ಕೇರಳದ ಒಂದು ಗ್ರಾಮವಾದ ಮುಂಕೋಂಬುಗೆ ಹೋದಾಗ ಸಂಜೆಯಾಗಿತ್ತು. ನನಗಿಂತ ಮುಂಚೆ ಬಂದ ದೇವಸ್ವಂ ಬೋರ್ಡಿನ ಭಾಸ್ಕರನ್ ನಾಯರ್ ದೋಣಿಯಲ್ಲಿ ಹೋಗಿಯಾಗಿತ್ತು. ನನಗಾಗಿ ಮತ್ತೆ ದೋಣಿ ಬಂತು. ಹಿಂದೊಂದು ಕಾಲದಲ್ಲಿ ಈ ಸಂಪರ್ಕವೂ ದುರ್ಲಭವಾಗಿದ್ದ ಮುಂಕೋಂಬುಗೆ ಹೋಗುವಾಗ ನನಗಿದ್ದ ಕುತೂಹಲ ‘ನಂಬೂದರಿ ಇಲ್ಲಂ’ ಒಂದನ್ನು ನೋಡಬಹುದೆಂಬುದು.

ಎಲ್ಲರೂ ನನಗಾಗಿ ಕಾದಿದ್ದರು. ಅದೇ ದ್ವೀಪದಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕದಲ್ಲಿರುವ ಡಾ. ಎನ್.ಎನ್. ಪಣಿಕ್ಕರ್ ಎಂಬ ಯುವಕ ಫೋಟೋ ತೆಗೆಯಲು ನಿಂತಿದ್ದ. ನನ್ನನ್ನು ಕರೆದವರು ತುಂಬ ಜಂಬದಲ್ಲಿ ಅವನನ್ನು ಪರಿಚಯಿಸಿದರು. ‘ಇವತ್ತು ಅವನೂ ಸಂಸ್ಕೃತದಲ್ಲಿ ಮಾತಾಡುತ್ತಾನೆ. ಅಮೆರಿಕದಲ್ಲಿ ಡಾಕ್ಟರಾದವನು! ಆದರೂ ಸಂಸ್ಕೃತದಲ್ಲೇ ಮಾತನಾಡುತ್ತಾನೆ!’ ಇದರಿಂದ ನಾನು ಬಹಳ ಆಶ್ಚರ್ಯವನ್ನೂ ಖುಷಿಯನ್ನೂ ಪಟ್ಟವನಂತೆ ನಟಿಸುತ್ತ ಮುಂದೆ ನಡೆದೆ. ಎಲ್ಲರಂತೆ ಪಣಿಕ್ಕರ್ ಮುಂಡು ಉಟ್ಟು ಬುಷ್ ಶರ್ಟ್ ತೊಟ್ಟಿದ್ದ. ಅವನ ಕೈಯಲ್ಲಿ ಕಂಪ್ಯೂಟರೈಸ್ಡ್ ಕ್ಯಾಮರಾ ಇತ್ತು. ಅದರ ಇನ್‌ಫ್ರಾ ರೆಡ್ ರೇ ದೂರವನ್ನಳೆದು ಚಿತ್ರ ತೆಗೆಯುತ್ತದೆಂದು ನಂತರ ವಿವರಿಸಿದ. ಇನ್ನೊಬ್ಬರು ಸ್ವಾಗತಕ್ಕೆ ಕಾದಿದ್ದವರು – ತುಂಬ ಬಡಕಲು ದೇಹದ, ಸೊರಗಿದ ಮುಖದ, ಸ್ನೇಹಪರ ಮೃದುಕಣ್ಣಿನ ವಿಷ್ಣು ನಂಬೂದರಿ. ಈ ಪ್ರದೇಶದ ಹಿಂದೊಂದು ಕಾಲದ ಲಕ್ಷಾಧಿಪತಿ ಎಂದೂ, ಅವರ ಮನೆಯಲ್ಲೇ ನಾನು ಮುಕ್ತಾಯಗೊಳಿಸುವ ಸಂಸ್ಕೃತ ಶಿಬಿರ ನಡೆದದ್ದೆಂದೂ ಪರಿಚಯಿಸಲಾಯಿತು. ಅವರದೇ ನಾನು ನೋಡಲು ಬಯಸಿದ್ದ ಹಳೆಯ ಕಾಲದ ‘ನಂಬೂದರಿ ಇಲ್ಲಂ.’

ಸಡಿಲವಾದ ಮೈಕಟ್ಟಿನ ವಿಷ್ಣು ನಂಬೂದರಿ ಸ್ಥಿತಿವಂತರಂತೇನೂ ಕಾಣಲಿಲ್ಲ; ಸಾಮಾನ್ಯ ಮಲಯಾಳಿಗಳಲ್ಲಿ ಕಾಣುವ ನುಗ್ಗುವ ದಾರ್ಷ್ಟ್ಯ ಪಡೆದವರಂತೆಯೂ ಕಾಣಲಿಲ್ಲ. ಪಳೆಯುಳಿಕೆಯಂತಿದ್ದರು. ಅವರ ಕಣ್ಣಲ್ಲಿ ಮೌನ ಮಡುಗಟ್ಟಿದಂತಿತ್ತು. ಇನ್ನೊಂದು ಲೋಕದಲ್ಲಿರುವವರಂತೆ ಕಂಡ ವಿಷ್ಣು ನಂಬೂದರಿಗಳು, ನಮ್ಮವರೆಂದು ನನಗನ್ನಿಸಿದ್ದು ಅವರು ನೀಟಾಗಿ ಬಾಚಿಕೊಂಡಿದ್ದ ಕ್ರಾಫು ತಲೆಯಿಂದ. ಅವರ ನುಣುಪಾದ ಟೆರಿಲಿನ್ ಶರ್ಟಿನಿಂದ. ಮಾಸಿದ ತೇಜಸ್ಸಿನ ವಿಷ್ಣು ನಂಬೂದರಿ ನನಗೆ ಒಂದು ಬೃಹತ್ ಟಾಲ್‌ಸ್ಟಾಯ್ ಕಾದಂಬರಿಯ ಸೊರಗಿದ ಗ್ರಾಮೀಣ ಪಾತ್ರವಾಗಿ ಕಂಡರು. ಭಗವತಿ ದೇವಸ್ಥಾನದೊಳಕ್ಕೆ ಹೋಗುವ ಮುಂಚೆ ಪಾರಕ್ಷೆ ಕಳಚಿದೆ. ಎರಡು ಸಾಲಿನಲ್ಲಿ ಹೂ ಹಿಡಿದು ನಿಂತ ಪುಟಾಣಿ ಹುಡುಗಿಯರು; ಮುಂದೆ ವಾಲಗದವರು. ಹೀಗೆ ಪ್ರವೇಶ ಮಾಡಲ್ಪಟ್ಟ ನನಗೆ ಗೌರವರ್ಣದ ಇನ್ನೊಬ್ಬ ನಂಬೂದರಿ ಪುರೋಹಿತರು ಹಿಡಿದುಕೊಂಡು ನಿಂತ ಪೂರ್ಣಕುಂಭದ ಸ್ವಾಗತ ಸಿಕ್ಕಿತು-ಭಗವತಿ ದೇವಾಲಯದ ಎದುರು. ಹಲವು ಪುತ್ರರನ್ನೂ, ದೀರ್ಘ ಆಯಸ್ಸನ್ನೂ, ಧನಕನಕ ಭಾಗ್ಯವನ್ನೂ ಅವರ ಮಂತ್ರದಿಂದ ಪಡೆದು ನಾನು ವೇದಿಕೆ ತಲುಪಿದೆ.

ಸಂಸ್ಕೃತದಲ್ಲಿ ನನ್ನ ಬಗ್ಗೆ ಒಂದು ಕವನವನ್ನು ರಚಿಸಿ ವಿದ್ಯಾರ್ಥಿಯೊಬ್ಬ ಓದಿದ. ಅದು ಎಷ್ಟು ಉತ್ಪ್ರೇಕ್ಷೆಯ ಕವನವಾಗಿತ್ತೆಂದರೆ ಯಾರ ಬಗ್ಗೆಯಾದರೂ ಆಗಬಹುದಿತ್ತು.   ಉತ್ಪ್ರೇಕ್ಷೆಯಲ್ಲಿ ನಾನು ಉಬ್ಬುವುದಕ್ಕೆ ಅವಕಾಶವೇ ಇರಲಿಲ್ಲ. ಅಷ್ಟು ಉತ್ಪ್ರೇಕ್ಷೆಯಲ್ಲಿ ಹೊಗಳಿಸಿಕೊಂಡವನು ಅನಾಮಧೇಯನೇ ಆಗಿಬಿಡುತ್ತಾನೆ. ನನ್ನದೆಂದು ಕವನದಲ್ಲಿದ್ದುದು ನನ್ನ ಹೆಸರು ಮಾತ್ರ – ಈ ಹೆಸರೂ ಉತ್ಪ್ರೇಕ್ಷಾಲಂಕಾರವಾಗಿ – ಬಿಟ್ಟಿದ್ದರಿಂದ ‘ನಾನು’ ಕರಗಿ ಹೋಗಿದ್ದೆ.

ಈ ಬಗೆಯ ಸಂಸ್ಕೃತದಲ್ಲಿ ಏನೂ ಹೊಸದನ್ನು ಹೇಳಲು ಸಾಧ್ಯವಿಲ್ಲವೆನ್ನಿಸಿತು – ವಕ್ರವಾಗದೆ, ಹೊಂಚದೆ, ಕನಿಷ್ಠವನ್ನು ಕಾಣಲಾರದೆ, ಬಳುಕಲಾರದೇ ಇರುವ ಭಾಷೆ ಹೊಸದನ್ನು ಹೇಗೆ ಹೇಳಿತು? ಯಾವುದು ಹತ್ತಿರ, ಯಾವುದು ದೂರ ವಿವೇಚಿಸಲಾರದ್ದು ಜೀವಂತ ಕಣ್ಣಾದೀತೆ?

ಸ್ವದೇಶಿಯಾಗಿದ್ದು ವಿಮರ್ಶಾಪ್ರಜ್ಞೆ ಕಳೆದುಕೊಳ್ಳದ, ವಿಮರ್ಶಾ ಪ್ರಜ್ಞೆಯ ಅನುಮಾನದಿಂದ ಪ್ರಜ್ಞೆಯಲ್ಲಿ ವಿದೇಶಿಯಾಗಿಬಿಡುವ ಭಾರತೀಯ ದ್ರಷ್ಟಾರರ ಬಗ್ಗೆ ನಾನು ಮಾತಾಡಿದೆ. Critical insiders ಬಗ್ಗೆ, ಬಸವ, ತುಕಾರಾಂ, ಕಬೀರ್, ಗಾಂಧಿ, ಶಂಕರ, ನಾರಾಯಣ ಗುರು ಇವರ ಬಗ್ಗೆ, ಹಲವು ಸೃಷ್ಟಿಶೀಲ ಜಗಳಗಳ ಭಾರತದ ಬಗ್ಗೆ ಅನುಮಾನದ ಒಳನೋಟ ಸತ್ಯದ ಸ್ವೀಕಾರಕ್ಕೆ ಹೇಗೆ ಅಗತ್ಯ ಎಂಬ ಬಗ್ಗೆ-

ಮಾತಾಡುವಾಗ ನನ್ನ ಗಮನವೆಲ್ಲ ಇದ್ದದ್ದು ವಿಷ್ಣು ನಂಬೂದರಿಗಳ ಮೇಲೆ. ಅವರ ಇಲ್ಲಂ ನೋಡುವ ಕುತೂಹಲ ಅಂತೂ ತಣಿಯಿತು. ಹೊರ ಜಗತ್ತನ್ನು ಅಳಿಸಿ ಹಾಕುವ ಅವರ ಮನೆಯ ಒಳಾಂಗಣಗಳಲ್ಲಿ ದಿಕ್ಕುತಪ್ಪಿ ನಿಂತಿದ್ದಾಗ ನನ್ನನ್ನು ಒಯ್ದ ಬ್ರಾಹ್ಮಣನಲ್ಲದ, ಆದರೆ ಮೇಲಿನ ಅಂತಸ್ತಿನ ನಾಯರ್ ಹೇಳಿದರು : ‘ಕೆಲವು ವರ್ಷಗಳ ಹಿಂದೆ ಯಾರೂ – ನನ್ನಂತಹ ಶ್ರೀಮಂತ ಕೂಡ – ಇಲ್ಲಿ ಒಳಗೆ ಹೀಗೆ ಬರುವುದು ಸಾಧ್ಯವೇ ಇರಲಿಲ್ಲ’ ಅಮೆರಿಕನ್ ಪಣಿಕ್ಕರ್- ಇಲ್ಲೇ ಹುಟ್ಟಿ ಬೆಳೆದ ಅವರೂ ಸ್ವಲ್ಪ ಮೇಲಿನ ಶೂದ್ರರೇ – ನಮ್ಮೆಲ್ಲರ ಫೋಟೋ ತೆಗೆಯುತ್ತ ಅಂದರು. ‘ನಾನು ಇಲ್ಲಿ ಬಂದದ್ದು ಇದೇ ಮೊದಲ ಸಾರಿ.’ ನನ್ನ ಕುತೂಹಲವೆಂದರೆ ನಾಯರ್ ಜನರ ನಾಯಕಟ್ಟಿನ ಮನೆಗೂ, ನಂಬೂದರಿ ಮನೆಗೂ ಏನು ವ್ಯತ್ಯಾಸವೆಂಬುದು.

ನಾಯರ್‌ಗಳ ಹೆಂಗಸರು ನಂಬೂದರಿ ಹೆಂಗಸರಂತಲ್ಲ, ನಂಬೂದರಿ ಹೆಂಗಸರು ಪೂರ್ಣ ಸ್ವತಂತ್ರರು. ನಾಯರ್ ಹೆಂಗಸರು ಆಸ್ತಿಗೆ ಹಕ್ಕುದಾರರು. ನಮ್ಮ ಅಳಿಯ ಸಂತಾನದಂಥ ವ್ಯವಸ್ಥೆ ಅವರದು. ಹಿರಿಮಗನಾದ ನಂಬೂದರಿಗೆ ಮಾತ್ರ ಮದುವೆ. ಉಳಿದ ನಂಬೂದರಿಗಳು ನಾಯರ್ ಹೆಂಗಸರ ಜೊತೆ ಕೂಡಿಕೆ ಮಾಡಿಕೊಳ್ಳುತ್ತಿದ್ದದ್ದು. ರಾತ್ರಿ ಮಲಗಲು ಬರುವ, ಹಗಲು ಮುಖ ತೋರಿಸದ ಬೀಜದ ಗೂಳಿಯಂತಹ ಅಪರಿಚಿತ ಜೀವನ. ತಮಗೆ ಹುಟ್ಟಿದ ಮಕ್ಕಳೇ ತಮಗೆ ಅಸ್ಪೃಶ್ಯರು. ನನ್ನ ಹಲವು ಮಲಯಾಳಿ ಲೇಖಕ ಗೆಳೆಯರು ತಮ್ಮ ಪ್ರಜ್ಞೆಯ ಒಳಕ್ಕೇ ಬಾರದ ತಮ್ಮ ತಂದೆಯವರ ಬಗ್ಗೆ ನನ್ನೊಡನೆ ಮಾತಾಡಿದ್ದಾನೆ. ಅಯ್ಯಪ್ಪ ಪಣಿಕ್ಕರ್ ಬರೆದ ‘ಕುಟುಂಬ ಪುರಾಣಂ’ನಲ್ಲಿ ಎಲ್ಲ ಸಂಬಂಧಿಗಳೂ ಇದ್ದಾರೆ- ತಂದೆಯೊಬ್ಬರ ಹೊರತಾಗಿ.

ವಿಷ್ಣು ನಂಬೂದರಿಗಳ ತಾತನ ಫೋಟೋ ನೋಡಿದೆ. ದೊಡ್ಡ ಯಜುರ್ವೇದಿಗಳಂತೆ; ಉದಾರಿಗಳಂತೆ; ಊಟ ಮಾಡುವ ಮೊದಲು ಹೊರಗೆ ಬಂದು ನಿಂತು ಎದುರು ಕಂಡ ಬ್ರಾಹ್ಮಣರನ್ನೆಲ್ಲ ಒಳಗೆ ಕರೆದು ಅನ್ನ ಸಂತರ್ಪಣೆಯ ನಿತ್ಯೋತ್ಸವದಲ್ಲಿ ಬದುಕಿದವರಂತೆ. ನಾಯರ್ ಹೇಳಿದರು : ‘ಈಗ ಇದೆಲ್ಲವೂ ಹಳೆಯ ಪುರಾಣ. ಭೂಶಾಸನ ಬಂದು ನಂಬೂದರಿಗಳೆಲ್ಲರೂ ಆಸ್ತಿ ಕಳೆದುಕೊಂಡರು.’

ಸೋಮಾರಿ ಜೀವನ; ಕೇವಲ ಸಂಸ್ಕೃತ ವಿದ್ಯಾಭ್ಯಾಸ; ಹಿರಿಯವನನ್ನು ಬಿಟ್ಟರೆ ಉಳಿದವರಿಗೆ ಸಂಸಾರದ ಜವಾಬ್ದರಿಯಿಲ್ಲ. ಸಾಂಸಾರಿಕ ಜವಾಬ್ದಾರಿ ಹೊರದ ಒಂದು ಇಡೀ ಸಂಸ್ಕೃತಿ ಹೀಗೆ ನಶಿಸಿ ಹೋಯಿತು.

ಅಡುಗೆ ಮನೆಯಿಂದ ತೋರವಾದ ದೇಹದ ವೃದ್ಧರೊಬ್ಬರು, ಬೆನ್ನು ಬಾಗಿದವರು, ಪಂಚೆಯನ್ನು ಸರಿಪಡಿಸಿಕೊಳ್ಳುತ್ತ ಹೊರಬಂದರು – ಯಾವುದೋ ಪುರಾತನ ಜೀವವೊಂದು ಗುಹೆಯಿಂದ ಹೊರಬಂದಂತೆ. ಅವರ ಬುದ್ಧಿ ಸ್ವಾಧೀನದಲ್ಲಿ ಇಲ್ಲವೆಂಬ ನನ್ನ ಭಾವನೆ ತಪ್ಪಿರಬಹುದು. ಜೊತೆಯಲ್ಲಿ ಫೋಟೋ ಹೊಡೆಸಿಕೊಳ್ಳಲು ನಿಂತರು. ಯಾರನ್ನೂ ಅವರು ಗಮನಿಸಿದಂತೆ ಕಾಣಲಿಲ್ಲ. ತುಂಬಾ ವೃದ್ಧರಿರಬಹುದು., ತೊಂಬತ್ತು ದಾಟಿರಬಹುದು ಎಂದು ನಾನೆಂದುಕೊಂಡರೆ ನಿಜವಲ್ಲ – ಅವರಿನ್ನೂ ಎಪ್ಪತ್ತು ಮುಟ್ಟಿರಲಿಲ್ಲ, ಬಣ್ಣದಲ್ಲಿ ಅವರು ಕಾಶ್ಮೀರಿ ಇರಬಹುದು, ಇಟಾಲಿಯನ್ ಇರಬಹುದು – ಕೇರಳದ ಸೂರ್ಯನಿಂದ ತೊಯ್ದಿರದ ಚರ್ಮ ಅವರದ್ದು. ಮರಗಳಲ್ಲಿ ಕಟ್ಟಿದ ಗೋಡೆ ಮತ್ತು ಸೂರುಗಳಿಂದಾಗಿ ಒಳಗಿನ, ಒಳಗಿನ, ಒಳಗಿನ ಪದರಗಳಲ್ಲಿ ತನ್ನವರನ್ನು ತಂಪಾಗಿ ಕಾಪಾಡುವ ಮನೆಯ ಸೃಷ್ಟಿಯ ಸಾರದಂತೆ ಅವರು ಕಂಡರು.

ಏನನ್ನು ಉಳಿಸಿಕೊಳ್ಳಲು ಹೋಗಿ ಮನುಷ್ಯ ಏನನ್ನು ಕಳೆದುಕೊಂಡು ಬಿಡುತ್ತಾನೆಂಬುದು ನನಗೆ ಅರ್ಥವಾಯಿತು. ಪರಮ ‘ಶೂದ್ರ’ ಈಡವ ಜಾತಿಯ ನಾರಾಯಣ ಗುರುವಿನ ಮನಸ್ಸಿಗೆ ವೇದಗಳು, ಶಂಕರರು ಬಾರದಿದ್ದಲ್ಲಿ ಈ ಮನೆಯೊಳಗಂತೂ ಸನಾತನವಾದ್ದು ಜೀವಂತ ಉಳಿಯುತ್ತಿರಲಿಲ್ಲ.

ಕೇರಳದ ಕೊಟ್ಟಾಯಂನಲ್ಲಿ ಇದ್ದಾಗ ಮಾಡಿಕೊಂಡ ಒಂದು ಟಿಪ್ಪಣಿ ದಿ. ೧೯೮೮.
ಲಂಕೇಶ್ಪತ್ರಿಕೆಯಲ್ಲಿ ಪ್ರಕಟಿತ.

* * *