ಅವರದೂ ಅಲ್ಲ ನಮ್ಮದೂ ಅಲ್ಲ. ನಮ್ಮದೂ ಹೌದು ಅವರದೂ ಹೌದು

 

ಇಲ್ಲ. ಇನ್ನು ಮುಂದೆ ಪ್ರತಿ ಶುಕ್ರವಾರ ಸಂಜೆ ನನಗೆ ಆ ಫೋನ್ ಬರುವುದಿಲ್ಲ. ಯಾಕೆಂದರೆ ಆ ಧ್ವನಿ ಮೌನದಲ್ಲಿ ಲೀನವಾಗಿದೆ.

ಹೌದು. ನಾನು ಎನ್.ಪಿ. ಶಂಕರನಾರಾಯಣರ ಬಗೆಗೆ ಹೇಳುತ್ತಿದ್ದೇನೆ. ಅವರ ‘ಪಂಜಿರಿ ಯರವ’ ಪುಸ್ತಕ ಪ್ರಕಟಿಸಿದ ದಿನದಿಂದ ಪ್ರತಿ ಶುಕ್ರವಾರ (ನನ್ನ ವಾರದ ರಜಾದಿನ) ಪೋನ್ ಮಾಡಿ ನಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದರು. ಸಾಹಿತ್ಯ, ಪ್ರಚಲಿತ ವಿದ್ಯಮಾನ, ಸೌಂದರ್ಯ ಲಹರಿ ಹೀಗೆ ಎಲ್ಲ ವಿಷಯದ ಬಗೆಗೆ ಅವರು ‘ಮೆಲ್ಲ’ಗೆ ಮಾತನಾಡುತ್ತಿದ್ದರು. ಅವರ ಧ್ವನಿಯಲ್ಲಿ ಯಾವತ್ತೂ ಠೇಂಕಾರವಾಗಲೀ, ಕೊಂಕಾಗಲೀ ಇರುತ್ತಿರಲಿಲ್ಲ. ನಾನು ಹಲವು ಲೇಖಕರನ್ನು ಹತ್ತಿರದಿಂದ ನೋಡಿದ್ದೇನೆ, ಅವರ ಪುಸ್ತಕಗಳನ್ನು ಪ್ರಕಟಿಸಿದ್ದೇನೆ, ಮಾರಿದ್ದೇನೆ, ಓದಿದ್ದೇನೆ. ಆದರೆ ಶಂಕರನಾರಾಯಣರಂತಹ ಲೇಖಕರು ತುಂಬಾ ಕಡಿಮೆ. ಒಬ್ಬರ ಸಾವು ಕೇವಲ ವ್ಯಕ್ತಿಯೊಬ್ಬನ ಸಾವಲ್ಲ; ಒಂದು ಪರಂಪರೆ, ಮೌಲ್ಯಗಳ ಸಾವು.

ಈ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣವಿದೆ. ಶಂಕರನಾರಾಯಣರಂತೆ ಅನಂತಮೂರ್ತಿಯವರಲ್ಲಿಯೂ ಅಪಾರ ವಿನಯ ಸಜ್ಜನಿಕೆಗಳಿವೆ. ವಿಷವಿಕ್ಕಿದವನನ್ನು ಕೂಡ ಉಪಚರಿಸುವ ತಾಯಗುಣವಿದೆ. ಇದು ಅವರ ಎಲ್ಲ ಬರಹಗಳ ಹಿಂದಿರುವ ಅಂತಃಕರಣ.

ಅನಂತಮೂರ್ತಿ ಅವರು ತಮ್ಮ ಬರಹದಲ್ಲಿ ಪ್ರಸ್ತಾಪ ಮಾಡುವ ವಿವರಗಳನ್ನು ಗಮನಿಸಿದಾಗ, ಅವರು ಯಾಕೆ ಕೆಲವು ವಿಷಯಗಳನ್ನು ಪದೇ ಪದೇ ಹೇಳುತ್ತಾರೆ? ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಕೆಲ ಗೆಳೆಯರ ಜೊತೆ ಈ ಸಂಗತಿಯನ್ನು ಚರ್ಚಿಸುವಾಗ, ‘ಅವರಲ್ಲಿನ ಸರಕು ಖಾಲಿಯಾಗಿದೆ ಅದಕ್ಕಾಗಿ…’ ಎಂದು ವ್ಯಂಗ್ಯವಾಡಿದ್ದೂ ಉಂಟು. ಅವರಿಗೆ ವಿಚಾರದ ಕೊರತೆಯೇ? ನನಗಂತೂ ಹಾಗೆ ಅನಿಸುತ್ತಿಲ್ಲ. ನಮ್ಮ ಕಾಲದ ಬಹು ದೊಡ್ಡ ಬರಹಗಾರ. ಹೀಗೆ ಒಂದೇ ಬಗೆಯ ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ ಎಂದರೆ ಅದರ ಅರ್ಥ, ಒಂದೋ ಸಂದರ್ಭ ಹಾಗೆ ಇದೆ, ಹಾಗು ಇಂತಹ ಸಂದರ್ಭಕ್ಕೆ ತುರ್ತಾಗಿ ಪ್ರತಿಕ್ರಿಯಿಸುವುದು ಅನಿವಾರ್ಯ ಎಂದು ಬರಹಗಾರನಿಗೆ ಅನ್ನಿಸುತ್ತಿದೆ. ಅಥವಾ ಪುನರಾವರ್ತಿತವಾಗುತ್ತಿದೆ ಎನ್ನಿಸುವ ವಿಚಾರ ಪ್ರತಿ ಬಾರಿಯೂ ಹೊಸ ಅರ್ಥಪ್ರಪತ್ತಿಯಲ್ಲಿ, ಬದಲಾದ ಸನ್ನಿವೇಶದ ಬೆಳಕಿನಲ್ಲಿ, ಹುಟ್ಟುತ್ತಿರಲೂಬಹುದೇ?

ಅನಂತಮೂರ್ತಿ ಅವರ ವಿಷಯದಲ್ಲಿ ಎರಡೂ ಸತ್ಯವೇ. ಅದಕ್ಕಿಂತ ಹೆಚ್ಚಾಗಿ, ಹೇಳುತ್ತಿರುವುದು ಅವರಲ್ಲ, ಅವರೆಂಬುದು ಮರೆಯಾಗಿ, ನಾವೇ ಅವರಾಗಿ, ಅವರ ಮೂಲಕ ಹೊಳೆಯುತ್ತಿರುವ ವಿಚಾರಗಳಿವು. ಅವರೊಡನೆ ಸಂವಾದ ಮಾಡುವುದು, ಜಗಳ ತೆಗೆಯುವುದು, ನಮ್ಮೊಡನೆ ನಾವೇ ಮಾಡಿಕೊಳ್ಳುವ ಜಗಳದಂತೆ; ಸದ್ಯದ ಎಲ್ಲ ತಲ್ಲಣ, ಖುಷಿ, ಪಲ್ಲಟಗಳಿಗೆ ಅನಂತಮೂರ್ತಿಯವರ ಮೂಲಕ ನಾವು ಪ್ರತಿಕ್ರಿಯಿಸುತ್ತಿದ್ದೇವೆಂಬ ಸಮಾಧಾನ ಈ ಸಂವಾದಗಳಲ್ಲಿ ಇರುತ್ತದೆ. ಆ ಕಾರಣದಿಂದಲೇ ಅನಂತಮೂರ್ತಿಯವರು, ಪ್ರಸ್ತುತ ಸಂಕಲನದ ಬರಹಗಳಿಗೆ ನಮ್ಮ ಕಾಲಘಟ್ಟದ ಪ್ರಮುಖ ಚಿಂತಕರಿಂದ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಪಡೆದು, ಆ ಪ್ರತಿಕ್ರಿಯೆಗಳನ್ನೂ ಈ ಸಂಕಲನದಲ್ಲಿ ಪ್ರಕಟಿಸುತ್ತಿದ್ದಾರೆ. ತನ್ನ ಮಾತು ತನ್ನದು ಮಾತ್ರವಲ್ಲ; ಅದು ತನ್ನ ಸಮುದಾಯದ ಮಾತೂ ಹೌದು ಎಂಬ ಅಭಿಪ್ರಾಯ ಅವರದು.

ವಿನಯದ ಬಗೆಗೆ ಆರಂಭಿಸಿ ಅಲ್ಲಿಗೇ ಮುಕ್ತಾಯ ಮಾಡುತ್ತೇನೆ. ಅನಂತಮೂರ್ತಿ ಅವರು ಇಲ್ಲಿ ಪ್ರಮುಖವಾದ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಇವು ನಾವು ಪ್ರತಿನಿತ್ಯ ಬದುಕಿನಲ್ಲಿ ಎದುರಾಗುವಂತಹವೇ – ಆದರೆ ಅವುಗಳನ್ನು ದ್ವಿರುಕ್ತಿಗಳೆಂದಾಗಲೀ, ವೈರುಧ್ಯಗಳೆಂದಾಗಲೀ ಗ್ರಹಿಸಬಾರದು; ಇವುಗಳನ್ನು  ನಮ್ಮೆಲ್ಲರ ಬದುಕಿನ ವೈವಿಧ್ಯಗಳೆಂದು ಪರಿಗಣಿಸಿದರೆ ಸತ್ಯಗಳು ನಾವು ಕಾಣುವುದಕ್ಕಿಂತ ಭಿನ್ನವಾಗಿ ಕಾಣಬಹುದೇನೋ. ಇಂತಹ ಮಾರ್ಗ, ನಾಗಾರ್ಜುನನ ಮೂಲಮಾಧ್ಯಮಕಕಾರಿಕಾ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕುಸುಮಬಾಲೆ, ಸೂರ್ಯನ ಕುದುರೆಗಳಲ್ಲಿ ಅಷ್ಟೆ ಅಲ್ಲದೆ ಇಲ್ಲಿನ ಹಲವು ಲೇಖನಗಳಲ್ಲೂ ನನಗೆ ಕಂಡಿದೆ.

ವಿನಯವಂತಿಕೆ ಎಂದೆ. ಹೌದು, ಇಲ್ಲಿ ಲೇಖಕನ ಮಾತು ಅಂತಿಮವಾಗುವುದಿಲ್ಲ. ಓದುಗಿನ ಅಭಿಪ್ರಾಯವೇ ಅಂತಿಮ ಎಂಬ ವಿನಯದಲ್ಲಿ, ಸಜ್ಜಿನಿಕೆಯಲ್ಲಿ ಅನಂತಮೂರ್ತಿ ಅವರ ಈ ಪುಸ್ತಕ ಮುಗಿಯುತ್ತದೆ; ಕ್ಷಮಿಸಿ ಮುಂದುವರೆಯುತ್ತದೆ.

*

ಈ ಲೇಖನಗಳನ್ನೆಲ್ಲ ಸಂಗ್ರಹಿಸಿಕೊಟ್ಟಾಗ ಆಸ್ಥೆಯಿಂದ ತಿದ್ದಿ, ನಮ್ಮ ಪ್ರಕಾಶನಕ್ಕೇ ಪ್ರಕಟಿಸಲು ಅವಕಾಶಮಾಡಿಕೊಟ್ಟ ಅನಂತಮೂರ್ತಿಯವರ ಪ್ರೀತಿಗೆ,

ಶ್ರೀಮತಿ ಎಸ್ತರ್‌ಅನಂತಮೂರ್ತಿ ಅವರ ತಾಳ್ಮೆಗೆ,

ಅನಂತಮೂರ್ತಿಯವರ ಕಾರಿನ ಸಾರಥಿ ಶಿವನ ಮುಗ್ಧತೆ ಮತ್ತು ಸಹಕಾರಕ್ಕೆ,

ಲೇಖನಗಳನ್ನು ಒದಗಿಸಿದ ಅಕ್ಷರ, ವಿವೇಕ್ ಶಾನುಭಾಗ್, ಆರ್.ಜಿ. ಹಳ್ಳಿ ನಾಗರಾಜ್, ರಕ್ಷಿತ್ ಅವರಿಗೆ,

ಇಲ್ಲಿಯ ಲೇಖನಗಳನ್ನು ಪ್ರಕಟಿಸಿದ್ದ ಪತ್ರಿಕೆ/ಪುಸ್ತಕಗಳ ಸಂಪಾದಕರಿಗೆ,

ಸಹಮಾತು ಬರೆದ ರಾಜಶೇಖರ್, ಪಟ್ಟಾಭಿ, ಫಣಿರಾಜ್ ಅವರಿಗೆ,

ಲೇಖನಗಳನ್ನು ಅನುವಾದಿಸಿಕೊಟ್ಟ ನಿತ್ಯಾನಂದ ಶೆಟ್ಟಿ, ಸಿರಾಜ್‌ಅಹಮದ್, ವೆಂಕಟರಮಣ ಐತಾಳ್, ವೆಂಕಟಲಕ್ಷ್ಮಿ ಅವರಿಗೆ,

ಕೆಲ ಲೇಖನಗಳನ್ನು ಪರಿಷ್ಕರಿಸಿಕೊಟ್ಟ ವಾಸುದೇವಮೂರ್ತಿಗೆ,

ಕರಡಚ್ಚು ತಿದ್ದಿದ ಭಾರತೀ ದೇವಿ, ಪುಷ್ಪಾ ಪಶುಪತಿ ಅವರಿಗೆ,

ಹೊದಿಗೆ ವಿನ್ಯಾಸ ಮಾಡಿರುವ ಪ್ರಜ್ಞಾವಂತ ಕಲಾವಿದ ಸುದೇಶ್ ಮಹಾನ್ ಮತ್ತು ಯು.ಟಿ. ಸುರೇಶ್‌ ಅವರಿಗೆ,

ಅತ್ಯಲ್ಪ ಅವಧಿಯಲ್ಲಿ ಮುದ್ರಿಸಿಕೊಟ್ಟ ಹೂವಪ್ಪ ಮತ್ತು ಅವರ ಸಿಬ್ಬಂದಿ ವರ್ಗದವರಿಗೆ,

ನಮ್ಮೆಲ್ಲಾ ಕೆಲಸಗಳನ್ನು ಬೆಂಬಲಿಸುತ್ತಿರುವ ಹಿರಿಯರಾದ ಪ್ರಭುಶಂಕರ್, ಚಿ. ಶ್ರೀನಿವಾಸರಾಜು, ಎಚ್‌. ಎಸ್. ರಾಘವೇಂದ್ರರಾವ್, ದೇವನೂರ ಮಹಾದೇವ, ಬಸವರಾಜ ಕಲ್ಗುಡಿ, ಮಲ್ಲೇಪುರಂ, ರಹಮತ್, ಎಚ್.ಎಸ್. ಶಿವಪ್ರಕಾಶ್, ಶ್ರೀಮತಿ ವಿಜಯಾ, ರವಿ ಬೆಳಗೆರೆ, ಕೆ. ವೆಂಕಟರಾಜು, ಅಜಿತಾ ವೇಣುಕೃಷ್ಣಪ್ರಸಾದ್, ಎಂ.ಕೆ. ನರಸಿಂಹ ಮೂರ್ತಿ ಮತ್ತು ಗೆಳೆಯರಿಗೆ

ಶರಣು.

ಅಂದ ಹಾಗೆ:

ಇದು ಅನಂತಮೂರ್ತಿಯವರು ೭೫ನೆಯ ವರ್ಷಕ್ಕೆ ಕಾಲಿರಿಸುತ್ತಿರುವ ಸಂದರ್ಭದಲ್ಲಿ ನಾವು ಅರ್ಪಿಸುತ್ತಿರುವ ನುಡಿ ನಮನ.

ವಂದನೆಗಳು
. ರವಿಕುಮಾರ
ಅಭಿನವದ ಪರವಾಗಿ