ತಾವು ನಿತ್ಯ ಮನೆಯಲ್ಲಿ ಆಡುವ ಭಾಷೆಯಲ್ಲಿ ಅತ್ಯಾಧುನಿಕರಾಗಿಬಿಡುವ ಭ್ರಮೆಯಲ್ಲಿ ಬದಲಿಸಿಕೊಳ್ಳುವ ಆಸೆ ನಮ್ಮ ನಡುವಿನ ಅದೃಷ್ಟವಂತರಿಗೆಲ್ಲ ಹುಟ್ಟಿಕೊಂಡುಬಿಟ್ಟಿದೆ ಎಂದು ತೋರುತ್ತಿದೆ. ಈ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಎಷ್ಟೇ ಫೀಸಾದರೂ ಕಟ್ಟಿ ಸೇರಿಸುವವರೇ ಹೆಚ್ಚಗಿದ್ದಾರೆ. ಇವರಿಗೆ ನಮ್ಮ ಎಲ್ಲ ಸರಕಾರಿ ಶಾಲೆಗಳೂ ಕಳಪೆಯಾಗಿ ಕಾಣತೊಡಗಿವೆ. ಅದೃಷ್ಟವಂತರ ಮಕ್ಕಳು ಈ ಶಾಲೆಗಳಿಗೆ ಹೋಗದಿರುವುದರಿಂದ ತಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದು ಆಶಿಸುವ ತಾಯ್ತಂದೆಯರ ಬೆಂಬಲ ಈ ಶಾಲೆಗಳಿಗೆ ಸಿಗದೆ ಅನಿವಾಯ್ವಾಗಿ ಕಳಪೆಯಾಗುತ್ತಿವೆ. ವಿಪರ್ಯಾಸವೆಂದರೆ ನಮ್ಮ ನಡುವಿನ ಒಳ್ಳೆಯ ಉಪಾಧ್ಯಾಯರಲ್ಲಿ ಹೆಚ್ಚು ಕಲಿತಿರುವವರು ಇರುವುದು ಕಳಪೆಯಾಗಿ ಕಾಣುವ ಈ ಸರಕಾರಿ ಶಾಲೆಗಳಲ್ಲಿ. ಹೆಚ್ಚು ಸಂಬಳ ಪಡೆಯುತ್ತ ಇರುವವರೂ ಇವರೇ. ತುಂಬಾ ಫೀಸ್ ತೆಗೆದುಕೊಂಡು ನಡೆಸುತ್ತಿರುವ ಖಾಸಗಿ ಶಾಲೆಗಳಲ್ಲಿ ಇವರಷ್ಟು ಸಂಬಳ ಪಡೆದು ಕೆಲಸ ಮಾಡುತ್ತಿರುವವರಾಗಲೀ, ಇವರಷ್ಟು ಟ್ರೈನಿಂಗ್ ಪಡೆದು ಉಪಾಧ್ಯಾಯರಾಗಲೀ ಇಲ್ಲ. ಆದರೆ ಸರಕಾರದ ಬೆಂಬಲವಿದ್ದೂ, ಒಳ್ಳೆಯ ಉಪಾಧ್ಯಾಯರಿದ್ದೂ ಚೆನ್ನಾಗಿ ನಡೆಯಬೇಕಾದ ಸರಕಾರಿ ಶಾಲೆಗಳು ಕುಸಿಯುತ್ತಿವೆ. ಕೇರಳದಲ್ಲಂತೂ ಈ ಶಾಲೆಗಳು ಮುಚ್ಚುತ್ತಿವೆ. ನಮ್ಮಲ್ಲೂ ಮುಚ್ಚಲು ಶುರುವಾಗಿವೆ. ಆದರೆ ಗಿಣಿಪಾಠ ಮಾಡುವ ಕಳಪೆಯಾದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೆಲ್ಲೂ ಬೆಳೆಯುತ್ತಿವೆ. ಇದಕ್ಕೇನು ಪರಿಹಾರವೆಂದು ನಾವು ಯೋಚಿಸಬೇಕಾಗಿದೆ.

ಸರಕಾರಿ ಶಾಲೆಗಳು ಬಲಗೊಳ್ಳಬೇಕಾದರೆ ಎಲ್ಲ ವರ್ಗದ, ಎಲ್ಲ ಜಾತಿಯ ಮಕ್ಕಳು ಈ ಶಾಲೆಗಳಿಗೆ ಹೋಗುವಂತಾಗಬೇಕು. ಬಡವರು ಮಾತ್ರ ಸರಕಾರಿ ಶಾಲೆಗಳಿಗೆ, ಅದೃಷ್ಟವಂತರ ಮಕ್ಕಳು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಹೋಗುವುದು  ಶುರುವಾದರೆ ಯಾವ ಮಕ್ಕಳೂ ಒಂದೇ ದೇಶದವರಾಗಿ, ಆರೋಗ್ಯಕರವಾದ ಮನಸ್ಸುಳ್ಳವರಾಗಿ, ಸಮುದಾಯದ ಪ್ರಜ್ಞೆಯುಳ್ಳವರಾಗಿ ಬೆಳೆಯಲಾರರು. ಇದು ಬಡವರಿಗೆ ಹಿತವಲ್ಲ; ಅದೃಷ್ಟವಂತರಿಗೆ ಗಾಢವಾದ ಜೀವನಿಷ್ಠ ಜ್ಞಾನಾರ್ಜನೆಯ ದೃಷ್ಟಿಯಿಂದ ಒಳ್ಳೆಯದಲ್ಲ.

ಮುಖ್ಯವಾದ ಮಾತು ಇದು : ಮಾಧ್ಯಮದ ಪ್ರಶ್ನೆಯನ್ನು ಸ್ಕೂಲಿನ ಪ್ರಶ್ನೆಯೆಂದು ನೋಡಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಇಲ್ಲದಿದ್ದರೆ ಕನ್ನಡ ಮಾಧ್ಯಮದ ಕಲಿಕೆ ನಿಜವಾಗಲಾರದು; ಬಲವಾಗಿ ಬೇರೂರದು. ಆದ್ದರಿಂದ ಈ ಸರಕಾರಿ ಶಾಲೆಗಳಿಗೆ ಎಲ್ಲರೂ ತಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಅನ್ನಿಸುವುದಕ್ಕೆ ಬೇಕಾದ ಕ್ರಮಗಳನ್ನೆಲ್ಲ ನಾವು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದಲೆ ನಮ್ಮಲ್ಲಿ ಕೆಲವರಿಗೆ ಈ ಸಾಮಾನ್ಯ ಶಾಲೆಗಳಲ್ಲೂ ಮೊದಲನೆಯ ತರಗತಿಯಿಂದಲೇ ಇಂಗ್ಲಿಷ್ ಮಾತನಾಡಲು ಕಲಿಸುವುದು ಅಗತ್ಯವೇನೋ ಅನ್ನಿಸಿರುವುದು. ಇಂಗ್ಲಿಷನ್ನು ಐದನೆಯ ತರಗತಿಯಿಂದ ಕಲಿಸಿದರೂ ಸಾಕು. ಆದರೆ ತಾಯ್ತಂದೆಯರು ತಮ್ಮ ಮಕ್ಕಳನ್ನು ಈ ಕಾರಣಖ್ಕಾಗಿ ಸಾಮಾನ್ಯ ಸರಕಾರಿ ಶಾಲೆಗಳಿಗೆ ಕಳುಹಿಸದೆ ಖಾಸಗಿ ಶಾಲೆಗಳಿಗೆ ಕಳಿಸುವುದಾದರೆ ಆಗ ನಾವೇನು ಮಾಡಬೇಕು? ‘ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಬೇಕೋ? ಬೇಕಾದರೆ ಮಾತನಾಡಲು ಮೊದಲನೆಯ ತರಗತಿಯಿಂದಲೇ ಇಂಗ್ಲಿಷನ್ನು ಹೇಳಿಕೊಡುತ್ತೇವೆ; ಆದರೆ ಎಲ್ಲ ವಿಷಯಗಳನ್ನೂ ಅವರಿಗೆ ಆಪ್ತವಾಗಿ ಗೊತ್ತಿರುವ ದೇಶದ ಭಾಷೆಯಾದ ಕನ್ನಡದಲ್ಲೆ ಹೇಳಿಕೊಡುತ್ತೇವೆ. ಆಗ ಅವರಲ್ಲಿ ವಿಷಯಜ್ಞಾನವೂ ಗಾಢವಾಗುತ್ತದೆ, ಮುಂದಕ್ಕೆ ಅಗತ್ಯವಾದ ಇಂಗ್ಲಿಷಿನ ಭಯವೂ ಹೋದಂತಾಗುತ್ತದೆ’ ಎನ್ನಬೇಕು.

ಹೀಗಾದರೂ ನಮ್ಮ ಸರಕಾರಿ ಶಾಲೆಗಳು ಬಲವಾಗುತ್ತವೆಯೇ ಎಂದು ನೋಡಬೇಕು. ವಿದ್ಯೆಗೆಂದು ನಾವು ತೆಗೆದುಕೊಳ್ಳುವ ತೆರಿಗೆಗಳನ್ನು ಖರ್ಚು ಮಾಡುವುದು ಸರಕಾರಿ ಶಾಲೆಗಳಿಗೆ. ಈ ಶಾಲೆಗೆ ಮಕ್ಕಳು ಬರುವಂತಾದರೆ ಮಾತ್ರ ಕನ್ನಡ ಮಾಧ್ಯಮ ಗಟ್ಟಿಯಾಗುತ್ತದೆ. ಇಲ್ಲವಾದರೆ ಜನರ ಮನಸ್ಸಿನಲ್ಲಿ ಅದೊಂದು ಕಳಪೆಯಾದ ಕಲಿಕೆ ಎಂಬ ಭಾವನೆ ಊರಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ದುಡ್ಡು ತೆಗೆದುಕೊಂಡು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸಬಹುದಾದ್ದರಿಂದ ಕೈಯಲ್ಲಿ ಅಷ್ಟಿಷ್ಟು ಕಾಸಿರುವ ಕೂಲಿಗಾರರೂ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಾರೆ. ನಾವೆಲ್ಲರೂ ಒಂದು ದೊಡ್ಡ ಆಂಗ್ಲ ಕಲ್ಪಿತ ಭ್ರಮಾಲೋಕದಲ್ಲಿ ಬದುಕುತ್ತಿದ್ದೇವೆ. ಈ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದಾಗಿ ನಮ್ಮ ಮಕ್ಕಳು ಭಾಷಾದರಿದ್ರರಾಗುತ್ತಾರೆ. ಅಲ್ಲದೆ ವಿಷಯಜ್ಞಾನ ದರಿದ್ರರೂ ಆಗುತ್ತಾರೆ.

ಖಾಸಗಿ ಶಾಲೆಗಳನ್ನು ನಾವು ಮುಚ್ಚಿಸುವಂತಿಲ್ಲ. ಆದರೆ ಈ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೋಗುವ ನಮ್ಮ ಮಕ್ಕಳು ದೇಶದ ಭಾಷೆಯನ್ನು ಕಲಿಯದೆ ವಯಸ್ಕರಾದಾಗ ತಾವು ಅನ್ಯರೂ ಅತಂತ್ರೂ ಎಂಬ ಭಾವನೆಯಿಂದ ನರಳದಿರುವಂತೆ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಆದ್ದರಿಂದ ಕೆಲವು ಕ್ರಮಗಳನ್ನು ನಾವು ಮಕ್ಕಳ ಹಿತದೃಷ್ಟಿಯಿಂದ ಈ ಶಾಲೆಗಳಲ್ಲೂ ಜಾರಿಗೆ ತರಬೇಕು. ಇದು ತುಂಬ ಮುಖ್ಯವಾದದ್ದು ಎಂದು ನಾನು ತಿಳಿದಿದ್ದೇನೆ.

ಇಂಗ್ಲಿಷ್ ಮಾಧ್ಯಮದ ಈ ಮಕ್ಕಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ಮಾಡಿದರೆ ಸಾಕೆಂದು ನಮ್ಮಲ್ಲಿ ಬಹಳ ಮಂದಿ ತಿಳಿದಂತೆ ಕಾಣುತ್ತದೆ. ಕನ್ನಡ ಒಂದು ಭಾಷೆಯಾಗಿ ಮಾತ್ರ ಕಡ್ಡಾಯಗೊಂಡರೆ ಆಗ ಅದು ಹೇಗೋ ಮೂವತ್ತೈದು ಅಂಕಗಳನ್ನು ಗಳಿಸಿ ಪಾಸು ಮಾಡಿ ಮರೆತುಬಿಡಬಹುದಾದ ವಿಷಯವಾಗಿಬಿಡುತ್ತದೆ. ಆದ್ದರಿಂದ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ ಕಲಿಯಲೇಬೇಕಾದ ಕೆಲವು ವಿಷಯಗಳನ್ನು – ಉದಾ : ಚರಿತ್ರೆ, ಭೂಗೋಳ, ಪರ್ಯಾವರಣ ಇತ್ಯಾದಿ ವಿಷಯಗಳನ್ನು – ಕನ್ನಡದಲ್ಲಿ ಕಲಿಸಬೇಕೆಂಬ ನಿಯಮವಿರಬೇಕು. ಈ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡಿ ಈ ವಿಷಯಗಳ ಬಗ್ಗೆ ಉತ್ತಮವಾದ ಪುಸ್ತಕಗಳನ್ನು ತಯಾರಿಸಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೋಗುವ ಮಕ್ಕಳು ಕೊನೆಯಪಕ್ಷ ಮಾನವಿಕ ಶಾಸ್ತ್ರಗಳನ್ನಾದರೂ ಕನ್ನಡದಲ್ಲಿ ಓದಿದರೆ ಅವರಲ್ಲಿ ಕನ್ನಡ ಖಂಡಿತ ಬೇರೂರುತ್ತದೆ. ಈ ವಿಷಯಗಳನ್ನು ದೇಶದ ಭಾಷೆಯಲ್ಲೇ ಕಲಿಯುವುದು ಸೂಕ್ತವೆನ್ನುವುದು ವೈಜ್ಞಾನಿಕವಾಗಿಯೂ ಸಮರ್ಥನೀಯವಾದುದು. ತನ್ನ ಸುತ್ತಲಿನ ಜೀವಂತ ಪ್ರಪಂಚಕ್ಕೆ ಸ್ಪಂದಿಸುವುದರಿಂದ ಮಾತ್ರ ಭೂಗೋಳ, ಆರೋಗ್ಯಶಾಸ್ತ್ರ ಇತ್ಯಾದಿಗಳು ಮಕ್ಕಳಿಗೆ ನಿಜವೆನ್ನಿಸುವುದು.

೧. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವ ಮೂಲಕವಾದರೂ ಬಲಪಡಿಸುವುದು ಮತ್ತು

೨. ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಮಾನವಿಕ ವಿಷಯಗಳನ್ನು ಕನ್ನಡದಲ್ಲಿ ಕಲಿಸುವುದು – ಈ ಎರಡೂ ಕಾರ್ಯಕ್ರಮಗಳ ಮುಖಾಂತರ ನಾವು ನಮ್ಮ ಜ್ಞಾನವರ್ಧನೆಗೆ ಕನ್ನಡವನ್ನು ಬಳಸುವುದು ಸಾಧ್ಯವಾದಂತಾಗುತ್ತದೆ.

ಆಗ ಕನ್ನಡ ಬೆಳೆಯುತ್ತದೆ; ನಾವೂ ಸೃಜನಶೀಲರಆಗಿ ಬೆಳೆಯುತ್ತೇವೆ. ಕನ್ನಡ ಕಳೆಯದಂತೆ ಇಂಗ್ಲಿಷ್ ಬರುತ್ತದೆ; ಇಂಗ್ಲಿಷನ್ನು ಕಡೆಗಣಿಸದಂತೆ, ಸರ್ವರೂ ಅದರಲ್ಲಿ ಪಾಲಾಗುವಂತೆ, ಕನ್ನಡ ಬೆಳೆಯುತ್ತದೆ.

ದಿನಾಂಕ ೧೪-೫-೦೫ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

* * *