ಆಧುನಿಕತೆಯ ನಮ್ಮನ್ನು ಆವರಿಸುತ್ತ ಹೋದ ಸಂಕೀರ್ಣವಾದ ಕಥನವನ್ನು ಮುಂದುವರೆಸುತ್ತೇನೆ. ಶಿವಮೊಗ್ಗದಿಂದ ಮೈಸೂರಿಗೆ ಓದಲು ಬಂದ ನನಗೆ ಲೀವಿಸ್‌ರವರ ಖಾಸಾ ಶಿಷ್ಯರಾಗಿದ್ದ ಸಿ.ಡಿ.ಎನ್. ಮತ್ತು ಬಿ.ಎಂ.ಶ್ರೀ. ಪಂಥದ ಎಸ್.ವಿ.ರಂಗಣ್ಣನವರು ಪ್ರೊಫೆಸರ್ ಆದರು. ಕ್ಲಾಸಿನಲ್ಲಿ ಎಲಿಯಟ್‌ನ ಪದ್ಯಗಳನ್ನು ಚರ್ಚಿಸುವುದು, ಅವನು ಭಗವದ್ಗೀತೆಯನ್ನು ಬಳಸಿದನೆಂದು ಹಿಗ್ಗುವುದು, ಅವನ ಮುಖೇನ ಬೃಹದಾರಣ್ಯಕವನ್ನು ಸವಿಯುವುದು, ಮೈಸೂರಿನ ಕಾಫಿ ಹೌಸಿನಲ್ಲಿ ಆಗತಾನೇ ಅಡಿಗರು ಬರೆಯುತ್ತಿದ್ದ ನವ್ಯ ಕವನಗಳನ್ನು ಓದಿ ಚರ್ಚಿಸುವುದು, ಕೆ. ಸದಾಶಿವ, ರಾಘವ, ಶ್ರೀನಿವಾಸ ರಾವ್, ವಿಶ್ವನಾಥ ಮಿರ್ಲೆ, ರತ್ನ, ಮುಂದೆ ಸುಮತೀಂದ್ರ ನಾಡಿಗ ಇತ್ಯಾದಿ ಗೆಳೆಯರ ಜೊತೆ ಹಗಲು ರಾತ್ರಿಯೆನ್ನದೆ ಸಾಹಿತ್ಯ ರಾಜಕೀಯ ವಿಚಾರಗಳ ಬಗ್ಗೆ ಕ್ಲಾಸಿಗೆ ಚೆಕ್ಕರ್ ಹಾಕಿ ಮೇಲಿಂದ ಮೇಲೆ ಒನ್ ಬೈ ಟು ಕಾಫಿ ಕುಡಿದು, ಸಿಗರೇಟು ಸೇದುತ್ತ ಹರಟೆ ಹೊಡೆಯುವುದು, ಗುಟ್ಟಾಗಿ ಬಿಯರ್ ಕುಡಿದು ಗಂಟೆಗಟ್ಟಲೆ ಉದ್ವೇಗದಲ್ಲಿ ದೇವರು ಇದ್ದಾನೊ ಇಲ್ಲವೊ ಎಂಬುದನ್ನು ಚರ್ಚಿಸುವುದು, ಸುಬ್ಬಣ್ಣನ ಜೊತೆ ಪಂಪ ರತ್ನಾಕರವರ್ಣಿಯರನ್ನೂ ಓದಿಸಿ ಕೇಳುವುದು, ಶೆಲ್ಲಿ ಗಾರ್ಕಿಯರನ್ನು ಅವನಿಗೆ ಓದಿಸುವುದು, ಅವನ ಖರ್ಚಿನಲ್ಲಿ ಮೈಸೂರಿಗೆ ಬಂದ ಎಲ್ಲ ನಾಟಕಗಳನ್ನೂ ನೋಡುವುದು, ನಾವೇ ಬಣ್ಣಹಚ್ಚಿ ಉರುಹಚ್ಚಿದ ಮಾತುಗಳನ್ನು ಒಪ್ಪಿಸಿ ಸುಬ್ಬಣ್ಣನ ಖುಷಿಯಲ್ಲಿ ಪಾಲಾಗುವುದು, ಬಿಳಿಗಿರಿಯ ಸಹವಾಸದಲ್ಲಿ ಮೈ ಚಳಿಯನ್ನೂ ಮುಜುಗರಗಳನ್ನೂ ಕಳೆದುಕೊಂಡು ಸೋಗಿನ ಬರವಣಿಗೆಯನ್ನು ನಿರ್ದಯವಾಗಿ ಟೀಕಿಸುವುದು, ಚದುರಂಗದ ಜೊತೆ ಅಡ್ಡಾಡುವುದು, ಗೆಳೆಯರ ನಡುವೆ ನಮ್ಮ ಬರವಣಿಗೆಗಳನ್ನು ನಿರ್ಮಮದಿಂದ ಪರೀಕ್ಷಿಸಿಕೊಳ್ಳುವುದು – ಹೀಗೆ ನನ್ನ ಸಾಹಿತ್ಯ ಜೀವನ ಶುರುವಾಯಿತು.

ಹುರುಪಿನಲ್ಲಿ ಎಲ್ಲವನ್ನೂ ಕೊಂಚ ಅಗೌರವದಿಂದ ನೋಡಬಲ್ಲ, ಸಂಕೋಚಗಳನ್ನು ಕಳಚಿಕೊಂಡ, ಹಿರಿಯರಿಗೆ ಹುಂಬತನವೆಂದು ತೋರುವ, ಆದರೆ ಇವತ್ತಿಗೂ ನನಗೆ ಬಹುಮುಖ್ಯವೆಂದು ಅನ್ನಿಸುವ ಕಾಫಿ ಹೌಸಿನಲ್ಲಿ ಕಳೆದ ಆ ಉತ್ಸಾಹದ, ಆತ್ಮೀಯ ಸಖ್ಯದ ಆ ದಿನಗಳಲ್ಲಿ ಪಾಶ್ಚಾತ್ಯ ಸಾಹಿತ್ಯ ಮಾದರಿಗಳ ಬಗ್ಗೆ ಇರಬೇಕಾದ್ದಕ್ಕಿಂತ ಹೆಚ್ಚಿನ ಆಧಾರವೂ,  ಕನ್ನಡ ಮತ್ತು ಸಂಸ್ಕೃತದ ಪ್ರಾಚೀನ ಕೃತಿಗಳ ಬಗ್ಗೆ ಕಡಿಮೆ ತಿಳುವಳಿಕೆಯಿಂದ ಹುಟ್ಟಿದ ಅನಾದರವೂ ಕೆಲಸ ಮಾಡಿರಬಹುದೆಂದು ಈಗೀಗ ನನಗೆ ತಿಳಿಯತೊಡಗಿದೆ.

ಆಗ ಸ್ಪಷ್ಟವಾಗದ ಮುಖ್ಯ ಸಂಗತಿಯೊಂದಿದೆ. ಪಾಶ್ಚಾತ್ಯರ ಜ್ಞಾನ ಪರಂಪರೆಯಲ್ಲಿ ಹುಟ್ಟುವ ಆದರ ನಮಗೆ ತಿಳಿಯದಂತೆಯೇ ಅದಕ್ಕೆ ಸಮಾನವಾದದ್ದನ್ನು ನಮ್ಮ ವೈದಿಕಪರಂಪರೆಯಲ್ಲಿ ಕಾಣುವಂತೆ ಮಾಡುತ್ತದೆ. ಏಕಕಾಲದಲ್ಲಿ ಇಂಗ್ಲಿಷ್‌ವಾದಿಯೂ, ಪುನರುತ್ಥಾನವಾದಿಯೂ, ಸಂಸ್ಕೃತವಾದಿಯೂ ಆಗಿಬಿಡುವುದು ಸಾಧ್ಯವಿದ್ದಾಗ ಕುವೆಂಪು, ಬಿ.ಎಂ.ಶ್ರೀ., ಕಾರಂತ, ಮಾಸ್ತಿ-ಎಲ್ಲರೂ ಕನ್ನಡದ ಪರ ನಿಂತರು. ಪಾಶ್ಚಾತ್ಯ ನವ್ಯಕ್ಕೆ ಮನಸೋತ ಗೋಪಾಲಕೃಷ್ಣ ಅಡಿಗರೂ ಪಂಪನಿಗೆ ಋಣಿಯಾಗಿ ಬರೆದರು; ವರ್ತಮಾನದ ಮಾತಿನಲ್ಲಿ ಭೂತವನ್ನು ಅಗೆದು ಶೋಧಿಸಿದರು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು/ಪುರುಷೋತ್ತಮನ ಆ ಅಂಥ ರೂಪುರೇಖೆ?’ ಎಂದು ವ್ರತಶೀಲ ತಪಸ್ಸಿನಲ್ಲಿ ನಿಷ್ಠೆ ಉಳ್ಳವರಾದರು. ಇದೇ ಕಾಲಘಟ್ಟದಲ್ಲಿ ಕೆ.ಎಸ್. ನರಸಿಂಹಸ್ವಾಮಿಗಳಾದರೋ ಅಗೆದು ಶೋಧಿಸಬೇಕಾದ ಗಣಿಯೆಂದು ಭೂಮಿಯನ್ನು ನೋಡದೆ, ಹದವಾದ ಮಳೆ ಬಿದ್ದಾಗ, ಹದವಾಗಿ ಉಳಬೇಕಾದ ಬೇಸಾಯಗಾರನ ಕಾಯಕದ ಕುಂಕುಮ ಭೂಮಿಯೆಂದು ಕಂಡರು. ಮಹತ್ವಪೂರ್ಣವಾದ ವಿಚಾರದ ವಾಗ್ವಾದವೊಂದು ರೂಪಕವಾಗಿ ಕನ್ನಡದಲ್ಲಿ ಹೀಗೆ ಮೂಡಿತು.

ಈ ಎಲ್ಲರೂ ಆಧುನಿಕರಾಗಿ ಇಂಗ್ಲಿಷಿನಿಂದ ಪಡೆಯಬೇಕಾದದ್ದನ್ನು ಪಡೆದು, ಕನ್ನಡದ ಹಳೆಯದರಲ್ಲಿ ಗ್ರಾಹ್ಯವಾದ್ದನ್ನು ಇಂಗ್ಲಿಷಿನ ಕಣ್ಣಿನಿಂದ (?) ನೋಡಿ ಮೆಚ್ಚಿ ಬರೆದರು. ಇಂಗ್ಲಿಷನ್ನು ಕನ್ನಡದ ಕಣ್ಣಿನಿಂದ ನೋಡಿ ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡರು. ಯಾವತ್ತೂ ಅವರು ಜನಪರ ನಿಲುವನ್ನು ಬಿಟ್ಟುಕೊಡುವ ಇವತ್ತು ನಾವು ಎಲ್ಲೆಲ್ಲೂ ಕಾಣುವ – ‘ಎಲೀಟಿಸ್ಟ್’ ಚಿಂತಕರಾಗಿರಲಿಲ್ಲ.

ಆದರೂ ಆಧುನಿಕ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಕೊಂದುಬಿಡುವ ಸಾಧ್ಯತೆ ಇರುವ ಈ ದಿನಗಳಲ್ಲಿ ಗಮನಿಸಲೇಬೇಕಾದ ಒಂದು ವಿಷಯವಿದೆ. ನಮಗೆ ಬಿ.ಎಂ.ಶ್ರೀ., ಕುವೆಂಪು, ಕಾರಂತರಿಗಿದ್ದ ಮುಗ್ಧವಾದ ಇಂಗ್ಲಿಷಿನಿಂದ ಆಧುನಿಕತೆಯನ್ನು ಪಡೆಯಬಹುದೆಂಬ ಶ್ರದ್ಧೆ ಸಾಧ್ಯವಿಲ್ಲ. ಅಡಿಗರೂ ಆರ್ಷಮೂಲದ ಹಲವು ಪುರಾಣಗಳನ್ನೂ ವಿಚಾರಗಳನ್ನೂ ಆಧುನಿಕಕ್ಕೆ ಅನ್ವಯಿಸುವ ಉಜ್ವಲ ಕ್ರಿಯೇಟಿವಿಟಿಯ ತಮ್ಮ ಆ ದಿನಗಳಲ್ಲಿ, ಪಶ್ಚಿಮ ಪ್ರಿಯರೇ. ಅವರ ಹಿಂದಿನ ಬಿ.ಎಂ.ಶ್ರೀ., ಎಮ್.ಎಸ್. ಪುಟ್ಟಣ್ಣರಂತೆ ಕಂದಾಚಾರಗಳಿಗೆ ವಿರೋಧವಾಗಿ ಚಿಂತಿಸುವ ಹೊತ್ತಿನಲ್ಲಿ ಕುವೆಂಪು ಕಾರಂತರೂ ಪಾಶ್ಚಿಮಾತ್ಯ ವಿಚಾರಗಳು ಹುಟ್ಟಿಸುವ ಆಧುನಿಕತೆಯ ಪರವಾಗಿ ಇದ್ದವರೇ. ಇವರಲ್ಲಿ ಈ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯ ವ್ಯತ್ಯಾಸಗಳಿವೆ-ನಿಜ. ಆದರೆಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಮಾತ್ರ ಅವರು ಪಾಶ್ಚಿಮಾತ್ಯ ವಿಚಾರಗಳಿಗೆ ಮನಸೋತವರು ಎಂಬುದಲ್ಲ. ಕನ್ನಡದ ಜೀರ್ಣಾಗ್ನಿಯಲ್ಲಿ ಪಶ್ಚಿಮದ ಅತ್ಯುತ್ತಮವನ್ನು ಕನ್ನಡಿಸಿಕೊಂಡವರು ಎಂಬುದು. ನಾನು ಪ್ರಾರಂಭದಲ್ಲಿ ಸೂಚಿಸಿದ ಅನ್ಯದ ಜೊತೆಗಿನ ಅನುಸಂಧಾನ ಕ್ರಮಗಳನ್ನು ಕನ್ನಡಕ್ಕೆ ಕಲಿಸಿದ ಪರಮಾಚಾರ್ಯರು ಇವರು.

ಆ ದಿನಗಳಲ್ಲಿ ನಮ್ಮ ಕನ್ನಡದ ಪ್ರೀತಿಯಿಂದಾಗಿ ನಮಗೂ ಪುಣ್ಯಕ್ಕೆ ಎಲಿಯಟ್ ಕೇವಲ ಮಾದರಿಯಾಗಿಯೋ, ಆದರ್ಶವಾಗಿಯೋ ಮಾತ್ರ ಉಳಿಯಲಿಲ್ಲ. ಅಡಿಗರ  ಕೆಲವು ಕವನಗಳು ನನ್ನ ಪಾಲಿಗೆ ಎಲಿಯಟ್‌ನ ಕಾವ್ಯಕ್ಕಿಂತ ಭಿನ್ನವಾಗಿ, ಹೆಚ್ಚು ನಮ್ಮ ಪರಿಸರಕ್ಕೆ ಹತ್ತಿರವಾಗಿ ಅರ್ಥಪೂರ್ಣವಾಗಿ ಕಂಡವು. ವೈಚಾರಿಕ ಶಿಸ್ತಿನ ದಾಮೋದರರಾವ್ ಮತ್ತು ಜಿ.ಎಚ್.ನಾಯಕರ ಜೊತೆಯೂ, ತೀಕ್ಷ್ಣವಾದ ಒಳನೋಟಗಳ ರಾಜೀವ ತಾರಾನಾಥರ ಜೊತೆಯೂ ಈ  ಬಗ್ಗೆ ಮಾಡುತ್ತಿದ್ದ ಚರ್ಚೆಗಳು ನೆನಪಾಗುತ್ತವೆ. ಅಡಿಗರ ರಾಜಕೀಯ ನಿಲುವುಗಳನ್ನು ಟೀಕಿಸುತ್ತಲೇ, ತನ್ನ ನಿಲುವನ್ನು ಶೋಧಕ್ಕೆ ಒಡ್ಡುವ ಅವರ ಕಾವ್ಯ ಪ್ರತಿಭೆಯನ್ನು ನಾನು ಇಂದಿಗೂ ಮೆಚ್ಚಿಕೊಂಡಿದ್ದೇನೆ. ನನಗೆ ಬೇಂದ್ರೆ ಇಂಗ್ಲೆಂಡಿನ ಎಲ್ಲ ರೊಮ್ಯಾಂಟಿಕ್ ಕವಿಗಳಿಗಿಂತ ಹೆಚ್ಚು ಸಹಜರಾಗಿ, ದೊಡ್ಡವರಾಗಿ, ಗಹನರಾಗಿ  ಕಾಣತೊಡಗಿದ್ದರು.

ವಿಶ್ವದ ಕವಿವರೇಣ್ಯರನ್ನು ನಿತ್ಯದ ಅನುಭವದಲ್ಲಿ ಒರೆಹಚ್ಚಿ ಮೆಚ್ಚುತ್ತ, ಲ್ಯಾನ್ಸ್‌ಡೌನ್ ಬಿಲ್ಡಿಂಗಿನ ಮೇಲೆ ಅಂಗಡಿಯ ಪ್ರಸಿದ್ಧ ಹುರಿಗಾಳನ್ನು ಮೆಲ್ಲುತ್ತ, ಮೈಸೂರಿನ ವಾಹನವಿರಳ ಪ್ರಶಾಂತ ಬೀದಿಗಳಲ್ಲಿ ನಾವು ಅಡ್ಡಾಡಿದ್ದೆವು. ಆಗ ನನ್ನ ಜೊತೆ ನಡೆಯುತ್ತಿದ್ದ ಬಹು ಕಡಿಮೆ ಮಾತಿನ ಅರ್ಥಶಾಸ್ತ್ರಜ್ಞ – ಹೆಚ್.ಎಸ್.ಕೆ., ಬೀದಿನಾಯಿಗಳನ್ನು ಅಟ್ಟುತ್ತ ಓಡಾಡುವ ವಿಶ್ವನಾಥ ಮಿರ್ಲೆ, ಮುಳ್ಳು ಹಂದಿಯೊಂದನ್ನು ಮುದ್ದಿನಿಂದ ಸಾಕಿಕೊಂಡಿದ್ದ ಕಥೆಗಾರ ಸದಾಶಿವ ನೆನಪಾಗುತ್ತಾರೆ.

ಶರ್ಮರ ‘ಏಳು ಸುತ್ತಿನ ಕೋಟೆ’ ಪ್ರಕಟಗೊಂಡಾಗ ನನ್ನಲ್ಲಿ ಅದರ ಯುವ ಸಂವೇದನೆ ಹುಟ್ಟಿಸಿದ ಉತ್ಸಾಹವನ್ನು ಈಗಲೂ ನೆನೆಯಬಲ್ಲೆ; ಅಡಿಗರ ಯಾವುದೋ ಒಂದು ಮಾತು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಅಲೆಗಳನ್ನು ಈಗಲೂ ಗುರುತಿಸಿಕೊಳ್ಳಬಲ್ಲೆ – ನನ್ನ ಬರಹಗಳಲ್ಲಿ.

ಸರಿಸುಮಾರು ಆ ಕಾಲದಲ್ಲೇ ಹಿರಿಯರಾದ ನಿರಂಜನರ ಸಖ್ಯ ನನಗೆ ದೊರೆಯಿತು. ಅವರು ಎಳೆಯರಲ್ಲಿ ತೋರುತ್ತಿದ್ದ ಪ್ರೀತಿ ನನ್ನ ಬೆಳವಣಿಗೆಗೆ ಮುಖ್ಯವೆನ್ನಿಸಿದ್ದರೂ, ಕ್ರಮೇಣ ನಮ್ಮ ನಡುವೆ ಬೆಳೆಯತೊಡಗಿದ ಅಭಿಪ್ರಾಯ ಭೇದಕ್ಕೆ ಕಾರಣ-ಕೇವಲ ವೈಯಕ್ತಿಕವಾದುದಾಗಿರಲಿಲ್ಲ. ಸ್ಟಾಲಿನ್ ಸತ್ತಮೇಲೆ ಬಹಿರಂಗಗೊಂಡ ಸೋವಿಯತ್ ಒಕ್ಕೂಟದ ಸತ್ಯಗಳೂ, ಮಿಥ್ಯೆಗಳೂ, ಪ್ರಗತಿಶೀಲ ಚಳವಳಿಯಲ್ಲಿ ಒಬ್ಬರಾಗಿದ್ದ ಗೋಪಾಲಕೃಷ್ಣ ಅಡಿಗರ ತೀವ್ರವಾದ ಭ್ರಮಿನಿರಸನವೂ, ನನ್ನ ಮೇಲೆ ಬೆಳೆಯುತ್ತ ಹೋದ ಜೆಪಿ ಮತ್ತು ಲೋಹಿಯಾರ ಪ್ರಭಾವವೂ ಜಿಡ್ಡು ಕೃಷ್ಣಮೂರ್ತಿಗಳಿಂದ ನಾನು ಪಡೆದ ಪ್ರೇರಣೆಗಳೂ, ಭಾರತಕ್ಕೆ ಸಹಜವಾದ ಸಮಾಜವಾದವನ್ನು ಹುಡುಕಿಕೊಳ್ಳಬೇಕೆಂಬ ಹಠವೂ ಇದರಲ್ಲಿ ಅಡಗಿತ್ತು.

ವಿದೇಶಿ ಕನ್ನಡಿಯಲ್ಲಿ ಕಂಡುಕೊಂಡ ದೇಶಿ, ದೇಶೀಯ ಕನ್ನಡಿಯಲ್ಲಿ ಗುರುತಿಸಿಕೊಂಡ ವಿದೇಶಿ, ಕನ್ನಡ ಸದ್ಯದಲ್ಲಿ ಮರುಹುಟ್ಟು ಪಡೆದು, ಅವಸ್ಥಾಂತರಗೊಂಡು ಇನ್ನೊಂದು ಬೇರೆಯೇ ಕೃತಿಯಾಗಿಬಿಡುವ ಕಾವ್ಯ ಕ್ರಿಯೆಯ ದಿವ್ಯ ಕನ್ನಡಕ್ಕೇನೂ ಹೊಸದಲ್ಲ. ನವ್ಯ ಹುಟ್ಟಿದ್ದೂ ಕನ್ನಡದಲ್ಲಿ ಹೀಗೆಯೇ. ನಮ್ಮನ್ನು ಆವರಿಸಿದ ಪಾಶ್ಚಿಮಾತ್ಯ ಆಧುನಿಕತೆಯನ್ನು ನಾವು ಜೀರ್ಣಿಸಿಕೊಳ್ಳುವ, ಗೆಲ್ಲುವ ಬಗೆ ನಮ್ಮ ಎಲ್ಲ ಚಳವಳಿಗಳಲ್ಲೂ ಇದೆ. ನವ್ಯ ಚಳವಳಿಯ ಬಗ್ಗೆ ನಡೆದ ಎಲ್ಲ ಚರ್ಚೆಯಲ್ಲೂ ಸ್ವಾತಂತ್ರ್ಯೋತ್ತರ ರಾಜಕಾರಣದ ಭ್ರಮನಿರಸನದ ಒಂದು ರಾಜಕೀಯ ಆಯಾಮವೂ, ಕಾಮಜೀವನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಸಂಕೋಚಗಳನ್ನು ಮೀರಿ ಪ್ರಾಮಾಣಿಕವಾಗಬೇಕೆಂಬ ಇಚ್ಛೆಯೂ, ಅನುಭವ ಪ್ರಾಮಾಣಿಕತೆಗೆ ಗ್ರಂಥಸ್ಥವಲ್ಲದ ಭಾಷೆಯೇ ಯಾಕೆ ಅಗತ್ಯವೆಂಬ ಪ್ರಶ್ನೆಯೂ (ನೋಡಿ: ಅಡಿಗರ ‘ಮಣ್ಣಿನ ವಾಸನೆ’) ಅಡಗಿರುತ್ತಿತ್ತು. ಗುರು ಅರವಿಂದರಿಗಿಂತ ಅವರ ಶಿಷ್ಯರಾದ ಬೇಂದ್ರೆಯವರ ಮಣ್ಣಿನ ವಾಸನೆಯ ಪದ್ಯಗಳೂ, ಕುವೆಂಪುರವರ ಕಾದಂಬರಿಯ ದಟ್ಟತೆಯೂ ನಮಗೆ ಮುಖ್ಯವೆನ್ನಿಸಿತ್ತು.

ಈ ನಮ್ಮ ಲೋಕದಲ್ಲಿ ಲಂಕೇಶರು ಮತ್ತು ತೇಜಸ್ವಿ ಕಾಫಿಹೌಸ್ ಗೆಳೆಯರ ನಡುವಿನ ಸಾಹಿತ್ಯದ ಚರ್ಚೆಗಳಿಗೆ ತಂದ ಹೊಸ ಆಯಾಮವೂ, ಹೊಸ ತೀವ್ರತೆಯೂ, ಹೊಳಹುಗಳೂ ನೆನಪಾಗುತ್ತವೆ. ಯೂರೋಪಿನ ಸಾಹಿತ್ಯದ ಸೋಂಕಿಲ್ಲದಂತೆ ಅಚ್ಚಕನ್ನಡದ, ಅನನ್ಯ ಪ್ರತಿಭೆಯ ಕಂಬಾರರು ನಮ್ಮ ಸಾಹಿತ್ಯಲೋಕಕ್ಕೆ ಪ್ರವೇಶಿಸಿದ್ದು ಇನ್ನೊಂದು ಮುಖ್ಯ ಘಟನೆ. ಹೊಚ್ಚ ಹೊಸ ಅನುಭವದಿಂದ ನವ್ಯದ ದಿಕ್ಕನ್ನು ಬದಲಿಸುವಂತೆ ನಮ್ಮ ಲೋಕವನ್ನು ಕೆಲವು ವರ್ಷಗಳ ನಂತರ ಬೆಳಗಿದವರೆಂದರೆ ದೇವನೂರು ಮಹಾದೇವರು. ‘ಹೊಲೆಮಾದಿಗರ ಹಾಡಿ’ನ ಕವಿ ಸಿದ್ಧಲಿಂಗಯ್ಯನವರು ಕಾವ್ಯಕ್ಕೆ ನವ್ಯದಲ್ಲಿ ಕಾಣಸಿಗದ ತುಂಬು ಕಂಠದ ಧಾರಾಳತನವನ್ನು ತಂದರು.

ಪುರಾಣ, ಜಾನಪದ, ಚರಿತ್ರೆಗಳನ್ನು ಸಮಕಾಲೀನ ಅನುಭವಗಳಿಗೆ ರೂಪಕವಾಗಿಸುವ ಪ್ರತಿಭೆಯುಳ್ಳ ನಾಟಕಕಾರ ಗಿರೀಶ್‌ಕಾರ್ನಾಡ್, ಕವಿತೆಯ ಸ್ವರೂಪವನ್ನೇ ಬದಲಿಸಿದ ರಾಮಾನುಜನ್ ಮತ್ತು ತಿರುಮಲೇಶ್, ಧ್ಯಾನಶೀಲ ಪ್ರತಿಭೆಯ ಗಂಗಾಧರ ಚಿತ್ತಾಲ, ನಗರ ಪ್ರಜ್ಞೆಯ ಪ್ರಯೋಗಶೀಲ ಆಧುನಿಕ ಶಾಂತಿನಾಥ ದೇಸಾಯಿ, ಪಶ್ಚಿಮಮುಖಿಯಾದ ‘ಆಧುನಿಕ’ ನವ್ಯದ ಸೃಜನಶೀಲ ವೈರಿ ಮೊಕಾಶಿ ಪುಣೇಕರ್, ದಟ್ಟವಾದ ಅನುಭವದ ದೊಡ್ಡ ಬೀಸಿನ ಕಥೆಗಾರ ಯಶವಂತ ಚಿತ್ತಾಲ, ಕಾಡುವಂತೆ ಕನ್ನಡದಲ್ಲಿ ಗೀತೆಗಳನ್ನು ರಚಿಸಿದ, ಚಿಂತನಶೀಲ ಪದ್ಯಗಳನ್ನೂ ಬರೆದ ನಿಸಾರ್ ಅಹಮದ್, ಪಕ್ವವಾದ ವಿಮರ್ಶಾ ಪ್ರಜ್ಞೆಯಿಂದ ಹಳೆಯದನ್ನೂ ಹೊಸದನ್ನೂ ತೂಗಿ ಬರೆಯಬಲ್ಲ ಗಿರಡ್ಡಿ ಗೋವಿಂದರಾಜ್, ಭಾವಗೀತೆಯ ಮೃದುವನ್ನೂ ಕಟುವಾದ ವ್ಯಂಗ್ಯವನ್ನೂ ಬೆಸೆಯುವ ನಾಟಕಕಾರ ಮತ್ತು ಕವಿ ಚಂದ್ರಶೇಖರ ಪಾಟೀಲ್, ಕನ್ನಡ ಕಾವ್ಯದ ಲಯದಲ್ಲಿ ವಿಶೇಷವಾದ ಆಸಕ್ತಿಯಿದ್ದ ಜಿ.ಎಸ್. ಸಿದ್ಧಲಿಂಗಯ್ಯ, ವಿಮರ್ಶೆಯಲ್ಲಿ ಹೊಸ ಅಲೆಯೆಬ್ಬಿಸಿದ ಕೀರ್ತಿನಾಥ ಕುರ್ತಕೋಟಿ, ಒಂದು ಕೃತಿಯ ಶಿಲ್ಪವನ್ನೂ ಅದರ ವಿವರಗಳನ್ನೂ ಒಟ್ಟಾಗಿ ಗ್ರಹಿಸಬಲ್ಲವರಾಗಿದ್ದ ಸರೋದ್ ವಾದಕ ರಾಜೀವ ತಾರಾನಾಥ, ಲೀವಿಸ್‌ನ ನಿಷ್ಠೆ ನಿಷ್ಠುರಗಳನ್ನು ಮೈಗೂಡಿಸಿಕೊಂಡ ಎಂ.ಜಿ. ಕೃಷ್ಣಮೂರ್ತಿ, ನಿರಂತರ ಆತ್ಮ ಶೋಧದ ಕಥೆಗಳನ್ನು ರಚಿಸಿದ ಟಿ.ಜಿ.ರಾಘವ, ‘ಗ್ರಾಮಾಯಣ’ದ ರಾವ್ ಬಹದ್ದೂರರ ಬರವಣಿಗೆಗೂ, ಕುವೆಂಪುಗೂ, ಎಕ್ಕುಂಡಿಯವರ ಭಾವ ತೀವ್ರತೆಗೂ ಒಲಿದ ಆಲನಹಳ್ಳಿ ಕೃಷ್ಣ- ಈ ಎಲ್ಲರೂ ಬರೆಯುತ್ತಿದ್ದ ಕಲದ ವೈಶಿಷ್ಟ್ಯವೆಂದರೆ: ಒಬ್ಬನ ಮಾತು ಒಬ್ಬನ ಮಾತಾಗಿ ಮಾತ್ರ ಉಳಿಯದೆ, ಒಬ್ಬರಿಗೊಬ್ಬರು ಒದಗುವ ಕಾಲವಾಗಿ ನಮಗದು ತೋರಿತ್ತು ಎಂಬುದು. ಇವರಲ್ಲಿ ನನ್ನ ಆತ್ಮೀಯರಾದವರು – ನನಗೆ ತಿಳಿದಂತೆ- ವ್ಯವಸ್ಥೆಯ ಕಡೆ ಅದರ ಒಪ್ಪಿಗೆಗಾಗಿಯಾಗಲೀ, ಮೆಚ್ಚುಗೆಗಾಗಲೀ ಮುಖ ತಿರುಗಿಸಿದವರಲ್ಲ. ಆ ಬೆಳವಣಿಗೆಯ ಕಾಲದಲ್ಲಿ (ಬೇಕಾದರೆ ಇದನ್ನು ಬಡಿದಾಟದ ಕಾಲದಲ್ಲಿ ಎನ್ನಿ) ಮೇಲಿನ ಹಲವರು ಒಂದು ಪಂಥಕ್ಕೆ ಗಂಟುಬಿದ್ದವರಾಗಿರಲಿಲ್ಲ. ನನ್ನನ್ನು ‘ನವ್ಯ ಕಥೆಗಾರ’ನೆಂದು ಯಾರಾದರೂ ಕರೆದರೆ ಗೊಂದಲಕ್ಕೊಳಗಾಗುತ್ತಿದ್ದೆ.

ನನ್ನನ್ನು ಮುಂದೆ ಎಂಬತ್ತರ ದಶಕದಲ್ಲಿ ಬೆಳೆಸಿದ್ದು ‘ರುಜುವಾತು’ ಪತ್ರಿಕೆ ಹುಟ್ಟಿಸಿದ ಅಗತ್ಯಗಳು; ಪತ್ರಿಕೆಯಿಂದಾಗಿ ನಾನು ಪಡೆದ ಜೊತೆಗಾರರು. ಒಬ್ಬರನ್ನೊಬ್ಬರು ಬೆಳೆಸುವಂತೆ ಕೆಲಕಾಲ ಈ ಪತ್ರಿಕೆ ನಡೆಯಿತು. ತಮ್ಮ ನೆನಪಿನಲ್ಲಿ ಇಡೀ ಕನ್ನಡ ಕಾವ್ಯದ ಪರಂಪರೆಯನ್ನು ಹೊತ್ತು ತಿರುಗುವ ಕಿ.ರಂ. ನಾಗರಾಜರು ಆ ದಿನಗಳಲ್ಲಿ ನನ್ನ ಕನ್ನಡ ಕಾವ್ಯದ ಅರಿವನ್ನು ಹಿಗ್ಗಿಸಿದರು. ಕೆ. ಸತ್ಯನಾರಾಯಣರು ಮುಂದೆ ನನ್ನ ಗೆಳೆಯರಾಗಿಬಿಟ್ಟ ಅಶೀಶ್ ನಂದಿಯನ್ನು ಪರಿಚಯಿಸಿ ಓದಿಸಿದರು; ನನ್ನ ಬರವಣಿಗೆಯ ಪರಿಧಿಯನ್ನು ತಮ್ಮ ವೈಚಾರಿಕತೆಯಿಂದಲೂ, ಅನುಮಾನಗಳಿಂದಲೂ ಹಿಗ್ಗಿಸಿದರು. ಸರ್ವಮಂಗಳ, ಮೀನಾ ಮೈಸೂರು, ಪಟ್ಟಾಭಿರಾಮ ಸೋಮಯಾಜಿ ಸಾಹಿತ್ಯ ಚರ್ಚೆಯ ಜೀವಂತ ವಲಯವನ್ನು ಮೈಸೂರಲ್ಲಿ ಸೃಷ್ಟಿಸಿದರು.

ಈಗಲೂ ಹಿಂದಿನ ನನ್ನ ವಿದ್ಯಾರ್ಥಿಗಳ ಜೊತೆಗೆ ಗಂಟೆಗಟ್ಟಲೆ ಹರಟುತ್ತ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುತ್ತಿರುತ್ತೇನೆ. ಬ್ಲೇಕ್ ತನ್ನ ಬರವಣಿಗೆಯ ಬಗ್ಗೆ ಹೇಳಿದ ಮಾತೊಂದಿದೆ: ‘ಇದು ನನ್ನದು; ಆದರೆ ನನ್ನದು ಮಾತ್ರವಲ್ಲ.’ ನನ್ನಲ್ಲಿ ಹರಳುಗಟ್ಟುವ ಕೃತಿ ಅಪರೂಪವಾಗಿ ಹುಟ್ಟಿ ಸಾರ್ಥಕ ಭಾವನೆ ತಂದಾಗ ಬ್ಲೇಕ್ ಮಾತು ನೆನಪಾಗುತ್ತದೆ. ಅದೆಷ್ಟು ಓದಿ, ಓಡಾಡಿ, ನೋಡಿ, ಮಾತನಾಡಿ, ಮರೆತು, ನೆನೆದು, ಸುಮ್ಮನಿದ್ದು, ಒಣಗಿ, ಚಿಗುರಿ ಕೃತಿಯೊಂದು ಹುಟ್ಟುತ್ತದೆ-ಇದು ವಿಚಿತ್ರವಾದದ್ದು. ವಿನಯದಲ್ಲಿ ಕಾದು, ಬಂದಾಗ ಬೆರಗಿನಲ್ಲಿ ಸ್ವೀಕಾರಮಾಡಬಲ್ಲಂತೆ ನಮ್ಮ ಇಂದ್ರಿಯಗಳನ್ನು ತೆರೆದಿಟ್ಟುಕೊಂಡಿರುವುದೇ ಸೃಜನಶೀಲತೆಯ ಹಿಂದಿರುವ ನೈತಿಕತೆ.

ಕನ್ನಡದ ಜೀರ್ಣಾಗ್ನಿ ಹಿಂದೆ ಸಂಸ್ಕೃತವನ್ನೂ, ನಮ್ಮ ಕಾಲದಲ್ಲಿ ಯೂರೋಪನ್ನೂ ಮೈಗೂಡಿಸಿಕೊಂಡ ಪರಿಯನ್ನು ಕಥಿಸಲು ಈ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಎಷ್ಟೋ ಮುಖ್ಯ ಹೆಸರುಗಳು ಇಲ್ಲಿ ಕೈಬಿಟ್ಟು ಹೋಗಿರಬಹುದು. ಮೈಸೂರಿನ ಕಾಫಿಹೌಸಿನಲ್ಲಿ, ಬೆಂಗಳೂರಿನ ವೈಎನ್‌ಕೆ ಜೊತೆಗಿನ ಚುರುಕಾದ ಅರ್ಧರ್ಧ ಮಾತುಗಳೇ ಸಾಕಾಗುತ್ತಿದ್ದ ಸಂವಾದಗಳಲ್ಲಿ, ಧಾರವಾಡದ ಮನೋಹರ ಗ್ರಂಥಮಾಲೆಯ ಮಹಡಿಮೇಲೆ ಬೇಂದ್ರೆಯವರು ತಮ್ಮ ವಿಲಕ್ಷಣ ವೈಚಾರಿಕತೆಯ ಅಕ್ಷಯ ಬತ್ತಳಿಕೆಯನ್ನು ಬಿಚ್ಚುತ್ತಿರುವಗ, ಜಿ.ಬಿ. ಜೋಷಿಯವರು ಕಣ್ಣಮುಚ್ಚಿ ಆಲಿಸುತ್ತಿರುವಾಗ, ಡಾ. ಅಮೂರರು ಬೇಂದ್ರೆಯವರನ್ನು ನಮ್ಮ ಹೊಸ ವೈಚಾರಿಕತೆಯ ಯುಗಕ್ಕೆ ಚುರುಕುಗೊಳಿಸುವಂತೆ ಪ್ರಶ್ನಿಸಿದಾಗ, ಶಾಂತಿನಾಥ ದೇಸಾಯಿಯವರ ‘ಮುಕ್ತಿ’ಯ ನವ್ಯತೆಗೆ ಅತ್ಯುತ್ಸಾಹದಿಂದ ನಾವು ಎದುರಾದಾಗ ಪಡೆದುಕೊಂಡ ಹೊಸ ಚಿಂತನೆಯ ಆಯಾಮಗಳನ್ನು ಇಲ್ಲಿ ಕೃತಜ್ಞಭಾವನೆಯಲ್ಲಿ ಸ್ಮರಿಸುತ್ತಿದ್ದೇನೆ…

ಒಂದು ಕಾಲವನ್ನು ಅದರ ಎಲ್ಲ ವಿವರಗಳಲ್ಲೂ ದಾಖಲಿಸುವ ಉದ್ದೇಶದ ಕಥನವೆಂದು ಇದನ್ನು ತಿಳಿಯಬಾರದು. ಇದು ಒಬ್ಬ ಲೇಖಕನ ಅನುಭವದ ಕಥನ ಮಾತ್ರ. ಕನ್ನಡವನ್ನು ವಿಸ್ತರಿಸಬೇಕೆಂಬ ಭರದಲ್ಲಿ ಅದನ್ನು ಆಧುನಿಕಗೊಳಿಸುವ ನನ್ನಂತಹ ಕೆಲವರ ಪ್ರಯತ್ನದ ಸಂದರ್ಭದಲ್ಲೆ ಐರೋಪ್ಯವಾದ ಆಧುನಿಕಕ್ಕೆ ಹೊರತಾದ್ದು, ಮೀರಿದ್ದು, ಕನ್ನಡದ ದೇಸಿಯಿಂದ ಮಾತ್ರ ಹುಟ್ಟಬಹುದಾದಂತದ್ದು ಹೇಗೆ ಸೃಷ್ಟಿಯಾಯಿತೆಂದು ತೋರಿಸಲು ವಿಭಿನ್ನ ಪ್ರತಿಭೆಯ ಲೇಖಕರನ್ನು ಇಲ್ಲಿ ಹೆಸರಿಸಿದ್ದೇನೆ. ಈ ಕಾಲದಲ್ಲೇ ಕುವೆಂಪು, ಕಾರಂತ, ಮಾಸ್ತಿ, ಶ್ರೀರಂಗರಂಥವರೂ ಸೃಜನಶೀಲರಾಗಿಯೇ ಉಳಿದಿದ್ದರು. ನಾವು ಅವರಿಂದ ಪ್ರಭಾವಿತರಾದಂತೆ, ಅವರೂ ನವ್ಯವನ್ನು ಟೀಕಿಸುತ್ತಲೇ ನವ್ಯದಿಂದ ಪ್ರಭಾವಿತರಾದರೆ? ನವ್ಯ ಕಾವ್ಯದ ಗುಣವನ್ನು ಗದ್ಯದಲ್ಲಿ ತಂದು ಕಥೆ ಕಾದಂಬರಿಗಳನ್ನು ಧ್ವನಿಪೂರ್ಣ ಮಾಡಬೇಕೆಂಬ ಪ್ರಯತ್ನ ಮುಂದೆ ಬಂಡಾಯ, ದಲಿತ, ಮಹಿಳಾ ಚಳವಳಿಗೂ ಹರಡಿ ನವೋದಯ ಕಾಲದಿಂದ ಈವರೆಗೆ ಬಿರುಕಿಲ್ಲದ ಕನ್ನಡ ಸಾಹಿತ್ಯ ರಚನೆಗೆ ಕಾರಣವಾದದ್ದನ್ನು ನಾವೀಗ ಕಾಣಬಹುದೆ? ಇವು ಮುಖ್ಯ ಪ್ರಶ್ನೆಗಳೆಂದು ನನಗನ್ನಿಸಿದೆ.

ಇಂಗ್ಲಿಷ್ ಬಾಷೆ ತಂದ ಆಧುನಿಕತೆ ಇಲ್ಲದ ಕಾಲದಲ್ಲಿ ನಾವೇನೂ ಬರ್ಬರರಾಗಿರಲಿಲ್ಲ ಎಂದು ಇವತ್ತು ಗಟ್ಟಿಯಾಗಿ ಹೇಳಬೇಕೆನ್ನುವಷ್ಟು ಆ ನವೋದಯ, ಅಥವಾ ನವ್ಯದ ದಿನಗಳಲ್ಲಿ ಅನ್ನಿಸದೇ ಇದ್ದರೂ ಕುವೆಂಪು, ಬೇಂದ್ರೆ, ಕಾರಂತ, ಅಡಿಗ-ಈ ಎಲ್ಲರಲ್ಲೂ ಕನ್ನಡ ಸಾಹಿತ್ಯದ ಇಡೀ ಇತಿಹಾಸ ಜೀವಂತವಾಗಿ ಕೆಲಸ ಮಾಡುತ್ತಿತ್ತು ಎಂಬುದರ ಅರಿವು ನಮಗೆಲ್ಲರಿಗೂ ಇತ್ತೆಂದು ಹೇಳಬೇಕಾದದ್ದು ಅಗತ್ಯ. ಬೇಂದ್ರೆಯ ಸಂವೇದನೆಯಂತೂ ಎಲ್ಲದಕ್ಕೂ, ಶೆಲ್ಲಿಯಿಂದ ಹಿಡಿದು ಶರೀಫನವರೆಗೂ, ಸಂಸ್ಕೃತಕ್ಕೂ, ಜಾನಪದಕ್ಕೂ, ವೇದಕ್ಕೂ, ವಚನಕ್ಕು ಸ್ಪಂದಿಸಬಲ್ಲುದಾಗಿತ್ತು ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಬೇಂದ್ರೆ ಬಗ್ಗೆ ಮಾತಾಡುವಾಗ ಮಧುರಚೆನ್ನರನ್ನು ಮರೆಯುವುದು ಸಾಧ್ಯವೆ? ಮತೀಯವಾಗದ ಆಧ್ಯಾತ್ಮದ, ಕನ್ನಡದಲ್ಲಿ ಮಾತ್ರ ಕಾಣಿಸಿಕೊಳ್ಳಬಹುದಾದ ವಿಲಕ್ಷಣ ರೂಪಕ ಪ್ರತಿಭೆಯ ಮಾಂತ್ರಿಕ ಶಕ್ತಿಯ ಕವಿಗಳು ಇವರು.

ಹಾಗೆ ನೋಡಿದರೆ ಇದರಲ್ಲಿ ಅಚ್ಚರಿ ಏನಿದೆ? ಕರ್ನಾಟಕದ ಎಲ್ಲೆಲ್ಲೂ ಯಾರೋ ಕವಿ ಇದ್ದ, ಯಾರೋ ಲಿಂಗಾಯತ ಸಂತರೋ ದಾಸರೋ ಇದ್ದರು. ಈಗಲೂ ಬೆಂಗಳೂರಲ್ಲೋ ಮೈಸೂರಲ್ಲೋ ಪ್ರಸಿದ್ಧರಾದವರು ಯಾವುದೋ ಸಣ್ಣ ಊರಲ್ಲೊ, ಹಳ್ಳಿಯಲ್ಲೊ ಹುಟ್ಟಿ ಕನ್ನಡ ಮಾಧ್ಯಮದ ಶಾಲೆಯಲ್ಲಿ ಕಲಿತು ಓದಿ ಬೆಳೆದವರಲ್ಲವೆ? ಈ ಸರಳ ಸತ್ಯಗಳನ್ನು ನಾವು ವಿಮರ್ಶೆಯಲ್ಲಿ ಮರೆಯಬಾರದು. ಸಾಹಿತ್ಯ ಜೀವಂತವಾಗಿ ವರ್ತಮಾನಕಾಲಕ್ಕೆ ಸ್ಪಂದಿಸುವಾಗ ಒಬ್ಬ ಲೇಖಕ ಇನ್ನೊಬ್ಬನಿಗೆ ಪೂರಕವಾಗಿ ಒಟ್ಟೂ ಜೀವನದ ಸತ್ಯವನ್ನು ಕಟ್ಟಿಕೊಡುತ್ತಿರುತ್ತಾನೆ. ಈ ಸೋಜಿಗ ಎಲ್ಲ ಜೀವಂತ ಸಾಹಿತ್ಯ ಪರಂಪರೆಗೆ ಅನ್ವಯಿಸುವಂಥದು.

ಸಂಸ್ಕೃತಿಯ ಮತ್ತೊಂದು ಕೇಂದ್ರವಾದ ತುಮಕೂರು

ಭಾರತ ಬಹು ಕೇಂದ್ರಿತ ರಾಷ್ಟ್ರ; ದೆಹಲಿ ಮಾತ್ರ ಅದರ ಕೇಂದ್ರವಲ್ಲ, ಕರ್ನಾಟಕವೂ ಭಾರತದ ಸಂಸ್ಕೃತಿಯ ಇನ್ನೊಂದು ಕೇಂದ್ರ. ಹಾಗೆಯೇ ಜಗತ್ತಿನ ವಾಣಿಜ್ಯೋಧ್ಯಮಿಗಳ ಗಮನ ಸೆಳೆಯುತ್ತಿರುವ ಬೆಂಗಳೂರು ಮಾತ್ರ ಖಂಡಿತ ಕರ್ನಾಟಕದ ಏಕಮೇವ ಕೇಂದ್ರವಲ್ಲ. ಕರ್ನಾಟಕದ ಊರೂರೂ ಸಂಸ್ಕೃತಿಯ ಕೇಂದ್ರಗಳೇ. ಭಾರತಕ್ಕೆ ಗುಬ್ಬಿ ವೀರಣ್ಣನನ್ನು ಕೊಟ್ಟ ಗುಬ್ಬಿಯೂ ಭಾರತ ಸಂಸ್ಕೃತಿಯ ಕೇಂದ್ರವೇ. ಬೆಳ್ಳಾವೆ ನರಹರಿಶಾಸ್ತ್ರಿಗಳು, ನನ್ನ ಎಳೆಯ ವಯಸ್ಸಿನಲ್ಲಿ ಕಂಸನನ್ನು ಕಣ್ಣಿಗೆ ಕಟ್ಟಿಸುತ್ತಿದ್ದ ನಟಭಯಂಕರ ಗಂಗಾಧರರಾಯರು ತುಮಕೂರಿನವರಾಗಿದ್ದು ಇಡೀ ಕರ್ನಾಟಕದವರಾದವರು. ಶ್ರೀನಿವಾಸರಾಯರ ನಿಟ್ಟೂರೂ ಭಾರತದ ಕೇಂದ್ರವೇ. ಹಲವಾರು ವೀರಶೈವ ಚಿಂತಕರನ್ನೂ, ಸಾಹಿತಿಗಳನ್ನೂ ಹಿಂದಿನ ಕಾಲದಲ್ಲಿ ಪಡೆದಿದ್ದ ಈ ತುಮಕೂರು ಜಿಲ್ಲೆಯ ಗೂಳೂರಿನಲ್ಲಿ ಸಿದ್ದವೀರಣ್ಣ ಒಡೆಯರು ಸೃಷ್ಟಿಸಿದ ಘಟ್ಟಿವಾಳಯ್ಯ ಪ್ರಸಂಗ ಕನ್ನಡಸಾಹಿತ್ಯದಲ್ಲಿ ಲಭ್ಯವಿರುವ ಬಂಡಾಯದ ಮೊದಲ ದನಿಗಳಲ್ಲಿ ಒಂದು ಮತ್ತು ಅದು ವ್ಯವಸ್ಥೆಯನ್ನು ಕುರಿತ ಗಂಭೀರವಾದ ವಾಗ್ವಾದವಾಗಿದೆ. ವಚನಕಾರರನ್ನು ನೆನಪು ಮಾಡುವ, ಎಲ್ಲ ಜಾತಿಯ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾನವನ್ನೂ ವಿದ್ಯಾದಾನವನ್ನೂ ಮಾಡುತ್ತಿರುವ ಸಿದ್ಧಗಂಗೆಯ ಸ್ವಾಮಿಗಳು ತುಮಕೂರಿನವರು. ಕರ್ನಾಟಕದ ಎಲ್ಲ ಮಠಾಧೀಶರಿಗೂ ಇವರು ಆದರ್ಶಪ್ರಾಯರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಈ ಜಿಲ್ಲೆಯವರು. ಡಾ. ಚಿದಾನಂದ ಮೂರ್ತಿ, ಡಾ. ಶಿವರುದ್ರಪ್ಪರಂತಹ ಅಧ್ಯಾಪಕರನ್ನೂ ಲೇಖಕರನ್ನೂ ಶಿಷ್ಯರಾಗಿ ಪಡೆದಿದ್ದ ತೀ.ನಂ.ಶ್ರೀ ಅವರನ್ನು ತಮ್ಮವರೆಂದು ತುಮಕೂರು ಗೌರವಿಸುತ್ತದೆ.

ದಲಿತ ಜನಾಂಗದ ಸ್ವಾಭಿಮಾನದ ಹುಡುಕಾಟದಲ್ಲಿ ಹುಟ್ಟಿದ ಸಂಸ್ಥೆ ಇಲ್ಲಿನ ಸಿದ್ಧಾರ್ಥ ಸಂಸ್ಥೆ. ಈ ಸಭೆಯಲ್ಲೇ ತುಮಕೂರಿನಲ್ಲಿ ಅಧ್ಯಾಪಕರಾಗಿರುವ, ವಿದ್ಯಾರ್ಥಿಗಳಾಗಿರುವ, ಹಲವು ಉದ್ಯೋಗಗಳಲ್ಲಿ ನಿರತರಾದ ಎಷ್ಟೋ ಸಾಹಿತಿಗಳು, ಸಾಹಿತ್ಯದ ಗಂಭೀರ ಓದುಗರು ಇದ್ದಾರೆ. ನನಗೆ ವೈಯಕ್ತಿಕವಾಗಿ ಪ್ರಿಯರಾದ, ಸಾ.ಶಿ.ಮರುಳಯ್ಯ, ಸಣ್ಣಗುಡ್ಡಯ್ಯ, ವೀಚಿ, ದೊಡ್ಡರಂಗೇಗೌಡ, ಕೆ.ಬಿ.ಸಿದ್ಧಯ್ಯ, ಮುಂತಾದವರು ತುಮಕೂರಿನಲ್ಲಿದ್ದಾರೆ. ಈ ಎಲ್ಲರೂ ಪ್ರಾಯಶಃ ಕನ್ನಡ ಮಾಧ್ಯದಲ್ಲಿ ಓದಿದವರಿರಬೇಕೆಂಬ, ಕನ್ನಡದ ದೇಸಿಗೆಷ್ಟೋ ಅಷ್ಟೇ ಈಗ ಮಾರ್ಗವಾಗಿ ಹೋದ ಪಾಶ್ಚಾತ್ಯ ಸಾಹಿತ್ಯಕ್ಕೂ ತೆರೆದುಕೊಂಡವರು ಎಂಬ ನನ್ನ ಊಹೆ ತಪ್ಪಿರಲಾರದು.

ಆದರೂ ಯಾಕೆ ಆತಂಕ?

ಮುಂದೊಂದು ದಿನ ಎಲ್ಲ ಭಾರತೀಯ ಭಾಷೆಗಳೂ, ಕನ್ನಡವಂತೂ ಖಂಡಿತವಾಗಿ, ಬಹುಪಾಲು ವಿದ್ಯಾವಂತರಿಗೆ ಅಡುಗೆಮನೆಯ ಭಾಷೆಯಾಗಿ ಮಾತ್ರ ಬಳಕೆಯಾಗಿ ಉಳಿಯಬಹುದೆಂಬ ಆತಂಕ ನನ್ನಂಥವರಿಗೆ ಇದೆ. ವಿಪರ್ಯಾಸವೆಂದರೆ, ಭವಿಷ್ಯದಲ್ಲಿ ಹಾಗಾಗದಂತೆ ತಡೆಯಬಲ್ಲವರು ವಿದ್ಯಾವಂತರೂ, ಭಾಗ್ಯವಂತರೂ ಆದ ನಮ್ಮಂಥ ಜನರಲ್ಲ; ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕೆಂಬ ಆಸೆಯಿದ್ದರೂ ಓದಲಾರದ ಹಳ್ಳಿಯ ಹಿಂದುಳಿದವರು ಮತ್ತು ಬಡವರು. ಕನ್ನಡಮಾತಿನ ಕಸುವನ್ನು ಚರಿತ್ರೆಯುದ್ದಕ್ಕೂ ಉಳಿಸಿಕೊಂಡು ಬಂದವರು ಇವರೇ. ಬಡಜನರ ಬಗ್ಗೆ ಕನಿಕರ-ಪಡುವುದು ಮಾತ್ರ ಸಲ್ಲದು, ಗೌರವದಿಂದಲೂ, ಭರವಸೆಯಿಂದಲೂ ಅವರನ್ನು ನೋಡುವುದು ಅವಶ್ಯವೆನ್ನಲು ಈ ಮಾತುಗಳನ್ನು ಹೇಳಿ, ಮುಂದಿನ ಮಾತುಗಳನ್ನು ಸೇರಿಸುತ್ತೇನೆ.

ಮೌಖಿಕ ಪರಂಪರೆಯಲ್ಲಿ ತಮ್ಮ ಸಂಸ್ಕೃತಿಯ ಬೇರುಗಳನ್ನು ಪಡೆದ ಈ ಜನ ಈ ಅನಕ್ಷರಸ್ಥರಾಗಿ ಮಾತ್ರ ನಮಗೆ ಕಾಣುತ್ತಾರೆ. ಹಿಂದೊಂದು ಕಾಲದಲ್ಲಿ ವೇದಗಳನ್ನು ಬಾಯಿಪಾಠ ಮಾಡಿ ಉಳಿಸಿಕೊಂಡುಬಂದ ಅನೇಕ ಬ್ರಾಹ್ಮಣರು ಅನಕ್ಷರಸ್ಥರಾಗಿದ್ದರೆಂದೂ, ಬೌದ್ಧರು ಮಾತ್ರ ಅಕ್ಷರಸ್ಥರಾಗಿರುವುದು ಅವಶ್ಯವಾಗಿತ್ತೆಂದೂ ಕುರ್ತಕೋಟಿ ಹೇಳುತ್ತಾರೆ. (ನೋಡಿ : ಮಾತುಕತೆ ೬೦) ಹಿಂದಿನ ಕಾಲದಲ್ಲಿ ಅನಕ್ಷರಸ್ಥನಾಗಿರುವುದರಲ್ಲಿ ಅಪಾಯ ಇಲ್ಲದಿದ್ದಿರಬಹುದು. ಆದರೆ ಈ ಕಾಲದಲ್ಲಿ ಅನಕ್ಷರಸ್ಥ ನಿರ್ಗತಿಕ; ಎಲ್ಲರ ಶೋಷಣೆಗೆ ಒಳಗಾಗುವ ಬಡಪಾಯಿ.

ಚುನಾವಣೆಯಲ್ಲಿ ರಾಜಕಾರಣಿಗಳು ಓಲೈಸಿ ಮತ್ತೆ ಮರೆತುಬಿಡುವ, ಅವರು ಕುಡಿಸಿದ್ದನ್ನು ಯಥೇಚ್ಛ ಕುಡಿದು, ಆದರೆ ಎಲ್ಲರ ನಿರೀಕ್ಷೆ ಮೀರಿ ಕೆಲವೊಮ್ಮೆ ತಮ್ಮ ಇಚ್ಛೆಯಂತೆ ಓಟುಮಾಡಿ ಅಚ್ಚರಿಹುಟ್ಟಿಸುವ, ಭಾರತದ ಈ ಬಡಜನತೆ ಬಗ್ಗೆ ಇಷ್ಟು ಹೇಳಿಯೂ ಇನ್ನೊಂದು ಮಾತನ್ನು ಹೇಳದಿದ್ದರೆ ತಪ್ಪಾಗುತ್ತದೆ. ಅಮೆರಿಕದಲ್ಲಾಗಲೀ, ಮುಂದುವರೆದ ಯೂರೋಪಿನಲ್ಲಾಗಲೀ ಈ ದಿನಗಳಲ್ಲಿ ಅಲ್ಲಿನ ಬಡವರು ಇಲ್ಲಿನವರಂತೆ ತೀರಾ ಹೊಟ್ಟೆಗೇನೂ ಸಿಗದಂತೆ ಹಸಿದಿರಬೇಕಾದ್ದಿಲ್ಲ, ನಿಜ. ಆದರೆ ಆ ಶ್ರೀಮಂತ ದೇಶಗಳ ಬಡವರು ಬದುಕಿನಲ್ಲಿ ಯಾವ ಉಮೇದೂ ಇರದವರಂತೆ ಕಂಗೆಟ್ಟು ನಿರ್ವಿಣ್ಣರಾಗಿರುತ್ತಾರೆ. ಭಾರತದ ಬಡಜನತೆಯಾದರೋ ಸಿಟ್ಟಿಗೇಳುವ. ದಂಗೆಯೇಳುವ ಶಕ್ತಿಯನ್ನು ಕಳೆದುಕೊಂಡವರಂತೆ ತೋರುವುದಿಲ್ಲ. ಭಾರತದ ನಿತ್ಯೋತ್ಸವದಲ್ಲಿ ಇವರು ಇಗಲೂ ಭಾಗಿಗಳು. ಭಾರತ ಬದಲಾಗುವುದು ಸಾಧ್ಯವೆಂಬ ಇವರು ಹುಟ್ಟಿಸಬಲ್ಲ ಭರವಸೆಯಲ್ಲೇ, ಇವರು ತೋರಬಲ್ಲ ಪ್ರೀತಿಯ ಧಾರಾಳದಲ್ಲೇ ಗಾಂಧಿಯ ಶಕ್ತಿಯಿದ್ದದ್ದು; ಅಂಬೇಡ್ಕರರ ದಲಿತ ಸಂಘಟನೆ ಸಾಧ್ಯವಾದದ್ದು. ನಮ್ಮ ಅನೇಕ ಸಂತ ಕವಿಗಳು ಇವರ ನಡುವೆಯೇ ಹುಟ್ಟಿ ಬೆಳೆದದ್ದು; ಜನಪದ ಮಹಾಕಾವ್ಯಗಳು, ಗಾದೆಗಳು, ಉಲ್ಲಾಸದ ಮಾತಿನ ವಿವಿಧ ಬಗೆಗಳು ಇವರ ನೆನಪಿನಲ್ಲೇ ಉಳಿದುಬಂದದ್ದು.

ನಮ್ಮ ನಾಗರಿಕತೆ ತೋರುವ ಜಗಲಿಯಲ್ಲಿ ಆಳಿದ ಪರಕೀಯರ ಗುರುತುಗಳಿದ್ದರೆ, ಚರಿತ್ರೆಯಲ್ಲಿ ಇನ್ನೂ ದಾಖಲಾಗದ ಸಮೃದ್ಧ ಹಿತ್ತಲಿನಲ್ಲಿ ಹಿಂದುಳಿದ ಜಾತಿಗಳ, ದಲಿತರ, ಮಹಿಳೆಯರ ಅನುಭವದ ದ್ರವ್ಯ ನಾಗರಿಕತೆಯ ಜಗಲಿಯನ್ನೇರಲು ಕಾದಿದೆ. ನಮ್ಮ ಸಮುದಾಯದಿಂದ ಹುಟ್ಟಿ ಬರುವ ನವ ಶಿಕ್ಷಿತರು ಈಗಾಗಲೇ ಸವಕಲಾದ ಕನ್ನಡಕ್ಕೆ ಜೀವಂತ ಮಾತಿನ ಕಾವು ತಂದಿದ್ದಾರೆ; ದಣಿದ ಸಾಹಿತ್ಯ ಪ್ರಕಾರಗಳಿಗೆ ಹೊಸ ಚೇತನ ತುಂಬಿದ್ದಾರೆ. ವಚನ ಚಳವಳಿಯ ನಂತರ ನಮ್ಮ ಕಾಲದಲ್ಲಿ ಎಲ್ಲ ಜಾತಿಯಿಂದಲೂ, ವರ್ಗಗಳಿಂದಲೂ ಬಹುದೊಡ್ಡ ಸಂಖ್ಯೆಯಲ್ಲಿ ಲೇಖಕರು ಕಾಣಿಸಿಕೊಂಡಿದ್ದಾರೆ. ಬಂಡಾಯ ಮತ್ತು ದಲಿತ ಚಳವಳಿಗಳು, ಈಚಿನ ದಿನಗಳಲ್ಲಿ ಸ್ತ್ರೀವಾದಿ ಚಳವಳಿ ಅತಿರೇಕದ ನಿಲುವುಗಳನ್ನು ತೆಗೆದುಕೊಂಡಂತೆ ಕೆಲವೊಮ್ಮೆ ಕಂಡಾಗಲೂ ಇಡೀ ಒಂದು ಜನಾಂಗದ ಅರಿವಿನ ಸ್ಫೋಟಕ್ಕೆ ಕಾರಣವಾಗಿವೆ. ಹೇಳಲೇಬೇಕಾದ್ದನ್ನು ಅತಿಮಾಡಿ ಹೇಳಿದರೂ ಸರಿಯೇ; ಯಾಕೆಂದರೆ ಅತಿಗಳು ಸತ್ಯದ ಬಾಗಿಲನ್ನು ತೆರೆಯುತ್ತವೆ ಎಂಬ ಅರ್ಥಬರುವ ಮಾತನ್ನು ಬ್ಲೇಕ್ ಕವಿ ಹೇಳಿದ್ದನ್ನು ಇಲ್ಲಿ ನೆನೆಯಬೇಕು. ಈ ಲೇಖಕ ಲೇಖಕಿಯರು ರೂಪಕ ಪ್ರತಿಭೆ ಪಡೆದವರಾಗಿದ್ದಾಗ, ಕಿರುಚುವ ಅಗತ್ಯವಿಲ್ಲದೆ, ವಸಾಹತುಶಾಹಿಯ ನೆರಳಿನಿಂದ ನಮ್ಮ ಸಾಹಿತ್ಯವನ್ನು ಹೊರತರಬಲ್ಲವರಾಗುತ್ತಾರೆ.

ಮೇಲಿನ ಮಾತುಗಳನ್ನು ನಮ್ಮನ್ನು ನಾವೇ ರಂಜಿಸಿಕೊಳ್ಳಲಾಗಲೀ, ಸಮಾಧಾನ ತಂದುಕೊಳ್ಳಲಾಗಲೀ ಹೇಳಕೂಡದು. ಬದಲಾಗಿ, ನಮ್ಮ ವರ್ಗಗಳ ಹಿತಸಾಧನೆ ಮಾಡಿಕೊಳ್ಳಲೆಂದು ನಮ್ಮ ಜನರಿಂದ ಆದಷ್ಟು ದೂರವಾಗುವ ಸನ್ನಾಹದಲ್ಲಿ ನಮ್ಮ ಭಾಷೆಯಿಂದಲೇ ದೂರವಾಗಲು ಹೊಂಚುವ ಜನ ಎಷ್ಟು ಭಾಗ್ಯಶಾಲಿಗಳೆಂದು ಸದ್ಯ ಕಂಡರೂ ಅವರಿಗಿಂತ ಶಾಶ್ವತವಾದದ್ದು ನಮ್ಮ ನಡುವೆ ಇದೆಯಲ್ಲವೇ ಎಂಬ ಆತಂಕಪೂರ್ಣ ಹುಡುಕಾಟದಲ್ಲಿ ನಾವು ಕಾಣಬೇಕಾದ ಸತ್ಯವಿದು.

ಇಂಗ್ಲಿಷ್ ವಿದ್ಯಾಭ್ಯಾಸದಿಂದ ಮಾತ್ರ ನಾವು ಉದ್ಧಾರವಾಗುತ್ತೇವೆಂದು ತಿಳಿದ ರಾಜಾರಾಮ ಮೋಹನರಾಯರನ್ನು ಗಾಂಧೀಜಿ ಕುಬ್ಜರೆಂದು ಕರೆದು ಠಾಕೂರರ ಬೇಸರಕ್ಕೆ ಕಾರಣರಾಗಿದ್ದರು. ಗಾಂಧೀಜಿ ಅದಕ್ಕೆ ಉತ್ತರವಾಗಿ, ತನ್ನನ್ನೂ ಒಬ್ಬ ಕುಬ್ಜನೆಂದು ಕರೆದುಕೊಂಡು, ಇಂಗ್ಲಿಷ್‌ಬಾರದಿದ್ದ ತುಳಸಿದಾಸರಿಗೂ, ಕಬೀರರಿಗೂ ಸಮನಾದ ಎತ್ತರದವರು ಇಂಗ್ಲಿಷ್ ಕಲಿತವರಲ್ಲಿ ಎಷ್ಟು ಜನರಿದ್ದಾರೆ ಎಂದಿದ್ದರು.

ಇದು ಸತ್ಯವಾದ, ಹೇಳಲೇಬೇಕಾದ ಮಾತು. ನಾವು ಮರೆಯಬಾರದ ವ್ಯಾವಹಾರಿಕ ಪ್ರಪಂಚದಲ್ಲಿ ಸದ್ಯದ ಸತ್ಯಗಳೂ ಇವೆ. ಸತ್ಯ ಕಳೆದುಕೊಂಡ ಭೂತಕಾಲದಿಂದ ಬಿಡುಗಡೆಯಾಗಲು ಮತ್ತು ಸಂಸ್ಕೃತದ ಚೌಕಟ್ಟಿನಿಂದ ನಮ್ಮ ಸಾಹಿತ್ಯಗಳನ್ನು ಪಾರುಮಾಡಲು, ಆಂಗ್ಲ ವಿದ್ಯಾಭ್ಯಾಸವನ್ನು ನಾವು ರಾಜಾರಾಮ ಮೋಹನರ ಕಾಲದಿಂದಲೂ ಒಪ್ಪಿಕೊಂಡೇ ಬಂದಿದ್ದೇವೆಯೆಂಬುದನ್ನೂ, ಇಂಗ್ಲಿಷ್ ಬಾರದ ಪರಮಹಂಸರನ್ನು ಅವತಾರಪುರುಷನೆಂದು ಪೂಜಿಸುವ ಕುವೆಂಪು ಅವರೇ ಇಂಗ್ಲಿಷ್ ವಿದ್ಯಾಭ್ಯಾಸದಿಂದ ತಾನು ಬ್ರಾಹ್ಮಣವರ್ಗದವರ ಕೊಟ್ಟಿಗೆಯಲ್ಲಿ ಗೊಬ್ಬರ ಹೊರುವುದು ತಪ್ಪಿತೆಂದು ಹೇಳುತ್ತಾರೆಂಬುದನ್ನೂ – ಇವೆಲ್ಲವೂ ಪ್ರಾಮಾಣಿಕವಾದ ಪ್ರತಿಕ್ರಿಯೆಗಳೆಂಬುದನ್ನೂ- ನಾವು ತಿಳಿದಿರಬೇಕು. ಜೊತೆಗೆ ಜಾಗತೀಕರಣದಲ್ಲಿ ಎಲ್ಲ ಭಾಷೆಗಳೂ ಇಂಗ್ಲಿಷಿಗೆ ಅಧೀನವಾಗಿಬಿಡುವ, ಅಧೀನವಾಗಿ ಆಶಯದಲ್ಲಿ ಕುಬ್ಜವಾಗಿ ಬಿಡುವ ಕಾಲವನ್ನು ಮುಚ್ಚಿಬಿಟ್ಟಿದ್ದೇವೆಂದೂ ಅರಿಯಬೇಕು. ಹೀಗೆ ಅರಿತುಕೊಂಡ ನಾವು ಯಾವ ಅನುಸಂಧಾನದ ಮುಖೇನ ಇವತ್ತು, ಕಾಲದ ಗತಿಯ ಫಲವಾಗಿ ತಂತ್ರಜ್ಞಾನದ ಅಪಾರವಾದ ಚೈತನ್ಯವನ್ನು ಪಡೆದ ಅನಿಷ್ಟ ಶಕ್ತಿಗಳ ಜೊತೆ ಹೇಗೆ ತೊಡಗಬೇಕು ಎಂಬುದನ್ನು ಕುರಿತು ಗಂಭೀರವಾಗಿ ಚಿಂತಿಸಬೇಕು.

ಒಂದು ಉದಾಹರಣೆ ಮೂಲಕ ನಮ್ಮ ವೈಚಾರಿಕತೆ ಎದುರಿಸಬೇಕಾಗಿಬರುವ ಬಿಕ್ಕಟ್ಟನ್ನು ವಿವರಿಸಬಹುದು. ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬರಲು ಕಾರಣ ಅಮೆರಿಕನ್ ಸರ್ಕಾರದ ಕುಟಿಲ ರಾಜಕಾರಣ. ಅಮೆರಿಕನ್ ವರ ಪಡೆದು ಭಸ್ಮಾಸುರನಾದ ತಾಲಿಬಾನ್ ತನ್ನ ಕ್ರೌರ್ಯದ ಪರಮಾವಧಿಯಲ್ಲಿ ಅಮೆರಿಕದ ಶಕ್ತಿಯ ಸಂಕೇತವಾದ ಶಿಖರಗಳಿಗೇ ಬೆಂಕಿ ಇಟ್ಟು ಸುಟ್ಟಿತು. ಪರಾರ್ಥದ ಸೋಗಿನಲ್ಲಿ ತಾಲಿಬಾನನ್ನು ಅಧಿಕಾರಕ್ಕೆ ತಂದ ಅಮೆರಿಕನ್ ಸರ್ಕಾರವೇ, ಪರಾರ್ಥ ಸಾಧಿಸುವ ವೀರಾವೇಶದಲ್ಲಿ ತಾಲಿಬಾನನ್ನು ಅಧಿಕಾರದಿಂದ ಇಳಿಸಿತು. ಏತನ್ಮಧ್ಯೆ ವಿಚಿತ್ರ ಹಿಂಸೆಗೆ ಗುರಿಯಾಗಿದ್ದ ಆಫ್ಘಾನಿಸ್ಥಾನದ ಮಹಿಳೆಯರು ಉಸಿರಾಡುವಂತಾಯಿತು. ಅಮೆರಿಕನ್ ಆಡಳಿತದ ಬಗ್ಗೆ ನಮ್ಮ ಆರೋಪದ ಏನೇ ಇರಲಿ, ಮುಖದ ಮುಸುಕನ್ನು ತೆಗೆದೊಗೆದು ಓಡಾಡುವ ಮುಸ್ಲಿಮ್ ಮಹಿಳೆಯರನ್ನು ನೋಡಿದಾಗ ನಾವು ಸಂತೋಷ ಪಡುವುದಿಲ್ಲವೆ? ಭಯೋತ್ಪಾದಕರಿಂದ ತಲ್ಲಣಗೊಂಡಿದ್ದ ಭಾರತದ ಕೂಗೂ ಪ್ರಪಂಚಕ್ಕೆ ಕೇಳಿಸುವಂತಾಯಿತಲ್ಲವೆ? ಪಾಕಿಸ್ತಾನ ಆಧುನಿಕಗೊಳ್ಳುವಂತೆ ಒತ್ತಡ ಹುಟ್ಟಿತಲ್ಲವೆ? ಚರಿತ್ರೆ ಕೆಲವ ಮಾಡುವ ರೀತಿ ವಿಚಿತ್ರವಾದ್ದು.

ಪಾಶ್ಚಾತ್ಯರು ಏನನ್ನು ಚರಿತ್ರೆಯೆಂದು ತಿಳಿದು ವೈಭವಿಸುತ್ತಾರೋ ಅದರ ಹಂಗಿಲ್ಲದಂತೆ ನಾವು ಬದುಕಿದ ಕಾಲ ಒಂದಿತ್ತು. ನಮ್ಮ ದೊಡ್ಡ ವಿಮರ್ಶಕರಲ್ಲಿ ಒಬ್ಬರಾದ ಕೀರ್ತಿನಾಥ ಕುರ್ತುಕೋಟಿಯವರು ಈಚೆಗೆ ಈ ಬಗ್ಗೆ ಮನೋಜ್ಞವಾಗಿ ಮಾತಾಡಿದ್ದಾರೆ. (ನೋಡಿ : ಮಾತುಕತೆ, ೬೦) ಅವರು ಕೊನೆಯಲ್ಲಿ ಆಡಿದ ಒಂದು ಮಾತು ನನಗೆ ಬಹು ಮುಖ್ಯವೆನ್ನಿಸುತ್ತದೆ. ಆಧುನಿಕತೆಯ ಹಂಬಲದಿಂದಾಗಿ ನಾವು ಪಾಶ್ಚಾತ್ಯರು ಯಾವುದನ್ನು ಚರಿತ್ರೆಯೆಂದು ಭಾವಿಸಿಕೊಂಡಿದ್ದಾರೊ, ಅದರೊಳಗೆ ಪ್ರವೇಶಿಸಿಬಿಟ್ಟಿದ್ದೇವೆ. ಈಗ ಹಿಂದಿರುಗುವಂತಿಲ್ಲ. ಕುರ್ತಕೋಟಿ ಹೇಳುತ್ತಾರೆ: ‘ಆಧುನಿಕ ಅನಿವಾರ್ಯ. ಆಧುನಿಕತೆಯನ್ನು ಆಧುನಿಕತೆಯ ಮೂಲಕವೇ ಪರಿಹರಿಸಬೇಕಾಗಿದೆ.’

ಚರಿತ್ರೆಯ ಬಗ್ಗೆ ಇನ್ನೊಂದು ಮಾತು: ಸಾವಿರ ವರ್ಷಗಳ ಹಿಂದೆ ಸಂಸ್ಕೃತ ಮತ್ತು ಪ್ರಾಕೃತದ ಜಗತ್ತು ಭಾರತದ ಹಲವಾರು ಭಾಷೆಗಳಲ್ಲಿ-ಎಲ್ಲವೂ ಒಂದೇ ಕಾಲದಲ್ಲಿ ಅಲ್ಲದಿದ್ದರೂ-ವಿಕೇಂದ್ರೀಕೃತವಾಗತೊಡಗಿ ಪಂಪ, ಕುಮಾರವ್ಯಾಸ, ವಚನಕಾರರು, ದಾಸರು, ತುಳಸೀದಾಸ, ಕಬೀರ್, ನಾನಕ್, ತುಕಾರಾಮ್, ಜ್ಞಾನೇಶ್ವರ ಇತ್ಯಾದಿ ಕೃತಿಕಾರರ ಸಮೃದ್ಧಿಯನ್ನೂ, ಬಹುತ್ವವನ್ನೂ ಪಡೆದಿತು. ಸ್ವಲ್ಪ ಸಮಯದ ನಂತರದಲ್ಲಿ ಯೂರೋಪಿನಲ್ಲೂ ಲ್ಯಾಟಿನ್ ಲೋಕ ಒಡೆದು, ಶೇಕ್ಸ್‌ಪಿಯರ್, ಡಾಂಟೆಯಂಥವರ ಹುಟ್ಟಿಗೆ ಕಾರಣವಾಯಿತು. ಈ ಎರಡನೆಯ ಸಹಸ್ರಮಾನದಲ್ಲಿ. ಜಾಗತೀಕರಣದ ಮಾರುಕಟ್ಟೆಯ ಒತ್ತಡದಲ್ಲಿ ಒಂದೇ ಭಾಷೆಯ, ಒಂದೇ ರುಚಿಯ, ಕಳೆಗುಂದಿದ ಹಿಂದಿನ ಕೇಂದ್ರೀಕೃತ ವ್ಯವಸ್ಥೆಗೆ ಜಗತ್ತು ಹೊರಳುತ್ತಿದೆಯೆ? ಇದಕ್ಕೆ ಮನುಷ್ಯ ಸ್ವಭಾವದಲ್ಲೇ ತಡೆಯಿಲ್ಲವೆ?

ಕಾಲಕ್ಕೆ ಎದುರಾಗುವುದು ಸುಲಭವಲ್ಲ; ಆದರೆ ಜಾಗತೀಕರಣ ತರುವ ಸಂಸ್ಕೃತಿ ಏಕರೂಪತೆಯ ದಣಿವು ತಂದೀತು ಎಂಬ ಸಮಾಧಾನ ಕೆಲವರಿಗೆ ಇದೆ. ಸಂಕಲ್ಪ ಬಲದ ಜಾಗರಣೆಯಲ್ಲಿ ಕೆಲವು ವ್ಯಕ್ತಿಗಳಾದರೂ ಕಾಲಕ್ಕೆ ಎದುರಾದರು. ಹಲವು ಉಪಾಯಗಳಲ್ಲಿ ಕಾಲದ ಜೊತೆ ನಾವು ನಡೆಸುವ ಅನುಸಂಧಾನದಲ್ಲಿ ಬಹುಜನ ಹಿತದ ದೃಷ್ಟಿಯಿಂದ, ಪಾಶ್ಚಾತ್ಯ ನಾಗರಿಕತೆಗಳಿಗೆ ಪರ್ಯಾಯವಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಕೆಲವರಿಗೀಗ ಅನ್ನಿಸುತ್ತಿದೆ.

ಹಸಿವೋ? ತೆವಲೋ?

ಸಂಕಟದಲ್ಲಿ ನಾವು ಕಂಡುಕೊಳ್ಳಬೇಕಾದ ಪರ್ಯಾಯವಿದು. ಪ್ರಾರಂಭದಲ್ಲಿ ಮೂರು ಹಸಿವುಗಳ ಬಗ್ಗೆ ಮಾತಾಡಿದೆ. ಸಾಂಪ್ರದಾಯಿಕವಾದ ಮೂಢನಂಬಿಕೆಗಳಿಗೆ ವಿರೋಧವಾಗಿ ಚಲಿಸುತ್ತಿದ್ದ ಮನಸ್ಸುಗಳಲ್ಲಿ ಕಾಲಕ್ಕೆ ಆಳವಾಗಿ ಸ್ಪಂದಿಸುವ ಗುಣ ಇರುತ್ತಿದ್ದ ಕಾಲದಲ್ಲಿ ಬೆಳೆದವರು ನನ್ನಂಥವರು. ಆಧುನಿಕತೆಯ ಹಸಿವು ಸಮಾನತೆಯ ಹುಡುಕಾಟಕ್ಕೂ, ನಮ್ಮ ಆಧ್ಯಾತ್ಮಿಕ ಜಾಗೃತಿಗೂ ಹೊಂದಿಕೊಂಡಿದ್ದ ಕಾಲವದು. ಈಗ ಕಾಲ ಬದಲಾಗಿದೆ.

ಹಿಂದೆ ಹಸಿವಾಗಿದ್ದಆಧುನಿಕತೆಈಗ ತೆವಲಾಗಿದೆ. ಹೇಗಾದರೂ ನಾವು ‘ಎನ್.ಆರ್.ಐ.’ಗಳಾಗಿ ನ್ಯೂಯಾರ್ಕ್ ಎಂಬ ಸ್ವರ್ಗವೇರಬೇಕೆಂಬ ಕನಸಾಗಿದೆ. ನಮ್ಮ ಜಾಣ ಜಾಣೆಯರಲ್ಲಿ ಇಂತಹ ಅಪೇಕ್ಷೆಯನ್ನು ಹುಟ್ಟಿಸುತ್ತಿರುವ ಕಾಲದ ಒಟ್ಟು ಚಲನೆಯನ್ನು ಒಳಹೊಕ್ಕು ನೋಡಬಲ್ಲವರಂತೆ ನಾವು ಬದುಕುತ್ತಿಲ್ಲ; ಬರೆಯುತ್ತಿಲ್ಲ; ಆತಂಕದಲ್ಲಿ ಯೋಚಿಸುತ್ತಲೂ ಇಲ್ಲ.

ನಮ್ಮ ಕನಸುಗಳೆಲ್ಲ ಏನಾಗಿ ಹೋದವು? ಮೂಢನಂಬಿಕೆಗಳ ಸಾಂಪ್ರದಾಯಿಕತೆಗೆ ಎದುರಾಗಿ ನಿಂತು, ದಿಟ್ಟವಾಗಿ ಯೋಚಿಸುತ್ತಿದ್ದ ನಾವು ಈಗ ಆಡಿದ್ದನ್ನೇ ಆಡುತ್ತ ಗೊಡ್ಡಾಗುತ್ತಿದ್ದೇವೆ. ಆಧುನಿಕತೆಗೆ ಅಡ್ಡಗಾಲಿಡುತ್ತಿದ್ದ ಸಂಪ್ರದಾಯಗಳು ಈಚೆಗೆ ನಿಶ್ಶಕ್ತವಾಗಿವೆ. ಈಗ ನಾವು ತೊಡಗಬೇಕಾದದ್ದು ಬೇರೊಂದು ಸಮರಕ್ಕೆ.

ಅದೆಂದರೆ, ಆಧುನಿಕ ತಂತ್ರಜ್ಞಾನದ ನೆರವು ಪಡೆಯುವ ‘ಡೆವಲಪ್‌ಮೆಂಟ್‌’ನ್ನು ಪ್ರಶ್ನಿಸುವುದು. ಆದರೆ ಪ್ರಶ್ನಿಸುತ್ತಿಲ್ಲ.

‘ಡೆವಲೆಪ್‌ಮೆಂಟ್’ ಎಂಬ ಪದವನ್ನೇ ನಾನು ‘ಅಭಿವೃದ್ಧಿ’ ಎಂದು ಅನುವಾದಿಸದೇ ಬಳಸುತ್ತಿದ್ದೇನೆ. ಯಾಕೆಂದರೆ, ಅಮೆರಿಕದ ಅಧ್ಯಕ್ಷನಾಗಿದ್ದ ಟ್ರೂಮನ್ ಮೂರನೆಯ ಜಗತ್ತಿನ ಡೆವಲಪ್‌ಮೆಂಟಿನ ಬಗ್ಗೆ ಮಾತಾಡಿ ಈ ಶಬ್ದಿಂದ ನಮ್ಮ ತಲೆಗಳನ್ನು ಸವರಿ, ಒಪ್ಪಿಸಿ, ಶ್ರೀಮಂತ ದೇಶಗಳು ಮಾಡಲೊಲ್ಲದ್ದನ್ನು ಮೂರನೆಯ ಜಗತ್ತು ಮಾಡುವಂತಾಯಿತು. ಮುಖ್ಯವಾಗಿ, ಅವರು ಮಾಡಲು ಒಲ್ಲದ ಗಣಿಗಾರಿಕೆಯನ್ನು ನಾವು ಮಾಡಬೇಕಾಯಿತು. ಅಮೆರಿಕದಲ್ಲಿ ಈಗ ಹೊಗೆ ಉಗುಳುವ ಒಂದು ಕಾರ್ಖಾನೆಯನ್ನು ತೆರೆಯುವುದು ಅಸಾಧ್ಯವಾಗಿದೆ. ಆದರೆ ಅವರಿಗೆ ಅವಶ್ಯವಾದದ್ದನ್ನು ‘ಡೆವೆಲಪ್‌ಮೆಂಟಿ’ಗಾಗಿ, ಅಂದರೆ ನಮ್ಮ ಉದ್ಧಾರದ ಭ್ರಮೆಯಲ್ಲಿ ಮಾಡಬೇಕಾಗಿದೆ. ಇಲ್ಲವೇ ನಮಗೆ ಉಳಿಗಾಲವಿಲ್ಲ ಎನ್ನುವಂತಾಗಿದೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಮತ ಧರ್ಮಗಳ ಸರ್ವಜ್ಞತ್ವವನ್ನು ಪ್ರಶ್ನಿಸುವುದರ ಮುಖೇನ ಸ್ವತಂತ್ರವಾಗಿ ವಿಚಾರ ಮಾಡುವುದು ಸಾಧ್ಯವಾಯಿತು. ಇಲ್ಲವಾದರೆ ಡಾರ್ವಿನ್ ಇರುತ್ತಿರಲಿಲ್ಲ. ಕ್ರೈಸ್ತ ಧರ್ಮಕ್ಕೆ ದೊಡ್ಡ ಸವಾಲನ್ನು ಎಸೆದು ಪಾಶ್ಚಾತ್ಯ ಚಿಂತನಾಲೋಕದಲ್ಲಿ ದೊಡ್ಡ ಅಲೆಯೆಬ್ಬಿಸಿದ ಡಾರ್ವಿನ್ ಬರೆದದ್ದು ಜನಭಾಷೆಯಾದ ಇಂಗ್ಲಿಷಿನಲ್ಲಿ; ನ್ಯೂಟನ್‌ನಂತೆ ಲ್ಯಾಟಿನ್‌ನಲ್ಲಿ ಅಲ್ಲ ಎಂಬುದು ಗಮನಾರ್ಹ.

ಈ ಕಾಲದಲ್ಲಾದರೋ, ‘ಡೆವೆಲಪ್‌ಮೆಂಟ’ನ್ನು ಪ್ರಶ್ನಿಸದೆ, ಅದರ ಕಲ್ಪನೆಯ ಹಿಂದಿರುವ ಸರ್ವಜ್ಞತೆಯನ್ನು ಅನುಮಾನಿಸದೆ, ನಾವು ಸೃಜನಶೀಲರಾದ ವಿಚಾರವಂತರಾಗುವುದಿಲ್ಲ. ಕಡತರದ, ನಮ್ಮದೇ ಆದ ಯಾವ ಹೊಸ ವಿಚಾರವನ್ನೂ ಹುಟ್ಟುಹಾಕುವುದಿಲ್ಲ.

ಜೊತೆಗೇ, ನಮಗೇ ಎಚ್ಚರದಲ್ಲಿ ಹೇಳಿಕೊಳ್ಳಬೇಕಾದ ಮಾತೊಂದಿದೆ. ತಂತ್ರಜ್ಞಾನ ಸಾಧ್ಯವಾಗಿಸಿದಡೆವಲೆಪ್ಮೆಂಟಿನಲ್ಲಿ ನಮ್ಮ ಶಾಶ್ವತ ಅಭ್ಯುದಯಕ್ಕೆ ಅಗತ್ಯವಾದ್ದನ್ನು ವಿವೇಕದಲ್ಲಿ ಆಯದೆ ಹೋದಲ್ಲಿ ನಾವು ಜಡ ಸಮಾಜವಾಗಿ ಉಳಿದುಬಿಡಬಹುದು. ಭಯವೂ ನಿಜವೇ.

ಆದರೆ ಅಷ್ಟೇ ನಿಜವೆಂದು, ವಿವೇಕವಿಲ್ಲದೆ ಪಾಶ್ಚಾತ್ಯ ಮಾದರಿಯ ಡೆವಲೆಪ್‌ಮೆಂಟನ್ನೂ, ಉದಾರೀಕರಣವನ್ನೂ ಆಯ್ದಲ್ಲಿ ಬಡವರು ಕಡುಬಡವರಾಗುತ್ತಾರೆ; ಶ್ರೀಮಂತರು ಬಕಾಸುರರಾಗುತ್ತಾರೆ. ನಡುವಿನವರು ಕಡುಬಡವರಾಗದಿರಲು, ಹೇಗಾದರೂ ಶ್ರೀಮಂತರಾಗಲು ಚಡಪಡಿಸುತ್ತಾ ಜೀವನದ ನೆಮ್ಮದಿ ಕಳೆದುಕೊಳ್ಳುತ್ತಾರೆ. ಇದು ಈಗಾಗಲೇ ಹಲವು ದೇಶಗಳ ಅನುಭವಕ್ಕೆ ಬಂದಾಗಿದೆ.

ನನಗಿದು ಆಳವಾಗಿ ಮನವರಿಕೆಯಾದದ್ದು ಕುದುರೆಮುಖದ ಗಣಿಗಾರಿಕೆಯಿಂದ ಆಗಿರುವ ಹಾನಿಯನ್ನು ಕಂಡಾಗ. ಗಣಿಗಾರಿಕೆಯ ಬೆಂಬಲವಾಗಿ ಕೆಲವರು ಆಡುವ ಮಾತುಗಳನ್ನು ಕೇಳಿಸಿಕೊಂಡಾಗ ನನ್ನಲ್ಲಿ ಹುಟ್ಟಿದ ಚಡಪಡಿಕೆಗೆ ಸ್ಪಷ್ಟರೂಪ ಕೊಟ್ಟು ನನ್ನನ್ನು ಕ್ರಿಯಾಶೀಲಗೊಳಿಸಿದವರು ತೀರ್ಥಹಳ್ಳಿಯ ‘ತುಂಗಾಮೂಲ ಉಳಿಸಿ’ ಒಕ್ಕೂಟದ ಯುವಕ ಯುವತಿಯರು; ಉಡುಪಿಯ ‘ರಥಬೀದಿ ಗೆಳೆಯರು’; ಶಿವಮೊಗ್ಗದ ಹಲವು ಯುವ ಸಂಘಟನೆಗಳು.