ಈ ಬಗೆಯ ವಿವೇಚನೆ ಭಾರತದಲ್ಲೂ ಇತ್ತು. ಪ್ರಕೃತಿಯಿಂದ ಹೆಚ್ಚಿನ ಶಕ್ತಿಯನ್ನು ಪಡೆದು ಹೋಮ ಹವನಾದಿಗಳಿಂದ ದೇವತೆಗಳ ಮಟ್ಟಕ್ಕೇರಲು ಪ್ರಯತ್ನಿಸುವುದು ವೈದಿಕ ಪದ್ಧತಿ. ಜೈನ ಹಾಗೂ ಬೌದ್ಧ ಧಾರೆಗಳಲ್ಲಿ ಮುಖ್ಯವಾದದ್ದು ತಪಸ್ಸು. ಶೂದ್ರರನ್ನೂ ಒಳಗೊಂಡು ನಡೆದದ್ದು ವೀರಶೈವ ಚಳವಳಿ-ಇವೆಲ್ಲ ತುಂಬಾ ತೀವ್ರವಾದ ಶ್ರಮಣ ಪರಂಪರೆಯ ಭಾವನಾತ್ಮಕ ಚಳವಳಿಗಳಾದ್ದರಿಂದ ಕೆಲವು ಬಾರಿ ಅತಿರೇಕಕ್ಕೂ ಹೋಗಿಬಿಡುತ್ತಿದ್ದವು. ಗಾಂಧಿ ಭಾರತದ ಶ್ರಮಣ ಧಾರೆಯಲ್ಲಿ ಬಂದ ಮಹಾತ್ಮರು. ಯಾವ ಶ್ರಮಣಧಾರೆಯೂ ಕೊನೆಯ ತನಕ ಅದೇ ಆಗಿರುವುದಿಲ್ಲ. ಒಂದಿಷ್ಟು ವೈದಿಕತೆಯ ಅಂಶ ಅದಲರಲಿರುತ್ತದೆ. ಹಾಗೆಯೇ ವೈದಿಕತೆಯೂ ಶ್ರಮಣ ಧಾರೆಯ ಕೆಲವು ಗುಣಗಳನ್ನು ಪಡೆದಿರುತ್ತದೆ. ಜಾತಿಪದ್ಧತಿಯ ಅನಿಷ್ಟಗಳನ್ನು ವಿಸರ್ಜಿಸಿ ವೈದಿಕ ಶ್ರಮಣ ಧಾರೆಗಳು ಹೀಗೆ ಒಂದಕ್ಕೊಂದು ಪೂರಕವಾಗಲು ಯತ್ನಿಸಿದ್ದರಿಂದ ಭಾರತವು ಎಷ್ಟೋ ವಿಧದಲ್ಲಿ ತನ್ನನ್ನು ಸರಿಪಡಿಸಿಕೊಂಡಿತು.

ಕೇರಳದ ಒಬ್ಬ ಇತಿಹಾಸದ ಪ್ರೊಫೆಸರ್‌ಒಮ್ಮೆ ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಅವರು ‘ಪೋರ್ಚುಗೀಸರು ಭಾರತಕ್ಕೆ ಬಂದ ಮೇಲೆ ಭಾರತದಲ್ಲಿ ಜಾತಿಪದ್ಧತಿ ಮೊದಲ ಬಾರಿಗೆ ಪ್ರಶ್ನಿಸಲ್ಪಟ್ಟಿತು’ ಎಂದರು. ನಿಜವಾದ ಸಂಗತಿಯೆಂದರೆ, ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಜಾತಿಪದ್ಧತಿಯು ಮೊದಲಿಗೆ ಬುದ್ಧನಿಂದ, ಅನಂತರ ತುಕಾರಾಂ, ಬಸವ, ಕಬೀರ್ ಮೊದಲಾದವರಿಂದ ಪ್ರಶ್ನೆಗೊಳಗಾಯಿತು.

ಶ್ರಮಣ ಪರಂಪರೆಗೆ ಸೇರಿದ ಲೆಕ್ಕವಿಲ್ಲದಷ್ಟು ಮಂದಿ ಸಂತಕವಿಗಳು ನಮ್ಮಲ್ಲಿದ್ದಾರೆ. ಅವರಲ್ಲಿ ವೈದಿಕ ಅಂಶಗಳೂ ಕಾಣಸಿಗುತ್ತವೆ. ಹೆಬ್ರಾಯಿಕ್ ಹೆಲೆನಿಕ್‌ಗಳಂತೆ ಅವು ಪ್ರತ್ಯೇಕವಲ್ಲ. ಕೆಲವು ಸಲ ಎರಡರಲ್ಲಿ ಒಂದು ಅಂಶ ಮುಖ್ಯವಾಗಬಹುದು. ನಾನು ಹೇಳಬೇಕಾಗಿರುವ ಮುಖ್ಯಸಂಗತಿಯೆಂದರೆ, ಮೇಲ್ನೋಟಕ್ಕೆ ಅಯ್ಯಪ್ಪ ವ್ರತ ಭಕ್ತಿ ಚಳವಳಿಯಂತೆ ಕಂಡರೂ ಅದು ಭಕ್ತಿ ಚಳವಳಿಯಲ್ಲ. ಇದನ್ನು ನಮ್ಮ ಹರಿದಾಸ ಚಳವಳಿಗೋ, ಶರಣರ ಕ್ರಾಂತಿಗೋ ಹೋಲಿಸಿ ನೋಡಿ. ಯೇಸುದಾಸ್‌ರಂತಹವರು ಅಯ್ಯಪ್ಪನ ಭಜನೆಗಳನ್ನು ಹಾಡಿದರೂ ಅಯ್ಯಪ್ಪ ಚಳವಳಿ ಶ್ರೇಷ್ಠಕಾವ್ಯ ಪರಂಪರೆಯನ್ನು ಸೃಷ್ಟಿಸಿಲ್ಲ. ಆ ಭಜನೆಗಳೂ ತುಂಬಾ ಒರಟು, ಸಂಗೀತವೂ ಅಬ್ಬರದ್ದು. ಭಕ್ತಿ ಚಳವಳಿಯಲ್ಲಿ ನಮಗೆ ಕಾಣಸಿಗುವ ಬಸವ, ಅಲ್ಲಮ, ಕಬೀರ್, ತುಕಾರಾಂನಂಥವರು ಇಲ್ಲಿ ಕಾಣಿಸುವುದಿಲ್ಲ. ಈ ಆಧುನಿಕ ‘ಭಕ್ತಿ’ ಚಳವಳಿಗೆ ಅಂತಹದನ್ನು ಸೃಷ್ಟಿಸುವುದು ಸಾಧ್ಯವಾಗಿಲ್ಲ. ಸಮಾಜದ ಕೆಲವು ಹಿತಾಸಕ್ತಿಗಳು ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಇಂತಹ ಚಳವಳಿಯನ್ನು ಬಳಸಿಕೊಂಡವು ಎನ್ನಬಹುದು.

ಕೆಲವು ದಿನಗಳ ಹಿಂದೆ ಈ ಅಯ್ಯಪ್ಪ ಚಳವಳಿಯ ಬಗ್ಗೆ ನಾನು ಒಂದು ದೀರ್ಘ ಲೇಖನವೊಂದನ್ನು ಬರೆದೆ. ವೈದಿಕ ಹಾಗೂ ಶ್ರಮಣ ಧಾರೆಗಳು ಈ ಶತಮಾನದಲ್ಲಷ್ಟೆ ಬೇರ್ಪಟ್ಟವು ಎಂಬುದು ನನ್ನ ವಾದ. ನಮ್ಮನ್ನೆಲ್ಲ ಒಟ್ಟಿಗೆ ತಂದ ಗಾಂಧಿಯುಗವನ್ನು ಬಿಟ್ಟರೆ, ಇಂದು ಸಾಮಾನ್ಯ ಜನವರ್ಗವನ್ನೂ, ಬುದ್ಧಿಜೀವಿ ವರ್ಗವನ್ನೂ ಒಂದೆಡೆ ತರಬಲ್ಲ ಚಳವಳಿ ಆಧುನಿಕ ಕಾಲದಲ್ಲಿ ನಡೆದಿಲ್ಲವೆನ್ನಬಹುದು. ಇಲ್ಲೇನೋ ದೋಷ ಇರಬೇಕೆನಿಸುತ್ತದೆ. ಭಾರತೀಯರಿಗೆ ಪ್ರತಿಯೊಂದು ಸ್ಥಳವನ್ನೂ ತೀರ್ಥಕ್ಷೇತ್ರವನ್ನಾಗಿ ಮಾಡುವ ಪ್ರವೃತ್ತಿಯಿದೆ. ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲಿಯೂ ಒಂದು ಪವಿತ್ರ ಕ್ಷೇತ್ರವಿದೆ. ‘ಇಲ್ಲೊಬ್ಬ ಸಂತ ಹುಟ್ಟಿದ್ದ’ ‘ಅದೊಂದು ಅವಧೂತನಿದ್ದ ಸ್ಥಳ’ ಹೀಗೆ ಐತಿಹ್ಯಗಳು ಹಬ್ಬಿವೆ. ಕರ್ನಾಟಕದ ಉತ್ತರ ಭಾಗದಲ್ಲಿ ಒಬ್ಬನಲ್ಲ ಒಬ್ಬ ಹರಿದಾಸ ಜನಿಸಿದ್ದನೆಂದು ಹೇಳಲಾಗುವ ಅಸಂಖ್ಯ ಸ್ಥಳವಳಿಗೆ. ಆದರೆ ಭಾರತೀಯರಿಗೆ ನೌಖಾಲಿ ಏಕೆ ಒಂದು ಪವಿತ್ರ ಕ್ಷೇತ್ರವಾಗಲಿಲ್ಲ? ನೌಖಾಲಿ ಬುದ್ಧನಿದ್ದನೆಂದು ಹೇಳಲಾಗುವ ಪ್ರಮುಖ ಸ್ಥಳಕ್ಕಿಂತ ಕಡಿಮೆ ಪ್ರಮುಖವಾದದ್ದೇನೂ ಅಲ್ಲ. ಭಾರತದಲ್ಲಿ ಕೋಮುಗಲಭೆಯೆದ್ದಾಗ ಮುಸಲ್ಮಾನರ ಅಪನಂಬಿಕೆ, ದ್ವೇಷಗಳನ್ನು ಗೆದ್ದು ಅವರಲ್ಲಿ ವಿಶ್ವಾಸ, ಭರವಸೆಗಳನ್ನು ಮೂಡಿಸಲು, ಗಾಂಧಿ ಬರಿಗಾಲಲ್ಲಿ ನಡೆದಾಡಿ ಒಂದು ಪವಾಡವನ್ನೇ ಮಾಡಿದ ಸ್ಥಳ ನೌಖಾಲಿ. ಅದು ಅವರ ಪ್ರಯೋಗಕ್ಷೇತ್ರ. ಆದರೆ ಹಿಂದೂ ಮನಸ್ಸಿಗೆ ನೌಖಾಲಿ ಒಂದು ತೀರ್ಥಕ್ಷೇತ್ರವಾಗಬಲ್ಲ ಸ್ಥಳವೆನಿಸಲೇ ಇಲ್ಲ. ಗಾಂಧಿಯನ್ನು ಕೇಂದ್ರದಲ್ಲಿಟ್ಟುಕೊಂಡಿದ್ದರೂ ನಮ್ಮ ಧಾರ್ಮಿಕ  ಪ್ರತಿಭೆ ಇಲ್ಲಿ ಸೋತಿತು. ಆಗಸ್ಟ್ ೧೫ ಹಾಗೂ ಜನವರಿ ೨೬ ನಿಜವಾದ ಹಬ್ಬಗಳಾಗಿಲ್ಲ; ಅವು ಕೇವಲ ಸರ್ಕಾರೀ ರಜಾ ದಿನಗಳಾಗಿಬಿಟ್ಟಿವೆ.

ಶ್ರಮಣ-ವೈದಿಕಧಾರೆಗಳು ಈ ಕಾಲದಲ್ಲಿ ಬೆರೆಯದೆ ಬೇರಾಗಿವೆ. ಅಂದಿನ ವೈದಿಕವರ್ಗ ಇಂದಿನ ಮೇಲ್ವರ್ಗದವರಾಗಿದ್ದಾರೆ. ಲಾಲೂಪ್ರಸಾದ್ ಯಾದವ್ ರೀತಿಯ ಯಾದವ ವರ್ಗದವರೂ ಇಂದು ಮೇಲ್ವರ್ಗದವರಾಗಿದ್ದಾರೆ. ಅವರನ್ನು ಕೆಳಜಾತಿಯ ಜನರೆಂದು ತಿಳಿಯುವಂತಿಲ್ಲ. ಏಕೆಂದರೆ ಸಾಮಾನ್ಯವರ್ಗದೊಂದಿಗೆ ಅವರು ಇಂದು ವೋಟಿಗೆ ಹೊರತಾದ ಯಾವ ಸಂಬಂಧವನ್ನೂ ಹೊಂದಿಲ್ಲ. ಒಟ್ಟಿನಲ್ಲಿ ಹಿಂದೊಮ್ಮೆ ಒಂದಾಗಿದ್ದ ಶ್ರಮಣ-ವೈದಿಕ ಧಾರೆಗಳು ಇಂದು ಬೇರ್ಪಟ್ಟಿವೆ.

ಜನಸಾಮಾನ್ಯರಿಂದ, ಅನಕ್ಷರಸ್ಥರಿಂದ ಉಳಿದಿರುವ ಭಾರತೀಯ ಭಾಷೆಗಳು ನಮ್ಮ ಪ್ರಪಂಚದ ಜೀರ್ಣಾಗ್ನಿಗಳಂತೆ ಸಂಸ್ಕೃತ ಮಾತ್ರವಲ್ಲ. ಯೂರೋಪ್‌ನ ಸಂಸ್ಕೃತಿಯನ್ನೂ ತಮ್ಮ ಅಂತರಂಗದ ಒಂದು ಭಾಗವನ್ನಾಗಿ ಸ್ವೀಕರಿಸಿಕೊಂಡಿವೆ. ಹಿಂದೆ ಅಲ್ಲಮ, ಬಸವ, ತುಕಾರಾಂ, ತುಳಸೀದಾಸ, ಪಂಪ, ಕುಮಾರವ್ಯಾಸರಂಥವರು ಸಂಸ್ಕೃತವನ್ನು ಜೀರ್ಣಿಸಿಕೊಂಡರೆ ಈಗ ನಾವು ಯೂರೋಪನ್ನು ಅರಗಿಸಿಕೊಳ್ಳುತ್ತಲಿದ್ದೇವೆ.

ಕೊನೆಯದಾಗಿ ಜಾಗತೀಕರಣದ ಪ್ರಶ್ನೆಯನ್ನು ಪರಿಶೀಲಿಸಬಹುದು. ಈ ಶತಮಾನ ಕೊನೆಯಾಗುತ್ತಿರುವುದೇ ಜಾಗತೀಕರಣದ ಪ್ರಶ್ನೆಯಲ್ಲಿ. ನಾನು ಹಿಂದೆಯೇ ಹೇಳಿದಂತೆ, ಗಾಂಧಿ ಯೂರೋಪಿನ ಕಲ್ಪನೆಯಾದ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ತೊಡಗದೆ, ಒಂದು ಮಾನವೀಯ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದರು. ಯೂರೋಪ್‌ಮಾದರಿಯ ರಾಷ್ಟ್ರವನ್ನು ನಿರ್ಮಿಸುವುದು ನಮಗೆ ಕಷ್ಟವೆಂದೂ, ಅಸಾಧುವೆಂದೂ ಗಾಂಧಿಗೆ ತಿಳಿದಿತ್ತು. ಯುರೋಪಿನ ದೇಶಗಳಿಗಾದರೋ ಒಂದೇ ಭಾಷೆಯಿದೆ, ಒಂದೇ ಸಂಸ್ಕೃತಿಯಿದೆ, ಒಂದೇ ಧರ್ಮವಿದೆ. ವಿಭಿನ್ನ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಹೊಂದಿರುವ ಭಾರತದಲ್ಲಿ ಐರೋಪ್ಯ ಮಾದರಿಯನ್ನು ತರಲೆತ್ನಿಸಿದರೆ ಅಂತಹ ಪ್ರಯತ್ನ ನಿಸ್ಸಂಶಯವಾಗಿ ಸೋಲುತ್ತದೆ. ನಮ್ಮ ವೈವಿಧ್ಯತೆಯನ್ನು ಮನವರಿಕೆ ಮಾಡಿಕೊಂಡಾಗ ಮಾತ್ರ ನಾವು ಒಂದು ವಿಶಿಷ್ಟ ರಾಷ್ಟ್ರೀಯತೆಯನ್ನು ಕೊಂದುತ್ತೇವೆ. ಈ ವೈವಿಧ್ಯವೇ ತುಂಬಾ ಮುಖ್ಯ. ಕಪ್ಪನ್ ಯಾವಾಗಲೂ ಹೇಳುತ್ತಿದ್ದಂತೆ, ಇದನ್ನು ಏಕಮುಖಗೊಳಿಸುವ ಪ್ರಯತ್ನ ಖಂಡಿತ ಸಲ್ಲದು.

ಗಾಂಧಿ ತನ್ನ ನಂತರ ನೆಹರೂರನ್ನು ನಾಯಕರನ್ನಾಗಿ ಏಕೆ ಆಯ್ಕೆಮಾಡಿಕೊಂಡರು ಎಂಬ ವಿಚಾರ ನನಗೆ ಯಾವಾಗಲೂ ಆಶ್ಚರ್ಯವನ್ನುಂಟುಮಾಡುತ್ತದೆ. ನೆಹರೂ ದೊಡ್ಡ ಮನುಷ್ಯ ಇರಬಹುದು, ಆದರೆ ಆತ ಗಾಂಧಿಗಿಂತ ತುಂಬಾ ಭಿನ್ನ. ಹಾಗೆ ನೋಡಿದರೆ ಭಾರತದಲ್ಲಿರುವುದು ಎರಡೇ ವಾದಗಳು-ಒಂದು ಗಾಂಧೀವಾದ, ಇನ್ನೊಂದು ನೆಹರೂವಾದ. ಮಾರ್ಕ್ಸಿಸಂ ಭಾರತದಲ್ಲಿಲ್ಲ. ಎಲ್ಲ ಮಾರ್ಕ್ಸ್‌ವಾದಿಗಳೂ ಆಂತರ್ಯದಲ್ಲಿ ನೆಹರೂವಾದಿಗಳೇ. ಆದರೆ ಹಾಗೆ ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ ಅಷ್ಟೆ. ಈ ಸುಂದರವಾದ, ವಿಶಿಷ್ಟ ಪರಂಪರೆಯ ಭೂಮಿಯಾದ ಕೇರಳದಲ್ಲಿ ಯಾವುದಾದರೂ ಅಂತರರಾಷ್ಟ್ರೀಯ ಮಾರ್ಕ್ಸಿಸ್ಟ್ ಸಮ್ಮೇಳನ ನಡೆದರೆ ಗಮನಿಸಿ, ಅಲ್ಲಿ ಲೆನಿನ್, ಸ್ಟಾಲಿನ್, ಮಾರ್ಕ್ಸ್ ಫೋಟೋಗಳಿರುತ್ತವೆ, ಆದರೆ ಮಲಯಾಳಮ್ ಭಾಷೆಯನ್ನು ಬೆಳೆಸಿದ ಎಳುತ್ತಚ್ಚನ್ ಫೋಟೋ ಇರುವುದಿಲ್ಲ. ಎಳುತ್ತಚ್ಚನ್ ನಿಜವಾಗಿಯೂ ಸಾಮಾನ್ಯರನ್ನು ಸಾಂಸ್ಕೃತಿಕವಾಗಿ ಬಲಿಷ್ಠಗೊಳಿಸಿದ ಲೇಖಕ. ಯಾವ ಮಾರ್ಕ್ಸಿಸ್ಟನೂ ಎಳುತ್ತಚ್ಚನ್‌ನನ್ನು ಅವಜ್ಞೆಗೈಯ್ಯಲು ಸಾಧ್ಯವೇ ಇಲ್ಲ.

ಆದರೆ ಇಲ್ಲಿ ಎಳುತ್ತಚ್ಚನ್ ಬದಲು ಸ್ಟಾಲಿನ್ ಮುಖ್ಯವಾಗಲು ಕಾರಣ ಮೂಲಭೂತವಾಗಿ ಮಾರ್ಕ್ಸಿಸಂ ಯೂರೋಕೇಂದ್ರಿತವಾಗಿರುವುದು. ಹಾಗೆಯೇ ನೆಹರೂಯಿಸಂ ಕೂಡ ಯುರೋಕೇಂದ್ರಿತ. ನೆಹರೂ ಭಾವನೆಯಲ್ಲಿ ಯೂರೋಪನ್ನು ವಿರೋಧಿಸುತ್ತಿದ್ದಂತೆ ಕಂಡರೂ ಅವರ ಬುದ್ಧಿ ಯೂರೋಪಿನಿಂದ ಪ್ರೇರಿತವಾದುದು. ಗಾಂಧಿಯಾದರೋ ಬೌದ್ಧಿಕವಾಗಿ ಯೂರೋಪನ್ನು ವಿರೋಧಿಸುತ್ತಿದ್ದರು; ಆದರೆ ಭಾವನೆಯಲ್ಲಿ ಅವರಿಗೆ ಯೂರೋಪಿಯನ್ನರೂ ನಮ್ಮಂತೆಯೇ ಕೇವಲ ಮನುಷ್ಯರು. ಗಾಂಧಿಗೆ ಭಾವನಾತ್ಮಕವಾದ ಸಮಸ್ಯೆಗಳಿರಲಿಲ್ಲ. ಐರೋಪ್ಯರ ಬದುಕು, ಭಾವನೆ, ನೋವು, ಪ್ರೀತಿ ಎಲ್ಲವೂ ನಮ್ಮಂತೆಯೇ ಆಗಿರುವುದರಿಂದ ಅವರ ಬಗ್ಗೆ ಭಾವನಾತ್ಮಕವಾದ ವಿರೋಧ ಗಾಂಧಿಗೆ ಸಾಧ್ಯವಿರಲಿಲ್ಲ. ಅವರ ಆಪ್ತವಲಯದಲ್ಲಿ ತುಂಬ ಜನ ಯಹೂದಿಗಳಿದ್ದರು, ಕ್ರಿಶ್ಚಿಯನ್ನರಿದ್ದರು. ಗಾಂಧಿ ಬೌದ್ಧಿಕವಾಗಿ ಅವರನ್ನು ಒಪ್ಪುತ್ತಿರಲಿಲ್ಲ ಅಷ್ಟೆ. ಆದರೆ ನೆಹರೂ, ಸುಭಾಷ್ ಚಂದ್ರ ಬೋಸ್, ಇನ್ನೂ ಆ ಕಾಲದ ಹಲವು ನಾಯಕರು ಭಾವನಾತ್ಮಕವಾಗಿ ಪಾಶ್ಚಿಮಾತ್ಯರನ್ನು ದ್ವೇಷಿಸುತ್ತಿದ್ದರು, ಆದರೆ ಅವರಂತೆಯೇ ಯೋಚಿಸುತ್ತಿದ್ದರು. ಹಾಗಲ್ಲದೆ ಅವರಿಗೆ ಬೇರೆ ರೀತಿಯಲ್ಲಿ ಯೋಚಿಸಲು ಬರುತ್ತಲೂ ಇರಲಿಲ್ಲ. ಅಂದಿನ ರಾಷ್ಟ್ರೀಯತೆಯ ಚಳವಳಿಯನ್ನು ಗಾಂಧಿ ಮುನ್ನಡೆಸುತ್ತಿದ್ದುದ್ದರಿಂದ, ಅವರು ಸುಮ್ಮನೆ ಗಾಂಧಿಯೊಡನೆ ಸೇರಿಕೊಂಡರು ಅಷ್ಟೆ. ನೆಹರೂ ತಮ್ಮ ಕೈಯಾರೆ ಒಂದು ಸೀರೆಯನ್ನೂ ನೇಯ್ದರು. ಇಂದು ಅವರ ಮೊಮ್ಮಗನ ಮಗಳು ಉಡುವ ಸೀರೆ ಅವರೇ ನೇಯ್ದದ್ದು ಎಂದು ಹೇಳಲಾಗುತ್ತಿದೆ ಹಾಗೂ ಅದನ್ನು ಸಂರಕ್ಷಿಸಿಡಲಾಗಿದೆ. ನೇಯ್ಗೆಯೇ ಮುಖ್ಯವೆಂದು ಭಾವಿಸಿ ಪ್ರಾಯಶಃ ಅವರು ಅದನ್ನು ಜೈಲಿನಲ್ಲಿ ನೆಯ್ದಿರಬೇಕು. ಭಾವನೆಯ ನೆಲೆಯಲ್ಲಿ ನೆಹರೂ ತುಂಬಾ ಧಾರಾಳಿಗಳಾದ್ದರಿಂದ ಆಧುನಿಕತೆಗೆ ಭಾರತವನ್ನು ಸಂಪೂರ್ಣವಾಗಿ ಮಾರಾಟ ಮಾಡುವುದಿಲ್ಲ ಎಂದು ಗಾಂಧಿ ಭಾವಿಸಿಕೊಂಡಿರಬೇಕು ಅಥವಾ ಪರಂಪರೆ- ಆಧುನಿಕತೆಗಳನ್ನು ಉಳಿದವರಿಗಿಂತ ಹೆಚ್ಚು ಸಮರ್ಪಕವಾಗಿ ಸಮದೂಗಿಸಬಲ್ಲ ಸಾಮರ್ಥ್ಯ ನೆಹರೂಗಿದೆ ಎಂದು ಅನಿಸಿರಬಹುದು ಆದ್ದರಿಂದ ತನ್ನ ಉತ್ತರಾಧಿಕಾರಿಯಾಗಿ ಗಾಂಧಿ ಆರಿಸಿರಬಹುದು.

ನಾವು ಆಧುನಿಕತೆಯನ್ನು ಸಂಪೂರ್ಣವಾಗಿ ಒಪ್ಪಿದ್ದರೆ ಅಥವಾ ಪರಂಪರೆಯನ್ನು ನಿರಾಕರಿಸಿದ್ದರೆ, ಭಾರತದಲ್ಲಿ ದೊಡ್ಡ ಕ್ರಾಂತಿಯೇ ಆಗಿಬಿಡುತ್ತಿತ್ತು. ಇಂದು ಆಧುನಿಕತೆಯನ್ನಾಗಲೀ, ಪರಂಪರೆಯನ್ನಾಗಲೀ ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ. ಅವೆರಡೂ ಒಂದು ಪ್ರಮಾಣದಲ್ಲಿ ಬೆರೆತಾಗ ಮಾತ್ರ ಸೃಜನಶೀಲತೆ ಸಾಧ್ಯವಾಗುವುದು. ಯೂರೋಪ್ ‘ಹೊರಗಿ’ನದಾಗಿರುವುದರಿಂದ ಭಾರತವನ್ನು ಮತ್ತೆ ಸೃಜನಶೀಲಗೊಳಿಸಲು ಅದು ಅಗತ್ಯ ಎಂದು ಹಲವು ಸಾರಿ ನಮಗೆಲ್ಲರಿಗೂ ಅನ್ನಿಸಿರುತ್ತದೆ. ಆದರೆ ಇಂದು ನಮ್ಮೆದುರಿಗಿರುವ ಪ್ರಶ್ನೆಯೆಂದರೆ, ಆಧುನಿಕತೆಯನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳುತ್ತ ಹೋಗಬೇಕು? ಎನ್ನುವುದು. ಒಂದು ದೃಷ್ಟಿಯಿಂದ ಭಾರತದ ಅಂದಿನ ಸನ್ನಿವೇಶದಲ್ಲಿ ನೆಹರೂ ಆಯ್ಕೆ ಅನಿವಾರ್ಯ ಆಗಿತ್ತು ಎನ್ನಬಹುದೇನೋ?

ಅಲ್ಲದೆ, ನಮ್ಮ ಮುಂದೆ ಅಭಿವೃದ್ಧಿಯ ಪ್ರಶ್ನೆಗಳೂ ಇವೆ. ಐರೋಪ್ಯರ ವಿಜ್ಞಾನ-ತಂತ್ರಜ್ಞಾನಗಳ ಅಣೆಕಟ್ಟುಗಳನ್ನು, ಬೃಹತ್ ಕಾರ್ಖಾನೆಗಳನ್ನು ನಿರ್ಮಿಸಲು ನೆರವಾಗಿ ಭಾರತದ ಅಸಂಖ್ಯ ಬಡವರಿಗೆ ಬೇಕಾದಷ್ಟು ಉದ್ಯೋಗಗಳನ್ನು ಸೃಷ್ಟಿಸಿಕೊಡಬಲ್ಲವು ಎಂದು ನಾವು ಬಲವಾಗಿ ನಂಬಿದ್ದೆವು. ಭಾರತೀಯರಿಗೆ ಬೇಕಾದ ಉದ್ಯೋಗ ಹಾಗೂ ಶಿಕ್ಷಣದ ಮಾದರಿಗಳ ಬಗ್ಗೆ ಗಾಂಧಿಗೆ ತನ್ನದೇ ಆದ ಕಲ್ಪನೆಗಳು ಇದ್ದುದರಿಂದ, ಈ ಥರದ ನಂಬಿಕೆಗಳನ್ನು ಗಾಂಧಿ ಒಪ್ಪಲೇ ಇಲ್ಲ. ಗಾಂಧಿ ವಿಚಾರಗಳನ್ನು ಕಾಮರಾಜರೂ ಒಪ್ಪಲಿಲ್ಲ. ‘ಗಾಂಧಿ ರೀತಿಯ ಶಿಕ್ಷಣವನ್ನೇನಾದರೂ ಅಳವಡಿಸಿಕೊಂಡರೆ ನಮ್ಮ ತಲತಲಾಂತರದಿಂದ ನಡೆದು ಬಂದ ಜಾತಿ ಪದ್ಧತಿ ನಾಶವಾಗುವುದಿಲ್ಲ’ ಎಂದು ಅವರು ವಾದಿಸುತ್ತಿದ್ದರು. ಬಡಗಿಯೊಬ್ಬನ ಮಗ ಬಿ.ಇ. ಡಿಗ್ರಿ ಪಡೆದರೂ ಪಾರಂಪರಿಕವಾದ ಬಡಗಿಯ ವೃತ್ತಿಯನ್ನೆ ಮುಂದುವರಿಸಿದರೆ, ಜಾತಿಪದ್ಧತಿ ಇನ್ನೂ ಗಟ್ಟಿಯಾಗುತ್ತಾ ಹೋಗುತ್ತದೆ. ನಾವು ಆಧುನಿಕತೆಯನ್ನು ಒಪ್ಪಿಕೊಳ್ಳಲು ಮುಖ್ಯಕಾರಣವೆಂದರೆ ಜಾತಿವಿನಾಶಕ್ಕಗಿ ಅಥವಾ ಕೊನೆಯಪಕ್ಷ ಜಾತಿಸಮಾನತೆಗಾಗಿ ಎಲ್ಲರೂ ಪಡುವ ಹಂಬಲವೇ ಎನ್ನಬೇಕು.

ಇಂದು ಸಮಾನತೆ, ಸಾಮಾಜಿಕ ನ್ಯಾಯಗಳು ನಮ್ಮ ಮುಖ್ಯ ಧ್ಯೇಯಗಳಾಗಿವೆ. ಪಾಶ್ಚಾತ್ಯ ಮಾದರಿಯಲ್ಲಿ ಮಾತ್ರ ಇದನ್ನು ನಾವು ಸಾಧಿಸಬಲ್ಲೆವು ಎಂದು ತಿಳಿಯಬೇಕೆ? ಇದೇ ನಮ್ಮೆದುರಿರುವ ಮುಖ್ಯ ಪ್ರಶ್ನೆ. ಫಾಕ. ಕಪ್ಪನ್ ತರಹದವರಿಂದ ಪ್ರೇರಿತರಾದ ನಾವು. ಬೇರೆ ಅಥವಾ ಇನ್ನೂ ಸುಧಾರಿತ ಪರ್ಯಾಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಬೆಳವಣಿಗೆಯೆಂಬ ಕಲ್ಪನೆಯ ಬಗ್ಗೆ ನಮಗೆ ಸ್ವಲ್ಪವಾದರೂ ಪ್ರಾಮಾಣಿಕತೆಯಿದ್ದಿದ್ದರೆ, ಟ್ರೂಮನ್ ತರಹದವರು ಬಯಸಿದ ರೀತಿಯ ಬೆಳವಣಿಗೆ ಇಂದು ಯೂರೋಪಿನಲ್ಲೂ ಸಾಧ್ಯವಿಲ್ಲ ಎಂಬುದು ಮನವರಿಕೆಯಾಗುತ್ತಿತ್ತು. ಅಮೆರಿಕಾ, ಜರ್ಮನಿಗಳಲ್ಲಿ ಪರಿಸರವಾದಿಗಳು ಆಕ್ಷೇಪಿಸುವಂತಹ ಜಾಗಗಳಲ್ಲಿ ಕಾರ್ಖಾನೆಗಳನ್ನು ತೆರೆಯುವಂತೆಯೇ ಇಲ್ಲ. ಆದ್ದರಿಂದ ಎಲ್ಲ ಕೆಟ್ಟ ಫ್ಯಾಕ್ಟರಿಗಳೂ ಅಭಿವೃದ್ಧಿಶೀಲ ದೇಶಗಳ ದಾರಿಯನ್ನು ಹುಡುಕಿಕೊಂಡು ಬರುತ್ತಿವೆ. ಇದನ್ನೇ ನಾವು ‘ಗ್ಲೋಬಲೈಸೇಷನ್’ ಎಂದು ಕರೆಯುವುದು. ಅಭಿವೃದ್ಧಿಯೆಂಬುದು ಈಗ ಜಾಗತೀಕರಣವಾಗಿ ಪರಿಣಮಿಸಿದೆ. ದುರಂತವೆಂದರೆ ಅಭಿವೃದ್ಧಿಯ ಪರಿಭಾಷೆಗೆ ಒಂದು ಆದರ್ಶವಾದರೂ ಇದೆ. ಆದರೆ ಈ ಜಾಗತೀಕರಣ ಅಂತಹ ಯಾವ ಉದಾತ್ತತೆಯನ್ನೂ ಹೊಂದಿಲ್ಲ.

ಈಗ ಆತ್ಮಪರಿಶೀಲನೆ, ಆತ್ಮವಿಮರ್ಶೆಗಳು ಮುಖ್ಯವೆನಿಸುತ್ತವೆ. ಪರಂಪರೆಯಿಂದ ಅನ್ಯಾಯಕ್ಕೊಳಗಾದ, ಅದನ್ನು ದ್ವೇಷಿಸುವ ಒಂದು ವರ್ಗ ಹಳ್ಳಿಗಳಲ್ಲಿ ಬದುಕನ್ನು ನಡೆಸಲಾರದೆ, ಹಳ್ಳಿಯಿಂದ ಹೊರಬರುತ್ತಿದೆ. ಸ್ವತಃ ನಾನೇ ನನ್ನ ಜಾತಿಯಿಂದ, ನನ್ನವರು ಒಪ್ಪಿದ್ದ ಮೌಲ್ಯವ್ಯವಸ್ಥೆಯಿಂದ ಹೊರಬರಲೆತ್ನಿಸಿದೆ. ನನ್ನ ಜಾತಿಯ ಹೊರಗೆ ವಿವಾಹವಾದೆ. ಇಂಗ್ಲಿಷ್ ಶಿಕ್ಷಣ ಪಡೆದೆ. ಕೊನೆಗೆ ನಾನು ಕನ್ನಡಕ್ಕೇ ಹಿಂದಿರುಗಿದೆ. ನಾನೊಂದು ವೇಳೆ ಸಂಪೂರ್ಣವಾಗಿ ಆಧುನಿಕನಾಗಿಬಿಟ್ಟಿದ್ದರೆ ಆಗ ನನ್ನ ಸೃಜನಶೀಲತೆಯನ್ನು ಪ್ರಾಯಶಃ ಕಳೆದುಕೊಳ್ಳುತ್ತಿದ್ದೆ. ಅಥವಾ ನಾನೀಗ ಬರೆದಿರುವುದನ್ನು ಬರೆಯುತ್ತಿರಲಿಲ್ಲ.

ಇದೊಂದು ವಿಪರ್ಯಾಸ. ನಮ್ಮ ಸಂಸ್ಕೃತಿಯ ಹಲವು ಸಂಗತಿಗಳು ಜಾತಿಗಳಿಂದಾಗಿ ಉಳಿದುಕೊಂಡಿವೆ. ನಮ್ಮ ಸಂಸ್ಕೃತಿಯ ಎಷ್ಟೋ ಅಂಶಗಳಿಗೆ ಜಾತಿಯೇ ಮೂಲಾಧಾರ. ನಮ್ಮ ಆಹಾರ ಪದ್ಧತಿಗಳು ಜಾತಿಗಳನ್ನಾಧರಿಸಿವೆ. ಜಾತಿಯೊಡನೆ ಸೇರಿಹೋಗಿರುವ ಇನ್ನೂ ಎಷ್ಟೋ ಅಂಶಗಳುಂಟು.

ಹಿಂದೆ ಜಾತಿ ವಿರೋಧಿಸಿ ಬಸವ ಕ್ರಾಂತಿಮಾಡಿದ; ಸಿದ್ಧಾರ್ಥ ಬುದ್ಧನಾದ. ಈಗಲಾದರೋ ನಾವು ಜಾತಿಯ ವಿರುದ್ಧ ಎದ್ದು ನಿಂತೊಡನೆ ಆಧುನಿಕರಾಗಿಬಿಡುತ್ತೇವೆ. ಕೆಲವರು ಮಾತ್ರ ಇದಕ್ಕೆ ವಿನಾಯಿತಿ ಇರಬಹುದು. ಅಂತಹ ಸಂದರ್ಭದಲ್ಲಿ ನೀವು ಶೈಕ್ಷಣಿಕವಾಗಿಯೂ, ಸಮಾಜಜೀವಿಯಾಗಿಯೂ ಯಾವ ಮಟ್ಟಕ್ಕೆ ಹೋಗಬೇಕಾಗಬಹುದೆಂದರೆ, ನಿಮ್ಮ ಜನರಿಂದ, ನಿಮ್ಮ ಭಾಷೆಯಿಂದ, ಸಂಪೂರ್ಣವಾಗಿ ದೂರವಾಗಿಬಿಡಬೇಕಾಗಬಹುದು.

ಇದಕ್ಕೆ ಪರಿಹಾರವೆಂದರೆ ನಮ್ಮ ನಮ್ಮ ಜಾತಿಗಳಲ್ಲೇ ಇದ್ದು ಜಾತಿಗಳೊಳಗೇ ಮದುವೆಯಾಗುವುದು ಖಂಡಿತ ಅಲ್ಲ. ನಮ್ಮ ಜಾತಿಗಳ ಸಂಕುಚಿತ ಪರಿಧಿಯಲ್ಲೇ ಇರುವ ನಮಗೆ, ಅದರ ಹೊರಗಿನ ಬದುಕಿನ ಅನುಭವವೇ ಆಗುವುದಿಲ್ಲ. ತನ್ನ ಜಾತಿಯ ಹೊರಗೆ ಇರುವುದನ್ನು ಅರಿಯದವನ ಭಾವನಾ ಜಗತ್ತು ಕೃಪಣವಾಗಿರುತ್ತದೆ.

ಮುಖ್ಯವಾದ ಮಾತು ಇದು: ಇವಕ್ಕೆಲ್ಲ ಪರಿಹಾರ ಕೇವಲ ಪರಂಪರೆಯಲ್ಲೂ ಇಲ್ಲ, ಆಧುನಿಕತೆಯಲ್ಲೂ ಇಲ್ಲ. ಫಾ. ಕಪ್ಪನ್‌ರಂತೆ ಪರಂಪರೆಯಿಂದ ಹುಟ್ಟುವ ಜಾತಿಯಂತಹ ಅನಿಷ್ಟಗಳ ಬಗ್ಗೆ ಎಚ್ಚರದಿಂದಿರಲು ನಾವು ನಿರಂತರವಾಗಿ ನಮ್ಮ ಒಳಲೋಕವನ್ನೇ ಶೋಧಿಸುತ್ತಿರಬೇಕು. ಇದರೊಂದಿಗೆ ಪವಿತ್ರವಾದುದಕ್ಕೆ ಸ್ಪಂದಿಸುವ ನಮ್ಮ ಇಂದ್ರಿಯಗಳನ್ನು ಸದಾಕಾಲ ಜಾಗೃತವಾಗಿಡಬೇಕು. ಅದಿಲ್ಲದಿದ್ದರೆ ನಾವು ಇದ್ದೂ ಇಲ್ಲದಂತೆ.

ಜಾಗತೀಕರಣದ ವಿರುದ್ಧ ಹೋರಾಡುತ್ತಿರುವ ನಮಗಿರಬೇಕಾದ ಎಚ್ಚರವಿದು ಮಂಗಳೂರಿನಲ್ಲಿ ಕೊಜೆಂಟ್ರಿಕ್ಸ್ ವಿರುದ್ಧ ನಡೆದ, ಮೀನುಗಾರ ಮಹಿಳೆಯರೂ ಭಾಗವಹಿಸಿದ್ದ, ಬೃಹತ್ ಸಮಾವೇಶದಲ್ಲಿ ಮಿ. ಮ್ಯಾಥ್ಯೂ ಸಹ ಇದ್ದರು. ಒಂದು ಸರಳವಾದ ಬದುಕಿಗಾಗಿ ಹೋರಾಡುವುದು; ಜೀವನದಲ್ಲಿ ಪವಿತ್ರವೆನ್ನಿಸಿದ್ದಕ್ಕೆ ಸ್ಪಂದಿಸುವುದು ನಮಗೆ ಸಾಧ್ಯವಾಗುವುದು ಪರಂಪರೆಯ ಜೊತೆ ನಮ್ಮ ಸಂಬಂಧ ಜೀವಂತವಾಗಿ ಉಳಿದಾಗ. ಈ ಜೀವಂತಿಕೆ, ಪ್ರೀತಿಯಲ್ಲಿ ಎಷ್ಟೋ ಅಷ್ಟೇ ಜಗಳದಲ್ಲೂ – ಗಾಂಧಿ ಬಸವರಲ್ಲಾದಂತೆ- ವ್ಯಕ್ತವಾಗುತ್ತದೆ. ಜಾತಿ, ಅಸಮಾನತೆಗಳ ವಿರುದ್ಧ ಹೋರಾಡುತ್ತಲೇ ಪರಂಪರೆಯಲ್ಲಿರುವ ಒಳ್ಳೆಯದನ್ನೂ ಕೈ ಬಿಡದಂತೆ ರೂಢಿಸಿಕೊಳ್ಳುವುದು ಹೇಗೆಂಬುದೇ ಇಂದಿನ ಪ್ರಶ್ನೆ.

ಕನ್ನಡದಲ್ಲಿ ರಾಗಿ ಹಾಗೂ ಭತ್ತಕ್ಕೆ ಸಂಬಂಧಿಸಿದ ಕುತೂಹಲಕರವಾದ ಕಥೆಯೊಂದಿದೆ. ರಾಗಿಗೆ, ನಿಮಗೆ ತಿಳಿದಿರುವಂತೆ, ಹೆಚ್ಚು ನೀರಾವರಿಯೇನೂ ಬೇಕಾಗಿಲ್ಲ. ಭತ್ತದ ಬೆಳೆಗಾದರೋ ತುಂಬಾ ನೀರು ಬೇಕು. ರಾಗಿ ಬಡವರ ಧಾನ್ಯ; ಅಕ್ಕಿ ಶ್ರೀಮಂತರ ಧಾನ್ಯ. ಇದು ನಮ್ಮ ಭಕ್ತಕವಿ ಕನಕದಾಸರು ಬರೆದ ಕಥೆ. ಒಮ್ಮೆ ರಾಗಿಗೂ, ಅಕ್ಕಿಗೂ ಜಗಳವಾಯಿತಂತೆ. ಅಕ್ಕಿ ರಾಗಿಗೆ ‘ನೀನು ಯಾವುದಕ್ಕೂ ಪ್ರಯೋಜನವಿಲ್ಲ, ನಿನ್ನಿಂದ ಮಂತ್ರಾಕ್ಷತೆ ಮಾಡುವುದಿಲ್ಲ. ಮದುವೆಯಂತಹ ಶುಭ ಸಮಾರಂಭಗಳಲ್ಲಾಗಲೀ ಅಥವಾ ಶ್ರಾದ್ಧಗಳಲ್ಲಾಗಲಿ ನಿನ್ನನ್ನು ಬಳಸುವುದಿಲ್ಲ. ನೀನು ನಿಷ್ಪ್ರಯೋಜಕ. ನಾನಾದರೋ ಎಲ್ಲ ಕಡೆಗೂ ಬೇಕೇ ಬೇಕು’ ಎಂದಿತು. ಆಗ ಕೋಪಗೊಂಡ ರಾಗಿ ಈ ವ್ಯಾಜ್ಯವನ್ನು ನೇರವಾಗಿ ಶ್ರೀರಾಮನ ಬಳಿಗೊಯ್ದಿತು. ಋಷಿಮುನಿಗಳೊಂದಿಗೆ ಎಲ್ಲವನ್ನೂ ಕೇಳಿದ ಶ್ರೀರಾಮನು ಕೊನೆಗೆ ‘ಜಗಳವಾಡಿದ್ದಕ್ಕಾಗಿ ನಾನು ನಿಮ್ಮಿಬ್ಬರನ್ನೂ ಆರು ತಿಂಗಳು ಸೆರೆಯಲ್ಲಿರಿಸುತ್ತೇನೆ’ ಎಂದ. ಆರು ತಿಂಗಳು ಅವೆರಡೂ ಜೈಲಿನಲ್ಲಿದ್ದವು. ತರುವಾಯ, ಅಕ್ಕಿ ಉಪಯೋಗಿಸಲಾಗದಷ್ಟು ಮುಗ್ಗುಲಾಗಿತ್ತು. ರಾಗಿಯಾದರೋ ಇನ್ನೂ ಹೊಸತಾಗೇ ಇತ್ತು. ಈ ಪರೀಕ್ಷೆಯಲ್ಲಿ ಗೆದ್ದವರು ಯಾರೆಂದು ಹೇಳಬೇಕಿಲ್ಲವಲ್ಲ.

ಹಿಂದೆ ಭಾರತವು ತನ್ನನ್ನೇ ವಿವೇಚಿಸಿಕೊಳ್ಳಬಲ್ಲ ಸೃಜನಶೀಲತೆಯನ್ನು ಹೊಂದಿತ್ತು ಎಂಬುದನ್ನು ತಿಳಿಸಲು ಈ ಕಥೆಯನ್ನು ಹೇಳಿದೆ. ನೀವು ಸಂಪ್ರದಾಯಸ್ಥರಾಗಿದ್ದರೆ, ಸಂಪ್ರದಾಯದ ಎಲ್ಲವನ್ನೂ ಒಪ್ಪಿಕೊಳ್ಳಬೇಕೆಂದು ಅರ್ಥವಲ್ಲ. ನಾವು ಸಂಪ್ರದಾಯದೊಳಗಿದ್ದೇ – ಬಸವನಂತೆ, ತುಕಾರಾಮನಂತೆ- ಅದರೊಡನೆ ಜಗಳ ಕಾಯಬಹುದು. ಇಂತಹ ಒಳಗಿನ ಜಗಳ ಹೊಸದೊಂದನ್ನು ಸೃಷ್ಟಿಸಬಲ್ಲದು. ಇಂದು ಜಾಗತೀಕರಣದ ವಿರುದ್ಧ ಹೋರಾಡುತ್ತಿರುವ ನಾವು ಹೆಚ್ಚು ಹೆಚ್ಚು ಸಂಪ್ರದಾಯಸ್ಥರಾಗಿ ಬಿಡುವ ಸಾಧ್ಯತೆ ಇದೆ. ‘ದೈವದ್ವೇಷಿಯಾಗಿದ್ದ ಈ ಅನಂತಮೂರ್ತಿ ಈಗ ಇದ್ದಕ್ಕಿದ್ದಂತೆ ಧಾರ್ಮಿಕರಾಗಿಬಿಟ್ಟಿದ್ದಾರೆ’ ಎಂದು ಕೆಲವರು ಮಾತಾಡಬಹುದು. ನಿಜವೇನೋ… ನನಗೂ ಗೊತ್ತಿಲ್ಲ; ಆದರೆ ಪವಿತ್ರವಾದುದಕ್ಕೆ ತುಡಿಯುವ ಆಸೆಯನ್ನು ನಾನು ಸದಾ ಉಳಿಸಿಕೊಂಡಿದ್ದೇನೆ ಎಂದು ನಂಬುತ್ತೇನೆ.

ನನ್ನ ಮತ್ತು ನನ್ನ ಮಗಳ ನಡುವೆ ಮೊನ್ನೆಯಷ್ಟೆ ಒಂದು ವಾಗ್ವಾದ ನಡೆಯಿತು. ಉಡುಪಿಯ ಬಳಿ ಪಾಜಕವೆಂಬ ಕ್ಷೇತ್ರವಿದೆ. ೧೩ನೆಯ ಶತಮಾನದ ದ್ವೈತಸಿದ್ಧಾಂತದ ಪ್ರತಿಪಾದಕರಾದ ದಾರ್ಶನಿಕ ಮಧ್ವಾಚಾರ್ಯರು ಹುಟ್ಟಿದ ಕ್ಷೇತ್ರವದು. ಪಾಜಕ ಬೆಟ್ಟಗುಡ್ಡಗಳಿಂದ, ದೇವಸ್ಥಾನಗಳಿಂದ ಕೂಡಿದ ಒಂದು ಸುಂದರ ಕ್ಷೇತ್ರ. ಅಲ್ಲಿ ಕಳೆದ ೧೫ ವರ್ಷಗಳಿಂದಲೂ ಗ್ರಾನೈಟ್ ವ್ಯವಹಾರ ನಡೆಯುತ್ತಿದೆ. ವಿಪರ್ಯಾಸವೆಂದರೆ, ಅಲ್ಲಿನ ಒಂದು ಮಠದವರೇ ಈ ವ್ಯವಹಾರಕ್ಕೆ ಅನುಮತಿ ನೀಡಿದ್ದಾರೆ. ನನಗೆ ನಿಜಕ್ಕೂ ಗಾಬರಿಯಾಯಿತು. ನನ್ನ ಕೃತಿಗಳಲ್ಲಿ ಮಧ್ವಾಚಾರ್ಯರ ತತ್ವಗಳನ್ನು ತುಂಬಾ ವಿಮರ್ಶಾತ್ಮಕವಾಗಿ ನೋಡಿದ್ದರೂ, ಚಿಕ್ಕಂದಿನಿಂದಲೂ ನಾನು ಅವರ ತತ್ವಗಳ ಪ್ರಭಾವದೊಂದಿಗೇ ಬೆಳೆದವನು. ಆಗ ನನ್ನೆದುರಿಗೆ ಮಧ್ವ ತತ್ವಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಯುತ್ತಿತ್ತು. ನನಗೆ ತಿಳಿದ ಸಂಗತಿಯೆಂದರೆ, ಭಾರತೀಯ ದಾರ್ಶನಿಕರಲ್ಲಿ ಮಧ್ವರೊಬ್ಬರೇ ನಾವು ವಾಸಿಸುವ ಜಗತ್ತೂ ಸತ್ಯವೆಂದು ಪ್ರತಿಪಾದಿಸಿದ್ದು. ಪ್ರಾಯಶಃ ಆಗ ಕ್ರೈಸ್ತಧರ್ಮದ ಪ್ರಭಾವವೂ ಇತ್ತು ಎನಿಸುತ್ತದೆ. ಕ್ರೈಸ್ಥಧರ್ಮದಲ್ಲಿರುವಂತೆಯೇ ಇಲ್ಲಿಯೂ ದೇವರು ಒಬ್ಬನೇ-ಅವನೇ ವಿಷ್ಣು.  ಮಧ್ವಾಚಾರ್ಯ ‘ಸತ್ಯಮ್ ಜಗತ್’ ಎಂದು ವಾದಿಸಿದರು. ಮನುಷ್ಯ ಮನುಷ್ಯನಷ್ಟೆ; ಅವನು ದೈವಕ್ಕಿಂತ ಭಿನ್ನ. ದೈವದೊಡನೆ ಸಂಪರ್ಕವೇರ್ಪಡಲು ಭಕ್ತಿಯು ಸಾಧನವೇ ಹೊರತು ಜ್ಞಾನವಲ್ಲ. ಇದು ಅದ್ವೈತಕ್ಕಿಂತ ಭಿನ್ನವಾದುದು.

ಅದೇನೇ ಇರಲಿ, ಪಾಜಕದಿಂದ ಬಂದ ಮೇಲೆ ನನ್ನ ಕಣ್ಣಿಗೆ ನಿದ್ದೆಯೇ ಹತ್ತಲಿಲ್ಲ. ಮಧ್ವರಿಗೆ ಜಗತ್ತು ಸತ್ಯ ಎಂಬ ಸಂಗತಿ ಹೇಗೆ ಹೊಳೆಯಿತು ಎಂದು ಆಲೋಚಿಸುತ್ತ ನನಗೆ ಆಶ್ಚರ್ಯವಾಯಿತು. ಏಕೆಂದರೆ ಆ ಬಂಡೆಗಳು ಅಂದಿಗೂ ಹಾಗೇ ಇದ್ದವು. ಎಂದಿಗೂ ಹಾಗೇ ಇರುತ್ತವೆ. ಆ ಬಂಡೆಗಳ ಮೇಲೆಲ್ಲಾ ಮಧ್ವಾಚಾರ್ಯರು ಚಿಕ್ಕವರಾಗಿದ್ದಾಗ ಓಡಾಡುತ್ತ ಆಟವಾಡಿದ್ದರ ಬಗ್ಗೆ ಹಲವಾರು ಕಥೆಗಳಿವೆ. ಒಮ್ಮೆ ಒಂದು ಹಸುವಿನ ಬಾಲವನ್ನು ಹಿಡಿದು, ಹಸು ಹೋದಲ್ಲೆಲ್ಲ, ಹೋದನೆಂಬ ಕಥೆಯೂ ಉಂಟು. ಈಗ ನಾಶವಾಗುತ್ತಿರುವ, ಗ್ರಾನೈಟ್ ವ್ಯವಹಾರದಲ್ಲಿ ಕಣ್ಮರೆಯಾಗುತ್ತಿರುವ ಬಂಡೆಗಳ ಮೇಲೆಯೇ ಬಾಲಕನಾಗಿದ್ದ ಮಧ್ವಾಚಾರ್ಯರು ಕುಳಿತಿದ್ದರು. ಆಟವಾಡಿದ್ದರು ಎಂಬ ಐತಿಹ್ಯ ಅದೇಕೆ ನಮ್ಮಲ್ಲಿ ಯಾವುದೇ ರೀತಿಯ ಸ್ಪಂದನವನ್ನೂ ಉಂಟುಮಾಡುತ್ತಿಲ್ಲ? ಬಾಲ್ಯದಲ್ಲಿ ಈ ಬಂಡೆಗಳಿಂದ ಅವರು ಏನೆಲ್ಲ ಕಲಿತಿರಬಹುದು? ಪ್ರಕೃತಿ ನಿಮ್ಮೊಳಗಿನ ಪ್ರಜ್ಞೆಯನ್ನು ಹೇಗೆ ರೂಪಿಸುತ್ತದೆ ಎಂಬುದನ್ನು, ನಿಮಗೆಲ್ಲ ಗೊತ್ತಿರುವಂತೆ, ವರ್ಡ್ಸ್‌‌ವರ್ತ್ ನಿರೂಪಿಸುತ್ತಾನೆ. ಪ್ರಕೃತಿ ಮನುಷ್ಯ ಪ್ರಜ್ಞೆಯನ್ನು ರೂಪಿಸುವ ಒಂದು ಬಹುಮುಖ್ಯ ಸಂಗತಿ. ಈ ಗ್ರಾನೈಟ್ ವ್ಯವಹಾರದ ಸುದ್ಧಿಯನ್ನು ಕೇಳಿ ತುಂಬಾ ವಿಚಲಿತನಾದ ನಾನು ಡಿ.ಸಿ.ಗೆ ಒಂದು ಪತ್ರ ಬರೆದೆ. ಬಾಲ್ಯದಲ್ಲಿ ಆನಂದತೀರ್ಥರ ಬಗ್ಗೆ ಹಲವು ಕಥೆ ಕೇಳಿ ಬೆಳೆದ ನನಗೆ ಈ ಬಂಡೆಗಳನ್ನು ಒಡೆಯುವುದು ಅಪವಿತ್ರವಾದದ್ದು ಎನ್ನಿಸಿಬಿಟ್ಟಿತು.

ಈಗ ಆ ಬೆಟ್ಟವನ್ನು, ಬಂಡೆಗಳನ್ನು ಉಳಿಸುವ ಬಗ್ಗೆ ಜನಜಾಗೃತಿ ಉಂಟಾಗುತ್ತಿದೆ. ಅಲ್ಲಿಗೆ ಶರ್ಟು ತೊಡದೆ ಹೋಗುವ ಭಕ್ತಾದಿಗಳ ನಡುವೆ ನಾನು ಆಧುನಿಕನಂತೆ ಕಾಣಿಸುತ್ತೇನೆ. ಯಾರಾದರೂ ನನ್ನೆದುರು ಮಧ್ವರ ವಾದದ ಬಗ್ಗೆ ಅತಿರೇಕದ ಮಾತನಾಡಿದರೆ ನಾನು ಕನಲುತ್ತೇನೆ. ಏಕೆಂದರೆ ಶಂಕರರನ್ನು ನಾನು ಮಣಿಮಂಥ ಎಂಬ ಭೂತದ ಅವತಾರ ಎಂದು ಒಪ್ಪುವವನಲ್ಲ. ಅವರ ಕೆಲವು ಸಿದ್ಧಾಂತಗಳನ್ನು – ಕೆಲವರು ನಿತ್ಯನಾರಕಿಗಳು ಎಂಬುದನ್ನು -ನಾನು ಈಗ ಟೀಕಿಸಿದರೂ ಅವರು ಭಕ್ತಿಗೆ ಒದಗಿಸಿದ ಸೈದ್ಧಾಂತಿಕ ನೆಲೆಯ ಬಗ್ಗೆ ನಾನು ಗಾಢವಾಗಿ ಚಿಂತಿಸಿದ್ದೇನೆ. ಪರಂಪರೆಯ ಉದಾತ್ತತೆಯ ಬಗ್ಗೆ ಸರಿಯಾದ ವಿವೇಚನೆ ಇರಿಸಿಕೊಂಡು ಅದರ ಬಗ್ಗೆ ತುಂಬಾ ವಿಮರ್ಶಾತ್ಮಕವಾದ ದೃಷ್ಟಿಯನ್ನು ಹೊಂದಿಯೂ ಒಂದು ಎಚ್ಚರದೊಡನೆ ಗಮನಿಸಬಲ್ಲಿರಾದರೆ ಮಾತ್ರ ನೀವು ಇಂದಿನ ವ್ಯಾಪಾರೀಕರಣದ, ಜಾಗತೀಕರಣದ ವಿರುದ್ಧ ಹೋರಾಡಬಲ್ಲಿರಿ. ಎರಡನ್ನೂ ಒಟ್ಟಿಗೆ ಪರಿಗಣಿಸಿ-ಕೆಲವು ಸಲ ಆಧುನಿಕತೆಯತ್ತಲೋ, ಸಂಪ್ರದಾಯದತ್ತಲೋ ವಾಲಬೇಕಾದ ಪ್ರಸಂಗ ಬರಬಹುದಾದರೂ -ವಿವೇಚಿಸಬೇಕು. ಮಂದಿಯ ಮಾತಿಗೆ ಹೆದರಬಾರದು. ನೀವೇನೆಂಬುದನ್ನು ನಿಮ್ಮ ಕೃತಿಯಲ್ಲಿ ತೋರಿಸಬೇಕು. ಮೇಲೆ ಹೇಳಿದ ವಿವೇಚನೆ ನಮಗೆ ಅಗತ್ಯ. ಹಾಗೆಯೇ ಇಂದು ನಮಗೆ ಮುಖ್ಯವಾಗಿರುವ ಆದರೆ ಕ್ರಮೇಣ ನಮ್ಮನ್ನು ನಾಶಗೊಳಿಸಬಲ್ಲ ಜಾಗತಿಕ ತಿಳುವಳಿಕೆಯ ಬಗ್ಗೆಯೂ ನಾವು ವಿಮರ್ಶಾತ್ಮಕವಾಗಿರಬೇಕು. ನಾವು ಮಂಗಳೂರಿನಲ್ಲಿ ಭೇಟಿಯಾದಾಗ ನನಗೆ ತುಂಬಾ ಖುಷಿಯಾಯಿತು. ಖ್ಯಾತ ವಕೀಲರಾದ ಮಿ. ಮಾಥ್ಯೂ, ವಿಜ್ಞಾನಿಗಳಾದ ಮಿ. ಶರ್ಮ, ಉಡುಪಿ ಮಠದ ಯತಿಗಳು ಎಲ್ಲರೂ ಒಟ್ಟಿಗೆ ಸೇರಿದ್ದರು. ಯತಿಗಳು ತಮ್ಮ ಪಾದುಕೆಗಳನ್ನು ತೊಟ್ಟು ತುಂಬ ದೂರ ನಡೆಯಲಾರರಾದ್ದರಿಂದ ಪಾದುಕೆಗಳನ್ನು ಕಳಚಿಟ್ಟು ಬರಿಗಾಲಲ್ಲೇ ಬಂದಿದ್ದರು. ನಾನೂ ಅವರೊಂದಿಗಿದ್ದೆ. ಇನ್ನೂ ಯುವಕರಾಗಿದ್ದ ಸ್ವಾಮಿಗಳು ಮುಸಲ್ಮಾನರೊಡನೆ, ದಲಿತರೊಡನೆ, ಹರಿಜನರೊಡನೆ ಬೆರೆತಿರುವುದನ್ನು ಕಂಡು ನನಗೆ ನಿಜಕ್ಕೂ ಸಂತೋಷವಾಯಿತು. ಬುದ್ಧಿಜೀವಿಗಳು, ಯತಿಗಳು, ಕ್ರೈಸ್ತ ಪಾದ್ರಿಗಳು, ಮೀನುಗಾರರ ಹೆಂಗಸರು ಎಲ್ಲರೂ ಒಂದೇ ವೇದಿಕೆಯಲ್ಲಿ, ಜಾಗತೀಕರಣವನ್ನು ವಿರೋಧಿಸಲು ನೆರೆದಿದ್ದರು. ‘ರಷ್ಯಾದಲ್ಲಿ ಮಾರ್ಕ್ಸಿಸಂ ಸೋತಂತೆ ಭಾರತದಲ್ಲಿ ಗಾಂಧಿವಾದ ಸೋತಿದೆ ಎಂದು ನನಗೆ ಗೊತ್ತಿದ್ದರೂ, ಗಾಂಧಿ ಇನ್ನೂ ಪ್ರಸ್ತುತವಾಗಬಲ್ಲ, ಬುದ್ಧಿಜೀವಿಗಳೂ ಜನಸಾಮಾನ್ಯರೂ ಒಟ್ಟಿಗೆ ಬೆರೆತಿರುವ ಒಂದು ಹೊಸ ಪ್ರಜ್ಞೆ ಆವಿರ್ಭವಿಸುತ್ತಿದೆ’ ಎಂದು ನನಗನ್ನಿಸಿತು. ಇಂದು ಗಾಂಧೀವಾದ ಭಾರತದಲ್ಲಿ ಆಚರಣೆಯಲ್ಲೇನೂ ಇಲ್ಲ. ಹಾಗೆ ನೋಡಿದರೆ, ಮಾರ್ಕ್ಸ್‌ವಾದದ ಅತ್ಯುತ್ತಮ ಅಂಶಗಳು ಇನ್ನೂ ಜೀವಂತವಾಗಿವೆ. ಎಷ್ಟಾದರೂ ಮಾರ್ಕ್ಸ್ ಬಹು ದೊಡ್ಡ ದಾರ್ಶನಿಕ. ದುಡಿಮೆ ಎಂಬುದು ಕೇವಲ ಪದಾರ್ಥಗಳ ಉತ್ಪಾದನೆಯಾಗಿದೆ ಎಂಬುದು ಮೊದಲು ಅವನಿಗೆ ಗೋಚರಿಸಿತು. ಅದು ಎಲ್ಲ ಐರೋಪ್ಯರಿಗೂ ರೈಲ್ವೇ ಬಗ್ಗೆ ಹುಚ್ಚು ಹಿಡಿದಿದ್ದ ಕಾಲ; ಆಗ ಮಾರ್ಕ್ಸ್‌ಗೆ ಮಾರುಕಟ್ಟೆಯ ಸಾಧ್ಯತೆಗಳು ಗೋಚರಿಸಿದವು.

ಪರಂಪರೆಯಲ್ಲಿ ಯಾವುದು ಗಟ್ಟಿಕಾಳು, ಯಾವುದು ಜೊಳ್ಳು ಎನ್ನುವುದನ್ನು ನಿರ್ಧರಿಸಲು ಗಾಂಧಿ ನಮಗೆ ವಿಶಿಷ್ಟ ಒಳನೋಟಗಳನ್ನು ನೀಡುತ್ತಾರೆ. ಪ್ರೊ. ಎ. ಬಿ. ಷಾ ಒಮ್ಮೆ ನನಗೊಂದು ಕಥೆ ಹೇಳಿದ್ದರು. ಒಮ್ಮೆ ಗಾಂಧಿ ಬನಾರಸ್ ಪಂಡಿತರೊಡನೆ ನಡೆದ ತಮ್ಮ ವಾಗ್ವಾದದ ಬಗ್ಗೆ ಮಹಾರಾಷ್ಟ್ರದ ಹಿರಿಯ ಲೇಖಕ ತರ್ಕತೀರ್ಥರ ಬಳಿ ಪ್ರಸ್ತಾಪಿಸಿದ್ದರಂತೆ. ವೈದಿಕ ಧರ್ಮ ಅಸ್ಪೃಶ್ಯತೆಯನ್ನು ಒಪ್ಪುತ್ತದೆಯೇ ಇಲ್ಲವೇ ಎಂದು ಗಾಂಧಿ ಕೇಳಿದ್ದರು. ಅದಕ್ಕೆ ಆ ವೈದಿಕರು, ಆ ಸೃಷ್ಟಿ ಒಂದು, ನಾವೆಲ್ಲ ಅವನ ಮಕ್ಕಳು ಆದ್ದರಿಂದ ಅಸ್ಪೃಶ್ಯತೆ ಸಲ್ಲದು ಎಂದೇ ಹೇಳಿದ್ದರು. ಅಸ್ಪೃಶ್ಯತೆ ಸರಿಯಲ್ಲವೆಂದು ವೇದ ಪ್ರಮಾಣದಿಂದ ಸ್ಥಾಪಿಸುವುದೂ ಕಷ್ಟವೇನಲ್ಲ. ಉದಾತ್ತ ತತ್ವಗಳು, ಕ್ಷುಲ್ಲಕ ಆಚರಣೆಗಳು ಜೊತೆಜೊತೆಗೇ ಸಾಗುತ್ತವೆ. ಆದರೂ ಬನಾರಸ್ ಪಂಡಿತರ ಪ್ರಕಾರ ಈ ಎಲ್ಲವೂ ಒಂದೇ. ಆಗ ಅಸ್ಪೃಶ್ಯತೆಯನ್ನು ವಿರೋಧಿಸುವ ಪ್ರಮಾಣಗಳಂತೆ, ಅಸ್ಪೃಶ್ಯತೆಯನ್ನು ಒಪ್ಪುವ ಪ್ರಮಾಣಗಳನ್ನೂ ವೇದಗಳಲ್ಲೇ ಸುಲಭವಾಗಿ  ಹುಡುಕಬಹುದು ಎಂದು ಸಂಸ್ಕೃತ ವಿದ್ವಾಂಸರೂ ಆಗಿದ್ದ ತರ್ಕತೀರ್ಥರು ಗಾಂಧಿಗೆ ಹೇಳಿದರು. ಹಾಗಿದ್ದ ಪಕ್ಷದಲ್ಲಿ ನಾನು ಹಿಂದೂಧರ್ಮವನ್ನೇ ವಿರೋಧಿಸಬೇಕಾಗುತ್ತದೆ ಎಂದು ಗಾಂಧಿ ಹೇಳಿದರಂತೆ.

ಶತಮಾನದ ಕಡೆಯಲ್ಲಿ ನಿಂತಿರುವ ನಮಗೆ ಬೇಕಾಗಿರುವುದು ಈ ಬಗೆಯ ನಿಲುವು. ನಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ತೀರ್ಮಾನಗಳೂ ಈ ನಿಲುವುಗಳ ಮೇಲೆಯೇ ನಿಂತಿರತಕ್ಕದ್ದು. ಅಲ್ಲಮ, ಬ್ಲೇಕ್, ಟಾಲ್‌ಸ್ಟಾಯ್‌ನಂಥವರು ನಮ್ಮ ಸಾಹಿತ್ಯಿಕ, ಸಾಂಸ್ಕೃತಿಕ ನಾಯಕರಾಗಬೇಕಾಗುತ್ತದೆ. ನಮ್ಮ ಎಲ್ಲ ಶಕ್ತಿಗಳನ್ನೊಳಗೊಂಡ ಮೂಲಸ್ತ್ರೋತ ನಮ್ಮ ಭೂತಕಾಲದಲ್ಲಿದೆ. Tradition Modernity Counter Culture ನಂತರ ಪುಸ್ತಕ ನನಗೆ ಈ ದಾರಿಗಳಲ್ಲಿ ಯೋಚಿಸಲು ಪ್ರೇರಣೆ ನೀಡಿದೆ. ಫಾ. ಕಪ್ಪನ್‌ರಂತಹವರು ಎಲ್ಲ ಕಾಲಕ್ಕೂ ಪ್ರಸ್ತುತ.

 

ಫಾ. ಕಪ್ಪನ್ ನೆನಪಿನ ಭಾಷಣ.
ಕೃಪೆ : ವಿಸ್ತಾರ್, ಬೆಂಗಳೂರು.
ಅನುವಾದ : ಬಿ. ನಿತ್ಯಾನಂದಶೆಟ್ಟಿ,
ಪರಿಷ್ಕರಣೆ : ವಾಸುದೇವಮೂರ್ತಿ

* * *