ಅಮೆರಿಕಾದ ಮೂಲ ನಿವಾಸಿಗಳಾದ ಕ್ರೀ ಎಂಬ ಜನಾಂಗದ ಒಂದು ನುಡಿ ಹೀಗಿದೆ :

ಕಟ್ಟಕಡೆಯ ಮರವನ್ನೂ
ಕತ್ತರಿಸಿ ಹಾಕಿದ ನಂತರ,
ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ,
ಕಟ್ಟಕಡೆ ಮೀನನ್ನೂ ಹಿಡಿದ ನಂತರ,
ಆಗಷ್ಟೇ ನಿನಗೆ ಗೊತ್ತಾಗುತ್ತದೆ, ಹಣವನ್ನು ತಿನ್ನಲಾಗುವುದಿಲ್ಲ ಎಂದು.

ಅಮೆರಿಕಾದ ಟ್ರೂಮನ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ತೃತೀಯ ಜಗತ್ತನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿಯಾಗಿರಬೇಕು ಎಂದು ಎಲ್ಲರೂ ಉದಾತ್ತವೆಂದು ತಿಳಿಯುವ ಮತನ್ನು ಆಡಿದ್ದಾನೆ. ಹಾಗೆ, ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಭಾರತವನ್ನು ನಾಗರಿಕ ದೇಶವಾಗಿ ಮಾಡುವುದೇ ತನ್ನ ಗುರಿಯೆಂದು ಮೆಕಾಲೆ ತಿಳಿದಿದ್ದನು. ಬಲಿಷ್ಠ ಪಾಶ್ಚಿಮಾತ್ಯ ದೇಶಗಳು ನಮ್ಮ ತೃತೀಯ ಜಗತ್ತನ್ನು ದೋಚಲು, ದೋಚಿ ತಾವು ಬೆಳೆಯಲು ಬಳಸುವ ಎರಡು ಮಾರ್ಗಗಳೆಂದರೆ; ಆಗ ಸಮಾಜೋದ್ಧಾರ. ಈಗ ಆರ್ಥಿಕ ಪ್ರಗತಿ.

ಕೆಲವು ದಿನಗಳ ಹಿಂದೆ, ಕುದುರೆಮುಖ ಗಣಿಯ ಮುಖ್ಯಸ್ಥರು ನನ್ನನ್ನು ನೋಡಲೆಂದು ಬಂದರು. ಅವರ ಮಾತಿನ ವೈಖರಿಯಲ್ಲಿ ಅವರು ಸಜ್ಜನರೂ ಸತ್ಯಪಕ್ಷಪಾತಿಗಳೂ ಎಂದು ತೋರುತ್ತಿತ್ತು. ನಾವಿಬ್ಬರೂ ಬಹಳ ವಿಶ್ವಾಸದಿಂದಲೇ ಮಾತನಾಡಿದೆವು. ಕುದುರೆಮುಖದಲ್ಲಿ ಇನ್ನಷ್ಟು ವರ್ಷಗಳ ಕಾಲ ಗಣಿಗಾರಿಕೆಯನ್ನು ಮುಂದುವರಿಸುವುದು, ಆ ಪ್ರದೇಶದ ಉಳಿವಿಗೆ ಎಷ್ಟು ಅನಿವಾರ್ಯ ಎಂಬುದು ಅವರ ವಾದವಾಗಿತ್ತು. ತನ್ನನ್ನು ನನಗೆ ಪರಿಚಯಿಸಿಕೊಂಡಾಗ ತಾವು ಸೈಲೆಂಟ್ ವ್ಯಾಲಿ ಪ್ರದೇಶದವರೆಂದೂ, ಕೇರಳದ ಮೊದಲನೆಯ ಜ್ಞಾನಪೀಠ ಲೇಖಕರ ಅಭಿಮಾನಿಯೆಂದೂ ಹೇಳಿಕೊಂಡಿದ್ದರು.

ಇವರ ಜೊತೆ ಮಾತನಾಡುತ್ತಾ ನಾನು ‘ಕುದುರೆಮುಖದಿಂದ ಸರ್ಕಾರದ ಬೊಕ್ಕಸಕ್ಕೆ ಅದೆಷ್ಟೇ ಹಣ ಬಂದರೂ ನನಗದು ಮುಖ್ಯ ಎನಿಸುವುದಿಲ್ಲ’ ಎಂದು ಹೇಳಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಪಯೋಗಿಸುವ ಬಡತನ ಎನ್ನುವ ಶಬ್ದದಲ್ಲೇ ನಮ್ಮನ್ನು ನಾಶ ಮಾಡುವ ಹುನ್ನಾರವಿದೆ. ಎರಡು ಹೊತ್ತು ರಾಗಿ ಮುದ್ದೆ ತಿಂದು, ಹಗಲೆಲ್ಲಾ ದುಡಿದು, ರಾತ್ರಿ ಚೆನ್ನಾಗಿ ನಿದ್ದೆ ಮಾಡಿ, ಮಕ್ಕಳನ್ನೂ ಶಾಲೆಗೆ ಕಳುಹಿಸಿ, ಪ್ರತಿಯೊಂದು ಹಬ್ಬವನ್ನೂ ಆಚರಿಸುತ್ತಾ ಇಡೀ ಸಂಸಾರ ಯಾವುದೋ ನದಿಯ ದಂಡೆಯ ಮೇಲಿರುವ ದೇವಸ್ಥಾನಕ್ಕೆ ಹರಕೆ ಹೊತ್ತು ಬದುಕುವುದು ಅಮೆರಿಕದ ಕಣ್ಣಲ್ಲಿ ಬಡತನವೇ. ಯಾಕೆಂದರೆ ಅವರಿಗೆ ಒಂದು ಸೈಕಲ್ಲನ್ನು ಕೊಳ್ಳುವುದು ಕೂಡ ಸಾಧ್ಯವಿಲ್ಲ. ಆದರೆ ನಮ್ಮ ದೇಶವನ್ನು ನಾಶವಾಗದಂತೆ ಉಳಿಸಿಕೊಂಡು ಬಂದವರು, ಜೊತೆಗೆ ತಾವೂ ಉಳಿದುಬಂದವರು ಈ ಜನರೇ.

ಆಧುನಿಕ ಪ್ರಗತಿಯಿಂದ ಆಗಿರುವ ನಿಜವಾದ ಉಪಯೋಗ ಅಂದರೆ ಹೆಂಗಸರು ಮಕ್ಕಳನ್ನು ಹೆರುವಾಗ ಆ ದಿನಗಳಲ್ಲಿ ಸಾಯಬೇಕಾಗಿಲ್ಲ. ಟೈಫಾಯಿಡ್ ರೋಗದಿಂದ ಯಾರು ಸಾಯಬೇಕಿಲ್ಲ. ಇದನ್ನು ಬಿಟ್ಟರೆ ಒಂದು ಗುಡಿಸಲಲ್ಲಿ ವಾಸವಾಗಿದ್ದುಕೊಂಡು ಆರೋಗ್ಯವಾಗಿ ಸುಖ ಸಂತೋಷದಲ್ಲಿ ಗುಂಪಿನಲ್ಲಿ ಕೂತು ಹಾಡಿ ಕುಣಿಯಬಲ್ಲ ಜನ ಪಾಶ್ಚಾತ್ಯರ ಕಣ್ಣಲ್ಲಿ ಬಡವರಾಗಿದ್ದರೂ, ನಾವು ಅವರ ಬಗ್ಗೆ ಆತಂಕ ಪಡಬೇಕಾಗಿಲ್ಲ.

ನಿಜವಾದ ಸಮಸ್ಯೆ ಎಂದರೆ ಮಕ್ಕಳು ರಾತ್ರೆ ಊಟವಿಲ್ಲದೆ ಹಸಿದುಕೊಂಡು ಮಲಗುವುದು ಮತ್ತು ಅವರ ತಂದೆ ತಾಯಂದಿರು ತಾವೂ ಹಸಿದುಕೊಂಡಿರುವುದಲ್ಲದೆ, ಮಕ್ಕಳೂ ಹಸಿದಿದ್ದಾರೆಂದು ಸಂಕಟಪಡುವುದು. ಜರ್ಮನಿಯಲ್ಲಿ ನಡೆದ ಚರ್ಚೆಯೊಂದರಲ್ಲಿ ನಾನು, ಬಡತನದ ಬಗ್ಗೆ ಮಾತನಾಡುವುದು ನಿಮ್ಮ ಕಪಟ ರಾಜಕೀಯ, ಆದರೆ ಹಸಿವನ ಬಗ್ಗೆ ಹಸಿದಿರುವವರ ಬಗ್ಗೆ ನಾವು ಸಂಕಟಪಡುವುದು ನಿಜವಾದ ಮಾನವೀಯತೆ ಎಂದು ಕೊಂಚ ಉತ್ಪ್ರೇಕ್ಷೆಯಲ್ಲಿಯೇ ಮಾತಾಡಿದ್ದೆ.

ಕುದುರೆಮುಖದ ಗಣಿಗಾರಿಕೆಯಿಂದ ಚಿನ್ನ ಸಿಗುವುದಾದರೂ ನಮಗದು ಬೇಕಾಗಿಲ್ಲ ಎಂದು ನಾವು ತಿಳಿದುಕೊಂಡು ವರ್ತಿಸಬೇಕು. ನಿತ್ಯ ದುಡಿಯುವ ಒಬ್ಬ ಮನುಷ್ಯ ಮತ್ತೆ ನಾಳೆ ದುಡಿಯಲು ಬೇಕಾಗುವ ಆಹಾರವನ್ನು ಸಂಪಾದಿಸುತ್ತಾನೆ. ಹೀಗೆ ದುಡಿಮೆಯಿಂದ ಶಕ್ತಿಯನ್ನು ಪಡೆದು ಅದನ್ನು ದುಡಿಮೆಗೇ ವಿನಿಯೋಗಿಸುತ್ತಾ ಇರುವ ನಮ್ಮ ಅಸಂಖ್ಯ ದುಡಿಮೆಗಾರರು ಪರಾಗಸ್ಪರ್ಶಕ್ಕೆ ಕಾದಿರುವ ಹೂವಿನಂತಿರುತ್ತಾರೆ. ಯಾವುದೋ ದುಂಬಿ ಆಕಸ್ಮಿಕವಾಗಿ ತ್ನನ್ನು ಬಂದು ಮುಟ್ಟೀತೆನ್ನುವ ಭರವಸೆಯಲ್ಲಿ, ಗಾಳಿಯಲ್ಲಿ ಅಲ್ಲಾಡುತ್ತಾ ಇರುವ ಹೂವಿನ ಹಾಗೆ ಇದ್ದುಬಿಡುತ್ತಾರೆ. ಯಾವುದೇ ದೈವ ತಮ್ಮನ್ನು ಬಂದು ಮುಟ್ಟೀತೆನ್ನುವ ಭರವಸೆಯಲ್ಲಿ, ಹರಕೆಯಲ್ಲಿ ಬಾಳುತ್ತಾ ನದಿಗಳ ಸಂಗಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಮೀಯುತ್ತಾ, ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಾ ಇರುವ ಅಪಾರ ಜನ ಕೋಟಿ ನಮ್ಮ ದಿನನಿತ್ಯದ ಬದುಕನ್ನು ಅರ್ಥಪೂರ್ಣವನ್ನಾಗಿ ಮಾಡುತ್ತದೆ. ದೇವರು ಇದ್ದಾನೋ ಇಲ್ಲವೋ ತಿಳಿಯದು. ಪ್ರಾಯಶಃ ಅವನನ್ನು ಮುಟ್ಟುವ ಭರವಸೆಯಲ್ಲಿ ಎಲ್ಲರೂ ಕೊನೆಗೆ ಸಾಯುವುದೇನೋ? ಹೀಗೆ ನಿತ್ಯದ ದುಡಿಮೆಯ ಕಾಯಕ ಮತ್ತು ಅಗೋಚರವಾದದ್ದರ ಭರವಸೆಯ ಈ ಜೀವನದಲ್ಲಿ ಭಾರತದ ಅಪಾರ ಜನಸಂಖ್ಯೆಗೆ ನಿಜವಾಗಿ ಸುಖ ಸಿಗುವುದು ಮಕ್ಕಳ ಪಾಲನೆ, ಲಾಲನೆ, ಹಬ್ಬಹರಿದಿನಗಳ ಊಟ, ಕೊಂಚ ಬಿಡುವಿದ್ದಾಗ ನಡೆಯುವ ಕಾಡು ಹರಟೆ ಇವುಗಳಲ್ಲೇ.

ಇದನ್ನು ಈ ಸಂದರ್ಭದಲ್ಲಿ ಮಾತಾಡುವುದೇ ಓದುಗರಿಗೆ ವಿಚಿತ್ರ ಅನ್ನಿಸಬಹುದು. ಆದರೆ ಬದುಕಿನ ಈ ಸ್ಥಾಯೀ ಸ್ವರೂಪವನ್ನು ಮತ್ತು ಅದರ ಸಂಚಾರೀ ಕನಸುಗಳನ್ನು, ಭರವಸೆಗಳನ್ನು ಹೃದಯದಲ್ಲಿ ಅರಿತು ದುಡಿಯುವವರಿಗೆ ದೇಶದ ಉತ್ಪಾದನೆಯನ್ನು ಹೆಚ್ಚಿಸುವ ಈಚಿನ ಅನೇಕ ಯೋಜನೆಗಳು ಕ್ರಿಮಿನಲ್ ವಿಚಾರವಾಗಿ ಭಾಸವಾಗುತ್ತದೆ. ವೇಗವಾಗಿ ಹೋಗುವ ಕಾರುಗಳಿಗಾಗಿ ನಾವು ಮಾಡುವ ರಸ್ತೆಗಳನ್ನು ಕಂಡಾಗ ಒಬ್ಬ ಮುದುಕ, ಮುದುಕಿ ಅಥವಾ ಒಂದು ಮಗು ರಸ್ತೆಯ ಈ ಬದಿಯಿಂದ ಇನ್ನೊಂದು ಬದಿಗೆ ಹೋಗುವುದೇ ಅಸಾಧ್ಯವಲ್ಲವೇ ಅನ್ನುವ ಸಂಕಟ ಉಂಟಾದರೆ ನಾವು ಮನುಷ್ಯರು. ಬದಲಾಗಿ ಎಷ್ಟು ವೇಗವಾಗಿ ಒಂದು ಕಾರು ಸಂಚರಿಸಬಲ್ಲದು ಎಂದು ಯೋಚಿಸಿದರೆ ನಾವು ರಾಕ್ಷಸರು.

ನಮ್ಮದಲ್ಲದ ಅಮೆರಿಕನ್ ಉಚ್ಛಾರಣೆಯಲ್ಲಿ ಮಾತನಾಡುತ್ತಾ, ಯಾರದೋ ಹೆಸರನ್ನು ಇಟ್ಟುಕೊಂಡು, ಅಮೆರಿಕದ ಹಗಲು ಅವರಿಗೆ ಅರ್ಥಪೂರ್ಣವಾಗಬೇಕೆಂದು ನಮ್ಮ ರಾತ್ರೆಗಳನ್ನು ನಿದ್ದೆಯಿಲ್ಲದೆ ಕಳೆಯುವ ಐಟಿಗಳ ನಗರ ಬೆಂಗಳೂರು ಎಂಬುದು ನಮಗೆ ಸಂತೋಷದಾಯಕ ಆಗಿರುವುದು ಮನಸ್ಸಿನ ವಿಕಾರದ ಫಲ. ನಮ್ಮ ಜಾಣ ಯುವಕ ಯುವತಿಯರು ಇನ್ನು ಮುಂದೆ ಶಾಲಾ ಶಿಕ್ಷಕರಾಗಲು ಬಿ.ಎಡ್. ಮಾಡಬೇಕಾಗಿಲ್ಲ. ಅಥವಾ ಕೈಗಾರಿಕೆಗಳಲ್ಲಿ ಸೂಕ್ಷ್ಮವಾದ ಕೆಲಸವನ್ನು ಮಾಡಲು ಕಲಿಯಬೇಕಾಗಿಲ್ಲ. ಅಮೆರಿಕನ್ನರಿಗೆ ಸರಿ ಎಂದು ಕಾಣಿಸುವ ಉಚ್ಛಾರಣೆಯಲ್ಲಿ ಇಂಗ್ಲಿಷನ್ನು ಕಲಿತುಬಿಟ್ಟರೆ ಬೇರೆ ಯಾವ ಕೆಲಸಕ್ಕಿಂತಲೂ ಹೆಚ್ಚಿನ ಸಂಪಾದನೆ ಸಾಧ್ಯ.

ಹೀಗೆ ಬದುಕಿನ ಹಲವು ಸಾಧ್ಯತೆಗಳನ್ನು ನಾಶ ಮಾಡುವ ಅಭಿವೃದ್ಧಿಯ ಯೋಜನೆಗಳು ವಿನಾಶಕಾರಿಯಾದವು. ನಾವು ಭೂಮಿಯಿಂದ ಅಗೆದು ತೆಗೆಯುವ ಖನಿಜ ಹಾಗೂ ನಮ್ಮ ಆತ್ಮದಲ್ಲಿ ಇರುವ ರತ್ನ ಎರಡನ್ನೂ ಎಕ್ಸ್‌ಪೋರ್ಟ್ ಮಾಲುಗಳೆಂದು ತಿಳಿದು ಭಾರತ ಹಿಂದೆಂದೂ ಕಾಣದಂಥ ಗುಲಾಮ ರಾಷ್ಟ್ರವಾಗಿದೆ. ಅಮೆರಿಕದ ಒಬ್ಬ ಯಃಕಶ್ಚಿತ ವಿದೇಶಾಂಗ ಅಧಿಕಾರಿ ನಮ್ಮ ದೇಶದ ಪ್ರಧಾನಿಯನ್ನೂ ಎದೆಗುಂದಿಸುವಂತೆ ಮಾಡಬಲ್ಲ ಶಕ್ತಿಯನ್ನು ನಾವೇ ಅವರಿಗೆ ದಯಪಾಲಿಸಿದ್ದೇವೆ.

ಕೃಪೆ: ಹಾಯ್ ಬೆಂಗಳೂರು ಅಕ್ಟೋಬರ್ ೨೦೦೫

* * *