(ಕ್ರಿ. ಶ. ೧೮೫೦-೧೯೦೨) (ಪೀತಜ್ವರ ನಿಯಂತ್ರಣ)

ಜನರನ್ನು ವಿಪರೀತವಾಗಿ ಸುಸ್ತು ಹೊಡೆಸಿ ಕೊನೆಯಲ್ಲಿ ಅವರ ಪ್ರಾಣವನ್ನೇ ಹೀರುವ ಪೀತಜ್ವರವನ್ನು (ಯೆಲೊಫೀವರ್) ನಿಯಂತ್ರಿಸುವ ಪರಿಣಾಮಕಾರಿ ಸಂಶೋಧನೆಯನ್ನು ಮಾಡಿ ಸಹಸ್ರಾರು ಜನರ ಸಾವನ್ನು ತಪ್ಪಿಸಿದ ವಿಜ್ಞಾನಿ, ವಾಲ್ಟರ್ ರೀಡ್.

ವಾಲ್ಟರ್ ರೀಡ್ ೧೮೫೦ರಲ್ಲಿ ವರ್ಜೀನಿಯ ರಾಜ್ಯದ ಪಾದ್ರಿ ಕುಟುಂಬವೊಂದರಲ್ಲಿ ಜನಿಸಿದರು. ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಈತ ತನ್ನ ೧೭ನೆಯ ವಯಸ್ಸಿನಲ್ಲೇ ವೈದ್ಯ ಪದವಿ ಪಡೆದು ಒಂದು ದಾಖಲೆಯನ್ನು ನಿರ್ಮಿಸಿದರು. ಮುಂದೆ ನ್ಯೂಯಾರ್ಕಿಗೆ ಹೋಗಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಅಮೆರಿಕದ ಸೇನೆಯಲ್ಲಿ ಪ್ರಥಮ ಲೆಫ್ಟಿನೆಂಟ್ ಆಗಿ ಸೈನಿಕರಿಗೆ ವೈದ್ಯಕೀಯ ಉಪಚರವನ್ನೊದಗಿಸುವ ಕಾರ್ಯದಲ್ಲಿ ತೊಡಗಿದರು. ಮೇಜರ್ ಆಗಿ ಬಡ್ತಿ ಪಡೆಯುವವರೆಗೆ ಬೇರೆ ಬೇರೆ ಕಡೆಗಳಲ್ಲಿ ಕಾರ್ಯ ಮಾಡುತ್ತ, ಸಂಶೋಧನೆ-ಪ್ರಯೋಗಗಳನ್ನು ನಡೆಸುತ್ತ ಸೋಂಕು ರೋಗಗಳ ಬಗ್ಗೆ ಆಪಾರ ಜ್ಞಾನವನ್ನು ಸಂಪಾದಿಸಿದರು. ಸೈನಿಕರು ವಿಷಮ ಜ್ವರದಿಂದ ಬಳಲುತ್ತಿದ್ದಾಗ ಆ ಜ್ವರ ಹರಡಲು ನೊಣ ಕಾರಣವೆಂಬುದನ್ನು ಆಧಾರಸಹಿತ ಸಿದ್ಧಮಾಡಿ ತೋರಿಸಿ ಅದರ ನಿಯಂತ್ರಣಕ್ಕೆ ಉಪಾಯಗಳನ್ನು ಸೂಚಿಸಿದರು.

ಕ್ಯೂಬಾದಲ್ಲಿ ಅಮೆರಿಕನ್ ಸೈನಿಕರು ಪೀತಜ್ವರಕ್ಕೆ ಬಲಿಯಾಗುತ್ತಿದ್ದಾಗ ಅದರ ತನಿಖೆಗಾಗಿ ವಾಲ್ಟರ್ ರೀಡ್‌ರ ನೇತೃತ್ವದ ಆಯೋಗವೊಂದನ್ನು ಅಲ್ಲಿಗೆ ರವಾನಿಸಲಾಯಿತು. ರೋಗಿಗಳನ್ನು ಅವರ ರಕ್ತ, ಪಿತ್ತ, ವಾಂತಿ, ಬೆವರು, ಮಲಮೂತ್ರವನ್ನು ಪರೀಕ್ಷಿಸಿದಾಗಲೂ ಆ ರೋಗಕ್ಕೆ ಕಾರಣವಾದ ಸೂಕ್ಷ್ಮ ಜೀವಿಗಳು ಗೋಚರಿಸಲಿಲ್ಲ. ಅವು ಸೂಕ್ಷ್ಮ ದರ್ಶಕದಲ್ಲೂ ಕಾಣಲು ಸಾಧ್ಯವಿಲ್ಲದಷ್ಟು ಸೂಕ್ಷ್ಮ ಜೀವಿಗಳಾಗಿರಬೇಕು, ಅವು ಮನುಷ್ಯರಿಂದ ಮನುಷ್ಯರಿಗೆ ಹರಡಲು ವಿಶಿಷ್ಟ ಸೊಳ್ಳೆಗಳು ಕಾರಣವಾಗಿರಬೇಕು ಎಂದು ಊಹಿಸಿದ ವಾಲ್ಟರ್ ರೀಡ್ ಆ ನಿಟ್ಟಿನಲ್ಲಿ ಕಾರ್ಯನಿರತರಾದರು. ಅದನ್ನು ಹರಡುವ ಸೊಳ್ಳೆ ಯಾವುದೆಂಬುದನ್ನು ಗುರುತಿಸಲು ವಾಲ್ಟರ್ ರೀಡ್ ಸ್ವತಃ ಸೊಳ್ಳೆಗಳಿಂದ ಕಚ್ಚಿಸಿಕೊಂಡರು. ಕೊನೆಗೂ ಈ ರೋಗ ಸ್ಟೆಗೋಮಿಯ ಸೊಳ್ಳೆಯಿಂದ ಹರಡುವುದೆಂಬುದನ್ನು ಆತ ಕಂಡುಹಿಡಿದರು. ಆ ಸೊಳ್ಳೆಗಳನ್ನು ನಾಶಪಡಿಸುವ ಮೂಲಕ ಪೀತಜ್ವರವನ್ನು ನಿಯಂತ್ರಿಸಲು ಸಾಧ್ಯ ಎಂದು ಸಿದ್ಧಮಾಡಿ ತೋರಿಸಿಕೊಟ್ಟರು.

ಸರಳಜೀವಿಯಾಗಿದ್ದ ವಾಲ್ಟರ್ ರೀಡ್ ಅಪೆಂಡಿಕ್ಸ್ ಉರಿಯೂತದಿಂದಾಗಿ ೧೯೦೨ರಲ್ಲಿ ನಿಧನ ಹೊಂದಿದರು. ಇವರ ಗೌರವಾರ್ಥವಾಗಿ ವಾಷಿಂಗ್ಟನ್ನಿನಲ್ಲಿ ನಿರ್ಮಿಸಲಾದ ವಾಲ್ಟರ್ ರೀಡ್ ಆರ್ಮಿ ಮೆಡಿಕಲ್ ಸೆಂಟರ್ ಇಂದು ಗಣನೀಯ ಸೇವೆಯನ್ನು ಸಲ್ಲಿಸುತ್ತಿದೆ.