ಸನ್ಮಾನ್ಯ ಕುಲಾಧಿಪತಿಗಳೆ, ಸಮ ಕುಲಾಧಿಪತಿಗಳೆ, ಕುಲಪತಿಗಳೆ, ವಿಶ್ವವಿದ್ಯಾಲಯದ ಆಡಳಿತವರ್ಗದವರೆ, ವಿದ್ಯಾರ್ಥಿಗಳೆ, ಅಧ್ಯಾಪಕರೆ,

ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಲವು ಕಾರಣಗಳಿಂದಾಗಿ ಕೇವಲ ಔಪಚಾರಿಕವಾದ ಘಟಿಕೋತ್ಸವ ಭಾಷಣವನ್ನು ನಾನು ಮಾಡಲಾರೆ. ಮಲೆನಾಡಿನಲ್ಲಿ ಹುಟ್ಟಿ, ಕಲಿತು ಬೆಳೆದವನಾದ ನನಗೆ, ಈ ವಿಶ್ವವಿದ್ಯಾಲಯ ವಿಶೇಷವಾದ ಮಹತ್ವದ್ದು. ಇದರ ಮೊದಲ ಕುಲಪತಿ ನನ್ನ ಪ್ರಿಯ ಸ್ನೇಹಿತರಾಗಿದ್ದ ಗತಿಸಿದ ಶಾಂತಿನಾಥ ದೇಸಾಯಿಯವರು. ಈಗಿನ ಕುಲಪತಿಗಳಾದ ಡಾಕ್ಟರ್ ಚಿದಾನಂದ ಗೌಡರು ನನ್ನ ಪಾಲಿಗೆ ಗೌರವಾನ್ವಿತರು, ತಾವು ಕಲಿತ ವಿಷಯದಲ್ಲಿ ತಜ್ಞರು, ವಿಶ್ವವಿದ್ಯಾಲಯದ ನಿರ್ವಹಣೆಯಲ್ಲಿ ಪ್ರಾಮಾಣಿಕರು ಮಾತ್ರವಲ್ಲ, ದಕ್ಷರು. ಇಂಥವರಿಗೆ ಯಾವ ಕಾಲದಲ್ಲಾದರೂ ಒಂದು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ದೊರಕುವುದು ವಿಶೇಷವಾದ ಸಂಗತಿಯೇ; ಮಲೆನಾಡಿನ ವಿದ್ಯಾಪರಿಸರಕ್ಕೆ ಇವರ ಕೊಡುಗೆ ಅರ್ಥಪೂರ್ಣವಾಗಲಿ ಎಂದು ಹಾರೈಸುತ್ತೇನೆ.

ಮೇಲಾಗಿ ಇವರು ತಮ್ಮ ಕುಲಪತಿ ಹುದ್ದೆಯ ಮೊದಲ ವರ್ಷದ ಘಟಿಕೋತ್ಸವಕ್ಕೇ ನನ್ನನ್ನು ಕರೆದುಬಿಟ್ಟಿದ್ದಾರೆ. ಈ ಎಲ್ಲ ಭಾವನೆಗಳು ಪ್ರಾಮಾಣಿಕ ಉತ್ಕಟತೆಯಿಂದಲೂ ವಿನಯದಿಂದಲೂ ಕೆಲವು ಮಾತುಗಳನ್ನಾಡುವಂತೆ ನನ್ನನ್ನು ಪ್ರೇರೇಪಿಸಿವೆ.

ಈ ಘಟಿಕೋತ್ಸವದಲ್ಲಿ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿ, ಡಿಗ್ರಿಗಳನ್ನು ಪಡೆದು ಮರ್ಯಾದಿತರಾಗುತ್ತಿರುವವರಿಗೆಲ್ಲ ನನ್ನ ಅಭಿನಂದನೆಗಳು. ಪರೀಕ್ಷೆಯ ಆತಂಕ ಮುಗಿಯುತ್ತಿದ್ದಂತೆಯೇ ಜೀವನದ ಪರೀಕ್ಷೆ ನಿಮಗೆ ಎದುರಾಗಲಿದೆ. ಅದರಲ್ಲಿ ಗೆಲುವು ಸೋಲುಗಳು ನೀವೀಗ ಯಶಸ್ವಿಯಾಗಿ ಪೂರೈಸಿದ ಪರೀಕ್ಷೆಯಷ್ಟು ಸ್ಪಷ್ಟವಾಗಿರುವುದಿಲ್ಲ. ಅಲ್ಲದೇ ನಿಮ್ಮ ವೈಯಕ್ತಿಕ ಶಕ್ತಿಗಷ್ಟೇ ಅದು ಸೀಮಿತವೂ ಅಲ್ಲ. ಜಾಗತೀಕರಣಗೊಳ್ಳುತ್ತಿರುವ ಇಂದಿನ ಪ್ರಪಂಚ ನಮ್ಮ ತೀರಾ ವೈಯಕ್ತಿಕವಾದ ಆಸೆ ಆಕಾಂಕ್ಷೆಗಳನ್ನೂ ತಿರುಚಬಲ್ಲದಾಗಿದೆ. ಅವಕಾಶವನ್ನು ಕಲ್ಪಿಸುವ ಭ್ರಮೆಯಲ್ಲಿ ಅವಕಾಶಗಳನ್ನು ಸಂಕುಚಿತಗೊಳಿಸುವ, ಬಲಿಷ್ಠ ರಾಷ್ಟ್ರಗಳ ಅಜೆಂಡಾಕ್ಕೆ ಅನುಗುಣವಾಗಿ ಎಲ್ಲರೂ ದುಡಿಯುವಂತೆ ಮಾಡುವ ವ್ಯವಸ್ಥೆಯನ್ನು ಹುಟ್ಟುಹಾಕುತ್ತಿರುವಂತೆ ಕಾಣುತ್ತಿದೆ. ಹೀಗಾಗಕೂಡದೆಂದು ನಾವೆಲ್ಲ ಬಯಸುವುದಾದರೆ ಊರಿನ ನೆಲದಲ್ಲಿ ಊರಿಕೊಂಡಿದ್ದೇ ಜಾಗತಿಕ ಆಕಾಶಕ್ಕೂ ಅನಿವಾರ್ಯವಾಗಿ ತೆರೆದುಕೊಳ್ಳಲೇಬೇಕಾದ ನಮ್ಮ ಸರ್ಕಾರಗಳು, ನಮ್ಮ ವಿದ್ಯಾಸಂಸ್ಥೆಗಳು, ನಮ್ಮ ರಾಜಕಾರಣಿಗಳು ಹೇಗಿರಬೇಕು ಎಂಬುದನ್ನು ನಾವೆಲ್ಲರೂ ಚಿಂತಿಸಬೇಕಾದ ಪರ್ವಕಾಲದಲ್ಲಿ ಇದ್ದೇವೆ.

ಮಲೆನಾಡಿನ ಸೀಮಿತ ಪ್ರಪಂಚದಲ್ಲೂ ಹಿಂದೊಂದು ಕಾಲದಲ್ಲಿ ಜಾಗತಿಕ ಪ್ರಜ್ಞೆ ಮೂಡಿಬಂದ ಸಂದರ್ಭವನ್ನು ಕುವೆಂಪು ಹೀಗೆ ಸ್ಮರಿಸುತ್ತಾರೆ: ಮೊದಲ ಮಹಾಯುದ್ಧದ ಕಾಲದಲ್ಲಿ ‘ಎಮ್ಡನ್’ ಎನ್ನುವ ಹಡಗು ಮದ್ರಾಸಿನ ಕಡಲ ತೀರದಲ್ಲಿ ಹಾರಿಸಿದ ಬಾಂಬಿನಿಂದಾಗಿ ಅಡಿಕೆ ಧಾರಣೆ ಎಷ್ಟು ಕುಸಿಯಿತೆಂದರೆ ಮಲೆನಾಡಿನವರು ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕರಾದರಂತೆ. ಮಲೆನಾಡಿನ ಹೊರಗೊಂದು ಜಗತ್ತಿದೆ ಎಂಬ ತಿಳುವಳಿಕೆ ಒಂದು ಭಯಹುಟ್ಟಿಸುವ ಘಟನೆಯ ಮೂಲಕ ನಮ್ಮವರಿಗೆ ಮೂಡಿಬಂತೆಂಬುದು ಈ ಕಾಲಕ್ಕೂ ಅರ್ಥವತ್ತಾದ ರೂಫಕವಾಗಿ ಕಾಣಿಸುತ್ತಿದೆ. ಈಗಂತೂ ಅಡಿಕೆ, ಹತ್ತಿ, ಭತ್ತ, ಕಾಫಿ – ಈ ಎಲ್ಲ ಕೃಷಿ ಉತ್ಪನ್ನಗಳೂ – ಜಗತ್ತಿನ ಬಲಿಷ್ಠರ ಇಷ್ಟಾನುಸಾರ ಮಾರುಕಟ್ಟೆಯಲ್ಲಿ ತಮ್ಮ ಬೆಲೆಯನ್ನು ಕಂಡುಕೊಳ್ಳುತ್ತಿವೆ. ನಾವೇನು ಓದಬೇಕು, ಓದಿ ಏನಾಗಬೇಕು – ಎಲ್ಲವೂ ಜಾಗತಿಕ ಮಾರುಕಟ್ಟೆಯಲ್ಲಿ ನಿರ್ಧರಿತವಾಗುತ್ತಿದೆ. ತನ್ನದೇ ಕನಸುಗಳನ್ನು ಕಾಣಗೊಡದಂತೆ ಸೃಷ್ಟಿಯಾಗುತ್ತಿರುವ ಪ್ರಪಂಚ ನಿಮ್ಮಂತಹ ಎಳೆವಯಸ್ಸಿನ ತರುಣರಿಗಂತೂ ಶಾಪವೇ ಸರಿ.

ನಾವು ಸ್ವತಂತ್ರರಾಗುವ ಮೊದಲು ಜಾಗತಿಕ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸಿದ ಎಮ್ಡನ್ ಈಗ ಆಕರ್ಷಕವಾಗಿ ಕಾಣುವಂತೆ ನಮ್ಮ ನಡುವೆಯೇ ಬೀಡುಬಿಟ್ಟಿದೆ. ಈಗ ನಮ್ಮ ಪ್ರತಿನಿತ್ಯದ ಜೀವನ ಅಮೆರಿಕದ ಅಧ್ಯಕ್ಷರಾದ ಬುಷ್ ತೆಗೆದುಕೊಳ್ಳುವ ದರ್ಪದ ನಿರ್ಣಯದ ಮೇಲೂ, ಸದ್ದಾಂ ಹುಸೇನರ ಹುಚ್ಚು ಮರ್ಜಿಯ ಮೇಲೂ ನಿರ್ಧರಿತವಾಗುವಂತೆ ಕಾಣುತ್ತಿದೆ. ಈ ಅಮೆರಿಕದ ಪರಮ ವಿರೋಧಿಗಳೋ ಕಟುಕ ರಾಕ್ಷಕಸರು ; ಬಿನ್‌ಲಾಡೆನ್‌ರಂತಹ ಮಾನವದ್ವೇಷಿಗಳು. ಆದ್ದರಿಂದ ಯಾರನ್ನೂ ಸಮರ್ಥಿಸಲಾರದಂತೆ, ಇಂದಿನ ಜಗತ್ತಿನ ವಿದ್ಯಮಾನಗಳನ್ನು ನಾವು ನಿಸ್ಸಹಾಯಕರಾಗಿ ನೋಡುವಂತಾಗಿದೆ. ಹಿಂಸೆ ಮತ್ತು ಪ್ರತಿಹಿಂಸೆಯ ವಾತಾವರಣದಲ್ಲಿ ಎಲ್ಲರ ಮನಸ್ಸೂ ಕಿಂಚಿತ್ತಾಗಿ ಎಚ್ಚರ ತಪ್ಪಿದರೂ ಸಾಕು ವಿಷಪೂರಿತವಾಗಬಹುದಾದ ಸಂದರ್ಭದಲ್ಲಿ ನಾವೆಲ್ಲರೂ ಇದ್ದೇವೆ.

ಇಷ್ಟು ಹೇಳಿದ ಮೇಲೂ ಗಮನಿಸಬೇಕಾದ ಸತ್ಯ ಒಂದಿದೆ. ಜಾಗತೀಕರಣ ಎನ್ನುವುದು ನಮ್ಮಲ್ಲಿ ಎಷ್ಟು ಆತಂಕಗಳನ್ನು ಹುಟ್ಟಿಸುತ್ತಿದೆಯೋ ಅಷ್ಟೇ ಭರವಸೆಗಳನ್ನೂ ಹುಟ್ಟಿಸುತ್ತಿರುವ ಸಂಗತಿಯಾಗಿದೆ. ನಮ್ಮ ಹೆಬ್ಬಯಕೆಗಳಲ್ಲಿ ಒಂದಾದ ಆಧುನೀಕರಣದ ಹೊಟ್ಟೆಯಲ್ಲೇ ಈ ಜಾಗತೀಕರಣ ಮೈದಾಳಿದೆ. ಈ ಬಗ್ಗೆ ನಾನು ಹಿಂದೊಮ್ಮೆ ಹೇಳಿದ ಮಾತುಗಳನ್ನು ಮತ್ತೆ ಹೇಳಲು ಬಯಸಿ ನಿಮ್ಮ ಕ್ಷಮೆ ಕೋರುತ್ತೇನೆ.

ಇಪ್ಪತ್ತನೆಯ ಶತಮಾನ ಭಾರತೀಯರಾದ ನಮ್ಮಲ್ಲಿ ಊರಿದ ಮೂರು ಆಸೆಗಳೆಂದರೆ : ಸಮಾನತೆ, ಮತಾತೀತವಾದ ಆಧ್ಯಾತ್ಮಿಕತೆ, ಐರೋಪ್ಯ ನಾಗರಿಕತೆಯ ಅತ್ಯುತ್ತಮ ಫಲಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ಆಧುನಿಕತೆ.

ಮಹಾತ್ಮಗಾಂಧಿಯವರಿಂದ ಪ್ರೇರಿತವಾದ ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಸಮಾನತೆಯ ಬಯಕೆಯ ಹೊಟ್ಟೆಯಲ್ಲೇ ಉಳಿದೆರಡು ಆಸೆಗಳೂ ಚಿಗುರಿಕೊಂಡವು. ಆಧುನಿಕತೆಯ ಬಗ್ಗೆ ಗಾಂಧಿಯವರಿಗೆ ಹಲವು ಅನುಮಾನಗಳು ಇದ್ದವು, ನಿಜ. ಆ ಮಾತು ಈಗ ಬೇಡ. ಕುವೆಂಪು, ಬೇಂದ್ರೆ, ಕಾರಂತ ಮುಂತಾದ ಆ ಕಾಲದ ಬರಹಗಾರರಲ್ಲಿ ಈ ಮೂರು ಪ್ರೇರಣೆಗಳೂ ಕೆಲಸ ಮಾಡುತ್ತವೆ. ರಾಮಕೃಷ್ಣ ಪರಮಹಂಸ ಮತ್ತು ಅರವಿಂದರಿಂದ ಪ್ರಭಾವಿತರಾದ ಕುವೆಂಪುರವರಂತೂ ಜಾತಿ ಹುಟ್ಟಿಸುವ ಅಸಮಾನತೆ ವಿರುದ್ಧ ಬಂಡೆದ್ದವರು. ಆದ್ದರಿಂದಲೇ ಅವರಲ್ಲಿ ಮೂಡುವ ಈ ಮೂರು ಬಯಕೆಗಳೂ ಅನನ್ಯವಾದ ಉತ್ಕಟತೆಯನ್ನು ಅವರ ಬರಹಕ್ಕೆ ತರುತ್ತವೆ. ಅವರ ಕನ್ನಡದ ಪ್ರೀತಿಯಿಂದಾಗಿ ಆಧುನಿಕತೆ ಈ ನೆಲದ್ದಾಗುತ್ತದೆ. ಬೇಂದ್ರೆ ಮತ್ತು ಕಾರಂತರ ಬಗ್ಗೆಯೂ ಇದು ನಿಜ. ನಮ್ಮ ಬರಹಗಾರರು ಇವತ್ತಿನ ತನಕವೂ ಎಷ್ಟೇ ಯೂರೋಪಿನಿಂದ ಪ್ರಭಾವಿತರಾದರೂ, ಕನ್ನಡ ಭಾಷೆಯಿಂದಾಗಿ, ಹಿರಿಯರ ಒಟ್ಟು ಸಂಕಲ್ಪದಿಂದ ದೂರವಾಗದೇ ಉಳಿದಿದ್ದಾರೆ.

ಈಗ ಮಾತ್ರ ಆಧುನಿಕತೆಯ ಬಯಕೆ ನಮ್ಮ ಭಾಷೆಗಳನ್ನೂ, ನಮ್ಮ ನಡಾವಳಿಗಳನ್ನೂ ಅಮೆರಿಕಾದ ಪ್ರೀತಿಯಲ್ಲಿ ಕಳೆದುಕೊಳ್ಳುವ ಅಂಧಾನುಕರಣೆಯಾಗಿಬಿಡುವ ಅಪಾಯ ಹೆಚ್ಚಾಗಿದೆ.

ಜಾಗತೀಕರಣದ ಆಧುನಿಕತೆ ಬಡವರ ಭಾರತವನ್ನೂ, ಉಳ್ಳವರ ಇಂಡಿಯಾವನ್ನೂ ಒಂದಕ್ಕೊಂದು ಸಂಬಂಧವಿಲ್ಲವೆನ್ನಿಸುವಂತೆ ಸೃಷ್ಟಿಸತೊಡಗಿದೆ. ಆಧ್ಯಾತ್ಮದ ಹಸಿವಂತೂ ಮಾಯವಾಗಿ ದೇಶ ಮತೀಯ ಸಂಘರ್ಷಗಳ ನರಕವಾಗಿಬಿಟ್ಟಿದೆ. ಇದಕ್ಕೆ ಕಾರಣ ಸಮಾನತೆಯ ಹಸಿವು. ನಮ್ಮ ಲೋಕದಿಂದ ಮಾಯವಾಗಿ, ಕೇವಲ ಮಧ್ಯಮವರ್ಗಕ್ಕೆ ಏರಬೇಕೆನ್ನುವ ಆಸೆ, ಮಧ್ಯಮವರ್ಗಕ್ಕೆ ಏರಿಬಿಟ್ಟವರಲ್ಲಿ ಇನ್ನೂ ಮೇಲೇರಬೇಕೆಂದು ಆಸೆ ನಮ್ಮ ಉದ್ಧಾರದ ಏಕೈಕ ಹಂಬಲವಾಗಿ ತೋರುವುದೇ ಆಗಿದೆ ಎನ್ನಬಹುದೇನೊ?

ಕ್ಷಮಿಸಿ – ಒಂದು ಸಹಜವಾದ ಸಾಂಸಾರಿಕವಾದ ಅಭಿವೃದ್ಧಿಯ ಆಸೆಯನ್ನು ಹೀಗೆ ಟೀಕಿಸುವುದು ಅತಿಯಾಯಿತೇನೊ? ಆದರೆ ನಾವೊಂದು ಸಮುದಾಯವೆನ್ನುವ ಕಲ್ಪನೆಯೇ ಇಲ್ಲದ, ಕೇವಲ ಸ್ವಾರ್ಥಿಗಳಾಗಿಬಿಟ್ಟವರ ದೇಶ ದೊಡ್ಡ ಕನಸುಗಳನ್ನು ಕಾಣಲಾರದು ಎಂಬ ಆತಂಕದಲ್ಲಿ ಆಡಿದ ಮಾತಿದು; ಧೋರಣೆಯ ಮಾತೆಂದು ತಾವು ತಿಳಿಯಬಾರದು.

ಭಾರತೀಯರಾದ ನಮ್ಮೆಲ್ಲರ – ಅಂದರೆ ಎಲ್ಲ ಬಡವ ಬಲ್ಲಿದರ- ಅಗತ್ಯಗಳನ್ನು ಒಟ್ಟಾಗಿ ಪೂರೈಸಿಕೊಳ್ಳುವಂತೆ ಅಂದರೆ ಗಾಂಧಿಯವರು ಬಯಸಿದ ಸರ್ವೋಯದಕ್ಕಾಗಿ, ಇಂತಹ ಜಗತ್ತಿನಲ್ಲಿ ದುಡಿಯಬೇಕಾದರೆ ನಮ್ಮ ಒಟ್ಟು ವ್ಯವಸ್ಥೆ ಆರೋಗ್ಯಪೂರ್ಣವೂ ಸದೃಢವೂ ಆಗಿರಬೇಕು. ದೇಶದ ಒಳ್ಳೆಯ ಮನಸ್ಸುಗಳು ಸಂಕಲ್ಪ ಬಲದ ಜಾಗರಣೆಯ ಎಚ್ಚರದಲ್ಲಿ, ಪೂರ್ಣದೃಷ್ಟಿಯಾಗಿ ಪರಸ್ಪರ ಸಂವಾದ ನಡೆಸುವಂತಾಗಬೇಕು.

ಆದರೆ ನಮ್ಮ ಪ್ರಜಾತಂತ್ರ ಅತಂತ್ರವಾಗಿರುವಂತೆ ಕೆಲವೊಮ್ಮೆ ಭಾಸವಾಗುತ್ತದೆ. ಜನತಂತ್ರಕ್ಕೆ ಆಧಾರಗಳಾಗಿರುವ ಪಾರ್ಲಿಮೆಂಟಿನಲ್ಲೂ, ಅಸೆಂಬ್ಲಿಗಳಲ್ಲೂ ಎದುರಾಳಿಯ ಮನಸ್ಸನ್ನು ಗೆಲ್ಲಬಲ್ಲ ವಾಕ್‌ಶಕ್ತಿಗೆ ಬದಲಾಗಿ, ಒಬ್ಬರ ಬಾಯಿಯನ್ನು ಇನ್ನೊಬ್ಬ ಮುಚ್ಚಿಸುವಂತಹ ಚೀರಾಟಗಳೇ ಕೇಳಿಸತೊಡಗಿವೆ. ಭಾಷೆಯ ಸಂವಹನ ಶಕ್ತಿಯಲ್ಲಿ ನಮ್ಮ ನಂಬಿಕೆ ಹೋಗಿರುವಂತೆ ಕಾಣುತ್ತಿದೆ. ಆಡುವ ಮಾತಿಗೆ ಬೆಲೆಯೇ ಇಲ್ಲದಂತೆ ನಾವು ಹೇಳುವುದು ಒಂದು; ಮಾಡುವುದು ಮತ್ತೊಂದು. ಭ್ರಷ್ಟಾಚಾರ ನಮ್ಮ ಎಲ್ಲ ಸಂಸ್ಥೆಗಳನ್ನೂ ಕಾಡುತ್ತಿದೆ. ಈ ಬಗ್ಗೆ ವಿದ್ಯಾವಂತರಾದ  ನಾವು ಕೇವಲ ಮಾತಾಡುತ್ತೇವೆ; ಆದರೆ ಏನೂ ಮಾಡಲಾರದೆ ನಮ್ಮ ಸಣ್ಣ ಪುಟ್ಟ ಕೆಲಸಗಳನ್ನೂ ಲಂಚಕೊಟ್ಟು ಮಾಡಿಸಿಕೊಂಡು ಆಮೇಲೆ ಗೊಣಗುತ್ತೇವೆ. ಎಲ್ಲಕ್ಕಿಂತ ಭಯಂಕರವಾದ ಸಂಗತಿಯೆಂದರೆ ನಮ್ಮ ಜೀವನವನ್ನೇ ಅಲ್ಲಾಡಿಸಿದ ಘೋರವಾದ ಹಿಂಸಾಚಾರದ ಅಪರಾಧಗಳನ್ನೂ ನಾವು ಬಹುಬೇಗ ಮರೆತು ಬಿಡುತ್ತೇವೆ. ಸ್ಮೃತಿಯೇ ಇಲ್ಲದ ನಾವು ಚರಿತ್ರೆಯಿಂದ ಏನನ್ನು ಕಲಿಯುವುದು ಸಾಧ್ಯ?

ಆಧುನಿಕ ಭಾರತದಲ್ಲಿ ಎದ್ದು ಕಾಣುವ ದೋಷವೆಂದರೆ, ಸಮಷ್ಟಿಗೆ ಸಂಬಂಧಿಸಿದಂತೆ, (ಅಂದರೆ ನಾವು ಒಂದು ದೇಶ ಎನ್ನಿಸುವಂತೆ) ವ್ಯಕ್ತಿ ವ್ಯಕ್ತಿಯಲ್ಲೂ ಇರಬೇಕಾದ ಶೀಲದ ಅಭಾವ. ನಮ್ಮ ಅಲ್ಪಸಮೃತಿಗೂ ಇದೇ ಕಾರಣವಿರಬಹುದು ಕೊಟ್ಟ ಮಾತಿಗೆ ಹಿಂದಿನ ಕಾಲದಲ್ಲಿ ಬೆಲೆಯಿತ್ತು. ಈಗ ಇಲ್ಲ. ರಾಜ್ಯಾಂಗಕ್ಕೆ ಬದ್ಧನಿದ್ದೇನೆಂದು ಪ್ರಮಾಣ ಮಾಡಿದ ಒಬ್ಬ ಮುಖ್ಯಮಂತ್ರಿ ಬಾಬರಿ ಮಸೀದಿ ಕೆಡವುದಾಗ ಕಣ್ಣುಮುಚ್ಚಿದಂತೆ ತೋರಿದರೆ, ಇನ್ನೊಂದು ಗುಜರಾತಿನ ಮಾರಣ ಹೋಮದಲ್ಲಿ ನಮ್ಮ ಪ್ರಧಾನಿ ರಾಜಧರ್ಮ ಮರೆತವರಂತೆ ತೋರಿದರು. ಈಗ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ ಕೂಡ. ನಮ್ಮ ನೈತಿಕಪ್ರಜ್ಞೆ ಪಾತಾಳಮುಟ್ಟಿದಂತೆ ತೋರುತ್ತಿದೆ.

ದೇಶದ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಲ್ಲೂ ಭಾರತದಲ್ಲೂ ಕೋಮು ಗಲಭೆಗಳಾಗಿ ಜನ ಸತ್ತರು; ಹಿಂದೂಗಳೂ ಸತ್ತರು; ಮುಸ್ಲಿಮರೂ ಸತ್ತರು. ಕೊಂದವರಿಗೆ ಎರಡು ದೇಶಗಳಲ್ಲೂ ಶಿಕ್ಷೆಯಾಗಲಿಲ್ಲ. ಇದನ್ನು ನಾವು ಎಂದೋ ಮರೆತಾಯಿತು. ಶ್ರೀಮಂತಿ ಇಂದಿರಾ ಗಾಂಧಿಯವರ ಕೊಲೆಯಾದನಂತರ ದೆಹಲಿಯಲ್ಲಿ ಸಿಖ್ ಜನಾಂಗದವರ ಕೊಲೆಯಾಯಿತು. ಆದರೆ ಕೊಂದವರು ಶಿಕ್ಷೆಗೆ ಒಳಗಾಗಲಿಲ್ಲ. ಅದನ್ನೂ ನಾವು ಮರೆತಾಯಿತು. ಗೋಧ್ರಾದಲ್ಲಿ ಕಗ್ಗೊಲೆಯಾಯಿತು; ಕೊಂದವರಿಗೆ ಶಿಕ್ಷೆಯಾಗುವುದರ ಬದಲು ಅಮಾಯಕರು ಸತ್ತರು. ಇದನ್ನೂ ನಾವು ಮರೆತಂತೆ ತೋರುತ್ತದೆ. ಮುಸ್ಲಿಮ್ ಯುವಕನೊಬ್ಬನನ್ನು ಸಮಾನ್ಯ ಮುಖ್ಯಮಂತ್ರಿ ಮೋದಿಯವರು ಕ್ಷಮಿಸಿದ ಚಿತ್ರ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಶ್ರೀ ಮೋದಿಯವರನ್ನು ಖಂಡಿಸುತ್ತಿದ್ದ ಸೆಕ್ಯುಲರ್ ಎಂದುಕೊಳ್ಳುವ ಪತ್ರಿಕೆಗಳೇ ಇನ್ನು ಮುಂದಿನ ದಿನಗಳಲ್ಲಿ ಅಂತಹವರನ್ನು ಸುದ್ದಿಯ ಆಕರ್ಷಣೆಗಾಗಿ ಹೆಚ್ಚಿಸುತ್ತ ಹೋದಾರು. ಪತ್ರಿಕೆಗಳಿಗೆ ಬೇಕಾಗಿರುವುದು ಅಚ್ಚರಿ ಹುಟ್ಟಿಸುವ ಸುದ್ಧಿ. ಮಾತಿಗೆ ಅತೀತವಾದ ಮೌನದಲ್ಲಿ ನಾವು ನಮ್ಮ ಸಂಕಟಗಳನ್ನು ಎದುರಿಸ-ಲಾರದವರಾಗುತ್ತಿದ್ದೇವೆ. ಗಾಂಧಿಯವರ ಮೌನಕ್ಕಿದ್ದ ಸಂವಹನ ಶಕ್ತಿ ನಮ್ಮ ಎಲ್ಲ ಅರಚಾಟಗಳಿಗೆ ಇರಲಾರದು ಎಂಬ ಪರಿವೆಯೇ ನಮಗೆ ಇಲ್ಲವಾಗಿದೆ. ಹುತ್ತದೊಳಗಿನ ತಪದಲ್ಲಿ ರಾಮಾಯಣದ ದಾರ್ಶನಿಕನಾದ ವಾಲ್ಮೀಕಿಯ ಬಗ್ಗೆ ಕವಿ ಅಡಿಗರು ಬರೆದ ಒಂದು ಸಾಲು ನೆನಪಾಗುತ್ತದೆ: ‘ಹುತ್ತಗಟ್ಟದೆ ಮತ್ತೆ ಚಿತ್ತಕೆತ್ತಿತೇನು / ಪುರುಷೋತ್ತಮನ ಆ ಅಂಥ ರೂಪು ರೇಖೆ?’

ಅಪರಾಧಕ್ಕೆ ತಕ್ಕ ಶಿಕ್ಷೆಯಾದೀತೆಂಬ ನಂಬಿಕೆ ಜನರಲ್ಲಿ ಇರುವಂತೆ ಕಾಣುವುದಿಲ್ಲ; ಆದ್ದರಿಂದ ಜನರೇ ಸಮೂಹಸನ್ನಿಯಲ್ಲಿ ತಾವು ದ್ವೇಷಿಸುವವರನ್ನು ಶಿಕ್ಷಿಸಲು ತೊಡಗುತ್ತಾರೆ. ಕೊಲ್ಲುತ್ತಾರೆ, ಸಾಯುತ್ತಾರೆ, ಇದನ್ನೆಲ್ಲ ಕಂಡು ಒಂದು ಕ್ಷಣ ಬೊಬ್ಬೆಯಿಟ್ಟು, ಆಮೇಲೆ ಮರೆತು ಯಥಾಪ್ರಕಾರ ನಾವು ನಮ್ಮ ಬದುಕನ್ನು ನಡೆಸುತ್ತೆವೆ.

ಪ್ರತಿನಿತ್ಯ ನಾವು ಭ್ರಷ್ಟಾಚಾರಿಗಳಾದ ಅಧಿಕಾರಿಗಳನ್ನು  ಪ್ರತ್ಯಕ್ಷ ಹಿಡಿದು ಹಣವಶಪಡಿಸಿಕೊಂಡ ಘಟನೆಗಳ ಬಗ್ಗೆ ಓದುತ್ತೇವೆ. ಆದರೆ ಈ ಅಧಿಕಾರಿಗಳಿಗೆ ಶಿಕ್ಷೆಯಾಗಬಹುದೆಂಬ ಭರವಸೆ ಜನರಿಗೆ ಇಲ್ಲ.

ಈ ಎಲ್ಲದರ ಪರಿಣಾಮವೆಂದರೆ, ನಾವು ಸಿನಿಕರಾಗುತ್ತಿದ್ದೇವೆ. ಇಲ್ಲೇ, ಈ ನಮ್ಮ ನಾಡಿನಲ್ಲೇ ನಮ್ಮ ಬದುಕು ನಮ್ಮ ಕೈಯಲ್ಲಿ ಇಲ್ಲವೆಂದಮೇಲೆ ಜಾಗತೀಕರಣವನ್ನು ನಾವು ನಮ್ಮ ಹಿತಕ್ಕೆ ತಕ್ಕಂತೆ ನಿರ್ವಹಿಸುತ್ತೇವೆಂಬ ಭರವಸೆ ಹುಟ್ಟುವುದಾದರೂ ಹೇಗೆ?

* * *

ಗೃಹಿಣಿಯರಿಗೆ ಗೊತ್ತಿರುವ ದೊಡ್ಡ ಸತ್ಯವೊಂದಿದೆ: ಮನೆಯನ್ನು ನಿತ್ಯ ಗುಡಿಸದೇ ಬೇರೆ ಮಾರ್ಗವಿಲ್ಲ. ಯಾಕೆಂದರೆ ನಿತ್ಯ ಧೂಳು ತುಂಬಿಯೇ ತುಂಬುತ್ತದೆ. ಲೌಕಿಕದ ಈ ನಿತ್ಯ ಕಾಯಕವನ್ನು ವಿದ್ಯಾವಂತರಾದ ನಾವು ಮರೆತಿರುವಂತೆ ತೋರುತ್ತದೆ. ಈ ಸರ್ವತ್ರ ಗುಡಿಸುವ ಕೆಲಸಕ್ಕೆ ಮುಂದಾಗುವ ಜಯಪ್ರಕಾಶ ನಾರಾಯಣರು ನಮ್ಮ ನಡುವೆ ಈಗ ಇಲ್ಲವೆನ್ನುವುದು ಸುಮ್ಮನಿದ್ದು ಸಹಿಸಲು ನಮಗೆ ಕಾರಣವಾಗಬಾರದು. ನಮಗಿರುವುದು ಈ ಬದುಕು ಮಾತ್ರ ಎಂದು ತಿಳಿದು ಅನ್ಯಾಯವನ್ನು ಸಹಿಸದ ಜನ ನಾವಾಗಬೇಕು; ಯುವಜನರಲ್ಲಿ ಈ ಜಾಗೃತಿ ಮೊದಲು ಮೂಡಬಹುದು ಎಂದು ಚರಿತ್ರೆಯಿಂದ ತಿಳಿದ ನಾವು ಭರವಸೆಯಲ್ಲಿ ಬದುಕುತ್ತಿದ್ದೇವೆ. ಭಾರತೀಯರ ಪರಂಪರಾಗತವಾದ ಸಹನಶಕ್ತಿಗೂ ಒಂದು ಮಿತಿಯಿರಬಹುದು ಎಂಬುದೇ ಈ ಭರವಸೆ.

ಇದಕ್ಕಿಂತ ಹೆಚ್ಚು ಹೇಳಬಾರದು. ನಮ್ಮ ಕಾಲದ ಕಷ್ಟಗಳನ್ನು ಎರಡೂ ಬಗೆಯ ಕಷ್ಟಗಳನ್ನು – ನಮ್ಮ ಮೇಲೆ ಜಗತ್ತಿನ ವಿದ್ಯಮಾನಗಳು ನಮ್ಮನ್ನು ಮೀರಿ ಹೇರುವ ಕಷ್ಟಗಳನ್ನು ಮತ್ತು ನಮ್ಮ ಶೀಲದ ಅಭಾವದಿಂದ ಹುಟ್ಟಿಕೊಳ್ಳುವ ಕಷ್ಟಗಳನ್ನು ಎದುರಿಸಬೇಕಾದ ನಾವು ಗಟ್ಟಿಯಾಗಬೇಕು. ಮನುಷ್ಯ ಗಟ್ಟಿಯಾಗುವುದು ಇತರರ ಸಂಸರ್ಗದಲ್ಲಿ ಹೇಗೋ ಹಾಗೆಯೇ ಏಕಾಂತದ ಮೌನದಲ್ಲೂ. ಒಳದನಿಗೆ ಕಿವಿಗೊಡುವ ಎಚ್ಚರ, ಇತರರ ಸಂಸರ್ಗದಲ್ಲಿ ಒದಗುವ ಸಂವಾದಕ್ಕೆ ತೆರೆದುಕೊಳ್ಳುವ ಸೂಕ್ಷ್ಮವಾದ ಮುಕ್ತ ಮನಸ್ಸು, ನಮಗೆ ಗೊತ್ತಿರದ ವಷಿಯಗಳ ಬಗ್ಗೆ ತಿಳಿಯಬೇಕೆನ್ನುವ ಸದಾ ಕಲಿಯುವ ಕುತೂಹಲ-ಇವೇ ನಮ್ಮ ಜೀವನದುದ್ದಕ್ಕೂ ನಮ್ಮನ್ನು ಗಟ್ಟಿಯಾಗಿ ಬೆಳೆಸುತ್ತ ಹೋಗುವ ಗುಣಗಳು. ವಿರೋಧದಂತೆ ಕಂಡರೂ ಈ ಗಟ್ಟಿತನದಲ್ಲಿ ಒಂದು ವಿಶೇಷವಿದೆ. ಸದಾ ಸ್ಪಂದನಶೀಲರಾಗಿ, ನಾಚುವ ಸ್ವಭಾವದವರಾಗಿ ಯಾರು ಮೃದುವಾಗಿ ಉಳಿದಿರುತ್ತಾರೋ ಅವರೇ ಗಟ್ಟಿಯಾದ ವ್ಯಕ್ತಿತ್ವವುಳ್ಳವರೂ ಆಗಿರುತ್ತಾರೆ.

ಸದಾ ವಿದ್ಯಾರ್ಥಿಯಾಗಿ ಉಳಿಯಬೇಕಾದ ಅಧ್ಯಾಪಕರ ಬಗ್ಗೆ ಹೇಳಬೇಕಾದ ಒಂದು ಮಾತಿದೆ. ಬ್ಲೇಕ್ ಹೇಳುವ ಮಾತಿದು. You do not know enough, if you do not know more than enough. ಸಾಕಷ್ಟು ತಿಳಿದಿರಬೇಕೆಂದರೆ, ಅಗತ್ಯಕ್ಕಿಂತ ಅಧಿಕವಾಗಿ ತಿಳಿದಿರಬೇಕು. ಇದೂ ಎಲ್ಲದರಂತೆ ಇನ್ನೊಂದು ಕೆಲಸ ಎಂದು ಮಾತ್ರ ತಿಳಿಯುವ ಜಾಣರು ಅಧ್ಯಾಪಕರಾಗಲು ಅರ್ಹರಲ್ಲ. ಒಂದು ವಿಶ್ವವಿದ್ಯಾಲಯದ ಘನತೆ ಇರುವುದು ಅದರ ದೊಡ್ಡ ಕಟ್ಟಡಗಳಲ್ಲಿ ಅಲ್ಲ; ಅದರ ಅಧ್ಯಾಪಕರಲ್ಲಿ. ಇಂಥವರ ಶಿಷ್ಯ ನಾನು ಆಗಿದ್ದೆ ಎನ್ನುವುದನ್ನು ಬದುಕಿನ ಎಲ್ಲ ಹಂತಗಳಲ್ಲೂ ವಿದ್ಯಾರ್ಥಿಗಳು ನೆನಪಿಟ್ಟಿರುತ್ತಾರೆ.

ಆದ್ದರಿಂದ ಅಧ್ಯಾಪಕರ ಆಯ್ಕೆಯಲ್ಲಿ ನಿಷ್ಠುರವಾಗಿರಬೇಕು. ಹತ್ತೋ ಹದಿನೈದೋ ನಿಮಿಷಗಳ ಇಂಟರ್‌ವ್ಯೂನಲ್ಲಿ ಗೊತ್ತಾಗುವ ಸಂಗತಿಯಲ್ಲ ಇದು. ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳು ಹುಡುಕುವಂತೆ ನಾವು ಒಳ್ಳೆಯ ಅಧ್ಯಾಪಕರಿಗಾಗಿ ಹುಡುಕಬೇಕು. ಪ್ರತಿ ಅಭ್ಯರ್ಥಿಯೂ ಕನಿಷ್ಠ ಇಡೀ ದಿನದ ಶೋಧನೆಗೆ ಅಲ್ಲಿ ಒಳಪಡುತ್ತಾನೆ; ಇಡೀ ಇಲಾಖೆ ತನ್ನ ಸಲಹೆಗಳನ್ನೂ ಯೂನಿವರ್ಸಿಟಿಯ ವರಿಷ್ಠರಿಗೆ ಕೊಡುತ್ತದೆ. ಅಂತಹ ಕ್ರಮಗಳನ್ನು ನಾವು ರೂಢಿಸಿಕೊಳ್ಳುವಂತಾಗಬೇಕು.

ಕುವೆಂಪು ವಿಶ್ವವಿದ್ಯಾಲಯದ ಬಗ್ಗೆ ನನ್ನದೊಂದು ಆಸೆಯಿದೆ. ಈಚೆಗೆ ಎಲ್ಲರೂ ಎಂಜಿನಿಯರಿಂಗಿಗೋ, ಮೆಡಿಕಲ್‌ಗೋ ಸೇರುವುದೇ ಹೆಚ್ಚು. ಹಿಂದಿನ ಬಿ.ಎ. ಮತ್ತು ಬಿ.ಎಸ್ಸಿ.ಗಳು ಈಚೆಗೆ ಕೃಷವಾಗಿ ನರಳುತ್ತಿವೆ. ಹೊಸ ಅಧ್ಯಾಪಕರ ನೇಮಕವೇ ಆಗುತ್ತಿಲ್ಲ. ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಾಹಿತ್ಯ, ತತ್ವಶಾಸ್ತ್ರ ಇತ್ಯಾದಿ ಜ್ಞಾನಮುಲವಾದ ಶಿಸ್ತುಗಳು ಬೆಳೆಯದಿದ್ದರೆ ನಮ್ಮ ತಂತ್ರಜ್ಞಾನವೂ ಬೆಳೆಯದೆ ಅಲ್ಪವಾಗಿಬಿಡುವ ಸಂಭವವಿದೆ. ಈಗ ಇರುವ ಕಾಲೇಜುಗಳಲ್ಲಿ ಅಷ್ಟಿಷ್ಟು ಶಿಸ್ತಿನಲ್ಲಿ ವಿಜ್ಞಾನವನ್ನು ಹೇಳಿಕೊಡುವಷ್ಟೂ ಶ್ರದ್ಧೆಯಿಂದ ಮಾನವಿಕ ಶಾಸ್ತ್ರಗಳನ್ನು ಹೇಳಿಕೊಡುತ್ತಿಲ್ಲ. ಚರಿತ್ರೆಯನ್ನೋ ಸಾಹಿತ್ಯವನ್ನೋ, ಸಮಾಜಶಾಸ್ತ್ರಗಳನ್ನೋ ಸೃಜನಶೀಲವಾಗಿ ಕಲಿಸುವ ಕಾಲೇಜುಗಳೇ ಕರ್ನಾಟಕದಲ್ಲಿ ಇಲ್ಲವೆನ್ನಬಹುದು. ಸೃಜನಶೀಲವಲ್ಲದಿದ್ದರೂ ಶಿಸ್ತಾಗಿ ಕಲಿಸುವ ಕಾಲೇಜುಗಳು ಕೆಲವಾದರೂ ದೆಹಲಿಯಲ್ಲಿ ಮಾತ್ರ ಇವೆ. ನಾವು ಎದುರಿಸುತ್ತಿರುವ ಚರಿತ್ರೆಯ ಬಿಕ್ಕಟ್ಟುಗಳಿಗೆ ಅರ್ಥಪೂರ್ಣವಾಗಿ ಸ್ಪಂದಿಸಲು ಮಾನವಿಕ ವಿಭಾಗಗಳು ಬೆಳೆಯಬೇಕು. ನಮ್ಮ ಧೀಮಂತ ಸಾಹಿತಿಯಾದ ಕುವೆಂಪುರವರ ಹೆಸರನ್ನು ಹೊತ್ತ ಈ ವಿಶ್ವವಿದ್ಯಾಲಯವಾದರೂ ಮಾನವಿಕ ವಿಭಾಗಗಳನ್ನು ಸೃಜನಶೀಲವಾಗಿ, ದಿಟ್ಟವಾಗಿ, ನಿರ್ಭಯವಾಗಿ ವೈಚಾರಿಕ ಮಂಥನವಾಗುವಂತೆ ಬೆಳೆಸಲಿ, ಮತ್ತು ಅದರ ಅಧೀನದಲ್ಲಿರುವ ಕಾಲೇಜುಗಳು ಬೆಳೆಯುವಂತೆ ಶ್ರಮಿಸಲಿ ಎಂದು ಹಾರೈಸುತ್ತೇನೆ.

ನಾನು ಓದಿದ್ದು, ನನ್ನ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದು ಆಗಿನ ಶಿವಮೊಗ್ಗ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ; ನಾನು ಅಧ್ಯಾಪಕನಾಗಿ ಪಾಠಮಾಡಲು ಕಲಿತದ್ದೂ ಅಲ್ಲೇ. ಆದ್ದರಿಂದ ಒಂದು ವೈಯಕ್ತಿಕ ತುರ್ತಿನಿಂದ ಮೇಲಿನ ಮಾತುಗಳನ್ನು ಹೇಳಿದ್ದೇನೆ.

ಕುವೆಂಪು ವಿಶ್ವವಿದ್ಯಾಲಯ ಮಲೆನಾಡಿನ ಪರಿಸರದ ಬಗ್ಗೆ ತಕ್ಕಷ್ಟು ಕಾಳಜಿಯನ್ನು ತೋರುತ್ತಿದೆ. ಕುದುರೆಮುಖದ ಗಣಿಗಾರಿಕೆಯನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಆಚರಿಸಲಾದ ಅಪೂರ್ವ ದಾಖಲೆಯ ಬಂದ್‌ನ್ನು ನಾನಿಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ. ಕುವೆಂಪು ವಿಶ್ವವಿದ್ಯಾಲಯದ ಕೆಲವು ಅಧ್ಯಾಪಕರು ಈ ಹೋರಾಟದಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡದ್ದನ್ನೂ ಸ್ಮರಿಸುತ್ತೇನೆ. ಮಲೆನಾಡಿನ ಪರಿಸರವೇ ಒಂದು ದೊಡ್ಡ ಆಸ್ತಿ. ಕುವೆಂಪುವನ್ನು ಸೃಷ್ಟಿಸಿದ್ದು ಈ ಪರಿಸರ. ಆದ್ದರಿಂದ ಅವರ ಹೆಸರನ್ನು ಹೊತ್ತ ಈ ವಿಶ್ವವಿದ್ಯಾಲಯ ಮಲೆನಾಡಿನ ಪರಿಸರದ ಕಾವಲುಗಾರನಾಗಬೇಕು. ಅಷ್ಟೇ ಅಲ್ಲ, ನಾವು ಆಧುನಿಕವಾದ ತಂತ್ರಜ್ಞಾನವಿಲ್ಲದೆ ಬದುಕುವುದೂ ಸಾಧ್ಯವಿಲ್ಲವಾದದ್ದರಿಂದ ಇಲ್ಲಿನ ವಿಜ್ಞಾನಿಗಳೂ ತಂತ್ರಜ್ಞರೂ ಪರಿಸರಕ್ಕೆ ಹಾನಿಕರವಲ್ಲದ ಜನೋಪಯೋಗಿಯಾದ ಪರ್ಯಾಯ ತಂತ್ರಜ್ಞಾನದ ಶೋಧನೆಯಲ್ಲಿ ತೊಡಗಿ ಇಡೀ ವಿಶ್ವದಲ್ಲೇ ಹೊಸ ದಾಖಲೆ ನಿರ್ಮಿಸಬೇಕು. ಗುಡ್ಡ ಬೆಟ್ಟ ಕಾಡುಗಳ ಹಲವು ಜಾತಿಯ ಪ್ರಾಣಿಗಳ ಜೈವಿಕ ವೈವಿಧ್ಯದ ಈ ಪರಿಸರ ಅಂತಹ ಒಂದು ಸವಾಲನ್ನು ಎಲ್ಲ ಚಿಂತನಶೀಲರಿಗೆ ಒಡ್ಡುತ್ತದೆ. ಈ ಸವಾಲನ್ನು ಎದುರಿಸುವಂತೆ ಕುವೆಂಪು ವಿಶ್ವವಿದ್ಯಾಲಯ ಬೆಳೆಯಲಿ ಎಂದು ನಾನು ಹಾರೈಸುತ್ತೇನೆ.

೨೮೦೩ ರಂದು ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಡಿದ ಭಾಷಣ.

* * *