೂಲಿಯ ಆಳಿನಿಂದ ಹಿಡಿದು ಹಿರಿಯ ಅಧಿಕಾರಿಯವರೆಗೆ ಅಹಂಭಾವವಿಲ್ಲದೆ ಬೆರೆಯುತ್ತಿದ್ದರು. ಕೂಲಿಗಾರರ ಕಷ್ಟಸುಖಗಳನ್ನು ಸ್ವತಃ ವಿಚಾರಿಸಿ ಅವರಿಗೆ ನೆರವಾಗುತ್ತಿದ್ದರು. ಆದರೆ ಎಲ್ಲರೂ ಶಿಸ್ತಿನಿಂದ ಇರಬೇಕೆಂದು ಅಪೇಕ್ಷಿಸಿದ್ದರು. ಅದರಲ್ಲಿ ಸಡಿಲತೆ ತೋರುವುದನ್ನು ಸ್ವಲ್ಪವೂ ಸಹಿಸುತ್ತಿರಲಿಲ್ಲ. ಕಾರ್ಖಾನೆಗಳ ಆಡಳಿತದ ವಿಚಾರದಲ್ಲಿ ತುಂಬಾ ಬಿಗಿಯಾಗಿರುತ್ತಿದ್ದರು.

ಕ್ರಮಬದ್ಧತೆ ಮತ್ತು ಶೀಘ್ರಗತಿಯಲ್ಲಿ ಕೆಲಸವಾಗುವುದಕ್ಕೆ ವಾಲಚಂದರು ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಇದರಿಂದಲೇ ಸರ್ಕಾರ, ರೈಲ್ವೆ, ಪೌರಾಡಳಿತ ಮುಂತಾದ ವಿವಿಧ ಕಾರ್ಯರಂಗದವರಿಗೆ ಇವರ ಮೇಲೆ ನಂಬಿಕೆ ಹುಟ್ಟಿದ್ದು. ಈ ನಂಬಿಕೆಯನ್ನು ಯಾವ ಕಾರಣದಿಂದಲೂ ಕಳೆದುಕೊಳ್ಳಲು ವಾಲಚಂದರು ಸಿದ್ಧರಾಗಿರಲಿಲ್ಲ. ಯಾರು ಸಂಸ್ಥೆಯ ಹೆಸರನ್ನು ಮೇಲ್ಮಟ್ಟದಲ್ಲಿರಿಸಲು ಕಷ್ಟಪಟ್ಟು ದುಡಿಯುತ್ತಾರೊ ಅವರಿಗೆ ಮಾತ್ರ ಅವರಲ್ಲಿ ಗೌರವ ಸಿಗುತ್ತಿತ್ತು.

ಆಗ ಮಹಾಯುದ್ಧದ ಸಮಯ. ಆಫ್ರಿಕದಲ್ಲಿ ತೈಲ ಸರಬರಾಜಿಗೆ ಮುನ್ನೂರು ಮೈಲಿ ಉದ್ದದ ಒಂದು ಕೊಳವೆ ಮಾರ್ಗವನ್ನು ಹಾಕುವುದು ಸಾಧ್ಯವೆ ಎಂದು ಸರ್ಕಾರ ಕೇಳಿತು. ಬೇರೆ ಯಾವ ಕಂಪೆನಿಗಳೂ ಇದಕ್ಕೆ ತಯಾರಿರಲಿಲ್ಲ. ಆಗ ವಾಲಚಂದರು, ‘‘ಇದನ್ನು ಒಪ್ಪಿಕೊಂಡರೆ ಎಷ್ಟು ಬೇಗ ಮುಗಿಸಬಹುದು?’’ ಎಂದು ತಮ್ಮ ಅಧಿಕಾರಿಗಳನ್ನು ಕೇಳಿದರು. ಮುಖ್ಯ ಇಂಜಿನಿಯರ್, ‘‘ಒಂದೂಕಾಲು ವರ್ಷ ಬೇಕಾಗುತ್ತದೆ’’ ಎಂದು ಉತ್ತರಿಸಿದ. ಆಗ ವಾಲಚಂದರು, ‘‘ಅಷ್ಟರವರೆಗೆ ಹಿಟ್ಲರ್ ಕಾಯುತ್ತಾನೆ ಎಂದುಕೊಂಡಿರಾ? ನಾಲ್ಕು ತಿಂಗಳೊಳಗಾಗಿ ಅದನ್ನು ಪೂರೈಸಲು ಬೇಕಾಗುವ ಏರ್ಪಾಟು ಮಾಡಿ. ಆದರೆ ಸರ್ಕಾರಕ್ಕೆ ಆರು ತಿಂಗಳು ಬೇಕು ಎಂದು ತಿಳಿಸಿ’’ ಎಂದು   ಅಪ್ಪಣೆ ಮಾಡಿದರು. ಈ ಯೋಜನೆಯನ್ನು ಹೇಗೆ ಅಲ್ಪಾವಧಿಯಲ್ಲಿ ಕಾರ್ಯಗತ ಮಾಡಬಹುದು ಎಂದು ಸಲಹೆಗಳನ್ನೂ ನೀಡಿದರು.

ಎಷ್ಟೇ ಹಣವನ್ನು ಸಂಪಾದಿಸಿದರೂ ವಾಲಚಂದರು ಸರಳ ಜೀವನವನ್ನು ಮೆಚ್ಚುತ್ತಿದ್ದರು. ಅವರ ಊಟ, ಉಡುಪುಗಳೆಲ್ಲದರಲ್ಲೂ ಸರಳತೆ ಎದ್ದುಕಾಣುತ್ತಿತ್ತು. ಹೋದಕಡೆ ಇದೇ ಬೇಕು ಅದೇ ಬೇಕು ಎಂಬ ಹಠ ಇರಲಿಲ್ಲ. ಹಳ್ಳಿಗಳಿಗೆ ಹೋದಾಗ ಈರುಳ್ಳಿ, ಜೋಳದ ರೊಟ್ಟಿ ಇಷ್ಟರಲ್ಲೆ ತೃಪ್ತರಾಗುತ್ತಿದ್ದರು.

ವಾಲಚಂದರು ಸುಖೀ ಸಂಸಾರ, ಸುಖಮಯ ಸಂಸಾರ ಮತ್ತು ಶಿಸ್ತಿನ ಜೀವನದಿಂದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದರು. ಯೌವನದಲ್ಲಿ ಈಜು ಹಾಗೂ ಸವಾರಿ ಅವರಿಗೆ ಪ್ರಿಯವಾಗಿತ್ತು. ವಯಸ್ಸಾದ ಮೇಲೆ ಬೆಳಿಗ್ಗೆ ಮತ್ತು ಸಂಜೆ ಬಯಲಿನಲ್ಲಿ ಶೀಘ್ರವಾಗಿ ನಡೆಯುವುದೇ ವ್ಯಾಯಾಮವಾಗಿತ್ತು. ಜೊತೆಗೆ ತಮ್ಮ ಎಲ್ಲ ಕಾರ್ಯಕ್ಷೇತ್ರಗಳ ಮೇಲೆ ಒಂದೇ ಸಮನೆ ಗಮನ ಹರಿಸುವುದು ಕಷ್ಟವಾಯಿತು. ಆದ್ದರಿಂದ ೧೯೪೯ ರಿಂದ ಆಚೆಗೆ ಕಂಪೆನಿಗಳ ವ್ಯವಹಾರವನ್ನು ಒಂದೊಂದಾಗಿ ಬಿಡುತ್ತ ಬಂದರು. ೧೯೫೦ ರಲ್ಲಿ ಎಲ್ಲ ಕಂಪೆನಿಗಳ ಸಂಪರ್ಕಗಳನ್ನು ಕಡಿದುಕೊಂಡು ವಿಶ್ರಾಂತಿ ಪಡೆಯಲು ಆಶಿಸಿದರು. ಅವರ ಆರೋಗ್ಯವು ಕ್ಷೀಣಿಸುತ್ತ ಬಂತು. ೧೯೫೩ ಏಪ್ರಿಲ್ ೮ ರಂದು ಸಿದ್ಧಾಪುರದಲ್ಲಿ ಕೊನೆಯುಸಿರೆಳೆದರು. ಒಬ್ಬ ಸೃಜನಾತ್ಮಕ ಕೈಗಾರಿಕೋದ್ಯಮಿ ಮತ್ತು ಪ್ರತಿಭಾವಂತ ಇಲ್ಲದಂತಾಯಿತು.

ವಾಲಚಂದ್ ಕೈಗಾರಿಕಾರಂಗದಲ್ಲಿ ಒಂದು ದೊಡ್ಡ ಹೆಸರು. ಶ್ರದ್ಧೆ ಮತ್ತು ಶ್ರಮದಿಂದ ಒಬ್ಬ ವ್ಯಕ್ತಿ ಏನನ್ನು ಸಾಧಿಸಬಹುದು, ಎಷ್ಟು ಎತ್ತರಕ್ಕೆ ಬೆಳೆಯಬಹುದು ಎಂದು ವಾಲಚಂದರು ತೋರಿಸಿಕೊಟ್ಟಿದ್ದಾರೆ.