ಗಾಂಧೀಜಿ ಒಮ್ಮೆ ಹೀಗೆ ಹೇಳಿದ್ದರು: ಒಂದು ಅತ್ಯುತ್ತಮ ಸೃಜನಶೀಲ ಭಾರತೀಯ ಮನಸ್ಸಿನಲ್ಲಿ ಎರಡು ಅಂಶಗಳು ಕೂಡಿಕೊಂಡಿರುತ್ತವೆ. ಮೊದಲನೆಯದು ; ನಮ್ಮ ನೆಲದ ಪರಂಪರೆಯಲ್ಲಿ ಬೇರೂರಿ ಅದರ ಸತ್ವವನ್ನು ಹೀರಿಕೊಳ್ಳಬಲ್ಲ ಶಕ್ತಿ. ಇನ್ನೊಂದು ಹೊರಗಿನ ನಿತ್ಯನೂತನ ಆಕಾಶಕ್ಕೆ ತೆರೆದಿದ್ದು, ಎಲ್ಲೆಡೆಯಿಂದಲೂ ಪ್ರೇರಣೆಗಳನ್ನು ಪಡೆದುಕೊಳ್ಳಬಲ್ಲ ಶಕ್ತಿ. ಇವೆರಡೂ ಕೂಡಿದವರು ನಮ್ಮ ದೇಶದ ಇಪ್ಪತ್ತನೆಯ ಶತಮಾನದ ಮಹಾನುಭಾವರು. ಕನ್ನಡದ ಕುವೆಂಪು, ಕಾರಂತ, ಮಾಸ್ತಿ, ಪುತಿನ, ಶ್ರೀರಂಗ, ಡಿವಿಜಿ-ಎಲ್ಲರಲ್ಲೂ ಈ ಕೂಡಿಕೆ ಕೆಲಸ ಮಾಡಿದೆ. ಕೇವಲ ಪರಂಪರೆಗೆ ಆತುಕೊಂಡವರು ನಿಷ್ಕ್ರಿಯರಾಗಿಬಿಟ್ಟರು. ಕೇವಲ ಆಧುನಿಕರಾದವರು ಪರಮಹಂಸರು ಗೇಲಿ ಮಾಡುತ್ತಿದ್ದ ನೌಕರಿ ಜನರಾದರು.

ನಮ್ಮ ಎಲ್ಲ ವೈಚಾರಿಕತೆ ಹುಟ್ಟಿಕೊಂಡಂತಹದ್ದು, ಈ ಎರಡರ ಸಂಗಮದಲ್ಲಿ. ಕುವೆಂಪು ಮತ್ತು ಕಾರಂತರಲ್ಲಿ ಈ ಮಿಲನವನ್ನು ಯಥೇಚ್ಛವಾಗಿ ಕಾಣುತ್ತೇವೆ. ಒಂದು ದೃಷ್ಟಿಯಲ್ಲಿ ಸಾಹಿತ್ಯ ಪರಂಪರೆಯ ದೃಷ್ಟಿಯಿಂದ ಕುವೆಂಪು ಅವರಂತೂ ಎಷ್ಟು ಭಾರತೀಯವೋ ಅಷ್ಟೇ ಪಾಶ್ಚಿಮಾತ್ಯ ಎನ್ನಬಹುದಾದ ವೈಚಾರಿಕತೆಯನ್ನು ಮೈಗೂಡಿಸಿಕೊಂಡವರಾಗಿದ್ದರು. ಕಾರಂತರಲ್ಲಿ ಐರೋಪ್ಯ ವೈಚಾರಿಕತೆ ಮತ್ತು ಭಾರತೀಯ ಸಾಮಾಜಿಕ ಸಂಕಟಗಳು ಎದುರುಬದುರಾಗುತ್ತವೆ. ಬೇಂದ್ರೆಯೂ ತನಗೆ ಅಗತ್ಯವಾದ ಪಾರಮಾರ್ಥಿಕ ಅನುಭವಗಳನ್ನು ಜಗತ್ತಿನ ಎಲೆಡೆಯಿಂದಲೂ ಪಡೆಯಬಲ್ಲ ಅಚ್ಚ ದೇಶೀಯವಾದ ಕಾಲ್ಪನಿಕತೆಯನ್ನು ಪಡೆದವರಾಗಿದ್ದರು. ಮಾಸ್ತಿ ನಾಗರಿಕ ಮೌಲ್ಯಗಳ ದೃಷ್ಟಿಯಿಂದ ಪರಂಪರೆಯನ್ನೂ ಪಾಶ್ಚಿಮಾತ್ಯ ಲಿಬರಲ್ ಧೋರಣೆಗಳನ್ನೂ ಬೆಸೆಯಬಲ್ಲವರಾಗಿದ್ದರು. ಪು.ತಿ.ನ ಎಲ್ಲರಿಗಿಂತ ಹೆಚ್ಚಾಗಿ ಪರಂಪರೆಯ ಆಚರಣೆಗಳಲ್ಲಿ ಶ್ರದ್ಧೆಯನ್ನಿಟ್ಟುಕೊಂಡೇ ಎಲ್ಲವನ್ನೂ ಅನುಮಾನದಲ್ಲೂ ಪ್ರೇಮದಲ್ಲೂ ನೋಡಬಲ್ಲವರಾಗಿದ್ದರು. ನಂತರ ನಮಗೆ ಮುಖ್ಯರಾದ ಅಡಿಗರು ವೈದಿಕ ಪರಂಪರೆಗೆ ಸ್ಪಂದಿಸುತ್ತಾ ಐರೋಪ್ಯ ವಿಚಾರಗಳಿಗೆ ಮನಸೋತವರಾಗಿ ಎಂದೂ ಯಾವುದರ ಭಕ್ತನಂತೆಯೂ ವರ್ತಿಸಲಾರದೆ ಪರಮ ಅನುಮಾನಿಯಾಗಿಯೇ ತಮ್ಮ ಭಾವುಕ ಪ್ರಪಂಚವನ್ನು ಸೃಷ್ಟಿಸಿದರು.

ಅಡಿಗರ ನಂತರದ ಬರಹಗಾರರ ಬಗ್ಗೆ ಪ್ರತ್ಯೇಕವಾಗಿ ವಿವೇಚಿಸಬೇಕು. ಪರಂಪರೆಯಿಂದ ನಮ್ಮಲ್ಲಿ ಹಲವಾರು ಹಿಂದಿನವರಂತೆ ಪಡೆಯುವ ನಂಬಿಕೆ ಉಳ್ಳವರಾಗಿ ಉಳಿಯಲಿಲ್ಲ. ಶಿವರುದ್ರಪ್ಪ, ಕಣವಿ, ಎಕ್ಕುಂಡಿ ಈ ಮಾತಿಗೆ ವಿನಾಯಿತಿ ಎನ್ನಬಹುದು. ನಾನು ಈ ಯಾವ ಮಾತನ್ನೂ ಒಬ್ಬ ಲೇಖನ ಹೆಚ್ಚುಗಾರಿಕೆಯನ್ನು ಸ್ಥಾಪಿಸಲಾಗಲೀ ಅಥವಾ ಅವರ ಮಿತಿಗಳನ್ನು ಗುರುತಿಸಲಾಗಲೀ ಹೇಳುತ್ತಿರುವುದಲ್ಲ. ನಾವು ನಮ್ಮ ಸುತ್ತಲಿನ ಪ್ರಪಂಚಕ್ಕೆ ಸ್ಪಂದಿಸುವ ಕ್ರಮದಲ್ಲಿ ತೋರಿಬರುವ ವಿಧಾನಗಳನ್ನು ಗುರುತಿಸಲೆಂದಷ್ಟೇ ಹೇಳುತ್ತಿರುವುದು. ಜೊತೆಗೆ ನನ್ನದೇ ಆದ ಒಂದು ಭಯವನ್ನು ಹೇಳಲು ಪ್ರಯತ್ನಿಸುತ್ತೇನೆ. ಕನ್ನಡದ ಪರಂಪರೆಯ ಬಗ್ಗೆ ಯಾವ ವಿಶ್ವಾಸವೂ ಇಲ್ಲದವರಿಂದ ಬೆಲೆಯುಳ್ಳದ್ದು ಅಥವಾ ಬಾಳುವಂತಹದ್ದು ಹುಟ್ಟದೇ ಹೋಗಬಹುದೇನೋ ಎನ್ನುವ ಭಯ ನನಗಿದೆ.

ನನ್ನ ಈ ಭಯಕ್ಕೆ ಮುಖ್ಯ ಕಾರಣ ಆಧುನಿಕತೆಯ ಸ್ವರೂಪವೇ ಈ ಹತ್ತು ವರ್ಷಗಳಲ್ಲಿ ಸಂಪೂರ್ಣ ಬದಲಾಗಿಬಿಟ್ಟಿರುವುದು. ನಾನು ಬರೆಯಲು ಪ್ರಾರಂಭಿಸಿದ್ದ ಕಾಲದಲ್ಲಿ ನಮ್ಮ ಪರಂಪರೆಗಳಿಗೆ ಮುಖಾಮುಖಿಯಾಗುವುದರಲ್ಲೇ ಅಪಾರವಾದ ಚೈತನ್ಯವಿತ್ತು. ಈ ವಿರೋಧದ ಹಿಂದೆ ಜಾತಿಯ ಅಸಮಾನತೆಗಳ ವಿರೋಧವಿತ್ತು; ಅಸ್ಪೃಶ್ಯತೆಯ ವಿರೋಧವಿತ್ತು; ಕಂದಾಚಾರಗಳ ವಿರೋಧವಿತ್ತು. ಸಮಷ್ಟಿ ಕುಟುಂಬದ ವ್ಯವಸ್ಥೆ, ವೈಯಕ್ತಿಕವಾದ ಕಾಮಪ್ರೇಮಗಳಿಗೆ ಅವಕಾಶ ಕೊಡದಂತೆ ವಿರೋಧ ಒಡ್ಡುವ ಸಂಕಟವಿತ್ತು. ನಾವು ಕಾಣದೇ ಇರುವ ಹೊಸ ಪ್ರಪಂಚವೊಂದರ ಆಕರ್ಷಣೆಯಿತ್ತು. ಆಕ್ಸ್‌ಫರ್ಡ್‌‌ನಲ್ಲಿ ಓದಿಬಂದ ಗೋಕಾಕರಂತವರು ನಮ್ಮ ಯುವಜನರ ಹೀರೋಗಳಂತೆ ಕಾಣುತ್ತಿದ್ದರು. ಲಂಡನ್ನಿನ ಅನುಭವವಿದ್ದ ಕೈಲಾಸಂ ನಮ್ಮ ಹೀರೋ ಆದರು. ರಾಜಕೀಯದಲ್ಲಂತೂ ಗಾಂಧಿ, ನೆಹರೂ ಹೊರಗೆ ಹೋಗಿ ಬಂದವರೇ. ವಿವೇಕಾನಂದರು ಅಮೆರಿಕದಲ್ಲಿ ಸಾಧಿಸಿದ ಕೀರ್ತಿ ನಮ್ಮಲ್ಲಿ ಅಪಾರವಾದ ಹುರುಪನ್ನು ಹುಟ್ಟಿಸಿತ್ತು.

ನಾವೆಲ್ಲರೂ ಕನ್ನಡಿಗರಾಗಿದ್ದೇ, ಭಾರತೀಯರಾಗಿದ್ದೇ ಪಾಶ್ಚಾತ್ಯರಲ್ಲಿ ಇರುವ ಒಳ್ಳೆಯದನ್ನು ಸ್ವೀಕರಿಸಬಹುದೆಂಬ ರಾಜಾರಂ ಮೋಹನರಾಯರ ಸಂತಾನವಾಗಿದ್ದೆವು.

ಈಗ ಎಲ್ಲವೂ ಬದಲಾಗಿದೆ. ಕನ್ನಡವೇ ನಮ್ಮ ಹೃದಯ ಮತ್ತು ಮನಸ್ಸುಗಳ ಭಾವುಕತೆಯ ಅಭಿವ್ಯಕ್ತಿಗೆ ಎಷ್ಟೋ ಅಷ್ಟೇ ವೈಚಾರಿಕತೆಯ ಅಭಿವ್ಯಕ್ತಿಗೂ ಕಾರಣವಾಗುವ ಒಂದು ಭಾಷೆಯಾಗಿ ಉಳಿಯಬಹುದೆಂಬ ಭರವಸೆ ಕಡಿಮೆ ಆಗುತ್ತಿದೆ. ಜಾಗತೀಕರಣ ನಮ್ಮೆಲ್ಲರನ್ನೂ ಒಂದೇ ರೀತಿಯ ಉಡುಪಿನ, ಒಂದೇ ರೀತಿಯ ಊಟದ, ಒಂದೇ ರೀತಿಯ ಮಾತಿನ, ಒಂದೇ ರೀತಿಯ ವರ್ತನೆಯ ಮನುಷ್ಯರನ್ನಾಗಿ ಪರಿವರ್ತಿಸಬಹುದಾದ ಭಯವಿದೆ.

ಅಂದರೆ ಇಡೀ ಜಗತ್ತಿನಲ್ಲಿ ದೊಡ್ಡ ಪರಿವರ್ತನೆಯಾಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ಒಂದು ಸಾವಿರ ವರ್ಷಗಳ ಹಿಂದೆ ಸಾಂಸ್ಕೃತಿಕವಾಗಿ ಒಂದು ದೊಡ್ಡ ವಿಕೇಂದ್ರೀಕರಣದ ಕ್ರಿಯೆ ಪ್ರಾರಂಭವಾಯಿತು. ಎಲ್ಲರಿಗೂ ಸಾಂಸ್ಕೃತಿಕ,  ನಾಗರಿಕ ಭಾಷೆಯಾಗಿದ್ದ ಸಂಸ್ಕೃತ ದೇಶೀಯ ಭಾಷೆಗಳಿಗೆ ಎಡೆ ಮಾಡಿಕೊಟ್ಟಿತು. ಪಂಪ, ಕುಮಾರವ್ಯಾಸ, ನೆಡುತಚ್ಚನ್, ಕಬೀರ, ತುಕಾರಾಂ, ತುಳಸೀದಾಸ- ಇವರೆಲ್ಲರೂ ಸಂಸ್ಕೃತದ ಅಧಿಕಾರ ಮಾಯವಾಗಿ ಹುಟ್ಟಿಕೊಂಡ ಸೃಜನಶೀಲರು. ಹಾಗೆಯೇ ಯೂರೋಪ್‌ನಲ್ಲಿ ಲ್ಯಾಟಿನ್ನಿನ ಅಧಿಕಾರ ಕುಂದುತ್ತಾ ಡಾಂಬೆ, ಶೇಕ್ಸ್‌ಪಿಯರ್, ಗಯಟೆ, ಟಾಲ್‌ಸ್ಟಾಯ್ – ಹೀಗೆ ಹಲವಾರು ಮಹಾನುಭಾವರು ಹುಟ್ಟಿಕೊಂಡರು. ಒಂದು ಸಾವಿರ ವರ್ಷಗಳ ಕಾಲ ನಡೆದ ಈ ಪ್ರಕ್ರಿಯೆ ಈಗ ತಿರುಗು=ಮುರುಗಾಗುತ್ತಿದೆಯೇನೋ ಎನ್ನಿಸುತ್ತಿದೆ. ಯೂರೋಪಿನ ಒಂದು ಸಣ್ಣ ಭಾಷೆಯಲ್ಲಿ ಒಬ್ಬ ಕಿರ್ಕೆಗಾರ್ಡ್, ಒಬ್ಬ ಇಬ್ಸನ್ ಬರುವುದು ಸಾಧ್ಯವಾಯಿತು. ಈಗ ಯೂರೋ‌ಪ್‌ನಲ್ಲೂ ಬೌದ್ಧಿಕ ಭಾಷೆ ಕ್ರಮೇಣ ಅಮೆರಿಕನ್ನರ ಇಂಗ್ಲಿಷೇ ಆಗಿಬಿಡಬಹುದಾದ ಭಯ ಅವರಲ್ಲಿ ಕೆಲವರನ್ನಾದರೂ ಕಾಡುತ್ತಿದೆ. ಒಂದು ಕಾಲದಲ್ಲಿ ಏಕಭಾಷಾ ಸ್ವಾಮ್ಯವನ್ನು ಎತ್ತಿಹಿಡಿದಿದ್ದ ಮತ ಧರ್ಮಗಳ ಒಳಗಿನ ಒಡಕಿನಿಂದಾಗಿ ಹಾಗೂ ರಾಜಕೀಯ ಕಾರಣಗಳಿಂದಾಗಿ ಹಲವು ಲೇಖಕರ ಸಮೃದ್ಧಿ ಸಾಧ್ಯವಾಯಿತು. ಈಗ ವ್ಯಾಪಾರಕ್ಕಾಗಿ, ಮಾರುಕಟ್ಟೆಗಳಿಗಾಗಿ ಏಕಸ್ವಾಮ್ಯದ ಕಡೆ ಪ್ರಪಂಚ ಧಾವಿಸುತ್ತಿರುವಂತೆ ಕಾಣುತ್ತಿದೆ. ಈ ಏಕಸ್ವಾಮ್ಯವನ್ನು ಸಾಧ್ಯಗೊಳಿಸುತ್ತಿರುವುದು ಕೂಡ ವಿಜ್ಞಾನದ ಬಲವನ್ನು ಪಡೆದ ಟೆಕ್ನಾಲಜಿ. ಈ ಟೆಕ್ನಾಲಜಿಯ ಸ್ವರೂಪ ಎಂತದ್ದೆಂದರೆ ಹಲವು ರುಚಿಗಳ ಬದಲು ಒಂದೇ ರುಚಿಯ ಆಹಾರ ಮಾರುಕಟ್ಟೆಯಲ್ಲಿ ಸಿಗಲು ಪ್ರಾರಂಭವಾಗುತ್ತದೆ. ಹಾಗೆಯೆ ನೇಯುವವರು, ಮಡಕೆ ಮಾಡಿಕೊಡುವವರು, ಬಡಗಿಗಳು, ಒಡವೆಗಳನ್ನು ತಯಾರಿಸುವವರು, ಎಲ್ಲ ಬಗೆಯ ಕುಶಲ ಕರ್ಮಿಗಳು ತಮ್ಮ ತಮ್ಮ ಪರಂಪರಾಗತವಾದ ತಂತ್ರಗಾರಿಕೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ.

ಈ ಜಾಗತೀಕರಣದ ಪರಿಣಾಮವನ್ನು ಎದುರಿಸಲು ರಾಜಕೀಯವಾಗಿ ಕೆಲವು ದೇಶಗಳು ಕುರುಡಾದ ರಾಷ್ಟ್ರೀಯತೆಯನ್ನು ರೂಪಿಸಿಕೊಂಡವು. ಪೆಟ್ರೋಲಿನ ಬಲದ ಇಸ್ಲಾಂ, ಡಾಲರ್ ಬಲದ ಕ್ರಿಶ್ಚಿಯಾನಿಟಿ, ಅಮೆರಿಕನ್ ಡಾಲರನ್ನು ಗಳಿಸಿದ ಹಿಂದುತ್ವ – ಇವೇ ಈ ಜಾಗತೀಕರಣದ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಬೇರೆ ಬೇರೆ ರೀತಿಯ ರಾಷ್ಟ್ರ ಶಕ್ತಿಗಳನ್ನಾಗಿಸಿಕೊಳ್ಳುತ್ತಿರುವ ಮತಧರ್ಮಗಳಾಗಿವೆ. ಎಲ್ಲ ಮತಧರ್ಮಗಳಲ್ಲೂ ಎಲ್ಲ ಕಾಲದಲ್ಲೂ ‘ನಿನ್ನ ಹೃದಯದಲ್ಲಿರುವ ದೇವರನ್ನು ಹುಡುಕು’ ಎನ್ನುವವರು ಪರಮ ಕ್ರಾಂತಿಕಾರರಾಗಿದ್ದರು. ಅಂತಹ ಕ್ರಾಂತಿಕಾರಕ ಮತಧರ್ಮಗಳು ಈಗ ಜನರ ಮನಸ್ಸನ್ನು ಆಳುವಂತೆ ಕಾಣುತ್ತಿಲ್ಲ. ಅಮೆರಿಕದಲ್ಲಿರುವ ಕೆಲವು ಹಿಂದೂ ದೇವಾಲಯಗಳು ಶಾಪಿಂಗ್ ಕಾಂಪ್ಲೆಕ್ಸ್‌ಗಳಂತೆಯೆ ಕಾಣತೊಡಗಿವೆ. ಎಲ್ಲ ದೇವರುಗಳಿಗೂ ಒಂದೇ ಮಾರ್ಕೆಟ್ಟಿನಲ್ಲಿ ಅಂಗಡಿಗಳಂತಹ ಗುಡಿಗಳು ನಿರ್ಮಾಣವಾಗಿರುತ್ತವೆ.

ಇಂತಹ ಒಂದು ಸಂದರ್ಭದಲ್ಲಿ ಈಚೆಗೆ ನಮ್ಮ ಸಂಪ್ರದಾಯಗಳನ್ನು ಕಳೆದುಕೊಂಡು, ಆಚೆಗೆ ಮಾರುಕಟ್ಟೆಗಳನ್ನು ಮಾತ್ರ ಸೃಷ್ಟಿಸುತ್ತಿರುವ ಆಧುನಿಕತೆ ವ್ಯಾಪಿಸಿರುವ ಲೋಕದಲ್ಲಿ ನಾವಿದ್ದೇವೆ. ಕನ್ನಡದಂತಹ ಒಂದು ಭಾಷೆ ತನ್ನಲ್ಲೆ ತಾನೊಂದು ಪ್ರಪಂಚ, ಹಾಗೆಯೇ ದೊಡ್ಡ ಪ್ರಪಂಚದೊಳಗೆ ತಾನೊಂದು ಪರಪಂಚ, ಹಾಗೆಯೇ ತನ್ನ ಗರ್ಭದೊಳಗೆ ಹೊರ ಪ್ರಪಂಚವನ್ನು ಹುದುಗಿಸಿಟ್ಟುಕೊಂಡಿರುವ ಒಂದು ಪ್ರಪಂಚ ಎಂದು ತಿಳಿದಿದ್ದ ಕವಿರಾಜಮಾರ್ಗಕಾರನ ದರ್ಶನ ನಾಶವಾಗುತ್ತಿದೆ.

ಇವೆಲ್ಲವನ್ನು ನಾನು ಹೇಳುತ್ತಿರುವುದು ನಮ್ಮ ಕರ್ತೃತ್ವ ಶಕ್ತಿ ಎಲ್ಲಿಯವರೆಗೆ ತನ್ನ ಸತ್ವವನ್ನು ಕಾಯ್ದುಕೊಳ್ಳುವುದು ಎಂದು ಪ್ರಶ್ನೆ ಮಾಡಲು. ಈಚೆಗೆ ನಾನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುವಾಗ ಒಂದು ವಿಷಯವನ್ನು ಹೇಳಿದೆ. ಇನ್ನು ಐದು ವರ್ಷಗಳ ಒಳಗೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿಯೇ ಪಾಠ ಮಾಡುವ ಒಂದು ಅತ್ಯುತ್ತಮ ಮೆಡಿಕಲ್ ಕಾಲೇಜನ್ನು, ಒಂದು ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಲು ಸಾಧ್ಯವಾಗಬೇಕು. ಇಂತಹ ಎರಡು ಕಾಲೇಜುಗಳು ಇದ್ದಲ್ಲಿ (ನನ್ನ ಊಹೆ) ಕನ್ನಡವನ್ನು ಹೇಗಾದರೂ ಕಲಿತು ಈ ಕಾಲೇಜುಗಳಿಗೆ ಸೇರುವ ಉತ್ತರ ಪ್ರದೇಶದ ಭಾರತೀಯರು ಇದ್ದೇ ಇರುತ್ತಾರೆ. ಹಿಂದೆ ಆರು ತಿಂಗಳಲ್ಲೇ ರಷ್ಯನ್ ಕಲಿತು ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದವರು ಇರಲಿಲ್ಲವೇ? ಹಾಗೆ. ಎಲ್ಲಿಯ ತನಕ ನಾವು ಹತ್ತನೆಯ ಇಯತ್ತೆಯ ತನಕ ಮಾತ್ರ ಕನ್ನಡ, ಆಮೇಲಿನಿಂದ ಎಲ್ಲ ಉನ್ನತ ಶಿಕ್ಷಣವೂ ಇಂಗ್ಲಿಷ್‌ನಲ್ಲಿ ಎನ್ನುತ್ತ ಇರುತ್ತೇವೆಯೋ ಅಲ್ಲಿಯವರಿಗೆ ಕನ್ನಡ ಭಾಷೆ ಹಿಂದಿನಂತೆ ಪರಂಪರೆಯನ್ನೂ ಆಧುನಿಕತೆಯನ್ನೂ ಬೆಸೆಯುವ ಕಾರ್ಯದಲ್ಲಿ ನಿರತವಾಗಿರುವುದು ಅನಿವಾರ್ಯವೆಂಬಷ್ಟು ಅಗತ್ಯವಾಗಿ ಉಳಿಯುವುದಿಲ್ಲ. ಇಡೀ ವಿಶ್ವವನ್ನು ಪ್ರತಿನಿಧಿಸಬಲ್ಲ ವಿಶ್ವ ನಾವು ಎನ್ನುವ ಆತ್ಮಾಭಿಮಾನದ ಜೊತೆಗೆ ಜಗತ್ತಿನಿಂದ ಪರಭಾಷೆಗಳನ್ನು ಕಲಿಯುತ್ತಲೇ ಇರಬೇಕಾದ ಜನರು ನಾವು ಎನ್ನುವ ವಿನಯ ಬೆರೆತುಕೊಂಡಲ್ಲಿ ಮಾತ್ರ ಕನ್ನಡಕ್ಕೆ ಭವಿಷ್ಯವಿದೆ ಎಂದು ನನ್ನ ಭಾವನೆ.

ಪ್ರಜಾವಾಣಿ ಪತ್ರಿಕೆಯು ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಹೊರತಂದ ವಿಶೇಷ ಪುರವಣಿಯಲ್ಲಿ (೧೧೨೦೦೫) ಪ್ರಕಟವಾದ ಲೇಖನ
ನಿರೂಪಣೆ: ರಘುನಾಥ ..

* * *