ನಾನು ಬೆಳೆದದ್ದು ಹಳ್ಳಿಯೊಂದರಲ್ಲಿ. ಅಲ್ಲಿ ನನ್ನ ತಂದೆ ಗಾಂಧೀಜಿಯವರ ‘ಹರಿಜನ’ ಪತ್ರಿಕೆಯನ್ನು ತರಿಸಿಕೊಂಡು. ತಾನೇ ಕಷ್ಟಪಟ್ಟು ಕಲಿತ ಇಂಗ್ಲಿಷಿನ ಸಹಾಯದಿಂದ ಓದಿ, ಅದನ್ನು ಹಳ್ಳಿಯ ಇತರರಿಗೆ ವಿವರಿಸಿ ಹೇಳುತ್ತಿದ್ದರು. ಸ್ವತಃ ಗಾಂಧೀಜಿಯವರಿಗೆ ಇರುಸುಮುರುಸಾಗುವಂಥ ಪ್ರಶ್ನೆಗಳನ್ನು ಕೇಳುತ್ತಿದ್ದ ಲೋಹಿಯಾ ಬಗ್ಗೆ ಅವರು ನನಗೆ ಹೇಳಿದ್ದು ನೆನಪಿದೆ. ನನ್ನ ತಂದೆ ಲೋಹಿಯಾರನ್ನು ಇಷ್ಟಪಟ್ಟರೆ, ಗಾಂಧಿಯವರನ್ನು ಆರಾಧಿಸುತ್ತಿದ್ದರು. ಹೈಸ್ಕೂಲಿನ ನಂತರ ನಾನು ನನ್ನ ಹಳ್ಳಿಯ ಹತ್ತಿರದ ಸಣ್ಣ ಪಟ್ಟಣದಲ್ಲ ಲೋಹಿಯಾರ ಭಾಷಣ ಕೇಳಿದೆ. ಅದು ನನ್ನ ಮೇಲೆ ಆಳವಾದ ಪರಿಣಾಮವನ್ನು ಬೀರಿತು. ಲೋಹಿಯಾರವರು ತಮ್ಮ ಭಾಷಣದಲ್ಲಿ ಮಹಾತ್ಮಾಗಾಂಧಿಯವರ ಅಂತಿಮಯಾತ್ರೆಯಲ್ಲಿ ಅವರ ದೇಹವನ್ನು ಹೊತ್ತ ವಾಹನವನ್ನು ಏರಿದ್ದ ನೆಹರೂರವರ ಬಗ್ಗೆ ತೀವ್ರ ಆಕ್ಷೇಪವನ್ನೆತ್ತಿದ್ದರು. ನೆಹರೂರ ವರ್ತನೆ ನಮ್ಮ ಸಂಸ್ಕೃತಿ ಸಭ್ಯತೆಗೆ ಹೊರತಾಗಿತ್ತು. ಅಷ್ಟೇ ಏಕೆ, ಅದು ಅಂದಿನ ಸಂದರ್ಭದಲ್ಲಿ ಉಚಿತವೂ ಆಗಿರಲಿಲ್ಲ. ಹಾಗಿದ್ದರೂ ಆ ರೀತಿ ಮಾಡುವ ಮೂಲಕ ನೆಹರೂ ತಾನು ಗಾಂಧಿಯವರ ವಾರಸುದಾರ ಎಂಬುದನ್ನು ಸ್ಥಾಪಿಸಿಕೊಂಡಿದ್ದರು. ಲೋಹಿಯಾ ನೆಹರೂರವರನ್ನು ಆ ಕಾರಣಕ್ಕಾಗಿ ಎಂದೂ ಕ್ಷಮಿಸಲಿಲ್ಲ. ಅವರಿಗೆ ಸ್ವಾತಂತ್ರ್ಯದ ಅರುಣೋದಯದ ಅದಮ್ಯ ಆಶಾವಾದದ ಸಂದರ್ಭದಲ್ಲಿಯೂ, ನೆಹರೂ ನಮ್ಮೆಲ್ಲರನ್ನು ಗಾಂಧೀಜಿ ತೋರಿದ ಮಾರ್ಗದಿಂದ ದೂರವಾಗಿಸಿಬಿಡಬಹುದೆಂಬ ಅನುಮಾನ ಕಾಡುತ್ತಿತ್ತು.

ಅಂದಿನ ಕಾಲದಲ್ಲಿ ನೆಹರೂ ನನ್ನ ನೆಚ್ಚಿನ ನಾಯಕರಾಗಿದ್ದರು. ನನ್ನ ತಲೆಮಾರಿನ ಅನೇಕರಂತೆ, ನನಗೆ ಇವತ್ತಿಗೂ ಗಾಂಧಿ ಮತ್ತು ನೆಹರೂ ನಡುವಿನ ಸೈದ್ಧಾಂತಿಕ ತಿಕ್ಕಾಟದಲ್ಲಿ, ಯಾವ ದ್ವಂದ್ವಗಳೂ ಇಲ್ಲದ ನಿಲುವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತಿಲ್ಲ. ನಾವು ಭಾವುಕವಾಗಿ, ಆಧ್ಯಾತ್ಮಿಕವಾಗಿ ಮಹಾತ್ಮನನ್ನು ಒಪ್ಪಿಕೊಂಡಿರಬಹುದು. ಆದರೆ ನಮ್ಮ ಬದುಕಿನ ಆಳದ ಆಶೆಗಳೆಲ್ಲವೂ ನೆಹರೂ ಯುಗದ ಎಲ್ಲ ಯೋಜನೆಗಳಿಂದ ಪ್ರೇರಣೆ ಹೊಂದಿವೆ. (ನಮ್ಮ ದೇಶದ ಬಹಳಷ್ಟು ಮನೆಗಳಲ್ಲಿ ಗಾಂಧಿ, ಸುಭಾಷ್, ನೆಹರೂ – ಈ ಮೂವರನ್ನು ಒಳಗೊಂಡ ಚಿತ್ರಗಳು ಯಾಕೆ ಇವೆ ಎಂಬ ಬಗ್ಗೆ ಒಮ್ಮೆ ಲೋಹಿಯಾ ಹೀಗೆ ವಿವರಿಸಿದ್ದರು: ‘ಆ ಚಿತ್ರದಲ್ಲಿ ಗಾಂಧಿ ಭವಿಷ್ಯದ ಕನಸನ್ನು ಪ್ರತಿನಿಧಿಸಿದರೆ, ಸುಭಾಷರು ಸಾಹಸದ ಕ್ರಿಯಾಶೀಲತೆಯನ್ನು ಮತ್ತು ನೆಹರೂ ತಮ್ಮ ಕೋಟಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಕೆಂಪು ಗುಲಾಬಿಯ ಮೂಲಕ ನಮ್ಮ ಆಳದ ಆಶೆಗಳನ್ನು ಸಂಕೇತಿಸುತ್ತಾರೆ. ಆದರೆ ಈ ಮೂವರಲ್ಲಿ ಗಾಂಧಿಯವರ ಕನಸು ಮಾತ್ರ ನಮ್ಮ ನಡುವೆ ಉಳಿದಿದೆ.) ನನ್ನ ತಲೆಮಾರಿನ ಬಹಳ ಜನರಂತೆ, ನಾವೆಲ್ಲ ನೆಹರೂರ ಕಾಸ್ಮೊಪಾಲಿಟನ್ ಆಧುನಿಕತೆಯನ್ನು ಕಟುವಾಗಿ ವಿಮರ್ಶಿಸಿದರೂ, ಅಂತಿಮವಾಗಿ ನೆಹರೂ ಯುಗದ ಸಂತಾನಗಳೇ ಆಗಿದ್ದೇವೆ. ಈ ಸಂದರ್ಭದಲ್ಲಿ ರಾಜಾಜಿಯವರ ನೆನಪಿನಲ್ಲಿ ತಂದ ಸ್ಮರಣ ಸಂಚಿಕೆಯಲ್ಲಿ ಜೆಪಿಯವರು ಬರೆದ ಲೇಖನ ನೆನಪಾಗುತ್ತಿದೆ. ನೆಹರೂರನ್ನು ತನ್ನಲ್ಲಿ ಅನುಮಾನಗಳಿದ್ದಾಗ್ಯೂ ಮೆಚ್ಚಿಕೊಂಡಿದ್ದ ಜೆಪಿಯವರು, ರಾಜಾಜಿಯಂಥ ಮುತ್ಸದ್ಧಿಯನ್ನು ನೆನೆದು ಅವರ ಬಗ್ಗೆ ಮುಖ್ಯವಾದ ಮಾತೊಂದನ್ನು ಹೇಳಿದ್ದಾರೆ. ವಿಪರ್ಯಾಸವೆಂದರೆ, ಸಮಾಜವಾದಿ ಚಿಂತಕ ಲೋಹಿಯಾರಿಗೂ ರಾಜಾಜಿಯ ಬಗ್ಗೆ, (ಭಿನ್ನಾಭಿಪ್ರಾಯಗಳ ನಡುವೆಯೂ) ಬಹಳ ಗೌರವವಿತ್ತು. ರಾಜಾಜಿ ಮತ್ತು ಲೋಹಿಯಾ ಹೊರತಾಗಿ, ಇಂಡಿಯಾದ ನಾಯಕರು ನೆಹರೂರವರನ್ನು ನಿಜವಾಗಿ ಎದುರಿಸಲು ಸಾಧ್ಯವಾಗಬಲ್ಲ ಸೈದ್ಧಾಂತಿಕ ಹಾಗೂ ಪ್ರಜಾಸತ್ತಾತ್ಮಕ ಪ್ರತಿರೋಧ ಶಕ್ತಿಯನ್ನು ಗಳಿಸಿಕೊಳ್ಳಲಿಲ್ಲವೆಂಬ ಬಗ್ಗೆ ಜೆಪಿಯವರಿಗೆ ವಿಷಾದವಿತ್ತು. ಇದು ಕಮ್ಯುನಿಸ್ಟರಿಗೂ ಸಾಧ್ಯವಾಗಲಿಲ್ಲ. ಸಾಮಾಜಿಕ ಬದಲಾವಣೆಯನ್ನು ಕುರಿತು ಬಹಳ ಆತುರದಿಂದಿದ್ದ ಕಮ್ಯುನಿಸ್ಟರು ಇನ್ನೊಂದು ಬಗೆಯಲ್ಲಿ ನೆಹರೂವಾದಿಗಳೇ ಆಗಿದ್ದರು. (ಇದನ್ನು ನಾನು ನೆನಪಿನಿಂದ ಹೇಳುತ್ತಿದ್ದೇನೆ) ಈ ಮಾತುಗಳನ್ನೇ ಅಕ್ಷರಶಃ ಜೆಪಿ ಹೇಳದಿದ್ದರೂ ಕನಿಷ್ಠಪಕ್ಷ ಅವರ ಮಾತುಗಳ ಅರ್ಥ ಇದೇ ಆಗಿದೆ ಎಂಬುದು ನನ್ನ ಭಾವನೆ.

ತಾತ್ವಿಕ ವಿಷಯಗಳಲ್ಲಿ ತಮ್ಮ ಚಿಂತನೆಗಳಿಗೆ ತುಂಬ ಹತ್ತಿರವಾದ ವ್ಯಕ್ತಿಗಳು ಬಹಳ ಇದ್ದರೂ, ಗಾಂಧಿಯವರಿಗೆ ನೆಹರೂ ಉಳಿದವರಿಗಿಂತ ಪ್ರಿಯವಾದ ವ್ಯಕ್ತಿಯಾಗಿದ್ದರು. ಇದೂ ಒಂದು ಸುಲಭವಾಗಿ ಅರ್ಥವಾಗದ ವಿಪರ್ಯಾಸವೇ. ಹಾಗಿದ್ದರೂ ಇಂಡಿಯಾದ ಪರಸ್ಪರ ವಿರುದ್ಧ ಧಾರೆ ರಾಜಕೀಯ ಇತಿಹಾಸವನ್ನು ಗಮನಿಸುವಾಗ, ಹಲವರು ನಂಬುವಂತೆ ಸಂಘರ್ಷ ಇರುವುದು ಗಾಂಧಿವಾದ, ಮಾರ್ಕ್ಸ್‌ವಾದಗಳ ನಡುವೆ ಅಲ್ಲ. ಬದಲಾಗಿ ಸಂಘರ್ಷವಿರುವುದು ರಾಷ್ಟ್ರಪ್ರಭುತ್ವವನ್ನು ಪಾಶ್ಚಾತ್ಯ ಮಾದರಿಯಲ್ಲಿ ಕಟ್ಟಬೇಕೆಂಬ ಆಲೋಚನೆಯ ನೆಹರೂವಾದ ಹಾಗೂ ಗಾಂಧಿಯ ಕನಸಿನ ಸ್ವರಾಜ್ಯಗಳ ನಡುವೆ. ಬಿಜೆಪಿಯನ್ನು ಹೊರತುಪಡಿಸಿ, ಇನ್ನೆಲ್ಲರೂ ಈ ಎರಡು ಸಿದ್ಧಾಂತಗಳ ನಡುವಿನ ಸಂಘರ್ಷ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಯುತ್ತದೆ ಎಂದು ಭಾವಿಸಿದ್ದರು.

ಕೆಲವು ವರ್ಷಗಳ ಹಿಂದೆ ನಾನು ಮಧುಲಿಮಯೆ ಅವರನ್ನು ಭೇಟಿಯಾದಾಗ, ನೀವು ಪಕ್ಷರಾಜಕಾರಣದಿಂದ ದೂರವಾದ ಮೇಲೆ ಆರಂಭಿಸಿದ ಅದ್ಭುತ ಅಧ್ಯಯನಗಳಲ್ಲಿ ನೆಹರೂ ಅವರು ಯಾಕೆ ವಿಶೇಷವಾಗಿ ಆವರಿಸಿಕೊಂಡಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿದ್ದೆ. (ಲಿಮೆಯೆ ಪಕ್ಷರಾಜಕಾರಣದಿಂದ ದೂರವಾಗಿದ್ದರೂ ರಾಷ್ಟ್ರರಾಜಕಾರಣದಿಂದ ನಿವೃತ್ತರಾಗಿರಲಿಲ್ಲ. ಅವರು ಕೊನೆಯವರೆಗೂ ಸಮಾಜವಾದಿ ಪ್ರಜ್ಞೆಯ ಮುಖ್ಯ ಶಕ್ತಿಯಾಗಿ ನಮಗೆ ಕಂಡಿದ್ದರು).  ಪ್ರಶ್ನೆ ಕೇಳಿದ ತಕ್ಷಣ ಅವರು ಮೇಲೆದ್ದು, ನನ್ನ ಕೈಗೆ ಅವರು ಬರೆದ ದಪ್ಪ ಪುಸ್ತಕವನ್ನು ನೀಡಿ, ಮತ್ತೇನನ್ನೂ ಹೇಳದೆ ಪುಸ್ತಕದ ಮುಖಪುಟವನ್ನು ನೋಡಲು ಸೂಚಿಸಿದರು. ಪುಸ್ತಕದ ಮೇಲಿನ ಚಿತ್ರವನ್ನು ನೋಡಿ ನನಗೆ ಎಲ್ಲವೂ ಸ್ಪಷ್ಟವಾಯಿತು. ಮುಖಪುಟದ ಮೇಲೆ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಚಿರಪರಿಚಿತವಾಗಿದ್ದ ನೆಹರೂರವರ ಫೋಟೋ ಇತ್ತು. ನೆಹರೂ ಆ ಫೋಟೋದಲ್ಲಿ ತೆಳ್ಳಗೆ ಧೋತಿ ಕುರ್ತಾ ಧರಿಸಿ ಅದರ ಮೇಲೆ. (ಈಗ ನೆಹರೂ ಜಾಕೆಟ್ ಎಂದು ಪ್ರಸಿದ್ಧವಾಗಿರುವ) ಜಾಕೆಟ್ ಧರಿಸಿ ತಲೆಯ ಮೇಲೆ ಗಾಂಧಿ ಟೋಪಿ ಹಾಕಿಕೊಂಡು ನಿಂತಿದ್ದರು. ಲೋಹಿಯಾರನ್ನು ಬಲ್ಲ ಯಾರಿಗಾದರೂ ಆ ಫೋಟೋದ ಸಾಂಕೇತಿಕ ಅರ್ಥ ಸ್ಪಷ್ಟವಾಗುವಂತಿತ್ತು. ‘ನೆಹರೂರ ಬೇರಾವ ಫೋಟೋವನ್ನೂ ನನ್ನ ಪುಸ್ತಕಗಳಲ್ಲಿ ಬಳಸಿಲ್ಲ’ ಎಂದು ಮಧು ಅವರು ಹೇಳಿದರು ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಯಿತು; ಬಹಳಷ್ಟು ಮಂದಿ ಸಮಾಜವಾದಿ ಹಿನ್ನೆಲೆಯ ಗಾಂಧಿವಾದಿಗಳು ಧೋತಿಯುಟ್ಟ ನೆಹರೂ, ಜೆಪಿ ಹಾಗೂ ಲೋಹಿಯಾರಂತೆ, ಕೈಗಾರಿಕಾ ಕ್ರಾಂತಿಯ ಆಧುನಿಕತೆ ಹಾಗೂ ಗಾಂಧಿಯ ಕನಸಿನ ಸರ್ವೋದಯವನ್ನು ಒಗ್ಗೂಡಿಸಿ ಹೊಸಕ್ರಾಂತಿಯನ್ನು ಸಾಧ್ಯಮಾಡಬಹುದೆಂದು ಆಶಿಸಿದ್ದರು.

ನೆಹರೂ ಸಹ ಇದು ತಮ್ಮಿಂದ ಸಾಧ್ಯವಾಗಬಹುದೆಂದು ನಂಬಿದ್ದರು ಎಂದು ಅನಿಸುತ್ತದೆ. ಆದರೆ ಇತಿಹಾಸದ ವ್ಯಂಗ್ಯವೆಂದರೆ ನೆಹರೂರ ಆಡಳಿತ ನಮ್ಮ ಆಳದ ಆಶೆಗಳನ್ನು ಬಡಿದೆಬ್ಬಿಸುವಂಥ ಪೈಪೋಟಿಯ, ಬಹುರಾಷ್ಟ್ರೀಯ ಕಂಪನಿಗಳ ನಿಯಂತ್ರಣದ ಕೊಳ್ಳುಬಾಕ ಸಂಸ್ಕೃತಿಯ, ಉಳ್ಳವರ ಪರವಾಗಿರುವ ಸಮಾಜ ವ್ಯವಸ್ಥೆಯನ್ನು ಸೃಷ್ಟಿಸಲು ಕಾರಣವಾಯಿತು. ಇಂಥ ಸಾಮಾಜಿಕ ವ್ಯವಸ್ಥೆಯನ್ನು ನಾವು ಬೌದ್ಧಿಕವಾಗಿ ತಿರಸ್ಕರಿಸಿದರೂ ಅದರೊಳಗೇ ದಿನನಿತ್ಯವೂ ರುಚಿ ಬೆಳೆಸಿಕೊಂಡು ಬದುಕುವ ವಿಚಿತ್ರ ಸಂದಿಗ್ಧದಲ್ಲಿ ಸಿಕ್ಕಿ ಹಾಕಿಕೊಂಡೆವು. ‘ನೆಹರೂರವರಿಗೆ ನಾವು ಋಣಿಯಾಗಿರಬೇಕು. ಯಾಕೆಂದರೆ ಅವರಿಂದ ನಮ್ಮ ಮೊಮ್ಮಕ್ಕಳು ನಮ್ಮೊಂದಿಗೆ ಇಂಗ್ಲಿಷಿನಲ್ಲಿ ಮಾತಾಡಲು ಸಾಧ್ಯವಾಯಿತು’ ಅಂತ ಹೇಳಿದ್ದು ಬಹುಶಃ ಚರಣಸಿಂಗರೇ ಇರಬೇಕು.

ಯೌವ್ವನದ ಭರಾಟೆಯಲ್ಲಿದ್ದ ನಮ್ಮಂಥ ಸೋಶಲಿಸ್ಟರು, ಪಾದರಸದಂಥ ವ್ಯಕ್ತಿತ್ವದ ಲೋಹಿಯಾ ಮತ್ತು ಪ್ರಾಮಾಣಿಕ ಚಿಂತನೆ, ಶಿಸ್ತುಬದ್ಧ ಯೋಚನೆಯ ಲಿಮಯೆಯಂಥವರ ನೇತೃತ್ವದಲ್ಲಿ ಇಂಡಿಯಾದ ಬ್ರಾಹ್ಮಣೀತರರು, ಹರಿಜನ-ಗಿರಿಜನರು, ಸ್ತ್ರೀಯರ ಸಹಾಯದಿಂದ ಅಮೆರಿಕಾ ಹಾಗೂ ಸೋವಿಯತ್ ಮಾದರಿಗಳಿಗಿಂತ ಭಿನ್ನವಾದ ಆಧುನಿಕ ಭಾರತೀಯ ಸಮಾಜವನ್ನು ನಿರ್ಮಿಸಬಹುದೆಂದು ಆಶಿಸಿದ್ದೆವು. ನಿಜವಾಗಿ ಹೇಳುವುದಾದರೆ, ಸೋವಿಯತ್ ರಷ್ಯಾದ ಮಾದರಿಯಲ್ಲಿ ಉತ್ಪಾದನಾ ವಿಧಾನಗಳಲ್ಲಿ ಅಮೂಲಾಗ್ರ ಬದಲಾವಣೆ ತರದೆ ಉತ್ಪಾದನಾ ಸಂಬಂಧಗಳಲ್ಲಿ ಮಾತ್ರ ಪರಿವರ್ತನೆ ತರಲು ಪ್ರಯತ್ನಿಸಿದರೆ ಅದರಿಂದ ಮನುಷ್ಯಜನ ಪ್ರಜ್ಞೆಯಲ್ಲಿ ಮೂಲಭೂತ ಬದಲಾವಣೆಯನ್ನು ಉಂಟುಮಾಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಲೋಹಿಯಾ ಮೊದಲೇ ಮನಗಂಡಿದ್ದರು. ರಶಿಯಾ ಹಾಗೂ ಚೀನಾದ ಕ್ರಾಂತಿಗಳು ವಾಸ್ತವವಾಗಿ ಅಲ್ಲಿನ ಜನರ ಮನಸ್ಸಿನಲ್ಲಿ ಪಶ್ಚಿಮದ ಬಂಡವಾಳಶಾಹಿ ಸಮಾಜವನ್ನು ಅನುಸರಿಸುವ ಆಶೆಯನ್ನು ದ್ವಿಗುಣಗೊಳಿಸಲು ಸಹಾಯಕವಾದವು ಎಂಬ ಅಂಶವನ್ನು ಲೋಹಿಯಾ ಅರಿತಿದ್ದರು. ಆದರೆ ನೆಹರೂರವರ ನೇತೃತ್ವದಲ್ಲಿ ನಾವೇನೂ ಇದಕ್ಕಿಂತ ಹೊಸ ದಾರಿಯನ್ನು ಆರಿಸಿಕೊಂಡಿರಲಿಲ್ಲ. ನೆಹರೂ ಅವರ ಸಿದ್ಧಾಂತದಲ್ಲಿ ಹಳೆಯದರ ಬಗ್ಗೆ ಕೊಂಚ ಮರುಹಂಬಲದ ಧೋರಣೆಯಿದ್ದರೂ ಅದರ ಗುರಿ ನಿರ್ಣಾಯಕವಾಗಿ ಭಿನ್ನವಾಗಿರಲಿಲ್ಲ.

ಲೋಹಿಯಾ ಹಾಗೂ ಲಿಮಯೆ ಇಬ್ಬರೂ ಸರ್ಕಾರಿ ಗಾಂಧಿವಾದ ಮತ್ತು ಆಧುನಿಕತೆಯ ಅಂಧಾನುಕರಣಿಯ ಅಪ್ರಾಮಾಣಿಕ ಸಂಬಂಧವನ್ನು ವಿರೋಧಿಸಿದರು. ಸೋಶಲಿಸ್ಟರು ಕೆಲವೇ ಜನರ ಗುಂಪಾಗಿದ್ದಾಗಲೂ, ಪ್ರಭಾವಶಾಲಿಯಾಗಿದ್ದ ಇಂಗ್ಲಿಷ್ ಪತ್ರಿಕೆಗಳನ್ನು ಎದುರು ಹಾಕಿಕೊಂಡು, ಮೂಲಭೂತ ಆರ್ಥಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳನ್ನು ತರುವ ಉದ್ದೇಶದಿಂದ, ಅಷ್ಟೇನೂ ಜನಪ್ರಿಯವಲ್ಲದ ಕೆಲವು ಚಳವಳಿಗಳನ್ನು ಆರಂಭಿಸಿದರು. ನಮ್ಮ ರಾಜ್ಯದಲ್ಲ ನಾನು ಐದಾರು ಜನಕ್ಕಿಂತ ಹೆಚ್ಚು ಶಾಸಕರನ್ನು ಆರಿಸಲು ಸಾಧ್ಯವಾಗದಿದ್ದರೂ ಅವರ ನೈತಿಕಶಕ್ತಿ ಒಂದು ದೊಡ್ಡ ವಿರೋಧ ಪಕ್ಷಕ್ಕಿಂತ ಅಧಿಕವಾಗಿತ್ತು. ಹಿಂದುಳಿದ ವರ್ಗದಿಂದ ಬಂದ ಗೋಪಾಲಗೌಡರಂಥ ಮುತ್ಸದ್ದಿ ರಾಜಕಾರಣಿ ಮಾಡಿದ ಸಾಧನೆಗಳು, ನಂತರ ಸೋಶಲಿಸ್ಟರು ಜನತಾಪಕ್ಷದೊಂದಿಗೆ ಸೇರಿ ಆಳುವ ಪಕ್ಷವಾದಾಗ ಮಾಡಿದ ಸಾಧನೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದವು ಎನ್ನುವುದಾದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಲೋಹಿಯಾ ಹೇಳುತ್ತಿದ್ದ ಕಾಂಗ್ರೆಸ್ ದೂರೀಕರಣದ ವಾದ ಕೊನೆಯಲ್ಲಿ ಗೆದ್ದಿದ್ದರೂ ಅದು ಆಳುವ ವರ್ಗದಲ್ಲಿ ನಿರ್ಣಾಯಕವಾದ ಪಲ್ಲಟವನ್ನೇನೂ ಉಂಟುಮಾಟಲಿಲ್ಲ. ಲೋಹಿಯಾದ ಮಾತಿನಲ್ಲಿ ಹೇಳುವುದಾದರೆ, ಸೋಶಲಿಸ್ಟರು ಹುದ್ದೆಯನ್ನು ಗಳಿಸಿದ್ದರೇ ವಿನಾ ನಿಜವಾದ ಶಕ್ತಿಯನ್ನಲ್ಲ. ಹುದ್ದೆಯನ್ನು ಗಳಿಸುವ ಆತುರದಲ್ಲಿ ಅವರು ನಿಧಾನವಾಗಿ ಗಳಿಸಿಕೊಂಡ ಶಕ್ತಿಯನ್ನೂ ಕಳೆದುಕೊಂಡರು.

ಈಗ ಲೋಹಿಯಾ ಮತ್ತು ಲಿಮಯೆ ಅಂಥವರು ಸಾಮಾಜಿಕ ಬದಲಾವಣೆಯ ಮೂಲಕ ಹೊಸ ಪರ್ಯಾಯವೊಂದನ್ನು ಸಾಧಿಸಲು ಆರಂಭಿಸಿದ ಚಳವಳಿಗಳತ್ತ ಗಮನ ಹರಿಸಬಹುದು. ಇಲ್ಲಿ ಬರಹಗಾರನಾಗಿ ನನ್ನನ್ನು ವೈಯಕ್ತಿಕವಾಗಿ ಪ್ರಭಾವಿಸಿದ ಚಳವಳಿಗಳ ಬಗ್ಗೆ ಮಾತ್ರ ಹೇಳಲು ಬಯಸುತ್ತೇನೆ. ಅದಕ್ಕೂ ಮೊದಲು ಇಂಗ್ಲಿಷ್‌ನ್ನು ಬಹಿಷ್ಕರಿಸಲು ಸೋಶಲಿಸ್ಟರು ಮಾಡಿದ ಆಂದೋಲನದ ಬಗ್ಗೆ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ಈ ಸಂದರ್ಭದಲ್ಲಿ ಐವತ್ತರ ದಶಕದಲ್ಲಿ ನಾನು ಲೋಹಿಯಾರನ್ನು ಮೈಸೂರಿನಲ್ಲಿ ಭೇಟಿಮಾಡಿದ ಪ್ರಸಂಗ ನೆನಪಾಗುತ್ತಿದೆ. ನಾನಾಗ ತಲೆಯಲ್ಲಿ ನೂರಾರು ಕನಸುಗಳನ್ನು ತುಂಬಿಕೊಂಡ ಯುವ ಇಂಗ್ಲಿಷ್ ಅಧ್ಯಾಪಕನಾಗಿದ್ದರೂ, ಕನ್ನಡದಲ್ಲಿ ದೊಡ್ಡದೇನನ್ನಾದರೂ ಬರೆಯಬೇಕೆಂಬ ಉತ್ಸಾಹದಲ್ಲಿದ್ದೆ. ಎರಡು ಭಾಷೆಗಳ ನಡುವಿನ ಪ್ರೇಮದಲ್ಲಿ ಸಿಕ್ಕಿಹಾಕಿಕೊಂಡಿದ್ದ ನನ್ನ ದ್ವಂದ್ವವನ್ನು ಲೋಹಿಯಾ ತಕ್ಷಣ ಗ್ರಹಿಸಿದರು. ಅವರಲ್ಲಿ ಭಾಷೆಯ ಬಗ್ಗೆ ದುರಭಿಮಾನ ಕಿಂಚಿತ್ತೂ ಇರಲಿಲ್ಲ ಮತ್ತು ಅವರ ಸಾಹಿತ್ಯದ  ಅಭಿರುಚಿ ಬಹಳ ವಿಶಾಲವಾಗಿತ್ತು. ಯಾರಾದರೊಬ್ಬರು ಇಲ್ಲಿನ ಬದುಕಿಗೆ ಸೇರಿದವನಾಗಬೇಕೆಂದರೆ ಅವರ ಪ್ರಕಾರ, ಅವನು ತನ್ನ ಭಾಷೆ-ಸಂಸ್ಕೃತಿಗಳಲ್ಲಿ ಬೇರು ಬಿಟ್ಟವನಾಗಿರಬೇಕಿತ್ತು. ಆದ್ದರಿಂದ ಅವರು ಬೇರೆ ಬೇರೆ ಭಾಷೆಗಳನ್ನು ಕಲಿಯುವ ಬಗ್ಗೆ, ಪ್ರಪಂಚದ ನಾನಾ ಭಾಷೆಗಳಲ್ಲಿ ಸಿಗುವ ಸಾಹಿತ್ಯವನ್ನು ಅರಿಯುವ ಬಗ್ಗೆ ಉತ್ಸಾಹಿತರಾಗಿದ್ದರೂ ಯಾವುದೇ ಭಾಷೆಯನ್ನು ಕಲಿಯುವಾಗ ಅದನ್ನು ಅಭಿವ್ಯಕ್ತಿಗಾಗಿ ಕಲಿಯಬೇಕೋ ಅಥವಾ ಅರ್ಥಗ್ರಹಿಕೆಗಾಗಿ ಕಲಿಯಬೇಕೋ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎನ್ನುತ್ತಿದ್ದರು. ಮ್ಯಾಕ್ಸ್‌ಮುಲ್ಲರ್‌ಗೆ ಸಂಸ್ಕೃತದಲ್ಲಿ ಮಾತಾಡಲು, ಬರೆಯಲು ಒಂದು ಅಕ್ಷರವೂ ಸಾಧ್ಯವಾಗದಿದ್ದರೂ ಅವನಿಂದ ಸಂಸ್ಕೃತ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಲು ಸಾಧ್ಯವಾಯಿತು. ಇಂಗ್ಲಿಷ್‌ನಲ್ಲಿ ಓದಲು ಹಾಗೂ ಮಾತಾಡಲು ನಮಗೆ ಸಾಧ್ಯವಾಗಿದ್ದರೂ ಶೇಕ್ಸ್‌ಪಿಯರ್‌ನಂಥ ಮಹಾನ್ ಲೇಖಕನ ಬಗ್ಗೆ ಅತ್ಯುತ್ತಮ ವಿಮರ್ಶೆಯನ್ನು ಬರೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ಇಂಗ್ಲಿಷ್ ಭಾಷೆಯ ಬಗ್ಗೆ ನಮಗಿರುವ ಜ್ಞಾನ. ಅದರ ಸಂಸ್ಕೃತಿಯನ್ನು ಅರಿಯಲಾಗದೇ, ಬರೀ ಅನುಕರಣಶೀಲತೆಯಿಂದ ಹುಟ್ಟಿರುವುದರಿಂದ ನಾವು ಇಂಥ ಕಾಸ್ಮೊಪಾಲಿಟನ್ ಅನುಕರಣಶೀಲತೆಯಿಂದ ಬಿಡುಗಡೆ ಪಡೆದು, ನಮ್ಮ ಜನರ ಜನಜೀವನವನ್ನು ಅದರ ಸಂಸ್ಕೃತಿ-ಭಾಷೆಯನ್ನು ಅರಿಯುವಲ್ಲಿ ಸಹ ಭಾಗಿಗಳಾಗಬೇಕು. ಹಾಗೆಯೇ ನಮ್ಮ ಮನಸ್ಸಿನ ಕಿಟಕಿಗಳನ್ನು ಬೇರೆ ಭಾಷೆಗಳ ಗ್ರಹಿಕೆಗಳಿಗಾಗಿ ತೆರೆದಿಡಬೇಕು.

ಈ ಬಗ್ಗೆ ಇನ್ನೂ ಹೆಚ್ಚು ಹೇಳುವ ಅಗತ್ಯವಿಲ್ಲ. ಮೂರು ದಶಕಗಳ ಹಿಂದೆ ನಾನೂ ಸಹ ಬೇರೆಯವರನ್ನು ಒಪ್ಪಿಸುವ ಸಲುವಾಗಿ ಬಹಳ ಆವೇಶದಿಂದ ವಾದ ಮಾಡಿದ್ದೆ. ಆದರೆ ನಾನು ಎಷ್ಟೇ ವಾದ ಮಾಡಿದರೂ ಅನಿವಾರ್ಯವೆಂಬಂತೆ, ವಾಸ್ತವ ಬದುಕಿನಲ್ಲಿ ಅದಕ್ಕೆ ವಿರುದ್ಧವಾದದ್ದನ್ನೇ ಒಪ್ಪಿಕೊಂಡು ಬದುಕಿದೆ. ಹೀಗೆ ನನ್ನಂತೆಯೇ ಯೋಚಿಸುವವರು ಬಹಳ ಜನ ಇರಬಹುದು. ಇಷ್ಟೆಲ್ಲ ವಾದ ಮಾಡಿಯೂ ನಾವು ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳಿಸಿದ ಬಗ್ಗೆ ನಾಚಿಕೆಪಟ್ಟುಕೊಂಡಿದ್ದೇವೆ. ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನಮ್ಮ ಭಾಷೆಯಲ್ಲಿ ನೀಡುವ ಶಾಲೆಗಳು ಇಲ್ಲದೇ ಇರುವಾಗ ನಾವೇನು ಮಾಡಬಹುದಿತ್ತು? ಈ ವಾದದ ಇತರ ಅಂಶಗಳು ಇಲ್ಲರಿಗೂ ಗೊತ್ತಿರುವುದರಿಂದ ಇದನ್ನು ಇಲ್ಲಿಗೇ ನಿಲ್ಲಿಸಬಹುದು. ಒಮ್ಮೆ ಗಾಂಧಿಯವರು ನೆಹರೂರವರಿಗೆ ಪತ್ರ ಬರೆದು, ಅವರು ನಮ್ಮ ‘ಹಿಂದ್ ಸ್ವರಾಜ್‌’ನಲ್ಲಿ ಆಧುನಿಕ ಸಮಾಜ ವ್ಯವಸ್ಥೆಯನ್ನು ಕುರಿತು ಮಾಡಿರುವ ತೀಕ್ಷ್ಣ ವಿಮರ್ಶೆಯ ಬಗ್ಗೆ ಯಾಕೆ ಗಮನ ಹರಿಸಿಲ್ಲವೆಂದು ಪ್ರಶ್ನಿಸಿದ್ದರು. ಆಗ ನೆಹರೂ ತತ್ವಜ್ಞಾನಿಯಂತೆ ಕೈಚೆಲ್ಲಿ ಪ್ರಪಂಚವೇ ಹೀಗೆ ಆತ್ಮಹತ್ಯೆಯ ಹಾದಿಯಲ್ಲಿ ಸಾಗಿರುವಾಗ ಯಾರೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದರು. ಆದರೆ ಲೋಹಿಯಾ ನನ್ನನ್ನು ಇಂಗ್ಲಿಷ್ ಬಹಿಷ್ಕಾರದ ಚಳವಳಿಗೆ ಸೇರಲು ಹೇಳಿದಾಗ, ಅವರಲ್ಲಿ ಇಂಥ ಅಸಹಾಯಕತೆ ಇರಲಿಲ್ಲ.

ಲೋಹಿಯಾ ಅದರ ವಾದದಲ್ಲಿ ನನ್ನ ಪಾಲಿಗೆ ಒಂದು ಸಮಸ್ಯೆಯಿತ್ತು. ಅವರು ತನ್ನ ಪ್ರಾದೇಶಿಕ ಭಾಷೆಯಲ್ಲೇ ಹೈಸ್ಕೂಲು, ಕಾಲೇಜಿನ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದರೂ, ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಹಿಂದಿ ಮಾಧ್ಯಮದಲ್ಲಿ ಮಾಡಬೇಕು ಎನ್ನುತ್ತಿದ್ದರು. ಒಂದು ಭಾಷೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸೂಕ್ತವಲ್ಲ ಎನ್ನುವುದಾದರೆ ಅದು ಪ್ರಾಥಮಿಕ ಶಿಕ್ಷಣಕ್ಕೆ ಹೇಗೆ ಸರಿಹೊಂದೀತು ಎಂದು ನಾನು ಪ್ರಶ್ನಿಸಿದ್ದೆ. ನನ್ನ ಮಾತನ್ನು ವಾದಿಸಹೋದ ಕೂಡಲೇ ಒಪ್ಪಿಕೊಂಡರು. ಹಿಂದಿ ಭಾಷಿಕರಾದ ಅವರಿಗೆ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ನಾನು ಒಪ್ಪಿಕೊಳ್ಳುವಂತೆ ಮಾಡುವುದು ಬಯಕೆ. ನಿಜ. ಹಾಗೆಯೇ ವಿಕೇಂದ್ರೀಕರಣ ಸಿದ್ಧಾಂತದಲ್ಲೂ ಅವರಿಗೆ ನಂಬಿಕೆ ಇದ್ದುದರಿಂದ ಭಾರತವನ್ನು ಬಹುಭಾಷೆಗಳ ಒಕ್ಕೂಟವೆಂದು ಒಪ್ಪಿಕೊಳ್ಳುವುದರಲ್ಲಿ ಹಿಂಜರಿಕೆಯಿರಲಿಲ್ಲ. ಆಡಳಿತ ಭಾಷೆಯಾಗಿ ಇಂಗ್ಲಿಷ್ ಇರಕೂಡದು ಎಂಬ ಬಗ್ಗೆ ಅವರಿಗೆ ಸಂದೇಹವೇ ಇರಲಿಲ್ಲ. ಆದರೆ ಹಿಂದಿಯನ್ನು ವಿರೋಧಿಸುವ ಚಳವಳಿಯನ್ನು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಮಹಾಜಗಳವನ್ನಾಗಿ ಪರಿವರ್ತಿಸುವ ನಾಟಕೀಯವಾದ ರಾಜಕೀಯವನ್ನು ಅವರು ಒಪ್ಪಿರಲಿಲ್ಲ. ಅವರ ವಾದ ಭಾಷೆಯ ವಿಷಯದಲ್ಲಿ ಸಮಸ್ಯೆ ಇರುವುದು ಮಧ್ಯಭಾರತ ಹಾಗೂ ಕರಾವಳಿ ಪ್ರದೇಶಗಳ ನಡುವೆ ಎಂಬುದಾಗಿತ್ತು. ಇಲ್ಲಿ ಒಂದು ಮುಖ್ಯ ವಿಷಯವನ್ನು ಹೇಳಿಯೇ ನಾನು ಮುಂದುವರಿಯಬೇಕು. ಲೋಹಿಯಾರು ಗಾಂಧಿ ಪ್ರಣೀತವಾದ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ, ಎಂದರೆ ಗ್ರಾಮವೂ ವ್ಯವಸ್ಥೆಯ ನಾಲ್ಕು ಕಂಬಗಳಲ್ಲಿ ಒಂದು ಎಂಬ ಸಿದ್ಧಾಂತದಲ್ಲಿ ನಂಬಿಕೆಯಿದ್ದವರು ಎನ್ನುವುದು ನಿಜವಾದರೂ ಅವರು ಬಲಶಾಲಿಯಾದ ದೃಢಸಂಕಲ್ಪದ ರಾಷ್ಟ್ರವ್ಯವಸ್ಥೆಯನ್ನು ಬಯಸಿದ್ದರು.

ರಷ್ಯಾ ಮತ್ತು ಚೈನಾಗಳು – ಅಲ್ಲಿ ನಡೆದ ಕ್ರಾಂತಿಗಳಿಗಿಂತ ಮುಂಚೆಯೂ ತಮ್ಮದೇ ಆದ ರಾಜಪ್ರಭುತ್ವವನ್ನು ಪಡೆದುಕೊಂಡ ಸ್ವತಂತ್ರ ರಾಷ್ಟ್ರಗಳಾಗಿದ್ದವು. ಆದರೆ ಭಾರತ ಶತಮಾನಗಳ ಕಾಲ ಹೀಗೊಂದು ರಾಷ್ಟ್ರವಾಗದೇ ಇದ್ದದ್ದು – ಅಂದರೆ ರಾಜಪ್ರಭುತ್ವವಾಗಿ ತನ್ನದೇ ಆದ ಅಸ್ತಿತ್ವವಿಲ್ಲದಿರುವ ಪರಾಶ್ರಮದಲ್ಲಿ ಇದ್ದದ್ದು – ನಮ್ಮ  ಬಹಳ ದೊಡ್ಡ ದುರಂತವೆಂದು ನಂಬಿದ್ದರು ಲೋಹಿಯಾ.

ವಿಕೇಂದ್ರೀಕರಣವನ್ನು ಜಾರಿಗೆ ತರುವ ಹಲವು ಉಪಾಯಗಳನ್ನು ಅವರು ಸತತ ಚಿಂತಿಸುತ್ತಿದ್ದಂತೆಯೇ ಇಡೀ ಭಾರತದ ಒಕ್ಕೂಟವನ್ನು ಒಳಗಿನಿಂದ ಬೆಳಗುವುದು ಹೇಗೆಂಬ ಚಿಂತನೆಯಲ್ಲೂ ಅವರು ಬದುಕುತ್ತಿದ್ದರು. ನಮ್ಮ ನಾಗರಿಕತೆಯ ಮೂಲಾರ್ಥಗಳಿಂದ ಸದಾ ಚಿಗುರುತ್ತಿರುವ ರಾಷ್ಟ್ರದ ಬದುಕನ್ನು ಅವರು ಆಶಿಸಿದ್ದರು. ಒಂದು ಸಣ್ಣ ಉದಾಹರಣೆಯೆಂದರೆ ಲಿಪಿ ಬಗ್ಗೆ ಲೋಹಿಯಾ ಮಾಡಿದ ಚಿಂತನೆ. ಭಾರತದ ಎಲ್ಲ ಲಿಪಿಗಳೂ ಒಂದೇ ಮೂಲದಿಂದ ಬಂದವು. ಆದ್ದರಿಂದ ದೇವನಾಗರಿ ಲಿಪಿಯನ್ನು ಎಲ್ಲ ಭಾಷೆಗಳೂ ಬಳಸುವಂತಾಗಬೇಕೆಂದು ಅವರು ವಾದಿಸುತ್ತಿದ್ದರು. ಈ ಬಗ್ಗೆ ಅವರ ಶಿಷ್ಯ ಹಾಗೂ ಗೆಳತಿ ರೊಮಾ ಮಿತ್ರ ಸಾಕಷ್ಟು ಕಾಳಜಿ ತೋರಲಿಲ್ಲವೆಂದು ಸಿಟ್ಟೂ ಆಗಿದ್ದರು.

ಬಹುಭಾಷಾ ರಾಷ್ಟ್ರವಾದರೂ ಚಿಂತೆಯಿಲ್ಲ, ಆದರೆ ಇಂಗ್ಲಿಷ್ ಆಡಳಿತ ಭಾಷೆಯಾಗಿ ಬೇಡ ಎನ್ನುತ್ತಿದ್ದ ಲೋಹಿಯಾ, ಹಿಂದಿಯನ್ನು ಇಡೀ ದೇಶ ರಾಷ್ಟ್ರಭಾಷೆಯನ್ನಾಗಿ ಒಪ್ಪಿಕೊಳ್ಳಬೇಕು ಮತ್ತು ಅದನ್ನು ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳ ಕಸುವಿನಿಂದ ಕಸಿಗೊಳಿಸಬೇಕು ಎಂದು ಹಂಬಲಿಸಿದ್ದರು ಎನ್ನುವುದು ನಿಜ. ಅದನ್ನು ಹೇಳುತ್ತಲೇ ಸಮಯ ಸಿಕ್ಕಾಗಲೆಲ್ಲಾ ದಕ್ಷಿಣ ಭಾರತದ ಶೂದ್ರನೊಬ್ಬ ದೇಶದ ಪ್ರಧಾನಿಯಾಗಬೇಕು ಎಂದು ತಪ್ಪದೇ ಹೇಳುತ್ತಿದ್ದರು. (ವಿಚಿತ್ರವೆಂದರೆ ಇಂದು ಒಬ್ಬ ಶೂದ್ರನಂತೂ ಪ್ರಧಾನಿಯ ಪಟ್ಟಕ್ಕೆ ಏರಲು ಸಾಧ್ಯವಾಯಿತು. ಆದರೆ ಇನ್ನೊಬ್ಬ ಆತುರಿಯಾದ ಶೂದ್ರ ಪ್ರಧಾನಿಯ ಪಟ್ಟಕ್ಕೇರಿದ್ದ ಶೂದ್ರನನ್ನು ಕೆಳಗಿಳಿಸುವ ಸಂಚು ಹೂಡಿದ್ದ) ದಕ್ಷಿಣದ ಶೂದ್ರನೊಬ್ಬ ಪ್ರಧಾನಿಯಾಗಬೇಕು ಎಂದು ಉತ್ತರಭಾರತದಲ್ಲಿ ಹೇಳುತ್ತಲೇ ಶಿಷ್ಟವಲ್ಲದ ಕಚ್ಚಾ ಹಿಂದಿಯನ್ನು ಅದೇ ದಕ್ಷಿಣ ಭಾರತದಲ್ಲಿ ರಾಷ್ಟ್ರಭಾಷೆಯಾಗಿಸಬೇಕು ಎಂಬ ಎರಡು ಕಡೆಯೂ ಜನಪ್ರಿಯವಲ್ಲದ ವಿಚಾರಗಳನ್ನು ಹೇಳುವ ಧೈರ್ಯ ಲೋಹಿಯಾರಲ್ಲಿ ಇದ್ದದ್ದು ಅವರ ವಿಶೇಷ.

ಸದ್ಯದ ಸಂದರ್ಭದಲ್ಲಿ ಇಂಗ್ಲಿಷನ್ನು ಬಹಿಷ್ಕರಿಸುವ ಬಗ್ಗೆ ನಮ್ಮಲ್ಲಿ ಬಹಳ ಜನ ಪ್ರಾಮಾಣಿಕವಾದ ಸೈದ್ಧಾಂತಿಕ ಸಂಘರ್ಷಕ್ಕೆ ಸಿದ್ಧರಾಗಿರುವಂತೆ ತೋರುವುದಿಲ್ಲ. ಭಾರತದ ಭಾಗ್ಯವಂತರ ಸಮಸ್ಯೆಯಾಗಿ ಇದು ಉಳಿದಿಲ್ಲ. ಇಂಡಿಯಾದ ಮಹಾ ನಗರಗಳಲ್ಲಿ ಬದುಕುವ ಮೇಲ್‌ಮಧ್ಯಮ ವರ್ಗದವರು ಬಳಸುವ ಇಂಗ್ಲಿಷ್. ಇಂಗ್ಲಿಷ್‌ನ್ನು ಮಾತೃಭಾಷೆಯಾಗಿ ಬಳಸುವವರಿಗಿಂತ ವ್ಯಾಕರಣ ಶುದ್ಧಿಯಲ್ಲಂತೂ ಉತ್ತಮವಾಗಿರುತ್ತದೆ. ಇದಕ್ಕೆ ಯಾರನ್ನು ದೂರಬೇಕು?

ಈ ವಿಷಯವನ್ನು ಸ್ವಲ್ಪ ಹೀಗೆ ನೋಡೋಣ: ಒಂದು ಪಕ್ಷ ಬಿಹಾರ ಅಥವಾ ಉತ್ತರ ಪ್ರದೇಶದಲ್ಲಿ ಅತ್ಯುತ್ತಮ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಕಾಲೇಜೊಂದು ಇದ್ದರೆ ಅಲ್ಲಿ ಕಲಿಕೆಯ ಮಾಧ್ಯಮ ಹಿಂದಿ ಆಗಿದ್ದರೂ, ಕನ್ನಡ ಅಥವಾ ತಮಿಳು ಮಾತಾಡುವ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗಕ್ಕಾಗಿ ಹಿಂದಿ ಕಲಿತು, ಸೀಟುಗಳಿಸಲು ಪ್ರಯತ್ನ ಮಾಡುತ್ತಾರೆ. ನಮ್ಮಲ್ಲಿ ಅನೇಕ ಯುವಕರು, ರಷ್ಯನ್ ಜರ್ಮನ್ ಭಾಷೆಗಳನ್ನು ಕಲಿತು ಆ ದೇಶಗಳಲ್ಲಿ ಕಲಿಸುವ ವಿವಿಧ ಕೋರ್ಸುಗಳಿಗೆ ಸೇರುತ್ತಾರಲ್ಲ ಹಾಗೆ. ಅದೇ ರೀತಿ ತಮಿಳುನಾಡಿನಲ್ಲಿರುವ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜುಗಳು ತಮಿಳಿನಲ್ಲಿ ಈ ಕೋರ್ಸುಗಳನ್ನು ನಡೆಸಿದರೂ, ಹಿಂದಿ ಅಥವಾ ಬೇರೆ ಭಾರತೀಯ ಭಾಷೆಯನ್ನು ಮಾತೃಭಾಷೆಯಾಗಿ ಬಲ್ಲ ನಮ್ಮ ತರುಣರು ಆ ಕೋರ್ಸುಗಳಲ್ಲಿ ಪ್ರವೇಶ ಪಡೆಯಲು ತಮಿಳನ್ನು ಕಲಿಯಲು ಹಿಂಜರಿಯುವುದಿಲ್ಲ. ತಮಿಳು, ಕನ್ನಡ, ಹಿಂದಿ ಭಾಷೆಗಳ ವಿಷಯವಾಗಿ ಐದು ದಶಕಗಳ ಸತತ ಹೋರಾಟದ ನಂತರವೂ ಅವುಗಳನ್ನು ಕನಿಷ್ಠ ಹೈಕೋರ್ಟ್‌‌ಗಳಲ್ಲಿ ಕೂಡ ನಾವು ಬಳಕೆ ಮಾಡುತ್ತಿಲ್ಲ. ನಮ್ಮ ದೇಶದ ಸಾಮಾನ್ಯ ಜನ ಅರ್ಥಮಾಡಿಕೊಳ್ಳದ ಭಾಷೆಯೊಂದರಲ್ಲಿ ಅವರಿಗೆ ಬೇಕಾಗಿರುವ ನ್ಯಾಯ-ತೀರ್ಪಿನ ಬಗ್ಗೆ ನಾವು ಮಾತಾಡುತ್ತಿದ್ದೇವೆ. ನಿಜಕ್ಕೂ ನಮಗೆ ನಾಚಿಕೆಯಾಗಬೇಕು.

ಹಿಂದಿ ಭಾಷಿಕರಲ್ಲದವರು ಇಂಗ್ಲಿಷ್ ಸಂಪರ್ಕ ಭಾಷೆಯಾಗಿ ಮತ್ತು ಉನ್ನತ ಶಿಕ್ಷಣದ ಮಾಧ್ಯಮವಾಗಿ ಉಳಿಯಬೇಕು ಎಂದು ಯಾಕೆ ಒತ್ತಾಯ ಮಾಡುತ್ತಾರೆ? ಇದಕ್ಕೆ ಉತ್ತರ ಸರಳವಾಗಿದೆ: ಹಿಂದಿಯನ್ನು ಮಾತಾಡುವ ವಿದ್ಯಾವಂತರು ಇಂಗ್ಲಿಷ್‌ನ್ನು ಬಯಸುತ್ತಾರೆ- ಅವರ ಲೌಕಿಕ ಉನ್ನತಿಗಾಗಿ. ರಾಷ್ಟ್ರಭಾಷೆ ಹಿಂದಿಯನ್ನು ಮಾತೃಭಾಷೆಯಾಗಿಯೂ ಬಲ್ಲವರಿಗೆ, ತಮ್ಮ ಪ್ರಾಪಂಚಿಕ ಅಗತ್ಯಗಳಿಗೆ ಇಂಗ್ಲಿಷ್‌ನಿಂದ ಇನ್ನಷ್ಟು ಉಪಯೋಗವಾಗುವಂತಿದ್ದರೆ, ಹೀಗೆ ಎರಡು ಭಾಷೆಗಳಿಂದಲೂ ಅವರು ವಿಶೇಷವಾದ ಲಾಭವನ್ನೂ ಶಕ್ತಿಯನ್ನೂ ಕೊಡುವುದಾದರೆ, ಉಳಿದ ಭಾಷೆಗಳನ್ನು ಮಾತಾಡುವವರಿಗೆ ಹಿಂದಿ ಹೊರೆಯಾಗಿ ಕಾಣುವುದು ಸಹಜವೇ. ಇದು ಬಹಳ ವ್ಯಾವಹಾರಿಕವಾದ ಮಾತು. ನಮ್ಮ ಬಹು ಸಂಸ್ಕೃತಿ-ಭಾಷೆಗಳ ಅಡೆತಡೆಗಳನ್ನು ಬದಿಗೊತ್ತಿ ಏನಕೇನ ಯೂರೋಪಿನ ಮಾದರಿಯ ರಾಷ್ಟ್ರಪ್ರಭುತ್ವವನ್ನು ಬೆಳೆಸಿ ಸ್ಥಾಪಿಸುವುದೇ ನಮ್ಮ ನಿಜವಾದ ಆಶೆಯಾಗಿದೆ. ಇದರ ಪರಿಣಾಮವಾಗಿ ನಮ್ಮ ವ್ಯವಹಾರಿಕ ಜೀವನದಲ್ಲಿ ಗಾಂಧೀಜಿ ಹಂಬಲಿಸಿದ ಗ್ರಾಮ ಸ್ವರಾಜ್ಯದ ಕನಸು ಭಗ್ನಗೊಂಡಿದೆ. ಭಾಷೆಗಳನ್ನಾಡುವ ಇಬ್ಬರಿಗೂ ಬಹುತ್ವದ ಎಡರು ತೊಡರುಗಳ ಹಂಗಿಲ್ಲದೆ ಸಲೀಸಾಗಿ ವ್ಯವಹರಿಸುವುದಕ್ಕಾಗಿ ಏಕರೂಪತೆಯನ್ನು ಪಡೆದುಕೊಂಡ ಜಾಗತಿಕ ಆರ್ಥಿಕ ವ್ಯವಸ್ಥೆಯ ಮಾರುಕಟ್ಟೆಯ ಭಾಷೆಯಾಗಿ ಇಂಗ್ಲಿಷ್ ಎಲ್ಲರಿಗೂ ಪ್ರಿಯವಾಗಿದೆ – ಹಿಂದಿ ಮಾತನಾಡುವ ವಿದ್ಯಾವಂತರಿಗೂ, ಹಾಗೆಯೇ ಹಿಂದಿ ವಿರೋಧಿಗಳಿಗೂ.

ಭಾಷೆಯ ವಿಷಯದಲ್ಲಿ ನಾವು ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಮ್ಮೆಟ್ಟುವ ಜನವಿರೋಧಿಯಾದ ಮನೋಭಾವನೆಯನ್ನು ಹೊಂದಿದ್ದೇವೆ. ಸಂಸ್ಕೃತ ದೇವಭಾಷೆಯಾಗಿದ್ದಾಗ ಬುದ್ಧ ಜನಸಾಮಾನ್ಯರ ಭಾಷೆಯನ್ನು ಬಳಸಿದ, ನಮ್ಮ ಭಕ್ತಕವಿಗಳಾದ ಕಬೀರ, ಬಸವ, ಮೀರಾ, ತುಕಾರಾಮ-ಯಾರೇ ಆಗಿರಲಿ, ಅವರೆಲ್ಲರೂ ತಮ್ಮ ದೈವದ ಜೊತೆ ಮಾತಾಡುವ ಸಂದರ್ಭದಲ್ಲಿ ಅಡುಗೆಮನೆಯ ಮತ್ತು ಬೀದಿಯ ಭಾಷೆಯನ್ನೇ ಬಳಸಿದರು. ದೇವರನ್ನು ಆಪ್ತಗೊಳಿಸಿದ ಭಾಷೆ ಭಾರತದಲ್ಲಿ ಸಂಸ್ಕೃತವಲ್ಲ-ಜನಭಾಷೆಗಳು. ಇದರಿಂದ ನಮ್ಮ ಭಾಷೆಗಳಿಗೆ ಮಾತ್ರವಲ್ಲ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಎಷ್ಟೋ ಜನರಿಗೆ ಹೊಸಶಕ್ತಿ ಒದಗಿ ಬಂದಂತಾಯಿತು.

ನಮ್ಮ ನಾಗರಿಕತೆಯ ಏಕತೆಗೆ ಬಹುತ್ವವು ಎಂದೂ ಶತ್ರುವಾಗಿ ಪರಿಣಮಿಸಿಲ್ಲ. ನಾವು ಯಾವತ್ತಿಗೂ ಭಾಷೆಗಳ ಒಂದು ವಿಶಾಲ ವಾತಾವರಣದ ನಡುವೆಯೇ ಬದುಕುತ್ತಿದ್ದೇವೆ. ದೇಶದ ಯಾವುದೇ ಭಾಗದಲ್ಲಿ ವಾಸಿಸುವ ವ್ಯಕ್ತಿಗೂ ತನ್ನ ವ್ಯಕ್ತಿತ್ವದ ಸಂಪೂರ್ಣ ಅಭಿವ್ಯಕ್ತಿಗೆ ಮೂರು ಭಾಷೆಗಳು ಅನಿವಾರ್ಯವಾಗಿವೆ. ‘ಮಾತೃಭಾಷೆ’ ಎಂಬ ಪದ ಪಶ್ಚಿಮದ ಸಂದರ್ಭದಲ್ಲಿ ಹೆಚ್ಚು ಸೂಕ್ತವಾಗಿದೆ. ಒಮ್ಮೆ ಬೇಂದ್ರೆಯವರು. ಹುಡುಗನಾಗಿದ್ದಾಗ ಅವರಿಗೆ ಮರಾಠಿ ಹಾಗೂ ಕನ್ನಡ ಎರಡು ಭಾಷೆಗಳ ಪರಿಚಯವಿದ್ದರೂ ಅವು ಬೇರೆ ಬೇರೆ ಭಾಷೆಗಳು ಎಂಬ ತಿಳುವಳಿಕೆ ಇರಲಿಲ್ಲ ಎಂದು ನನ್ನ ಬಳಿ ಹೇಳಿದ್ದರು. ಬೇಂದ್ರೆಯವರಿಗೆ ತಮ್ಮ ಮನೆಯಲ್ಲಿ ಬಳಸುತ್ತಿದ್ದ ಮರಾಠಿ ಹಾಗೂ ಹೊರಗೆ ಬಳಸುತ್ತಿದ್ದ ಕನ್ನಡ ಎರಡೂ ತೀರ ಹತ್ತಿರದ ಭಾಷೆಗಳಾಗಿದ್ದವು. ವಿಶೇಷವಾದ ಸಂಗತಿಯೆಂದರೆ ಅವರು ಬೇರೆಲ್ಲಾ ಭಾಷೆಗಳಿಂದ ಏನೇನನ್ನೆಲ್ಲಾ ಪಡೆದರೋ ಅದನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಕನ್ನಡದಲ್ಲಿ – ತಮ್ಮ ಕಾವ್ಯದಲ್ಲಿ ಮರುಸೃಷ್ಟಿಸಿದರು. ಅವರ ಕಾವ್ಯದ ಭಾವಪ್ರಪಂಚ ಜನಸಾಮಾನ್ಯರ ಭಾಷೆಯಿಂದ, ಜಾನಪದದಿಂದ ರೂಪುಗೊಂಡಿತ್ತು. ನಾವು ಬದುಕುವ ಪ್ರದೇಶಗಳೆಲ್ಲವೂ ಬಹು ಭಾಷಿಕ ಪ್ರದೇಶಗಳೇ. ಆದರೆ ಈ ಅನೇಕತೆಯಿಂದಾಗಿ ಬಹುಭಾಷಿಕರ ನಡುವಿನ ಅನ್ಯೋನ್ಯತೆಗೆ ಯಾವತ್ತೂ ಧಕ್ಕೆಯಾದದ್ದು ಇಲ್ಲ.

ಪೋಲಿಶ್ ಭಾಷೆಯಲ್ಲಿ ಬರೆದ ಯೂರೋಪಿಯನ್ ಲೇಖಕ ತನ್ನ ಮಧ್ಯ-ವಯಸ್ಸಿನಲ್ಲಿ ಇಂಗ್ಲಿಷ್ ಕಲಿತು ಬರವಣಿಗೆಯನ್ನು ಆರಂಭಿಸಿದ ಉದಾಹರಣೆಯನ್ನು ಅಪರೂಪವೆಂಬಂತೆ ಬಹಳ ಸಾರಿ ನಾವು ನೆನಪಿಸಿಕೊಳ್ಳುತ್ತೇವೆ. ಆದರೆ ಭಾರತದಂಥ ದೇಶದಲ್ಲಿ ಇದು ಬಹಳ ಸಾಮಾನ್ಯವಾದದ್ದು. ಆದ್ದರಿಂದ ನಾನು ಮಾತೃಭಾಷೆ ಎಂಬ ಪದಕ್ಕೆ ಇರುವ ಭಾವುಕ ಅರ್ಥಸಾಧ್ಯತೆಯನ್ನು ಗಮನಿಸಿ. ಅದನ್ನು ಬಳಸುವುದನ್ನು ನಿಲ್ಲಿಸಿದ್ದೇನೆ. ಅದಕ್ಕೆ ಬದಲಾಗಿ ‘ಮನೆಮಾತು’ ಅಥವಾ ‘ಮನೆಭಾಷೆ’ ಎಂದು ಹೇಳುವುದು ಸೂಕ್ತ ಎನ್ನಿಸುತ್ತದೆ. ಹಿಂದೆ ಪ್ರತಿಯೊಬ್ಬರೂ ತಾವು ಬದುಕುತ್ತಿರುವ ಸಮಾಜದ ಭಾಷೆಯನ್ನು ಕಲಿತೇ ವ್ಯಾಸಂಗ ಮಾಡುತ್ತಿದ್ದರು. ಕೆಲವರು ಬೇಂದ್ರೆಯವರಂತೆ ಮರಾಠಿಯನ್ನು ಮನೆಮಾತಾಗಿ ಉಳಿಸಿಕೊಂಡೇ ಕಲಿತ ಭಾಷೆಯಲ್ಲಿ ಬಹಳ ದೊಡ್ಡ ಸಾಧನೆ ಮಾಡಿದರು. ಹಿಂದೆ ಅಷ್ಟೇ ಅಲ್ಲ ಈಗಲೂ ಮನೆಬಿಟ್ಟು ಹೊಸದಾಗಿ ಬೇರೊಂದು ಪ್ರದೇಶದಲ್ಲಿ ಕೆಲಸ ಹುಡುಕಿ ನೆಲೆಸುವಾಗ ಮನೆಭಾಷೆಯನ್ನು ಉಳಿಸಿಕೊಂಡೇ ಜನ ಅಲ್ಲಿಯ ಭಾಷೆಯನ್ನು ಕಲಿಯುವುದನ್ನು ನೋಡುತ್ತೇವೆ.

ಈ ಕಾಲದ ಇಂಡಿಯಾದಲ್ಲಿ ಮಾತ್ರ ಒಬ್ಬ ವ್ಯಕ್ತಿ ಹೆಚ್ಚು ಹೆಚ್ಚು ವಿದ್ಯಾವಂತನಾದಷ್ಟೂ ಕಡಿಮೆ ಭಾಷೆಗಳನ್ನು ಅರಿತಿರುತ್ತಾನೆ ಎಂಬುದು ಬಹಳ ದೊಡ್ಡ ವಿಪರ್ಯಾಸ. ಮೈಸೂರಿನ ಬಸ್‌ಸ್ಟ್ಯಾಂಡಿನಲ್ಲಿ ಕೂಲಿಯೊಬ್ಬ ಉರ್ದು, ಹಿಂದಿ, ತಮಿಳು, ತೆಲುಗು, ಕನ್ನಡ ಜೊತೆಗೆ ಸ್ವಲ್ಪ ಇಂಗ್ಲಿಷ್ – ಇಷ್ಟೆಲ್ಲ ಭಾಷೆಗಳನ್ನು ಮಾತಾಡಬಲ್ಲವನಾಗಿರುತ್ತಾನೆ. ಆದರೆ ಅದಕ್ಕೆ ವಿರುದ್ಧವಾಗಿ ಒಬ್ಬ ಐ.ಎ.ಎಸ್. ಅಧಿಕಾರಿ ಅಥವಾ ಒಬ್ಬ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿಗೆ ಇಂಗ್ಲಿಷ್ ಬಿಟ್ಟರೆ ಬೇರೆ ಭಾಷೆಯ ಪರಿಚಯ ಇರುವುದಿಲ್ಲ. ಅದೃಷ್ಟವಶಾತ್ ಅವನಿಗೆ ಮನೆಯಲ್ಲಿ ಇಂಗ್ಲಿಷ್‌ಗೊತ್ತಿಲ್ಲದ ತಾಯಿಯೋ, ಚಿಕ್ಕಮ್ಮನೋ ಇದ್ದರೆ ಮಾತ್ರ ಅವರ ದೆಸೆಯಿಂದ ಒಂದಿಷ್ಟು ಮನೆಮಾತಿನ ಪರಿಚಯವೂ ಇರುತ್ತದೆ. ಹೀಗೆ ಹೆಚ್ಚು ಹೆಚ್ಚು ಪಾಶ್ಚಾತ್ಯರಾದ ಶಿಕ್ಷಿತ ವರ್ಗ ನಮ್ಮ ಸಂಸ್ಕೃತಿಯಿಂದ, ಭಾಷೆಗಳಿಂದ ದೂರವಾಗಿರುವುದನ್ನು ನೋಡಿದ ಮೇಲೆ ಒಂದು ವಿಷಯ ಸ್ಪಷ್ಟವಾಗಿದೆ. ಇವತ್ತು ನಮ್ಮ ಭಾರತೀಯ ಸಂಸ್ಕೃತಿಯ ಜೀವಂತಿಕೆಗೆ ನಿಜವಾಗಿಯೂ ಕಾರಣವಾಗಿರುವವರು, ಈ ದೇಶದ ಬಹುಸಂಖ್ಯಾತ ಹಿಂದುಳಿದವರು ಮತ್ತು ಅಕ್ಷರ ಅರಿಯದ ಅವಿದ್ಯಾವಂತರು. ವಿದ್ಯಾವಂತರಿಂದ ಮಾತ್ರ ಭಾಷೆ-ಸಂಸ್ಕೃತಿಗಳು ಬೆಳೆಯುತ್ತವೆ ಎಂಬುದು ದೊಡ್ಡ ಭ್ರಮೆ.

ರಾಮಾನುಜನ್ ಇಂಗ್ಲಿಷ್‌ನಲ್ಲಿ ಬರೆದ ಪದ್ಯವೊಂದರಲ್ಲಿ ನಾನು ಭಾಷೆಗಳ ಬಗ್ಗೆ ಮಂಡಿಸುತ್ತಿರುವ ವಿಚಾರಸರಣಿಯನ್ನು ಚೆನ್ನಾಗಿ ವಿವರಿಸಿದ್ದಾರೆ. ರಾಮಾನುಜನ್ ಇಂಗ್ಲಿಷ್, ಸಂಸ್ಕೃತದಂಥ ಭಾಷೆಗಳನ್ನು ‘ಪಿತೃಭಾಷೆ’ ಎಂದು ಕರೆಯುತ್ತಿದ್ದರು. ಅವರು ತಾನು ಅಡುಗೆ ಮನೆಯಲ್ಲಿ ತಮಿಳನ್ನು, ರಸ್ತೆಗಳಲ್ಲಿ ಕನ್ನಡವನ್ನು ಮತ್ತು ಇಂಗ್ಲಿಷನ್ನು ಅಟ್ಟದಲ್ಲಿ ಹೇಗೆ ಬಳಸುತ್ತಿದ್ದೆ ಎಂಬುದನ್ನು ಆ ಪದ್ಯದಲ್ಲಿ ವಿವರಿಸಿದ್ದಾರೆ. ಒಂದು ಶತಮಾನದ ಹಿಂದೆ ಆಗಿದ್ದರೆ ಅದು ಈಗಿನ ಇಂಗ್ಲಿಷಿಗೆ ಬದಲಾಗಿ ಸಂಸ್ಕೃತ ಆಗಿರುತ್ತಿತ್ತು. ಸಂಸ್ಕೃತ ಆಗ ಪಿತೃಭಾಷೆಯಾಗಿತ್ತು. ಅದು ಅಧಿಕಾರ, ಅಮೂರ್ತ ವಿಚಾರಗಳು ಹಾಗೂ ವ್ಯಕ್ತಿಯ ಅಂತಸ್ತಿನ ವಿಶಿಷ್ಟತೆಯನ್ನು ಸೂಚಿಸುವ ಸಂಕೇತವಾಗಿತ್ತು. ರಾಮಾನುಜನ್ ಹೇಳುವ ಮೂರು ಭಾಷೆಗಳು ಬದುಕಿನ ವಿವಿಧ ಸಂದರ್ಭಗಳಲ್ಲಿ ಅತ್ಯಗತ್ಯ ಎಂದು ಮತ್ತೆ ವಿವರಿಸಬೇಕಾಗಿಲ್ಲ. ಭಾರತವು ಏಕತೆಯನ್ನು ಸಾಧಿಸಿದ ಅದರ ಪೂರ್ವ ಇತಿಹಾಸದಲ್ಲಿ ಬಹುಭಾಷೆ, ಬಹು ಸಂಸ್ಕೃತಿಗಳನ್ನು  ತನ್ನ ದೈನಂದಿನ ಬದುಕಿನ ಸಂದರ್ಭಗಳಲ್ಲಿ ಅಳವಡಿಸಿಕೊಂಡೇ ಇತ್ತು.

ನಮ್ಮ ಕೆ.ವಿ. ಸುಬ್ಬಣ್ಣ ಹೇಳುವಂತೆ ಎಲ್ಲ ಭಾಷೆಗಳ ಹೊರತಾಗಿ ರಾಮಾಯಣ-ಮಹಾಭಾರತಗಳೆಂಬ ಎರಡು ಸರ್ವವ್ಯಾಪಿ ಭಾಷೆಗಳು ದೇಶದ ಎಲ್ಲ ಜನರನ್ನೂ ಒಂದಾಗಿಸಿದ್ದವು. ನಮ್ಮ ಹಳ್ಳಿಯ ಯಾವೊಬ್ಬನೂ ಈ ಮಹಾಕಾವ್ಯಗಳನ್ನು ಮೊದಲ ಬಾರಿಗೆ ಎಂಬಂತೆ ‘ಓದುವುದಿಲ್ಲ’. ಅವರಿಗೆ ಹೇಗೋ ಇವು ಗೊತ್ತಿರುತ್ತದೆ. ರಾಮಾನುಜನ್ ಯಾವಾಗಲೂ ಹೇಳುತ್ತಿದ್ದ, ಮೌಖಿಕ ಪರಂಪರೆಯ ರಾಮಾಯಣದ ಪ್ರಸಂಗವನ್ನು ನಾನು ಬಹಳ ಸಾರಿ ಪ್ರಸ್ತಾಪಿಸಿದ್ದೇನೆ. ಎಷ್ಟು ಸಾರಿ ಹೇಳಿದರೂ ಹೊಸದಾಗಿಯೇ ಕಾಣುವ ಈ ಪ್ರಸಂಗ ಈ ದೇಶವನ್ನು ಒಂದು ಸೂತ್ರದಲ್ಲಿ ಜೋಡಿಸಬಲ್ಲ ಅಂತರ್ ಪಠ್ಯೀಯತೆಯ ಉತ್ತಮ ಉದಾಹರಣೆಯಾಗಿದೆ. ನನ್ನ ಭಾಷೆಯೊಂದರಲ್ಲೇ ಅಕ್ಷರಶಃ ಸಾವಿರ ರಾಮಾಯಣಗಳಿವೆ. ಇದು ಇಂಡಿಯಾದ ಯಾವುದೇ ಭಾಷೆಯ ಜಾನಪದ ಸಾಹಿತ್ಯದ ವಿಷಯದಲ್ಲೂ ನಿಜ. ಇಂಥ ಒಂದು ರಾಮಾಯಣದಲ್ಲಿ ಶ್ರೀರಾಮ ಕಾಡಿಗೆ ಹೋಗುವಾಗ ಸೀತೆ ತನ್ನ ಜೊತೆ ಬರುವುದು ಯಾಕೆ ಸೂಕ್ತವಲ್ಲ ಎಂದು ವಿವರಿಸುತ್ತಾನೆ. ಕಾಡಿನ ಕ್ರೂರಪ್ರಾಣಿಗಳು, ರಾಕ್ಷಸರು ಇತ್ಯಾದಿಗಳ ನಡುವೆ ಸೀತೆಯಂಥ ಮೃದು ವ್ಯಕ್ತಿತ್ವದ ಹೆಣ್ಣು ೧೪ ವರ್ಷದವರೆಗೆ ಬದುಕುವುದು ಸಾಧ್ಯವಾಗದ ಮಾತು ಎಂಬುದು ಅವರ ಅಭಿಪ್ರಾಯ. ಆಗ ರಾಮನ ಮಾತುಗಳಿಂದ ಬೇಸತ್ತ ಅವನ ಅನಕ್ಷರಸ್ಥ ಹೆಂಡತಿ ಸೀತೆ ಹೇಳುತ್ತಾಳೆ: ‘ನನಗೆ ಗೊತ್ತಿರುವ ಪ್ರತಿಯೊಂದು ರಾಮಾಯಣದಲ್ಲೂ ಸೀತೆ ರಾಮನೊಂದಿಗೆ ಕಾಡಿಗೆ ಹೋಗುತ್ತಾಳೆ. ಹೀಗಿರುವಾಗ ನೀನು ನನ್ನನ್ನು ತಡೆಯಲು ಹೇಗೆ ಸಾಧ್ಯ?’

ಸ್ಮೃತಿಯ ಸಾತತ್ಯ ಯಾವ ಸಂಸ್ಕೃತಿಗಾದರೂ ಆಧಾರ ಎನ್ನುವುದಾದರೆ ಈ ಸ್ಮೃತಿಯ ಸಾತತ್ಯವನ್ನು ಕಾಪಾಡುವುದು ಭಾಷೆ. ಬಹುಭಾಷೆಗಳಿಂದಾಗಿ ನಮ್ಮ ನಾಗರಿಕತೆಗೆ ಒಂದು ನಿಶ್ಚಿತ ಸ್ವರೂಪ ಇಲ್ಲದೇ ಹೋದೀತೆಂದು ಎಂದೂ ಆತಂಕಕ್ಕೆ ಒಳಗಾದದ್ದಿಲ್ಲ. ನಮ್ಮೆಲ್ಲರನ್ನೂ ಏಕತ್ರ ಸಂಘಟಿಸುವಂತಹ ಯಾವ ಕಟ್ಟುನಿಟ್ಟಿಗೂ ನಾವು ಕೃತಕವಾದ ಪ್ರಯತ್ ಮಾಡಿದ್ದಿಲ್ಲ. ಇಡೀ ದೇಶದಲ್ಲಿ ಮೂರು ನಾಲ್ಕು ಭಾಷೆಗಳನ್ನಾದರೂ ಅರ್ಥಮಾಡಿಕೊಳ್ಳಲಾಗದ ಜನರು ಇಲ್ಲವೇನೊ ಎಂದು ಹೇಳಬಹುದು. ಹೀಗಿದ್ದೂ ಒಂದು ಅಲ್ಪಸಂಖ್ಯಾತ ಸಮುದಾಯ ಮಾತ್ರ ಮಾತನಾಡುವ ಕಿರುಭಾಷೆಯನ್ನು ನಾವು ಈವರೆಗೆ ಕಳೆದುಕೊಂಡಿದ್ದಿಲ್ಲ. ಆತ್ಮಕ್ಕೆ ಸಂಬಂಧಪಟ್ಟ ವಿಷಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾವು ಎಂದೂ ವ್ಯಾಪಾರಿ ಮನೋಭಾವದ ದುಷ್ಟ ಜಾಣರಂತೆ ವರ್ತಿಸಿದ್ದಿಲ್ಲ. ಹೊಟ್ಟೆಪಾಡಿಗಾಗಿ ಪರದಾಡುವ ಜನರೂ ತಮ್ಮ ವಲಯದ ಕಿರುಭಾಷೆಗಳನ್ನು ಕಳೆದುಕೊಂಡಿದ್ದಿಲ್ಲ. ಕೈಗಾರಿಕಾ ಕ್ರಾಂತಿಗಿಂತ ಮುನ್ನ ಎಲ್ಲ ದೇಶಗಳ ಚರಿತ್ರೆಯೂ ಹೀಗಿದ್ದಿರಬಹುದು. ಕೈಗಾರಿಕಾ ಕ್ರಾಂತಿಗೆ ಮುನ್ನ ಮನುಷ್ಯರು ಆತ್ಮಹೀನರಾಗಿದ್ದಿಲ್ಲ ಎಂದು ತಿಳಿಯದ ಬ್ಲೇಕ್‌ನನ್ನು ಇಲ್ಲಿ ಸ್ಮರಿಸುತ್ತೇನೆ.

ಲೋಹಿಯಾ ಮತ್ತು ಅವರ ಅನುಯಾಯಿಗಳು ಇಂಡಿಯಾದ ಜಾತಿ ಪದ್ಧತಿಯನ್ನು ನಿರ್ಮೂಲನ ಮಾಡಲು ಆರಂಭಿಸಿದ ಸಮಾಜವಾದಿ ಆಂದೋಲನ ನನ್ನನ್ನು ಬಹಳ ಕಾಲ ಪ್ರಭಾವಿಸಿದೆ. ಇಂಡಿಯಾದ ಇತಿಹಾಸದಲ್ಲಿ ಅನೇಕ ಜನ ಸಂತರು, ದಾರ್ಶನಿಕರು ಮತ್ತು ಧಾರ್ಮಿಕ ನಾಯಕರು ಸಮಾಜದಲ್ಲಿ ಮೂಲಭೂತ ಬದಲಾವಣೆ ತರಬೇಕೆಂದು ಪ್ರಯತ್ನ ನಡೆಸಿದ ಉದಾಹರಣೆಗಳಿವೆ. ಆದರೆ ಅವರೆಲ್ಲ ತಮ್ಮ ಉದ್ದೇಶದಲ್ಲಿ ಸಂಪೂರ್ಣ ಸಫಲರಾಗಲಿಲ್ಲ. ಬುದ್ಧನಿಂದ ಆರಂಭವಾದ ಈ ಪ್ರಯತ್ನ ಮಧ್ಯಯುಗದ ತುಕಾರಾಮ, ಕಬೀರ, ಬಸವ, ನಾನಕ್‌ರಂಥ ಹಲವಾರು ಸಂತರ ನೇತೃತ್ವದಲ್ಲಿ ಮುಂದುವರಿಯಿತು. ಹನ್ನೆರಡನೆಯ ಶತಮಾನದ ಬಸವಣ್ಣ ಬ್ರಾಹ್ಮಣ ಹುಡುಗಿಯನ್ನು ದಲಿತ ಯುವಕನೊಂದಿಗೆ ವಿವಾಹ ಮಾಡಿಸಿದ. ಆದರೂ ಬಸವಣ್ಣ ಆರಂಭಿಸಿದ ವೀರಶೈವ ಪಂಥದಲ್ಲಿ ಎಲ್ಲ ಜಾತಿಗಳು ಸೇರಿಕೊಂಡಿದ್ದರೂ, ಆ ಜಾತಿಗಳ ಜನ ತಮ್ಮ ಮೂಲ ಐಡೆಂಟಿಟಿಯನ್ನು ಹಾಗೇ ಉಳಿಸಿಕೊಂಡುಬಿಟ್ಟರು. ಮತಾಂತರ ಹೊಂದಿದ ಕ್ರೈಸ್ತರ ರೀತಿಯಲ್ಲಿ ತಮ್ಮ ಮೂಲ ಗುರುತುಗಳನ್ನು ಬಿಡದ ಆ ಜನ ಹೊಸದಾಗಿ ಉಪಜಾತಿಗಳನ್ನು ಸೃಷ್ಟಿಸಿಕೊಂಡರು.

ಭಾರತದ ದೀರ್ಘ ಇತಿಹಾಸದಲ್ಲಿ ನಿರಂತರವಾಗಿ ನಡೆದಿರುವ ಈ ರೀತಿಯ ಹೋರಾಟಗಳಲ್ಲಿ ಜಾತಿಗಳ ಸಮಾನತೆ ಮುಖ್ಯ ವಿಷಯವಾಗಿದೆಯೇ ಹೊರತು ಜಾತಿಗಳ ನಿರ್ಮೂಲನೆ ಅಲ್ಲ. ಜಾತಿಯನ್ನು ಮುಖ್ಯ ಪ್ರಶ್ನೆಯಾಗಿಟ್ಟುಕೊಂಡು ಸಮಾಜ ಸುಧಾರಕರು ಹಾಗೂ ಕ್ರಾಂತಿಕಾರಿಗಳು ನಡೆಸಿದ ಹೋರಾಟವನ್ನು ಎರಡು ಮಾದರಿಗಳಲ್ಲಿ ವಿಶ್ಲೇಷಿಸಬಹುದು. ಮೊದಲನೆಯದು, ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಮಹಾದಾರ್ಶನಿಕ, ಸಂತ ರಾಮಾನುಜ ಅವರ ಸುಧಾರಣಾವಾದಿ ಮಾದರಿ. ಅವರು ಕೆಳಜಾತಿಗಳನ್ನು ಸಂಸ್ಕೃತೀಕರಣದ ಮೂಲಕ ಮೇಲಕ್ಕೆತ್ತಿ ಅವರಲ್ಲಿ ಆತ್ಮಗೌರವವನ್ನು ತರಲು ಪ್ರಯತ್ನ ಮಾಡಿದರು. ಎರಡನೆಯದು, ಮಹಾನ್ ಚಿಂತಕ ಬಸವಣ್ಣ ಜಾತಿಯನ್ನೇ ನಿರ್ಮೂಲನ ಮಾಡಲು ಅನುಸರಿಸಿದ ಮಾದರಿ. ಕೆಳಜಾತಿಯವರಿಗೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒತ್ತಾಯಿಸುವ ಎಲ್ಲಾ ಪ್ರಯತ್ನಗಳೂ ರಾಮಾನುಜ ಅವರ ಮಾದರಿಯಲ್ಲಿಯೇ ಸೇರುತ್ತವೆ ಎಂಬುದು ನನ್ನ ಅನಿಸಿಕೆ.

ಲೋಹಿಯಾ ಅವರಿಗೆ ಜಾತಿ ನಿರ್ಮೂಲನೆ ನಮ್ಮ ದೇಶದಲ್ಲಿ ಆಗಬೇಕಾದ ಅನಿವಾರ್ಯ ಸಂಗತಿಯಾಗಿತ್ತು. ಅವರ ಪ್ರಕಾರ ಇಂಡಿಯಾದ ಮನಸ್ಸು ಶತಮಾನಗಳಿಂದ ಸೃಜನಶೀಲವಾಗಿಲ್ಲದೇ ಇರಲು ಕಾರಣ ಇಲ್ಲಿನ ಜಾತಿಪದ್ಧತಿ. ಅವರು ಶಂಕರರನ್ನು ಭಾರತ ರೂಪಿಸಿದ ಕೊನೆಯ ಮಹಾನ್ ಚಿಂತಕ ಎಂದು ಹಲವು ಸಾರಿ ಹೇಳಿದ್ದರು. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ಅದು ಲೋಹಿಯಾರ ಚಿಂತನೆ ಹಾಗೂ ಅದಕ್ಕೆ ಅರವತ್ತರ ದಶಕದ ಶೈಕ್ಷಣಿಕ ವಲಯದ ಬುದ್ಧಿಜೀವಿಗಳ ಪ್ರತಿಕ್ರಿಯೆ- ಎರಡನ್ನೂ ಸೂಚಿಸುತ್ತದೆ. ಮೈಸೂರಿನಲ್ಲಿ ಅವರು ಆಗಾಗ ಬೀದಿ ಸಭೆ, ಧರಣಿಗಳಲ್ಲಿ ಪಾಲ್ಗೊಂಡು, ನಂತರ, ಅವರನ್ನು ತುಂಬಾ ಮೆಚ್ಚುತ್ತಿದ್ದ ಲೇಖಕರ ಗುಂಪನ್ನು ಭೇಟಿಯಾಗಲು ಕಾಫಿಹೌಸಿಗೂ ಬರುತ್ತಿದ್ದರು. ಒಮ್ಮೆ ಆ ಗುಂಪನ್ನು ಉದ್ದೇಶಿಸಿ ಮಾತಾಡಲು ನಾವು ಅವರನ್ನು ಕೇಳಿಕೊಂಡಿದ್ದೆವು. ಅಂದಿನ ಭಾಷಣದಲ್ಲಿ ಲೋಹಿಯಾ ಶಂಕರಾಚಾರ್ಯರ ನಂತರ ಭಾರತದಲ್ಲಿ ದಾರ್ಶನಿಕನೊಬ್ಬ ಯಾಕೆ ಹುಟ್ಟಲಿಲ್ಲ? ಎಂಬುದನ್ನು ಬಹಳ ತೀವ್ರವಾಗಿ ಪ್ರಶ್ನಿಸಿದರು. ಶೂದ್ರರಿಗೆ ಶೈಕ್ಷಣಿಕ ಕೇಂದ್ರಗಳಲ್ಲಿ ಪ್ರವೇಶವಿಲ್ಲದೆ ಇರುವುದು ಮತ್ತು ಬ್ರಾಹ್ಮಣರು ತಾವೇ ಶ್ರೇಷ್ಠರೆಂಬ ಭ್ರಮೆಯಲ್ಲಿ ಸಿಕ್ಕಿಕೊಂಡು ಜಡ್ಡಾಗಿ ಹೋಗಿರುವುದು ಇದಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ವಿವರಿಸಿದರು. ಬ್ರಾಹ್ಮಣರು ಸ್ವಪ್ರತಿಷ್ಠೆಯಲ್ಲಿ ಮುಳುಗಿ ನಿಜವಾದ ಅರ್ಥದಲ್ಲಿ ಜ್ಞಾನವನ್ನು ಹುಡುಕುತ್ತಿಲ್ಲ ಎಂದರು. ಆದರೆ ಕಾರ್ಯಕ್ರಮದಲ್ಲಿ ಹಾಜರಿದ್ದ ಆಂಗ್ಲೀಕೃತ ರಾಜ್ಯಶಾಸ್ತ್ರದ ಪ್ರೊಫೆಸರ್ ಒಬ್ಬರು, ಲೋಹಿಯಾರ ನಿರಾಶಾವಾದವನ್ನು ಖಂಡಿಸಿ, ಸ್ವತಃ ತಾನೊಬ್ಬ ಶೂದ್ರನಾಗಿದ್ದೂ ಪ್ರೊಫೆಸರ್ ಲಾಸ್ಕಿಯಂಥವರ ಮಾರ್ಗದರ್ಶನದಲ್ಲಿ ಬಹಳಷ್ಟು ಸಾಧಿಸಿರುವುದನ್ನು ಅವರು ಗಮನಿಸಿಲ್ಲ ಎಂದು ಪ್ರತಿವಾದ ಹೂಡಿದರು. ವಿಶ್ವವಿದ್ಯಾಲಯದಿಂದ ಕಾರಿನಲ್ಲಿ ವಾಪಸ್ಸಾಗುವಾಗ ಲೋಹಿಯಾ ಕೋಪದಿಂದ ಸುಡುತ್ತಿದ್ದುದು ನನಗೆ ಇನ್ನೂ ನೆನಪಿದೆ. ಇಂಗ್ಲಿಷಿನಲ್ಲಿ ತಾವು ಮಾತಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರೂ ಇಂಗ್ಲಿಷಿನಲ್ಲಿಯೇ ಭಾಷಣ ಮಾಡುವಂತೆ ಒತ್ತಾಯಿಸಿದ್ದಕ್ಕೆ, ಹಿಂದಿಯಲ್ಲಿ ಸರಿಯಾಗಿ ಆರಿಸಿದ ಬೈಗುಳವೊಂದನ್ನು ಬಳಸಿ ಅವರು ನಮ್ಮನ್ನು ಬೈದಿದ್ದರು.

ಅವರು ನಮ್ಮ ಸ್ವಯಂಘೋಷಿತ ಶೂದ್ರ ನಾಯಕರಾದ ಲಾಲೂಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವರ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬ ಬಗ್ಗೆ ನನಗೆ ಬಹಳ ಕುತೂಹಲವಿದೆ. ಲೋಹಿಯಾ ಅವರು ಎಲ್ಲ ಬ್ರಾಹ್ಮಣೇತರರು ಬ್ರಾಹ್ಮಣ ಅಧಿಕಾರಶಾಹಿಯ ಒಗ್ಗಟ್ಟಿಗೆ ವಿರುದ್ಧ ಒಂದು ಪರ್ಯಾಯ ಸಮಾಜವನ್ನು ಕಟ್ಟುತ್ತಾರೆ ಎಂದು ಕನಸು ಕಂಡಿದ್ದರು. ಅವರಿಗೆ ಅಸ್ಪೃಶ್ಯರು ಮತ್ತು ಹಿಂದುಳಿದ ಜಾತಿಗಳ ನಡುವೆ ಇರುವ ಆಂತರಿಕ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿತ್ತು. ಆ ಸಮಸ್ಯೆಗಳನ್ನು ಈ ವರ್ಗಗಳು ಬಗೆಹರಿಸಿಕೊಳ್ಳುತ್ತವೆಂಬ ಭರವಸೆಯೂ ಇತ್ತು. ಆದರೆ ಹಾಗಾಗಲಿಲ್ಲ. ಲಾಲೂ ಹಾಗೂ ಮುಲಾಯಂಗಳೆಂಬ ಯಾದವರ ಶಕ್ತಿ ರಾಜಕಾರಣದಲ್ಲಿ ಲೋಹಿಯಾನ ಪ್ರಿಯಶಿಷ್ಯ ಜಾರ್ಜ್‌ಫರ್ನಾಂಡಿಸ್‌ರಿಗೆ ಜಾಗವಿರಲಿಲ್ಲ. ಇದಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಭಾರತದ ರಾಜಕಾರಣದಲ್ಲಿ, ಬಿಎಸ್‌ಪಿಯ ಬಿಜೆಪಿಯ ಜೊತೆಗೆ, ಜಾರ್ಜ್‌ಫರ್ನಾಂಡಿಸ್‌ರ ಸಮತಾ ಪಕ್ಷ ಬಿಜೆಪಿಯ ಜೊತೆಗೆ- ಹೀಗೆ ಕೆಲವು ಅಸಾಧ್ಯವಾದ ಮೈತ್ರಿಗಳು ಸಂಭವಿಸಿವೆ. ನಮ್ಮ ನಡುವಿನ ಅತ್ಯಂತ ಸಮರ್ಥರಾಜಕಾರಣಿಗಳು ಸಿದ್ಧಾಂತಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಯೋಚಿಸುವುದು ಚುನಾವಣೆಗಳನ್ನು ಹೇಗೆ ಗೆಲ್ಲುವುದು ಎಂಬ ಬಗ್ಗೆ ಮಾತ್ರ. ಅಗ್ಗದ ಜನಪ್ರಿಯತೆ ಮಾತ್ರವೇ ಅವರ ಅಂತಿಮ ಸಿದ್ಧಾಂತವಾಗಿದೆ. ಜಾಗತೀಕರಣ, ಉದಾರೀಕರಣದ ಇಂದಿನ ದಿನಗಳಲ್ಲಿ, ಬಹುರಾಷ್ಟ್ರೀಯ ಶಕ್ತಿಗಳ ಹಿತಕಾಯುವ, ಕ್ಷಣಿಕ ಅಗತ್ಯಗಳನ್ನು ಪೂರೈಸುವ ಉಪಭೋಗ ಸಂಸ್ಕೃತಿಯನ್ನು ಮುನ್ನಡೆಸುವುದೇ ಮುಖ್ಯ ಗುರಿಯಾಗಿದೆ. ಯಾವ ಪಕ್ಷದಲ್ಲೂ ಅಭಿವೃದ್ಧಿ, ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ವಿನಾಶಕಾರಿಯಾದ ಯೋಜನೆಗಳನ್ನು ವಿರೋಧಿಸುವವರು ಯಾರೂ ಇಲ್ಲ. ಇವನ್ನೆಲ್ಲ ವಿರೋಧಿಸುವ ಬಹುಗುಣ, ಮೇಧಾಪಾಟ್ಕರ್‌ರಂಥ ಅಪರೂಪದ ವ್ಯಕ್ತಿಗಳು ಯಾವ ಪಕ್ಷಕ್ಕೂ ಆದರ್ಶವಲ್ಲ. ಆದರೂ ನನ್ನಂಥವರು ನಮ್ಮ ಶಕ್ತ್ಯಾನುಸಾರ ಇವರನ್ನು ಬೆಂಬಲಿಸುತ್ತೇವೆ. ಆದರೆ ಪರಿಸರವಾದಿಗಳಾದ ಕೆಲವು ಎನ್‌ಜಿಓ ವಿದೇಶೀ ನೆರವಿನ ಮೇಲೆ ಅವಲಂಬಿತವಾಗಿರುವ ಬಗ್ಗೆಯೂ ಕಿರಿಕಿರಿ ಪಟ್ಟಿದ್ದೇನೆ. ನನಗೆ ಇತ್ತೀಚೆಗೆ ರಾಜಕಾರಣಿಗಳಿಗಿಂತ ವಿದೇಶಿ ನೆರವು ಪಡೆಯದೆ ಹೋರಾಡುವ ಮೇಧಾಪಾಟ್ಕರ್ ಅಂಥವರು ಸಮಾಜವಾದಿಗಳ ದೊಡ್ಡ ಆದರ್ಶಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎನಿಸುತ್ತಿದೆ. (ಲೇಖಕನಾಗಿ ಮಾತನಾಡುತ್ತಿರುವಾಗ ಈ ಬಗೆಯ ಸಮಾಧಾನದಲ್ಲಿ ತೃಪ್ತನಾಗುವುದು ಅಷ್ಟೇನೂ ಸರಿಯಾದ ಸಂಗತಿ ಅಲ್ಲ ಎಂದು ನನಗೆ ಗೊತ್ತಿದೆ) ನಾವು ಯಾವ ಕಾರಣಕ್ಕೆ ಸಮಾಜದಲ್ಲಿ ಪರಿವರ್ತನೆಯಾಗಬೇಕು ಎಂದು ಬಯಸುತ್ತೇವೆಯೋ ಆ ವಿಷಯ ಒಂದು ರಾಜಕೀಯ ಚಳವಳಿಯ ರೂಪ ತಳೆಯಬೇಕು. ಮತ್ತು ಚಳವಳಿ ರಾಜಕೀಯ ಪಕ್ಷವಾಗಿ ಬೆಳೆದು ತನ್ನ ಆ ಗುರಿಯನ್ನು ಸಾಧಿಸಲು ಜನರಿಂದ ಅಧಿಕಾರವನ್ನು ಪಡೆಯಲೂ ಸಿದ್ಧವಿರಬೇಕು. ಲೋಹಿಯಾ ಮತ್ತು ಲಿಮಯೆಯಂಥವರ ಕಣ್ಣಿನಿಂದ ನೋಡಿದರೆ ಈಗ ನಾವು ಕಾಣುವುದೇನು? ಆದರ್ಶಗಳನ್ನು ಹೊಂದಿಯೂ-ವಾಸ್ತವದಿಂದ ದೂರವಾಗದೆ: ಕಾರ್ಯ- ತತ್ಪರವಾಗಿಯೂ ಅವಕಾಶವಾದಿಯಾಗದ ಒಂದೇ ಒಂದು ರಾಜಕೀಯ ಪಕ್ಷವನ್ನು ಈಗ ಕಾಣಲು ಸಾಧ್ಯವಿಲ್ಲ. ಅಂಥ ಪಕ್ಷವೊಂದು ಹೇಗಿರುತ್ತದೆ ಎಂದರೆ ರಾಜಕೀಯವಾಗಿ ಸದ್ಯದಲ್ಲಿ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದು ಹಿಂಜರಿಯುವುದಿಲ್ಲ. ನಿಷ್ಠುರ ಸತ್ಯವನ್ನು ಕಂಡು, ಹೇಳುವ ಧೈರ್ಯ ಅದಕ್ಕಿರುತ್ತದೆ. ಲೋಹಿಯಾ ತಮ್ಮ ಕೊನೆಗಾಲದಲ್ಲಿ ಬರೆದ ‘ನಿರಾಶ್‌ಕಿ ಕರ್ತವ್ಯ’ ಹಾಗೂ ‘ಸೋಶಿಯಲಿಜಂ ಇನ್ ಒನ್ ಹಂಡ್ರೆಡ್ ಇಯರ್ಸ್‌’ ಎಂಬ ಪುಸ್ತಕಗಳಲ್ಲಿ ತಮ್ಮ ಅಸಮಾನ್ಯ ದೂರದೃಷ್ಟಿಯಿಂದ ಇವೆಲ್ಲವನ್ನೂ ಪ್ರವಾದಿಯ ಹಾಗೆ ಗ್ರಹಿಸಿದ್ದರು ಎಂದು ನನಗೆ ಅನಿಸುತ್ತದೆ.

ವಾರಣಾಸಿಯಲ್ಲಿ ಮಾಡಿದ ವಿಶ್ವಭಾರತಿ ಭಾಷಣ. ಕನ್ನಡಕ್ಕೆ ; ಎಸ್. ಸಿರಾಜ್ ಅಹಮದ್.

* * *