ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು

ಅಡಿಗರ ಕವನ ಒಂದರ ಈ ಸಾಲನ್ನು ಓದುತ್ತ, ಸಾಲಿನಲ್ಲಿ ಹೆಸರಿಸದಂತೆ ಅಡಗಿರುವ, ತನ್ನ ಜೈವಿಕ ಕ್ರಿಯೆಯಲ್ಲಿ ತೊಡಗಿರುವ ರೇಷ್ಮೆ ಹುಳವನ್ನು ಕಾಣಬೇಕು. ಅದನ್ನು ಅದರ ಜೀವಂತಿಕೆಯಲ್ಲಿ ಕಣ್ಣಿಗೆ ತಂದುಕೊಳ್ಳಬೇಕು. ಹೀಗೆ ತಂದುಕೊಳ್ಳುವುದರಿಂದ ಒದಗುವ ಅರ್ಥಸ್ಫೋಟಗಳನ್ನು ಗಮನಿಸೋಣ. ರೇಷ್ಮೆಹುಳ ತನ್ನ ನೂಲಿನ ಕೋಶವನ್ನು ತನ್ನ ಮೈಯ ಮೃದುವಿನಲ್ಲಿ ಜಿನುಗುತ್ತ ಕಟ್ಟಿಕೊಳ್ಳುತ್ತದೆ. ತೆಳುವಾಗಿ ಮಂಜು ಕವಿಯುತ್ತ ಹೋಗುವಂತೆ ಅದರ ಮೈಸುತ್ತಲೂ ದ್ರವಿಸುವ ಈ ಜಿನುಗೇ ಮುಂದೆ ಗಟ್ಟಿಯಾದ ನೂಲಾಗುವ ರೇಷ್ಮೆ.

ಈ ಜಿನುಗಬಲ್ಲ ಮೃದುತ್ವದ ಭಾವನೆ ನಮಗೆ ಎಲ್ಲಿಂದ ಹುಟ್ಟುತ್ತದೆ ಎಂದರೆ ಕವನದ ಸಾಲಿನ ಒಂದೇ ಒಂದು ಶಬ್ದದಿಂದ ; ‘ಬತ್ತಲೆ’ ಶಬ್ದದಿಂದ. ಹುಳ ಬೆತ್ತಲೆಯಾಗಿರದ ಹೊರತು ಜಿನುಗಲಾರದು. ಮುಂದೆ ಗಟ್ಟಿಯಾದ ದಾರವಾಗಲಿರುವ ರೇಷ್ಮೆಯನ್ನು ಹೊಮ್ಮಿಸಬಲ್ಲ ಹುಳದ ಪ್ರಾಣಕ್ರಿಯೆ ಸಾಧ್ಯವಾಗಿರುವುದು ಅದರ ಬೆತ್ತಲೆಯಲ್ಲಿ, ಅದರ ಒಳಮೈಗೆ ಅನುವಾಗುವಂತೆ ಹಸಿ ಹಸಿಯಾಗಿ ಉಳಿದಿರುವ ಹೊರ ಮೈಯ ಮೃದುಸ್ಪಂದನ ಶೀಲ ಬೆತ್ತಲೆಯಲ್ಲಿ.

ಮತ್ತೂ ಆಶ್ಚರ್ಯದಲ್ಲಿ ಗಮನಿಸುತ್ತೇವೆ. ದೀರ್ಘ ತಪಸ್ಸಿನಲ್ಲಿ ಹುತ್ತಗಟ್ಟಿ ಕಾದಿದ್ದು ಹೊರಬಂದ ವಾಲ್ಮೀಕಿಯಂತಹ ಋಷಿವರೇಣ್ಯನ ಸೃಜನಶೀಲ ಅಂತರಂಗದ ಸೂಕ್ಷ್ಮತೆಗೆ ಸಂಕೇತವಾಗಿರುವುದು ಇಲ್ಲಿ ಜಿನುಗಬಲ್ಲ ಬೆತ್ತಲೆಯಲ್ಲಿ ಕಾಣುವ ಒಂದು ಹುಳ. ಈ ಋಷಿ ನೋವಿಗೆ ಮಿಡಿಯಬಲ್ಲವನು; ಸಿಟ್ಟಾಗಬಲ್ಲವನು; ವ್ಯಾಧನಾಗಿದ್ದು ಸಂತನಾದವನು; ತನ್ನ ಪೂರ್ವ ವಾಸನೆಗಳನ್ನು ಇನ್ನೂ ಕಳೆದುಕೊಳ್ಳದವನಾದ್ದರಿಂದಲೇ ತನ್ನ ಹಿಂದಿನದನ್ನು ನೆನಪು ಮಾಡಿಕೊಳ್ಳಬಲ್ಲ ಇನ್ನೊಬ್ಬ ವ್ಯಾಧ. ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಕೊಂದದ್ದೇ ಶಪಿಸುವಷ್ಟು ಸಿಟ್ಟಾದವನು. ಅದು ಸಿಟ್ಟೋ, ಅದು ದುಃಖವೋ, ಉಮ್ಮಳಿಸಿ ಬಂದ ಮಾತು ಅಂತರಂಗದ ನುಡಿಯ ಲಯಹಿಡಿದು ಹಠಾತ್ ಕಾವ್ಯವಾದದ್ದೋ – ವಿರಳವಾಗಿ ತಿಳಿಯುವಂತೆ ವಿವರಿಸಬಲ್ಲ ಸಂಗತಿಯಲ್ಲ. ಶೋಕದಿಂದ ಶ್ಲೋಕ ಹುಟ್ಟಿತು ಎಂದು ರಾಮಾಯಣ ನಮಗೆ ಹೇಳುತ್ತದೆ.

ಪಕ್ಷಿಯ ವಿರಹದ ಶೋಕಕ್ಕೆ ಮಿಡಿಯಲಾರದ ಹೃದಯ ಸೀತೆಯ ವಿರಹದ ಶೋಕಕ್ಕೂ ಮಿಡಿಯಲಾರದು. ಅಹಂ ಮಾತ್ರ ಜಾಗೃತವಾದಾಗ ‘ತಾನುಂಟೋ ಮೂರು ಲೋಕ ಉಂಟೋ’. ಆದರೆ ಅಹಂ ನಿವೃತ್ತಿಯಾದ ಕ್ಷಣದಲ್ಲಿ ಯಾವುದು ತಾನು ಯಾವುದು ಪರ? ಮಾನವಕುಲ ಮಾತ್ರವಲ್ಲ ಸಕಲ ಜೀವ ಜಂತುಗಳ ಲೋಕವೂ ತನಗೆ ಹೊರತಾದ ಪರವಲ್ಲ.

ಈ ಅದ್ವೈತಾನುಭವದಲ್ಲೂ ನೋಯಬಲ್ಲ ಎಲ್ಲದಕ್ಕೂ ಮಿಡಿಯಬಲ್ಲ ಹಸಿಯಾದ ಬೆತ್ತಲೆಯ ಸ್ಥಿತಿ ಮಾಯವಾಗಿರದು. ತಾವು ಪೂಜಿಸುವ ದೈವವನ್ನೂ ಮಾನವ ಪ್ರಮಾಣದಲ್ಲೆ ಕಲ್ಪಿಸಿಕೊಳ್ಳುವ ಭಾರತೀಯನಿಗಂತೂ, ಮಾನವನು ತನ್ನ ಯಾವ ಔನ್ನತ್ಯದಲ್ಲಾದರೂ ಆಕಾಶದಲ್ಲಿ ಕಣ್ಣಿಟ್ಟೂ ಈ ಮಣ್ಣಿಗೆ ಸಲ್ಲುವಂತೆ ಉಳಿದಿರುವವನೇ.

ಸಂತನ ಸ್ಥಿತಪ್ರಜ್ಞ ಸ್ಥಿತಿಯೂ ಕಲ್ಲಿನಂತಾದ ಸ್ಥಿತಿಯಿರಲಾರದು. ಆ ಸ್ಥಿತಿಯಲ್ಲಿ ಮಾನವ ಕೇವಲ ವೈಯಕ್ತಿಕವಾಗಿ ಸುಖದುಃಖಗಳನ್ನು ಅನುಭವಿಸುವುದಿಲ್ಲವೆಂದು ಹೇಳಬಹುದೇನೊ. ದುಃಖದಲ್ಲಿ ಅನುದ್ವಿಗ್ನ, ಸುಖದಲ್ಲಿ ವಿಗತಸ್ಪೃಹ, ಭಯ ಕ್ರೋಧಗಳಿಂದ ಅಬಾಧಿತನಾದ ಸ್ಥಿತಪ್ರಜ್ಞನೂ ಇಡೀ ಸೃಷ್ಟಿಗೆ ತೆರೆದುಕೊಂಡು ಮಿಡಿಯಬಲ್ಲ ಬೆತ್ತಲೆಯನ್ನು ಕಳೆದುಕೊಂಡವನಲ್ಲವೆಂದೇ ಗ್ರಹಿಸಿಕೊಳ್ಳಬೇಕೇನೊ? ಸಮಚಿತ್ತನಲ್ಲದವನಿಗೆ, ತನ್ನ ಸಂಸಾರದಲ್ಲಿ ಮಾತ್ರ ಅಡಗಿಹೋದವನಿಗೆ ಒಬ್ಬ ರಾಮನ ಕಥೆಯಲ್ಲಿ ಪಶು, ಪಕ್ಷಿ, ಪ್ರಾಣಿಯಾದಿಯಾಗಿ – ಗುಹ, ಹನುಮಂತ, ಶಬರಿ, ವಾಲಿ, ಸುಗ್ರೀವ, ಜಟಾಯು – ಈ ಎಲ್ಲರ ಕಥೆಯೂ ಅಡಗಿರುವಂತೆ ಕಾಣುವುದು ಹೇಗೆ ಸಾಧ್ಯ?

ನನ್ನ ಮೇಲಿನ ಚಿಂತನಾಕ್ರಮದ ಅವ್ಯವಸ್ತೆಗಿಂತ ಭಿನ್ನವಾದ ಪು.ತಿ.ನ.ರ ಮಾತಿನಲ್ಲಿ ಇದನ್ನು ಕೊಂಚ ಸ್ಪಷ್ಟಪಡಿಸಿಕೊಂಡು ಮತ್ತೆ ನನ್ನ ಕೊರಕಲು ಹಾದಿಗೆ ಮರಳುವೆ. ಒಬ್ಬ ಸಂಸಾರಿಗೆ ‘ಭವನಿಮಜನಾ ಚಾರುತ್ಯ’ವಿದೆ; ಎಂದರೆ ಭವದ ಇಹದಲ್ಲಿ ಮುಳುಗಿ ಹೋಗದಂತೆ, ಆದರೆ ಅದೊಂದು ಸುಖ ಸ್ನಾನವಾಗುವಂತೆ ಅನುಭವಿಸುವ ಚಾತುರ್ಯ. ಆದರೆ ಸಂತನಿಗಿರುವುದು ‘ಲಘಿಮಾ ಕೌಶಲ’ – ಏನನ್ನೂ ಹಚ್ಚಿಕೊಳ್ಳದಂತೆ ಹಗುರಾಗಿ ಮೇಲಿರುವ ಕೌಶಲ. ಕವಿಗೆ ಈ ಎರಡೂ, ಅಂದರೆ ಸಂಸಾರಿಯ ಭವನಿಮಜ್ಜನಾ ಚಾತುರ್ಯವೂ, ಸಂತನ ಲಘಿಮಾ ಕೌಶಲವೂ ಒಟ್ಟಾಗಿ ಇರುತ್ತದೆ ಎನ್ನುತ್ತಾರೆ ಪುತಿನ.

ಪು.ತಿ.ನ.ರವರ ವಿದ್ವತ್‌ಪೂರ್ಣ ಒಳನೋಟಕ್ಕೊಂದು ಅಡ್ಡ ಮಾತು ಆಡಬೇಕೆನ್ನಿಸುತ್ತದೆ. ‘ಇದ್ದು ಇರದಂತೆ ಇರುವುದು’ ಸಂತನಿಗೆ ಮಾತ್ರವಲ್ಲ ಸಂಸಾರಿಗೂ, ತನ್ನ ಮಿತಿಯೊಳಗೆ ಆಗೀಗ ಇಣುಕುವ ಆಕಾಶಕ್ಕೆ ತೆರೆದುಕೊಳ್ಳಲು ಅಗತ್ಯವಾದದ್ದು. ಹಾಗೆಯೇ ತನ್ನ ಕಾಲದ ನೋವು ನಲಿವುಗಳಿಂದ ಸಂತನೂ ಮುಕ್ತನಲ್ಲ. ಕಾಲದ ಯಾವೊಂದು ಮುಹೂರ್ತದಲ್ಲಾದರೂ ಶಾಶ್ವತ ಸತ್ಯದ ದರ್ಶನವಾಗಬಹುದು ಎಂದು ಬ್ಲೇಕ್ ಹೇಳುತ್ತಾನೆ. ಆದರೆ ಆಗುತ್ತ ಹೋಗುತ್ತ ಇರುವ ಚರಿತ್ರೆಯ ಕಾಲದಲ್ಲಿ ಮಾತ್ರ ಈ ಮುಹೂರ್ತ ಒದಗುವುದು ಒಂದು ಹೇಳಬೇಕೆ? ಹೇಳಲೇಬೇಕು. ತಾನು ಮುಕ್ತನೆಂಬ ಭಾವನೆ ನಾವೆಲ್ಲರೂ ಚರಿತ್ರೆಯಲ್ಲೂ ತಿಳಿದೋ ತಿಳಿಯದೆಯೋ ಪಾಲುದಾರರು ಎನ್ನುವ ಸತ್ಯವನ್ನು ಮರೆಸಬಹುದು.

ಶಾಶ್ವತವನ್ನು ಮುಹೂರ್ತಗಳಲ್ಲಿ ಹೊಳೆಯಿಸುತ್ತಲೇ ಸತತವೂ ಆಗಿರುವ ಚರಿತ್ರೆಯ ಬಗ್ಗೆ ಇನ್ನೆರಡು ಮಾತು ಹೇಳಬೇಕು. ಈ ಹೊತ್ತಿನಲ್ಲಿ ಅಂಥ ಒಂದು ತತ್ಪರ ಮುಹೂರ್ತ ಯಾರಿಗಾದರೂ ಒದಗಿದ್ದರೆ, ಅದೆ ಕಾಲದಲ್ಲಿ ಇರಾಕ್ ಯುದ್ಧದಿಂದಾಗಿ ನರಳುತ್ತಿರುವವರು ಇದ್ದಾರೆ; ಸಾಲದ ಶೂಲದ ಅವಮಾನ ಸಹಿಸಿಕೊಳ್ಳಲಾರದೆ ಸಾಯುವವರು ಇದ್ದಾರೆ; ಹಸಿದು, ಅಂಗೈ ಒಡ್ಡಿ ಬೇಡುತ್ತಿರುವ ಮಗುವೊಂದು ಬೀದಿಯಲ್ಲಿದೆ. ನಾಯಿ ಕುನ್ನಿಯ ಮೇಲೊಂದು ಲಾರಿ ಹರಿದಿದೆ.

ಅನಿವಾರ್ಯವಾದ್ದರಿಂದ ಎಷ್ಟೋ ಅದಕ್ಕೂ ಹೆಚ್ಚಾಗಿ ನಿವಾರ್ಯವಾದ್ದರಿಂದಲೂ, ಅಂದರೆ ಮಾವನಕೃತ ಅಪರಾಧಗಳಿಂದಲೂ ಮಾವನ ನರಳುತ್ತಾನೆಂಬ ಸತ್ಯ ನಮಗೆ ಕಾಲಾತೀತವೆನ್ನಿಸುವ ದಿವ್ಯ ಮುಹೂರ್ತದಲ್ಲೂ ಗೋಚರಿಸುತ್ತದೆ. ಈ ಅಪರಾಧಗಳನ್ನು ಮಾಡುತ್ತಿರುವವರೂ ನಮ್ಮ ಹಾಗಿನ ಮನುಷ್ಯರೇ. ಮ್ಯಾಕ್‌ಬೆತ್ ಮಾಡುವ ಕೊಲೆಯನ್ನು ನಾವೂ ಮಾಡಬಹುದಿತ್ತು. ಗಾಂಧಿ ಪಟ್ಟ ಪಾಡು, ಬೆರಗು, ದಿಗ್ಭ್ರಮೆಗಳ ಮೂಲ ಇಂಥ ಅನ್ನಿಸಿಕೆಯಲ್ಲಿದೆ.

ಆದ್ದರಿಂದ ಬೋಧಿಸತ್ವ ಮತ್ತೆ ಮತ್ತೆ ಹುಟ್ಟುತ್ತಾನೆ. ಇಂತ ದಿವ್ಯ ಮುಹೂರ್ತಗಳನ್ನು ಕಂಡೇ. ಜೊತೆಗೆ ಕಾಲದಲ್ಲಿ ಮಾವನ ಯಾತನಾಮಯ ಪಾಡನ್ನು ಕಂಡೇ, ಹರ್ಷದ ಜೊತೆ ರೋಷ ಪಡುತ್ತಲೇ, ತನ್ನಂಥವರೇ ಈ ರೋಷಕ್ಕೆ ಕಾರಣರಲ್ಲವೆ ಎಂದು ದಿಗ್ಭ್ರಮೆ ಪಡುತ್ತಲೇ ಚರಿತ್ರೆಯ ಒಳಹೊರಗುಗಳನ್ನು ನಾವು ಅನುಭವಿಸುವುದು. ಕವಿಗಳು ಹೀಗೆ ಬೋಧಿಸತ್ವರಾಗುವುದು.

ಕೊಂಚ ಓರೆಯಾದ ಕತ್ತಿನಲ್ಲಿ ಕಣ್ಣುಮುಚ್ಚಿ ಕೂತು ಪ್ರಾರ್ಥಿಸುವ. ಹಾಗೆಯೇ ಉದ್ದನೆಯ ಕೋಲು ಹಿಡಿದು ದಾಪು ಕಾಲಿಡುತ್ತ ನಡೆಯುತ್ತಿರುವ ಗಾಂಧಿ ನೆನಪಾಗುತ್ತಾರೆ. ಧ್ಯಾನಕ್ಕೆಂದು ಇನ್ನೇನು ಕೂರಲಿರುವ ಋಷಿ ಕ್ರೌಂಚವಧೆಯಿಂದ ಅಳಲುವುದು, ಈ ಅಳಲಿನಿಂದಲೇ ಎಲ್ಲ ಕಾಲದ ಇತಿಹಾಸವಾಗಿಬಿಡುವ ರಾಮಾಯಣವನ್ನು ಹೆಣೆಯಬಲ್ಲ ಸ್ಪಂದನದ ದ್ರವ್ಯವನ್ನು ಪಡೆಯುವುದು ಎಂಬುದನ್ನು ಗಮನಿಸಿದರೆ ಭವದ ಅರ್ಥ ‘ಇರುವುದು’ ಮಾತ್ರವಲ್ಲ ‘ಆಗುತ್ತ’ ಹೋಗುವುದು ಕೂಡ ಎಂದು ಗೊತ್ತಾಗುತ್ತದೆ. ಇಬ್ಬರೂ ಸ್ಪಂದಿಸುವುದು ಭವಕ್ಕೆ, ಸ್ಪಂದಿಸಿ ಪಡೆಯುವುದು ಭವವನ್ನೂ ಒಳಗೊಂಡ ಇನ್ನೊಂದು ಸತ್ಯವನ್ನು. ಭವದ ನೋವು ಮಾಯವಾಗದ, ಭವದ ನೋವೇ ಜಿನುಗಿಸುತ್ತಿರುವ ಸತ್ಯ ಕೂಡ ಇದು. ಕಾವ್ಯದಲ್ಲಂತೂ ಸತ್ಯ ಗೋಚರವಾಗುವುದು ಹೀಗೆ. ತಾವು ಮನುಷ್ಯ ಮಾತ್ರರು ಎಂಬುದನ್ನು ಮರೆಯದ ಋಷಿಗಳಿಗೆ ಮಾತ್ರ ದೊರೆಯುವ ದೃಷ್ಟಿಯಿದು.

ಮುಖ್ಯವಾಗಿ ನಾವು ಕಾಣುವುದು ಇಲ್ಲಿ ಕ್ರೌಂಚವಧೆ ಉದ್ವೇಗಕ್ಕೂ ಕಾರಣವಾಗುತ್ತದೆ; ಸತತವಾಗಿ ಬಾಧಿಸುವ ಅಳಲೂ ಆಗುತ್ತದೆ ಎಂಬುದನ್ನು. ಈ ಲೋಕದ ಸತ್ಯವನ್ನು ಅರಿತುಬಿಟ್ಟಿದ್ದೇನೆಂದು ತಿಳಿಯುವ ಸರ್ವಜ್ಞ ಭಾವದ ಘನವಂತಿಕೆಗೆ ಉದ್ವೇಗವೂ ಇಲ್ಲ; ಸತತವಾಗಿ ಕಾಡುವ ಒಳಗಿನಿಂದ ಕೊರೆಯುವ ಅಳಲೂ ಇಲ್ಲ. ಎರಡೂ ಇಲ್ಲದವನು ಕವಿ ಹೃದಯಿಯಂತೂ ಖಂಡಿತ ಅಲ್ಲ. ಅಷ್ಟೇಕೆ? ಮಾನವನಂತೂ ಅಲ್ಲ.

ಇತ್ತ ಕೇವಲ ಪ್ರಾಣಿಯೂ ಆಗಲಾರದ, ಅತ್ತ ದೇವನೂ ಆಗಲಾರದ ಮಾನವನ ಪಾಡಿಗೆ ಮುಕ್ತಿಯೇ ಇಲ್ಲವೇನೊ? ಫಿಲಾಸಫಿ ಓದಿಕೊಂಡು ತಾನು ಮಾತ್ರ ಈ ರೀತಿ ಬಾಧೆಗಳಿಂದಲೂ ಮಾನಸಿಕ ಜಂಜಾಟಗಳಿಂದಲೂ ಮುಕ್ತನೆಂದು, ಅಥವಾ ಮುಂದೆ ಮುಕ್ತನಾಗಬಲ್ಲವನೆಂದು ಸಮಾಧಾನಪಡುವುದೂ ಭ್ರಮೆಯಿರಬಹುದು. ನೋವು, ದುಃಖ, ಸುಖ ಹರ್ಷ ಇವುಗಳ ಮಿಶ್ರಣವೇ ಮಾನವನ ಪಾಡಿರಬಹುದು. ಈ ಪಾಡನ್ನು ಮೀರಬಲ್ಲ ಕ್ಷಣಗಳು ಇರಬಹುದು. ಸತತ ಎಚ್ಚರದಲ್ಲಿ ಮಿಡಿಯುವ ಬೆತ್ತಲೆಯಲ್ಲಿ ಒದಗುವ ಒಳನೋಟಗಳಿಂದಾಗಿ ಇಡೀ ಲೋಕದ ದುಃಖವನ್ನು ಭಾವಿಸಿಕೊಳ್ಳಬಲ್ಲ ಧನ್ಯತೆಯನ್ನು ಒಬ್ಬ ವ್ಯಕ್ತಿಯಾದ ರಾಮನ ಕಥೆ ರಾಮಾಯಣವಾಗುವುದರಲ್ಲಿ ನಾವು ಕಾಣುವುದು.

ಮನುಷ್ಯ, ಕೇವಲ ಪ್ರಾಣಿಯಾಗಿದ್ದಲ್ಲಿ ತಾನು ಸುಖಿಯೋ ದುಃಖಿಯೋ ಎನ್ನುವ ಸಮಸ್ಯೆಯೇ ಅವನನ್ನು ಕಾಡುತ್ತಿರಲಿಲ್ಲ. ಅಡಿಗರು ತಮ್ಮ ಭೂಮಿಗೀತ ಬರೆಯುವ ಸಂದರ್ಭದಲ್ಲಿ ಓದಿದ ಲಾರೆನ್ಸ್‌ನ ‘ಸ್ನೇಕ್‌’ ಬಗ್ಗೆ ಹೇಳಿದ್ದು ನೆನಪಾಗುತ್ತದೆ. ಏಕಾಂಗಿಯಾಗಿ ತನ್ನ ಪಾಡಿಗೆ ತಾನು ಹರಿದಾಡುತ್ತಿರುವ ಸರ್ಪದರ್ಶನವನ್ನು ಲಾರೆನ್ಸ್ ನಮಗೆ ಮಾಡಿಸುತ್ತಾನೆ. ಈ ದರ್ಶನವಾಗುವುದೇ ಸಂಘರ್ಷದಲ್ಲಿ. ತನ್ನ ಪಾಡಿಗೆ ತಾನಿದ್ದುಕೊಂಡು ನೀರು ಕುಡಿಯಲೆಂದು ಪಾತಾಳದ ಹುತ್ತದಿಂದ ಹೊರಬಂದ ಅತಿಥಿ ಈ ಸರ್ಪರಾಜ. ಕವಿ ಒಂದು ಕ್ಷಣ ತನಗೆ ಒದಗಿ ಬಂದ ದರ್ಶನಕ್ಕೆ ಬೆರಗಾಗುತ್ತಾನೆ; ಧನ್ಯನಾಗುತ್ತಾನೆ.

ಆದರೆ ಮರುಕ್ಷಣ ಅವರು ಕಲಿತು ತಲೆಯಲ್ಲಿ ತುಂಬಿಕೊಂಡ ಧೋರಣೆಗಳು ಅವನನ್ನು ಕುಬ್ಜಗೊಳಿಸುತ್ತವೆ. ಹಾವು ವಿಷ ಜಂತು; ಆ ಪ್ರದೇಶದ ಹಾವುಗಳಂತೂ ಇನ್ನೂ ಹೆಚ್ಚು ವಿಷವುಳ್ಳವು. ಹೀಗೆ ಹಾಳು ಬುದ್ಧಿವಂತಿಕೆ ಮುಂದಾಗಿ ಅವನು ಒಂದು ಕಲ್ಲನ್ನೆತ್ತಿ ಎಸೆಯುತ್ತಾನೆ. ಸರ್ಪ ಸರಿದು ಬಿಲ ಹೋಗುತ್ತದೆ. ಆಗ ಕವಿಯಿಂದ ಒಂದು ಉದ್ಗಾರ ಹೊರುಡತ್ತದೆ; ಈ ಹರಿಯುವ ಸರ್ಪ ಮಾತ್ರ lord of life, ನಾನಲ್ಲ.

ಜೀವಿಗಳ ಲೋಕದ ಪ್ರಭುಗಳು ಪ್ರಾಣಿಗಳು ಮಾತ್ರ; ತ್ರಿಶಂಕು ಸ್ಥಿತಿಯ ಮಾನವ ಅಲ್ಲ. ಆದರೆ ಮಾನವನೂ ತನ್ನ ಸ್ಥಿತಿಯಾಚೆ ವಿಸ್ತರಿಸಬಲ್ಲ. ಹೀಗೆ ವಿಸ್ತರಿಸಬಲ್ಲಂತಹ ರಾಮಾಯಣದ ಗ್ರಹಿಕೆಯ ಮೂಲವಿರುವುದೇ ಮಿಥುನ ತತ್ಪರವಾಗಿದ್ದ ಪಕ್ಷಿ ಅನುಭವಿಸುವ ವಿರಹದ ನೋವಿಗೆ ಋಷಿ ಮಿಡಿಯಬಲ್ಲ ಎನ್ನುವುದರಲ್ಲಿ. ಪಶು ಪಕ್ಷಿಯಾದಿಯಾಗಿ ಇಡೀ ಜೀವಸಂಕುಲದ ಹಾಡಿಗೂ ಪಾಡಿಗೂ ಸ್ಪಂದಿಸುವುದು ಋಷಿಯಲ್ಲಿ, ಇನ್ನೂ ಹಸಿಯಾಗಿ ಉಳಿದ ಬೆತ್ತಲೆ, ಋಷಿಯಾದರೂ ಮನುಷ್ಯ ಮಾತ್ರನಾಗಿಯೂ ಉಳಿದುಬಿಟ್ಟವನೊಬ್ಬನ ಬೆತ್ತಲೆ.

ನಿರ್ವಿಕಾರವಾದ ನಿಚ್ಚಳವಾದ ವೈಜ್ಞಾನಿಕ ಬುದ್ಧಿಮತ್ತೆಗೆ ಬರ್ಟರಾಂಡ್ ರಸೆಲ್‌ನನ್ನು ಉದಾಹರಣೆಯಾಗಿ ಇಟ್ಟುಕೊಂಡು, ಕವಿಗಳು ಕೇವಲ ಭಾವನಾಶೀಲರು ಎಂದು ಹೀಯಾಳಿಸಿ ವಾದಿಸುತ್ತಿದ್ದ ವಿಜ್ಞಾನಿಯೊಬ್ಬನಿಗೆ ಲಾರೆನ್ಸ್‌ಒಂದು ತುಂಟ ಉತ್ತರ ಕೊಟ್ಟಿದ್ದನಂತೆ; ‘ಬಟ್ಟೆ ಬಿಚ್ಚಿ ಸ್ನಾನಮಾಡುವ ನಗ್ನನಾದ ರಸೆಲ್‌ನನ್ನ ನೋಡಿ ಬಂದು ಈ ಮಾತನ್ನು ಹೇಳು.’ ತತ್ವಬದ್ಧ ಮಾತುಗಳನ್ನೇ ಆಡಿ ಆಡಿ ಗೊಡ್ಡಾಗಿ ಹೋಗಿದ್ದ ವರ್ಡ್ಸ್‌ವರ್ತ್ ಕವಿ ಹೂವರಳಿದ ಒಂದು ಪುಟ್ಟ ಗಿಡವನ್ನು ನೋಡಿ, ಹೊರಗಿನದು ಇನ್ನೂ ತನ್ನನ್ನು ಹೊಗಬಲ್ಲಂತೆ ಉಳಿದಿದ್ದೇನಲ್ಲವೆ ಎಂದು ಬೆರಗಾಗಿ ‘surprised by joy’  ಎನ್ನುವ ಪದ್ಯ ಬರೆದಿದ್ದಾನೆ.

ಕೇವಲ ಅಮೂರ್ತದ ಜೊತೆಗಿನ ವ್ಯವಹಾರದ ಮಿದುಳು ಬೆಳಸಿಕೊಂಡಾತ, ಅಥವಾ ನೈತಿಕವಾದ ತಾನು ಅತಿಘನವೆಂದು ತಿಳಿದು ಉಬ್ಬಿದವ ಸಾಮಾನ್ಯಕ್ಕೆ ಅತಿ ದೂರವಾಗಿ ಜಡವಾಗಿ ಬಿಡಬಹುದು. ಕೋಲ್‌ರಿಡ್ಜ್‌ಕವಿ ಪ್ರತಿವಾದಭಯಂಕರನಾಗಿ, ಅಮೂರ್ತ ವೈಚಾರಿಕತೆಯ ಡೊಳ್ಳನಾಗಿ ತಾನು ಕಳೆದುಕೊಂಡ ಸದ್ಯಸ್ಪಂದನದ ಹಸಿತನಕ್ಕಾಗಿ ಹಂಬಲಿಸುವ ಶೋಕಗೀತೆಯೊಂದಿದೆ. ಜೀವಂತಿಕೆಯ ಲಕ್ಷಣ ಸ್ಪಂದನಶೀಲತೆ. ಸ್ಪಂದನಶೀಲ ಮನಸ್ಸು ಇಹ-ಪರಗಳಲ್ಲಿ ಭೇದ ಕಾಣದು. ‘ಇಹ’ ಮಾತ್ರ ಕಾಣುವೆನೆಂಬ ಸಂಸಾರಿಯು ಇಹವನ್ನು ತುಂಬಿ, ಅದರಿಂದಲೇ ತುಳುಕುವ ‘ಪರ’ವನ್ನು ಕಾಣಲಾರದ ಜಡನಾದರೆ, ಪರದಲ್ಲಿ ಮಾತ್ರ ತಾನು ತತ್ಪರನೆಂದು ಭಾವಿಸುವ ಸನ್ಯಾಸಿ ಎಲ್ಲೆಲ್ಲೂ ಇಹದಲ್ಲೇ ಇಣುಕುತ್ತಿರುವ ದೇವರನ್ನು ಕಾಣಲಾರದ ಕುರುಡ.

ವಾಲ್ಮೀಕಿ ಋಷಿ ಹಿಂದಿನ ವ್ಯಾಧನಲ್ಲ. ಆದರೆ ಪೂರ್ವದ ವಾಸನೆ ಉಳಿದಿರಬಹುದು. ಇನ್ನೊಬ್ಬ ವ್ಯಾಧನ ಬಗ್ಗೆ ಅಷ್ಟು ಸಿಟ್ಟು ಅವನಲ್ಲಿ ಏಕೆ ಹುಟ್ಟಬೇಕು? ಹೀಗೆ ಹುಟ್ಟಿದ ಅತಿಯೆನ್ನಿಸುವ ಸಿಟ್ಟು ಮತ್ತೇನನ್ನು ಅಂಟಿಸಿಕೊಂಡು, ಗುಪ್ತವಾಗಿ ನೆನೆಸಿಕೊಂಡು ಮಾತಿನಲ್ಲಿ ಶ್ಲೋಕವಾಯಿತು? ಕೇವಲ ಮನುಷ್ಯನೂ ಆಗಿರುವ ಈ ಋಷಿ ತನ್ನ ಅಳನ್ನು ಉಳಿಸಿಕೊಂಡೇ ಹೊರಳಿ ಅರಳುತ್ತ ಹೋದದ್ದು ಯಾವ ವಿಸ್ತಾರ ತಲುಪಲು? ತಾನು ಹಿಂದಿನ ದಿನ ನಾರದನಿಂದ ಕೇಳಿಸಿಕೊಂಡಿದ್ದ ರಾಮ ಎಂಬ ಒಬ್ಬನ ಕಥೆಯನ್ನು ಎಂಥಹ ರಾಮಾಯಣ ಮಾಡಲು?

ಮನುಷ್ಯನ ಸಾಮಾನ್ಯತೆಯೂ, ಕಾಲದ ಅಪಾರ ಆಕಾಶದಲ್ಲಿ ಎಲ್ಲ ಘೋರ ದುರಂತಗಳ ಆಚೀಚೆಯೇ ಜರುಗುವ ಕ್ಷುಲ್ಲಕ ಸಂಗತಿಗಳೂ, ಸಾಂಸಾರಿಕೆಯ ದೈನಿಕಗಳೂ ಒಟ್ಟೊಟ್ಟಾಗಿ ಕವಿಯ ಹಸಿ ಹಸಿಯಾದ (ಆದರೂ ಏನನ್ನಾದರೂ ತಾಳಿಕೊಳ್ಳಬಲ್ಲ ಧಾತುಶಕ್ತಿ ಪಡೆದ) ಮೈಯ ಬೆತ್ತಲೆಯನ್ನು ಸೃಷ್ಟಿಗೆ ಉದ್ದೀಪಿಸುತ್ತವೆ. ಬ್ರೂಗೆಲ್‌ನ ಚಿತ್ರ ಒಂದರಲ್ಲಿ ಆಕಾಶದಿಂದ ಕೆಳಗೆ ಬಿದ್ದು ಸಾಯುತ್ತಿರುವ ಎಳೆಯ ಇಕಾರೆಸ್‌ಎಂಬ ಬಾಲಕನ ಯಾತನೆ ಚಿತ್ರದ ಒಂದು ಮೂಲೆಯಲ್ಲಿದ್ದರೆ ಇನ್ನೊಂದು ಮೂಲೆಯಲ್ಲಿ ಎಲ್ಲಿಗೋ ಸಾಗುತ್ತಿರುವ ಹಡಗಿದೆ; ತನ್ನ ಪಾಡಿಗೆ ತಾನು ಉಳುತ್ತಿರುವ ರೈತ ಇನ್ನೆಲ್ಲೋ ಇದ್ದಾನೆ. ಹೀಗೆ ವಿಶೇಷವೆನ್ನಬಹುದಾದ ಘಟನೆಯ ಲಕ್ಷ್ಯವೇ ಇಲ್ಲದಂತೆ, ತನ್ನ ಪಾಡಿಗೆ ತಾನು ಅನಿವಾರ್ಯವಾಗಿ ಇರುವ, ಭೂಮಿಯ ಮೇಲಿನ ನಿತ್ಯದ ವ್ಯವಹಾರದ ನೈಜತೆ ಮತ್ತು ಸಹಜತೆ ಆಡೆನ್ ಕವಿಯನ್ನು ಸ್ಥಿತಪ್ರಜ್ಞ ಕಾಣುವಿಕೆಗೆ ಪ್ರಚೋದಿಸುತ್ತದೆ. ಹೀಗಿರಬಾರದಿತ್ತು ಎಂಬ ವ್ಯಾಕುಲವೂ ಇಲ್ಲದೆ, ಇರುವುದೇ ಹೀಗೆ ಎಂಬ ಸುಲಭ ಸಮಾಧಾನವೂ ಇಲ್ಲದೆ, ಹೀಗಾಗುವುದು ನ್ಯಾಯವೆ ಎಂಬ ರೋಷವೂ ಇಲ್ಲದೆ ಕಾಣಬಲ್ಲ ಸ್ಥಿತಿ ಕೂಡ ನೋಯಬಲ್ಲ, ನೋಯುವುದರಿಂದಲೇ ತಣಿಯದ, ಸತತವಾಗಿ ನಿಜಕ್ಕೊಡ್ಡಿಕೊಂಡ ಬೆತ್ತಲೆಯೇ ಇದ್ದೀತು.

ವಾಲ್ಮೀಕಿ ವ್ಯಾಧಸ್ಥಿತಿಯಲ್ಲೂ ಇಲ್ಲ; ಹಾಗಿದ್ದುದನ್ನು ಮರೆತುಬಿಟ್ಟವನೂ ಅಲ್ಲ. ಆದ್ದರಿಂದ ಅವನಿಗೆ ಕನಿಕರವೂ ಇದೆ; ಕೋಪವೂ ಇದೆ. ಹಕ್ಕಿಯನ್ನು ವ್ಯಾಧ ಆಹಾರಕ್ಕಾಗಿಯೂ ಕೊಂದಿರಬಹುದು; ವಿಹಾರಕ್ಕಾಗಿಯೂ ಕೊಂದಿರಬಹುದು. ಋಷಿಯ ಶಾಪದ ಉಗ್ರತೆ ಅನಗತ್ಯವಾಗಿ ಅಧಿಕವಾಗಿರಬಹುದು. ಆದರೆ ವೇದನೆಯಲ್ಲಿ ಹೊಮ್ಮಿದ ಮಾತು ಲಯಬದ್ಧವಾಗಿದ್ದು, ಕವಿಗೆ ಉಲ್ಲಾಸವನ್ನೂ ತರುವಂತೆ ಇದೆ. ಇಂತಹ ಸ್ಥಿತಿಯ ಸೂಕ್ಷ್ಮವನ್ನು ನಾವು ಅರಿಯಬೇಕು.

ಗಟ್ಟಿಯಾದ ನೂಲಾಗುವಂತೆ, ಈ ನೂಲು ರಾಮಾಯಣದ ಹೆಣಿಗೆಯಾಗುವಂತೆ ಮಾಡಬಲ್ಲ ಜೀವಿ ಬೆತ್ತಲೆಯಾದದ್ದು, ಮೃದುವಾದದ್ದು ಎನ್ನುವುದನ್ನು ನಾವಿಲ್ಲಿ ಕಾಣಬೇಕು. ಇನ್ನು ಇನ್ನೂ ಹುಟ್ಟುತ್ತಲೇ ಬೆಳೆಯುತ್ತಲೇ ಹೋಗಬೇಕಾದ ರಾಮಾಯಣದ ಸೃಷ್ಟಿಯ ಜೀವಂತಿಕೆಯ ರಹಸ್ಯವಿರುವುದಾಗಲೀ, ಈ ಕಥೆಯನ್ನು ಜಿನುಗುತ್ತ ಮಿಡಿಯುತ್ತ ಕಟ್ಟುತ್ತಿರುವುದಾಗಲೀ ಬೆತ್ತಲೆಯಾದ ತನ್ನ ಮೃದುವನ್ನು ಕಳೆದುಕೊಳ್ಳದಿರುವ ಒಂದು ಜೀವಿಯೇ ಹೊರತಾಗಿ ವಜ್ರಸ್ಥಿತಿ ತಲುಪಿಬಿಟ್ಟ ಘನತೆಯ ಸರ್ವಜ್ಞತೆಯಲ್ಲ. ರಾಮಾಯಣ ಶ್ಲೋಕದ ಭದ್ರವಾದ ರೇಷ್ಮೆ ತೊಗಲಿನ ಹೊರಮೈ ಸೃಷ್ಟಿಯಾಗುತ್ತಿರುವುದು ‘ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ’.

ಕವಿಯಿಂದ ಕಾವ್ಯ ಹೊಮ್ಮುವ ಕ್ರಿಯೆಗೆ ಬೇಂದ್ರೆಗೆ ಹತ್ತಿರವಾದ ಮಾತು ಅಡಿಗರದು. ‘ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ.’ ಅಕ್ಕನಲ್ಲಾದರೋ ಈ ಪ್ರಕ್ರಿಯೆ ಸಮಸ್ಯಾತ್ಮಕವಾಗುತ್ತದೆ. ತರಣಿಯ ಹುಳ ತನ್ನ ‘ಸ್ನೇಹದಲ್ಲಿ’ ಮನೆಯ ಮಾಡಿ ಒಡಲಿನ ನೂಲಿನಿಂದ ತನ್ನನ್ನೇ ಸುತ್ತಿ, ಸುತ್ತಿ, ಸಾವನ್ನು ತಂದುಕೊಳ್ಳುತ್ತದೆ. ಅಕ್ಕನ ಸಾಲಿನಲ್ಲಿ ಎದ್ದು ತೋರುವ ‘ಸ್ನೇಹ’ ಎನ್ನುವ ಸಂಸ್ಕೃತ ಶಬ್ದ ಪ್ರೀತಿಯನ್ನೂ ಸೂಚಿಸುತ್ತದೆ; ಜೊತೆಗೇ ಅಂಟಂಟಾದ ಸಾಂಸಾರಿಕತೆಯನ್ನೂ ಸೂಚಿಸುತ್ತದೆ. ಜೀವನ ಪ್ರೀತಿ ಅತಿ ಉತ್ಕಟವಾಗಿ, ಉಸಿರು ಕಟ್ಟಿದಂತಾಗಿ ದೇವ ಕೃಪೆಯಲ್ಲಿ ಬಿಡುಗಡೆಯಾಗಿ ಹಲುಬುವ ಸಂತವಾಣಿ ಅಕ್ಕನದು.

‘Who wisheths to be a poet if one can be a saint’ ಎನ್ನುತ್ತಾನೆ ಹಾಪ್ಕಿನ್ಸ್ ಎಂಬ ಕವಿ. ಸಂತ ಏನೇ ಹೇಳಲಿ ನಾವು ಗಮನಿಸುವುದು ಇದು; ಅಕ್ಕನ ಜೀವನ ಪ್ರೀತಿಯಾಗಲೀ, ಹಾಪ್ಕಿನ್ಸ್‌ನ ಜೀವನ ಪ್ರೀತಿಯಾಗಲೀ ಪ್ರಪಂವನ್ನು ಹಚ್ಚಿಕೊಂಡ ಯಾವ ಸಂಸಾರಿಗೂ ಕಮ್ಮಿಯಾದದ್ದಲ್ಲ. ಎಲ್ಲವೂ ನಶ್ವರ ಎಂದು ಕಾಣುವ ಸಂತ ಋಷಿಗಳಾದ ವಾಲ್ಮೀಕಿ ವ್ಯಾಸರೇ ಅಳಲುತ್ತಾ ಇಡೀ ಸತ್ಯವನ್ನು ಕಂಡು ನಮಗೆ ಕಾಣಿಸಿದವರು. ಕಂಡೂ ಕೇವಲ ಮನುಷ್ಯರಾಗಿ ಉಳಿದವರು. ಕ್ಯಾನ್ಸರ್ ತಂದ ನೋವಿನಲ್ಲಿ ನರಳುವ ಪರಮಹಂಸರ ಹಾಗೆ.

ಯಾವ ಸ್ಥಿತಿಯಲ್ಲೂ ಮಾನವನಿಗೆ ‘ಮಾನವ ಪಾಡಿ’ನಿಂದ ಮುಕ್ತಿಯಿಲ್ಲವೇನೊ. ಶಿಲುಬೆ ಶಿಕ್ಷೆಗೆ ಗುರಿಯಾದ ಕ್ರಿಸ್ತ ನಿನಗೆ ಗೊತ್ತೆ ಎಂದು ದರ್ಪದ ಅಧಿಕಾರಿ ಕಲ್ಲಿನಷ್ಟು ಗಟ್ಟಿಯಾದ ಪೀಟರ್‌ನನ್ನು ಕೇಳಿದಾಗ ಮೂರು ಸಲ ಅಳುಕಿನಲ್ಲಿ ‘ಗೊತ್ತಿಲ್ಲ’ ಎನ್ನುತ್ತಾನೆ. ತನ್ನ ಕಾಲದ ಎಲ್ಲ ಆಚಾರ ವಿಚಾರಗಳ ಮಿತಿಗಳಲ್ಲೂ ರಾಮಕೃಷ್ಣರು ಪರಮಹಂಸರಾದರು. ಪರಮಹಂಸರಾಗಿದ್ದವರು ಎಲ್ಲ ಹುಲು ಮಾನವರಂತೆ ಕ್ಯಾನ್ಸರ್‌ನಿಂದ ಬಳಲಿ ಸತ್ತರು. ಕೃಷ್ಣ ಪರಮಾತ್ಮನೂ ಎಲ್ಲ ಯಃಕಶ್ಚಿತ್ ಮಾನವರಂತೆ ಒಂಟಿಯಾಗಿ ಸತ್ತ, ಇಂಥ ಮಾನವನ ನೈಜ ಬೆತ್ತಲೆ ಸ್ಥಿತಿಯ ಸ್ಪಂದನವೇ ಶುಭ್ರ ಶೋಭೆಯ ರೇಷ್ಮೆಯೂ ಆಗುವುದು.

ಇಲ್ಲಿ ನನಗೆ ಪು.ತಿ.ನ. ಮತ್ತೆ ನೆನಪಾಗುತ್ತಾರೆ. ಭಿನ್ನಗೊಳಿಸಿ ನೋಡುವುದು ಶಾಸ್ತ್ರದ ಅಗತ್ಯ; ಇಡಿಯಾಗಿ ನೋಡುವುದು ಕಾವ್ಯದ ಅಗತ್ಯ. ಪು.ತಿ.ನ. ಇದನ್ನು ತಿಳಿಯದವರಲ್ಲ. ಭಕ್ತ ನಿಲುವಿನ ಪು.ತಿ.ನ.ರಿಗೆ ಭವ ಮೀರುವುದು, ಭವದಲ್ಲಿ ಮುಳುಗುವುದು, ಮುಳುಗಿ ಏಳುವುದು, ಎದ್ದು ಮುಳುಗುವುದು, ಎಲ್ಲವನ್ನೂ ಲೀಲೆಯೆಂದು ಭಾವಿಸುವುದು – ಕಾವ್ಯದ ಸಹಜವಾದ ವ್ಯಾಪಾರ.

ಈ ಎಲ್ಲದರ ಹಿಂದೆ ನಮ್ಮೊಳಗೇ ಆಗುತ್ತಿರುವುದನ್ನು ತಿಳಿಯುವಂತೆ ಮಾಡುವುದು ಯಾವುದು ಎಂದು ಕೇಳಿದರೆ ಸರಳವಾದೊಂದು ಉತ್ತರ ಕೊಡುವುದು ಸಾಧ್ಯವೆ? ಅದು ಹೊರಗೆ ನಿಂತು ನೋಡುವುದೆ? ನಮ್ಮೊಳಗೇ ನಿಂತು ನೋಡುವುದನ್ನೂ ನೋಡುತ್ತಿರುವುದೆ? ಅದು ನೆರಳು ಬೀಳಿಸದ ದೀಪವೆ? ಅದು ಇದ್ದುದನ್ನು ಇದ್ದಂತೆ ಕಾಣಿಸುವ ಕನ್ನಡಿಯೆ?

*

ಮಾನವ ಚರಿತ್ರೆ ಆಕ್ರಮಣದ ಚರಿತ್ರೆ; ಯಾವತ್ತಿನಿಂದಲೂ. ಆಕ್ರಮಣ ಗೆದ್ದವರಿಗೆ ಸಾಹಸದ ಚರಿತ್ರೆ; ಸೋತವರಿಗೆ ಸಂಕಟದ ಪಾಡು. ಈ ಪಾಡು ಗುಲಾಮರ ಜಾಸ್ ಗಾನವಾಯಿತು; ಗೆದ್ದವರದು ಸಾಹಸದ ಆಕ್ರಮಣಕಾರೀ ವೀರಾವೇಶದ ಎಪಿಕ್ ಆಯಿತು. ತಾಜ್‌ಮಹಲ್‌ನಂತಹ ಸುಂದರ ಸ್ಮಾರಕಗಳ ಹಿಂದೆ ಬೆವರಿ ಬಳಲಿದವರು ಪಟ್ಟ ನಿಷ್ಕರಣ ಬಲವಂತವಿದೆ. ರಾಮಾಯಣದ ಹಿಂದೆ ಎಷ್ಟೋ ಸಾವುನೋವಿನಿಂದ ಪಾರುಮಾಡಲ್ಪಟ್ಟ ಸೀತೆಯ ಪರಿತ್ಯಾಗವಿದೆ; ಕಪಿಗಳ ಸೈನ್ಯವಿದೆ; ಜಟಾಯು ಮರಣವಿದೆ. ಭಾರತ ಕಥೆಯ ಉದ್ದಕ್ಕೂ ಅದರ ಕರ್ತಾರನೂ ಪಾಲುದಾರನೂ ಆದ ವೇದವ್ಯಾಸರ ದುಃಖವಿದೆ; ಕೈಗಳನ್ನು ನಭಕ್ಕೆತ್ತಿ ಅವರು ತಮ್ಮ ದುಃಖ ಸಾರುತ್ತಾರೆ. ಎಷ್ಟು ನೊಂದರೂ ಮಾನವ ತನ್ನ ಅನುಭವದಿಂದ ಕಲಿಯುವುದಿಲ್ಲವಲ್ಲ, ಯಾಕೆ? ಎಂದು ಹಲುಬುತ್ತಾರೆ.

*

ಋಷಿ ಕವಿಯಾದ ವಾಲ್ಮೀಕಿಯೂ ಎಲ್ಲ ಕವಿಗಳಂತೆ ವ್ಯಾಮೋಹಿ ಎಂದು ಗುರುತಿಸುವ ಆಪ್ತತೆಯಿಂದ ಈ ಬರಹವನ್ನು ಮುಗಿಸಬಹುದು. ಕ್ರೌಂಚ ವಿರಹಿಯಾಯಿತೆಂದು ಕವಿಗೆ ದುಃಖವಾಗಿದೆ. ಆದರೆ ಜೊತೆಗೆ ತನ್ನಿಂದ ಹೊರ ಬಂದ ಮಾತು ಸ್ಮರಣೀಯವಾಗಿದೆಯೆಂಬ ಖುಷಿಯೂ ಈ ಋಷಿಗಿದೆ. ತನ್ನಿಂದ ಹೊರ ಹೊಮ್ಮಿದ ಮಾತಿಗೆ ತಾನೇ ಬೆರಗಾದ ಕವಿ ತಾನಾಡಿದ ಮಾತನ್ನು ನೆನಪಿಟ್ಟುಕೊ ಎಂದು ಶಿಷ್ಯನಾದ ಭಾರದ್ವಾಜನಿಗೆ ಹೇಳುತ್ತಾನೆ. ಕಾವ್ಯದ ಮೊದಲ ಓದುಗ ಅವನು!

ಹಿಂದಿನ ರಾತ್ರಿ ನಾರದರಿಂದ ಕೇಳಿಸಿಕೊಂಡ ರಾಮಾಯಣದ ಕಥೆ – ಇದು ಕವಿ ಕಟ್ಟಿದ ಕಥೆಯಲ್ಲ, ಕೇಳಿಸಿಕೊಂಡು ಪಡೆದದ್ದು ಎನ್ನುವುದು ಮುಖ್ಯ – ಕವಿಯ ತಲೆಯಲ್ಲಿ ಗುನುಗುನಿಸುತ್ತಿದೆ. ದುಃಖವನ್ನೂ, ಲಯಬದ್ಧ ಮಾತಿನ ಸುಖವನ್ನೂ ಒಟ್ಟಾಗಿ ಅನುಭವಿಸುವ ಕವಿಗೆ ಬ್ರಹ್ಮನೇ ಎದುರು ಕೂತ ಪರಿವೆಯಿಲ್ಲ. ಇದನ್ನು ಗ್ರಹಿಸಿದ ಬ್ರಹ್ಮ ಕವಿಗೆ ತಥಾಸ್ತು ಹೇಳುತ್ತಾನೆ. ವರಗಳನ್ನೂ ಕೊಡುತ್ತಾನೆ. ‘ರಾಮಾಯಣದಲ್ಲಿ ಒಂದು ಪಾತ್ರ ಇನ್ನೊಂದಕ್ಕೆ ಗುಟ್ಟಿನಲ್ಲಿ ಹೇಳಿದ್ದೂ, ತಾನು ತನಗೇ ಅಂದುಕೊಂಡದ್ದೂ ನಿನಗೆ ಗೊತ್ತಾಗಲಿ.’ ಆದರೆ ಈ ವರ ಮಾತ್ರ ಸಾಲದು. ಕಾವ್ಯವನ್ನು ಹೊತ್ತು ಹೆರುವವರೆಲ್ಲರೂ ಪಡುವ ಬಯಕೆಯೊಂದಿದೆ.

ಇದು ಯಾವುದೆಂದು ತಾನಾಡಿಬಿಟ್ಟ ಮಾತಿಗೆ ಮರುಳಾದ ವಾಲ್ಮೀಕಿಯ ಆಂತರ್ಯವನ್ನು ಅರಿತ ಸೃಷ್ಟಿಕರ್ತನಿಗೆ ಗೊತ್ತು. ಪ್ರತಿ ಸೃಷ್ಟಿಯಲ್ಲಿ ತೊಡಗಿರುವ ಕವಿಗೆ ಎಲ್ಲವನ್ನೂ ಕಾಣಬಲ್ಲ ಶಕ್ತಿ ಮಾತ್ರ ಸಾಲದು, ಕವಿ ಕಂಡು ಹೇಳುವುದನ್ನು ಕೇಳಿಸಿಕೊಂಡವನಿಗೆ ಅಷ್ಟೇ ಸದ್ಯವಾಗಿ ಕಾಣಿಸಬೇಕು; ಕಂಡದ್ದು ನಿಜ ಎನ್ನಿಸಬೇಕು. ಲಿಂಗ ಮೆಚ್ಚಿ ಅಹುದು ಅಹುದು ಎನ್ನವಂತಿರಬೇಕು. ಪರಕಾಯ ಪ್ರವೇಶದ ಒಳನೋಟಗಳ ತನ್ಮಯತೆ ತತ್ಪರತೆಗಳ ಜೊತೆಯಲ್ಲೇ ವಾಲ್ಮೀಕಿ ಈ ವಾಕ್‌ಸಿದ್ಧಿಯ ಅಂದ ಮಾತು ತತ್‌ಕ್ಷಣವೇ ನಿಜವೆನ್ನಿಸುವ – ವರವನ್ನು ಬ್ರಹ್ಮನಿಂದ ಪಡೆಯುತ್ತಾನೆ.

ಕಾವ್ಯದ ಮಾಂತ್ರಿಕತೆ ಎಂದರೆ ಇದೇ.

ದೇಶ ಕಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

* * *