ಇಂದು ಪದವಿ ಸ್ವೀಕರಿಸುತ್ತಿರುವ ನಿಮಗೆಲ್ಲ ನನ್ನ ಹಾರ್ದಿಕ ಅಭಿನಂದನೆಗಳು. ಬಹಳ ಪರಿಶ್ರಮದ ಒಂದು ತರಬೇತಿಯನ್ನು ನೀವು ಮುಗಿಸಿದ್ದೀರಿ. ನಮ್ಮ ವಿಶ್ವವಿದ್ಯಾಲಯಗಳ ಪದವಿಗಳಂತಲ್ಲ ನಿಮ್ಮ ಮೌಲ್ಯಮಾಪನ ವಿಧಾನ. ಇಂದು ಇಲ್ಲಿ ನೀಡುವ ಪದವಿ ಮಾತ್ರವಲ್ಲದೆ, ಅದಕ್ಕಿಂತ ಮುಖ್ಯವಾಗಿ, ನೇರ ಪ್ರೇಕ್ಷಕರೆದುರು ನೀವು ಪ್ರದರ್ಶಿಸುವ ನಾಟಕಗಳ ಮೂಲಕ ನಿಮ್ಮ ನಿಜವಾದ ಮೌಲ್ಯಮಾಪನ ನಡೆಯುತ್ತದೆ. ನೀವೆಷ್ಟೇ ಪ್ರಸಿದ್ಧಿ ಪಡೆದ ನಂತರವೂ ಹಾಗೇನೆ. ಲೇಖಕರ, ಹಾಡುಗಾರರ ವಿಷಯದಲ್ಲಿ ಈ ಮಾತು ನಿಜ. ಪ್ರಸಿದ್ಧಿ ಹೆಚ್ಚಿದಂತೆ ನಿಮ್ಮಿಂದ ಪ್ರೇಕ್ಷಕರ ನಿರೀಕ್ಷೆಯೂ ಅಷ್ಟುಮಟ್ಟಿಗೆ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಯಲ್ಲಿ ನೀವು ಚೆನ್ನಾಗಿ ಬೆಳೆದಂತೆ ಸಹೃದಯರ ಅಪೇಕ್ಷೆ-ನಿರೀಕ್ಷೆಗಳೂ ಅಂತೆಯೇ ಹೆಚ್ಚಾಗುವುದು ಸಹಜ. ಇದು ಒಬ್ಬ ಸಂಗೀತಗಾರನ ಮಟ್ಟಿಗೂ ನಿಜ, ಲೇಖಕನ ಮಟ್ಟಿಗೂ ನಿಜ. ಆದ್ದರಿಂದ, ಒಬ್ಬ ಸೃಜನಶೀಲ ಕಲಾವಿದನಿಗೆ ಪ್ರತಿಯೊಂದು ಪ್ರದರ್ಶನವೂ ಒಂದು ಹೊಸ ಪ್ರಾರಂಭವಾಗಿರುತ್ತದೆ. ಆತ ನಿರಂತರವಾಗಿ ಹೊಸ ಹೊಸ ಸೃಷ್ಟಿಗಳಲ್ಲಿ ಹುಡುಕಾಟಗಳಲ್ಲಿ ನಿರತನಾಗಿರಬೇಕಾಗುತ್ತದೆ; ತನ್ನದೇ ಹಿಂದಿನ ಪ್ರಸಿದ್ಧಿಯನ್ನು ನೆಚ್ಚಿಕೊಳ್ಳುವಂತಿಲ್ಲ; ತನ್ನದೇ ಹಳೆಯ ಅನುಕರಣೆಯನ್ನು ಪುನಃ ಮಾಡುವಂತಿಲ್ಲ. ಮನುಷ್ಯನ ಎಲ್ಲ ನವನವೀನ ಸೃಷ್ಟಿಗಳಲ್ಲೂ ಇರುವಂತೆಯೇ ಸೌಂದರ್ಯಾನುಭೂತಿಯಲ್ಲೂ ಒಂದು ತೆರನಾದ ದಣಿವು ಇದೆ. ಅತಿ ಬಳಕೆಯಿಂದಾಗುವ ಈ ಖಾಲಿತನ ಕೇವಲ ವಸ್ತು – ವಿಷಯಗಳ ನೆಲೆಯಲ್ಲಿ ಮಾತ್ರಲವಲ್, ರೂಪ ಹಾಗೂ ತಂತ್ರಗಳ ವಿಷಯದಲ್ಲೂ ಉಂಟಾಗುತ್ತದೆ.

ಇಲ್ಲಿನ ನಿಮ್ಮ ಅಧ್ಯಾಪಕರು ನಿಮಗೆ ನೀಡಿದ ಶಿಕ್ಷಣ ಹಾಗೂ ತರಬೇತಿಯ ವಿಧಾನಗಳ ಬಗೆಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಲೇಬೇಕು. ಈ ರಾಷ್ಟ್ರೀಯ ನಾಟಕಶಾಲೆಯಲ್ಲಿ – ಹಲವಾರು ಭಾಷೆ, ಸಂಸ್ಕೃತಿ, ರಂಗಸಂಪ್ರದಾಯಗಳು ಇರುವ ಈ ವಿಶಾಲ ಉಪಖಂಡಕ್ಕೆ ಅನುಗುಣವಾದ ಯೋಗ್ಯವಾದ ಶಿಕ್ಷಣ ವಿಧಾನವನ್ನು ರೂಪಿಸುವಲ್ಲಿ ನೀವು ಹಾಗೂ ನಿಮ್ಮ ಅಧ್ಯಾಪಕರುಗಳು ನಿರಂತರವಾಗಿ ಸವಾಲುಗಳನ್ನೆದುರಿಸಿ ಕ್ರಿಯಾಶೀಲವಾದ ಹುಡುಕಾಟ ನಡೆಸಿದ್ದೀರಿ. ಇಲ್ಲಿನ ಶಿಕ್ಷಣಕ್ಕೊಂದು ಪಠ್ಯಕ್ರಮವನ್ನು ರೂಪಿಸುವುದು ಭೌತಶಾಸ್ತ್ರ ರಸಾಯನಶಾಸ್ತ್ರ ಸಮಾಜಶಾಸ್ತ್ರ ಇಂಜಿನಿಯರಿಂಗ್ ಮೊದಲಾದವುಗಳಿಗಿಂತ ತೀರ ಬೇರೆಯೇ ರೀತಿಯ ಕೆಲಸ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ನಿಮ್ಮ ಸ್ವಂತ ಭಾವನೆ, ನೆನಪು, ದೃಷ್ಟಿಕೋನ ಹಾಗೂ ಅವುಗಳ ಪರಿಣಾಮವಾಗಿ ರೂಪುಗೊಂಡ ಕಲಾಪ್ರಜ್ಞೆಯನ್ನು ಹೊಂದಿದ ಸ್ವಂತ ವ್ಯಕ್ತಿತ್ವ ಉಳ್ಳವರು. ನೀವು ಎಷ್ಟು ಕಲಿತಿಲ್ಲವೋ ಅಷ್ಟೇ ಕಲಿತಿರುತ್ತೀರಿ. ಇದು ಇತರ ಎಲ್ಲ ಶಾಲೆಗಳಿಗಿಂತ ಬಿನ್ನವಾದುದು. ಇತರ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಜ್ಞಾನ, ತರಬೇತಿ, ವೈಯಕ್ತಿಕ ಸ್ಪರ್ಶವಿಲ್ಲದುದು, ತಟಸ್ಥವಾದುದು. ಬದಲಿಗೆ, ಇಲ್ಲಿ ನಿಮ್ಮ ಕಲಿಕೆಯ ಜೊತೆಗೆ ನಿಮ್ಮೆಲ್ಲರ ವಿಭಿನ್ನ ಬಾಷೆ, ಪ್ರಾಂತೀಯ ಗುಣ-ಸಂಸ್ಕಾರಗಳು ಒಂದುಗೂಡಿ ಬರುತ್ತವೆ. ನೀವು ನಿಮ್ಮೊಡನೆ ಏನನ್ನು ತಂದಿರುತ್ತೀರೋ ಅದರ ಆಳಕ್ಕೆ ಇಳಿಯಬೇಕಾಗುತ್ತದೆ ಮತ್ತು ಅದೇ ಹೊತ್ತಿಗೆ, ಇಂತಹ ಒಂದು ಮಿಶ್ರ ಸಂಸ್ಕೃತಿಗಳ ನಡುವಣ ಕಲಿಕಾ ವಿಧಾನದಲ್ಲಿ ನಿಮ್ಮ ಒಳಗನ್ನೂ ಅರ್ಥಪೂರ್ಣವಾಗಿ ಬೆಳೆಸಿಕೊಳ್ಳಬೇಕಾಗುತ್ತದೆ.

ಇಂದು ನಮ್ಮ ದೇಶದ ಯಾವುದೇ ಶಿಕ್ಷಣ ಸಂಸ್ಥೆಯೂ ಹಿಂದಿನ ಅಥವಾ ಪಶ್ಚಿಮದ ವಿಧಾನಗಳನ್ನು ಅನುಕರಿಸಿಕೊಂಡು ಕೂರುವಂತಿಲ್ಲ; ಬದಲು, ಇಂದಿಗೆ ಪ್ರಸ್ತುವಾಗಬೇಕಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಮಗೆ ಅದರ ಅರಿವಿನೊಂದಿಗೆ ಪಶ್ಚಿಮದ ಜೊತೆಗೆ ಸರಿಸಾಟಿಯಾಗಿ ಹೆಜ್ಜೆಹಾಕಬೇಕೆಂಬ ಒಳಗಿನ ತುಡಿತವೂ ಇರುತ್ತದೆ. ನಮ್ಮ ಶಿಕ್ಷಣ ಕ್ಷೇತ್ರದ ಎಲ್ಲ ರಂಗಗಳ ಮಟ್ಟಿಗೂ ಇದು ನಿಜ. ಅಥವಾ, ಕಲೆಯನ್ನು ಗಂಭೀರವಾಗಿ ಪರಿಗಣಿಸಿ ದುಡಿಯುವ ಒಬ್ಬ ಪ್ರಯೋಕ್ತೃ ನೀವಾಗಿದ್ದರೆ, ಪಶ್ಚಿಮಕ್ಕಿಂತ ಭಿನ್ನವಾಗಬೇಕಾದ ಹಾಗೂ ನಿಮ್ಮದೇ ಹಿಂದಿನ ಪರಂಪರೆಯ ಅನುಕರಣೆಯಿಂದ ತಪ್ಪಿಸಿಕೊಳ್ಳಬೇಕದ ಸವಾಲನ್ನು ನೀವು ಎದುರಿಸಬೇಕಾಗುತ್ತದೆ.

ನಮ್ಮ ದೇಶದ ಬುದ್ಧಿಜೀವಿಗಳು ಎರಡು ತೆರನಾಗಿ ಕಂಡುಬರುತ್ತಾರೆ – ಹಿಂದಿನಿಂದ ಪುನರುತ್ಥಾನವಾದಿಯಾಗಿಯೂ ಬದಿಗಳಿಂದ ಆಧುನಿಕರಾಗಿಯೂ ಕಾಣುತ್ತಾರೆ- ಎಂದು ಡಾ. ಲೋಹಿಯಾ ಒಮ್ಮೆ ಹೇಳಿದ್ದರು. ನಾವು ನಮ್ಮ ಹಿಂದಿನ ಜೋತಿಷ್ಯ, ಹಳೆಯ ಕ್ರಿಯಾವಿಧಿಗಳು ಅಥವಾ ಜಾನಪದಗಳ ಕಡೆಗೆ ತಿರುಗಿದಾಗ ಅವನ್ನು ಇಂದಿನ ನಮ್ಮ ಆಧುನಿಕ ಸೊಬಗಿನ ‘ತಲ್ಲಣ’ ತಳಮಳಗಳ ಜೊತೆಗೆ ಹೊಂದಿಸಿಕೊಂಡು, ಏಕಕಾಲದಲ್ಲಿ ನಾವು ಭಾರತೀಯರೆಂದೂ ಹಾಗೆಯೇ ವಿಶ್ವಪ್ರಜೆಗಳೆಂದೂ ಭಾವಿಸುತ್ತೇವೆ. ಅಥವಾ, ಪಶ್ಚಿಮದ ಕೆಲವು ಹೊಸಹಾದಿಗಳನ್ನು ಅವಳಡಿಸಿಕೊಂಡರೆ ನಾವು ಪ್ರಯೋಗಶೀಲ ಆಧುನಿಕರೆಂದೋ ಸಮಕಾಲೀನರು ಎಂದೋ ತಿಳಿಯುತ್ತೇವೆ. ಸದ್ಯದ ತುರ್ತು, ಅಧಿಕೃತತೆಗಳಿಲ್ಲದ ನಮ್ಮ ಹಲವು ಸಾಹಿತ್ಯ ಕೃತಿಗಳ ಮಟ್ಟಿಗೂ ಈ ಮಾತು ಸತ್ಯ.

ನಾವು ಹೆಚ್ಚು ಕಾಲ ಹಾಗೆ ಆಚೀಚೆ ನೋಡುತ್ತ ಕಾಲಕಳೆಯುವಂತಿಲ್ಲ. ಬುದ್ಧಿಜೀವಿ ಆಧುನಿಕರಿಗೆ ಸೋವಿಯೆತ್ ಮಾದರಿ ಸೋತಿದೆ, ಮತ್ತು ಅಮೆರಿಕಾ ಸವಾಲಿಲ್ಲದ ಬಲಿಷ್ಠ ಶಕ್ತಿಯಾಗಿದೆ. ಸಾಂಸ್ಕೃತಿಕ ಪ್ರವಾಸೋದ್ಯಮ ಅಥವಾ ಅನುಕರಣಾತ್ಮಕ ಆಧುನಿಕತೆ ನಮ್ಮ ಕಲಾತ್ಮಕ ಕ್ರಿಯಾಸೂಚಿಗಳನ್ನು ನಿರ್ದೇಶಿಸುವಂತೆ ಕಾಣುತ್ತಿದೆ. ರಾಷ್ಟ್ರೀಯ ನಾಟಕ ಶಾಲೆಯಂತಹ ಒಂದು ಹಿರಿಯ ಸಂಸ್ಥೆಯು ಇಂತಹ ಸುಲಭ ಆಮಿಷಗಳನ್ನು ಹೇಗೆ ತಡೆದುಕೊಳ್ಳುತ್ತದೆ, ಮತ್ತು ನಮ್ಮ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಹೇಗೆ ದೃಢವಾಗಿ ಹಾಗೂ ಮುಕ್ತವಾಗಿ ಮುನ್ನಡೆಯುತ್ತದೆ ಎನ್ನುವುದು ಇಂದಿನ ಮುಖ್ಯ ಪ್ರಶ್ನೆಯಾಗುತ್ತದೆ. ಒಂದಕ್ಕೆ ಮಾನಸಿಕ ದೃಢತೆಯೂ ಮತ್ತೊಂದಕ್ಕೆ ಸಂದರ್ಭಾನುಸಾರವಾದ ಮುಕ್ತ ಮನಸ್ಸೂ ಬೇಕಾಗುತ್ತದೆ. ಇವೆರಡೂ ಪರಸ್ಪರ ವಿರುದ್ಧವಾದವುಗಳಲ್ಲವೆನ್ನುವುದನ್ನು ಒಬ್ಬ ಸೃಜನಶೀಲ ವ್ಯಕ್ತಿ ತಿಳಿದಿರುತ್ತಾನೆ. ಕಲ್ಪನಾಪ್ರತಿಭೆಯು ವಿಭಿನ್ನ ನೋಟ ಆಶಯ ಆಕೃತಿಗಳನ್ನು ಕಲೆಹಾಕಿ ಒಟ್ಟಂದವನ್ನು ಸಾಧಿಸಬಲ್ಲುದಾದರೆ, ಅದೇ ರಂಜನೆಯ ಆಮಿಷವು ಅವುಗಳಿಂದ ಥಳಕಿನ ಬೆಡಗನ್ನು ಮಾತ್ರ ಸೃಷ್ಟಿಸಬಲ್ಲುದು. ಪರಂಪರೆಯೆಂದು ‘ಎತ್ನಿಕ್’ ಅಂಶಗಳನ್ನು ಹೆಣೆದು ಆಕರ್ಷಕವಾದ ಸಂಸ್ಕೃತಿ ಖಿಚಡಿಯನ್ನು ಕಟ್ಟುವ ಬಗೆಯನ್ನು ನಾನು ಯಾವತ್ತೂ ಒಪ್ಪಲಾರೆ.

ನಾನೊಬ್ಬ ಬರಹಗಾರ. ಕಥೆ ಕವಿತೆ ಕಾದಂಬರಿಗಳನ್ನು ಮೆಚ್ಚುವವನು. ಹಾಗೆಂದು, ನನ್ನನ್ನು ನಿಧಾನಿಯಾಗಿಸುವ ವಿಲಂಬಗತಿಯ ಕೃತಿಗಳಿಂದ ನಾನೇನೂ ಸುಸ್ತಾಗುವುದಿಲ್ಲ. ಇತ್ತೀಚೆಗೆ ಒಂದು ಕೂಡಿಯಾಟ್ಟಂ ಪ್ರದರ್ಶನವನ್ನು ನೋಡಿದೆ. ಎರಡು ಸಾಲಿನ ಒಂದು ಕವಿತೆಯನ್ನು ಒಂದು ಗಂಟೆಹೊತ್ತು ಅಭಿನಯಿಸಿದರು. ಪ್ರೇಕ್ಷಕರು ಮಂತ್ರಮುಗ್ಧರಾಗಿ ಕುಳಿತಿದ್ದರು. ಆಗ, ಯಾವುದನ್ನು ವಿಲಂಬಗತಿಯಲ್ಲಿ ವಿಸ್ತರಿಸುವುದು ಸಾಧ್ಯವೋ ಮತ್ತು ಯಾವುದು ನಮ್ಮನ್ನು ಸಾವಧಾನಿಗಳನ್ನಾಗಿ ಮಾಡುವುದೋ ಅದು ಕಲಾಕೃತಿ – ಎನ್ನುವುದು ಕಲೆಯ ಉತ್ತಮ ವ್ಯಾಖ್ಯಾನ ಆಗಬಲ್ಲದು ಎಂದು ಆಲೋಚಿಸಿದೆ. ಆದರೆ, ಎಲ್ಲಾ ರಂಗಭೂಮಿಯೂ ಈ ಗುಣವನ್ನು ಪಡೆಯಬೇಕೆಂದು ಹೇಳಲಾರೆ. ಕುತೂಹಲವನ್ನು ಕಾಪಾಡಿಕೊಳ್ಳುವುದು ರಂಗಭೂಮಿಯ ಮುಖ್ಯ ಗುಣ; ಅದನ್ನು ಪರಿಚಿತವಲ್ಲದ ಇತರ ಮಾರ್ಗಗಳಿಂದಲೂ ಸಾಧ್ಯವಾಗಿಸಿಕೊಳ್ಳಬೇಕು ಎನ್ನುವುದ ನನ್ನ ಮಾತಿನ ತಾತ್ಪರ್ಯ.

ನನ್ನ ಶಾಲೆಯ ದಿನಗಳ ನೆನಪಾಗುತ್ತದೆ. ನನಗೆ ಪರಿಚಯವಿರುವ ಆಗಿನ ರಂಗಕರ್ಮಿಗಳೆಲ್ಲರೂ ಕಾವ್ಯಮಯ ಭಾಷೆಯ ಬಗ್ಗೆ ಅನಾಸಕ್ತರು. ಅಂದಿನ ಶ್ರೇಷ್ಠ ಬರಹಗಾರರ ನಾಟಕಗಳನ್ನು ಕೇವಲ ಓದಿನ ನಾಟಕಗಳೆಂದು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು. ಆ ಧೋರಣೆ ಹೆಚ್ಚುಕಾಲ ನಿಲ್ಲಲಿಲ್ಲವೆಂದು ನನಗೆ ಸಂತೋಷ. ಕೇವಲ ರಂಗಪ್ರದರ್ಶನವನ್ನೇ ಗುರಿಯಾಗಿಟ್ಟುಕೊಂಡು ಬರೆಯಲ್ಪಡುವ ಅಂದಿನ ಹಲವು ಲೇಖಕರ ನಾಟಕಗಳು, ನಿಜವಾಗಿಯೂ, ರಂಗವೇ ಗುರಿಯಾಗಿ ಬರೆಯಲ್ಪಟ್ಟ ನಾಟಕಗಳಿಗಿಂತ ನಿರ್ದೇಶಕರಿಗೆ ಹಾಗೂ ನಟರಿಗೆ ಹೆಚ್ಚು ಸವಾಲನ್ನು ಒಡ್ಡಬಲ್ಲಂಥವು. ಶ್ರೇಷ್ಠ ಕಾವ್ಯವೊಂದು ರಂಗದ ಮೇಲೆ ಬಂದಾಗ ಕೇವಲ ಕಾಣುವುದಕ್ಕಿಂತ ಹೆಚ್ಚಿನ ಸಂಗತಿಗಳು ಸಹೃದಯರನ್ನು ತಲುಪುತ್ತವೆ. ನಟರು ಮಾತಾಡುವ ಕಾವ್ಯಭಾಗವು ಕೃತಕವೆಂದು ಅನ್ನಿಸಬೇಕಾಗಿಲ್ಲ. ಈಗಂತೂ ಹಾಗಿಲ್ಲ. ಪರಿಣಾಮವಾಗಿ, ಅನುಭವದ ಉದ್ದೀಪನ ಸಾಧ್ಯವಾಗುತ್ತದೆ.

ರಾಷ್ಟ್ರೀಯ ನಾಟಕಶಾಲೆಯು ತನ್ನ ವಿದ್ಯಾರ್ಥಿಗಳು ಕಾವ್ಯ ಸಾಹಿತ್ಯ ಇತಿಹಾಸ ತತ್ವಶಾಸ್ತ್ರ ಮುಂತಾದ ವಿಷಯಗಳಲ್ಲೂ ಸೂಕ್ಷ್ಮಗ್ರಾಹಿಗಳಾಗುವಂತೆ ನೋಡಿಕೊಳ್ಳುತ್ತದೆಂದು ಭಾವಿಸುತ್ತೇನೆ. ಖಂಡಿತವಾಗಿಯೂ, ಸಾಹಿತ್ಯ-ವಿಮರ್ಶೆಗಳ ಬಗೆಗಿನ ಸೂಕ್ಷ್ಮಗ್ರಹಿಕೆಯು ನಿಮ್ಮ ರಂಗಕಾಯಕಕ್ಕೂ ಹೆಚ್ಚಿನ ಪುಷ್ಟಿ ಕೊಡುತ್ತದೆ. ಲಾರೆನ್ಸ್ ಆಲಿವಿಯೇರ್‌ನ ಒಥೆಲೋ ಬ್ರಾಡ್‌ವೇಯ ಮಾದರಿಯಿಂದ ಭಿನ್ನವಾಗಿ ದೂರ ಹೋದುದರಿಂದಲೇ ಹೆಚ್ಚಿನ ಹೊಸ ಅರ್ಥಗಳನ್ನು ಪಡೆದುಕೊಂಡಿತು ಎಂಬ ಮಾತು ಕೇಳಿದ್ದೇನೆ. ಕೊರಿಯೋಲೇನಸ್ ಕುರಿತಾದ ಬ್ರೆಕ್ಟ್‌ನ ವಿಮರ್ಶೆಯೂ ಅಂತಹ ಇನ್ನೊಂದು ಉದಾಹರಣೆ.

ಇತಿಹಾಸ ಮತ್ತು ತತ್ವಶಾಸ್ತ್ರಗಳ ಕುರಿತಾದ ಗ್ರಹಿಕೆಯನ್ನು ಹೆಚ್ಚಿಸಬೇಕೆನ್ನುವ ಮಾತು ಅತ್ಯುಕ್ತಿಯೆಂದೆನಿಸಬಾರದು. ಇತಿಹಾಸ ಮತ್ತು ತತ್ವಶಾಸ್ತ್ರಗಳ ನಡುವೆ ಕರುಳ ಸಂಬಂಧವಿರುವ ಕಾರಣ, ಅವುಗಳ ಕುರಿತಾದ ಅಜ್ಞಾನವು ನಮ್ಮ ಚಿಂತನೆಯನ್ನು ಕುರುಡಾಗಿಸುತ್ತದೆ. ನಾವು ಕುರುಡರಾಗಿ ಜಗತ್ತಿನಲ್ಲಿರುವ ಬಲಾಢ್ಯ ವಿಷಯಗಳು ಸಾರ್ವತ್ರಿಕ, ವಿಶ್ವಾತ್ಮಕವೆಂದೂ ಬಲಹೀನ ಸಂಗತಿಗಳು ಕೇವಲ ಪ್ರಾದೇಶಿಕವೆಂದೂ ಆಲೋಚಿಸುವಂತಾಗುತ್ತದೆ. ಅಂತಹ ಒಂದು ಭಾವನೆಯೇ ಸೋವಿಯೆತ್ ಯೂನಿಯನ್ನಿನ ನಾಶಕ್ಕೆ ಕಾರಣವಾಯಿತು. ಒಮ್ಮೆ ಕಜಾಕ್‌ಸ್ತಾನದ ಒಬ್ಬ ಲೇಖಕ ನನಗೆ ಹೇಳಿದ್ದ – ಜಾಗತಿಕ ಮಟ್ಟದ ಕೃತಿಗಳು ಬರುವುದು ರಷ್ಯನ್ ಭಾಷೆಯಲ್ಲಿ ಮಾತ್ರ ಸಾಧ್ಯ ಹಾಗೂ ಆ ಭೌಗೋಳಿಕ ವಲಯದ ಪರಿಮಿತಿಯೊಳಗೆ ಬರುವ ತಮ್ಮ ಭಾಷೆಗಳಲ್ಲಿ ಮಾತ್ರವೇ ಎತ್ನಿಕ್ ವಾಸ್ತವಗಳು ಬಿಂಬಿತವಾಗಬಲ್ಲವು ಎಂಬ ಆಲೋಚನಾ ಕ್ರಮದಲ್ಲೇ ತಾವೆಲ್ಲ ಬೆಳೆದು ಬಂದವರು – ಎಂದು. ಪುಣ್ಯವಶಾತ್, ಬಹುಮಟ್ಟಿಗೆ ನಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಲೇಖಕರೆಲ್ಲ ಇಂತಹ ಭಾವನೆಗಳಿಂದ ಮುಕ್ತರಾಗಿದ್ದಾರೆ.

ಕಲೆ ಸಾಹಿತ್ಯ ಮತ್ತು ರಂಗಭೂಮಿಗಳಲ್ಲಿನ ಪ್ರಾಯೋಗಿಕತೆಗೆ ಜೀವದುಂಬುವ ಎಲ್ಲ ಹೊಸ ವಿಚಾರಗಳೂ ಹುಟ್ಟುವುದು ಮನುಷ್ಯವ್ಯಕ್ತಿತ್ವದ ನಿಜ ಅನುಭವದಲ್ಲಿ ಮತ್ತು ನಿಶ್ಚಿತವಾದೊಂದು ಐತಿಹಾಸಿಕ ಸಂದರ್ಭದಲ್ಲಿ. ಆದರೆ ನಾವು, ಸರ‍್ರಿಯರಲಿಸಮ್, ಕ್ಯೂಬಿಸಮ್, ಸಿಂಬಲಿಸಮ್ ಮುಂತಾದ ಆಮದಾದ ಸೌಂದರ್ಯ ಸೂತ್ರಗಳನ್ನು ಹಾಗೂ ಅಸ್ತಿತ್ವವಾದ, ಆಧುನಿಕೋತ್ತರವಾದಗಳಂತಹ ಸೈದ್ಧಾಂತಿಕ ನಿಲುವುಗಳನ್ನು – ಅವು ಎಲ್ಲ ಕಡೆಗೂ ಸಲ್ಲುವ ‘ಸಾರ್ವತ್ರಿಕ’ ಸತ್ಯಗಳೆಂದು ಆಮದು ಮಾಡಿಕೊಂಡು – ಪ್ರಶ್ನೆ ಮಾಡದೆ ನಂಬುವ ಸ್ವೀಕರಿಸುವ ಚಾಳಿಗೆ ಬೀಳುತ್ತೇವೆ. ರಂಗಭೂಮಿಯಲ್ಲಿ ಕೆಲಸ ಮಾಡುವ ನೀವು ಇಂತಹ ವಿಷಯಗಳಲ್ಲಿ ಭೋಳೆತನಕ್ಕೆ ಒಳಗಾಗಬಾರದು.

ನನ್ನ ಮಾತುಗಳನ್ನು ತಪ್ಪಾಗಿ ತಿಳಿಯಬಾರದು. ವ್ಯಾಸ ವಾಲ್ಮೀಕಿಯರಿಂದ ಮೊದಲಾಗಿ ಇಂದಿನವರೆಗೆ ಎಲ್ಲಾ ಕಾಲದಲ್ಲೂ ಈ ಮನುಷ್ಯ ಸತ್ವವೆನ್ನುವಂಥಾದ್ದು ಇತಿಹಾಸದ ಕುಲುಮೆಯಲ್ಲಿ ಪುಟಗೊಂಡು, ಆಕಾರಗೊಂಡು ಕಾಲ ಮತ್ತು ಇತಿಹಾಸಗಳಿಗೆ ಅತೀತವಾಗಿ ನಿಲ್ಲುವಂಥಾದ್ದು ಎಂದು ನಂಬುತ್ತೇನೆ ನಾನು. ಮನುಕುಲದ ಶ್ರೇಷ್ಠ ಮಹಾಕಾವ್ಯಗಳು ಹುಟ್ಟಿದ್ದು ಇತಿಹಾಸದ ಆದಿಮ ಹಂತಗಳಲ್ಲೇ. ಆಳವಾದ ನೋವು ಮತ್ತು ನಿರ್ಭಯದ ಶೋಧನೆಗಳಿಂದಲೆ ಮನುಷ್ಯ ಜೀವಿತದ ಸ್ಥಿತಿಗತಿಗಳ ಕುರಿತಾದ ಅಂತಹ ಹೊಳೆ ಮಿಂಚುಗಳು ಯಥಾರೂಪ ನಿರೂಪಿಸಲ್ಪಟ್ಟವು. ಕೆಲವು ಸತ್ಯಗಳು ನಿಜಜೀವನದಲ್ಲಿ ಎದುರಿಸಲು ಕಷ್ಟಸಾಧ್ಯವಾದಂಥವು. ಆದರೆ ವ್ಯಾಸ, ಟಾಲ್‌ಸ್ಟಾಯ್ ಮತ್ತು ಕಾಫ್ಕಾನಂಥವರು ನಾವು ನಮ್ಮ ಆತ್ಮಕೇಂದ್ರದಲ್ಲೇ ಅವನ್ನು ಎದುರಿಸುವಂತೆ ಮಾಡುತ್ತಾರೆ. ಹಾಗೆಯೇ, ಜಗತ್ತಿನ ಶ್ರೇಷ್ಠ ನಾಟಕಕಾರರು ಐತಿಹಾಸಿಕ ಮತ್ತು ಭೌಗೋಳಿಕ ಗಡಿಸೀಮೆಗಳನ್ನು ದಾಟಿ ಅತೀತರಾಗಿ ನಾವು ಅಚ್ಚರಿಪಡುವಷ್ಟು ಆತ್ಮೀಯವಾಗಿ ತಮ್ಮ ದರ್ಶನಗಳನ್ನು ಕಾಣ್ಕೆಗಳನ್ನು ನಮಗೆ ತಲುಪಿಸುತ್ತಾರೆ. ನಿಜವಾಗಿಯೂ ಇದು ರಸಾನುಭವ- ನಮ್ಮೆಲ್ಲರ ಆತ್ಮಕೇಂದ್ರದ ಪ್ರಶಾಂತ ಮೌನದಲ್ಲಿ ನಡೆಯುವ ಒಂದು ಪುನಃಶೋಧನೆ-ತಪಸ್ಸಿನಿಂದ ಮಾತ್ರ ಹೊರಹೊಮ್ಮುವಂಥಾದ್ದು, ವರಪ್ರಸಾದದಂತೆ ಅನುಭವಕ್ಕೆ ಬರುಂಥಾದ್ದು.

ನಾವು ಇನ್ನೊಂದು ರೀತಿಯ ಭ್ರಾಂತಿಗೆ ಬಲಿಯಾಗುವುದೂ ಇದೇ; ಹುಸಿ ಭ್ರಮೆಗಳಲ್ಲಿ ಸಿಕ್ಕಿಬೀಳುವುದೂ ಇದೆ. ಅದು- ಶಾಸ್ತ್ರೀಯವು ಜಾನಪದಕ್ಕಿಂತ ಶ್ರೇಷ್ಠ, ಅಥವಾ ವಾಸ್ತವಶೈಲಿಯೆನ್ನುವುದು ಇತರ ವಿಧಾನಗಳಿಗಿಂತ ಹೆಚ್ಚು ವಾಸ್ತವಸತ್ಯವನ್ನು ಒಳಗೊಂಡಿರುತ್ತದೆ- ಎಂಬಿತ್ಯಾದಿಯಾದ ವಿಭಿನ್ನ ರೀತಿಯ ಕಲಾರೂಪಗಳು ಹಾಗೂ ಪ್ರದರ್ಶನ ಶೈಲಿಗಳಲ್ಲಿ ಹೆಚ್ಚು – ಕಡಿಮೆ ಎಂಬ ತರತಮ ಭಾವವನ್ನು ಕಲ್ಪಿಸುವುದರಿಂದ ಉಂಟಾಗುವ ಭ್ರಮೆ. ಎಲ್ಲಾ ಶ್ರೇಷ್ಠ ಸಾಹಿತ್ಯಕೃತಿಗಳಲ್ಲೂ ಸಾರ್ವಕಾಲಿಕವಾಗಿ ಕಂಡು ಬರುವ ಒಂದು ಮುಖ್ಯ ವಿಷಯ ವಾಸ್ತವ ಮತ್ತು ಭ್ರಮೆಗಳ ನಡುವಣ ದ್ವಂದ್ವಾತ್ಮಕ ತಾಕಲಾಟ. ಇವು ಜೊತೆಜೊತೆಗೆ ಹೊಂದಿಕೊಂಡು ಇರುವ ಕ್ರಮ ತುಂಬಾ ಸಂಕೀರ್ಣವಾದದ್ದು. ಎಷ್ಟು ಸಂಕೀರ್ಣವೆಂದರೆ, ಸತ್ಯದ ಹುಡುಕಾಟದಲ್ಲಿ ತಥಾಕಥಿತ ವಾಸ್ತವವಾದ ಮಾತ್ರ ಹೆಚ್ಚು ಸಮರ್ಥ ಎನ್ನುವ ಧೋರಣೆ ಸಾಧುವಾಗಲಾರದು. ಕಲೆ, ಸಾಹಿತ್ಯ ಮಾತ್ರವಲ್ಲ, ರಾಜಕೀಯ ಅಥವಾ ಐತಿಹಾಸಿಕ ಸತ್ಯತಥ್ಯಗಳ ಹುಡುಕಾಟದಲ್ಲೂ ಈ ಒಂಟಿದಾರಿ ಸತ್ಯ ಕಾಣಲಾರದು. ಎರಡು ಸಂಗತಿಗಳನ್ನು ಇಲ್ಲಿ ಉದಾಹರಿಸಬಹುದು. ‘ಶ್ರೀಕೃಷ್ಣಸಂಧಾನ’ ಯಕ್ಷಗಾನದಲ್ಲಿ ಕೌರವನ ಆಸ್ಥಾನದಲ್ಲಿ ದುರ‍್ಯೋಧನನನ್ನು ಎದುರಿಸುವ ಕೃಷ್ಣನಾಗಿ ಕೆರೆಮನೆ ಶಂಭು ಹೆಗಡೆಯವರ ಅಭಿನಯವನ್ನು ನೆನಪಿಸಿಕೊಳ್ಳುತ್ತಿದ್ದೆನೆ. ದುರ‍್ಯೋಧನ ಕೃಷ್ಣನನ್ನು ಕೀಳುಕುಲದಲ್ಲಿ ಹುಟ್ಟಿದವನೆಂದು ಜರೆಯುತ್ತಾನೆ. ಕೃಷ್ಣನು ತನ್ನ ಕಾಲಿನ ಉಂಗುಷ್ಠವನ್ನು ಸ್ವಲ್ಪಮಾತ್ರ ನೆಲಕ್ಕೆ ಒತ್ತುತ್ತಲೇ ಕೌರವಸಿಂಹಾಸನವು ರಾಜನ ಸಮೇತ ದಿಂಡುರುಳಿ ಕೃಷ್ಣನ ಕಾಲಬುಡದಲ್ಲಿ ಬೀಳುತ್ತದೆ. ನಾನು ಈ ಪ್ರಸಂಗವನ್ನು ನೋಡಿದ್ದು ತುರ್ತುಪರಿಸ್ಥಿತಿಯ ಕಾಲದಲ್ಲಿ. ಪ್ರಜ್ಞಾಪೂರ್ವಕವಾದ ಅವಧಾರಣೆ ಇಲ್ಲದೆಯೆ ಅದು ಅತ್ಯಂತ ರಾಜಕೀಯವಾಗಿತ್ತು. ಕಾಲುಂಗುಟ ನೆಲವನ್ನೊತ್ತುವ ಆ ಒಂದು ಚಿಕ್ಕ ಅಭಿನಯ ಮುದ್ರೆಯು ಮುಂದಿನ ಕಾವ್ಯಮಯ ಸಂವಾದದಲ್ಲಿ ಹೆಚ್ಚಿನ ಒತ್ತು ವಿಸ್ತಾರ ಪಡೆದು ಬೆಳೆದಿತ್ತು.

ವಾಸ್ತವವಾದದ ಮಿತಿಯನ್ನು ಸೂಚಿಸಲು ನಾನು ಬುಡಾಪೆಸ್ಟ್‌ನಲ್ಲಿ ಕೇಳಿದ ಇನ್ನೊಂದು ಕಥೆಯನ್ನು ಹೇಳುತ್ತೇನೆ. ಜಾರ್ಜ್‌ಲುಕಾಕ್ಸ್ ಕೆಲವೇ ದಿನಗಳಮಟ್ಟಿಗೆ ಹಂಗೆರಿಯಲ್ಲಿ ಮಂತ್ರಿಯಾಗಿದ್ದ. ಆತ ಮೊದಲು ರಷ್ಯಾದ ಯಾವ ಸೋವಿಯೆತ್ ಕಮ್ಯುನಿಸ್ಟ್ ಸರ್ಕಾರವನ್ನು ಬೆಂಬಲಿಸಿದ್ದನೋ ಅದೇ ಸೋವಿಯೆತ್ ಸರ್ಕಾರದ ಸಾಮ್ರಾಜ್ಯಶಾಹಿ ಆಕ್ರಮಣದ ಧೋರಣೆಯಿಂದಾಗಿ ತಲೆತಪ್ಪಿಸಿಕೊಂಡು ಪಲಾಯನ ಮಾಡಬೇಕಾಯಿತು. ಅಂತಹ ಒಂದು ಆತಂಕದ ರಾತ್ರಿ ದಾರಿಯಲ್ಲಿ ಕಂಡ ಪಾಳುಬಿದ್ದ ಬಂಗಲೆಯೊಂದರಲ್ಲಿ ಅಡಗಿಕೊಳ್ಳುತ್ತಾನೆ. ಅಲ್ಲಿತನಕ ಕಾಫ್ಕಾನ ಭ್ರಾಮಕ ಕಲ್ಪನೆಗಳಿಗಿಂತ ಟಾಲ್‌ಸ್ಟಾಯ್ ಮತ್ತು ಥಾಮಸ್‌ಮನ್‌ರು ಮಾತ್ರ ಬದುಕಿನ ನಿಜವಾದ ಸತ್ಯಗಳನ್ನು ತಮ್ಮ ಕೃತಿಗಳಲ್ಲಿ ಕಾಣಿಸಿದವರು ಎಂಬ ತಾತ್ವಿಕ ಧೋರಣೆ ಹೊಂದಿದ್ದ ಲುಕಾಕ್ಸ್ ಈಗ ಅಲ್ಲಿ ತನ್ನ ಜೊತೆಗಿದ್ದ ಆಗಂತುಕ ಮಿತ್ರನ ಹತ್ತಿರ ‘ಕಾಫ್ಕಾ ಕೂಡಾ ವಾಸ್ತವವಾದಿಯೇ ಎನ್ನುವುದನ್ನು ಈಗ ತಿಳಿದೆ’ ಎಂದು ಉದ್ಗರಿಸುತ್ತಾನೆ. (ಬುಡಾಪೆಸ್ಟ್‌ನಲ್ಲಿ ಒಬ್ಬಳು ಹೆಣ್ಣುಮಗಳು ನನಗೆ ಈ ಕಥೆ ಹೇಳಿದಳು; ಅವಳು ಹೇಳಿದ್ದನ್ನು ಯಥಾವತ್ತಾಗಿ ಉಲ್ಲೇಖಿಸುತ್ತಿಲ್ಲ ಅಷ್ಟೆ.)

ಇಷ್ಟೆಲ್ಲ ಹೇಳಿದ ನಂತರ, ನಮ್ಮ ದೇಶದಲ್ಲಿ ‘ಪ್ರಾಂತೀಯ’ಕ್ಕಿಂತ ಭಿನ್ನವಾದ ‘ರಾಷ್ಟ್ರೀಯ’ವೆಂಬುದಿಲ್ಲ ಹಾಗೂ ನಮ್ಮಲ್ಲಿ ನಾಟಕವಾಡಲು ಒಂದೇ ಒಂದು ಮಾರ್ಗ ಅಂತಿಲ್ಲ – ಎನ್ನುವುದು ನನ್ನ ಅಭಿಪ್ರಾಯವೆಂದು ಮತ್ತೆ ಬಿಡಿಸಿಹೇಳಬೇಕಾಗಿಲ್ಲ. ನಾವು ನಿಜವಾಗಿ ಭಾರತೀಯರಾಗುವ ದಾರಿ ಯಾವುದೆಂದರೆ ಇಲ್ಲಿನ ವಿಭಿನ್ನ ಪ್ರಾಂತಗಳಲ್ಲಿ ಒಂದಗಿರುವುದು. ಭಾರತವು ಸುದೀರ್ಘ ಇತಿಹಾಸ ಕಾಲದಿಂದಲೂ ಸಾಂಸ್ಕೃತಿಕವಾಗಿ ಬಹುಕೇಂದ್ರಗಳನ್ನು ಹೊಂದಿರುವ ದೇಶ. ಯೂರೋಪಿಯನ್ ನುಡಿಗಟ್ಟಿನಂತೆ ನಮ್ಮದು ಒಂದು ರಾಷ್ಟ್ರ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ನಾಗರಿಕತೆ. ಯೂರೋಪಿಯನ್ನರು ತಿಳಿಯುವ ಹಾಗಿನ ರಾಷ್ಟ್ರ ನಾವಲ್ಲ. ಮಹಾತ್ಮ ಗಾಂಧಿ ಮತ್ತು ಠಾಕೋರ್ ಭಾರತವನ್ನು ಕಲ್ಪಿಸಿಕೊಂಡದ್ದು ಹಾಗೇನೇ. ಇಂತಹ ಒಂದು ದೃಷ್ಟಿಕೋನವಿರುವ ನಮ್ಮ ದೇಶದಲ್ಲಿ ಮೂಲಭೂತವಾದಕ್ಕಾಗಲೀ ರಾಷ್ಟ್ರ ಪ್ರಭುತ್ವವೆಂಬ ದರ್ಪದ ಪರಿಕಲ್ಪನೆಗಾಗಲೀ ಜಾಗವಿಲ್ಲ. ದೆಹಲಿಯು ನಮ್ಮ ಒಕ್ಕೂಟ ಗಣತಂತ್ರದ ರಾಜಕಿಯ ರಾಜಧಾನಿ ಮಾತ್ರ; ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲ. ಒಂದು ಸಾವಿರ ವರ್ಷಗಳ ಹಿಂದೆಯೇ ಕನ್ನಡದ ಕವಿ ಪಂಪ ತಾನೊಂದು ಸಣ್ಣ ಭಾಷೆಯಲ್ಲಿ ಬರೆಯುತ್ತಿದ್ದೇನೆ ಎಂಬಂತಹ ಯಾವ ಅಳುಕೂ ಇಲ್ಲದೆ ಮಹಾಭಾರತದ ತನ್ನ ಅವತರಣಿಕೆಯನ್ನು ಬರೆದ. ಅವನು ಕಾಳಿದಾಸನನ್ನು ಬಲ್ಲ; ಆತನನ್ನು ಗೌರವಿಸಿದ; ಆದರೆ ಬೇರೆ ರೀತಿಯಲ್ಲಿಯೇ ಬರೆದ. ‘ಗೌರವಿಸು ಮತ್ತು ಬೇರೊಂದನ್ನು ಸೃಷ್ಟಿಸು’ – ಕಲಾವಿದರಿಗೆ ಇದಕ್ಕಿಂತ ಬೇರೆ ಒಳ್ಳೆಯ ಉಪದೇಶ ಇರಲಾರದು.

‘ಪ್ರಾಂತೀಯ’ಕ್ಕೆ ಬದಲು ‘ರಾಷ್ಟ್ರೀಯ’ವೆಂಬ ಸಂಕುಚಿತ ಮನೋಭಾವವನ್ನು ಹೊಂದದೆ ಭಾರತದ ವಿವಿಧ ಪ್ರಾದೇಶಿಕ ಪರಂಪರೆಗಳನ್ನು ಒಳಗೊಂಡಾಗ ಮಾತ್ರ ರಾಷ್ಟ್ರೀಯ ನಾಟಕ ಶಾಲೆಯು ನಿಜವಾದ ಅರ್ಥದಲ್ಲಿ ರಾಷ್ಟ್ರೀಯವಾಗುತ್ತದೆ. ನಮ್ಮ ಕನ್ನಡ ರಂಗಭೂಮಿಯನ್ನು ಬೆಳೆಸಿದಂತಹ ಹಲವು ಮಂದಿ ಶ್ರೇಷ್ಠ ನಿರ್ದೇಶಕರುಗಳನ್ನು ನೀಡಿದ ಶ್ರೇಯಸ್ಸು ರಾಷ್ಟ್ರೀಯ ನಾಟಕ ಶಾಲೆಗೆ ಇದೆ. ಬಿ.ವಿ. ಕಾರಂತರಂತಹ ಅಸಾಧಾರಣ ಪ್ರತಿಭಾವಂತರಿಂದ ನಮ್ಮ ರಂಗಭೂಮಿ ಶ್ರೀಮಂತವಾಗಿ ಬೆಳಗಿದೆ. ಅವರು ಒಂದು ಪ್ರಾದೇಶಿಕತೆಯಲ್ಲಿ ಬೇರೂರಿದವರು, ಆದುದರಿಂದಲೇ ಹಲವು ಪ್ರದೇಶಗಳೊಡನೆ ‘ಸಂಬಂಧ’ ಕಲ್ಪಿಸಲು ಅವರಿಗೆ ಸಾಧ್ಯವಾಯಿತು. ಈ ನನ್ನ ಹೇಳಿಕೆ ವಿರೋಧಾಭಾಸವೆನಿಸಬಹುದು; ಆದರೆ ಹಾಗಿಲ್ಲ. ನಿಮ್ಮ ಸಂವೇದನೆ ಚುರುಕಾಗಿದ್ದು, ಭಾರತೀಯ ವಾಸ್ತವವೆನ್ನುವುದು ನಾಡಿನ ಉದ್ದಗಲಕ್ಕೂ ಹಲವಾರು ಪ್ರಾಂತಗಳಲ್ಲಿ ಮೈದಾಳಿಕೊಂಡಿದೆ ಎನ್ನುವುದನ್ನು ತಿಳಿದುಕೊಂಡರೆ, ನಿಮ್ಮ ಕಲ್ಪನಾಶಕ್ತಿ ಬಳಸಿ ಭಾರತದ ವಿಭಿನ್ನ ಪ್ರಾಂತಗಳಿಂದ ನೀವು ಕಲಿಯಬಹುದು. ಕೊಡುಗೆ ನೀಡಬಹುದು. ನಮ್ಮ ದೇಶದಲ್ಲಿ ಒಂದೊಂದು ಭಾಷಾ ಪ್ರಾಂತದೊಳಗೂ ಕೂಡ ಹಲವು ತೆರನ ರಂಗಸಂಪ್ರದಾಯಗಳಿವೆ ಮತ್ತು ಹಲವು ತೆರನ ಆಡುಮಾತಿನ ರೀತಿಗಳಿವೆ. ನಾವು ಸಾಮಾನ್ಯವಾಗಿ ನಮ್ಮ ಶ್ರೀಮಂತ ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ಸೂಕ್ಷ್ಮತೆಗಳ ಕಡೆಗೆ ಕೊಂಚೆವೂ ಗಮನ ಹರಿಸುವುದಿಲ್ಲ. ಬುಡಕಟ್ಟು ಜನರು ತಮ್ಮದೇ ಆಂಗಿಕ ಭಾಷೆಗಳನ್ನು ಹೊಂದಿದ್ದಾರೆ. ಅವರನ್ನು ಒಳಗೊಳ್ಳುವುದರಿಂದ ನಮ್ಮ ರಂಗಭೂಮಿ ಇನ್ನಷ್ಟು ಶ್ರೀಮಂತವಾಗಬಹುದು. ಆದರೆ, ಈ ವಿಷಯದಲ್ಲಿ ನಮ್ಮ ಧೋರಣೆ ಮತ್ತು ಸಾಮೀಪ್ಯವು ವಸಾಹತು ರೂಪದ್ದಾಗಲೀ ‘ಎತ್ನಿಕ್’ ಮಾದರಿಯದ್ದಾಗಲೀ ಆಗಕೂಡದು.

ಯಾವುದೇ ರಂಗಭೂಮಿ ಚಟುವಟಿಕೆಯು ತನಗೆ ಸಂಬಂಧಿಸಿದ ಸಮುದಾಯ ಪ್ರಜ್ಞೆಯನ್ನು ಹೊಂದಿರಬೇಕಾಗುತ್ತದೆ. ಯಾವುದೇ ರೀತಿಯ ಅರ್ಥಪೂರ್ಣವಾದ ಪ್ರಯೋಗಶೀಲತೆಯನ್ನೂ ಸಂಸ್ಕೃತಿ ಮಿಶ್ರಣದ ಶಕ್ತಿಪೂರಣವನ್ನೂ ತಾಳಬಲ್ಲ ಈ ಸಮುದಾಯ ಪ್ರಜ್ಞೆಯ ಸ್ಥಾನವನ್ನು ಬೇರಾವುದೂ ತುಂಬಲಾರದು, ಬದಲಿಸಬಾರದು. ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ತಾವೊಂದು ಸಮುದಾಯಕ್ಕೆ ಸಂಬಂಧಿಸಿದವರು ಎಂಬ ಅರಿವನ್ನು ಹೊಂದಿರಬೇಕು ಮತ್ತು ಕೊನೆಗೆ ಹಾಗೆ ಒಂದು ಸಮುದಾಯದಲ್ಲಿ ಕೆಲಸ ಮಾಡಲು ಹಿಂದಿರುಗಬೇಕು. ದುರದೃಷ್ಟದ ಸಂಗತಿ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಇದು ನಾವು ಬಯಸಿದಷ್ಟು ನಡೆಯುತ್ತಿಲ್ಲ. ಟೆಲಿ ಧಾರಾವಾಹಿಗಳ ಉದ್ಯಮವು ಇಲ್ಲಿನ ಪ್ರತಿಭೆಗಳನ್ನು ಸೆಳೆಯುತ್ತದೆ. ನಾವು ಶೀಘ್ರ ಯಶಸ್ಸಿನ ಸುಲಭ ಶ್ರೇಯಸ್ಸಿನ ಈ ಆಸೆ ಆಮಿಷಗಳ ಆಯ್ಕೆಯಿಂದ ಪಾರಾಗಲು ಏನಾದರೊಂದು ಹಾದಿ ಹುಡುಕಬೇಕಾಗಿದೆ.

ರಾಷ್ಟ್ರೀಯ ನಾಟಕಶಾಲೆಯ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಈಗಾಗಲೇ ಇರುವ ಹಾಗೂ ಹುಟ್ಟುತ್ತಿರುವ ಮನರಂಜನಾ ಉದ್ಯಮದ ಕುರಿತು ಸಂದೇಹಪೂರ್ಣವಾದ ವಿಮರ್ಶಾ ದೃಷ್ಟಿಕೋನವನ್ನು ಬೆಳೆಸಿಕೊಳ್ಳದಿದ್ದರೆ, ಮತ್ತು ಕೀಳು ಮನರಂಜನೆಯ ಅಸಹ್ಯ ಚಿಲ್ಲರೆಗಳ ವಿರುದ್ಧವಾದ ಗಟ್ಟಿ ನಿಲುವು ತಳೆಯದಿದ್ದರೆ- ನಮ್ಮ ಕಾಲದ ಮಾನವೀಯ ಸಂಕಟ ಸಂದಿಗ್ಧಗಳನ್ನು ಅರಿತು ಅಭಿವ್ಯಕ್ತಿಸುವಲ್ಲಿ ಅವರಿಂದ ಯಾವ ಉತ್ಕೃಷ್ಟ ಕೊಡುಗೆಯೂ ಸಾಧ್ಯವಾಗಲಾರದು, ನೆರವೂ ಸಿಗಲಾರದು. ಮಾತ್ರವಲ್ಲ, ದೈನಂದಿನ ಜಂಜಡಗಳಿಂದ ನಮ್ಮ ಮನಸ್ಸನ್ನು ಹಗುರಾಗಿಸುವ, ಒಂದು ತೆರನಾದ ವಿಶಾಲ ಭಾವವನ್ನು ಮೂಡಿಸುವ, ಹಗುರೆದೆಯ ಚೈನತ್ಯದಾಯಕ ಮನೋರಂಜನೆಯನ್ನು ನೀಡಲೂ ಅವರು ಅಸಮರ್ಥರಾಗುತ್ತಾರೆ.

ಈ ಹೆಸರಾಂತ ಸಂಸ್ಥೆಯು ಕಾಲದ ಒತ್ತಡಕ್ಕೆ ಸಿಲುಕಿ ಮನರಂಜನಾ ಉದ್ಯಮದ ಪೂರಕ ಘಟಕವಾಗುತ್ತಿರುವುದನ್ನು ಕಂಡು ಸಿಟ್ಟು ಬರುತ್ತದೆ, ದ್ವೇಷ ಉಕ್ಕುತ್ತದೆ. ಸೃಜನಶೀಲ ಚಟುವಟಿಕೆಗಳಿಗೆ ನಮ್ಮಲ್ಲಿ ಪ್ರವಾಹದ ವಿರುದ್ಧ ಈಸುವ ಅದಮ್ಯ ಸಾಮರ್ಥ್ಯ ಮತ್ತು ಇಚ್ಛಾಶಕ್ತಿಯ ಆವಶ್ಯಕತೆಯಿದೆ. ಮುಖ್ಯವಾಗಿ, ಇಂದಿನ ಕುರುಡು ಅಮೆರಿಕನ್ ಜಾಗತೀಕರಣದ ದಿನಗಳಲ್ಲಿ ತೆರಿಗೆದಾರನ ಹಣವು ಇಂತಹ ಹುಸಿ ಮನರಂಜನಾ ಉದ್ಯಮಗಳ ಟಿ.ವಿ. ಧಾರಾವಾಹಿಗಳಿಗೆ (ಶೂನ್ಯಸಂಪಾದನೆಗೆ) ಸಂದು ಹೋಗುವುದು ಅಪೇಕ್ಷಣೀಯವಲ್ಲ. ಅರ್ಥಹೀನ ಮನರಂಜನೆಯ ಟಿ.ವಿ. ಸೀರಿಯಲ್ಲುಗಳನ್ನು ಇನ್ನೊಮ್ಮೆ ಉಳಿಸಿಕೊಳ್ಳಲು ತೆರಿಗೆದಾರನು ವ್ಯರ್ಥ ಯತ್ನ ಮಾಡಬೇಕಿಲ್ಲ.

ನಾವಾರೂ ದ್ವೀಪಗಳಲ್ಲ; ನಮ್ಮ ದೇಶದ ಪ್ರತಿಯೊಂದು ಪ್ರಾಂತಗಳಲ್ಲೂ ಒಂದು ಜಗನ್ನೋಟವಿರುವ ರಂಗಭೂಮಿಗಳನ್ನು ಕಟ್ಟುವ ಅವಶ್ಯಕತೆಯಿದೆ. ಇರಾಕ್ ಮತ್ತು ಕೊಲ್ಲಿ ಯುದ್ಧಗಳು, ಪ್ಯಾಲಿಸ್ತೇನಿನ ಸಂಕಟ, ಗುಜರಾತಿನ ಗಲಭೆಗಳು, ಗರಿಷ್ಠ ಪ್ರಮಾಣದ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಬದುಕಿನ ಅವನತಿ, ಎಲ್ಲಾ ರೀತಿಯ ಮೂಲಭೂತವಾದ – ಇವೆಲ್ಲವೂ ಪರಸ್ಪರ ತಳುಕುಹಾಕಿಕೊಂಡಿವೆ. ಇವುಗಳೊಳಗೆ ಅಂತಃಸಂಬಂಧಗಳಿವೆ ಮತ್ತು ನಾವು ಇಲ್ಲಿಯೇ ನೆಲೆಸಿರಲಿ ಎಲ್ಲೆಡೆಯೂ ಇವು ತಮ್ಮ ಪರಿಣಾಮ ಬೀರುತ್ತವೆ. ‘ಮರಳಿನ ಕಣವೊಂದರಲ್ಲಿ ಇಡೀ ವಿಶ್ವವನ್ನು ಕಾಣಬಹುದು’ ಎಂದು ಬ್ಲೇಕ್ ಹೇಳುವಂತೆ ನಾವೊಂದು ದಾರ್ಶನಿಕ ನೋಟವನ್ನು ಬೆಳೆಸಿಕೊಳ್ಳಬೇಕು. ಮೇಲಿನ ಮಾತನ್ನು ಮೂರ್ತರೂಪಕ್ಕೆ ತರುವುದೆಂದರೆ ಅದನ್ನು ಸಾಕ್ಷಾತ್ಕರಿಸಿಕೊಂಡು, ‘ಆಗಸ ವಿಸ್ತಾರದ ಅಮೂರ್ತ ಅರೂಪ ಶೂನ್ಯಗಾಂಭೀರ್ಯಕ್ಕೆ ಸ್ಥಳೀಯ ನೆಲೆ ಮತ್ತು ಗುರುತು’ ನೀಡುವುದು ಮತ್ತು ‘ಆಕಾರಶೂನ್ಯ ಅಮೂರ್ತಕ್ಕೆ ನಾಮರೂಪಗಳನ್ನು’ ನೀಡುವುದು. ಭಾರತೀಯ ವಿಶ್ವದ ‘ಸಾಕ್ಷಾತ್ಕಾರ’ವು ಅವಶ್ಯವಾಗಿಯೇ ಅಧಿಕೃತ ಪ್ರಾಂತೀಯ ರೂಪಗಳನ್ನು ಹೊಂದಿರುತ್ತದೆ. ಮತ್ತು ಆ ಎಲ್ಲ ಪ್ರಾಂತಗಳೂ ಇದನ್ನು ಪೋಷಿಸುವಲ್ಲಿ ಶ್ರೀಮಂತವಾಗಿವೆ.

ಈ ಹಿಂದೆ, ರಾಷ್ಟ್ರೀಯ ನಾಟಕಶಾಲೆಯ ವಿದ್ಯಾರ್ಥಿಗಳು ತಮ್ಮ ಕಲಿಕೆಯ ನಂತರ ತಂತಮ್ಮ ಪ್ರಾಂತಗಳಿಗೆ ಹಿಂದಿರುಗಿ ಆಯಾಯಾ ಪ್ರಾಂತೀಯ ರಂಗಭೂಮಿಗಳನ್ನು ಶ್ರೀಮಂತಗೊಳಿಸಿದರು ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರನ್ನೂ ಗಳಿಸಿದರು. ಈಗ ಹಾಗೆ ಕಲಿತು ಹೊರಹೋಗುವ ಇಲ್ಲಿನ ಪದವೀಧರರಿಗೆ ಈ ದಿಸೆಯಲ್ಲಿ ಸರಿಯಾದ ಪ್ರೋತ್ಸಾಹ ಮಾರ್ಗದರ್ಶನ ಸಿಗಬೇಕು. ಅವರು ತಂತಮ್ಮ ಊರು – ಪ್ರಾಂತಗಳಿಗೆ ಹೋಗಿ ಅಲ್ಲಿನ ಶಾಲಾಶಿಕ್ಷಣವನ್ನು ಸುಧಾರಿಸಲು ಚೆನ್ನಾಗಿಸಲು ಪ್ರಯತ್ನಿಸುವಂತೆ ಪ್ರೋತ್ಸಾಹಿಸುವುದು ಅಂತಹ ಒಂದು ಯೋಗ್ಯ ದಾರಿಯಾಗಬಹುದು. ಅವರು ತಮ್ಮ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳ ಅಧ್ಯಾಪಕರಿಗೆ ರಂಗ ತರಬೇತಿ ನೀಡುವಂತೆ ಏರ್ಪಾಡು ಮಾಡಿ, ಅವರಿಗೆ ಕನಿಷ್ಠ ಒಂದು ವರ್ಷವಾದರೂ ಸಹಾಯಧನ, ಶಿಷ್ಯವೇತನ ನೀಡಬಹುದು. ರಂಗ ತರಬೇತಿ ಪಡೆದರೆ ಶಾಲೆಯ ಅಧ್ಯಾಪಕರುಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು. ಅವರ ಸೇವಾವಧಿಯೊಳಗಿನ ಹಲವಾರು ತರಬೇತಿ ಕಾರ್ಯಕ್ರಮಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಹಲವು ಅಂಶಗಳನ್ನು ಅಳವಡಿಸಿ ವಿಸ್ತೃತ ತರಬೇತಿ ಕೊಡಬೇಕು.

ಈಗ, ‘ನಿಮ್ಮ ಪ್ರಾಂತ್ಯಕ್ಕೆ ಹಿಂದಿರುಗಿ’ ಎನ್ನುವುದು ಘೋಷಣೆಯಾಗಬೇಕು. ರಾಷ್ಟ್ರೀಯ ನಾಟಕಶಾಲೆಯ ವಿದ್ಯಾರ್ಥಿಗಳು ಸಂಸ್ಕೃತಿ ಮಿಶ್ರಣದ ಜೀವ ಪೋಷಣೆಯಿಂದ ಈ ದೇಶದ ಎಲ್ಲ ಪ್ರಾಂತಗಳನ್ನೂ ಫಲವತ್ತುಗೊಳಿಸಲಿ ಎಂದು ನಾವು ಬಯಸಬೇಕು.

ಇದನ್ನೆಲ್ಲ ಹೇಗೆ ಮಾಡುವುದು? ಕಾರ್ಯಸಾಧ್ಯವಾದ ಒಂದು ಸಲಹೆ ಕೊಡುವುದಾದರೆ – ನಮ್ಮ ಶಾಲಾಮಕ್ಕಳಲ್ಲಿ ಒಂದು ರಂಗಸಂಸ್ಕೃತಿಯು ಚಿಗಿತು ಮೊಳೆಯುವಂತೆ ಮಾಡಲು ಇಲ್ಲಿನ ಪದವೀಧರರು ಕಡ್ಡಾಯವಾಗಿ ಶಾಲಾಶಿಕ್ಷಕರ ಜೊತೆ ಸ್ವಲ್ಪಕಾಲ ಕೆಲಸ ಮಾಡಬೇಕೆಂದು ಒತ್ತಾಯಿಸಬೇಕು. ಇನ್ನೊಂದು ಸಲಹೆ – ದೇಶದ ಪ್ರಾಂತ ಪ್ರಾಂತಗಳೂ (ಸಂಕುಚಿತವಾಗಿ ಪ್ರಾಂತಬದ್ಧವಾಗದೆ) ಆಯಾ ಪ್ರಾಂತಗಳ ಆವಶ್ಯಕತೆಗಳನ್ನು ಆಧರಿಸಿದ ಮತ್ತು ಸೌಂದರ್ಯ ಮೀಮಾಂಸೆಯ ನೆಲೆಯಲ್ಲಿ ವಿಭಿನ್ನವೂ ಸ್ಪಂದಶೀಲವೂ ಆಗಿರುವ ತಮ್ಮದೇ ರಾಷ್ಟ್ರೀಯ ನಾಟಕ ಶಾಲೆಗಳನ್ನು ಹೊಂದುವಂತಾಗಬೇಕು. ಅವುಗಳ ನಡುವೆ ಪರಸ್ಪರ ಸಂಬಂಧವಿದ್ದೂ ಅವು ತಮ್ಮದೇ ಸ್ವಂತ ಕಾರ್ಯಸೂಚಿ, ತರಬೇತಿ ವಿಧಾನಗಳನ್ನು ರೂಪಿಸಿಕೊಳ್ಳಲು ಸ್ವತಂತ್ರವಿರಬೇಕು. ಈ ದೆಹಲಿಯ ನಾಟಕಶಾಲೆಯು ಹೀಗೆಯೇ ಮುಂದುವರಿಯ ಬೇಕು, ಮತ್ತು ಪ್ರಾಂತೀಯ ನಾಟಕಶಾಲೆಗಳೊಡನೆ ಅಂತರ್‌ಸಾಂಸ್ಕೃತಿಕ ಕೊಳುಕೊಡುಗೆಗಳನ್ನು ಕಂಡುಕೊಳ್ಳುವ ಪ್ರಯೋಗಗಳನ್ನು ಮಾಡುವ, ಸಂಘಟನಾತ್ಮಕ ಕೆಲಸಗಳನ್ನು ನಿರ್ವಹಿಸುವ ಕೇಂದ್ರವಾಗಿ ಬೆಳೆಯಬೇಕು. ಇಂತಹ ಒಂದು ಅಧಿಷ್ಠಾನದಲ್ಲಿ ದೇಶದ ಎಲ್ಲಾ ಭಾಷೆ, ಉಪಭಾಷೆಗಳೂ ಸೂಕ್ತವಾದ ಸ್ಥಾನ, ಪ್ರಾತಿನಿಧ್ಯ ಪಡೆಯುವಂತಾಗಬೇಕು. ಪ್ರಾಂತ-ಪ್ರಾಂತ, ದೇಶ-ದೇಶ, ಇಂಡಿಯಾ ಮತ್ತು ಜಗತ್ತಿನ ನಡುವಣ ಪರಸ್ಪರ ಅರಿತು ಬೆರೆತುಕೊಳ್ಳುವ ಸಂಸ್ಕೃತಿ ಮಿಶ್ರಣದ ಅಂತರ್‌ಸಾಂಸ್ಕೃತಿಕ ಚಟುವಟಿಕೆಗಳಿಗೆ, ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗೆ ಮೀಸಲಾದ ಸಂಸ್ಥೆಯಾಗಿ ದೆಹಲಿಯ ನಾಟಕಶಾಲೆ ಕೆಲಸ ಮಾಡುತ್ತ ಎಲ್ಲ ರಂಗ ಶಾಲೆಗಳೂ ಸೇರಿದ ಒಂದು ರಂಗಕುಟುಂಬವಾಗಬೇಕು. ‘ಜಗತ್ತ’ನ್ನು ಸದ್ಯದ ತುರ್ತಿನಲ್ಲಿ ‘ಏಷ್ಯಾ’ ಎಂದು ಮೊದಲಾಗಿ ತಿಳಿಯುವ ಅಗತ್ಯವಿದೆ.

ನೆಹರೂ ಕಾಲದಿಂದ ಇಂದಿನವರೆಗೆ ನಾವೊಂದು ಪ್ರಜಾಸತ್ತಾತ್ಮಕ ಒಕ್ಕೂಟ ರಾಷ್ಟ್ರವಾಗಿ ಸಾಗಿಬಂದಿದ್ದೇವೆ. ಈ ಒಕ್ಕೂಟ ಸ್ವರೂಪವು ಈಗ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇಬ್ರಾಹಿಂ ಅಲ್ಕಾಜಿಯವರ ನೇತೃತ್ವದ ಕಾಲದಲ್ಲಿ ರಾಷ್ಟ್ರೀಯ ನಾಟಕ ಶಾಲೆಯು ನೆಹರೂ ಯುಗದ ಚಿಂತನೆ, ಪರಿಕಲ್ಪನೆ, ಗ್ರಹಿಕೆಗಳಿಗೆ ಅನುಗುಣವಾಗಿ ರಾಷ್ಟ್ರತ್ವದ ಸಂಕೇತವಾಗಿ ವ್ಯಾಖ್ಯಾನಿಸಲ್ಪಟ್ಟಿತ್ತು. ಅನಂತರ, ಬಿ.ವಿ. ಕಾರಂತರ ಕಾಲಕ್ಕೆ ಅದು ಹೊಸ ಅವಸ್ಥೆಗಳಿಗೆ ಹೊರಳಿಕೊಂಡಿತು; ಇತರ ವಿಭಿನ್ನ ಸ್ಥಳೀಯ ರಂಗಕಲ್ಪನೆಗಳನ್ನು ಒಳಗುಮಾಡಿಕೊಂಡಿತು. ಈಗ ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರತ್ವಗಳ ಕುರಿತು ಇನ್ನೂ ಬೇರೆ ತೆರನ ಸೂಕ್ಷ್ಮ ಎಳೆಗಳನ್ನು ಅರ್ಥೈಸಿಕೊಳ್ಳುವ ನೆಲೆಯಲ್ಲಿ ಇನ್ನೂ ಮುಂದಕ್ಕೆ ಹೆಜ್ಜೆಯಿಟ್ಟು ಬೆಳೆಯಬೇಕಾಗಿದೆ. ಜಾಗತೀಕರಣದ ಪರಿಣಾಮವಾಗಿ ನಾವು ಪಶ್ಚಿಮಾನುಕರಣೆಯ ಅಸಹ್ಯಕ್ಕೆ ಜಾರಿಕೊಂಡರೆ, ಪ್ರವಾಸೋದ್ಯಮ ಸಂಸ್ಕೃತಿಯ ಮೇಲೆ ಮಾತ್ರ ಕಣ್ಣಿಟ್ಟು ತದಭಿರುಚಿಯ ನಾಟಕೋತ್ಸವಗಳಲ್ಲೇ ಸಂತೃಪ್ತವಾಗಿ ಎತ್ನಿಕ್ ಮನರಂಜನೆಗಳಿಗಾಗಿ ಇಂಡಿಯಾದ ತುಣುಕುಗಳನ್ನು ನೇಯ್ದುಕೊಡಲು ಮುಂದಾದರೆ, ನಾಟಕಶಾಲೆಯ ಕ್ರಿಯಾಶೀಲತೆ ಸೃಜನಶಕ್ತಿ ಕುಂಠಿತವಾಗುತ್ತದೆ. ಇಂಡಿಯಾದ ವಿಭಿನ್ನ ಭಾಷೆ-ಪ್ರಾಂತ-ರಂಗಸಂಸ್ಕೃತಿಗಳ ಸತ್ವಪೂರ್ಣ ಆಕರಗಳ ಅರಿವಿನ ಸಂಲಗ್ನ ಸಮಾವೇಶಗಳ ಭವ್ಯ ನೆಯ್ಗೆಯ ಸೃಜನಕಾಯಕಕ್ಕೆ ಅದು ನೀಡಬಹುದಾದ ಕೊಡುಗೆ ಬದಿಗೆ ಸರಿಯುತ್ತದೆ, ನಗಣ್ಯವಾಗುತ್ತದೆ. ಯಾವುದು ಆಳದಲ್ಲಿ ಬೇರುಬಿಟ್ಟಿದೆಯೋ ಅದು ಮಾತ್ರ ರೆಂಬೆಕೊಂಬೆಗಳಲ್ಲಿ ಹರಡಿಕೊಳ್ಳಬಹುದು. ಕೇವಲ ಒಂದು ತಂತ್ರಾತ್ಮಕ ಬಳಕೆಯಿಂದ ಒಂದು ಪ್ರದರ್ಶನ ಸಂಪ್ರದಾಯವನ್ನಾಗಲೀ ಅಥವಾ ಒಂದು ಕ್ರಿಯಾವಿಧಿ ಅನುಷ್ಠಾನವನ್ನಾಗಲೀ ಸಂದರ್ಭದ ಹೊರತಂದು ಬುಡಮೇಲು ಮಾಡಿ ಬಳಸಿಕೊಳ್ಳಲು ಸಾಧ್ಯವಿಲ್ಲ.

ರಾಷ್ಟ್ರೀಯ ನಾಟಕಶಾಲೆಯ ಇಂಡಿಯಾದ ಒಂದು ದೊಡ್ಡ ಸಂಸ್ಥೆ. ಅದಕ್ಕೆ ಹಲವು ಸಾಧನೆಗಳ ನೆನಪು ಇದೆ. ‘ವಿವಿಧತೆಯಲ್ಲಿ ಏಕತೆ’ ಎನ್ನುವುದೊಂದು ಖಾಲಿ ಕ್ಲೀಷೆ; ಕಿಲುಬುಗಟ್ಟಿದ ಸವಕಲು ನಾಣ್ಯ. ಅದನ್ನು ಜಾಗರೂಕತೆಯಿಂದ ವ್ಯಾಖ್ಯಾನಿಸಿ ಅರ್ಥಹೊರಡಿಸಬೇಕು. ಒಂದು ಏಕಘನರೂಪಿಯಾದ ರಾಷ್ಟ್ರದ ಸೇವೆಗಾಗಿ ‘ಏಕತೆ’ಯನ್ನು ಅತಿಮಾಡಿದರೆ, ಆಗ ವೈವಿಧ್ಯಗಳು ತಮ್ಮ ಹಕ್ಕು ಸ್ಥಾಪಿಸತೊಡಗುತ್ತವೆ. ಅದರ ವಿಪರೀತ ನಡೆಯೂ ಅಷ್ಟೇ ನಿಜ. ಅಂದರೆ, ಈ ಪ್ರಾಚೀನ ನೆಲದಲ್ಲಿ ಯಾವತ್ತೂ ಯಾವುದರಲ್ಲೂ ಸಮಾನಾಂಶಗಳು ಇರಲೇಇಲ್ಲವೆಂದು ವಾದಿಸಿ ‘ವಿವಿಧತೆ’ಯ ಮೇಲೆ ಒತ್ತುಹಾಕಿ ಅತಿಮಾಡಿದರೆ, ಆಗ ನಾವು ಸಹಜವಾಗಿಯೇ ಈ ದೇಶದ ಎಲ್ಲರನ್ನೂ ಒಂದೆಳೆಯಲ್ಲಿ ಹೆಣೆದಿರುವ ಸಮಾನ ಸೂತ್ರವೊಂದನ್ನು ಮರೆಯತೊಡಗುತ್ತೇವೆ. ಆದ್ದರಿಂದ ನಮ್ಮ ಗ್ರಹಿಕೆಯ ಬಾಗಿಲುಗಳನ್ನು ತೆರೆದುಕೊಳ್ಳುವ ಮತ್ತು ಶ್ರೀಮಂತವೂ ವಿಶಾಲವೂ ಆದ ಅರ್ಥದಲ್ಲಿ ನಮ್ಮ ವಿವಿಧತೆಯನ್ನು ಅಳವಡಿಸಿಕೊಂಡು ಚಾಲ್ತಿಯಲ್ಲಿ ತರುವ ಮೂಲಕ ನಾವು ಒತ್ತಾಯವಿಲ್ಲದೆ ಅಪ್ರಜ್ಞಾಪೂರ್ವಕವಾಗಿ ಸಹಜವಾಗಿ ಗ್ರಹಿಸಲು ಸಾಧ್ಯವಾಗುವ ಏಕತೆಯು ಹೆಚ್ಚು ಅರ್ಥಪೂರ್ಣವಾದುದು ಮತ್ತು ನಿಡುಗಾಲ ಬಾಳುವಂಥದ್ದು. ಯಜಮಾನಿಕೆಯ ಹಿಂಸೆಯು ಕೊನೆಗೆ ಏನನ್ನೂ ಸಾಧಿಸಲಾರದು.

ರಾಷ್ಟ್ರೀಯ ನಾಟಕಶಾಲೆ ಮತ್ತು ದೇಶದ ಎಲ್ಲೆಡೆಗಳಿಂದ ಬಂದ ಇಲ್ಲಿನ ವಿದ್ಯಾರ್ಥಿಗಳ ಎದುರು ಇಂತಹ ಸವಾಲುಗಳು ಇವೆ.

೨೦೦೫ ರಂದು ದೆಹಲಿಯ ರಾಷ್ಟ್ರೀಯ ನಾಟಕಶಾಲೆಯಲ್ಲಿ ಮಾಡಿದ ಘಟಿಕೋತ್ಸವ ಭಾಷಣದ ಕನ್ನಡ ರೂಪ.
ಅನುವಾದ: ಬಿ.ಆರ್.ವಿ. ಐತಾಳ.
ಕೃಪೆ : ಮಾತುಕತೆ ೭೩

* * *