ಉಡುಪಿ ನನಗೆ ಪರಿಚಿತ ಊರು. ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ನನ್ನ ಪೂರ್ವಜರೂ ಇಲ್ಲಿಯವರೇ ಆದ್ದರಿಂದ ಉಡುಪಿಯ ಬಗ್ಗೆ ನನಗೆ ಏನೋ ಒಂದು ಮಮತೆ. ಆಗೆಲ್ಲ ಪ್ರೊ| ಕು. ಶಿ. ಹರಿದಾಸಭಟ್ಟರು ಇರುತ್ತಿದ್ದರು; ವಿಶ್ವಾಸದಿಂದ ಬಳಿಯಲ್ಲಿ ಕುಳಿತು ಮಾತನಾಡಿಸುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಉಡುಪಿಗೆ ನನ್ನನ್ನು ಮೊದಲು ಕರೆಸಿದವರು ಪ್ರೊ| ಕು.ಶಿ. ಅವರು. ಇವತ್ತು ಅವರು ಇಲ್ಲ ಎಂಬುದು ವಿಷಾದದ ವಿಷಯ. ಉಡುಪಿಯನ್ನು ಇಡೀ ಭಾರತದಲ್ಲಿ ಗೊತ್ತಿರುವ ಊರಾಗಿ ಮಾಡಿದವರಲ್ಲಿ ಕು.ಶಿ. ಬಹಳ ಪ್ರಮುಕರು. ಇಂದು ಆ ಕೆಲಸವನ್ನು ಮುರಾರಿ ಬಲ್ಲಾಳ, ಕೆದಿಲಾಯ ಮುಂತಾದ ‘ರಥಬೀದಿ ಗೆಳೆಯರು’ ಸಂಘಟನೆಯ ಜನ ಮುಂದುವರೆಸುತ್ತಿದ್ದಾರೆ. ಉಡುಪಿ ಹರಿದಾಸಭಟ್ಟರ ನಂತರವೂ ತನ್ನ ಪರಂಪರೆಯನ್ನು ಉಳಿಸಿಕೊಳ್ಳುತ್ತದೆ ಎಂಬ ಭರವಸೆ ನನಗಿದೆ.

ನಾನು ಇಂಗ್ಲಿಷ್ ಆನರ್ಸ್ ಓದುತ್ತಿದ್ದಾಗ ಭದ್ರಗಿರಿ ಎಂಬುವವನು ಸ್ನೇಹಿತನಾಗಿದ್ದ. ಆತ ಸದಾ ಇಂಗ್ಲಿಷ್‌ನಲ್ಲೇ ಮಾತನಾಡುತ್ತಿದ್ದ. ಪೂರ್ತಿ ವೆಸ್ಟರ್ನೈಸ್ಡ್ ಆಗಿದ್ದ. ಆದರೂ ಬಹಳ ಸೂಕ್ಷ್ಮಜನಾಗಿದ್ದ ತಾನು, ತಾನಲ್ಲದೆ ಇನ್ನೇನೋ ಆಗಬೇಕೆಂದು ಹೊರಟಿದ್ದರಿಂದಲೇ ಆತ ಇಂಗ್ಲಿಷ್‌ಗೆ ಆತುಕೊಂಡಿರಬೇಕು. ಆತ ಜಿಡ್ಡು ಕೃಷ್ಣಮೂರ್ತಿಯವರ ಬಗ್ಗೆ ನನ್ನ ಬಳಿ ಮಾತನಾಡುತ್ತಿದ್ದ. ಆತ ನನಗೆ ಹೆಚ್ಚು ಆತ್ಮೀಯನಾಗುತ್ತಿದ್ದಂತೆ, ಜೆಕೆ ಬಗ್ಗೆ ಆತನಿಗಿದ್ದ ಗುಪ್ತಭಕ್ತಿ ನನ್ನ ಅರಿವಿಗೆ ಬಂತು. ಜಿಡ್ಡು ಕೃಷ್ಣಮೂರ್ತಿಯ ಬಗ್ಗೆ ಓದಲು ಆತನೇ ನನಗೆ ಮೂಲ ಪ್ರೇರಣೆ.

ಕೃಷ್ಣನಾಥಜೀಯವರು ನನಗೆ ಪರಿಚಿತರಾಗಲು ಲೋಹಿಯಾ ಕಾರಣ. ಹೀಗೆ ಜೆ.ಕೆ. ಮತ್ತು ಲೋಹಿಯಾ ಇಬ್ಬರೂ ನನ್ನವರಾದರು. ಇಬ್ಬರೂ ನನ್ನೊಳಗೆ ನನ್ನವರಾಗಿ ಜಗಳವಾಡುತ್ತಿರುತ್ತಾರೆ. ನಾನು ಅವರ ಜಗಳವನ್ನು ಗಮನವಿಟ್ಟು ಲಕ್ಷಿಸುತ್ತೇನೆ. ಅದು ಅತ್ಯಂತ ಸೃಜನಶೀಲ, ಅರ್ಥಪೂರ್ಣ ಜಗಳ ಎನ್ನಿಸುತ್ತದೆ.

ಲೋಹಿಯಾ, ಜಯಪ್ರಕಾಶ ನಾರಾಯಣ್ ಸಂಗಡಿಗರಲ್ಲಿ ಅನೇಕರು ನನ್ನ ಆತ್ಮೀಯರು. ಅಚ್ಯುತ್ ಪಟವರ್ಧನ್, ಕೃಷ್ಣನಾಥಜೀ ಎಲ್ಲರೂ ಅಂದಿನ ಚಳವಳಿಯ ಮುಖ್ಯಸ್ಥರಾಗಿದ್ದರು. ಕೃಷ್ಣನಾಥ್‌ಜೀ, ನಾನು ಸೇರಿದಾಗ ಜೆ.ಕೆ. ಗಿಂತ ಹೆಚ್ಚಾಗಿ ಲೋಹಿಯಾ ವಿಷಯವನ್ನೇ ಮಾತನಾಡುತ್ತೇವೆ.

ಕೃಷ್ಣನಾಥಜೀ ಬೌದ್ಧ ಧರ್ಮದತ್ತ ತಿರುಗಿ ಆಧ್ಯಾತ್ಮ ಯಾತ್ರೆ ಕೈಗೊಂಡವರು. ನಾನು ಎಲ್ಲೇ ಇರಲಿ ಅವರು ಏನು ಮಾಡುತ್ತಿದ್ದಾರೆಂಬುದು ಆತ್ಮೀಯರ ಮೂಲಕ ನನಗೆ ತಿಳಿಯುತ್ತಿತ್ತು. ಇಂದು ಮತ್ತೆ ನಾವೆಲ್ಲ ಒಂದಾಗಿದ್ದೇವೆ. ಜೆ.ಕೆ ನಮ್ಮನ್ನೆಲ್ಲ ಹತ್ತಿರ ತಂದಿದ್ದಾರೆ.

ಇಂಗ್ಲೆಂಡ್‌ನಲ್ಲಿದ್ದು ‘ಸಂಸ್ಕಾರ’ ಕಾದಂಬರಿಯನ್ನು ಬರೆಯುತ್ತಿದ್ದಾಗ ನನ್ನ ಮೇಲೆ ಇದ್ದ ಗಾಢ ಪ್ರಭಾವ ಒಂದೆಡೆ ಮಾರ್ಕ್ಸ್‌ನದಾದರೆ, ಮತ್ತೊಂದು ಕಡೆ ಜೆ. ಕೃಷ್ಣಮೂರ್ತಿಯದ್ದು. ಆದ್ದರಿಂದಲೇ ಯಾವ ತತ್ವವಾದಿಯೂ ಆ ಪುಸ್ತಕ ಸಂಪೂರ್ಣ ನನ್ನದೆಂದು ಹೇಳಿಕೊಳ್ಳದ ಹಾಗೆ ಆ ಪುಸ್ತಕ ಉಳಿದಿದೆ ಎಂದು ಭಾವಿಸುತ್ತೇನೆ.

ಗಾಂಧೀಜಿಯವರ ಮೊಮ್ಮಗ, ತತ್ವಜ್ಞಾನಿ, ರಾಮಚಂದ್ರಗಾಂಧಿ ನನಗೆ ತುಂಬಾ ಬೇಕಾದವರು. ತುಂಬಾ ಸೃಜನಶೀಲ ಮನಸ್ಸು ಅವರದ್ದು. ಅವರು ಹೇಳುತ್ತಿದ್ದರು ‘ನಮ್ಮ ಕಾಲದಲ್ಲೂ ಸಪ್ತ ಋಷಿಗಳು ಇದ್ದಾರೆ. ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರಬಿಂದೋ, ರಮಣ, ಜೆ. ಕೃಷ್ಣಮೂರ್ತಿ, ಗಾಂಧಿ ಮತ್ತು ಠಾಗೋರ್ ಇವರೇ ಆ ಸಪ್ತ ಋಷಿಗಳು.’ ಅವರು ಹೀಗೆಂದಾಗ ನನಗೆ ಗೀತೆ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ನೆನಪಾಯಿತು. ಈ ಸಪ್ತರ್ಷಿಗಳಲ್ಲಿ ಮೂರು ಜನ ಈ ಮೂರು ಯೋಗಗಳನ್ನು ಪ್ರತಿನಿಧಿಸುತ್ತಾರೆ. ‘ನಾನು ಯಾರು?’ ಎಂದು ಕೇಳಿಕೊಳ್ಳುವ, ಬಂಡೆಯ ಮೇಲೆ ಅರೆಬೆತ್ತಲೆ ಕೂತಿರುವ ರಮಣಮಹರ್ಷಿ ಜ್ಞನಯೋಗಿ; ಬಹುಶಃ ಜೆ.ಕೆ.ಗೆ ಹತ್ತಿರವಾದ ಮನಸ್ಸು ಅವರದ್ದು. ಅವರಿಗೆ ಒಬ್ಬ ಹಿಂದೂವಾಗಿರುವುದು. ಒಬ್ಬ ಮುಸ್ಲಿಂ ಆಗಿರುವುದು, ಒಬ್ಬ ಕ್ರೈಸ್ತನಾಗಿರುವುದು ಮುಖ್ಯವಲ್ಲ. ತನ್ನನ್ನು ತಾನು ಅರಿಯುವ ಮಾರ್ಗದಲ್ಲಿ ಕೂತಿರುವ ಸಂತ ಆತ. ರಾಮಕೃಷ್ನ ಪರಮಹಂಸರ ಕುಣಿತದ ಚಿತ್ರವೇ ಆಕರ್ಷಕ. ಅವರು ಕೈ ಎತ್ತಿ ನಿಂತಿರುವುದೂ ಇನ್ನೇನು ಬಿದ್ದಾರೇನೊ ಎನ್ನಿಸುವ ಭಾವಸಮಾಧಿಯ ತುರೀಯ ಸ್ಥಿತಿಯಲ್ಲಿ. ಅವರು ಭಕ್ತ, ಪ್ರೇಮಿ. ಈಗ ವಿರಹ ಭಾವವಾದರೆ ಇನ್ನೊಂದು ಕ್ಷಣದಲ್ಲಿ ಐಕ್ಯಭಾವದ ಅಳಲು ಮತ್ತು ಉಲ್ಲಾಸಗಳಿಂದ ನಗುತ್ತಾ ಅಳುತ್ತಾ ಇರುವ ಭಕ್ತಿಯೋಗಿ ಅವರು. ಇನ್ನೊಬ್ಬ ಹುರಿಗಟಟಿದ ತೆಳುಕಾಯದ ಗಾಂಧಿ. ನೌಖಾಲಿಯಲ್ಲಿ ತನಗಿಂತ ಉದ್ದದ ಒಂದು ಕೋಲನ್ನು ಹಿಡಿದುಕೊಂಡು ನಡೆಯುತ್ತಿರುವ ಗಾಂಧಿ ನಿಸ್ಸಂದೇಹವಾಗಿ ಕರ್ಮಯೋಗಿ. ಶಂಕರಾಚಾರ್ಯರಂತೆ ಚಿಂತನೆಗೆ ತೊಡಗಿಕೊಂಡಿರುವವರು ಆಚಾರ್ಯ ಅರಬಿಂದೋ.

ಜಿಡ್ಡು ಕೃಷ್ಣಮೂರ್ತಿಯವರಮಟ್ಟಿಗೆ ಹೇಳುವುದಾದರೆ ಅವರು ನಮ್ಮ ಮನಃಕ್ಲೇಷವನ್ನು ಕಳೆಯುವ ವೈದ್ಯ ಗುರು; ಬುದ್ಧನ ಹಾಗೆ. ಹೀಗೆ ನಮಗೆ ಗೊತ್ತಿರುವ ಗುರುತಿನಲ್ಲಿ ಅವರನ್ನು ಕಂಡುಕೊಂಡರೆ ಜೆಕೆಗೆ ಅಪಚಾರ ಮಾಡಿದಂತಾಗುತ್ತದೆ. ಜೆಕೆ ಪುಸ್ತಕದಲ್ಲಿ ಹಕ್ಸ್‌ಲೀ ಅತ್ಯಂತ ಅಭಿಮಾನ, ವಿಶ್ವಾಸಗಳಿಂದ ಮುನ್ನುಡಿ ಬರೆದಿದ್ದಾರೆ. ಹಕ್ಸ್‌ಲೀ ಐರೋಪ್ಯ ತಹತಹದ ಜ್ಞಾನ ಮಾರ್ಗಿ. ತಾನು ಓದಿದ, ತಿಳಿದ ಎಲ್ಲವನ್ನೂ ತನ್ನ ಒಟ್ಟು ಜ್ಞಾನದ ಚೌಕಟ್ಟಿನಲ್ಲಿಟ್ಟು ನೋಡುವ ಹಂಬಲ ಅವರದ್ದು. ಆ ದೃಷ್ಟಿಯಿಂದ ಅವರು ‘ಸಿಸ್ಟಂ ಬಿಲ್ಡರ್’, ಹಕ್ಸ್‌ಲೀ ಜೆಕೆಯಲ್ಲಿ ಬ್ಲೇಕ್, ಲಾರೆನ್ಸ್‌ರ ಅಂಶಗಳನ್ನು ನೋಡುತ್ತಾರೆ. ಅವರು ಜೆ.ಕೆ.ಯನ್ನು ನೋಡುವುದು ಬೈಬಲ್‌ನ ‘ಹುಡುಕು, ನಿನಗೆ ಕಾಣುತ್ತದೆ’ (seek; thou shalt find) ಎಂಬ ಮಾತಿನ ನಿರಾಕರಣೆಯಿಂದ. ಅರಿಯದಂತೆ ತಿಳಿಯುತ್ತ ಹೋಗುವ ಐರೋಪ್ಯ ಪರಂಪರೆಯಲ್ಲಿ ದಣಿದ ಹಕ್ಸ್‌ಲೀಗೆ ಇದು ಅಗತ್ಯವೇನೊ?

ಆದರೆ ಕೃಷ್ಣಮೂರ್ತಿ ‘ಹುಡುಕಲು ಆರಂಭಿಸಿದರೆ ನಿನಗೆ ದೊರೆಯುವುದಿಲ್ಲ’ ಎನ್ನುತ್ತಾರೆ. ಹಠ ಹಿಡಿದು ಹುಡುಕಲು ಹೋದರೆ ನಿನ್ನ ಮನಸ್ಸಿನಲ್ಲಿದ್ದದ್ದನ್ನೇ ನೀನು ನೋಡುತ್ತಿ. ನೀನು ನೋಡುವುದು ಏನಿದ್ದರೂ ನಿನಗೆ ಪರಿಚಿತವಾದುದನ್ನೇ. ಕಂಡು ಕಂಡು ಹಳಸಿದ್ದನ್ನೇ…. ನಿನ್ನ ಹಠವನ್ನು ಮೀರಿದ್ದು ನಿನಗೆ ಕಾಣಿಸುವುದೇ ಇಲ್ಲ. ಆ ‘ಇನ್ನೊಂದರ’ ದರ್ಶನವಾಗಬೇಕಾದರೆ ಹುಡುಕುವ ಹಠವನ್ನು ಬಿಡಬೇಕು.

ಬಹುಶಃ ಜೈನರಿಗೂ ಇದು ಅರ್ಥವಾಗಿದೆ. ಬಾಹುಬಲಿ ತನ್ನ ಅಣ್ಣನಾದ ಭರತನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಆದರೂ ವೈರಾಗ್ಯಭಾವದಿಂದ ತನ್ನ ರಾಜ್ಯವನ್ನು ಅಣ್ಣನಾದ ಭರತನಿಗೇ ಬಿಟ್ಟುಕೊಟ್ಟು ಪ್ರತಿಮಾಯೋಗದಲ್ಲಿ ತಪಸ್ಸನ್ನು ಗೈಯ್ಯುತ್ತಾನೆ. ಎಷ್ಟು ಕಾಲ ಸಂದರೂ ಬಾಹುಬಲಿಗೆ ಜ್ಞನೋತ್ಪತ್ತಿಯಾಗುವುದಿಲ್ಲ. ತಾನು ತಪಸ್ಸಿಗೆ ನಿಂತ ನೆಲ ಅಣ್ಣನಾದ ಭರತನದ್ದು ಎಂಬ ಪೂರ್ವಾಗ್ರಹ ಅವನನ್ನು ಆವರಿಸಿರುತ್ತದೆ.

ಭರತನ ಅಹಂಕಾರಕ್ಕೆ ಪೆಟ್ಟುಬಿದ್ದಿದೆ. ಬಾಹುಬಲಿಯೂ ಇನ್ನೊಂದು ಬಗೆಯ ಅಹಂಕಾರದ ಮದ್ದಾನೆಯ ಮೇಲೆಯೇ ಕೂತಿದ್ದಾನೆ. ಅಹಂಕಾರದ ಮದ್ದಾನೆಯ ಮೇಲೆ ಇರುವುದರಿಂದ ಅವನಿಗೆ ಬಿಡುಗಡೆ ಆಗುವುದೇ ಇಲ್ಲ. ತಾನು ಅಣ್ಣನ ನೆಲದಲ್ಲಿ ನಿಂತಿದ್ದೇನೆಂಬ ಪೂರ್ವಗ್ರಹದಿಂದ ಬಿಡುಗಡೆಗೊಂಡಾಗಲೇ ಅವನು ಮುಕ್ತನಾಗುತ್ತಾನೆ.

ನೀನು ಹಠದಿಂದ ಹುಡುಕತೊಡಗಿದರೆ ಅದು ಸಿಗುವುದಿಲ್ಲ ಎನ್ನುತ್ತಾರೆ ಜೆ.ಕೆ. ಒಮ್ಮೆ ಜೆಕೆಯವರೊಂದಿಗೆ ಮದ್ರಾಸಿನಲ್ಲ ಒಂದು ವಾರ ಇದ್ದಾಗ ಸಂಕೋಚದಿಂದ ಕೇಳಿದೆ; ‘ಹಕ್ಸ್‌ಲೀ ನಿಮ್ಮ ಪುಸ್ತಕಕ್ಕೆ ಪಾಂಡಿತ್ಯಪೂರ್ಣ ಮುನ್ನುಡಿ ಬರೆದಿದ್ದಾರಲ್ಲ, ನೀವು ಹೇಗೆ ಅನುಮತಿ ಕೊಟ್ಟಿರಿ?’ ಎಂದು. ಆಗ ಜೆಕೆ ‘ಹಕ್ಸ್‌ಲೀ ನನ್ನ ಪ್ರಿಯ ಸ್ನೇಹಿತ, ಸರ್’ ಎಂದು ದಿವ್ಯವಾಗಿ ನಕ್ಕು ನನ್ನ ಪ್ರಶ್ನೆಯನ್ನೇ ಅಸಂಬದ್ಧಗೊಳಿಸಿಬಿಟ್ಟರು.

*

ಮತೀಯ ಬಡಿದಾಟದ ಈ ಕಾಲದಲ್ಲಿಯಂತೂ ನಮಗೆ ನಮ್ಮ ಆತ್ಮದರ್ಶನ ಮಾಡಿಸುವ ಜೆಕೆ ತುಂಬ ಪ್ರಸ್ತುತ. ಈ ಬಗ್ಗೆ ಒಂದಿಷ್ಟು ಮಾತುಗಳನ್ನಾಡಲು ಸಭೆಯ ಅನುಮತಿ ಬೇಡುತ್ತೇನೆ.

ಮೊದಲನೆಯದಾಗಿ ಮತ ಮತ್ತು ಧರ್ಮ ಎಂಬ ಶಬ್ದಗಳನ್ನು ನಾವು ತಪ್ಪಾಗಿ ಪ್ರಯೋಗಿಸುತ್ತಿದ್ದೇವೆ. ಲೋಕದೃಷ್ಟಿಯಲ್ಲಿ ಸಹಜವಾಗಿ ಸೆಕ್ಯುಲರ್ ಆಗಿರುವ ಸಾಮಾನ್ಯ ಜನರಾದ ಹಿಂದೂಗಳು ಬಳಸುವ ಭಾಷೆಗಳಲ್ಲಿ ವಿಪರ್ಯಾಸವೆಂದರೆ, ಅವರ ಈ ಸಹಜ ಸ್ಥಿತಿಯನ್ನು ಹೇಳುವ ‘ಸೆಕ್ಯುಲರ್’ ಎಂಬ ಶಬ್ದವೇ ಇಲ್ಲ. ಆದ್ದರಿಂದ ಧರ್ಮನಿರಪೇಕ್ಷತೆ ಎಂದುಬಿಡುತ್ತೇವೆ. ಧರ್ಮ ಎಂಬುದು ಬಹು ವಿಚಿತ್ರವಾದ – ನಮ್ಮದು ಮಾತ್ರವಾದ (ಭಾರತದ) ಶಬ್ದ. ಇರುವ ಸತ್ಯಗಳನ್ನು ಕಾಣಿಸುವ ಶಬ್ದವು. ಇಂಗ್ಲಿ‌ಷ್‌ನ ರಿಲಿಜನ್ ಎಂಬ ಶಬ್ದಕ್ಕೆ ‘ಮತ’ ಎಂಬ ಶಬ್ದವನ್ನು ಬಳಸಬಹುದಾದರೆ ಮತನಿರಪೇಕ್ಷ ಎನ್ನಬಹುದು. ಸೆಕ್ಯೂಲರ್ ಎಂದರೆ ಮತ ನಿರಪೇಕ್ಷತೆಯೇ ವಿನಃ ಧರ್ಮ ನಿರಪೇಕ್ಷತೆಯಲ್ಲ – ಯಾಕೆಂದರೆ  ಧರ್ಮ ಅಪೇಕ್ಷೆಗೆ ಅತೀತವಾದದ್ದು.

ಮತೀಯತೆಯಿಂದ ಮಾನವಕುಲ ಪಡೆಯುವ ಪ್ರಯೋಜನ ಅಷ್ಟಕ್ಕಷ್ಟೆ ಎಂಬುದನ್ನು ಬಹು ಹಿಂದಿನಿಂದಲೂ ನಮ್ಮ ದೇಶದ ಭಕ್ತರು ಮತ್ತು ಅಲೌಕಿಕ ಜ್ಞಾನಿಗಳು ಹೇಳುತ್ತಾ ಬಂದಿದ್ದಾರೆ. ನೀನು ದೇವಸ್ಥಾನ ಕಟ್ಟುವುದರಿಂದ ಪ್ರಯೋಜನವಿಲ್ಲ; ನೀನೇ ದೇವರು ಸದಾ ನೆಲೆಸುವ ಗುಡಿಯಾಗಿಬಿಡು ಎನ್ನುತ್ತಾನೆ ಬಸವಣ್ಣ. ನಮ್ಮ ಮತಾಚಾರ್ಯರಲ್ಲಿ ರಾಮಾನುಜ ಮತ್ತು ಶಂಕರರು – ಶಂಕರರು ತಾತ್ವಿಕವಾಗಿಯೇ – ಮತದ ಯಾಂತ್ರಿಕ ಆಚರಣೆಯ ಮಿತಿಗಳನ್ನು ತಿಳಿದವರಾಗಿದ್ದಾರೆ.

ಮತೀಯ ಆಚರಣೆಗಳ (ದೈನಿಕ ವ್ಯಾಯಾಮದ ಹಾಗಿನ ಪುನರಾವರ್ತನೆ ಅಗತ್ಯವಾದ) ವ್ರತದಿಂದ ಕಳಚಿಕೊಂಡು ನಮ್ಮ ನಿತ್ಯದಲ್ಲಿ ಪರಮಾರ್ಥದ ಬೆರಗನ್ನು ಕಾಣುವುದು ಹೇಗೆ ಎಂಬುದೂ ಅವರನ್ನು ಕಾಡಿತ್ತು. ಈ ಪರಮಾರ್ಥದ ಬೆರಗು ನಮ್ಮ ನಿತ್ಯದ ಐಹಿಕ ಬದುಕಿನಲ್ಲಿ ಸಹಜವೆಂಬಂತೆ ಮೂಡಲು ಸಾಧ್ಯವೇ ಎಂಬುದರ ಕಳಕಳಿ ಅವರಲ್ಲಿ ಇರದಿದ್ದರೆ ಅವರ ಮತ ತತ್ವಗಳು ನಿಸ್ಸಾರವಾಗಿರುತ್ತಿದ್ದವು.

ನಮ್ಮ ಸಪ್ತರ್ಷಿಗಳು. ಈ ಕಾಲದಲ್ಲಿ ಮತಕ್ಕೆ ಅಂಟಿಕೊಳ್ಳದಂತೆ, ಆದರೆ ಮತಗಳನ್ನು ನಿರಾಕರಿಸದಂತೆ ನಮ್ಮನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದವರು. ಕ್ರಿಸ್ತನೊಂದಿಗೆ, ಇಸ್ಲಾಮಿಕ್ ಪಂಥದೊಂದಿಗೆ, ಯಹೂದ್ಯರೊಂದಿಗೆ ಅಥವಾ ಯಾವುದೇ ಮತ ಪ್ರವರ್ತಕರೊಂದಿಗೆ ಈ ಸಪ್ತರ್ಷಿಗಳು ಸಹಜವೆಂಬಂತೆ ಒಡನಾಡಬಲ್ಲರು. ನಿಷ್ಠಾವಂತ ಮತೀಯತೆಯಲ್ಲಿ ಒಂದು ಪಂಥದವರು ಇನ್ನೊಂದಕ್ಕೆ ನಿಷ್ಠೆ ಬದಲಾಯಿಸುವಂತಿಲ್ಲ. ಆದರೆ ಅರವಿಂದರ ಜೊತೆ, ಗಾಂಧೀಜಿ ಜೊತೆ, ಜೆ.ಕೆ. ಜೊತೆ ಯಾವ ಮತದ ಅನುಯಾಯಿಯೇ ಇರಲಿ ನಿರಾಳವಾಗಿ ಇರಬಹುದು.

ಠಾಗೋರರಂತೂ ‘ನಾವು ಐರೋಪ್ಯ ಮಾದರಿಯ ರಾಷ್ಟ್ರೀಯತೆಯನ್ನು ಒಪ್ಪಿದರೆ ನಮ್ಮ ದೇಶಕ್ಕೆ ಭವಿಷ್ಯವೇ ಇಲ್ಲ’ ಎಂದಿದ್ದಾರೆ. ‘ಐರೋಪ್ಯ ರಾಷ್ಟ್ರೀಯತೆ – ‘ಅದೇ ಒಂದು ಮತ, ಅದೇ ಒಂದು ಜನಾಂಗ, ಅದೇ ಒಂದು ಭಾಷೆಯನ್ನು ಮಾತಾಡುವ ಜನ ಕಟ್ಟಿಕೊಳ್ಳುವುದ ಎಂಬ ತತ್ವದ ಮೇಲೆ ನಿಂತದ್ದು. ನಮ್ಮದು ಹಲವು ಭಾಷೆಗಳ, ಹಲವು ಮತಗಳ, ಹಲವು ಸಂಸ್ಕೃತಿಗಳ ನಾಡಾದ್ದರಿಂದ ಐರೋಪ್ಯ ರೀತಿಯ ರಾಷ್ಟ್ರೀಯತೆ ನಮಗೆ ಒಗ್ಗುವುದಿಲ್ಲ’ ಎಂದು ಧೈರ್ಯವಾಗಿ ಹೇಳಿದರು. ರಿಲಿಜಿಯನ್ ಎಂದು ಪಶ್ಚಿಮದ ದೇಶಗಳು ತಿಳಿಯುವುದನ್ನು ಹೊಸ ರೂಪದಲ್ಲಿ ನಮಗೆ ಕಾಣಿಸಿದವರು ಠಾಗೋರರು. ಅವರ ಧಾರ್ಮಿಕತೆಯ ಹುಡುಕಾಟ ಸೌಂದರ್ಯದ ಹುಡುಕಾಟವೂ ಆಗಿ ನಮ್ಮೆದುರು ನಿಲ್ಲುತ್ತದೆ.

ಆದರೆ, ದುಃಖದ ವಿಷಯವೆಂದರೆ ಭಾರತ ಈ ಮುಕ್ತಸ್ಥಿತಿಯಿಂದ ಜಾರಿ ಮತೀಯತೆಯ ಕಡೆಗೆ ಹೊರಳುತ್ತಿದೆ ಎಂಬುದು.

ಚರಿತ್ರೆಯಲ್ಲಿ ಮತಗಳು ಯಾಕೆ ಮಾನವನಿಗೆ ಅಗತ್ಯವಾದವು ಎಂಬುದನ್ನು ನಾವು ಕೇಳಿಕೊಳ್ಳಬೇಕು. ಅನೇಕ ಬಾರಿ ನಾವು ನಿತ್ಯ ಜೀವನದಲ್ಲಿ ಧಾರ್ಮಿಕವಾದ ವಿಶೇಷ ಕಾರಣಕ್ಕಾಗಿ ಮಾತ್ರ ಮತಗಳನ್ನು ಬಳಸುವುದಿಲ್ಲ. ನಮ್ಮ ದೇಶದ ಹಬ್ಬಗಳೆಲ್ಲ – ಮತಾಧಾರಿತ ಹಬ್ಬಗಳು ಕೂಡ- ಮತ ಪ್ರಕ್ರಿಯೆಯಲ್ಲೇ ನಿಂತುಬಿಡುವುದಿಲ್ಲ. ಮಕ್ಕಳಿಗೆ ಆಟಿಕೆ ಕೊಳ್ಳಲು, ಸಿಹಿತಿಂಡಿ ಕೊಳ್ಳಲು, ಹೊಸ ಬಟ್ಟೆ ಹಾಕಿ ಸಂಭ್ರಮಿಸಲು ಕಾರಣವಾಗುತ್ತವೆ. ಹಲವು ಮುಗ್ಧ ಋಷಿಗಳಿಗೆ ಈ ಹಬ್ಬವೇ ಕಾರಣವಾಗಿಬಿಡುತ್ತದೆ. ಅದೊಂದು ಒಡನಾಟದ, ಸಂತೋಷದ, ಸಾಮೂಹಿಕ ಸಂಭ್ರಮದ ಧಾರ್ಮಿಕ ರಥೋತ್ಸವ ಇದ್ದ ಹಾಗೆ.

ಭಾರತದಲ್ಲಂತೂ ಎಲ್ಲ ಸಂಭ್ರಮವೂ ಮತಾಚರಣೆಯ ನೆವದಲ್ಲಿ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಮತಾಚರಣೆಯನ್ನು ಜರಿಯಲಾಗಲೀ, ಅದನ್ನು ತೊಳೆದು ಅತಿ ಮಡಿಗೊಳಿಸಲಾಗಲೀ ಹೋಗಬಾರದು.

ಯೇಸುಕ್ರಿಸ್ತನ ಒಂದು ಕಥೆ ನೆನಪಾಗುತ್ತದೆ. ಯೇಸು ಪೂಜಾಸ್ಥಳಗಳಲ್ಲಿದ್ದ ಜೂಜುಕೋರರನ್ನು ಅಟ್ಟಿ ಓಡಿಸಿದನಂತೆ. ಒಬ್ಬ ಐರೋಪ್ಯ ಚಿಂತಕ ‘ಯೇಸು ಹಾಗೆ ಮಾಡಬಾರದಿತ್ತು’ ಎನ್ನುತ್ತಾನೆ. ದೇವಸ್ಥಾನಗಳು ನಮಗೆ ಆಕರ್ಷಕವಾಗುವುದು ನಿತ್ಯ ಜೀವನದ ಸಾಮಾನ್ಯ ಸಂಭ್ರಮಗಳು ಅಲ್ಲಿಯೂ ಇದ್ದಾಗ ಮಾತ್ರ. ನಮ್ಮ ದೇವಸ್ಥಾನಗಳಲ್ಲಂತೂ ಕಾಮಸೂತ್ರದ ಚಿತ್ರಗಳನ್ನೇ ಕೆತ್ತಿರುತ್ತಾರೆ. ನಮ್ಮ ದೇವಸ್ಥಾನದ ಕಲ್ಪನೆಯೇ ಬೇರೆ ತರಹದ್ದು. ಅದನ್ನು ತೀರ ಶುಭ್ರಗೊಳಿಸಲು ಹೋಗಬಾರದು.

ಫ್ರಾನ್ಸ್‌ನ ಬೃಹತ್ ಕಟ್ಟಡ ಐಫೆಲ್‌ಟವರ್ ನೋಡಿ ಫ್ರಾನ್ಸ್ ಎಷ್ಟು ಬಲವಾದ ದೇಶ ಅಂದುಕೊಂಡು ಟವರ್‌ನ ಒಳಗೆ ಪ್ರವೇಶ ಮಾಡಿದರೆ ಅಲ್ಲಿ ಮಂಡಕ್ಕಿಯನ್ನೋ, ಇನ್ನೂ ಏನೇನನ್ನೋ ಮಾರುವವರು ಕುಳಿತಿರುತ್ತಾರೆ. ಅವರು ಇದ್ದರೆ ಮಾತ್ರ ಐಫೆಲ್‌ಟವರ್ ಕೂಡ ಡೊಮೆಸ್ಟಿಕೇಟ್ ಆಗಿ ಪಳಗಿ ಆತ್ಮೀಯವಾಗುತ್ತದೆ. ಮತಧರ್ಮದ ಆಚರಣೆಗಳೂ ಹಾಗೆಯೇ. ಹೀಗೆ ಮತಾಚರಣೆ ಕೂಡ ತನ್ನ ಉದಾತ್ತ ದರ್ಶನದ ಜೊತೆ ನಮ್ಮ ಐಹಿಕದ ಉಲ್ಲಾಸಗಳನ್ನು ಬೆಸೆದು ನೇಯುವ ಕೆಲಸ ಮಾಡುತ್ತದೆ.

ರಿಲಿಜನ್ ಶಬ್ದ ಸೂಚಿಸುವ ‘ಮತ’ ಇನ್ನೊಂದು ಬಗೆಯಲ್ಲಿ ಕೆಲಸ ಮಾಡುತ್ತದೆ- ಲೋಹಿಯಾ ಈ ಬಗ್ಗೆ ಬರೆದಿದ್ದಾರೆ. ಒಂದು ದೇಶ ಕಷ್ಟದ ಸ್ಥಿತಿಯಲ್ಲಿದ್ದಾಗ ಜನರನ್ನು ಒಟ್ಟುಗೂಡಿಸಿ ಮಾನಸಿಕ ಸ್ಥೈರ್ಯವನ್ನು, ಶಕ್ತಿಯನ್ನು ‘ರಿಲಿಜನ್’ ನೀಡುತ್ತದೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ, ಜರ್ಮನ್ನರಿಂದ ಆಕ್ರಮಿತವಾಗಿ ಅಂತಃಸ್ಥೈರ್ಯ ಕಳೆದುಕೊಂಡಾಗ ಸ್ಟಾಲಿನ್ ತಾನೇ ಮುಚ್ಚಿಸಿದ ಚರ್ಚ್‌, ಮಂದಿರಗಳ ಬಾಗಿಲು ತೆರೆಸಿದ. ‘ತಮ್ಮ ಚರ್ಚ್‌, ತಮ್ಮ ದೇಶ’ ಎಂದು ರಷ್ಯನ್ನರು ಜರ್ಮನ್ ಆಕ್ರಮಣವನ್ನು ಎದುರಿಸಿದರು, ಹೀಗೆ ದೇವರಿಲ್ಲ ಎನ್ನುವ ಕಮ್ಯುನಿಸ್ಟ್ ರಷ್ಯಾವೇ ಜನರಲ್ಲಿ ಅಂತಹ ಚೇತನ ತುಂಬಲು ಚರ್ಚುಗಳನ್ನು ಬಳಸಿತು.

ಇತ್ತೀಚೆಗೆ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಕುಸಿದುಬಿದ್ದಾಗ ಸಾಮಾನ್ಯವಾಗಿ ಚಚಿಗೆ ಹೋಗದವರೂ ಚರ್ಚ್‌‌ಗೆ ಧಾವಿಸಿದರು. ತಮ್ಮ ದುಃಖದಲ್ಲಿ, ಕಷ್ಟದಲ್ಲಿ ಚರ್ಚುಗಳು ಅವರಿಗೆ ಅಗತ್ಯ ಎನಿಸಿತು. ಇಡೀ ಯೂರೋಪ್ ಒಟ್ಟಾಗಿ ಪಾಲೆಸ್ಟೈನರಿಗೆ ದೇಶವೇ ಇಲ್ಲದಂತೆ ಮಾಡಿದಾಗ ಅವರು ಮತದ ಹೆಸರಿನಲ್ಲಿ ಒಟ್ಟಾಗಲು ಪ್ರಯತ್ನಿಸಿದರು. ತಮಗಾದ ಅವಮಾನ ಕಳೆದುಕೊಳ್ಳಲು ಅವರು ಇಸ್ಲಾಮನ್ನು ಬಳಸುತ್ತಿದ್ದಾರೆ. ಆಫ್ಘಾನರೂ ಇಸ್ಲಾಂನ್ನು ಬಳಸುವುದು ಕೂಡ ಈ ರೀತಿಯಲ್ಲೇ. ಹೀಗೆ ಒಂದು ಜನಾಂಗ ಖಿನ್ನಗೊಂಡಾಗ ಒಗ್ಗಟ್ಟಿಗಾಗಿ ಮತವನ್ನು ಬಳಸುತ್ತದೆ. ಅಮೆರಿಕಾದ ರೆಡ್ ಇಂಡಿಯನ್ನರು ಪ್ರಕೃತಿಯ ಜೊತೆ ಜೈವಿಕ ನಿಕಟತೆಯಲ್ಲೇ ತಮ್ಮ ದೈವವನ್ನು ಕಂಡುಕೊಂಡವರು. ಇಷ್ಟು ಸದ್ಯವಾದ ಒಡನಾಟದಲ್ಲಿ ಅವರಿಗೆ ತಾತ್ವಿಕವಾದ ಮತದ ಅಗತ್ಯ ಬೀಳಲಿಲ್ಲ. ಅವರ ‘ಇಹ’ದಲ್ಲೇ ‘ಪರ’ದ ಒಡನಾಟವಿತ್ತು. ಅವರಿಗೆ ಒಬ್ಬ ಪೋಪ್ ಬೇಕಿರಲಿಲ್ಲ. ಇಂದು ಅವರ ಸ್ಥಿತಿ ಏನಾಗಿದೆ? ಅವರನ್ನು ಐರೋಪ್ಯರು ಸಂಪೂರ್ಣವಾಗಿ ನಾಶಮಾಡಿಬಿಟ್ಟಿದ್ದಾರೆ. ರಿಸರ್‌ವೇಶನ್ನುಗಳಲ್ಲಿ ದಾಖಲಾದ ಅವರನ್ನು ಆಧುನಿಕ ಅಮೆರಿಕ ಕುಡುಕರನ್ನಾಗಿ ಮಾಡಿದೆ. ಇಡೀ ಒಂದು ನಾಗರಿಕತೆ ಅಸಂಘಟನೆಯ ಕಾರಣದಿಂದಾಗಿ ತಂತ್ರಜ್ಞಾನದಿಂದ ವಂಚಿತವಾಗಿ ನಾಶವಾಗಿ ಹೋದದ್ದನ್ನು ನಾವು ಕಾಣುತ್ತಿದ್ದೇವೆ.

ಮತ ಎಷ್ಟೋ ವೇಳೆ ಶ್ರೀಮಂತರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಿಕ್ಕೂ ಬಳಕೆಯಾಗುತ್ತದೆ. ಇಲ್ಲಿ ಮತ ಬೇರೆಯೇ ರೀತಿಯ ಕೆಲಸ ಮಾಡುತ್ತದೆ. ಜಮೀನ್ದಾರಿಕೆಯ ವಿರುದ್ಧ ಬಡವರು ಬಂಡೇಳದಂತೆ, ತಮ್ಮ ಆಸ್ತಿಯನ್ನು ಲೂಟಿಗೈಯದಂತೆ ಅಧಿಕಾರದಲ್ಲಿರುವ ಶ್ರೀಮಂತರು ಮತಗಳನ್ನು ಓಪಿಯಂನಂತೆ (ಮಾರ್ಕ್ಸ್) ಬಳಸಿಕೊಳ್ಳುತ್ತಾರೆ.

ಮತಗಳು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಲು ಬಳಸುವ ವಾಹಕವಾಗಿ, ಮಾಧ್ಯಮವಾಗಿಯೂ ಕೆಲಸ ಮಾಡುತ್ತವೆ. ಮತಗ್ರಂಥಗಳಲ್ಲಿ ಬರುವ ಎಷ್ಟೋ ಕಥೆಗಳು ಘಟನೆಗಳು ಈ ಬಗೆಯ ಮೌಲ್ಯವಾಹಕಗಳು ಎಂಬುದನ್ನು ಮರೆಯಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ಮತಗಳು ಇನ್ನೊಂದು ಮಹತ್ವದ ನೆಲೆಯಲ್ಲಿ, ವಾಚ್ಯಾತೀತ ನೆಲೆಯಲ್ಲಿ, ಕೆಲಸ ಮಾಡುತ್ತವೆ. ಲೋಹಿಯಾ ಹೇಳುವಂತೆ ಮತಗಳ ಘನೋದ್ದೇಶವಾಗಿ ಒಂದು ಧ್ಯಾನದ ಶಿಸ್ತು ಇದೆ. ಬೌದ್ಧಧರ್ಮದಲ್ಲಿ ಈ ಧ್ಯಾನದ ಶಿಸ್ತೇ ಅತಿಮುಖ್ಯವಾಗಿ ಇದೆ. ನಮ್ಮ ಒಳಗೆ ಇಡೀ ಸೃಷ್ಟಿಯ ವೈಚಿತ್ರ್ಯದ ಬೆರಗನ್ನು ಅನುಸಂಧಾನ ಮಾಡಿಕೊಂಡು ಧ್ಯಾನಸ್ಥವಾಗಲು, ಅಥವಾ ನಾನೆಂಬ ಭಾವನೆಯೇ ಇಲ್ಲವಾಗಲೂ ಅಗತ್ಯದ ಶಿಸ್ತನ್ನು ಮತಧರ್ಮಗಳು ಒದಗಿಸುತ್ತವೆ. ಇದೇ ಯೋಗ.

ವೀರಶೈವ ಧರ್ಮದಲ್ಲಿ ಅದರಲ್ಲೂ ಅಲ್ಲಮನಲ್ಲಿ ಯೋಗದ ಪರಮಾವಧಿಯ ಮಂಥನವನ್ನು ಕಾಣಬಹುದು. ಇಸ್ಲಾಂನಲ್ಲೂ, ಕ್ರೈಸ್ತಮತದಲ್ಲೂ ಈ ಬಗೆಯ ಧ್ಯಾನದ ಶಿಸ್ತಿದೆ. ಪ್ರತಿ ಮತದ ನಿತ್ಯದ ಆಚರಣೆಗಳು ಇತರ ಮತದವರಿಗೆ ಅಸಂಬದ್ಧವಾಗಿ ಕಾಣುವುದುಂಟು. ಆದರೆ ಮತಧರ್ಮಗಳ ಮೌಲ್ಯವಾಹಕತನ ಮತ್ತು ಧ್ಯಾನಶಿಸ್ತುಗಳು ಎಲ್ಲ ಮತಗಳಲ್ಲೂ ಸಾಮಾನ್ಯವಾಗಿ ಕಂಡುಬರುತ್ತವೆ; ಎಲ್ಲದರ ಗುರಿ ಅಂತಿಮವಾಗಿ ಒಂದೇ ಎನ್ನಿಸುವಂತೆ ಇರುವ ಪ್ರಯೋಜನಗಳು.

ಆದ್ದರಿಂದ ಮತ ಧರ್ಮಗಳ ಬಗ್ಗೆ ಮಾತನಾಡುವಾಗ ಯಾವಾಗಲೂ ಒಂದು ತೊಡಕು ಎದುರಾಗುತ್ತದೆ. ಆಸ್ತಿ ಉಳಿಸಿಕೊಳ್ಳಲು, ದೇಶ ಕಾಯ್ದುಕೊಳ್ಳಲು ಧರ್ಮದ ಬಳಕೆಯಾಗುವುದರಿಂದ ನಮಗೆ ಯಾವುದು ಹಿತವೋ, ನಮ್ಮ ಎದುರಾಳಿಗೆ ಅದು ವಿಷವಾಗಿ ಕಾಣುತ್ತದೆ. ಆದರೆ ಘರ್ಷಣಾತೀತವಾಗಿ ಹೇಳಬಹುದಾದದ್ದು ಮತಗಳಲ್ಲಿ ಅಡಕವಾಗಿರುವ ನೀತಿ ಮತ್ತು ಧ್ಯಾನದ ವಿಚಾರ ಮಾತ್ರ.

ನನ್ನ ಬಗ್ಗೆಯೇ ಒಂದು ಮಾತು ಆಡಲು ಬಯಸುತ್ತೇನೆ – ಈ ಸಂದರ್ಭದಲ್ಲಿ – ಮತೀಯವಾದ ಆಚರಣಾನಿಷ್ಠ ವಾತಾವರಣದಲ್ಲಿ ಹುಟ್ಟಿ ಬೆಳೆದ ನಾನು ಮತೀಯತೆಯಿಂದ ಬಿಡುಗಡೆಗೆ ಯತ್ನಿಸುತ್ತಲೇ ಅದನ್ನು ನಿರಾಕರಿಸದೆ ಇರುವುದು ಈ ಕಾರಣಕ್ಕಾಗಿಯೇ. ಪರಸ್ಪರ ವಿರೋಧವಾಗಿ ಕಾಣುವ ಲೋಹಿಯಾ ಮತ್ತು ಜೆ.ಕೆ. ಕೂಡಿ ನನಗೆ ಕಾಣಿಸಿದ ಸತ್ಯವಿದು.

ನಮ್ಮ ಈ ಸಪ್ತರ್ಷಿಗಳಂತೆಯೇ ಕಬೀರ, ಅಲ್ಲಮ, ತುಕಾರಾಮ್ ಮತ್ತು ನಮ್ಮ ದಾಸರುಗಳು ಬೆರಗನ್ನು ಉಳಿಸಿಕೊಂಡವರು; ಮತೀಯತೆಯಲ್ಲಿ ಹೃದಯವನ್ನು ಕಳೆದುಕೊಂಡವರಲ್ಲ. ಆ ಸಂತರು ದೇವರೊಂದಿಗೆ ಮಾತನಾಡುವ ಕ್ರಮವೇ ಅತ್ಯಂತ ಆತ್ಮೀಯ ಅನುಭವ. ಇತ್ತೀಚೆಗೆ ನಾನು ತೀವ್ರ ಅನಾರೋಗ್ಯದಲ್ಲಿ ದಣಿದಿದ್ದಾಗ ಪುರಂದರದಾಸರ ಹಾಡೊಂದನ್ನು ಕೇಳಿ ವಿಚಿತ್ರವಾದ ಸಂತೋಷವನ್ನು ಅನುಭವಿಸಿ ಮೈಮರೆತೆ. ‘ನಿನಗೂ ಆಣೆ ರಂಗ, ನನಗೂ ಆಣೆ’ ಎಂದು ದೇವರಿಗೇ ಆಣೆ ಹಾಕಿ, ಪ್ರೀತಿಯ ಸಖ್ಯದಲ್ಲಿ ದೇವರಿಗೇ ಎದುರು ಬೀಳುವ ಈ ಬಾಲ್ಯಚೇಷ್ಟೆ ನಮ್ಮನ್ನು ಉಲ್ಲಾಸಗೊಳಿಸಿ ತತ್ಪರತೆಯ ಭಾವವನ್ನು ಹುಟ್ಟಿಸುತ್ತದೆ. ಸಲೀಸಾಗಿ, ಸಲುಗೆಯಿಂದ ದೇವರ ಮೈಮುಟ್ಟಿ ನುಡಿಯುವ ದಾಸರ ಈ ಮನಃಸ್ಥಿತಿ ಬೆರಗನ್ನೇ ಅರಿಯುವ ಪರಿಯಾಗಿ ಪಡೆದದ್ದು.

ಆದ್ದರಿಂದಲೇ ಧರ್ಮ ಮತಗಳ ಬಗ್ಗೆ ಮಾತನಾಡುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ ಎಂದದ್ದು. ಒಬ್ಬ ಚಿಂತಕ ಹೇಳುತ್ತಾನೆ – ‘ಈರುಳ್ಳಿಯ ತಿರುಳು ಬೇಕೆಂದು ಅದರ ಸಿಪ್ಪೆ ಸುಲಿಯುತ್ತಾ ಹೋದರೆ ಕಡೆಗೆ ಏನೂ ಸಿಗುವುದಿಲ್ಲ’ ಎಂದು. ಈರುಳ್ಳಿಯ ತಿರುಳೆಲ್ಲಾ ಸಿಪ್ಪೆಯೇ, ಎಲ್ಲಾ ಸಿಪ್ಪೆಯೂ ತಿರುಗಳೇ. ಹಾಗೆಯೇ ಮತಧರ್ಮದ ತಿರುಳನ್ನು ಹುಡುಕಲು ಸಿಪ್ಪೆ ಸುಲಿಯುತ್ತಾ ಹೋದರೆ ತಿರುಳು ಸಿಗದೆ ಹೋಗಬಹುದು. ಅದರ ಬದಲು ಅವುಗಳ ಜೊತೆಗೆ ನಾವು ತೊಡಗಿಕೊಳ್ಳುವ ಕ್ರಮದಲ್ಲಿ ಅವುಗಳ ಸತ್ಯ ಮತ್ತು ಸತ್ವ ಇರುತ್ತದೆ.

ಕೆಲವು ಮಹಾಪುರುಷರು ಧರ್ಮಗಳಿಗೆ ಇಂತಹ ವಿರೇಚನದ ಕ್ರಿಯೆ ನಡೆಸಿದ್ದಾರೆ. ೨೦ನೆಯ ಶತಮಾನದ ದೊಡ್ಡ ಚಿಂತಕ ಕಿರ್ಕೆಗಾರ್ಡ್‌‌ನಿಂದ ಕ್ರೈಸ್ತಧರ್ಮದಲ್ಲಿ ಇಂತಹ ಬಿಡುಗಡೆಯ ಕ್ರಿಯೆ ಸ್ವಲ್ಪಮಟ್ಟಿಗೆ ನಡೆದಿದೆ. ಆದರೂ ಅಮೆರಿಕದ ಕ್ರೈಸ್ತಧರ್ಮ ಬಡಪೆಟ್ಟಿಗೆ ಬಗ್ಗುವಂಥದಲ್ಲ. ಅಮೆರಿಕದ ಮೇಲೆ, ಅದರ ಸಂಪತ್ತಿನ ಮೇಲೆ ಪ್ರೇಮ ಹುಟ್ಟಿಸುವುದು ಅದರ ಕೆಲಸ. ದಕ್ಷಿಣ ಅಮೆರಿಕದಲ್ಲಿ ಡಾರ್ವಿನ್ ವಿಕಾಸವಾದ ಹೇಳಿಕೊಡಬೇಕು ಎಂದರೆ ಹಳೆಯ ಒಡಂಬಡಿಕೆಯ ಜೆನೆಸಿಸ್‌ನಲ್ಲಿ ಇರುವ ಜಗತ್ತು ಮತ್ತು ಮನುಷ್ಯ ಸೃಷ್ಟಿಯ ಪುರಾಣವನ್ನು ಹೇಳಿಕೊಡಬೇಕು ಎಂದು ಪಟ್ಟು ಹಿಡಿಯಲಾಗುತ್ತಿದೆ. ಅಂತೆಯೇ ಅಮೆರಿಕದ ನವವಸಾಹತುಶಾಹಿ ಧೋರಣೆ ಇಸ್ಲಾಂ ಧರ್ಮ ಉಗ್ರಗೊಳ್ಳುವಂತೆ ಮಾಡುತ್ತಿದೆ.

ಹಿಂದೆ ಭಾರತದಲ್ಲಿ ಹಿಂದೂ ಧರ್ಮವು ತನ್ನ ಚಿಂತನೆಯ ನೆಲೆಯನ್ನು ಇಸ್ಲಾಂನಿಂದಾಗಿ ವಿಸ್ತರಿಸಿಕೊಂಡಿತು ಎನ್ನಬಹುದೇನೊ? ಏಕದೇವತೋಪಾಸನೆ, ದೇವರಿಗೇ ಪೂರ್ಣ ಶರಣಾಗತಿ, ಸಾಮಾಜಿಕವಾಗಿ ನಾವೆಲ್ಲ ಒಂದೇ, ಮೇಲುಕೀಳು ಇರಬಾರದೆಂಬ ಭಾವನೆಗಳು ಗಟ್ಟಿಯಾದದ್ದು ಇಸ್ಲಾಮ್‌ನ ಸಾಹಚರ್ಯದಿಂದ ಎಂದು ಕಾಣುತ್ತದೆ. ಕಬೀರನನ್ನು ಅಥವಾ ಇತರ ಸಂತಕವಿಗಳನ್ನು ಓದಿದಾಗ ಇಸ್ಲಾಮ್‌ನ ಪ್ರಭಾವ ಸ್ಪಷ್ಟವಾಗುತ್ತಾ ಹೋಗುತ್ತದೆ. ಎಲ್ಲಾ ಬಾಹ್ಯ ನಾಗರಿಕ ಮೇಲಾಟಗಳ ಹೊರತಾಗಿಯೂ ಇಸ್ಲಾಮ್ ಮತ್ತು ಹಿಂದೂ ಧರ್ಮಗಳು ಸಾಹಚರ್ಯದಿಂದಾಗಿ ಪರಸ್ಪರ ಬೆಳೆದಿವೆ. Islam is theologically narrow, but socially liberal; Hinduism is socially narrow but theologically liberal. ಇವೆರಡೂ ಒಂದರಿಂದ ಇನ್ನೊಂದು ಕಲಿಯಬಹುದಾದ್ದು ಇದೆ.

ನನಗೂ ಕೂಡ ಒಮ್ಮೊಮ್ಮೆ ಈ ಮೂರ್ತಿ ಆರಾಧನೆ ಅತಿರೇಕಕ್ಕೆ ಹೋಗುತ್ತಿದೆ ಎನ್ನಿಸಿದ್ದಿದೆ. ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ಹೋಗುವ ದಾರಿಯಲ್ಲಿ ದೊಡ್ಡ ಸರ್ಕಲ್ ಬಳಿ ಒಂದು ದೇವಸ್ಥಾನವಿದೆ. ಅಲ್ಲಿರುವ ವಿಗ್ರಹಗಳನ್ನೆಲ್ಲ ಎಷ್ಟೆಷ್ಟೋ ಬಣ್ಣಗಳಿಂದ ಶೃಂಗರಿಸಿಬಿಟ್ಟಿದ್ದಾರೆ. ನಾನು ಆ ಕಡೆ ಹೋದಾಗಲೆಲ್ಲ ‘ಇಸ್ಲಾಮ್ ಹೇಳಿದ್ದು ಸರಿ’ ಎನ್ನಿಸಲಿಕ್ಕೆ ಪ್ರಾರಂಭವಾಗುತ್ತದೆ. ಇಷ್ಟೆಲ್ಲ ಬಣ್ಣ ಬಳಿದು ದೇವರನ್ನು ನಿಖರಗೊಳಿಸಿ ನಿಲ್ಲಿಸಿದರೆ ದೇವರ ಬಗ್ಗೆ ಇರುವ ಬೆರಗು, ನಿಗೂಢತೆ ಅಸ್ತಿತ್ವದ ಹಪಹಪಿಕೆ ಎಲ್ಲಾ ಹೊರಟುಹೋಗುತ್ತದೆ.

ಮೈಸೂರಿನಲ್ಲಿ ಒಂದು ದೇವಸ್ಥಾನ ಇದೆ. ಅದರ ನೆತ್ತಿಯ ಮೇಲೆ ರಮನನ್ನು ಅಪ್ಪಿಕೊಂಡಿರುವ ದೊಡ್ಡ ಆಂಜನೇಯ ನಿಂತಿದ್ದಾನೆ. ಇದನ್ನು ಕಂಡು ಮುಜುಗರವಾಗುತ್ತದೆ. ಹಿಂದೆ ದೇವಾಲಯದ ನಿರ್ಮಾಣದಲ್ಲಿ ಕಾಣುತ್ತಿದ್ದ ಸೌಂದರ್ಯ ಪ್ರಜ್ಞೆ ಈಗ ಮಾಯವಾಗಿದೆ. ಬಹುಶಃ ಏಕದೇವೋಪಾಸನೆ ಈ ಅತಿರೇಕದ ಪ್ರದರ್ಶನಗಳನ್ನು ಹಿಂದೆ ಅಲುಗಿಸಿ ಅಲ್ಲಾಡಿಸಿರಬಹುದು.

ಹಾಗೆಂದು ಬಹುದೇವತಾರಾಧನೆಯಲ್ಲಿ ನನಗೆ ತಾತ್ವಿಕ ಜಗಳವಿಲ್ಲ. ಯಾವ ವಿಗ್ರಹದ ಸ್ವರೂಪ ಹೇಗಿರಬೇಕೆಂದು ನಮ್ಮ ಹಿರಿಯರು ಆಳವಾಗಿ ಶ್ರದ್ಧೆ ಸೌಂದರ್ಯಗಳನ್ನು ಮೇಳೈಸಿ ಮೂರ್ತಿ ನಿರ್ಮಾಣ ಮಾಡುತ್ತಿದ್ದರು. ನಮ್ಮ ಇಂದಿನ ಪೂಜಾ ಮೂರ್ತಿಗಳೆಲ್ಲವೂ ಕ್ಯಾಲೆಂಡರ್ ಜಾತ. ಇಷ್ಟೇ ನನ್ನ ಜಗಳ – ಅದೂ ಆಧುನಿಕ ದೇವಾಲಯಗಳ ಬಗ್ಗೆ.

ಯೂರೋಪಿನಲ್ಲಿ ಕ್ರಿಶ್ಚಿಯನ್ ಧರ್ಮ ಹಿಂದಿನ ಎಲ್ಲ ದೇವತೆಗಳನ್ನು ನಾಶಗೊಳಿಸಿದೆ. ಎಲ್ಲೋ ಕವಿಗಳಲ್ಲಿ, ಕವನಗಳ ನಾಯಕ ನಾಯಕಿಯರಾಗಿ ಪಾಪ – ಆ ದೇವತೆಗಳು ಉಳಿದುಕೊಂಡಿದ್ದಾರೆ. ಭಾರತದ ಹಿರಿಮೆ ಏನೆಂದರೆ ಎಲ್ಲ ವೈದಿಕ ದೇವತೆಗಳ ಜೊತೆಗೆ ಭೂತಾದಿ ಕ್ಷುದ್ರ ದೇವತೆಗಳೂ ಕೂತು ವಿಜೃಂಭಿಸುತ್ತಿದ್ದಾರೆ. ಆದರೆ ಆ ದೇವತೆಗಳಿಗಲ್ಲೆ ಬಣ್ಣ ಹಚ್ಚಿ ದೇವಸ್ಥಾನದಲ್ಲಿ ಬೊಂಬೆಗಳಂತೆ ಕೂರಿಸಿದಾಗ ಅಯ್ಯೋ ಅನಿಸುತ್ತದೆ.

ದೇವರಿಲ್ಲ ಎಂಬ ಭಯ ಎಲ್ಲ ದೇಶದವರನ್ನೂ ಕಾಡಿದಂತೆ ನಮ್ಮನ್ನು ಕಾಡುವುದಿಲ್ಲ. ದಾಸ್ತೋವಸ್ಕಿ ತನ್ನ ಕಾದಂಬರಿಯಲ್ಲಿ ಒಂದುಕಡೆ if there is no God, everything is permitted ಎಂದು ದಿಗಿಲು ಬೀಳುತ್ತಾನೆ. ದೇವರು ಇಲ್ಲವಾದರೆ ಕೊಲೆ, ಸುಲಿಗೆ, ಮಾಡಬಹುದು, ಸುಳ್ಳು ಹೇಳಬಹುದು. ಏನೂ ಬೇಕಾದರೂ ಮಾಡಬಹುದು – ಎಂಬ ಅರ್ಥ ಈ ಮಾತಿನಲ್ಲಿ ಅಡಗಿದೆ. ದೇವರಿದ್ದಾನೆ ಎಂಬ ಭಾವನೆ ಜನರನ್ನು ತಪ್ಪು ಮಾಡದಂತೆ ಕಾಪಾಡುತ್ತದೆ. ಆದ್ದರಿಂದ ದೈವನಿಯಂತ್ರಣಹೀನವಾದ ಜಗತ್ತಿನ ‘ಅನಾರ್ಕಿ’ ದಾಸ್ತೋವಸ್ಕಿಯನ್ನು ಕಾಡುತ್ತದೆ. ದೇವರ ಅಸ್ತಿತ್ವದ ಬಗ್ಗೆ ಆತನ ಚಿಂತನೆ, ಆ ಪ್ರಶ್ನೆಯನ್ನು ಆತ ಎದುರಿಸುವ ಕ್ರಮ, ದೇವರು ಇಲ್ಲವೆಂದಾದರೆ ಎಲ್ಲ ಮುಗಿದು ಹೋಗುತ್ತದೆ ಎಂಬ ಭಯ ಇಂಡಿಯಾದಲ್ಲಿ ನಮಗೆ ಬಾಧಿಸಿರುವಂತೆ ಕಾಣುವುದಿಲ್ಲ.

ದೇವರು ಇದ್ದಾನೋ ಇಲ್ಲವೋ ಎಂಬುದು ಬಹುಮುಖ್ಯವಾದ ಸಮಸ್ಯೆಯಾಗಿ ನಮ್ಮ ದೇಶವನ್ನು ಕಾಡಲಿಲ್ಲ. ಜೈನರು, ಬೌದ್ಧರಿಗಂತೂ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ಅನಾತ್ಮವಾದಿಗಳು. ಮಹಾವೇದಾಂತಿ ಶಂಕರಾಚಾರ್ಯರಿಗೆ ದೇವರು ಒಂದು ನೆವ ಮಾತ್ರ. (ಬುದ್ಧನನ್ನು ಪ್ರಚ್ಛನ್ನ ಚಾರ್ವಕನೆಂದು ಕೆಲವರು ಕರೆದದ್ದಿದೆ; ಶಂಕರರನ್ನು ಮಾಧ್ವರು ಪ್ರಚ್ಛನ್ನ ಬೌದ್ಧ ಎಂದು ಹೀಗಳೆಯುತ್ತಾರೆ).

‘ಅವನು ಇದ್ದಾನೆ’ ಎಂದು ತಿಳಿದಾಗ ಭಕ್ತಿ ಸಾಧ್ಯವಾಗುತ್ತದೆ, ಕಾವ್ಯ, ಚಿತ್ರಕಲೆ, ಸಂಗೀತ ಸಾಧ್ಯವಾಗುತ್ತದೆ. ‘ಅವನು ಇದ್ದಾನೊ ಇಲ್ಲವೊ ಎಂಬುದು ಮುಖ್ಯವಲ್ಲ’ ಎಂದಾಗ ಬಹಳ ಮೇಲ್ಮಟ್ಟದ ಚಿಂತನೆ ಸಾಧ್ಯವಾಗುತ್ತದೆ. ಆದರೆ ಭಕ್ತಿ ಸಾಧ್ಯವಾಗುವುದಿಲ್ಲ, ಆದ್ದರಿಂದ ‘ಅವನು ಇದ್ದಾನೆ’ ಎಂದು ತಿಳಿದುಕೊಂಡ ಈ ದೇಶ ಅವನನ್ನು ಮಾವನ ಪ್ರಮಾಣದಲ್ಲೂ ಕಲ್ಪಿಸಿಕೊಂಡು ಕಾವ್ಯ ಪುರಾಣಗಳಾಗಿ ಮಾಡಿ, ನೋಡಿ ಸುಖಿಸುತ್ತದೆ.

‘ಇದ್ದಾನೆ’ ಎಂದು ತಿಳಿದುಕೊಂಡಿದ್ದರಿಂದ ಬದುಕಿಗೆ ಒಂದು ಹದ, ಕಾವ್ಯಾತ್ಮಕತೆ ಲಭ್ಯವಾಯಿತು ಎನ್ನುವುದಾದರೆ; ‘ಇದ್ದಾನೋ ಇಲ್ಲವೋ’ ಎಂಬುದು ಅಮುಖ್ಯವಾದಾಗ ಪ್ರಜ್ಞೆಗೆ ಒಂದು ಬಗೆಯ ಚಿಂತನ ಸಾಧ್ಯತೆ ಲಭ್ಯವಾಯಿತು. (ಆರೋಗ್ಯಪೂರ್ಣ ಬದುಕಿನ ಅಸ್ತಿತ್ವಕ್ಕೆ, ಸಮಾಜದ ಸ್ವಾಸ್ಥ್ಯಕ್ಕೆ ಇವೆರಡರ ಸಮಪಾಕ ತೀರಾ ಅಗತ್ಯ. ಭಾರತೀಯ ಮನಸ್ಸು ಹೀಗೆ ಆರೋಗ್ಯಪೂರ್ಣ ಸಮಸ್ಥಿತಿಯನ್ನು ಈವರೆಗೂ ಬಹುಮಟ್ಟಿಗೆ ಉಳಿಸಿಕೊಂಡು ಬಂದಿದೆ). ಇದ್ದಾನೋ ಇಲ್ಲವೋ ಎಂಬುದು ಅಮುಖ್ಯ ಎಂಬ ಈ ದೇಶದ ಚಿಂತನೆಯ ಫಲವಾಗಿ ಜೆ.ಕೆ.ಯಂತಹ ಸಂತ-ಚಿಂತಕನೊಬ್ಬ ಇಲ್ಲಿ ಹುಟ್ಟಿಬರುವುದು ಸಾಧ್ಯವಾಯಿತು.

ಇಂಥ ಚಿಂತನೆಯಿಂದಲೇ ನಿತ್ಯ ಜೀವನದ ಕಾರ್ಯದಲ್ಲಿ ಪ್ರಜ್ಞಾಮೂಲವಾದ ಧಾರ್ಮಿಕ ನಡತೆಯೂ, ತೀವ್ರ ಧ್ಯಾನಮಗ್ನ ಗಮನಶೀಲತೆಗೆ ಒದಗುವ ವಿಸ್ಮಯಕಾರಿ ಸತ್ಯದರ್ಶನವೂ ಸಾಧ್ಯವಾಯಿತು. ಆದ್ದರಿಂದ, ಸಾಮಾನ್ಯ ಜನರು ದೇವರನ್ನು ನಂಬಿಕೊಂಡಿರುವ ಕ್ರಮವನ್ನು ಜ್ಞಾನಿಯೊಬ್ಬ ಧಿಕ್ಕರಿಸಿ ಹೋದರೂ ಕೂಡಾ ಸಾಮಾನ್ಯರ ಜೊತೆ ಅವನಿಗಿರುವ ಕೊಂಡಿ ಪವಿತ್ರವಾಗಿಯೇ ಉಳಿದಿರುತ್ತದೆ. ಬುದ್ಧನ ಬಗ್ಗೆ ಉಳಿದುಕೊಂಡಂತೆ.

ಒಂದು ದೇವಸ್ಥಾನಕ್ಕೆ ಹೋದರೆ ಅಲ್ಲಿ ಎಲ್ಲ ವರ್ಗದ ಜನರೊಂದಿಗೆ ನೀವು ಇರುತ್ತೀರಿ. ಅಲಹಾಬಾದ್‌ನಲ್ಲಿ ಸಂಗಮಸ್ಥಾನಕ್ಕೆ ಹೋದಾಗ ಎಷ್ಟು ಚಿತ್ರವಿಚಿತ್ರ ಜನರನ್ನು ನೀವು ನೋಡುತ್ತೀರಿ! ದೇವರು ಒಬ್ಬ ವ್ಯಕ್ತಿಯಾಗಿದ್ದಾನೆ ಎಂದು ಅವರು ನಂಬಿದ್ದಾರೆಯೋ, ಅವರು ದೇವರನ್ನು ನಂಬುತ್ತಾರೊ, ಇಲ್ಲವೊ, ನಂಬಿದರೆ ಯಾವ ಬಗೆಯ ಯಾವ ರೂಪದ ದೇವರು ಅವನು – ಎಲ್ಲವೂ ಅಷ್ಟೇನೂ ಮುಖ್ಯವಲ್ಲದ ಪಾವಿತ್ರ್ಯದ ಒಂದು ಕ್ಷೇತ್ರ ಮಾತ್ರವಾಗಿ ನದಿಯ ಸಂಗಮ ನಮಗೆ ಗೋಚರಿಸುತ್ತದೆ. ಮಹಾರಾಷ್ಟ್ರದ ದಿಂಡಿಯಾತ್ರೆ ಈ ಬಗೆಯದೇ.

ಆಫ್ಘಾನಿಸ್ಥಾನದಲ್ಲಿ ಎಲ್ಲ ಕಡೆ ಇಸ್ಲಾಮ್ ಇದ್ದರೂ ಆಫ್ಘಾನಿಸ್ಥಾನವನ್ನು ಒಗ್ಗೂಡಿವುದು ಬಹಳ ಕಷ್ಟ. ಅಲ್ಲಿರುವ ಜನಾಂಗಗಳೆಲ್ಲ ಬೇರೆ ಬೇರೆಯಾಗಿಯೇ ಉಳಿಯುತ್ತವೆ. ಇಂಡಿಯಾವನ್ನು ಒಡೆಯಲು ಪ್ರಯತ್ನಪಟ್ಟರೂ ಅದು ಒಡೆಯುವುದಿಲ್ಲ. ಹಿಂದೆ ಬೇರೆ ಬೇರೆ ರಾಜರು ಆಳುತ್ತಾ ಇದ್ದರು. (ಚಪ್ಪನ್ನ ದೇಶಗಳು ಎಂದು ನಾವು ಪುರಾಣ ಯಕ್ಷಗಾನಗಳಲ್ಲಿ ಕೇಳಿದ್ದೇವೆ) ಆದರೆ ಇಂಡಿಯಾ ಒಂದೇ ಆಗಿತ್ತು.

ಈಗಲೂ ಬೇರೆ ಬೇರೆ ಪಕ್ಷಗಳು ಬೇರೆ ಬೇರೆ ಕಡೆ ಅಧಿಕಾರದಲ್ಲಿವೆ. ಆದರೆ ಇಂಡಿಯಾ ಒಂದೇ ಆಗಿದೆ. ಆಫ್ಘಾನಿಸ್ಥಾನದಲ್ಲಿ ಎಷ್ಟು ಪ್ರಯತ್ನಪಟ್ಟು ‘ಒಂದು’ ಮಾಡಬೇಕಾಗಿದೆ! ಅದಕ್ಕಾಗಿ ಅವರು ಇಸ್ಲಾಮನ್ನು ಬಳಸಿಕೊಂಡರು. ಆದರೆ ಅದು ಬಹುಕಾಲ ಸಾಧ್ಯವಾಗಿ ಉಳಿಯಲಿಲ್ಲ. ಆದ್ದರಿಂದ ಕೇವಲ ಮತಧರ್ಮದ ಮೇಲೆ ಒಂದು ದೇಶವನ್ನು ಒಟ್ಟುಮಾಡಲು ಸಾಧ್ಯವಿಲ್ಲ. ಒಂದು ದೇಶ ಒಟ್ಟಾಗಬೇಕಾದರೆ ಅದಕ್ಕೆ ಸಾಂಸ್ಕೃತಿಕ ಕಾರಣಗಳೂ ಬೇಕಾಗುತ್ತವೆ. ಅಂದರೆ ನಿತ್ಯಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಂಡಿರಬೇಕು. ಭಾರತವು ಧರ್ಮವನ್ನು ಬಡಬಗ್ಗರಲ್ಲಿ, ಸಾಮಾನ್ಯರಲ್ಲಿ ಜಾನಪದ ನಂಬಿಕೆ ಆಚರಣೆಗಳ ರೂಪದಲ್ಲಿ ಅಳವಡಿಸಿಕೊಂಡಿರುವುದರಿಂದಲೇ ಅದು ಒಂದಾಗಿರುವುದು ಸಾಧ್ಯವಾಗಿದೆ. ನಮ್ಮ ನೆಲ, ನಮ್ಮ ನದಿ, ನಮ್ಮ ಪರ್ವತ, ನಮ್ಮ ಗಾಳಿ ಎಲ್ಲ ಪವಿತ್ರ ಎಂಬ ಧಾರ್ಮಿಕತೆಯನ್ನು ನಿತ್ಯಜೀವನದಲ್ಲಿ ಇಲ್ಲಿಯ ಜನ ಅಳವಡಿಸಿಕೊಂಡಿದ್ದಾರೆ. ಆದ್ದರಿಂದ ಬೇರೆ ದೇಶದವರಿಗೆ ಬರುವ ಧಾರ್ಮಿಕತೆಯ ಬಗೆಗಿನ ಸಮಸ್ಯೆ ನಮಗಿಲ್ಲ.

ನಿತ್ಯಜೀವನದಲ್ಲಿ ಧಾರ್ಮಿಕತೆ ಗಾಢವಾಗಬೇಕಾದರೆ ಅದರಲ್ಲಿ ಕಾವ್ಯ, ಸಂಗೀತ ಇರಬೇಕು. ಇವು ಇರುವುದು ಸಾಮಾನ್ಯರಲ್ಲಿ, ಸಾಮಾನ್ಯರ ಭಾಷೆಯಲ್ಲಿ. ನಮ್ಮ ದಾಸರ ಸಂಗೀತ, ಅದ್ಭುತವಾದ ವಚನಪ್ರತಿಭೆ, ಸಾಮಾನ್ಯರ ಭಾಷೆಯಾದ ಕನ್ನಡದಲ್ಲಿದೆ. ಅತ್ಯುತ್ತಮ ಕವಿಗಳು ಇಲ್ಲಿದ್ದಾರೆ. ಅದೆಲ್ಲ ಸಾಮಾನ್ಯ ಜನರ ಸೊತ್ತು. ಇಂಗ್ಲಿಷ್ ಕಲಿತವರಾರಿಗೂ ಈ ಸೊತ್ತಿಲ್ಲ. ಬೆಂಗಳೂರಿನಲ್ಲಿ ಇಂಗ್ಲಿಷ್ ಮಾತಾಡುವವರು ಎಷ್ಟು ಬಡವರಾಗಿದ್ದಾರೆ ಎಂದರೆ ಅವರಿಗೆ ಪುರಂದರ ಇಲ್ಲ, ಕನಕ ಇಲ್ಲ, ಅಲ್ಲಮ, ಬಸವ, ಕುಮಾರವ್ಯಾಸ, ಪಂಪ… ಯಾರೂ ಇಲ್ಲ, ಜೈನರಿಲ್ಲ, ಬೌದ್ಧರಿಲ್ಲ – ಏನೂ ಇಲ್ಲ. ಅವರಿಗೆ ಒಂದು ‘ರೇಡಿಯೋ ಸಿಟಿ’ ಅಂತ ಇದೆಯಂತೆ.

ನಮ್ಮ ಇಂಗ್ಲಿಷ್ ಕಲಿತ ಶ್ರೀಮಂತರಿಗೆ, ಆಧುನಿಕರಾದವರಿಗೆ ನಿತ್ಯಜೀವನದಲ್ಲಿ ಸೌಂದರ್ಯಾತ್ಮಕವಾಗಿ ಒದಗಿ ಬರುವ, ಇಡೀ ಜಗತ್ತಿನ ಬೆರಗನ್ನು ನಿರಾಯಾಸವಾಗಿ ಒದಗಿಸುವ ದೈನಂದಿನ ಧಾರ್ಮಿಕತೆಯೇ ಇಲ್ಲ. ನನ್ನ ಅಜ್ಜಿ ಬೆಳಗಿನ ಹೊತ್ತು ದಾಸರ ಹಾಡು ಹಾಡುತ್ತ ಮೊಸರು ಕಡೆಯುತ್ತಿದ್ದರು. ನಿತ್ಯಜೀವನದಲ್ಲಿ ಧರ್ಮ ಅಳವಡಿಸಿಕೊಳ್ಳುವುದು ಎಂದರೆ ಹೀಗೆ. ಭಾರತೀಯ ಭಾಷೆಯನ್ನು ಬಳಸುವ ಸಾಮಾನ್ಯ ಜನರಲ್ಲಿ ಇದು ಉಳಿಯುತ್ತದೆ. ಈ ಸಾಮಾನ್ಯರು, ಹಳ್ಳಿಯವರು ನಮ್ಮ ಭಾಷೆಗಳನ್ನು ಉಳಿಸಿದ್ದಾರೆ. ದೊಡ್ಡ ದೊಡ್ಡ ಯಾತ್ರೆ ಹೋಗುವವರು ಉಳಿಸಿದ್ದಾರೆ. ಅವರು ಹೋಗುವಾಗ ಕತೆ ಹೇಳುತ್ತಾರೆ, ಹಾಡು ಹೇಳುತ್ತಾರೆ, ಭಜನೆ ಮಾಡುತ್ತಾರೆ. ಅವರಿಗೆ ಅರಿವಿಲ್ಲದೇ ಧರ್ಮವನ್ನು ಉಳಿಸಿ ಬೆಳೆಸಿ ಪ್ರಚಾರ ಮಾಡುತ್ತಾ  ಈ ದೇಶವನ್ನು ಒಂದು ಮಾಡಿದ್ದಾರೆ. ಇವರು ಆಧುನಿಕರಾದರೆ ಅದು ಹೊರಟುಹೋಗುತ್ತದೆ. ಆದರೆ ಅದು ಬಹಳ ಕಷ್ಟ. ವರ್ಲ್ಡ್ ವ್ಯಾಂಕಿನಲ್ಲಿರುವ ಅಷ್ಟೂ ಹಣ ಕೊಟ್ಟರೂ ಈ ದೇಶವನ್ನು ಪಾಶ್ಚಾತ್ಯರ ರೀತಿಯಲ್ಲಿ ಆಧುನಿಕ ಮಾಡಲು ಆಗುವುದಿಲ್ಲ. ಆದ್ದರಿಂದ ವೀ ಆರ್ ಸೇವ್ಡ್.

ನಿತ್ಯಜೀವನದ ಧಾರ್ಮಿಕತೆಯನ್ನು ಪ್ರಶ್ನೆಯಮಾಡುವ, ವಿಮರ್ಶಿಸುವ ಪದ್ಧತಿ ನಮ್ಮಲ್ಲಿ ದಾಸರಿಗಿತ್ತು, ವಾಚನಕಾರರಲ್ಲಿ ಇತ್ತು. ನಿನ್ನೆ ಒಂದು ವಚನ ಹಾಡಿದ್ದನ್ನು ಕೇಳಿದೆ. ಕಲ್ಲಿನ ನಾಗನನ್ನು ಕಂಡರೆ ಹಾಲನ್ನೆರೆಯುತ್ತೀರಿ. ನಿಜವಾದ ನಾಗರಹಾವು ಬಂದರೆ ಕೊಲ್ಲು ಎನ್ನುತ್ತೀರಿ. ಉಣ್ಣದ ಲಿಂಗಕ್ಕೆ ಅನ್ನವಿಡುತ್ತೀರಿ, ಉಣ್ಣುವ ಜಂಗಮ ಬಂದರೆ ನಡೆ ಎಂದು ಕಳಿಸುತ್ತೀರಿ ಎಂಬುದು ಈ ವಚನದ ಭಾವ. ಹೀಗೆ ಆಚರಣೆಗಳ ಬಗ್ಗೆ ಕ್ರಿಟಿಕಲ್ ಎನ್‌ಕ್ವೈರಿ ಕೂಡಾ ಆಚರಣೆಯ ಜೊತೆಜೊತೆಯಲ್ಲೇ ಬೆಳೆದುಬಂದಿದೆ. ನಮ್ಮ ಈ ವಚನಕಾರ ನಾಗರಕಲ್ಲಿಗೆ ಹಾಲನ್ನೆರೆಯಬೇಡಿ ಎನ್ನುತ್ತಿಲ್ಲ, ಲಿಂಗಕ್ಕೆ ಬೋನವನ್ನು ಹಿಡಿಯಬೇಡಿ ಎನ್ನತುತಿಲ್ಲ. ದಿಟದ ನಾಗನಿಗೆ ಹಾಲನ್ನೇಕೆ ಎರೆಯುವುದಿಲ್ಲ? ಜಂಗಮನಿಗೆ ಯಾಕೆ ಉಣ್ಣಲು ಇಕ್ಕುವುದಿಲ್ಲ? ಎಂದು ಪ್ರಶ್ನಿಸುತ್ತಾನೆ. ನಿತ್ಯಜೀವನದಲ್ಲಿ ಧಾರ್ಮಿಕತೆಯನ್ನು ರೂಢಿಸಿಕೊಳ್ಳಲು ಆತ ಒತ್ತಾಯಿಸುತ್ತಿದ್ದಾನೆ; ಸತ್ಯ ಸಾಂಕೇತಿಕವಾಗಿ ಮಾತ್ರ ಇರುವುದಲ್ಲ ಎನ್ನುತ್ತ ಇದ್ದಾನೆ.

ಯೇಟ್ಸ್ literalists of the imagination ಎಂದು ಸಂತಕವಿಗಳನ್ನು ಕರೆಯುತ್ತಾನೆ. ಕಾಲ್ಪನಿಕವಾದ್ದು ಕವಿಕಲ್ಪಿತ ಅಸತ್ಯವಲ್ಲ; ಕಲ್ಪನಾಶಕ್ತಿ ಜಾಗೃತವಾಗಿ ಕಂಡದ್ದೇ ನಿಜ; ನಿತ್ಯದ ಜಡ್ಡಿನಲ್ಲಿ ಕಂಡದ್ದು ನಿಜವಲ್ಲ. ಅದು ಈ ಮಾತಿನ ಅರ್ಥ.

ರಾಮಕೃಷ್ಣ ಪರಮಹಂಸರು ಕಾಳಿಗೆ ನೈವೇದ್ಯವನ್ನಿಟ್ಟು ‘ಕಾಳೀ ಬಾ, ತಿನ್ನು’ ಎಂದು ಕರೆಯುತ್ತಾರೆ. ಅವರಿಗೆ ದೇವರಿಗೆ ನೈವೇದ್ಯ ಅರ್ಪಿಸುವುದು ಕೇವಲ ಸಾಂಕೇತಿಕ ಕ್ರಿಯೆಯಲ್ಲ. ದೇವಿಯೇ ಖುದ್ದಾಗಿ ಬಂದು ಅದನ್ನು ಸ್ವೀಕರಿಸಬೇಕೆಂದು ಅಪೇಕ್ಷಿಸುತ್ತಾರೆ. ಅವರು literalist of the imagination. ಮೊದಲು ಏನೂ ಆಗುವುದಿಲ್ಲ. ಕೊನೆಗೆ ಒಂದು ಕಪ್ಪುಬೆಕ್ಕು ಬಂದು ಅದನ್ನು ತಿಂದು ಹೋಗುತ್ತದೆ. ಕಾಳಿಯೇ ಕಪ್ಪುಬೆಕ್ಕಾಗಿ ಬಂದದ್ದೆಂದು ರಾಮಕೃಷ್ಣರು ತಿಳಿದುಕೊಳ್ಳುತ್ತಾರೆ. ಒಬ್ಬ ಆಧುನಿಕ ಬಂದು ‘ದೇವರಲ್ಲ, ಕೇವಲ ಕಪ್ಪು ಬೆಕ್ಕು’ ಎಂದು ಹೇಳಿದ ಎಂದರೆ- ಅದರಿಂದ ಪರಮಹಂಸರು ವಿಚಲಿತರಾಗುವುದಿಲ್ಲ. ಅದು ಬೆಕ್ಕೂ ಹೌದು, ದೇವಿಯೂ ಹೌದು ಎನ್ನುತ್ತಾರೆ.

ಬ್ಲೇಕ್ ಕವಿ ಹಾಗೆ ಇದ್ದನಂತೆ – ರಾಮಕೃಷ್ಣರ ಹಾಗೆ. ಬ್ಲೇಕ್‌‌ನ ತಮ್ಮ ಸತ್ತಾಗ ಆ ತಮ್ಮನ ಆತ್ಮ ಆನಂದದಲ್ಲಿ ಕೈತಟ್ಟಿಕೊಳ್ಳುತ್ತಾ ಆಕಾಶಕ್ಕೆ ಹಾರುವ ಚಿತ್ರವನ್ನು ಬ್ಲೇಕ್ ಬರೆದಿದ್ದಾನೆ. ಅದು ಸಾಂಕೇತಿಕ ಎಂದು ಯಾರೋ ಅಂದಾಗ ‘ಅದು ಸಾಂಕೇತಿಕವಲ್ಲ, ನನ್ನ ತಮ್ಮ ಸತ್ತಾಗ ಅವರು ಹಾಗೆ ಹೋಗುತ್ತಾ ಇರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ’ ಎಂದನಂತೆ ಬ್ಲೇಕ್. ಹೀಗೆ ಸಾಂಕೇತಿಕತೆಯನ್ನು ಅಲ್ಲಗಳೆದು ಅದೇ ನೈಜ ಎನ್ನುವ ಬ್ಲೇಕ್‌ನಂತೆ ತಾನಾಗಬೇಕೆಂದು ಯೇಟ್ಸ್‌ಗೆ ಆಸೆಯಿತ್ತಂತೆ. ಬಸವಣ್ಣನೂ ‘ನೀನು ಸಾಂಕೇತಿಕವಾಗಿ ಏನೋ ಒಂದು, ನಿಜದಲ್ಲಿ ಬೇರೊಂದು ಮಾಡಿದರೆ ಅದು ನಿಜವಲ್ಲ’ ಎನ್ನುತ್ತಾನೆ.

ಭಾರತದಲ್ಲಿ ಒಂದು ಮಗು ಹುಟ್ಟಿದಾಗ ಅದರ ಬೆಳವಣಿಗೆಯೆಲ್ಲ ಕೃಷ್ಣನ ಬೆಳವಣಿಗೆಯೇ ಆಗಿಬಿಡುತ್ತದೆ. ಅದು ಹೊಸ್ತಿಲು ದಾಟಿದರೆ ಒಂದು ಹಬ್ಬ, ತೊದಲುನುಡಿ ನುಡಿದರೆ ಇನ್ನೊಂದು ಹಬ್ಬ, ಅನ್ನಪ್ರಾಶನಕ್ಕೆ ಮತ್ತೊಂದು – ಹೀಗೆ ನಾವು ಸಾಂಕೇತಿಕತೆ ಮತ್ತು ನೈಜತೆ ನಡುವಣ ವ್ಯತ್ಯಾಸವನ್ನು ಕಳೆದು ಹಾಕಿದ್ದೇವೆ.

ಯೂಂಗ್ ಒಂದು ಪುಸ್ತಕ ಬರೆದಿದ್ದಾನೆ. (‘ಆನ್ಸರ್ ಟು ಜೋಬ್’) ಯಹೂದ್ಯರಿಗೆ, ಕ್ರಿಶ್ಚಿಯನ್ನರಿಗೆ ಒಂದು ಸಮಸ್ಯೆಯಿದೆ. ಜೋಬ್ ಬಹಳ ಪ್ರಾಮಾಣಿಕ, ಸತ್ಯವಂತ, ಶ್ರೀಮಂತ. ಆತನ ಸಂಪತ್ತೆಲ್ಲ ಹೋಯಿತು. ಮಕ್ಕಳೆಲ್ಲ ಸತ್ತರು, ಮೈ ಎಲ್ಲಾ ಕಜ್ಜಿ ಹಿಡಿದು ಯಾತನೆ ಅನುಭವಿಸುವ ಸ್ಥಿತಿ ಬಂತು. ಆಗ ಆತ ದೇವರನ್ನು ಪ್ರಶ್ನೆ ಮಾಡುತ್ತಾನೆ: ‘ನಾನು ಒಳ್ಳೆಯವನು. ನನ್ನನ್ನು ಏಕೆ ಹಿಂಸಿಸುತ್ತೀ? ದುಷ್ಟರನ್ನೆಲ್ಲ ಎಷ್ಟು ಚೆನ್ನಾಗಿ ಇಟ್ಟಿದ್ದೀ’ ಇದಕ್ಕೆ ದೇವರು ಉತ್ತರ ಕೊಡುವುದಿಲ್ಲ, ಗುಡುಗುತ್ತಾನೆ: ‘ಬಾಯಿ ಮುಚ್ಚಿಕೋ, ನನ್ನನ್ನು ಕೇಳಲಿಕ್ಕೆ ನೀನು ಯಾರು? ನೀನು ಕೇವಲ ಒಬ್ಬ ಮನುಷ್ಯ; ನಾನು ಹೇಳಿದಂತೆ ಇರಬೇಕಾದವನು. ಪ್ರಶ್ನೆ ಕೇಳಬೇಕಾದವನು ಅಲ್ಲ’ ಎಂದು. ಯೂಂಗ್ ಪ್ರಕಾರ ಇಡೀ ಪಾಶ್ಚಾತ್ಯ ನಾಗರಿಕತೆ ಹುಡುಕುತ್ತಿರುವುದು ಜೋಬ್‌ನ ಪ್ರಶ್ನೆಗೆ ಒಂದು ಉತ್ತರವನ್ನು. ಆದರೆ ಉತ್ತರ ಇದೆಯೇ? ಎಂಬುದೇ ಪ್ರಶ್ನೆ.

ಮುಂದೆ ಯೇಸು ಬರುತ್ತಾನೆ. ಉತ್ತರ ಕೊಡುತ್ತಾನೆ. ‘ದೇವರು ಮನುಷ್ಯರನ್ನು ಪ್ರೀತಿಸುತ್ತಾನೆ’ ಎನ್ನುತ್ತಾನೆ. ಗದರಿಸಿ ಹೇಳುವ ದೇವರ ಬದಲಿಗೆ ಪ್ರೀತಿಯ ಉತ್ತರ ನೀಡುವ ದೇವರ ಮಗ ಯೇಸು ದೊರೆಯುತ್ತಾನೆ. ಆದ್ದರಿಂದ ಬ್ಲೇಕ್- ತನಗೆ ಕ್ರಿಸ್ತ ಹತ್ತಿರ; ಕ್ರಿಸ್ತನ ಅಪ್ಪ ಅಲ್ಲ – ಎನ್ನುತ್ತಾನೆ. ಅಪ್ಪ ಇನ್ನೂ ದುಷ್ಟ ಎನ್ನುತ್ತಾನೆ ಬ್ಲೇಕ್. ಆತನಿಗೆ ದೇವರೊಂದಿಗೆ ಜಗಳವಿದೆ. ಆದರೆ ಯೇಸುವಿನೊಂದಿಗೆ ಇಲ್ಲ.

ರೋಮಿನ ಸಿಸ್ಟೀನ್ ಚಾಪೆಲ್‌ನಲ್ಲಿ ಮೈಕೇಲ್ ಎಂಜೆಲೊ ಬರೆದ ಒಂದು ಚಿತ್ರವಿದೆ. ನ್ಯಾಯ ತೀರ್ಮಾನದ ದಿನ (The Day of Judgement) ಎಲ್ಲಾ ಮುಗಿದು ಸತ್ತವರೆಲ್ಲ ಎದ್ದು ಬಂದು ದೇವರ ತೀರ್ಪಿನಂತೆ ಸ್ವರ್ಗಕ್ಕೋ ನರಕಕ್ಕೋ ಹೋಗುವ ದಿನ ಅದು. ಅಲ್ಲಿ ಯೇಸು ಮತ್ತು ಅವನ ತಾಯಿ ಮೇರಿ ಇರುತ್ತಾರೆ. ಆ ತಾಯಿ ಅಲ್ಲಿನ ಪಾಪಿಗಳ ಪರವಾಗಿ ಅವರನ್ನು ನಿತ್ಯ ನರಕಕ್ಕೆ ತಳ್ಳದಂತೆ ತಡೆಯಲು ಬಂದಾಗ ತಾಯಿಯನ್ನು ಮಗನಾದ ಏಸುವೇ ಕೈಯಿಂದ ತಳ್ಳುವ ಚಿತ್ರವಿದೆ. ಬದುಕಿದ್ದಾಗ ಪಶ್ಚಾತ್ತಾಪ ಪಡದೆ ಸತ್ತವರನ್ನು ಕರುಣಾಳು ಏಸುವೂ ಕ್ಷಮಿಸಲಾರ. ಆದ್ದರಿಂದ ಅಂತಿಮವಾಗಿ ದೇವರೋಷವನ್ನು ಜೋಬ್‌ಗೆ ಅರ್ಥಮಾಡಿಸಬಲ್ಲ ಯಾವ ಉತ್ತರವೂ ಇಲ್ಲ. ಈ ಪ್ರಪಂಚವನ್ನು ನಿಯಂತ್ರಿಸುವ ದೈವ ಶಕ್ತಿಯೊಂದಿದೆ, ಅದು ಸಾಕಾರ ಸಗುಣವೋ ಅಥವಾ ನಿರಾಕಾರ ಸಗುಣವೋ ಎಂದು ಭಾವಿಸುವವರನ್ನು ಕಾಡುವ ಪ್ರಶ್ನೆಗಳು ಇವು. ಅಲೆಯುವ ಮನ ಚರಿತ್ರೆಯಲ್ಲಿ ಬಂಧಿತವಾಗಿ ಕಟ್ಟಿಕೊಂಡ ಭ್ರಮೆಗಳಿಂದ ಇಂತಹ ಉತ್ತರವಿಲ್ಲದ, ಅದರ ಅಗತ್ಯವೂ ಇಲ್ಲದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಎಂದು ತಿಳಿದವರಿಗೆ ಜೆ.ಕೆ. ಇಷ್ಟವಾಗುತ್ತಾರೆ. ಜೀವನಕ್ಕೆ ಎದುರಾಗಿ, ‘ಸುಮ್ಮನೇ ಆಗಿ’ ಕಾಣುವುದನ್ನು, ಅಂದರೆ ಜೋಬ್ ಪ್ರಶ್ನೆಯನ್ನು ಬೇರೆ ಬಗೆಯಲ್ಲಿ ಕೇಳಿ ಬೇರೆಯದೇ ಆದ ಉತ್ತರ ಹುಡುಕುವುದನ್ನು, ನಾವು ಜೆ.ಕೆ. ಚಿಂತನೆಯಲ್ಲಿ ನೋಡುತ್ತೇವೆ.

ಉಡುಪಿಯಲ್ಲಿ ಮಾಡಿದ ಜೆಕೆ ಅಧ್ಯನದ ಶಿಬಿರದ ಉದ್ಘಾಟನಾ ಭಾಷಣ
ಬರಹಕ್ಕೆ : ಮುರಾರಿ ಬಲ್ಲಾಳ್ ಮತ್ತು ಕೆದ್ಲಾಯ

* * *