ನಾನೊಂದು ಪರಿಮಿತವಾದ ಬ್ರಾಹ್ಮಣಲೋಕದಲ್ಲಿ ಅದರಲ್ಲೂ ಅಗ್ರಹಾರದಲ್ಲೇ ಹುಟ್ಟಿ ಬೆಳೆದವನು. ಅದೃಷ್ಟವಶಾತ್ ನಮ್ಮ ತಂದೆ ಗಾಂಧಿಯನ್ನು ಓದಿಕೊಂಡಿದ್ದವರಾದ್ದರಿಂದ ನನ್ನ ಮನೋಲೋಕ ವಿಶಾಲವಾಗಲು ಸಹಾಯಕವಾಯಿತು. ತಂದೆಯವರು ಜಮೀನುದಾರ ವರ್ಗದ ಪರವಾಗಿ ಕೋರ್ಟುಗಳಲ್ಲಿ ಅಲೆದಾಡುತ್ತಿದ್ದವರು. ಸ್ವತಃ ನನ್ನ ತಂದೆ ಜಮೀನುದಾರರು ಅಲ್ಲವಾದರೂ, ಅವರ ಬುದ್ಧಿಶಕ್ತಿಯನ್ನೆಲ್ಲ ಜಮೀನುಳ್ಳವರ ಪರವಾಗಿಯೇ ವಿನಿಯೋಗಿಸಬೇಕಾದ ಬಡತನದಲ್ಲಿ ಬದುಕಿದ್ದವರು. ಹೀಗಿರುವಾಗ ನನ್ನ ತಂದೆಯಲ್ಲೊಂದು ದ್ವಂದ್ವ ಶುರುವಾಯಿತು. ಅದಕ್ಕೆ ಕಾರಣ, ರೈತರ ಪರವಾಗಿ ಹೋರಾಡುತ್ತಿದ್ದ ಗೋಪಾಲಗೌಡರಲ್ಲಿ ಅವರಿಗಿದ್ದ ವಿಶ್ವಾಸ ಹಾಗೂ ವೈಯಕ್ತಿಕವೆನ್ನಬಹುದಾದ ಅಕ್ಕರೆ.

ಗೌಡರಿಗೂ ನನ್ನ ತಂದೆಗೂ ನಡೆದ ಒಂದು ಸಂಭಾಷಣೆಯನ್ನಿಲ್ಲಿ ನೆನಪಿಸಿಕೊಳ್ಳುತ್ತೇನೆ. ನನ್ನ ತಂದೆಯ ಪ್ರಕಾರ ಹಲವು ವಿಧವೆಯರು ಬಡಪಾಯಿಗಳಾಗಿ ತಮ್ಮ ಹೆಸರಿನಲ್ಲಿದ್ದ ಜಮೀನಿನಿಂದ ಬರುವ ಗೇಣಿಯಿಂದ ಬದುಕುತ್ತಿದ್ದರು. ಗೇಣಿ ಕೊಡುವುದು ರದ್ದಾಗಿಬಿಟ್ಟರೆ ಇಂಥ ಬಡಪಾಯಿಗಳ ಗತಿಯೇನೆಂದು ನನ್ನ ಅಪ್ಪ ಗೌಡರನ್ನು ಕೇಳಿದರು. ಕಾನೂನಿನ ಕಣ್ಣಿನಲ್ಲಿ ಈ ಬಡಪಾಯಿ ಹೆಂಗಸರೂ ಕೂಡ ‘absentee landlord’ಗಳೇ. ನನ್ನ ತಂದೆಯ ಜೊತೆ ಚಾವಡಿಯಲ್ಲಿ ಮಣಿಯ ಮೇಲೆ ಕಾಲು ಮಡಚಿ  ಕೂತು, ಕಾಫಿ ಕುಡಿಯುತ್ತಿದ್ದ ಗೌಡರು ಥಟ್ಟನೆ ಯಾವ ಉತ್ತರವನ್ನೂ ಕೊಡಲಿಲ್ಲ. ನನ್ನ ತಂದೆಯ ಕಾಳಜಿಯನ್ನು ತನ್ನದೆಂಬಂತೆ ಧ್ಯಾನಿಸಿಕೊಂಡು, ಬಲು ನಿಧಾನವಾಗಿ, ಹೀಗೆ ಹೇಳಿದ್ದರು – ‘ಆಚಾರ್ರೇ, ಈ ಪ್ರಪಂಚದಲ್ಲಿ ದಡ ಹತ್ತಿದೋರು ಕೆಲವರು, ದಡ ಹತ್ತದೇ ಇರೋವರು ಹಲವರು. ರಾಜಕಾರಣದಲ್ಲಿ ಈ ಎರಡು ವರ್ಗಗಳ ನಡುವೆ ಯಾರ ಕಡೆಗೆ  ನಾನಿದ್ದೀನಿ ಅನ್ನೋದನ್ನ ನಾನು ಮೊದಲು ನಿಶ್ಚಯಿಸಬೇಕು. ದಡ ಹತ್ತಲಾರದೆ ಸಂಕಟದಲ್ಲಿರುವವರ ಕಡೆ ನಾನಿರುವುದಾದರೆ ಈ ಬಡಪಾಯಿ ಹೆಂಗಸರಿಗೆ ಸ್ವಲ್ಪ ಅನ್ಯಾಯವಾಗುವುದಾದರೂ ಅದರ ಬಗ್ಗೆ ನನ್ನ ತೀರ್ಮಾನವನ್ನು ಬದಲಾವಣೆ ಮಾಡಿಕೊಳ್ಳಲಾರೆ.’

ನನ್ನ ಆಲೋಚನಾ ಕ್ರಮದ ಮೇಲೆ ಆ ದಿನಗಳಲ್ಲಿ ಗಾಢವಾದ ಪರಿಣಾಮವನ್ನು ಬೀರಿದ ಮಾತು ಅದು. ಮುಂದೆ ಮಾವೋತ್ಸೆ ತುಂಗರು ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ರಡಿಕ್ಷನ್‌ಗಳ ಬಗ್ಗೆ ಮಾತುಗಳನ್ನು ಆಡುವ ಮೊದಲೇ ಗೋಪಾಲಗೌಡರು ತನ್ನ ಕ್ರಿಯಾಶೀಲತೆಯಲ್ಲಿಯೇ ಅದನ್ನು ಅರಿತಿದ್ದರು.

ನಾನು ಇಂಟರ್‌ಮೀಡಿಯೇಟನ್ನು ಶಿವಮೊಗ್ಗದ ಕಾಲೇಜಿನಲ್ಲಿ ಓದಲು ಪ್ರಾರಂಭಿಸಿದಾಗ ‘ಸ್ಟೂಡೆಂಟ್ಸ್ ಸೋಷಿಯಲಿಸ್ಟ್ ಕ್ಲಬ್’ ಎನ್ನುವುದರ ಸೆಕ್ರೆಟರಿಯಾದೆ. ಗೌಡರು ಆಗಿನ್ನೂ ಶಾಸಕರಾಗಿರಲಿಲ್ಲ.  ಪಾರ್ಕಿನಲ್ಲಿ ಯಾವುದೋ ವಿಷಯದ ಬಗ್ಗೆ ಒಂದು ಸಣ್ಣ ಸಭೆಯನ್ನು ಕರೆದಿದ್ದೆ. ಆ ಸಭೆಗೆ ಗೌಡರೂ ಬಂದಿದ್ದರು. ಆ ಸಭೆಯಲ್ಲಿ ಕೆಲವರನ್ನು ಮಾತನಾಡಲು ನಾನು ಕರೆದೆ; ಆದರೆ ಗೌಡರನ್ನು ಕರೆಯಲಿಲ್ಲ. ಸಭೆ ಮುಗಿದ ಮೇಲೆ ಎಲ್ಲರ ಜೊತೆ ನಾನೂ ಹೊರಟಾಗ ‘ಅನಂತಮೂರ್ತಿ ಸ್ವಲ್ಪ ಇರಿ…’ ಎಂದರು ಗೋಪಾಲಗೌಡರು. ಅವರು ಕೋಪಿಷ್ಠರಾಗಿ ನನ್ನನ್ನು ಕೇಳಿದರು – ‘ಯಾಕೆ ನನ್ನನ್ನು, ಮಾತನಾಡಲು ನೀವು, ಕೇಳಲೇ ಇಲ್ಲ? ನೀವು ಬ್ರಾಹ್ಮಣಿಕೆ ಮಾಡುತ್ತ ಇರಬಹುದೆಂದು ನನಗೆ ಅನುಮಾನ.’

ನನಗೆ ಏನು ಹೇಳುವುದು ಗೊತ್ತಾಗಲಿಲ್ಲ. ‘ನಿಮ್ಮನ್ನು ಮಾತನಾಡಲು ಕರೆದಿದ್ದರೆ ಒಂದು ಗಂಟೆಗಿಂತ ಕಡಿಮೆ ನೀವು ಮಾತನಾಡುವವರಲ್ಲ ಎಂದು ನನಗೆ ಭಯವಾಯಿತು’ ಎಂದು ನಾನು ವಿವರಿಸಬಹುದಾಗಿತ್ತು. ಆದರೆ ನನ್ನ ಬಾಯಲ್ಲಿ ಮಾತೇ ಹೊರಡಲಿಲ್ಲ. ಕಣ್ಣಿನಲ್ಲಿ ನೀರುಕ್ಕಿ ಬಿಕ್ಕಳಿಸಿದೆ. ಗೌಡರು ಏನೂ ಹೇಳದೆ ನಡೆದುಬಿಟ್ಟರು.

ಆ ದಿನಗಳಲ್ಲಿ ಗೌಡರು ತಮ್ಮ ವಸತಿ ಮತ್ತು ಊಟಕ್ಕಾಗಿ ಶಿವಮೊಗ್ಗದ ಒಕ್ಕಲಿಗರ ಹಾಸ್ಟೆಲಿನಲ್ಲಿ ಮೇಲ್ವಿಚಾರಕರಾಗಿದ್ದರು. ಸೋಷಲಿಸ್ಟ್ ಗೆಳೆಯರೊಬ್ಬರು ‘ತುಂಬ ಜ್ವರ ಬಂದು ಗೌಡರು ಮಲಗಿಬಿಟ್ಟಿದ್ದಾರೆ; ನಿನ್ನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದರು’ ಎಂದು ಮಾರನೆಯ ದಿನ ನನಗೆ ಹೇಳಿದರು. ನಾನು ಸೈಕಲ್ ಹತ್ತಿ ಸೀದಾ ಒಕ್ಕಲಿಗರ ಹಾಸ್ಟೆಲಿಗೆ ಹೋದೆ. ಗೌಡರ ರೂಮಿನ ಬಾಗಿಲನ್ನು ತಳ್ಳಿ ಹಾಸಿಗೆಯ ಮೇಲೆ ಅವರ ಪಕ್ಕದಲ್ಲಿ ಕೂತು ಕೈಯನ್ನು ಹಿಡಿದುಕೊಂಡೆ. ತುಂಬಾ ಜ್ವರವಿತ್ತು. ಗೋಪಾಲಗೌಡುರ ಕಣ್ಣನ್ನು ತೆರೆದು ನನ್ನನ್ನು ಪ್ರೀತಿಯಿಂದ ನೋಡುತ್ತ ‘ನಾನು ಹೇಳಿದ್ದನ್ನು ಮರೆತುಬಿಡು… ಇನ್ನು ನನ್ನ ಜ್ವರ ಇಳಿದು ಹೋಗುತ್ತೆ’ ಎಂದರು.

ಗೌಡರ ಮನಸ್ಸು ಬೇರೆಯಲ್ಲ, ದೇಹ ಬೇರೆಯಲ್ಲ, ಅಷ್ಟು ಸೂಕ್ಷ್ಮ ಅವರು.

ನನಗಾಗ ಹದಿನೆಂಟೋ ಹತ್ತೊಂಬತ್ತೋ ವಯಸ್ಸು. ಗೌಡರ ಜೊತೆ ನಾನು ಮತ್ತು ನನ್ನ ಇನ್ನೊಬ್ಬ ಗೆಳೆಯ ಶಂಕರನಾರಾಯಣ ಭಟ್ಟ ಮಾತನಾಡದಿದ್ದ ವಿಷಯವೇ ಇಲ್ಲ. ಫ್ರೆಂಚ್ ಕ್ರಾಂತಿ, ರಷ್ಯನ್ ಕ್ರಾಂತಿ, ಗಾಂಧೀಜಿ, ಎಂ.ಎನ್. ರಾಯ್, ಜಯಪ್ರಕಾಶ್‌ನಾರಾಯಣ್- ಈ ವಿಷಯಗಳು ಮಾತ್ರವಲ್ಲದೆ : ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ವೇದವ್ಯಾಸ, ವಾಲ್ಮೀಕಿ, ಕುಮಾರವ್ಯಾಸ – ಈ ಬಗ್ಗೆಯೂ ನಾವು ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಿದ್ದೆವು. ಕುಮಾರವ್ಯಾಸ ಮತ್ತು ಬೇಂದ್ರೆ ಗೌಡರ ಬಾಯಲ್ಲೇ ಇದ್ದರು.

ಚಿಕ್ಕವನಾಗಿದ್ದಾಗ ಗೌಡಸಾರಸ್ವತ ಹೊಟೇಲಿನಲ್ಲೂ ಕಾಫಿ ಕುಡಿಯದಿದ್ದ ನಾನು, ಶಿವಮೊಗ್ಗದ ಮುಸ್ಲಿಂ ಹೊಟೇಲೊಂದರಲ್ಲಿ ಚಹಾ ಹೀರಿ ಸಿಗರೇಟು ಸೇದಲು ಶುರು ಮಾಡಿದೆ. ನನ್ನ ಆಲೋಚನಾ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆಗಳಾದವು. ದುರ್ಗಿಗುಡಿಯ ನಮ್ಮ ಮನೆಯ ಹೆಂಚು ಹೊದಿಸಿದ ತಗ್ಗಿದ ಸೂರಿನ ಮಹಡಿ ಕಾಗೋಡು ಸತ್ಯಾಗ್ರಹದ ಮುಖ್ಯ ಕಛೇರಿಯಾಗಿಬಿಟ್ಟಿತ್ತು. ಅಲ್ಲೇ ನಾವೆಲ್ಲ ಕೂರುವುದು, ಬರೆಯುವುದು, ಹರಟೆಹೊಡೆಯುವುದು ಮತ್ತು ಮಲಗುವುದು. ಈ ಮಹಡಿಯ ಕೆಳಗೊಂಡು ಪ್ರೆಸ್, ಪ್ರೆಸ್ಸಿನ ಹಿಂದೊಂದು ಪುಟ್ಟಮನೆ. ಅದರಲ್ಲಿ ನನ್ನ ತಂದೆ, ನನ್ನ ತಾಯಿ, ನನ್ನ ತಂಗಿ, ಮತ್ತೊಬ್ಬ ತಮ್ಮ ಇವರ ಬಿಡಾರ. ಬಂದವರಿಗೆಲ್ಲ ನಮ್ಮ ಮನೆಯಲ್ಲೇ ಊಟ ಮತ್ತು ಉಪಚಾರ. ಇವೆಲ್ಲ ನನ್ನ ತಾಯಿಯ ಔದಾರ್ಯದಿಂದ. ನಮ್ಮಲ್ಲು ಊಟ ಮಾಡದವರಿಲ್ಲ. ಶುಭ್ರವಾಗಿ ಬಟ್ಟೆ ಹಾಕಿದ ಬಹು ಶ್ರೀಮಂತರಾದ ಸೋಷಿಲಿಸ್ಟ್ ನಾಯಕ ಸಿ.ಜಿ.ಕೆ. ರೆಡ್ಡಿ, ಶ್ರೀ ಗರುಡ ಶರ್ಮ, ಶ್ರೀ ಖಾದ್ರಿ ಶಾಮಣ್ಣ ಎಲ್ಲರೂ ಶಿವಮೊಗ್ಗಕ್ಕೆ ಬಂದಾಗ ನಮ್ಮ ಮನೆಯಲ್ಲೇ ಕೂಡುವುದು. ರೈತರ ಸಮಸ್ಯೆಗಳ ಬಗ್ಗೆ ಗೌಡರು ಹೇಳಿದ್ದನ್ನು ಅಥವಾ ಸಿ.ಜಿ.ಕೆ. ರೆಡ್ಡಿ ಹೇಳಿದ್ದನ್ನು ನಾನೇ ಬರೆದು, ನಮ್ಮ ಟ್ರೆಡಲ್ ಪ್ರೆಸ್‌ನಲ್ಲಿ ಅಚ್ಚುಹಾಕಿ ನಾನೇ ನನ್ನ ಜೊತೆಗಾರನಾದ ಆರ್.ಟಿ. ನಾರಾಯಣ್ ಜೊತೆ ಎಲ್ಲೆಲ್ಲೂ ಹಂಚುವುದು. ಈ ವ್ಯವಸ್ಥೆಯನ್ನೆಲ್ಲ ನೋಡಿಕೊಳ್ಳುತ್ತಿದ್ದವರು ‘ಅಣ್ಣಯ್ಯ’ ಎಂದು ನಾವು ಅರ್ಥಪೂರ್ಣವಾಗಿ ಕರೆಯುತ್ತಿದ್ದ ವೈ.ಆರ್. ಪರಮೇಶ್ವರಪ್ಪವರು.

ಊಟ ಮುಗಿದ ಮೇಲೊಂದು ಸಮಸ್ಯೆಯಿರುತ್ತಿತ್ತು. ಬ್ರಾಹ್ಮಣೇತರರು ಬಿಟ್ಟು ಹೋದ ಎಂಜಲೆಲೆಯನ್ನು ನನ್ನ ತಾಯಿ ಎತ್ತುವುದು ಹೇಗೆ? ನಾನೇ ಎತ್ತಿ ಸಾರಿಸುತ್ತಿದ್ದೆ. ಒಮ್ಮೆ ನನ್ನ ತಾಯಿ ಹೇಳಿದರು – ‘ನಮ್ಮ ಕಡೆಯವರು ಯಾರೂ ನೋಡೋಲ್ಲವಲ್ಲ, ನಾನೇ ಎತ್ತುತ್ತೇನೆ ಬಿಡು.’

ಗೌಡರ ಭಾಷಣವೆಂದರೆ ಅದೊಂದು ದೀರ್ಘ ಅನುಭವವೇ. ಎಂಥ ತುರ್ತಿನ ವಿಷಯವಿರಲಿ ಡಾರ್ವಿನ್ನನ ವಿಕಾಸವಾದದಿಂದಲೆ ಪ್ರಾರಂಭಿಸಿ, ಕುಮಾರವ್ಯಾಸ, ಅಡಿಗ, ಕುವೆಂಪು, ಬೇಮದ್ರೆ ಮೊದಲಾದ ಕವಿಗಳ ಕವಿತೆಗಳನ್ನು ಬಳಿಸಿ ನೆರೆದಿದ್ದ ಎಲ್ಲ ರೈತರಿಗೂ ತನ್ನ ಮಾತು ವೈಚಾರಿಕವಾಗಿ ಮನದಟ್ಟಾಗುವಂತೆ ಮಾತನಾಡುತ್ತಿದ್ದರು. ಹೀಗೆ ಅವರು ಕೇವಲ ರಾಜಕಾರಣಿಯಾಗದೆ ರಾಜಕಾರಣದ ಟೀಚರ್-ತತ್ವಜ್ಞಾನಿಯಾಗಿಬಿಟ್ಟರು.

ಕಾಗೋಡು ಸತ್ಯಾಗ್ರಹದ ನಂತರ ಗೌಡರು ಸಾಗರದ ಶಾಸಕರಾಗಿ ಆಯ್ಕೆಯಾದರು. ಕರ್ನಾಟಕದಲ್ಲಿ ಮತ್ತೆ ಯಾರೂ ಆ ಕ್ರಮದಲ್ಲಿ ಶಾಸಕರಾದಂತೆ ನನಗೆ ಕಾಣಿಸುವುದಿಲ್ಲ. ಎಲ್ಲ ಪ್ರಚಾರ ಭಾಷಣವೂ ಒಂದು ಓಟಿಗಾಗಿ ಜೊತೆಗೆ ಒಂದು ನೋಟಿಗಾಗಿ. ಸಾಧ್ಯವಿದ್ದವರೆಲ್ಲ ಕೊಟ್ಟ ಒಂದೊಂದು ರೂಪಾಯಿಯ ನೋಟುಗಳೇ ಮುಂದಿನ ಪ್ರಯಾಣದ ಖರ್ಚಿಗೆ ವಿನಿಯೋಗವಾಗುತ್ತಿದ್ದವು. ಆ ಕಾಲದಲ್ಲಿ ಬಡ ಒಕ್ಕಲಿಗರು, ಬಡ ಬ್ರಾಹ್ಮಣರು, ದೀನರು, ಮುಸ್ಲಿಮರು, ಕ್ರೈಸ್ತರು ಎಲ್ಲರೂ ಗೋಪಾಲಗೌಡರಿಗೇ ಓಟು ಕೊಟ್ಟಿದ್ದು. ಇವರಲ್ಲಿ ಕೆಲವರು ಯಕ್ಷಗಾನದ ಮೂಲಕ, ನಾಟಕದ ಮೂಲಕ ಹಣವನ್ನು ಒಟ್ಟು ಮಾಡಿ ಗೌಡರಿಗೆ ಕೊಡುತ್ತಿದ್ದರು. ಗೌಡರ ಎಲ್ಲ ಭಾಷಣಗಳೂ ಪ್ರಪಂಚದ ಇತಿಹಾಸದ ಪಾಠಗಳಂತೆ ಇರುತ್ತಿದ್ದವು. ಮುಂದೊಮ್ಮೆ ಗೌಡರು ತೀರ್ಥಹಳ್ಳಿಯಿಂದ ನಿಂತಾಗ ಅವರ ವಿರುದ್ಧ ಅವರಿಗೆ ತುಂಬ ಪ್ರಿಯರಾದ ಶ್ರೀ ಬಿ.ಸಿ. ಎಸ್. ವಿಶ್ವನಾಥನ್‌ರನ್ನು ಶ್ರೀಮಂತವರ್ಗ ನಿಲ್ಲಿಸಿತು. ವಿಶ್ವನಾಥನ್ ಹೀಗೆ ನಿಂತಿದ್ದು ನಮಗೆಲ್ಲ ಆಶ್ಚರ್ಯವೇ. ಆದರೆ ವರ್ಗಸಮರದಲ್ಲಿ ಹೀಗಾಗುವುದು ಸಹಜವೇ ಎಂದು ತಿಳಿದಿದ್ದ ಗೋಪಾಲಗೌಡರಲ್ಲಿ ವ್ಯಕ್ತಿದ್ವೇಷವಿರಲಿಲ್ಲ. ಎರಡು ಕಡೆಯವರೂ ಬಡಿದಾಡಿದರು. ಆದರೆ ಒಂದೊಂದು ರಾತ್ರಿ ಎಲ್ಲಿ ಊಟ ಮಾಡುವುದೆಂದು ತೋಚದೆ ಇದ್ದಾಗ, ‘ಊಟಕ್ಕೆ ಬರುತ್ತೇನೆ’ ಎಂದು ವಿಶ್ವನಾಥನ್‌ಗೆ ಗೌಡರು ಹೇಳಿಕಳಿಸುತ್ತಿದ್ದರು. ಹಿಂದೆಲ್ಲ ಅವರ ಮನೆಯಲ್ಲೇ ಊಟ ಮಾಡುವುದು ರೂಢಿಯಲ್ಲವೆ?

*

ಬೆಂಗಳೂರಿನಲ್ಲಿ ಮುಂದೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಮ್ಯಾನೇಜಿಂಗ್ ಎಡಿಟರಾಗಿದ್ದ ಸಿ.ಜಿ.ಕೆ. ರೆಡ್ಡಿಯವರು ಆಗ ಸೋಷಲಿಸ್ಟ್ ಪಕ್ಷದ ಅಧ್ಯಕ್ಷರು. ಸುಭಾಷ್ ಚಂದ್ರ ಬೋಸರ ಐ.ಎನ್.ಎ. ಜೊತೆ ಸಂಪರ್ಕವಿದ್ದವರು ಇವರು. ಬೆಂಗಳೂರಿನಲ್ಲಿ ನಾಗಭೂಷಣ, ಖಾದ್ರಿ ಶಾಮಣ್ಣ, ಭಾ.ಸು.ಕೃಷ್ಣಮೂರ್ತಿ ಪಕ್ಷದ ನಾಯಕ ವರ್ಗಕ್ಕೆ ಸೇರಿದವರು.

ಕಾಗೋಡಿನಲ್ಲಿ ಸತ್ಯಾಗ್ರಹವಾಗಲಿಕ್ಕೆ ಮುಖ್ಯಕಾರಣವೆಂದರೆ ಗೇಣಿ ಅಳೆಯುವ ಕೊಳಗದ ಗಾತ್ರ ದೊಡ್ಡದಾಗುತ್ತ ಹೋದದ್ದು. ಕಾಗೋಡಿನ ಭೂಮಾಲೀಕರಲ್ಲಿ ಪ್ರಸಿದ್ಧರಾದವರು ಶ್ರೀ ಕೆ.ಜಿ. ಒಡೆಯರ್ ಎನ್ನುವವರು. ಒಡೆಯರ್ ತುಂಬ ಸಜ್ಜನರೆಂದೇ ಖ್ಯಾತರಾದ ಕಾಂಗ್ರೆಸ್ಸಿನ ಮುಖಂಡರಲ್ಲಿ ಒಬ್ಬರು. ಒಡೆಯರ್ ಟಾಗೋರರನ್ನು ಬಲ್ಲವರು ಎಂದು ನಾವೆಲ್ಲರೂ ಗೌರವಿಸುತ್ತಿದ್ದೆವು. ಆದರೂ ಅವರ ಊರಿನಲ್ಲಿ ಕೆಲಸ ಮಾಡುವ ದೀವರ ಜನಾಂಗದವರ ಪಾಡು ಕರುಣಾಜನಕವಾಗಿತ್ತು. ಅವರನ್ನು ಕರುಣೆಯಿಂದ ನೋಡುವ ಸಜ್ಜನರ ಬಗ್ಗೆ ಸೋಷಲಿಸ್ಟರಿಗೆ ಯಾವ ಭ್ರಾಂತಿಯೂ ಇರಲಿಲ್ಲ. ಆದ್ದರಿಂದಲೇ ಮನುಷ್ಯನ ಒಳ್ಳೆಯತನವನ್ನು ಅಂತಃಕರಣ ಪೂರ್ವಕವಾಗಿ ನೋಡಬಲ್ಲವರಾಗಿದ್ದ ಎಲ್ಲ ಸೋಷಲಿಸ್ಟರೂ ಕೆ.ಜಿ. ಒಡೆಯರ್‌ರ ವಿರುದ್ಧ ಸಮರ ಹೂಡಲು ನಿರ್ಧರಿಸಿದ್ದರು. ಜಮೀನ್ದಾರರ ದೇಶಬಕ್ತಿಯಾಗಲಿ, ಒಳ್ಳೆಯತನವಾಗಲಿ ಬಡವರನ್ನು ಕಾಪಾಡಲಾರದೆಂಬ ಕಟುಸತ್ಯವನ್ನು ತಿಳಿಯಬಲ್ಲವಂತಹ ತಾತ್ವಿಕತೆ ಸೋಷಲಿಸ್ಟರಲ್ಲಿ ಆಗ ಇತ್ತು.

ಆಗ ಸೋಷಲಿಸ್ಟ್ ಪಕ್ಷದ ಅಧ್ಯಕ್ಷರಾಗಿದ್ದ ಸಿ.ಜಿ.ಕೆ. ರೆಡ್ಡಿ ಈ ಸತ್ಯಾಗ್ರಹದ ಬಗ್ಗೆ ಕೆಲವು ಅನುಮಾನಗಳನ್ನು ಹೊಂದಿದ್ದರು. ನಮ್ಮ ಸಿದ್ಧಾಂತದ ಪ್ರಕಾರ ಕೆಲಸ ಮಾಡುವುದಾದರೆ ಮೊದಲು ಕಾರ್ಮಿಕರನ್ನು ಸಂಘಟಿಸಬೇಕು. ನಗರ ಪ್ರದೇಶಗಳಲ್ಲಿ ಅವರು ಬಂಡೇಳಬೇಕು ಮತ್ತು ಈ ಬಂಡಾಯ ಗಟ್ಟಿಗೊಳ್ಳುತ್ತ ಹೋದಂತೆ ಗ್ರಾಮೀಣ ರೈತರಲ್ಲೂ ಹೊಸ ಅರಿವನ್ನು ಮೂಡಿಸಬೇಕು ಎಂಬುದು ಅವರ ವಾದವಾಗಿತ್ತು. ಆದರೆ ಗೋಪಾಲಗೌಡರು ಇದಕ್ಕೆ ವಿರುದ್ಧವಾಗಿ ಯೋಚಿಸುತ್ತಿದ್ದರು. ಅವರ ಪ್ರಕಾರ ಹಳ್ಳಿಯ ಬಡವರು-ದರಿದ್ರರು ಮಾತ್ರವಲ್ಲ, ದೀನರೂ ಕೂಡ. ಆದ್ದರಿಂದ ಮೊದಲು ಅವರು ತಮ್ಮ ದೈನ್ಯವನ್ನು ತೊರೆಯುವಂತೆ ಮಾಡುವುದು ಅಗತ್ಯ. ಸಿ.ಜಿ.ಕೆ. ರೆಡ್ಡಿಯವರು, ಗೌಡರ ವಾದವನ್ನು ಒಪ್ಪಿ ಕಾಗೋಡು ರೈತರ ಸತ್ಯಾಗ್ರಹದ ಸಿದ್ಧತೆ ನಡೆಸಿದರು.

ರೈತರ ನಾಯಕರೆಂದರೆ ಆಗಿನ ಶ್ರೀ ಕಡಿದಾಳ್ ಮಂಜಪ್ಪಗೌಡರು. ಮಂಜಪ್ಪಗೌಡರು ಶ್ರೀ ಕೆ.ಜಿ. ಒಡೆಯರ್‌ರಂತೆ ಕಾಂಗ್ರೆಸ್ಸಿನ ಮುಖಂಡರು. ರೈತರ ಬಗ್ಗೆ ಆಳವಾದ ಕಾಳಿಜಿಯಿದ್ದ ಶ್ರೀ ಮಂಜಪ್ಪಗೌಡರು ತಮ್ಮ ಜೊತೆಯವರಾದ ಕೆ.ಜಿ. ಒಡೆಯರ್ ಅವರ ಮನವನ್ನು ಒಲಿಸಿ ಕಾಗೋಡಿನ ರೈತರಿಗೆ ಕೆಲವು ಅನುಕೂಲಗಳನ್ನು ಮಾಡಿಕೊಡಬಹುದೆಂದು ನಂಬಿದ್ದರು. ಆದರೆ ಅವರಿಗಿಂತ ಹೆಚ್ಚು ಎಡಪಂಥೀಯ ನಿಲುವಿನ ಸೋಷಲಿಸ್ಟರಿಗೆ ಹೋರಾಟವೊಂದೇ ದಾರಿಯಾಗಿ ಕಂಡಿತ್ತು.

ಕಾಗೋಡಿನ ರೈತರನ್ನು ಸಂಘಟಿಸಿದ್ದ ಶ್ರೀ ಗಣಪತಿಯಪ್ಪನವರು ಆ ದಿನಗಳಲ್ಲಿ ಕಾಂಗ್ರೆಸ್ಸಿನವರೆಂದು ನನ್ನ ನೆನಪು. ಅಂದರೆ ಕಡಿದಾಳ್ ಮಂಜಪ್ಪನವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದವರು.

ಸೋಷಲಿಸ್ಟರು ಸತ್ಯಾಗ್ರಹವನ್ನು ಶುರು ಮಾಡಿಬಿಟ್ಟರು. ಗೇಣಿ ಕೊಡಲಾರದೆ ಭೂಮಿಯನ್ನು ಕಾನೂನಿನ ಪ್ರಕಾರ ಕಳೆದುಕೊಂಡ ರೈತರು, ತಾವು ಕಳೆದುಕೊಂಡಿದ್ದನ್ನು ವಶಪಡಿಸಿಕೊಳ್ಳಲು, ನೇಗಿಲು ಹೊತ್ತು ಭೂಮಿಯನ್ನು ಊಳಲು ಪ್ರಾರಂಭಿಸಿದರು; ಇದು ಕಾನೂನು ಬಾಹಿರವಾದ್ದರಿಂದ ಪೊಲೀಸರು ಅವರನ್ನು ಅರೆಸ್ಟ್ ಮಾಡಿದರು- ಇದು ಸತ್ಯಾಗ್ರಹದ ರೀತಿಯಾಗಿತ್ತು. ಈ ಸತ್ಯಾಗ್ರಹದಲ್ಲಿ ಶ್ರೀ ಗಣಪತಿಯಪ್ಪನವರು ಭಾಗಿಯಾಗಿಬಿಟ್ಟರು ಸೋಷಲಿಸ್ಟರ ಜೊತೆ ಸೇರಿ.

ಇದಾದ ನಂತರದ ಘಟನೆಯೊಂದು ನನಗಿನ್ನೂ ನೆನಪಿದೆ. ಶಿವಮೊಗ್ಗೆಗೆ ಬಂದ ಸಿ.ಜಿ.ಕೆ. ರೆಡ್ಡಿಯವರು ನನ್ನನ್ನು ಕರೆದುಕೊಂಡು ಶ್ರೀ ಕಡಿದಾಳ ಮಂಜಪ್ಪಗೌಡರ ಮನೆಗೆ ಹೋದರು. ಮಂಜಪ್ಪಗೌಡರು ರೆಡ್ಡಿಯವರನ್ನು ವಿಶ್ವಾಸದಿಂದ ಬರಮಾಡಿಕೊಂಡು ತಮಗಾಗಿದ್ದ ಕೋಪವನ್ನು ಮುಚ್ಚಿಡಲಾರದೆ ಹೀಗೆ ಹೇಳಿದರು- ‘ಗಣಪತಿಯಪ್ಪ ನಮ್ಮ ರೈತ ಒಕ್ಕೂಟದ ನಾಯಕರು. ಅವರನ್ನು ಹೀಗೆ ನೀವು ನಮ್ಮೊಡನೆ ಚರ್ಚಿಸದೆ ಜೈಲಿಗೆ ತಳ್ಳಿ ನಮ್ಮ ಸಂಘಟನೆಯನ್ನು ಒಡೆದಿದ್ದೀರಿ. ಇದು ರಾಜಕಾರಣದಲ್ಲಿ ತಕ್ಕುದಲ್ಲ’. ಇದಕ್ಕೆ ಸಿ.ಜಿ.ಕೆ. ರೆಡ್ಡಿಯವರು ನಸುನಗುತ್ತಲೇ ಕೊಟ್ಟ ಉತ್ತರ ಹೀಗಿತ್ತು- (ಕನ್ನಡ ಅಷ್ಟು ಚೆನ್ನಾಗಿ ಬಾರದ ರೆಡ್ಡಿಯವರು ಇಂಗ್ಲಿಷ್ ಮಿಶ್ರಿತವಾದ ತನ್ನದೇ ಶೈಲಿಯಲ್ಲಿ) – ಗೌಡರೆ, ನಿಮಗೆ ಗೊತ್ತಿರಲೇ ಬೇಕು ಫುಟ್‌ಬಾಲ್ ಗೇಮ್‌ನಲ್ಲಿ ಹೊಸದೊಂದು ನಿಯಮ ಈಗ ಜಾರಿಯಲ್ಲಿದೆ. ಆಟ ಆಡುವ ಭರದಲ್ಲಿ you are allowed to elbow your opponent.

ನನಗೆ ಇನ್ನೊಂದು ಘಟನೆ ನೆನಪಿದೆ. ಕಾಗೋಡಿನಲ್ಲೇ ಇದ್ದು ರೈತರನ್ನು ಶಿಸ್ತಾಗಿ ಪ್ರತಿನಿತ್ಯ ಸತ್ಯಾಗ್ರಹಕ್ಕೆ ಕಳಿಸುತ್ತಿದ್ದವರು ಎತ್ತರದ ನಿಲುವಿನ ಆಜಾನುಬಾಹುವಾದ ಗರುಡ ಶರ್ಮ ಎನ್ನುವವರು. ಸತ್ಯಾಗ್ರಹಕ್ಕೆ ಮುನ್ನ ಶಿವಮೊಗ್ಗೆಯಲ್ಲಿ ನಮ್ಮ ಹಿತೈಷಿಗಳಾದ ಎಲ್ಲ ಲಾಯರುಗಳ ಸಭೆಯನ್ನು ಕರೆದಿದ್ದೆವು. ಅವರಲ್ಲಿ ಬಹಳ ಜನ ಸತ್ಯಾಗ್ರಹದಿಂದ ರೈತರಿಗೆ ಉಪಯೋಗವಾಗದೆ ಹೋದೀತು. ಆದ್ದರಿಂದ ಸಮಾಧಾನವಾಗಿ ವರ್ತಿಸಬೇಕು ಎಂದು ವಾದಿಸಿದರು. ಆಗ ಗರುಡಶರ್ಮ ಥಟ್ಟನೆ ಎದ್ದುನಿಂತು ಆಡಿದ ಒಂದು ಪೋಲಿಮಾತನ್ನು ಸಂಸ್ಕರಿಸಿ ಹೇಳುತ್ತಿದ್ದೇನೆ. ‘ಗುಡ್ಡಕ್ಕೊಂದು ಕೂದಲನ್ನು ಕಟ್ಟಿ ಎಳೆಯುವುದು, ಬಂದರೆ ಗುಡ್ಡ ಬಂತು, ಹೊದರೆ ಕೂದಲು ಹೋಯಿತು’. ಎಲ್ಲ ಲಾಯರುಗಳೂ ಈ ಮಾತಿಗೆ ಕೊಂಚ ನಾಚಿ ಸುಮ್ಮನಾಗಿದ್ದರು.

ಹೊಸ ರೀತಿಯಲ್ಲಿ ಆಲೋಚಿಸುವ ಒಂದು ಹೊಸ ತಲೆಮಾರು ಎಲ್ಲಿ ಜಾತಿಗಳಲ್ಲೂ ಆಗ ಇತ್ತು. ಸಂಘಟನಾ ಸಾಮರ್ಥ್ಯ ಉಳ್ಳ ಹಲವು ಬುದ್ಧಿವಂತರಿದ್ದರು. ಕಾಗೋಡು ತಿಮ್ಮಪ್ಪನವರನ್ನು ಬೆಳೆಸಿದ ಚಂದ್ರಶೇಖರ್, ವೈ.ಆರ್. ಪರಮೇಶ್ವರಪ್ಪ (ಅಣ್ಣಯ್ಯ), ನನ್ನ ಜೊತೆ ಕೆಲಸ ಮಾಡಿದ ಸತ್ಯ, ಆರ್.ಪಿ. ನಾರಾಯಣ ಇವರು ಮುಖ್ಯವಾಗಿ ನೆನಪಾಗುತ್ತಾರೆ.

ಕಾಗೋಡು ರೈತ ಸತ್ಯಾಗ್ರಹ ಹಾಗೂ ಅದರ ಯಶಸ್ಸಿಗಿಂತ ಒಂದು ಪ್ರಜ್ಞಾಸ್ಫೋಟ ನಮಗೆ ಮುಖ್ಯವಾಗಿತ್ತು.

ಭೂಮಿಯ ಮೇಲೆ ಹಕ್ಕುಂಟು ಎನ್ನುವ ರೈತರ ಅರಿವು ಹಾಗೂ ಆತ್ಮಾಭಿಮಾನ ನಮಗೆ ಮುಖ್ಯವಾಗಿತ್ತು. ಕೊಳಗದ ಅಳತೆಯ ವಿವಾದ ಈ ಆಶಯಕ್ಕೆ ಪೂರಕವಾದ ಒಂದು ಚಟುವಟಿಕೆ ಮಾತ್ರ. ಆಗ ನಾವು ವಿರೋಧಿಸುತ್ತಿದ್ದ ಕೆ.ಜಿ. ಒಡೆಯರ್ ಅವರಂತಹವರೂ ತುಂಬ ಒಳ್ಳೆಯ ವ್ಯಕ್ತಿಗಳಾಗಿದ್ದರು. ಲೋಹಿಯಾ, ಜಯಪ್ರಕಾಶರನ್ನು ಟೀಕಿಸಲು ನೆಹರೂರಂತಹ ವ್ಯಕ್ತಿಗಳಿದ್ದಂತೆ ಇಲ್ಲಿ ಕಡಿದಾಳ್ ಮಂಜಪ್ಪಗೌಡ, ನಿಜಲಿಂಗಪ್ಪನವರಂತಹ ಮಂದಿಯಿದ್ದರು (ವ್ಯಕ್ತಿಗಳಿದ್ದರು). ಹಾಗಾಗಿ ಅಂದಿನ ನಮ್ಮ ಜಗಳ, ಸಣ್ಣತನದ ವೈಯಕ್ತಿಕ ಕಿತ್ತಾಟವಾಗಿರಲಿಲ್ಲ. ಅದೊಂದು ಮೇಲ್ಮಟ್ಟದ ತಾತ್ವಿಕ ಚರ್ಚೆಯಾಗಿತ್ತು. ಇದರ ಅತ್ಯುತ್ತಮ ರೀತಿಯನ್ನು ನಾನು ಶಿವಮೊಗ್ಗದಲ್ಲಿ ಕಂಡೆ.

ಆಮೇಲೆ ಗೋಪಾಲಗೌಡರ ಆರೋಗ್ಯ ಕೆಡಲಾರಂಭಿಸಿತು. ಅವರ ಜೀವನವು ಅಷ್ಟೇ, ಪ್ರತಿ ತಿಂಗಳು ಅವರಿಗೆ ಅಸೆಂಬ್ಲಿಯಿಂದ ಬರುತ್ತಿದ್ದ ಹಣದ ಒಂದು ಭಾಗವನ್ನು ಸದಾಶಿವರಾಯರ ಮನೆಗೆ ಕಳುಹಿಸುತ್ತಿದ್ದರು. ಹಣ ಸಿಗಲು ಸ್ವಲ್ಪ ತಡವಾದರೂ ಅವರನ್ನು ಸದಾಶಿವರಾಯರು ಬೈದೇಬಿಡುತ್ತಿದ್ದರು- ಅದೇನೋ ತನ್ನ ಹಕ್ಕು ಎನ್ನುವಂತೆ. ನನ್ನ ಓದು, ಬರವಣಿಗೆಗಳ ಬಗ್ಗೆ ಗೋಪಾಲಗೌಡರಿಗೆ ವಿಚಿತ್ರವಾದ ಅಭಿಮಾನ. ನಾನು ಇಂಗ್ಲೆಂಡಿಗೆ ಹೋಗುವ ಮುನ್ನ ಶಾಸಕರ ಭವನದಲ್ಲೊಂದು ದೊಡ್ಡ ಪಾರ್ಟಿಯನ್ನು ಏರ್ಪಡಿಸಿ ನೂರಾರು ಜನರನ್ನು ಆಹ್ವಾನಿಸಿದ್ದರು. ಪಾರ್ಟಿ ಮುಗಿಯುವ ಹೊತ್ತಿಗೆ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಎಲ್ಲರಿಗೂ ನಿದ್ದೆ ಬರುವ ಆ ಹೊತ್ತಿನಲ್ಲಿ ನನ್ನ ಬಗ್ಗೆ ಅರ್ಧಗಂಟೆ ಮಾತನಾಡಿದರು.

ನಾನು ಏನು ಓದಿದರೂ ಅವರಿಗೂ ಓದಲು ಕೊಡುತ್ತಿದ್ದೆ. ಇಬ್ಬರೂ ಬಹಳ ಹೊತ್ತು ಚರ್ಚಿಸುತ್ತಿದ್ದೆವು. ಆಗ ಶಿವಮೊಗ್ಗದ ಒಂದು ಬೀದಿಗೆ ಎಹರೂ ರೋಡ್ ಎಂಬ ಹೆಸರನ್ನಿಡಲಾಗಿತ್ತು. ಬೀದಿಯ ಕೊನೆಯಲ್ಲಿ ಒಂದು ಜೈಲಿತ್ತು. ನಾವು Nehru road leads to jail ಎಂದು ಸ್ಗೋಗನ್ ಬರೆದು ಪಾಂಪ್ಲೆಟ್‌ಗಳನ್ನು ಮುದ್ರಿಸಿ ಹಂಚುತ್ತಿದ್ದೆವು. ಬಿ. ನಾರಾಯಣ್ ಎಂಬ ಇನ್ನೊಬ್ಬ ಕಾರ್ಯಕರ್ತರಿದ್ದರು. ಅಣ್ಣಯ್ಯನಿಗೆ ಬಹಳ ಹತ್ತಿರದವರು. ಅವರಿಗೆ ವಿಧಾನಸೌಧದಲ್ಲಿ ಕೆಲಸ ಸಿಕ್ಕಮೇಲೆ ಅವರ ಬದುಕಿನ ದಿಕ್ಕೇ ಬದಲಾಯಿತು. ಶಾಸ್ತ್ರಿಗಳೆಂಬ, ಗೌಡರಿಗೆ ತುಂಬ ಪರಿಚಿತರಾದ ಇನ್ನೊಬ್ಬ ವ್ಯಕ್ತಿಯಿದ್ದರು. ಮಹಾ ಮಂತ್ರವಾದಿ, ದೊಡ್ಡ ಸಂಸ್ಕೃತ ಪಂಡಿತ, ನನ್ನ ಕಾದಂಬರಿಯಲ್ಲಿ ಮಹೇಶ್ವರಯ್ಯ ಎಂಬ ಒಂದು ಪಾತ್ರವಿದೆ. ಆ ಪಾತ್ರದಂಥವರು. ಹಾಕಿಕೊಂಡಿದ್ದ ಬಟ್ಟೆಯನ್ನು ಯಾರಾದರೂ ಕೇಳಿದರೆ ಒಗೆದು ಕೊಟ್ಟುಬಿಡುವಂತಹ ವ್ಯಕ್ತಿ ಆತ. ನಮ್ಮ ಚಳವಳಿಯಲ್ಲಿ ಧ್ಯಾತ್ಮಿಕ ಅಂಶವೂ ಇತ್ತು. ಆದ್ದರಿಂದಲೇ ರಾಮಕೃಷ್ಣ ಪರಮಹಂಸರ ಬಗೆಗೂ ನಮಗೆ ಒಂದು ಬಗೆಯ ಕುತೂಹಲ. ‘ದೇವರಿದ್ದಾನೆ’ ಎಂಬ ಚರ್ಚೆಯೂ ‘ಅವನಿಲ್ಲ’ ಎಂಬ ಚರ್ಚೆಯಷ್ಟೇ ಗಂಭೀರವಾಗಿ. ತೀವ್ರವಾಗಿ ನಡೆಯುತ್ತಿತ್ತು. ಧಾರ್ಮಿಕ ವ್ಯಕ್ತಿಗಳಿಗಿಂತ ಧಾರ್ಮಿಕರಂತೆ ಇರುತ್ತಿದ್ದೆವು. ಈಶ್ವರನನ್ನು ಹುಡುಕಿ ಸೋತವರ ನಿರೀಶ್ವರವಾದ ನಮ್ಮದು.

ನಮ್ಮ ಹಣಕಾಸಿನ ವ್ಯವಸ್ಥೆಗೆ ಲಾಯರುಗಳನ್ನು ಆಶ್ರಯಿಸುತ್ತಿದ್ದೆವು. ಪಾಂಪ್ಲೆಟ್ ಹಂಚಲು, ಜೈಲಿನಲ್ಲಿದ್ದ ನಮ್ಮವರಿಗೆ ಊಟದ ವ್ಯವಸ್ಥೆ ಮಾಡಲು ಎಷ್ಟುಬೇಕೋ ಅಷ್ಟು ದುಡ್ಡನ್ನು ಸಂಪಾದಿಸುತ್ತಿದ್ದೆವು. ಆ ಜೈಲುಗಳಲ್ಲಿ ಭದ್ರತೆಯೇನೂ ಇರುತ್ತಿರಲಿಲ್ಲ. ಒಮ್ಮೆ ಸೀತಾರಾಮ್ ಎನ್ನುವವರು ಜೈಲಿನಲ್ಲಿ ಸರಿಯಾಗಿ ಊಟ ಕೊಡುತ್ತಿರಲಿಲ್ಲ ಎಂದು ಜೈಲಿನ ಹೆಂಚು ತೆಗೆದು ಮಹಡಿ ಹತ್ತಿ ಜಯಕಾರ ಕೂಗಿ, ಅಕ್ಕಿಯನ್ನು ಚೆಲ್ಲಾಡಿ ತುಂಬ ಗಲಾಟೆ ಮಾಡಿದ್ದರು. ನಾಗಭೂಷಣ ಎಂಬ ಮತ್ತೊಬ್ಬ ಸಮಾಜವಾದಿ ಪಕ್ಷದ ಕಾರ್ಯಕರ್ತರಿದ್ದರು. ಎಲ್ಲವನ್ನೂ ಪಕ್ಷಕ್ಕೇ ಸಮರ್ಪಿಸಿ ಮೂರು ಹೊತ್ತೂ ಪಕ್ಷಕ್ಕಾಗಿ ದುಡಿಯುತ್ತಿದ್ದವರು. ಇದ್ದಕ್ಕಿದ್ದಂತೆ ಹುಚ್ಚು ಹಿಡಿದು ಅವರು ಸತ್ತೇಹೋದರು. ಅವರು ಕಷ್ಟದಲ್ಲಿದ್ದಾಗ ಗೋಪಾಲ ಗೌಡರ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ಒಂದು ಕವಿಸಮ್ಮೇಳನವನ್ನು ಏರ್ಪಡಿಸಿ ದುಡ್ಡು ಎತ್ತಿದ್ದೆವು. ನಮ್ಮಲ್ಲಿ ತೀವ್ರವಾದಿಗಳು, ಸುಧಾರಣಾವಾದಿಗಳು, ಮಧ್ಯಮ ವರ್ಗದವರು, ಕೆಳ ವರ್ಗದವರು = ಹೀಗೆ ಎಲ್ಲ ತರಹದ ವ್ಯಕ್ತಿಗಳೂ ಇದ್ದರು. ಗೋಪಾಲಗೌಡರು ಎಲ್ಲರ ಆಶಯಗಳನ್ನೂ ಪರಿಗಣಿಸಿ ತಮ್ಮ ನಿಲುವನ್ನು ತೆಗೆದುಕೊಳ್ಳುತ್ತಿದ್ದರು.

ಇಂತಹ ಸಂಸ್ಕೃತಿಯಲ್ಲೇ ನಮ್ಮ ಕಾಗೋಡು ತಿಮ್ಮಪ್ಪನವರು ಬೆಳೆದದ್ದು. ಮತ್ತೊಂದು ಅನುಭವವನ್ನೂ ಹೇಳುತ್ತೇನೆ : ಗೋಪಾಲಗೌಡರ ಒಂದು ಸ್ಮರಣ ಸಂಚಿಕೆಯ ಬಿಡುಗಡೆಯ ಸಮಾರಂಭದಂದು ಕಾಗೋಡು ತಿಮ್ಮಪ್ಪ ಅದ್ಭುತವಾಗಿ ಭಾಷಣ ಮಾಡಿದರು. ಆಗ ನನ್ನ ಪಕ್ಕದಲ್ಲೇ ಕುಳಿತಿದ್ದ ಜೆ.ಹೆಚ್. ಪಟೇಲರು ‘ಕಾಗೋಡಿನ ಒಳಗಡೆ ಇನ್ನೂ ಎಂಥ ಸತ್ಯ ಅಡಗಿದೆ ನೋಡು’ ಎಂದು ನನಗೆ ಕೇಳಿದರು. ಹಿಂದೆ ನಾವೆಲ್ಲ ಒಬ್ಬರೊಡನೊಬ್ಬರು ಏಕವಚನದಲ್ಲೇ ಮಾತನಾಡುತ್ತಿದ್ದೆವು. (ಅವರು ಮಂತ್ರಿಗಳಾದ ಮೇಲೆ ಬಹುವಚನ ಉಪಯೋಗಿಸುತ್ತಿದ್ದೆ. ಆ ದಿನ ನಾನು ಮತ್ತೆ ಏಕವಚನದಲ್ಲೇ ಮಾತನಾಡಿದೆ) I was moved by his speech

ಇಷ್ಟಾದರೂ ನಾವೆಲ್ಲ ಒಂದು ಗಟ್ಟಿಯಾದ ಪೊಲಿಟಿಕಲ್ ಪಾರ್ಟಿ (ರಾಜಕೀಯ ಪಕ್ಷ)ವನ್ನು ಕಟ್ಟಲಾಗಲೇ ಇಲ್ಲ. ನಮ್ಮ ಚಿಂತನೆ, ಚರ್ಚೆ ಸಣ್ಣ ಪುಟ್ಟ ಜಗಳಗಳಲ್ಲೆ ಪರ್ಯವಸಾನವಾಗುತ್ತಿದ್ದವು. ಭಾರತದಲ್ಲಿ ಒಂದು ದೊಡ್ಡ ಪಕ್ಷ ರೂಪುಗೊಳ್ಳಲು ಸಾಧ್ಯವಿತ್ತು. ಆದರೆ ಅವರು ತಮ್ಮನ್ನು ಸಮಾಜವಾದಿಗಳೊಡನೆ ಗುರುತಿಸಿಕೊಂಡರು. ಹಾಗೆಯೇ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಹುಟ್ಟಲು ಸಾಧ್ಯವಿತ್ತು. ಆದರೆ ಅವರು ತಮ್ಮನ್ನು ಕಮ್ಯುನಿಸ್ಟರೆಂದು ಕರೆದುಕೊಂಡರು. ಇಲ್ಲಿ ನಿಜವಾಗಿಯೂ ಕಮ್ಯುನಿಸ್ಟರೆಲ್ಲ ಸೋಷಿಯಲ್ ಡೆಮಾಕ್ರಾಟ್ಸ್ ಹಾಗೂ ಸಮಾಜವಾದಿಗಳೆಲ್ಲ ಅನಾರ್ಕಿಸ್ಟರು. (ಗಾಂಧಿಯಲ್ಲೂ, ಲೋಹಿಯಾರಲ್ಲೂ ಒಂದು ಬಗೆಯ ಅನಾರ್ಕಿಸಂ ಇದೆ) ಸಮಾಜವಾದಿ ಪಕ್ಷದಿಂದ ಹೀಗೆ ನಿರಾಸೆಗೊಂಡ ಕೆಲವರು ಭೂದಾನ ಚಳವಳಿಯನ್ನು ಸೇರಿದರು.

ಭೂದಾನ ಚಳವಳಿಗೆ ಸೇರಿದವರಲ್ಲಿ ಖಾದ್ರಿಶಾಮಣ್ಣ, ಭಾ.ಸು. ಕೃಷ್ಣಮೂರ್ತಿ ಪ್ರಮುಖರು. ಭಾ.ಸು. ಕೃಷ್ಣಮೂರ್ತಿಯವರು ಕುವೆಂಪು, ಅಡಿಗ ಮೊದಲಾದ ಕವಿಗಳ ಪದ್ಯಗಳನ್ನು ಅದ್ಭುತವಾಗಿ ಹಾಡುತ್ತಿದ್ದರು. ಪಕ್ಷದ ಪ್ರಚಾರಕ್ಕೆ ನಾವು ಕಾವ್ಯವನ್ನೇ ಹೆಚ್ಚಾಗಿ ಬಳಸುತ್ತಿದ್ದೆವು.

ನಾವು ಕಾವ್ಯವನ್ನು ವಿಶೇಷವಾಗಿ ಪರಿಗಣಿಸಲು ಲೋಹಿಯಾ ಸ್ವಲ್ಪಮಟ್ಟಿಗೆ ಕಾರಣ. ಹಾಗೆಯೇ ಜಯಪ್ರಕಾಶ ನಾರಾಯಣ್, ಗಾಂಧೀ ವಿಚಾರಗಳೂ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜವಾದ ಹಳ್ಳಿಗಳತ್ತ ಮುಖಮಾಡಿತ್ತು. ಕಮ್ಯುನಿಸ್ಟರು ಪಟ್ಟಣದ ಕಾರ್ಮಿಕರನ್ನು ಮುಖ್ಯವಾಗಿಸಿಕೊಂಡಿದ್ದರು. ಆಮೇಲೆ ಹಳ್ಳಿಯ ಕಡೆಗೆ ನೋಡಲಾರಂಭಿಸಿದರು. ಸಮಾಜವಾದಿಗಳಾದರೋ ಪ್ರಾರಂಭದಿದಂದಲೇ ಹಳ್ಳಿಗಳನ್ನು ಮುಖ್ಯವೆಂದು ಪರಿಗಣಿಸಿದರು. ಹಳ್ಳಿಗಳನ್ನು ಸಾಂಸ್ಕೃತಿಕವಾಗಿ ನೋಡದೆ ಕೇವಲ ಆರ್ಥಿಕವಾಗಿ ಪರಿಶೀಲಿಸತೊಡಗಿದರೆ ಏನೂ ಅರ್ಥವಾಗುವುದಿಲ್ಲ. ನಮ್ಮಲ್ಲಿ ಹಲವು ಜಾತಿ, ಆಚರಣೆ, ನಂಬಿಕೆ, ಜೀವನ ಶೈಲಿಗಳಿವೆ. ಸಾಂಸ್ಕೃತಿಕವಾಗಿ ಬಹು ಸಮೃದ್ಧವಾಗಿ ಕಾಣಿಸುವ ಅವುಗಳನ್ನು ಕೇವಲ ಆರ್ಥಿಕವಾಗಿ ನೋಡಿದರೆ ಕಡು ಬಡತನವೇ ಕಾಣಿಸುತ್ತದೆ. ಆದ್ದರಿಂದಲೇ ಅಂತಹ ದೊಡ್ಡ ಆಂದೋಲನವನ್ನು ನಡೆಸಿದ ಗಾಂಧಿಯೂ ಗೀತೆಗೊಂದು ಭಾಷ್ಯವನ್ನು ಬರೆಯಬೇಕಾಯಿತು. ರಾಮನನ್ನು ಅವರು ಒಂದು ಮುಖ್ಯ ಸಂಕೇತವನ್ನಾಗಿಸಿಕೊಂಡರು. ‘ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಲ್ಲ, ಅವ ಹುಟ್ಟಿದ್ದು ಸಾಯುತ್ತಿದ್ದ ಗಾಂಧಿಯ ಬಾಯಲ್ಲಿ’ ಎಂದು ಮೊನ್ನೆ ಪೇಜಾವರ ಮಠದವರಿಗೆ ಹೇಳುತ್ತಿದ್ದೆ. ಹೀಗೆ ಗಾಂಧಿಯ ತುಳಸೀದಾಸರ ಮೂಲಕ ಹುಟ್ಟುವ ರಾಮ ಭಾರತೀಯ ಮನಸ್ಸುಗಳನ್ನು ಆಳುತ್ತಿರುವನಲ್ಲದೆ ಕೋಮುವಾದಿಗಳ ಇಟ್ಟಿಗೆಯ ಮೂಲಕ ಅಲ್ಲ. ಈ ವ್ಯತ್ಯಾಸ ಸಮಾಜವಾದಿಗಳಿಗೆ ಹೊಳೆಯಬಲ್ಲದು. ಯಾಕೆಂದರೆ ಧಾರ್ಮಿಕ ವಿಷಯದ ಬಗ್ಗೆ ಮಾತನಾಡಲು ನಾವೆಂದೂ ಹಿಂಜರಿದವರಲ್ಲ. ‘ರಾಮ ಕೃಷ್ಣ ಶಿವಂ’ ಎಂಬ ಪ್ರಬಂಧವನ್ನು ಲೋಹಿಯಾ ಬರೆದರು. ಪುರಾಣಗಳನ್ನು ಪರಿಶೀಲಿಸುತ್ತಲೇ ಅವರು ಸಮಾಜವಾದಿ ಚಿಂತನೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದರು. ನಮ್ಮದು ಬಂಡಾಯವಾದಿಗಳ ಶುಷ್ಕ ವಾದವಲ್ಲ. ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ ಇತ್ಯಾದಿ ವಿಚಾರಗಳಲ್ಲೂ ನಮಗೆ ಕುತೂಹಲವಿತ್ತು. ನಮ್ಮ ಸಾಹಿತ್ಯದ ಆಸಕ್ತಿಗೂ ಇದೇ ಕಾರಣ. ನಮ್ಮ ಪರಂಪರೆಯನ್ನು ನಿಜವಾಗಿ ಉಪಯೋಗಿಸಿಕೊಳ್ಳಲು ನಮಗೆ ಸಾಧ್ಯವಾದರೆ ನಾವು ಜಾತಿಯಿಂದ ವಿಮುಕ್ತರಾಗಿ ಸಮೃದ್ಧವಾದ ಹೊಸ ಜೀವನದ ಕಡೆಗೆ ಸಾಗಬಲ್ಲೆವು. ಕೇವಲ ಆರ್ಥಿಕ ವಾದ-ವಿವಾದಗಳಲ್ಲಿ ತೊಡಗುವ ವಿಚಾರಗಳು ಜಾಗತೀಕರಣದಲ್ಲಿ ನಶಿಸಿಹೋಗುತ್ತವೆ. ನಮ್ಮ ಪರಂಪರೆಯ, ಉದಾತ್ತವಾದ, ಜಾತ್ಯತೀತ, ಮಾನವೀಯ ವಿಚಾರಗಳ ವಿವೇಚನೆಯಿಂದ ಜಾಗತೀಕರಣವನ್ನು ಎದುರಿಸಬಲ್ಲೆವು. ಅಂತಹುದು ನಮ್ಮ ಜನಪದ ಸಂಸ್ಕೃತಿಯಲ್ಲಿದೆ. ಈ ದೃಷ್ಟಿ ಸಮಾಜವಾದಿಗಳಿಗಿತ್ತು. ಆದ್ದರಿಂದಲೇ ಲೋಹಿಯಾ ಚಳವಳಿಯಲ್ಲಿ ಭಾಷೆ ಮುಖ್ಯವೆಂದು ಭಾವಿಸಿದರು. ಜಾತಿಯ ಬಗ್ಗೆ ಸಂಕೋಚವಿಲ್ಲದೆ ಮಾತನಾಡತೊಡಗಿದರು. ಆ ಪರಂಪರೆ ಸಮೃದ್ಧವಾಗಿ ಅನಾವರಣಗೊಂಡಿದ್ದು ಶಿವಮೊಗ್ಗದಲ್ಲಿ. ಆದ್ದರಿಂದಲೇ ನಾನು ನವ್ಯ ಪರಂಪರೆಯವನಾಗಿದ್ದೂ ಐರೋಪ್ಯ ಪ್ರಣೀತನಾಗಲೇ ಇಲ್ಲ. ಏಕೆಂದರೆ ನನಗೆ ಲೋಹಿಯಾ ಕೂಡ ಅಷ್ಟೇ ಮುಖ್ಯರಾಗಿದ್ದರು ಪ್ರಾರಂಭದಲ್ಲಿ ಅವರನ್ನು ತಮಾಷೆ ಮಾಡುತ್ತಿದ್ದ ಲಂಕೇಶರೂ ಆಮೇಲೆ ಲೋಹಿಯಾರನ್ನು ಮುಖ್ಯರೆಂದು ಭಾವಿಸಿದ್ದರು. ತೇಜಸ್ವಿ, ಲೋಹಿಯಾ ಪುಸ್ತಕಗಳನ್ನು ಕುವೆಂಪುಗೆ ಒದಗಿಸುತ್ತಿದ್ದರಂತೆ. ಹೀಗೆ ಲೋಹಿಯಾ ಕನ್ನಡ ಸಾಹಿತ್ಯದಲ್ಲಿ ಬೇರೂರಿದಂತೆ ಬೇರೆಡೆ ಪ್ರಾಭಾವವನ್ನುಂಟು ಮಾಡಿದ್ದಾರೋ? ತಿಳಿಯದು. ಅಂತಹ ಪ್ರಭಾವ ಹಿಂದಿಯಲ್ಲಿ ಆಗಿರಬಹುದು. ಅಂದರೆ ಆ ಪ್ರಭಾವ ನಮ್ಮ ರಾಜಕೀಯ ಚಳವಳಿಯಲ್ಲಷ್ಟೇ ಅಲ್ಲ ಸಾಂಸ್ಕೃತಿಕ ಚಳವಳಿಯಲ್ಲೂ ವ್ಯಾಪಿಸಿತ್ತು.

ರೈತ ಚಳವಳಿಯಲ್ಲಿ ಉಳುವವನೇ ಹೊಲದೊಡೆಯನೆಂದರು. ಆದರೆ ಆ ಆಶಯ, ಗೇಣಿಪದ್ಧತಿ ತೆಗೆದುಹಾಕಿದ ಬಳಿಕವೂ, ಕೈಗೂಡಲಿಲ್ಲ. ಅಲ್ಲದೆ ರೈತರಲ್ಲೂ ಒಂದು ಶ್ರೀಮಂತ ವರ್ಗ – ಕಬ್ಬು, ಕಾಫಿ, ಅಡಿಕೆ ಇತ್ಯಾದಿಗಳನ್ನು ಬೆಳೆಯುವ ವರ್ಗ – ಹುಟ್ಟಿಕೊಂಡಿತು. ಇನ್ನೊಂದು ರಾಗಿ, ಭತ್ತ, ಜೋಳ ಬೆಳೆವ ಸಾಮಾನ್ಯ ವರ್ಗವೂ ಜತೆಯಲ್ಲೇ ಹುಟ್ಟಿಕೊಂಡಿತು. ನಮ್ಮ ಯಾವ ರೈತ ಪರ ಚಳವಳಿಗೂ ಈ ಎರಡೂ ವರ್ಗಗಳನ್ನು ಒಂದುಗೂಡಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಬಹುಶಃ ನಮ್ಮ ಸಾಮಾಜಿಕ ಸಂದರ್ಭ ಹಾಗೂ ಹಾಗೆ ಒಗ್ಗೂಡಿಸಲು ಅಗತ್ಯವಾದ ಒಂದು ತತ್ವ ಪ್ರಣಾಳಿಕೆ ಇರದೆ ಹೋದದ್ದು. ತತ್ಕ್ಷಣದ ಫಲಕ್ಕಾಗಿ ಕೇವಲ ಬಲಿಷ್ಠ ರೈತರನ್ನೇ ಹಿಡಿದು ಚಳವಳಿ ನಡೆಸಿದ್ದೂ ಇದಕ್ಕೆ ಕಾರಣ. ಇಷ್ಟಾದರು ಅಂದಿನ ಆ ರೈತ ಚಳವಳಿಯಿಂದ ಉಪಯೋಗವಾಗಲಿಲ್ಲವೆಂದಲ್ಲ.

ಇಂದು ಜಮೀನ್ದಾರಿ ವರ್ಗವೂ ಸಹಾನುಭೂತಿಗೆ ಒಳಗಾಗುವ ಕಾಲ ಸನ್ನಿಹಿತವಾಗಿದೆ. ಒಬ್ಬ ಬ್ಯಾಂಕ್ ಪ್ಯೂನ್ ಮಕ್ಕಳನ್ನು ಕಾಲೇಜಿಗೆ ಕಳುಹಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಹಳ್ಳಿಯ ಶ್ರೀಮಂತ ರೈತ ಒದಗಿಸಲಾರನೆಂದು ಮಧುಲಿಮಯೆ ಹೇಳುತ್ತಿದ್ದರು. ವರ್ಷವಿಡೀ ಶ್ರೀಮಂತ ರೈತನು ಕುಡಿಯುವ ನೀರಿನ ಸೌಲಭ್ಯವಿಲ್ಲದೇ ಇರಬಹುದು. ನಾವು ಬ್ಯಾಂಕ್ ನೌಕರನ ಪರವಾಗಿದ್ದು ಶ್ರೀಮಂತ ರೈತನನ್ನು ವಿರೋಧಿಸುವುದೂ ಒಂದು ರೀತಿಯ ವಿರೋಧಾಭಾಸವೇ. ಹಳ್ಳಿಯ ರೈತನನ್ನು ನಾವು ಟೀಕಿಸಿದರೂ ನಮ್ಮ ಸಹಾನುಭೂತಿ ಅವನ ಕಡೆಗೇ ಇರತಕ್ಕದ್ದು. ಆದರೆ ಅತ್ಯಂತ ಕ್ರೂರವಾಗಿ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಒಂದು ನೌಕರ ವರ್ಗವನ್ನೇ ಮರೆತು ಸಮಾಜವಾದಿ ಚಿಂತನೆ ಎಲ್ಲ ಜಮೀನುದಾರರನ್ನೂ ಅಟ್ಯಾಕ್ ಮಾಡಲು ಹೊರಟಿತು. ವಾಸ್ತವವಾಗಿ ಒಬ್ಬ ಬ್ಯಾಂಕ್ ಪ್ಯೂನ್ ಒಬ್ಬ ಶ್ರೀಮಂತ ರೈತನಿಗಿಂತ ಮುಂದಿರುತ್ತಾನೆ. ಆದರೆ ಹಳ್ಳಿಯವನು ಒಂದು ಹುಸಿಗರ್ವದಲ್ಲಿ, ಫ್ಯೂಡಲ್ ಗರ್ವದಲ್ಲಿ ಬದುಕುತ್ತಿರುತ್ತಾನೆ. ಅವನ ಕ್ರೌರ್ಯವೂ ಹುಸಿಯಾದದ್ದು, ಬಹುಬೇಗ ಪೆಟ್ಟು ತಿನ್ನುವಂತಹುದು. ಅವರು ಹರಿಜನರನ್ನು ಹಿಂಸಿಸುತ್ತಾರೆ: ನಾವು ಅವರ ಮೇಲೆ ಧಾಳಿ ಮಾಡುತ್ತೇವೆ. ಅಲ್ಲಿ ಹೋರಾಡುವವರು ಬಡಪಾಯಿಗಳೇ ಎನ್ನುವುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಅವರ ಜಗಳವನ್ನು ಪರಿಹರಿಸಲು ಹೊರಡುವ ನಮಗೆ ಅವರಿಬ್ಬರನ್ನೂ ನುಂಗಿ ನೊಣೆಯುವ ವ್ಯವಸ್ಥೆಯ ಅರಿವಿರಬೇಕು. ಆದರೆ ಆ ಜಗಳ ಇನ್ನೂ ಹೆಚ್ಚಾಗುವಂತೆ ನಾವು ರಾಜಕೀಯ – ಓಟಿನ ರಾಜಕೀಯ – ಮಾಡಿಬಿಟ್ಟೆವು. ಈ ಕಾರಣದಿಂದ ರೈತ ಚಳವಳಿಯಲ್ಲಿ ದಲಿತರೂ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ದಲಿತರ-ರೈತರ ನಡುವಣ ಬಿರುಕು ಇನ್ನೂ ದೊಡ್ಡದಾಗುತ್ತಾ ಹೋಯಿತು. ಭೂಮಿಯ ಹಂಚಿಕೆಯಲ್ಲೂ ಬಹಳಷ್ಟು ತಪ್ಪುಗಳಾದದ್ದುಂಟು. ಈ ಎಲ್ಲ ಪರಿಣಾಮದಿಂದ ಇಂದು ಬಹುರಾಷ್ಟ್ರೀಯ ಕಂಪೆನಿಗಳೆಂಬ ಇಂಡಸ್ಟ್ರಿಯಲ್ ವರ್ಗ ಪ್ರವೇಶಿಸಿ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುತ್ತಿದೆ. ಅದರಲ್ಲಿ ನಮ್ಮ ಕಬ್ಬು ಬೆಳೆಯುವವರು ಹೊರಟು ಹೋಗುತ್ತಾರೆ. ಅಡಿಕೆಯ ರೈತರು, ಕಾಫಿಯ ರೈತರು ಯಾರೂ ಉಳಿಯುವಂತಿಲ್ಲ. ಈ ವ್ಯಾಪಕ ದೃಷ್ಟಿ ನಮಗಿರಬೇಕಾಗಿತ್ತು.

ಕೃಪೆ : ಕಾಗೋಡು ಸತ್ಯಾಗ್ರಹ : ಸಂ. ಹಿ. ಚಿ. ಬೋರಲಿಯ್ಯ
ಪರಿಷ್ಕರಣೆ
: ವಾಸುದೇವಮೂರ್ತಿ

* * *